219: ಶಕ್ರನಮುಚಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 219

ಸಾರ

ಶ್ರೀಯಿಂದ ವಿಹೀನನಾಗಿದ್ದ ನಮುಚಿಯೊಂದಿಗೆ ಶಕ್ರನ ಸಂಭಾಷಣೆ (1-23).

12219001 ಭೀಷ್ಮ ಉವಾಚ।
12219001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
12219001c ಶತಕ್ರತೋಶ್ಚ ಸಂವಾದಂ ನಮುಚೇಶ್ಚ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶತಕ್ರತು ಮತ್ತು ನಮುಚಿಯರ ಸಂವಾದವನ್ನು ಉದಾಹರಿಸುತ್ತಾರೆ.

12219002a ಶ್ರಿಯಾ ವಿಹೀನಮಾಸೀನಮಕ್ಷೋಭ್ಯಮಿವ ಸಾಗರಮ್।
12219002c ಭವಾಭವಜ್ಞಂ ಭೂತಾನಾಮಿತ್ಯುವಾಚ ಪುರಂದರಃ।।

ಶ್ರೀಯಿಂದ ವಿಹೀನನಾಗಿದ್ದರೂ ಸಾಗರದಂತೆ ಕ್ಷೋಭೆಗೊಳ್ಳದೇ ಗಂಭೀರನಾಗಿದ್ದ, ಮತ್ತು ಭೂತಗಳ ಅಭ್ಯುದಯ-ಪರಾಭವಗಳನ್ನು ತಿಳಿದಿದ್ದ ನಮುಚಿಯನ್ನು ಪುರಂದರನು ಕೇಳಿದನು:

12219003a ಬದ್ಧಃ ಪಾಶೈಶ್ಚ್ಯುತಃ ಸ್ಥಾನಾದ್ದ್ವಿಷತಾಂ ವಶಮಾಗತಃ।
12219003c ಶ್ರಿಯಾ ವಿಹೀನೋ ನಮುಚೇ ಶೋಚಸ್ಯಾಹೋ ನ ಶೋಚಸಿ।।

“ನಮುಚೇ! ಶ್ರೀಯಿಂದ ವಿಹೀನನಾಗಿ, ಪಾಶಗಳಿಂದ ಬಂಧಿತನಾಗಿ, ಉಚ್ಛಸ್ಥಾನದಿಂದ ಕೆಳಗುರುಳಿ ಶತ್ರುಗಳ ವಶನಾಗಿರುವ ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?”

12219004 ನಮುಚಿರುವಾಚ।
12219004a ಅನವಾಪ್ಯಂ ಚ ಶೋಕೇನ1 ಶರೀರಂ ಚೋಪತಪ್ಯತೇ।
12219004c ಅಮಿತ್ರಾಶ್ಚ ಪ್ರಹೃಷ್ಯಂತಿ ನಾಸ್ತಿ ಶೋಕೇ ಸಹಾಯತಾ।।

ನಮುಚಿಯು ಹೇಳಿದನು: “ಶೋಕವನ್ನು ತಡೆಯದೇ ಇದ್ದರೆ ಶರೀರವು ತಪಿಸುತ್ತದೆ ಮತ್ತು ಶತ್ರುಗಳು ಹರ್ಷಿತರಾಗುತ್ತಾರೆ. ವಿಪತ್ತು ಬಂದೊದಗಿದಾಗ ಶೋಕವು ಯಾವ ಸಹಾಯಕ್ಕೂ ಬರುವುದಿಲ್ಲ.

12219005a ತಸ್ಮಾಚ್ಚಕ್ರ ನ ಶೋಚಾಮಿ ಸರ್ವಂ ಹ್ಯೇವೇದಮಂತವತ್।
12219005c ಸಂತಾಪಾದ್ ಭ್ರಶ್ಯತೇ ರೂಪಂ ಧರ್ಮಶ್ಚೈವ ಸುರೇಶ್ವರ2।। 3

ಶಕ್ರ! ಸುರೇಶ್ವರ! ಆದುದರಿಂದ ನಾನು ಶೋಕಿಸುತ್ತಿಲ್ಲ. ಏಕೆಂದರೆ ಸರ್ವವೂ ಅಂತ್ಯವುಳ್ಳವುಗಳು. ಸಂತಾಪದಿಂದ ರೂಪ ಮತ್ತು ಧರ್ಮವೂ ನಾಶವಾಗುತ್ತದೆ.

12219006a ವಿನೀಯ ಖಲು ತದ್ದುಃಖಮಾಗತಂ ವೈಮನಸ್ಯಜಮ್।
12219006c ಧ್ಯಾತವ್ಯಂ ಮನಸಾ ಹೃದ್ಯಂ ಕಲ್ಯಾಣಂ ಸಂವಿಜಾನತಾ।।

ಇದನ್ನು ತಿಳಿದಿರುವವನು ವೈಮನಸ್ಯದ ಕಾರಣದಿಂದ ಪ್ರಾಪ್ತವಾದ ದುಃಖವನ್ನು ದೂರೀಕರಿಸಿ ಹೃದಯಸ್ಥನಾಗಿರುವ ಕಲ್ಯಾಣಮಯ ಪರಮಾತ್ಮನನ್ನು ಮನಸ್ಸಿನಲ್ಲಿಯೇ ಧ್ಯಾನಿಸಬೇಕು.

12219007a ಯಥಾ ಯಥಾ4 ಹಿ ಪುರುಷಃ ಕಲ್ಯಾಣೇ ಕುರುತೇ ಮನಃ।
12219007c ತದೈವಾಸ್ಯ ಪ್ರಸೀದಂತಿ5 ಸರ್ವಾರ್ಥಾ ನಾತ್ರ ಸಂಶಯಃ।।

ಪುರುಷನು ಹೇಗೆ ಹೇಗೆ ಮನಸ್ಸಿನಲ್ಲಿ ಕಲ್ಯಾಣಸ್ವರೂಪ ಪರಮಾತ್ಮನ ಚಿಂತನೆಯನ್ನು ಮಾಡುತ್ತಾನೋ ಹಾಗೆಯೇ ಅವನ ಸರ್ವ ಮನೋರಥಗಳೂ ಪ್ರಸೀದಗೊಳ್ಳುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

12219008a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ ಗರ್ಭೇ ಶಯಾನಂ ಪುರುಷಂ ಶಾಸ್ತಿ ಶಾಸ್ತಾ।
12219008c ತೇನಾನುಶಿಷ್ಟಃ ಪ್ರವಣಾದಿವೋದಕಂ ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ।।

ಶಾಸಕನು ಒಬ್ಬನೇ ಇದ್ದಾನೆ. ಇನ್ನೊಬ್ಬನಿಲ್ಲ. ಆ ಶಾಸಕನೇ ಗರ್ಭದಲ್ಲಿ ಮಲಗಿರುವ ಪುರುಷನಿಗೂ ಶಾಸಕನು. ನೀರು ಹೇಗೆ ಇಳಿಜಾರು ಪ್ರದೇಶದ ಕಡೆಗೇ ಹರಿದು ಹೋಗುತ್ತದೆಯೋ ಹಾಗೆ ಶಾಸಕನು ನಿಯುಕ್ತಿಗೊಳಿಸಿದ ಹಾಗೆಯೇ ನಾನು ನಡೆಯುತ್ತೇನೆ.

12219009a ಭಾವಾಭಾವಾವಭಿಜಾನನ್ಗರೀಯೋ ಜಾನಾಮಿ ಶ್ರೇಯೋ6 ನ ತು ತತ್ಕರೋಮಿ।
12219009c ಆಶಾಃ ಸುಶರ್ಮ್ಯಾಃ ಸುಹೃದಾಂ ಸುಕುರ್ವನ್7 ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ।।

ಪ್ರಾಣಿಗಳ ಅಭ್ಯುದಯ-ಪರಾಭವಗಳನ್ನು ಮತ್ತು ಗರೀಯಸವಾದುದನ್ನು ತಿಳಿದುಕೊಂಡಿದ್ದೇನೆ. ಶ್ರೇಯಸ್ಸಾದುದು ಯಾವುದು ಎಂದೂ ತಿಳಿದಿದ್ದೇನೆ. ಆದರೂ ಅದರಂತೆ ನಾನು ಮಾಡುತ್ತಿಲ್ಲ. ಆಶಯಗಳು, ಧರ್ಮ ಮತ್ತು ಸುಹೃದಯರಲ್ಲಿ ಮುಳುಗಿ ನಾನು ಪುಣ್ಯ-ಪಾಪಕರ್ಮಗಳನ್ನೆಸಗುತ್ತೇನೆ. ನಿಯುಕ್ತಗೊಂಡಂತೆ ನಡೆಯುತ್ತೇನೆ.

12219010a ಯಥಾ ಯಥಾಸ್ಯ ಪ್ರಾಪ್ತವ್ಯಂ ಪ್ರಾಪ್ನೋತ್ಯೇವ ತಥಾ ತಥಾ।
12219010c ಭವಿತವ್ಯಂ ಯಥಾ ಯಚ್ಚ ಭವತ್ಯೇವ ತಥಾ ತಥಾ।।

ಯಾವುದು ಯಾವರೀತಿಯಲ್ಲಿ ಪ್ರಾಪ್ತವಾಗಬೇಕೋ ಅದು ಆಯಾ ರೀತಿಯಲ್ಲಿಯೇ ಪ್ರಾಪ್ತವಾಗುತ್ತದೆ. ಹೇಗೆ ನಡೆಯಬೇಕೋ ಅದು ಹಾಗೆಯೇ ನಡೆಯುತ್ತದೆ.

12219011a ಯತ್ರ ಯತ್ರೈವ ಸಂಯುಂಕ್ತೇ ಧಾತಾ8 ಗರ್ಭಂ ಪುನಃ ಪುನಃ।
12219011c ತತ್ರ ತತ್ರೈವ ವಸತಿ ನ ಯತ್ರ ಸ್ವಯಮಿಚ್ಚತಿ।।

ವಿಧಾತನು ಯಾವ ಯಾವ ಗರ್ಭದಲ್ಲಿ ಪುನಃ ಪುನಃ ಜೋಡಿಸುತ್ತಾನೋ ಜೀವನು ಆಯಾಯಾ ಗರ್ಭಗಳಲ್ಲಿಯೇ ವಾಸಿಸುತ್ತಾನೆ. ಅದರಲ್ಲಿ ಸ್ವ-ಇಚ್ಛೆಯೆನ್ನುವುದು ಇಲ್ಲ.

12219012a ಭಾವೋ ಯೋಽಯಮನುಪ್ರಾಪ್ತೋ ಭವಿತವ್ಯಮಿದಂ ಮಮ।
12219012c ಇತಿ ಯಸ್ಯ ಸದಾ ಭಾವೋ ನ ಸ ಮುಹ್ಯೇತ್ಕದಾ ಚನ।।

“ನನಗೇನು ಅವಸ್ಥೆಯು ಬಂದೊದಗಿದೆಯೋ ಅದು ಆಗಬೇಕಾಗಿದ್ದುದೇ” ಎಂದು ಸದಾ ಭಾವಿಸುವವನು ಎಂದೂ ಮೋಹಗೊಳ್ಳುವುದಿಲ್ಲ.

12219013a ಪರ್ಯಾಯೈರ್ಹನ್ಯಮಾನಾನಾಮಭಿಯೋಕ್ತಾ ನ ವಿದ್ಯತೇ।
12219013c ದುಃಖಮೇತತ್ತು ಯದ್ದ್ವೇಷ್ಟಾ ಕರ್ತಾಹಮಿತಿ ಮನ್ಯತೇ।।

ಮಾನ-ಅಪಮಾನಗಳು ಒಂದಾದ ಮೇಲೆ ಒಂದರಂತೆ ಬರುತ್ತಿರುತ್ತವೆ. ಇವೆರಡಕ್ಕೂ ತಾನೇ ಕರ್ತನೆಂದು ಭಾವಿಸುವವನಿಗೆ ದುಃಖವುಂಟಾಗುತ್ತದೆ9.

12219014a ಋಷೀಂಶ್ಚ ದೇವಾಂಶ್ಚ ಮಹಾಸುರಾಂಶ್ಚ ತ್ರೈವಿದ್ಯವೃದ್ಧಾಂಶ್ಚ ವನೇ ಮುನೀಂಶ್ಚ।
12219014c ಕಾನ್ನಾಪದೋ ನೋಪನಮಂತಿ ಲೋಕೇ ಪರಾವರಜ್ಞಾಸ್ತು ನ ಸಂಭ್ರಮಂತಿ।।

ಋಷಿಗಳು, ದೇವತೆಗಳು, ಮಹಾಸುರರು, ಮೂರು ವೇದಗಳನ್ನು ತಿಳಿದಿರುವ ವೃದ್ಧರು, ವನದಲ್ಲಿರುವ ಮುನೀಂದ್ರರು – ಲೋಕದ ಇವರಲ್ಲಿ ಯಾರನ್ನು ತಾನೇ ಆಪತ್ತು ಆಕ್ರಮಣಿಸುವುದಿಲ್ಲ? ಆದರೆ ಪರಾವರಜ್ಞರು ಆಪತ್ತುಗಳಿಂದ ಭ್ರಾಂತರಾಗುವುದಿಲ್ಲ.

12219015a ನ ಪಂಡಿತಃ ಕ್ರುಧ್ಯತಿ ನಾಪಿ ಸಜ್ಜತೇ10 ನ ಚಾಪಿ ಸಂಸೀದತಿ ನ ಪ್ರಹೃಷ್ಯತಿ।
12219015c ನ ಚಾರ್ಥಕೃಚ್ಚ್ರವ್ಯಸನೇಷು ಶೋಚತಿ ಸ್ಥಿತಃ ಪ್ರಕೃತ್ಯಾ ಹಿಮವಾನಿವಾಚಲಃ।।

ಪಂಡಿತನು ಕೃದ್ಧನಾಗುವುದಿಲ್ಲ. ಸಜ್ಜಾಗುವುದೂ ಇಲ್ಲ. ಕುಗ್ಗುವುದಿಲ್ಲ ಮತ್ತು ಹಿಗ್ಗುವುದಿಲ್ಲ. ಆರ್ಥಿಕ ಕಷ್ಟಗಳಲ್ಲಿಯೂ ವ್ಯಸನಗಳಲಿಯೂ ಶೋಕಿಸುವುದಿಲ್ಲ. ಹಿಮಾಲಯದಂತೆ ಸ್ಥಿರಸ್ವಭಾವದವನಾಗಿರುತ್ತಾನೆ.

12219016a ಯಮರ್ಥಸಿದ್ಧಿಃ ಪರಮಾ ನ ಹರ್ಷಯೇತ್11 ತಥೈವ ಕಾಲೇ ವ್ಯಸನಂ ನ ಮೋಹಯೇತ್।
12219016c ಸುಖಂ ಚ ದುಃಖಂ ಚ ತಥೈವ ಮಧ್ಯಮಂ ನಿಷೇವತೇ ಯಃ ಸ ಧುರಂಧರೋ ನರಃ।।

ಪರಮ ಅರ್ಥಸಿದ್ಧಿಯನ್ನು ಹೊಂದಿದಾಗ ಹರ್ಷಿಸದ, ಹಾಗೆಯೇ ವ್ಯಸನದ ಕಾಲದಲ್ಲಿ ಮೋಹಗೊಳ್ಳದ, ಸುಖ-ದುಃಖ ಮತ್ತು ಅವುಗಳ ಮಧ್ಯದ ಅವಸ್ಥೆಗಳನ್ನು ಸಮಾನಭಾವದಿಂದ ಅನುಭವಿಸುವ ನರನು ಧುರಂಧರನು.

12219017a ಯಾಂ ಯಾಮವಸ್ಥಾಂ ಪುರುಷೋಽಧಿಗಚ್ಚೇತ್ ತಸ್ಯಾಂ ರಮೇತಾಪರಿತಪ್ಯಮಾನಃ।
12219017c ಏವಂ ಪ್ರವೃದ್ಧಂ ಪ್ರಣುದೇನ್ಮನೋಜಂ ಸಂತಾಪಮಾಯಾಸಕರಂ ಶರೀರಾತ್12।।

ಪುರುಷನು ಯಾವ ಯಾವ ಅವಸ್ಥೆಗಳನ್ನು ಪಡೆಯುತ್ತಾನೋ ಆಯಾ ಅವಸ್ಥೆಗಳಲ್ಲಿ ಪರಿತಪಿಸದೇ, ಸಂತಾಪವನ್ನುಂಟುಮಾಡುವ ಮನಸ್ಸಿನಲ್ಲಿಯೇ ವೃದ್ಧಿಸುವ ಆಯಾಸಕರ ಕಾಮನೆಗಳನ್ನು ಶರೀರದಿಂದ ಹೊರಹಾಕಬೇಕು.

12219018a ತತ್ಸದಃ ಸ ಪರಿಷತ್ಸಭಾಸದಃ ಪ್ರಾಪ್ಯ ಯೋ ನ ಕುರುತೇ ಸಭಾಭಯಮ್।
12219018c ಧರ್ಮತತ್ತ್ವಮವಗಾಹ್ಯ ಬುದ್ಧಿಮಾನ್ ಯೋಽಭ್ಯುಪೈತಿ ಸ ಪುಮಾನ್ ಧುರಂಧರಃ।।

ಯಾವ ಸಭೆಯಲ್ಲಿ ಮನುಷ್ಯನು ಭಯಪಟ್ಟುಕೊಳ್ಳುವುದಿಲ್ಲವೋ ಅದು ಸದಸ್ಸಲ್ಲ. ಒಳ್ಳೆಯ ಪರಿಷತ್ತಲ್ಲ. ಸಭೆಯೂ ಅಲ್ಲ. ಸಭೆಯು ತೀರ್ಮಾನಿಸಿದ ಧರ್ಮತತ್ತ್ವದಲ್ಲಿ ಮುಳುಗಿ ಅದನ್ನು ಅನುಸರಿಸುವ ಪುರುಷನೇ ಧುರಂಧರನು.

12219019a ಪ್ರಾಜ್ಞಸ್ಯ ಕರ್ಮಾಣಿ ದುರನ್ವಯಾನಿ ನ ವೈ ಪ್ರಾಜ್ಞೋ ಮುಹ್ಯತಿ ಮೋಹಕಾಲೇ।
12219019c ಸ್ಥಾನಾಚ್ಚ್ಯುತಶ್ಚೇನ್ನ ಮುಮೋಹ ಗೌತಮಸ್ ತಾವತ್ ಕೃಚ್ಚ್ರಾಮಾಪದಂ ಪ್ರಾಪ್ಯ ವೃದ್ಧಃ।।

ಪ್ರಾಜ್ಞನ ಕರ್ಮಗಳನ್ನು ಅನುಸರಿಸುವುದು ಕಷ್ಟ. ಏಕೆಂದರೆ ಪ್ರಾಜ್ಞನು ಮೋಹಕಾಲದಲ್ಲಿ ಮೋಹಿತನಾಗುವುದಿಲ್ಲ. ವೃದ್ಧ ಗೌತಮನು ತನ್ನ ಸ್ಥಾನದಿಂದ ಚ್ಯುತನಾಗಿ ಅತ್ಯಂತ ಕಷ್ಟಕರ ಆಪತ್ತುಗಳನ್ನು ಪಡೆದ ಮೋಹಿತನಾಗಲಿಲ್ಲ.

12219020a ನ ಮಂತ್ರಬಲವೀರ್ಯೇಣ ಪ್ರಜ್ಞಯಾ ಪೌರುಷೇಣ ವಾ। 1312219020c ಅಲಭ್ಯಂ ಲಭತೇ ಮರ್ತ್ಯಸ್ತತ್ರ ಕಾ ಪರಿದೇವನಾ।।

ಮನುಷ್ಯನಿಗೆ ದೊರೆಯಬಾರದೆಂದಿರುವಂಥಹುದನ್ನು ಮಂತ್ರದಿಂದಾಗಲೀ, ಬಲ-ವೀರ್ಯಗಳಿಂದಾಗಲೀ, ಪ್ರಜ್ಞೆ-ಪೌರುಷಗಳಿಂದಾಗಲೀ ಪಡೆಯಲಿಕ್ಕಾಗುವುದಿಲ್ಲ. ಅದರಲ್ಲಿ ಶೋಕಪಡಬೇಕಾದುದು ಏನಿದೆ?

12219021a ಯದೇವಮನುಜಾತಸ್ಯ ಧಾತಾರೋ ವಿದಧುಃ ಪುರಾ।
12219021c ತದೇವಾನುಭವಿಷ್ಯಾಮಿ ಕಿಂ ಮೇ ಮೃತ್ಯುಃ ಕರಿಷ್ಯತಿ।।

ಕರ್ಮಾನುಗುಣವಾಗಿ ಹುಟ್ಟಿರುವ ನಾನು ಹಿಂದೆ ಧಾತಾರನು ವಿಹಿಸಿದುದನ್ನೇ ಅನುಭವಿಸುತ್ತಿದ್ದೇನೆ. ಅದರಲ್ಲಿ ಮೃತ್ಯುವು ಏನು ಮಾಡೀತು?

12219022a ಲಬ್ಧವ್ಯಾನ್ಯೇವ ಲಭತೇ ಗಂತವ್ಯಾನ್ಯೇವ ಗಚ್ಚತಿ।
12219022c ಪ್ರಾಪ್ತವ್ಯಾನ್ಯೇವ ಪ್ರಾಪ್ನೋತಿ ದುಃಖಾನಿ ಚ ಸುಖಾನಿ ಚ।।

ಮನುಷ್ಯನು ಯಾವುದನ್ನು ಪಡೆದುಕೊಳ್ಳಬೇಕೋ ಅದನ್ನೇ ಪಡೆದುಕೊಳ್ಳುತ್ತಾನೆ. ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗುತ್ತಾನೆ. ದುಃಖವನ್ನು ಪಡೆಯಬೇಕೆಂದಿದ್ದರೆ ದುಃಖವನ್ನೇ ಪಡೆಯುತ್ತಾನೆ. ಸುಖವನ್ನು ಪಡೆಯಬೇಕೆಂದಿದ್ದರೆ ಸುಖವನ್ನೇ ಪಡೆಯುತ್ತಾನೆ.

12219023a ಏತದ್ವಿದಿತ್ವಾ ಕಾರ್ತ್ಸ್ನ್ಯೇನ ಯೋ ನ ಮುಹ್ಯತಿ ಮಾನವಃ।
12219023c ಕುಶಲಃ ಸುಖದುಃಖೇಷು ಸ ವೈ ಸರ್ವಧನೇಶ್ವರಃ।।

ಇದನ್ನು ಸಂಪೂರ್ಣವಾಗಿ ತಿಳಿದು ಸುಖ-ದುಃಖಗಳಲ್ಲಿ ಕುಶಲನಾಗಿ ಮೋಹಗೊಳ್ಳದ ಮಾನವನು ಸರ್ವಧನೇಶ್ವರನಾಗುತ್ತಾನೆ.””

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಕ್ರನಮುಚಿಸಂವಾದೋ ನಾಮ ಏಕೋನವಿಂಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಕ್ರನಮುಚಿಸಂವಾದ ಎನ್ನುವ ಇನ್ನೂರಾಹತ್ತೊಂಭತ್ತನೇ ಅಧ್ಯಾಯವು.

  1. ಅನಿವಾರ್ಯೇಣ ಶೋಕೇನ (ಗೀತಾ ಪ್ರೆಸ್/ಭಾರತ ದರ್ಶನ). ↩︎

  2. ಸಂತಾಪಾದ್ ಭ್ರಶ್ಯತೇ ಶ್ರಿಯಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  3. ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಂತಾಪಾದ್ ಭ್ರಶ್ಯತೇ ಚಾರುರ್ಧರ್ಮಶ್ಚೈವ ಸುರೇಶ್ವರ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  4. ಯದಾ ಯದಾ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ತದಾ ತಸ್ಯ ಪ್ರಸಿಧ್ಯಂತಿ (ಗೀತಾ ಪ್ರೆಸ್/ಭಾರತ ದರ್ಶನ). ↩︎

  6. ಜ್ಞಾನಾಚ್ಛ್ರೇಯೋ (ಗೀತಾ ಪ್ರೆಸ್/ಭಾರತ ದರ್ಶನ). ↩︎

  7. ಆಶಾಸು ಧರ್ಮ್ಯಾಸು ಪರಾಸು ಕುರ್ವನ್ (ಗೀತಾ ಪ್ರೆಸ್/ಭಾರತ ದರ್ಶನ). ↩︎

  8. ಧಾತ್ರಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  9. ಪರ್ಯಾಯವಾಗಿ ಬರುವ ಕಷ್ಟಗಳಿಂದ ಪೀಡಿತರಾದವರಲ್ಲಿ ಆ ಕಷ್ಟಗಳು ಬರದಂತೆ ಯಾರೂ ಪ್ರತಿಭಟಿಸಲಾರರು. ಸ್ವಭಾವತಃ ಸುಖದ ಅನಂತರ ಕಷ್ಟವೂ, ಕಷ್ಟದ ನಂತರ ಸುಖವೂ ಪರ್ಯಾಯವಾಗಿ ಬರುತ್ತಲೇ ಇರುತ್ತವೆ. ದುಃಖವನ್ನು ಯಾರು ದ್ವೇಷಿಸುವನೋ ಅವನು ಕಷ್ಟವು ಒದಗಿದಾಗ ಆ ಕಷ್ಟಕ್ಕೆ ತಾನೇ ಕರ್ತೃವೆಂದು ಭಾವಿಸುತ್ತಾನೆ. ಕರ್ತೃತ್ವಾಭಿಮಾನವೇ ದುಃಖಕ್ಕೆ ಕಾರಣವಾಗುತ್ತದೆ. (ಭಾರತ ದರ್ಶನ). ಕಾಲಕ್ರಮಮಾಗಿ ಪ್ರಾಪ್ತವಾಗುವ ಸುಖ-ದುಃಖಗಳ ಆಹತಕ್ಕೊಳಗಾಗುವ ಜನರ ದುಃಖಕ್ಕೆ ಬೇರೆ ಯಾರೂ ದೋಷೀ ಅಥವಾ ಅಪರಾಧಿಯಲ್ಲ. ಪುರುಷನು ವರ್ತಮಾನ ದುಃಖವನ್ನು ದ್ವೇಷಿಸಿ ತನ್ನನ್ನೇ ಅದರ ಕರ್ತೃವೆಂದು ಭಾವಿಸುವುದೇ ದುಃಖಕ್ಕೆ ಕಾರಣವು (ಗೀತಾ ಪ್ರೆಸ್). ↩︎

  10. ನಾಭಿಪದ್ಯತೇ (ಭಾರತ ದರ್ಶನ/ಗೀತಾ ಪ್ರೆಸ್). ↩︎

  11. ಮೋಹಯೇತ್ (ಭಾರತ ದರ್ಶನ/ಗೀತಾ ಪ್ರೆಸ್). ↩︎

  12. ಸಂತಾಪನೀಯಂ ಸಕಲಂ ಶರೀರಾತ್ (ಭಾರತ ದರ್ಶನ/ಗೀತಾ ಪ್ರೆಸ್). ↩︎

  13. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ನ ಶೀಲೇನ ನ ವೃತ್ತೇನ ತಥಾ ನೈವಾರ್ಥಸಂಪದಾ। (ಭಾರತ ದರ್ಶನ/ಗೀತಾ ಪ್ರೆಸ್). ↩︎