ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 212
ಸಾರ
ಪಂಚಶಿಖನು ಮಿಥಿಲನರೇಶನಿಗೆ ಮೋಕ್ಷತತ್ತ್ವವನ್ನು ಉಪದೇಶಿಸಿದುದು (1-52).
12212001 ಭೀಷ್ಮ ಉವಾಚ।
12212001a ಜನಕೋ ಜನದೇವಸ್ತು ಜ್ಞಾಪಿತಃ ಪರಮರ್ಷಿಣಾ।
12212001c ಪುನರೇವಾನುಪಪ್ರಚ್ಚ ಸಾಂಪರಾಯೇ ಭವಾಭವೌ।।
ಭೀಷ್ಮನು ಹೇಳಿದನು: “ಪರಮಋಷಿಯು ಹಾಗೆ ಉಪದೇಶಿಸಲು ಜನಕ ಜನದೇವನು ಮರಣಾನಂತರ ಇರುವಿಕೆ ಮತ್ತು ಇಲ್ಲದಿರುವಿಕೆಯ ಕುರಿತು ಪುನಃ ಪ್ರಶ್ನಿಸಿದನು:
12212002a ಭಗವನ್ಯದಿದಂ ಪ್ರೇತ್ಯ ಸಂಜ್ಞಾ ಭವತಿ ಕಸ್ಯ ಚಿತ್।
12212002c ಏವಂ ಸತಿ ಕಿಮಜ್ಞಾನಂ ಜ್ಞಾನಂ ವಾ ಕಿಂ ಕರಿಷ್ಯತಿ।।
“ಭಗವನ್! ಮರಣಾನಂತರ ಯಾರಿಗೂ ಯಾವುದೇ ರೀತಿಯ ಸಂಜ್ಞೆಗಳೇ ಇಲ್ಲದಿರುವಾಗ ಜ್ಞಾನ ಅಥವಾ ಅಜ್ಞಾನವಾದರೋ ಏನು ತಾನೇ ಮಾಡಬಲ್ಲವು?
12212003a ಸರ್ವಮುಚ್ಚೇದನಿಷ್ಠಂ ಸ್ಯಾತ್ಪಶ್ಯ ಚೈತದ್ದ್ವಿಜೋತ್ತಮ।
12212003c ಅಪ್ರಮತ್ತಃ ಪ್ರಮತ್ತೋ ವಾ ಕಿಂ ವಿಶೇಷಂ ಕರಿಷ್ಯತಿ।।
ದ್ವಿಜೋತ್ತಮ! ಸಾವಿನೊಂದಿಗೆ ಎಲ್ಲ ಸತ್ಕರ್ಮಗಳೂ ನಾಶವಾಗಿಹೋಗುತ್ತವೆ ಎಂದು ಗಮನಿಸಿದರೆ ಅಪ್ರಮತ್ತನಾಗಿಯೂ ಪ್ರಮತ್ತನಾಗಿಯೂ ಇರುವುದರಲ್ಲಿ ಯಾವ ವ್ಯತ್ಯಾಸವಿದೆಯೆಂದಾಯಿತು?
12212004a ಅಸಂಸರ್ಗೋ ಹಿ ಭೂತೇಷು ಸಂಸರ್ಗೋ ವಾ ವಿನಾಶಿಷು।
12212004c ಕಸ್ಮೈ ಕ್ರಿಯೇತ ಕಲ್ಪೇನ ನಿಶ್ಚಯಃ ಕೋಽತ್ರ ತತ್ತ್ವತಃ।।
ಜೀವಗಳಿಗೆ ಸಂಸರ್ಗವಿದ್ದಿರಲಿ ಅಥವಾ ಸಂಸರ್ಗವಿಲ್ಲದಿದ್ದಿರಲಿ, ಎಲ್ಲವೂ ನಾಶವಾಗುತ್ತವೆ. ಹಾಗಿರುವಾಗ ಯಾರು ಏಕೆ ಕರ್ಮಗಳನ್ನು ಮಾಡಬೇಕು? ಸಂಕಲ್ಪ-ನಿಶ್ಚಯಗಳನ್ನು ಏಕೆ ಮಾಡಬೇಕು? ಇದರ ಕುರಿತಾದ ಸತ್ಯವೇನು?”
12212005a ತಮಸಾ ಹಿ ಪ್ರತಿಚ್ಚನ್ನಂ ವಿಭ್ರಾಂತಮಿವ ಚಾತುರಮ್।
12212005c ಪುನಃ ಪ್ರಶಮಯನ್ವಾಕ್ಯೈಃ ಕವಿಃ ಪಂಚಶಿಖೋಽಬ್ರವೀತ್।।
ಅಜ್ಞಾನದ ಅಂಧಕಾರದಿಂದ ಆಚ್ಛಾದಿತನಾಗಿ ಭ್ರಾಂತನೂ ವ್ಯಾಕುಲನೂ ಆಗಿದ್ದ ಅವನಿಗೆ ಕವಿ ಪಂಚಶಿಖನು ಪುನಃ ಈ ಮಾತುಗಳಿಂದ ಸಮಾಧಾನಪಡಿಸಿದನು:
12212006a ಉಚ್ಚೇದನಿಷ್ಠಾ ನೇಹಾಸ್ತಿ ಭಾವನಿಷ್ಠಾ ನ ವಿದ್ಯತೇ।
12212006c ಅಯಂ ಹ್ಯಪಿ ಸಮಾಹಾರಃ ಶರೀರೇಂದ್ರಿಯಚೇತಸಾಮ್।
12212006e ವರ್ತತೇ ಪೃಥಗನ್ಯೋನ್ಯಮಪ್ಯಪಾಶ್ರಿತ್ಯ ಕರ್ಮಸು।।
“ಮರಣದೊಂದಿಗೆ ಸಾಧನೆಗಳು ನಷ್ಟವಾಗುವುದಿಲ್ಲ. ಅವುಗಳಲ್ಲಿನ ಭಾವನಿಷ್ಠೆಯೂ ಇರುವುದಿಲ್ಲ. ಇದು ಶರೀರ, ಇಂದ್ರಿಯ ಮತ್ತು ಚೇತನಗಳ ಒಕ್ಕೂಟವು. ಇವುಗಳು ಪ್ರತ್ಯೇಕವಾಗಿರುವಂತೆ ಕಂಡುಬಂದರೂ ಅನ್ಯೋನ್ಯಾಶ್ರಯದಿಂದ ಕರ್ಮಗಳಲ್ಲಿ ಪ್ರವೃತ್ತವಾಗಿರುತ್ತವೆ.
12212007a ಧಾತವಃ ಪಂಚಶಾಖೋಽಯಂ ಖಂ ವಾಯುರ್ಜ್ಯೋತಿರಂಬು ಭೂಃ।
12212007c ತೇ ಸ್ವಭಾವೇನ ತಿಷ್ಠಂತಿ ವಿಯುಜ್ಯಂತೇ ಸ್ವಭಾವತಃ।।
ಆಕಾಶ, ವಾಯು, ತೇಜಸ್ಸು, ಜಲ ಮತ್ತು ಪೃಥ್ವಿಗಳೆಂಬ ಧಾತುಗಳು ಪಂಚಶಾಖೆಗಳು. ಅವು ತಮ್ಮದೇ ಸ್ವಭಾವದಿಂದ ಸೇರುತ್ತವೆ ಮತ್ತು ತಮ್ಮದೇ ಸ್ವಭಾವದಿಂದ ಬೇರೆಯಾಗುತ್ತವೆ.
12212008a ಆಕಾಶಂ ವಾಯುರೂಷ್ಮಾ ಚ ಸ್ನೇಹೋ ಯಚ್ಚಾಪಿ ಪಾರ್ಥಿವಮ್।
12212008c ಏಷ ಪಂಚಸಮಾಹಾರಃ ಶರೀರಮಿತಿ ನೈಕಧಾ।
12212008e ಜ್ಞಾನಮೂಷ್ಮಾ ಚ ವಾಯುಶ್ಚ ತ್ರಿವಿಧಃ ಕರ್ಮಸಂಗ್ರಹಃ।।
ಆಕಾಶ, ವಾಯು, ಉಷ್ಣತೆ, ತೇವ ಮತ್ತು ಭೂಮಿ – ಈ ಐದು ಸೇರಿ ಒಂದಾದಾಗ ಶರೀರವೆಂದಾಗುತ್ತವೆ. ಜ್ಞಾನ (ಬುದ್ಧಿ), ಉಷ್ಣತೆ (ಜಠರಾಗ್ನಿ) ಮತ್ತು ವಾಯು (ಪ್ರಾಣವಾಯು) – ಈ ಮೂರು ಸೇರಿ ಎಲ್ಲ ಕರ್ಮಗಳಿಗೆ ಕಾರಣಗಳಾಗುತ್ತವೆ.
12212009a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಸ್ವಭಾವಶ್ಚೇತನಾ ಮನಃ।
12212009c ಪ್ರಾಣಾಪಾನೌ ವಿಕಾರಶ್ಚ ಧಾತವಶ್ಚಾತ್ರ ನಿಃಸೃತಾಃ।।
ಇವುಗಳಿಂದಲೇ ಇಂದ್ರಿಯಗಳು, ಇಂದ್ರಿಯವಿಷಯಗಳು, ಸ್ವಭಾವ, ಚೈತನ್ಯ, ಮನಸ್ಸು, ಪ್ರಾಣ, ಅಪಾನ, ವಿಕಾರಗಳು ಮತ್ತು ಧಾತುಗಳು ಪ್ರಕಟವಾಗಿವೆ.
12212010a ಶ್ರವಣಂ ಸ್ಪರ್ಶನಂ ಜಿಹ್ವಾ ದೃಷ್ಟಿರ್ನಾಸಾ ತಥೈವ ಚ।
12212010c ಇಂದ್ರಿಯಾಣೀತಿ ಪಂಚೈತೇ ಚಿತ್ತಪೂರ್ವಂಗಮಾ ಗುಣಾಃ।।
ಕಿವಿಗಳು, ಚರ್ಮ, ನಾಲಿಗೆ, ಕಣ್ಣು, ಮತ್ತು ಮೂಗು – ಈ ಐದು ಜ್ಞಾನೇಂದ್ರಿಯಗಳು. ಶಬ್ದಾದಿ ಗುಣಗಳು ಮನಸ್ಸಿನೊಡನೆ ಬೆರೆತು1 ಇಂದ್ರಿಯಗಳಿಗೆ ವಿಷಯಗಳಾಗುತ್ತವೆ.
12212011a ತತ್ರ ವಿಜ್ಞಾನಸಂಯುಕ್ತಾ ತ್ರಿವಿಧಾ ವೇದನಾ ಧ್ರುವಾ।
12212011c ಸುಖದುಃಖೇತಿ ಯಾಮಾಹುರದುಃಖೇತ್ಯಸುಖೇತಿ ಚ।।
ಅದು ಬುದ್ಧಿಯೊಡನೆ ಸೇರಿದಾಗ ಮೂರು ರೀತಿಯ ವೇದನೆಗಳುಂಟಾಗುವುದು ನಿಶ್ಚಿತ ಎಂದು ಹೇಳುತ್ತಾರೆ: ಸುಖ, ದುಃಖ ಮತ್ತು ಸುಖ-ದುಃಖಗಳೆರಡೂ ಆಗದೇ ಇರುವುದು2.
12212012a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಮೂರ್ತ್ಯಥ।
12212012c ಏತೇ ಹ್ಯಾಮರಣಾತ್ಪಂಚ ಷಡ್ಗುಣಾ ಜ್ಞಾನಸಿದ್ಧಯೇ।।
ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧ – ಈ ಐದು ಮರಣದವರೆಗೂ ಇರುತ್ತವೆ. ಆರನೆಯ ಬುದ್ಧಿಯೊಂದಿಗೆ ಸೇರಿ ಇವು ಎಲ್ಲ ಅನುಭವಗಳನ್ನೂ ಉಂಟುಮಾಡುತ್ತವೆ3.
12212013a ತೇಷು ಕರ್ಮನಿಸರ್ಗಶ್ಚ ಸರ್ವತತ್ತ್ವಾರ್ಥನಿಶ್ಚಯಃ।
12212013c ತಮಾಹುಃ ಪರಮಂ ಶುಕ್ರಂ ಬುದ್ಧಿರಿತ್ಯವ್ಯಯಂ ಮಹತ್।।
ಕರ್ಮಸಂನ್ಯಾಸವೂ ಸರ್ವತತ್ತ್ವಾರ್ಥನಿಶ್ಚಯವೂ ಇವುಗಳ ಮೇಲೆಯೇ ಅವಲಂಬಿಸಿವೆ. ಆದುದರಿಂದ ಬುದ್ಧಿಯನ್ನು ಪರಮ ಬೀಜವೆಂದೂ, ಅವ್ಯಯವೆಂದೂ, ಮಹತ್ತೆಂದೂ ಕರೆಯುತ್ತಾರೆ4.
12212014a ಇಮಂ ಗುಣಸಮಾಹಾರಮಾತ್ಮಭಾವೇನ ಪಶ್ಯತಃ।
12212014c ಅಸಮ್ಯಗ್ದರ್ಶನೈರ್ದುಃಖಮನಂತಂ ನೋಪಶಾಮ್ಯತಿ।।
ಈ ಗುಣಗಳ ಸಮೂಹವಾದ ಶರೀರವನ್ನೇ ಆತ್ಮನೆಂದು ತಿಳಿದರೆ ಅದು ಸರಿಯಾದ ಜ್ಞಾನವಲ್ಲ ಮತ್ತು ಅಂಥವನ ಅನಂತ ದುಃಖವು ನಾಶವಾಗುವುದಿಲ್ಲ.
12212015a ಅನಾತ್ಮೇತಿ ಚ ಯದ್ದೃಷ್ಟಂ ತೇನಾಹಂ ನ ಮಮೇತ್ಯಪಿ।
12212015c ವರ್ತತೇ ಕಿಮಧಿಷ್ಠಾನಾ ಪ್ರಸಕ್ತಾ ದುಃಖಸಂತತಿಃ।।
ಇವುಗಳು ಆತ್ಮವೆಲ್ಲವೆಂದು ನೋಡುವವನಿಗೆ ಮಮತ್ವವು ಇರುವುದಿಲ್ಲ. ಹೀಗೆ ಇರುವವನನ್ನು ದುಃಖಸಂತತಿಗಳು ಹೇಗೆ ತಾನೆ ಅಂಟಿಕೊಳ್ಳುತ್ತವೆ? ಎಲ್ಲಿ ನೆಲೆಗೊಳ್ಳುತ್ತವೆ?
12212016a ತತ್ರ ಸಮ್ಯಙ್ಮನೋ5 ನಾಮ ತ್ಯಾಗಶಾಸ್ತ್ರಮನುತ್ತಮಮ್।
12212016c ಶೃಣು ಯತ್ತವ ಮೋಕ್ಷಾಯ ಭಾಷ್ಯಮಾಣಂ ಭವಿಷ್ಯತಿ।।
ಈ ವಿಷಯದಲ್ಲಿ ಸಮ್ಯಙ್ಮನ ಎಂಬ ಹೆಸರಿನ ಅನುತ್ತಮ ತ್ಯಾಗಶಾಸ್ತ್ರವಿದೆ. ನಾನು ಹೇಳುವ ಅದನ್ನು ಕೇಳು. ಅದು ನಿನ್ನ ಮೋಕ್ಷಕ್ಕೆ ಕಾರಣವಾಗುತ್ತದೆ.
12212017a ತ್ಯಾಗ ಏವ ಹಿ ಸರ್ವೇಷಾಮುಕ್ತಾನಾಮಪಿ6 ಕರ್ಮಣಾಮ್।
12212017c ನಿತ್ಯಂ ಮಿಥ್ಯಾವಿನೀತಾನಾಂ ಕ್ಲೇಶೋ ದುಃಖಾವಹೋ ಮತಃ।।
ಕರ್ಮಗಳಿಂದ ಮುಕ್ತರಾಗಲು ಬಯಸುವ ಇಲ್ಲರಿಗೂ ತ್ಯಾಗವನ್ನೇ ಹೇಳುತ್ತಾರೆ. ಅದರೆ ಮಿಥ್ಯಾಮತಗಳನ್ನು ಅನುಸರಿಸುವವರು ನಿತ್ಯವೂ ಕ್ಲೇಶ-ದುಃಖಗಳನ್ನು ಅನುಭವಿಸಬೇಕಾಗುತ್ತದೆ.
12212018a ದ್ರವ್ಯತ್ಯಾಗೇ ತು ಕರ್ಮಾಣಿ ಭೋಗತ್ಯಾಗೇ ವ್ರತಾನ್ಯಪಿ।
12212018c ಸುಖತ್ಯಾಗೇ ತಪೋಯೋಗಃ ಸರ್ವತ್ಯಾಗೇ ಸಮಾಪನಾ।।
ದ್ರವ್ಯತ್ಯಾಗಕ್ಕೆ ಕರ್ಮಗಳಿವೆ. ಭೋಗತ್ಯಾಗಕ್ಕೆ ವ್ರತಗಳಿವೆ. ಸುಖತ್ಯಾಗಕ್ಕೆ ತಪೋಯೋಗವಿದೆ. ಇದರಲ್ಲಿ ಎಲ್ಲ ತ್ಯಾಗಗಳೂ ಸಮಾಪ್ತವಾಗುತ್ತವೆ7.
12212019a ತಸ್ಯ ಮಾರ್ಗೋಽಯಮದ್ವೈಧಃ ಸರ್ವತ್ಯಾಗಸ್ಯ ದರ್ಶಿತಃ।
12212019c ವಿಪ್ರಹಾಣಾಯ ದುಃಖಸ್ಯ ದುರ್ಗತಿರ್ಹ್ಯನ್ಯಥಾ ಭವೇತ್।।
ವಿದ್ವಾಂಸರು ತೋರಿಸಿಕೊಟ್ಟ ಸರ್ವತ್ಯಾಗದ ಮಾರ್ಗವನ್ನು ವರ್ಣಿಸುತ್ತೇನೆ. ಇದರಿಂದ ದುಃಖವು ನಾಶವಾಗುತ್ತದೆ. ಅನ್ಯಥಾ ದುರ್ಗತಿಯುಂಟಾಗುತ್ತದೆ.
12212020a ಪಂಚ ಜ್ಞಾನೇಂದ್ರಿಯಾಣ್ಯುಕ್ತ್ವಾ ಮನಃಷಷ್ಠಾನಿ ಚೇತಸಿ।
12212020c ಮನಃಷಷ್ಠಾನಿ8 ವಕ್ಷ್ಯಾಮಿ ಪಂಚ ಕರ್ಮೇಂದ್ರಿಯಾಣಿ ತು।।
ಚೇತನದಲ್ಲಿರುವ ಪಂಚಜ್ಞಾನೇಂದ್ರಿಯಗಳು ಮತ್ತು ಆರನೆಯ ಮನಸ್ಸಿನ ಕುರಿತು ಇದಾಗಲೇ ಹೇಳಿದ್ದೇನೆ. ಈಗ ಆರನೆಯ ಮನಸ್ಸು ಮತ್ತು ಐದು ಕರ್ಮೇಂದ್ರಿಯಗಳ ಕುರಿತು ಹೇಳುತ್ತೇನೆ9.
12212021a ಹಸ್ತೌ ಕರ್ಮೇಂದ್ರಿಯಂ ಜ್ಞೇಯಮಥ ಪಾದೌ ಗತೀಂದ್ರಿಯಮ್।
12212021c ಪ್ರಜನಾನಂದಯೋಃ ಶೇಫೋ ವಿಸರ್ಗೇ ಪಾಯುರಿಂದ್ರಿಯಮ್।।
ಎರಡು ಕೈಗಳು ಕಾರ್ಯಮಾಡುವ ಕರ್ಮೇಂದ್ರಿಯಗಳು. ಎರಡು ಪಾದಗಳು ಚಲಿಸಲಿರುವ ಕರ್ಮೇಂದ್ರಿಯಗಳು. ಲಿಂಗವು ಸಂತಾನೋತ್ಪತ್ತಿಗೆ ಮತ್ತು ಆನಂದವನ್ನುಂಟುಮಾಡಲಿರುವ ಕರ್ಮೇಂದ್ರಿಯಗಳು. ಗುದವು ಮಲವನ್ನು ಹೊರಹಾಕುವ ಕರ್ಮೇಂದ್ರಿಯ ಎಂದು ತಿಳಿದುಕೋ.
12212022a ವಾಕ್ತು ಶಬ್ದವಿಶೇಷಾರ್ಥಂ ಗತಿಂ10 ಪಂಚಾನ್ವಿತಾಂ ವಿದುಃ।
12212022c ಏವಮೇಕಾದಶೈತಾನಿ ಬುದ್ಧ್ಯಾ ತ್ವವಸೃಜೇನ್ಮನಃ11।।
ಮಾತು ವಿಶೇಷವಾಗಿ ಶಬ್ದಗಳ ಉಚ್ಚಾರಗಳಿಗಿದೆ. ಈ ಐದರಲ್ಲಿಯೂ ಗತಿಯಿದೆ ಎನ್ನುವುದನ್ನು ತಿಳಿದುಕೋ. ಮನಸ್ಸನ್ನೂ ಸೇರಿದ ಈ ಹನ್ನೊಂದನ್ನು ಬುದ್ಧಿಯ ಮೂಲಕ ತ್ಯಜಿಸಬೇಕು.
12212023a ಕರ್ಣೌ ಶಬ್ದಶ್ಚ ಚಿತ್ತಂ ಚ ತ್ರಯಃ ಶ್ರವಣಸಂಗ್ರಹೇ।
12212023c ತಥಾ ಸ್ಪರ್ಶೇ ತಥಾ ರೂಪೇ ತಥೈವ ರಸಗಂಧಯೋಃ।।
ಕಿವಿಗಳು, ಶಬ್ದ ಮತ್ತು ಚಿತ್ತ ಈ ಮೂರು ಕೇಳುವ ಕ್ರಿಯೆಗೆ ಬೇಕಾದವುಗಳು. ಹಾಗೆಯೇ ಸ್ಪರ್ಶ, ರೂಪ, ರಸ, ಮತ್ತು ಗಂಧಗಳ ಕ್ರಿಯೆಗೂ ಮೂರರ– ಜ್ಞಾನೇಂದ್ರಿಯ, ಇಂದ್ರಿಯವಿಷಯ ಮತ್ತು ಚಿತ್ತ –ಅವಶ್ಯಕತೆಯಿದೆ.
12212024a ಏವಂ ಪಂಚತ್ರಿಕಾ ಹ್ಯೇತೇ ಗುಣಾಸ್ತದುಪಲಬ್ಧಯೇ।
12212024c ಯೇನ ಯಸ್ತ್ರಿವಿಧೋ ಭಾವಃ ಪರ್ಯಾಯಾತ್ಸಮುಪಸ್ಥಿತಃ।।
ಹೀಗೆ ಮೂರರ ಐದು ಸಮುದಾಯಗಳಿಂದ ಶಬ್ದಾದಿ ವಿಷಯಗಳ ಗ್ರಹಣವಾಗುತ್ತದೆ. ಈ ಕ್ರಿಯೆಯಲ್ಲಿ ಪರ್ಯಾಯವಾಗಿ ಮೂರು ವಿಧದ ಭಾವಗಳು ಉಪಸ್ಥಿತವಾಗುತ್ತವೆ12.
12212025a ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚೈವ ತೇ ತ್ರಯಃ।
12212025c ತ್ರಿವಿಧಾ ವೇದನಾ ಯೇಷು ಪ್ರಸೂತಾ ಸರ್ವಸಾಧನಾ।।
ಈ ಮೂರು ಸಾತ್ತ್ವಿಕ, ರಾಜಸ ಮತ್ತು ತಾಮಸಗಳು. ಸರ್ವಸಾಧನಗಳಲ್ಲಿಯೂ ಇವು ಮೂರು ವಿಧದ ವೇದನೆಗಳನ್ನು ಹುಟ್ಟಿಸುತ್ತವೆ.
12212026a ಪ್ರಹರ್ಷಃ ಪ್ರೀತಿರಾನಂದಃ ಸುಖಂ ಸಂಶಾಂತಚಿತ್ತತಾ।
12212026c ಅಕುತಶ್ಚಿತ್ಕುತಶ್ಚಿದ್ವಾ ಚಿತ್ತತಃ ಸಾತ್ತ್ವಿಕೋ ಗುಣಃ।।
ಹರ್ಷ, ಪ್ರೀತಿ, ಆನಂದ, ಸುಖ ಮತ್ತು ಶಾಂತಚಿತ್ತ ಇವು ಎಲ್ಲಿಂದಲೇ ಬಂದಿರಲಿ ಅಥವಾ ಯಾವುದರಿಂದಲೇ ಉಂಟಾಗಿರಲಿ ಇವುಗಳು ಸಾತ್ತ್ವಿಕ ಗುಣಗಳು.
12212027a ಅತುಷ್ಟಿಃ ಪರಿತಾಪಶ್ಚ ಶೋಕೋ ಲೋಭಸ್ತಥಾಕ್ಷಮಾ।
12212027c ಲಿಂಗಾನಿ ರಜಸಸ್ತಾನಿ ದೃಶ್ಯಂತೇ ಹೇತ್ವಹೇತುತಃ।।
ಕಾರಣವಿದ್ದು ಅಥವಾ ಕಾರಣವಿಲ್ಲದೇ ಕಂಡುಬಂದ ಅಸಂತೋಷ, ಪರಿತಾಪ, ಶೋಕ, ಲೋಭ, ಅಕ್ಷಮೆ ಇವುಗಳು ರಜಸ್ಸಿನ ಗುಣಗಳು.
12212028a ಅವಿವೇಕಸ್ತಥಾ ಮೋಹಃ ಪ್ರಮಾದಃ ಸ್ವಪ್ನತಂದ್ರಿತಾ।
12212028c ಕಥಂ ಚಿದಪಿ ವರ್ತಂತೇ ವಿವಿಧಾಸ್ತಾಮಸಾ ಗುಣಾಃ।।
ಅವಿವೇಕ, ಮೋಹ, ಪ್ರಮಾದ, ಸ್ವಪ್ನ ಮತ್ತು ಆಲಸ್ಯ ಇವುಗಳು ಹೇಗೇ ಉಂಟಾಗಲಿ ಅವು ತಾಮಸದ ಗುಣಗಳು.
12212029a ತತ್ರ ಯತ್ ಪ್ರೀತಿಸಂಯುಕ್ತಂ ಕಾಯೇ ಮನಸಿ ವಾ ಭವೇತ್।
12212029c ವರ್ತತೇ ಸಾತ್ತ್ವಿಕೋ ಭಾವ ಇತ್ಯಪೇಕ್ಷೇತ ತತ್ತಥಾ।।
ಶರೀರ ಅಥವಾ ಮನಸ್ಸಿನಲ್ಲಿ ಪ್ರೀತಿಸಂಯುಕ್ತ ಭಾವವುಂಟಾದರೆ ಅದು ಸಾತ್ತ್ವಿಕಭಾವ ಎಂದು ತಿಳಿಯಬೇಕು.
12212030a ಯತ್ತು ಸಂತಾಪಸಂಯುಕ್ತಮಪ್ರೀತಿಕರಮಾತ್ಮನಃ।
12212030c ಪ್ರವೃತ್ತಂ ರಜ ಇತ್ಯೇವ ತತಸ್ತದಭಿಚಿಂತಯೇತ್।।
ಸಂತಾಪಯುಕ್ತವಾದ ಮತ್ತು ಮನಸ್ಸಿಗೆ ಅಪ್ರೀತಿಕರವಾದ ಭಾವವುಂಟಾದರೆ ಅದು ರಜಸ್ಸಿನ ಭಾವ ಎಂದು ತಿಳಿಯಬೇಕು.
12212031a ಅಥ ಯನ್ಮೋಹಸಂಯುಕ್ತಂ ಕಾಯೇ ಮನಸಿ ವಾ ಭವೇತ್।
12212031c ಅಪ್ರತರ್ಕ್ಯಮವಿಜ್ಞೇಯಂ ತಮಸ್ತದುಪಧಾರಯೇತ್।।
ಶರೀರದಲ್ಲಿ ಅಥವಾ ಮನಸ್ಸಿನಲ್ಲಿ ಮೋಹಸಂಯುಕ್ತವಾದ ಭಾವವು – ಅದು ತಿಳಿದಿದ್ದರೂ ಅಥವಾ ತಿಳಿಯದಿದ್ದರೂ – ಉಂಟಾದರೆ ಅದು ತಮಸ್ಸಿನಿಂದ ಉಂಟಾಗಿದೆ ಎಂದು ತಿಳಿಯಬೇಕು.
12212032a ತದ್ಧಿ ಶ್ರೋತ್ರಾಶ್ರಯಂ ಭೂತಂ13 ಶಬ್ದಃ ಶ್ರೋತ್ರಂ ಸಮಾಶ್ರಿತಃ।
12212032c ನೋಭಯಂ ಶಬ್ದವಿಜ್ಞಾನೇ ವಿಜ್ಞಾನಸ್ಯೇತರಸ್ಯ ವಾ।।
ಶಬ್ದದಿಂದ ಕೇಳುವುದುಂಟಾಗುತ್ತದೆ. ಕಿವಿಗಳು ಶಬ್ದವನ್ನು ಕೇಳುವುದರಿಂದ ಶಬ್ದದ ಗ್ರಹಿಕೆಯುಂಟಾಗುತ್ತದೆ. ಆದರೆ ಇವೆರಡೂ ಪರಸ್ಪರರನ್ನು ಅರಿತುಕೊಂಡಿರುವುದಿಲ್ಲ. ಇವೆರಡನ್ನೂ ತಿಳಿದುಕೊಳ್ಳುವುದು ಬೇರೆಯದೇ ಇದೆ.
12212033a ಏವಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ।
12212033c ಸ್ಪರ್ಶೇ ರೂಪೇ ರಸೇ ಗಂಧೇ ತಾನಿ ಚೇತೋ ಮನಶ್ಚ ತತ್।।
ಹೀಗೆ ಇಂದ್ರಿಯ ವಿಷಯಗಳಾದ ಸ್ಪರ್ಶ, ರೂಪ, ರಸ, ಗಂಧಗಳನ್ನು ಇಂದ್ರಿಯಗಳಾದ ಚರ್ಮ, ಕಣ್ಣುಗಳು, ನಾಲಿಗೆ, ಮತ್ತು ಮೂಗು ಇವು ಪರಸ್ಪರರನ್ನು ಅರಿತಿರುವುದಿಲ್ಲ. ಮನಸ್ಸು ಅವೆಲ್ಲವನ್ನೂ ಅರಿತುಕೊಳ್ಳುತ್ತದೆ.
12212034a ಸ್ವಕರ್ಮಯುಗಪದ್ಭಾವೋ ದಶಸ್ವೇತೇಷು ತಿಷ್ಠತಿ।
12212034c ಚಿತ್ತಮೇಕಾದಶಂ ವಿದ್ಧಿ ಬುದ್ಧಿರ್ದ್ವಾದಶಮೀ ಭವೇತ್।।
ಹತ್ತು ಇಂದ್ರಿಯಗಳು ತಮ್ಮ ತಮ್ಮ ಕೆಲಸಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಮಾಡುತ್ತಿರುತ್ತವೆ. ಮನಸ್ಸು ಹನ್ನೊಂದನೆಯದು ಎಂದು ತಿಳಿ. ಬುದ್ಧಿಯು ಹನ್ನೆರಡನೆಯದಾಗುತ್ತದೆ.
12212035a ತೇಷಾಮಯುಗಪದ್ಭಾವೇ ಉಚ್ಚೇದೋ ನಾಸ್ತಿ ತಾಮಸಃ।
12212035c ಆಸ್ಥಿತೋ ಯುಗಪದ್ಭಾವೇ ವ್ಯವಹಾರಃ ಸ ಲೌಕಿಕಃ।।
ಇವು ಒಟ್ಟಾಗಿ ಕೆಲಸಮಾಡುತ್ತಿರುವ ವರೆಗೆ ತಾಮಸವನ್ನು ನಾಶಗೊಳಿಸಲಾಗುವುದಿಲ್ಲ. ಅವರು ಒಟ್ಟಾಗಿ ಕೆಲಸಮಾಡುವುದನ್ನೇ ಲೌಕಿಕ ವ್ಯವಹಾರವೆಂದು ತಿಳಿಯುತ್ತೇವೆ14.
12212036a ಇಂದ್ರಿಯಾಣ್ಯವಸೃಜ್ಯಾಪಿ15 ದೃಷ್ಟ್ವಾ ಪೂರ್ವಂ ಶ್ರುತಾಗಮಮ್।
12212036c ಚಿಂತಯನ್ನಾನುಪರ್ಯೇತಿ ತ್ರಿಭಿರೇವಾನ್ವಿತೋ ಗುಣೈಃ।।
ಶ್ರುತಿ-ಆಗಮಗಳು ಹಿಂದೆಯೇ ಇಂದ್ರಿಯಗಳ ಕಾರ್ಯಗಳ ಕುರಿತು ಮತ್ತು ತ್ರಿಗುಣಗಳ ಕುರಿತು ಆಲೋಚಿಸಿ ನಿರ್ಧರಿಸಿವೆ16.
12212037a ಯತ್ತಮೋಪಹತಂ ಚಿತ್ತಮಾಶು ಸಂಚಾರಮಧ್ರುವಮ್।
12212037c ಕರೋತ್ಯುಪರಮಂ ಕಾಲೇ ತದಾಹುಸ್ತಾಮಸಂ ಸುಖಮ್।।
ಮೋಹಪರವಶವಾದ ಚಿತ್ತವು ಚಂಚಲವಾಗಿರುವುದರ ಸುತ್ತ ಮುತ್ತ ತಿರುಗುತ್ತಿರುತ್ತದೆ. ಹಾಗೆ ಮಾಡುವುದರಿಂದ ಸ್ವಲ್ಪ ಕಾಲ ಪರಮ ಸುಖವನ್ನು ಕಂಡರೂ ಅದನ್ನು ತಾಮಸ ಸುಖವೆಂದು ಹೇಳುತ್ತಾರೆ17.
12212038a ಯದ್ಯದಾಗಮಸಂಯುಕ್ತಂ ನ ಕೃತ್ಸ್ನಮುಪಶಾಮ್ಯತಿ18।
12212038c ಅಥ ತತ್ರಾಪ್ಯುಪಾದತ್ತೇ ತಮೋ ವ್ಯಕ್ತಮಿವಾನೃತಮ್।।
ಶಾಸ್ತ್ರ-ಆಗಮಗಳಲ್ಲಿ ಹೇಳಿರುವಂತೆ ಎಲ್ಲವನ್ನೂ ಮಾಡದೇ ಇದ್ದರೆ ಅವನು ತಮಸ್ಸಿನಿಂದ ಮುಸುಕಲ್ಪಡುತ್ತಾನೆ ಮತ್ತು ವ್ಯಕ್ತವೂ ಅನೃತವೂ ಆದುದನ್ನು ಸೇವಿಸುತ್ತಿರುತ್ತಾನೆ19.
12212039a ಏವಮೇಷ ಪ್ರಸಂಖ್ಯಾತಃ ಸ್ವಕರ್ಮಪ್ರತ್ಯಯೀ ಗುಣಃ।
12212039c ಕಥಂ ಚಿದ್ವರ್ತತೇ ಸಮ್ಯಕ್ಕೇಷಾಂ ಚಿದ್ವಾ ನ ವರ್ತತೇ।।
ಗುಣಗಳನ್ನು ಅವಲಂಬಿಸಿ ಸ್ವಕರ್ಮಗಳು ಹೇಗೆ ಉಂಟಾಗುತ್ತವೆ ಎನ್ನುವುದರ ಕುರಿತಾದ ಆಲೋಚನೆಗಳು. ಕೆಲವರು ಇದನ್ನು ಸಂಪೂರ್ಣವಾಗಿ ಅನುಸರಿಸುತ್ತಾರೆ. ಇನ್ನು ಕೆಲವರು ಇದನ್ನು ಅನುಸರಿಸುವುದೇ ಇಲ್ಲ20.
12212040a ಏವಮಾಹುಃ ಸಮಾಹಾರಂ ಕ್ಷೇತ್ರಮಧ್ಯಾತ್ಮಚಿಂತಕಾಃ।
12212040c ಸ್ಥಿತೋ ಮನಸಿ ಯೋ ಭಾವಃ ಸ ವೈ ಕ್ಷೇತ್ರಜ್ಞ ಉಚ್ಯತೇ।।
ಶರೀರ ಮತ್ತು ಇಂದ್ರಿಯಗಳ ಒಕ್ಕೂಟವನ್ನೇ ಕ್ಷೇತ್ರ ಎಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ. ಮನಸ್ಸಿನಲ್ಲಿ ಸ್ಥಿತವಾಗಿರುವ ಚಿದ್ಭಾವವನ್ನು ಕ್ಷೇತ್ರಜ್ಞ ಎಂದು ಕರೆಯುತ್ತಾರೆ.21
12212041a ಏವಂ ಸತಿ ಕ ಉಚ್ಚೇದಃ ಶಾಶ್ವತೋ ವಾ ಕಥಂ ಭವೇತ್।
12212041c ಸ್ವಭಾವಾದ್ವರ್ತಮಾನೇಷು ಸರ್ವಭೂತೇಷು ಹೇತುತಃ।।
ಹೀಗಿರುವಾಗ ಯಾವುದು ನಾಶವಾಗುತ್ತದೆ? ಅಥವಾ ಯಾವುದು ಶಾಶ್ವತವಾಗಿರುತ್ತದೆ? ಸರ್ವಭೂತಗಳೂ ಈ ಕಾರಣಗಳಿಂದ ಮತ್ತು ಸ್ವಭಾವಗಳಿಂದ ನಡೆದುಕೊಳ್ಳುತ್ತವೆ22.
12212042a ಯಥಾರ್ಣವಗತಾ ನದ್ಯೋ ವ್ಯಕ್ತೀರ್ಜಹತಿ ನಾಮ ಚ।
12212042c ನ ಚ ಸ್ವತಾಂ ನಿಯಚ್ಚಂತಿ23 ತಾದೃಶಃ ಸತ್ತ್ವಸಂಕ್ಷಯಃ।।
ಸಮುದ್ರವನ್ನು ಸೇರಿದ ನದಿಗಳು ಹೇಗೆ ತಮ್ಮ ವ್ಯಕ್ತಿತ್ವ ಮತ್ತು ಹೆಸರುಗಳನ್ನು ಕಳೆದುಕೊಳ್ಳುತ್ತವೆಯೋ ಹಾಗೆ ಜೀವವು ಹೋಗಲು ಅದು ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತದೆ24.
12212043a ಏವಂ ಸತಿ ಕುತಃ ಸಂಜ್ಞಾ ಪ್ರೇತ್ಯಭಾವೇ ಪುನರ್ಭವೇತ್।
12212043c ಪ್ರತಿಸಂಮಿಶ್ರಿತೇ ಜೀವೇ ಗೃಹ್ಯಮಾಣೇ ಚ ಮಧ್ಯತಃ।।
ಹೀಗಿರುವಾಗ ಮರಣಾನಂತರ ಜೀವವು ಸಮ್ಮಿಶ್ರವಾಗಿ ಮಧ್ಯದಲ್ಲಿ ಏನಾಗುತ್ತದೆಯೆಂದು ತಿಳಿಯದಿರುವಾಗ ಪುನಃ ಸಂಜ್ಞೆಯು ಎಲ್ಲಿಂದ ಬರುತ್ತದೆ?25
12212044a ಇಮಾಂ ತು ಯೋ ವೇದ ವಿಮೋಕ್ಷಬುದ್ಧಿಮ್ ಆತ್ಮಾನಮನ್ವಿಚ್ಚತಿ ಚಾಪ್ರಮತ್ತಃ।
12212044c ನ ಲಿಪ್ಯತೇ ಕರ್ಮಫಲೈರನಿಷ್ಟೈಃ ಪತ್ರಂ ಬಿಸಸ್ಯೇವ ಜಲೇನ ಸಿಕ್ತಮ್।।
ಮೋಕ್ಷಬುದ್ಧಿಯಿರುವ ಮತ್ತು ಮೋಕ್ಷವನ್ನು ತಿಳಿದಿರುವವನು ಅಪ್ರಮತ್ತನಾಗಿ ಆತ್ಮತತ್ತ್ವವನ್ನು ಅನುಸಂಧಾನ ಮಾಡುತ್ತಾನೆ. ಅಂಥವನು ತಾವರೆಯ ಎಲೆಯು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಅನಿಷ್ಟ ಕರ್ಮಫಲಗಳಿಂದ ಲಿಪ್ತನಾಗುವುದಿಲ್ಲ.
12212045a ದೃಢೈಶ್ಚ ಪಾಶೈರ್ಬಹುಭಿರ್ವಿಮುಕ್ತಃ ಪ್ರಜಾನಿಮಿತ್ತೈರಪಿ ದೈವತೈಶ್ಚ।
12212045c ಯದಾ ಹ್ಯಸೌ ಸುಖದುಃಖೇ ಜಹಾತಿ ಮುಕ್ತಸ್ತದಾಗ್ರ್ಯಾಂ ಗತಿಮೇತ್ಯಲಿಂಗಃ।
12212045e ಶ್ರುತಿಪ್ರಮಾಣಾಗಮಮಂಗಲೈಶ್ಚ ಶೇತೇ ಜರಾಮೃತ್ಯುಭಯಾದತೀತಃ।।
ಅವನು ಸಂತಾನ ಅಥವಾ ದೈವನಿಮಿತ್ತ ದೃಢ ಬಂಧನಗಳಿಂದ ವಿಮುಕ್ತನಾಗುತ್ತಾನೆ. ಯಾವಾಗ ಅವನು ಸುಖದುಃಖಗಳನ್ನು ತ್ಯಜಿಸುತ್ತಾನೋ ಆಗ ಅವನು ಅಲಿಂಗನಾಗಿ ಸರ್ವಶ್ರೇಷ್ಠ ಮುಕ್ತಿಯನ್ನು ಪಡೆಯುತ್ತಾನೆ. ಶ್ರುತಿ-ಆಗಮಗಳ ಪ್ರಮಾಣದಲ್ಲಿರುವ ಮಂಗಲ ಕರ್ಮಗಳಿಂದ ಅವನು ಮುಪ್ಪು-ಮೃತ್ಯು-ಭಯಗಳಿಂದ ದೂರನಾಗಿ ಸುಖವಾಗಿ ನಿದ್ರಿಸುತ್ತಾನೆ.
12212046a ಕ್ಷೀಣೇ ಚ ಪುಣ್ಯೇ ವಿಗತೇ ಚ ಪಾಪೇ ತತೋನಿಮಿತ್ತೇ ಚ ಫಲೇ ವಿನಷ್ಟೇ।
12212046c ಅಲೇಪಮಾಕಾಶಮಲಿಂಗಮೇವಮ್ ಆಸ್ಥಾಯ ಪಶ್ಯಂತಿ ಮಹದ್ಧ್ಯಸಕ್ತಾಃ।।
ಪುಣ್ಯವು ಕ್ಷೀಣಿಸಲು ಮತ್ತು ಪಾಪವು ಹೊರಟು ಹೋಗಲು ಅವುಗಳಿಂದ ಉಂಟಾಗುವ ಫಲಗಳೂ ನಾಶವಾಗಲು ನಿರ್ಲಿಪ್ತನೂ, ಪ್ರಕಾಶಸ್ವರೂಪನೂ, ಲಿಂಗರಹಿತನೂ ಆದ ಪರಮಾತ್ಮನಲ್ಲಿಯೇ ಮನಸ್ಸನ್ನು ಸ್ಥಾಪಿಸಿ ಅವನ ಸಾಕ್ಷಾತ್ಕಾರವನ್ನು ಪಡೆದುಕೊಳುತ್ತಾನೆ.
12212047a ಯಥೋರ್ಣನಾಭಿಃ ಪರಿವರ್ತಮಾನಸ್ ತಂತುಕ್ಷಯೇ ತಿಷ್ಠತಿ ಪಾತ್ಯಮಾನಃ।
12212047c ತಥಾ ವಿಮುಕ್ತಃ ಪ್ರಜಹಾತಿ ದುಃಖಂ ವಿಧ್ವಂಸತೇ ಲೋಷ್ಟ ಇವಾದ್ರಿಮರ್ಚ್ಚನ್।।
ಜೇಡರ ಹುಳವು ಹೇಗೆ ಸುತ್ತಲೂ ತಿರುಗುತ್ತಾ ಬಲೆಯನ್ನು ನೇಯ್ದುಕೊಂಡು ಆ ತಂತುಮಯ ಮನೆಯ ಮಧ್ಯದಲ್ಲಿ ಕುಳಿತುಕೊಳ್ಳುತ್ತದೆಯೋ ಹಾಗೆ ಅವಿದ್ಯಾವಶ ಜೀವನು ಕರ್ಮತಂತುಮಯ ಮನೆಯಲ್ಲಿ ಕುಳಿತಿರುತ್ತಾನೆ. ಕಲ್ಲಿನ ಮೇಲೆ ಅಪ್ಪಳಿಸಿದ ಮಣ್ಣುಹೆಂಟೆಯು ಹೇಗೆ ಪುಡಿಪುಡಿಯಾಗುವುದೋ ಹಾಗೆ ಕರ್ಮತಂತುಮಯವಾದ ಆ ಮನೆಯು ನಾಶವಾದೊಡನೆಯೇ ಅವನ ಎಲ್ಲ ದುಃಖಗಳೂ ನಾಶವಾಗುತ್ತವೆ.26
12212048a ಯಥಾ ರುರುಃ ಶೃಂಗಮಥೋ ಪುರಾಣಂ ಹಿತ್ವಾ ತ್ವಚಂ ವಾಪ್ಯುರಗೋ ಯಥಾವತ್।
12212048c ವಿಹಾಯ ಗಚ್ಚತ್ಯನವೇಕ್ಷಮಾಣಸ್ ತಥಾ ವಿಮುಕ್ತೋ ವಿಜಹಾತಿ ದುಃಖಮ್।।
ರುರು ಮೃಗವು ಹೇಗೆ ತನ್ನ ಹಳತಾದ ಕೋಡುಗಳನ್ನು ಕಳೆದುಕೊಳ್ಳುತ್ತದೆಯೋ ಮತ್ತು ಸರ್ಪವು ಹೇಗೆ ತನ್ನ ಪೊರೆಯನ್ನು ಕಳಚಿಕೊಳ್ಳುತ್ತದೆಯೋ ಹಾಗೆ ಮಮತೆ-ಅಭಿಮಾನಗಳನ್ನು ತೊರೆದವನು ಮುಕ್ತನಾಗಿ ದುಃಖವನ್ನು ಕಳೆದುಕೊಳ್ಳುತ್ತಾನೆ.
12212049a ದ್ರುಮಂ ಯಥಾ ವಾಪ್ಯುದಕೇ ಪತಂತಮ್ ಉತ್ಸೃಜ್ಯ ಪಕ್ಷೀ ಪ್ರಪತತ್ಯಸಕ್ತಃ।
12212049c ತಥಾ ಹ್ಯಸೌ ಸುಖದುಃಖೇ ವಿಹಾಯ ಮುಕ್ತಃ ಪರಾರ್ಧ್ಯಾಂ ಗತಿಮೇತ್ಯಲಿಂಗಃ।।
ಮರವು ನೀರಿನಲ್ಲಿ ಬೀಳುತ್ತಿರುವಾಗ ಅದರಲ್ಲಿ ವಾಸಿಸುತ್ತಿದ್ದ ಪಕ್ಷಿಯು ಹೇಗೆ ಅದನ್ನು ತೊರೆದು ಹಾರಿಹೋಗುವುದೋ ಹಾಗೆ ಮುಕ್ತ ಪುರುಷನು ಸುಖ-ದುಃಖಗಳನ್ನು ತ್ಯಜಿಸಿ ಶರೀರವನ್ನು ಬಿಟ್ಟು ಶ್ರೇಷ್ಠತಮ ಗತಿಯನ್ನು ಹೊಂದುತ್ತಾನೆ.”
2712212050a ಅಪಿ ಚ ಭವತಿ ಮೈಥಿಲೇನ ಗೀತಂ ನಗರಮುಪಾಹಿತಮಗ್ನಿನಾಭಿವೀಕ್ಷ್ಯ।
12212050c ನ ಖಲು ಮಮ ತುಷೋಽಪಿ ದಹ್ಯತೇಽತ್ರ ಸ್ವಯಮಿದಮಾಹ ಕಿಲ ಸ್ಮ ಭೂಮಿಪಾಲಃ।।
ಮಿಥಿಲ ರಾಜನ ಕುರಿತಾಗಿ ಒಂದು ಗೀತೆಯೇ ಇದೆ: ನಗರವು ಸುಟ್ಟುಹೋಗುತ್ತಿರುವಾಗ ಮಿಥಿಲೆಯ ಭೂಮಿಪಾಲನು ನಗುತ್ತಾ “ನನ್ನದು ಯಾವುದೂ ಸುಟ್ಟು ಹೋಗಲಿಲ್ಲ!” ಎನ್ನಲಿಲ್ಲವೇ?
12212051a ಇದಮಮೃತಪದಂ ವಿದೇಹರಾಜಃ ಸ್ವಯಮಿಹ ಪಂಚಶಿಖೇನ ಭಾಷ್ಯಮಾಣಃ।
12212051c ನಿಖಿಲಮಭಿಸಮೀಕ್ಷ್ಯ ನಿಶ್ಚಿತಾರ್ಥಂ ಪರಮಸುಖೀ ವಿಜಹಾರ ವೀತಶೋಕಃ।।
ಸ್ವಯಂ ಪಂಚಶಿಖನು ಹೇಳಿದ ಈ ಅಮೃತಪದ ಮಾತುಗಳನ್ನು ಕೇಳಿ ವಿದೇಹರಾಜನು ಎಲ್ಲವನ್ನೂ ಚೆನ್ನಾಗಿ ಸಮೀಕ್ಷಿಸಿ ಅರ್ಥವನ್ನು ನಿಶ್ಚಯಿಸಿ ಶೋಕವನ್ನು ಕಳೆದುಕೊಂಡು ಪರಮಸುಖಿಯಾಗಿ ವಿಹರಿಸಿದನು.
12212052a ಇಮಂ ಹಿ ಯಃ ಪಠತಿ ವಿಮೋಕ್ಷನಿಶ್ಚಯಂ ನ ಹೀಯತೇ ಸತತಮವೇಕ್ಷತೇ ತಥಾ।
12212052c ಉಪದ್ರವಾನ್ನಾನುಭವತ್ಯದುಃಖಿತಃ ಪ್ರಮುಚ್ಯತೇ ಕಪಿಲಮಿವೈತ್ಯ ಮೈಥಿಲಃ।। 28
ಈ ಮೋಕ್ಷನಿಶ್ಚಯವನ್ನು ಯಾರು ಓದುತ್ತಾರೋ ಮತ್ತು ಇದರ ಕುರಿತು ಸತತವೂ ಚಿಂತನೆಮಾಡುತ್ತಾರೋ ಅವರು ಉಪದ್ರವಗಳನ್ನು ಅನುಭವಿಸಿ ದುಃಖಿತರಾಗುವುದಿಲ್ಲ. ಮತ್ತು ಕಾಪಿಲನನ್ನು ಭೇಟಿಮಾಡಿದ ಮಿಥಿಲಾಧಿಪನು ಹೇಗೋ ಹಾಗೆ ಮುಕ್ತರಾಗುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪಂಚಶಿಖವಾಕ್ಯಂ ನಾಮ ದ್ವಾದಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪಂಚಶಿಖವಾಕ್ಯ ಎನ್ನುವ ಇನ್ನೂರಾಹನ್ನೆರಡನೇ ಅಧ್ಯಾಯವು.
-
ಚಿತ್ತದೊಡನೆ ಕಲೆತು (ಭಾರತ ದರ್ಶನ). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ವಿಜ್ಞಾನಯುಕ್ತವಾದ ಶಾಶ್ವತವಾದ ಚೇತನವು ಅದುಃಖ, ಅಸುಖ ಮತ್ತು ಸುಖ-ದುಃಖ ಎಂದು ಮುರು ಪ್ರಕಾರವಾಗಿರುವುದೆಂದು ಹೇಳುತ್ತಾರೆ. (ಭಾರತ ದರ್ಶನ) ↩︎
-
ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಮತ್ತು ರೂಪಾಶ್ರಯದ್ರವ್ಯಗಳೆಂಬ ಆರು ಗುಣಗಳು ಆಮರಣಾಂತವಾಗಿ ಜೀವನಿಗೆ ಇಂದ್ರಿಯಜನ್ಯ ಜ್ಞಾನಕ್ಕೆ ಸಾಧಕಗಳಾಗಿರುತ್ತವೆ. (ಭಾರತ ದರ್ಶನ) ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಶ್ರೋತ್ರಾದಿ ಇಂದ್ರಿಯಗಳಲ್ಲಿ ಅವುಗಳ ವಿಷಯಗಳನ್ನು ವಿಸರ್ಜನ ಅಥವಾ ತ್ಯಾಗ ಮಾಡುವುದರಿಂದ ಸಂಪೂರ್ಣ ತತ್ತ್ವಗಳ ಯಥಾರ್ಥ ನಿಶ್ಚಯರೂಪ ಮೋಕ್ಷದ ಪ್ರಾಪ್ತಿಯಾಗುತ್ತದೆ. ಆ ತತ್ತ್ವನಿಶ್ಚಯವನ್ನು ಅತ್ಯಂತ ನಿರ್ಮಲ, ಉತ್ತಮ ಜ್ಞಾನ ಮತ್ತು ಅವಿನಾಶೀ ಮಹಾನ್ ಬ್ರಹ್ಮಪದವೆಂದು ಕರೆಯುತ್ತಾರೆ. (ಗೀತಾ ಪ್ರೆಸ್/ಭಾರತ ದರ್ಶನ) ↩︎
-
ಸಮ್ಯಗ್ವಧೋ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಸರ್ವೇಷಾಂ ಯುಕ್ತಾನಾಮಪಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಶಾಸ್ತ್ರದಲ್ಲಿ ದ್ರವ್ಯತ್ಯಾಗಕ್ಕಾಗಿ ಯಜ್ಞಾದಿಕರ್ಮಗಳನ್ನೂ, ಭೋಗತ್ಯಾಗಕ್ಕಾಗಿ ಕೃಚ್ಛ್ರ-ಚಾಂದ್ರಾಯಣಾದಿ ವ್ರತಗಳನೂ, ದೈಹಿಕಸುಖತ್ಯಾಗಕ್ಕಾಗಿ ತಪಸ್ಸನ್ನೂ, ಸರ್ವತ್ಯಾಗಕ್ಕಾಗಿ ಯೋಗಾನುಷ್ಠಾನವನ್ನೂ ಹೇಳಿದ್ದಾರೆ. ಹಾಗೆ ಸರ್ವವನ್ನೂ ತ್ಯಾಗಮಾಡಿದರೆ ಮುಕ್ತಿಯು ದೊರೆಯುತ್ತದೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಬಲಷಷ್ಠಾನಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಬುದ್ಧಿಯಲ್ಲಿರುವ ಮನಸ್ಸಿನಿಂದ ಯುಕ್ತವಾದ ಐದು ಜ್ಞಾನೇಂದ್ರಿಯಗಳ ವಿಷಯವನ್ನು ಹೇಳಿದ ನಂತರ ಐದು ಕರ್ಮೇಂದ್ರಿಯಗಳ ವಿಷಯವನ್ನೂ ಹೇಳುತ್ತೇನೆ. ಅದರೊಡನೆ ಆರನೆಯ ಪ್ರಾಣಶಕ್ತಿಯ ವಿಷಯವನ್ನೂ ಹೇಳುತ್ತೇನೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ವಾಕ್ಚ ಶಬ್ದವಿಶೇಷಾರ್ಥಮಿತಿ ಪಂಚಾನ್ವಿತಂ ವಿದುಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಬುಧ್ಯಾಽಽಶು ವಿಸೃಜೇನ್ಮನಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಮೂರು-ಮೂರರಂತೆ ಐದು ಸಮುದಾಯಗಳಿವೆ. ಇದಕ್ಕೆ ಗುಣಗಳೆನ್ನುತ್ತಾರೆ. ಈ ಗುಣಗಳಿಂದ ಶಬ್ದಾದಿ ವಿಷಯಗಳ ಗ್ರಹಣವಾಗುತ್ತದೆ. ಅನುಭವವನ್ನು ತಿಳಿಯಪಡಿಸುವ ಕಾರಣದಿಂದ ಇದು ಕರ್ತಾ, ಕರ್ಮ ಮತ್ತು ಕರಣಗಳೆಂಬ ಮೂರು ವಿಧವಾದ ಭಾವವನ್ನು ಹೊಂದಿದೆ. ಅವು ಪರ್ಯಾಯವಾಗಿ ಉಪಸ್ಥಿತವಾಗುತ್ತವೆ. (ಭಾರತ ದರ್ಶನ/ ಗೀತಾ ಪ್ರೆಸ್) ↩︎
-
ಶ್ರೋತ್ರಂ ವ್ಯೋಮಾಶ್ರಿತಂ ಭೂತಂ (ಭಾರತ ದರ್ಶನ/ ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ತಮೋಗುಣ ಜನಿತವಾದ ಸುಷುಪ್ತಿಕಾಲದಲ್ಲಿ ಇಂದ್ರಿಯಗಳೆಲ್ಲವೂ ಮನಸ್ಸಿನಲ್ಲಿ ಲೀನವಾಗಿರುವುದರಿಂದ ವಿಷಯಗಳನ್ನು ಗ್ರಹಿಸುವುದಿಲ್ಲ. ಆದರೆ ಆ ಸಮದಲ್ಲಿ ಅವುಗಳ ನಾಶವಾಗುವುದಿಲ್ಲ. ಇಂದ್ರಿಯಗಳು ವಿಷಯಗಳನ್ನು ಏಕಕಾಲದಲ್ಲಿ ಗ್ರಹಣಮಾಡುತ್ತವೆಯೆಂಬುದು ಲೌಕಿಕ ವ್ಯವಹಾರದಲ್ಲಿಯೇ ಕಂಡುಬರುತ್ತದೆ. ಸುಷುಪ್ತಿ ಕಾಲದಲ್ಲಿ ಮಾತ್ರ ಅವು ಹಾಗೆ ಮಾಡಲಾರವು. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಇಂದ್ರಿಯಾಣ್ಯಪಿ ಸೂಕ್ಷ್ಮಾಣಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಜಾಗ್ರದವಸ್ಥೆಯಲ್ಲಿ ಶ್ರವಣ-ದರ್ಶನಾದಿಗಳ ಮೂಲಕ ಶಬ್ದಾದಿ ವಿಷಯಗಳ ಪ್ರಾಪ್ತಿಯುಂಟಾಗುವುದರಿಂದ ಸ್ವಪ್ನಾವಸ್ಥೆಯಲ್ಲಿಯೂ ಪುರುಷನು ಸೂಕ್ಷ್ಮವಾದ ಇಂದ್ರಿಯಗಳನ್ನು ನೋಡಿ ವಿಷಯಸಂಗದಲ್ಲಿ ಆಸಕ್ತಿಯನ್ನು ಹೊಂದಿ ಸತ್ತ್ವಾದಿ ಮೂರು ಗುಣಗಳಿಂದ ಯುಕ್ತನಾಗಿ ಶರೀರದಲ್ಲಿ ತಿರುಗುತ್ತಿರುತ್ತಾನೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸುಷುಪ್ತಿ ಕಾಲದಲ್ಲಿ ಮನಸ್ಸು ತಮೋಗುಣದಿಂದ ಕೂಡಿ ತನ್ನ ಪ್ರಕೃತಿ-ಪ್ರಕಾಶ-ಸ್ವಭಾವಗಳನ್ನು ಶೀಘ್ರವಾಗಿ ಉಪಸಂಹರಿಸಿ ಸ್ವಲ್ಪ ಹೊತ್ತು ಇಂದ್ರಿಯವ್ಯಾಪಾರಗಳನ್ನೂ ನಿಲ್ಲಿಸಿರುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಉಂಟಾಗುವ ಸುಖವನ್ನು ವಿದ್ವಾಂಸರು ತಾಮಸಸುಖವೆನ್ನುತ್ತಾರೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ನ ಕೃಚ್ಛ್ರಮನುಪಶ್ಯತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸ್ವಪ್ನವನ್ನು ಕಾಣುವ ಮನುಷ್ಯನು ಕನಸಿನಲ್ಲಿ ಕಷ್ಟಗಳನ್ನು ಕಾಣುವಂತೆ ಸುಷುಪ್ತಾವಸ್ಥೆಯಲ್ಲಿರುವವನು ಕಷ್ಟಗಳನ್ನು ಕಾಣುವುದಿಲ್ಲ. ಆದುದರಿಂದ ಸುಷುಪ್ತಿಯಲ್ಲಿಯೂ ತಮೋಗುಣಯುಕ್ತವಾದ ಮಿಥ್ಯಾಸುಖವನ್ನು ಜೀವನು ಅನುಭವಿಸುತ್ತಾನೆ. (ಭಾರತ ದರ್ಶನ/ಗೀತಾ ಪ್ರೆಸ್) ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಕರ್ಮಾನುಸಾರವಾಗಿ ಗುಣವು ಪ್ರಾಪ್ತವಾಗುವುದೆಂಬ ವಿಷಯವನ್ನು ಹೇಳಿಯಾಯಿತು. ಕೆಲವರಲ್ಲಿ (ಅಜ್ಞಾನಿಗಳಲ್ಲಿ) ಈ ತಮೋ ಗುಣವು ಬೃಹದ್ರೂಪದಲ್ಲಿರುತ್ತದೆ. ಕೆಲವರಿಂದ (ಜ್ಞಾನಿಗಳಿಂದ) ಇದು ದೂರವಾಗಿರುತ್ತದೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
There are those who have thought about adhyatma. They speak of this accumulation as kshetra and what exists in the mind as kshetrajna. (Bibek Debroy) ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗಿರುವಾಗ ಆತ್ಮನ ವಿನಾಶವು ಹೇಗಾಗುತ್ತದೆ? ಅಥವಾ ಹೇತುಪೂರ್ವಕವಾದ ಪ್ರಕೃತಿಗೆ ಅನುಸಾರವಾಗಿ ಪ್ರವೃತ್ತವಾಗುವ ಪಂಚಮಹಾಭೂತಗಳೊಡನೆ ಆತ್ಮದ ಸಂಸರ್ಗವು ಹೇಗೆ ತಾನೇ ಶಾಶ್ವತವಾಗಿರುತ್ತದೆ? (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ನದಾಶ್ಚ ತಾ ನಿಯಚ್ಛಂತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸತ್ತ್ವಗಳು ತಮ್ಮ ಮೂಲಕಾರಣದಲ್ಲಿ ಸೇರಿ ತಮ್ಮ ವ್ಯಕ್ತಿತ್ವಗಳನ್ನೂ, ಹೆಸರುಗಳನ್ನೂ ಕಳೆದುಕೊಳ್ಳುತ್ತವೆ ಮತ್ತು ಮೂಲಕಾರಣವು ಅವುಗಳನ್ನು ತನ್ನಲ್ಲಿ ಸಂಗ್ರಹಿಸಿಕೊಳ್ಳುತ್ತದೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಮರಣಾನಂತರ ಆ ಜೀವದ ನಾಮರೂಪಗಳನ್ನು ಪುನಃ ಯಾವುದೇ ಕಾರಣದಿಂದಲೂ ಗುರುತಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಮರಣಾನಂತರ ಜೀವಕ್ಕೆ ಸಂಜ್ಞೆಯು ಹೇಗೆ ತಾನೆ ಇರುತ್ತದೆ? (ಭಾರತ ದರ್ಶನ/ಗೀತಾ ಪ್ರೆಸ್). ↩︎
-
When the strands are severed, a spider that has been stationed there, falls down. Like that, he is freed from his miseries, which are crushed like rocks on a mountain. (Bibek Debroy) ↩︎
-
ಇಲ್ಲಿ ಭೀಷ್ಮ ಉವಾಚ। ಎಂದಿದೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ದಕ್ಷಿಣಾತ್ಯ ಪಾಠದಲ್ಲಿ ಇದರ ನಂತರ, ಮಿಥಿಲಾನಗರಿಯು ಏಕೆ ಸುಟ್ಟುಹೋಯಿತು ಎನ್ನುವುದರ ಕುರಿತಾದ ಈ 10 ಅಧಿಕ ಶ್ಲೋಕಗಳಿವೆ: ಶ್ರೂಯತಾಂ ನೃಪಶಾರ್ದೂಲ ಯದರ್ಥಂ ದೀಪಿತಾ ಪುರಾ। ವಹ್ನಿನಾ ದೀಪಿತಾ ಸಾ ತು ತನ್ಮೇ ಶೃಣು ಮಹಾಮತೇ।। ಜನಕೋ ಜನದೇವಸ್ತು ಕರ್ಮಾಣ್ಯಾಧಾಯ ಚಾತ್ಮನಿ। ಸರ್ವಭಾವಮನುಪ್ರಾಪ್ಯ ಭಾವೇನ ವಿಚಚಾರ ಸಃ।। ಯಜನ್ ದದಂಸ್ತಥಾ ಜುಹ್ವನ್ ಪಾಲಯನ್ ಪೃಥಿವೀಮಿಮಾಮ್। ಅಧ್ಯಾತ್ಮವಿನ್ಮಹಾಪ್ರಾಜ್ಞಸ್ತನ್ಮಯತ್ವೇನ ನಿಷ್ಠಿತಃ।। ಸ ತಸ್ಯ ಹೃದಿ ಸಂಕಲ್ಪ್ಯಂ ಜ್ಞಾತುಮೈಚ್ಛತ್ಸ್ವಯಂ ಪ್ರಭುಃ। ಸರ್ವಲೋಕಾಧಿಪಸ್ತತ್ರ ದ್ವಿಜರೂಪೇಣ ಸಂಯುತಃ।। ಮಿಥಿಲಾಯಾಂ ಮಹಾಬುದ್ಧಿರ್ವಲೀಕಂ ಕಿಂಚಿದಾಚರನ್। ಸ ಗೃಹೀತ್ವಾ ದ್ವಿಜಶ್ರೇಷ್ಠೈರ್ನೃಪಾಯ ಪ್ರತಿವೇದಿತಃ।। ಅಪರಾಧಂ ಸಮುದ್ಧಿಶ್ಯ ತಂ ರಾಜಾ ಪ್ರತ್ಯಭಾಷತ। ಜನಕ ಉವಾಚ। ನ ತ್ವಾಂ ಬ್ರಾಹ್ಮಣ ದಂಡೇನ ನಿಯೋಕ್ಷ್ಯಾಮಿ ಕಥಂಚನ। ಮಮ ರಾಜಾದ್ವಿನಿರ್ಗಚ್ಛ ಯಾವತ್ ಸೀಮಾ ಭುವೋ ಮಮ।। ಇತ್ಯುಕ್ತಃ ಸ ತಥಾ ತೇನ ಮೈಥಿಲೇನ ದ್ವಿಜೋತ್ತಮಃ। ಅಬ್ರವೀತ್ತಂ ಮಹಾತ್ಮಾನಂ ರಾಜಾನಂ ಮಂತ್ರಿಭಿರ್ವೃತಮ್।। ತ್ವಮೇವಂ ಪದ್ಮನಾಭಸ್ಯ ನಿತ್ಯಂ ಪಕ್ಷಪದಾಹಿತಃ। ಅಹೋ ಸಿದ್ಧಾರ್ಥರೂಪೋಽಸಿ ಸ್ವಸ್ತಿ ತೇಽಸ್ತು ವೈ।। ಇತ್ಯುಕ್ತ್ವಾ ಪ್ರಯಯೌ ವಿಪ್ರಸ್ತಂಜಿಜ್ಞಾಸುರ್ದ್ವಿಜೋತ್ತಮಃ। ಅದಹಚ್ಚಾಗ್ನಿನಾ ತಸ್ಯ ಮಿಥಿಲಾಂ ಭಗವಾನ್ ಸ್ವಯಮ್।। ಪ್ರದೀಪ್ಯಮಾನಾಂ ಮಿಥಿಲಾಂ ದೃಷ್ಟ್ವಾ ರಾಜ ನ ಕಂಪಿತಃ। ಜನೈಃ ಸ ಪರಿಪೃಷ್ಠಸ್ತು ವಾಕ್ಯಮೇತದುವಾಚ ಹ।। ಅನಂತಂ ಬತ ಮೇ ವಿತ್ತಂ ಭಾವ್ಯಂ ಮೇ ನಾಸ್ತಿ ಕಿಂಚನ। ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ಕಿಂಚನ ದಹ್ಯತೇ।। ತದಸ್ಯ ಭಾಷಮಾಣಸ್ಯ ಶೃತ್ವಾ ಶೃತ್ವಾ ಹೃದಿ ಸ್ಥಿತಮ್। ಪುನಃ ಸಂಜೀವಯಾಮಾಸ ಮಿಥಿಲಾಂ ತಾಂ ದ್ವಿಜೋತ್ತಮಃ।। ಆತ್ಮಾನಂ ದರ್ಶಯಾಮಾಸ ವರಂ ಚಾಸ್ಮೈ ದದೌ ಪುನಃ। ಧರ್ಮೇ ತಿಷ್ಠತು ಸದ್ಭಾವೋ ಬುದ್ಧಿಸ್ತೇಽರ್ಥೇ ನರಾಧಿಪ।। ಸತ್ಯೇ ತಿಷ್ಠಸ್ವ ನಿರ್ವಿಣ್ಣಃ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್। ಇತ್ಯುಕ್ತ್ವಾ ಭಗವಾಂಶ್ಚೈನಂ ತತ್ರೈವಾಂತರಧೀಯತ। ಏತತ್ತೇ ಕಥಿತಂ ರಾಜನ್ ಕಿಂ ಭೂಯಃ ಶ್ರೋತುಮಿಚ್ಛಸಿ।। (ಗೀತಾ ಪ್ರೆಸ್). ↩︎