ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 181
ಸಾರ
ವರ್ಣವಿಭಾಗಪೂರ್ವಕವಾಗಿ ಮನುಷ್ಯರ ಮತ್ತು ಸಮಸ್ತ ಪ್ರಾಣಿಗಳ ಸೃಷ್ಟಿವರ್ಣನೆ (1-20).
12181001 ಭೃಗುರುವಾಚ।
12181001a ಅಸೃಜದ್ಬ್ರಾಹ್ಮಣಾನೇವ ಪೂರ್ವಂ ಬ್ರಹ್ಮಾ ಪ್ರಜಾಪತಿಃ।
12181001c ಆತ್ಮತೇಜೋಭಿನಿರ್ವೃತ್ತಾನ್ ಭಾಸ್ಕರಾಗ್ನಿಸಮಪ್ರಭಾನ್।।
ಭೃಗುವು ಹೇಳಿದನು: “ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮನು ತನ್ನ ತೇಜಸ್ಸಿನಿಂದ ಸೂರ್ಯಾಗ್ನಿಸಮಾನ ಪ್ರಭೆಯ ಬ್ರಾಹ್ಮಣ ಪ್ರಜಾಪತಿಗಳನ್ನು ಸೃಷ್ಟಿಸಿದನು.
12181002a ತತಃ ಸತ್ಯಂ ಚ ಧರ್ಮಂ ಚ ತಪೋ ಬ್ರಹ್ಮ ಚ ಶಾಶ್ವತಮ್।
12181002c ಆಚಾರಂ ಚೈವ ಶೌಚಂ ಚ ಸ್ವರ್ಗಾಯ ವಿದಧೇ ಪ್ರಭುಃ।।
ಅನಂತರ ಪ್ರಭುವು ಸ್ವರ್ಗಪ್ರಾಪ್ತಿಯ ಸಾಧಕಗಳಾದ ಸತ್ಯ, ಧರ್ಮ, ತಪಸ್ಸು, ಸನಾತನ ವೇದ, ಆಚಾರ ಮತ್ತು ಶೌಚಗಳ ನಿಯಮಗಳನ್ನು ಸೃಷ್ಟಿಸಿದನು.
12181003a ದೇವದಾನವಗಂಧರ್ವದೈತ್ಯಾಸುರಮಹೋರಗಾಃ।
12181003c ಯಕ್ಷರಾಕ್ಷಸನಾಗಾಶ್ಚ ಪಿಶಾಚಾ ಮನುಜಾಸ್ತಥಾ।।
ಅನಂತರ ದೇವತೆಗಳು, ದಾನವರು, ಗಂಧರ್ವರು, ದೈತ್ಯರು, ಅಸುರರು, ಮಹೋರಗರು, ಯಕ್ಷರು, ರಾಕ್ಷಸರು, ನಾಗರು, ಪಿಶಾಚಿಗಳು ಮತ್ತು ಮನುಷ್ಯರನ್ನು ಸೃಷ್ಟಿಸಿದನು.
12181004a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ದ್ವಿಜಸತ್ತಮ।
12181004c ಯೇ ಚಾನ್ಯೇ ಭೂತಸಂಘಾನಾಂ ಸಂಘಾಸ್ತಾಂಶ್ಚಾಪಿ ನಿರ್ಮಮೇ।।
ದ್ವಿಜಸತ್ತಮ! ಅನಂತರ ಅವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರನ್ನೂ ಮತ್ತು ಅನ್ಯ ಪಂಗಡದ ಪ್ರಾಣಿಸಮೂಹಗಳನ್ನೂ ನಿರ್ಮಿಸಿದನು.
12181005a ಬ್ರಾಹ್ಮಣಾನಾಂ ಸಿತೋ ವರ್ಣಃ ಕ್ಷತ್ರಿಯಾಣಾಂ ತು ಲೋಹಿತಃ।
12181005c ವೈಶ್ಯಾನಾಂ ಪೀತಕೋ ವರ್ಣಃ ಶೂದ್ರಾಣಾಮಸಿತಸ್ತಥಾ।।
ಬ್ರಾಹ್ಮಣರ ವರ್ಣವು ಶ್ವೇತ, ಕ್ಷತ್ರಿಯರ ವರ್ಣವು ಕೆಂಪು, ವೈಶ್ಯರ ವರ್ಣವು ಹಳದಿ ಮತ್ತು ಶೂದ್ರರ ವರ್ಣವು ಕಪ್ಪು ಎಂದಾಯಿತು.”
12181006 ಭರದ್ವಾಜ ಉವಾಚ।
12181006a ಚಾತುರ್ವರ್ಣ್ಯಸ್ಯ ವರ್ಣೇನ ಯದಿ ವರ್ಣೋ ವಿಭಜ್ಯತೇ।
12181006c ಸರ್ವೇಷಾಂ ಖಲು ವರ್ಣಾನಾಂ ದೃಶ್ಯತೇ ವರ್ಣಸಂಕರಃ।।
ಭರದ್ವಾಜನು ಹೇಳಿದನು: “ನಾಲ್ಕು ವರ್ಣಗಳಲ್ಲಿ ಒಂದೊಂದಕ್ಕೂ ವರ್ಣಭೇದವಿದೆಯೆಂದಾದರೆ ಎಲ್ಲ ವರ್ಣಗಳಲ್ಲಿಯೂ ವಿಭಿನ್ನ ಬಣ್ಣದ ಮನುಷ್ಯರಿರುವುದರಿಂದ ವರ್ಣಸಂಕರವೇ ಕಾಣುತ್ತದೆ.
12181007a ಕಾಮಃ ಕ್ರೋಧೋ ಭಯಂ ಲೋಭಃ ಶೋಕಶ್ಚಿಂತಾ ಕ್ಷುಧಾ ಶ್ರಮಃ।
12181007c ಸರ್ವೇಷಾಂ ನಃ ಪ್ರಭವತಿ ಕಸ್ಮಾದ್ವರ್ಣೋ ವಿಭಜ್ಯತೇ।।
ಕಾಮ, ಕ್ರೋಧ, ಭಯ, ಲೋಭ, ಶೋಕ, ಚಿಂತೆ, ಹಸಿವು ಮತ್ತು ಬಳಲಿಕೆ ಎಲ್ಲವೂ ನಮ್ಮೆಲ್ಲರಿಗೂ ಸಮಾನವಾಗಿರುವಾಗ ವರ್ಣಭೇದಕ್ಕೆ ಕಾರಣವೇನು?
12181008a ಸ್ವೇದಮೂತ್ರಪುರೀಷಾಣಿ ಶ್ಲೇಷ್ಮಾ ಪಿತ್ತಂ ಸಶೋಣಿತಮ್।
12181008c ತನುಃ ಕ್ಷರತಿ ಸರ್ವೇಷಾಂ ಕಸ್ಮಾದ್ವರ್ಣೋ ವಿಭಜ್ಯತೇ।।
ಎಲ್ಲರ ಶರೀರಗಳಿಂದಲೂ ಬೆವರು, ಮಲ-ಮೂತ್ರಗಳು, ಕಫ, ಪಿತ್ತ, ಮತ್ತು ರಕ್ತಗಳು ಹರಿಯುತ್ತವೆ. ಹೀಗಿರುವಾಗ ವರ್ಣಗಳನ್ನಾಗಿ ವಿಭಾಗಿಸಿರುವುದರ ಕಾರಣವೇನು?
12181009a ಜಂಗಮಾನಾಮಸಂಖ್ಯೇಯಾಃ ಸ್ಥಾವರಾಣಾಂ ಚ ಜಾತಯಃ।
12181009c ತೇಷಾಂ ವಿವಿಧವರ್ಣಾನಾಂ ಕುತೋ ವರ್ಣವಿನಿಶ್ಚಯಃ।।
ಪಶು-ಪಕ್ಷಿ-ಮನುಷ್ಯಾದಿ ಜಂಗಮಪ್ರಾಣಿಗಳಲ್ಲಿಯೂ ವೃಕ್ಷವೇ ಮೊದಲಾದ ಸ್ಥಾವರ ಪ್ರಾಣಿಗಳಲ್ಲಿಯೂ ಅಸಂಖ್ಯಾತ ಜಾತಿಗಳಿವೆ. ಎಲ್ಲವೂ ನಾನಾ ಬಣ್ಣಗಳಿಂದ ಕೂಡಿವೆ. ಅವುಗಳಲ್ಲಿ ಬ್ರಾಹ್ಮಣಾದಿ ವರ್ಣಗಳನ್ನು ನಿಶ್ಚಯಿಸುವುದು ಹೇಗೆ?”
12181010 ಭೃಗುರುವಾಚ।
12181010a ನ ವಿಶೇಷೋಽಸ್ತಿ ವರ್ಣಾನಾಂ ಸರ್ವಂ ಬ್ರಾಹ್ಮಮಿದಂ ಜಗತ್।
12181010c ಬ್ರಹ್ಮಣಾ ಪೂರ್ವಸೃಷ್ಟಂ ಹಿ ಕರ್ಮಭಿರ್ವರ್ಣತಾಂ ಗತಮ್।।
ಭೃಗುವು ಹೇಳಿದನು: “ಮೊದಲು ವರ್ಣಗಳಲ್ಲಿ ಯಾವ ಅಂತರವೂ ಇರಲಿಲ್ಲ. ಬ್ರಹ್ಮನಿಂದ ಹುಟ್ಟಿದ ಕಾರಣ ಈ ಎಲ್ಲ ಜಗತ್ತೂ ಬ್ರಾಹ್ಮಣವೇ ಆಗಿತ್ತು. ನಂತರ ವಿಭಿನ್ನ ಕರ್ಮಗಳ ಕಾರಣದಿಂದ ಅವುಗಳಲ್ಲಿ ವರ್ಣಭೇದವುಂಟಾಯಿತು.
12181011a ಕಾಮಭೋಗಪ್ರಿಯಾಸ್ತೀಕ್ಷ್ಣಾಃ ಕ್ರೋಧನಾಃ ಪ್ರಿಯಸಾಹಸಾಃ।
12181011c ತ್ಯಕ್ತಸ್ವಧರ್ಮಾ ರಕ್ತಾಂಗಾಸ್ತೇ ದ್ವಿಜಾಃ ಕ್ಷತ್ರತಾಂ ಗತಾಃ।।
ಸ್ವಧರ್ಮವನ್ನು ತ್ಯಜಿಸಿ ಕಾಮಭೋಗಗಳ ಪ್ರೇಮೀ, ತೀಕ್ಷ್ಣಸ್ವಭಾವದ, ಕ್ರೋಧೀ ಮತ್ತು ಸಾಹಸಕರ್ಮಗಳನ್ನು ಇಷ್ಟಪಡುವವರ ಶರೀರಗಳು ಈ ಕಾರಣಗಳಿಂದ ಕೆಂಪುಬಣ್ಣವನ್ನು ತಾಳಿತು ಮತ್ತು ಅಂಥಹ ಬ್ರಾಹ್ಮಣರು ಕ್ಷತ್ರಿಯಭಾವವನ್ನು ಪಡೆದುಕೊಂಡರು.
12181012a ಗೋಷು ವೃತ್ತಿಂ ಸಮಾಧಾಯ ಪೀತಾಃ ಕೃಷ್ಯುಪಜೀವಿನಃ।
12181012c ಸ್ವಧರ್ಮಂ ನಾನುತಿಷ್ಠಂತಿ ತೇ ದ್ವಿಜಾ ವೈಶ್ಯತಾಂ ಗತಾಃ।।
ಸ್ವಧರ್ಮಗಳನ್ನು ಅನುಷ್ಠಾನಮಾಡದೇ ಗೋಪಾಲನೆ ಮತ್ತು ಕೃಷಿಗಳಿಂದ ಉಪಜೀವನವನ್ನು ನಡೆಸುವವರ ಶರೀರವು ಹಳದೀ ಬಣ್ಣವನ್ನು ತಳೆಯಿತು ಮತ್ತು ಅಂತಹ ಬ್ರಾಹ್ಮಣರು ವೈಶ್ಯತ್ವವನ್ನು ಪಡೆದುಕೊಂಡರು.
12181013a ಹಿಂಸಾನೃತಪ್ರಿಯಾ ಲುಬ್ಧಾಃ ಸರ್ವಕರ್ಮೋಪಜೀವಿನಃ।
12181013c ಕೃಷ್ಣಾಃ ಶೌಚಪರಿಭ್ರಷ್ಟಾಸ್ತೇ ದ್ವಿಜಾಃ ಶೂದ್ರತಾಂ ಗತಾಃ।।
ಯಾವ ಬ್ರಾಹ್ಮಣರು ಶೌಚ ಮತ್ತು ಸದಾಚಾರಭ್ರಷ್ಟರಾಗಿ ಹಿಂಸೆ ಮತ್ತು ಸುಳ್ಳಿನಲ್ಲಿ ಆಸಕ್ತರಾಗಿ ಲೋಭವಶರಾಗಿ ಎಲ್ಲಕರ್ಮಗಳಿಂದಲೂ ಜೀವನವನ್ನು ನಡೆಸಿದರೋ ಅವರ ಶರೀರವು ಕಪ್ಪು ಬಣ್ಣವನ್ನು ತಾಳಿತು ಮತ್ತು ಅವರು ಶೂದ್ರತ್ವವನ್ನು ಪಡೆದುಕೊಂಡರು.
12181014a ಇತ್ಯೇತೈಃ ಕರ್ಮಭಿರ್ವ್ಯಸ್ತಾ ದ್ವಿಜಾ ವರ್ಣಾಂತರಂ ಗತಾಃ।
12181014c ಧರ್ಮೋ ಯಜ್ಞಕ್ರಿಯಾ ಚೈಷಾಂ ನಿತ್ಯಂ ನ ಪ್ರತಿಷಿಧ್ಯತೇ।।
ಇಂತಹ ಕರ್ಮಗಳಿಂದಲೇ ಬ್ರಾಹ್ಮಣರು ವರ್ಣಾಂತರವನ್ನು ಹೊಂದಿದರು. ಆದರೆ ಅವರಿಗೆ ನಿತ್ಯಧರ್ಮಾನುಷ್ಠಾನ ಮತ್ತು ಯಜ್ಞಕ್ರಿಯೆಗಳನ್ನು ನಿಷೇಧಿಸಿಲ್ಲ.
12181015a ವರ್ಣಾಶ್ಚತ್ವಾರ ಏತೇ ಹಿ ಯೇಷಾಂ ಬ್ರಾಹ್ಮೀ ಸರಸ್ವತೀ।
12181015c ವಿಹಿತಾ ಬ್ರಹ್ಮಣಾ ಪೂರ್ವಂ ಲೋಭಾತ್ತ್ವಜ್ಞಾನತಾಂ ಗತಾಃ।।
ಹೀಗೆ ನಾಲ್ಕು ವರ್ಣಗಳುಂಟಾದಾಗ ಅವರಿಗಾಗಿ ಬ್ರಹ್ಮನು ಮೊದಲು ಬ್ರಾಹ್ಮೀ ಸರಸ್ವತಿ ವೇದವಾಣಿಯನ್ನು ಪ್ರಕಟಿಸಿದನು. ಆದರೆ ಲೋಭವಿಶೇಷದ ಕಾರಣ ಅಜ್ಞಾನಭಾವವನ್ನು ಹೊಂದಿದವರು ವೇದಾಧ್ಯಯನದ ಅನಧಿಕಾರಿಗಳಾಗಿಬಿಟ್ಟರು.
12181016a ಬ್ರಾಹ್ಮಣಾ ಧರ್ಮತಂತ್ರಸ್ಥಾಸ್ತಪಸ್ತೇಷಾಂ ನ ನಶ್ಯತಿ।
12181016c ಬ್ರಹ್ಮ ಧಾರಯತಾಂ ನಿತ್ಯಂ ವ್ರತಾನಿ ನಿಯಮಾಂಸ್ತಥಾ।।
ವೇದದ ಆಜ್ಞಾನುಸಾರ ಎಲ್ಲ ಕಾರ್ಯಗಳನ್ನೂ ಮಾಡುವ, ವೇದಮಂತ್ರಗಳನ್ನು ಸ್ಮರಿಸಿಕೊಂಡಿರುವ, ಮತ್ತು ಸದಾ ವ್ರತಾದಿ ನಿಯಮಗಳನ್ನು ಪಾಲಿಸುವ ಬ್ರಾಹ್ಮಣರ ತಪಸ್ಸು ಎಂದೂ ನಷ್ಟವಾಗುವುದಿಲ್ಲ.
12181017a ಬ್ರಹ್ಮ ಚೈತತ್ಪುರಾ ಸೃಷ್ಟಂ ಯೇ ನ ಜಾನಂತ್ಯತದ್ವಿದಃ।
12181017c ತೇಷಾಂ ಬಹುವಿಧಾಸ್ತ್ವನ್ಯಾಸ್ತತ್ರ ತತ್ರ ಹಿ ಜಾತಯಃ।।
ಈ ಸಂಪೂರ್ಣ ಸೃಷ್ಟಿಯನ್ನೂ ಪರಬ್ರಹ್ಮ ಪರಮಾತ್ಮನ ರೂಪವೆಂದು ತಿಳಿಯದೇ ಇರುವವರಿಗೆ ಬ್ರಾಹ್ಮಣರೆಂದು ಕರೆಯಲ್ಪಡಲು ಅಧಿಕಾರವಿಲ್ಲ. ಇಂಥವರು ಬಹುವಿಧದ ಅನ್ಯ ಯೋನಿಗಳಲ್ಲಿ ಜನ್ಮತಾಳಬೇಕಾಗುತ್ತದೆ.
12181018a ಪಿಶಾಚಾ ರಾಕ್ಷಸಾಃ ಪ್ರೇತಾ ಬಹುಧಾ ಮ್ಲೇಚ್ಚಜಾತಯಃ।
12181018c ಪ್ರನಷ್ಟಜ್ಞಾನವಿಜ್ಞಾನಾಃ ಸ್ವಚ್ಚಂದಾಚಾರಚೇಷ್ಟಿತಾಃ।।
ಜ್ಞಾನವಿಜ್ಞಾನವಿಹೀನರಾದ ಸ್ವೇಚ್ಛಾಚಾರಿಗಳು ಪಿಶಾಚಿ, ರಾಕ್ಷಸ, ಪ್ರೇತ ಮತ್ತು ನಾನಾವಿಧದ ಮ್ಲೇಚ್ಛಜಾತಿಗಳವರಾಗುತ್ತಾರೆ.
12181019a ಪ್ರಜಾ ಬ್ರಾಹ್ಮಣಸಂಸ್ಕಾರಾಃ ಸ್ವಧರ್ಮಕೃತನಿಶ್ಚಯಾಃ।
12181019c ಋಷಿಭಿಃ ಸ್ವೇನ ತಪಸಾ ಸೃಜ್ಯಂತೇ ಚಾಪರೇ ಪರೈಃ।।
ಹಿಂದಿನ ಋಷಿಗಳು ತಮ್ಮ ತಪಸ್ಸಿನ ಬಲದಿಂದ ಬ್ರಾಹ್ಮಣಸಂಸ್ಕಾರ ಸಂಪನ್ನ, ಸ್ವಧರ್ಮದಂತೆ ಮಾಡಬೇಕೆಂಬ ನಿಶ್ಚಯವುಳ್ಳ ಸಂತಾನಗಳನ್ನೇ ಸೃಷ್ಟಿಸಿದರು. ಬೇರೆಯವರು ಇತರರಿಂದ ಸೃಷ್ಟಿಸಲ್ಪಟ್ಟರು.
12181020a ಆದಿದೇವಸಮುದ್ಭೂತಾ ಬ್ರಹ್ಮಮೂಲಾಕ್ಷಯಾವ್ಯಯಾ।
12181020c ಸಾ ಸೃಷ್ಟಿರ್ಮಾನಸೀ ನಾಮ ಧರ್ಮತಂತ್ರಪರಾಯಣಾ।।
ಬ್ರಹ್ಮಮೂಲವೂ, ಅಕ್ಷರವೂ, ಅವಿಕಾರಿಯೂ ಮತ್ತು ಧರ್ಮತಂತ್ರವನ್ನೇ ಆಶ್ರಯಿಸಿರುವ ಈ ಸೃಷ್ಟಿಯು ಆದಿದೇವ ಬ್ರಹ್ಮನ ಮನಸ್ಸಿನಿಂದ ಉತ್ಪನ್ನವಾಗಿರುವುದರಿಂದ ಇದನ್ನು ಮಾನಸೀ ಸೃಷ್ಟಿ ಎಂದು ಹೇಳುತ್ತಾರೆ.”