177: ಭೃಗುಭರದ್ವಾಜಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 177

ಸಾರ

ಪಂಚಮಹಾಭೂತಗಳ ಗುಣಗಳ ವಿಸ್ತೃತ ವರ್ಣನೆ (1-39).

12177001 ಭರದ್ವಾಜ ಉವಾಚ।
12177001a ಏತೇ ತೇ ಧಾತವಃ ಪಂಚ ಬ್ರಹ್ಮಾ ಯಾನಸೃಜತ್ಪುರಾ।
12177001c ಆವೃತಾ ಯೈರಿಮೇ ಲೋಕಾ ಮಹಾಭೂತಾಭಿಸಂಜ್ಞಿತೈಃ।।

ಭರದ್ವಾಜನು ಹೇಳಿದನು: “ಈ ಲೋಕವನ್ನು ಆವೃತವಾಗಿರುವ ಮತ್ತು ಹಿಂದೆ ಬ್ರಹ್ಮನು ಸೃಷ್ಟಿಸಿದ ಈ ಅದಿ ಧಾತುಗಳು ಮಹಾಭೂತಗಳು ಎಂದು ಸೂಚಿತಗೊಂಡಿವೆ.

12177002a ಯದಾಸೃಜತ್ಸಹಸ್ರಾಣಿ ಭೂತಾನಾಂ ಸ ಮಹಾಮತಿಃ।
12177002c ಪಂಚಾನಾಮೇವ ಭೂತತ್ವಂ ಕಥಂ ಸಮುಪಪದ್ಯತೇ।।

ಆ ಮಹಾಮತಿಯು ಸಹಸ್ರಾರು ಭೂತಗಳನ್ನು ಸೃಷ್ಟಿಸಿರುವಾಗ ಈ ಐದಕ್ಕೇ ಹೇಗೆ ಭೂತತ್ವವು ಪ್ರಾಪ್ತವಾಯಿತು?”

12177003 ಭೃಗುರುವಾಚ।
12177003a ಅಮಿತಾನಾಂ ಮಹಾಶಬ್ದೋ ಯಾಂತಿ ಭೂತಾನಿ ಸಂಭವಮ್।
12177003c ತತಸ್ತೇಷಾಂ ಮಹಾಭೂತಶಬ್ದೋಽಯಮುಪಪದ್ಯತೇ।।

ಭೃಗುವು ಹೇಳಿದನು: “ಇವುಗಳಿಗೆ ಮಿತಿಯೇ ಇಲ್ಲದಿರುವುದರಿಂದ ಇವುಗಳಿಗೆ ಮಹಾ ಎಂಬ ಶಬ್ದವನ್ನು ಜೋಡಿಸಲಾಗಿದೆ. ಇವುಗಳಿಂದಲೇ ಭೂತಗಳ ಉತ್ಪತ್ತಿಯಾಗುತ್ತದೆ. ಆದುದರಿಂದ ಇವುಗಳಿಗೇ ಮಹಾಭೂತಗಳು ಎನ್ನುವುದು ಸುಸಂಗತವಾಗಿದೆ.

12177004a ಚೇಷ್ಟಾ ವಯೂಃ ಖಮಾಕಾಶಮೂಷ್ಮಾಗ್ನಿಃ ಸಲಿಲಂ ದ್ರವಃ।
12177004c ಪೃಥಿವೀ ಚಾತ್ರ ಸಂಘಾತಃ ಶರೀರಂ ಪಾಂಚಭೌತಿಕಮ್।।

ಪ್ರಾಣಿಗಳ ಶರೀರವು ಈ ಪಂಚ ಮಹಾಭೂತಗಳ ಸಂಘಾತವೇ ಆಗಿದೆ. ಇದರಲ್ಲಿ ಚೇಷ್ಟೆಯು ವಾಯುವಿನ ಭಾಗ, ಉದರವು ಆಕಾಶದ ಅಂಶ, ಉಷ್ಣವು ಅಗ್ನಿಯ ಅಂಶ, ದ್ರವಗಳು ಜಲದ ಅಂಶಗಳು ಮತ್ತು ಎಲುಬು-ಮಾಂಸಗಳು ಪೃಥ್ವಿಯ ಅಂಶಗಳು.

12177005a ಇತ್ಯೇತೈಃ ಪಂಚಭಿರ್ಭೂತೈರ್ಯುಕ್ತಂ ಸ್ಥಾವರಜಂಗಮಮ್।
12177005c ಶ್ರೋತ್ರಂ ಘ್ರಾಣಂ ರಸಃ ಸ್ಪರ್ಶೋ ದೃಷ್ಟಿಶ್ಚೇಂದ್ರಿಯಸಂಜ್ಞಿತಾಃ।।

ಹೀಗೆ ಸ್ಥಾವರಜಂಗಮಗಳೆಲ್ಲವೂ ಈ ಐದು ಭೂತಗಳಿಂದ ಯುಕ್ತವಾಗಿವೆ. ಇವುಗಳ ಸೂಕ್ಷ್ಮ ಅಂಶಗಳೇ ಇಂದ್ರಿಯಗಳೆಂದು ಕರೆಯಲ್ಪಟ್ಟಿರುವ ಕೇಳುವುದು, ಮೂಸುವುದು, ರುಚಿ, ಸ್ಪರ್ಶ, ಮತ್ತು ದೃಷ್ಟಿ.”

12177006 ಭರದ್ವಾಜ ಉವಾಚ।
12177006a ಪಂಚಭಿರ್ಯದಿ ಭೂತೈಸ್ತು ಯುಕ್ತಾಃ ಸ್ಥಾವರಜಂಗಮಾಃ।
12177006c ಸ್ಥಾವರಾಣಾಂ ನ ದೃಶ್ಯಂತೇ ಶರೀರೇ ಪಂಚ ಧಾತವಃ।।

ಭರದ್ವಾಜನು ಹೇಳಿದನು: “ಒಂದುವೇಳೆ ಸ್ಥಾವರಜಂಗಮಗಳೆಲ್ಲವೂ ಈ ಪಂಚಭೂತಗಳಿಂದ ಯುಕ್ತವಾದವುಗಳೆಂದರೆ ಸ್ಥಾವರಗಳ ಶರೀರದಲ್ಲಿ ಐದು ಧಾತುಗಳಿರುವುದು ಕಾಣಿಸುವುದಿಲ್ಲವಲ್ಲ.

12177007a ಅನೂಷ್ಮಣಾಮಚೇಷ್ಟಾನಾಂ ಘನಾನಾಂ ಚೈವ ತತ್ತ್ವತಃ।
12177007c ವೃಕ್ಷಾಣಾಂ ನೋಪಲಭ್ಯಂತೇ ಶರೀರೇ ಪಂಚ ಧಾತವಃ।।

ವೃಕ್ಷಗಳಲ್ಲಿ ಉಷ್ಣತೆಯೂ ಇಲ್ಲ ಮತ್ತು ಚಲನೆಯೂ ಇಲ್ಲ. ವಾಸ್ತವವಾಗಿ ಅವು ಘನವಾದವುಗಳು. ಆದುದರಿಂದ ವೃಕ್ಷಗಳಲ್ಲಿ ಐದೂ ಭೂತಗಳು ಉಪಲಬ್ಧವಾಗುವುದಿಲ್ಲ.

12177008a ನ ಶೃಣ್ವಂತಿ ನ ಪಶ್ಯಂತಿ ನ ಗಂಧರಸವೇದಿನಃ।
12177008c ನ ಚ ಸ್ಪರ್ಶಂ ವಿಜಾನಂತಿ ತೇ ಕಥಂ ಪಾಂಚಭೌತಿಕಾಃ।।

ವೃಕ್ಷಗಳು ಕೇಳುವುದಿಲ್ಲ, ನೋಡುವುದಿಲ್ಲ ಮತ್ತು ಗಂಧ-ರಸಗಳನ್ನು ತಿಳಿಯುವುದಿಲ್ಲ. ಸ್ಪರ್ಶವನ್ನೂ ಅವು ಗುರುತಿಸುವುದಿಲ್ಲ. ಹಾಗಿದ್ದಾಗ ಅವು ಹೇಗೆ ಪಂಚಭೌತಿಕಗಳಾದವು?

12177009a ಅದ್ರವತ್ವಾದನಗ್ನಿತ್ವಾದಭೌಮತ್ವಾದವಾಯುತಃ।
12177009c ಆಕಾಶಸ್ಯಾಪ್ರಮೇಯತ್ವಾದ್ವೃಕ್ಷಾಣಾಂ ನಾಸ್ತಿ ಭೌತಿಕಮ್।।

ವೃಕ್ಷಗಳಲ್ಲಿ ದ್ರವತ್ವವಾಗಲೀ, ಅಗ್ನಿತ್ವವಾಗಲೀ, ಭೌಮತ್ವವಾಗಲೀ ಅಥವಾ ವಾಯುತ್ವವಾಗಲೀ ನೋಡಲು ಸಿಗುವುದಿಲ್ಲ. ಅಪ್ರಮೇಯ ಆಕಾಶವೂ ಅವುಗಳಲ್ಲಿ ಕಾಣುವುದಿಲ್ಲ. ಆದುದರಿಂದ ವೃಕ್ಷಗಳು ಪಂಚಭೌತಿಕವಾದವುಗಳು ಎಂದಾಗುವುದಿಲ್ಲ.”

12177010 ಭೃಗುರುವಾಚ।
12177010a ಘನಾನಾಮಪಿ ವೃಕ್ಷಾಣಾಮಾಕಾಶೋಽಸ್ತಿ ನ ಸಂಶಯಃ।
12177010c ತೇಷಾಂ ಪುಷ್ಪಫಲೇ ವ್ಯಕ್ತಿರ್ನಿತ್ಯಂ ಸಮುಪಲಭ್ಯತೇ।।

ಭೃಗುವು ಹೇಳಿದನು: “ಘನವಾಗಿದ್ದರೂ ವೃಕ್ಷಗಳಲ್ಲಿ ಆಕಾಶತತ್ತ್ವವಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಲೇ ಅವುಗಳಲ್ಲಿ ನಿತ್ಯವೂ ಫಲ-ಪುಷ್ಪಗಳ ಉತ್ಪತ್ತಿಯಾಗುತ್ತದೆ.

12177011a ಊಷ್ಮತೋ ಗ್ಲಾನಪರ್ಣಾನಾಂ ತ್ವಕ್ಫಲಂ ಪುಷ್ಪಮೇವ ಚ।
12177011c ಮ್ಲಾಯತೇ ಚೈವ ಶೀತೇ ನ ಸ್ಪರ್ಶಸ್ತೇನಾತ್ರ ವಿದ್ಯತೇ।।

ಉಷ್ಣದಿಂದಲೇ ಎಲೆಗಳು ಒಣಗುತ್ತವೆ; ಫಲ-ಪುಷ್ಪಗಳು ಬಾಡುತ್ತವೆ. ತೊಗಡೆಯು ಒಣಗುತ್ತದೆ. ಮುಟ್ಟಿದರೆ ಅವು ಬಾಡುತ್ತವೆ ಅಥವಾ ಉದುರಿ ಬೀಳುತ್ತವೆ. ಅದರಿಂದ ವೃಕ್ಷಗಳಲ್ಲಿ ಉಷ್ಣ ಮತ್ತು ಸ್ಪರ್ಶ ಈ ಎರಡೂ ಗುಣಗಳಿವೆಯೆಂದು ತಿಳಿಯುತ್ತದೆ.

12177012a ವಾಯ್ವಗ್ನ್ಯಶನಿನಿಷ್ಪೇಷೈಃ ಫಲಪುಷ್ಪಂ ವಿಶೀರ್ಯತೇ।
12177012c ಶ್ರೋತ್ರೇಣ ಗೃಹ್ಯತೇ ಶಬ್ದಸ್ತಸ್ಮಾಚ್ಚೃಣ್ವಂತಿ ಪಾದಪಾಃ।।

ವಾಯು, ಅಗ್ನಿ ಮತ್ತು ಸಿಡಿಲುಗಳ ಶಬ್ದವು ಕೇಳಿದ ಕೂಡಲೇ ಫಲ-ಪುಷ್ಪಗಳು ಶೀರ್ಣವಾಗಿ ಕೆಳಗೆ ಬೀಳುತ್ತವೆ. ವೃಕ್ಷಗಳು ಶ್ರೋತ್ರದಿಂದಲೇ ಶಬ್ದವನ್ನು ಗ್ರಹಿಸುತ್ತವೆ. ಆದುದರಿಂದ ಅವೂ ಕೂಡ ಕೇಳುತ್ತವೆ.

12177013a ವಲ್ಲೀ ವೇಷ್ಟಯತೇ ವೃಕ್ಷಂ ಸರ್ವತಶ್ಚೈವ ಗಚ್ಚತಿ।
12177013c ನ ಹ್ಯದೃಷ್ಟೇಶ್ಚ ಮಾರ್ಗೋಽಸ್ತಿ ತಸ್ಮಾತ್ಪಶ್ಯಂತಿ ಪಾದಪಾಃ।।

ಬಳ್ಳಿಯು ಮರವನ್ನು ಸುತ್ತಿಕೊಂಡು ಎಲ್ಲ ಕಡೆ ಹಬ್ಬುತ್ತದೆ. ಕಣ್ಣಿಲ್ಲದವನಿಗೆ ಮಾರ್ಗವಿಲ್ಲವೆನ್ನುವುದು ಸ್ವಭಾವಸಿದ್ಧ. ಆದುದರಿಂದ ವೃಕ್ಷಗಳೂ ನೋಡುತ್ತವೆ.

12177014a ಪುಣ್ಯಾಪುಣ್ಯೈಸ್ತಥಾ ಗಂಧೈರ್ಧೂಪೈಶ್ಚ ವಿವಿಧೈರಪಿ।
12177014c ಅರೋಗಾಃ ಪುಷ್ಪಿತಾಃ ಸಂತಿ ತಸ್ಮಾಜ್ಜಿಘ್ರಂತಿ ಪಾದಪಾಃ।।

ಪವಿತ್ರ-ಅಪವಿತ್ರ ವಿವಿಧ ಗಂಧ-ಧೂಪಗಳ ಚಿಕಿತ್ಸೆಗೊಳಗಾದ ವೃಕ್ಷಗಳು ರೋಗರಹಿತಗೊಂಡು ಪುಷ್ಪ-ಫಲಗಳಿಂದ ಸಮೃದ್ಧವಾಗುತ್ತವೆ. ಆದುದರಿಂದ ವೃಕ್ಷಗಳೂ ವಾಸನೆಯನ್ನು ತೆಗೆದುಕೊಳ್ಳುತ್ತವೆ.

12177015a ಪಾದೈಃ ಸಲಿಲಪಾನಂ ಚ ವ್ಯಾಧೀನಾಮಪಿ ದರ್ಶನಮ್।
12177015c ವ್ಯಾಧಿಪ್ರತಿಕ್ರಿಯತ್ವಾಚ್ಚ ವಿದ್ಯತೇ ರಸನಂ ದ್ರುಮೇ।।

ಅವು ಬೇರುಗಳಿಂದ ನೀರನ್ನು ಕುಡಿಯುತ್ತವೆ. ಅವುಗಳಿಗೂ ವ್ಯಾಧಿಗಳಾಗುತ್ತವೆ ಎನ್ನುವುದನ್ನು ಕಾಣುತ್ತೇವೆ. ವ್ಯಾಧಿಗಳಿಗೆ ಔಷಧಗಳನ್ನೂ ಕೂಡ ವೃಕ್ಷಗಳಿಗೆ ನೀಡಲಾಗುತ್ತದೆ. ಇದರಿಂದ ವೃಕ್ಷಗಳಿಗೂ ರಸಗ್ರಹಣ ಶಕ್ತಿಯಿದೆ ಎಂದು ತಿಳಿಯುತ್ತದೆ.

12177016a ವಕ್ತ್ರೇಣೋತ್ಪಲನಾಲೇನ ಯಥೋರ್ಧ್ವಂ ಜಲಮಾದದೇತ್।
12177016c ತಥಾ ಪವನಸಂಯುಕ್ತಃ ಪಾದೈಃ ಪಿಬತಿ ಪಾದಪಃ।।

ಕಮಲದ ನಾಳವನ್ನು ಬಾಯಲ್ಲಿಟ್ಟುಕೊಂಡು ಉಸಿರನ್ನು ಎಳೆದುಕೊಳ್ಳುವುದರ ಮೂಲಕ ನೀರನ್ನು ಮೇಲಕ್ಕೆ ಸೆಳೆದುಕೊಳ್ಳುವಂತೆ ವೃಕ್ಷಗಳು ವಾಯುವಿನ ಸಹಾಯದಿಂದ ಬೇರುಗಳ ಮೂಲಕ ಕೆಳಗಿರುವ ನೀರನ್ನು ಕುಡಿಯುತ್ತವೆ.

12177017a ಗ್ರಹಣಾತ್ಸುಖದುಃಖಸ್ಯ ಚಿನ್ನಸ್ಯ1 ಚ ವಿರೋಹಣಾತ್।
12177017c ಜೀವಂ ಪಶ್ಯಾಮಿ ವೃಕ್ಷಾಣಾಮಚೈತನ್ಯಂ ನ ವಿದ್ಯತೇ।।

ವೃಕ್ಷಗಳು ಸುಖ-ದುಃಖಗಳನ್ನು ಅನುಭವಿಸುತ್ತವೆ. ಕೊಡಲಿಯನ್ನು ಹಿಡಿದವನು ಹತ್ತಿರ ಹೋದರೆ ದುಃಖಿಸುತ್ತವೆ. ನೀರೆರೆಯುವವನು ಹತ್ತಿರ ಹೋದರೆ ಸಂತೋಷಪಡುತ್ತವೆ. ಕತ್ತರಿಸಿದರೆ ಪುನಃ ಅದು ಚಿಗುರುತ್ತದೆ. ವೃಕ್ಷಗಳಲ್ಲಿ ಜೀವವನ್ನು ಕಾಣುತ್ತೇನೆ. ಅವು ಅಚೇತನಗಳೆಂದು ತಿಳಿಯುವುದಿಲ್ಲ.

12177018a ತೇನ ತಜ್ಜಲಮಾದತ್ತಂ ಜರಯತ್ಯಗ್ನಿಮಾರುತೌ।
12177018c ಆಹಾರಪರಿಣಾಮಾಚ್ಚ ಸ್ನೇಹೋ ವೃದ್ಧಿಶ್ಚ ಜಾಯತೇ।।

ಬೇರುಗಳಿಂದ ತೆಗೆದುಕೊಂಡ ನೀರನ್ನು ವೃಕ್ಷದೊಳಗಿರುವ ಅಗ್ನಿ-ಮಾರುತಗಳು ಅರಗಿಸುತ್ತವೆ. ಹೀಗೆ ಆಹಾರದ ಪರಿಣಾಮದಿಂದಲೇ ವೃಕ್ಷದಲ್ಲಿ ಸ್ನಿಗ್ಧತೆಯಿದೆ ಮತ್ತು ಅದು ಬೆಳೆಯುತ್ತದೆ.

12177019a ಜಂಗಮಾನಾಂ ಚ ಸರ್ವೇಷಾಂ ಶರೀರೇ ಪಂಚ ಧಾತವಃ।
12177019c ಪ್ರತ್ಯೇಕಶಃ ಪ್ರಭಿದ್ಯಂತೇ ಯೈಃ ಶರೀರಂ ವಿಚೇಷ್ಟತೇ।।

ಸರ್ವ ಜಂಗಮಗಳ ಶರೀರದಲ್ಲಿಯೂ ಪಂಚಧಾತುಗಳಿವೆ. ಆದರೆ ಅಲ್ಲಿ ಅವುಗಳ ಸ್ವರೂಪದಲ್ಲಿ ಭೇದವಿದೆ. ಆ ಪಂಚಭೂತಗಳ ಸಹಯೋಗದಿಂದಲೇ ಶರೀರವು ಚಲಿಸುತ್ತದೆ.

12177020a ತ್ವಕ್ಚ ಮಾಂಸಂ ತಥಾಸ್ಥೀನಿ ಮಜ್ಜಾ ಸ್ನಾಯು ಚ ಪಂಚಮಮ್।
12177020c ಇತ್ಯೇತದಿಹ ಸಂಖ್ಯಾತಂ ಶರೀರೇ ಪೃಥಿವೀಮಯಮ್।।

ಶರೀರದಲ್ಲಿ ಚರ್ಮ, ಮಾಂಸ, ಎಲುಬು, ಮಜ್ಜೆ ಮತ್ತು ಸ್ನಾಯು – ಈ ಐದು ವಸ್ತುಗಳ ಸಮುದಾಯವು ಪೃಥ್ವೀಮಯವು.

12177021a ತೇಜೋಽಗ್ನಿಶ್ಚ ತಥಾ ಕ್ರೋಧಶ್ಚಕ್ಷುರೂಷ್ಮಾ ತಥೈವ ಚ।
12177021c ಅಗ್ನಿರ್ಜರಯತೇ ಚಾಪಿ ಪಂಚಾಗ್ನೇಯಾಃ ಶರೀರಿಣಃ।।

ತೇಜಸ್ಸು, ಕ್ರೋಧ, ನೇತ್ರ, ಉಷ್ಣತೆ ಮತ್ತು ಜಠರಾನಲ – ಶರೀರದಲ್ಲಿರುವ ಈ ಐದು ವಸ್ತುಗಳು ಅಗ್ನಿಮಯವು.

12177022a ಶ್ರೋತ್ರಂ ಘ್ರಾಣಮಥಾಸ್ಯಂ ಚ ಹೃದಯಂ ಕೋಷ್ಠಮೇವ ಚ।
12177022c ಆಕಾಶಾತ್ಪ್ರಾಣಿನಾಮೇತೇ ಶರೀರೇ ಪಂಚ ಧಾತವಃ।।

ಕಿವಿಗಳು, ಮೂಗು, ಮುಖ, ಹೃದಯ ಮತ್ತು ಹೊಟ್ಟೆ – ಪ್ರಾಣಿಗಳ ಶರೀರದಲ್ಲಿರುವ ಈ ಐದು ಧಾತುಗಳು ಆಕಾಶದಿಂದ ಉತ್ಪನ್ನವಾದವುಗಳು.

12177023a ಶ್ಲೇಷ್ಮಾ ಪಿತ್ತಮಥ ಸ್ವೇದೋ ವಸಾ ಶೋಣಿತಮೇವ ಚ।
12177023c ಇತ್ಯಾಪಃ ಪಂಚಧಾ ದೇಹೇ ಭವಂತಿ ಪ್ರಾಣಿನಾಂ ಸದಾ।।

ಕಫ, ಪಿತ್ತ, ಬೆವರು, ಕೊಬ್ಬು ಮತ್ತು ರಕ್ತ – ಪ್ರಾಣಿಗಳ ಶರೀರದಲ್ಲಿರುವ ಈ ಐದು ವಸ್ತುಗಳು ಜಲರೂಪಗಳು2.

12177024a ಪ್ರಾಣಾತ್ಪ್ರಣೀಯತೇ ಪ್ರಾಣೀ ವ್ಯಾನಾದ್ವ್ಯಾಯಚ್ಚತೇ ತಥಾ।
12177024c ಗಚ್ಚತ್ಯಪಾನೋಽವಾಕ್ಚೈವ ಸಮಾನೋ ಹೃದ್ಯವಸ್ಥಿತಃ।।
12177025a ಉದಾನಾದುಚ್ಚ್ವಸಿತಿ ಚ ಪ್ರತಿಭೇದಾಚ್ಚ ಭಾಷತೇ।
12177025c ಇತ್ಯೇತೇ ವಾಯವಃ ಪಂಚ ಚೇಷ್ಟಯಂತೀಹ ದೇಹಿನಮ್।।

ಪ್ರಾಣದಿಂದ ಪ್ರಾಣಿಯು ಚಲಿಸುತ್ತವೆ. ವ್ಯಾನದಿಂದ ವ್ಯಾಯಾಮವನ್ನು ಮಾಡುತ್ತವೆ. ಅಪಾನ ವಾಯುವು ಮೇಲಿಂದ ಕೆಳಗೆ ಹೋಗುತ್ತದೆ. ಸಮಾನ ವಾಯುವು ಹೃದಯದಲ್ಲಿ ನೆಲೆಸಿರುತ್ತದೆ. ಉದಾನದಿಂದ ಪ್ರಾಣಿಯು ಉಚ್ಛ್ವಾಸವನ್ನು ತೆಗೆದುಕೊಳ್ಳುತ್ತದೆ ಹಾಗೂ ಕಂಠ-ತಾಲುಗಳ ಭೇದದಿಂದ ಶಬ್ದ-ಅಕ್ಷರಗಳ ಉಚ್ಛಾರಣೆಯಾಗುತ್ತದೆ. ಹೀಗೆ ಈ ಐದು ವಾಯುಗಳು ದೇಹಿಯು ಚಲಿಸುವಂತೆ ಮಾಡುತ್ತವೆ3.

12177026a ಭೂಮೇರ್ಗಂಧಗುಣಾನ್ವೇತ್ತಿ ರಸಂ ಚಾದ್ಭ್ಯಃ ಶರೀರವಾನ್।
12177026c ಜ್ಯೋತಿಃ ಪಶ್ಯತಿ ಚಕ್ಷುರ್ಭ್ಯಾಂ ಸ್ಪರ್ಶಂ ವೇತ್ತಿ ಚ ವಾಯುನಾ।।

ಶರೀರವಂತನು ಭೂಮಿಯಿಂದ ಗಂಧಗುಣವನ್ನು ಮತ್ತು ನೀರಿನಿಂದ ರಸವನ್ನು ತಿಳಿಯುತ್ತಾನೆ. ಕಣ್ಣುಗಳಿಂದ ಜ್ಯೋತಿಯಿಂದ ನೋಡುತ್ತಾನೆ ಮತ್ತು ವಾಯುವಿನಿಂದ ಸ್ಪರ್ಶವನ್ನು ತಿಳಿಯುತ್ತಾನೆ.

412177027a ತಸ್ಯ ಗಂಧಸ್ಯ ವಕ್ಷ್ಯಾಮಿ ವಿಸ್ತರಾಭಿಹಿತಾನ್ಗುಣಾನ್। 12177027c ಇಷ್ಟಶ್ಚಾನಿಷ್ಟಗಂಧಶ್ಚ ಮಧುರಃ ಕಟುರೇವ ಚ।।
12177028a ನಿರ್ಹಾರೀ ಸಂಹತಃ ಸ್ನಿಗ್ಧೋ ರೂಕ್ಷೋ ವಿಶದ ಏವ ಚ।
12177028c ಏವಂ ನವವಿಧೋ ಜ್ಞೇಯಃ ಪಾರ್ಥಿವೋ ಗಂಧವಿಸ್ತರಃ5।।

ಇವುಗಳಲ್ಲಿ ಗಂಧದ ಗುಣಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಇಷ್ಟ-ಅನಿಷ್ಟ ಗಂಧಗಳು, ಮಧುರ-ಕಟು ಗಂಧಗಳು, ನಿರ್ಹಾರೀ, ಸಂಹತ, ಸ್ನಿಗ್ಧ, ರೂಕ್ಷ, ವಿಶದ – ಹೀಗೆ ಭೂಸಂಬಂಧವಾದ ಒಂಭತ್ತು ಬಗೆಯ ಗಂಧಗಳನ್ನು ಹೇಳುತ್ತಾರೆ6.

712177029a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸಶ್ಚಾಪಾಂ8 ಗುಣಾಃ ಸ್ಮೃತಾಃ। 12177029c ರಸಜ್ಞಾನಂ ತು ವಕ್ಷ್ಯಾಮಿ ತನ್ಮೇ ನಿಗದತಃ ಶೃಣು।।

ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ಜಲದ ಗುಣಗಳೆಂದು ಹೇಳಿದ್ದಾರೆ. ರಸಜ್ಞಾನದ ಕುರಿತು ಹೇಳುತ್ತೇನೆ. ಅದನ್ನು ಕೇಳು.

12177030a ರಸೋ ಬಹುವಿಧಃ ಪ್ರೋಕ್ತಃ ಸೂರಿಭಿಃ9 ಪ್ರಥಿತಾತ್ಮಭಿಃ।
12177030c ಮಧುರೋ ಲವಣಸ್ತಿಕ್ತಃ ಕಷಾಯೋಽಮ್ಲಃ ಕಟುಸ್ತಥಾ।
12177030e ಏಷ ಷಡ್ವಿಧವಿಸ್ತಾರೋ ರಸೋ ವಾರಿಮಯಃ ಸ್ಮೃತಃ10।।

ರಸವು ಬಹುವಿಧವೆಂದು ಸುವಿಖ್ಯಾತ ಋಷಿಗಳು ಹೇಳುತ್ತಾರೆ. ಸಿಹಿ, ಉಪ್ಪು, ಕಹಿ, ಒಗರು, ಹುಳಿ ಮತ್ತು ಖಾರ – ಈ ಆರು ಜಲಮಯ ರಸಗಳೆಂದು ಹೇಳಿದ್ದಾರೆ.

12177031a ಶಬ್ದಃ ಸ್ಪರ್ಶಶ್ಚ ರೂಪಂ ಚ ತ್ರಿಗುಣಂ ಜ್ಯೋತಿರುಚ್ಯತೇ।
12177031c ಜ್ಯೋತಿಃ ಪಶ್ಯತಿ ರೂಪಾಣಿ ರೂಪಂ ಚ ಬಹುಧಾ ಸ್ಮೃತಮ್।।

ಶಬ್ದ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳು ಜ್ಯೋತಿಯಲ್ಲಿವೆ ಎಂದು ಹೇಳುತ್ತಾರೆ. ಜ್ಯೋತಿಯು ರೂಪಗಳನ್ನು ನೋಡುತ್ತದೆ ಮತ್ತು ರೂಪಗಳು ಅನೇಕ ಎಂದು ಹೇಳಿದ್ದಾರೆ.

12177032a ಹ್ರಸ್ವೋ ದೀರ್ಘಸ್ತಥಾ ಸ್ಥೂಲಶ್ಚತುರಸ್ರೋಽಣು ವೃತ್ತವಾನ್।
12177032c ಶುಕ್ಲಃ ಕೃಷ್ಣಸ್ತಥಾ ರಕ್ತೋ ನೀಲಃ ಪೀತೋಽರುಣಸ್ತಥಾ।
12177032e ಏವಂ ದ್ವಾದಶವಿಸ್ತಾರೋ ಜ್ಯೋತೀರೂಪಗುಣಃ ಸ್ಮೃತಃ11।।

ಹೃಸ್ವ, ದೀರ್ಘ, ಸ್ಥೂಲ, ಚಚ್ಚೌಕ, ಅಣು, ವೃತ್ತ, ಬಿಳಿಪು, ಕಪ್ಪು, ಕೆಂಪು, ನೀಲಿ, ಹಳದಿ ಮತ್ತು ಆಕಾಶನೀಲಿ ಬಣ್ಣ – ಹೀಗೆ ಜ್ಯೋತಿಯ ರೂಪಗುಣಗಳು ವಿಸ್ತಾರವಾಗಿ ಹನ್ನೆರಡು ಎಂದು ಹೇಳಿದ್ದಾರೆ.

12177033a ಶಬ್ದಸ್ಪರ್ಶೌ ತು ವಿಜ್ಞೇಯೌ ದ್ವಿಗುಣೋ ವಾಯುರುಚ್ಯತೇ।
12177033c ವಾಯವ್ಯಸ್ತು ಗುಣಃ ಸ್ಪರ್ಶಃ ಸ್ಪರ್ಶಶ್ಚ ಬಹುಧಾ ಸ್ಮೃತಃ।।

ಶಬ್ದ-ಸ್ಪರ್ಶಗಳು ವಾಯುವಿನ ಎರಡು ಗುಣಗಳೆಂದು ಹೇಳಿದ್ದಾರೆ. ವಾಯುವಿನ ಪ್ರಮುಖ ಗುಣವು ಸ್ಪರ್ಶ. ಸ್ಪರ್ಶದಲ್ಲಿಯೂ ಅನೇಕ ಭೇದಗಳಿವೆ ಎಂದು ಹೇಳಿದ್ದಾರೆ.

12177034a ಕಠಿನಶ್ಚಿಕ್ಕಣಃ ಶ್ಲಕ್ಷ್ಣಃ ಪಿಚ್ಚಲೋ ಮೃದುದಾರುಣಃ।
12177034c ಉಷ್ಣಃ ಶೀತಃ ಸುಖೋ ದುಃಖಃ ಸ್ನಿಗ್ಧೋ ವಿಶದ ಏವ ಚ।
12177034e ಏವಂ ದ್ವಾದಶವಿಸ್ತಾರೋ ವಾಯವ್ಯೋ ಗುಣ ಉಚ್ಯತೇ12।।

ಕಠಿನ, ನುಣುಪು, ತೆಳವು, ಜಿಡ್ಡು, ಮೃದು, ದಾರುಣ, ಉಷ್ಣ, ಶೀತ, ಸುಖ, ದುಃಖ, ಸ್ನಿಗ್ಧ, ವಿಶದ – ಹೀಗೆ ವಾಯುವಿನ ವಿಸ್ತಾರ ಗುಣಗಳು ಹನ್ನೆರಡು ಎಂದು ಹೇಳುತ್ತಾರೆ.

12177035a ತತ್ರೈಕಗುಣಮಾಕಾಶಂ ಶಬ್ದ ಇತ್ಯೇವ ತತ್ ಸ್ಮೃತಮ್।
12177035c ತಸ್ಯ ಶಬ್ದಸ್ಯ ವಕ್ಷ್ಯಾಮಿ ವಿಸ್ತರಂ ವಿವಿಧಾತ್ಮಕಮ್।।

ಆಕಾಶದ ಗುಣವು ಒಂದೆ – ಶಬ್ದ ಎಂದು ಹೇಳಿದ್ದಾರೆ. ಶಬ್ದದ ವಿವಿಧಾತ್ಮಕ ವಿಸ್ತಾರವನ್ನು ಹೇಳುತ್ತೇನೆ.

12177036a ಷಡ್ಜ ಋಷಭಗಾಂಧಾರೌ ಮಧ್ಯಮಃ ಪಂಚಮಸ್ತಥಾ।
12177036c ಧೈವತಶ್ಚಾಪಿ ವಿಜ್ಞೇಯಸ್ತಥಾ ಚಾಪಿ ನಿಷಾದಕಃ।।
12177037a ಏಷ ಸಪ್ತವಿಧಃ ಪ್ರೋಕ್ತೋ ಗುಣ ಆಕಾಶಲಕ್ಷಣಃ।
12177037c ತ್ರೈಸ್ವರ್ಯೇಣ13 ತು ಸರ್ವತ್ರ ಸ್ಥಿತೋಽಪಿ ಪಟಹಾದಿಷು14।।

ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ – ಇವು ಆಕಾಶದ ಏಳು ಗುಣ ಲಕ್ಷಣಗಳೆಂದು ಹೇಳಿದ್ದಾರೆ. ಶಬ್ದವು ಶ್ರೇಷ್ಠತೆಯನ್ನು ಹೊಂದಿ ಸರ್ವತ್ರವ್ಯಾಪ್ತವಾಗಿದ್ದರೂ ನಗಾರಿಯೇ ಮೊದಲಾದ ವಾದ್ಯಗಳಲ್ಲಿ ಇದು ವಿಷೇಷರೂಪದಿಂದ ಅಭಿವ್ಯಕ್ತವಾಗುತ್ತದೆ.

12177038a ಆಕಾಶಜಂ ಶಬ್ದಮಾಹುರೇಭಿರ್ವಾಯುಗುಣೈಃ ಸಹ।
12177038c ಅವ್ಯಾಹತೈಶ್ಚೇತಯತೇ ನ ವೇತ್ತಿ ವಿಷಮಾಗತೈಃ।।

ವಾಯುಸಂಬಂಧ ಗುಣಗಳೊಂದಿಗೆ ಶಬ್ದವು ಆಕಾಶದಲ್ಲಿ ಹುಟ್ಟಿದೆಯೆಂದು ಹೇಳುತ್ತಾರೆ. ವಾಯುಸಂಬಂಧೀ ಗುಣವು ಬಾಧಿತವಾಗದೇ ಶಬ್ದದೊಡನಿರುವಾಗ ಮನುಷ್ಯನು ಶಬ್ದವನ್ನು ಕೇಳುತ್ತಾನೆ.

12177039a ಆಪ್ಯಾಯಂತೇ ಚ ತೇ ನಿತ್ಯಂ ಧಾತವಸ್ತೈಸ್ತು ಧಾತುಭಿಃ।
12177039c ಆಪೋಽಗ್ನಿರ್ಮಾರುತಶ್ಚೈವ ನಿತ್ಯಂ ಜಾಗ್ರತಿ ದೇಹಿಷು15।।

ಶಬ್ದಾದಿಗಳ ಉತ್ಪಾದಕ ಧಾತುವು ಧಾತುಗಳ ಮೂಲಕವೇ ಪೋಷಿತಗೊಳ್ಳುತ್ತವೆ. ಜಲ, ಅಗ್ನಿ ಮತ್ತು ವಾಯು ಇವು ಮೂರು ದೇಹಧಾರಿಗಳಲ್ಲಿ ಸದಾ ಜಾಗ್ರತವಾಗಿರುತ್ತವೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಸಪ್ತಸಪ್ತತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೇಳನೇ ಅಧ್ಯಾಯವು.


  1. ಸುಖದುಃಖಯೋಶ್ಚ ಗ್ರಹಣಾಚ್ಛಿನ್ನಸ್ಯ (ಭಾರತ ದರ್ಶನ/ಗೀತಾ ಪ್ರೆಸ್). ↩︎

  2. ಬ್ರಹ್ಮಜ್ಞಾನ ತಂತ್ರದಲ್ಲಿ ಇದನ್ನೇ ಸ್ವಲ್ಪ ವ್ಯತ್ಯಾಸದಿಂದ ಹೇಳಿದ್ದಾರೆ: ಅಸ್ತಿ ಮಾಂಸಂ ನಖಂ ಚೈವ ನಾಡೀ ತ್ವಕ್ಚೇತಿ ಪಂಚಮೀ। ಪೃಥ್ವೀ ಪಂಚಗುಣಾ ಪ್ರೋಕ್ತಾ ಬ್ರಹ್ಮಜ್ಞಾನೇನ ಭಾಷಿತಮ್।। ೧।। ಮಲಂ ಮೂತ್ರಂ ತಥಾ ಶುಕ್ರಂ ಶ್ಲೇಷ್ಮಾ ಶೋಣಿತಮೇವ ಚ। ತೋಯಂ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್।। ೨।। ಹ್ರಾಸೋ ನಿದ್ರಾ ಕ್ಷುಧಾ ಚೈವ ಭ್ರಾಂತಿರಾಲಸ್ಯಮೇವ ಚ। ತೇಜಃ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್।। ೩।। ಧಾರಣಂ ಚಾಲನಂ ಕ್ಷೇಪಃ ಸಂಕೋಚಃ ಪ್ರಸಸ್ತಥಾ। ವಾಯುಃ ಪಂಚಗುಣಃ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್।। ೪।। ಕಾಮಃ ಕ್ರೋಧಸ್ತಥಾ ಲೋಭಸ್ತ್ರಪಾ ಮೋಹಶ್ಚ ಪಂಚಮಃ। ನಭಃ ಪಂಚಗುಣಂ ಪ್ರೋಕ್ತಂ ಬ್ರಹ್ಮಜ್ಞಾನೇನ ಭಾಷಿತಮ್।। ೫।। (ಭಾರತ ದರ್ಶನ). ↩︎

  3. ಅಮರಸಿಂಹನು ಪಂಚವಾಯುಗಳಿರುವ ಸ್ಥಾನಗಳನ್ನು ಹೀಗೆ ವರ್ಣಿಸಿದ್ದಾನೆ: ಹೃದಿ ಪ್ರಾಣೋ ಗುದೇಽಪಾನಃ ಸಮಾನೋ ನಾಭಿಸಂಸ್ಥಿತಃ। ಉದಾನಃ ಕಂಠದೇಶಸ್ಥೋ ವ್ಯಾನಃ ಸರ್ವ ಶರೀರಗಃ।। (ಭಾರತ ದರ್ಶನ). ↩︎

  4. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಗಂಧಸ್ಪರ್ಶೋ ರಸೋ ರೂಪಂ ಶಬ್ದಶ್ಚಾತ್ರ ಗುಣಾಃ ಸ್ಮೃತಾಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  5. ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಬ್ರಹ್ಮನು ಹತ್ತು ಗಂಧಗಳ ಕುರಿತು ಹೇಳಿದ್ದುದು ಇದೆ (ಶ್ಲೋಕ ೪೨): ಇಷ್ಟಶ್ಚಾನಿಷ್ಟ ಗಂಧಶ್ಚ ಮಧುರೋಽಮ್ಲಃ ಕಟುಸ್ತಥಾ। ನಿರ್ಹಾರೀ ಸಂಹತಃ ಸ್ನಿಗ್ಧೋ ರೂಕ್ಷೋ ವಿಶದ ಏವ ಚ। ಏವಂ ದಶವಿಧೋ ಜ್ಞೇಯಃ ಪಾರ್ಥಿವೋ ಗಂಧ ಇತ್ಯುತ।। ↩︎

  6. ಈ ಒಂಭತ್ತು ಬಗೆಯ ಗಂಧಗಳ ಉದಾಹರಣೆಗಳನ್ನು ವ್ಯಾಖ್ಯಾನಕಾರರು ಈ ರೀತಿ ನೀಡಿದ್ದಾರೆ: (೧) ಇಷ್ಟ ಗಂಧ – ಕಸ್ತೂರಿಯೇ ಮೊದಲಾದ ಸುಗಂಧಗಳು (೨) ಅನಿಷ್ಟ ಗಂಧ – ಶವವೇ ಮೊದಲಾದವುಗಳಿಂದ ಬರುವ ದುರ್ಗಂಧ (೩) ಮಧುರ ಗಂಧ – ಪುಷ್ಪಗಳಿಂದ ಬರುವ ಸುವಾಸನೆ (೪) ಕಟು ಗಂಧ – ಮೆಣಸಿನ ಪುಡಿಯ ವಾಸನೆ (೫) ನಿರ್ಹಾರಿ – ಉಳಿದ ವಾಸನೆಗಳನ್ನು ನಾಶಪಡಿಸುವ ಇಂಗು-ಈರುಳ್ಳಿ ಇತ್ಯಾದಿ (೬) ಸಂಹತ – ಅನೇಕ ದ್ರವ್ಯಗಳನ್ನು ಸೇರಿಸುವುದರಿಂದ ಬರುವ ವಾಸನೆ (೭) ಸ್ನಿಗ್ಧ – ತತ್ಕ್ಷಣದಲ್ಲಿ ತೃಪ್ತಿಯನ್ನುಂಟುಮಾಡುವ ತುಪ್ಪವೇ ಮೊದಲಾದವುಗಳ ವಾಸನೆ (೮) ರೂಕ್ಷ – ಸಾಸಿವೆ ಎಣ್ಣೆ ಮೊದಲಾದವುಗಳ ವಾಸನೆ (೯) ವಿಶದ – ಶಾಲ್ಯನ್ನಾದಿಗಳ ಪರಿಮಳ (ಭಾರತ ದರ್ಶನ). ↩︎

  7. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಜ್ಯೋತಿಃ ಪಶ್ಯತಿ ಚಕ್ಷುರ್ಭ್ಯಾಂ ಸ್ಪರ್ಶಂ ವೇತ್ತಿ ಚ ವಾಯುನಾ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  8. ರಸಶ್ಚಾಪಿ (ಗೀತಾ ಪ್ರೆಸ್/ಭಾರತ ದರ್ಶನ). ↩︎

  9. ಋಷಿಭಿಃ (ಗೀತಾ ಪ್ರೆಸ್/ಭಾರತ ದರ್ಶನ). ↩︎

  10. ಇದೇ ಶ್ಲೋಕವು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೪ ರಲ್ಲಿ ಬರುತ್ತದೆ. ↩︎

  11. ಈ ಹನ್ನೆರಡು ತೇಜಸ್ಸಿನ ರೂಪಗಳ ಕುರಿತು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೬ ರಲ್ಲಿ ಬರುತ್ತದೆ. ಆದರೆ ಗೀತಾ ಪ್ರೆಸ್/ಭಾರತ ದರ್ಶನಗಳಲ್ಲಿ ಜ್ಯೋತಿ-ರೂಪದ ಗುಣವು ಹದಿನಾರು ಎಂದಿದೆ: ಹ್ರಸ್ವೋ ದೀರ್ಘಸ್ತಥಾ ಸ್ಥೂಲಶ್ಚತುರಸ್ರೋಽನುವೃತ್ತವಾನ್। ಶುಕ್ಲಃ ಕೃಷ್ಣಸ್ತಥಾ ರಕ್ತಃ ಪೀತೋ ನೀಲಾರುಣಸ್ತಥಾ।। ಕಠಿನಶ್ಚಿಕ್ಕಣಃ ಶ್ಲಕ್ಷ್ಣಃ ಪಿಚ್ಛಲೋ ಮೃದುದಾರುಣಃ। ಏವಂ ಷೋಡಶವಿಸ್ತಾರೋ ಜೋತೀರುಪಗುಣಃ ಸ್ಮೃತಃ।। ↩︎

  12. ಈ ಹನ್ನೆರಡು ವಾಯು/ಸ್ಪರ್ಶದ ಕುರಿತು ಮುಂದೆ ಅಶ್ವಮೇಧಿಕ ಪರ್ವದ ಅಧ್ಯಾಯ ೪೯ರ ಅನುಗೀತೆಯಲ್ಲಿ ಗುರು-ಶಿಷ್ಯ ಸಂವಾದದಲ್ಲಿ ಶ್ಲೋಕ ೪೯ ರಲ್ಲಿ ಬರುತ್ತದೆ. ಆದರೆ ಗೀತಾ ಪ್ರೆಸ್/ಭಾರತ ದರ್ಶನಗಳಲ್ಲಿ ಸ್ಪರ್ಶ-ವಾಯುವಿನ ಬೇರೆಯೇ ಹನ್ನೆರಡು ಗುಣಗಳ ಕುರಿತಿದೆ: ಉಷ್ಣಃ ಶೀತಃ ಸುಖೋ ದುಃಖಃ ಸ್ನಿಗ್ಧೋ ವಿಶದ ಏವ ಚ। ತಥಾ ಖರೋ ಮೃದೂ ರೂಕ್ಷೋ ಲಘುರ್ಗುರುತರೋಽಪಿ ಚ। ಏವಂ ದ್ವಾದಶಧಾ ಸ್ಪರ್ಶೋ ವಾಯವ್ಯೋ ಗುಣ ಉಚ್ಯತೇ।। ↩︎

  13. ಐಶ್ವರ್ಯೇಣ (ಭಾರತ ದರ್ಶನ/ಗೀತಾ ಪ್ರೆಸ್). ↩︎

  14. ಇದರ ನಂತರ ಈ ಅಧಿಕ ಶ್ಲೋಕಗಳಿವೆ: ಮೃದಂಗಭೇರೀಶಂಖಾಣಾಂ ಸ್ತನಯಿತ್ನೋ ರಥಸ್ಯ ಚ। ಯಃ ಕಶ್ಚಿಚ್ಛ್ರೂಯತೇ ಶಬ್ದಃ ಪ್ರಾಣಿನೋಽಪ್ರಾಣಿನೋಽಪಿ ವಾ।। ಏತೇಷಾಮೇವ ಸರ್ವೇಷಾಂ ವಿಷಯೇ ಸಂಪ್ರಕೀರ್ತಿತಃ। ಏವಂ ಬಹುವಿಧಾಕಾರಃ ಶಬ್ದ ಆಕಾಶಸಂಭವಃ।। (ಗೀತಾ ಪ್ರೆಸ್/ಭಾರತ ದರ್ಶನ). ↩︎

  15. ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಮೂಲಮೇತೇ ಶರೀರಸ್ಯ ವ್ಯಾಪ್ಯ ಪ್ರಾಣಾನಿಹ ಸ್ಥಿತಾಃ। (ಗೀತಾ ಪ್ರೆಸ್/ಭಾರತ ದರ್ಶನ). ↩︎