ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 189
ಸಾರ
ಜಪಯಜ್ಞದ ಕುರಿತು ಯುಧಿಷ್ಠಿರನ ಪ್ರಶ್ನೆ ಮತ್ತು ಅದಕ್ಕುತ್ತರವಾಗಿ ಜಪ-ಧ್ಯಾನಗಳ ಮಹಿಮೆ-ಫಲಗಳು (1-21).
12189001 ಯುಧಿಷ್ಠಿರ ಉವಾಚ।
12189001a ಚಾತುರಾಶ್ರಮ್ಯಮುಕ್ತಂ ತೇ ರಾಜಧರ್ಮಾಸ್ತಥೈವ ಚ।
12189001c ನಾನಾಶ್ರಯಾಶ್ಚ ಬಹವ ಇತಿಹಾಸಾಃ ಪೃಥಗ್ವಿಧಾಃ।।
ಯುಧಿಷ್ಠಿರನು ಹೇಳಿದನು: “ನಾಲ್ಕು ಆಶ್ರಮಗಳು ಮತ್ತು ರಾಜಧರ್ಮಗಳ ಕುರಿತು ನೀನು ಹೇಳಿದ್ದೀಯೆ ಮತ್ತು ನಾನಾ ವಿಷಯಗಳನ್ನೊಳಗೊಂಡಿರುವ ಪ್ರತ್ಯೇಕ ವಿಧದ ಅನೇಕ ಇತಿಹಾಸಗಳನ್ನೂ ಹೇಳಿದ್ದೀಯೆ.
12189002a ಶ್ರುತಾಸ್ತ್ವತ್ತಃ ಕಥಾಶ್ಚೈವ ಧರ್ಮಯುಕ್ತಾ ಮಹಾಮತೇ।
12189002c ಸಂದೇಹೋಽಸ್ತಿ ತು ಕಶ್ಚಿನ್ಮೇ ತದ್ಭವಾನ್ವಕ್ತುಮರ್ಹತಿ।।
ಮಹಾಮತೇ! ನಾನು ನಿನ್ನಿಂದ ಧರ್ಮಯುಕ್ತ ಕಥೆಗಳನ್ನೂ ಕೇಳಿದೆ. ಆದರೂ ನನ್ನಲ್ಲಿ ಕೆಲವು ಸಂದೇಹಗಳಿವೆ. ಅದರ ಕುರಿತು ನೀನು ಹೇಳಬೇಕು.
12189003a ಜಾಪಕಾನಾಂ ಫಲಾವಾಪ್ತಿಂ ಶ್ರೋತುಮಿಚ್ಚಾಮಿ ಭಾರತ।
12189003c ಕಿಂ ಫಲಂ ಜಪತಾಮುಕ್ತಂ ಕ್ವ ವಾ ತಿಷ್ಠಂತಿ ಜಾಪಕಾಃ।।
ಭಾರತ! ಜಪಮಾಡುವವರಿಗೆ ದೊರೆಯುವ ಫಲವು ಎಂಥಹುದು? ಜಾಪಕರಿಗೆ ಜಪದ ಫಲವು ಯಾವುದು ಅಥವಾ ಜಪ ಮಾಡುವವರು ಯಾವ ಲೋಕಗಳನ್ನು ಪಡೆಯುತ್ತಾರೆ?
12189004a ಜಪಸ್ಯ ಚ ವಿಧಿಂ ಕೃತ್ಸ್ನಂ ವಕ್ತುಮರ್ಹಸಿ ಮೇಽನಘ।
12189004c ಜಾಪಕಾ ಇತಿ ಕಿಂ ಚೈತತ್ಸಾಂಖ್ಯಯೋಗಕ್ರಿಯಾವಿಧಿಃ।।
ಅನಘ! ಜಪದ ವಿಧಿಯನ್ನು ಸಂಪೂರ್ಣವಾಗಿ ಹೇಳಬೇಕು. “ಜಾಪಕ” ಪದದ ತಾತ್ಪರ್ಯವೇನು? ಇದು ಸಾಂಖ್ಯಯೋಗ, ಧ್ಯಾನಯೋಗ ಅಥವಾ ಕ್ರಿಯಾಯೋಗ ಯಾವುದರ ಅನುಷ್ಠಾನವು?
12189005a ಕಿಂ ಯಜ್ಞವಿಧಿರೇವೈಷ ಕಿಮೇತಜ್ಜಪ್ಯಮುಚ್ಯತೇ।
12189005c ಏತನ್ಮೇ ಸರ್ವಮಾಚಕ್ಷ್ವ ಸರ್ವಜ್ಞೋ ಹ್ಯಸಿ ಮೇ ಮತಃ।।
ಅಥವಾ ಈ ಜಪವೂ ಒಂದು ಯಜ್ಞವಿಧಿಯೇ? ಯಾವುದರ ಕುರಿತು ಜಪವನ್ನು ಮಾಡುತ್ತಾರೆ? ಇವೆಲ್ಲವನ್ನೂ ನನಗೆ ಹೇಳು. ನೀನು ಸರ್ವಜ್ಞನೆಂದೇ ನನ್ನ ಮತ.”
12189006 ಭೀಷ್ಮ ಉವಾಚ।
12189006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12189006c ಯಮಸ್ಯ ಯತ್ಪುರಾ ವೃತ್ತಂ ಕಾಲಸ್ಯ ಬ್ರಾಹ್ಮಣಸ್ಯ ಚ।।
ಭೀಷ್ಮನು ಹೇಳಿದನು: “ಇದರ ಕುರಿತು ಪುರಾತನ ಇತಿಹಾಸವಾದ ಯಮ, ಕಾಲ ಮತ್ತು ಬ್ರಾಹ್ಮಣರ ನಡುವೆ ಹಿಂದೆ ನಡೆದ ಈ ಘಟನೆಯನ್ನು ಉದಾಹರಿಸುತ್ತಾರೆ.
112189007a ಸಂನ್ಯಾಸ ಏವ ವೇದಾಂತೇ ವರ್ತತೇ ಜಪನಂ ಪ್ರತಿ।
12189007c ವೇದವಾದಾಭಿನಿರ್ವೃತ್ತಾ ಶಾಂತಿರ್ಬ್ರಹ್ಮಣ್ಯವಸ್ಥಿತೌ।
212189007e ಮಾರ್ಗೌ ತಾವಪ್ಯುಭಾವೇತೌ ಸಂಶ್ರಿತೌ ನ ಚ ಸಂಶ್ರಿತೌ।।
ವೇದಾಂತದಲ್ಲಿ ಜಪದ ವಿಷಯದಲ್ಲಿ ಸಂನ್ಯಾಸವನ್ನೇ ಹೇಳಿದ್ದಾರೆ. ವೇದವಾದಗಳು ನಿರ್ವೃತ್ತಿ, ಶಾಂತಿ ಮತ್ತು ಬ್ರಹ್ಮನಿಷ್ಠೆಯ ಜ್ಞಾನವನ್ನುಂಟುಮಾಡುತ್ತವೆ.3 ಸಾಂಖ್ಯಯೋಗ ಮತ್ತು ಧ್ಯಾನಯೋಗ ಇವೆರಡು ಮಾರ್ಗಗಳೂ ಜಪವನ್ನು ಆಶ್ರಯಿಸಿಯೂ ಇವೆ, ಆಶ್ರಯಿಸದೆಯೂ ಇವೆ4.
12189008a ಯಥಾ ಸಂಶ್ರೂಯತೇ ರಾಜನ್ಕಾರಣಂ ಚಾತ್ರ ವಕ್ಷ್ಯತೇ।
12189008c ಮನಃಸಮಾಧಿರತ್ರಾಪಿ ತಥೇಂದ್ರಿಯಜಯಃ ಸ್ಮೃತಃ।।
ರಾಜನ್! ಇದಕ್ಕೆ ಕಾರಣವನ್ನು ಹೇಗೆ ಕೇಳಿದ್ದೇವೋ ಹಾಗೆಯೇ ಹೇಳುತ್ತೇನೆ. ಸಾಂಖ್ಯ ಮತ್ತು ಯೋಗ – ಇವೆರಡೂ ಮಾರ್ಗಗಳಲ್ಲಿಯೂ ಮನೋನಿಗ್ರಹ ಮತ್ತು ಇಂದ್ರಿಯ ಸಂಯಮಗಳು ಅವಶ್ಯಕವಾಗಿವೆ.
12189009a ಸತ್ಯಮಗ್ನಿಪರೀಚಾರೋ ವಿವಿಕ್ತಾನಾಂ ಚ ಸೇವನಮ್।
12189009c ಧ್ಯಾನಂ ತಪೋ ದಮಃ ಕ್ಷಾಂತಿರನಸೂಯಾ ಮಿತಾಶನಮ್।।
12189010a ವಿಷಯಪ್ರತಿಸಂಹಾರೋ ಮಿತಜಲ್ಪಸ್ತಥಾ ಶಮಃ।
12189010c ಏಷ ಪ್ರವೃತ್ತಕೋ ಧರ್ಮೋ ನಿವೃತ್ತಕಮಥೋ ಶೃಣು।।
ಸತ್ಯ, ಅಗ್ನಿಹೋತ್ರ, ಏಕಾಂತವಾಸ, ಧ್ಯಾನ, ತಪಸ್ಸು, ದಮ, ಕ್ಷಮೆ, ಅಸೂಯೆಯಿಲ್ಲದಿರುವುದು, ಮಿತಾಹಾರ, ವಿಷಯಗಳನ್ನು ಸಂಕುಚಿತಗೊಳಿಸುವುದು, ಮಿತಭಾಷಣ ಮತ್ತು ಶಮೆ – ಇವು ಯೋಗದಲ್ಲಿ ತೊಡಗುವಂತೆ ಮಾಡುವ ಪ್ರವರ್ತಕ ಯಜ್ಞಗಳು. ಈಗ ಯೋಗವಿರುದ್ಧಕಾರ್ಯಗಳಲ್ಲಿ ತೊಡಗಿಸದೇ ಇರುವ ನಿವೃತ್ತಕ ಯಜ್ಞದ ಕುರಿತು ಕೇಳು.
12189011a ಯಥಾ ನಿವರ್ತತೇ ಕರ್ಮ ಜಪತೋ ಬ್ರಹ್ಮಚಾರಿಣಃ।
12189011c ಏತತ್ಸರ್ವಮಶೇಷೇಣ ಯಥೋಕ್ತಂ ಪರಿವರ್ಜಯೇತ್5।
12189011e ತ್ರಿವಿಧಂ6 ಮಾರ್ಗಮಾಸಾದ್ಯ ವ್ಯಕ್ತಾವ್ಯಕ್ತಮನಾಶ್ರಯಮ್।।
ಜಪವನ್ನು ಮಾಡುವ ಬ್ರಹ್ಮಚಾರಿಗೆ ಕರ್ಮಗಳು ನಿವೃತ್ತಿಹೊಂದುತ್ತವೆ. ವ್ಯಕ್ತ, ಅವ್ಯಕ್ತ ಮತ್ತು ಅನಾಶ್ರಯ ಎಂಬ ಈ ತ್ರಿವಿಧ ನಿವೃತ್ತಿಮಾರ್ಗವನ್ನನುಸರಿಸಿ ಹಿಂದೆ ಹೇಳಿದುದೆಲ್ಲವನ್ನೂ ಪರಿತ್ಯಜಿಸಬೇಕು.
12189012a ಕುಶೋಚ್ಚಯನಿಷಣ್ಣಃ ಸನ್ಕುಶಹಸ್ತಃ ಕುಶೈಃ ಶಿಖೀ।
12189012c ಚೀರೈಃ ಪರಿವೃತಸ್ತಸ್ಮಿನ್ಮಧ್ಯೇ ಚನ್ನಃ ಕುಶೈಸ್ತಥಾ।।
ನಿವೃತ್ತಿಮಾರ್ಗದಲ್ಲಿ ಹೋಗುವವನು ದರ್ಬೆಗಳನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳಬೇಕು. ತನ್ನ ಕೈಯಲ್ಲಿಯೂ ದರ್ಬೆಗಳನ್ನು ಹಿಡಿದಿರಬೇಕು. ಶಿಖೆಯನ್ನೂ ದರ್ಬೆಗಳಿಂದ ಕಟ್ಟಿಕೊಳ್ಳಬೇಕು. ದರ್ಬೆಗಳನ್ನು ಸುತ್ತಲೂ ಮುಚ್ಚಿಕೊಂಡು ಮಧ್ಯದಲ್ಲಿ ಕುಳಿತಿರಬೇಕು.
12189013a ವಿಷಯೇಭ್ಯೋ ನಮಸ್ಕುರ್ಯಾದ್ವಿಷಯಾನ್ನ ಚ ಭಾವಯೇತ್।
12189013c ಸಾಮ್ಯಮುತ್ಪಾದ್ಯ ಮನಸೋ ಮನಸ್ಯೇವ ಮನೋ ದಧತ್।।
ದೂರದಿಂದಲೇ ವಿಷಯಗಳನ್ನು ನಮಸ್ಕರಿಸಿ ವಿಷಯಗಳ ಕುರಿತು ಮನಸ್ಸಿನಲ್ಲಿ ಯೋಚಿಸಬಾರದು. ಮನಸ್ಸಿನಲ್ಲಿ ಸಾಮ್ಯತೆಯನ್ನು ತಂದುಕೊಂಡು ಮನಸ್ಸನ್ನು ಮನಸ್ಸಿನಲ್ಲಿಯೇ ಲಯಗೊಳಿಸಬೇಕು.
12189014a ತದ್ಧಿಯಾ ಧ್ಯಾಯತಿ ಬ್ರಹ್ಮ ಜಪನ್ವೈ ಸಂಹಿತಾಂ ಹಿತಾಮ್।
12189014c ಸಂನ್ಯಸ್ಯತ್ಯಥ ವಾ ತಾಂ ವೈ ಸಮಾಧೌ ಪರ್ಯವಸ್ಥಿತಃ।।
ಅನಂತರ ಹಿತವಾದ ಸಂಹಿತೆಯನ್ನು7 ಜಪಿಸುತ್ತಾ ಬುದ್ಧಿಯಲ್ಲಿ ಪರಬ್ರಹ್ಮಪರಮಾತ್ಮನನ್ನು ಧ್ಯಾನಿಸಬೇಕು. ಸಮಾಧಿಸ್ಥನಾದ ನಂತರ ಆ ಸಂಹಿತೆಯ ಜಪವನ್ನು ನಿಲ್ಲಿಸಬಹುದು.
12189015a ಧ್ಯಾನಮುತ್ಪಾದಯತ್ಯತ್ರ ಸಂಹಿತಾಬಲಸಂಶ್ರಯಾತ್।
12189015c ಶುದ್ಧಾತ್ಮಾ ತಪಸಾ ದಾಂತೋ ನಿವೃತ್ತದ್ವೇಷಕಾಮವಾನ್।।
12189016a ಅರಾಗಮೋಹೋ ನಿರ್ದ್ವಂದ್ವೋ ನ ಶೋಚತಿ ನ ಸಜ್ಜತೇ।
12189016c ನ ಕರ್ತಾಕರಣೀಯಾನಾಂ ನ ಕಾರ್ಯಾಣಾಮಿತಿ ಸ್ಥಿತಿಃ।।
ಸಂಹಿತೆಯ ಜಪದಿಂದ ದೊರೆಯುವ ಬಲವನ್ನುಪಯೋಗಿಸಿಕೊಂಡು ಸಾಧಕನು ತನ್ನ ಧ್ಯಾನದ ಸಿದ್ಧಿಯನ್ನು ಪಡೆಯುತ್ತಾನೆ. ತಪಸ್ಸಿನಿಂದ ಶುದ್ಧಾತ್ಮನೂ ಜಿತೇಂದ್ರಿಯನೂ ಆಗುತ್ತಾನೆ. ಕಾಮ-ಕ್ರೋಧ-ರಾಗ-ಮೋಹ ರಹಿತನಾಗುತ್ತಾನೆ. ದ್ವೇಷ-ಕಾಮನೆಗಳಿಂದ ನಿವೃತ್ತನಾಗುತ್ತಾನೆ. ನಿರ್ದ್ವಂದ್ವನಾಗಿ ಶೋಕಿಸುವುದೂ ಇಲ್ಲ ಮತ್ತು ಯಾವುದರಲ್ಲಿಯೂ ಆಸಕ್ತನೂ ಆಗುವುದಿಲ್ಲ. ಕರ್ಮಗಳಿಗೆ ಕಾರಣನೆಂದಾಗಲೀ ಕರ್ತೃವೆಂದಾಗಲೀ ಭಾವಿಸುವುದಿಲ್ಲ. ಎಲ್ಲ ಕಾರ್ಯಗಳನ್ನೂ ಅಭಿಮಾನರಹಿತನಾಗಿ ಮಾಡುತ್ತಾನೆ.
12189017a ನ ಚಾಹಂಕಾರಯೋಗೇನ ಮನಃ ಪ್ರಸ್ಥಾಪಯೇತ್ಕ್ವ ಚಿತ್।
12189017c ನ ಚಾತ್ಮಗ್ರಹಣೇ8 ಯುಕ್ತೋ ನಾವಮಾನೀ ನ ಚಾಕ್ರಿಯಃ।।
ಅವನು ಎಂದೂ ಮನಸ್ಸಿನೊಂದಿಗೆ ಅಹಂಕಾರವನ್ನು ಜೋಡಿಸುವುದಿಲ್ಲ. ಅವನು ಸ್ವಾರ್ಥಸಾದನೆಯಲ್ಲಿ ತೊಡಗುವುದಿಲ್ಲ, ಯಾರನ್ನೂ ಅಪಮಾನಿಸುವುದಿಲ್ಲ ಮತ್ತು ಅಕರ್ಮಣ್ಯನೂ ಆಗಿರುವುದಿಲ್ಲ.
12189018a ಧ್ಯಾನಕ್ರಿಯಾಪರೋ ಯುಕ್ತೋ ಧ್ಯಾನವಾನ್ ಧ್ಯಾನನಿಶ್ಚಯಃ।
12189018c ಧ್ಯಾನೇ ಸಮಾಧಿಮುತ್ಪಾದ್ಯ ತದಪಿ ತ್ಯಜತಿ ಕ್ರಮಾತ್।।
ಧ್ಯಾನಕ್ರಿಯಾಪರನಾಗಿದ್ದುಕೊಂಡು ಧ್ಯಾನನಿಷ್ಠನಾಗಿ ಧ್ಯಾನದ ಮೂಲಕವೇ ತತ್ತ್ವವನ್ನು ಅರಿತುಕೊಳ್ಳುತ್ತಾನೆ. ಧ್ಯಾನದ ಮೂಲಕ ಸಮಾಧಿಸ್ಥಿತಿಯನ್ನು ಹೊಂದಿ ಅನುಕ್ರಮವಾಗಿ ಜಪವನ್ನೂ ಧ್ಯಾನಕರ್ಮವನ್ನೂ ಪರಿತ್ಯಜಿಸುತ್ತಾನೆ.
12189019a ಸ ವೈ ತಸ್ಯಾಮವಸ್ಥಾಯಾಂ ಸರ್ವತ್ಯಾಗಕೃತಃ ಸುಖೀ।
12189019c ನಿರೀಹಸ್ತ್ಯಜತಿ9 ಪ್ರಾಣಾನ್ಬ್ರಾಹ್ಮೀಂ ಸಂಶ್ರಯತೇ ತನುಮ್।।
ಆ ಅವಸ್ಥೆಯಲ್ಲಿ ಅವನು ಸರ್ವವನ್ನೂ ತ್ಯಾಗಮಾಡಿ ಸುಖಿಯಾಗಿರುತ್ತಾನೆ. ಏನನ್ನೂ ಬಯಸದೇ ಪ್ರಾಣಗಳನ್ನು ತ್ಯಜಿಸಿ ವಿಶುದ್ಧ ಪರಬ್ರಹ್ಮ ಪರಮಾತ್ಮನ ಸ್ವರೂಪವನ್ನು ಪ್ರವೇಶಿಸುತ್ತಾನೆ.
12189020a ಅಥ ವಾ ನೇಚ್ಚತೇ ತತ್ರ ಬ್ರಹ್ಮಕಾಯನಿಷೇವಣಮ್।
12189020c ಉತ್ಕ್ರಾಮತಿ ಚ ಮಾರ್ಗಸ್ಥೋ ನೈವ ಕ್ವ ಚನ ಜಾಯತೇ।।
ಬ್ರಹ್ಮಕಾಯವನ್ನು ಪ್ರವೇಶಿಸಲು ಇಷ್ಟವಿಲ್ಲದಿದ್ದರೆ ದೇವಯಾನದ ಮಾರ್ಗದಲ್ಲಿ ಉತ್ಕ್ರಮಿಸಿ ಮೇಲಿನ ಲೋಕಗಳಿಗೆ ಹೋಗುತ್ತಾನೆ. ಅಂಥವರು ಪುನಃ ಹುಟ್ಟುವುದಿಲ್ಲ.
12189021a ಆತ್ಮಬುದ್ಧಿಂ ಸಮಾಸ್ಥಾಯ ಶಾಂತೀಭೂತೋ ನಿರಾಮಯಃ।
12189021c ಅಮೃತಂ ವಿರಜಃಶುದ್ಧಮಾತ್ಮಾನಂ ಪ್ರತಿಪದ್ಯತೇ।।
ಆತ್ಮಸಮಾಧಿಯನ್ನು ಹೊಂದಿ ಯೋಗಿಯು ರಜೋಗುಣರಹಿತನಾಗಿ ನಿರ್ಮಲನಾಗಿ ಶಾಂತಸ್ವರೂಪನಾಗಿ ಅಮೃತಸ್ವರೂಪವಾದ ವಿಶುದ್ಧ ಆತ್ಮನನ್ನು ಹೊಂದುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ಏಕೋನನವತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾಎಂಭತ್ತೊಂಭತ್ತನೇ ಅಧ್ಯಾಯವು.
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸಾಂಖ್ಯಯೋಗೌ ತು ಯಾವುಕ್ತೌ ಮುನಿಭಿರ್ಮೋಕ್ಷದರ್ಶಿಭಿಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಾಂಖ್ಯಯೋಗೌ ತು ಯಾವುಕ್ತೌ ಮುನಿಭಿಃ ಸಮದರ್ಶಿಭಿಃ। (ಗೀತಾ ಪ್ರೆಸ್/ಭಾರತ ದರ್ಶನ) ↩︎
-
ಆದುದರಿಂದ ಅಲ್ಲಿ ಜಪದ ಅವಶ್ಯಕತೆಯಿರುವುದಿಲ್ಲ (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಆ ಎರಡು ಮಾರ್ಗಗಳೂ ಚಿತ್ತಶುದ್ಧಿಯಾಗುವವರೆಗೆ ಜಪವನ್ನು ಆಶ್ರಯಿಸಿರುತ್ತವೆ. ಚಿತ್ತಶುದ್ಧಿಯಾದ ನಂತರ ಜಪವನ್ನು ಆಶ್ರಯಿಸಿರುವುದಿಲ್ಲ (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಪರಿವರ್ತಯೇತ್। (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ನಿವೃತ್ತಂ (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ಉಪನಿಷತ್ಸಂಹಿತೆ (ಭಾರತ ದರ್ಶನ), ವೇದಸಂಹಿತೆಯ ಪ್ರಣವ ಮತ್ತು ಗಾಯತ್ರೀ ಮಂತ್ರ (ಗೀತಾ ಪ್ರೆಸ್). ↩︎
-
ಚಾರ್ಥಗ್ರಹಣೇ (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ನಿರಿಚ್ಛಸ್ತ್ಯಜತಿ (ಗೀತಾ ಪ್ರೆಸ್/ಭಾರತ ದರ್ಶನ). ↩︎