176: ಭೃಗುಭರದ್ವಾಜಸಂವಾದೇ ಮಾನಸಭೂತೋತ್ಪತ್ತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 176

ಸಾರ

ಆಕಾಶದಿಂದ ಅನ್ಯ ನಾಲ್ಕು ಸ್ಥೂಲಭೂತಗಳ ಉತ್ಪತ್ತಿಯ ವರ್ಣನೆ (1-17).

12176001 ಭರದ್ವಾಜ ಉವಾಚ।
12176001a ಪ್ರಜಾವಿಸರ್ಗಂ ವಿವಿಧಂ ಕಥಂ ಸ ಸೃಜತೇ ಪ್ರಭುಃ।
12176001c ಮೇರುಮಧ್ಯೇ ಸ್ಥಿತೋ ಬ್ರಹ್ಮಾ ತದ್ಬ್ರೂಹಿ ದ್ವಿಜಸತ್ತಮ।।

ಭರದ್ವಾಜನು ಹೇಳಿದನು: “ದ್ವಿಜಸತ್ತಮ! ಮೇರುಮಧ್ಯದಲ್ಲಿ ಸ್ಥಿತನಾದ ಬ್ರಹ್ಮನು ವಿವಿಧ ಪ್ರಜಾಸೃಷ್ಟಿಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ನನಗೆ ಹೇಳು.”

12176002 ಭೃಗುರುವಾಚ।
12176002a ಪ್ರಜಾವಿಸರ್ಗಂ ವಿವಿಧಂ ಮಾನಸೋ ಮನಸಾಸೃಜತ್।
12176002c ಸಂಧುಕ್ಷಣಾರ್ಥಂ1 ಭೂತಾನಾಂ ಸೃಷ್ಟಂ ಪ್ರಥಮತೋ ಜಲಮ್।।

ಭೃಗುವು ಹೇಳಿದನು: “ಆ ಮಾನಸ ದೇವನು ತನ್ನ ಮಾನಸಿಕ ಸಂಕಲ್ಪದಿಂದಲೇ ವಿವಿಧ ಪ್ರಜೆಗಳನ್ನು ಸೃಷ್ಟಿಸಿದನು. ಅವನು ಭೂತಗಳ ಸಂರಕ್ಷಣೆಗಾಗಿ ಮೊಟ್ಟ ಮೊದಲು ಜಲವನ್ನು ಸೃಷ್ಟಿಸಿದನು.

12176003a ಯತ್ಪ್ರಾಣಾಃ ಸರ್ವಭೂತಾನಾಂ ವರ್ಧಂತೇ ಯೇನ ಚ ಪ್ರಜಾಃ।
12176003c ಪರಿತ್ಯಕ್ತಾಶ್ಚ ನಶ್ಯಂತಿ ತೇನೇದಂ ಸರ್ವಮಾವೃತಮ್।।

ಅದೇ ಜಲವು ಸರ್ವಭೂತಗಳ ಪ್ರಾಣವು. ಅದರಿಂದಲೇ ಪ್ರಜೆಗಳ ವೃದ್ಧಿಯಾಗುತ್ತದೆ. ಜಲವಿಲ್ಲದೇ ಇದ್ದರೆ ನಾಶವಾಗುತ್ತವೆ. ಅದರಿಂದಲೇ ಈ ಎಲ್ಲವೂ ಆವೃತವಾಗಿದೆ.

12176004a ಪೃಥಿವೀ ಪರ್ವತಾ ಮೇಘಾ ಮೂರ್ತಿಮಂತಶ್ಚ ಯೇ ಪರೇ।
12176004c ಸರ್ವಂ ತದ್ವಾರುಣಂ ಜ್ಞೇಯಮಾಪಸ್ತಸ್ತಂಭಿರೇ ಪುನಃ।।

ಪೃಥ್ವಿ, ಪರ್ವತ, ಮೇಘಗಳು, ಮತ್ತು ಅನ್ಯ ಯಾವ ಮೂರ್ತಿವಂತ ವಸ್ತುಗಳಿವೆಯೋ ಆ ಎಲ್ಲವೂ ಜಲಮಯ ಎಂದು ತಿಳಿಯಬೇಕು. ಏಕೆಂದರೆ ಜಲವೇ ಅವೆಲ್ಲವನ್ನೂ ಸ್ಥಿರವಾಗಿರಿಸಿದೆ.”

12176005 ಭರದ್ವಾಜ ಉವಾಚ।
12176005a ಕಥಂ ಸಲಿಲಮುತ್ಪನ್ನಂ ಕಥಂ ಚೈವಾಗ್ನಿಮಾರುತೌ।
12176005c ಕಥಂ ಚ ಮೇದಿನೀ ಸೃಷ್ಟೇತ್ಯತ್ರ ಮೇ ಸಂಶಯೋ ಮಹಾನ್।।

ಭರದ್ವಾಜನು ಹೇಳಿದನು: “ಜಲದ ಉತ್ಪತ್ತಿಯು ಹೇಗಾಯಿತು? ಆಗ್ನಿ ಮತ್ತು ವಾಯುಗಳ ಉತ್ಪನ್ನವು ಹೇಗಾಯಿತು? ಪೃಥ್ವಿಯ ಸೃಷ್ಟಿಯು ಹೇಗಾಯಿತು? ಇವುಗಳ ಕುರಿತು ನನ್ನಲ್ಲಿ ಮಹಾ ಸಂಶಯವಿದೆ.”

12176006 ಭೃಗುರುವಾಚ 12176006a ಬ್ರಹ್ಮಕಲ್ಪೇ ಪುರಾ ಬ್ರಹ್ಮನ್ ಬ್ರಹ್ಮರ್ಷೀಣಾಂ ಸಮಾಗಮೇ।
12176006c ಲೋಕಸಂಭವಸಂದೇಹಃ ಸಮುತ್ಪನ್ನೋ ಮಹಾತ್ಮನಾಮ್।।

ಭೃಗುವು ಹೇಳಿದನು: “ಹಿಂದೆ ಬ್ರಹ್ಮಕಲ್ಪದಲ್ಲಿ ಬ್ರಹ್ಮರ್ಷಿಗಳ ಸಮಾಗಮವಾಗಿತ್ತು. ಆ ಮಹಾತ್ಮರಲ್ಲಿ ಲೋಕಸೃಷ್ಟಿಯ ವಿಷಯದಲ್ಲಿ ಸಂದೇಹವು ಉತ್ಪನ್ನವಾಗಿತ್ತು.

12176007a ತೇಽತಿಷ್ಠನ್ ಧ್ಯಾನಮಾಲಂಬ್ಯ ಮೌನಮಾಸ್ಥಾಯ ನಿಶ್ಚಲಾಃ।
12176007c ತ್ಯಕ್ತಾಹಾರಾಃ ಪವನಪಾ ದಿವ್ಯಂ ವರ್ಷಶತಂ ದ್ವಿಜಾಃ।।

ಆ ದ್ವಿಜರು ಆಹಾರಗಳನ್ನು ತ್ಯಜಿಸಿ ಗಾಳಿಯನ್ನೇ ಸೇವಿಸುತ್ತಾ ನೂರು ದಿವ್ಯವರ್ಷಗಳ ಕಾಲ ಧ್ಯಾನಾಸಕ್ತರಾಗಿ ಮೌನವನ್ನಾಶ್ರಯಿಸಿ ನಿಶ್ಚಲರಾಗಿ ನಿಂತುಕೊಂಡರು.

12176008a ತೇಷಾಂ ಧರ್ಮಮಯೀ ವಾಣೀ ಸರ್ವೇಷಾಂ ಶ್ರೋತ್ರಮಾಗಮತ್।
12176008c ದಿವ್ಯಾ ಸರಸ್ವತೀ ತತ್ರ ಸಂಬಭೂವ ನಭಸ್ತಲಾತ್।।

ಧ್ಯಾನಾಸಕ್ತರಾಗಿದ್ದ ಅವರೆಲ್ಲರ ಕಿವಿಗಳಲ್ಲಿ ಬ್ರಹ್ಮಮಯೀ ವಾಣಿಯು ಕೇಳಿಬಂದಿತು. ಆಕಾಶದಲ್ಲಿ ದಿವ್ಯ ಸರಸ್ವತಿಯು ಪ್ರಕಟವಾಗಿ ಹೀಗೆ ಹೇಳಿದಳು:

12176009a ಪುರಾ ಸ್ತಿಮಿತನಿಃಶಬ್ದಮಾಕಾಶಮಚಲೋಪಮಮ್।
12176009c ನಷ್ಟಚಂದ್ರಾರ್ಕಪವನಂ ಪ್ರಸುಪ್ತಮಿವ ಸಂಬಭೌ।।

“ಪೂರ್ವಕಾಲದಲ್ಲಿ ಅನಂತ ಆಕಾಶವು ಪರ್ವತದಂತೆ ನಿಶ್ಚಲವಾಗಿತ್ತು. ಅದರಲ್ಲಿ ಚಂದ್ರ, ಸೂರ್ಯ, ವಾಯು ಯಾರೂ ಕಾಣುತ್ತಿರಲಿಲ್ಲ. ಎಲ್ಲವೂ ನಿದ್ರಿಸುತ್ತಿದ್ದಂತೆ ತೋರುತ್ತಿತ್ತು.

12176010a ತತಃ ಸಲಿಲಮುತ್ಪನ್ನಂ ತಮಸೀವಾಪರಂ ತಮಃ।
12176010c ತಸ್ಮಾಚ್ಚ ಸಲಿಲೋತ್ಪೀಡಾದುದತಿಷ್ಠತ ಮಾರುತಃ।।

ಆಗ ಅಂಧಕಾರದಿಂದ ಇನ್ನೊಂದು ಅಂಧಕಾರವು ಪ್ರಕಟಗೊಂಡಂತೆ ಆಕಾಶದಿಂದ ಜಲವು ಉತ್ಪನ್ನವಾಯಿತು. ಆ ಜಲಪ್ರವಾಹದಿಂದ ವಾಯುವು ಮೇಲೆದ್ದನು.

12176011a ಯಥಾ ಭಾಜನಮಚ್ಚಿದ್ರಂ ನಿಃಶಬ್ದಮಿವ ಲಕ್ಷ್ಯತೇ।
12176011c ತಚ್ಚಾಂಭಸಾ ಪೂರ್ಯಮಾಣಂ ಸಶಬ್ದಂ ಕುರುತೇಽನಿಲಃ।।

ರಂಧ್ರವಿಲ್ಲದ ಪಾತ್ರೆಯು ಹೇಗೆ ನಿಃಶಬ್ದವಾಗಿರುವಂತೆ ತೋರುತ್ತದೆಯೋ ಮತ್ತು ಅದರಲ್ಲಿ ನೀರನ್ನು ತುಂಬಿಸುವಾಗ ಹೇಗೆ ವಾಯುವು ಶಬ್ದಮಾಡುತ್ತದೆಯೋ ಹಾಗೆ ನೀರಿನ ಪ್ರವಾಹದಿಂದ ವಾಯುವು ಚಲಿಸತೊಡಗಿತು.

12176012a ತಥಾ ಸಲಿಲಸಂರುದ್ಧೇ ನಭಸೋಽಂತೇ ನಿರಂತರೇ।
12176012c ಭಿತ್ತ್ವಾರ್ಣವತಲಂ ವಾಯುಃ ಸಮುತ್ಪತತಿ ಘೋಷವಾನ್।।

ಹೀಗೆ ಆಕಾಶದ ಕೊನೆಯವರೆಗೂ ನಿರಂತರವಾಗಿ, ಸ್ವಲ್ಪವೂ ಜಾಗವಿಲ್ಲದೇ ನೀರೇ ತುಂಬಿಕೊಂಡಿತ್ತು. ಆಗ ಆ ಏಕಾರ್ಣವ ಜಲಪ್ರದೇಶವನ್ನು ಭೇದಿಸಿ ಅತಿ ದೊಡ್ಡ ಶಬ್ದದೊಂದಿಗೆ ವಾಯುವು ಪ್ರಕಟಗೊಂಡಿತು.

12176013a ಸ ಏಷ ಚರತೇ ವಾಯುರರ್ಣವೋತ್ಪೀಡಸಂಭವಃ।
12176013c ಆಕಾಶಸ್ಥಾನಮಾಸಾದ್ಯ ಪ್ರಶಾಂತಿಂ ನಾಧಿಗಚ್ಚತಿ।।

ಹೀಗೆ ಸಮುದ್ರದ ಜಲಸಮುದಾಯದಿಂದ ಪ್ರಕಟವಾದ ವಾಯುವು ಸರ್ವತ್ರ ಸಂಚರಿಸತೊಡಗಿತು ಮತ್ತು ಆಕಾಶದಲ್ಲಿ ಎಲ್ಲಿ ತಲುಪಿದರೂ ಅದು ಶಾಂತವಾಗಲಿಲ್ಲ.

12176014a ತಸ್ಮಿನ್ವಾಯ್ವಂಬುಸಂಘರ್ಷೇ ದೀಪ್ತತೇಜಾ ಮಹಾಬಲಃ।
12176014c ಪ್ರಾದುರ್ಭವತ್ಯೂರ್ಧ್ವಶಿಖಃ ಕೃತ್ವಾ ವಿತಿಮಿರಂ ನಭಃ।।

ವಾಯು ಮತ್ತು ಜಲದ ಆ ಸಂಘರ್ಷದಿಂದ ಅತ್ಯಂತ ತೇಜೋಮಯ ಮಹಾಬಲೀ ಅಗ್ನಿದೇವನ ಉತ್ಪನ್ನವಾಯಿತು. ಅವನ ಜ್ವಾಲೆಗಳು ಮೇಲ್ಮುಖವಾಗಿದ್ದವು. ಆ ಅಗ್ನಿಯು ಆಕಾಶದ ಎಲ್ಲ ಅಂಧಕಾರವನ್ನೂ ನಾಶಗೊಳಿಸಿ ಪ್ರಕಟವಾಯಿತು.

12176015a ಅಗ್ನಿಃ ಪವನಸಂಯುಕ್ತಃ ಖಾತ್ಸಮುತ್ಪತತೇ ಜಲಮ್।
12176015c ಸೋಽಗ್ನಿರ್ಮಾರುತಸಂಯೋಗಾದ್ಘನತ್ವಮುಪಪದ್ಯತೇ।।

ವಾಯುವಿನ ಸಂಯೋಗವನ್ನು ಪಡೆದುಕೊಂಡು ಅಗ್ನಿಯು ಜಲವನ್ನು ಆಕಾಶಕ್ಕೆ ಬೀಸತೊಡಗಿತು. ಅನಂತರ ಅದೇ ಜಲ, ಅಗ್ನಿ ಮತ್ತು ವಾಯುಗಳ ಸಂಯೋಗದಿಂದ ಘನೀಭೂತವಾಯಿತು.

12176016a ತಸ್ಯಾಕಾಶೇ ನಿಪತಿತಃ ಸ್ನೇಹಸ್ತಿಷ್ಠತಿ ಯೋಽಪರಃ।
12176016c ಸ ಸಂಘಾತತ್ವಮಾಪನ್ನೋ ಭೂಮಿತ್ವಮುಪಗಚ್ಚತಿ।।

ಅದರ ಆ ತೇವವು ಆಕಾಶದಲ್ಲಿ ಬಿದ್ದಾಗ ಅದೇ ಘನೀಭೂತವಾಗಿ ಪೃಥ್ವಿಯ ರೂಪದಲ್ಲಿ ಬದಲಾಯಿತು.

12176017a ರಸಾನಾಂ ಸರ್ವಗಂಧಾನಾಂ ಸ್ನೇಹಾನಾಂ ಪ್ರಾಣಿನಾಂ ತಥಾ।
12176017c ಭೂಮಿರ್ಯೋನಿರಿಹ ಜ್ಞೇಯಾ ಯಸ್ಯಾಂ ಸರ್ವಂ ಪ್ರಸೂಯತೇ।।

ಈ ಪೃಥ್ವಿಯನ್ನೇ ಸಂಪೂರ್ಣ ರಸ, ಗಂಧ, ಸ್ನೇಹ ಮತ್ತು ಪ್ರಾಣಿಗಳ ಕಾರಣವೆಂದು ತಿಳಿಯಬೇಕು. ಇದರಿಂದಲೇ ಎಲ್ಲವುಗಳ ಉತ್ಪತ್ತಿಯಾಯಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಮಾನಸಭೂತೋತ್ಪತ್ತಿಕಥನೇ ಷಟ್ಸಪ್ತತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದೇ ಮಾನಸಭೂತೋತ್ಪತ್ತಿಕಥನ ಎನ್ನುವ ನೂರಾಎಪ್ಪತ್ತಾರನೇ ಅಧ್ಯಾಯವು.


  1. ಸಂರಕ್ಷಣಾರ್ಥಂ (ಗೀತಾ ಪ್ರೆಸ್). ↩︎