214: ಅಮೃತಪ್ರಾಶನಿಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 214

ಸಾರ

ವ್ರತ, ತಪಸ್ಸು, ಉಪವಾಸ, ಬ್ರಹ್ಮಚರ್ಯೆ ಮತ್ತು ಅತಿಥಿಸೇವೆ ಇವುಗಳ ವಿವೇಚನೆ ಮತ್ತು ಯಜ್ಞಶಿಷ್ಠ ಅನ್ನದ ಭೋಜನದಿಂದ ದೊರೆಯುವ ಪರಮ ಉತ್ತಮ ಗತಿಯ ಕಥನ (1-16).

12214001 ಯುಧಿಷ್ಠಿರ ಉವಾಚ।
12214001a ದ್ವಿಜಾತಯೋ ವ್ರತೋಪೇತಾ ಯದಿದಂ ಭುಂಜತೇ ಹವಿಃ।
12214001c ಅನ್ನಂ ಬ್ರಾಹ್ಮಣಕಾಮಾಯ ಕಥಮೇತತ್ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ವ್ರತವನ್ನು ಪಾಲಿಸುತ್ತಿರುವ ಬ್ರಾಹ್ಮಣರು ಇತರರ ಮನೆಗಳಲ್ಲಿ ಬ್ರಾಹ್ಮಣರಾಗಿ ಆಮಂತ್ರಿಸಲ್ಪಟ್ಟು ಹವಿಷ್ಯಾನ್ನದ ಭೋಜನಮಾಡುತ್ತಾರೆ. ವ್ರತದ ದೃಷ್ಟಿಯಿಂದ ಇದು ಸರಿಯೇ ಹೇಗೆ?1

12214002 ಭೀಷ್ಮ ಉವಾಚ।
12214002a ಅವೇದೋಕ್ತವ್ರತೋಪೇತಾ ಭುಂಜಾನಾಃ ಕಾರ್ಯಕಾರಿಣಃ।
12214002c ವೇದೋಕ್ತೇಷು ಚ ಭುಂಜಾನಾ ವ್ರತಲುಪ್ತಾ2 ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಅವೈದಿಕ ವ್ರತದಲ್ಲಿ ತೊಡಗಿ ಪರಾನ್ನಭೋಜನ ಮಾಡುವವರು ಸ್ವೇಚ್ಛಾಚಾರಿಗಳು. ವೇದೋಕ್ತ ವ್ರತಗಳನ್ನಾಚರಿಸುವವರೂ ಕೂಡ ಇತರರ ಮನೆಗಳಲ್ಲಿ ಹವಿಷ್ಯಾನ್ನವನ್ನು ಊಟಮಾಡಿದರೆ ಅವರು ವ್ರತಲುಪ್ತರಾಗುತ್ತಾರೆ.”

12214003 ಯುಧಿಷ್ಠಿರ ಉವಾಚ।
12214003a ಯದಿದಂ ತಪ ಇತ್ಯಾಹುರುಪವಾಸಂ ಪೃಥಗ್ಜನಾಃ।
12214003c ಏತತ್ತಪೋ ಮಹಾರಾಜ ಉತಾಹೋ ಕಿಂ ತಪೋ ಭವೇತ್।।

ಯುಧಿಷ್ಠಿರನು ಹೇಳಿದನು: “ಮಹಾರಾಜ! ಸಾಮಾನ್ಯವಾಗಿ ಜನರು ಉಪವಾಸವನ್ನೇ ತಪಸ್ಸೆಂದು ಹೇಳುತ್ತಾರೆ. ಇದು ತಪಸ್ಸೇ? ತಪಸ್ಸಿನ ಸ್ವರೂಪವೇನು?”

12214004 ಭೀಷ್ಮ ಉವಾಚ।
12214004a ಮಾಸಪಕ್ಷೋಪವಾಸೇನ ಮನ್ಯಂತೇ ಯತ್ತಪೋ ಜನಾಃ।
12214004c ಆತ್ಮತಂತ್ರೋಪಘಾತಃ ಸ ನ ತಪಸ್ತತ್ಸತಾಂ ಮತಮ್।।
12214004e ತ್ಯಾಗಶ್ಚ ಸನ್ನತಿಶ್ಚೈವ ಶಿಷ್ಯತೇ ತಪ ಉತ್ತಮಮ್।।

ಭೀಷ್ಮನು ಹೇಳಿದನು: “ಜನರು ತಪಸ್ಸೆಂದು ತಿಳಿಯುವ ಮಾಸ-ಪಕ್ಷಗಳ ಉಪವಾಸವು ಶರೀರ ಶೋಷಣೆಗೆ ಕಾರಣವಾಗುತ್ತದೆ ಮತ್ತು ಆತ್ಮಘಾತವಾಗುತ್ತದೆ. ಸತ್ಪುರುಷರು ಅದನ್ನು ತಪಸ್ಸೆಂದು ಮನ್ನಿಸುವುದಿಲ್ಲ. ಅವರ ಪ್ರಕಾರ ತ್ಯಾಗ ಮತ್ತು ವಿನಯವೇ ಉತ್ತಮ ತಪಸ್ಸು.

12214005a ಸದೋಪವಾಸೀ ಚ ಭವೇದ್ಬ್ರಹ್ಮಚಾರೀ ಸದೈವ ಚ।
12214005c ಮುನಿಶ್ಚ ಸ್ಯಾತ್ಸದಾ ವಿಪ್ರೋ ದೈವತಂ ಚ ಸದಾ ಭಜೇತ್।।

ಸದಾ ತ್ಯಾಗ-ವಿನಯಗಳನ್ನು ಪಾಲಿಸುವವನು ಸದೋಪವಾಸಿಯೂ ಬ್ರಹ್ಮಚಾರಿಯೂ ಆಗುತ್ತಾನೆ. ತ್ಯಾಗೀ ಮತ್ತು ವಿನಯೀ ಬ್ರಾಹ್ಮಣನು ಸದಾ ಮುನಿಯೂ ದೇವತೆಯೂ ಆಗಿರುತ್ತಾನೆ.

12214006a ಕುಟುಂಬಿಕೋ ಧರ್ಮಕಾಮಃ ಸದಾಸ್ವಪ್ನಶ್ಚ ಭಾರತ।
12214006c ಅಮಾಂಸಾಶೀ ಸದಾ ಚ ಸ್ಯಾತ್ಪವಿತ್ರಂ ಚ ಸದಾ ಜಪೇತ್3।।

ಭಾರತ! ಕುಟುಂಬಿಕನಾಗಿದ್ದರೂ ಅವನು ಧರ್ಮಕಾಮನಾಗಿರುತ್ತಾನೆ. ನಿದ್ರಾಲಸ್ಯಗಳು ಅವನಿಗಿರುವುದಿಲ್ಲ. ಅವನು ಎಂದೂ ಮಾಂಸವನ್ನು ತಿನ್ನುವುದಿಲ್ಲ. ಸದಾ ಪರಿಶುದ್ಧನಾಗಿ ಜಪಿಸುತ್ತಿರುತ್ತಾನೆ.

12214007a ಅಮೃತಾಶೀ ಸದಾ ಚ ಸ್ಯಾನ್ನ ಚ ಸ್ಯಾದ್ವಿಷಭೋಜನಃ।
12214007c ವಿಘಸಾಶೀ ಸದಾ ಚ ಸ್ಯಾತ್ಸದಾ ಚೈವಾತಿಥಿಪ್ರಿಯಃ4।।

ಸದಾ ದೇವತಾಥಿಗಳನ್ನು ಪೂಜಿಸಿ ವೈಶ್ವದೇವಾದಿಯಜ್ಞಗಳಲ್ಲಿ ಉಳಿಯುವ ಅಮೃತರೂಪದ ಅನ್ನವನ್ನು ಊಟಮಾಡುತ್ತಾನೆ. ಸದಾ ಯಜ್ಞಶಿಷ್ಠ ಅನ್ನವನ್ನು ಉಟಮಾಡುತ್ತಾನೆ. ಮತ್ತು ಸದಾ ಅತಿಥಿಪ್ರಿಯನಾಗಿರುತ್ತಾನೆ.”

12214008 ಯುಧಿಷ್ಠಿರ ಉವಾಚ।
12214008a ಕಥಂ ಸದೋಪವಾಸೀ ಸ್ಯಾದ್ ಬ್ರಹ್ಮಚಾರೀ ಕಥಂ ಭವೇತ್।
12214008c ವಿಘಸಾಶೀ ಕಥಂ ಚ ಸ್ಯಾತ್ಸದಾ ಚೈವಾತಿಥಿಪ್ರಿಯಃ।।

ಯುಧಿಷ್ಠಿರನು ಹೇಳಿದನು: “ಅವನು ಹೇಗೆ ಸದೋಪವಾಸಿಯಾಗಬಹುದು? ಅವನು ಹೇಗೆ ಬ್ರಹ್ಮಚಾರಿಯಾಗುತ್ತಾನೆ? ವಿಘಸಾಶಿಯೂ ಮತ್ತು ಸದಾ ಅತಿಥಿಪ್ರಿಯನು ಹೇಗಾಗಬಲ್ಲನು?”

12214009 ಭೀಷ್ಮ ಉವಾಚ।
12214009a ಅಂತರಾ ಪ್ರಾತರಾಶಂ ಚ ಸಾಯಮಾಶಂ ತಥೈವ ಚ।
12214009c ಸದೋಪವಾಸೀ ಚ ಭವೇದ್ಯೋ ನ ಭುಂಕ್ತೇ ಕಥಂ ಚನ।।

ಭೀಷ್ಮನು ಹೇಳಿದನು: “ಪ್ರತಿದಿನ ಪ್ರಾತಃಕಾಲದಲ್ಲಿ ಬಿಟ್ಟರೆ ಪುನಃ ಸಾಯಂಕಾಲದಲ್ಲಿಯೇ ಭೋಜನ ಮಾಡುವ ಮತ್ತು ಮಧ್ಯ ಏನನ್ನೂ ತಿನ್ನದಿರುವವನು ಸದೋಪವಾಸಿಯಾಗುತ್ತಾನೆ.

12214010a ಭಾರ್ಯಾಂ ಗಚ್ಚನ್ ಬ್ರಹ್ಮಚಾರೀ ಋತೌ ಭವತಿ ಬ್ರಾಹ್ಮಣಃ।
12214010c ಋತವಾದೀ ಸದಾ ಚ ಸ್ಯಾಜ್ಜ್ಞಾನನಿತ್ಯಶ್ಚ ಯೋ ನರಃ।।

ಋತುಕಾಲದಲ್ಲಿ ಮಾತ್ರ ಭಾರ್ಯೆಯನ್ನು ಕೂಡುವ, ಸದಾ ಸತ್ಯವನ್ನೇ ನುಡಿಯುವ ಮತ್ತು ಜ್ಞಾನದಲ್ಲಿ ಸ್ಥಿರನಾಗಿರುವ ಬ್ರಾಹ್ಮಣನು ಸದಾ ಬ್ರಹ್ಮಚಾರಿಯಾಗುತ್ತಾನೆ.

12214011a ಅಭಕ್ಷಯನ್ ವೃಥಾಮಾಂಸಮಮಾಂಸಾಶೀ ಭವತ್ಯುತ।
12214011c ದಾನನಿತ್ಯಃ ಪವಿತ್ರಶ್ಚ ಅಸ್ವಪ್ನಶ್ಚ ದಿವಾಸ್ವಪನ್।।

ವೃಥಾಮಾಂಸವನ್ನು ತಿನ್ನದವನು ಅಮಾಂಸಾಶಿಯಾಗುತ್ತಾನೆ. ನಿತ್ಯವೂ ದಾನಮಾಡುವವನು ಪವಿತ್ರನೂ, ಹಗಲಿನಲ್ಲಿ ನಿದ್ರಿಸದಿರುವವನು ಅಸ್ವಪ್ನನೂ ಆಗುತ್ತಾನೆ.

12214012a ಭೃತ್ಯಾತಿಥಿಷು ಯೋ ಭುಂಕ್ತೇ ಭುಕ್ತವತ್ಸು ಸದಾ ಸ ಹ।
12214012c ಅಮೃತಂ ಸಕಲಂ ಭುಂಕ್ತ ಇತಿ ವಿದ್ಧಿ ಯುಧಿಷ್ಠಿರ।।

ಯುಧಿಷ್ಠಿರ! ಸದಾ ಭೃತ್ಯರು ಮತ್ತು ಅತಿಥಿಗಳು ಊಟಮಾಡಿದ ನಂತರವೇ ಊಟಮಾಡುವವನು ಸದಾ ಅಮೃತವನ್ನೇ ಊಟಮಾಡುತ್ತಾನೆ ಎಂದು ತಿಳಿ.

512214013a ಅಭುಕ್ತವತ್ಸು ನಾಶ್ನಾನಃ ಸತತಂ ಯಸ್ತು ವೈ ದ್ವಿಜಃ। 12214013c ಅಭೋಜನೇನ ತೇನಾಸ್ಯ ಜಿತಃ ಸ್ವರ್ಗೋ ಭವತ್ಯುತ।।

ಭೃತ್ಯರು ಮತ್ತು ಅತಿಥಿಗಳ ಭೋಜನವಾಗದೇ ಸ್ವಯಂ ತಾನು ಅನ್ನಗ್ರಹಣಮಾಡದ ದ್ವಿಜನು ಭೋಜನ ಮಾಡದೇ ಇರುವುದರ ಆ ಪುಣ್ಯದಿಂದ ಸ್ವರ್ಗವನ್ನು ಜಯಿಸುತ್ತಾನೆ.

12214014a ದೇವತಾಭ್ಯಃ ಪಿತೃಭ್ಯಶ್ಚ ಭೃತ್ಯೇಭ್ಯೋಽತಿಥಿಭಿಃ ಸಹ।
12214014c ಅವಶಿಷ್ಟಂ ತು ಯೋಽಶ್ನಾತಿ ತಮಾಹುರ್ವಿಘಸಾಶಿನಮ್।।

ದೇವತೆಗಳು, ಪಿತೃಗಳು, ಅತಿಥಿಗಳೊಂದಿಗೆ ಭೃತ್ಯರು ಊಟಮಾಡಿದ ನಂತರ ಉಳಿದ ಅನ್ನವನ್ನು ತಿನ್ನುವವನನ್ನು ವಿಘಸಾಶಿ ಎಂದು ಹೇಳುತ್ತಾರೆ.

12214015a ತೇಷಾಂ ಲೋಕಾ ಹ್ಯಪರ್ಯಂತಾಃ ಸದನೇ ಬ್ರಹ್ಮಣಾ ಸಹ।
12214015c ಉಪಸ್ಥಿತಾಶ್ಚಾಪ್ಸರೋಭಿಃ ಪರಿಯಾಂತಿ ದಿವೌಕಸಃ।।

ಅಂಥವರಿಗೆ ಅನಂತ ಲೋಕಗಳು ಪ್ರಾಪ್ತವಾಗುತ್ತವೆ. ಬ್ರಹ್ಮನಿಂದಲೂ ಅಪ್ಸರೆಯರಿಂದಲೂ ಸಹಿತರಾದ ದೇವತೆಗಳು ಅವನ ಮನೆಯನ್ನು ಪರಿಕ್ರಮಿಸುತ್ತಿರುತ್ತಾರೆ.

12214016a ದೇವತಾಭಿಶ್ಚ ಯೇ ಸಾರ್ಧಂ ಪಿತೃಭಿಶ್ಚೋಪಭುಂಜತೇ।
12214016c ರಮಂತೇ ಪುತ್ರಪೌತ್ರೈಶ್ಚ ತೇಷಾಂ ಗತಿರನುತ್ತಮಾ।।

ದೇವತೆಗಳು ಮತ್ತು ಪಿತೃಗಳ ಜೊತೆಗೆ6 ಭೋಜನ ಮಾಡುವವರು ಈ ಲೋಕದಲ್ಲಿ ಪುತ್ರ-ಪೌತ್ರರೊಂದಿಗೆ ರಮಿಸುತ್ತಾರೆ ಮತ್ತು ಪರಲೋಕದಲ್ಲಿ ಉತ್ತಮ ಗತಿಯನ್ನು ಪಡೆಯುತ್ತಾರೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಮೃತಪ್ರಾಶನಿಕೋ ನಾಮ ಚತುರ್ದಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಮೃತಪ್ರಾಶನಿಕ ಎನ್ನುವ ಇನ್ನೂರಾಹದಿನಾಲ್ಕನೇ ಅಧ್ಯಾಯವು.

  1. ವ್ರತಯುಕ್ತ ದ್ವಿಜರು ವೇದೋಕ್ತ ಸಕಾಮಕಾಮದ ಫಲದ ಇಚ್ಛೆಯಿಂದ ಹವಿಷ್ಯಾನ್ನದ ಭೋಜನ ಮಾಡುತ್ತಾರೆ. ಅವರ ಈ ಕಾರ್ಯವು ಉಚಿತವಾಗಿದೆಯೋ ಅಥವಾ ಅಲ್ಲವೋ? (ಗೀತಾ ಪ್ರೆಸ್). ↩︎

  2. ವ್ರತಲುಬ್ಧಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  3. ಮಾಂಸಾದೀ ಸದಾ ಚ ಸ್ಯಾತ್ ಪ್ರವಿತ್ರಶ್ಚ ಸದಾ ಭವೇತ್। (ಗೀತಾ ಪ್ರೆಸ್). ↩︎

  4. ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿ: ಶ್ರದ್ಧದಾನಃ ಸದಾ ಚ ಸ್ಯಾದ್ದೇವತಾದ್ವಿಜಪೂಜಕಃ। (ಭಾರತ ದರ್ಶನ). ↩︎

  5. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅದತ್ತ್ವಾ ಯೋಽತಿಥಿಭ್ಯೋಽನ್ನಂ ನ ಭುಂಕ್ತೇ ಸೋಽತಿಥಿಪ್ರಿಯಃ। ಅದತ್ತ್ವಾನ್ನಂ ದೈವತೇಭ್ಯೋ ಯೋ ನ ಭುಂಕ್ತೇ ಸ ದೈವತಮ್।। (ಗೀತಾ ಪ್ರೆಸ್). ↩︎

  6. ಅವರಿಗೆ ಅವರ ಭಾಗಗಳನ್ನು ಸಮರ್ಪಿಸಿದ ನಂತರ (ಗೀತಾ ಪ್ರೆಸ್/ಭಾರತ ದರ್ಶನ). ↩︎