190: ಜಾಪಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 190

ಸಾರ

ಜಪಯಜ್ಞದಲ್ಲಿ ದೋಷವುಂಟಾದರೆ ನರಕ (ಪುನರ್ಜನ್ಮ) ಪ್ರಾಪ್ತಿ (1-13).

12190001 ಯುಧಿಷ್ಠಿರ ಉವಾಚ।
12190001a ಗತೀನಾಮುತ್ತಮಾ ಪ್ರಾಪ್ತಿಃ ಕಥಿತಾ ಜಾಪಕೇಷ್ವಿಹ।
12190001c ಏಕೈವೈಷಾ ಗತಿಸ್ತೇಷಾಮುತ ಯಾಂತ್ಯಪರಾಮಪಿ।।

ಯುಧಿಷ್ಠಿರನು ಹೇಳಿದನು: “ಜಾಪಕರಿಗೆ ಉತ್ತಮ ಗತಿಗಳು ಪ್ರಾಪ್ತವಾಗುತ್ತವೆ ಎಂದು ಹೇಳಿದೆ. ಅವರು ಎಲ್ಲರೂ ಒಂದೇ ಗತಿಯನ್ನು ಹೊಂದುತ್ತಾರೋ ಅಥವಾ ಬೇರೆ ಬೇರೆ ಗತಿಗಳನ್ನು ಹೊಂದುತ್ತಾರೋ1?”

12190002 ಭೀಷ್ಮ ಉವಾಚ।
12190002a ಶೃಣುಷ್ವಾವಹಿತೋ ರಾಜನ್ಜಾಪಕಾನಾಂ ಗತಿಂ ವಿಭೋ।
12190002c ಯಥಾ ಗಚ್ಚಂತಿ ನಿರಯಮನೇಕಂ ಪುರುಷರ್ಷಭ।।

ಭೀಷ್ಮನು ಹೇಳಿದನು: “ರಾಜನ್! ಪುರುಷರ್ಷಭ! ವಿಭೋ! ಜಾಪಕರು ಹೇಗೆ ಅನೇಕ ನರಕಗಳಿಗೂ2 ಹೋಗುತ್ತಾರೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12190003a ಯಥೋಕ್ತಮೇತತ್ಪೂರ್ವಂ ಯೋ ನಾನುತಿಷ್ಠತಿ ಜಾಪಕಃ।
12190003c ಏಕದೇಶಕ್ರಿಯಶ್ಚಾತ್ರ ನಿರಯಂ ಸ ನಿಗಚ್ಚತಿ।।

ಹಿಂದೆ ಹೇಳಿರುವ ಎಲ್ಲ ನಿಯಮಗಳನ್ನೂ ಯಥಾವಿಧಿಯಾಗಿ ಅನುಷ್ಠಾನಮಾಡದೇ ಯಾವುದೇ ಒಂದು ನಿಯಮವನ್ನು ಮಾತ್ರ ಪಾಲಿಸುವವನು ನರಕಕ್ಕೆ ಹೋಗುತ್ತಾನೆ.

12190004a ಅವಜ್ಞಾನೇನ ಕುರುತೇ ನ ತುಷ್ಯತಿ ನ ಶೋಚತಿ3
12190004c ಈದೃಶೋ ಜಾಪಕೋ ಯಾತಿ ನಿರಯಂ ನಾತ್ರ ಸಂಶಯಃ।।

ಜಪವಿಧಿಯನ್ನು ತಿಳಿದುಕೊಳ್ಳದೇ ಜಪಮಾಡುವ, ತೃಪ್ತಿಯಿಲ್ಲದೇ ಜಪಮಾಡುವ, ಜಪಮಾಡಿ ಶೋಕಿಸುವ ಜಾಪಕನು ನರಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12190005a ಅಹಂಕಾರಕೃತಶ್ಚೈವ ಸರ್ವೇ ನಿರಯಗಾಮಿನಃ।
12190005c ಪರಾವಮಾನೀ ಪುರುಷೋ ಭವಿತಾ ನಿರಯೋಪಗಃ।।

ಜಪದಿಂದ ಅಹಂಕಾರಪಡುವ ಎಲ್ಲರೂ ನರಕಕ್ಕೆ ಹೋಗುತ್ತಾರೆ. ಇತರರನ್ನು ಅಪಮಾನಿಸುವ ಪುರುಷನೂ ನರಕಕ್ಕೆ ಹೋಗುತ್ತಾನೆ.

12190006a ಅಭಿಧ್ಯಾಪೂರ್ವಕಂ ಜಪ್ಯಂ ಕುರುತೇ ಯಶ್ಚ ಮೋಹಿತಃ।
12190006c ಯತ್ರಾಭಿಧ್ಯಾಂ ಸ ಕುರುತೇ ತಂ ವೈ ನಿರಯಮೃಚ್ಚತಿ।।

ಮೋಹಿತನಾಗಿ ಫಲದ ಇಚ್ಛೆಯನ್ನಿಟ್ಟುಕೊಂಡು ಜಪಮಾಡುವವನು ಯಾವ ಫಲದ ಕುರಿತು ಚಿಂತಿಸುತ್ತಿರುತ್ತಾನೋ ಅದಕ್ಕೆ ಉಪಯುಕ್ತವಾದ ನರಕದಲ್ಲಿ ಬೀಳುತ್ತಾನೆ159bgv

12190007a ಅಥೈಶ್ವರ್ಯಪ್ರವೃತ್ತಃ ಸಂಜಾಪಕಸ್ತತ್ರ ರಜ್ಯತೇ।
12190007c ಸ ಏವ ನಿರಯಸ್ತಸ್ಯ ನಾಸೌ ತಸ್ಮಾತ್ಪ್ರಮುಚ್ಯತೇ।।

ಒಂದು ವೇಳೆ ಜಪಮಾಡುವ ಸಾಧಕನಿಗೆ ಅಣಿಮಾದಿ ಅಷ್ಟಸಿದ್ಧಿಗಳು ಪ್ರಾಪ್ತವಾದರೆ ಮತ್ತು ಅವನು ಅದರಲ್ಲಿಯೇ ಅನುರಕ್ತನಾದರೆ ಅದೇ ಅವನಿಗೆ ನರಕವಾಗುತ್ತದೆ. ಅದರಿಂದ ಅವನಿಗೆ ಎಂದೂ ಬಿಡುಗಡೆಯಾಗುವುದಿಲ್ಲ.

12190008a ರಾಗೇಣ ಜಾಪಕೋ ಜಪ್ಯಂ ಕುರುತೇ ತತ್ರ ಮೋಹಿತಃ।
12190008c ಯತ್ರಾಸ್ಯ ರಾಗಃ ಪತತಿ ತತ್ರ ತತ್ರೋಪಜಾಯತೇ।।

ಮೋಹವಶನಾಗಿ ವಿಷಯಾಸಕ್ತಿಪೂರ್ವಕ ಜಪಮಾಡುವ ಜಾಪಕನ ಮನಸ್ಸು ಯಾವುದರಲ್ಲಿ ಆಸಕ್ತವಾಗಿರುವುದೋ ಅದಕ್ಕೆ ಅನುರೂಪವಾದ ಶರೀರವನ್ನೇ ಪಡೆದುಕೊಳ್ಳುತ್ತಾನೆ4.

12190009a ದುರ್ಬುದ್ಧಿರಕೃತಪ್ರಜ್ಞಶ್ಚಲೇ ಮನಸಿ ತಿಷ್ಠತಿ।
12190009c ಚಲಾಮೇವ ಗತಿಂ ಯಾತಿ ನಿರಯಂ ವಾಧಿಗಚ್ಚತಿ।।

ದುರ್ಬುದ್ಧಿ ಮತ್ತು ಅವಿವೇಕೀ ಜಾಪಕನು ಮನಸ್ಸು ಚಂಚಲವಾಗಿರುವಾಗ ಜಪವನ್ನು ಮಾಡಿದರೆ ಚಂಚಲ ಗತಿಯನ್ನೇ5 ಪಡೆಯುತ್ತಾನೆ ಅಥವಾ ನರಕಗಳಲ್ಲಿ ಬೀಳುತ್ತಾನೆ.

12190010a ಅಕೃತಪ್ರಜ್ಞಕೋ ಬಾಲೋ ಮೋಹಂ ಗಚ್ಚತಿ ಜಾಪಕಃ।
12190010c ಸ ಮೋಹಾನ್ನಿರಯಂ ಯಾತಿ ತತ್ರ ಗತ್ವಾನುಶೋಚತಿ।।

ವಿವೇಕಶೂನ್ಯ ಮೂಢ ಜಾಪಕನು ಮೋಹಗ್ರಸ್ತನಾಗುತ್ತಾನೆ ಮತ್ತು ಅದೇ ಮೋಹದ ಕಾರಣದಿಂದಾಗಿ ಅವನು ನರಕಕ್ಕೆ ಹೋಗಿ ಅಲ್ಲಿ ಶೋಕಿಸುತ್ತಾನೆ.

12190011a ದೃಢಗ್ರಾಹೀ ಕರೋಮೀತಿ ಜಪ್ಯಂ ಜಪತಿ ಜಾಪಕಃ।
12190011c ನ ಸಂಪೂರ್ಣೋ ನ ವಾ ಯುಕ್ತೋ ನಿರಯಂ ಸೋಽಧಿಗಚ್ಚತಿ।।

ಜಪವನ್ನು ಮಾಡುತ್ತೇನೆಂದು ದೃಢನಿಶ್ಚಯವನ್ನು ಮಾಡಿದ ಜಾಪಕನು ಜಪವನ್ನು ಪೂರ್ಣಗೊಳಿಸದೇ ಇದ್ದರೆ ಅಥವಾ ಜಪವನ್ನು ಮಾಡದೇ ಇದ್ದರೆ ನರಕಕ್ಕೆ ಹೋಗುತ್ತಾನೆ.”

12190012 ಯುಧಿಷ್ಠಿರ ಉವಾಚ।
12190012a ಅನಿಮಿತ್ತಂ6 ಪರಂ ಯತ್ತದವ್ಯಕ್ತಂ ಬ್ರಹ್ಮಣಿ ಸ್ಥಿತಮ್।
12190012c ಸದ್ಭೂತೋ ಜಾಪಕಃ ಕಸ್ಮಾತ್ಸ ಶರೀರಮಥಾವಿಶೇತ್।।

ಯುಧಿಷ್ಠಿರನು ಹೇಳಿದನು: “ಅನಿಮಿತ್ತವಾದ ಅವ್ಯಕ್ತ ಪರಬ್ರಹ್ಮನಲ್ಲಿ7 ಸ್ಥಿತನಾದ ಜಾಪಕನು ಯಾವಕಾರಣದಿಂದ ಪುನರ್ಜನ್ಮವನ್ನು ಹೊಂದುತ್ತಾನೆ?”

12190013 ಭೀಷ್ಮ ಉವಾಚ।
12190013a ದುಷ್ಪ್ರಜ್ಞಾನೇನ ನಿರಯಾ ಬಹವಃ ಸಮುದಾಹೃತಾಃ।
12190013c ಪ್ರಶಸ್ತಂ ಜಾಪಕತ್ವಂ ಚ ದೋಷಾಶ್ಚೈತೇ ತದಾತ್ಮಕಾಃ।।

ಭೀಷ್ಮನು ಹೇಳಿದನು: “ಕಾಮಾದಿ ಬುದ್ಧಿದೋಷಗಳಿಂದಾಗಿಯೇ ಜಾಪಕನಿಗೆ ಅನೇಕ ನರಕಗಳ ಪ್ರಾಪ್ತಿಯಾಗುತ್ತದೆ ಮತ್ತು ನಾನಾ ಯೋನಿಗಳಲ್ಲಿ ಜನ್ಮತಾಳಬೇಕಾಗುತ್ತದೆ. ಜಾಪಕತ್ವವು ಪ್ರಶಸ್ತವಾದುದು. ಆದರೆ ಮೇಲೆ ಹೇಳಿದ ದೋಷಗಳು ಜಾಪಕನಲ್ಲಿ ಉಂಟಾಗಬಹುದು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ನವತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ತನೇ ಅಧ್ಯಾಯವು.


  1. ಏಕೈವೈಷಾ ಗತಿಸ್ತೇಷಾಮುತ ಯಾಂತ್ಯಪರಾಮಪಿ। ಎನ್ನುವುದಕ್ಕೆ ಇತರ ಅನುವಾದಗಳೂ ಇವೆ: ಅವರೆಲ್ಲರಿಗೂ ಪ್ರಾಪ್ತವಾಗುವುದು ಇದೊಂದೇ ಸ್ಥಾನವೇ? ಬೇರೆ ಯಾವುದಾದರೂ ಸ್ಥಾನಕ್ಕೂ ಅವರು ಹೋಗುವರೇ? (ಭಾರತ ದರ್ಶನ). ಅವರಿಗೆ ಏಕಮಾತ್ರ ಗತಿಯುಂಟಾಗುತ್ತದೆಯೇ? ಅಥವಾ ಅವರು ಬೇರೆ ಯಾವುದೇ ಗತಿಯನ್ನೂ ಹೊಂದುತ್ತಾರೆಯೇ? (ಗೀತಾ ಪ್ರೆಸ್). ↩︎

  2. ಈ ಅಧ್ಯಾಯದಲ್ಲಿ ಬಂದಿರುವ ನಿರಯ ಎಂಬ ಶಬ್ದಕ್ಕೆ ಭೋಗೈಶ್ವರ್ಯದ ಗತಿ ಅಥವಾ ಪುನರ್ಜನ್ಮ ಎಂದು ಅರ್ಥೈಸುವುದು ಒಳ್ಳೆಯದು. ಫಲಾಭಿಸಂಧಿಯಿಲ್ಲದೇ ಮಹಾಮಂತ್ರಗಳ ಜಪದ ಮೂಲಕ ಧ್ಯಾನಯೋಗದಲ್ಲಿ ನಿಷ್ಠನಾದರೆ ಅಂತಹ ಯೋಗಿಗೆ ಆತ್ಮಸಾಕ್ಷಾತ್ಕಾರವಾಗುತ್ತದ ಅಥವಾ ಬ್ರಹ್ಮಲೋಕವು ಪ್ರಾಪ್ತವಾಗುತ್ತದೆ ಎಂದು ಹಿಂದಿನ ಅಧ್ಯಾಯದಲ್ಲಿ ಹೇಳಿದೆ. ಈ ಅಧ್ಯಾಯದಲ್ಲಿ ಜಪದ ದೋಷಗಳನ್ನು ಹೇಳುವಾಗ ಕಾಮ್ಯಫಲಗಳಲ್ಲಿ ಆಸಕ್ತನಾಗಿ ಜಪಮಾಡಿದರೆ ಬ್ರಹ್ಮಸಾಕ್ಷಾತ್ಕಾರವಾಗುವುದಿಲ್ಲ. ಅಣಿಮಾದಿ ಅಷ್ಟಸಿದ್ಧಿಗಳನ್ನೂ ಜಪದಿಂದಲೇ ಪಡೆದುಕೊಳ್ಳಬಹುದು. ಈ ಜನ್ಮದಲ್ಲಿ ಯಾವುದೋ ಫಲಾಭಿಸಂಧಿಯಿಂದ ಜಪಮಾಡಿದರೆ ಮುಂದಿನ ಜನ್ಮಕ್ಕಾಗಿಯಾದರೂ ಅದು ಲಭ್ಯವಾಗುತ್ತದೆ. ಆದರೆ ಹೀಗೆ ಫಲಾಭಿಲಾಷೆಯಿಂದ ಜಪಮಾಡುವವನು ಬ್ರಹ್ಮಭಾವದಿಂದ ಬಹಳ ದೂರವಿರುತ್ತಾನೆ. ಅಂಥವನಿಗೆ ಸಾಂಸಾರಚಕ್ರವು ತಪ್ಪಿದ್ದಲ್ಲ – ಎಂಬ ಅಭಿಪ್ರಾಯವನ್ನು ಈ ಅಧ್ಯಾಯವು ಸೂಚಿಸುತ್ತದೆ. ಯೋಗಿಯ ದೃಷ್ಟಿಯಿಂದ ಸಂಸಾರವೇ ನರಕಪ್ರಾಯವಾಗಿರುತ್ತದೆ. (ಭಾರತ ದರ್ಶನ). ಆದುದರಿಂದ ಈ ಅಧ್ಯಾಯದಲ್ಲಿ ಬರುವ ನಿರಯ ಎಂಬ ಶಬ್ದಕ್ಕೆ ಪುನರ್ಜನ್ಮ ಎಂದು ಅರ್ಥೈಸಿದ್ದಾರೆ. (ಗೀತಾ ಪ್ರೆಸ್). ಮುಂದಿನ ಅಧ್ಯಾಯದಲ್ಲಿ ಭೀಷ್ಮನು ಪರಂಧಾಮಕ್ಕೆ ಹೋಲಿಸಿದರೆ ದೇವಲೋಕವೂ ನರಕವೇ ಸರಿ ಎಂದು ಪ್ರತಿಪಾದಿಸುತ್ತಾನೆ. ↩︎

  3. ಅವಮಾನೇನ ಕುರುತೇ ನ ಪ್ರೀಯತಿ ನ ಹೃಷ್ಯತಿ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  4. ಯಾರು ವರ್ಣ-ರತಿ-ಪ್ರಮೋದ ಮೊದಲಾದ ಭೋಗಗಳನ್ನು ಧ್ಯಾನಿಸುತ್ತಾ ಮೋಹವಶನಾಗಿ ಜಪಮಾಡುವನೋ ಮತ್ತು ಹೊಂದಬೇಕಾದ ಫಲವನ್ನೇ ಯಾವಾಗಲೂ ಮನಸ್ಸಿನಲ್ಲಿ ಚಿಂತಿಸುವನೋ ಅಂಥವನು ನರಕಕ್ಕೆ ಹೋಗುತ್ತಾನೆ (ಭಾರತ ದರ್ಶನ). ↩︎

  5. ದೊಡ್ಡದೊಂದು ಅರಮನೆಯು ಬೇಕೆಂದು ಜಪಮಾಡಿದರೆ ಪುನರ್ಜನ್ಮದಲ್ಲಿ ಅವನು ರಾಜನಾಗಿ ಅರಮನೆಯ ಸುಖವನ್ನೇ ಪಡೆಯುತ್ತಾನೆ. ಜಾಪಕನು ಪರಮಾತ್ಮನ ಚಿಂತನೆಯಿಂದ ಅವನನ್ನು ಸೇರುವಂತೆ, ವಿಷಯ ಚಿಂತನೆಯಿಂದ ವಿಷಯೋಪಭೋಗಗಳಿಗೆ ಅನುಕೂಲವಾದ ಜನ್ಮವನ್ನೇ ಪಡೆಯುತ್ತಾನೆ. (ಭಾರತ ದರ್ಶನ) ↩︎

  6. ಚಲಾಮೇವ ಗತಿಂ ಎನ್ನುವುದಕ್ಕೆ ವಿನಾಶಶೀಲ ಅಥವಾ ಸ್ವರ್ಗಾದಿ ವಿಚಲಿತ ಸ್ವಭಾವವಿರುವ ಲೋಕಗಳು ಎಂಬ ಅನುವಾದವಿದೆ (ಗೀತಾ ಪ್ರೆಸ್). ↩︎

  7. ಅನಿವೃತ್ತಂ (ಗೀತಾ ಪ್ರೆಸ್/ಭಾರತ ದರ್ಶನ). ↩︎