198: ಮನುಬೃಹಸ್ಪತಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 198

ಸಾರ

ಪರಬ್ರಹ್ಮಪ್ರಾಪ್ತಿಯ ಉಪಾಯ (1-18).

12198001 ಮನುರುವಾಚ।
112198001a ಜ್ಞಾನಂ ಜ್ಞೇಯಾಭಿನಿರ್ವೃತ್ತಂ ವಿದ್ಧಿ ಜ್ಞಾನಗುಣಂ ಮನಃ। 12198001c ಪ್ರಜ್ಞಾಕರಣಸಂಯುಕ್ತಂ ತತೋ ಬುದ್ಧಿಃ ಪ್ರವರ್ತತೇ।।

ಮನುವು ಹೇಳಿದನು: “ಜ್ಞೇಯನಾದ ಪರಮಾತ್ಮನ ಅಸ್ತಿತ್ವವನ್ನು ಸಿದ್ಧಮಾಡಿಕೊಳ್ಳುವುದೇ ಜ್ಞಾನವೆಂದು ತಿಳಿ. ಜ್ಞಾನದ ಗುಣವುಳ್ಳ ಮನಸ್ಸು ಪ್ರಜ್ಞಾಕರಣಗಳಾದ ಇಂದ್ರಿಯಗಳನ್ನು ಸೇರಿಕೊಂಡಾಗ ಬುದ್ಧಿಯೂ ವಿಷಯಗಳ ಕಡೆಗೇ ಹೋಗುತ್ತದೆ.

12198002a ಯದಾ ಕರ್ಮಗುಣೋಪೇತಾ2 ಬುದ್ಧಿರ್ಮನಸಿ ವರ್ತತೇ।
12198002c ತದಾ ಪ್ರಜ್ಞಾಯತೇ ಬ್ರಹ್ಮ ಧ್ಯಾನಯೋಗಸಮಾಧಿನಾ।।

ಕರ್ಮಗುಣೋಪೇತ ಬುದ್ಧಿಯ ಹೃದಯದಲ್ಲಿ ನೆಲೆಸಿದಾಗ ಅಲ್ಲಿ ಧ್ಯಾನಯೋಗಸಮಾಧಿಯಿಂದ ಬ್ರಹ್ಮನ ಜ್ಞಾನವುಂಟಾಗುತ್ತದೆ.

12198003a ಸೇಯಂ ಗುಣವತೀ ಬುದ್ಧಿರ್ಗುಣೇಷ್ವೇವಾಭಿವರ್ತತೇ।
12198003c ಅವತಾರಾಭಿನಿಃಸ್ರೋತಂ ಗಿರೇಃ ಶೃಂಗಾದಿವೋದಕಮ್।।

ಅದೇ ಬುದ್ಧಿಯು ಇಂದ್ರಿಯಗುಣಯುಕ್ತವಾದರೆ ನದಿಯ ನೀರು ಶಿಖರವನ್ನು ಬಿಟ್ಟು ಕೆಳಗೆ ಹರಿಯುವಂತೆ ಪರಮಾತ್ಮನ ಸಾನ್ನಿಧ್ಯದಿಂದ ಚ್ಯುತವಾಗಿ ವಿಷಯಗಳ ಕಡೆಗೇ ಹರಿದುಹೋಗುತ್ತದೆ.

12198004a ಯದಾ ನಿರ್ಗುಣಮಾಪ್ನೋತಿ ಧ್ಯಾನಂ ಮನಸಿ ಪೂರ್ವಜಮ್।
12198004c ತದಾ ಪ್ರಜ್ಞಾಯತೇ ಬ್ರಹ್ಮ ನಿಕಷ್ಯಂ ನಿಕಷೇ ಯಥಾ।।

ಧ್ಯಾನದ ಮೂಲಕ ಬುದ್ಧಿಯು ತನ್ನ ಪೂರ್ವಜ ಆತ್ಮನ ನಿರ್ಗುಣತ್ವವನ್ನು ಪಡೆದುಕೊಂಡಾಗ ಒರೆಗಲ್ಲಿಗೆ ತಾಗಿಸಿದ ಚಿನ್ನದ ರೇಖೆಯಂತೆ ಬುದ್ಧಿಯಿಂದ ಬ್ರಹ್ಮವಸ್ತುವನ್ನು ಅರಿತುಕೊಳ್ಳುತ್ತದೆ.

12198005a ಮನಸ್ತ್ವಪಹೃತಂ ಬುದ್ಧಿಮಿಂದ್ರಿಯಾರ್ಥನಿದರ್ಶನಮ್।
12198005c ನ ಸಮಕ್ಷಂ ಗುಣಾವೇಕ್ಷಿ ನಿರ್ಗುಣಸ್ಯ ನಿದರ್ಶನಮ್।।

ಇಂದ್ರಿಯಾರ್ಥಗಳನ್ನು ಅನುಭವಿಸುವ ಮನಸ್ಸಿನಿಂದ ಅಪಹೃತವಾದ ಗುಣಾವೇಕ್ಷೀ ಬುದ್ಧಿಯು ಎದುರಿರುವ ನಿರ್ಗುಣತ್ವದ ನಿದರ್ಶನವನ್ನು ಕಾಣುವುದಿಲ್ಲ.

12198006a ಸರ್ವಾಣ್ಯೇತಾನಿ ಸಂವಾರ್ಯ ದ್ವಾರಾಣಿ ಮನಸಿ ಸ್ಥಿತಃ।
12198006c ಮನಸ್ಯೇಕಾಗ್ರತಾಂ ಕೃತ್ವಾ ತತ್ಪರಂ ಪ್ರತಿಪದ್ಯತೇ।।

ಮನಸ್ಸಿನಲ್ಲಿ ಸ್ಥಿತಗೊಂಡಿರುವ ಇಂದ್ರಿಯಗಳೆಂಬ ಈ ಎಲ್ಲ ದ್ವಾರಗಳನ್ನೂ ಮುಚ್ಚಿ ಮನಸ್ಸನ್ನು ಏಕಾಗ್ರಗೊಳಿಸಿದಾಗ ಆ ತತ್ ಎನ್ನುವ ಪರಬ್ರಹ್ಮವಸ್ತುವಿನ ಅರಿವಾಗುತ್ತದೆ.

12198007a ಯಥಾ ಮಹಾಂತಿ ಭೂತಾನಿ ನಿವರ್ತಂತೇ ಗುಣಕ್ಷಯೇ।
12198007c ತಥೇಂದ್ರಿಯಾಣ್ಯುಪಾದಾಯ ಬುದ್ಧಿರ್ಮನಸಿ ವರ್ತತೇ।।

ಗುಣಗಳು ಕ್ಷಯವಾದಾಗ ಹೇಗೆ ಪಂಚಮಹಾಭೂತಗಳು ಹಿಂದಿರುಗಿಹೋಗುತ್ತವೆಯೋ ಹಾಗೆ ಇಂದ್ರಿಯಗಳನ್ನು ಬದಿಗಿಟ್ಟರೆ ಬುದ್ಧಿಯು ಇಂದ್ರಿಯಸಹಿತ ಮನಸ್ಸನ್ನು ತನ್ನಲ್ಲಿಯೇ ವಿಲೀನಗೊಳಿಸಿಕೊಂಡು ಹೃದಯದಲ್ಲಿ ನೆಲೆಸುತ್ತದೆ.

12198008a ಯದಾ ಮನಸಿ ಸಾ ಬುದ್ಧಿರ್ವರ್ತತೇಽಂತರಚಾರಿಣೀ।
12198008c ವ್ಯವಸಾಯಗುಣೋಪೇತಾ ತದಾ ಸಂಪದ್ಯತೇ ಮನಃ।।

ಆ ಬುದ್ಧಿಯು ತನ್ನೊಳಗೇ ಸಂಚರಿಸುತ್ತಿರುವ ಜ್ಞಾನದಲ್ಲಿ ನೆಲೆಸಿದಾಗ ಅದು ಜ್ಞಾನಮಯವೇ ಆಗಿಬಿಡುತ್ತದೆ.

12198009a ಗುಣವದ್ಭಿರ್ಗುಣೋಪೇತಂ ಯದಾ ಧ್ಯಾನಗುಣಂ ಮನಃ।
12198009c ತದಾ ಸರ್ವಗುಣಾನ್ ಹಿತ್ವಾ ನಿರ್ಗುಣಂ ಪ್ರತಿಪದ್ಯತೇ।।

ಗುಣಗಳಿಂದ ಯುಕ್ತವಾದ ಇಂದ್ರಿಯಗಳ ಸಂಬಂಧದಲ್ಲಿರುವ ಮನಸ್ಸು ಧ್ಯಾನಯೋಗಸಂಪನ್ನವಾದಾಗ ಸರ್ವಗುಣಗಳನ್ನೂ ತ್ಯಜಿಸಿ ನಿರ್ಗುಣತ್ವವನ್ನು ಪಡೆದುಕೊಳ್ಳುತ್ತದೆ.

12198010a ಅವ್ಯಕ್ತಸ್ಯೇಹ ವಿಜ್ಞಾನೇ ನಾಸ್ತಿ ತುಲ್ಯಂ ನಿದರ್ಶನಮ್।
12198010c ಯತ್ರ ನಾಸ್ತಿ ಪದನ್ಯಾಸಃ ಕಸ್ತಂ ವಿಷಯಮಾಪ್ನುಯಾತ್।।

ಅವ್ಯಕ್ತಬ್ರಹ್ಮದ ನಿಜಸ್ವರೂಪವನ್ನು ತಿಳಿಯ ಪಡಿಸುವುದಕ್ಕೆ ಸಮನಾದ ನಿದರ್ಶನವೇ ಇಲ್ಲ. ಯಾವುದರ ಕುರಿತಾದ ಪದನ್ಯಾಸವೇ ಇಲ್ಲವೋ ಅದನ್ನು ತನ್ನ ವಿಷಯವನ್ನಾಗಿ ಯಾರು ತಾನೇ ಮಾಡಿಕೊಳ್ಳಬಲ್ಲರು?

12198011a ತಪಸಾ ಚಾನುಮಾನೇನ ಗುಣೈರ್ಜಾತ್ಯಾ ಶ್ರುತೇನ ಚ।
12198011c ನಿನೀಷೇತ್ತತ್ಪರಂ ಬ್ರಹ್ಮ ವಿಶುದ್ಧೇನಾಂತರಾತ್ಮನಾ।।

ತಪಸ್ಸು, ಅನುಮಾನ, ಗುಣಗಳು, ಜಾತಿ ಮತ್ತು ವೇದಗಳಿಂದ ಅಂತಃಕರಣವನ್ನು ಶುದ್ಧಿಮಾಡಿಕೊಂಡು ಪರಬ್ರಹ್ಮ ಪರಮಾತ್ಮನನ್ನು ಹೊಂದಲು ಇಚ್ಛಿಸಬೇಕು.

12198012a ಗುಣಹೀನೋ ಹಿ ತಂ ಮಾರ್ಗಂ ಬಹಿಃ ಸಮನುವರ್ತತೇ।
12198012c ಗುಣಾಭಾವಾತ್ ಪ್ರಕೃತ್ಯಾ ಚ ನಿಸ್ತರ್ಕ್ಯಂ ಜ್ಞೇಯಸಂಮಿತಮ್।।

ತಪಸ್ಸಿನ ಗುಣಗಳಿಂದ ವಿಹೀನನಾದವನು ಬಹಿರಂಗದಲ್ಲಿ ಮಾತ್ರ ಆಧ್ಯಾತ್ಮಮಾರ್ಗವನ್ನು ಅನುಸರಿಸಿರುತ್ತಿರುತ್ತಾನೆ. ಜ್ಞೇಯಸಂಮಿತನಾದ ಪರಬ್ರಹ್ಮನು ಗುಣಗಳಿಲ್ಲದೇ ಇರುವುದರಿಂದ ಸ್ವಾಭಾವಿಕವಾಗಿಯೇ ತರ್ಕಕ್ಕೆ ವಿಷಯನಾಗುವುದಿಲ್ಲ.

12198013a ನೈರ್ಗುಣ್ಯಾದ್ಬ್ರಹ್ಮ ಚಾಪ್ನೋತಿ ಸಗುಣತ್ವಾನ್ನಿವರ್ತತೇ।
12198013c ಗುಣಪ್ರಸಾರಿಣೀ ಬುದ್ಧಿರ್ಹುತಾಶನ ಇವೇಂಧನೇ।।

ಗುಣಪ್ರಸಾರಿಣೀ ಬುದ್ಧಿಯು ಇಂಧನದಲ್ಲಿರುವ ಅಗ್ನಿಯಂತೆ ನಿರ್ಗುಣತ್ವದಿಂದ ಬ್ರಹ್ಮನ ಬಳಿಸಾರುತ್ತದೆ ಮತ್ತು ಸಗುಣತ್ವದಿಂದ ಬ್ರಹ್ಮನಿಂದ ದೂರವಾಗುತ್ತದೆ.

12198014a ಯಥಾ ಪಂಚ ವಿಮುಕ್ತಾನಿ ಇಂದ್ರಿಯಾಣಿ ಸ್ವಕರ್ಮಭಿಃ।
12198014c ತಥಾ ತತ್ಪರಮಂ ಬ್ರಹ್ಮ ವಿಮುಕ್ತಂ ಪ್ರಕೃತೇಃ ಪರಮ್।।

ಪಂಚೇಂದ್ರಿಯಗಳು ತಮ್ಮ ಕಾರ್ಯರೂಪಗಳಾದ ಶಬ್ದ-ಸ್ಪರ್ಶಾದಿ ಗುಣಗಳಿಂದ ಭಿನ್ನವಾಗಿರುವಂತೆ ಪರಬ್ರಹ್ಮವಸ್ತುವೂ ಸದಾ ಪ್ರಕೃತಿಗಿಂತ ಸರ್ವಥಾ ಭಿನ್ನವಾಗಿದೆ.

12198015a ಏವಂ ಪ್ರಕೃತಿತಃ ಸರ್ವೇ ಪ್ರಭವಂತಿ ಶರೀರಿಣಃ।
12198015c ನಿವರ್ತಂತೇ ನಿವೃತ್ತೌ ಚ ಸರ್ಗಂ ನೈವೋಪಯಾಂತಿ ಚ।।

ಹೀಗೆ ಎಲ್ಲ ಪ್ರಾಣಿಗಳೂ ಪ್ರಕೃತಿಯ ಕಾರಣದಿಂದ ಹುಟ್ಟು-ಸಾವುಗಳೆಂಬ ಸಂಸಾರಚಕ್ರದಲ್ಲಿ ಪ್ರವೃತ್ತವಾಗುತ್ತವೆ. ಅದೇ ಪ್ರಕೃತಿಯ ಸಹಾಯದಿಂದ ಅವು ಸಂಸಾರನಿವೃತ್ತಿಯನ್ನೂ ಹೊಂದಿ ಪುನಃ ಸೃಷ್ಟಿಗೊಳಗಾಗುವುದಿಲ್ಲ.

12198016a ಪುರುಷಃ ಪ್ರಕೃತಿರ್ಬುದ್ಧಿರ್ವಿಶೇಷಾಶ್ಚೇಂದ್ರಿಯಾಣಿ ಚ।
12198016c ಅಹಂಕಾರೋಽಭಿಮಾನಶ್ಚ ಸಂಭೂತೋ ಭೂತಸಂಜ್ಞಕಃ।।

ಪುರುಷ, ಪ್ರಕೃತಿ, ಬುದ್ಧಿ, ಶಬ್ದಾದಿ ಐದು ವಿಶೇಷಗಳು ಅಥವಾ ವಿಷಯಗಳು ಹಾಗೂ ಹತ್ತು ಇಂದ್ರಿಯಗಳು3, ಅಹಂಕಾರ, ಅಭಿಮಾನ ಮತ್ತು ಪಂಚ ಮಹಾಭೂತಗಳು – ಈ ಇಪ್ಪತ್ತೈದು ತತ್ತ್ವಗಳ ಸಮೂಹವನ್ನು “ಭೂತ” ಎಂದು ಕರೆಯುತ್ತಾರೆ.

12198017a ಏಕಸ್ಯಾದ್ಯಾ ಪ್ರವೃತ್ತಿಸ್ತು ಪ್ರಧಾನಾತ್ ಸಂಪ್ರವರ್ತತೇ।
12198017c ದ್ವಿತೀಯಾ ಮಿಥುನವ್ಯಕ್ತಿಮವಿಶೇಷಾನ್ನಿಯಚ್ಚತಿ।।

ಬುದ್ಧಿಯೇ ಮೊದಲಾದ ಸಮೂಹದ ಮೊದಲಿನ ತತ್ತ್ವಗಳು ಪೃಕೃತಿಯಿಂದಲೇ ಉಂಟಾಗಿರುತ್ತವೆ. ಎರಡನೇ ಸೃಷ್ಟಿಯು ಸಾಮಾನ್ಯತಃ ಮೈಥುನಧರ್ಮದಿಂದಲೇ ಅಭಿವ್ಯಕ್ತವಾಗುತ್ತದೆ.

12198018a ಧರ್ಮಾದುತ್ಕೃಷ್ಯತೇ ಶ್ರೇಯಸ್ತಥಾಶ್ರೇಯೋಽಪ್ಯಧರ್ಮತಃ।
12198018c ರಾಗವಾನ್ ಪ್ರಕೃತಿಂ ಹ್ಯೇತಿ ವಿರಕ್ತೋ ಜ್ಞಾನವಾನ್ಭವೇತ್।।

ಧರ್ಮದಿಂದ ಶ್ರೇಯಸ್ಸಿನ ಅಭಿವೃದ್ಧಿಯಾಗುತ್ತದೆ. ಅಧರ್ಮದಿಂದ ಅಶ್ರೇಯಸ್ಸುಂಟಾಗುತ್ತದೆ. ರಾಗವಂತನು ಪ್ರಕೃತಿಯಲ್ಲಿಯೇ ಇರುತ್ತಾನೆ. ವಿರಕ್ತನು ಜ್ಞಾನವಂತನಾಗುತ್ತಾನೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಅಷ್ಟನವತ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತೆಂಟನೇ ಅಧ್ಯಾಯವು.

  1. ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ದುಃಖೋಪಘಾತೇ ಶರೀರೇ ಮಾನಸೇ ಚಾಪ್ಯುಪಸ್ಥಿತೇ। ಯಸ್ಮಿನ್ನ ಶಕ್ಯತೇ ಕರ್ತುಂ ಯತ್ನಸ್ತಂ ನಾನುಚಿಂತಯೇತ್।। ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್। ಚಿಂತಮಾನಂ ಹಿ ಚಾಭ್ಯೇತಿ ಭೂಯಶ್ಚಾಪಿ ಪ್ರವರ್ತತೇ।। ಪ್ರಜ್ಞಯಾ ಮಾನಸಂ ದುಃಖಂ ಹನ್ಯಾತ್ಶಾರೀರಮೌಷಧೈಃ। ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್।। ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ। ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇತ್ತತ್ರ ನ ಪಂಡಿತಃ।। ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ। ಅಶೋಚನ್ಪ್ರತಿ ಕುರ್ವೀತ ಯದಿ ಪಶ್ಯೇದುಪಕ್ರಮಮ್।। ಸುಖಾದ್ದುಃಖತರಂ ದುಃಖಂ ಜೀವಿತೇ ನಾಸ್ತಿ ಸಂಶಯಃ। ಸ್ನಿಗ್ಧಸ್ಯ ಚೇಂದ್ರಿಯಾರ್ಥೇಷು ಮೋಹಾನ್ಮರಣಪ್ರಿಯಮ್।। ಪರಿತ್ಯಜತಿ ಯೋ ದುಃಖಂ ಸುಖಂ ವಾಪ್ಯುಭಯಂ ನರಃ। ಅಭ್ಯೇತಿ ಬ್ರಹ್ಮಸೋಽತ್ಯಂತಂ ನ ತೇ ಶೋಚಂತಿ ಪಂಡಿತಾಃ।। ದುಃಖಮರ್ಥಾ ಹಿ ಯುಜ್ಯಂತ ನ ಚ ತೇ ಸುಖಮ್। ದುಃಖೇನ ಚಾಧಿಗಮ್ಯಂತೇ ನಾಶಮೇಷಾಂ ನ ಚಿಂತಯೇತ್।। (ಭಾರತ ದರ್ಶನ/ಗೀತಾ ಪ್ರೆಸ್). ↩︎

  2. ಕರ್ಮಗುಣೈರ್ಹೀನಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  3. ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ↩︎