ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 218
ಸಾರ
ಇಂದ್ರ-ಶ್ರೀಯರ ಸಂವಾದ (1-19); ಬಲಿಯನ್ನು ತ್ಯಜಿಸಿ ಬಂದ ಶ್ರೀಯನ್ನು ಇಂದ್ರನು ಪ್ರತಿಷ್ಠಾಪಿಸಿದುದು (20-38).
12218001 ಭೀಷ್ಮ ಉವಾಚ।
12218001a ಶತಕ್ರತುರಥಾಪಶ್ಯದ್ಬಲೇರ್ದೀಪ್ತಾಂ ಮಹಾತ್ಮನಃ।
12218001c ಸ್ವರೂಪಿಣೀಂ ಶರೀರಾದ್ಧಿ ತದಾ ನಿಷ್ಕ್ರಾಮತೀಂ ಶ್ರಿಯಮ್।।
ಭೀಷ್ಮನು ಹೇಳಿದನು: “ಆಗ ಶತಕ್ರತುವು ಮಹಾತ್ಮ ಬಲಿಯ ಶರೀರದಿಂದ ಹೊರಬರುತ್ತಿದ್ದ ಪರಮಸುಂದರಿ ಪ್ರಕಾಶಮಾನ ಶ್ರೀಯನ್ನು ನೋಡಿದನು.
12218002a ತಾಂ ದೀಪ್ತಾಂ ಪ್ರಭಯಾ ದೃಷ್ಟ್ವಾ ಭಗವಾನ್ ಪಾಕಶಾಸನಃ।
12218002c ವಿಸ್ಮಯೋತ್ಫುಲ್ಲನಯನೋ ಬಲಿಂ ಪಪ್ರಚ್ಚ ವಾಸವಃ।।
ಪ್ರಭೆಯಿಂದ ಬೆಳಗುತ್ತಿದ್ದ ಅವಳನ್ನು ನೋಡಿ ಭಗವಾನ್ ಪಾಕಶಾಸನ ವಾಸವನು ವಿಸ್ಮಿತನಾಗಿ ತೆರೆದ ಕಣ್ಣುಗಳಿಂದ ಬಲಿಯನ್ನು ಕೇಳಿದನು:
12218003a ಬಲೇ ಕೇಯಮಪಕ್ರಾಂತಾ ರೋಚಮಾನಾ ಶಿಖಂಡಿನೀ।
12218003c ತ್ವತ್ತಃ ಸ್ಥಿತಾ ಸಕೇಯೂರಾ ದೀಪ್ಯಮಾನಾ ಸ್ವತೇಜಸಾ।।
“ಬಲೇ! ಜಡೆಯನ್ನು ಕಟ್ಟಿ ಕೇಯೂರಗಳನ್ನು ಧರಿಸಿ ತನ್ನದೇ ತೇಜಸ್ಸಿನಿಂದ ಬೆಳಗುತ್ತಾ ನಿನ್ನ ಶರೀರದಿಂದ ಹೊರಬರುತ್ತಿರುವ ಇವಳು ಯಾರು?”
12218004 ಬಲಿರುವಾಚ।
12218004a ನ ಹೀಮಾಮಾಸುರೀಂ ವೇದ್ಮಿ ನ ದೈವೀಂ ನ ಚ ಮಾನುಷೀಮ್।
12218004c ತ್ವಮೇವೈನಾಂ ಪೃಚ್ಚ ಮಾ ವಾ ಯಥೇಷ್ಟಂ ಕುರು ವಾಸವ।।
ಬಲಿಯು ಹೇಳಿದನು: “ವಾಸವ! ಇವಳು ಆಸುರಿಯೋ, ದೇವಿಯೋ ಅಥವಾ ಮನುಷ್ಯಳೋ ನನಗೆ ತಿಳಿದಿಲ್ಲ. ಬೇಕಾದರೆ ನೀನೇ ಇವಳನ್ನು ಪ್ರಶ್ನಿಸು.”
12218005 ಶಕ್ರ ಉವಾಚ।
12218005a ಕಾ ತ್ವಂ ಬಲೇರಪಕ್ರಾಂತಾ ರೋಚಮಾನಾ ಶಿಖಂಡಿನೀ।
12218005c ಅಜಾನತೋ ಮಮಾಚಕ್ಷ್ವ ನಾಮಧೇಯಂ ಶುಚಿಸ್ಮಿತೇ।।
ಶಕ್ರನು ಹೇಳಿದನು: “ಜಡೆಕಟ್ಟಿಕೊಂಡು ಬೆಳಗುತ್ತಾ ಬಲಿಯಿಂದ ಹೊರಬರುತ್ತಿರುವ ನೀನು ಯಾರು? ಶುಚಿಸ್ಮಿತೇ! ನನಗೆ ನಿನ್ನನ್ನು ಗುರುತಿಸಲಾಗುತ್ತಿಲ್ಲ. ನಿನ್ನ ನಾಮಧೇಯವನ್ನು ಹೇಳು.
12218006a ಕಾ ತ್ವಂ ತಿಷ್ಠಸಿ ಮಾಯೇವ ದೀಪ್ಯಮಾನಾ ಸ್ವತೇಜಸಾ।
12218006c ಹಿತ್ವಾ ದೈತ್ಯೇಶ್ವರಂ ಸುಭ್ರು ತನ್ಮಮಾಚಕ್ಷ್ವ ತತ್ತ್ವತಃ।।
ಸುಭ್ರು! ದೈತ್ಯೇಶ್ವರನನ್ನು ತ್ಯಜಿಸಿ ನಿನ್ನದೇ ತೇಜಸ್ಸಿನಿಂದ ಬೆಳಗುತ್ತಾ ನನ್ನ ಬಳಿ ನಿಂತಿರುವ ನೀನು ಯಾರು? ತತ್ತ್ವತಃ ನನಗೆ ಹೇಳು.”
12218007 ಶ್ರೀರುವಾಚ।
12218007a ನ ಮಾ ವಿರೋಚನೋ ವೇದ ನ ಮಾ ವೈರೋಚನೋ ಬಲಿಃ।
12218007c ಆಹುರ್ಮಾಂ ದುಃಸಹೇತ್ಯೇವಂ ವಿಧಿತ್ಸೇತಿ ಚ ಮಾಂ ವಿದುಃ।।
ಶ್ರೀಯು ಹೇಳಿದಳು: “ವಿರೋಚನನೂ ನಾನ್ಯಾರೆಂದು ತಿಳಿದಿರಲಿಲ್ಲ. ವೈರೋಚನ ಬಲಿಯೂ ನಾನ್ಯಾರೆಂದು ತಿಳಿದಿಲ್ಲ. ನನ್ನನ್ನು ದುಃಸಹಾ ಎಂದು ಕರೆಯುತ್ತಾರೆ. ಕೆಲವರು ನನ್ನನ್ನು ವಿಧಿತ್ಸಾ ಎಂದೂ ತಿಳಿದಿದ್ದಾರೆ.
12218008a ಭೂತಿರ್ಲಕ್ಷ್ಮೀತಿ ಮಾಮಾಹುಃ ಶ್ರೀರಿತ್ಯೇವಂ ಚ ವಾಸವ।
12218008c ತ್ವಂ ಮಾಂ ಶಕ್ರ ನ ಜಾನೀಷೇ ಸರ್ವೇ ದೇವಾ ನ ಮಾಂ ವಿದುಃ।।
ವಾಸವ! ತಿಳಿದವರು ನನ್ನನ್ನು ಭೂತಿ, ಲಕ್ಷ್ಮಿ, ಮತ್ತು ಶ್ರೀ ಎಂದೂ ಕರೆಯುತ್ತಾರೆ. ಶಕ್ರ! ನೀನೂ ನನ್ನನ್ನು ತಿಳಿದಿಲ್ಲ. ಸರ್ವ ದೇವತೆಗಳೂ ನಾನ್ಯಾರೆಂದು ತಿಳಿಯರು.”
12218009 ಶಕ್ರ ಉವಾಚ।
12218009a ಕಿಮಿದಂ ತ್ವಂ ಮಮ ಕೃತೇ ಉತಾಹೋ ಬಲಿನಃ ಕೃತೇ।
12218009c ದುಃಸಹೇ ವಿಜಹಾಸ್ಯೇನಂ ಚಿರಸಂವಾಸಿನೀ ಸತೀ।।
ಶಕ್ರನು ಹೇಳಿದನು: “ದುಃಸಹೇ! ಬಹಳಕಾಲದಿಂದ ಬಲಿಯ ಶರೀರದಲ್ಲಿಯೇ ವಾಸಿಸುತ್ತಿದ್ದ ನೀನು ಈಗ ನನ್ನ ಹಿತಕ್ಕಾಗಿ ಬಲಿಯನ್ನು ತ್ಯಜಿಸಿ ಬಂದಿದ್ದೀಯಾ ಅಥವಾ ಬಲಿಯ ಹಿತದ ಸಲುವಾಗಿಯೇ ಅವನನ್ನು ತ್ಯಜಿಸಿದ್ದೀಯಾ?”
12218010 ಶ್ರೀರುವಾಚ।
12218010a ನ ಧಾತಾ ನ ವಿಧಾತಾ ಮಾಂ ವಿದಧಾತಿ ಕಥಂ ಚನ।
12218010c ಕಾಲಸ್ತು ಶಕ್ರ ಪರ್ಯಾಯಾನ್ಮೈನಂ ಶಕ್ರಾವಮನ್ಯಥಾಃ।।
ಶ್ರೀಯು ಹೇಳಿದಳು: “ಶಕ್ರ! ಧಾತನಾಗಲೀ ವಿಧಾತನಾಗಲೀ ನನ್ನನ್ನು ಎಂದೂ ಯಾವ ಕಾರ್ಯಕ್ಕೂ ನಿಯೋಜಿಸುವುದಿಲ್ಲ. ಕಾಲವು ನನ್ನ ಚಲನೆಯನ್ನು ನಿರ್ಧರಿಸುತ್ತದೆ. ಶಕ್ರ! ಅದನ್ನು ನೀನು ಅಪಮಾನಿಸಬೇಡ!”1
12218011 ಶಕ್ರ ಉವಾಚ।
12218011a ಕಥಂ ತ್ವಯಾ ಬಲಿಸ್ತ್ಯಕ್ತಃ ಕಿಮರ್ಥಂ ವಾ ಶಿಖಂಡಿನಿ।
12218011c ಕಥಂ ಚ ಮಾಂ ನ ಜಹ್ಯಾಸ್ತ್ವಂ ತನ್ಮೇ ಬ್ರೂಹಿ ಶುಚಿಸ್ಮಿತೇ।।
ಶಕ್ರನು ಹೇಳಿದನು: “ಸುಂದರ ಜಡೆಯನ್ನು ಧರಿಸಿದವಳೇ! ಬಲಿಯನ್ನು ಏಕೆ ಮತ್ತು ಹೇಗೆ ತ್ಯಜಿಸಿದೆ? ಶುಚಿಸ್ಮಿತೇ! ಹೇಗೆ ನೀನು ನನ್ನನ್ನೂ ತ್ಯಜಿಸದೇ ಇರುವೆ? ಅದನ್ನು ನನಗೆ ಹೇಳು.”
12218012 ಶ್ರೀರುವಾಚ।
12218012a ಸತ್ಯೇ ಸ್ಥಿತಾಸ್ಮಿ ದಾನೇ ಚ ವ್ರತೇ ತಪಸಿ ಚೈವ ಹಿ।
12218012c ಪರಾಕ್ರಮೇ ಚ ಧರ್ಮೇ ಚ ಪರಾಚೀನಸ್ತತೋ ಬಲಿಃ।।
ಶ್ರೀಯು ಹೇಳಿದಳು: “ನಾನು ಸತ್ಯ, ದಾನ, ವ್ರತ, ತಪಸ್ಸು, ಪರಾಕ್ರಮ ಮತ್ತು ಧರ್ಮದಲ್ಲಿ ನೆಲೆಸಿರುತ್ತೇನೆ. ಈಗ ಬಲಿಯು ಈ ಎಲ್ಲದರಿಂದಲೂ ವಿಮುಖನಾಗಿದ್ದಾನೆ.
12218013a ಬ್ರಹ್ಮಣ್ಯೋಽಯಂ ಸದಾ ಭೂತ್ವಾ ಸತ್ಯವಾದೀ ಜಿತೇಂದ್ರಿಯಃ।
12218013c ಅಭ್ಯಸೂಯದ್ಬ್ರಾಹ್ಮಣಾನ್ವೈ ಉಚ್ಚಿಷ್ಟಶ್ಚಾಸ್ಪೃಶದ್ ಘೃತಮ್।।
ಇವನು ಸದಾ ಬ್ರಹ್ಮಣ್ಯನಾಗಿದ್ದುಕೊಂಡು ಸತ್ಯವಾದಿಯೂ ಜಿತೇಂದ್ರಿಯನೂ ಆಗಿದ್ದನು. ನಂತರ ಇವನಿಗೆ ಬ್ರಾಹ್ಮಣರ ಮೇಲೆ ಅಸೂಯೆಯುಂಟಾಯಿತು. ಉಚ್ಚಿಷ್ಟ ಕೈಯಿಂದ ತುಪ್ಪವನ್ನು ಮುಟ್ಟುತ್ತಿದ್ದನು.
12218014a ಯಜ್ಞಶೀಲಃ ಪುರಾ ಭೂತ್ವಾ ಮಾಮೇವ ಯಜತೇತ್ಯಯಮ್।
12218014c ಪ್ರೋವಾಚ ಲೋಕಾನ್ಮೂಢಾತ್ಮಾ ಕಾಲೇನೋಪನಿಪೀಡಿತಃ।।
ಮೊದಲು ಯಜ್ಞಶೀಲನಾಗಿದ್ದನು. ಆದರೆ ನಂತರ ಈ ಮೂಢಾತ್ಮನು ಕಾಲಪೀಡಿತನಾಗಿ “ನನ್ನ ಸಲುವಾಗಿಯೇ ಯಜ್ಞಮಾಡಿರಿ!” ಎಂದು ಲೋಕಗಳಿಗೆ ಹೇಳಿದನು.
12218015a ಅಪಾಕೃತಾ ತತಃ ಶಕ್ರ ತ್ವಯಿ ವತ್ಸ್ಯಾಮಿ ವಾಸವ।
12218015c ಅಪ್ರಮತ್ತೇನ ಧಾರ್ಯಾಸ್ಮಿ ತಪಸಾ ವಿಕ್ರಮೇಣ ಚ।।
ವಾಸವ! ಶಕ್ರ! ಅವನನ್ನು ಪರಿತ್ಯಜಿಸಿ ನಿನ್ನಲ್ಲಿ ವಾಸಿಸುತ್ತೇನೆ. ಅಪ್ರಮತ್ತತೆ, ತಪಸ್ಸು ಮತ್ತು ವಿಕ್ರಮದಿಂದ ನನ್ನನ್ನು ಧರಿಸಬಲ್ಲೆ.”
12218016 ಶಕ್ರ ಉವಾಚ।
12218016a ಅಸ್ತಿ ದೇವಮನುಷ್ಯೇಷು ಸರ್ವಭೂತೇಷು ವಾ ಪುಮಾನ್।
12218016c ಯಸ್ತ್ವಾಮೇಕೋ ವಿಷಹಿತುಂ ಶಕ್ನುಯಾತ್ಕಮಲಾಲಯೇ।।
ಶಕ್ರನು ಹೇಳಿದನು: “ಕಮಲವಾಸಿನಿಯೇ! ದೇವತೆಗಳಲ್ಲಿ, ಮನುಷ್ಯರಲ್ಲಿ ಅಥವಾ ಸರ್ವಭೂತಗಳಲ್ಲಿ ತಾನೊಬ್ಬನೇ ಸದಾಕಾಲ ನಿನ್ನನ್ನು ಧರಿಸಿಕೊಂಡಿರುವ ಪುರುಷನು ಯಾರೂ ಇಲ್ಲ.”
12218017 ಶ್ರೀರುವಾಚ।
12218017a ನೈವ ದೇವೋ ನ ಗಂಧರ್ವೋ ನಾಸುರೋ ನ ಚ ರಾಕ್ಷಸಃ।
12218017c ಯೋ ಮಾಮೇಕೋ ವಿಷಹಿತುಂ ಶಕ್ತಃ ಕಶ್ಚಿತ್ಪುರಂದರ।।
ಶ್ರೀಯು ಹೇಳಿದಳು: “ಪುರಂದರ! ದೇವತೆಗಳಲ್ಲಾಗಲೀ, ಗಂಧರ್ವರಲ್ಲಾಗಲೀ, ಅಸುರರಲ್ಲಾಗಲೀ, ರಾಕ್ಷಸರಲ್ಲಾಗಲೀ ತಾನೊಬ್ಬನೇ ನನ್ನನ್ನು ಚಿರಕಾಲ ಧರಿಸಿಕೊಳ್ಳಬಹುದಾದವರು ಯಾರೂ ಇಲ್ಲ.”
12218018 ಶಕ್ರ ಉವಾಚ।
12218018a ತಿಷ್ಠೇಥಾ ಮಯಿ ನಿತ್ಯಂ ತ್ವಂ ಯಥಾ ತದ್ಬ್ರೂಹಿ ಮೇ ಶುಭೇ।
12218018c ತತ್ಕರಿಷ್ಯಾಮಿ ತೇ ವಾಕ್ಯಮೃತಂ ತ್ವಂ ವಕ್ತುಮರ್ಹಸಿ।।
ಶಕ್ರನು ಹೇಳಿದನು: “ಶುಭೇ! ನಾನು ಹೇಗಿದ್ದರೆ ನೀನು ನನ್ನಲ್ಲಿ ನಿತ್ಯವೂ ನೆಲೆಸಿರುವೆ ಎನ್ನುವುದನ್ನು ಹೇಳು. ನಿನ್ನ ಮಾತಿನಂತೆಯೇ ನಾನು ನಡೆದುಕೊಳ್ಳುತ್ತೇನೆ. ನನಗೆ ನೀನು ಸತ್ಯವನ್ನು ಹೇಳಬೇಕು.”
12218019 ಶ್ರೀರುವಾಚ।
12218019a ಸ್ಥಾಸ್ಯಾಮಿ ನಿತ್ಯಂ ದೇವೇಂದ್ರ ಯಥಾ ತ್ವಯಿ ನಿಬೋಧ ತತ್।
12218019c ವಿಧಿನಾ ವೇದದೃಷ್ಟೇನ ಚತುರ್ಧಾ ವಿಭಜಸ್ವ ಮಾಮ್।।
ಶ್ರೀಯು ಹೇಳಿದಳು: “ದೇವೇಂದ್ರ! ನಿತ್ಯವೂ ನಿನ್ನಲ್ಲಿ ಹೇಗೆ ನಾನು ನಿಲ್ಲಬಲ್ಲೆ ಎನ್ನುವುದನ್ನು ಹೇಳುತ್ತೇನೆ. ಕೇಳು. ವೇದದೃಷ್ಟ ವಿಧಿಯಿಂದ ನನ್ನನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸು.”
12218020 ಶಕ್ರ ಉವಾಚ।
12218020a ಅಹಂ ವೈ ತ್ವಾ ನಿಧಾಸ್ಯಾಮಿ ಯಥಾಶಕ್ತಿ ಯಥಾಬಲಮ್।
12218020c ನ ತು ಮೇಽತಿಕ್ರಮಃ ಸ್ಯಾದ್ವೈ ಸದಾ ಲಕ್ಷ್ಮಿ ತವಾಂತಿಕೇ।।
ಶಕ್ರನು ಹೇಳಿದನು: “ಲಕ್ಷ್ಮಿ! ಶಕ್ತಿ ಮತ್ತು ಬಲಗಳಿಗನುಗುಣವಾಗಿ ನಾನು ನಿನ್ನನ್ನು ಪ್ರತಿಷ್ಠಾಪಿಸುತ್ತೇನೆ. ನೀನು ನನ್ನೊಡನಿರುವವರೆಗೆ ನಾನು ನಿನ್ನನ್ನು ಅತಿಕ್ರಮಿಸುವುದಿಲ್ಲ.
12218021a ಭೂಮಿರೇವ ಮನುಷ್ಯೇಷು ಧಾರಣೀ ಭೂತಭಾವಿನೀ।
12218021c ಸಾ ತೇ ಪಾದಂ ತಿತಿಕ್ಷೇತ ಸಮರ್ಥಾ ಹೀತಿ ಮೇ ಮತಿಃ।।
ಭೂತಭಾವಿನೀ! ಮನುಷ್ಯರಲ್ಲಿ ಭೂಮಿಯು ನಿನ್ನನ್ನು ಧರಿಸುತ್ತಾಳೆ. ಅವಳು ನಿನ್ನ ಒಂದು ಕಾಲು ಭಾಗವನ್ನು ಹೊರಲು ಸಮರ್ಥಳು ಎಂದು ನನ್ನ ಅಭಿಪ್ರಾಯವು.”
12218022 ಶ್ರೀರುವಾಚ।
12218022a ಏಷ ಮೇ ನಿಹಿತಃ ಪಾದೋ ಯೋಽಯಂ ಭೂಮೌ ಪ್ರತಿಷ್ಠಿತಃ।
12218022c ದ್ವಿತೀಯಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು।।
ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಭೂಮಿಯ ಮೇಲೆ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ಎರಡನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”
12218023 ಶಕ್ರ ಉವಾಚ।
12218023a ಆಪ ಏವ ಮನುಷ್ಯೇಷು ದ್ರವಂತ್ಯಃ ಪರಿಚಾರಿಕಾಃ।
12218023c ತಾಸ್ತೇ ಪಾದಂ ತಿತಿಕ್ಷಂತಾಮಲಮಾಪಸ್ತಿತಿಕ್ಷಿತುಮ್।।
ಶಕ್ರನು ಹೇಳಿದನು: “ಮನುಷ್ಯರಲ್ಲಿ ಜಲವೇ ದ್ರವ್ಯರೂಪದಲ್ಲಿ ಸೇವೆಸಲ್ಲಿಸುತ್ತದೆ. ನಿನ್ನ ಒಂದು ಕಾಲುಭಾಗವು ಜಲದಲ್ಲಿ ಪ್ರತಿಷ್ಠಿತಗೊಳ್ಳಲಿ. ಜಲವು ನಿನ್ನನ್ನು ಹೊರಬಲ್ಲದು.”
12218024 ಶ್ರೀರುವಾಚ।
12218024a ಏಷ ಮೇ ನಿಹಿತಃ ಪಾದೋ ಯೋಽಯಮಪ್ಸು ಪ್ರತಿಷ್ಠಿತಃ।
12218024c ತೃತೀಯಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು।।
ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಜಲದಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ಮೂರನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”
12218025 ಶಕ್ರ ಉವಾಚ।
12218025a ಯಸ್ಮಿನ್ದೇವಾಶ್ಚ ಯಜ್ಞಾಶ್ಚ ಯಸ್ಮಿನ್ವೇದಾಃ ಪ್ರತಿಷ್ಠಿತಾಃ।
12218025c ತೃತೀಯಂ ಪಾದಮಗ್ನಿಸ್ತೇ ಸುಧೃತಂ ಧಾರಯಿಷ್ಯತಿ।।
ಶಕ್ರನು ಹೇಳಿದನು: “ಯಾರಲ್ಲಿ ದೇವತೆಗಳೂ, ಯಜ್ಞಗಳೂ ಮತ್ತು ವೇದಗಳು ಪ್ರತಿಷ್ಠಿತವಾಗಿವೆಯೋ ಆ ಅಗ್ನಿಯು ನಿನ್ನ ಮೂರನೆಯ ಕಾಲುಭಾಗವನ್ನು ಚೆನ್ನಾಗಿ ಧರಿಸಿಕೊಳ್ಳುತ್ತಾನೆ.”
12218026 ಶ್ರೀರುವಾಚ।
12218026a ಏಷ ಮೇ ನಿಹಿತಃ ಪಾದೋ ಯೋಽಯಮಗ್ನೌ ಪ್ರತಿಷ್ಠಿತಃ।
12218026c ಚತುರ್ಥಂ ಶಕ್ರ ಪಾದಂ ಮೇ ತಸ್ಮಾತ್ಸುನಿಹಿತಂ ಕುರು।।
ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಅಗ್ನಿಯಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ನನ್ನ ನಾಲ್ಕನೆಯ ಪಾದವನ್ನು ಎಲ್ಲಿಡಬೇಕೆಂದು ನಿಶ್ಚಯಮಾಡು.”
12218027 ಶಕ್ರ ಉವಾಚ।
12218027a ಯೇ ವೈ ಸಂತೋ ಮನುಷ್ಯೇಷು ಬ್ರಹ್ಮಣ್ಯಾಃ ಸತ್ಯವಾದಿನಃ।
12218027c ತೇ ತೇ ಪಾದಂ ತಿತಿಕ್ಷಂತಾಮಲಂ ಸಂತಸ್ತಿತಿಕ್ಷಿತುಮ್।।
ಶಕ್ರನು ಹೇಳಿದನು: “ಮನುಷ್ಯರಲ್ಲಿ ಬ್ರಹ್ಮಣ್ಯರೂ ಸತ್ಯವಾದಿಗಳೂ ಆದ ಸಂತರಿದ್ದಾರೆ. ಆ ಅಮಲ ಸಂತರು ನಿನ್ನನ್ನು ಧರಿಸಲು ಸಮರ್ಥರಾಗಿದ್ದಾರೆ. ಅವರು ನಿನ್ನ ಒಂದು ಪಾದವನ್ನು ಧರಿಸುತ್ತಾರೆ.”
12218028 ಶ್ರೀರುವಾಚ।
12218028a ಏಷ ಮೇ ನಿಹಿತಃ ಪಾದೋ ಯೋಽಯಂ ಸತ್ಸು ಪ್ರತಿಷ್ಠಿತಃ।
12218028c ಏವಂ ವಿನಿಹಿತಾಂ ಶಕ್ರ ಭೂತೇಷು ಪರಿಧತ್ಸ್ವ ಮಾಮ್।।
ಶ್ರೀಯು ಹೇಳಿದಳು: “ಇದೋ! ನನ್ನ ಈ ಒಂದು ಪಾದವನ್ನು ಸತ್ಪುರುಷರಲ್ಲಿ ಪ್ರತಿಷ್ಠಾಪಿಸಿದ್ದೇನೆ. ಶಕ್ರ! ಹೀಗೆ ಭೂತಗಳಲ್ಲಿ ಇರಿಸಲ್ಪಟ್ಟ ನನ್ನನ್ನು ನೀನು ರಕ್ಷಿಸು.”
12218029 ಶಕ್ರ ಉವಾಚ।
12218029a ಭೂತಾನಾಮಿಹ ವೈ ಯಸ್ತ್ವಾ ಮಯಾ ವಿನಿಹಿತಾಂ ಸತೀಮ್।
12218029c ಉಪಹನ್ಯಾತ್ಸ ಮೇ ದ್ವಿಷ್ಯಾತ್ತಥಾ ಶೃಣ್ವಂತು ಮೇ ವಚಃ।।
ಶಕ್ರನು ಹೇಳಿದನು: “ಹೀಗೆ ನಾನು ನಿನ್ನನ್ನು ವಿಂಗಡಿಸಿ ಭೂತಗಳಲ್ಲಿ ಇರಿಸಿದ್ದೇನೆ. ನನ್ನ ಈ ಮಾತನ್ನು ಕೇಳು. ನಿನ್ನನ್ನು ಹಿಂಸಿಸುವವರನ್ನು ನಾನು ಕೊಲ್ಲುತ್ತೇನೆ.””
12218030 ಭೀಷ್ಮ ಉವಾಚ।
12218030a ತತಸ್ತ್ಯಕ್ತಃ ಶ್ರಿಯಾ ರಾಜಾ ದೈತ್ಯಾನಾಂ ಬಲಿರಬ್ರವೀತ್।
12218030c ಯಾವತ್ಪುರಸ್ತಾತ್ ಪ್ರತಪೇತ್ತಾವದ್ವೈ ದಕ್ಷಿಣಾಂ ದಿಶಮ್।।
12218031a ಪಶ್ಚಿಮಾಂ ತಾವದೇವಾಪಿ ತಥೋದೀಚೀಂ ದಿವಾಕರಃ।
12218031c ತಥಾ ಮಧ್ಯಂದಿನೇ ಸೂರ್ಯೋ ಅಸ್ತಮೇತಿ2 ಯದಾ ತದಾ।
12218031e ಪುನರ್ದೇವಾಸುರಂ ಯುದ್ಧಂ ಭಾವಿ ಜೇತಾಸ್ಮಿ ವಸ್ತದಾ।।
ಭೀಷ್ಮನು ಹೇಳಿದನು: “ಹೀಗೆ ಶ್ರೀಯಿಂದ ತ್ಯಕ್ತನಾದ ದೈತ್ಯರ ರಾಜ ಬಲಿಯು ಹೇಳಿದನು: “ಸೂರ್ಯನು ಎಲ್ಲಿಯವರೆಗೆ ಪೂರ್ವದಿಕ್ಕಿನಲ್ಲಿ ಪ್ರಕಾಶಮಾನನಾಗಿರುತ್ತಾನೋ ಅಂದಿನವರೆಗೂ ಅವನು ದಕ್ಷಿಣ, ಉತ್ತರ, ಮತ್ತು ಪಶ್ಚಿಮ ದಿಕ್ಕುಗಳನ್ನೂ ಬೆಳಗುತ್ತಿರುತ್ತಾನೆ. ಸೂರ್ಯನು ಯಾವಾಗ ಮಧ್ಯಾಹ್ನದಲ್ಲಿಯೇ ಇದ್ದು ಅಸ್ತಂಗತನಾಗುವುದಿಲ್ಲವೋ ಆಗ ಪುನಃ ದೇವಾಸುರರ ಯುದ್ಧವಾಗುತ್ತದೆ. ಆಗ ನಾನು ನಿನ್ನನ್ನು ಗೆಲ್ಲುತ್ತೇನೆ.3
12218032a ಸರ್ವಾಽಲ್ಲೋಕಾನ್ಯದಾದಿತ್ಯ ಏಕಸ್ಥಸ್ತಾಪಯಿಷ್ಯತಿ।
12218032c ತದಾ ದೇವಾಸುರೇ ಯುದ್ಧೇ ಜೇತಾಹಂ ತ್ವಾಂ ಶತಕ್ರತೋ।।
ಶತಕ್ರತೋ! ಯಾವಾಗ ಸೂರ್ಯನು ಒಂದೇ ಸ್ಥಾನದಲ್ಲಿದ್ದುಕೊಂಡು ಎಲ್ಲ ಲೋಕಗಳನ್ನೂ ಬೆಳಗುತ್ತಾನೋ ಆಗ ನಡೆಯುವ ದೇವಾಸುರ ಯುದ್ಧದಲ್ಲಿ ನಾನು ನಿನ್ನನ್ನು ಗೆಲ್ಲುತ್ತೇನೆ.”
12218033 ಶಕ್ರ ಉವಾಚ।
12218033a ಬ್ರಹ್ಮಣಾಸ್ಮಿ ಸಮಾದಿಷ್ಟೋ ನ ಹಂತವ್ಯೋ ಭವಾನಿತಿ।
12218033c ತೇನ ತೇಽಹಂ ಬಲೇ ವಜ್ರಂ ನ ವಿಮುಂಚಾಮಿ ಮೂರ್ಧನಿ।।
ಶಕ್ರನು ಹೇಳಿದನು: “ಬಲೇ! ನಿನ್ನನ್ನು ನಾನು ಕೊಲ್ಲಕೂಡದೆಂದು ಬ್ರಹ್ಮನು ನನಗೆ ಆಜ್ಞೆಯಿತ್ತಿದ್ದಾನೆ. ಆದುದರಿಂದ ನಿನ್ನ ತಲೆಯ ಮೇಲೆ ವಜ್ರವನ್ನು ಪ್ರಹರಿಸುತ್ತಿಲ್ಲ.
12218034a ಯಥೇಷ್ಟಂ ಗಚ್ಚ ದೈತ್ಯೇಂದ್ರ ಸ್ವಸ್ತಿ ತೇಽಸ್ತು ಮಹಾಸುರ।
12218034c ಆದಿತ್ಯೋ ನಾವತಪಿತಾ ಕದಾ ಚಿನ್ಮಧ್ಯತಃ ಸ್ಥಿತಃ।।
ದೈತ್ಯೇಂದ್ರ! ಮಹಾಸುರ! ಇಷ್ಟವಾದಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ. ಆದಿತ್ಯನು ಎಂದೂ ಮಧ್ಯದಲ್ಲಿ ಸ್ಥಿತನಾಗುವುದಿಲ್ಲ.
12218035a ಸ್ಥಾಪಿತೋ ಹ್ಯಸ್ಯ ಸಮಯಃ ಪೂರ್ವಮೇವ ಸ್ವಯಂಭುವಾ।
12218035c ಅಜಸ್ರಂ ಪರಿಯಾತ್ಯೇಷ ಸತ್ಯೇನಾವತಪನ್ ಪ್ರಜಾಃ।।
ಹಿಂದೆಯೇ ಸ್ವಯಂಭುವು ಅವನಿಗೆ ಮರ್ಯಾದೆಯನ್ನು ಸ್ಥಾಪಿಸಿದ್ದಾನೆ. ಅದೇ ಸತ್ಯಮರ್ಯಾದೆಯ ಅನುಸಾರ ಸೂರ್ಯನು ಸಂಪೂರ್ಣ ಲೋಕಗಳಿಗೆ ತಾಪವನ್ನು ನೀಡುತ್ತಾ ನಿರಂತರ ಪರಿಭ್ರಮಿಸುತ್ತಿರುತ್ತಾನೆ.
12218036a ಅಯನಂ ತಸ್ಯ ಷಣ್ಮಾಸಾ ಉತ್ತರಂ ದಕ್ಷಿಣಂ ತಥಾ।
12218036c ಯೇನ ಸಂಯಾತಿ ಲೋಕೇಷು ಶೀತೋಷ್ಣೇ ವಿಸೃಜನ್ರವಿಃ।।
ಅವನಿಗೆ ಆರು ಮಾಸಗಳ ಉತ್ತರ ಮತ್ತು ದಕ್ಷಿಣ ಮಾರ್ಗಗಳಿವೆ. ಇದರಿಂದಲೇ ರವಿಯು ಸಂಪೂರ್ಣ ಜಗತ್ತಿನಲ್ಲಿ ಛಳಿ ಮತ್ತು ಬೇಸಗೆ ಕಾಲಗಳನ್ನು ಸೃಷ್ಟಿಸುತ್ತಾನೆ.””
12218037 ಭೀಷ್ಮ ಉವಾಚ।
12218037a ಏವಮುಕ್ತಸ್ತು ದೈತ್ಯೇಂದ್ರೋ ಬಲಿರಿಂದ್ರೇಣ ಭಾರತ।
12218037c ಜಗಾಮ ದಕ್ಷಿಣಾಮಾಶಾಮುದೀಚೀಂ ತು ಪುರಂದರಃ।।
ಭೀಷ್ಮನು ಹೇಳಿದನು: “ಭಾರತ! ಇಂದ್ರನು ಹೀಗೆ ಹೇಳಲು ದೈತ್ಯೇಂದ್ರ ಬಲಿಯು ದಕ್ಷಿಣಾಭಿಮುಖನಾಗಿ ಹೋದನು. ಪುರಂದರನು ಉತ್ತರ ದಿಕ್ಕಿನಲ್ಲಿ ಹೋದನು.
12218038a ಇತ್ಯೇತದ್ಬಲಿನಾ ಗೀತಮನಹಂಕಾರಸಂಜ್ಞಿತಮ್।
12218038c ವಾಕ್ಯಂ ಶ್ರುತ್ವಾ ಸಹಸ್ರಾಕ್ಷಃ ಖಮೇವಾರುರುಹೇ ತದಾ।।
ಅನಹಂಕಾರವನ್ನು ಸೂಚಿಸುವ ಬಲಿಯ ಈ ಗೀತೆಯನ್ನು ಕೇಳಿ ಸಹಸ್ರಾಕ್ಷನು ಆಕಾಶವನ್ನೇರಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೀಸನ್ನಿಧಾನೋ ನಾಮ ಅಷ್ಟಾದಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೀಸನ್ನಿಧಾನ ಎನ್ನುವ ಇನ್ನೂರಾಹದಿನೆಂಟನೇ ಅಧ್ಯಾಯವು.-
ಕಾಲದ ಆದೇಶವನ್ನು ನಾನು ಮನ್ನಿಸುತ್ತೇನೆ. ಈಗ ಕಾಲನು ಬಲಿಯನ್ನು ಪರಿತ್ಯಜಿಸಲು ನನ್ನನ್ನು ಪ್ರೇರೇಪಿಸಿದ್ದಾನೆ. ಆದುದರಿಂದ ನಾನು ಬಲಿಯ ಶರೀರದಿಂದ ಹೊರಬಂದಿದ್ದೇನೆ. ಆದುದರಿಂದ ನೀನು ಬಲಿಯನ್ನು ಯಾವ ಕಾರಣದಿಂದಲೂ ಅವಹೇಳನ ಮಾಡಬೇಡ. (ಭಾರತ ದರ್ಶನ). ↩︎
-
ನಾಸ್ತಮೇತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈಗ ವೈವಸ್ವತ ಮನ್ವಂತರವು ನಡೆಯುತ್ತಿದೆ. ಇದರ ನಂತರದ ಸಾವರ್ಣಿಕ ಮನ್ವಂತರದಲ್ಲಿ ಬಲಿಯೇ ಇಂದ್ರನಾಗುವನೆಂದೂ ಅದನ್ನು ಸೂಚಿಸಿಯೇ ಬಲಿಯು ಈ ಮಾತನ್ನು ಹೇಳಿರುವನೆಂದು ವ್ಯಾಖ್ಯಾನಕಾರರ ಅಭಿಪ್ರಾಯವು (ಭಾರತ ದರ್ಶನ). ವೈವಸ್ವತ ಮನ್ವಂತರವನ್ನು ಎಂಟು ಭಾಗಗಳಲ್ಲಿ ವಿಂಗಡಿಸಿ ಎಂಟನೇ ಭಾಗವು ಕಳೆಯುತ್ತಾ ಬರುವಾಗ ಪೂರ್ವಾದಿ ನಾಲ್ಕೂ ದಿಕ್ಕುಗಳಲ್ಲಿರುವ ಇಂದ್ರ, ಯಮ, ವರುಣ ಮತ್ತು ಕುಬೇರರ ನಾಲ್ಕೂ ಪುರಿಗಳು ನಷ್ಟವಾಗುತ್ತವೆ. ಆ ಸಮಯದಲ್ಲಿ ಕೇವಲ ಬ್ರಹ್ಮಲೋಕದಲ್ಲಿ ಸ್ಥಿತನಾಗಿ ಸೂರ್ಯನು ಕೆಳಗಿನ ಸಂಪೂರ್ಣ ಲೋಕಗಳನ್ನು ಪ್ರಕಾಶಿಸುತ್ತಾನೆ. ಆ ಸಮಯದಲ್ಲಿ ಸಾವರ್ಣಿಕ ಮನ್ವಂತರದ ಆರಂಭವಾಗುತ್ತದೆ ಮತ್ತು ಆಗ ರಾಜಾ ಬಲಿಯು ಇಂದ್ರನಾಗುತ್ತಾನೆ. (ನೀಲಕಂಠೀ, ಗೀತಾ ಪ್ರೆಸ್). ↩︎