192: ಜಾಪಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 192

ಸಾರ

ಜಾಪಕನಿಗೆ ಸಾವಿತ್ರಿಯ ವರದಾನ (1-17); ಜಾಪಕನ ಬಳಿ ಧರ್ಮ, ಯಮ ಮತ್ತು ಕಾಲರ ಆಗಮನ (18-33), ಇಕ್ಷ್ವಾಕುರಾಜ ಮತ್ತು ಜಾಪಕಬ್ರಾಹ್ಮಣರ ಸಂವಾದ (34-116), ಜಾಪಕನಿಗೆ ಲಭಿಸುವ ಪರಮ ಗತಿಯ ವರ್ಣನೆ (117-127).

12192001 ಯುಧಿಷ್ಠಿರ ಉವಾಚ।
12192001a ಕಾಲಮೃತ್ಯುಯಮಾನಾಂ ಚ ಬ್ರಾಹ್ಮಣಸ್ಯ ಚ ಸತ್ತಮ1
12192001c ವಿವಾದೋ ವ್ಯಾಹೃತಃ ಪೂರ್ವಂ ತದ್ಭವಾನ್ವಕ್ತುಮರ್ಹತಿ।।

ಯುಧಿಷ್ಠಿರನು ಹೇಳಿದನು: “ಸತ್ತಮ! ಹಿಂದೆ ನೀನು ಕಾಲ, ಮೃತ್ಯು, ಯಮ ಮತ್ತು ಬ್ರಾಹ್ಮಣರ ನಡುವೆ ನಡೆದ ವಿವಾದದ ಕುರಿತು ಹೇಳಿದೆಯಲ್ಲಾ ಅದರ ಕುರಿತು ಹೇಳಬೇಕು.”

12192002 ಭೀಷ್ಮ ಉವಾಚ।
12192002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12192002c ಇಕ್ಷ್ವಾಕೋಃ ಸೂರ್ಯಪುತ್ರಸ್ಯ ಯದ್ವೃತ್ತಂ ಬ್ರಾಹ್ಮಣಸ್ಯ ಚ।।
12192003a ಕಾಲಸ್ಯ ಮೃತ್ಯೋಶ್ಚ ತಥಾ ಯದ್ವೃತ್ತಂ ತನ್ನಿಬೋಧ ಮೇ।
12192003c ಯಥಾ ಸ ತೇಷಾಂ ಸಂವಾದೋ ಯಸ್ಮಿನ್ ಸ್ಥಾನೇಽಪಿ ಚಾಭವತ್।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಇಕ್ಷ್ವಾಕು, ಸೂರ್ಯಪುತ್ರ ಯಮ, ಬ್ರಾಹ್ಮಣ ಮತ್ತು ಮೃತ್ಯುವಿನ ನಡುವೆ ನಡೆದ ಈ ಪುರಾತನ ಇತಿಹಾಸವನ್ನು ವಿದ್ವಾಂಸರು ಉದಾಹರಿಸುತ್ತಾರೆ. ಅವರ ಸಂವಾದವು ಹೇಗೆ ಮತ್ತು ಎಲ್ಲಿ ನಡೆಯಿತು ಎನ್ನುವುದನ್ನು ಹೇಳುತ್ತೇನೆ. ಕೇಳು.

12192004a ಬ್ರಾಹ್ಮಣೋ ಜಾಪಕಃ ಕಶ್ಚಿದ್ಧರ್ಮವೃತ್ತೋ ಮಹಾಯಶಾಃ।
12192004c ಷಡಂಗವಿನ್ಮಹಾಪ್ರಾಜ್ಞಃ ಪೈಪ್ಪಲಾದಿಃ ಸ ಕೌಶಿಕಃ।।
12192005a ತಸ್ಯಾಪರೋಕ್ಷಂ ವಿಜ್ಞಾನಂ ಷಡಂಗೇಷು ತಥೈವ ಚ।
12192005c ವೇದೇಷು ಚೈವ ನಿಷ್ಣಾತೋ ಹಿಮವತ್ಪಾದಸಂಶ್ರಯಃ।।

ಹಿಮವತ್ಪರ್ವತದ ತಪ್ಪಲು ಪ್ರದೇಶದಲ್ಲಿ ಮಹಾಯಶಸ್ವಿಯಾದ ಧರ್ಮವೃತ್ತನಾದ ಓರ್ವ ಜಾಪಕ ಬ್ರಾಹ್ಮಣನಿದ್ದನು. ಕೌಶಿಕ ವಂಶದ ಪಿಪ್ಪಲಾದನ ಮಗನಾದ ಆ ಮಹಾಪ್ರಾಜ್ಞನು ಷಡಂಡಯುಕ್ತ ವೇದಗಳನ್ನು ಅರಿತಿದ್ದನು. ವೇದದ ಆರೂ ಅಂಗಗಳ ವಿಜ್ಞಾನವೂ ಅವನಿಗೆ ಪ್ರತ್ಯಕ್ಷವಾಗಿದ್ದವು. ಹಾಗೆ ಅವನು ವೇದನಿಷ್ಣಾತನಾಗಿದ್ದನು.

12192006a ಸೋಽಂತ್ಯಂ ಬ್ರಾಹ್ಮಂ ತಪಸ್ತೇಪೇ ಸಂಹಿತಾಂ ಸಂಯತೋ ಜಪನ್।
12192006c ತಸ್ಯ ವರ್ಷಸಹಸ್ರಂ ತು ನಿಯಮೇನ ತಥಾ ಗತಮ್।।

ಅವನು ಸಂಹಿತೆಯನ್ನು ಜಪಿಸುತ್ತಾ ಇಂದ್ರಿಯಸಂಯಮದಿಂದ ಬ್ರಾಹ್ಮಣೋಚಿತ ತಪಸ್ಸನ್ನು ತಪಿಸಿದನು. ನಿಯಮಪೂರ್ವಕವಾಗಿ ಅವನು ಜಪ-ತಪಗಳನ್ನು ಮಾಡುತ್ತಿರಲು ಸಾವಿರ ವರ್ಷಗಳು ಕಳೆದುಹೋದವು.

12192007a ಸ ದೇವ್ಯಾ ದರ್ಶಿತಃ ಸಾಕ್ಷಾತ್ಪ್ರೀತಾಸ್ಮೀತಿ ತದಾ ಕಿಲ।
12192007c ಜಪ್ಯಮಾವರ್ತಯಂಸ್ತೂಷ್ಣೀಂ ನ ಚ ತಾಂ ಕಿಂ ಚಿದಬ್ರವೀತ್।।

ಅವನ ಆ ಜಪದಿಂದ ಪ್ರಸನ್ನಳಾಗಿ ದೇವಿಯು ಅವನಿಗೆ ಪ್ರತ್ಯಕ್ಷ ದರ್ಶನವನ್ನಿತ್ತು “ನಾನು ನಿನ್ನ ಮೇಲೆ ಪ್ರಸನ್ನಳಾಗಿದ್ದೇನೆ” ಎಂದು ಹೇಳಿದಳು. ಆದರೂ ಜಪವನ್ನು ಜಪಿಸುತ್ತಿದ್ದ ಅವನು ಅವಳಿಗೆ ಏನನ್ನೂ ಹೇಳದೇ ಸುಮ್ಮನೇ ಕುಳಿತಿದ್ದನು.

12192008a ತಸ್ಯಾನುಕಂಪಯಾ ದೇವೀ ಪ್ರೀತಾ ಸಮಭವತ್ತದಾ।
12192008c ವೇದಮಾತಾ ತತಸ್ತಸ್ಯ ತಜ್ಜಪ್ಯಂ ಸಮಪೂಜಯತ್।।

ಅವನ ಮೇಲಿನ ಅನುಕಂಪದಿಂದ ದೇವಿಯು ಇನ್ನೂ ಪ್ರೀತಳಾದಳು. ವೇದಮಾತೆಯು ಅವನ ಆ ಜಪವನ್ನು ಪ್ರಶಂಸಿಸಿದಳು.

12192009a ಸಮಾಪ್ತಜಪ್ಯಸ್ತೂತ್ಥಾಯ ಶಿರಸಾ ಪಾದಯೋಸ್ತಥಾ।
12192009c ಪಪಾತ ದೇವ್ಯಾ ಧರ್ಮಾತ್ಮಾ ವಚನಂ ಚೇದಮಬ್ರವೀತ್।।

ಜಪವು ಸಮಾಪ್ತವಾದ ನಂತರ ಆ ಧರ್ಮಾತ್ಮನು ಎದ್ದು ದೇವಿಯ ಚರಣಗಳಲ್ಲಿ ಮಸ್ತಕವನ್ನಿಟ್ಟು ಸಾಷ್ಟಾಂಗ ಪ್ರಣಾಮ ಮಾಡಿ ಹೇಳಿದನು:

12192010a ದಿಷ್ಟ್ಯಾ ದೇವಿ ಪ್ರಸನ್ನಾ ತ್ವಂ ದರ್ಶನಂ ಚಾಗತಾ ಮಮ।
12192010c ಯದಿ ವಾಪಿ ಪ್ರಸನ್ನಾಸಿ ಜಪ್ಯೇ ಮೇ ರಮತಾಂ ಮನಃ।।

“ದೇವಿ! ನೀನು ಪ್ರಸನ್ನಳಾಗಿ ನನಗೆ ದರ್ಶನವನ್ನಿತ್ತಿದುದು ನನ್ನ ಭಾಗ್ಯವೇ ಸರಿ. ನೀನು ನನ್ನ ಮೇಲೆ ಪ್ರಸನ್ನಳಾಗಿದ್ದರೆ ನನ್ನ ಮನಸ್ಸು ಜಪದಲ್ಲಿಯೇ ರಮಿಸುವಂತೆ ಕೃಪೆಮಾಡು.”

12192011 ಸಾವಿತ್ರ್ಯುವಾಚ।
12192011a ಕಿಂ ಪ್ರಾರ್ಥಯಸಿ ವಿಪ್ರರ್ಷೇ ಕಿಂ ಚೇಷ್ಟಂ ಕರವಾಣಿ ತೇ।
12192011c ಪ್ರಬ್ರೂಹಿ ಜಪತಾಂ ಶ್ರೇಷ್ಠ ಸರ್ವಂ ತತ್ತೇ ಭವಿಷ್ಯತಿ।।

ಸಾವಿತ್ರಿಯು ಹೇಳಿದಳು: “ವಿಪ್ರರ್ಷೇ! ನೀನು ಏನನ್ನು ಬೇಡುತ್ತಿದ್ದೀಯೆ? ನಿನಗಿಷ್ಟವಾದ ಏನನ್ನು ಮಾಡಲಿ? ಜಪಿಗಳಲ್ಲಿ ಶ್ರೇಷ್ಠ! ಅದನ್ನು ಹೇಳು. ಅವೆಲ್ಲವೂ ಆಗುತ್ತದೆ.””

12192012 ಭೀಷ್ಮ ಉವಾಚ।
12192012a ಇತ್ಯುಕ್ತಃ ಸ ತದಾ ದೇವ್ಯಾ ವಿಪ್ರಃ ಪ್ರೋವಾಚ ಧರ್ಮವಿತ್।
12192012c ಜಪ್ಯಂ ಪ್ರತಿ ಮಮೇಚ್ಚೇಯಂ ವರ್ಧತ್ವಿತಿ ಪುನಃ ಪುನಃ।।

ಭೀಷ್ಮನು ಹೇಳಿದನು: “ದೇವಿಯು ಹೀಗೆ ಹೇಳಲು ಆ ಧರ್ಮವಿದು ವಿಪ್ರನು ಪುನಃ ಪುನಃ “ಜಪದ ಮೇಲೆ ನನ್ನ ಇಚ್ಛೆಯು ಇನ್ನೂ ವರ್ಧಿಸಲಿ” ಎಂದು ಹೇಳಿದನು.

12192013a ಮನಸಶ್ಚ ಸಮಾಧಿರ್ಮೇ ವರ್ಧೇತಾಹರಹಃ ಶುಭೇ।
12192013c ತತ್ತಥೇತಿ ತತೋ ದೇವೀ ಮಧುರಂ ಪ್ರತ್ಯಭಾಷತ।।

“ಶುಭೇ! ನನ್ನ ಮನಸ್ಸಿನ ಏಕಾಗ್ರತೆಯು ದಿನದಿನವೂ ವರ್ಧಿಸುತ್ತಿರಲಿ!” ಆಗ ದೇವಿಯು ಮಧುರವಾಣಿಯಲ್ಲಿ “ಹಾಗೆಯೇ ಆಗಲಿ” ಎಂದಳು.

12192014a ಇದಂ ಚೈವಾಪರಂ ಪ್ರಾಹ ದೇವೀ ತತ್ಪ್ರಿಯಕಾಮ್ಯಯಾ।
12192014c ನಿರಯಂ ನೈವ ಯಾತಾಸಿ ಯತ್ರ ಯಾತಾ ದ್ವಿಜರ್ಷಭಾಃ।।

ಅವನಿಗೆ ಪ್ರಿಯವಾದುದನ್ನು ಮಾಡಲು ದೇವಿಯು ಈ ಅನ್ಯ ಮಾತನ್ನೂ ಹೇಳಿದಳು: “ದ್ವಿಜರ್ಷಭರು ಹೋಗುವ ನರಕಗಳಿಗೆ ನೀನು ಹೋಗುವುದಿಲ್ಲ.

12192015a ಯಾಸ್ಯಸಿ ಬ್ರಹ್ಮಣಃ ಸ್ಥಾನಮನಿಮಿತ್ತಮನಿಂದಿತಮ್।
12192015c ಸಾಧಯೇ ಭವಿತಾ ಚೈತದ್ಯತ್ತ್ವಯಾಹಮಿಹಾರ್ಥಿತಾ।।

ನೀನು ಅನಿಮಿತ್ತವೂ ಅನಿಂದಿತವೂ ಆದ ಬ್ರಹ್ಮಪದಕ್ಕೆ ಹೋಗುತ್ತೀಯೆ. ನೀನು ನನ್ನಲ್ಲಿ ಪ್ರಾರ್ಥಿಸಿದುದು ಪೂರ್ಣಗೊಳ್ಳುತ್ತದೆ. ನಾನು ಅದು ಹಾಗೆಯೇ ನಡೆಸುತ್ತೇನೆ.

12192016a ನಿಯತೋ ಜಪ ಚೈಕಾಗ್ರೋ ಧರ್ಮಸ್ತ್ವಾಂ ಸಮುಪೈಷ್ಯತಿ।
12192016c ಕಾಲೋ ಮೃತ್ಯುರ್ಯಮಶ್ಚೈವ ಸಮಾಯಾಸ್ಯಂತಿ ತೇಽಂತಿಕಮ್।
12192016e ಭವಿತಾ ಚ ವಿವಾದೋಽತ್ರ ತವ ತೇಷಾಂ ಚ ಧರ್ಮತಃ।।

ನೀನು ನಿಯತನಾಗಿ ಏಕಾಗ್ರಚಿತ್ತನಾಗಿ ಜಪಿಸು. ಧರ್ಮನು ಸ್ವಯಂ ತಾನೇ ನಿನ್ನ ಬಳಿ ಬರುತ್ತಾನೆ. ಕಾಲ, ಮೃತ್ಯು ಮತ್ತು ಯಮನೂ ಕೂಡ ನಿನ್ನ ಬಳಿ ಬರುತ್ತಾರೆ. ಅವರೊಂದಿಗೆ ನಿನ್ನ ಧರ್ಮತಃ ವಿವಾದವೂ ನಡೆಯುತ್ತದೆ.”

12192017a ಏವಮುಕ್ತ್ವಾ ಭಗವತೀ ಜಗಾಮ ಭವನಂ ಸ್ವಕಮ್।
12192017c ಬ್ರಾಹ್ಮಣೋಽಪಿ ಜಪನ್ನಾಸ್ತೇ ದಿವ್ಯಂ ವರ್ಷಶತಂ ತದಾ।।

ಹೀಗೆ ಹೇಳಿ ಭಗವತಿಯು ತನ್ನ ಭವನಕ್ಕೆ ತೆರಳಿದಳು. ಬ್ರಾಹ್ಮಣನೂ ಕೂಡ ನೂರು ದಿವ್ಯ ವರ್ಷಗಳ ಪರ್ಯಂತ ಜಪದಲ್ಲಿ ತೊಡಗಿದ್ದನು.

212192018a ಸಮಾಪ್ತೇ ನಿಯಮೇ ತಸ್ಮಿನ್ನಥ ವಿಪ್ರಸ್ಯ ಧೀಮತಃ।
12192018c ಸಾಕ್ಷಾತ್ಪ್ರೀತಸ್ತದಾ ಧರ್ಮೋ ದರ್ಶಯಾಮಾಸ ತಂ ದ್ವಿಜಮ್।।

ಆ ಧೀಮತ ವಿಪ್ರನ ನಿಯಮವು ಸಮಾಪ್ತವಾಗಲು ಪ್ರೀತನಾಗಿ ಸಾಕ್ಷಾತ್ ಧರ್ಮನು ದ್ವಿಜನಿಗೆ ಕಾಣಿಸಿಕೊಂಡನು.

12192019 ಧರ್ಮ ಉವಾಚ।
12192019a ದ್ವಿಜಾತೇ ಪಶ್ಯ ಮಾಂ ಧರ್ಮಮಹಂ ತ್ವಾಂ ದ್ರಷ್ಟುಮಾಗತಃ।
12192019c ಜಪ್ಯಸ್ಯ ಚ ಫಲಂ ಯತ್ತೇ ಸಂಪ್ರಾಪ್ತಂ ತಚ್ಚ ಮೇ ಶೃಣು।।

ಧರ್ಮನು ಹೇಳಿದನು: “ದ್ವಿಜಾತೀಯನೇ! ನನ್ನನ್ನು ನೋಡು. ನಾನು ಧರ್ಮ. ನಿನ್ನನ್ನು ಕಾಣಲು ಬಂದಿದ್ದೇನೆ. ಈ ಜಪದಿಂದ ನೀನು ಪಡೆದುಕೊಂಡಿರುವ ಫಲಗಳ ಕುರಿತು ನನ್ನನ್ನು ಕೇಳು.

12192020a ಜಿತಾ ಲೋಕಾಸ್ತ್ವಯಾ ಸರ್ವೇ ಯೇ ದಿವ್ಯಾ ಯೇ ಚ ಮಾನುಷಾಃ।
12192020c ದೇವಾನಾಂ ನಿರಯಾನ್ಸಾಧೋ ಸರ್ವಾನುತ್ಕ್ರಮ್ಯ ಯಾಸ್ಯಸಿ।।

ನೀನು ಎಲ್ಲ ದಿವ್ಯ ಮತ್ತು ಮಾನುಷ ಲೋಕಗಳನ್ನು ಜಯಿಸಿದ್ದೀಯೆ. ಸಾಧೋ! ನೀನು ದೇವತೆಗಳ ಲೋಕಗಳೆಲ್ಲವನ್ನೂ ದಾಟಿ ಅದಕ್ಕೂ ಮೇಲೆ ಹೋಗುತ್ತೀಯೆ.

12192021a ಪ್ರಾಣತ್ಯಾಗಂ ಕುರು ಮುನೇ ಗಚ್ಚ ಲೋಕಾನ್ಯಥೇಪ್ಸಿತಾನ್।
12192021c ತ್ಯಕ್ತ್ವಾತ್ಮನಃ ಶರೀರಂ ಚ ತತೋ ಲೋಕಾನವಾಪ್ಸ್ಯಸಿ।।

ಮುನೇ! ಪ್ರಾಣತ್ಯಾಗ ಮಾಡಿ ಬಯಸಿದ ಲೋಕಗಳಿಗೆ ಹೋಗು. ನಿನ್ನ ಶರೀರವನ್ನು ತ್ಯಜಿಸಿಯೇ ನೀನು ಆ ಲೋಕಗಳನ್ನು ಪಡೆಯುತ್ತೀಯೆ.”

12192022 ಬ್ರಾಹ್ಮಣ ಉವಾಚ।
12192022a ಕೃತಂ ಲೋಕೈರ್ಹಿ ಮೇ ಧರ್ಮ ಗಚ್ಚ ಚ ತ್ವಂ ಯಥಾಸುಖಮ್।
12192022c ಬಹುದುಃಖಸುಖಂ ದೇಹಂ ನೋತ್ಸೃಜೇಯಮಹಂ ವಿಭೋ।।

ಬ್ರಾಹ್ಮಣನು ಹೇಳಿದನು: “ಧರ್ಮ! ನಾನು ಆ ಲೋಕಗಳನ್ನು ಪಡೆದುಕೊಂಡು ಏನು ಮಾಡುತ್ತೇನೆ? ನೀನು ಯಥಾಸುಖವಾಗಿ ಹೊರಟುಹೋಗು. ವಿಭೋ! ನಾನು ಈ ಶರೀರದಲ್ಲಿ ಅನೇಕ ದುಃಖ-ಸುಖಗಳನ್ನು ಅನುಭವಿಸಿದ್ದೇನೆ. ಆದುದರಿಂದ ಇದನ್ನು ನಾನು ತ್ಯಜಿಸಲಾರೆ.”

12192023 ಧರ್ಮ ಉವಾಚ।
12192023a ಅವಶ್ಯಂ ಭೋಃ ಶರೀರಂ ತೇ ತ್ಯಕ್ತವ್ಯಂ ಮುನಿಪುಂಗವ।
12192023c ಸ್ವರ್ಗ ಆರೋಹ್ಯತಾಂ ವಿಪ್ರ ಕಿಂ ವಾ ತೇ ರೋಚತೇಽನಘ।।

ಧರ್ಮನು ಹೇಳಿದನು: “ಭೋ ಮುನಿಪುಂಗವ! ಅನಘ! ಅವಶ್ಯವಾಗಿಯೂ ನಿನಗೆ ಈ ಶರೀರವನ್ನು ತ್ಯಜಿಸಬೇಕಾಗುತ್ತದೆ. ವಿಪ್ರ! ಈಗ ಸ್ವರ್ಗವನ್ನೇರು. ಅಥವಾ ನೀನು ಏನನ್ನು ಬಯಸುತ್ತೀಯೆ?”

12192024 ಬ್ರಾಹ್ಮಣ ಉವಾಚ।
12192024a ನ ರೋಚಯೇ ಸ್ವರ್ಗವಾಸಂ ವಿನಾ ದೇಹಾದಹಂ ವಿಭೋ।
12192024c ಗಚ್ಚ ಧರ್ಮ ನ ಮೇ ಶ್ರದ್ಧಾ ಸ್ವರ್ಗಂ ಗಂತುಂ ವಿನಾತ್ಮನಾ।।

ಬ್ರಾಹ್ಮಣನು ಹೇಳಿದನು: “ವಿಭೋ! ಈ ದೇಹವಿಲ್ಲದೇ ಸ್ವರ್ಗವಾಸವನ್ನು ನಾನು ಬಯಸುವುದಿಲ್ಲ. ಆದುದರಿಂದ ಧರ್ಮ! ನೀನು ಇಲ್ಲಿಂದ ಹೊರಟು ಹೋಗು. ಈ ಶರೀರವನ್ನು ಬಿಟ್ಟು ಸ್ವರ್ಗಕ್ಕೆ ಹೋಗಲು ನನಗೆ ಸ್ವಲ್ಪವೂ ಶ್ರದ್ಧೆಯಿಲ್ಲ.”

12192025 ಧರ್ಮ ಉವಾಚ।
12192025a ಅಲಂ ದೇಹೇ ಮನಃ ಕೃತ್ವಾ ತ್ಯಕ್ತ್ವಾ ದೇಹಂ ಸುಖೀ ಭವ।
12192025c ಗಚ್ಚ ಲೋಕಾನರಜಸೋ ಯತ್ರ ಗತ್ವಾ ನ ಶೋಚಸಿ।।

ಧರ್ಮನು ಹೇಳಿದನು: “ಮನಸ್ಸಿಗೆ ದೇಹದ ಮೇಲೆ ಆಸಕ್ತಿಯಿರುವುದು ಸರಿಯಲ್ಲ. ದೇಹವನ್ನು ತ್ಯಜಿಸಿ ಸುಖಿಯಾಗು. ಆ ರಜೋಗುಣರಹಿತ ಲೋಕಗಳಿಗೆ ಹೋಗು. ಅಲ್ಲಿ ಹೋಗಿ ನೀನು ಶೋಕಿಸುವುದಿಲ್ಲ.”

12192026 ಬ್ರಾಹ್ಮಣ ಉವಾಚ।
12192026a ರಮೇ ಜಪನ್ಮಹಾಭಾಗ ಕೃತಂ ಲೋಕೈಃ ಸನಾತನೈಃ।
12192026c ಸಶರೀರೇಣ ಗಂತವ್ಯೋ ಮಯಾ ಸ್ವರ್ಗೋ ನ ವಾ ವಿಭೋ।।

ಬ್ರಾಹ್ಮಣನು ಹೇಳಿದನು: “ಮಹಾಭಾಗ! ವಿಭೋ! ನಾನು ಜಪದಲ್ಲಿಯೇ ರಮಿಸುತ್ತೇನೆ. ಸನಾತನ ಲೋಕಗಳನ್ನು ಪಡೆದು ನಾನು ಏನು ಮಾಡಲಿ? ನಾನು ಸಶರೀರನಾಗಿಯೇ ಸ್ವರ್ಗಕ್ಕೆ ಹೋಗಬಲ್ಲೆನೋ ಅಥವಾ ಇಲ್ಲವೋ ಅದನ್ನು ಹೇಳು.”

12192027 ಧರ್ಮ ಉವಾಚ।
12192027a ಯದಿ ತ್ವಂ ನೇಚ್ಚಸಿ ತ್ಯಕ್ತುಂ ಶರೀರಂ ಪಶ್ಯ ವೈ ದ್ವಿಜ।
12192027c ಏಷ ಕಾಲಸ್ತಥಾ ಮೃತ್ಯುರ್ಯಮಶ್ಚ ತ್ವಾಮುಪಾಗತಾಃ।।

ಧರ್ಮನು ಹೇಳಿದನು: “ದ್ವಿಜ! ನೀನು ಶರೀರವನ್ನು ತ್ಯಜಿಸಲು ಇಚ್ಛಿಸದೇ ಇದ್ದರೆ ಇಗೋ ನೋಡು! ಕಾಲ, ಮೃತ್ಯು ಮತ್ತು ಯಮ ಇವರು ನಿನ್ನ ಬಳಿ ಬಂದುಬಿಟ್ಟಿದ್ದಾರೆ.””

12192028 ಭೀಷ್ಮ ಉವಾಚ।
12192028a ಅಥ ವೈವಸ್ವತಃ ಕಾಲೋ ಮೃತ್ಯುಶ್ಚ ತ್ರಿತಯಂ ವಿಭೋ।
12192028c ಬ್ರಾಹ್ಮಣಂ ತಂ ಮಹಾಭಾಗಮುಪಾಗಮ್ಯೇದಮಬ್ರುವನ್।।

ಭೀಷ್ಮನು ಹೇಳಿದನು: “ವಿಭೋ! ಅಷ್ಟರಲ್ಲಿಯೇ ವೈವಸ್ವತ ಯಮ, ಕಾಲ ಮತ್ತು ಮೃತ್ಯು ಈ ಮೂವರೂ ಆ ಮಹಾಭಾಗ ಬ್ರಾಹ್ಮಣನ ಬಳಿಬಂದು ಇದನ್ನು ಹೇಳಿದರು:

312192029a ತಪಸೋಽಸ್ಯ ಸುತಪ್ತಸ್ಯ ತಥಾ ಸುಚರಿತಸ್ಯ ಚ। 12192029c ಫಲಪ್ರಾಪ್ತಿಸ್ತವ ಶ್ರೇಷ್ಠಾ ಯಮೋಽಹಂ ತ್ವಾಮುಪಬ್ರುವೇ।।

“ಚೆನ್ನಾಗಿ ತಪಿಸಿದ ನಿನ್ನ ಈ ತಪಸ್ಸು ಮತ್ತು ನಿನ್ನ ಸುಚಾರಿತ್ರ್ಯದಿಂದಾಗಿ ನಿನಗೆ ಶ್ರೇಷ್ಠ ಫಲವು ಪ್ರಾಪ್ತವಾಗಿದೆ. ಇದನ್ನು ನಿನಗೆ ಹೇಳುತ್ತಿರುವ ನಾನು ಯಮ.”

412192030a ಯಥಾವದಸ್ಯ ಜಪ್ಯಸ್ಯ ಫಲಂ ಪ್ರಾಪ್ತಸ್ತ್ವಮುತ್ತಮಮ್। 12192030c ಕಾಲಸ್ತೇ ಸ್ವರ್ಗಮಾರೋಢುಂ ಕಾಲೋಽಹಂ ತ್ವಾಮುಪಾಗತಃ।।

“ನಿನ್ನ ಈ ಜಪದ ಯಥಾಯೋಗ್ಯ ಸರ್ವೋತ್ತಮ ಫಲವು ನಿನಗೆ ಪ್ರಾಪ್ತವಾಗಿದೆ. ಆದುದರಿಂದ ಈಗ ನಿನಗೆ ಸ್ವರ್ಗಕ್ಕೆ ಹೋಗುವ ಸಮಯವು ಬಂದಿದೆ. ಇದನ್ನೇ ನಿನಗೆ ತಿಳಿಸಲು ನಾನು ಕಾಲನು ನಿನ್ನ ಬಳಿ ಬಂದಿದ್ದೇನೆ.”

512192031a ಮೃತ್ಯುಂ ಮಾ ವಿದ್ಧಿ ಧರ್ಮಜ್ಞ ರೂಪಿಣಂ ಸ್ವಯಮಾಗತಮ್। 12192031c ಕಾಲೇನ ಚೋದಿತಂ ವಿಪ್ರ ತ್ವಾಮಿತೋ ನೇತುಮದ್ಯ ವೈ।।

“ಧರ್ಮಜ್ಞ! ನನ್ನನ್ನು ಮೃತ್ಯು ಎಂದು ತಿಳಿ. ನಾನು ಸ್ವಯಂ ಶರೀರಧಾರಣೆ ಮಾಡಿ ಇಲ್ಲಿಗೆ ಬಂದಿದ್ದೇನೆ. ವಿಪ್ರ! ಕಾಲನಿಂದ ಪ್ರಚೋದಿತನಾದ ನಾನು ನಿನ್ನನ್ನು ಇಲ್ಲಿಂದ ಒಯ್ಯಲು ಇಲ್ಲಿಗೆ ಬಂದಿದ್ದೇನೆ.”

12192032 ಬ್ರಾಹ್ಮಣ ಉವಾಚ।
12192032a ಸ್ವಾಗತಂ ಸೂರ್ಯಪುತ್ರಾಯ ಕಾಲಾಯ ಚ ಮಹಾತ್ಮನೇ।
12192032c ಮೃತ್ಯವೇ ಚಾಥ ಧರ್ಮಾಯ ಕಿಂ ಕಾರ್ಯಂ ಕರವಾಣಿ ವಃ।।

ಬ್ರಾಹ್ಮಣನು ಹೇಳಿದನು: “ಸೂರ್ಯಪುತ್ರನಿಗೆ, ಮಹಾತ್ಮ ಕಾಲನಿಗೆ, ಮೃತ್ಯುವಿಗೆ ಮತ್ತು ಧರ್ಮನಿಗೆ ಸ್ವಾಗತವು. ನಿಮಗಾಗಿ ನಾನು ಏನು ಮಾಡಲಿ?””

12192033 ಭೀಷ್ಮ ಉವಾಚ।
12192033a ಅರ್ಘ್ಯಂ ಪಾದ್ಯಂ ಚ ದತ್ತ್ವಾ ಸ ತೇಭ್ಯಸ್ತತ್ರ ಸಮಾಗಮೇ।
12192033c ಅಬ್ರವೀತ್ಪರಮಪ್ರೀತಃ ಸ್ವಶಕ್ತ್ಯಾ ಕಿಂ ಕರೋಮಿ ವಃ।।

ಭೀಷ್ಮನು ಹೇಳಿದನು: “ಅವರೆಲ್ಲರ ಆ ಸಮಾಗಮದಲ್ಲಿ ಬ್ರಾಹ್ಮಣನು ಸ್ವಶಕ್ತಿಯಿದ್ದಷ್ಟು ಅರ್ಘ್ಯ, ಪಾದ್ಯಗಳನ್ನಿತ್ತು ಪರಮಪ್ರೀತನಾಗಿ “ನಿಮಗಾಗಿ ನಾನು ಏನು ಮಾಡಲಿ?” ಎಂದು ಕೇಳಿದನು.

12192034a ತಸ್ಮಿನ್ನೇವಾಥ ಕಾಲೇ ತು ತೀರ್ಥಯಾತ್ರಾಮುಪಾಗತಃ।
12192034c ಇಕ್ಷ್ವಾಕುರಗಮತ್ತತ್ರ ಸಮೇತಾ ಯತ್ರ ತೇ ವಿಭೋ।।

ವಿಭೋ! ಅದೇ ಸಮಯದಲ್ಲಿ ತೀರ್ಥಯಾತ್ರೆಮಾಡುತ್ತಿದ್ದ ರಾಜಾ ಇಕ್ಷ್ವಾಕುವೂ ಅವರೆಲ್ಲರೂ ಸೇರಿದ್ದಲ್ಲಿಗೆ ಆಗಮಿಸಿದನು.

12192035a ಸರ್ವಾನೇವ ತು ರಾಜರ್ಷಿಃ ಸಂಪೂಜ್ಯಾಭಿಪ್ರಣಮ್ಯ ಚ।
12192035c ಕುಶಲಪ್ರಶ್ನಮಕರೋತ್ಸರ್ವೇಷಾಂ ರಾಜಸತ್ತಮಃ।।

ರಾಜಸತ್ತಮ ರಾಜರ್ಷಿಯು ಅವರೆಲ್ಲರನ್ನೂ ಪೂಜಿಸಿ ನಮಸ್ಕರಿಸಿ ಎಲ್ಲರಲ್ಲಿಯೂ ಕುಶಲ ಪ್ರಶ್ನೆಗಳನ್ನು ಕೇಳಿದನು.

12192036a ತಸ್ಮೈ ಸೋಽಥಾಸನಂ ದತ್ತ್ವಾ ಪಾದ್ಯಮರ್ಘ್ಯಂ ತಥೈವ ಚ।
12192036c ಅಬ್ರವೀದ್ ಬ್ರಾಹ್ಮಣೋ ವಾಕ್ಯಂ ಕೃತ್ವಾ ಕುಶಲಸಂವಿದಮ್।।

ಬ್ರಾಹ್ಮಣನೂ ಕೂಡ ರಾಜನಿಗೆ ಅರ್ಘ್ಯ, ಪಾದ್ಯ ಮತ್ತು ಆಸನಗಳನ್ನಿತ್ತು ಕುಶಲ-ಮಂಗಲವನ್ನು ಕೇಳಿ ನಂತರ ಈ ಮಾತನ್ನಾಡಿದನು:

12192037a ಸ್ವಾಗತಂ ತೇ ಮಹಾರಾಜ ಬ್ರೂಹಿ ಯದ್ಯದಿಹೇಚ್ಚಸಿ।
12192037c ಸ್ವಶಕ್ತ್ಯಾ ಕಿಂ ಕರೋಮೀಹ ತದ್ ಭವಾನ್ ಪ್ರಬ್ರವೀತು ಮೇ।।

“ಮಹಾರಾಜ! ನಿನಗೆ ಸ್ವಾಗತ! ನೀನು ಎನನ್ನು ಬಯಸುತ್ತೀಯೋ ಅದನ್ನು ಇಲ್ಲಿ ಹೇಳು. ನಾನು ನನ್ನ ಶಕ್ತ್ಯಾನುಸಾರ ನಿನಗೆ ಯಾವ ಸೇವೆಯನ್ನು ಮಾಡಬೇಕು? ಅದನ್ನು ನೀನು ನನಗೆ ಹೇಳು.”

12192038 ರಾಜೋವಾಚ।
12192038a ರಾಜಾಹಂ ಬ್ರಾಹ್ಮಣಶ್ಚ ತ್ವಂ ಯದಿ ಷಟ್ಕರ್ಮಸಂಸ್ಥಿತಃ।
12192038c ದದಾಮಿ ವಸು ಕಿಂ ಚಿತ್ತೇ ಪ್ರಾರ್ಥಿತಂ ತದ್ವದಸ್ವ ಮೇ।।

ರಾಜನು ಹೇಳಿದನು: “ರಾಜನು ನಾನು. ನೀನು ಷಟ್ಕರ್ಮಗಳಲ್ಲಿ ಸಂಸ್ಥಿತನಾದ ಬ್ರಾಹ್ಮಣನಾಗಿದ್ದರೆ ಹೇಳು. ನೀನು ಕೇಳಿದಷ್ಟು ಸಂಪತ್ತನ್ನು ಕೊಡುತ್ತೇನೆ.”

12192039 ಬ್ರಾಹ್ಮಣ ಉವಾಚ।
12192039a ದ್ವಿವಿಧಾ ಬ್ರಾಹ್ಮಣಾ ರಾಜನ್ ಧರ್ಮಶ್ಚ ದ್ವಿವಿಧಃ ಸ್ಮೃತಃ।
12192039c ಪ್ರವೃತ್ತಶ್ಚ ನಿವೃತ್ತಶ್ಚ ನಿವೃತ್ತೋಽಸ್ಮಿ ಪ್ರತಿಗ್ರಹಾತ್।।

ಬ್ರಾಹ್ಮಣನು ಹೇಳಿದನು: “ರಾಜನ್! ಎರಡು ವಿಧದ ಬ್ರಾಹ್ಮಣರಿದ್ದಾರೆ. ಧರ್ಮದಲ್ಲಿಯೂ ಕೂಡ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ವಿಧಗಳಿವೆಯೆಂದು ಹೇಳುತ್ತಾರೆ. ಪ್ರತಿಗ್ರಹದಿಂದ ನಾನು ನಿವೃತ್ತ ಬ್ರಾಹ್ಮಣನು.

12192040a ತೇಭ್ಯಃ ಪ್ರಯಚ್ಚ ದಾನಾನಿ ಯೇ ಪ್ರವೃತ್ತಾ ನರಾಧಿಪ।
12192040c ಅಹಂ ನ ಪ್ರತಿಗೃಹ್ಣಾಮಿ ಕಿಮಿಷ್ಟಂ ಕಿಂ ದದಾನಿ ತೇ।
12192040e ಬ್ರೂಹಿ ತ್ವಂ ನೃಪತಿಶ್ರೇಷ್ಠ ತಪಸಾ ಸಾಧಯಾಮಿ ಕಿಮ್।।

ನರಾಧಿಪ! ನೀನು ಪ್ರವೃತ್ತಮಾರ್ಗದಲ್ಲಿರುವ ಬ್ರಾಹ್ಮಣರಿಗೆ ದಾನವನ್ನು ನೀಡು. ನಾನು ದಾನವನ್ನು ಸ್ವೀಕರಿಸುವುದಿಲ್ಲ. ನಿನಗೆ ಈಗ ಯಾವುದು ಇಷ್ಟ? ನಿನಗೆ ನಾನು ಏನನ್ನು ಕೊಡಲಿ? ಹೇಳು. ನೃಪತಿಶ್ರೇಷ್ಠ! ನನ್ನ ತಪಸ್ಸಿನ ಪ್ರಭಾವದಿಂದ ನಿನ್ನ ಯಾವ ಕಾರ್ಯವನ್ನು ಸಿದ್ಧಿಸಲಿ?”

12192041 ರಾಜೋವಾಚ।
12192041a ಕ್ಷತ್ರಿಯೋಽಹಂ ನ ಜಾನಾಮಿ ದೇಹೀತಿ ವಚನಂ ಕ್ವ ಚಿತ್।
12192041c ಪ್ರಯಚ್ಚ ಯುದ್ಧಮಿತ್ಯೇವಂ ವಾದಿನಃ ಸ್ಮೋ ದ್ವಿಜೋತ್ತಮ।।

ರಾಜನು ಹೇಳಿದನು: “ದ್ವಿಜೋತ್ತಮ! ನಾನು ಕ್ಷತ್ರಿಯನು. “ದೇಹಿ” ಎಂಬ ವಚನವನ್ನು ನಾನು ಸ್ವಲ್ಪವೂ ಅರಿತಿಲ್ಲ. ಬೇಡುವುದಾದರೆ ನಾವು ಸದಾ “ಯುದ್ಧವನ್ನು ನೀಡು” ಎಂದೇ ಕೇಳಿಕೊಳ್ಳುತ್ತೇವೆ.”

12192042 ಬ್ರಾಹ್ಮಣ ಉವಾಚ।
12192042a ತುಷ್ಯಸಿ ತ್ವಂ ಸ್ವಧರ್ಮೇಣ ತಥಾ ತುಷ್ಟಾ ವಯಂ ನೃಪ।
12192042c ಅನ್ಯೋನ್ಯಸ್ಯೋತ್ತರಂ ನಾಸ್ತಿ ಯದಿಷ್ಟಂ ತತ್ಸಮಾಚರ।।

ಬ್ರಾಹ್ಮಣನು ಹೇಳಿದನು: “ನೃಪ! ನೀನು ಹೇಗೆ ನಿನ್ನ ಸ್ವಧರ್ಮದಲ್ಲಿ ಸಂತುಷ್ಟನಾಗಿರುವೆಯೋ ನಾನೂ ಕೂಡ ನನ್ನ ಧರ್ಮದಲ್ಲಿ ಸಂತುಷ್ಟನಾಗಿದ್ದೇನೆ. ನಮ್ಮಿಬ್ಬರಲ್ಲಿ ಯಾವ ಅಂತರವೂ ಇಲ್ಲ. ಆದುದರಿಂದ ನಿನಗೆ ಯಾವುದು ಇಷ್ಟವಾಗಿದೆಯೋ ಅದನ್ನೇ ಮಾಡು.”

12192043 ರಾಜೋವಾಚ।
12192043a ಸ್ವಶಕ್ತ್ಯಾಹಂ ದದಾನೀತಿ ತ್ವಯಾ ಪೂರ್ವಂ ಪ್ರಭಾಷಿತಮ್।
12192043c ಯಾಚೇ ತ್ವಾಂ ದೀಯತಾಂ ಮಹ್ಯಂ ಜಪ್ಯಸ್ಯಾಸ್ಯ ಫಲಂ ದ್ವಿಜ।।

ರಾಜನು ಹೇಳಿದನು: “ಹಿಂದೆ ನೀನು “ಸ್ವಶಕ್ತಿಯುತವಾಗಿ ಕೊಡುತ್ತೇನೆ” ಎಂದು ಹೇಳಿದ್ದೆ. ದ್ವಿಜ! ನಿನ್ನ ಜಪದ ಫಲವನ್ನೇ ನನಗೆ ನೀಡು ಎಂದು ನಾನು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ.”

12192044 ಬ್ರಾಹ್ಮಣ ಉವಾಚ।
12192044a ಯುದ್ಧಂ ಮಮ ಸದಾ ವಾಣೀ ಯಾಚತೀತಿ ವಿಕತ್ಥಸೇ।
12192044c ನ ಚ ಯುದ್ಧಂ ಮಯಾ ಸಾರ್ಧಂ ಕಿಮರ್ಥಂ ಯಾಚಸೇ ಪುನಃ।।

ಬ್ರಾಹ್ಮಣನು ಹೇಳಿದನು: “ನೀನಾದರೋ “ಸದಾ ಯುದ್ಧವನ್ನೇ ನಾನು ಯಾಚಿಸುತ್ತೇನೆ” ಎಂದು ಜಂಬಕೊಚ್ಚಿಕೊಳ್ಳುತ್ತಿದ್ದೆ. ಈಗ ಏಕೆ ಪುನಃ ನನ್ನಲ್ಲಿ ಯುದ್ಧವನ್ನು ಕೇಳುತ್ತಿಲ್ಲ?”

12192045 ರಾಜೋವಾಚ।
12192045a ವಾಗ್ವಜ್ರಾ ಬ್ರಾಹ್ಮಣಾಃ ಪ್ರೋಕ್ತಾಃ ಕ್ಷತ್ರಿಯಾ ಬಾಹುಜೀವಿನಃ।
12192045c ವಾಗ್ಯುದ್ಧಂ ತದಿದಂ ತೀವ್ರಂ ಮಮ ವಿಪ್ರ ತ್ವಯಾ ಸಹ।।

ರಾಜನು ಹೇಳಿದನು: “ವಿಪ್ರ! ಬ್ರಾಹ್ಮಣರ ಮಾತೇ ವಜ್ರದಂತಿರುತ್ತದೆ ಮತ್ತು ಕ್ಷತ್ರಿಯರು ಬಾಹುಜೀವಿಗಳು ಎಂದು ಹೇಳುತ್ತಾರೆ. ಆದುದರಿಂದ ನಿನ್ನೊಂದಿಗೆ ನನ್ನ ಈ ತೀವ್ರ ವಾಗ್ಯುದ್ಧವು ನಡೆಯುತ್ತಿದೆ.”

12192046 ಬ್ರಾಹ್ಮಣ ಉವಾಚ।
12192046a ಸೈವಾದ್ಯಾಪಿ ಪ್ರತಿಜ್ಞಾ ಮೇ ಸ್ವಶಕ್ತ್ಯಾ ಕಿಂ ಪ್ರದೀಯತಾಮ್।
12192046c ಬ್ರೂಹಿ ದಾಸ್ಯಾಮಿ ರಾಜೇಂದ್ರ ವಿಭವೇ ಸತಿ ಮಾಚಿರಮ್।।

ಬ್ರಾಹ್ಮಣನು ಹೇಳಿದನು: “ರಾಜೇಂದ್ರ! ಈಗಲೂ ಕೂಡ ನನ್ನ ಅದೇ ಪ್ರತಿಜ್ಞೆಯಿದೆ. ನಾನು ನನ್ನ ಶಕ್ತಿಯ ಅನುಸಾರ ನಿನಗೆ ಏನನ್ನು ನೀಡಲಿ? ಹೇಳು. ತಡಮಾಡಬೇಡ.”

12192047 ರಾಜೋವಾಚ।
12192047a ಯತ್ತದ್ವರ್ಷಶತಂ ಪೂರ್ಣಂ ಜಪ್ಯಂ ವೈ ಜಪತಾ ತ್ವಯಾ।
12192047c ಫಲಂ ಪ್ರಾಪ್ತಂ ತತ್ಪ್ರಯಚ್ಚ ಮಮ ದಿತ್ಸುರ್ಭವಾನ್ಯದಿ।।

ರಾಜನು ಹೇಳಿದನು: “ನೀನು ನೀಡುವುದನ್ನೇ ಬಯಸಿದರೆ ನನಗೆ ಈ ಪೂರ್ಣ ನೂರು ವರ್ಷಗಳು ನೀನು ಜಪಿಸಿದ ಜಪದ ಫಲವನ್ನು ಕೊಡು.”

12192048 ಬ್ರಾಹ್ಮಣ ಉವಾಚ।
12192048a ಪರಮಂ ಗೃಹ್ಯತಾಂ ತಸ್ಯ ಫಲಂ ಯಜ್ಜಪಿತಂ ಮಯಾ।
12192048c ಅರ್ಧಂ ತ್ವಮವಿಚಾರೇಣ ಫಲಂ ತಸ್ಯ ಸಮಾಪ್ನುಹಿ।।
12192049a ಅಥ ವಾ ಸರ್ವಮೇವೇಹ ಜಪ್ಯಕಂ ಮಾಮಕಂ ಫಲಮ್।
12192049c ರಾಜನ್ ಪ್ರಾಪ್ನುಹಿ ಕಾಮಂ ತ್ವಂ ಯದಿ ಸರ್ವಮಿಹೇಚ್ಚಸಿ।।

ಬ್ರಾಹ್ಮಣನು ಹೇಳಿದನು: “ರಾಜನ್! ನಾನು ಮಾಡಿದ ಜಪದ ಈ ಉತ್ತಮ ಫಲವನ್ನು ಸ್ವೀಕರಿಸು. ನನ್ನ ಅರ್ಧ ಫಲವನ್ನು ನೀನು ಏನನ್ನೂ ವಿಚಾರಿಸದೆಯೇ ಸ್ವೀಕರಿಸು. ಅಥವಾ ನಾನು ಮಾಡಿದ ಈ ಜಪದ ಸಂಪೂರ್ಣ ಫಲವನ್ನು ತೆಗೆದುಕೊಳ್ಳಲು ಬಯಸುವೆಯಾದರೆ ಅವಶ್ಯವಾಗಿ ನಿನ್ನ ಇಚ್ಛಾನುಸಾರ ಅವೆಲ್ಲವನ್ನೂ ಪಡೆದುಕೋ!”

12192050 ರಾಜೋವಾಚ।
12192050a ಕೃತಂ ಸರ್ವೇಣ ಭದ್ರಂ ತೇ ಜಪ್ಯಂ ಯದ್ಯಾಚಿತಂ ಮಯಾ।
12192050c ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಕಿಂ ಚ ತಸ್ಯ ಫಲಂ ವದ।।

ರಾಜನು ಹೇಳಿದನು: “ನಾನು ಕೇಳಿದ ಜಪದ ಫಲವನ್ನು ಕೊಟ್ಟು ನೀನು ಎಲ್ಲವನ್ನೂ ಮಾಡಿದ್ದೀಯೆ. ನಿನಗೆ ಮಂಗಳವಾಗಲಿ. ನಾನಿನ್ನು ಹೋಗುತ್ತೇನೆ. ಆದರೆ ಆ ಫಲವೇನು ಎನ್ನುವುದನ್ನಾದರೂ ಹೇಳು.”

12192051 ಬ್ರಾಹ್ಮಣ ಉವಾಚ।
12192051a ಫಲಪ್ರಾಪ್ತಿಂ ನ ಜಾನಾಮಿ ದತ್ತಂ ಯಜ್ಜಪಿತಂ ಮಯಾ।
12192051c ಅಯಂ ಧರ್ಮಶ್ಚ ಕಾಲಶ್ಚ ಯಮೋ ಮೃತ್ಯುಶ್ಚ ಸಾಕ್ಷಿಣಃ।।

ಬ್ರಾಹ್ಮಣನು ಹೇಳಿದನು: “ನಾನು ನಿನಗೆ ನೀಡಿದ ಜಪದ ಫಲಪ್ರಾಪ್ತಿಯೇನೆಂದು ನನಗೆ ಗೊತ್ತಿಲ್ಲ. ಆದರೆ ನಾನು ಜಪಿಸಿದುದರ ಸರ್ವ ಫಲವನ್ನೂ ನಿನಗೆ ಕೊಟ್ಟಿದ್ದೇನೆ. ಈ ಧರ್ಮ, ಯಮ, ಮೃತ್ಯು ಮತ್ತು ಕಾಲ ಇವರು ಅದಕ್ಕೆ ಸಾಕ್ಷಿಗಳು.”

12192052 ರಾಜೋವಾಚ।
12192052a ಅಜ್ಞಾತಮಸ್ಯ ಧರ್ಮಸ್ಯ ಫಲಂ ಮೇ ಕಿಂ ಕರಿಷ್ಯತಿ। 612192052c ಪ್ರಾಪ್ನೋತು ತತ್ಫಲಂ ವಿಪ್ರೋ ನಾಹಮಿಚ್ಚೇ ಸಸಂಶಯಮ್।।

ರಾಜನು ಹೇಳಿದನು: “ತಿಳಿಯದೇ ಇರುವ ಈ ಧರ್ಮದ ಫಲದಿಂದ ನಾನೇನು ಮಾಡಬಲ್ಲೆ? ವಿಪ್ರ! ಆ ಎಲ್ಲ ಫಲಗಳನ್ನೂ ನೀನೇ ಇಟ್ಟುಕೋ. ನಿಶ್ಚಯವಾಗಿಯೂ ನಾನು ಅದನ್ನು ಬಯಸುವುದಿಲ್ಲ.”

12192053 ಬ್ರಾಹ್ಮಣ ಉವಾಚ।
12192053a ನಾದದೇಽಪರವಕ್ತವ್ಯಂ ದತ್ತಂ ವಾಚಾ ಫಲಂ ಮಯಾ।
12192053c ವಾಕ್ಯಂ ಪ್ರಮಾಣಂ ರಾಜರ್ಷೇ ಮಮಾಪಿ ತವ ಚೈವ ಹಿ।।

ಬ್ರಾಹ್ಮಣನು ಹೇಳಿದನು: “ರಾಜರ್ಷೇ! ನಾನಾದರೋ ನನ್ನ ಜಪದ ಫಲವನ್ನು ಕೊಟ್ಟುಬಿಟ್ಟಿದ್ದೇನೆ. ಅನ್ಯ ಮಾತನ್ನು ನಾನು ಸ್ವೀಕರಿಸುವುದಿಲ್ಲ. ಈ ವಿಷಯದಲ್ಲಿ ನನ್ನ ಮತ್ತು ನಿನ್ನ ಮಾತುಗಳೇ ಪ್ರಮಾಣಗಳು.

12192054a ನಾಭಿಸಂಧಿರ್ಮಯಾ ಜಪ್ಯೇ ಕೃತಪೂರ್ವಃ ಕಥಂ ಚನ।
12192054c ಜಪ್ಯಸ್ಯ ರಾಜಶಾರ್ದೂಲ ಕಥಂ ಜ್ಞಾಸ್ಯಾಮ್ಯಹಂ ಫಲಮ್।।

ರಾಜಶಾರ್ದೂಲ! ನಾನು ಜಪಮಾಡುವಾಗ ಎಂದೂ ಫಲವನ್ನು ಬಯಸಿರಲಿಲ್ಲ. ಆದುದರಿಂದ ಈ ಜಪದ ಫಲವೇನೆನ್ನುವುದನ್ನು ನಾನು ಹೇಗೆ ತಿಳಿದೇನು?

12192055a ದದಸ್ವೇತಿ ತ್ವಯಾ ಚೋಕ್ತಂ ದದಾಮೀತಿ ತಥಾ ಮಯಾ।
12192055c ನ ವಾಚಂ ದೂಷಯಿಷ್ಯಾಮಿ ಸತ್ಯಂ ರಕ್ಷ ಸ್ಥಿರೋ ಭವ।।

ಕೊಡು ಎಂದು ನೀನು ಕೇಳಿದೆ. ಕೊಡುತ್ತೇನೆ ಎಂದು ನಾನು ಹೇಳಿದೆ. ಈ ವಿಷಯದಲ್ಲಿ ನನ್ನ ಮಾತನ್ನು ದೂಷಿತಗೊಳಿಸುವುದಿಲ್ಲ. ನೀನು ಸತ್ಯವನ್ನು ರಕ್ಷಿಸು ಮತ್ತು ಸ್ಥಿರನಾಗಿರು.

12192056a ಅಥೈವಂ ವದತೋ ಮೇಽದ್ಯ ವಚನಂ ನ ಕರಿಷ್ಯಸಿ।
12192056c ಮಹಾನಧರ್ಮೋ ಭವಿತಾ ತವ ರಾಜನ್ಮೃಷಾಕೃತಃ।।

ರಾಜನ್! ಈ ರೀತಿ ಸ್ಪಷ್ಟವಾಗಿ ಹೇಳಿದರೂ ಇಂದು ನೀನು ನನ್ನ ಮಾತನ್ನು ಪಾಲಿಸದೇ ಇದ್ದರೆ ನಿನಗೆ ಅಸತ್ಯದ ಮಹಾಪಾಪವು ತಗಲುತ್ತದೆ.

12192057a ನ ಯುಕ್ತಂ ತು ಮೃಷಾ ವಾಣೀ ತ್ವಯಾ ವಕ್ತುಮರಿಂದಮ।
12192057c ತಥಾ ಮಯಾಪ್ಯಭ್ಯಧಿಕಂ ಮೃಷಾ ವಕ್ತುಂ ನ ಶಕ್ಯತೇ।।

ಅರಿಂದಮ! ಸುಳ್ಳನ್ನು ಹೇಳುವುದು ನಿನಗೂ ಸರಿಯಲ್ಲ. ಮತ್ತು ನಾನೂ ಕೂಡ ಹೇಳಿದ ಮಾತನ್ನು ಸುಳ್ಳಾಗಿಸಲಾರೆ.

12192058a ಸಂಶ್ರುತಂ ಚ ಮಯಾ ಪೂರ್ವಂ ದದಾನೀತ್ಯವಿಚಾರಿತಮ್।
12192058c ತದ್ಗೃಹ್ಣೀಷ್ವಾವಿಚಾರೇಣ ಯದಿ ಸತ್ಯೇ ಸ್ಥಿತೋ ಭವಾನ್।।

ನಾನು ಏನನ್ನೂ ವಿಚಾರಿಸದೇ ಮೊದಲೇ ನಿನಗೆ ಕೊಡುತ್ತೇನೆ ಎಂದು ಹೇಳಿಬಿಟ್ಟೆ. ಆದುದರಿಂದ ನೀನೂ ಕೂಡ ಏನನ್ನೂ ವಿಚಾರಿಸದೇ ನಾನು ನೀಡಿದ್ದುದನ್ನು ಸ್ವೀಕರಿಸು. ನೀನು ಸತ್ಯಸ್ಥಿತನಾಗಿರುವೆಯಾದರೆ ಇದನ್ನೇ ಅವಶ್ಯವಾಗಿ ಮಾಡಬೇಕು.

12192059a ಇಹಾಗಮ್ಯ ಹಿ ಮಾಂ ರಾಜನ್ ಜಾಪ್ಯಂ ಫಲಮಯಾಚಿಥಾಃ।
12192059c ತನ್ಮನ್ನಿಸೃಷ್ಟಂ ಗೃಹ್ಣೀಷ್ವ ಭವ ಸತ್ಯೇ ಸ್ಥಿರೋಽಪಿ ಚ।।

ರಾಜನ್! ನೀನು ಸ್ವಯಂ ಇಲ್ಲಿಗೆ ಬಂದು ನನ್ನಲ್ಲಿ ಜಪದ ಫಲವನ್ನು ಯಾಚಿಸಿದೆ ಮತ್ತು ನಾನು ಅದನ್ನು ನಿನಗೆ ಕೊಟ್ಟುಬಿಟ್ಟಿದ್ದೇನೆ. ಆದುದರಿದ ನೀನು ಅದನ್ನು ಸ್ವೀಕರಿಸಬೇಕು ಮತ್ತು ಸತ್ಯದಲ್ಲಿ ಸ್ಥಿರನಾಗಿರಬೇಕು.

12192060a ನಾಯಂ ಲೋಕೋಽಸ್ತಿ ನ ಪರೋ ನ ಚ ಪೂರ್ವಾನ್ಸ ತಾರಯೇತ್।
12192060c ಕುತ ಏವಾವರಾನ್ರಾಜನ್ಮೃಷಾವಾದಪರಾಯಣಃ।।

ರಾಜನ್! ಸುಳ್ಳನ್ನು ಹೇಳುವವನಿಗೆ ಇಲ್ಲಿಯಾಗಲೀ ಅಥವಾ ಪರಲೋಕದಲ್ಲಿಯಾಗಲೀ ಸುಖವಿರುವುದಿಲ್ಲ. ಅವನು ತನ್ನ ಪೂರ್ವಜರನ್ನೂ ಉದ್ಧರಿಸಲಾರ. ಇನ್ನು ಮುಂದಿನ ಸಂತತಿಯ ಉದ್ಧಾರವನ್ನಾದರೂ ಹೇಗೆ ಮಾಡಿಯಾನು?

12192061a ನ ಯಜ್ಞಾಧ್ಯಯನೇ ದಾನಂ ನಿಯಮಾಸ್ತಾರಯಂತಿ ಹಿ।
12192061c ತಥಾ ಸತ್ಯಂ ಪರೇ ಲೋಕೇ ಯಥಾ ವೈ ಪುರುಷರ್ಷಭ।।

ಪುರುಷರ್ಷಭ! ಪರಲೋಕದಲ್ಲಿ ಸತ್ಯವು ಉದ್ಧರಿಸುವಷ್ಟು ಯಜ್ಞವಾಗಲೀ, ವೇದಾಧ್ಯಯನವಾಗಲೀ, ದಾನವಾಗಲೀ ಮತ್ತು ನಿಯಮಗಳಾಗಲೀ ಉದ್ಧರಿಸಲಾರವು.

12192062a ತಪಾಂಸಿ ಯಾನಿ ಚೀರ್ಣಾನಿ ಚರಿಷ್ಯಸಿ ಚ ಯತ್ತಪಃ।
12192062c ಸಮಾಃ ಶತೈಃ ಸಹಸ್ರೈಶ್ಚ ತತ್ಸತ್ಯಾನ್ನ ವಿಶಿಷ್ಯತೇ।।

ಜನರು ಇಲ್ಲಿಯವರೆಗೆ ಮಾಡಿರುವ ತಪಸ್ಸು ಮತ್ತು ಭವಿಷ್ಯದಲ್ಲಿ ಮಾಡುವ ತಪಸ್ಸು ಇವೆಲ್ಲವುಗಳ ನೂರು ಪಟ್ಟು ಅಥವಾ ಸಾವಿರಪಟ್ಟು ಒಂದೆಡೆ ಕೂಡಿಟ್ಟರೂ ಅವುಗಳ ಮಹತ್ವವು ಸತ್ಯಕ್ಕಿಂತಲೂ ಹೆಚ್ಚೇನೂ ಆಗುವುದಿಲ್ಲ.

12192063a ಸತ್ಯಮೇಕಾಕ್ಷರಂ ಬ್ರಹ್ಮ ಸತ್ಯಮೇಕಾಕ್ಷರಂ ತಪಃ।
12192063c ಸತ್ಯಮೇಕಾಕ್ಷರೋ ಯಜ್ಞಃ ಸತ್ಯಮೇಕಾಕ್ಷರಂ ಶ್ರುತಮ್।।

ಸತ್ಯವೇ ಏಕಮಾತ್ರ ಅವಿನಾಶೀ ಬ್ರಹ್ಮವು. ಸತ್ಯವೇ ಏಕಮಾತ್ರ ಅಕ್ಷಯ ತಪವು. ಸತ್ಯವೇ ಏಕಮಾತ್ರ ಅವಿನಾಶೀ ಯಜ್ಞವು. ಮತ್ತು ಸತ್ಯವೇ ಏಕಮಾತ್ರ ನಾಶರಹಿತ ಸನಾತನ ವೇದವು.

12192064a ಸತ್ಯಂ ವೇದೇಷು ಜಾಗರ್ತಿ ಫಲಂ ಸತ್ಯೇ ಪರಂ ಸ್ಮೃತಮ್।
12192064c ಸತ್ಯಾದ್ಧರ್ಮೋ ದಮಶ್ಚೈವ ಸರ್ವಂ ಸತ್ಯೇ ಪ್ರತಿಷ್ಠಿತಮ್।।

ವೇದಗಳಲ್ಲಿ ಸತ್ಯವೇ ಎಚ್ಚೆತ್ತಿದೆ. ಅದರ ಮಹಿಮೆಯನ್ನೇ ಹೇಳಲಾಗಿದೆ. ಸತ್ಯದ ಫಲವು ಎಲ್ಲದಕ್ಕಿಂತ ಶ್ರೇಷ್ಠ ಎಂದು ಹೇಳಿದ್ದಾರೆ. ಧರ್ಮ ಮತ್ತು ಇಂದ್ರಿಯನಿಗ್ರಹಗಳೂ ಸತ್ಯದಿಂದಲೇ ನಡೆಯುತ್ತವೆ. ಸರ್ವವೂ ಸತ್ಯವನ್ನೇ ಆಶ್ರಯಿಸಿದೆ.

12192065a ಸತ್ಯಂ ವೇದಾಸ್ತಥಾಂಗಾನಿ ಸತ್ಯಂ ಯಜ್ಞ7ಸ್ತಥಾ ವಿಧಿಃ।
12192065c ವ್ರತಚರ್ಯಾಸ್ತಥಾ ಸತ್ಯಮೋಂಕಾರಃ ಸತ್ಯಮೇವ ಚ।।

ಸತ್ಯವೇ ವೇದ ಮತ್ತು ವೇದಾಂಗಗಳು. ಸತ್ಯವೇ ಯಜ್ಞ ಮತ್ತು ಯಜ್ಞವಿಧಿ. ವ್ರತಾಚರಣೆಗಳೂ ಸತ್ಯವೇ. ಓಂಕಾರವೂ ಸತ್ಯವೇ.

12192066a ಪ್ರಾಣಿನಾಂ ಜನನಂ ಸತ್ಯಂ ಸತ್ಯಂ ಸಂತತಿರೇವ ಚ।
12192066c ಸತ್ಯೇನ ವಾಯುರಭ್ಯೇತಿ ಸತ್ಯೇನ ತಪತೇ ರವಿಃ।।

ಸತ್ಯವು ಪ್ರಾಣಿಗಳಿಗೆ ಜನ್ಮನೀಡುತ್ತದೆ. ಸತ್ಯವೇ ಸಂತತಿಯು. ಸತ್ಯದಿಂದಲೇ ವಾಯುವು ಚಲಿಸುತ್ತದೆ. ಸತ್ಯದಿಂದಲೇ ರವಿಯು ಸುಡುತ್ತಾನೆ.

12192067a ಸತ್ಯೇನ ಚಾಗ್ನಿರ್ದಹತಿ ಸ್ವರ್ಗಃ ಸತ್ಯೇ ಪ್ರತಿಷ್ಠಿತಃ।
12192067c ಸತ್ಯಂ ಯಜ್ಞಸ್ತಪೋ ವೇದಾಃ ಸ್ತೋಭಾ ಮಂತ್ರಾಃ ಸರಸ್ವತೀ।।

ಸತ್ಯದಿಂದಲೇ ಅಗ್ನಿಯು ದಹಿಸುತ್ತಾನೆ ಮತ್ತು ಸ್ವರ್ಗವೂ ಸತ್ಯದಲ್ಲಿಯೇ ಪ್ರತಿಷ್ಠಿತಗೊಂಡಿದೆ. ಯಜ್ಞ, ತಪಸ್ಸು, ವೇದಗಳು, ಸ್ತೋಭ8, ಮಂತ್ರ ಮತ್ತು ಸರಸ್ವತೀ ಎಲ್ಲವೂ ಸತ್ಯಸ್ವರೂಪಗಳೇ ಆಗಿವೆ.

12192068a ತುಲಾಮಾರೋಪಿತೋ ಧರ್ಮಃ ಸತ್ಯಂ ಚೈವೇತಿ ನಃ ಶ್ರುತಮ್।
12192068c ಸಮಾಂ ಕಕ್ಷಾಂ ಧಾರಯತೋ ಯತಃ ಸತ್ಯಂ ತತೋಽಧಿಕಮ್।।

ಒಮ್ಮೆ ತಕ್ಕಡಿಯಲ್ಲಿ ಧರ್ಮ ಮತ್ತು ಸತ್ಯಗಳನ್ನು ಇಟ್ಟು ತೂಗಿದರೆಂದು ನಾವು ಕೇಳಿದ್ದೇವೆ. ಆಗ ಯಾವಕಡೆ ಸತ್ಯವಿತ್ತೋ ಅದೇ ಅಧಿಕ ಭಾರವಾಗಿತ್ತಂತೆ.

12192069a ಯತೋ ಧರ್ಮಸ್ತತಃ ಸತ್ಯಂ ಸರ್ವಂ ಸತ್ಯೇನ ವರ್ಧತೇ।
12192069c ಕಿಮರ್ಥಮನೃತಂ ಕರ್ಮ ಕರ್ತುಂ ರಾಜಂಸ್ತ್ವಮಿಚ್ಚಸಿ।।

ಎಲ್ಲಿ ಧರ್ಮವಿದೆಯೋ ಅಲ್ಲಿ ಸತ್ಯವಿದೆ. ಸತ್ಯದಿಂದಲೇ ಎಲ್ಲದರ ವೃದ್ಧಿಯಾಗುತ್ತದೆ. ರಾಜನ್! ನೀನು ಏಕೆ ಅಸತ್ಯಕರ್ಮವನ್ನು ಮಾಡಲು ಇಚ್ಛಿಸುತ್ತೀಯೆ?

12192070a ಸತ್ಯೇ ಕುರು ಸ್ಥಿರಂ ಭಾವಂ ಮಾ ರಾಜನ್ನನೃತಂ ಕೃಥಾಃ।
12192070c ಕಸ್ಮಾತ್ತ್ವಮನೃತಂ ವಾಕ್ಯಂ ದೇಹೀತಿ ಕುರುಷೇಽಶುಭಮ್।।

ರಾಜನ್! ಸತ್ಯದಲ್ಲಿಯೇ ನಿನ್ನ ಮನಸ್ಸನ್ನು ಸ್ಥಿರಗೊಳಿಸು. ಮಿಥ್ಯಾಪೂರ್ಣವಾಗಿ ನಡೆದುಕೊಳ್ಳಬೇಡ. ಸ್ವೀಕರಿಸುವುದೇ ಬೇಡವಾಗಿದ್ದರೆ ನೀನೇಕೆ ಕೊಡು ಎಂಬ ಅಶುಭ ವಾಕ್ಯವನ್ನು ನನ್ನಲ್ಲಿ ಹೇಳಿದೆ?

12192071a ಯದಿ ಜಪ್ಯಫಲಂ ದತ್ತಂ ಮಯಾ ನೇಷಿಷ್ಯಸೇ ನೃಪ।
12192071c ಸ್ವಧರ್ಮೇಭ್ಯಃ ಪರಿಭ್ರಷ್ಟೋ ಲೋಕಾನನುಚರಿಷ್ಯಸಿ।।

ನೃಪ! ನಾನು ನೀಡಿದ ಈ ಜಪದ ಫಲವನ್ನು ನೀನು ಸ್ವೀಕರಿಸದೇ ಇದ್ದರೆ ಧರ್ಮಭ್ರಷ್ಟನಾಗಿ ಸಂಪೂರ್ಣ ಲೋಕದಲ್ಲಿ ಅಲೆಯುತ್ತೀಯೆ.

12192072a ಸಂಶ್ರುತ್ಯ ಯೋ ನ ದಿತ್ಸೇತ ಯಾಚಿತ್ವಾ ಯಶ್ಚ ನೇಚ್ಚತಿ।
12192072c ಉಭಾವಾನೃತಿಕಾವೇತೌ ನ ಮೃಷಾ ಕರ್ತುಮರ್ಹಸಿ।।

ಮೊದಲು ಕೊಡುತ್ತೇನೆಂದು ಹೇಳಿ ನಂತರ ಕೊಡಲು ಇಚ್ಛಿಸದ ಮತ್ತು ಮೊದಲು ಕೇಳಿ ನಂತರ ದೊರಕಿದಾಗ ಅದನ್ನು ಸ್ವೀಕರಿಸಲು ಇಚ್ಛಿಸದ ಇಬ್ಬರೂ ಮಿಥ್ಯಾವಾದಿಗಳಾಗುತ್ತಾರೆ. ಆದುದರಿಂದ ನೀನು ನಿನ್ನ ಮತ್ತು ನನ್ನ ಇಬ್ಬರ ಮಾತುಗಳನ್ನು ಸುಳ್ಳಾಗಿಸಬೇಡ!”

12192073 ರಾಜೋವಾಚ।
12192073a ಯೋದ್ಧವ್ಯಂ ರಕ್ಷಿತವ್ಯಂ ಚ ಕ್ಷತ್ರಧರ್ಮಃ ಕಿಲ ದ್ವಿಜ।
12192073c ದಾತಾರಃ ಕ್ಷತ್ರಿಯಾಃ ಪ್ರೋಕ್ತಾ ಗೃಹ್ಣೀಯಾಂ ಭವತಃ ಕಥಮ್।।

ರಾಜನು ಹೇಳಿದನು: “ದ್ವಿಜ! ಕ್ಷತ್ರಿಯನ ಧರ್ಮವಾದರೋ ಪ್ರಜಾರಕ್ಷಣೆ ಮತ್ತು ಯುದ್ಧ ಇವೆರಡಲ್ಲವೇ? ಕ್ಷತ್ರಿಯರನ್ನು ದಾತರೆಂದು ಹೇಳಿದ್ದಾರೆ. ಹೀಗಿರಲು ಅವನು ದಾನವನ್ನು ಹೇಗೆ ಸ್ವೀಕರಿಸಬಹುದು?”

12192074 ಬ್ರಾಹ್ಮಣ ಉವಾಚ।
12192074a ನ ಚಂದಯಾಮಿ ತೇ ರಾಜನ್ನಾಪಿ ತೇ ಗೃಹಮಾವ್ರಜಮ್।
12192074c ಇಹಾಗಮ್ಯ ತು ಯಾಚಿತ್ವಾ ನ ಗೃಹ್ಣೀಷೇ ಪುನಃ ಕಥಮ್।।

ಬ್ರಾಹ್ಮಣನು ಹೇಳಿದನು: “ದಾನವನ್ನು ಕೇಳಲು ನಾನು ನಿನಗೆ ಅನುರೋಧ ಅಥವಾ ಆಗ್ರಹವನ್ನು ಮಾಡಿರಲಿಲ್ಲ. ಅಥವಾ ನಾನು ಕೊಡಬೇಕೆಂದು ನಿನ್ನ ಮನೆಗೇನೂ ಬಂದಿರಲಿಲ್ಲ. ಸ್ವಯಂ ನೀನೇ ಇಲ್ಲಿಗೆ ಬಂದು ಯಾಚಿಸಿದೆ. ಇನ್ನು ಅದನ್ನು ಸ್ವೀಕರಿಸಲು ಏಕೆ ನಿರಾಕರಿಸುತ್ತಿರುವೆ?”

12192075 ಧರ್ಮ ಉವಾಚ।
12192075a ಅವಿವಾದೋಽಸ್ತು ಯುವಯೋರ್ವಿತ್ತಂ ಮಾಂ ಧರ್ಮಮಾಗತಮ್।
12192075c ದ್ವಿಜೋ ದಾನಫಲೈರ್ಯುಕ್ತೋ ರಾಜಾ ಸತ್ಯಫಲೇನ ಚ।।

ಧರ್ಮನು ಹೇಳಿದನು: “ನಿಮ್ಮಿಬ್ಬರಲ್ಲೂ ವಿವಾದವು ಬೇಡ. ನಾನು ಸಾಕ್ಷಾತ್ ಧರ್ಮನೇ ಇಲ್ಲಿಗೆ ಬಂದಿದ್ದೇನೆ ಎನ್ನುವುದು ನಿಮಗಿಬ್ಬರಿಗೂ ಇದು ತಿಳಿದಿರಬೇಕು. ದ್ವಿಜನು ದಾನಫಲಯುಕ್ತನಾಗಲಿ ಮತ್ತು ರಾಜನು ಸತ್ಯಫಲಯುಕ್ತನಾಗಲಿ.”

12192076 ಸ್ವರ್ಗ ಉವಾಚ।
12192076a ಸ್ವರ್ಗಂ ಮಾಂ ವಿದ್ಧಿ ರಾಜೇಂದ್ರ ರೂಪಿಣಂ ಸ್ವಯಮಾಗತಮ್।
12192076c ಅವಿವಾದೋಽಸ್ತು ಯುವಯೋರುಭೌ ತುಲ್ಯಫಲೌ ಯುವಾಮ್।।

ಸ್ವರ್ಗವು ಹೇಳಿತು: “ರಾಜೇಂದ್ರ! ನನ್ನನ್ನು ಸ್ವರ್ಗ ಎಂದು ತಿಳಿ. ರೂಪಧಾರಣೆ ಮಾಡಿಕೊಂಡು ಸ್ವಯಂ ಬಂದಿದ್ದೇನೆ. ನಿಮ್ಮಿಬ್ಬರಲ್ಲಿಯೂ ವಿವಾದವು ಬೇಡ. ನೀವಿಬ್ಬರೂ ಸಮಾನ ಫಲಗಳ ಭಾಗಿಗಳಾಗಿದ್ದೀರಿ.”

12192077 ರಾಜೋವಾಚ।
12192077a ಕೃತಂ ಸ್ವರ್ಗೇಣ ಮೇ ಕಾರ್ಯಂ ಗಚ್ಚ ಸ್ವರ್ಗ ಯಥಾಸುಖಮ್।
12192077c ವಿಪ್ರೋ ಯದೀಚ್ಚತೇ ದಾತುಂ ಪ್ರತೀಚ್ಚತು ಚ ಮೇ ಧನಮ್।।

ರಾಜನು ಹೇಳಿದನು: “ನನಗೆ ಸ್ವರ್ಗದಿಂದ ಏನಾಗಬೇಕಾಗಿದೆ? ಸ್ವರ್ಗ! ಯಥಾಸುಖವಾಗಿ ಹೊರಟುಹೋಗು. ಒಂದು ವೇಳೆ ಈ ವಿಪ್ರನು ಸ್ವರ್ಗಕ್ಕೆ ಹೋಗಲು ಬಯಸಿದರೆ ನನ್ನ ಪುಣ್ಯಫಲವನ್ನು ಅವನು ಸ್ವೀಕರಿಸಲಿ.”

12192078 ಬ್ರಾಹ್ಮಣ ಉವಾಚ।
12192078a ಬಾಲ್ಯೇ ಯದಿ ಸ್ಯಾದಜ್ಞಾನಾನ್ಮಯಾ ಹಸ್ತಃ ಪ್ರಸಾರಿತಃ।
12192078c ನಿವೃತ್ತಿಲಕ್ಷಣಂ ಧರ್ಮಮುಪಾಸೇ ಸಂಹಿತಾಂ ಜಪನ್।।

ಬ್ರಾಹ್ಮಣನು ಹೇಳಿದನು: “ಬಾಲ್ಯದಲ್ಲಿ ಅಜ್ಞಾನವಶನಾಗಿ ನಾನು ಎಂದಾದರೂ ಯಾರ ಎದುರಿಗೂ ಕೈಚಾಚಿದ್ದುದು ನನ್ನ ಸ್ಮರಣೆಯಲ್ಲಿಲ್ಲ. ಆದರೆ ಈಗಂತೂ ನಾನು ಸಂಹಿತೆಯನ್ನು ಜಪಿಸುತ್ತಾ ನಿವೃತ್ತಿಧರ್ಮವನ್ನು ಉಪಾಸಿಸುತ್ತಿದ್ದೇನೆ.

12192079a ನಿವೃತ್ತಂ ಮಾಂ ಚಿರಂ ರಾಜನ್ವಿಪ್ರಂ ಲೋಭಯಸೇ ಕಥಮ್।
12192079c ಸ್ವೇನ ಕಾರ್ಯಂ ಕರಿಷ್ಯಾಮಿ ತ್ವತ್ತೋ ನೇಚ್ಚೇ ಫಲಂ ನೃಪ।
12192079E ತಪಃಸ್ವಾಧ್ಯಾಯಶೀಲೋಽಹಂ ನಿವೃತ್ತಶ್ಚ ಪ್ರತಿಗ್ರಹಾತ್।।

ನೃಪ! ನಿವೃತ್ತಮಾರ್ಗದಲ್ಲಿರುವ ನನ್ನನ್ನು ನೀನು ಬಹಳ ಸಮಯದಿಂದ ಲೋಭಗೊಳಿಸಲು ಏಕೆ ಪ್ರಯತ್ನಿಸುತ್ತಿದ್ದೀಯೆ? ನಾನು ಪ್ರತಿಗ್ರಹದಿಂದ ನಿವೃತ್ತನಾಗಿ ತಪಸ್ಸು ಮತ್ತು ಸ್ವಾಧ್ಯಾಯಶೀಲನಾಗಿದ್ದೇನೆ.”

12192080 ರಾಜೋವಾಚ।
12192080a ಯದಿ ವಿಪ್ರ ನಿಸೃಷ್ಟಂ ತೇ ಜಪ್ಯಸ್ಯ ಫಲಮುತ್ತಮಮ್।
12192080c ಆವಯೋರ್ಯತ್ಫಲಂ ಕಿಂ ಚಿತ್ಸಹಿತಂ ನೌ ತದಸ್ತ್ವಿಹ।।

ರಾಜನು ಹೇಳಿದನು: “ವಿಪ್ರ! ನೀನು ನಿನ್ನ ಜಪದ ಉತ್ತಮ ಫಲವನ್ನು ನನಗೆ ಕೊಟ್ಟಿದ್ದೇ ಆದರೆ ನಮ್ಮಿಬ್ಬರ ಪುಣ್ಯಫಲಗಳನ್ನೂ ಒಟ್ಟುಗೂಡಿಸಿ ನಾವಿಬ್ಬರೂ ಒಟ್ಟಿಗೇ ಅದನ್ನು ಭೋಗಿಸೋಣ. ಅದರ ಮೇಲೆ ನಮ್ಮಿಬ್ಬರ ಅಧಿಕಾರವೂ ಸಮನಾಗಿರಲಿ.

12192081a ದ್ವಿಜಾಃ ಪ್ರತಿಗ್ರಹೇ ಯುಕ್ತಾ ದಾತಾರೋ ರಾಜವಂಶಜಾಃ।
12192081c ಯದಿ ಧರ್ಮಃ ಶ್ರುತೋ ವಿಪ್ರ ಸಹೈವ ಫಲಮಸ್ತು ನೌ।।

ದ್ವಿಜರಿಗೆ ದಾನವನ್ನು ಪ್ರತಿಗ್ರಹಿಸುವ ಅಧಿಕಾರವಿದೆ ಮತ್ತು ಕ್ಷತ್ರಿಯರು ಕೇವಲ ದಾನಮಾಡುತ್ತಾರೆ, ತೆಗೆದುಕೊಳ್ಳುವುದಿಲ್ಲ. ಈ ಧರ್ಮವನ್ನು ನೀನೂ ಕೂಡ ಕೇಳಿರಬಹುದು. ಆದುದರಿಂದ ವಿಪ್ರ! ನಮ್ಮಿಬ್ಬರ ಕಾರ್ಯಫಲಗಳನ್ನು ಒಟ್ಟಿಗೂಡಿಸಿ ನಾವಿಬ್ಬರೂ ಒಟ್ಟಿಗೇ ಉಪಯೋಗಿಸೋಣ.

12192082a ಮಾ ವಾ ಭೂತ್ಸಹಭೋಜ್ಯಂ ನೌ ಮದೀಯಂ ಫಲಮಾಪ್ನುಹಿ।
12192082c ಪ್ರತೀಚ್ಚ ಮತ್ಕೃತಂ ಧರ್ಮಂ ಯದಿ ತೇ ಮಯ್ಯನುಗ್ರಹಃ।।

ಅಥವಾ ನಿನಗೆ ಇಷ್ಟವಿಲ್ಲದಿದ್ದರೆ ನಾವಿಬ್ಬರೂ ಒಟ್ಟಿಗೇ ಇದ್ದುಕೊಂಡು ಕರ್ಮಫಲಗಳನ್ನು ಭೋಗಿಸುವ ಅವಶ್ಯಕತೆಯಿಲ್ಲ. ಆ ಸಂದರ್ಭದಲ್ಲಿ ನನ್ನ ಪ್ರಾರ್ಥನೆಯೇನೆಂದರೆ ಒಂದುವೇಳೆ ನಿನಗೆ ನನ್ನ ಮೇಲೆ ಅನುಗ್ರಹವಿದ್ದರೆ ನೀನು ನನ್ನ ಶುಭಕರ್ಮಗಳ ಸಂಪೂರ್ಣ ಫಲವನ್ನು ಸ್ವೀಕರಿಸು. ನಾನು ಎಷ್ಟೇ ಧರ್ಮಗಳನ್ನು ಮಾಡಿದ್ದರೂ ಅವೆಲ್ಲವನ್ನೂ ನೀನು ಸ್ವೀಕರಿಸು.””

12192083 ಭೀಷ್ಮ ಉವಾಚ।
12192083a ತತೋ ವಿಕೃತಚೇಷ್ಟೌ ದ್ವೌ ಪುರುಷೌ ಸಮುಪಸ್ಥಿತೌ।
12192083c ಗೃಹೀತ್ವಾನ್ಯೋನ್ಯಮಾವೇಷ್ಟ್ಯ ಕುಚೇಲಾವೂಚತುರ್ವಚಃ।।

ಭೀಷ್ಮನು ಹೇಳಿದನು: “ಆಗ ಅಲ್ಲಿ ವಿಕರಾಲ ವೇಷದ ಇಬ್ಬರು ಪುರುಷರು ಉಪಸ್ಥಿತರಾದರು. ಅವರಿಬ್ಬರೂ ಪರಸ್ಪರರ ಕೈಹಿಡಿದು ತಬ್ಬಿಕೊಳ್ಳುತ್ತಿದ್ದರು. ಇಬ್ಬರೂ ಮಲಿನ ವಸ್ತ್ರಗಳನ್ನುಟ್ಟಿದ್ದರು. ಅವರಿಬ್ಬರೂ ಪುನಃ ಪುನಃ ಹೀಗೆ ಹೇಳುತ್ತಿದ್ದರು:

12192084a ನ ಮೇ ಧಾರಯಸೀತ್ಯೇಕೋ ಧಾರಯಾಮೀತಿ ಚಾಪರಃ।
12192084c ಇಹಾಸ್ತಿ ನೌ ವಿವಾದೋಽಯಮಯಂ ರಾಜಾನುಶಾಸಕಃ।।

“ನಿನ್ನ ಮೇಲೆ ನನ್ನ ಯಾವ ಋಣವೂ ಇಲ್ಲ” ಎಂದು ಒಬ್ಬನು ಹೇಳಿದರೆ ಇನ್ನೊಬ್ಬನು “ಇಲ್ಲ. ನಾನು ನಿನ್ನ ಋಣಿಯು”. ಆಗ ಮೊದಲನೆಯವನು ಹೇಳಿದನು: “ಶಾಸನಮಾಡುವ ಈ ರಾಜನು ಇಲ್ಲಿ ನಮ್ಮಿಬ್ಬರ ವಿವಾದದ ನಿರ್ಣಯವನ್ನು ಮಾಡಲಿ.”

12192085a ಸತ್ಯಂ ಬ್ರವೀಮ್ಯಹಮಿದಂ ನ ಮೇ ಧಾರಯತೇ ಭವಾನ್।
12192085c ಅನೃತಂ ವದಸೀಹ ತ್ವಮೃಣಂ ತೇ ಧಾರಯಾಮ್ಯಹಮ್।।

ಇನ್ನೊಬ್ಬನು ಹೇಳಿದನು: “ಸತ್ಯವನ್ನು ಹೇಳುತ್ತಿದ್ದೇನೆ. ನಿನಗೆ ನನ್ನ ಮೇಲೆ ಯಾವ ಋಣವೂ ಇಲ್ಲ.” ಇನ್ನೊಬ್ಬನು ಹೇಳಿದನು: “ನೀನು ಸುಳ್ಳನ್ನಾಡುತ್ತಿದ್ದೀಯೆ. ನನ್ನ ಮೇಲೆ ನಿನ್ನ ಋಣವಿದೆ.”

12192086a ತಾವುಭೌ ಭೃಶಸಂತಪ್ತೌ ರಾಜಾನಮಿದಮೂಚತುಃ।
12192086c ಪರೀಕ್ಷ್ಯತಾಂ ಯಥಾ ಸ್ಯಾವ ನಾವಾಮಿಹ ವಿಗರ್ಹಿತೌ।।

ಅವರಿಬ್ಬರೂ ತುಂಬಾ ಸಂತಪ್ತರಾಗಿ ರಾಜನಿಗೆ ಹೇಳಿದರು: “ನೀನು ನಮ್ಮ ಸಂಗತಿಯನ್ನು ಪರೀಕ್ಷಿಸಿ, ನಮ್ಮಿಬ್ಬರಲ್ಲಿ ಯಾರೂ ದೋಷಕ್ಕೆ ಭಾಗೀ ಮತ್ತು ನಿಂದೆಗೆ ಪ್ರಾತ್ರರಾಗದಂತೆ ನಿರ್ಣಯ ನೀಡಬೇಕು.”

12192087 ವಿರೂಪ ಉವಾಚ।
12192087a ಧಾರಯಾಮಿ ನರವ್ಯಾಘ್ರ ವಿಕೃತಸ್ಯೇಹ ಗೋಃ ಫಲಮ್।
12192087c ದದತಶ್ಚ ನ ಗೃಹ್ಣಾತಿ ವಿಕೃತೋ ಮೇ ಮಹೀಪತೇ।।

ವಿರೂಪನು ಹೇಳಿದನು: “ನರವ್ಯಾಘ್ರ! ಮಹೀಪತೇ! ವಿಕೃತನ ಒಂದು ಗೋದಾನದ ಫಲವನ್ನು ನಾನು ಸಾಲವಾಗಿ ತೆಗೆದುಕೊಂಡಿದ್ದೆ. ಇಂದು ನಾನು ಆ ಸಾಲವನ್ನು ತೀರಿಸುತ್ತಿದ್ದೇನೆ. ಆದರೆ ಅದನ್ನು ಅವನು ತೆಗೆದುಕೊಳ್ಳುತ್ತಿಲ್ಲ.”

12192088 ವಿಕೃತ ಉವಾಚ।
12192088a ನ ಮೇ ಧಾರಯತೇ ಕಿಂ ಚಿದ್ವಿರೂಪೋಽಯಂ ನರಾಧಿಪ।
12192088c ಮಿಥ್ಯಾ ಬ್ರವೀತ್ಯಯಂ ಹಿ ತ್ವಾ ಮಿಥ್ಯಾಭಾಸಂ9 ನರಾಧಿಪ।।

ವಿಕೃತನು ಹೇಳಿದನು: “ನರಾಧಿಪ! ಈ ವಿರೂಪನ ಮೇಲೆ ನನ್ನ ಯಾವ ಸಾಲವೂ ಇಲ್ಲ. ನರಾಧಿಪ! ಇವನು ಸುಳ್ಳನ್ನಾಡುತ್ತಿದ್ದಾನೆ. ಇದು ಮಿಥ್ಯಾಭಾಸವು.”

12192089 ರಾಜೋವಾಚ।
12192089a ವಿರೂಪ ಕಿಂ ಧಾರಯತೇ ಭವಾನಸ್ಯ ವದಸ್ವ ಮೇ।
12192089c ಶ್ರುತ್ವಾ ತಥಾ ಕರಿಷ್ಯಾಮೀತ್ಯೇವಂ ಮೇ ಧೀಯತೇ ಮತಿಃ।।

ರಾಜನು ಹೇಳಿದನು: “ವಿರೂಪ! ನಿನ್ನ ಮೇಲೆ ವಿಕೃತನ ಯಾವ ಋಣವಿದೆ ಹೇಳು. ಅದನ್ನು ಕೇಳಿ ನಿರ್ಣಯ ಮಾಡುತ್ತೇನೆ. ನನ್ನ ಮತಿಯು ಅದನ್ನೇ ನಿಶ್ಚಯಿಸಿದೆ.”

12192090 ವಿರೂಪ ಉವಾಚ।
12192090a ಶೃಣುಷ್ವಾವಹಿತೋ ರಾಜನ್ಯಥೈತದ್ಧಾರಯಾಮ್ಯಹಮ್।
12192090c ವಿಕೃತಸ್ಯಾಸ್ಯ ರಾಜರ್ಷೇ ನಿಖಿಲೇನ ನರರ್ಷಭ।।

ವಿರೂಪನು ಹೇಳಿದನು: “ರಾಜನ್! ರಾಜರ್ಷೇ! ನರರ್ಷಭ! ಏಕಾಗ್ರ ಚಿತ್ತನಾಗಿ ಕೇಳು. ಈ ವಿಕೃತನ ಋಣವನ್ನು ನಾನು ಹೇಗೆ ಹೊತ್ತಿದ್ದೇನೆ ಎನ್ನುವುದನ್ನು ಸಂಪೂರ್ಣವಾಗಿ ಹೇಳುತ್ತೇನೆ.

12192091a ಅನೇನ ಧರ್ಮಪ್ರಾಪ್ತ್ಯರ್ಥಂ ಶುಭಾ ದತ್ತಾ ಪುರಾನಘ।
12192091c ಧೇನುರ್ವಿಪ್ರಾಯ ರಾಜರ್ಷೇ ತಪಃಸ್ವಾಧ್ಯಾಯಶೀಲಿನೇ।।

ಅನಘ! ರಾಜರ್ಷೇ! ಇವನು ಧರ್ಮಪ್ರಾಪ್ತಿಗಾಗಿ ಓರ್ವ ತಪಸ್ವೀ ಮತ್ತು ಸ್ವಾಧ್ಯಾಯಶೀಲ ಬ್ರಾಹ್ಮಣನಿಗೆ ಹಾಲುಕೊಡುವ ಶುಭ ಗೋವನ್ನು ದಾನಮಾಡಿದ್ದನು.

12192092a ತಸ್ಯಾಶ್ಚಾಯಂ ಮಯಾ ರಾಜನ್ ಫಲಮಭ್ಯೇತ್ಯ ಯಾಚಿತಃ।
12192092c ವಿಕೃತೇನ ಚ ಮೇ ದತ್ತಂ ವಿಶೂದ್ಧೇನಾಂತರಾತ್ಮನಾ।।

ರಾಜನ್! ನಾನು ಇವನ ಮನೆಗೆ ಹೋಗಿ ಅವನಿಂದ ಆ ಗೋದಾನದ ಫಲವನ್ನು ಯಾಜಿಸಿದೆ ಮತ್ತು ವಿಕೃತನು ಶುದ್ಧಹೃದಯದಿಂದ ಅದನ್ನು ನನಗೆ ಕೊಟ್ಟಿದ್ದನು.

12192093a ತತೋ ಮೇ ಸುಕೃತಂ ಕರ್ಮ ಕೃತಮಾತ್ಮವಿಶುದ್ಧಯೇ।
12192093c ಗಾವೌ ಹಿ ಕಪಿಲೇ ಕ್ರೀತ್ವಾ ವತ್ಸಲೇ ಬಹುದೋಹನೇ।।
12192094a ತೇ ಚೋಂಚವೃತ್ತಯೇ ರಾಜನ್ಮಯಾ ಸಮಪವರ್ಜಿತೇ।
12192094c ಯಥಾವಿಧಿ ಯಥಾಶ್ರದ್ಧಂ ತದಸ್ಯಾಹಂ ಪುನಃ ಪ್ರಭೋ।।

ರಾಜನ್! ಅನಂತರ ನಾನೂ ಕೂಡ ಶುದ್ಧಿಗಾಗಿ ಪುಣ್ಯಕರ್ಮವನ್ನೆಸಗಿದೆನು. ಎರಡು ಅಧಿಕ ಹಾಲನ್ನು ನೀಡುವ ಕಪಿಲೆ ಗೋವುಗಳನ್ನು, ಕರುಗಳ ಸಹಿತ, ಖರೀದಿಸಿ ಅವುಗಳನ್ನು ನಾನು ಓರ್ವ ಉಂಛವೃತ್ತಿಯ ಬ್ರಾಹ್ಮಣನಿಗೆ ವಿಧಿ ಮತ್ತು ಶ್ರದ್ಧಾಪೂರ್ವಕ ದಾನಮಾಡಿದೆ. ಪ್ರಭೋ! ಅದೇ ಗೋದಾನದ ಫಲವನ್ನು ನಾನು ಪುನಃ ಇವನಿಗೆ ಹಿಂದಿರುಗಿಸ ಬಯಸುತ್ತೇನೆ.

12192095a ಇಹಾದ್ಯ ವೈ ಗೃಹೀತ್ವಾ ತತ್ಪ್ರಯಚ್ಚೇ ದ್ವಿಗುಣಂ ಫಲಮ್।
12192095c ಏಕಸ್ಯಾಃ ಪುರುಷವ್ಯಾಘ್ರ ಕಃ ಶುದ್ಧಃ ಕೋಽತ್ರ ದೋಷವಾನ್।।

ಪುರುಷವ್ಯಾಘ್ರ! ಇವನಿಂದ ಒಂದು ಗೋದಾನದ ಫಲವನ್ನು ತೆಗೆದುಕೊಂಡು ಇಂದು ನಾನು ಅದರ ಎರಡು ಪಟ್ಟು ಫಲವನ್ನು ಹಿಂದಿರುಗಿಸುತ್ತಿದ್ದೇನೆ. ಈ ಪರಿಸ್ಥಿತಿಯಲ್ಲಿ ನಮ್ಮಿಬ್ಬರಲ್ಲಿ ಯಾರು ಶುದ್ಧ ಮತ್ತು ಯಾರು ದೋಷೀ ಎಂದು ನೀನೇ ನಿರ್ಣಯ ಮಾಡು.

12192096a ಏವಂ ವಿವದಮಾನೌ ಸ್ವಸ್ತ್ವಾಮಿಹಾಭ್ಯಾಗತೌ ನೃಪ।
12192096c ಕುರು ಧರ್ಮಮಧರ್ಮಂ ವಾ ವಿನಯೇ ನೌ ಸಮಾಧಯ।।

ನೃಪ! ಹೀಗೆ ಪರಸ್ಪರರಲ್ಲಿ ವಿವಾದಮಾಡುತ್ತಾ ನಾವಿಬ್ಬರೂ ಇಲ್ಲಿ ನಿನ್ನ ಬಳಿ ಬಂದಿದ್ದೇವೆ. ನೀನೇ ನಿರ್ಣಯಿಸು. ಬೇಕಾದರೆ ನೀನು ಧರ್ಮವನ್ನೆಸಗು ಅಥವಾ ಅಧರ್ಮವನ್ನೆಸಗು. ಈ ಜಗಳವನ್ನು ಬಿಡಿಸು. ನಾವಿಬ್ಬರೂ ವಿಶಿಷ್ಠ ನ್ಯಾಯಮಾರ್ಗದಲ್ಲಿ ನಡೆಯುವಂತೆ ಮಾಡು.

12192097a ಯದಿ ನೇಚ್ಚತಿ ಮೇ ದಾನಂ ಯಥಾ ದತ್ತಮನೇನ ವೈ।
12192097c ಭವಾನತ್ರ ಸ್ಥಿರೋ ಭೂತ್ವಾ ಮಾರ್ಗೇ ಸ್ಥಾಪಯತು ಪ್ರಭುಃ।।

ಇವನು ನನಗೆ ಹೇಗೆ ದಾನವನ್ನಿತ್ತಿದ್ದನೋ ಹಾಗೆ ಇವನು ನನ್ನಿಂದ ತೆಗೆದುಕೊಳ್ಳಲು ಬಯಸದೇ ಇದ್ದರೆ ಸ್ವಯಂ ನೀನು ಸುಸ್ಥಿರನಾಗಿದ್ದುಕೊಂಡು ನಮ್ಮಿಬ್ಬರನ್ನೂ ಧರ್ಮಮಾರ್ಗದಲ್ಲಿ ಸ್ಥಾಪಿಸು!”

12192098 ರಾಜೋವಾಚ।
12192098a ದೀಯಮಾನಂ ನ ಗೃಹ್ಣಾಸಿ ಋಣಂ ಕಸ್ಮಾತ್ತ್ವಮದ್ಯ ವೈ।
12192098c ಯಥೈವ ತೇಽಭ್ಯನುಜ್ಞಾತಂ ತಥಾ ಗೃಹ್ಣೀಷ್ವ ಮಾಚಿರಮ್।।

ರಾಜನು ಹೇಳಿದನು: “ವಿರೂಪನು ನಿನಗೆ ನೀನು ಕೊಟ್ಟಿದ್ದ ಋಣವನ್ನು ಹಿಂದಿರುಗುಸುತ್ತಿರುವಾಗ ನೀನು ಏಕೆ ಇಂದು ಅದನ್ನು ಸ್ವೀಕರಿಸುತ್ತಿಲ್ಲ? ನೀನು ಕೊಟ್ಟಿದ್ದುದನ್ನು ಅವನು ಹೇಗೆ ಸ್ವೀಕರಿಸಿದ್ದನೋ ಹಾಗೆ ಅವನು ನೀಡಿದುದನ್ನು ನೀನೂ ಕೂಡ ಸ್ವೀಕರಿಸು. ತಡಮಾಡಬೇಡ.”

12192099 ವಿಕೃತ ಉವಾಚ।
12192099a ದೀಯತಾಮಿತ್ಯನೇನೋಕ್ತಂ ದದಾನೀತಿ ತಥಾ ಮಯಾ।
12192099c ನಾಯಂ ಮೇ ಧಾರಯತ್ಯತ್ರ ಗಮ್ಯತಾಂ ಯತ್ರ ವಾಂಚತಿ।।

ವಿಕೃತನು ಹೇಳಿದನು: “ನಾನು ಋಣವನ್ನು ಹೊತ್ತಿದ್ದೇನೆ ಎಂದು ಇವನು ನಿನ್ನಲ್ಲಿ ಈಗ ಹೇಳಿದನು. ಆದರೆ ನಾನು ಆ ಸಮಯದಲ್ಲಿ ದಾನ ಎಂದು ಹೇಳಿ ಅವನಿಗೆ ಅದನ್ನು ನೀಡಿದ್ದೆ. ಆದುದರಿಂದ ಅದರ ಮೇಲೆ ನನ್ನ ಯಾವ ಋಣವೂ ಇಲ್ಲ. ಈಗ ಇವನು ಎಲ್ಲಿಬೇಕಾದರೂ ಹೋಗಲಿ.”

12192100 ರಾಜೋವಾಚ।
12192100a ದದತೋಽಸ್ಯ ನ ಗೃಹ್ಣಾಸಿ ವಿಷಮಂ ಪ್ರತಿಭಾತಿ ಮೇ।
12192100c ದಂಡ್ಯೋ ಹಿ ತ್ವಂ ಮಮ ಮತೋ ನಾಸ್ತ್ಯತ್ರ ಖಲು ಸಂಶಯಃ।।

ರಾಜನು ಹೇಳಿದನು: “ವಿಕೃತ! ಇವನು ನಿನಗೆ ನಿನ್ನ ವಸ್ತುವನ್ನು ಹಿಂದಿರುಗಿಸುತ್ತಿದ್ದಾನೆ ಮತ್ತು ಅದನ್ನು ನೀನು ಸ್ವೀಕರಿಸುತ್ತಿಲ್ಲ. ಇದು ನನಗೆ ಅನುಚಿತ ಎಂದೆನಿಸುತ್ತದೆ. ಆದುದರಿಂದ ನನ್ನ ಅಭಿಪ್ರಾಯದಲ್ಲಿ ನೀನು ದಂಡನೀಯನು. ಇದರಲ್ಲಿ ಯಾವ ಸಂಶಯವೂ ಇಲ್ಲ.”

12192101 ವಿಕೃತ ಉವಾಚ।
12192101a ಮಯಾಸ್ಯ ದತ್ತಂ ರಾಜರ್ಷೇ ಗೃಹ್ಣೀಯಾಂ ತತ್ಕಥಂ ಪುನಃ।
12192101c ಕಾಮಮತ್ರಾಪರಾಧೋ ಮೇ ದಂಡ್ಯಮಾಜ್ಞಾಪಯ ಪ್ರಭೋ।।

ವಿಕೃತನು ಹೇಳಿದನು: “ರಾಜರ್ಷೇ! ನಾನು ಇವನಿಗೆ ದಾನವನ್ನಿತ್ತಿದ್ದೆನು. ಅದನ್ನು ಪುನಃ ಹೇಗೆ ನಾನು ಹಿಂದೆ ತೆಗೆದುಕೊಳ್ಳಬಹುದು? ಇದರಲ್ಲಿ ನನ್ನದೇ ಅಪರಾಧವಿದೆಯೆಂದು ತಿಳಿದರೂ ನಾನು ಕೊಟ್ಟ ದಾನವನ್ನು ಹಿಂದೆ ತೆಗೆದುಕೊಳ್ಳಲಾರೆ. ಪ್ರಭೋ! ನನಗೆ ದಂಡವನ್ನು ಆಜ್ಞಾಪಿಸು!”

12192102 ವಿರೂಪ ಉವಾಚ।
12192102a ದೀಯಮಾನಂ ಯದಿ ಮಯಾ ನೇಷಿಷ್ಯಸಿ ಕಥಂ ಚನ।
12192102c ನಿಯಂಸ್ಯತಿ ತ್ವಾ ನೃಪತಿರಯಂ ಧರ್ಮಾನುಶಾಸಕಃ।।

ವಿರೂಪನು ಹೇಳಿದನು: “ವಿಕೃತ! ಒಂದು ವೇಳೆ ನಾನು ನೀಡುವುದನ್ನು ನೀನು ಸ್ವೀಕರಿಸದೇ ಇದ್ದರೆ ಈ ಧರ್ಮಾನುಶಾಸಕ ನೃಪತಿಯು ನಿನ್ನನ್ನು ಬಂಧಿಸುತ್ತಾನೆ.”

12192103 ವಿಕೃತ ಉವಾಚ।
12192103a ಸ್ವಂ ಮಯಾ ಯಾಚಿತೇನೇಹ ದತ್ತಂ ಕಥಮಿಹಾದ್ಯ ತತ್।
12192103c ಗೃಹ್ಣೀಯಾಂ ಗಚ್ಚತು ಭವಾನಭ್ಯನುಜ್ಞಾಂ ದದಾನಿ ತೇ।।

ವಿಕೃತನು ಹೇಳಿದನು: “ನೀನು ಕೇಳಿದಾಗ ನಾನು ನಿನಗೆ ಕೊಟ್ಟಿದ್ದೆ. ಈಗ ಅದನ್ನು ಹೇಗೆ ಹಿಂದೆ ತೆಗೆದುಕೊಳ್ಳಲಿ? ನಿನ್ನ ಮೇಲೆ ನನಗೆ ಸ್ವಲ್ಪವೂ ಋಣವಿಲ್ಲ. ನಾನು ನಿನಗೆ ಹೋಗಲು ಅನುಮತಿಯನ್ನು ನೀಡಿದ್ದೇನೆ. ನೀನಿನ್ನು ಹೋಗು.”

12192104 ಬ್ರಾಹ್ಮಣ ಉವಾಚ।
12192104a ಶ್ರುತಮೇತತ್ತ್ವಯಾ ರಾಜನ್ನನಯೋಃ ಕಥಿತಂ ದ್ವಯೋಃ।
12192104c ಪ್ರತಿಜ್ಞಾತಂ ಮಯಾ ಯತ್ತೇ ತದ್ಗೃಹಾಣಾವಿಚಾರಿತಮ್।।

ಬ್ರಾಹ್ಮಣನು ಹೇಳಿದನು: “ರಾಜನ್! ಇವರಿಬ್ಬರ ಮಾತನ್ನೂ ನೀನು ಕೇಳಿದೆ. ನಾನು ನಿನಗೆ ಕೊಡುತ್ತೇನೆಂದು ಏನು ಪ್ರತಿಜ್ಞೆಮಾಡಿದ್ದೆನೋ ಅದರ ಅನುಸಾರ ನೀನು ನನ್ನ ದಾನವನ್ನು ವಿಚಾರಿಸದೆಯೇ ಸ್ವೀಕರಿಸಬೇಕು.”

12192105 ರಾಜೋವಾಚ।
12192105a ಪ್ರಸ್ತುತಂ ಸುಮಹತ್ಕಾರ್ಯಮಾವಯೋರ್ಗಹ್ವರಂ ಯಥಾ।
12192105c ಜಾಪಕಸ್ಯ ದೃಢೀಕಾರಃ ಕಥಮೇತದ್ಭವಿಷ್ಯತಿ।।

ರಾಜನು ಹೇಳಿದನು: “ಗಹನ ಗುಹೆಯಂತೆ ನಿರ್ಣಯಿಸಲಾಗದ ನಿಗೂಢ ಮಾಹಾಕಾರ್ಯವು ನನ್ನ ಮುಂದೆ ಪ್ರಸ್ತುತವಾಗಿದೆ. ಜಾಪಕನೂ ಕೂಡ ನನ್ನನ್ನು ಒತ್ತಾಯಿಸುತ್ತಿದ್ದಾನೆ. ಮುಂದೆ ಇದರ ಪರಿಣಾಮವೇನಾಗಬಹುದು?

12192106a ಯದಿ ತಾವನ್ನ ಗೃಹ್ಣಾಮಿ ಬ್ರಾಹ್ಮಣೇನಾಪವರ್ಜಿತಮ್।
12192106c ಕಥಂ ನ ಲಿಪ್ಯೇಯಮಹಂ ದೋಷೇಣ ಮಹತಾದ್ಯ ವೈ।।

ಒಂದು ವೇಳೆ ಈ ಬ್ರಾಹ್ಮಣನ ದಾನವನ್ನು ಸ್ವೀಕರಿಸದೇ ಇದ್ದರೆ ಆ ಮಹಾದೋಷದಿಂದ ಹೇಗೇ ತಾನೇ ನಿರ್ಲಿಪ್ತನಾಗುತ್ತೇನೆ?””

12192107 ಭೀಷ್ಮ ಉವಾಚ।
12192107a ತೌ ಚೋವಾಚ ಸ ರಾಜರ್ಷಿಃ ಕೃತಕಾರ್ಯೌ ಗಮಿಷ್ಯಥಃ।
12192107c ನೇದಾನೀಂ ಮಾಮಿಹಾಸಾದ್ಯ ರಾಜಧರ್ಮೋ ಭವೇನ್ಮೃಷಾ।।

ಭೀಷ್ಮನು ಹೇಳಿದನು: “ಆಗ ರಾಜರ್ಷಿಯು ಅವರಿಬ್ಬರಿಗೆ ಹೇಳಿದನು: “ನೀವಿಬ್ಬರೂ ವಿವಾದದ ನಿರ್ಣಯದ ನಂತರವೇ ಇಲ್ಲಿಂದ ಹೊರಡಿ. ನನ್ನ ಬಳಿಬಂದು ಕಾರ್ಯವಾಗದೇ ನೀವು ಹೋಗಬಾರದು. ರಾಜಧರ್ಮವು ಕಳಂಕಿತವಾಗಬಾರದು.

12192108a ಸ್ವಧರ್ಮಃ ಪರಿಪಾಲ್ಯಶ್ಚ ರಾಜ್ಞಾಮೇಷ ವಿನಿಶ್ಚಯಃ।
12192108c ವಿಪ್ರಧರ್ಮಶ್ಚ ಸುಗುರುರ್ಮಾಮನಾತ್ಮಾನಮಾವಿಶತ್।।

ರಾಜರಿಗೆ ಸ್ವಧರ್ಮವನ್ನೇ ಪಾಲಿಸಬೇಕು. ಇದೇ ನಿಶ್ಚಯವು. ಆದರೆ ಗಹನವಾದ ಬ್ರಾಹ್ಮಣಧರ್ಮವು ಜಿತೇಂದ್ರಿಯನಲ್ಲದ ನನ್ನನ್ನು ಪ್ರವೇಶಿಸಿಬಿಟ್ಟಿತು.”

12192109 ಬ್ರಾಹ್ಮಣ ಉವಾಚ।
12192109a ಗೃಹಾಣ ಧಾರಯೇಽಹಂ ತೇ ಯಾಚಿತಂ ತೇ ಶ್ರುತಂ ಮಯಾ।
12192109c ನ ಚೇದ್ಗ್ರಹೀಷ್ಯಸೇ ರಾಜನ್ ಶಪಿಷ್ಯೇ ತ್ವಾಂ ನ ಸಂಶಯಃ।।

ಬ್ರಾಹ್ಮಣನು ಹೇಳಿದನು: “ನೀನು ಯಾಚಿಸಿರುವ ಮತ್ತು ನಾನು ಕೊಡುತ್ತೇನೆಂದು ಪ್ರತಿಜ್ಞೆಮಾಡಿರುವ ಈ ಜಪಫಲವನ್ನು ನಿನಗೆ ಕೊಡಬೇಕೆಂದು ಧಾರಣೆಮಾಡಿಕೊಂಡಿದ್ದೇನೆ. ಶೀಘ್ರವಾಗಿ ಅದನ್ನು ಪ್ರತಿಗ್ರಹಿಸು. ಅದನ್ನು ನೀನು ತೆಗೆದುಕೊಳ್ಳದೇ ಇದ್ದರೆ ನಿನ್ನನ್ನು ಶಪಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

12192110 ರಾಜೋವಾಚ।
12192110a ಧಿಗ್ರಾಜಧರ್ಮಂ ಯಸ್ಯಾಯಂ ಕಾರ್ಯಸ್ಯೇಹ ವಿನಿಶ್ಚಯಃ।
12192110c ಇತ್ಯರ್ಥಂ ಮೇ ಗ್ರಹೀತವ್ಯಂ ಕಥಂ ತುಲ್ಯಂ ಭವೇದಿತಿ।।

ರಾಜನು ಹೇಳಿದನು: “ಯಾವುದರಿಂದ ಇಂದು ಈ ಪರಣಾಮವುಂಟಾಗಿದೆಯೋ ಆ ರಾಜಧರ್ಮಕ್ಕೇ ಧಿಕ್ಕಾರ! ಬ್ರಾಹ್ಮಣ ಮತ್ತು ನನಗೆ ಸಮಾನ ಫಲವು ಹೇಗೆ ಪ್ರಾಪ್ತವಾಗಬಲ್ಲದು ಎಂಬ ಉದ್ದೇಶದಿಂದ ನನಗೆ ಈ ದಾನವನ್ನು ಸ್ವೀಕರಿಸಬೇಕು.

12192111a ಏಷ ಪಾಣಿರಪೂರ್ವಂ ಭೋ ನಿಕ್ಷೇಪಾರ್ಥಂ ಪ್ರಸಾರಿತಃ।
12192111c ಯನ್ಮೇ ಧಾರಯಸೇ ವಿಪ್ರ ತದಿದಾನೀಂ ಪ್ರದೀಯತಾಮ್।।

ವಿಪ್ರ! ಹಿಂದೆ ಯಾರ ಎದಿರೂ ಚಾಚದೇ ಇದ್ದ ಈ ಕೈಯನ್ನು ನೀನು ಎರೆದ ಧಾರೆಯನ್ನು ಸ್ವೀಕರಿಸಲು ನಿನ್ನ ಮುಂದೆ ಚಾಚುತ್ತಿದ್ದೇನೆ. ಅದನ್ನು ನನಗೆ ನೀಡಬೇಕು.”

12192112 ಬ್ರಾಹ್ಮಣ ಉವಾಚ।
12192112a ಸಂಹಿತಾಂ ಜಪತಾ ಯಾವಾನ್ಮಯಾ ಕಶ್ಚಿದ್ಗುಣಃ ಕೃತಃ।
12192112c ತತ್ಸರ್ವಂ ಪ್ರತಿಗೃಹ್ಣೀಷ್ವ ಯದಿ ಕಿಂ ಚಿದಿಹಾಸ್ತಿ ಮೇ।।

ಬ್ರಾಹ್ಮಣನು ಹೇಳಿದನು: “ಸಂಹಿತೆಯನ್ನು ಜಪಿಸಿ ಯಾವ ಗುಣಗಳನ್ನು ನಾನು ಸಂಗ್ರಹಿಸಿದ್ದೆನೋ ಅವೆಲ್ಲವನ್ನೂ ಸ್ವೀಕರಿಸು. ಇದಲ್ಲದೆಯೂ ನನ್ನಲ್ಲಿ ಇನ್ನೂ ಪುಣ್ಯವಿದ್ದರೆ ಅದನ್ನೂ ನೀನು ಸ್ವೀಕರಿಸು.”

12192113 ರಾಜೋವಾಚ।
12192113a ಜಲಮೇತನ್ನಿಪತಿತಂ ಮಮ ಪಾಣೌ ದ್ವಿಜೋತ್ತಮ।
12192113c ಸಮಮಸ್ತು ಸಹೈವಾಸ್ತು ಪ್ರತಿಗೃಹ್ಣಾತು ವೈ ಭವಾನ್।।

ರಾಜನು ಹೇಳಿದನು: “ದ್ವಿಜೋತ್ತಮ! ನನ್ನ ಕೈಗಳ ಮೇಲೆ ಈ ಸಂಕಲ್ಪದ ಜಲವು ಬಿದ್ದಿದೆ. ನನ್ನ ಮತ್ತು ನಿನ್ನ ಪುಣ್ಯಗಳು ಸಮವಾಗಲಿ ಮತ್ತು ನಾವಿಬ್ಬರೂ ಒಟ್ಟಿಗೇ ಅದನ್ನು ಉಪಭೋಗಿಸುವಂತಾಗಲಿ. ಈ ಉದ್ದೇಶದಿಂದ ನೀನು ನಾನು ಕೊಡುವ ದಾನವನ್ನೂ ಸ್ವೀಕರಿಸಬೇಕು.”

12192114 ವಿರೂಪ ಉವಾಚ।
12192114a ಕಾಮಕ್ರೋಧೌ ವಿದ್ಧಿ ನೌ ತ್ವಮಾವಾಭ್ಯಾಂ ಕಾರಿತೋ ಭವಾನ್।
12192114c ಸಮೇತಿ ಚ ಯದುಕ್ತಂ ತೇ ಸಮಾ ಲೋಕಾಸ್ತವಾಸ್ಯ ಚ।।

ವಿರೂಪನು ಹೇಳಿದನು: “ನಾವಿಬ್ಬರೂ ಕಾಮ-ಕ್ರೋಧಗಳೆಂದು ತಿಳಿ. ನಾವೇ ನಿನ್ನನ್ನು ಈ ಕಾರ್ಯದಲ್ಲಿ ತೊಡಗಿಸಿದೆವು. ಇಬ್ಬರೂ ಒಟ್ಟಿಗೇ ಭೋಗಿಸುವ ಮಾತನ್ನು ನೀನು ಹೇಳಿದೆಯಲ್ಲ ಅದರಂತೆ ನಿನಗೆ ಮತ್ತು ಈ ಬ್ರಾಹ್ಮಣನಿಗೆ ಒಂದೇ ಸಮನಾದ ಲೋಕವು ಪ್ರಾಪ್ತವಾಗುತ್ತದೆ.

12192115a ನಾಯಂ ಧಾರಯತೇ ಕಿಂ ಚಿಜ್ಜಿಜ್ಞಾಸಾ ತ್ವತ್ಕೃತೇ ಕೃತಾ।
12192115c ಕಾಲೋ ಧರ್ಮಸ್ತಥಾ ಮೃತ್ಯುಃ ಕಾಮಕ್ರೋಧೌ ತಥಾ ಯುವಾಮ್।।
12192116a ಸರ್ವಮನ್ಯೋನ್ಯನಿಕಷೇ ನಿಘೃಷ್ಟಂ ಪಶ್ಯತಸ್ತವ।
12192116c ಗಚ್ಚ ಲೋಕಾನ್ ಜಿತಾನ್ಸ್ವೇನ ಕರ್ಮಣಾ ಯತ್ರ ವಾಂಚಸಿ।।

ಈ ನನ್ನ ಜೊತೆಗಿರುವವನು ಏನನ್ನೂ ಧಾರಣೆಮಾಡಿಲ್ಲ ಅಥವಾ ನನ್ನ ಮೇಲೆ ಇವನ ಯಾವ ಋಣವೂ ಇಲ್ಲ. ನಿನ್ನನ್ನು ಪರೀಕ್ಷಿಸಲೋಸುಗವೇ ನಾವು ಈ ಆಟವನ್ನು ಆಡಿದೆವು. ಕಾಲ, ಧರ್ಮ, ಮೃತ್ಯು, ಕಾಮ, ಕ್ರೋಧ ಮತ್ತು ನೀವಿಬ್ಬರೂ – ಇವರೆಲ್ಲರಲ್ಲಿ ಯಾರು ಹೆಚ್ಚೆಂಬುದರ ಕುರಿತು ನಿನ್ನ ಸಮಕ್ಷಮದಲ್ಲಿಯೇ ಪರೀಕ್ಷೆಯು ನಡೆಯಿತು. ಈಗ ನೀನು ನಿನ್ನ ಪುಣ್ಯಕರ್ಮಗಳಿಂದ ಜಯಿಸಿರುವ ಪುಣ್ಯ ಲೋಕಗಳಲ್ಲಿ ಯಾವ ಲೋಕಕ್ಕೆ ಹೋಗಬಯಸುತ್ತೀಯೋ ಆ ಲೋಕಗಳಿಗೆ ಹೋಗಬಹುದು.””

12192117 ಭೀಷ್ಮ ಉವಾಚ।
12192117a ಜಾಪಕಾನಾಂ ಫಲಾವಾಪ್ತಿರ್ಮಯಾ ತೇ ಸಂಪ್ರಕೀರ್ತಿತಾ।
12192117c ಗತಿಃ ಸ್ಥಾನಂ ಚ ಲೋಕಾಶ್ಚ ಜಾಪಕೇನ ಯಥಾ ಜಿತಾಃ।।

ಭೀಷ್ಮನು ಹೇಳಿದನು: “ಜಾಪಕರಿಗೆ ದೊರೆಯುವ ಫಲಗಳ ಕುರಿತು ನಾನು ನಿನಗೆ ವರ್ಣಿಸಿದ್ದೇನೆ. ಜಾಪಕನು ಯಾವ ಗತಿ, ಸ್ಥಾನ ಮತ್ತು ಲೋಕಗಳನ್ನು ಗೆಲ್ಲುತ್ತಾನೆ ಎನ್ನುವುದನ್ನು ಹೇಳುತ್ತೇನೆ.

12192118a ಪ್ರಯಾತಿ ಸಂಹಿತಾಧ್ಯಾಯೀ ಬ್ರಹ್ಮಾಣಂ ಪರಮೇಷ್ಠಿನಮ್।
12192118c ಅಥ ವಾಗ್ನಿಂ ಸಮಾಯಾತಿ ಸೂರ್ಯಮಾವಿಶತೇಽಪಿ ವಾ।।

ಸಂಹಿತೆಯ ಸ್ವಾಧ್ಯಾಯಿಯು ಪರಮೇಷ್ಠಿ ಬ್ರಹ್ಮನ ಲೋಕಕ್ಕೆ ಹೋಗುತ್ತಾನೆ ಅಥವಾ ಅಗ್ನಿಯಲ್ಲಿ ಸೇರಿಕೊಳ್ಳುತ್ತಾನೆ ಅಥವಾ ಸೂರ್ಯನನ್ನು ಪ್ರವೇಶಿಸುತ್ತಾನೆ.

12192119a ಸ ತೈಜಸೇನ ಭಾವೇನ ಯದಿ ತತ್ರಾಶ್ನುತೇ ರತಿಮ್।
12192119c ಗುಣಾಂಸ್ತೇಷಾಂ ಸಮಾದತ್ತೇ ರಾಗೇಣ ಪ್ರತಿಮೋಹಿತಃ।।

ತೇಜೋಮಯ ಶರೀರದಿಂದ ಕೂಡಿದವನಾಗಿ ಆ ಲೋಕದಲ್ಲಿ ಸಂಚರಿಸುತ್ತಾ ರಾಗದಿಂದ ಮೋಹಿತನಾಗಿ ಅದೇ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೆ.

12192120a ಏವಂ ಸೋಮೇ ತಥಾ ವಾಯೌ ಭೂಮ್ಯಾಕಾಶಶರೀರಗಃ।
12192120c ಸರಾಗಸ್ತತ್ರ ವಸತಿ ಗುಣಾಂಸ್ತೇಷಾಂ ಸಮಾಚರನ್।।

ಹೀಗೆ ರಾಗಯುಕ್ತನಾದವನು ಸೋಮಲೋಕ, ವಾಯುಲೋಕ, ಭೂಮಿಲೋಕ ಮತ್ತು ಅಂತರಿಕ್ಷಲೋಕಗಳ ಯೋಗ್ಯ ಶರೀರವನ್ನು ಧರಿಸಿ ಅಲ್ಲಿ ವಾಸಿಸುತ್ತಾನೆ ಮತ್ತು ಆ ಲೋಕಗಳಲಿರುವ ಗುಣಗಳನ್ನು ಆಚರಿಸುತ್ತಾನೆ.

12192121a ಅಥ ತತ್ರ ವಿರಾಗೀ ಸ ಗಚ್ಚತಿ ತ್ವಥ ಸಂಶಯಮ್।
12192121c ಪರಮವ್ಯಯಮಿಚ್ಚನ್ಸ ತಮೇವಾವಿಶತೇ ಪುನಃ।।

ಆ ಲೋಕಗಳ ಉತ್ಕೃಷ್ಟತೆಯಲ್ಲಿಯೂ ಅವನಿಗೆ ಸಂಶಯವಾಗಿ ಅಲ್ಲಿಂದ ವಿರಕ್ತನಾದರೆ ಅವನು ಪರಮ ಅವ್ಯಯ ಮೋಕ್ಷವನ್ನು ಇಚ್ಛಿಸಿ ಪುನಃ ಅದೇ ಪರಮೇಷ್ಠೀ ಬ್ರಹ್ಮನನ್ನು ಪ್ರವೇಶಿಸುತ್ತಾನೆ.

12192122a ಅಮೃತಾಚ್ಚಾಮೃತಂ ಪ್ರಾಪ್ತಃ ಶೀತೀಭೂತೋ ನಿರಾತ್ಮವಾನ್।
12192122c ಬ್ರಹ್ಮಭೂತಃ ಸ ನಿರ್ದ್ವಂದ್ವಃ ಸುಖೀ ಶಾಂತೋ ನಿರಾಮಯಃ।।

ಅಮೃತದಿಂದ ಅಮೃತವನ್ನು ಪಡೆದುಕೊಂಡ ಅವನು ನಿಷ್ಕಾಮನಾಗಿ ನಿರಂಕಾರಿಯಾಗಿರುತ್ತಾನೆ. ಬ್ರಹ್ಮಭೂತನಾದ ಅವನು ನಿರ್ದ್ವಂದ್ವನೂ, ಸುಖಿಯೂ, ಶಾಂತನೂ ಮತ್ತು ನಿರಾಮಯನೂ ಆಗಿರುತ್ತಾನೆ.

12192123a ಬ್ರಹ್ಮಸ್ಥಾನಮನಾವರ್ತಮೇಕಮಕ್ಷರಸಂಜ್ಞಕಮ್।
12192123c ಅದುಃಖಮಜರಂ ಶಾಂತಂ ಸ್ಥಾನಂ ತತ್ ಪ್ರತಿಪದ್ಯತೇ।।

ಬ್ರಹ್ಮಸ್ಥಾನವು ಹುಟ್ಟು-ಸಾವುಗಳಿಂದ ರಹಿತವಾದುದು. ಅಖಂಡವು, ಅವಿನಾಶಿಯು ಮತ್ತು ಓಂಕಾರ ಸಂಜ್ಞಕವಾದುದು. ಅದುಃಖವೂ, ಅಜರವೂ ಆಗಿರುವ ಆ ಶಾಂತ ಸ್ಥಾನವನ್ನು ಜಾಪಕನು ಪಡೆದುಕೊಳ್ಳುತ್ತಾನೆ.

12192124a ಚತುರ್ಭಿರ್ಲಕ್ಷಣೈರ್ಹೀನಂ ತಥಾ ಷಡ್ಭಿಃ ಸಷೋಡಶೈಃ।
12192124c ಪುರುಷಂ ಸಮತಿಕ್ರಮ್ಯ ಆಕಾಶಂ ಪ್ರತಿಪದ್ಯತೇ।।

ಜಾಪಕನು ಆ ಪುರುಷನನ್ನೂ ಅತಿಕ್ರಮಿಸಿ ನಾಲ್ಕು ಲಕ್ಷಣಗಳಿಂದ10, ಆರು ಗುಣಗಳಿಂದ11 ಮತ್ತು ಹದಿನಾರು ಗುಣಗಳಿಂದ12 ರಹಿತವಾದ ಆಕಾಶತತ್ತ್ವವನ್ನು ಹೊಂದುತ್ತಾನೆ.

12192125a ಅಥ ವೇಚ್ಚತಿ13 ರಾಗಾತ್ಮಾ ಸರ್ವಂ ತದಧಿತಿಷ್ಠತಿ।
12192125c ಯಚ್ಚ ಪ್ರಾರ್ಥಯತೇ ತಚ್ಚ ಮನಸಾ ಪ್ರತಿಪದ್ಯತೇ।।

ಜಾಪಕನು ಬಯಸಿದುದೆಲ್ಲವನ್ನೂ ಪಡೆದುಕೊಳ್ಳುತ್ತಾನೆ. ಮನಸಾರೆ ಯಾವುದನ್ನು ಪ್ರಾರ್ಥಿಸುವನೋ ಅದನ್ನೇ ಪಡೆದುಕೊಳ್ಳುತ್ತಾನೆ.

12192126a ಅಥ ವಾ ವೀಕ್ಷತೇ ಲೋಕಾನ್ಸರ್ವಾನ್ನಿರಯಸಂಸ್ಥಿತಾನ್।
12192126c ನಿಃಸ್ಪೃಹಃ ಸರ್ವತೋ ಮುಕ್ತಸ್ತತ್ರೈವ ರಮತೇ ಸುಖೀ।।

ಅಥವಾ ಸರ್ವ ಲೋಕಗಳನ್ನೂ ನರಕಗಳೆಂದೇ ತಿಳಿದು ಅವುಗಳ ಕುರಿತು ನಿಃಸ್ಪೃಹನಾಗಿದ್ದು ಮುಕ್ತನಾಗುವ ಜಾಪಕನು ಪರಬ್ರಹ್ಮನಲ್ಲಿಯೇ ರಮಿಸಿ ಸುಖಿಯಾಗಿರುತ್ತಾನೆ.

12192127a ಏವಮೇಷಾ ಮಹಾರಾಜ ಜಾಪಕಸ್ಯ ಗತಿರ್ಯಥಾ।
12192127c ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಚಸಿ।।

ಮಹಾರಾಜ! ಹೀಗೆ ಜಾಪಕನ ಗತಿಯ ಕುರಿತು ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ದ್ವಿನವತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ತೆರಡನೇ ಅಧ್ಯಾಯವು.


  1. ಇಕ್ಷ್ವಾಕೋರ್ಬ್ರಾಹ್ಮಣಸ್ಯ ಚ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  2. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸದಾ ದಾಂತೋ ಜಿತಕ್ರೋಧಃ ಸತ್ಯಸಂಧೋಽನಸೂಯಕಃ। (ಗೀತಾ ಪ್ರೆಸ್). ↩︎

  3. ಇದಕ್ಕೆ ಮೊದಲು ಯಮ ಉವಾಚ। ಎಂದಿದೆ (ಗೀತಾ ಪ್ರೆಸ್). ↩︎

  4. ಇದಕ್ಕೆ ಮೊದಲು ಕಾಲ ಉವಾಚ। ಎಂದಿದೆ (ಗೀತಾ ಪ್ರೆಸ್). ↩︎

  5. ಇದಕ್ಕೆ ಮೊದಲು ಮೃತ್ಯುರುವಾಚ। ಎಂದಿದೆ (ಗೀತಾ ಪ್ರೆಸ್). ↩︎

  6. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಫಲಂ ಬ್ರವೀಷಿ ಧರ್ಮಸ್ಯ ನ ಚೇಜ್ಜಪ್ಯಕೃತಸ್ಯ ಮಾಮ್। (ಗೀತಾ ಪ್ರೆಸ್). ↩︎

  7. ವಿದ್ಯಾ (ಗೀತಾ ಪ್ರೆಸ್). ↩︎

  8. ಸಾಮವೇದದ ಒಂದು ಭಾಗ (ಸಂಸ್ಕೃತ-ಕನ್ನಡ ನಿಘಂಟು, ಜಿ.ಎನ್. ಚಕ್ರವರ್ತಿ). ↩︎

  9. ಸತ್ಯಾಭಾಸಂ (ಗೀತಾ ಪ್ರೆಸ್). ↩︎

  10. ನಾಲ್ಕು ಲಕ್ಷಣಗಳ ವಿಷಯವಾಗಿ ಶ್ರುತಿಯಲ್ಲಿ ಹೀಗಿದೆ: ನ ದೃಷ್ಟೇರ್ದ್ರಷ್ಟಾರಂ ಪಶ್ಯೇರ್ನ ಶ್ರುತೇಃ ಶ್ರೋತಾರಂ ಶೃಣುಯಾ ನ ಮತೇರ್ಮಂತಾರಮನ್ವೀಯಾ ನ ವಿಜ್ಞಾತೇರ್ವಿಜ್ಞಾತಾರಂ ವಿಜಾನೀಯಾಃ।। (ಗೀತಾ ಪ್ರೆಸ್/ಭಾರತ ದರ್ಶನ). ↩︎

  11. ಕ್ಷುತ್ಪಿಪಾಸಾಶೋಕಮೋಹಜರಾಮೃತ್ಯುಗಳು (ಭಾರತ ದರ್ಶನ). ↩︎

  12. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಪಂಚಪ್ರಾಣಗಳು ಮತ್ತು ಮನಸ್ಸು (ಭಾರತ ದರ್ಶನ). ↩︎

  13. ನೇಚ್ಛತಿ (ಭಾರತ ದರ್ಶನ). ↩︎