ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 201
ಸಾರ
ಬ್ರಹ್ಮಪುತ್ರ ಮರೀಚಿ ಮೊದಲಾದ ಪ್ರಜಾಪತಿಗಳ ವಂಶವರ್ಣನೆ; ಪ್ರತ್ಯೇಕ ದಿಕ್ಕುಗಳಲ್ಲಿ ವಾಸಿಸುವ ಋಷಿಗಳ ಕೀರ್ತನೆ (1-35).
12201001 ಯುಧಿಷ್ಠಿರ ಉವಾಚ।
12201001a ಕೇ ಪೂರ್ವಮಾಸನ್ಪತಯಃ ಪ್ರಜಾನಾಂ ಭರತರ್ಷಭ।
12201001c ಕೇ ಚರ್ಷಯೋ ಮಹಾಭಾಗಾ ದಿಕ್ಷು ಪ್ರತ್ಯೇಕಶಃ ಸ್ಮೃತಾಃ।।
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಹಿಂದೆ ಯಾರು ಪ್ರಜಾಪತಿಗಳಾಗಿದ್ದರು? ಪ್ರತ್ಯೇಕ ದಿಕ್ಕುಗಳಲ್ಲಿ ಯಾವ ಮಹಾಭಾಗ ಋಷಿಗಳು ವಾಸಿಸುತ್ತಾರೆಂದಿದೆ?”
12201002 ಭೀಷ್ಮ ಉವಾಚ।
12201002a ಶ್ರೂಯತಾಂ ಭರತಶ್ರೇಷ್ಠ ಯನ್ಮಾ ತ್ವಂ ಪರಿಪೃಚ್ಚಸಿ।
12201002c ಪ್ರಜಾನಾಂ ಪತಯೋ ಯೇ ಸ್ಮ ದಿಕ್ಷು ಪ್ರತ್ಯೇಕಶಃ ಸ್ಮೃತಾಃ।।
ಭೀಷ್ಮನು ಹೇಳಿದನು: “ಭರತಶ್ರೇಷ್ಠ! ನೀನು ಕೇಳಿದ ಪ್ರಜಾಪತಿಗಳ ಮತ್ತು ಪ್ರತ್ಯೇಕ ದಿಕ್ಕುಗಳ ಕುರಿತು ನನ್ನನ್ನು ಕೇಳು.
12201003a ಏಕಃ ಸ್ವಯಂಭೂರ್ಭಗವಾನಾದ್ಯೋ ಬ್ರಹ್ಮಾ ಸನಾತನಃ।
12201003c ಬ್ರಹ್ಮಣಃ ಸಪ್ತ ಪುತ್ರಾ ವೈ ಮಹಾತ್ಮಾನಃ ಸ್ವಯಂಭುವಃ।।
12201004a ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ।
12201004c ವಸಿಷ್ಠಶ್ಚ ಮಹಾಭಾಗಃ ಸದೃಶಾ ವೈ ಸ್ವಯಂಭುವಾ।।
ಅನಾದಿ ಸನಾತನ ಭಗವಾನ್ ಬ್ರಹ್ಮನೊಬ್ಬನೇ ಸ್ವಯಂಭುವು. ಸ್ವಯಂಭುವಿಗೆ ಏಳು ಮಹಾತ್ಮ ಪುತ್ರರಾದರು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ. ಈ ಮಹಾಭಾಗರು ಸ್ವಯಂಭುವಿನ ಸದೃಶರಾಗಿದ್ದರು.
12201005a ಸಪ್ತ ಬ್ರಹ್ಮಾಣ ಇತ್ಯೇಷ ಪುರಾಣೇ ನಿಶ್ಚಯೋ ಗತಃ।
12201005c ಅತ ಊರ್ಧ್ವಂ ಪ್ರವಕ್ಷ್ಯಾಮಿ ಸರ್ವಾನೇವ ಪ್ರಜಾಪತೀನ್।।
ಇವರು ಸಪ್ತಬ್ರಾಹ್ಮಣರು ಎಂದು ಪುರಾಣಗಳಲ್ಲಿ ನಿಶ್ಚಿತರಾಗಿದ್ದಾರೆ. ಇನ್ನು ಮುಂದೆ ಸರ್ವ ಪ್ರಜಾಪತಿಗಳ ಕುರಿತು ಹೇಳುತ್ತೇನೆ.
12201006a ಅತ್ರಿವಂಶಸಮುತ್ಪನ್ನೋ ಬ್ರಹ್ಮಯೋನಿಃ ಸನಾತನಃ।
12201006c ಪ್ರಾಚೀನಬರ್ಹಿರ್ಭಗವಾಂಸ್ತಸ್ಮಾತ್ ಪ್ರಾಚೇತಸೋ ದಶ।।
ಭಗವಾನ್ ಪ್ರಾಚೀನಬರ್ಹಿಯು ಅತ್ರಿವಂಶಸಮುತ್ಪನ್ನನು. ಬ್ರಹ್ಮಯೋನಿಯು ಮತ್ತು ಸನಾತನನು. ಅವನಿಂದ ಹತ್ತು ಪ್ರಾಚೇತಸರಾದರು.
12201007a ದಶಾನಾಂ ತನಯಸ್ತ್ವೇಕೋ ದಕ್ಷೋ ನಾಮ ಪ್ರಜಾಪತಿಃ।
12201007c ತಸ್ಯ ದ್ವೇ ನಾಮನೀ ಲೋಕೇ ದಕ್ಷಃ ಕ ಇತಿ ಚೋಚ್ಯತೇ।।
ಆ ಹತ್ತು ಪ್ರಾಚೇತಸರ ಓರ್ವ ಮಗನು ದಕ್ಷ ಎಂಬ ಹೆಸರಿನ ಪ್ರಜಾಪತಿಯು. ಲೋಕದಲ್ಲಿ ಅವನಿಗೆ ದಕ್ಷ ಮತ್ತು ಕ ಎಂಬ ಎರಡು ಹೆಸರುಗಳಿವೆಯೆಂದು ಹೇಳುತ್ತಾರೆ.
12201008a ಮರೀಚೇಃ ಕಶ್ಯಪಃ ಪುತ್ರಸ್ತಸ್ಯ ದ್ವೇ ನಾಮನೀ ಶ್ರುತೇ।
12201008c ಅರಿಷ್ಟನೇಮಿರಿತ್ಯೇಕಂ ಕಶ್ಯಪೇತ್ಯಪರಂ ವಿದುಃ।।
ಮರೀಚಿಯ ಪುತ್ರ ಕಶ್ಯಪನಿಗೂ ಎರಡು ಹೆಸರುಗಳಿವೆಯೆಂದು ಕೇಳಿದ್ದೇವೆ: ಅರಿಷ್ಟನೇಮಿ ಎಂಬುದು ಒಂದು ಮತ್ತು ಕಶ್ಯಪ ಎನ್ನುವುದು ಇನ್ನೊಂದು ಹೆಸರು.
12201009a ಅಂಗಶ್ಚೈವೌರಸಃ ಶ್ರೀಮಾನ್ರಾಜಾ ಭೌಮಶ್ಚ ವೀರ್ಯವಾನ್1।
12201009c ಸಹಸ್ರಂ ಯಶ್ಚ ದಿವ್ಯಾನಾಂ ಯುಗಾನಾಂ ಪರ್ಯುಪಾಸಿತಾ।।
ಅಂಗಿರಸನ ಔರಸ ಪುತ್ರನು ಶ್ರೀಮಾನ್ ವೀರ್ಯವಾನ್ ರಾಜ ಭೌಮನು. ಅವನು ಸಹಸ್ರ ದಿವ್ಯಯುಗಪರ್ಯಂತ ಭಗವಂತನನ್ನು ಉಪಾಸಿಸಿದನು.
12201010a ಅರ್ಯಮಾ ಚೈವ ಭಗವಾನ್ಯೇ ಚಾನ್ಯೇ ತನಯಾ ವಿಭೋ।
12201010c ಏತೇ ಪ್ರದೇಶಾಃ ಕಥಿತಾ ಭುವನಾನಾಂ ಪ್ರಭಾವನಾಃ।।
ವಿಭೋ! ಭಗವಾನ್ ಆರ್ಯಮನು ಮತ್ತು ಅವನ ಮಕ್ಕಳು ಶಾಸಕರೆಂದೂ ಭುವನಗಳ ಸೃಷ್ಟಿಕರ್ತರೆಂದೂ ಇದೆ.
12201011a ಶಶಬಿಂದೋಶ್ಚ ಭಾರ್ಯಾಣಾಂ ಸಹಸ್ರಾಣಿ ದಶಾಚ್ಯುತ।
12201011c ಏಕೈಕಸ್ಯಾಂ ಸಹಸ್ರಂ ತು ತನಯಾನಾಮಭೂತ್ತದಾ।।
12201012a ಏವಂ ಶತಸಹಸ್ರಾಣಾಂ ಶತಂ ತಸ್ಯ ಮಹಾತ್ಮನಃ।
12201012c ಪುತ್ರಾಣಾಂ ನ ಚ ತೇ ಕಂ ಚಿದಿಚ್ಚಂತ್ಯನ್ಯಂ ಪ್ರಜಾಪತಿಮ್।।
ಅಚ್ಯುತ! ಭಗವಾನ್ ಆರ್ಯಮನ ಪುತ್ರರಲ್ಲೊಬ್ಬನಾದ ಶಶಬಿಂದುವಿಗೆ ಹತ್ತುಸಾವಿರ ಭಾರ್ಯೆಯರಿದ್ದರು. ಒಬ್ಬೊಬ್ಬಳು ಭಾರ್ಯೆಯರಲ್ಲಿಯ ಶಶಬಿಂದುವು ಸಾವಿರ ಸಾವಿರ ಮಕ್ಕಳನ್ನು ಪಡೆದುಕೊಂಡನು. ಹೀಗೆ ಮಹಾತ್ಮಾ ಶಶಬಿಂದು ಒಬ್ಬನಿಗೇ ಮಕ್ಕಳು ಹುಟ್ಟಿದರು. ಆದುದರಿಂದ ಅವರು ಬೇರೆ ಪ್ರಜಾಪತಿಯನ್ನೂ ಅಪೇಕ್ಷಿಸಲಿಲ್ಲ.
12201013a ಪ್ರಜಾಮಾಚಕ್ಷತೇ ವಿಪ್ರಾಃ ಪೌರಾಣೀಂ ಶಾಶಬಿಂದವೀಮ್।
12201013c ಸ ವೃಷ್ಣಿವಂಶಪ್ರಭವೋ ಮಹಾನ್ವಂಶಃ ಪ್ರಜಾಪತೇಃ।।
ವಿಪ್ರರು ಪುರಾಣಪುರುಷ ಶಶಬಿಂದುವೇ ಪ್ರಜಾಪತಿಯೆಂದು ನೋಡುತ್ತಾರೆ. ಆ ಪ್ರಜಾಪತಿಯ ಮಹಾವಂಶದಲ್ಲಿಯೇ ವೃಷ್ಣಿವಂಶವೂ ಪ್ರಾರಂಭವಾಯಿತು.
12201014a ಏತೇ ಪ್ರಜಾನಾಂ ಪತಯಃ ಸಮುದ್ದಿಷ್ಟಾ ಯಶಸ್ವಿನಃ।
12201014c ಅತಃ ಪರಂ ಪ್ರವಕ್ಷ್ಯಾಮಿ ದೇವಾಂಸ್ತ್ರಿಭುವನೇಶ್ವರಾನ್।।
ಈ ಪ್ರಜಾಪತಿಗಳು ಯಶೋವಂತರೆಂದು ಹೇಳುತ್ತಾರೆ. ಇನ್ನು ಮುಂದೆ ತ್ರಿಭುವನೇಶ್ವರ ದೇವತೆಗಳ ಕುರಿತು ಹೇಳುತ್ತೇನೆ.
12201015a ಭಗೋಽಂಶಶ್ಚಾರ್ಯಮಾ ಚೈವ ಮಿತ್ರೋಽಥ ವರುಣಸ್ತಥಾ।
12201015c ಸವಿತಾ ಚೈವ ಧಾತಾ ಚ ವಿವಸ್ವಾಂಶ್ಚ ಮಹಾಬಲಃ।।
12201016a ಪೂಷಾ ತ್ವಷ್ಟಾ ತಥೈವೇಂದ್ರೋ ದ್ವಾದಶೋ ವಿಷ್ಣುರುಚ್ಯತೇ।
12201016c ತ ಏತೇ ದ್ವಾದಶಾದಿತ್ಯಾಃ ಕಶ್ಯಪಸ್ಯಾತ್ಮಸಂಭವಾಃ।।
ಭಗ, ಅಂಶ, ಆರ್ಯಮ, ಮಿತ್ರ, ವರುಣ, ಸವಿತಾ, ಧಾತಾ, ಮಹಾಬಲ ವಿವಸ್ವಾನ್, ಪೂಷಾ, ತ್ವಷ್ಟಾ, ಮತ್ತು ಇಂದ್ರ ಹಾಗೂ ಹನ್ನೆರಡನೆಯವನು ವಿಷ್ಣು ಎನ್ನುತ್ತಾರೆ. ಈ ದ್ವಾದಶಾದಿತ್ಯರು ಕಶ್ಯಪನ ಆತ್ಮಸಂಭವರು.
12201017a ನಾಸತ್ಯಶ್ಚೈವ ದಸ್ರಶ್ಚ ಸ್ಮೃತೌ ದ್ವಾವಶ್ವಿನಾವಪಿ।
12201017c ಮಾರ್ತಾಂಡಸ್ಯಾತ್ಮಜಾವೇತಾವಷ್ಟಮಸ್ಯ ಪ್ರಜಾಪತೇಃ।।
ನಾಸತ್ಯ ಮತ್ತು ದರ್ಸ ಎಂಬ ಇಬ್ಬರು ಅಶ್ವಿನಿಯರೆಂಬುವವರು ಅಷ್ಟಮ ಪ್ರಜಾಪತಿ ಮಾರ್ತಾಂಡನ ಮಕ್ಕಳು.
212201018a ತ್ವಷ್ಟುಶ್ಚೈವಾತ್ಮಜಃ ಶ್ರೀಮಾನ್ವಿಶ್ವರೂಪೋ ಮಹಾಯಶಾಃ। 12201018c ಅಜೈಕಪಾದಹಿರ್ಬುಧ್ನ್ಯೋ ವಿರೂಪಾಕ್ಷೋಽಥ ರೈವತಃ।।
12201019a ಹರಶ್ಚ ಬಹುರೂಪಶ್ಚ ತ್ರ್ಯಂಬಕಶ್ಚ ಸುರೇಶ್ವರಃ।
12201019c ಸಾವಿತ್ರಶ್ಚ ಜಯಂತಶ್ಚ ಪಿನಾಕೀ ಚಾಪರಾಜಿತಃ।
12201019e ಪೂರ್ವಮೇವ ಮಹಾಭಾಗಾ ವಸವೋಽಷ್ಟೌ ಪ್ರಕೀರ್ತಿತಾಃ।।
ಮಹಾಯಶಸ್ವೀ ಶ್ರೀಮಾನ್ ವಿಶ್ವರೂಪನು ತ್ವಷ್ಟುವಿನ ಮಗನು. ಅಜೈಕಪಾದ, ಅಹಿರ್ಬುಧ್ನ, ವಿರೂಪಾಕ್ಷ, ರೈವತ, ಹರ, ಬಹುರೂಪ, ತ್ರ್ಯಂಬಕ, ಸುರೇಶ್ವರ, ಸಾವಿತ್ರ, ಜಯಂತ, ಮತ್ತು ಅಪರಾಜಿತ ಪಿನಾಕೀ ಇವರು ಏಕಾದಶ ರುದ್ರರು. ಇವರಲ್ಲದೇ ಅಷ್ಟವಸುಗಳ3 ಕುರಿತೂ ಹೇಳಿದ್ದಾರೆ.
12201020a ಏತ ಏವಂವಿಧಾ ದೇವಾ ಮನೋರೇವ ಪ್ರಜಾಪತೇಃ।
12201020c ತೇ ಚ ಪೂರ್ವೇ ಸುರಾಶ್ಚೇತಿ ದ್ವಿವಿಧಾಃ ಪಿತರಃ ಸ್ಮೃತಾಃ।।
ಹೀಗೆ ದೇವತೆಗಳೆಲ್ಲರೂ ಪ್ರಜಾಪತಿಯ ಮಾನಸಪುತ್ರರು. ವಸು-ರುದ್ರ-ಆದಿತ್ಯರು ದೇವತೆಗಳೆಂದೂ ಪಿತೃರೂಪರೆಂದೂ ಕರೆಯಲ್ಪಡುತ್ತಾರೆ.
12201021a ಶೀಲರೂಪರತಾಸ್ತ್ವನ್ಯೇ ತಥಾನ್ಯೇ4 ಸಿದ್ಧಸಾಧ್ಯಯೋಃ।
12201021c ಋಭವೋ ಮರುತಶ್ಚೈವ ದೇವಾನಾಂ ಚೋದಿತಾ ಗಣಾಃ।।
ಇವರಲ್ಲಿ ಅನ್ಯರು ಶೀಲರೂಪರತರು. ಅನ್ಯರು ಸಿದ್ಧಸಾಧ್ಯರು. ಋಭುಗಳೂ ಮರುತರೂ ದೇವಗಣಗಳೆಂದು ಹೇಳಿದ್ದಾರೆ.
12201022a ಏವಮೇತೇ ಸಮಾಮ್ನಾತಾ ವಿಶ್ವೇದೇವಾಸ್ತಥಾಶ್ವಿನೌ।
12201022c ಆದಿತ್ಯಾಃ ಕ್ಷತ್ರಿಯಾಸ್ತೇಷಾಂ ವಿಶಸ್ತು ಮರುತಸ್ತಥಾ।।
ಹಾಗೆಯೇ ವಿಶ್ವೇದೇವರು ಮತ್ತು ಅಶ್ವಿನಿಯರು ದೇವಗಣಕ್ಕೆ ಸೇರಿದ್ದಾರೆ. ದೇವಗಣಗಳಲ್ಲಿ ಆದಿತ್ಯರು ಕ್ಷತ್ರಿಯರು ಮತ್ತು ಮರುತ್ತರು ವೈಶ್ಯರು.
12201023a ಅಶ್ವಿನೌ ತು ಮತೌ ಶೂದ್ರೌ ತಪಸ್ಯುಗ್ರೇ ಸಮಾಹಿತೌ।
12201023c ಸ್ಮೃತಾಸ್ತ್ವಂಗಿರಸೋ ದೇವಾ ಬ್ರಾಹ್ಮಣಾ ಇತಿ ನಿಶ್ಚಯಃ।
12201023e ಇತ್ಯೇತತ್ಸರ್ವದೇವಾನಾಂ ಚಾತುರ್ವರ್ಣ್ಯಂ ಪ್ರಕೀರ್ತಿತಮ್।।
ಉಗ್ರತಪಸ್ಸಿನಲ್ಲಿ ನಿರತರಾದ ಅಶ್ವಿನಿಯರು ಶೂದ್ರರೆಂಬ ಮತವಿದೆ. ಅಂಗಿರಸನ ಗೋತ್ರದ ದೇವತೆಗಳೆಲ್ಲರೂ ಬ್ರಾಹ್ಮಣರೆಂಬ ನಿಶ್ಚಯವಿದೆ. ಹೀಗೆ ಎಲ್ಲ ದೇವತೆಗಳಿಗೂ ಕೂಡ ಚಾತುರ್ವಣ್ಯವನ್ನು ಹೇಳಿದ್ದಾರೆ.
12201024a ಏತಾನ್ವೈ ಪ್ರಾತರುತ್ಥಾಯ ದೇವಾನ್ಯಸ್ತು ಪ್ರಕೀರ್ತಯೇತ್।
12201024c ಸ್ವಜಾದನ್ಯಕೃತಾಚ್ಚೈವ ಸರ್ವಪಾಪಾತ್ಪ್ರಮುಚ್ಯತೇ।।
ಬೆಳಿಗ್ಗೆ ಎದ್ದು ಈ ದೇವತೆಗಳ ಕೀರ್ತನೆಮಾಡುವವನು ತಾನು ಮಾಡಿದ ಮತ್ತು ಇತರರ ಸಂಸರ್ಗದಿಂದುಂಟಾದ ಪಾಪಗಳೆಲ್ಲವನ್ನೂ ತೊಳೆದುಕೊಳ್ಳುತ್ತಾನೆ.
12201025a ಯವಕ್ರೀತೋಽಥ ರೈಭ್ಯಶ್ಚ ಅರ್ವಾವಸುಪರಾವಸೂ।
12201025c ಔಶಿಜಶ್ಚೈವ ಕಕ್ಷೀವಾನ್ನಲಶ್ಚಾಂಗಿರಸಃ ಸುತಾಃ।।
ಯವಕ್ರೀತ, ರೈಭ್ಯ, ಅರ್ವಾವಸು, ಪರಾವಸು, ಔಷಿಜ ಮತ್ತು ಕಕ್ಷೀವಾನರು ಅಂಗಿರಸನ ಪುತ್ರರು.
12201026a ಋಷೇರ್ಮೇಧಾತಿಥೇಃ ಪುತ್ರಃ ಕಣ್ವೋ ಬರ್ಹಿಷದಸ್ತಥಾ।
12201026c ತ್ರೈಲೋಕ್ಯಭಾವನಾಸ್ತಾತ ಪ್ರಾಚ್ಯಾಂ ಸಪ್ತರ್ಷಯಸ್ತಥಾ।।
ಅಯ್ಯಾ! ಋಷಿ ಮೇಧಾತಿಥಿಯ ಪುತ್ರರು ಕಣ್ವ, ಬರ್ಹಿಷ ಮತ್ತು ಮೂರುಲೋಕಗಳನ್ನೂ ಸೃಷ್ಟಿಸಬಲ್ಲ ಪೂರ್ವದಿಕ್ಕಿನಲ್ಲಿರುವ ಸಪ್ತರ್ಷಿಗಳು.
12201027a ಉನ್ಮುಚೋ ವಿಮುಚಶ್ಚೈವ ಸ್ವಸ್ತ್ಯಾತ್ರೇಯಶ್ಚ ವೀರ್ಯವಾನ್।
12201027c ಪ್ರಮುಚಶ್ಚೇಧ್ಮವಾಹಶ್ಚ ಭಗವಾಂಶ್ಚ ದೃಢವ್ರತಃ।।
12201028a ಮಿತ್ರಾವರುಣಯೋಃ ಪುತ್ರಸ್ತಥಾಗಸ್ತ್ಯಃ ಪ್ರತಾಪವಾನ್।
12201028c ಏತೇ ಬ್ರಹ್ಮರ್ಷಯೋ ನಿತ್ಯಮಾಶ್ರಿತಾ ದಕ್ಷಿಣಾಂ ದಿಶಮ್।।
ಉನ್ಮುಚ, ವಿಮುಚ, ವೀರ್ಯವಾನ್ ಸ್ವಸ್ತ್ಯಾತ್ರೇಯ, ಪ್ರಮುಚ, ಇಧ್ಮವಾಹ, ದೃಢವ್ರತ ಪ್ರತಾಪವಾನ್ ಮಿತ್ರಾವರುಣರ ಪುತ್ರ ಭಗವಾನ್ ಅಗಸ್ತ್ಯ – ಈ ಬ್ರಹ್ಮರ್ಷಿಗಳು ನಿತ್ಯವೂ ದಕ್ಷಿಣ ದಿಕ್ಕನ್ನು ಆಶ್ರಯಿಸಿರುತ್ತಾರೆ.
12201029a ರುಷದ್ಗುಃ5 ಕವಷೋ ಧೌಮ್ಯಃ ಪರಿವ್ಯಾಧಶ್ಚ ವೀರ್ಯವಾನ್।
12201029c ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ।।
12201030a ಅತ್ರೇಃ ಪುತ್ರಶ್ಚ ಭಗವಾಂಸ್ತಥಾ ಸಾರಸ್ವತಃ ಪ್ರಭುಃ।
12201030c ಏತೇ ನವ6 ಮಹಾತ್ಮಾನಃ ಪಶ್ಚಿಮಾಮಾಶ್ರಿತಾ ದಿಶಮ್।।
ರುಷದ್ಗು, ಕವಷ, ಧೌಮ್ಯ, ವೀರ್ಯವಾನ್ ಪರಿವ್ಯಾಧ, ಏಕತ, ದ್ವಿತ, ತ್ರಿತ ಮಹರ್ಷಿಗಳು, ಅತ್ರಿಯ ಪುತ್ರ ಮತ್ತು ಭಗವಾನ್ ಪ್ರಭು ಸಾರಸ್ವತ ಈ ಒಂಭತ್ತು ಮಹಾತ್ಮರು ಪಶ್ಚಿಮ ದಿಕ್ಕನ್ನು ಆಶ್ರಯಿಸಿರುತ್ತಾರೆ.
12201031a ಆತ್ರೇಯಶ್ಚ ವಸಿಷ್ಠಶ್ಚ ಕಶ್ಯಪಶ್ಚ ಮಹಾನೃಷಿಃ।
12201031c ಗೌತಮಃ ಸಭರದ್ವಾಜೋ ವಿಶ್ವಾಮಿತ್ರೋಽಥ ಕೌಶಿಕಃ।।
12201032a ತಥೈವ ಪುತ್ರೋ ಭಗವಾನೃಚೀಕಸ್ಯ ಮಹಾತ್ಮನಃ।
12201032c ಜಮದಗ್ನಿಶ್ಚ ಸಪ್ತೈತೇ ಉದೀಚೀಂ ದಿಶಮಾಶ್ರಿತಾಃ।।
ಅತ್ರೇಯ, ವಸಿಷ್ಠ, ಮಹಾನೃಷಿ ಕಶ್ಯಪ, ಗೌತಮ, ಭರದ್ವಾಜ, ವಿಶ್ವಾಮಿತ್ರ ಕೌಶಿಕ, ಹಾಗೂ ಭಗವನ್ ಋಚೀಕನ ಪುತ್ರ ಮಹಾತ್ಮ ಜಮದಗ್ನಿ ಈ ಏಳು ಋಷಿಗಳು ಉತ್ತರ ದಿಕ್ಕನ್ನು ಆಶ್ರಯಿಸಿರುತ್ತಾರೆ.
12201033a ಏತೇ ಪ್ರತಿದಿಶಂ ಸರ್ವೇ ಕೀರ್ತಿತಾಸ್ತಿಗ್ಮತೇಜಸಃ।
12201033c ಸಾಕ್ಷಿಭೂತಾ ಮಹಾತ್ಮಾನೋ ಭುವನಾನಾಂ ಪ್ರಭಾವನಾಃ।।
ಪ್ರತಿದಿಕ್ಕಿನಲ್ಲಿರುವ ಇವರೆಲ್ಲರೂ ತಿಗ್ಮತೇಜಸರೆಂದು ಹೇಳಿದ್ದಾರೆ. ಭುವನಗಳನ್ನು ಸೃಷ್ಟಿಸಬಲ್ಲ ಈ ಮಹಾತ್ಮರು ಎಲ್ಲವಕ್ಕೂ ಸಾಕ್ಷೀಭೂತರು.
12201034a ಏವಮೇತೇ ಮಹಾತ್ಮಾನಃ ಸ್ಥಿತಾಃ ಪ್ರತ್ಯೇಕಶೋ ದಿಶಃ।
12201034c ಏತೇಷಾಂ ಕೀರ್ತನಂ ಕೃತ್ವಾ ಸರ್ವಪಾಪೈಃ ಪ್ರಮುಚ್ಯತೇ।।
ಪ್ರತ್ಯೇಕ ದಿಕ್ಕುಗಳಲ್ಲಿರುವ ಈ ಮಹಾತ್ಮರ ಕೀರ್ತನೆಯನ್ನು ಮಾಡಿದರೆ ಸರ್ವಪಾಪಗಳಿಂದಲೂ ಮುಕ್ತನಾಗುತ್ತಾನೆ.
12201035a ಯಸ್ಯಾಂ ಯಸ್ಯಾಂ ದಿಶಿ ಹ್ಯೇತೇ ತಾಂ ದಿಶಂ ಶರಣಂ ಗತಃ।
12201035c ಮುಚ್ಯತೇ ಸರ್ವಪಾಪೇಭ್ಯಃ ಸ್ವಸ್ತಿಮಾಂಶ್ಚ ಗೃಹಾನ್ವ್ರಜೇತ್।।
ಯಾವುದೇ ದಿಕ್ಕಿನಲ್ಲಿ ಪ್ರಯಾಣಿಸುವಾಗ ಆ ದಿಕ್ಕಿನಲ್ಲಿರುವ ಋಷಿಗಳಿಗೆ ಶರಣು ಹೋದರೆ ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ಕುಶಲನಾಗಿಯೇ ಮನೆಗೆ ಹಿಂದಿರುಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ದಿಶಾಸ್ವಸ್ತಿಕಂ ನಾಮ ಏಕಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ದಿಶಾಸ್ವಸ್ತಿಕ ಎನ್ನುವ ಇನ್ನೂರಾಒಂದನೇ ಅಧ್ಯಾಯವು.
-
ಅತ್ರೈಶ್ಚೈವೌರಸಃ ಶ್ರೀಮಾನ್ರಾಜಾ ಸೋಮಶ್ಚ ವೀರ್ಯವಾನ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತೇ ಚ ಪೂರ್ವಂ ಸುರಾಶ್ಚೇತಿ ದ್ವಿವಿಧಾಃ ಪಿತರಃ ಸ್ಮೃತಾಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಧರೋ ಧ್ರುವಶ್ಚ ಸೋಮಶ್ಚ ಅಹಶ್ಚೈವಾನಿಲೋಽನಲಃ। ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋಷ್ಟಾಇತಿಸ್ಮೃತಾಃ।। (ಭಾರತ ದರ್ಶನ). ↩︎
-
ಶೀಲಯೌವನತಸ್ತ್ವನ್ಯಸ್ತಥಾನ್ಯಃ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಉಷಂಗುಃ (ಗೀತಾ ಪ್ರೆಸ್). ↩︎
-
ಚೈವ (ಗೀತಾ ಪ್ರೆಸ್). ↩︎