191: ಜಾಪಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 191

ಸಾರ

ಪರಂಧಾಮಕ್ಕೆ ಅಧಿಕಾರಿಯಾದ ಜಾಪಕನಿಗೆ ದೇವಲೋಕವೂ ನರಕಸದೃಶವೆನ್ನುವುದರ ಪ್ರತಿಪಾದನೆ (1-11).

12191001 ಯುಧಿಷ್ಠಿರ ಉವಾಚ।
12191001a ಕೀದೃಶೋ ಜಾಪಕೋ ಯಾತಿ ನಿರಯಂ ವರ್ಣಯಸ್ವ ಮೇ।
12191001c ಕೌತೂಹಲಂ ಹಿ ಮೇ ಜಾತಂ ತದ್ಭವಾನ್ವಕ್ತುಮರ್ಹತಿ।।

ಯುಧಿಷ್ಠಿರನು ಹೇಳಿದನು: “ಜಾಪಕನು ಎಂತಹ ನರಕಕ್ಕೆ ಹೋಗುತ್ತಾನೆ ಎನ್ನುವುದನ್ನು ವರ್ಣಿಸು. ನನಗೆ ಇದರಲ್ಲಿ ಕುತೂಹಲವುಂಟಾಗಿದೆ. ಅದರ ಕುರಿತು ನೀನು ಹೇಳಬೇಕು.”

12191002 ಭೀಷ್ಮ ಉವಾಚ।
12191002a ಧರ್ಮಸ್ಯಾಂಶಃ ಪ್ರಸೂತೋಽಸಿ ಧರ್ಮಿಷ್ಠೋಽಸಿ ಸ್ವಭಾವತಃ।
12191002c ಧರ್ಮಮೂಲಾಶ್ರಯಂ ವಾಕ್ಯಂ ಶೃಣುಷ್ವಾವಹಿತೋಽನಘ।।

ಭೀಷ್ಮನು ಹೇಳಿದನು: “ಅನಘ! ನೀನು ಧರ್ಮನ ಅಂಶದಿಂದ ಹುಟ್ಟಿರುವೆ. ಸ್ವಭಾವತಃ ಧರ್ಮಿಷ್ಠನಾಗಿರುವೆ. ಧರ್ಮಕ್ಕೆ ಮೂಲವಾದ ಈ ಮಾತನ್ನು ಏಕಾಗ್ರಚಿತ್ತನಾಗಿ ಕೇಳು.

12191003a ಅಮೂನಿ ಯಾನಿ ಸ್ಥಾನಾನಿ ದೇವಾನಾಂ ಪರಮಾತ್ಮನಾಮ್।
12191003c ನಾನಾಸಂಸ್ಥಾನವರ್ಣಾನಿ ನಾನಾರೂಪಫಲಾನಿ ಚ।।
12191004a ದಿವ್ಯಾನಿ ಕಾಮಚಾರೀಣಿ ವಿಮಾನಾನಿ ಸಭಾಸ್ತಥಾ।
12191004c ಆಕ್ರೀಡಾ ವಿವಿಧಾ ರಾಜನ್ ಪದ್ಮಿನ್ಯಶ್ಚಾಮಲೋದಕಾಃ1।।

ರಾಜನ್! ಪರಮ ಬುದ್ಧಿಶಾಲೀ ದೇವತೆಗಳಿಗಿರುವ ಸ್ಥಾನಗಳು ಅನೇಕ ರೂಪ-ಬಣ್ಣಗಳಿಂದ ಕೂಡಿವೆ. ಫಲಗಳೂ ನಾನಾರೀತಿಯವು. ಅಲ್ಲಿ ದೇವತೆಗಳಿಗೆ ಇಚ್ಛಾನುಸಾರ ಸಂಚರಿಸಲು ದಿವ್ಯ ವಿಮಾನಗಳು ಮತ್ತು ದಿವ್ಯ ಸಭೆಗಳಿವೆ. ಅಲ್ಲಿ ಅವರಿಗಾಗಿ ನಾನಾ ಪ್ರಕಾರದ ಕ್ರೀಡಾಂಗಣಗಳೂ ಮತ್ತು ಕಾಂಚನ ಪದ್ಮಗಳ ದಿವ್ಯ ಸರೋವರಗಳೂ ಇವೆ.

12191005a ಚತುರ್ಣಾಂ ಲೋಕಪಾಲಾನಾಂ ಶುಕ್ರಸ್ಯಾಥ ಬೃಹಸ್ಪತೇಃ।
12191005c ಮರುತಾಂ ವಿಶ್ವೇದೇವಾನಾಂ ಸಾಧ್ಯಾನಾಮಶ್ವಿನೋರಪಿ।।
12191006a ರುದ್ರಾದಿತ್ಯವಸೂನಾಂ ಚ ತಥಾನ್ಯೇಷಾಂ ದಿವೌಕಸಾಮ್।
12191006c ಏತೇ ವೈ ನಿರಯಾಸ್ತಾತ ಸ್ಥಾನಸ್ಯ ಪರಮಾತ್ಮನಃ।।

ಅಯ್ಯಾ! ವರುಣ, ಕುಬೇರ, ಇಂದ್ರ ಮತ್ತು ಯಮ – ಈ ನಾಲ್ವರು ಲೋಕಪಾಲಕರು, ಶುಕ್ರ, ಬೃಹಸ್ಪತಿ, ಮರುದ್ಗಣ, ವಿಶ್ವೇದೇವರು, ಸಾಧ್ಯರು, ಅಶ್ವಿನಿಯರು, ರುದ್ರರು, ಆದಿತ್ಯರು, ವಸುಗಳು ಮತ್ತು ಅನ್ಯ ದಿವೌಕಸರು ಇರುವ ಸ್ಥಾನಗಳು ಪರಮಾತ್ಮನ ಪರಂಧಾಮದ ಎದಿರು ನರಕಗಳೇ ಅಲ್ಲವೇ?

12191007a ಅಭಯಂ ಚಾನಿಮಿತ್ತಂ ಚ ನ ಚ ಕ್ಲೇಶಭಯಾವೃತಮ್।
12191007c ದ್ವಾಭ್ಯಾಂ ಮುಕ್ತಂ ತ್ರಿಭಿರ್ಮುಕ್ತಮಷ್ಟಾಭಿಸ್ತ್ರಿಭಿರೇವ ಚ।।

ಪರಮಾತ್ಮನ ಪರಂಧಾಮದಲ್ಲಿ ವಿನಾಶದ ಭಯವಿಲ್ಲ. ಏಕೆಂದರೆ ಅದು ಕಾರಣರಹಿತ ನಿತ್ಯಸಿದ್ಧವಾಗಿದೆ2. ಅಲ್ಲಿ ಕ್ಲೇಶಗಳಿಲ್ಲ3. ಅಲ್ಲಿ ಪ್ರೀತಿ-ಅಪ್ರೀತಿಗಳೆಂಬ ದ್ವಂದ್ವಗಳಿಲ್ಲ4. ಮೂರು ಗುಣಗಳಿಂದಲೂ ಮತ್ತು ಎಂಟು ಪುರಿಗಳಿಂದಲೂ5 ಅದು ಮುಕ್ತವಾಗಿದೆ. ಅದು ಭೂತ-ಭವಿಷ್ಯತ್-ವರ್ತಮಾನಗಳೆಂಬ ಮೂರರಿಂದಲೂ6 ರಹಿತವಾಗಿದೆ.

12191008a ಚತುರ್ಲಕ್ಷಣವರ್ಜಂ ತು ಚತುಷ್ಕಾರಣವರ್ಜಿತಮ್।
12191008c ಅಪ್ರಹರ್ಷಮನಾನಂದಮಶೋಕಂ ವಿಗತಕ್ಲಮಮ್।।

ಪರಮಾತ್ಮನ ಪರಂಧಾಮವು ನಾಲ್ಕು ಲಕ್ಷಣಗಳಿಂದಲೂ7 ರಹಿತವಾಗಿದೆ. ನಾಲ್ಕು ಕಾರಣಗಳಿಂದಲೂ8 ವರ್ಜಿತವಾಗಿದೆ. ಅಲ್ಲಿ ಹರ್ಷವಿಲ್ಲ. ಆನಂದವಿಲ್ಲ. ಮತ್ತು ಶೋಕವಿಲ್ಲ. ಶ್ರಮವೂ ಇಲ್ಲ.

12191009a ಕಾಲಃ ಸಂಪಚ್ಯತೇ9 ತತ್ರ ನ ಕಾಲಸ್ತತ್ರ ವೈ ಪ್ರಭುಃ।
12191009c ಸ ಕಾಲಸ್ಯ ಪ್ರಭೂ ರಾಜನ್ ಸ್ವರ್ಗಸ್ಯಾಪಿ ತಥೇಶ್ವರಃ।।

ರಾಜನ್! ಪರಮಾತ್ಮನ ಪರಂಧಾಮದಲ್ಲಿ ಕಾಲವು ಜೀರ್ಣವಾಗುತ್ತದೆ. ಅಲ್ಲಿ ಕಾಲವು ತನ್ನ ಪ್ರಭುತ್ವವನ್ನು ನಡೆಸಲಾರದು. ಅಲ್ಲಿ ಪರಮಾತ್ಮನೇ ಕಾಲದ ಪ್ರಭುವಾಗಿರುತ್ತಾನೆ. ಸ್ವರ್ಗಕ್ಕೂ ಅಧಿಪತಿಯಾಗಿರುತ್ತಾನೆ.

12191010a ಆತ್ಮಕೇವಲತಾಂ ಪ್ರಾಪ್ತಸ್ತತ್ರ ಗತ್ವಾ ನ ಶೋಚತಿ।
12191010c ಈದೃಶಂ ಪರಮಂ ಸ್ಥಾನಂ ನಿರಯಾಸ್ತೇ ಚ ತಾದೃಶಾಃ।।

ಕೇವಲಾತ್ಮಭಾವವನ್ನು ಹೊಂದಿದವನು ಅಲ್ಲಿ ಹೋಗಿ ಶೋಕಿಸುವುದಿಲ್ಲ. ಪರಮಾತ್ಮನ ಪರಂಧಾಮವು ಇಂತಹ ಲಕ್ಷಣಗಳಿಂದ ಕೂಡಿದೆ. ಇತರ ಲೋಕಗಳು ಹಿಂದೆ ಹೇಳಿದ ಹಾಗೆ ಇದ್ದರೂ ಹೋಲಿಕೆಯಲ್ಲಿ ಅವು ನರಕಗಳಂತೆಯೇ.

12191011a ಏತೇ ತೇ ನಿರಯಾಃ ಪ್ರೋಕ್ತಾಃ ಸರ್ವ ಏವ ಯಥಾತಥಮ್।
12191011c ತಸ್ಯ ಸ್ಥಾನವರಸ್ಯೇಹ ಸರ್ವೇ ನಿರಯಸಂಜ್ಞಿತಾಃ।।

ಹೀಗೆ ನಾನು ನಿನಗೆ ನರಕಗಳ ಕುರಿತು ಯಥಾವತ್ತಾಗಿ ಹೇಳಿದ್ದೇನೆ. ಪರಮಾತ್ಮನ ಪರಂಧಾಮದ ಮುಂದೆ ಉಳಿದೆಲ್ಲ ಲೋಕಗಳೂ ನರಕಗಳೆಂದೇ ಹೇಳಿದ್ದಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ಏಕನವತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ತೊಂದನೇ ಅಧ್ಯಾಯವು.


  1. ಭಾರತ ದರ್ಶನದಲ್ಲಿ ಓಂಕಾರ ಎಂದಿದೆ ಮತ್ತು ಗೀತಾ ಪ್ರೆಸ್ ನಲ್ಲಿ ಗಾಯತ್ರೀ ಎಂದಿದೆ. ↩︎

  2. ಪದ್ಮಿನ್ಯಶ್ಚೈವ ಕಾಂಚನಾಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  3. ಅನಿಮಿತ್ತಂ ಎನ್ನುವುದಕ್ಕೆ ಲಕ್ಷಣಾತೀತ ಎನ್ನುವ ಅನುವಾದವೂ ಇದೆ (ಭಾರತ ದರ್ಶನ). ↩︎

  4. ಅಲ್ಲಿ ಅವಿದ್ಯಾ, ಅಸ್ಮಿತಾ, ರಾಗ, ದೋಷ ಮತ್ತು ಅಭಿನಿವೇಶ ಎಂಬ ಪಂಚಕ್ಲೇಶಗಳಿಲ್ಲ ಎಂಬ ಅನುವಾದವಿದೆ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ಅಶರೀರಂ ವಾವಸಂತಂ ನ ಪ್ರಿಯಾಪ್ರಿಯೇ ಸ್ಪೃಶತಃ। ಎಂಬ ಶ್ರುತಿವಾಕ್ಯವಿದೆ. (ಗೀತಾ ಪ್ರೆಸ್/ಭಾರತ ದರ್ಶನ). ↩︎

  6. ಭೂತೇಂದ್ರಿಯಮನೋಬುದ್ಧಿವಾಸನಾಕರ್ಮವಾಯವಃ। ಅವಿದ್ಯಾ ಚೇತ್ಯಮುಂ ವರ್ಗಮಾಹುಃ ಪುರ್ಯಷ್ಟಕಂ ಬುಧಾಃ।। ಅರ್ಥಾತ್ ಭೂತ, ಇಂದ್ರಿಯ, ಮನಸ್ಸು, ಬುದ್ಧಿ, ಉಪಾಸನೆ, ಕರ್ಮ, ಪ್ರಾಣ, ಮತ್ತು ಅವಿದ್ಯೆ ಇವು ಎಂಟು ಪುರಿಗಳು. (ಗೀತಾ ಪ್ರೆಸ್/ಭಾರತ ದರ್ಶನ). ↩︎

  7. ಈ ಮೂರನ್ನು ಜ್ಞಾತಾ, ಜ್ಞಾನ ಮತ್ತು ಜ್ಞೇಯ ಎಂದೂ ಅನುವಾದಿಸಿದ್ದಾರೆ (ಗೀತಾ ಪ್ರೆಸ್). ↩︎

  8. ನಾಲ್ಕು ಲಕ್ಷಣಗಳ ವಿಷಯವಾಗಿ ಶ್ರುತಿಯಲ್ಲಿ ಹೀಗಿದೆ: ನ ದೃಷ್ಟೇರ್ದ್ರಷ್ಟಾರಂ ಪಶ್ಯೇರ್ನ ಶ್ರುತೇಃ ಶ್ರೋತಾರಂ ಶೃಣುಯಾ ನ ಮತೇರ್ಮಂತಾರಮನ್ವೀಯಾ ನ ವಿಜ್ಞಾತೇರ್ವಿಜ್ಞಾತಾರಂ ವಿಜಾನೀಯಾಃ।। (ಗೀತಾ ಪ್ರೆಸ್/ಭಾರತ ದರ್ಶನ). ↩︎

  9. ್ಞಾನಕ್ಕೆ ಕಾರಣಭೂತಗಳಾದ ಪ್ರತ್ಯಕ್ಷ, ಅನುಮಾನ, ಉಪಮಾನ ಮತ್ತು ಶಬ್ದಗಳೆಂಬ ನಾಲ್ಕು ಪ್ರಮಾಣಗಳು ಎಂಬ ಅನುವಾದವಿದೆ (ಗೀತಾ ಪ್ರೆಸ್/ಭಾರತ ದರ್ಶನ). ↩︎