180: ಜೀವಸ್ವರೂಪನಿರೂಪಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 180

ಸಾರ

ಭೃಗುವು ಜೀವದ ಅಸ್ತಿತ್ವ ಮತ್ತು ನಿತ್ಯತೆಯನ್ನು ಯುಕ್ತಿಗಳಿಂದ ಸಿದ್ಧಪಡಿಸಿದುದು (1-30).

12180001 ಭೃಗುರುವಾಚ।
12180001a ನ ಪ್ರಣಾಶೋಽಸ್ತಿ ಜೀವಾನಾಂ ದತ್ತಸ್ಯ ಚ ಕೃತಸ್ಯ ಚ।
12180001c ಯಾತಿ ದೇಹಾಂತರಂ ಪ್ರಾಣೀ ಶರೀರಂ ತು ವಿಶೀರ್ಯತೇ।।

ಭೃಗುವು ಹೇಳಿದನು: “ದೇಹ ನಾಶವಾದರೂ ಜೀವವು ನಾಶಹೊಂದುವುದಿಲ್ಲ. ಕೊಟ್ಟ ದಾನವಾಗಲೀ ಮಾಡಿದ ಕರ್ಮಫಲವಾಗಲೀ ಎಂದಿಗೂ ನಾಶವಾಗುವುದಿಲ್ಲ. ಶರೀರ ಮಾತ್ರ ನಷ್ಟವಾಗುತ್ತದೆ ಮತ್ತು ಪ್ರಾಣಿಯು ದೇಹಾಂತರವನ್ನು ಹೊಂದುತ್ತದೆ.

12180002a ನ ಶರೀರಾಶ್ರಿತೋ ಜೀವಸ್ತಸ್ಮಿನ್ನಷ್ಟೇ ಪ್ರಣಶ್ಯತಿ।
12180002c ಯಥಾ ಸಮಿತ್ಸು ದಗ್ಧಾಸು ನ ಪ್ರಣಶ್ಯತಿ ಪಾವಕಃ।।

ಸಮಿತ್ತು ಸುಟ್ಟುಹೋದರೂ ಹೇಗೆ ಅಗ್ನಿಯು ನಾಶವಾಗುವುದಿಲ್ಲವೋ ಹಾಗೆ ಶರೀರವು ನಾಶವಾದರೆ ಶರೀರಾಶ್ರಿತ ಜೀವವು ನಷ್ಟವಾಗುವುದಿಲ್ಲ.”

12180003 ಭರದ್ವಾಜ ಉವಾಚ।
12180003a ಅಗ್ನೇರ್ಯಥಾ ತಥಾ ತಸ್ಯ ಯದಿ ನಾಶೋ ನ ವಿದ್ಯತೇ।
12180003c ಇಂಧನಸ್ಯೋಪಯೋಗಾಂತೇ ಸ ಚಾಗ್ನಿರ್ನೋಪಲಭ್ಯತೇ।।

ಭರದ್ವಾಜನು ಹೇಳಿದನು: “ಒಂದು ವೇಳೆ ಅಗ್ನಿಯಂತೆ ಜೀವದ ನಾಶವೂ ಆಗುವುದಿಲ್ಲವೆಂದಾದರೆ ಇಂಧನವು ಸುಟ್ಟುಹೋದ ನಂತರ ಅಗ್ನಿಯು ಆರಿಹೋಗುತ್ತದೆ ಮತ್ತು ಅದರಲ್ಲಿ ಆಗ ಅಗ್ನಿಯು ಉಪಲಬ್ಧವಾಗುವುದಿಲ್ಲ.

12180004a ನಶ್ಯತೀತ್ಯೇವ ಜಾನಾಮಿ ಶಾಂತಮಗ್ನಿಮನಿಂಧನಮ್।
12180004c ಗತಿರ್ಯಸ್ಯ ಪ್ರಮಾಣಂ ವಾ ಸಂಸ್ಥಾನಂ ವಾ ನ ದೃಶ್ಯತೇ।।

ಆದುದರಿಂದ ಇಂಧನರಹಿತ ಆರಿಹೋಗಿರುವ ಅಗ್ನಿಯನ್ನು ನಷ್ಟವಾದುದೆಂದೇ ತಿಳಿಯುತ್ತೇನೆ. ಏಕೆಂದರೆ ಯಾವುದರ ಗತಿ, ಪ್ರಮಾಣ ಅಥವಾ ಸ್ಥಿತಿಯಿಲ್ಲವೋ ಅದನ್ನು ನಾಶವಾದುದೆಂದೇ ತಿಳಿಯಬೇಕಾಗುತ್ತದೆ. ಜೀವದ್ದೂ ಇದೇ ಪರಿಸ್ಥಿತಿಯಾಗಿದೆ.”

12180005 ಭೃಗುರುವಾಚ।
12180005a ಸಮಿಧಾಮುಪಯೋಗಾಂತೇ ಸನ್ನೇವಾಗ್ನಿರ್ನ ದೃಶ್ಯತೇ1
12180005c ಆಕಾಶಾನುಗತತ್ವಾದ್ಧಿ ದುರ್ಗ್ರಹಃ ಸ ನಿರಾಶ್ರಯಃ।।

ಭೃಗುವು ಹೇಳಿದನು: “ಸಮಿತ್ತುಗಳನ್ನು ಉಪಯೋಗಿಸಿದ ನಂತರ ಅಗ್ನಿಯು ಕಾಣುವುದಿಲ್ಲ ಅಷ್ಟೇ. ಅದು ಆಕಾಶದಲ್ಲಿ ಅವ್ಯಕ್ತರೂಪದಲ್ಲಿ ಸ್ಥಿತವಾಗಿಬಿಡುತ್ತದೆ. ಆದುದರಿಂದ ಅದು ಉಪಲಬ್ಧವಾಗುವುದಿಲ್ಲ. ಏಕೆಂದರೆ ಆಶ್ರಯರಹಿತ ಅಗ್ನಿಯನ್ನು ಗ್ರಹಿಸುವುದು ಅತ್ಯಂತ ಕಠಿಣ.

12180006a ತಥಾ ಶರೀರಸಂತ್ಯಾಗೇ ಜೀವೋ ಹ್ಯಾಕಾಶವತ್ ಸ್ಥಿತಃ।
12180006c ನ ಗೃಹ್ಯತೇ ಸುಸೂಕ್ಷ್ಮತ್ವಾದ್ಯಥಾ ಜ್ಯೋತಿರ್ನ ಸಂಶಯಃ।।

ಹಾಗೆಯೇ ಶರೀರಸಂತ್ಯಾಗದಲ್ಲಿ ಜೀವವು ಆಕಾಶವನ್ನು ಸೇರಿರುತ್ತದೆ. ಅದು ಅತ್ಯಂತ ಸೂಕ್ಷ್ಮವಾಗಿರುವುದರ ಕಾರಣ ಆರಿಹೋದ ಅಗ್ನಿಯಂತೆ ಅನುಭವಕ್ಕೆ ಸಿಗುವುದಿಲ್ಲ. ಆದರೆ ಅವಶ್ಯವಾಗಿಯೂ ಅದು ಇರುತ್ತದೆ. ಅದರಲ್ಲಿ ಸಂಶಯವೇ ಇಲ್ಲ.

12180007a ಪ್ರಾಣಾನ್ಧಾರಯತೇ ಹ್ಯಗ್ನಿಃ ಸ ಜೀವ ಉಪಧಾರ್ಯತಾಮ್।
12180007c ವಾಯುಸಂಧಾರಣೋ ಹ್ಯಗ್ನಿರ್ನಶ್ಯತ್ಯುಚ್ಚ್ವಾಸನಿಗ್ರಹಾತ್।।

ಅಗ್ನಿಯು ಪ್ರಾಣಗಳನ್ನು ಧರಿಸುತ್ತದೆ. ಅದನ್ನೇ ಜೀವವೆಂದು ತಿಳಿ. ಆ ಅಗ್ನಿಯನ್ನು ವಾಯುವು ದೇಹದೊಳಗೆ ಧರಿಸಿರುತ್ತದೆ. ಶ್ವಾಸವು ನಿಂತಾಗ ವಾಯುವಿನೊಂದಿಗೆ ಅಗ್ನಿಯೂ ನಷ್ಟವಾಗುತ್ತದೆ.

12180008a ತಸ್ಮಿನ್ನಷ್ಟೇ ಶರೀರಾಗ್ನೌ ಶರೀರಂ ತದಚೇತನಮ್।
12180008c ಪತಿತಂ ಯಾತಿ ಭೂಮಿತ್ವಮಯನಂ ತಸ್ಯ ಹಿ ಕ್ಷಿತಿಃ।।
12180009a ಜಂಗಮಾನಾಂ ಹಿ ಸರ್ವೇಷಾಂ ಸ್ಥಾವರಾಣಾಂ ತಥೈವ ಚ।
12180009c ಆಕಾಶಂ ಪವನೋಽಭ್ಯೇತಿ ಜ್ಯೋತಿಸ್ತಮನುಗಚ್ಚತಿ।
12180009e ತತ್ರ ತ್ರಯಾಣಾಮೇಕತ್ವಂ ದ್ವಯಂ ಭೂಮೌ ಪ್ರತಿಷ್ಠಿತಮ್।।

ಶರೀರದಲ್ಲಿರುವ ಅಗ್ನಿಯು ನಷ್ಟವಾದಾಗ ಅಚೇತನ ಶರೀರವು ಭೂಮಿಯ ಮೇಲೆ ಬಿದ್ದು ಭೂಮಿತ್ವವನ್ನು ಹೊಂದುತ್ತದೆ. ಅಚೇತನ ವಸ್ತುವಿಗೆ ಭೂಮಿಯೇ ಆಶ್ರಯಸ್ಥಾನವು. ಸರ್ವ ಸ್ಥಾವರ-ಜಂಗಮಗಳ ಪ್ರಾಣವಾಯುವೂ ಆಕಾಶವನ್ನು ಸೇರುತ್ತದೆ. ಅಗ್ನಿಯೂ ವಾಯುವನ್ನು ಅನುಸರಿಸಿ ಹೋಗುತ್ತದೆ. ಹೀಗೆ ಆಕಾಶ, ವಾಯು ಮತ್ತು ಅಗ್ನಿಗಳು ಒಂದೆಡೆ ಸೇರಿದ ನಂತರ ಜಲತತ್ತ್ವ ಮತ್ತು ಭೂಮಿತತ್ತ್ವಗಳು ಶವರೂಪದಲ್ಲಿ ಭೂಮಿಯ ಮೇಲಿರುತ್ತವೆ.

12180010a ಯತ್ರ ಖಂ ತತ್ರ ಪವನಸ್ತತ್ರಾಗ್ನಿರ್ಯತ್ರ ಮಾರುತಃ।
12180010c ಅಮೂರ್ತಯಸ್ತೇ ವಿಜ್ಞೇಯಾ ಆಪೋ ಮೂರ್ತಾಸ್ತಥಾ ಕ್ಷಿತಿಃ2।।

ಎಲ್ಲಿ ಆಕಾಶವಿರುವುದೋ ಅಲ್ಲಿ ವಾಯುವಿರುತ್ತದೆ ಮತ್ತು ಎಲ್ಲಿ ವಾಯುವಿದೆಯೋ ಅಲ್ಲಿ ಅಗ್ನಿಯೂ ಇರುತ್ತದೆ. ಈ ಮೂರೂ ತತ್ತ್ವಗಳು ನಿರಾಕಾರವೆಂದು ತಿಳಿಯಬೇಕು. ಜಲ ಮತ್ತು ಪೃಥ್ವಿ ತತ್ತ್ವಗಳಿಗೆ ಆಕಾರಗಳಿವೆ.”

12180011 ಭರದ್ವಾಜ ಉವಾಚ।
12180011a ಯದ್ಯಗ್ನಿಮಾರುತೌ ಭೂಮಿಃ ಖಮಾಪಶ್ಚ ಶರೀರಿಷು।
12180011c ಜೀವಃ ಕಿಂಲಕ್ಷಣಸ್ತತ್ರೇತ್ಯೇತದಾಚಕ್ಷ್ವ ಮೇಽನಘ।।

ಭರದ್ವಾಜನು ಹೇಳಿದನು: “ಅನಘ! ಒಂದು ವೇಳೆ ದೇಹಧಾರಿಗಳ ಶರೀರದಲ್ಲಿ ಕೇವಲ ಅಗ್ನಿ, ವಾಯು, ಭೂಮಿ, ಆಕಾಶ ಮತ್ತು ಜಲತತ್ತ್ವಗಳೇ ಇರುವುದಾದರೆ ಆ ಶರೀರಗಳಲ್ಲಿರುವ ಜೀವದ ಲಕ್ಷಣಗಳೇನು? ಅದನ್ನು ನನಗೆ ಹೇಳು.

12180012a ಪಂಚಾತ್ಮಕೇ ಪಂಚರತೌ ಪಂಚವಿಜ್ಞಾನಸಂಯುತೇ।
12180012c ಶರೀರೇ ಪ್ರಾಣಿನಾಂ ಜೀವಂ ಜ್ಞಾತುಮಿಚ್ಚಾಮಿ ಯಾದೃಶಮ್।।

ಪಂಚಭೂತಗಳಿಂದಾದ, ಪಂಚವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ, ಪಂಚ ಜ್ಞಾನೇಂದ್ರಿಯಗಳನ್ನು ಹೊಂದಿರುವ ಪ್ರಾಣಿಗಳ ಶರೀರದಲ್ಲಿ ವಾಸಿಸುವ ಜೀವವು ಎಂಥಹುದು ಎನ್ನುವುದನ್ನು ತಿಳಿಯ ಬಯಸುತ್ತೇನೆ.

12180013a ಮಾಂಸಶೋಣಿತಸಂಘಾತೇ ಮೇದಃಸ್ನಾಯ್ವಸ್ಥಿಸಂಚಯೇ।
12180013c ಭಿದ್ಯಮಾನೇ ಶರೀರೇ ತು ಜೀವೋ ನೈವೋಪಲಭ್ಯತೇ।।

ರಕ್ತ-ಮಾಂಸಗಳ ಸಮೂಹದಿಂದ ಕೂಡಿರುವ, ಮೇಧಸ್ಸು-ಕರುಳು ಮತ್ತು ಮೂಳೆಗಳ ಸಂಚಯದಿಂದ ರೂಪಗೊಂಡಿರುವ ಈ ಶರೀರವನ್ನು ಕತ್ತರಿಸಿದರೆ ಜೀವವು ಸಿಗುವುದಿಲ್ಲ.

12180014a ಯದ್ಯಜೀವಂ ಶರೀರಂ ತು ಪಂಚಭೂತಸಮನ್ವಿತಮ್।
12180014c ಶಾರೀರೇ ಮಾನಸೇ ದುಃಖೇ ಕಸ್ತಾಂ ವೇದಯತೇ ರುಜಮ್।।

ಪಂಚಭೂತಾತ್ಮಿಕ ಶರೀರದಲ್ಲಿ ಜೀವ ಎಂಬ ಪ್ರತ್ಯೇಕ ವಸ್ತು ಇಲ್ಲ ಎಂದು ತಿಳಿದರೆ ಶಾರೀರಿಕ ಮತ್ತು ಮಾನಸಿಕ ದುಃಖವನ್ನು ಅನುಭವಿಸುವವರು ಯಾರು?

12180015a ಶೃಣೋತಿ ಕಥಿತಂ ಜೀವಃ ಕರ್ಣಾಭ್ಯಾಂ ನ ಶೃಣೋತಿ ತತ್।
12180015c ಮಹರ್ಷೇ ಮನಸಿ ವ್ಯಗ್ರೇ ತಸ್ಮಾಜ್ಜೀವೋ ನಿರರ್ಥಕಃ।।

ಮಹರ್ಷೇ! ಜೀವನು ಬೇರೆಯವರು ಹೇಳುವ ಮಾತುಗಳನ್ನು ಕಿವಿಗಳಿಂದ ಕೇಳುತ್ತಲೇ ಇರುತ್ತಾನೆ. ಆದರೆ ಮನಸ್ಸು ವ್ಯಗ್ರವಾಯಿತೆಂದರೆ ಮುಂದಿನ ಮಾತುಗಳು ಕಿವಿಗೆ ಕೇಳಿಸುವುದೇ ಇಲ್ಲ. ಆದುದರಿಂದ ಮನಸ್ಸಿಗಿಂತಲೂ ಅತಿರಿಕ್ತವಾದ ಜೀವದ ಅಸ್ತಿತ್ವವು ನಿರರ್ಥಕವೆಂದು ಭಾವಿಸುತ್ತೇನೆ.

12180016a ಸರ್ವಂ ಪಶ್ಯತಿ ಯದ್ದೃಶ್ಯಂ ಮನೋಯುಕ್ತೇನ ಚಕ್ಷುಷಾ।
12180016c ಮನಸಿ ವ್ಯಾಕುಲೇ ತದ್ಧಿ ಪಶ್ಯನ್ನಪಿ ನ ಪಶ್ಯತಿ।।

ಮನಸ್ಸಿನಿಂದ ಯುಕ್ತವಾದ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಾನೆ. ಮನಸ್ಸು ವ್ಯಗ್ರವಾಯಿತೆಂದರೆ ಮುಂದೆ ಕಾಣುವ ದೃಶ್ಯವನ್ನು ಕಣ್ಣುಗಳು ನೋಡುತ್ತಿದ್ದರೂ ಮನಸ್ಸು ಗ್ರಹಿಸುವುದೇ ಇಲ್ಲ.

12180017a ನ ಪಶ್ಯತಿ ನ ಚ ಬ್ರೂತೇ ನ ಶೃಣೋತಿ ನ ಜಿಘ್ರತಿ।
12180017c ನ ಚ ಸ್ಪರ್ಶರಸೌ ವೇತ್ತಿ ನಿದ್ರಾವಶಗತಃ ಪುನಃ।।

ಪುನಃ ನಿದ್ರಾವಶನಾದವನು ನೋಡುವುದಿಲ್ಲ, ಮಾತನಾಡುವುದಿಲ್ಲ, ಕೇಳುವುದಿಲ್ಲ, ಮೂಸುವುದಿಲ್ಲ. ಅವನು ಸ್ಪರ್ಶ-ರಸಗಳನ್ನೂ ತಿಳಿಯುವುದಿಲ್ಲ.

12180018a ಹೃಷ್ಯತಿ ಕ್ರುಧ್ಯತಿ ಚ ಕಃ ಶೋಚತ್ಯುದ್ವಿಜತೇ ಚ ಕಃ।
12180018c ಇಚ್ಚತಿ ಧ್ಯಾಯತಿ ದ್ವೇಷ್ಟಿ ವಾಚಮೀರಯತೇ ಚ ಕಃ।।

ಆದುದರಿಂದ ಈ ಜಿಜ್ಞಾಸೆಯುಂತಾಗುತ್ತದೆ – ಈ ಶರೀರದಲ್ಲಿರುವ ಯಾರು ಹರ್ಷಪಡುತ್ತಾರೆ ಮತ್ತು ಯಾರು ಕ್ರೋಧಕ್ಕೊಳಗಾಗುತ್ತಾರೆ? ಯಾರಿಗೆ ಶೋಕ ಮತ್ತು ಉದ್ವೇಗಗಳುಂಟಾಗುತ್ತವೆ? ಇಚ್ಛೆ, ಧ್ಯಾನ, ದ್ವೇಷ ಮತ್ತು ಮಾತುಕತೆಗಳನ್ನು ಯಾರು ಮಾಡುತ್ತಾರೆ?”

12180019 ಭೃಗುರುವಾಚ।
12180019a ನ ಪಂಚಸಾಧಾರಣಮತ್ರ ಕಿಂ ಚಿಚ್ ಚರೀರಮೇಕೋ ವಹತೇಽಂತರಾತ್ಮಾ।
12180019c ಸ ವೇತ್ತಿ ಗಂಧಾಂಶ್ಚ ರಸಾನ್ ಶ್ರುತಿಂ ಚ ಸ್ಪರ್ಶಂ ಚ ರೂಪಂ ಚ ಗುಣಾಶ್ಚ ಯೇಽನ್ಯೇ।।

ಭೃಗುವು ಹೇಳಿದನು: “ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳ ಸಂಬಂಧವು ಮನಸ್ಸಿಗೂ ಇರುವುದರಿಂದ ಮನಸ್ಸೂ ಪಂಚಭೂತಾತ್ಮಕವೇ ಆಗಿದೆ. ಮನಸ್ಸು ಈ ತತ್ತ್ವಗಳಿಗಿಂತಲೂ ಭಿನ್ನವಾದ ತತ್ತ್ವವಲ್ಲ. ಆದರೆ ಮನಸ್ಸು ಶರೀರನಿರ್ವಾಹಕವಲ್ಲ. ಅಂತರಾತ್ಮನೊಬ್ಬನೇ ಈ ಶರೀರವನ್ನು ಧರಿಸಿದ್ದಾನೆ. ಅವನೇ ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳನ್ನೂ ಇತರ ಗುಣಗಳನ್ನೂ ಅನುಭವಿಸುತ್ತಾನೆ.

12180020a ಪಂಚಾತ್ಮಕೇ ಪಂಚಗುಣಪ್ರದರ್ಶೀ ಸ ಸರ್ವಗಾತ್ರಾನುಗತೋಽಂತರಾತ್ಮಾ।
12180020c ಸ ವೇತ್ತಿ ದುಃಖಾನಿ ಸುಖಾನಿ ಚಾತ್ರ ತದ್ವಿಪ್ರಯೋಗಾತ್ತು ನ ವೇತ್ತಿ ದೇಹಃ।।

ಪಂಚೇಂದ್ರಿಯಗಳ ಗುಣಗಳನ್ನು ಧರಿಸುವ ಮನಸ್ಸನ್ನು ನೋಡುವವನು ಆ ಅಂತರಾತ್ಮನೇ ಮತ್ತು ಅವನೇ ಈ ಪಂಚಭೂತಾತ್ಮಕ ಶರೀರದ ಸಂಪೂರ್ಣ ಅವಯವಗಳಲ್ಲಿ ವ್ಯಾಪ್ತನಾಗಿ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಯಾವಾಗ ಶರೀರದೊಡನೆ ಅವನ ಸಂಬಂಧವು ಮುರಿದುಹೋಗುತ್ತದೆಯೋ ಆಗ ಆ ಶರೀರಕ್ಕೆ ಸುಖ-ದುಃಖಗಳ ಅನುಭವವಾಗುವುದಿಲ್ಲ3.

12180021a ಯದಾ ನ ರೂಪಂ ನ ಸ್ಪರ್ಶೋ ನೋಷ್ಮಭಾವಶ್ಚ ಪಾವಕೇ।
12180021c ತದಾ ಶಾಂತೇ ಶರೀರಾಗ್ನೌ ದೇಹಂ ತ್ಯಕ್ತ್ವಾ ಸ ನಶ್ಯತಿ।।

ಯಾವಾಗ ಪಂಚಭೂತಾತ್ಮಿಕ ಶರೀರದಲ್ಲಿ ರೂಪ, ಸ್ಪರ್ಶ ಮತ್ತು ಉಷ್ಣದ ಭಾವಗಳಿಲ್ಲದಿರುವುದೋ ಆಗ ಶರೀರಸ್ಥ ಅಗ್ನಿಯು ಆರಿಹೋಗಿರುತ್ತದೆ. ಆಗ ಜೀವಾತ್ಮನು ಶರೀರವನ್ನು ತ್ಯಜಿಸಿದರೂ ನಾಶಹೊಂದುವುದಿಲ್ಲ.

12180022a ಅಮ್ಮಯಂ ಸರ್ವಮೇವೇದಮಾಪೋ4 ಮೂರ್ತಿಃ ಶರೀರಿಣಾಮ್।
12180022c ತತ್ರಾತ್ಮಾ ಮಾನಸೋ ಬ್ರಹ್ಮಾ ಸರ್ವಭೂತೇಷು ಲೋಕಕೃತ್।।

ಸರ್ವವೂ ಜಲಮಯವು. ಪ್ರಾಣಿಗಳ ಶರೀರಗಳೂ ಜಲಮಯವು. ಈ ಜಲಮಯ ಶರೀರದಲ್ಲಿ ಇರುವ ಆತ್ಮನು ಮನಸ್ಸಿನಲ್ಲಿ ಅಭಿವ್ಯಕ್ತನಾಗುತ್ತಾನೆ. ಅವನೇ ಸರ್ವಭೂತಗಳ ಮತ್ತು ಸರ್ವಲೋಕಗಳ ಕರ್ತಾ ಬ್ರಹ್ಮ5.

612180023a ಆತ್ಮಾನಂ ತಂ ವಿಜಾನೀಹಿ ಸರ್ವಲೋಕಹಿತಾತ್ಮಕಮ್। 12180023c ತಸ್ಮಿನ್ಯಃ ಸಂಶ್ರಿತೋ ದೇಹೇ ಹ್ಯಬ್ಬಿಂದುರಿವ ಪುಷ್ಕರೇ।।

ಆತ್ಮನು ಸರ್ವಲೋಕಹಿತಾತ್ಮಕನೆಂದು ತಿಳಿ. ಅವನು ಪ್ರಾಣಿಗಳ ಶರೀರದಲ್ಲಿ - ಕಮಲಪತ್ರದ ಮೇಲಿರುವ ನೀರಿನ ಬಿಂದುವು ಕಮಲಪತ್ರಕ್ಕೆ ಅಂಟಿಯೂ ಅಂಟಿಕೊಂಡಿರದಂತೆ - ಇರುತ್ತಾನೆ.

12180024a ಕ್ಷೇತ್ರಜ್ಞಂ ತಂ ವಿಜಾನೀಹಿ ನಿತ್ಯಂ ಲೋಕಹಿತಾತ್ಮಕಮ್।
12180024c ತಮೋ ರಜಶ್ಚ ಸತ್ತ್ವಂ ಚ ವಿದ್ಧಿ ಜೀವಗುಣಾನಿಮಾನ್।।

ಆ ಕ್ಷೇತ್ರಜ್ಞನು ನಿತ್ಯವೂ ಲೋಕಹಿತಾತ್ಮಕನೆನ್ನುವುದೆಂದು ತಿಳಿ. ತಮೋ, ರಜ ಮತ್ತು ಸತ್ತ್ವಗಳು ಜೀವದ ಗುಣಗಳೆಂದು ತಿಳಿ.

12180025a ಸಚೇತನಂ ಜೀವಗುಣಂ ವದಂತಿ ಸ ಚೇಷ್ಟತೇ ಚೇಷ್ಟಯತೇ ಚ ಸರ್ವಮ್।
12180025c ತತಃ ಪರಂ ಕ್ಷೇತ್ರವಿದಂ ವದಂತಿ ಪ್ರಾವರ್ತಯದ್ಯೋ ಭುವನಾನಿ ಸಪ್ತ।।

ಜೀವಗುಣವು ಚೇತನಾಯುಕ್ತವಾದುದು ಎಂದು ಹೇಳುತ್ತಾರೆ. ಅದು ಸ್ವಯಂ ಚಲಿಸುತ್ತದೆ ಮತ್ತು ಶರೀರದ ಎಲ್ಲಕಡೆ ಚಲನೆಯನ್ನುಂಟುಮಾಡುತ್ತದೆ. ಶರೀರತತ್ತ್ವವನ್ನು ತಿಳಿದವರು ಕ್ಷೇತ್ರಜ್ಞನಾದ ಜೀವಕ್ಕಿಂತ ಏಳು ಭುವನಗಳನ್ನು ಸೃಷ್ಟಿಸಿದ ಪರಮಾತ್ಮನೇ ಶ್ರೇಷ್ಠ ಎಂದು ಹೇಳುತ್ತಾರೆ.

12180026a ನ ಜೀವನಾಶೋಽಸ್ತಿ ಹಿ ದೇಹಭೇದೇ ಮಿಥ್ಯೈತದಾಹುರ್ಮೃತ ಇತ್ಯಬುದ್ಧಾಃ।
12180026c ಜೀವಸ್ತು ದೇಹಾಂತರಿತಃ ಪ್ರಯಾತಿ ದಶಾರ್ಧತೈವಾಸ್ಯ ಶರೀರಭೇದಃ।।

ದೇಹವು ನಾಶವಾದರೂ ಜೀವವು ನಾಶವಾಗುವುದಿಲ್ಲ. ಅಜ್ಞಾನಿಗಳು ಮಾತ್ರ ಜೀವವು ಮೃತನಾದನೆಂದು ಹೇಳುತ್ತಾರೆ. ಜೀವವಾದರೋ ಮೃತದೇಹವನ್ನು ತ್ಯಜಿಸಿ ಬೇರೊಂದು ದೇಹವನ್ನು ಸೇರುತ್ತದೆ. ಶರೀರದಲ್ಲಿರುವ ಪಂಚಭೂತಗಳು ಪ್ರತ್ಯೇಕಗೊಳ್ಳುವುದೇ ಶರೀರದ ನಾಶ.

12180027a ಏವಂ ಸರ್ವೇಷು ಭೂತೇಷು ಗೂಢಶ್ಚರತಿ ಸಂವೃತಃ।
12180027c ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ತತ್ತ್ವದರ್ಶಿಭಿಃ।।

ಹೀಗೆ ಸರ್ವಭೂತಗಳಲ್ಲಿಯೂ ಆತ್ಮನು ನಿಗೂಢನಾಗಿ ಅಜ್ಞಾನದಿಂದ ಆವೃತನಾಗಿರುತ್ತಾನೆ. ತತ್ತ್ವದರ್ಶಿಗಳ ತೀಕ್ಷ್ಣ ಮತ್ತು ಸೂಕ್ಷ್ಮ ಬುದ್ಧಿಗಳಿಂದ ಮಾತ್ರ ಅವನನ್ನು ನೋಡಬಹುದು.

12180028a ತಂ ಪೂರ್ವಾಪರರಾತ್ರೇಷು ಯುಂಜಾನಃ ಸತತಂ ಬುಧಃ।
12180028c ಲಘ್ವಾಹಾರೋ ವಿಶುದ್ಧಾತ್ಮಾ ಪಶ್ಯತ್ಯಾತ್ಮಾನಮಾತ್ಮನಿ।।

ಲಘುವಾದ ಆಹಾರವನ್ನು ಸೇವಿಸುತ್ತಾ ರಾತ್ರಿಯ ಮೊದಲ ಮತ್ತು ಚರಮ ಪ್ರಹರಗಳಲ್ಲಿ ಧ್ಯಾನಯೋಗವನ್ನು ಅಭ್ಯಾಸಮಾಡುತ್ತಾ ಅಂತಃಕರಣವನ್ನು ಶುದ್ಧಿಮಾಡಿಕೊಂಡ ವಿದ್ವಾಂಸನು ಆ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಳ್ಳಬಹುದು.

12180029a ಚಿತ್ತಸ್ಯ ಹಿ ಪ್ರಸಾದೇನ ಹಿತ್ವಾ ಕರ್ಮ ಶುಭಾಶುಭಮ್।
12180029c ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಕ್ಷಯಮಶ್ನುತೇ।।

ಚಿತ್ತಶುದ್ಧಿಯಾದ ನಂತರ ಅವನು ಶುಭಾಶುಭ ಕರ್ಮಗಳಿಂದ ತನ್ನ ಸಂಬಂಧವನ್ನು ಕತ್ತರಿಸಿಕೊಂಡು ಪ್ರಸನ್ನಚಿತ್ತನಾಗಿ ಆತ್ಮಸ್ವರೂಪದಲ್ಲಿ ಸ್ಥಿತನಾಗುತ್ತಾನೆ ಮತ್ತು ಅನಂತ ಆನಂದವನ್ನು ಅನುಭವಿಸುತ್ತಾನೆ.

12180030a ಮಾನಸೋಽಗ್ನಿಃ ಶರೀರೇಷು ಜೀವ ಇತ್ಯಭಿಧೀಯತೇ।
12180030c ಸೃಷ್ಟಿಃ ಪ್ರಜಾಪತೇರೇಷಾ ಭೂತಾಧ್ಯಾತ್ಮವಿನಿಶ್ಚಯೇ।।

ಸಮಸ್ತ ಶರೀರಗಳೊಳಗಿರುವ ಅಗ್ನಿಪ್ರಕಾಶಸ್ವರೂಪ ಚೈತನ್ಯವೇನಿದೆಯೋ ಅದನ್ನೇ ಸಮಷ್ಟಿ ಜೀವಸ್ವರೂಪ ಪ್ರಜಾಪತಿ ಎಂದು ಕರೆಯುತ್ತಾರೆ. ಅದೇ ಪ್ರಜಾಪತಿಯಿಂದ ಈ ಸೃಷ್ಟಿಯುಂಟಾಯಿತು. ಆಧ್ಯಾತ್ಮತತ್ತ್ವವನ್ನು ನಿಶ್ಚಯಿಸಿಯೇ ಇದನ್ನು ಹೇಳಿದ್ದಾರೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜೀವಸ್ವರೂಪನಿರೂಪಣೇ ಆಶೀತ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜೀವಸ್ವರೂಪನಿರೂಪಣ ಎನ್ನುವ ನೂರಾಎಂಭತ್ತನೇ ಅಧ್ಯಾಯವು.

  1. ಯಥಾಗ್ನಿರ್ನೋಪಲಭ್ಯತೇ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  2. ಮೂರ್ತಿಮಂತಃ ಶರೀರಿಣಾಮ್।। (ಗೀತಾ ಪ್ರೆಸ್/ಭಾರತ ದರ್ಶನ). ↩︎

  3. ಇದರಿಂದ ಮನಸ್ಸಿಗೂ ಅತಿರಿಕ್ತವಾಗಿ ಅದರ ಸಾಕ್ಷೀ ಆತ್ಮದ ಅಸ್ತಿತ್ವವು ಸ್ವತಃ ಸಿದ್ಧವಾಗುತ್ತದೆ (ಗೀತಾ ಪ್ರೆಸ್). ↩︎

  4. ಆಪೋಮಯಮಿದಂ ಸರ್ವಮಾಪೋ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ಇಲ್ಲಿ ಮನುಷ್ಯನ ಶರೀರವೇ ನೀರು, ಅದರಲ್ಲಿ ಮಲಗಿರುವ ಶೇಷಶಾಯೀ ನಾರಾಯಣ ಮತ್ತು ಅವನ ನಾಭಿಕಮಲದಲ್ಲಿರುವ ಬ್ರಹ್ಮ - ಈ ಕಲ್ಪನೆಯು ಬರುತ್ತದೆ. ↩︎

  6. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಆತ್ಮಾ ಕ್ಷೇತ್ರಜ್ಞ ಇತ್ಯುಕ್ತಃ ಸಂಯುಕ್ತಃ ಪ್ರಾಕೃತೈರ್ಗುಣೈಃ। ತೈರೇವ ತು ವಿನಿರ್ಮುಕ್ತಃ ಪರಮಾತ್ಮೇತ್ಯುದಾಹೃತಃ।। ಅರ್ಥಾತ್: ಆತ್ಮನು ಯಾವಾಗ ಪ್ರಾಕೃತಗುಣಗಳಿಂದ ಯುಕ್ತನಾಗಿರುತ್ತಾನೋ ಅವನು ಕ್ಷೇತ್ರಜ್ಞ ಅಥವಾ ಜೀವ ಎಂದೆನಿಸಿಕೊಳ್ಳುತ್ತಾನೆ. ಪ್ರಾಕೃತ ಗುಣಗಳಿಂದ ಆತ್ಮನು ಮುಕ್ತನಾದಾಗ ಅವನು ಪರಮಾತ್ಮಾ ಎಂದು ಕರೆಯಲ್ಪಡುತ್ತಾನೆ (ಗೀತಾ ಪ್ರೆಸ್/ಭಾರತ ದರ್ಶನ). ↩︎