ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 206
ಸಾರ
ಜೀವೋತ್ಪತ್ತಿಯ ವರ್ಣನೆ; ದೋಷ-ಬಂಧನಗಳ ಮುಕ್ತಿಗೋಸ್ಕರ ವಿಷಯಾಸಕ್ತಿಯನ್ನು ತ್ಯಜಿಸಲು ಉಪದೇಶ (1-21).
12206001 ಗುರುರುವಾಚ। 1
12206001a ರಜಸಾ ಸಾಧ್ಯತೇ ಮೋಹಸ್ತಮಸಾ ಚ ನರರ್ಷಭ।
12206001c ಕ್ರೋಧಲೋಭೌ ಭಯಂ ದರ್ಪ ಏತೇಷಾಂ ಸಾಧನಾಚ್ಚುಚಿಃ।।
12206002a ಪರಮಂ ಪರಮಾತ್ಮಾನಂ ದೇವಮಕ್ಷಯಮವ್ಯಯಮ್।
12206002c ವಿಷ್ಣುಮವ್ಯಕ್ತಸಂಸ್ಥಾನಂ ವಿಶಂತೇ2 ದೇವಸತ್ತಮಮ್।।
ಗುರುವು ಹೇಳಿದನು: “ನರರ್ಷಭ! ರಜೋಗುಣದಿಂದ ಮೋಹವುಂಟಾಗುತ್ತದೆ. ತಮೋಗುಣದಿಂದ ಕ್ರೋಧ, ಲಾಭ, ಭಯ ಮತ್ತು ದರ್ಪಗಳುಂಟಾಗುತ್ತವೆ. ಶುಚಿತ್ವವು ಪರಮ ಪರಮಾತ್ಮ ದೇವ ಅಕ್ಷಯ ಅವ್ಯಯ ವಿಷ್ಣು ಅವ್ಯಕ್ತ ದೇವಸತ್ತಮನ ಸಂಸ್ಥಾನವನ್ನು ಪ್ರವೇಶಿಸಲು ಸಾಧಕವಾಗುತ್ತದೆ.
12206003a ತಸ್ಯ ಮಾಯಾವಿದಗ್ಧಾಂಗಾ ಜ್ಞಾನಭ್ರಷ್ಟಾ ನಿರಾಶಿಷಃ3।
12206003c ಮಾನವಾ ಜ್ಞಾನಸಂಮೋಹಾತ್ತತಃ ಕಾಮಂ4 ಪ್ರಯಾಂತಿ ವೈ।।
ಅವನದೇ ಮಾಯೆಯಿಂದ ಆವೃತರಾದ ಮನುಷ್ಯರು ಜ್ಞಾನಭ್ರಷ್ಟರೂ ಗುರಿಯಿಲ್ಲವರೂ ಆಗುತ್ತಾರೆ. ಜ್ಞಾನಸಂಮೋಹದಿಂದಾಗಿ ಅವರು ಕಾಮದೆಡೆ ಸೆಳೆಯಲ್ಪಡುತ್ತಾರೆ.
12206004a ಕಾಮಾತ್ಕ್ರೋಧಮವಾಪ್ಯಾಥ ಲೋಭಮೋಹೌ ಚ ಮಾನವಾಃ।
12206004c ಮಾನದರ್ಪಾದಹಂಕಾರಮಹಂಕಾರಾತ್ತತಃ ಕ್ರಿಯಾಃ।।
ಮಾನವರು ಕಾಮದಿಂದ ಕ್ರೋಧವನ್ನೂ, ಲೋಭ-ಮೋಹಗಳನ್ನೂ ಪಡೆದುಕೊಳ್ಳುತ್ತಾರೆ. ಮಾನ-ದರ್ಪಗಳಿಂದ ಅಹಂಕಾರ ಮತ್ತು ಅಹಂಕಾರದಿಂದಲೇ ಕ್ರಿಯೆಗಳನ್ನು ಮಾಡುತ್ತಿರುತ್ತಾರೆ.
12206005a ಕ್ರಿಯಾಭಿಃ ಸ್ನೇಹಸಂಬಂಧಃ ಸ್ನೇಹಾಚ್ಚೋಕಮನಂತರಮ್।
12206005c ಸುಖದುಃಖಸಮಾರಂಭಾಜ್ಜನ್ಮಾಜನ್ಮಕೃತಕ್ಷಣಾಃ।।
ಕ್ರಿಯೆಗಳಿಂದ ಸ್ನೇಹಸಂಬಂಧ ಮತ್ತು ನಂತರ ಸ್ನೇಹದಿಂದ ಶೋಕ. ಹೀಗೆ ಸುಖ-ದುಃಖಗಳನ್ನುಂಟುಮಾಡುವ ಕ್ರಿಯೆಗಳಲ್ಲಿ ತೊಡಗುವುದರಿಂದ ಜನ್ಮ-ಮೃತ್ಯುಗಳನ್ನು ಅನುಭವಿಸುತ್ತಿರುತ್ತಾರೆ.
12206006a ಜನ್ಮತೋ ಗರ್ಭವಾಸಂ ತು ಶುಕ್ರಶೋಣಿತಸಂಭವಮ್।
12206006c ಪುರೀಷಮೂತ್ರವಿಕ್ಲೇದಶೋಣಿತಪ್ರಭವಾವಿಲಮ್।।
ಜನ್ಮವಾದರೋ ಶುಕ್ರ-ಶೋಣಿತಗಳ ಮಿಶ್ರಣದಿಂದುಂಟಾದ ಗರ್ಭವಾಸದಿಂದ ಆಗುತ್ತದೆ. ಆಗ ಜೀವಿಗೆ ಮಲ-ಮೂತ್ರಗಳಿಂದ ನಾರುತ್ತಿರುವ ರಕ್ತದ ವಿಕಾರದಿಂದ ಮಲಿನವಾಗಿರುವ ಗರ್ಭದಲ್ಲಿರಬೇಕಾಗುತ್ತದೆ.
12206007a ತೃಷ್ಣಾಭಿಭೂತಸ್ತೈರ್ಬದ್ಧಸ್ತಾನೇವಾಭಿಪರಿಪ್ಲವನ್।
12206007c ಸಂಸಾರತಂತ್ರವಾಹಿನ್ಯಸ್ತತ್ರ ಬುಧ್ಯೇತ ಯೋಷಿತಃ।।
ತೃಷ್ಣೆಗಳಿಂದ ಪೀಡಿತನಾಗಿ ಅವುಗಳಿಂದ ಬಂಧಿಸಲ್ಪಟ್ಟು ಅವುಗಳನ್ನೇ ಅನುಸರಿಸಿ ಹೋಗುವ ಈ ಸಂಸಾರದ ತಂತುವನ್ನು ಸ್ತ್ರೀಯರೇ ನೇಯುತ್ತಿರುತ್ತಾರೆ ಎಂದು ತಿಳಿಯಬೇಕು.
12206008a ಪ್ರಕೃತ್ಯಾ ಕ್ಷೇತ್ರಭೂತಾಸ್ತಾ ನರಾಃ ಕ್ಷೇತ್ರಜ್ಞಲಕ್ಷಣಾಃ।
12206008c ತಸ್ಮಾದೇತಾ ವಿಶೇಷೇಣ ನರೋಽತೀಯುರ್ವಿಪಶ್ಚಿತಃ5।।
ಪ್ರಕೃತಿಗೆ ಸಮಾನರಾದ ಸ್ತ್ರೀಯರು ಕ್ಷೇತ್ರಸ್ಥಾನದಲ್ಲಿರುತ್ತಾರೆ. ಪುರುಷರು ಕ್ಷೇತ್ರಜ್ಞನ ಲಕ್ಷಣವುಳ್ಳವರಾಗುತ್ತಾರೆ. ಆದುದರಿಂದ ವಿದ್ವಾಂಸ ಪುರುಷರು ಸ್ತ್ರೀಯರ ಹಿಂದೆ ವಿಶೇಷವಾಗಿ ಹೋಗಬಾರದು.
12206009a ಕೃತ್ಯಾ ಹ್ಯೇತಾ ಘೋರರೂಪಾ ಮೋಹಯಂತ್ಯವಿಚಕ್ಷಣಾನ್।
12206009c ರಜಸ್ಯಂತರ್ಹಿತಾ ಮೂರ್ತಿರಿಂದ್ರಿಯಾಣಾಂ ಸನಾತನೀ।।
ಅವರು ಘೋರರೂಪೀ ಕೃತ್ಯೆ6ಗೆ ಸಮಾನರು. ವಿದ್ವಾಂಸರಲ್ಲದವರನ್ನು ಮೋಹಗೊಳಿಸುತ್ತಾರೆ. ಇಂದ್ರಿಯಗಳಲ್ಲಿ ವಿಕಾರಗಳನ್ನುಂಟುಮಾಡುವ ಸನಾತನೀ ನಾರೀಮೂರ್ತಿಯು ರಜೋಗುಣದಲ್ಲಿ ಅಡಗಿಕೊಂಡಿರುತ್ತದೆ.
12206010a ತಸ್ಮಾತ್ತರ್ಷಾತ್ಮಕಾದ್ರಾಗಾದ್ಬೀಜಾಜ್ಜಾಯಂತಿ ಜಂತವಃ।
12206010c ಸ್ವದೇಹಜಾನಸ್ವಸಂಜ್ಞಾನ್ಯದ್ವದಂಗಾತ್ಕೃಮೀಂಸ್ತ್ಯಜೇತ್।
12206010e ಸ್ವಸಂಜ್ಞಾನಸ್ವಜಾಂಸ್ತದ್ವತ್ಸುತಸಂಜ್ಞಾನ್ಕೃಮೀಂಸ್ತ್ಯಜೇತ್।।
ಅವರ ಆಕರ್ಷಣೆ-ಅನುರಾಗದ ಕಾರಣದಿಂದಲೇ ಪುರುಷನ ವೀರ್ಯ ಮತ್ತು ಜೀವಿಗಳು ಹುಟ್ಟುತ್ತವೆ. ತನ್ನ ದೇಹದಲ್ಲಿ ಹುಟ್ಟಿದ ಕ್ರಿಮಿಗಳನ್ನು ತನ್ನವಲ್ಲವೆಂದು ಪರಿತ್ಯಜಿಸುವಂತೆ ತನ್ನವೆಂದು ಸಂಜ್ಞೆಗಳನ್ನು ಪಡೆದಿದ್ದರೂ ತನ್ನದಾಗಿರದ ಪುತ್ರನಾಮಕ ಕ್ರಿಮಿಗಳನ್ನೂ ಪರಿತ್ಯಜಿಸಬೇಕು.
12206011a ಶುಕ್ರತೋ ರಸತಶ್ಚೈವ ಸ್ನೇಹಾಜ್ಜಾಯಂತಿ7 ಜಂತವಃ।
12206011c ಸ್ವಭಾವಾತ್ಕರ್ಮಯೋಗಾದ್ವಾ ತಾನುಪೇಕ್ಷೇತ ಬುದ್ಧಿಮಾನ್।।
ವೀರ್ಯ, ರಸ ಮತ್ತು ಸ್ನೇಹಗಳಿಂದ ಜಂತುಗಳು ಸ್ವಭಾವತಃ ಅಥವಾ ಕರ್ಮಯೋಗದಿಂದ ಹುಟ್ಟುತ್ತವೆ. ಬುದ್ಧಿವಂತನು ಅವುಗಳನ್ನು ಉಪೇಕ್ಷಿಸಬೇಕು.
12206012a ರಜಸ್ತಮಸಿ ಪರ್ಯಸ್ತಂ ಸತ್ತ್ವಂ ತಮಸಿ ಸಂಸ್ಥಿತಮ್8।
12206012c ಜ್ಞಾನಾಧಿಷ್ಠಾನಮಜ್ಞಾನಂ9 ಬುದ್ಧ್ಯಹಂಕಾರಲಕ್ಷಣಮ್।।
ರಜವು ತಮಸ್ಸಿನಲ್ಲಿ ಆಶ್ರಿತವಾಗಿದೆ ಮತ್ತು ಸತ್ತ್ವವೂ ತಮಸ್ಸಿನಲ್ಲಿಯೇ ನೆಲೆಸಿದೆ. ಜ್ಞಾನವು ಅಜ್ಞಾನದ ಅಧಿಷ್ಠಾನವು ಮತ್ತು ಬುದ್ಧಿಯು ಅಹಂಕಾರದ ಲಕ್ಷಣವು.
12206013a ತದ್ಬೀಜಂ ದೇಹಿನಾಮಾಹುಸ್ತದ್ಬೀಜಂ ಜೀವಸಂಜ್ಞಿತಮ್।
12206013c ಕರ್ಮಣಾ ಕಾಲಯುಕ್ತೇನ ಸಂಸಾರಪರಿವರ್ತಕಮ್।।
ದೇಹಿಗಳಲ್ಲಿರುವ ಅದನ್ನು ಬೀಜವೆಂದು ಹೇಳುತ್ತಾರೆ. ಆ ಬೀಜವನ್ನು ಜೀವ ಎಂದು ಕರೆಯುತ್ತಾರೆ. ಅದೇ ಕರ್ಮಗಳಿಂದ ಕಾಲಯುಕ್ತನಾಗಿ ಸಂಸಾರಚಕ್ರದಲ್ಲಿ ಸಿಲುಕಿ ತಿರುಗುತ್ತಿರುತ್ತದೆ.
12206014a ರಮತ್ಯಯಂ ಯಥಾ ಸ್ವಪ್ನೇ ಮನಸಾ ದೇಹವಾನಿವ।
12206014c ಕರ್ಮಗರ್ಭೈರ್ಗುಣೈರ್ದೇಹೀ ಗರ್ಭೇ ತದುಪಪದ್ಯತೇ।।
ಮನಸ್ಸು ಸ್ವಪ್ನದಲ್ಲಿ ಹೇಗೆ ರಮಿಸುತ್ತದೆಯೋ ಹಾಗೆ ಜೀವವು ಈ ದೇಹದಲ್ಲಿ ರಮಿಸುತ್ತದೆ. ಕರ್ಮಗಳಲ್ಲಿರುವ ಗರ್ಭಗುಣಗಳಿಗೆ ತಕ್ಕಂತಹ ಗರ್ಭವನ್ನು ಜೀವವು ಪಡೆದುಕೊಳ್ಳುತ್ತದೆ10.
12206015a ಕರ್ಮಣಾ ಬೀಜಭೂತೇನ ಚೋದ್ಯತೇ ಯದ್ಯದಿಂದ್ರಿಯಮ್।
12206015c ಜಾಯತೇ ತದಹಂಕಾರಾದ್ರಾಗಯುಕ್ತೇನ ಚೇತಸಾ।।
ಬೀಜಭೂತವಾದ ಕರ್ಮಗಳು ಇಂದ್ರಿಯಗಳನ್ನು ಪ್ರಚೋದಿಸುತ್ತವೆ. ರಾಗಯುಕ್ತ ಚೇತನದಿಂದ ಅಹಂಕಾರವು ಹುಟ್ಟಿಕೊಳ್ಳುತ್ತದೆ.
12206016a ಶಬ್ದರಾಗಾಚ್ಚ್ರೋತ್ರಮಸ್ಯ ಜಾಯತೇ ಭಾವಿತಾತ್ಮನಃ।
12206016c ರೂಪರಾಗಾತ್ತಥಾ ಚಕ್ಷುರ್ಘ್ರಾಣಂ ಗಂಧಚಿಕೀರ್ಷಯಾ।।
ಶಬ್ದರಾಗದಿಂದ ಜೀವಕ್ಕೆ ಕಿವಿಗಳು ಹುಟ್ಟಿಕೊಳ್ಳುತ್ತವೆ. ರೂಪರಾಗದಿಂದ ಅವನ ಕಣ್ಣುಗಳು ಮತ್ತು ಗಂಧದ ಆಸೆಯಿಂದ ಮೂಗು ಹುಟ್ಟಿಕೊಳ್ಳುತ್ತವೆ.
12206017a ಸ್ಪರ್ಶನೇಭ್ಯಸ್ತಥಾ11 ವಾಯುಃ ಪ್ರಾಣಾಪಾನವ್ಯಪಾಶ್ರಯಃ।
12206017c ವ್ಯಾನೋದಾನೌ ಸಮಾನಶ್ಚ ಪಂಚಧಾ ದೇಹಯಾಪನಾ।।
ಸ್ವರ್ಶನವೂ ಮತ್ತು ಶರೀರಯತ್ರೆಗಾಗಿ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಐದು ವಾಯುಗಳು ಹುಟ್ಟಿಕೊಳ್ಳುತ್ತವೆ.
12206018a ಸಂಜಾತೈರ್ಜಾಯತೇ ಗಾತ್ರೈಃ ಕರ್ಮಜೈರ್ಬ್ರಹ್ಮಣಾ12 ವೃತಃ।
12206018c ದುಃಖಾದ್ಯಂತೈರ್ದುಃಖಮಧ್ಯೈರ್ನರಃ ಶಾರೀರಮಾನಸೈಃ।।
ಹುಟ್ಟುವಾಗಲೇ ಜೀವವು ಕರ್ಮಜ ಶರೀರಗಳಿಂದ ಹುಟ್ಟುತ್ತದೆ. ಜೀವವು ಪುನಃ ಕರ್ಮಗಳಲ್ಲಿಯೇ ತೊಡಗುತ್ತದೆ. ಹೀಗೆ ಮನುಷ್ಯನು ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಶಾರೀರಿಕ ಮಾನಸಿಕ ದುಃಖಗಳಿಗೊಳಗಾಗುತ್ತಾನೆ.
12206019a ದುಃಖಂ ವಿದ್ಯಾದುಪಾದಾನಾದಭಿಮಾನಾಚ್ಚ ವರ್ಧತೇ।
12206019c ತ್ಯಾಗಾತ್ತೇಭ್ಯೋ ನಿರೋಧಃ ಸ್ಯಾನ್ನಿರೋಧಜ್ಞೋ ವಿಮುಚ್ಯತೇ।।
ದೇಹಧಾರಣೆ ಮಾಡುವುದರಿಂದ ದುಃಖವು ಪ್ರಾಪ್ತವಾಗುತ್ತದೆ ಮತ್ತು ಶರೀರದ ಮೇಲಿನ ಅಭಿಮಾನದಿಂದ ಆ ದುಃಖವು ಮತ್ತಷ್ಟು ಹೆಚ್ಚುತ್ತದೆ. ತ್ಯಾಗದಿಂದ ದುಃಖವನ್ನು ನಿವಾರಿಸಬಹುದು ಮತ್ತು ತ್ಯಾಗವನ್ನು ತಿಳಿದವನು ಮುಕ್ತನಾಗುತ್ತಾನೆ.
12206020a ಇಂದ್ರಿಯಾಣಾಂ ರಜಸ್ಯೇವ ಪ್ರಭವಪ್ರಲಯಾವುಭೌ।
12206020c ಪರೀಕ್ಷ್ಯ ಸಂಚರೇದ್ವಿದ್ವಾನ್ಯಥಾವಚ್ಚಾಸ್ತ್ರಚಕ್ಷುಷಾ।।
ಇಂದ್ರಿಯಗಳ ಉತ್ಪತ್ತಿ ಮತ್ತು ಲಯ – ಎರಡೂ ರಜೋಗುಣದಿಂದಲೇ ಉಂಟಾಗುತ್ತದೆ. ವಿದ್ವಾಂಸನು ಶಾಸ್ತ್ರದೃಷ್ಟಿಯಿಂದ ಇದನ್ನು ಚೆನ್ನಾಗಿ ಪರೀಕ್ಷಿಸಿ ಯಥೋಚಿತವಾಗಿ ನಡೆದುಕೊಳ್ಳಬೇಕು.
12206021a ಜ್ಞಾನೇಂದ್ರಿಯಾಣೀಂದ್ರಿಯಾರ್ಥಾನ್ನೋಪಸರ್ಪಂತ್ಯತರ್ಷುಲಮ್।
12206021c ಜ್ಞಾತೈಶ್ಚ ಕಾರಣೈರ್ದೇಹೀ13 ನ ದೇಹಂ ಪುನರರ್ಹತಿ।।
ಆಸೆಯೇ ಇಲ್ಲದವನಿಗೆ ಜ್ಞಾನೇಂದ್ರಿಯಗಳು ಇಂದ್ರಿಯಾರ್ಥಗಳನ್ನು (ವಿಷಯಗಳನ್ನು) ಒದಗಿಸಿಕೊಡುವುದಿಲ್ಲ. ದೇಹಧಾರಣೆಗೆ ಕಾರಣವನ್ನು ತಿಳಿದುಕೊಂಡವನು ಪುನಃ ಶರೀರಧಾರಣೆ ಮಾಡಬೇಕಾಗುವುದಿಲ್ಲ.14”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಷಡಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಆರನೇ ಅಧ್ಯಾಯವು.-
ಭೀಷ್ಮ ಉವಾಚ। (ಗೀತಾ ಪ್ರೆಸ್/ಭಾರತ ದರ್ಶನ) ↩︎
-
ವಿದುಸ್ತಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ನಷ್ಟಜ್ಞಾನಾ ವಿಚೇತಸಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಕ್ರೋಧಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ನರೋಽತೀಯಾದ್ವಿಶೇಷತಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಶೂನ್ಯ ದೇವತೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ದೇಹಾಜ್ಜಾಯಂತಿ . (ಭಾರತ ದರ್ಶನ/ಗೀತಾ ಪ್ರೆಸ್) ↩︎
-
ಸತ್ತ್ವಂ ಚ ರಜಸಿ ಸ್ಥಿತಮ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
್ಞಾನಾಧಿಷ್ಠಾನಮವ್ಯಕ್ತಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಯಾವ ರೀತಿಯಲ್ಲಿ ಸ್ವಪ್ನಾವಸ್ಥೆಯಲ್ಲಿದ್ದಾಗ ಜೀವನು ಮನಸ್ಸಿನ ಮೂಲಕ ಮತ್ತೊಂದು ಶರೀರವನ್ನು ಧರಿಸಿದವನಂತೆ ಕ್ರೀಡೆಯಾಡುತ್ತಾನೋ ಹಾಗೆ ಕರ್ಮಗರ್ಭಿತ ಗುಣಗಳಿಂದ ಕೂಡಿದ ಜೀವನು ತಾಯಿಯ ಗರ್ಭದಲ್ಲಿ ಸ್ವಪ್ನದಂತಹ ಸ್ಥಿತಿಯನ್ನು ಹೊಂದುತ್ತಾನೆ (ಭಾರತ ದರ್ಶನ). ↩︎
-
ಸ್ಪರ್ಶನೇ ತ್ವಕ್ತಥಾ ವಾಯುಃ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಕರ್ಮಜೈರ್ವರ್ಷ್ಮಣಾ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಹೀನಶ್ಚ ಕರಣೈರ್ದೇಹೀ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
Even if one accomplishes the objective of satisfying the senses, a person who knows can use the senses of knowledge to determine the reasons. Such a being does not have to accept a body again. (Bibek Debroy) ↩︎