ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 196
ಸಾರ
ಶರೀರೇಂದ್ರಿಯ-ಮನೋಬುದ್ಧಿಗಳಿಗಿಂತಲೂ ಅತಿರಿಕ್ತನಾದ ಆತ್ಮನ ನಿತ್ಯತ್ವದ ಪ್ರತಿಪಾದನೆ (1-23).
12196001 ಮನುರುವಾಚ।
12196001a ಯದಿಂದ್ರಿಯೈಸ್ತೂಪಕೃತಾನ್ಪುರಸ್ತಾತ್ ಪ್ರಾಪ್ತಾನ್ಗುಣಾನ್ಸಂಸ್ಮರತೇ ಚಿರಾಯ।
12196001c ತೇಷ್ವಿಂದ್ರಿಯೇಷೂಪಹತೇಷು ಪಶ್ಚಾತ್ ಸ ಬುದ್ಧಿರೂಪಃ ಪರಮಃ ಸ್ವಭಾವಃ।।
ಮನುವು ಹೇಳಿದನು: “ಬುದ್ಧಿರೂಪನಾದ ಪರಮಶ್ರೇಷ್ಠನಾದ ಜೀವನು ಹಿಂದಿನ ಶರೀರದಿಂದ ನೂತನ ಶರೀರಕ್ಕೆ ಬರುವಾಗ ಆ ಶರೀರದಲ್ಲಿದ್ದ ಪಂಚೇಂದ್ರಿಯಗಳನ್ನು ಕಳೆದುಕೊಂಡರೂ ಅವುಗಳ ವಿಷಯಗಳನ್ನು ಸಂಸ್ಕಾರರೂಪದಲ್ಲಿ ತನ್ನಲ್ಲಿಯೇ ಇಟ್ಟುಕೊಂಡಿರುತ್ತಾನೆ. ಹಿಂದಿನ ಜನ್ಮದಲ್ಲಿ ಇಂದ್ರಿಯಗಳ ಮೂಲಕ ಅನುಭವಿಸಿದ ವಿಷಯಗಳನ್ನು ಬಹಳ ಕಾಲದ ವರೆಗೆ ಸ್ಮರಿಸುತ್ತಲೇ ಇರುತ್ತಾನೆ.
12196002a ಯಥೇಂದ್ರಿಯಾರ್ಥಾನ್ಯುಗಪತ್ಸಮಸ್ತಾನ್ ನಾವೇಕ್ಷತೇ ಕೃತ್ಸ್ನಮತುಲ್ಯಕಾಲಮ್।
12196002c ಯಥಾಬಲಂ ಸಂಚರತೇ ಸ ವಿದ್ವಾಂಸ್ ತಸ್ಮಾತ್ಸ ಏಕಃ ಪರಮಃ ಶರೀರೀ।।
ಜೀವಾತ್ಮನು ಎಲ್ಲ ಕಾಲಗಳಲ್ಲಿಯೂ ಎಲ್ಲ ಜನ್ಮಗಳಲ್ಲಿಯೂ ಅನುಭವಿಸಿದ ಎಲ್ಲ ಇಂದ್ರಿಯ ವಿಷಯಗಳನ್ನೂ ತಾನೊಬ್ಬನೇ ಏಕಕಾಲದಲ್ಲಿ ನೋಡುತ್ತಾನೆ. ಜಾಗೃತ್-ಸ್ವಪ್ನ-ಸುಷುಪ್ತಿಗಳೆಂಬ ಬೇರೆ ಬೇರೆ ಅವಸ್ಥೆಗಳಲ್ಲಿ ಸಂಚರಿಸುತ್ತಾನೆ. ಆ ಕಾಲ-ಅವಸ್ಥೆ-ಇಂದ್ರಿಯವಿಷಯಗಳು ಬೇರೆಬೇರೆಯಾಗಿದ್ದರೂ ಅವೆಲ್ಲಕ್ಕೂ ಸಾಕ್ಷಿಯಾಗಿ ನಿಶ್ಚಲನಾಗಿರುವುದರಿಂದ ಈ ಜೀವಾತ್ಮನೇ ಪರಮ ವಿದ್ವಾಂಸನು.
12196003a ರಜಸ್ತಮಃ ಸತ್ತ್ವಮಥೋ ತೃತೀಯಂ ಗಚ್ಚತ್ಯಸೌ ಜ್ಞಾನಗುಣಾನ್ವಿರೂಪಾನ್।
12196003c ತಥೇಂದ್ರಿಯಾಣ್ಯಾವಿಶತೇ ಶರೀರೀ ಹುತಾಶನಂ ವಾಯುರಿವೇಂಧನಸ್ಥಮ್।।
ಜೀವವು ರಜ, ತಮ ಮತ್ತು ಮೂರನೆಯದಾದ ಸತ್ತ್ವಗಳೆಂಬ ವಿರೂಪ ಜ್ಞಾನಗುಣಗಳನ್ನು ಹೊಂದಿರುತ್ತಾನೆ. ಆದರೆ ಅವನು ಅವುಗಳಿಗಿಂತ ಅತಿರಿಕ್ತನಾಗಿರುತ್ತಾನೆ. ವಾಯುವು ಕಟ್ಟಿಗೆಯಲ್ಲಿರುವ ಅಗ್ನಿಯನ್ನು ಪ್ರವೇಶಿಸುವಂತೆ ಜೀವವು ಶರೀರಸ್ಥ ಇಂದ್ರಿಯಗಳನ್ನು ಪ್ರವೇಶಿಸುತ್ತದೆ.
12196004a ನ ಚಕ್ಷುಷಾ ಪಶ್ಯತಿ ರೂಪಮಾತ್ಮನೋ ನ ಪಶ್ಯತಿ ಸ್ಪರ್ಶಮಿಂದ್ರಿಯೇಂದ್ರಿಯಮ್।
12196004c ನ ಶ್ರೋತ್ರಲಿಂಗಂ ಶ್ರವಣೇ ನಿದರ್ಶನಂ ತಥಾಗತಂ1 ಪಶ್ಯತಿ ತದ್ವಿನಶ್ಯತಿ।।
ಆತ್ಮದ ರೂಪವನ್ನು ಕಣ್ಣುಗಳಿಂದ ನೋಡಲಿಕ್ಕಾಗುವುದಿಲ್ಲ. ಸ್ಪರ್ಶೇಂದ್ರಿಯದಿಂದಲೂ ಈ ಇಂದ್ರಿಯವನ್ನು ನೋಡಲಿಕ್ಕಾಗುವುದಿಲ್ಲ. ಆತ್ಮದ ರೂಪವನ್ನು ಶ್ರವಣೇಂದ್ರಿಯದಿಂದಲೂ ತಿಳಿಯಲು ಸಾಧ್ಯವಿಲ್ಲ. ಯಾವಾಗ ಆತ್ಮನ ದರ್ಶನವಾಗುತ್ತದೆಯೋ ಆಗ ಇಂದ್ರಿಯಗಳೆಲ್ಲವೂ ನಾಶಹೊಂದುತ್ತವೆ.
12196005a ಶ್ರೋತ್ರಾದೀನಿ ನ ಪಶ್ಯಂತಿ ಸ್ವಂ ಸ್ವಮಾತ್ಮಾನಮಾತ್ಮನಾ।
12196005c ಸರ್ವಜ್ಞಃ ಸರ್ವದರ್ಶೀ ಚ ಕ್ಷೇತ್ರಜ್ಞಸ್ತಾನಿ ಪಶ್ಯತಿ।।
ಶ್ರೋತ್ರಾದಿ ಇಂದ್ರಿಯಗಳು ಸ್ವಯಂ ತಮ್ಮನ್ನು ತಾವೇ ತಿಳಿದುಕೊಳ್ಳಲಾರವು2. ಹಾಗಿರುವಾಗ ಅವು ಸವರ್ಜ್ಞನೂ ಸರ್ವದರ್ಶಿಯೂ ಆದ ಕ್ಷೇತ್ರಜ್ಞನನ್ನು ಹೇಗೆ ತಾನೇ ಅರಿಯಬಲ್ಲವು?
12196006a ಯಥಾ ಹಿಮವತಃ ಪಾರ್ಶ್ವಂ ಪೃಷ್ಠಂ ಚಂದ್ರಮಸೋ ಯಥಾ।
12196006c ನ ದೃಷ್ಟಪೂರ್ವಂ ಮನುಜೈರ್ನ ಚ ತನ್ನಾಸ್ತಿ ತಾವತಾ।।
ಹಿಮಾಲಯದ ಇನ್ನೊಂದು ಪಾರ್ಶ್ವವನ್ನು ಮತ್ತು ಚಂದ್ರನ ಹಿಂಭಾಗವನ್ನು ಮನುಷ್ಯನು ಎಂದೂ ನೋಡಿರದೇ ಇದ್ದರೂ ಅವು ಇಲ್ಲವೆಂದು ಹೇಳಲಿಕ್ಕಾಗುವುದಿಲ್ಲ.
12196007a ತದ್ವದ್ಭೂತೇಷು ಭೂತಾತ್ಮಾ ಸೂಕ್ಷ್ಮೋ ಜ್ಞಾನಾತ್ಮವಾನಸೌ।
12196007c ಅದೃಷ್ಟಪೂರ್ವಶ್ಚಕ್ಷುರ್ಭ್ಯಾಂ ನ ಚಾಸೌ ನಾಸ್ತಿ ತಾವತಾ।।
ಹಾಗೆಯೇ ಸಕಲ ಪ್ರಾಣಿಗಳ ಹೃದಯಾಂತರಾಳದಲ್ಲಿ ಜ್ಞಾನಸ್ವರೂಪೀ ಸೂಕ್ಷ್ಮಾತಿಸೂಕ್ಷ್ಮ ಆತ್ಮನು ಇದ್ದೇ ಇದ್ದಾನೆ. ಕಣ್ಣುಗಳಿಂದ ಅವನನ್ನು ನೋಡಲಿಕ್ಕಾಗುವುದಿಲ್ಲ ಎಂದ ಮಾತ್ರಕ್ಕೆ ಅವನು ಇಲ್ಲ ಎಂದು ಹೇಳಲಿಕ್ಕಾಗುವುದಿಲ್ಲ.
12196008a ಪಶ್ಯನ್ನಪಿ ಯಥಾ ಲಕ್ಷ್ಮ ಜಗತ್ಸೋಮೇ ನ ವಿಂದತಿ।
12196008c ಏವಮಸ್ತಿ ನ ವೇತ್ಯೇತನ್ನ ಚ ತನ್ನ ಪರಾಯಣಮ್।।
ಜನರು ಚಂದ್ರನಲ್ಲಿರುವ ಕಲೆಗಳನ್ನು ನೋಡದೇ ಇದ್ದರೂ ಅದು ಇದ್ದೇ ಇರುತ್ತದೆ. ಅದಕ್ಕೆ ಕಾರಣಗಳನ್ನು ಅರಿಯದಿದ್ದರೂ ಅದಕ್ಕೆ ಕಾರಣಗಳು ಇದ್ದೇ ಇರುತ್ತವೆ. ಹಾಗೆಯೇ ನಮಗೆ ಕಾಣದಿದ್ದರೂ ಮೂಲವಾದ ಆತ್ಮವು ಇದ್ದೇ ಇದೆ.
12196009a ರೂಪವಂತಮರೂಪತ್ವಾದುದಯಾಸ್ತಮಯೇ ಬುಧಾಃ।
12196009c ಧಿಯಾ ಸಮನುಪಶ್ಯಂತಿ ತದ್ಗತಾಃ ಸವಿತುರ್ಗತಿಮ್।।
ವಿದ್ವಾಂಸರು ಉದಯಕಾಲದಲ್ಲಿ ಕಾಣಿಸುಕೊಳ್ಳುವ ಮತ್ತು ಸಂಧ್ಯಾಕಾಲದಲ್ಲಿ ಅಸ್ತನಾಗುವ ಸೂರ್ಯನನ್ನು ಬುದ್ಧಿಯ ಮೂಲಕ ಸೂರ್ಯನು ಅಸ್ತಂಗತನಾಗಿದ್ದೇನೆ ಎಂದು ತಿಳಿದುಕೊಳ್ಳುತ್ತಾರೆ.
12196010a ತಥಾ ಬುದ್ಧಿಪ್ರದೀಪೇನ ದೂರಸ್ಥಂ ಸುವಿಪಶ್ಚಿತಃ।
12196010c ಪ್ರತ್ಯಾಸನ್ನಂ ನಿನೀಷಂತಿ ಜ್ಞೇಯಂ ಜ್ಞಾನಾಭಿಸಂಹಿತಮ್।।
ಹಾಗೆಯೇ ಸುಜ್ಞಾನಿಗಳು ದೂರದಲ್ಲಿರುವುದನ್ನು ಹಾಗೂ ತಮ್ಮ ಹತ್ತಿರದಲ್ಲಿ ಹೃದಯಾಂತರಾಳದಲ್ಲಿಯೇ ಇರುವ ಜ್ಞೇಯ, ಜ್ಞಾನಶಬ್ದದಿಂದ ಸೂಚಿತನಾದ ಪರಬ್ರಹ್ಮ ಪರಮಾತ್ಮನನ್ನು ಬುದ್ಧಿಯೆಂಬ ಪ್ರಕಾಶದ ಮೂಲಕ ತಿಳಿದುಕೊಳ್ಳುತ್ತಾರೆ.
12196011a ನ ಹಿ ಖಲ್ವನುಪಾಯೇನ ಕಶ್ಚಿದರ್ಥೋಽಭಿಸಿಧ್ಯತಿ।
12196011c ಸೂತ್ರಜಾಲೈರ್ಯಥಾ ಮತ್ಸ್ಯಾನ್ಬಧ್ನಂತಿ ಜಲಜೀವಿನಃ।।
12196012a ಮೃಗೈರ್ಮೃಗಾಣಾಂ ಗ್ರಹಣಂ ಪಕ್ಷಿಣಾಂ ಪಕ್ಷಿಭಿರ್ಯಥಾ।
12196012c ಗಜಾನಾಂ ಚ ಗಜೈರೇವಂ ಜ್ಞೇಯಂ ಜ್ಞಾನೇನ ಗೃಹ್ಯತೇ।।
ಉಪಾಯವಿಲ್ಲದೇ ಯಾವುದೂ ಸಿದ್ಧಿಸುವುದಿಲ್ಲ. ಜಲಜೀವಿ ಬೆಸ್ತರು ಬಲೆಗಳನ್ನು ಬಳಸಿ ಮೀನನ್ನು ಹಿಡಿಯುತ್ತಾರೆ. ಬೇಡರು ಮೃಗಗಳನ್ನು ಬಳಸಿ ಮೃಗಗಳನ್ನೂ, ಪಕ್ಷಿಗಳನ್ನು ಬಳಸಿ ಪಕ್ಷಿಗಳನ್ನೂ, ಆನೆಗಳನ್ನು ಬಳಸಿ ಆನೆಗಳನ್ನೂ ಹಿಡಿಯುತ್ತಾರೆ. ಅದೇ ರೀತಿ ಜ್ಞಾನದಿಂದಲೇ ಜ್ಞೇಯನನ್ನು ಗ್ರಹಿಸಿಕೊಳ್ಳಬೇಕು.
12196013a ಅಹಿರೇವ ಹ್ಯಹೇಃ ಪಾದಾನ್ಪಶ್ಯತೀತಿ ನಿದರ್ಶನಮ್।
12196013c ತದ್ವನ್ಮೂರ್ತಿಷು ಮೂರ್ತಿಷ್ಠಂ ಜ್ಞೇಯಂ ಜ್ಞಾನೇನ ಪಶ್ಯತಿ।।
ಹಾವು ಮಾತ್ರ ಅದರ ಹೆಜ್ಜೆಗಳನ್ನು ತಿಳಿದುಕೊಳ್ಳಬಹುದು ಎಂಬ ನಿದರ್ಶನವಿದೆ. ಅದೇ ರೀತಿ ಜ್ಞಾನಿಯು ಶರೀರಗಳಲ್ಲಿ ಶರೀರಸ್ಥನಾಗಿರುವ ಜ್ಞೇಯನನ್ನು ಜ್ಞಾನದ ಮೂಲಕವೇ ತಿಳಿಯುತ್ತಾನೆ.
12196014a ನೋತ್ಸಹಂತೇ ಯಥಾ ವೇತ್ತುಮಿಂದ್ರಿಯೈರಿಂದ್ರಿಯಾಣ್ಯಪಿ।
12196014c ತಥೈವೇಹ ಪರಾ ಬುದ್ಧಿಃ ಪರಂ ಬುದ್ಧ್ಯಾ ನ ಪಶ್ಯತಿ।।
ಇಂದ್ರಿಯಗಳು ಇಂದ್ರಿಯಗಳ ಮೂಲಕ ಆತ್ಮನನ್ನು ಹೇಗೆ ತಿಳಿದುಕೊಳ್ಳಲಾರವೋ ಹಾಗೆ ಇಂದ್ರಿಯಗಳನ್ನೇ ಆಶ್ರಯಿಸಿರುವ ಬುದ್ಧಿಯೂ ಕೂಡ ಪರಮಬೋಧ್ಯವಾದ ಬ್ರಹ್ಮತತ್ತ್ವವನ್ನು ನೋಡಲಾರದು.
12196015a ಯಥಾ ಚಂದ್ರೋ ಹ್ಯಮಾವಾಸ್ಯಾಮಲಿಂಗತ್ವಾನ್ನ ದೃಶ್ಯತೇ।
12196015c ನ ಚ ನಾಶೋಽಸ್ಯ ಭವತಿ ತಥಾ ವಿದ್ಧಿ ಶರೀರಿಣಮ್।।
ಅಮವಾಸ್ಯೆಯಂದು ಚಂದ್ರನು ಅವನ ಲಕ್ಷಣಗಳಿಂದ ಕಾಣಿಸಿಕೊಳ್ಳದೇ ಇದ್ದರೂ ಹೇಗೆ ನಾಶವಾಗಿರದೇ ಇರುತ್ತಾನೋ ಹಾಗೆ ಶರೀರದಲ್ಲಿರುವ ಆತ್ಮವು ಕಾಣದೇ ಇದ್ದರೂ ನಾಶವಾಗಿ ಹೋಯಿತೆಂದು ತಿಳಿಯಬಾರದು.
12196016a ಕ್ಷೀಣಕೋಶೋ ಹ್ಯಮಾವಾಸ್ಯಾಂ ಚಂದ್ರಮಾ ನ ಪ್ರಕಾಶತೇ।
12196016c ತದ್ವನ್ಮೂರ್ತಿವಿಯುಕ್ತಃ ಸನ್ ಶರೀರೀ ನೋಪಲಭ್ಯತೇ।।
ಅಮವಾಸ್ಯೆಯಲ್ಲಿ ಚಂದ್ರಮನು ಕ್ಷೀಣಕೋಶನಾಗಿರುವುದರಿಂದ ಕಾಣುವುದಿಲ್ಲ. ಹಾಗೆಯೇ ಶರೀರದಿಂದ ವಿಮುಕ್ತನಾದ ಶರೀರಿಯು ನೋಡಲಿಕ್ಕೆ ಸಿಗುವುದಿಲ್ಲ.
12196017a ಯಥಾ ಕೋಶಾಂತರಂ3 ಪ್ರಾಪ್ಯ ಚಂದ್ರಮಾ ಭ್ರಾಜತೇ ಪುನಃ।
12196017c ತದ್ವಲ್ಲಿಂಗಾಂತರಂ ಪ್ರಾಪ್ಯ ಶರೀರೀ ಭ್ರಾಜತೇ ಪುನಃ।।
ಬೇರೆ ಕೋಶವನ್ನು ಪಡೆದುಕೊಂಡು ಪುನಃ ಚಂದ್ರನು ಬೆಳಗುವಂತೆ ಇನ್ನೊಂದು ದೇಹವನ್ನು ಪಡೆದುಕೊಂಡು ಆತ್ಮವು ಪುನಃ ಬೆಳಗುತ್ತದೆ.
12196018a ಜನ್ಮವೃದ್ಧಿಕ್ಷಯಶ್ಚಾಸ್ಯ ಪ್ರತ್ಯಕ್ಷೇಣೋಪಲಭ್ಯತೇ।
12196018c ಸಾ ತು ಚಂದ್ರಮಸೋ ವ್ಯಕ್ತಿರ್ನ ತು ತಸ್ಯ ಶರೀರಿಣಃ।।
ಯಾವ ಜನ್ಮ, ವೃದ್ಧಿ ಮತ್ತು ಕ್ಷಯಗಳು ಚಂದ್ರನಲ್ಲಿ ಪ್ರತ್ಯಕ್ಷವಾಗಿ ಕಾಣಿಸುತ್ತವೆಯೋ ಅವು ವಸ್ತುತಃ ಚಂದ್ರನ ವೃತ್ತಿಯಾಗಿರುವುದಿಲ್ಲ. ಚಂದ್ರಮಂಡಲಕ್ಕೆ ಸಂಬಂಧಿಸಿದ ವೃತ್ತಿಗಳಾಗಿರುತ್ತವೆ. ಅದೇ ರೀತಿ ಜನ್ಮ-ವೃದ್ಧಿ-ಕ್ಷಯಗಳು ದೇಹಕ್ಕೆ ಸಂಬಂಧಿಸಿದವುಗಳಾಗಿವೆಯೇ ಹೊರತು ದೇಹಿಗೆ ಸಂಬಂಧಿಸಿದವುಗಳಲ್ಲ.
12196019a ಉತ್ಪತ್ತಿವೃದ್ಧಿವ್ಯಯತೋ ಯಥಾ ಸ ಇತಿ ಗೃಹ್ಯತೇ।
12196019c ಚಂದ್ರ ಏವ ತ್ವಮಾವಾಸ್ಯಾಂ ತಥಾ ಭವತಿ ಮೂರ್ತಿಮಾನ್।।
ಉತ್ಪತ್ತಿ-ವೃದ್ಧಿ-ವ್ಯಯಗಳನ್ನು ಹೊಂದಿದ್ದರೂ ಚಂದ್ರನು ಅವನೇ ಎಂದು ಹೇಗೆ ಹೇಳುತ್ತೇವೆಯೋ ಹಾಗೆ ಬೇರೆ ಬೇರೆ ಅವಸ್ಥೆಗಳ ದೇಹದಲ್ಲಿರುವವನೂ ಒಂದೇ ಎಂದು ತಿಳಿಯಬೇಕು.
12196020a ನಾಭಿಸರ್ಪದ್ವಿಮುಂಚದ್ವಾ ಶಶಿನಂ ದೃಶ್ಯತೇ ತಮಃ।
12196020c ವಿಸೃಜಂಶ್ಚೋಪಸರ್ಪಂಶ್ಚ ತದ್ವತ್ಪಶ್ಯ ಶರೀರಿಣಮ್।।
ಅಂಧಕಾರರೂಪನಾದ ರಾಹುವು ಚಂದ್ರನನ್ನು ನುಂಗುವುದಾಗಲೀ ವಿಸರ್ಜಿಸುವುದಾಗಲೀ ಹೇಗೆ ಕಾಣುವುದಿಲ್ಲವೋ ಹಾಗೆ ಆತ್ಮವು ಶರೀರವನ್ನು ಪ್ರವೇಶಿಸುವುದು ಮತ್ತು ಬಿಟ್ಟು ಹೋಗುವುದು ಕಾಣುವುದಿಲ್ಲ.
12196021a ಯಥಾ ಚಂದ್ರಾರ್ಕಸಂಯುಕ್ತಂ ತಮಸ್ತದುಪಲಭ್ಯತೇ।
12196021c ತದ್ವಚ್ಚರೀರಸಂಯುಕ್ತಃ ಶರೀರೀತ್ಯುಪಲಭ್ಯತೇ।।
ಗ್ರಹಣಕಾಲದಲ್ಲಿ ಹೇಗೆ ಸೂರ್ಯ-ಚಂದ್ರರೊಡನೆ ಸೇರಿರುವ ತಮಸ್ಸಿನ ಆವಿರ್ಭಾವವಾಗುತ್ತದೆಯೋ ಹಾಗೆ ಶರೀರದೊಡನೆ ಸೇರಿಕೊಂಡಾಗ ಆತ್ಮನು ಶರೀರಿಯಾಗಿಯೇ ಪ್ರತೀತನಾಗುತ್ತಾನೆ.
12196022a ಯಥಾ ಚಂದ್ರಾರ್ಕನಿರ್ಮುಕ್ತಃ ಸ ರಾಹುರ್ನೋಪಲಭ್ಯತೇ।
12196022c ತದ್ವಚ್ಚರೀರನಿರ್ಮುಕ್ತಃ ಶರೀರೀ ನೋಪಲಭ್ಯತೇ।।
ಗ್ರಹಣಾನಂತರ ಚಂದ್ರ-ಸೂರ್ಯರನ್ನು ಬಿಟ್ಟುಹೋದ ರಾಹುವು ಹೇಗೆ ಕಣ್ಣಿಗೆ ಕಾಣುವುದಿಲ್ಲವೋ ಹಾಗೆ ಶರೀರದಿಂದ ವಿಮುಕ್ತನಾದ ಆತ್ಮನೂ ಯಾರಿಗೂ ಕಾಣುವುದಿಲ್ಲ.
12196023a ಯಥಾ ಚಂದ್ರೋ ಹ್ಯಮಾವಾಸ್ಯಾಂ ನಕ್ಷತ್ರೈರ್ಯುಜ್ಯತೇ ಗತಃ।
12196023c ತದ್ವಚ್ಚರೀರನಿರ್ಮುಕ್ತಃ ಫಲೈರ್ಯುಜ್ಯತಿ ಕರ್ಮಣಃ।।
ಅಮವಾಸ್ಯೆಯ ನಂತರ ಚಂದ್ರನು ಹೇಗೆ ಪುನಃ ದೃಶ್ಯನಾಗಿ ನಕ್ಷತ್ರಗಳೊಂದಿಗೆ ಸೇರಿರುತ್ತಾನೋ ಅದೇ ರೀತಿ ಒಂದು ಶರೀರವನ್ನು ಬಿಟ್ಟುಹೋದ ಆತ್ಮನು ತಾನು ಮಾಡಿದ ಕರ್ಮಫಲಗಳೊಡನೆ ದೇಹಾಂತರವನ್ನು ಪ್ರವೇಶಿಸುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಷಟ್ನವತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತಾರನೇ ಅಧ್ಯಾಯವು.