ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 209
ಸಾರ
ಸ್ವಪ್ನ-ಸುಷುಪ್ತಿಗಳಲ್ಲಿ ಮನಸ್ಸಿನ ಸ್ಥಿತಿ; ಗುಣಾತೀತ ಬ್ರಹ್ಮಪ್ರಾಪ್ತಿಗೆ ಉಪಾಯ (1-20).
12209001 ಗುರುರುವಾಚ1।
12209001a ನಿಷ್ಕಲ್ಮಷಂ ಬ್ರಹ್ಮಚರ್ಯಮಿಚ್ಚತಾ ಚರಿತುಂ ಸದಾ।
12209001c ನಿದ್ರಾ ಸರ್ವಾತ್ಮನಾ ತ್ಯಾಜ್ಯಾ ಸ್ವಪ್ನದೋಷಾನವೇಕ್ಷತಾ।।
ಗುರುವು ಹೇಳಿದನು: “ಸದಾ ನಿಷ್ಕಲ್ಮಷ ಬ್ರಹ್ಮಚರ್ಯವನ್ನು ಆಚರಿಸಲು ಇಚ್ಛಿಸುವವನು ಸ್ವಪ್ನದೋಷಗಳನ್ನು ಅವೇಕ್ಷಿಸಿ ಸರ್ವಪ್ರಕಾರಗಳಿಂದಲೂ ನಿದ್ರೆಯನ್ನು ತ್ಯಜಿಸಬೇಕು.
12209002a ಸ್ವಪ್ನೇ ಹಿ ರಜಸಾ ದೇಹೀ ತಮಸಾ ಚಾಭಿಭೂಯತೇ।
12209002c ದೇಹಾಂತರಮಿವಾಪನ್ನಶ್ಚರತ್ಯಪಗತಸ್ಮೃತಿಃ2।।
ಸ್ವಪ್ನಸಮಯದಲ್ಲಿ ಪ್ರಾಯಶಃ ರಜೋಗುಣ ತಮೋಗುಣಗಳು ಜೀವವನ್ನು ಆವೇಶಿಸುತ್ತವೆ. ಕಾಮನಾಯುಕ್ತನಾಗಿ ಅವನು ಇನ್ನೊಂದು ಶರೀರವನ್ನು ಪಡೆದುಕೊಂಡಿರುವನೋ ಎನ್ನುವಂತೆ ಸಂಚರಿಸುತ್ತಾನೆ.
12209003a ಜ್ಞಾನಾಭ್ಯಾಸಾಜ್ಜಾಗರತೋ ಜಿಜ್ಞಾಸಾರ್ಥಮನಂತರಮ್।
12209003c ವಿಜ್ಞಾನಾಭಿನಿವೇಶಾತ್ತು ಜಾಗರತ್ಯನಿಶಂ ಸದಾ।।
ಜ್ಞಾನಾಭ್ಯಾಸಕ್ಕಾಗಿ ಮತ್ತು ಅನಂತರ ಜಿಜ್ಞಾಸೆಗಾಗಿ ಜಾಗೃತನಾಗಿರಬೇಕು. ವಿಜ್ಞಾನವು ಅಭಿವ್ಯಕ್ತಗೊಂಡಾಗ ಸದಾ ರಾತ್ರಿಯಲ್ಲಿ ಜಾಗೃತನಾಗಿಯೇ ಇರಬೇಕಾಗುತ್ತದೆ.
12209004a ಅತ್ರಾಹ ಕೋ ನ್ವಯಂ ಭಾವಃ ಸ್ವಪ್ನೇ ವಿಷಯವಾನಿವ।
12209004c ಪ್ರಲೀನೈರಿಂದ್ರಿಯೈರ್ದೇಹೀ ವರ್ತತೇ ದೇಹವಾನಿವ।।
ಸ್ವಪ್ನದಲ್ಲಿ ಕಾಣುವ ವಿಷಯಗಳು ಯಾವುವು ಎಂಬ ಪ್ರಶ್ನೆಯು ಇಲ್ಲಿ ಹುಟ್ಟಿಕೊಳ್ಳುತ್ತದೆ. ಇಂದ್ರಿಯಗಳು ಮನಸ್ಸಿನಲ್ಲಿ ಲೀನವಾಗಿರುವಾಗ ಆ ದೇಹದಲ್ಲಿದ್ದ ಜೀವವು ಇನ್ನೊಂದು ದೇಹವನ್ನು ಪಡೆದುಕೊಂಡಂತೆ ವರ್ತಿಸುತ್ತದೆ.
12209005a ಅತ್ರೋಚ್ಯತೇ ಯಥಾ ಹ್ಯೇತದ್ವೇದ ಯೋಗೇಶ್ವರೋ ಹರಿಃ।
12209005c ತಥೈತದುಪಪನ್ನಾರ್ಥಂ ವರ್ಣಯಂತಿ ಮಹರ್ಷಯಃ।।
ಇದು ಹೇಗಾಗುತ್ತದೆ ಎನ್ನುವುದನ್ನು ಯೋಗೇಶ್ವರ ಹರಿಯೊಬ್ಬನೇ ತಿಳಿದುಕೊಂಡಿದ್ದಾನೆ ಎಂದು ಹೇಳುತ್ತಾರೆ. ಅವನು ಹೇಳಿದ್ದನ್ನೇ ಮಹರ್ಷಿಗಳು ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ.
12209006a ಇಂದ್ರಿಯಾಣಾಂ ಶ್ರಮಾತ್ಸ್ವಪ್ನಮಾಹುಃ ಸರ್ವಗತಂ ಬುಧಾಃ।
12209006c ಮನಸಸ್ತು ಪ್ರಲೀನತ್ವಾತ್ತತ್ತದಾಹುರ್ನಿದರ್ಶನಮ್।।
ಇಂದ್ರಿಯಗಳು ಆಯಾಸಗೊಂಡಾಗ ಎಲ್ಲರೂ ಸ್ವಪ್ನವನ್ನು ಕಾಣುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ. ಆದರೆ ಮನಸ್ಸು ಆಯಾಸಗೊಂಡಿರುವುದಿಲ್ಲ. ತನ್ನಲ್ಲಡಗಿರುವ ಇಂದ್ರಿಯಗಳ ವಿಷಯವನ್ನು ಮನಸ್ಸೊಂದೇ ಅನುಭವಿಸುತ್ತಿರುತ್ತದೆ. ಇದೇ ಸ್ವಪ್ನಕ್ಕೆ ಕಾರಣ ಎಂದು ನಿದರ್ಶಿಸುತ್ತಾರೆ.
12209007a ಕಾರ್ಯವ್ಯಾಸಕ್ತಮನಸಃ ಸಂಕಲ್ಪೋ ಜಾಗ್ರತೋ ಹ್ಯಪಿ।
12209007c ಯದ್ವನ್ಮನೋರಥೈಶ್ವರ್ಯಂ ಸ್ವಪ್ನೇ ತದ್ವನ್ಮನೋಗತಮ್।।
ಮನುಷ್ಯನು ಜಾಗ್ರತನಾಗಿ ಕಾರ್ಯಾಂತರದಲ್ಲಿ ಉತ್ಕಟವಾಗಿ ಆಸಕ್ತನಾಗಿದ್ದಾಗ ಅವನ ಮನೋರಥಗಳು ಫಲಿಸಿದಂತೆ ಮನಸ್ಸಿಗೆ ಹೇಗೆ ಕಂಡುಬರುವುದೋ ಹಾಗೆ ಸ್ವಪ್ನಾವಸ್ಥೆಯಲ್ಲಿ ಇಂದ್ರಿಯಗಳ ವಿಷಯಾನುಭವವು ಮನಸ್ಸಿಗಾಗುತ್ತದೆ.
12209008a ಸಂಸಾರಾಣಾಮಸಂಖ್ಯಾನಾಂ3 ಕಾಮಾತ್ಮಾ ತದವಾಪ್ನುಯಾತ್।
12209008c ಮನಸ್ಯಂತರ್ಹಿತಂ ಸರ್ವಂ ವೇದ ಸೋತ್ತಮಪೂರುಷಃ।।
ಕಾಮಾತ್ಮ ಮನಸ್ಸು ಅಸಂಖ್ಯ ಸಂಸಾರಗಳ ಅನುಭವವನ್ನು ಹೊಂದಿರುತ್ತದೆ. ಮನಸ್ಸಿನಲ್ಲಿ ಅಡಗಿರುವ ಆ ಸರ್ವವನ್ನೂ ಒಳಗಿರುವ ಪುರುಷಶ್ರೇಷ್ಠನು ತಿಳಿದಿರುತ್ತಾನೆ.
12209009a ಗುಣಾನಾಮಪಿ ಯದ್ಯತ್ತತ್ಕರ್ಮ ಜಾನಾತ್ಯುಪಸ್ಥಿತಮ್।
12209009c ತತ್ತಚ್ಚಂಸಂತಿ ಭೂತಾನಿ ಮನೋ ಯದ್ಭಾವಿತಂ ಯಥಾ।।
ಸ್ವಪ್ನಾವಸ್ಥೆಯಲ್ಲಿ ಆ ಕರ್ಮಗಳು ಮತ್ತು ಅವುಗಳ ಗುಣಗಳು ಅರಿವೆಗೆ ಬರುತ್ತವೆ ಮತ್ತು ಕಾಣಿಸಿಕೊಳ್ಳುತ್ತವೆ. ಮನಸ್ಸು ಯಾವರೀತಿಯಲ್ಲಿ ಹೇಗೆ ಅವುಗಳನ್ನು ಅನುಭವಿಸಿತ್ತೋ ಅದನ್ನು ಮನಸ್ಸು ಮೆಲಕುಹಾಕುತ್ತದೆ.
12209010a ತತಸ್ತಮುಪವರ್ತಂತೇ ಗುಣಾ ರಾಜಸತಾಮಸಾಃ।
12209010c ಸಾತ್ತ್ವಿಕೋ ವಾ ಯಥಾಯೋಗಮಾನಂತರ್ಯಫಲೋದಯಃ।।
ಆಗ ಅನಂತ ಕರ್ಮಗಳ ಫಲರೂಪದ ರಾಜಸ-ತಾಮಸ-ಸಾತ್ತ್ವಿಕ ಗುಣಗಳು ಕಾಣಿಸಿಕೊಳ್ಳುತ್ತವೆ.
12209011a ತತಃ ಪಶ್ಯತ್ಯಸಂಬದ್ಧಾನ್ವಾತಪಿತ್ತಕಫೋತ್ತರಾನ್।
12209011c ರಜಸ್ತಮೋಭವೈರ್ಭಾವೈಸ್ತದಪ್ಯಾಹುರ್ದುರನ್ವಯಮ್।।
ವಾತ-ಪಿತ್ತ-ಕಫಗಳನ್ನು ಉತ್ತೇಜಿಸುವ ದೃಶ್ಯಗಳು ಕಾಣುತ್ತವೆ. ರಜೋಗುಣ-ತಮೋಗುಣಗಳ ಭಾವಗಳನ್ನು ತಪ್ಪಿಸಿಕೊಳ್ಳುವುದು ಕಷ್ಟ ಎಂದು ಹೇಳುತ್ತಾರೆ.
12209012a ಪ್ರಸನ್ನೈರಿಂದ್ರಿಯೈರ್ಯದ್ಯತ್ಸಂಕಲ್ಪಯತಿ ಮಾನಸಮ್।
12209012c ತತ್ತತ್ಸ್ವಪ್ನೇಽಪ್ಯುಪರತೇ ಮನೋದೃಷ್ಟಿರ್ನಿರೀಕ್ಷತೇ।।
ಇಂದ್ರಿಯಗಳು ಪ್ರಸನ್ನಗೊಂಡಿದ್ದರೂ ಮನಸ್ಸು ಸಂಕಲ್ಪಿಸುತ್ತಿರುತ್ತದೆ. ಸ್ವಪ್ನಗಳಲ್ಲಿ ಮನಸ್ಸು ತನ್ನದೇ ದೃಷ್ಟಿಯಿಂದ ಇವುಗಳನ್ನು ಅನುಭವಿಸುತ್ತದೆ.
12209013a ವ್ಯಾಪಕಂ ಸರ್ವಭೂತೇಷು ವರ್ತತೇಽಪ್ರತಿಘಂ ಮನಃ।
412209013c ಮನಸ್ಯಂತರ್ಹಿತಂ ದ್ವಾರಂ ದೇಹಮಾಸ್ಥಾಯ ಮಾನಸಮ್5।।
ಸರ್ವಭೂತಗಳಲ್ಲಿಯೂ ಮನಸ್ಸು ವ್ಯಾಪಕವಾಗಿರುತ್ತದೆ ಮತ್ತು ತಡೆಯಿಲ್ಲದೇ ನಡೆಯುತ್ತಿರುತ್ತದೆ. ಸ್ವಪ್ನದರ್ಶನದ ದ್ವಾರವಾಗಿರುವ ಸ್ಥೂಲ ದೇಹವು ಸುಷುಪ್ತಿ ಅವಸ್ಥೆಯಲ್ಲಿ ಮನಸ್ಸಿನಲ್ಲಿ ಲೀನವಾಗುತ್ತದೆ.
12209014a ಯತ್ತತ್ಸದಸದವ್ಯಕ್ತಂ ಸ್ವಪಿತ್ಯಸ್ಮಿನ್ನಿದರ್ಶನಮ್।
12209014c ಸರ್ವಭೂತಾತ್ಮಭೂತಸ್ಥಂ ತದಧ್ಯಾತ್ಮಗುಣಂ ವಿದುಃ।।
ಅದೇ ದೇಹವನ್ನಾಶ್ರಯಿಸಿ ಮನಸ್ಸು ಅವ್ಯಕ್ತ ಸದಸತ್ಸ್ವರೂಪ ಮತ್ತು ಸಾಕ್ಷೀಭೂತ ಆತ್ಮನನ್ನು ಪ್ರಾಪ್ತಗೊಳ್ಳುತ್ತದೆ. ಆ ಆತ್ಮವು ಸರ್ವಭೂತಗಳ ಆತ್ಮಸ್ವರೂಪನು. ಜ್ಞಾನಿಯು ಅದನ್ನು ಅಧ್ಯಾತ್ಮಗುಣಯುಕ್ತನೆಂದು ತಿಳಿದಿರುತ್ತಾನೆ.
12209015a ಲಿಪ್ಸೇತ ಮನಸಾ ಯಶ್ಚ ಸಂಕಲ್ಪಾದೈಶ್ವರಂ ಗುಣಮ್।
12209015c ಆತ್ಮಪ್ರಭಾವಾತ್ತಂ ವಿದ್ಯಾತ್ಸರ್ವಾ ಹ್ಯಾತ್ಮನಿ ದೇವತಾಃ।।
ಮನಸ್ಸಿನ ಮೂಲಕ ಸಂಕಲ್ಪಮಾತ್ರದಿಂದಲೇ ಈಶ್ವರೀಯ ಗುಣಗಳನ್ನು ಪಡೆಯಲು ಇಚ್ಛಿಸುವ ಯೋಗಿಯು ಆ ಆತ್ಮಪ್ರಸಾದವನ್ನು ಪಡೆದುಕೊಳ್ಳುತ್ತಾನೆ; ಏಕೆಂದರೆ ಸಂಪೂರ್ಣ ದೇವತೆಗಳೂ ಆತ್ಮನಲ್ಲಿಯೇ ಸ್ಥಿತವಾಗಿದ್ದಾರೆ.
12209016a ಏವಂ ಹಿ ತಪಸಾ ಯುಕ್ತಮರ್ಕವತ್ತಮಸಃ ಪರಮ್।
12209016c ತ್ರೈಲೋಕ್ಯಪ್ರಕೃತಿರ್ದೇಹೀ ತಪಸಾ ತಂ ಮಹೇಶ್ವರಮ್।।
ಹೀಗೆ ತಪಸಾಯುಕ್ತ ಮನಸ್ಸು ಅಜ್ಞಾನಾಂಧಕಾರದ ಮೇಲೆದ್ದು ಸೂರ್ಯನಂತೆ ಜ್ಞಾನಮಯ ಪ್ರಕಾಶದಿಂದ ಪ್ರಕಾಶಿತಗೊಳ್ಳುತ್ತದೆ. ಜೀವಾತ್ಮನು ಮೂರೂ ಲೋಕಗಳ ಕಾರಣಭೂತ ಬ್ರಹ್ಮನೇ ಆಗಿದ್ದಾನೆ. ಅಜ್ಞಾನವು ನಿವೃತ್ತಿಯಾದ ನಂತರ ಅವನು ಮಹೇಶ್ವರ ರೂಪದಲ್ಲಿ ಪ್ರತಿಷ್ಠಿತನಾಗುತ್ತಾನೆ.
12209017a ತಪೋ ಹ್ಯಧಿಷ್ಠಿತಂ ದೇವೈಸ್ತಪೋಘ್ನಮಸುರೈಸ್ತಮಃ।
12209017c ಏತದ್ದೇವಾಸುರೈರ್ಗುಪ್ತಂ ತದಾಹುರ್ಜ್ಞಾನಲಕ್ಷಣಮ್।।
ದೇವತೆಗಳು ತಪಸ್ಸನ್ನೇ ಆಶ್ರಯಿಸಿರುವರು ಮತ್ತು ಅಸುರರು ತಪಸ್ಸಿಗೆ ವಿಘ್ನವನ್ನುಂಟುಮಾಡುವ ದಂಭ, ದರ್ಪಾದಿ ತಮೋಗುಣವನ್ನು ಅನುಸರಿಸುತ್ತಾರೆ. ಆದರೆ ಬ್ರಹ್ಮತತ್ತ್ವವು ದೇವತೆಗಳು ಮತ್ತು ಅಸುರರು ಇಬ್ಬರಿಗೂ ತೋರದಂತಿದೆ. ತತ್ತ್ವಜ್ಞರು ಇದನ್ನು ಜ್ಞಾನಸ್ವರೂಪ ಎಂದು ಹೇಳುತ್ತಾರೆ.
12209018a ಸತ್ತ್ವಂ ರಜಸ್ತಮಶ್ಚೇತಿ ದೇವಾಸುರಗುಣಾನ್ವಿದುಃ।
12209018c ಸತ್ತ್ವಂ ದೇವಗುಣಂ ವಿದ್ಯಾದಿತರಾವಾಸುರೌ ಗುಣೌ।।
ಸತ್ತ್ವ, ರಜ, ತಮೋಗುಣಗಳನ್ನು ದೇವಾಸುರರ ಗುಣಗಳೆಂದು ತಿಳಿದಿದ್ದಾರೆ. ಸತ್ತ್ವವು ದೇವಗುಣ ಮತ್ತು ಉಳಿದೆರಡು ಅಸುರೀ ಗುಣಗಳೆಂದು ತಿಳಿಯಬೇಕು.
12209019a ಬ್ರಹ್ಮ ತತ್ಪರಮಂ ವೇದ್ಯಮಮೃತಂ6 ಜ್ಯೋತಿರಕ್ಷರಮ್।
12209019c ಯೇ ವಿದುರ್ಭಾವಿತಾತ್ಮಾನಸ್ತೇ ಯಾಂತಿ ಪರಮಾಂ ಗತಿಮ್।।
ಬ್ರಹ್ಮವು ಈ ಮೂರು ಗುಣಗಳಿಗೂ ಅತೀತವಾದುದು. ಅಕ್ಷರ, ಅಮೃತ, ಸ್ವಯಂಪ್ರಕಾಶಿತ ಮತ್ತು ವೇದ್ಯವು. ಶುದ್ಧ ಅಂತಃಕರಣದ ಮಹಾತ್ಮರು ಇದನ್ನು ತಿಳಿದು ಪರಮ ಗತಿಯನ್ನು ಹೊಂದುತ್ತಾರೆ.
12209020a ಹೇತುಮಚ್ಚಕ್ಯಮಾಖ್ಯಾತುಮೇತಾವಜ್ಜ್ಞಾನಚಕ್ಷುಷಾ।
12209020c ಪ್ರತ್ಯಾಹಾರೇಣ ವಾ ಶಕ್ಯಮವ್ಯಕ್ತಂ ಬ್ರಹ್ಮ ವೇದಿತುಮ್।।
ಜ್ಞಾನದ ಕಣ್ಣುಳ್ಳವರೇ ಬ್ರಹ್ಮದ ವಿಷಯದಲ್ಲಿ ಯುಕ್ತಿಸಹಿತ ಮಾತನಾಡಲು ಶಕ್ಯರು. ಮನಸ್ಸು ಮತ್ತು ಇಂದ್ರಿಯಗಳನ್ನು ವಿಷಯಗಳಿಂದ ಹಿಂತೆಗೆದುಕೊಂಡು ಅವ್ಯಕ್ತ ಬ್ರಹ್ಮವನ್ನು ತಿಳಿಯಲು ಶಕ್ಯವಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ನವಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಒಂಭತ್ತನೇ ಅಧ್ಯಾಯವು.-
ಭೀಷ್ಮ ಉವಾಚ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಸ್ಪೃಹಃ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಸಂಸ್ಕಾರಾಣಾಮಸಂಖ್ಯಾನಂ (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಆತ್ಮಪ್ರಭಾವಾತ್ತದ್ವಿದ್ಯಾತ್ಸರ್ವಾ ಹ್ಯಾತ್ಮನಿ ದೇವತಾಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಮಾನುಷಮ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
್ಞಾನಮಮೃತಂ (ಗೀತಾ ಪ್ರೆಸ್/ಭಾರತ ದರ್ಶನ). ↩︎