200: ಸರ್ವಭೂತೋತ್ಪತ್ತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 200

ಸಾರ

ಕೇಶವನಿಂದಲೇ ಆಗಿರುವ ಸಂಪೂರ್ಣ ಸೃಷ್ಟಿಯ ವರ್ಣನೆ ಮತ್ತು ಕೃಷ್ಣನ ಮಹಿಮೆ (1-46).

12200001 ಯುಧಿಷ್ಠಿರ ಉವಾಚ।
12200001a ಪಿತಾಮಹ ಮಹಾಪ್ರಾಜ್ಞ ಪುಂಡರೀಕಾಕ್ಷಮಚ್ಯುತಮ್।
12200001c ಕರ್ತಾರಮಕೃತಂ ವಿಷ್ಣುಂ ಭೂತಾನಾಂ ಪ್ರಭವಾಪ್ಯಯಮ್।।
12200002a ನಾರಾಯಣಂ ಹೃಷೀಕೇಶಂ ಗೋವಿಂದಮಪರಾಜಿತಮ್।
12200002c ತತ್ತ್ವೇನ ಭರತಶ್ರೇಷ್ಠ ಶ್ರೋತುಮಿಚ್ಚಾಮಿ ಕೇಶವಮ್।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಕಮಲದಂತೆ ಕಣ್ಣುಗಳುಳ್ಳ, ತನ್ನ ಸ್ಥಾನದಿಂದ ಯಾವಾಗಲೂ ಚ್ಯುತನಾಗದ, ಎಲ್ಲವನ್ನು ಮಾಡಿಯೂ ಏನೂ ಮಾಡದಂತೆ ಇರುವ, ಸರ್ವತ್ರ ವ್ಯಾಪಕನಾದ, ಇರುವ ಎಲ್ಲವುಗಳ ಉತ್ಪತ್ತಿ-ಲಯಗಳಿಗೆ ಕಾರಣನಾದ, ನರರಿಗೆ ಏಕಮಾತ್ರ ಗತಿಯಾಗಿರುವ, ಜ್ಞಾನೇಂದ್ರಿಯಗಳಿಗೆ ಸ್ವಾಮಿಯಾದ, ಇಂದ್ರನಿಂದ ಗೋವಿಂದನೆಂಬ ಹೆಸರನ್ನು ಪಡೆದಿರುವ, ಸೋಲೆನ್ನುವುದನ್ನೇ ಕಾಣದ, ಕೇಶವನ ನಿಜಸ್ವರೂಪನನ್ನು ಯಥಾರ್ಥವಾಗಿ ಕೇಳಬಯಸುತ್ತೇನೆ.”

12200003 ಭೀಷ್ಮ ಉವಾಚ।
12200003a ಶ್ರುತೋಽಯಮರ್ಥೋ ರಾಮಸ್ಯ ಜಾಮದಗ್ನ್ಯಸ್ಯ ಜಲ್ಪತಃ।
12200003c ನಾರದಸ್ಯ ಚ ದೇವರ್ಷೇಃ ಕೃಷ್ಣದ್ವೈಪಾಯನಸ್ಯ ಚ।।
12200004a ಅಸಿತೋ ದೇವಲಸ್ತಾತ ವಾಲ್ಮೀಕಿಶ್ಚ ಮಹಾತಪಾಃ।
12200004c ಮಾರ್ಕಂಡೇಯಶ್ಚ ಗೋವಿಂದೇ ಕಥಯತ್ಯದ್ಭುತಂ ಮಹತ್।।

ಭೀಷ್ಮನು ಹೇಳಿದನು: “ನಾನು ಈ ವಿಷಯವನ್ನು ಜಮದಗ್ನಿಯ ಮಗ ರಾಮನ ಬಾಯಿಂದಲೂ, ದೇವರ್ಷಿ ನಾರದರಿಂದಲೂ, ಕೃಷ್ಣದ್ವೈಪಾಯನನಿಂದಲೂ ಕೇಳಿದ್ದೇನೆ. ಅಸಿತ, ದೇವಲ, ಮಹಾತಪಸ್ವೀ ವಾಲ್ಮೀಕಿ, ಮಾರ್ಕಂಡೇಯರೂ ಕೂಡ ಗೋವಿಂದನ ಈ ಅದ್ಭುತ ಮಹಾಕಥೆಯನ್ನು ಹೇಳಿದ್ದಾರೆ.

12200005a ಕೇಶವೋ ಭರತಶ್ರೇಷ್ಠ ಭಗವಾನೀಶ್ವರಃ ಪ್ರಭುಃ।
12200005c ಪುರುಷಃ ಸರ್ವಮಿತ್ಯೇವ ಶ್ರೂಯತೇ ಬಹುಧಾ ವಿಭುಃ।।

ಭರತಶ್ರೇಷ್ಠ! ಭಗವಾನ್ ಕೇಶವನು ಈಶ್ವರನು. ಪ್ರಭುವು. ಸರ್ವವ್ಯಾಪಕನಾದ ಅವನೇ ವೇದಪ್ರತಿಪಾದ್ಯ ಪುರುಷನು. ಅವನೇ ಸರ್ವನು. ಪುರುಷ ಏವೇದಗುಂ ಸರ್ವಂ ಮುಂತಾದ ಅನೇಕ ವಾಕ್ಯಗಳನ್ನು ನಾವು ವೇದಗಳಲ್ಲಿ ಕೇಳುತ್ತೇವೆ.

12200006a ಕಿಂ ತು ಯಾನಿ ವಿದುರ್ಲೋಕೇ ಬ್ರಾಹ್ಮಣಾಃ ಶಾರ್ಙ್ಗಧನ್ವನಃ।
12200006c ಮಾಹಾತ್ಮ್ಯಾನಿ ಮಹಾಬಾಹೋ ಶೃಣು ತಾನಿ ಯುಧಿಷ್ಠಿರ।।

ಮಹಾಬಾಹೋ! ಯುಧಿಷ್ಠಿರ! ಲೋಕದಲ್ಲಿ ಬ್ರಾಹ್ಮಣರು ಶಾರ್ಙ್ಗಧನ್ವಿಯ ಯಾವ ಮಾಹಾತ್ಮ್ಯೆಗಳನ್ನು ತಿಳಿದಿರುವರೋ ಅವುಗಳನ್ನು ಕೇಳು.

12200007a ಯಾನಿ ಚಾಹುರ್ಮನುಷ್ಯೇಂದ್ರ ಯೇ ಪುರಾಣವಿದೋ ಜನಾಃ।
12200007c ಅಶೇಷೇಣ ಹಿ ಗೋವಿಂದೇ ಕೀರ್ತಯಿಷ್ಯಾಮಿ ತಾನ್ಯಹಮ್।।

ಮನುಷ್ಯೇಂದ್ರ! ಪುರಾಣಗಳನ್ನು ತಿಳಿದಿರುವ ಜನರು ಗೋವಿಂದನ ಕುರಿತು ಏನನ್ನು ಹೇಳವರೋ ಅದನ್ನು ಸಂಪೂರ್ಣವಾಗಿ ಹೇಳುತ್ತೇನೆ.

12200008a ಮಹಾಭೂತಾನಿ ಭೂತಾತ್ಮಾ ಮಹಾತ್ಮಾ ಪುರುಷೋತ್ತಮಃ।
12200008c ವಾಯುರ್ಜ್ಯೋತಿಸ್ತಥಾ ಚಾಪಃ ಖಂ ಗಾಂ ಚೈವಾನ್ವಕಲ್ಪಯತ್।।

ಭೂತಾತ್ಮಾ ಮಹಾತ್ಮಾ ಪುರುಷೋತ್ತಮನು ವಾಯು, ಜ್ಯೋತಿ, ಆಪ, ಆಕಾಶ ಮತ್ತು ಭೂಮಿಗಳೆಂಬ ಮಹಾಭೂತಗಳನ್ನು ಸೃಷ್ಟಿಸಿದನು.

12200009a ಸ ದೃಷ್ಟ್ವಾ1 ಪೃಥಿವೀಂ ಚೈವ ಸರ್ವಭೂತೇಶ್ವರಃ ಪ್ರಭುಃ।
12200009c ಅಪ್ಸ್ವೇವ ಶಯನಂ ಚಕ್ರೇ ಮಹಾತ್ಮಾ ಪುರುಷೋತ್ತಮಃ।।

ಅ ಸರ್ವಭೂತೇಶ್ವರ ಪ್ರಭು ಮಹಾತ್ಮಾ ಪುರುಷೋತ್ತಮನು ಪೃಥ್ವಿಯನ್ನು ಸೃಷ್ಟಿಸಿ ನೀರನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡನು.

12200010a ಸರ್ವತೇಜೋಮಯಸ್ತಸ್ಮಿನ್ ಶಯಾನಃ ಶಯನೇ ಶುಭೇ।
12200010c ಸೋಽಗ್ರಜಂ ಸರ್ವಭೂತಾನಾಂ ಸಂಕರ್ಷಣಮಚಿಂತಯತ್।।
12200011a ಆಶ್ರಯಂ ಸರ್ವಭೂತಾನಾಂ ಮನಸೇತಿ ವಿಶುಶ್ರುಮ।
12200011c ಸ ಧಾರಯತಿ ಭೂತಾತ್ಮಾ ಉಭೇ ಭೂತಭವಿಷ್ಯತೀ।।

ಆ ಶುಭ ಶಯನದಲ್ಲಿ ಮಲಗಿದ್ದ ಸರ್ವತೇಜೋಮಯನು ಸರ್ವಭೂತಗಳ ಅಗ್ರಜ, ಸರ್ವಭೂತಗಳ ಆಶ್ರಯ ಸಂಕರ್ಷಣನನ್ನು ಮನಸ್ಸಿನಲ್ಲಿಯೇ ಸ್ಮರಿಸಿದನು ಎಂದು ಕೇಳಿದ್ದೇವೆ. ಆ ಭೂತಾತ್ಮನು ಭೂತ-ಭವಿಷ್ಯತ್ತುಗಳನ್ನೂ ಧರಿಸಿರುತ್ತಾನೆ.

12200012a ತತಸ್ತಸ್ಮಿನ್ಮಹಾಬಾಹೋ ಪ್ರಾದುರ್ಭೂತೇ ಮಹಾತ್ಮನಿ।
12200012c ಭಾಸ್ಕರಪ್ರತಿಮಂ ದಿವ್ಯಂ ನಾಭ್ಯಾಂ ಪದ್ಮಮಜಾಯತ।।

ಮಹಾಬಾಹೋ! ಆ ಮಹಾತ್ಮ ಸಂಕರ್ಷಣನ ಪ್ರಾದುರ್ಭಾವವಾಗಲು ಅವನ ನಾಭಿಯಿಂದ ಭಾಸ್ಕರನ ಪ್ರಭೆಯಿದ್ದ ದಿವ್ಯ ಪದ್ಮವು ಹುಟ್ಟಕೊಂಡಿತು.

12200013a ಸ ತತ್ರ ಭಗವಾನ್ದೇವಃ ಪುಷ್ಕರೇ ಭಾಸಯನ್ದಿಶಃ।
12200013c ಬ್ರಹ್ಮಾ ಸಮಭವತ್ತಾತ ಸರ್ವಭೂತಪಿತಾಮಹಃ।।

ಅಯ್ಯಾ! ಆ ಕಮಲದಲ್ಲಿ ಸರ್ವಭೂತಪಿತಾಮಹ ಭಗವಾನ್ ದೇವ ಬ್ರಹ್ಮನು ದಿಕ್ಕುಗಳೆಲ್ಲವನ್ನೂ ಬೆಳಗಿಸುತ್ತಾ ಪ್ರಾದುರ್ಭವಿಸಿದನು.

12200014a ತಸ್ಮಿನ್ನಪಿ ಮಹಾಬಾಹೋ ಪ್ರಾದುರ್ಭೂತೇ ಮಹಾತ್ಮನಿ।
12200014c ತಮಸಃ ಪೂರ್ವಜೋ ಜಜ್ಞೇ ಮಧುರ್ನಾಮ ಮಹಾಸುರಃ।।

ಮಹಾಬಾಹೋ! ಅದರಲ್ಲಿ ಆ ಮಹಾತ್ಮನ ಪ್ರಾದುರ್ಭಾವಾಗಲು ತಮಸ್ಸಿನಿಂದ ಅಸುರರ ಪೂರ್ವಜ ಮಧು ಎಂಬ ಹೆಸರಿನ ಮಹಾಸುರನು ಹುಟ್ಟಿಕೊಂಡನು.

12200015a ತಮುಗ್ರಮುಗ್ರಕರ್ಮಾಣಮುಗ್ರಾಂ ಬುದ್ಧಿಂ ಸಮಾಸ್ಥಿತಮ್।
12200015c ಬ್ರಹ್ಮಣೋಪಚಿತಿಂ ಕುರ್ವನ್ ಜಘಾನ ಪುರುಷೋತ್ತಮಃ।।

ಆ ಉಗ್ರಕರ್ಮಿ ಉಗ್ರಬುದ್ಧಿಯ ಮಧುವನ್ನು ಪುರುಷೋತ್ತಮನು ಕೊಂದು ಬ್ರಹ್ಮನಿಗೆ ಹಿತವನ್ನುಂಟುಮಾಡಿದನು.

12200016a ತಸ್ಯ ತಾತ ವಧಾತ್ಸರ್ವೇ ದೇವದಾನವಮಾನವಾಃ।
12200016c ಮಧುಸೂದನಮಿತ್ಯಾಹುರ್ವೃಷಭಂ ಸರ್ವಸಾತ್ವತಾಮ್।।

ಅಯ್ಯಾ! ಅವನ ವಧೆಯಿಂದಾಗಿ ಸರ್ವಸಾತ್ವತರ ವೃಷಭನನ್ನು ದೇವ-ದಾನವ-ಮಾನವರೆಲ್ಲರೂ ಮಧುಸೂದನ ಎಂದು ಕರೆಯುತ್ತಾರೆ.

12200017a ಬ್ರಹ್ಮಾ ತು ಸಸೃಜೇ ಪುತ್ರಾನ್ಮಾನಸಾನ್ದಕ್ಷಸಪ್ತಮಾನ್।
12200017c ಮರೀಚಿಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್।।

ಬ್ರಹ್ಮನಾದರೋ ದಕ್ಷನೇ ಮೊದಲಾದ ಏಳು ಪುತ್ರರನ್ನು ಮನಸ್ಸಿನಿಂದಲೇ ಸೃಷ್ಟಿಸಿದನು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ ಮತ್ತು ಕ್ರತು.

12200018a ಮರೀಚಿಃ ಕಶ್ಯಪಂ ತಾತ ಪುತ್ರಂ ಚಾಸೃಜದಗ್ರಜಮ್।
12200018c ಮಾನಸಂ ಜನಯಾಮಾಸ ತೈಜಸಂ ಬ್ರಹ್ಮಸತ್ತಮಮ್।।

ಅಯ್ಯಾ! ಮರೀಚಿಯು ತನ್ನ ಹಿರಿಯ ಪುತ್ರ ಬ್ರಹ್ಮಸತ್ತಮ ಕಶ್ಯಪನನ್ನು ತೇಜಸ್ಸಿನಿಂದ ಸಂಕಲ್ಪಮಾತ್ರದಿಂದಲೇ ಹುಟ್ಟಿಸಿದನು.

12200019a ಅಂಗುಷ್ಠಾದಸೃಜದ್ಬ್ರಹ್ಮಾ ಮರೀಚೇರಪಿ ಪೂರ್ವಜಮ್।
12200019c ಸೋಽಭವದ್ಭರತಶ್ರೇಷ್ಠ ದಕ್ಷೋ ನಾಮ ಪ್ರಜಾಪತಿಃ।।

ಮರೀಚಿಗಿಂತಲೂ ಮೊದಲು ಬ್ರಹ್ಮನು ಅವನ ಅಣ್ಣನನ್ನು ತನ್ನ ಅಂಗುಷ್ಠದಿಂದ ಸೃಷ್ಟಿಸಿದ್ದನು. ಭರತಶ್ರೇಷ್ಠ! ಅವನು ದಕ್ಷ ಎಂಬ ಹೆಸರಿನ ಪ್ರಜಾಪತಿಯಾದನು.

12200020a ತಸ್ಯ ಪೂರ್ವಮಜಾಯಂತ ದಶ ತಿಸ್ರಶ್ಚ ಭಾರತ।
12200020c ಪ್ರಜಾಪತೇರ್ದುಹಿತರಸ್ತಾಸಾಂ ಜ್ಯೇಷ್ಠಾಭವದ್ದಿತಿಃ।।

ಭಾರತ! ಪ್ರಜಾಪತಿ ದಕ್ಷನಿಗೆ ಮೊದಲು ಹದಿಮೂರು ಕನ್ಯೆಯರು ಜನಿಸಿದರು. ಅವರಲ್ಲಿ ದಿತಿಯೇ ಹಿರಿಯವಳಾಗಿದ್ದಳು.

12200021a ಸರ್ವಧರ್ಮವಿಶೇಷಜ್ಞಃ ಪುಣ್ಯಕೀರ್ತಿರ್ಮಹಾಯಶಾಃ।
12200021c ಮಾರೀಚಃ ಕಶ್ಯಪಸ್ತಾತ ಸರ್ವಾಸಾಮಭವತ್ಪತಿಃ।।

ಅಯ್ಯಾ! ಸರ್ವಧರ್ಮವಿಶೇಷಗಳನ್ನು ತಿಳಿದಿದ್ದ, ಪುಣ್ಯಕೀರ್ತಿ, ಮಹಾಯಶಸ್ವೀ, ಮರೀಚಿಯ ಮಗ ಕಶ್ಯಪನು ಅವರೆಲ್ಲರಿಗೆ ಪತಿಯಾದನು.

12200022a ಉತ್ಪಾದ್ಯ ತು ಮಹಾಭಾಗಸ್ತಾಸಾಮವರಜಾ ದಶ।
12200022c ದದೌ ಧರ್ಮಾಯ ಧರ್ಮಜ್ಞೋ ದಕ್ಷ ಏವ ಪ್ರಜಾಪತಿಃ।।

ಅನಂತರ ಮಹಾಭಾಗ ಪ್ರಜಾಪತಿ ದಕ್ಷನು ಅವರಿಗಿಂತಲೂ ಕಿರಿಯರಾದ ಹತ್ತು ಕನ್ಯೆಯರನ್ನು ಹುಟ್ಟಿಸಿ ಅವರನ್ನು ಧರ್ಮಜ್ಞ ಧರ್ಮನಿಗೆ ಕೊಟ್ಟನು.

12200023a ಧರ್ಮಸ್ಯ ವಸವಃ ಪುತ್ರಾ ರುದ್ರಾಶ್ಚಾಮಿತತೇಜಸಃ।
12200023c ವಿಶ್ವೇದೇವಾಶ್ಚ ಸಾಧ್ಯಾಶ್ಚ ಮರುತ್ವಂತಶ್ಚ ಭಾರತ।।

ಭಾರತ! ಧರ್ಮನಿಗೆ ವಸುಗಳು, ಅಮಿತತೇಜಸ್ವೀ ರುದ್ರರು, ವಿಶ್ವೇದೇವರು, ಸಾಧ್ಯರು ಮತ್ತು ಮರುತ್ತರು ಪುತ್ರರಾದರು.

12200024a ಅಪರಾಸ್ತು ಯವೀಯಸ್ಯಸ್ತಾಭ್ಯೋಽನ್ಯಾಃ ಸಪ್ತವಿಂಶತಿಃ।
12200024c ಸೋಮಸ್ತಾಸಾಂ ಮಹಾಭಾಗಃ ಸರ್ವಾಸಾಮಭವತ್ಪತಿಃ।।

ಅವರಿಗೂ ಕಿರಿಯರಾದ ಇಪ್ಪತ್ತೇಳು ಅನ್ಯ ಕನ್ಯೆಯರನ್ನು ದಕ್ಷನು ಪಡೆದುಕೊಂಡನು. ಮಹಾಭಾಗ ಸೋಮನು ಅವರೆಲ್ಲರಿಗೂ ಪತಿಯಾದನು.

12200025a ಇತರಾಸ್ತು ವ್ಯಜಾಯಂತ ಗಂಧರ್ವಾಂಸ್ತುರಗಾನ್ದ್ವಿಜಾನ್।
12200025c ಗಾಶ್ಚ ಕಿಂಪುರುಷಾನ್ಮತ್ಸ್ಯಾನೌದ್ಭಿದಾಂಶ್ಚ ವನಸ್ಪತೀನ್।।

ಕಶ್ಯಪನ ಪತ್ನಿಯರು ಗಂಧರ್ವರು, ತುರಗರು, ಆನೆಗಳು, ಗೋವುಗಳು, ಕಿಂಪುರುಷರು, ಮೀನುಗಳು ಮತ್ತು ಔಷಧಿ-ವನಸ್ಪತಿಗಳಿಗೂ ಜನ್ಮವಿತ್ತರು.

12200026a ಆದಿತ್ಯಾನದಿತಿರ್ಜಜ್ಞೇ ದೇವಶ್ರೇಷ್ಠಾನ್ಮಹಾಬಲಾನ್।
12200026c ತೇಷಾಂ ವಿಷ್ಣುರ್ವಾಮನೋಽಭೂದ್ಗೋವಿಂದಶ್ಚಾಭವತ್ಪ್ರಭುಃ।।

ಅದಿತಿಯು ದೇವಶ್ರೇಷ್ಠ ಮಹಾಬಲ ಆದಿತ್ಯರನ್ನು ಹುಟ್ಟಿಸಿದಳು. ಅವಳಲ್ಲಿಯೇ ಗೋವಿಂದ ಪ್ರಭು ವಿಷ್ಣುವು ವಾಮನನಾಗಿ ಹುಟ್ಟಿದನು.

12200027a ತಸ್ಯ ವಿಕ್ರಮಣಾದೇವ ದೇವಾನಾಂ ಶ್ರೀರ್ವ್ಯವರ್ಧತ।
12200027c ದಾನವಾಶ್ಚ ಪರಾಭೂತಾ ದೈತೇಯೀ ಚಾಸುರೀ ಪ್ರಜಾ।।

ಅವನ ವಿಕ್ರಮದಿಂದಲೇ ದೇವತೆಗಳ ಶ್ರೀಯು ವೃದ್ಧಿಸಿದಳು. ದಾನವರು ಮತ್ತು ದೈತ್ಯ-ಅಸುರ ಪ್ರಜೆಗಳು ಸೋತರು.

12200028a ವಿಪ್ರಚಿತ್ತಿಪ್ರಧಾನಾಂಶ್ಚ ದಾನವಾನಸೃಜದ್ದನುಃ।
12200028c ದಿತಿಸ್ತು ಸರ್ವಾನಸುರಾನ್ಮಹಾಸತ್ತ್ವಾನ್ವ್ಯಜಾಯತ।।

ಕಶ್ಯಪನ ಪತ್ನಿ ದನುವು ವಿಪ್ರಚಿತ್ತಿಯೇ ಮೊದಲಾದ ದಾನವರನ್ನು ಹುಟ್ಟಸಿದಳು. ಕಶ್ಯಪನ ಪತ್ನಿ ದಿತಿಯು ಮಹಾಸತ್ತ್ವಯುಕ್ತರಾದ ಮಹಾಸುರರೆಲ್ಲರನ್ನೂ ಹುಟ್ಟಿಸಿದಳು.

12200029a ಅಹೋರಾತ್ರಂ ಚ ಕಾಲಂ ಚ ಯಥರ್ತು ಮಧುಸೂದನಃ।
12200029c ಪೂರ್ವಾಹ್ಣಂ ಚಾಪರಾಹ್ಣಂ ಚ ಸರ್ವಮೇವಾನ್ವಕಲ್ಪಯತ್।।

ಮಧುಸೂದನನು ಹಗಲು-ರಾತ್ರಿಗಳನ್ನೂ, ಋತುಕಾಲಗಳನ್ನೂ, ಪೂರ್ವಾಹ್ಣ-ಅಪರಾಹ್ಣಗಳೆಲ್ಲವನ್ನೂ ಸೃಷ್ಟಿಸಿದನು.

12200030a ಬುದ್ದ್ಯಾಪಃ2 ಸೋಽಸೃಜನ್ಮೇಘಾಂಸ್ತಥಾ ಸ್ಥಾವರಜಂಗಮಾನ್।
12200030c ಪೃಥಿವೀಂ ಸೋಽಸೃಜದ್ವಿಶ್ವಾಂ ಸಹಿತಾಂ ಭೂರಿತೇಜಸಾ।।

ಅನಂತರ ಆ ಭೂರಿತೇಜಸನು ಬುದ್ಧಿಯಿಂದ ನೀರನ್ನು ಸೃಷ್ಟಿಸಿದನು. ಹಾಗೆಯೇ ಮೇಘಗಳು ಮತ್ತು ಸ್ಥಾವರಜಂಗಮಗಳನ್ನು ಸೃಷ್ಟಿಸಿದನು. ಭೂಮಿಯೊಂದಿಗೆ ವಿಶ್ವವನ್ನು ಸೃಷ್ಟಿಸಿದನು.

12200031a ತತಃ ಕೃಷ್ಣೋ ಮಹಾಬಾಹುಃ ಪುನರೇವ ಯುಧಿಷ್ಠಿರ।
12200031c ಬ್ರಾಹ್ಮಣಾನಾಂ ಶತಂ ಶ್ರೇಷ್ಠಂ ಮುಖಾದಸೃಜತ ಪ್ರಭುಃ।।

ಯುಧಿಷ್ಠಿರ! ಅನಂತರ ಮಹಾಬಾಹು ಪ್ರಭೂ ಕೃಷ್ಣನು ತನ್ನ ಮುಖದಿಂದ ನೂರು ಶ್ರೇಷ್ಠ ಬ್ರಾಹ್ಮಣರನ್ನು ಸೃಷ್ಟಿಸಿದನು.

12200032a ಬಾಹುಭ್ಯಾಂ ಕ್ಷತ್ರಿಯಶತಂ ವೈಶ್ಯಾನಾಮೂರುತಃ ಶತಮ್।
12200032c ಪದ್ಭ್ಯಾಂ ಶೂದ್ರಶತಂ ಚೈವ ಕೇಶವೋ ಭರತರ್ಷಭ।।

ಭರತರ್ಷಭ! ಕೇಶವನು ತನ್ನ ಬಾಹುಗಳಿಂದ ನೂರು ಕ್ಷತ್ರಿಯರನ್ನೂ, ತೊಡೆಯಿಂದ ನೂರು ವೈಶ್ಯರನ್ನೂ, ಮತ್ತು ಪಾದಗಳಿಂದ ನೂರು ಶೂದ್ರರನ್ನೂ ಸೃಷ್ಟಿಸಿದನು.

12200033a ಸ ಏವಂ ಚತುರೋ ವರ್ಣಾನ್ಸಮುತ್ಪಾದ್ಯ ಮಹಾಯಶಾಃ।
12200033c ಅಧ್ಯಕ್ಷಂ ಸರ್ವಭೂತಾನಾಂ ಧಾತಾರಮಕರೋತ್ ಪ್ರಭುಃ।।

ಹೀಗೆ ನಾಲ್ಕು ವರ್ಣದವರನ್ನೂ ಉತ್ಪತ್ತಿಮಾಡಿ ಮಹಾಯಶಸ್ವೀ ಪ್ರಭುವು ಧಾತಾರನನ್ನು ಸರ್ವಭೂತಗಳಿಗೂ ಅಧ್ಯಕ್ಷನನ್ನಾಗಿ ಮಾಡಿದನು.

312200034a ಯಾವದ್ಯಾವದಭೂಚ್ಚ್ರದ್ಧಾ ದೇಹಂ ಧಾರಯಿತುಂ ನೃಣಾಮ್। 12200034c ತಾವತ್ತಾವದಜೀವಂಸ್ತೇ ನಾಸೀದ್ಯಮಕೃತಂ ಭಯಮ್।।

ಆಗ ಮನುಷ್ಯರು ಎಲ್ಲಿಯ ವರೆಗೆ ದೇಹಧಾರಣೆಮಾಡಿಕೊಂಡಿರಲು ಬಯಸುತ್ತಿದ್ದರೋ ಅಲ್ಲಿಯವರೆಗೆ ಜೀವಿಸುತ್ತಿದ್ದರು. ಅವರಿಗೆ ಯಮನ ಭಯವೇ ಇರಲಿಲ್ಲ.

12200035a ನ ಚೈಷಾಂ ಮೈಥುನೋ ಧರ್ಮೋ ಬಭೂವ ಭರತರ್ಷಭ।
12200035c ಸಂಕಲ್ಪಾದೇವ ಚೈತೇಷಾಮಪತ್ಯಮುದಪದ್ಯತ।।

ಭರತರ್ಷಭ! ಆಗ ಮೈಥುನ ಧರ್ಮವೇ ಇರಲಿಲ್ಲ. ಸಂಕಲ್ಪಮಾತ್ರದಿಂದಲೇ ಅವರಿಗೆ ಸಂತಾನೋತ್ಪತ್ತಿಯಾಗುತ್ತಿತ್ತು.

12200036a ತತ್ರ ತ್ರೇತಾಯುಗೇ ಕಾಲೇ ಸಂಕಲ್ಪಾಜ್ಜಾಯತೇ4 ಪ್ರಜಾ।
12200036c ನ ಹ್ಯಭೂನ್ಮೈಥುನೋ ಧರ್ಮಸ್ತೇಷಾಮಪಿ ಜನಾಧಿಪ।।

ನಂತರ ತ್ರೇತಾಯುಗದ ಕಾಲದಲ್ಲಿ ಸ್ಪರ್ಶಮಾತ್ರದಿಂದ ಮಕ್ಕಳು ಹುಟ್ಟುತ್ತಿದ್ದರು. ಜನಾಧಿಪ! ಆಗಿನ ಕಾಲದವರಲ್ಲಿಯೂ ಮೈಥುನ ಧರ್ಮವು ಇರಲಿಲ್ಲ.

12200037a ದ್ವಾಪರೇ ಮೈಥುನೋ ಧರ್ಮಃ ಪ್ರಜಾನಾಮಭವನ್ನೃಪ।
12200037c ತಥಾ ಕಲಿಯುಗೇ ರಾಜನ್ದ್ವಂದ್ವಮಾಪೇದಿರೇ ಜನಾಃ।।

ರಾಜನ್! ದ್ವಾಪರದಲ್ಲಿ ಮೈಥುನದಿಂದ ಮಕ್ಕಳು ಹುಟ್ಟಿದರು. ಹಾಗೆಯೇ ಕಲಿಯುಗದಲ್ಲಿ ಜನರು ಸಂತಾನೋತ್ಪತ್ತಿಗೆ ಮೈಥುನವನ್ನೇ ಆಶ್ರಯಿಸುತ್ತಾರೆ.

12200038a ಏಷ ಭೂತಪತಿಸ್ತಾತ ಸ್ವಧ್ಯಕ್ಷಶ್ಚ ಪ್ರಕೀರ್ತಿತಃ।
12200038c ನಿರಧ್ಯಕ್ಷಾಂಸ್ತು5 ಕೌಂತೇಯ ಕೀರ್ತಯಿಷ್ಯಾಮಿ ತಾನಪಿ।।

ಕೌಂತೇಯ! ಅಯ್ಯಾ! ಈ ಕೃಷ್ಣನೇ ಭೂತಪತಿಯೆಂದೂ ಅಧ್ಯಕ್ಷನೆಂದೂ ಹೇಳುತ್ತಾರೆ. ಈಗ ನಾನು ನಿರಧ್ಯಕ್ಷರ ಕುರಿತೂ ಹೇಳುತ್ತೇನೆ.

12200039a ದಕ್ಷಿಣಾಪಥಜನ್ಮಾನಃ ಸರ್ವೇ ತಲವರಾಂಧ್ರಕಾಃ6
12200039c ಉತ್ಸಾಃ7 ಪುಲಿಂದಾಃ ಶಬರಾಶ್ಚೂಚುಪಾ ಮಂಡಪೈಃ ಸಹ8।।

ದಕ್ಷಿಣಾಪಥದಲ್ಲಿರುವ ಎಲ್ಲ ತಲವರು, ಆಂಧ್ರಕರು, ಉತ್ಸರು, ಪುಲಿಂದರು, ಶಬರರು, ಚೂಚುಪರು ಮತ್ತು ಮಂಡಪರು ನಿರಧ್ಯಕ್ಷರು.

12200040a ಉತ್ತರಾಪಥಜನ್ಮಾನಃ ಕೀರ್ತಯಿಷ್ಯಾಮಿ ತಾನಪಿ।
12200040c ಯೌನಕಾಂಬೋಜಗಾಂಧಾರಾಃ ಕಿರಾತಾ ಬರ್ಬರೈಃ ಸಹ।।

ಉತ್ತರಾಪಥದಲ್ಲಿ ಹುಟ್ಟಿದ ನಿರಧ್ಯಕ್ಷರ ಕುರಿತು ಹೇಳುತ್ತೇನೆ. ಯೌನರು, ಕಾಂಬೋಜರು, ಗಾಂಧಾರರು, ಕಿರಾತರು ಮತ್ತು ಬರ್ಬರರು.

12200041a ಏತೇ ಪಾಪಕೃತಸ್ತಾತ ಚರಂತಿ ಪೃಥಿವೀಮಿಮಾಮ್।
12200041c ಶ್ವಕಾಕಬಲಗೃಧ್ರಾಣಾಂ ಸಧರ್ಮಾಣೋ ನರಾಧಿಪ।।

ಅಯ್ಯಾ! ನರಾಧಿಪ! ಈ ಪಾಪಕೃತರು ಭೂಮಿಯಲ್ಲಿ ಸಂಚರಿಸುತ್ತಾರೆ. ಇವರು ನಾಯಿಯ ಮಾಂಸವನ್ನು ತಿನ್ನುತ್ತಾರೆ. ಕಾಗೆ-ಹದ್ದುಗಳ ಧರ್ಮವನ್ನು ಆಚರಿಸುತ್ತಾರೆ.

12200042a ನೈತೇ ಕೃತಯುಗೇ ತಾತ ಚರಂತಿ ಪೃಥಿವೀಮಿಮಾಮ್।
12200042c ತ್ರೇತಾಪ್ರಭೃತಿ ವರ್ತಂತೇ9 ತೇ ಜನಾ ಭರತರ್ಷಭ।।

ಅಯ್ಯಾ! ಭರತರ್ಷಭ! ಕೃತಯುಗದಲ್ಲಿ ಇವರು ಭೂಮಿಯಲ್ಲಿ ಸಂಚರಿಸುತ್ತಿರುವುದಿಲ್ಲ. ತ್ರೇತಾಯುಗದಿಂದ ಈ ಜನರ ವೃದ್ಧಿಯಾಗುತ್ತದೆ.

12200043a ತತಸ್ತಸ್ಮಿನ್ಮಹಾಘೋರೇ ಸಂಧ್ಯಾಕಾಲೇ ಯುಗಾಂತಿಕೇ।
12200043c ರಾಜಾನಃ ಸಮಸಜ್ಜಂತ ಸಮಾಸಾದ್ಯೇತರೇತರಮ್।।

ಆ ಯುಗಾಂತಿಕ ಮಹಾಘೋರ ಸಂಧ್ಯಾಕಾಲದಲ್ಲಿ ಇತರೇತರರೊಡನೆ ಯುದ್ಧಮಾಡಲು ರಾಜರು ಸಜ್ಜಾಗುತ್ತಾರೆ.

12200044a ಏವಮೇಷ ಕುರುಶ್ರೇಷ್ಠ ಪ್ರಾದುರ್ಭಾವೋ ಮಹಾತ್ಮನಃ।
1012200044c ದೇವಂ ದೇವರ್ಷಿರಾಚಷ್ಟ ನಾರದಃ ಸರ್ವಲೋಕದೃಕ್।।

ಕುರುಶ್ರೇಷ್ಠ! ಹೀಗೆ ಎಲ್ಲವೂ ಮಹಾತ್ಮ ಕೇಶವನಿಂದ ಹುಟ್ಟಿಕೊಂಡಿತು. ಸರ್ವಲೋಕಗಳನ್ನೂ ನೋಡಬಲ್ಲ ದೇವರ್ಷಿ ನಾರದನು ಈ ದೇವನ ಕುರಿತು ಹೇಳಿದನು.

12200045a ನಾರದೋಽಪ್ಯಥ ಕೃಷ್ಣಸ್ಯ ಪರಂ ಮೇನೇ ನರಾಧಿಪ।
12200045c ಶಾಶ್ವತತ್ವಂ ಮಹಾಬಾಹೋ ಯಥಾವದ್ಭರತರ್ಷಭ।।

ನರಾಧಿಪ! ಮಹಾಬಾಹೋ! ಭರತರ್ಷಭ! ನಾರದನಾದರೋ ಕೃಷ್ಣನನ್ನು ಪರಮಾತ್ಮನೆಂದೂ ಶಾಶ್ವತನೆಂದೂ ತಿಳಿದಿದ್ದಾನೆ.

12200046a ಏವಮೇಷ ಮಹಾಬಾಹುಃ ಕೇಶವಃ ಸತ್ಯವಿಕ್ರಮಃ।
12200046c ಅಚಿಂತ್ಯಃ ಪುಂಡರೀಕಾಕ್ಷೋ ನೈಷ ಕೇವಲಮಾನುಷಃ।।

ಮಹಾಬಾಹು ಸತ್ಯವಿಕ್ರಮಿ ಕೇಶವನು ಹೀಗೆ ಅಚಿಂತ್ಯ ಪುಂಡರೀಕಾಕ್ಷನು. ಇವನು ಕೇವಲ ಮನುಷ್ಯನಲ್ಲ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸರ್ವಭೂತೋತ್ಪತ್ತಿಕಥನೇ ದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸರ್ವಭೂತೋತ್ಪತ್ತಿಕಥನ ಎನ್ನುವ ಇನ್ನೂರನೇ ಅಧ್ಯಾಯವು.

  1. 205 ಸೃಷ್ಟ್ವಾ (ಗೀತಾ ಪ್ರೆಸ್). ↩︎

  2. ಪ್ರಧ್ಯಾಯ (ಗೀತಾ ಪ್ರೆಸ್). ↩︎

  3. ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ವೇದವಿದ್ಯಾವಿಧಾತಾರಂ ಬ್ರಹ್ಮಣಾಮಮಿತದ್ಯುತಿಮ್। ಭೂತಮಾತೃಗಣಾಧ್ಯಕ್ಷಂ ವಿರೂಪಾಕ್ಷಂ ಚ ಸೋಽಸೃಜತ್।। ಶಾಸಿತಾರಂ ಚ ಪಾಪಾನಾಂ ಪಿತೄಣಾಂ ಸಮವರ್ತಿನಮ್। ಅಸಜತ್ಸರ್ವಭೂತಾತ್ಮಾ ನಿಧಿಪಂ ಚ ಧನೇಶ್ವರಮ್।। ಯಾದಸಾಮಸೃಜನ್ನಾಥಂ ವರುಣಂ ಚ ಜಲೇಶ್ವರಮ್। ವಾಸವಂ ಸರ್ವದೇವಾನಾಮಧ್ಯಕ್ಷಮಕರೋತ್ಪ್ರಭುಃ।। (ಗೀತಾ ಪ್ರೆಸ್). ↩︎

  4. ಸಂಸ್ಪರ್ಶಾಜ್ಜಾಯತೇ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ನಿರಪೇಕ್ಷಾಂಶ್ಚ (ಭಾರತ ದರ್ಶನ/ಗೀತಾ ಪ್ರೆಸ್). ↩︎

  6. ನರವರಾಂಧ್ರಕಾಃ (ಭಾರತ ದರ್ಶನ/ಗೀತಾ ಪ್ರೆಸ್). ↩︎

  7. ಗುಹಾಃ (ಭಾರತ ದರ್ಶನ/ಗೀತಾ ಪ್ರೆಸ್). ↩︎

  8. ಶಬರಾಶ್ಚೂಚುಕಾ ಮದ್ರಕೈಃ ಸಹ।। (ಭಾರತ ದರ್ಶನ/ಗೀತಾ ಪ್ರೆಸ್). ↩︎

  9. ವರ್ಧಂತೇ (ಗೀತಾ ಪ್ರೆಸ್). ↩︎

  10. ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಪಃಸ್ವರೂಪೋ ಮಹಾದೇವಃ ಕೃಷ್ಣೋ ದೇವಕಿನಂದನಃ। ತಸ್ಯ ಪ್ರಸಾದಾದ್ದುಃಖಸ್ಯ ನಾಶಂ ಪ್ರಾಪ್ಸ್ಯಸಿ ಮಾನದ।। ಏಕಃ ಕರ್ತಾ ಸ ಕೃಷ್ಣಶ್ಚ ಜ್ಞಾನಿನಾಂ ಪರಮಾ ಗತಿಃ। ಇದಮಾಶ್ರಿತ್ಯ ದೇವೇಂದ್ರೋ ದೇವಾ ರುದ್ರಾಸ್ತಥಾಶ್ವಿನೌ। ಸ್ವೇ ಸ್ವೇ ಪದೇ ವಿವಿಶಿರೇ ಭುಕ್ತಿಮುಕ್ತಿವಿದೋ ಜನಾಃ।। ಶ್ರೂಯತಾಮಸ್ಯ ಸದ್ಭಾವಃ ಸಮ್ಯಗ್ಜ್ಞಾನಂ ಯಥಾ ತವ। ಭೂತಾನಾಮಂತರಾತ್ಮಾಸೌ ಸ ನಿತ್ಯಪದಸಂವೃತಃ।। ಪುರಾ ದೇವರೃಷಿಃ ಶ್ರೀಮಾನ್ನಾರದಃ ಪರಮಾರ್ಥವಾನ್। ಚಚಾರ ಪೃಥಿವೀಂ ಕೃತ್ಸಾಂ ತೀರ್ಥಾನ್ಯನುಚರನ್ ಪ್ರಭುಃ।। ಹಿಮವತ್ಪಾದಮಾಶ್ರಿತ್ಯ ವಿಚಾರ್ಯ ಚ ಪುನಃ ಪುನಃ। ಸ ದದರ್ಶ ಹೃದಂ ತತ್ರ ಪದ್ಮೋತ್ಪಲಸಮಾಕುಲಮ್।। ತತಃ ಸ್ನಾತ್ವಾ ಮಹಾತೇಜಾ ವಾಗ್ಯತೋ ನಿಯತೇಂದ್ರಿಯಃ। ತುಷ್ಟಾವ ಪುರುಷವ್ಯಾಘ್ರೋ ಜಿಜ್ಞಾಸುಶ್ಚ ತದದ್ಭುತಮ್।। ತತೋ ವರ್ಷಶತೇ ಪೂರ್ಣೇ ಭಗವಾನ್ಲೋಕಭಾವನಃ। ಪ್ರಾದುಶ್ಚಕಾರ ವಿಶ್ವಾತ್ಮಾ ಋಷೇಃ ಪರಮಸೌಹೃದಾತ್।। ತಮಾಗತಂ ಜಗನ್ನಾಥಂ ಸರ್ವಕಾರಣಕಾರಣಮ್। ಅಖಿಲಾಮರಮೌಲ್ಯಂಗರುಕ್ಮಾರುಣಪದದ್ವಯಮ್।। ವೈನತೇಯಪದಸ್ಪರ್ಶಕಿಣಶೋಭಿತಜಾನುಕಮ್। ಪೀತಾಂಬರಲಸತ್ಕಾಂಚೀದಾಮಬದ್ಧಕಟಿತಟಮ್।। ಶ್ರೀವತ್ಸವಕ್ಷಸಂ ಚಾರುಮಣಿಕೌಸ್ತುಭಕಂಧರಮ್। ಮಂದಸ್ಮಿತಮುಖಾಂಭೋಜಂ ಜಲದಾಯತಲೋಚನಮ್।। ನಮ್ರಚಾಪಾನುಕರಣನಮ್ರಭ್ರೂಯುಗಶೋಭಿತಮ್। ನಾನಾರತ್ನಮಣಿವಜ್ರಸ್ಪುರನ್ಮಕರಕುಂಡಲಮ್।। ಇಂದ್ರನೀಲನಿಭಾಭಂ ತಂ ಕೇಯೂರಮುಕುಟೋಜ್ಜ್ವಲಮ್। ದೇವೈರಿಂದ್ರಪುರೋಗೈಶ್ಚ ಋಷಿಸಂಘೈರಭಷ್ಟುತಮ್।। ನಾರದೋ ಜಯಶಬ್ದೇನ ವವಂದೇ ಶಿರಸಾ ಹರಿಮ್। ತತಃ ಸ ಭಗವಾನ್ ಶ್ರೀಮಾನ್ಮೇಘಗಂಭೀರಯಾ ಗಿರಃ।। ಪ್ರಾಹೇಶಃ ಸರ್ವಭೂತನಾಂ ನಾರದಂ ಪತಿತಂ ಕ್ಷಿತೌ। ಶ್ರೀ ಭಗವಾನುವಾಚ। ಭದ್ರಮಸ್ತು ಋಷೇ ತುಭ್ಯಂ ವರಂ ವರಯ ಸುವ್ರತ। ಯತ್ತೇ ಮನಸಿ ಸುವ್ಯಕ್ತಮಸ್ತಿ ಚ ಪ್ರದದಮ ತತ್।। ಭೀಷ್ಮ ಉವಾಚ। ಸ ಚೇಮಂ ಜಯಶಬ್ದೇನ ಪ್ರಸೀದೇತ್ಯಾತುರೋ ಮುನಿಃ। ಪ್ರೋವಾಚ ಹೃದಿ ಸಂರೂಢಂ ಶಂಖಚಕ್ರಗಧಾಧರಮ್।। ವಿವಕ್ಷಿತಂ ಜಗನ್ನಾಥ ಮಯಾ ಜ್ಞಾತಂ ತ್ವಯಾಚ್ಯುತ। ತತ್ಪ್ರಸೀದ ಹೃಷೀಕೇಶ ಶ್ರೋತುಮಿಚ್ಛಾಮಿ ತದ್ಧರೇ।। ತತಃ ಸ್ಮಯನ್ ಮಹಾವಿಷ್ಣುರಭ್ಯಭಾಷತ ನಾರದಮ್। ನಿರ್ದ್ವಂದ್ವಾ ನಿರಹಂಕಾರಾಃ ಶುಚಯಃ ಶುದ್ಧಲೋಚನಾಃ।। ತೇ ಮಾಂ ಪಶ್ಯಂತಿ ಸತತಂ ತಾನ್ ಪೃಚ್ಛ ಯದಿಹೇಚ್ಛಸಿ। ಯೋ ಯೋಗಿನೋ ಮಹಾಪ್ರಾಜ್ಞಾ ಮದಂಶಾ ಯೇ ವ್ಯವಸ್ಥಿತಾಃ। ತೇಷಾಂ ಪ್ರಸಾದಂ ದೇವರ್ಷೇ ಮತ್ಪ್ರಸಾದಮವೈಹಿ ತತ್।। ಇತ್ಯುಕ್ತ್ವಾ ಸ ಜಗಾಮಾಥ ಭಗವಾನ್ ಭೂತಭಾವನಃ। ತಸ್ಮಾದ್ ವ್ರಜ ಹೃಷೀಕೇಶಂ ಕೃಷ್ಣಂ ದೇವಕಿನಂದನಮ್।। ಏತಮಾರಾಧ್ಯ ಗೋವಿಂದಂ ಗತಾ ಮುಕ್ತಿಂ ಮಹರ್ಷಯಃ। ಏಷ ಕರ್ತಾ ವಿಕರ್ತಾ ಚ ಸರ್ವಕಾರಣಕಾರಣಮ್।। ಮಯಾಪ್ಯೇತಚ್ಛೃತಂ ರಾಜನ್ ನಾರದಾತ್ತು ನಿಬೋಧ ತತ್। ಸ್ವಯಮೇವ ಸಮಾಚಷ್ಟ ನಾರದೋ ಭಗವಾನ್ಮುನಿಃ।। ಸಮಸ್ತಸಂಸಾರವಿಘಾತಕಾರಣಮ್। ಭಜಂತಿ ಯೇ ವಿಷ್ಣುಮನ್ಯಮಾನಸಾಃ। ತೇ ಯಾಂತಿ ಸಾಯುಜ್ಯಮತೀವ ದುರ್ಲಭಮ್ ಇತೀವ ನಿತ್ಯಂ ಹೃದಿ ವರ್ಣಯಂತಿ।। (ದಕ್ಷಿಣಾತ್ಯ ಪಾಠದಲ್ಲಿರುವಂತೆ, ಗೀತಾ ಪ್ರೆಸ್). ↩︎