215: ಶಕ್ರಪ್ರಹ್ರಾದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 215

ಸಾರ

ಮನುಷ್ಯನು ಶುಭಾಶುಭ ಕರ್ಮಗಳ ಕರ್ತೃವೋ ಅಥವಾ ಅಲ್ಲವೋ ಎನ್ನುವುದರ ಕುರಿತಾದ ಇಂದ್ರ-ಪ್ರಹ್ರಾದರ ಸಂವಾದ (1-37).

112215001 ಯುಧಿಷ್ಠಿರ ಉವಾಚ।
12215001a ಯದಿದಂ ಕರ್ಮ ಲೋಕೇಽಸ್ಮಿನ್ಶುಭಂ ವಾ ಯದಿ ವಾಶುಭಮ್।
12215001c ಪುರುಷಂ ಯೋಜಯತ್ಯೇವ ಫಲಯೋಗೇನ ಭಾರತ।।

ಯುಧಿಷ್ಠಿರನು ಹೇಳಿದನು: “ಭಾರತ! ಈ ಲೋಕದಲ್ಲಿ ನಡೆಯುವ ಶುಭಾಶುಭ ಕರ್ಮಗಳು ಮನುಷ್ಯನನ್ನು ಫಲಭೋಗದಲ್ಲಿ ನಿಯೋಜಿಸುತ್ತವೆ.

12215002a ಕರ್ತಾ ಸ್ವಿತ್ತಸ್ಯ ಪುರುಷ ಉತಾಹೋ ನೇತಿ ಸಂಶಯಃ।
12215002c ಏತದಿಚ್ಚಾಮಿ ತತ್ತ್ವೇನ ತ್ವತ್ತಃ ಶ್ರೋತುಂ ಪಿತಾಮಹ।।

ಪಿತಾಮಹ! ಆದರೆ ಮನುಷ್ಯನು ಈ ಕರ್ಮಗಳ ಕರ್ತೃವು ಹೌದೋ ಅಥವಾ ಅಲ್ಲವೋ ಎಂದು ಸಂಶಯವಾಗುತ್ತಿದೆ. ಇದರ ಕುರಿತಾಗಿ ತತ್ತ್ವತಃ ನಿನ್ನಿಂದ ತಿಳಿಯ ಬಯಸುತ್ತೇನೆ.”

12215003 ಭೀಷ್ಮ ಉವಾಚ।
12215003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12215003c ಪ್ರಹ್ರಾದಸ್ಯ ಚ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಪ್ರಹ್ರಾದ ಮತ್ತು ಇಂದ್ರರ ಈ ಸಂವಾದವನ್ನು ಉದಾಹರಿಸುತ್ತಾರೆ.

12215004a ಅಸಕ್ತಂ ಧೂತಪಾಪ್ಮಾನಂ ಕುಲೇ ಜಾತಂ ಬಹುಶ್ರುತಮ್।
12215004c ಅಸ್ತಂಭಮನಹಂಕಾರಂ ಸತ್ತ್ವಸ್ಥಂ ಸಮಯೇ ರತಮ್।।
12215005a ತುಲ್ಯನಿಂದಾಸ್ತುತಿಂ ದಾಂತಂ ಶೂನ್ಯಾಗಾರನಿವೇಶನಮ್।
12215005c ಚರಾಚರಾಣಾಂ ಭೂತಾನಾಂ ವಿದಿತಪ್ರಭವಾಪ್ಯಯಮ್।।
12215006a ಅಕ್ರುಧ್ಯಂತಮಹೃಷ್ಯಂತಮಪ್ರಿಯೇಷು ಪ್ರಿಯೇಷು ಚ।
12215006c ಕಾಂಚನೇ ವಾಥ ಲೋಷ್ಟೇ ವಾ ಉಭಯೋಃ ಸಮದರ್ಶನಮ್।।
12215007a ಆತ್ಮನಿಃಶ್ರೇಯಸಜ್ಞಾನೇ ಧೀರಂ ನಿಶ್ಚಿತನಿಶ್ಚಯಮ್।
12215007c ಪರಾವರಜ್ಞಂ ಭೂತಾನಾಂ ಸರ್ವಜ್ಞಂ ಸಮದರ್ಶನಮ್।। 212215008a ಶಕ್ರಃ ಪ್ರಹ್ರಾದಮಾಸೀನಮೇಕಾಂತೇ ಸಂಯತೇಂದ್ರಿಯಮ್। 12215008c ಬುಭುತ್ಸಮಾನಸ್ತತ್ ಪ್ರಜ್ಞಾಮಭಿಗಮ್ಯೇದಮಬ್ರವೀತ್।।

ಅಸಕ್ತನೂ, ಪಾಪಗಳನ್ನು ತೊಳೆದುಕೊಂಡವನೂ, ಕುಲೀನನೂ, ವಿದ್ವಾಂಸನೂ, ಮಮಕಾರ-ಅಹಂಕಾರರಹಿತನೂ, ಸತ್ತ್ವದಲ್ಲಿಯೇ ನೆಲೆಸಿದವನೂ, ಧರ್ಮದ ಮರ್ಯಾದೆಯನ್ನು ಪಾಲಿಸುವುದರಲ್ಲಿ ತತ್ಪರನೂ, ಸ್ತುತಿ-ನಿಂದೆಗಳನ್ನು ಸಮನಾಗಿ ಕಾಣುವವನೂ, ಮನಸ್ಸು-ಇಂದ್ರಿಯಗಳನ್ನು ನಿಗ್ರಹಿಸಿದ ದಾಂತನೂ, ಚರಾಚರಭೂತಗಳ ಉತ್ಪತ್ತಿ-ಲಯಗಳನ್ನು ತಿಳಿದವನೂ, ಪ್ರಿಯ-ಅಪ್ರಿಯಗಳ ಕುರಿತು ಹರ್ಷ-ಕ್ರೋಧಗಳನ್ನು ತಾಳದವನೂ, ಏಕಾಂತಗೃಹದಲ್ಲಿ ವಾಸಿಸುತ್ತಿದ್ದವನೂ, ಚಿನ್ನ-ಮಣ್ಣುಹೆಂಟೆಗಳೆರಡನ್ನೂ ಸಮನಾಗಿ ಕಾಣುವವನೂ, ಆನಂದಮಯ ಆತ್ಮಜ್ಞಾನದಲ್ಲಿ ನಿತ್ಯನಿಶ್ಚಯವುಳ್ಳವನೂ, ಧೀರನೂ, ಪ್ರಾಣಿಗಳ ಭೂತ-ಭವಿಷ್ಯಗಳನ್ನು ತಿಳಿದವನೂ, ಸರ್ವಜ್ಞನೂ, ಸಮದರ್ಶನನೂ, ಸಂಯತೇಂದ್ರಿಯನೂ ಆದ ಪ್ರಹ್ರಾದನು ಏಕಾಂತದಲ್ಲಿ ಕುಳಿತುಕೊಂಡಿರಲು, ಅವನ ಬುದ್ಧಿ-ವಿಚಾರಗಳನ್ನು ತಿಳಿಯಲೋಸುಗ ಶಕ್ರನು ಅವನ ಬಳಿಸಾರಿ ಇಂತೆಂದನು:

12215009a ಯೈಃ ಕೈಶ್ಚಿತ್ಸಂಮತೋ ಲೋಕೇ ಗುಣೈಃ ಸ್ಯಾತ್ಪುರುಷೋ ನೃಷು।
12215009c ಭವತ್ಯನಪಗಾನ್ಸರ್ವಾಂಸ್ತಾನ್ಗುಣಾಽಲ್ಲಕ್ಷಯಾಮಹೇ।।

“ಲೋಕದ ಜನರು ಪುರುಷನ ಯಾವ ಗುಣಗಳನ್ನು ಸಮ್ಮಾನಿಸುತ್ತಾರೋ ಆ ಎಲ್ಲ ಗುಣಗಳೂ ನಿನ್ನಲ್ಲಿ ಸ್ಥಿರಗೊಂಡಿರುವುದನ್ನು ನಾನು ನೋಡುತ್ತಿದ್ದೇನೆ.

12215010a ಅಥ ತೇ ಲಕ್ಷ್ಯತೇ ಬುದ್ಧಿಃ ಸಮಾ ಬಾಲಜನೈರಿಹ।
12215010c ಆತ್ಮಾನಂ ಮನ್ಯಮಾನಃ ಸನ್ ಶ್ರೇಯಃ ಕಿಮಿಹ ಮನ್ಯಸೇ।।

ಆತ್ಮಾನುಭವವನ್ನು ಪಡೆದಿರುವ ನಿನ್ನ ಬುದ್ಧಿಯು ಬಾಲಜನರ ಬುದ್ಧಿಯಂತೆ ತೋರುತ್ತದೆ. ನೀನು ಯಾವುದನ್ನು ಶ್ರೇಯಸ್ಕರವೆಂದು ಮನ್ನಿಸುತ್ತೀಯೆ?

12215011a ಬದ್ಧಃ ಪಾಶೈಶ್ಚ್ಯುತಃ ಸ್ಥಾನಾದ್ದ್ವಿಷತಾಂ ವಶಮಾಗತಃ।
12215011c ಶ್ರಿಯಾ ವಿಹೀನಃ ಪ್ರಹ್ರಾದ ಶೋಚಿತವ್ಯೇ ನ ಶೋಚಸಿ।।

ಪ್ರಹ್ರಾದ! ಪಾಶಗಳಿಂದ ಬಂಧಿತನಾಗಿರುವೆ. ಚಕ್ರವರ್ತಿಯ ಸ್ಥಾನದಿಂದ ಚ್ಯುತನಾಗಿದ್ದೀಯೆ. ಶತ್ರುಗಳ ವಶನಾಗಿದ್ದೀಯೆ. ಸಂಪತ್ತಿನಿಂದ ವಿಹೀನನಾಗಿದ್ದೀಯೆ. ಶೋಕಿಸಬೇಕಾದ ಪರಿಸ್ಥಿತಿಯಲ್ಲಿದ್ದರೂ ನೀನು ಶೋಕಿಸುತ್ತಿಲ್ಲ!

12215012a ಪ್ರಜ್ಞಾಲಾಭಾತ್ತು ದೈತೇಯ ಉತಾಹೋ ಧೃತಿಮತ್ತಯಾ।
12215012c ಪ್ರಹ್ರಾದ ಸ್ವಸ್ಥರೂಪೋಽಸಿ ಪಶ್ಯನ್ವ್ಯಸನಮಾತ್ಮನಃ।।

ದೈತೇಯ! ವ್ಯಸನದಲ್ಲಿರುವುದನ್ನು ನೋಡಿಯೂ ನೀನು ಹೇಗೆ ಸ್ವಸ್ಥರೂಪನಾಗಿರುವೆ? ನಿನ್ನ ಈ ನಿಶ್ಚಲ ಸಮಸ್ಥಿತಿಗೆ ಆತ್ಮಜ್ಞಾನವು ಕಾರಣವೋ ಅಥವಾ ಧೈರ್ಯವು ಕಾರಣವೋ?”

12215013a ಇತಿ ಸಂಚೋದಿತಸ್ತೇನ ಧೀರೋ ನಿಶ್ಚಿತನಿಶ್ಚಯಃ।
12215013c ಉವಾಚ ಶ್ಲಕ್ಷ್ಣಯಾ ವಾಚಾ ಸ್ವಾಂ ಪ್ರಜ್ಞಾಮನುವರ್ಣಯನ್।।

ಇಂದ್ರನು ಹೀಗೆ ಸಂಚೋದಿಸಲು ನಿಶ್ಚಿತನಿಶ್ಚಯಿ ಧೀರ ಪ್ರಹ್ರಾದನು ಪ್ರಜ್ಞೆಯನ್ನು ವರ್ಣಿಸುತ್ತಾ ಈ ಸುಮಧುರ ಮಾತುಗಳನ್ನಾಡಿದನು:

12215014a ಪ್ರವೃತ್ತಿಂ ಚ ನಿವೃತ್ತಿಂ ಚ ಭೂತಾನಾಂ ಯೋ ನ ಬುಧ್ಯತೇ।
12215014c ತಸ್ಯ ಸ್ತಂಭೋ ಭವೇದ್ಬಾಲ್ಯಾನ್ನಾಸ್ತಿ ಸ್ತಂಭೋಽನುಪಶ್ಯತಃ।।

“ಭೂತಗಳ ಪ್ರವೃತ್ತಿ-ನಿವೃತಿಗಳನ್ನು ತಿಳಿಯದೇ ಇರುವವನಲ್ಲಿ ಅವಿವೇಕದ ಕಾರಣದಿಂದ ಜಡತೆ ಮತ್ತು ಮೋಹವುಂಟಾಗುತ್ತದೆ. ಆದರೆ ಅವುಗಳನ್ನು ತಿಳಿದುಕೊಂಡಿರುವವನಿಗೆ ಜಡತೆ-ಮೋಹಗಳುಂಟಾಗುವುದಿಲ್ಲ.

12215015a ಸ್ವಭಾವಾತ್ಸಂಪ್ರವರ್ತಂತೇ ನಿವರ್ತಂತೇ ತಥೈವ ಚ।
12215015c ಸರ್ವೇ ಭಾವಾಸ್ತಥಾಭಾವಾಃ ಪುರುಷಾರ್ಥೋ ನ ವಿದ್ಯತೇ।।

ಸರ್ವ ಭಾವ-ಅಭಾವಗಳೂ ಸ್ವಭಾವದಿಂದಲೇ ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ಅದರಲ್ಲಿ ಪುರುಷಪ್ರಯತ್ನವೇನೂ ಇಲ್ಲ3.

12215016a ಪುರುಷಾರ್ಥಸ್ಯ ಚಾಭಾವೇ ನಾಸ್ತಿ ಕಶ್ಚಿತ್ ಸ್ವಕಾರಕಃ।
12215016c ಸ್ವಯಂ ತು4 ಕುರ್ವತಸ್ತಸ್ಯ ಜಾತು ಮಾನೋ ಭವೇದಿಹ।।

ಪುರುಷಪ್ರಯತ್ನವಿಲ್ಲದೇ ಇರುವಾಗ ಮನುಷ್ಯನು ಸ್ವತಃ ಕರ್ತೃವಾಗುವುದಿಲ್ಲ. ಆದರೆ ತಾನೇ ಮಾಡುತ್ತಿದ್ದೇನೆಂದು ಅವನಿಗೆ ಅಭಿಮಾನವುಂಟಾಗುತ್ತದೆ.

12215017a ಯಸ್ತು ಕರ್ತಾರಮಾತ್ಮಾನಂ ಮನ್ಯತೇ ಸಾಧ್ವಸಾಧುನೋಃ।
12215017c ತಸ್ಯ ದೋಷವತೀ ಪ್ರಜ್ಞಾ ಸ್ವಮೂರ್ತ್ಯಜ್ಞೇತಿ5 ಮೇ ಮತಿಃ।।

ಶುಭಾಶುಭಗಳ ಕರ್ತೃವು ತಾನೇ ಎಂದು ತಿಳಿಯುವವನ ಪ್ರಜ್ಞೆಯು ದೋಷಯುಕ್ತವಾದುದು ಮತ್ತು ತನ್ನ ಸ್ವರೂಪದ ಕುರಿತಾದ ಅಜ್ಞಾನವೆಂದು ನನ್ನ ಮತವು.

12215018a ಯದಿ ಸ್ಯಾತ್ಪುರುಷಃ ಕರ್ತಾ ಶಕ್ರಾತ್ಮಶ್ರೇಯಸೇ ಧ್ರುವಮ್।
12215018c ಆರಂಭಾಸ್ತಸ್ಯ ಸಿಧ್ಯೇರನ್ನ ಚ ಜಾತು ಪರಾಭವೇತ್।।

ಶಕ್ರ! ಒಂದು ವೇಳೆ ಪುರುಷನೇ ಕರ್ತೃವಾಗಿದ್ದರೆ ನಿಶ್ಚಿತವಾಗಿ ಅವನು ತನ್ನ ಶ್ರೇಯಸ್ಸಿಗೆ ಪ್ರಯತ್ನಿಸುತ್ತಿದ್ದನು. ಅವನು ಆರಂಭಿಸಿದ ಕಾರ್ಯಗಳೆಲ್ಲವೂ ಸಿದ್ಧಿಯಾಗುತ್ತಿದ್ದವು. ಅವನಿಗೆ ಪರಾಭವವೇ ಆಗುತ್ತಿರಲಿಲ್ಲ.

12215019a ಅನಿಷ್ಟಸ್ಯ ಹಿ ನಿರ್ವೃತ್ತಿರನಿವೃತ್ತಿಃ ಪ್ರಿಯಸ್ಯ ಚ।
12215019c ಲಕ್ಷ್ಯತೇ ಯತಮಾನಾನಾಂ ಪುರುಷಾರ್ಥಸ್ತತಃ ಕುತಃ।।

ಆದರೆ ಇಷ್ಟಸಿದ್ಧಿಗಾಗಿ ಪ್ರಯತ್ನಿಸುವವರಿಗೆ ಅನಿಷ್ಟಪ್ರಾಪ್ತಿಯಾಗುವುದೂ ಮತ್ತು ಅವರು ಪ್ರಿಯವಾದುದರಿಂದ ವಂಚಿತಗೊಳ್ಳುವುದೂ ಕಂಡುಬರುತ್ತದೆ. ಹೀಗಿರುವಾಗ ಪುರುಷ ಪ್ರಯತ್ನವು ಎಲ್ಲಿ ಹೋಯಿತು?

12215020a ಅನಿಷ್ಟಸ್ಯಾಭಿನಿರ್ವೃತ್ತಿಮಿಷ್ಟಸಂವೃತ್ತಿಮೇವ ಚ।
12215020c ಅಪ್ರಯತ್ನೇನ ಪಶ್ಯಾಮಃ ಕೇಷಾಂ ಚಿತ್ತತ್ಸ್ವಭಾವತಃ।।

ಇನ್ನು ಕೆಲವರಿಗೆ ಯಾವ ಪ್ರಯತ್ನವೂ ಇಲ್ಲದೇ ಅನಿಷ್ಟವು ನಿವಾರಣೆಯಾಗುವುದನ್ನೂ ಇಷ್ಟವು ಪ್ರಾಪ್ತವಾಗುವುದನ್ನೂ ಕಾಣುತ್ತೇವೆ. ಇದು ಸ್ವಾಭಾವಕವಾಗಿಯೇ ನಡೆದುಹೋಗುತ್ತದೆ.

12215021a ಪ್ರತಿರೂಪಧರಾಃ ಕೇ ಚಿದ್ದೃಶ್ಯಂತೇ ಬುದ್ಧಿಸತ್ತಮಾಃ।
12215021c ವಿರೂಪೇಭ್ಯೋಽಲ್ಪಬುದ್ಧಿಭ್ಯೋ ಲಿಪ್ಸಮಾನಾ ಧನಾಗಮಮ್।।

ಹೆಚ್ಚುಬುದ್ಧಿವಂತರು ಮತ್ತು ಹೆಚ್ಚು ರೂಪವಂತರಲ್ಲಿ ಕೆಲವರು ವಿರೂಪರು ಮತ್ತು ಅಲ್ಪಬುದ್ಧಿಯವರಿಂದ ಹಣವನ್ನು ಪಡೆದುಕೊಳ್ಳಲು ಅಪೇಕ್ಷಿಸುವುದು ಕಂಡುಬರುತ್ತದೆ.

12215022a ಸ್ವಭಾವಪ್ರೇರಿತಾಃ ಸರ್ವೇ ನಿವಿಶಂತೇ ಗುಣಾ ಯದಾ।
12215022c ಶುಭಾಶುಭಾಸ್ತದಾ ತತ್ರ ತಸ್ಯ ಕಿಂ ಮಾನಕಾರಣಮ್।।

ಹೀಗೆ ಸರ್ವ ಶುಭಾಶುಭಕರ್ಮಗಳು ಸ್ವಭಾವಪ್ರೇರಿತ ಗುಣಗಳಿಂದಲೇ ನಡೆಯುತ್ತವೆ. ಹೀಗಿರುವಾಗ ಅಭಿಮಾನ ಪಡುವ ಕಾರಣವೇನೂ ಇಲ್ಲ.

12215023a ಸ್ವಭಾವಾದೇವ ತತ್ಸರ್ವಮಿತಿ ಮೇ ನಿಶ್ಚಿತಾ ಮತಿಃ।
12215023c ಆತ್ಮಪ್ರತಿಷ್ಠಿತಾ ಪ್ರಜ್ಞಾ ಮಮ ನಾಸ್ತಿ ತತೋಽನ್ಯಥಾ।।

ಸ್ವಭಾವದಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವುದು ನನ್ನ ನಿಶ್ಚಿತ ಮತವು. ಇದಕ್ಕೆ ಬೇರೆಯಾದ ಆತ್ಮನಿಷ್ಠೆಯಾಗಲೀ ಪ್ರಜ್ಞೆಯಾಗಲೀ ನನಗಿಲ್ಲ.

12215024a ಕರ್ಮಜಂ ತ್ವಿಹ ಮನ್ಯೇಽಹಂ ಫಲಯೋಗಂ ಶುಭಾಶುಭಮ್।
12215024c ಕರ್ಮಣಾಂ ವಿಷಯಂ ಕೃತ್ಸ್ನಮಹಂ ವಕ್ಷ್ಯಾಮಿ ತಚ್ಚೃಣು।।

ಶುಭಾಶುಭಫಲಗಳ ಯೋಗವು ಕರ್ಮದಿಂದಲೇ ಹುಟ್ಟುತ್ತವೆ ಎಂದು ನನ್ನ ಮತವು. ಕರ್ಮಗಳ ವಿಷಯವನ್ನು ಸಂಪೂರ್ಣವಾಗಿ ಹೇಳುತ್ತೇನೆ. ಅದನ್ನು ಕೇಳು.

12215025a ಯಥಾ ವೇದಯತೇ ಕಶ್ಚಿದೋದನಂ ವಾಯಸೋ ವದನ್।
12215025c ಏವಂ ಸರ್ವಾಣಿ ಕರ್ಮಾಣಿ ಸ್ವಭಾವಸ್ಯೈವ ಲಕ್ಷಣಮ್।।

ಕಾಗೆಯೊಂದು ಎಲ್ಲಿಯೋ ಬಿದ್ದಿರುವ ಅನ್ನವನ್ನು ತಿನ್ನುವಾಗ ಕಾ ಕಾ ಎಂದು ಕೂಗಿ ಅನ್ನವು ಎಲ್ಲಿದೆಯೆಂದು ಅನ್ಯ ಕಾಗೆಗಳಿಗೆ ಸೂಚನೆ ನೀಡುವಂತೆ ಸಮಸ್ತ ಕರ್ಮಗಳೂ ತಮ್ಮ ಸ್ವಭಾವವನ್ನೇ ಸೂಚಿಸುತ್ತವೆ6.

12215026a ವಿಕಾರಾನೇವ ಯೋ ವೇದ ನ ವೇದ ಪ್ರಕೃತಿಂ ಪರಾಮ್।
12215026c ತಸ್ಯ ಸ್ತಂಭೋ ಭವೇದ್ಬಾಲ್ಯಾನ್ನಾಸ್ತಿ ಸ್ತಂಭೋಽನುಪಶ್ಯತಃ।।

ಕಾರ್ಯರೂಪದ ವಿಕಾರಗಳನ್ನು ಮಾತ್ರ ತಿಳಿದಿರುವ ಮತ್ತು ಪರಮ ಪ್ರಕೃತಿ ಸ್ವಭಾವವನ್ನು ತಿಳಿಯದಿರುವ ಮನುಷ್ಯನಿಗೆ ಅವಿವೇಕದ ಕಾರಣದಿಂದ ಮೋಹ ಅಥವಾ ಅಭಿಮಾನವುಂಟಾಗುತ್ತದೆ. ಈ ವಿಷಯವನ್ನು ಚೆನ್ನಾಗಿ ತಿಳಿದಿರುವವನಿಗೆ ಮೋಹವುಂಟಾಗುವುದಿಲ್ಲ.

12215027a ಸ್ವಭಾವಭಾವಿನೋ ಭಾವಾನ್ಸರ್ವಾನೇವೇಹ ನಿಶ್ಚಯೇ।
12215027c ಬುಧ್ಯಮಾನಸ್ಯ ದರ್ಪೋ ವಾ ಮಾನೋ ವಾ ಕಿಂ ಕರಿಷ್ಯತಿ।।

ಎಲ್ಲ ಭಾವಗಳೂ ಸ್ವಭಾವದಿಂದಲೇ ಹುಟ್ಟುತ್ತವೆ ಎನ್ನುವುದನ್ನು ನಿಶ್ಚಯವಾಗಿ ತಿಳಿದವರಿಗೆ ದರ್ಪವಾಗಲೀ ಅಭಿಮಾನವಾಗಲೀ ಏನು ಮಾಡೀತು?

12215028a ವೇದ ಧರ್ಮವಿಧಿಂ ಕೃತ್ಸ್ನಂ ಭೂತಾನಾಂ ಚಾಪ್ಯನಿತ್ಯತಾಮ್।
12215028c ತಸ್ಮಾಚ್ಚಕ್ರ ನ ಶೋಚಾಮಿ ಸರ್ವಂ ಹ್ಯೇವೇದಮಂತವತ್।।

ಶಕ್ರ! ಸಂಪೂರ್ಣ ಧರ್ಮವಿಧಿಯನ್ನೂ ಭೂತಗಳ ಅನಿತ್ಯತೆಯನ್ನೂ ತಿಳಿದುಕೊಂಡಿದ್ದೇನೆ. ಆದುದರಿಂದ ಸರ್ವವೂ ಅಂತ್ಯಗೊಳ್ಳುತ್ತವೆ ಎನ್ನುವುದನ್ನು ತಿಳಿದು ನಾನು ಶೋಕಿಸುವುದಿಲ್ಲ.

12215029a ನಿರ್ಮಮೋ ನಿರಹಂಕಾರೋ ನಿರೀಹೋ7 ಮುಕ್ತಬಂಧನಃ।
12215029c ಸ್ವಸ್ಥೋಽವ್ಯಪೇತಃ ಪಶ್ಯಾಮಿ ಭೂತಾನಾಂ ಪ್ರಭವಾಪ್ಯಯೌ।।

ನಿರ್ಮಮನಾಗಿ, ನಿರಹಂಕಾರನಾಗಿ, ಆಸೆಗಳಿಲ್ಲದೇ ಬಂಧನಗಳಿಂದ ಮುಕ್ತನಾಗಿ ಆತ್ಮನಿಷ್ಟನಾಗಿ ನಾನು ಭೂತಗಳ ಉತ್ಪತ್ತಿ-ವಿನಾಶಗಳನ್ನು ನೋಡುತ್ತಲೇ ಇರುತ್ತೇನೆ.

12215030a ಕೃತಪ್ರಜ್ಞಸ್ಯ ದಾಂತಸ್ಯ ವಿತೃಷ್ಣಸ್ಯ ನಿರಾಶಿಷಃ।
12215030c ನಾಯಾಸೋ ವಿದ್ಯತೇ ಶಕ್ರ ಪಶ್ಯತೋ ಲೋಕವಿದ್ಯಯಾ8।।

ಶಕ್ರ! ಕೃತಪ್ರಜ್ಞ, ದಾಂತ, ತೃಷ್ಣೆಗಳಿಲ್ಲದ, ಆಶೆಗಳಿಲ್ಲದ ನನಗೆ ಲೋಕದ ವಿದ್ಯಮಾನಗಳನ್ನು ನೋಡಿ ಆಯಾಸವಾಗುವುದಿಲ್ಲ9.

12215031a ಪ್ರಕೃತೌ ಚ ವಿಕಾರೇ ಚ ನ ಮೇ ಪ್ರೀತಿರ್ನ ಚ ದ್ವಿಷೇ।
12215031c ದ್ವೇಷ್ಟಾರಂ ನ ಚ ಪಶ್ಯಾಮಿ ಯೋ ಮಮಾದ್ಯ ಮಮಾಯತೇ।।

ಪ್ರಕೃತಿ ಮತ್ತು ಅದರ ಕಾರ್ಯಗಳ ವಿಷಯವಾಗಿ ನನಗೆ ಪ್ರೀತಿಯೂ ಇಲ್ಲ ದ್ವೇಷವೂ ಇಲ್ಲ. ಯಾರನ್ನೂ ನಾನು ನನ್ನ ದ್ವೇಷಿಯೆಂದಾಗಲೀ ಆತ್ಮೀಯನೆಂದಾಗಲೀ ಭಾವಿಸುವುದಿಲ್ಲ.

12215032a ನೋರ್ಧ್ವಂ ನಾವಾಙ್ನ ತಿರ್ಯಕ್ಚ ನ ಕ್ವ ಚಿಚ್ಚಕ್ರ ಕಾಮಯೇ।
12215032c ನ ವಿಜ್ಞಾನೇ ನ ವಿಜ್ಞೇಯೇ ನಾಜ್ಞಾನೇ ಶರ್ಮ ವಿದ್ಯತೇ10।।

ಮೇಲಾಗಲೀ, ಕೆಳಗಾಗಲೀ, ಅಡ್ಡಡ್ಡವಾಗಲೀ, ಯಾವುದೇ ಸ್ಥಳದಲ್ಲಿಯಾಗಲೀ ನಾನು ಏನನ್ನೂ ಅಪೇಕ್ಷಿಸುವುದಿಲ್ಲ. ವಿಜ್ಞಾನದಲ್ಲಾಗಲೀ, ವಿಜ್ಞೇಯದಲ್ಲಾಗಲೀ ಮತ್ತು ಅಜ್ಞಾನದಲ್ಲಾಗಲೀ ನನ್ನ ನೆಲೆಯಿಲ್ಲ.”

12215033 ಶಕ್ರ ಉವಾಚ।
12215033a ಯೇನೈಷಾ ಲಭ್ಯತೇ ಪ್ರಜ್ಞಾ ಯೇನ ಶಾಂತಿರವಾಪ್ಯತೇ।
12215033c ಪ್ರಬ್ರೂಹಿ ತಮುಪಾಯಂ ಮೇ ಸಮ್ಯಕ್ ಪ್ರಹ್ರಾದ ಪೃಚ್ಚತೇ।।

ಶಕ್ರನು ಹೇಳಿದನು: “ಪ್ರಹ್ರಾದ! ಯಾವುದರಿಂದ ಪ್ರಜ್ಞೆಯು ದೊರೆಯುತ್ತದೆಯೋ, ಯಾವುದರಿಂದ ಶಾಂತಿಯು ದೊರೆಯುತ್ತದೆಯೋ ಆ ಉಪಾಯವನ್ನು ಹೇಳು. ಕೇಳುತ್ತಿರುವ ನನಗೆ ಅದನ್ನು ಸರಿಯಾಗಿ ಹೇಳು.”

12215034 ಪ್ರಹ್ರಾದ ಉವಾಚ।
12215034a ಆರ್ಜವೇನಾಪ್ರಮಾದೇನ ಪ್ರಸಾದೇನಾತ್ಮವತ್ತಯಾ11
12215034c ವೃದ್ಧಶುಶ್ರೂಷಯಾ ಶಕ್ರ ಪುರುಷೋ ಲಭತೇ ಮಹತ್।।

ಪ್ರಹ್ರಾದನು ಹೇಳಿದನು: “ಶಕ್ರ! ಸರಳತೆಯಿಂದ, ಅಪ್ರಮಾದದಿಂದ, ಆತ್ಮವಂತನಾಗಿ ಪ್ರಶಾಂತನಾಗಿರುವುದರಿಂದ ಮತ್ತು ವೃದ್ಧರ ಶುಶ್ರೂಷೆಗೈಯುವುದರಿಂದ ಪುರುಷನು ಪರಮಪದವನ್ನು ಪಡೆದುಕೊಳ್ಳುತ್ತಾನೆ.

12215035a ಸ್ವಭಾವಾಲ್ಲಭತೇ ಪ್ರಜ್ಞಾಂ ಶಾಂತಿಮೇತಿ ಸ್ವಭಾವತಃ।
12215035c ಸ್ವಭಾವಾದೇವ ತತ್ಸರ್ವಂ ಯತ್ಕಿಂ ಚಿದನುಪಶ್ಯಸಿ।।

ಸ್ವಭಾವದಿಂದಲೇ ಪ್ರಜ್ಞೆಯುಂಟಾಗುತ್ತದೆ. ಶಾಂತಿಯೂ ಸ್ವಭಾವತಃ ದೊರೆಯುತ್ತದೆ. ನೀನು ಏನೆಲ್ಲ ನೋಡುತ್ತೀಯೋ ಅವೆಲ್ಲವೂ ಸ್ವಭಾವದಿಂದಲೇ ಉಂಟಾಗಿವೆ.”

12215036 ಭೀಷ್ಮ ಉವಾಚ।
12215036a ಇತ್ಯುಕ್ತೋ ದೈತ್ಯಪತಿನಾ ಶಕ್ರೋ ವಿಸ್ಮಯಮಾಗಮತ್।
12215036c ಪ್ರೀತಿಮಾಂಶ್ಚ ತದಾ ರಾಜಂಸ್ತದ್ವಾಕ್ಯಂ ಪ್ರತ್ಯಪೂಜಯತ್।।

ಭೀಷ್ಮನು ಹೇಳಿದನು: “ದೈತ್ಯಪತಿಯು ಹೀಗೆ ಹೇಳಲು ಶಕ್ರನು ವಿಸ್ಮಿತನಾದನು. ರಾಜನ್! ಪ್ರೀತಿಮಾನನಾಗಿ ಅವನ ಆ ಮಾತನ್ನು ಇಂದ್ರನು ಗೌರವಿಸಿದನು.

12215037a ಸ ತದಾಭ್ಯರ್ಚ್ಯ ದೈತ್ಯೇಂದ್ರಂ ತ್ರೈಲೋಕ್ಯಪತಿರೀಶ್ವರಃ।
12215037c ಅಸುರೇಂದ್ರಮುಪಾಮಂತ್ರ್ಯ ಜಗಾಮ ಸ್ವಂ ನಿವೇಶನಮ್।।

ಅನಂತರ ಆ ತ್ರೈಲೋಕ್ಯಪತಿ ಈಶ್ವರ ಇಂದ್ರನು ದೈತ್ಯೇಂದ್ರನನ್ನು ಪೂಜಿಸಿ, ಅಸುರೇಂದ್ರನ ಅನುಮತಿಯನ್ನು ಪಡೆದು ತನ್ನ ನಿವೇಶನಕ್ಕೆ ತೆರಳಿದನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಕ್ರಪ್ರಹ್ರಾದಸಂವಾದೋ ನಾಮ ಪಂಚದಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಕ್ರಪ್ರಹ್ರಾದಸಂವಾದ ಎನ್ನುವ ಇನ್ನೂರಾಹದಿನೈದನೇ ಅಧ್ಯಾಯವು.

  1. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಸನತ್ಕುಮಾರನು ಋಷಿಗಳಿಗೆ ಭಗವಂತನ ಸ್ವರೂಪದ ಕುರಿತು ಉಪದೇಶ ನೀಡುವ 45 ಅಧಿಕ ಶ್ಲೋಕಗಳಿವೆ (ಗೀತಾ ಪ್ರೆಸ್). ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎

  2. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಭಕ್ತಂ ಭಗವತಂ ನಿತ್ಯಂ ನಾರಾಯಣಪರಾಯಣಮ್। ಧ್ಯಾಯಂತಂ ಪರಮಾತ್ಮಾನಂ ಹಿರಣ್ಯಕಶಿಪೋಃ ಸುತಮ್।। (ಗೀತಾ ಪ್ರೆಸ್). ↩︎

  3. ಹಸುವು ಗರ್ಭಧರಿಸಿ ಕರುವನ್ನು ಹೆರುವ ಮೊದಲೇ ಕೆಚ್ಚಲಿನಲ್ಲಿ ಹಾಲು ತುಂಬಿರುತ್ತದೆ. ಕರುವು ಇನ್ನೂ ಹುಟ್ಟಿಲ್ಲವಾದುದರಿಂದ ಹಾಗಾಗಲು ಕರುವಿನ ಮೇಲಿನ ವಾತ್ಸಲ್ಯವು ಕಾರಣವಾಗಿರುವುದಿಲ್ಲ. ಕರುವಿನ ಅಭಾವವಿದ್ದರೂ ಕೆಚ್ಚಲಿನಲ್ಲಿ ಹಾಲಿನ ಭಾವ – ಈ ಎರಡೂ ಸ್ವಾಭಾವಿಕವಾಗಿಯೇ ನಡೆಯುವಂಥವು. ಇಲ್ಲಿ ಪುರುಷಪ್ರಯತ್ನವೇನೂ ಇಲ್ಲ. (ಭಾರತ ದರ್ಶನ) ↩︎

  4. ನ (ಭಾರತ ದರ್ಶನ/ಗೀತಾ ಪ್ರೆಸ್). ↩︎

  5. ಅತತ್ವಜ್ಞೇತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎

  6. ಯಾವ ರೀತಿಯಲ್ಲಿ ಒಂದು ಕಾಗೆಯು ಎಲ್ಲಿಯೋ ಹಾಕಿದ ಅನ್ನವನ್ನು ತಿನ್ನುತ್ತಿರುವಾಗ ಇತರ ಕಾಗೆಗಳು ಕಾ ಕಾ ಎಂದು ಕೂಗಿಕೊಂಡು ಆ ಪಿಂಡದ ಬಳಿ ಹೋಗುವವೋ ಅದೇ ರೀತಿಯಲ್ಲಿ ಎಲ್ಲ ಕರ್ಮಗಳೂ ಸ್ವಭಾವಲಕ್ಷಣಗಳಿಂದಲೇ ಕೂಡಿವೆ (ಭಾರತ ದರ್ಶನ). ↩︎

  7. ನಿರಾಶೀ (ಭಾರತ ದರ್ಶನ/ಗೀತಾ ಪ್ರೆಸ್). ↩︎

  8. ಲೋಕಮವ್ಯಯಮ್ (ಭಾರತ ದರ್ಶನ/ಗೀತಾ ಪ್ರೆಸ್). ↩︎

  9. ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡಿದುದರಿಂದ ಯಾವ ಕಷ್ಟವೂ ಕಾಣುತ್ತಿಲ್ಲ (ಭಾರತ ದರ್ಶನ). ↩︎

  10. ನ ಹಿ ಜ್ಞೇಯೇ ನ ವಿಜ್ಞಾನೇ ನ ಜ್ಞಾನೇ ಕರ್ಮ ವಿದ್ಯತೇ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  11. ಬುದ್ಧಿಯ ನೈರ್ಮಲ್ಯ, ಚಿತ್ತದ ಸ್ಥಿರತೆ (ಭಾರತ ದರ್ಶನ). ↩︎