202: ಅಂತರ್ಭೂಮಿವಿಕ್ರೀಡಿನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 202

ಸಾರ

ಭಗವಾನ್ ವಿಷ್ಣುವು ವರಾಹ ರೂಪವನ್ನು ತಾಳಿ ದಾನವರನ್ನು ನಾಶಗೊಳಿಸಿ ದೇವತೆಗಳನ್ನು ರಕ್ಷಿಸುವುದು (1-33).

12202001 ಯುಧಿಷ್ಠಿರ ಉವಾಚ।
12202001a ಪಿತಾಮಹ ಮಹಾಪ್ರಾಜ್ಞ ಯುಧಿ ಸತ್ಯಪರಾಕ್ರಮ।
12202001c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೇನ ಕೃಷ್ಣಮವ್ಯಯಮೀಶ್ವರಮ್।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಯುದ್ಧದಲ್ಲಿ ಸತ್ಯಪರಾಕ್ರಮಿಯೇ! ಅವ್ಯಯ ಈಶ್ವರ ಕೃಷ್ಣನ ಕುರಿತು ಸಂಪೂರ್ಣವಾಗಿ ಕೇಳಬಯಸುತ್ತೇನೆ.

12202002a ಯಚ್ಚಾಸ್ಯ ತೇಜಃ ಸುಮಹದ್ಯಚ್ಚ ಕರ್ಮ ಪುರಾತನಮ್।
12202002c ತನ್ಮೇ ಸರ್ವಂ ಯಥಾತತ್ತ್ವಂ ಪ್ರಬ್ರೂಹಿ ಭರತರ್ಷಭ।।

ಭರತರ್ಷಭ! ಇವನ ತೇಜಸ್ಸು ಎಂಥಹುದು ಮತ್ತು ಇವನ ಪುರಾತನ ಮಹಾಕರ್ಮಗಳ್ಯಾವುವು ಎನ್ನುವುದೆಲ್ಲವನ್ನೂ ಯಥಾವತ್ತಾಗಿ ಹೇಳು.

12202003a ತಿರ್ಯಗ್ಯೋನಿಗತಂ ರೂಪಂ ಕಥಂ ಧಾರಿತವಾನ್ ಹರಿಃ।
12202003c ಕೇನ ಕಾರ್ಯವಿಸರ್ಗೇಣ ತನ್ಮೇ ಬ್ರೂಹಿ ಪಿತಾಮಹ।।

ಹರಿಯು ಹೇಗೆ ಮತ್ತು ಯಾವ ಕಾರ್ಯೋದ್ದೇಶದಿಂದ ತಿರ್ಯಗ್ಯೋನಿಯಲ್ಲಿ ರೂಪವನ್ನು ಧರಿಸಿದನು?”

12202004 ಭೀಷ್ಮ ಉವಾಚ।
12202004a ಪುರಾಹಂ ಮೃಗಯಾಂ ಯಾತೋ ಮಾರ್ಕಂಡೇಯಾಶ್ರಮೇ ಸ್ಥಿತಃ।
12202004c ತತ್ರಾಪಶ್ಯಂ ಮುನಿಗಣಾನ್ಸಮಾಸೀನಾನ್ಸಹಸ್ರಶಃ।।

ಭೀಷ್ಮನು ಹೇಳಿದನು: “ಹಿಂದೆ ನಾನು ಬೇಟೆಗೆಂದು ಹೋದಾಗ ಮಾರ್ಕಂಡೇಯನ ಆಶ್ರಮಕ್ಕೆ ಹೋದೆ. ಅಲ್ಲಿ ಸಹಸ್ರಾರು ಮುನಿಗಣಗಳು ಸೇರಿದ್ದುದನ್ನು ನೋಡಿದೆ.

12202005a ತತಸ್ತೇ ಮಧುಪರ್ಕೇಣ ಪೂಜಾಂ ಚಕ್ರುರಥೋ ಮಯಿ।
12202005c ಪ್ರತಿಗೃಹ್ಯ ಚ ತಾಂ ಪೂಜಾಂ ಪ್ರತ್ಯನಂದಮೃಷೀನಹಮ್।।

ಆಗ ಅವರು ಮಧುಪರ್ಕದಿಂದ ನನ್ನನ್ನು ಪೂಜಿಸಿದರು. ಅವರ ಆ ಪೂಜೆಯನ್ನು ಸ್ವೀಕರಿಸಿ ನಾನು ಆ ಋಷಿಗಳನ್ನು ಪ್ರತಿನಂದಿಸಿದೆನು.

12202006a ಕಥೈಷಾ ಕಥಿತಾ ತತ್ರ ಕಶ್ಯಪೇನ ಮಹರ್ಷಿಣಾ।
12202006c ಮನಃಪ್ರಹ್ಲಾದಿನೀಂ ದಿವ್ಯಾಂ ತಾಮಿಹೈಕಮನಾಃ ಶೃಣು।।

ಅಲ್ಲಿ ಮಹರ್ಷಿ ಕಶ್ಯಪನು ಹೇಳಿದ ಮನಸ್ಸನ್ನು ಆಹ್ಲಾದಿಸುವ ದಿವ್ಯಕಥೆಯನ್ನು ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.

12202007a ಪುರಾ ದಾನವಮುಖ್ಯಾ ಹಿ ಕ್ರೋಧಲೋಭಸಮನ್ವಿತಾಃ।
12202007c ಬಲೇನ ಮತ್ತಾಃ ಶತಶೋ ನರಕಾದ್ಯಾ ಮಹಾಸುರಾಃ।।

ಹಿಂದೆ ನರಕಾದಿ ನೂರಾರು ಮಹಾಸುರರು ಮತ್ತು ದಾನವ ಮುಖ್ಯರು ಬಲಮತ್ತರಾಗಿ ಕ್ರೋಧಲೋಭಸಮನ್ವಿತರಾಗಿದ್ದರು.

12202008a ತಥೈವ ಚಾನ್ಯೇ ಬಹವೋ ದಾನವಾ ಯುದ್ಧದುರ್ಮದಾಃ।
12202008c ನ ಸಹಂತೇ ಸ್ಮ ದೇವಾನಾಂ ಸಮೃದ್ಧಿಂ ತಾಮನುತ್ತಮಾಮ್।।

ಇವರಲ್ಲದೇ ಇನ್ನೂ ಇತರ ಅನೇಕ ಯುದ್ಧದುರ್ಮದ ದಾನವರು ಅನುತ್ತಮ ದೇವತೆಗಳ ಸಮೃದ್ಧಿಯನ್ನು ಸಹಿಸಿಕೊಂಡಿರಲಿಲ್ಲ.

12202009a ದಾನವೈರರ್ದ್ಯಮಾನಾಸ್ತು ದೇವಾ ದೇವರ್ಷಯಸ್ತಥಾ।
12202009c ನ ಶರ್ಮ ಲೇಭಿರೇ ರಾಜನ್ವಿಶಮಾನಾಸ್ತತಸ್ತತಃ।।

ರಾಜನ್! ದಾನವರಿಂದ ಆಕ್ರಮಣಿಸಲ್ಪಟ್ಟ ದೇವತೆಗಳು ಮತ್ತು ದೇವರ್ಷಿಗಳು ಅಲ್ಲಿಂದಲ್ಲಿಗೆ ಓಡುತ್ತಾ ನೆಲೆಯೇ ಇಲ್ಲದಂತಾದರು.

12202010a ಪೃಥಿವೀಂ ಚಾರ್ತರೂಪಾಂ ತೇ ಸಮಪಶ್ಯನ್ದಿವೌಕಸಃ।
12202010c ದಾನವೈರಭಿಸಂಕೀರ್ಣಾಂ ಘೋರರೂಪೈರ್ಮಹಾಬಲೈಃ।
12202010e ಭಾರಾರ್ತಾಮಪಕೃಷ್ಟಾಂ ಚ ದುಃಖಿತಾಂ ಸಂನಿಮಜ್ಜತೀಮ್।।

ಘೋರರೂಪದ ಮಹಾಬಲಶಾಲೀ ದಾನವರ ಗುಂಪುಗಳಿಂದ ತುಂಬಿಹೋಗಿ ಭಾರದಿಂದ ಬಳಲಿ ಸೋತು ದುಃಖಾರ್ತಳಾಗಿ ಮುಳುಗಿಹೋಗುತ್ತಿದ್ದ ಆರ್ತರೂಪೀ ಪೃಥ್ವಿಯನ್ನು ದಿವೌಕಸರು ನೋಡಿದರು.

12202011a ಅಥಾದಿತೇಯಾಃ ಸಂತ್ರಸ್ತಾ ಬ್ರಹ್ಮಾಣಮಿದಮಬ್ರುವನ್।
12202011c ಕಥಂ ಶಕ್ಯಾಮಹೇ ಬ್ರಹ್ಮನ್ದಾನವೈರುಪಮರ್ದನಮ್।।

ಆಗ ಸಂತ್ರಸ್ತರಾದ ಅದಿತಿಯ ಪುತ್ರರು ಬ್ರಹ್ಮನಿಗೆ “ಬ್ರಹ್ಮನ್! ದಾನವರ ಈ ಉಪಟಳವನ್ನು ನಾವು ಹೇಗೆ ಸಹಿಸಿಕೊಳ್ಳಬಲ್ಲೆವು?” ಎಂದು ಕೇಳಿದರು.

12202012a ಸ್ವಯಂಭೂಸ್ತಾನುವಾಚೇದಂ ನಿಸೃಷ್ಟೋಽತ್ರ ವಿಧಿರ್ಮಯಾ।
12202012c ತೇ ವರೇಣಾಭಿಸಂಮತ್ತಾ ಬಲೇನ ಚ ಮದೇನ ಚ।।

ಸ್ವಯಂಭುವು ಅವರಿಗೆ ಹೇಳಿದನು: “ಈ ವಿಪತ್ತಿಯನ್ನು ದೂರಮಾಡಲು ನಾನು ಒಂದು ಉಪಾಯವನ್ನು ಮಾಡಿದ್ದೇನೆ.

112202013a ನಾವಭೋತ್ಸ್ಯಂತಿ ಸಂಮೂಢಾ ವಿಷ್ಣುಮವ್ಯಕ್ತದರ್ಶನಮ್। 12202013c ವರಾಹರೂಪಿಣಂ ದೇವಮಧೃಷ್ಯಮಮರೈರಪಿ।।

ಆ ಸಮ್ಮೂಢರು ಅವ್ಯಕ್ತದರ್ಶನ ವಿಷ್ಣುವನ್ನು ಅರಿತಿಲ್ಲ. ಅಮರರಿಗೂ ದುರ್ಧರ್ಷನಾದ ಆ ದೇವನು ವರಾಹ ರೂಪವನ್ನು ಧರಿಸಿದ್ದಾನೆ.

12202014a ಏಷ ವೇಗೇನ ಗತ್ವಾ ಹಿ ಯತ್ರ ತೇ ದಾನವಾಧಮಾಃ।
12202014c ಅಂತರ್ಭೂಮಿಗತಾ ಘೋರಾ ನಿವಸಂತಿ ಸಹಸ್ರಶಃ।
12202014e ಶಮಯಿಷ್ಯತಿ ಶ್ರುತ್ವಾ ತೇ ಜಹೃಷುಃ ಸುರಸತ್ತಮಾಃ।।

ಅವನು ವೇಗವಾಗಿ ಹೋಗಿ ಭೂಮಿಯ ಅಂತರ್ಗತರಾಗಿ ವಾಸಿಸುತ್ತಿರುವ ಸಹಸ್ರಾರು ಘೋರ ದಾನವಾಧಮರನ್ನು ಸಂಹರಿಸುತ್ತಾನೆ!” ಇದನ್ನು ಕೇಳಿ ಸುರಸತ್ತಮರು ಹರ್ಷಿತರಾದರು.

12202015a ತತೋ ವಿಷ್ಣುರ್ಮಹಾತೇಜಾ ವಾರಾಹಂ ರೂಪಮಾಶ್ರಿತಃ।
12202015c ಅಂತರ್ಭೂಮಿಂ ಸಂಪ್ರವಿಶ್ಯ ಜಗಾಮ ದಿತಿಜಾನ್ ಪ್ರತಿ।।

ಆಗ ಮಹಾತೇಜಸ್ವೀ ವಿಷ್ಣುವು ವಾರಾಹರೂಪವನ್ನು ತಾಳಿ ಭೂಮಿಯನ್ನು ಪ್ರವೇಶಿಸಿ ದೈತ್ಯರ ಕಡೆ ಹೋದನು.

12202016a ದೃಷ್ಟ್ವಾ ಚ ಸಹಿತಾಃ ಸರ್ವೇ ದೈತ್ಯಾಃ ಸತ್ತ್ವಮಮಾನುಷಮ್।
12202016c ಪ್ರಸಹ್ಯ ಸಹಸಾ ಸರ್ವೇ ಸಂತಸ್ಥುಃ ಕಾಲಮೋಹಿತಾಃ।।

ಆ ಅಮಾನುಷ ಸತ್ತ್ವವನ್ನು ನೋಡಿ ಕಾಲಮೋಹಿತರಾದ ದೈತ್ಯರೆಲ್ಲರೂ ಒಂದಾಗಿ ಒಮ್ಮೆಲೇ ಅವನನ್ನು ಆಕ್ರಮಣಿಸಿದರು.

12202017a ಸರ್ವೇ ಚ ಸಮಭಿದ್ರುತ್ಯ ವರಾಹಂ ಜಗೃಹುಃ ಸಮಮ್।
12202017c ಸಂಕ್ರುದ್ಧಾಶ್ಚ ವರಾಹಂ ತಂ ವ್ಯಕರ್ಷಂತ ಸಮಂತತಃ।।

ಅವರೆಲ್ಲರೂ ಧಾವಿಸಿ ಬಂದು ವರಾಹವನ್ನು ಚೆನ್ನಾಗಿ ಹಿಡಿದುಕೊಂಡರು ಮತ್ತು ಸಂಕ್ರುದ್ಧರಾಗಿ ಆ ವರಾಹವನ್ನು ಎಲ್ಲಕಡೆಗಳಿಂದ ಎಳೆಯತೊಡಗಿದರು.

12202018a ದಾನವೇಂದ್ರಾ ಮಹಾಕಾಯಾ ಮಹಾವೀರ್ಯಾ ಬಲೋಚ್ಚ್ರಿತಾಃ।
12202018c ನಾಶಕ್ನುವಂಶ್ಚ ಕಿಂ ಚಿತ್ತೇ ತಸ್ಯ ಕರ್ತುಂ ತದಾ ವಿಭೋ।।

ವಿಭೋ! ಆಗ ಆ ಬಲೋಚ್ಛ್ರಿತ ಮಹಾವೀರ್ಯ ಮಹಾಕಾಯ ದಾನವೇಂದ್ರರು ಅವನಿಗೆ ಏನನ್ನು ಮಾಡಲೂ ಅಸಮರ್ಥರಾದರು.

12202019a ತತೋಽಗಮನ್ವಿಸ್ಮಯಂ ತೇ ದಾನವೇಂದ್ರಾ ಭಯಾತ್ತದಾ।
12202019c ಸಂಶಯಂ ಗತಮಾತ್ಮಾನಂ ಮೇನಿರೇ ಚ ಸಹಸ್ರಶಃ।।

ಆಗ ದಾನವೇಂದ್ರರು ವಿಸ್ಮಿತರಾದರು ಮತ್ತು ಭಯಗ್ರಸ್ತರಾದರು. ಆ ಸಹಸ್ರಾರು ದಾನವರು ತಮ್ಮ ಕೊನೆಯೇ ಬಂದಿದೆಯೆಂದು ಸಂಶಯತಾಳಿದರು.

12202020a ತತೋ ದೇವಾದಿದೇವಃ ಸ ಯೋಗಾತ್ಮಾ ಯೋಗಸಾರಥಿಃ।
12202020c ಯೋಗಮಾಸ್ಥಾಯ ಭಗವಾಂಸ್ತದಾ ಭರತಸತ್ತಮ।।
12202021a ವಿನನಾದ ಮಹಾನಾದಂ ಕ್ಷೋಭಯನ್ದೈತ್ಯದಾನವಾನ್।
12202021c ಸಂನಾದಿತಾ ಯೇನ ಲೋಕಾಃ ಸರ್ವಾಶ್ಚೈವ ದಿಶೋ ದಶ।।

ಭರತಸತ್ತಮ! ಆಗ ದೇವಾದಿದೇವ ಯೋಗಾತ್ಮಾ ಯೋಗಸಾರಥಿ ಭಗವಂತನು ಯೋಗವನ್ನು ಆಶ್ರಯಿಸಿ ದೈತ್ಯದಾನವರನ್ನು ಕ್ಷೋಭೆಗೊಳಿಸುತ್ತಾ ಮಹಾನಾದವನ್ನು ಗರ್ಜಿಸಿದನು. ಅವನ ಆ ಗರ್ಜನೆಯಿಂದ ಸರ್ವಲೋಕಗಳೂ ಹತ್ತು ದಿಕ್ಕುಗಳೂ ಕ್ಷೋಭೆಗೊಂಡವು.

12202022a ತೇನ ಸಂನಾದಶಬ್ದೇನ ಲೋಕಾಃ ಸಂಕ್ಷೋಭಮಾಗಮನ್।
12202022c ಸಂಭ್ರಾಂತಾಶ್ಚ ದಿಶಃ ಸರ್ವಾ ದೇವಾಃ ಶಕ್ರಪುರೋಗಮಾಃ।।

ಅವನ ಆ ಸಂನಾದಶಬ್ದದಿಂದ ಲೋಕಗಳಲ್ಲೆ ಕ್ಷೋಭೆಯುಂಟಾಯಿತು. ಶಕ್ರನೇ ಮೊದಲಾದ ದೇವತೆಗಳೆಲ್ಲರೂ ಮತ್ತು ಎಲ್ಲ ದಿಕ್ಕುಗಳೂ ಸಂಭ್ರಾಂತಗೊಂಡವು.

12202023a ನಿರ್ವಿಚೇಷ್ಟಂ ಜಗಚ್ಚಾಪಿ ಬಭೂವಾತಿಭೃಶಂ ತದಾ।
12202023c ಸ್ಥಾವರಂ ಜಂಗಮಂ ಚೈವ ತೇನ ನಾದೇನ ಮೋಹಿತಮ್।।

ಅವನ ಆ ನಾದದಿಂದ ಮೋಹಿತಗೊಂಡ ಸ್ಥಾವರ ಜಂಗಮಗಳೊಂದಿಗೆ ಜಗತ್ತೇ ಅತ್ಯಂತ ನಿರ್ವಿಚೇಷ್ಟವಾಯಿತು.

12202024a ತತಸ್ತೇ ದಾನವಾಃ ಸರ್ವೇ ತೇನ ಶಬ್ದೇನ ಭೀಷಿತಾಃ।
12202024c ಪೇತುರ್ಗತಾಸವಶ್ಚೈವ ವಿಷ್ಣುತೇಜೋವಿಮೋಹಿತಾಃ।।

ಆಗ ಅವನ ಶಬ್ದದಿಂದ ಭೀಷಿತರಾಗಿ ವಿಷ್ಣುವಿನ ತೇಜಸ್ಸಿನಿಂದ ವಿಮೋಹಿತರಾಗಿ ಸರ್ವ ದಾನವರೂ ಪ್ರಾಣತೊರೆದು ಬಿದ್ದರು.

12202025a ರಸಾತಲಗತಾಂಶ್ಚೈವ ವರಾಹಸ್ತ್ರಿದಶದ್ವಿಷಃ।
12202025c ಖುರೈಃ ಸಂದಾರಯಾಮಾಸ ಮಾಂಸಮೇದೋಸ್ಥಿಸಂಚಯಮ್।।

ರಸಾತಲಕ್ಕೂ ಹೋಗಿ ವರಾಹನು ತನ್ನ ಖುರಗಳಿಂದ ಸುರದ್ವೇಷಿಗಳನ್ನು ಸೀಳಿ ಅವರ ಮಾಂಸ-ಮೇದ-ಅಸ್ತಿಗಳ ರಾಶಿಯನ್ನೇ ಮಾಡಿದನು.

12202026a ನಾದೇನ ತೇನ ಮಹತಾ ಸನಾತನ ಇತಿ ಸ್ಮೃತಃ।
12202026c ಪದ್ಮನಾಭೋ ಮಹಾಯೋಗೀ ಭೂತಾಚಾರ್ಯಃ ಸ ಭೂತರಾಟ್।।

ಅವನ ಆ ಮಹಾ ನಾದದಿಂದ ಪದ್ಮನಾಭ ಮಹಾಯೋಗೀ ಭೂತಾಚಾರ್ಯ ಭೂತರಾಟ್ ವಿಷ್ಣುವು “ಸನಾತನ” ಎಂದಾದನು.

12202027a ತತೋ ದೇವಗಣಾಃ ಸರ್ವೇ ಪಿತಾಮಹಮುಪಾಬ್ರುವನ್।
12202027c ನಾದೋಽಯಂ ಕೀದೃಶೋ ದೇವ ನೈನಂ ವಿದ್ಮ ವಯಂ ವಿಭೋ।
12202027e ಕೋಽಸೌ ಹಿ ಕಸ್ಯ ವಾ ನಾದೋ ಯೇನ ವಿಹ್ವಲಿತಂ ಜಗತ್।।

ಆಗ ಸರ್ವ ದೇವಗಣಗಳೂ ಪಿತಾಮಹನಿಗೆ ಹೇಳಿದವು: “ದೇವ! ಇದು ಎಂತಹ ನಾದವು? ವಿಭೋ! ನಾವು ಇದನ್ನು ತಿಳಿಯಲಾರೆವು. ಅವನು ಯಾರು ಮತ್ತು ಇದು ಯಾರ ಗರ್ಜನೆ? ಇದರಿಂದ ಜಗತ್ತೇ ವಿಹ್ವಲಿತವಾಗಿಬಿಟ್ಟಿದೆ!”

12202028a ಏತಸ್ಮಿನ್ನಂತರೇ ವಿಷ್ಣುರ್ವಾರಾಹಂ ರೂಪಮಾಸ್ಥಿತಃ।
12202028c ಉದತಿಷ್ಠನ್ಮಹಾದೇವಃ ಸ್ತೂಯಮಾನೋ ಮಹರ್ಷಿಭಿಃ।।

ಈ ಮಧ್ಯದಲ್ಲಿ ವಾರಾಹರೂಪವನ್ನು ಧರಿಸಿದ್ದ ಮಹಾದೇವ ವಿಷ್ಣುವು ಮಹರ್ಷಿಗಳು ಸ್ತುತಿಸುತ್ತಿರಲು ಮೇಲಕ್ಕೆದ್ದನು.

12202029 ಪಿತಾಮಹ ಉವಾಚ।
12202029a ನಿಹತ್ಯ ದಾನವಪತೀನ್ಮಹಾವರ್ಷ್ಮಾ ಮಹಾಬಲಃ।
12202029c ಏಷ ದೇವೋ ಮಹಾಯೋಗೀ ಭೂತಾತ್ಮಾ ಭೂತಭಾವನಃ।।
12202030a ಸರ್ವಭೂತೇಶ್ವರೋ ಯೋಗೀ ಯೋನಿರಾತ್ಮಾ ತಥಾತ್ಮನಃ।
12202030c ಸ್ಥಿರೀಭವತ ಕೃಷ್ಣೋಽಯಂ ಸರ್ವಪಾಪಪ್ರಣಾಶನಃ।।

ಪಿತಾಮಹನು ಹೇಳಿದನು: “ದಾನವಪತಿಗಳನ್ನು ಸಂಹರಿಸಿ ಬರುತ್ತಿರುವ ಈ ಮಹಾಕಾಯ ಮಹಾಬಲ ಮಹಾಯೋಗೀ ಭೂತಾತ್ಮಾ ಭೂತಭಾವನನು ದೇವ ಕೃಷ್ಣನು. ಇವನೇ ಸರ್ವಭೂತೇಶ್ವರನು. ಯೋಗಿಯು. ಆತ್ಮಯೋನಿಯು. ಸರ್ವಪಾಪಗಳನ್ನು ಕಳೆಯುವ ಪರಮಾತ್ಮನು. ಆದುದರಿಂದ ನೀವು ಧೈರ್ಯತಾಳಿರಿ.

12202031a ಕೃತ್ವಾ ಕರ್ಮಾತಿಸಾಧ್ವೇತದಶಕ್ಯಮಮಿತಪ್ರಭಃ।
12202031c ಸಮಾಯಾತಃ ಸ್ವಮಾತ್ಮಾನಂ ಮಹಾಭಾಗೋ ಮಹಾದ್ಯುತಿಃ।
12202031e ಪದ್ಮನಾಭೋ ಮಹಾಯೋಗೀ ಭೂತಾತ್ಮಾ ಭೂತಭಾವನಃ।।

ಈ ಅಮಿತಪ್ರಭ ಮಹಾಭಾಗ ಮಹಾದ್ಯುತಿ ಮಹಾಯೋಗೀ ಭೂತಾತ್ಮಾ ಭೂತಭಾವನ ಪದ್ಮನಾಭನು ಇನ್ನೊಬ್ಬರಿಂದ ಮಾಡಲು ಅಶಕ್ಯವಾದ ಅತಿ ಕರ್ಮವನ್ನು ಮಾಡಿ ಪೂರೈಸಿ ಬರುತ್ತಿದ್ದಾನೆ.

12202032a ನ ಸಂತಾಪೋ ನ ಭೀಃ ಕಾರ್ಯಾ ಶೋಕೋ ವಾ ಸುರಸತ್ತಮಾಃ।
12202032c ವಿಧಿರೇಷ ಪ್ರಭಾವಶ್ಚ ಕಾಲಃ ಸಂಕ್ಷಯಕಾರಕಃ।
12202032e ಲೋಕಾನ್ಧಾರಯತಾನೇನ ನಾದೋ ಮುಕ್ತೋ ಮಹಾತ್ಮನಾ।।

ಸುರಸತ್ತಮರೇ! ಸಂತಾಪಪಡಬೇಡಿರಿ! ಭಯಪಡಬೇಡಿ! ಶೋಕಿಸಬೇಡಿ. ಇವನೇ ವಿಧಿ. ಪ್ರಭಾವ. ಮತ್ತು ಸಂಕ್ಷಯಕಾರಕ ಕಾಲನು. ಈ ಮಹಾತ್ಮನು ಲೋಕಗಳನ್ನು ಉದ್ಧರಿಸುವ ಸಲುವಾಗಿ ಈ ಮಹಾನಾದವನ್ನು ಗರ್ಜಿಸಿದನು.

12202033a ಸ ಏವ ಹಿ ಮಹಾಭಾಗಃ ಸರ್ವಲೋಕನಮಸ್ಕೃತಃ।
12202033c ಅಚ್ಯುತಃ ಪುಂಡರೀಕಾಕ್ಷಃ ಸರ್ವಭೂತಸಮುದ್ಭವಃ2।।

ಅವನೇ ಮಹಾಭಾಗ. ಸರ್ವಲೋಕನಮಸ್ಕೃತ. ಅಚ್ಯುತ. ಪುಂಡರೀಕಾಕ್ಷ ಮತ್ತು ಸರ್ವಭೂತಸಮುದ್ಭವನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಂತರ್ಭೂಮಿವಿಕ್ರೀಡಿನಂ ನಾಮ ದ್ವ್ಯಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಂತರ್ಭೂಮಿವಿಕ್ರೀಡಿನ ಎನ್ನುವ ಇನ್ನೂರಾಎರಡನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ತೇ ವರೇಣಾಭಿಸಂಪನ್ನಾ ಬಲೇನ ಚ ಮದೇನ ಚ। (ಗೀತಾ ಪ್ರೆಸ್). ↩︎

  2. ಇದರ ನಂತರ ಗೀತಾ ಪ್ರೆಸ್ ನಲ್ಲಿ ನಾರದನಿಗೆ ಅನುಸ್ಮೃತಿಸ್ತೋತ್ರದ ಉಪದೇಶ ಮತ್ತು ನಾರದನ ಸ್ತುತಿಗಳನ್ನು ಒಳಗೂಡಿದ ದಕ್ಷಿಣಾತ್ಯ ಪಾಠದ ೮೬.೫ ಅಧಿಕ ಶ್ಲೋಕಗಳಿವೆ. ಇವುಗಳನ್ನು ಪರಿಶಿಷ್ಠದಲ್ಲಿ ಕೊಡಲಾಗಿದೆ. ↩︎