178: ಭೃಗುಭರದ್ವಾಜಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 178

ಸಾರ

ಶರೀರದಲ್ಲಿರುವ ಜಠರಾನಲ ಮತ್ತು ಪ್ರಾಣ-ಅಪಾನಾದಿ ವಾಯುಗಳ ವರ್ಣನೆ (1-17).

12178001 ಭರದ್ವಾಜ ಉವಾಚ
12178001a ಪಾರ್ಥಿವಂ ಧಾತುಮಾಶ್ರಿತ್ಯ ಶಾರೀರೋಽಗ್ನಿಃ ಕಥಂ ಭವೇತ್1
12178001c ಅವಕಾಶವಿಶೇಷೇಣ ಕಥಂ ವರ್ತಯತೇಽನಿಲಃ।।

ಭರದ್ವಾಜನು ಹೇಳಿದನು: “ಶರೀರದಲ್ಲಿರುವ ಅಗ್ನಿಯು ಪೃಥ್ವೀಧಾತುವನ್ನಾಶ್ರಯಿಸಿ ಹೇಗಿರುತ್ತದೆ? ವಾಯುವೂ ಕೂಡ ಪೃಥ್ವೀಧಾತುವನ್ನಾಶ್ರಯಿಸಿ ಅವಕಾಶ ವಿಶೇಷದಿಂದ ಹೇಗೆ ಶರೀರವನ್ನು ಚಲನಾಶೀಲವನ್ನಾಗಿ ಮಾಡುತ್ತದೆ?”

12178002 ಭೃಗುರುವಾಚ।
12178002a ವಾಯೋರ್ಗತಿಮಹಂ ಬ್ರಹ್ಮನ್ಕೀರ್ತಯಿಷ್ಯಾಮಿ ತೇಽನಘ।
12178002c ಪ್ರಾಣಿನಾಮನಿಲೋ ದೇಹಾನ್ಯಥಾ ಚೇಷ್ಟಯತೇ ಬಲೀ।।

ಭೃಗುವು ಹೇಳಿದನು: “ಅನಘ! ಬ್ರಹ್ಮನ್! ವಾಯುವಿನ ಗತಿ ಮತ್ತು ಪ್ರಾಣಿಗಳ ದೇಹಗಳಲ್ಲಿರುವ ಬಲಶಾಲೀ ವಾಯುವು ಹೇಗೆ ದೇಹಗಳನ್ನು ಚಲಿಸುವಂತೆ ಮಾಡುತ್ತಾನೆ ಎನ್ನುವುದನ್ನು ಹೇಳುತ್ತೇನೆ.

12178003a ಶ್ರಿತೋ ಮೂರ್ಧಾನಮಗ್ನಿಸ್ತು2 ಶರೀರಂ ಪರಿಪಾಲಯನ್।
12178003c ಪ್ರಾಣೋ ಮೂರ್ಧನಿ ಚಾಗ್ನೌ ಚ ವರ್ತಮಾನೋ ವಿಚೇಷ್ಟತೇ।।

ಅಗ್ನಿಯು ನೆತ್ತಿಯಲ್ಲಿರುವ ಸಹಸ್ರಾರವನ್ನಾಶ್ರಯಿಸಿ ಶರೀರವನ್ನು ಪರಿಪಾಲಿಸುತ್ತದೆ. ನೆತ್ತಿಯಲ್ಲಿರುವ ಪ್ರಾಣ-ಅಗ್ನಿ ಇವೆರಡೂ ಶರೀರವು ಚಲಿಸುವಂತೆ ಮಾಡುತ್ತವೆ.

12178004a ಸ ಜಂತುಃ ಸರ್ವಭೂತಾತ್ಮಾ ಪುರುಷಃ ಸ ಸನಾತನಃ।
12178004c ಮನೋ ಬುದ್ಧಿರಹಂಕಾರೋ ಭೂತಾನಿ ವಿಷಯಾಶ್ಚ ಸಃ।।

ಆ ಪ್ರಾಣಸಂಯುಕ್ತ ಅಗ್ನಿಯೇ ಸರ್ವಭೂತಾತ್ಮನು. ಅವನೇ ಸನಾತನ ಪುರುಷನು. ಅವನೇ ಮನಸ್ಸು, ಬುದ್ಧಿ, ಅಹಂಕಾರ, ಪಂಚಭೂತಗಳು ಮತ್ತು ವಿಷಯಗಳು.

12178005a ಏವಂ ತ್ವಿಹ ಸ ಸರ್ವತ್ರ ಪ್ರಾಣೇನ ಪರಿಪಾಲ್ಯತೇ।
12178005c ಪೃಷ್ಠತಶ್ಚ ಸಮಾನೇನ ಸ್ವಾಂ ಸ್ವಾಂ ಗತಿಮುಪಾಶ್ರಿತಃ।।

ಹೀಗೆ ಅಗ್ನಿಯಿಂದ ಯುಕ್ತವಾದ ಪ್ರಾಣದಿಂದ ಶರೀರದೊಳಗಿನ ಸಮಸ್ತ ವಿಭಾಗಗಳೂ ಮತ್ತು ಇಂದ್ರಿಯಾದಿ ಎಲ್ಲ ಬಾಹ್ಯ ಅಂಗಗಳೂ ಚಲಿಸುತ್ತವೆ. ಅನಂತರ ಪ್ರಾಣವು ಸಮಾನವಾಗಿ ಪರಿವರ್ತನೆಗೊಂಡು ತನ್ನ ಗತಿಯನ್ನಾಶ್ರಯಿಸಿ ಶರೀರದ ಸಂಚಾಲಕವಾಗುತ್ತದೆ.

12178006a ವಸ್ತಿಮೂಲಂ3 ಗುದಂ ಚೈವ ಪಾವಕಂ ಚ ಸಮಾಶ್ರಿತಃ।
12178006c ವಹನ್ಮೂತ್ರಂ ಪುರೀಷಂ ಚಾಪ್ಯಪಾನಃ ಪರಿವರ್ತತೇ।।

ಅಪಾನ ವಾಯುವು ಜಠರಾನಲ, ಮೂತ್ರಾಶಯ ಮತ್ತು ಗುದಗಳನ್ನಾಶ್ರಯಿಸಿ ಮಲ-ಮೂತ್ರಗಳನ್ನು ವಿಸರ್ಜಿಸುತ್ತಾ ಮೇಲಿಂದ ಕೆಳಗೆ ಚಲಿಸುತ್ತಿರುತ್ತದೆ.

12178007a ಪ್ರಯತ್ನೇ ಕರ್ಮಣಿ ಬಲೇ ಯ ಏಕಸ್ತ್ರಿಷು ವರ್ತತೇ।
12178007c ಉದಾನ ಇತಿ ತಂ ಪ್ರಾಹುರಧ್ಯಾತ್ಮವಿದುಷೋ ಜನಾಃ।।

ಪ್ರಯತ್ನ, ಕರ್ಮ ಮತ್ತು ಬಲ ಈ ಮೂರರರಲ್ಲಿಯೂ ಪ್ರವೃತ್ತವಾಗಿರುವ ಆ ಒಂದು ವಾಯುವನ್ನು ಅಧ್ಯಾತ್ಮವಿದುಷ ಜನರು ಉದಾನ ಎಂದು ಕರೆಯುತ್ತಾರೆ.

12178008a ಸಂಧಿಷ್ವಪಿ ಚ ಸರ್ವೇಷು ಸಂನಿವಿಷ್ಟಸ್ತಥಾನಿಲಃ।
12178008c ಶರೀರೇಷು ಮನುಷ್ಯಾಣಾಂ ವ್ಯಾನ ಇತ್ಯುಪದಿಶ್ಯತೇ।।

ಶರೀರದ ಸಂಧಿಗಳನ್ನೂ ಸೇರಿ ಎಲ್ಲಕಡೆ ವ್ಯಾಪ್ತವಾಗಿರುವ ವಾಯುವನ್ನು ವ್ಯಾನ ಎಂದು ಕರೆಯುತ್ತಾರೆ.

12178009a ಧಾತುಷ್ವಗ್ನಿಸ್ತು ವಿತತಃ ಸಮಾನೇನ ಸಮೀರಿತಃ।
12178009c ರಸಾನ್ಧಾತೂಂಶ್ಚ ದೋಷಾಂಶ್ಚ ವರ್ತಯನ್ನವತಿಷ್ಠತಿ।।

ಶರೀರದ ಸಮಸ್ತ ಧಾತುಗಳಲ್ಲಿ ವ್ಯಾಪ್ತವಾಗಿರುವ ಅಗ್ನಿಯನ್ನು ಸಮಾನ ವಾಯುವು ಸಂಚಾಲಿತಗೊಳಿಸುತ್ತದೆ. ಆ ಸಮಾನವಾಯುವೇ ಶರೀರದಲ್ಲಿರುವ ರಸಗಳು, ಇಂದ್ರಿಯಗಳು ಮತ್ತು ಕಫ ಇತ್ಯಾದಿ ದೋಷಗಳನ್ನು ಸಂಚಲಿಸುತ್ತಾ ಸಂಪೂರ್ಣಶರೀರದಲ್ಲಿ ಸ್ಥಿತವಾಗಿದೆ.

12178010a ಅಪಾನಪ್ರಾಣಯೋರ್ಮಧ್ಯೇ ಪ್ರಾಣಾಪಾನಸಮಾಹಿತಃ।
12178010c ಸಮನ್ವಿತಃ ಸ್ವಧಿಷ್ಠಾನಃ ಸಮ್ಯಕ್ಪಚತಿ ಪಾವಕಃ।।

ಅಪಾನ ಮತ್ತು ಪ್ರಾಣ ವಾಯುಗಳ ಮಧ್ಯೆ ನಾಭಿಭಾಗದಲ್ಲಿ ಪ್ರಾಣ ಮತ್ತು ಅಪಾನವಾಯುಗಳ ಆಶ್ರಯವನ್ನು ಪಡೆದು ಸ್ಥಿತವಾಗಿರುವ ಜಠರಾಗ್ನಿಯು ತಿಂದ ಅನ್ನವನ್ನು ಚೆನ್ನಾಗಿ ಪಚನಮಾಡುತ್ತದೆ.

12178011a ಆಸ್ಯಂ ಹಿ ಪಾಯುಸಂಯುಕ್ತಮಂತೇ ಸ್ಯಾದ್ಗುದಸಂಜ್ಞಿತಮ್।
12178011c ಸ್ರೋತಸ್ತಸ್ಮಾತ್ಪ್ರಜಾಯಂತೇ ಸರ್ವಸ್ರೋತಾಂಸಿ ದೇಹಿನಾಮ್।।

ಬಾಯಿಯಿಂದ ಪಾಯುವಿನವರೆಗಿರುವ ಈ ಪ್ರಾಣಪ್ರವಹಿಸುವ ಮಾರ್ಗದ ತುದಿಗೇ ಗುದವೆಂಬ ಹೆಸರಿದೆ. ಅದೇ ಮಹಾಮಾರ್ಗದಿಂದ ದೇಹಧಾರಿಗಳ ಅನ್ಯ ಎಲ್ಲ ಸಣ್ಣ ಸಣ್ಣ ಮಾರ್ಗಗಳೂ ಪ್ರಕಟವಾಗುತ್ತವೆ.

12178012a ಪ್ರಾಣಾನಾಂ ಸಂನಿಪಾತಾಚ್ಚ ಸಂನಿಪಾತಃ ಪ್ರಜಾಯತೇ।
12178012c ಊಷ್ಮಾ ಚಾಗ್ನಿರಿತಿ ಜ್ಞೇಯೋ ಯೋಽನ್ನಂ ಪಚತಿ ದೇಹಿನಾಮ್।।

ಆ ಮಾರ್ಗಗಳ ಮೂಲಕ ಎಲ್ಲ ಅಂಗಾಂಗಗಳಲ್ಲಿ ಪ್ರಾಣದ ಪ್ರಸಾರವು ಆಗುವುದರಿಂದ ಜಠರಾಗ್ನಿಯೂ ಕೂಡ ಪ್ರಾಣದೊಡನೆ ಎಲ್ಲ ಅಂಗಾಂಗಗಳಲ್ಲಿ ಪ್ರಸಾರವಾಗುತ್ತಿರುತ್ತದೆ. ಶರೀರದಲ್ಲಿರುವ ಉಷ್ಣತೆಯು ಶರೀರಿಗಳು ತಿನ್ನುವ ಅನ್ನವನ್ನು ಜೀರ್ಣಿಸುವ ಜಠರಾಗ್ನಿಯ ತಾಪ ಎಂದು ತಿಳಿದುಕೊಳ್ಳಬೇಕು.

12178013a ಅಗ್ನಿವೇಗವಹಃ ಪ್ರಾಣೋ ಗುದಾಂತೇ ಪ್ರತಿಹನ್ಯತೇ।
12178013c ಸ ಊರ್ಧ್ವಮಾಗಮ್ಯ ಪುನಃ ಸಮುತ್ಕ್ಷಿಪತಿ ಪಾವಕಮ್।।

ಅಗ್ನಿಯ ವೇಗದಿಂದ ಪ್ರವಹಿಸುವ ಪ್ರಾಣವಾಯುವು ಗುದದ ಅಂತ್ಯದಲ್ಲಿ ಪ್ರತಿಹತವಾಗುತ್ತದೆ. ಪುನಃ ಪ್ರಾಣವಾಯುವು ಮೇಲಕ್ಕೆ ಪ್ರವಹಿಸಿ ಅಗ್ನಿಯನ್ನು ಮೇಲಕ್ಕೆತ್ತುತ್ತದೆ.

12178014a ಪಕ್ವಾಶಯಸ್ತ್ವಧೋ ನಾಭೇರೂರ್ಧ್ವಮಾಮಾಶಯಃ ಸ್ಥಿತಃ।
12178014c ನಾಭಿಮಧ್ಯೇ ಶರೀರಸ್ಯ ಸರ್ವೇ ಪ್ರಾಣಾಃ ಸಮಾಹಿತಾಃ।।

ನಾಭಿಯ ಕೆಳಭಾಗವು ತಿಂದ ಆಹಾರವು ಜೀರ್ಣವಾಗುವ ಸ್ಥಳ. ಇದಕ್ಕೆ ಪಕ್ವಾಶಯವೆಂದು ಹೆಸರು. ನಾಭಿಯ ಮೇಲ್ಭಾಗವು ತಿಂದ ಆಹಾರವು ಸಂಗ್ರಹವಾಗುವ ಸ್ಥಳ. ಇದಕ್ಕೆ ಆಮಾಶಯವೆಂದು ಹೆಸರು. ನಾಭಿಮಧ್ಯದಲ್ಲಿ ಶರೀರದ ಸರ್ವಪ್ರಾಣಗಳೂ ಇವೆ.

12178015a ಪ್ರಸೃತಾ4 ಹೃದಯಾತ್ಸರ್ವೇ ತಿರ್ಯಗೂರ್ಧ್ವಮಧಸ್ತಥಾ।
12178015c ವಹಂತ್ಯನ್ನರಸಾನ್ನಾಡ್ಯೋ ದಶ ಪ್ರಾಣಪ್ರಚೋದಿತಾಃ।।

ಹೃದಯದಿಂದ ಹೊರಟು ಮೇಲಕ್ಕೂ, ಕೆಳಗೂ, ಮತ್ತು ಪಾರ್ಶ್ವಗಳಿಗೂ ಹೋಗುವ ನಾಡಿಗಳು ದಶಪ್ರಾಣವಾಯುಗಳಿಂದ5 ಪ್ರಚೋದಿತಗೊಂಡು ಅನ್ನರಸವನ್ನು ಶರೀರಾದ್ಯಂತ ಒಯ್ಯುತ್ತವೆ.

12178016a ಏಷ ಮಾರ್ಗೋಽಥ ಯೋಗಾನಾಂ ಯೇನ ಗಚ್ಚಂತಿ ತತ್ಪದಮ್।
12178016c ಜಿತಕ್ಲಮಾಸನಾ ಧೀರಾ ಮೂರ್ಧನ್ಯಾತ್ಮಾನಮಾದಧುಃ।।

ಮುಖದಿಂದ ಗುದದವರೆಗಿನ ವಾಯುಪ್ರವಾಹಮಾರ್ಗವೇ ಯೋಗಿಗಳ ಮಾರ್ಗವೂ ಆಗಿದೆ. ಈ ಮಾರ್ಗದ ಮೂಲಕವೇ ಕ್ಲೇಷಗಳನ್ನು ಜಯಿಸಿದ ಸರ್ವಸಮಭಾವದಿಂದಿರುವ ಧೀರ ಯೋಗಿಗಳು ಸುಷುಮ್ನಾನಾಡಿಯ ಮೂಲಕ ಆತ್ಮನನ್ನು ಸಹಸ್ರಾರದಲ್ಲಿ ನಿಲ್ಲಿಸುತ್ತಾರೆ.

12178017a ಏವಂ ಸರ್ವೇಷು ವಿಹಿತಃ ಪ್ರಾಣಾಪಾನೇಷು ದೇಹಿನಾಮ್।
12178017c ತಸ್ಮಿನ್ ಸ್ಥಿತೋ ನಿತ್ಯಮಗ್ನಿಃ ಸ್ಥಾಲ್ಯಾಮಿವ ಸಮಾಹಿತಃ।।

ಹೀಗೆ ಪ್ರಾಣಾಪಾನಗಳೇ ಮೊದಲಾದ ಸರ್ವವಾಯುಗಳಲ್ಲಿಯೂ ಸಮಾವೇಶಗೊಂಡಿರುವ ಜಠರಾಗ್ನಿಯು ಅಗ್ನಿಕುಂಡದಲ್ಲಿರುವ ಅಗ್ನಿಯಂತೆ ಶರೀರದಲ್ಲಿ ಪ್ರಜ್ವಲಿಸುತ್ತಿರುತ್ತದೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಷ್ಟಸಪ್ತತ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೆಂಟನೇ ಅಧ್ಯಾಯವು.

  1. ಪ್ರಭೋ (ಗೀತಾ ಪ್ರೆಸ್/ಭಾರತ ದರ್ಶನ). ↩︎

  2. ಮೂರ್ಧಾನಮಾತ್ಮಾ (ಗೀತಾ ಪ್ರೆಸ್/ಭಾರತ ದರ್ಶನ). ↩︎

  3. ಕಬಸ್ತಿಮೂಲಂ (ಗೀತಾ ಪ್ರೆಸ್/ಭಾರತ ದರ್ಶನ). ↩︎

  4. ಪ್ರಸ್ಥಿತಾ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನ, ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ ಇವೇ ದಶಪ್ರಾಣವಾಯುಗಳು. ಇವುಗಳಲ್ಲಿ ಕೊನೆಯ ಐದು ಪಂಚ ಉಪವಾಯುಗಳು (ಭಾರತ ದರ್ಶನ). ↩︎