ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 175
ಸಾರ
ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಭಿನ್ನ ತತ್ತ್ವಗಳ ವರ್ಣನೆ (1-37).
12175001 ಯುಧಿಷ್ಠಿರ ಉವಾಚ।
12175001a ಕುತಃ ಸೃಷ್ಟಮಿದಂ ವಿಶ್ವಂ ಜಗತ್ ಸ್ಥಾವರಜಂಗಮಮ್।
12175001c ಪ್ರಲಯೇ ಚ ಕಮಭ್ಯೇತಿ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು.
12175002a ಸಸಾಗರಃ ಸಗಗನಃ ಸಶೈಲಃ ಸಬಲಾಹಕಃ।
12175002c ಸಭೂಮಿಃ ಸಾಗ್ನಿಪವನೋ ಲೋಕೋಽಯಂ ಕೇನ ನಿರ್ಮಿತಃ।।
ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು?
12175003a ಕಥಂ ಸೃಷ್ಟಾನಿ ಭೂತಾನಿ ಕಥಂ ವರ್ಣವಿಭಕ್ತಯಃ।
12175003c ಶೌಚಾಶೌಚಂ ಕಥಂ ತೇಷಾಂ ಧರ್ಮಾಧರ್ಮಾವಥೋ ಕಥಮ್।।
ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು?
12175004a ಕೀದೃಶೋ ಜೀವತಾಂ ಜೀವಃ ಕ್ವ ವಾ ಗಚ್ಚಂತಿ ಯೇ ಮೃತಾಃ।
12175004c ಅಸ್ಮಾಲ್ಲೋಕಾದಮುಂ ಲೋಕಂ ಸರ್ವಂ ಶಂಸತು ನೋ ಭವಾನ್।।
ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಈ ಲೋಕದಿಂದ ಆ ಲೋಕಕ್ಕೆ ಹೋಗುವ ಕ್ರಮವ್ಯಾವುದು? ಇವೆಲ್ಲವನ್ನೂ ನನಗೆ ಹೇಳಬೇಕು.”
12175005 ಭೀಷ್ಮ ಉವಾಚ।
12175005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12175005c ಭೃಗುಣಾಭಿಹಿತಂ ಶ್ರೇಷ್ಠಂ ಭರದ್ವಾಜಾಯ ಪೃಚ್ಚತೇ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಭರದ್ವಾಜನ ಪ್ರಶ್ನೆಗೆ ಭೃಗುವು ನೀಡಿದ ಶ್ರೇಷ್ಠ ಉತ್ತರವನ್ನು ಉದಾಹರಿಸುತ್ತಾರೆ.
12175006a ಕೈಲಾಸಶಿಖರೇ ದೃಷ್ಟ್ವಾ ದೀಪ್ಯಮಾನಮಿವೌಜಸಾ।
12175006c ಭೃಗುಂ ಮಹರ್ಷಿಮಾಸೀನಂ ಭರದ್ವಾಜೋಽನ್ವಪೃಚ್ಚತ।।
ಕೈಲಾಸಶಿಖರದಲ್ಲಿ ಓಜಸ್ಸಿನಿಂದ ದೀಪ್ತಮಾನನಾಗಿದ್ದ ಮಹರ್ಷಿ ಭೃಗುವು ಕುಳಿತಿದ್ದುದನ್ನು ನೋಡಿ ಭರದ್ವಾಜನು ಕೇಳಿದನು:
12175007a ಸಸಾಗರಃ ಸಗಗನಃ ಸಶೈಲಃ ಸಬಲಾಹಕಃ।
12175007c ಸಭೂಮಿಃ ಸಾಗ್ನಿಪವನೋ ಲೋಕೋಽಯಂ ಕೇನ ನಿರ್ಮಿತಃ।।
“ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು?
12175008a ಕಥಂ ಸೃಷ್ಟಾನಿ ಭೂತಾನಿ ಕಥಂ ವರ್ಣವಿಭಕ್ತಯಃ।
12175008c ಶೌಚಾಶೌಚಂ ಕಥಂ ತೇಷಾಂ ಧರ್ಮಾಧರ್ಮಾವಥೋ ಕಥಮ್।।
ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು?
12175009a ಕೀದೃಶೋ ಜೀವತಾಂ ಜೀವಃ ಕ್ವ ವಾ ಗಚ್ಚಂತಿ ಯೇ ಮೃತಾಃ।
12175009c ಪರಲೋಕಮಿಮಂ ಚಾಪಿ ಸರ್ವಂ ಶಂಸತು ನೋ ಭವಾನ್।।
ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಪರಲೋಕವು ಹೇಗಿರುತ್ತದೆ? ಇವೆಲ್ಲವನ್ನೂ ನನಗೆ ಹೇಳಬೇಕು.”
12175010a ಏವಂ ಸ ಭಗವಾನ್ ಪೃಷ್ಟೋ ಭರದ್ವಾಜೇನ ಸಂಶಯಮ್।
12175010c ಮಹರ್ಷಿರ್ಬ್ರಹ್ಮಸಂಕಾಶಃ ಸರ್ವಂ ತಸ್ಮೈ ತತೋಽಬ್ರವೀತ್।।
ಭಗವಾನ್ ಭರದ್ವಾಜನು ಹೀಗೆ ತನ್ನ ಸಂಶಯವನ್ನು ಕೇಳಲು ಬ್ರಹ್ಮಸಂಕಾಶ ಮಹರ್ಷಿಯು ಅವನಿಗೆ ಎಲ್ಲವನ್ನೂ ಹೇಳಿದನು.
112175011a ಮಾನಸೋ ನಾಮ ವಿಖ್ಯಾತಃ ಶ್ರುತಪೂರ್ವೋ ಮಹರ್ಷಿಭಿಃ। 12175011c ಅನಾದಿನಿಧನೋ ದೇವಸ್ತಥಾಭೇದ್ಯೋಽಜರಾಮರಃ।।
“ಹಿಂದೆ ಮಹರ್ಷಿಗಳು ಮಾನಸನೆಂದು ವಿಖ್ಯಾತನಾದ ಅನಾದಿನಿಧನ ಅಭೇದ್ಯ, ಅಜರಾಮರ ದೇವನ ಕುರಿತು ಕೇಳಿದ್ದಾರೆ.
12175012a ಅವ್ಯಕ್ತ ಇತಿ ವಿಖ್ಯಾತಃ ಶಾಶ್ವತೋಽಥಾಕ್ಷರೋಽವ್ಯಯಃ।
12175012c ಯತಃ ಸೃಷ್ಟಾನಿ ಭೂತಾನಿ ಜಾಯಂತೇ ಚ ಮ್ರಿಯಂತಿ ಚ।।
ಅವನೇ ಅವ್ಯಕ್ತ ಎಂದೂ ವಿಖ್ಯಾತನಾಗಿದ್ದಾನೆ. ಅವನೇ ಶಾಶ್ವತ, ಅಕ್ಷರ, ಮತ್ತು ಅವ್ಯಯನು. ಅವನು ಸೃಷ್ಟಿಸಿದ ಭೂತಗಳು ಹುಟ್ಟುತ್ತಿರುತ್ತವೆ ಮತ್ತು ನಾಶವಾಗುತ್ತಿರುತ್ತವೆ.
12175013a ಸೋಽಸೃಜತ್ಪ್ರಥಮಂ ದೇವೋ ಮಹಾಂತಂ ನಾಮ ನಾಮತಃ। 212175013c ಆಕಾಶಮಿತಿ ವಿಖ್ಯಾತಂ ಸರ್ವಭೂತಧರಃ ಪ್ರಭುಃ।।
ಆ ದೇವನು ಪ್ರಥಮವಾಗಿ ಮಹತ್ತತ್ತ್ವವನ್ನು ಸೃಷ್ಟಿಸಿದನು. ಸರ್ವಭೂತಧರನಾದ ಅವನು ಆಕಾಶವೆಂದು ವಿಖ್ಯಾತವಾದುದನ್ನು ಸೃಷ್ಟಿಸಿದನು.
12175014a ಆಕಾಶಾದಭವದ್ವಾರಿ ಸಲಿಲಾದಗ್ನಿಮಾರುತೌ।
12175014c ಅಗ್ನಿಮಾರುತಸಂಯೋಗಾತ್ತತಃ ಸಮಭವನ್ಮಹೀ।।
ಆಕಾಶದಿಂದ ಜಲ ಮತ್ತು ಜಲದಿಂದ ಅಗ್ನಿ-ವಾಯುಗಳ ಉತ್ಪತ್ತಿಯಾಯಿತು. ಅಗ್ನಿ ಮತ್ತು ವಾಯುವಿನ ಸಂಯೋಗದಿಂದ ಪೃಥ್ವಿಯು ಹುಟ್ಟಿಕೊಂಡಿತು3.
12175015a ತತಸ್ತೇಜೋಮಯಂ ದಿವ್ಯಂ ಪದ್ಮಂ ಸೃಷ್ಟಂ ಸ್ವಯಂಭುವಾ।
12175015c ತಸ್ಮಾತ್ಪದ್ಮಾತ್ಸಮಭವದ್ಬ್ರಹ್ಮಾ ವೇದಮಯೋ ನಿಧಿಃ।।
ಅನಂತರ ಸ್ವಯಂಭು ಮಾನಸದೇವನು ತೇಜೋಮಯವಾದ ದಿವ್ಯ ಪದ್ಮವನ್ನು ಸೃಷ್ಟಿಸಿದನು. ಅದರಿಂದ ವೇದಮಯ ನಿಧಿ ಬ್ರಹ್ಮನು ಹುಟ್ಟಿದನು.
12175016a ಅಹಂಕಾರ ಇತಿ ಖ್ಯಾತಃ ಸರ್ವಭೂತಾತ್ಮಭೂತಕೃತ್।
12175016c ಬ್ರಹ್ಮಾ ವೈ ಸುಮಹಾತೇಜಾ ಯ ಏತೇ ಪಂಚ ಧಾತವಃ।।
ಮಹಾತೇಜಸ್ವಿಯಾದ ಅಹಂಕಾರ ಎಂದು ಖ್ಯಾತನಾದ ಸರ್ವಭೂತಾತ್ಮಕೃತ್ ಬ್ರಹ್ಮನು ಈ ಐದು ಧಾತುಗಳಿಂದ ಕೂಡಿದ್ದಾನೆ.
12175017a ಶೈಲಾಸ್ತಸ್ಯಾಸ್ಥಿಸಂಜ್ಞಾಸ್ತು ಮೇದೋ ಮಾಂಸಂ ಚ ಮೇದಿನೀ।
12175017c ಸಮುದ್ರಾಸ್ತಸ್ಯ ರುಧಿರಮಾಕಾಶಮುದರಂ ತಥಾ।।
ಪರ್ವತಗಳು ಅವನ ಎಲುಬುಗಳು ಮತ್ತು ಮೇದಿನಿಯು ಅವನ ಮೇದ-ಮಾಂಸವು. ಸಮುದ್ರವು ಅವನ ರಕ್ತ ಮತ್ತು ಆಕಾಶವು ಅವನ ಹೊಟ್ಟೆ.
12175018a ಪವನಶ್ಚೈವ ನಿಃಶ್ವಾಸಸ್ತೇಜೋಽಗ್ನಿರ್ನಿಮ್ನಗಾಃ ಸಿರಾಃ।
12175018c ಅಗ್ನೀಷೋಮೌ ತು ಚಂದ್ರಾರ್ಕೌ ನಯನೇ ತಸ್ಯ ವಿಶ್ರುತೇ।।
ವಾಯುವು ಅವನ ನಿಃಶ್ವಾಸ, ಅಗ್ನಿಯು ತೇಜಸ್ಸು, ನದಿಗಳು ನಾಡಿಗಳು ಹಾಗೂ ಯಾರನ್ನು ಅಗ್ನಿ-ಸೋಮರೆಂದೂ ಕರೆಯುತ್ತಾರೋ ಆ ಸೂರ್ಯ-ಚಂದ್ರರು ಅವನ ಕಣ್ಣುಗಳು.
12175019a ನಭಶ್ಚೋರ್ಧ್ವಂ ಶಿರಸ್ತಸ್ಯ ಕ್ಷಿತಿಃ ಪಾದೌ ದಿಶೋ ಭುಜೌ।
12175019c ದುರ್ವಿಜ್ಞೇಯೋ ಹ್ಯನಂತತ್ವಾತ್ಸಿದ್ಧೈರಪಿ4 ನ ಸಂಶಯಃ।।
ಆಕಾಶದ ಮೇಲ್ಭಾಗವು ಅವನ ಶಿರಸ್ಸು, ಭೂಮಿಯು ಪಾದಗಳು, ಮತ್ತು ದಿಕ್ಕುಗಳು ಭುಜಗಳು. ಅವನ ಅನಂತತ್ವದಿಂದಾಗಿ ಅವನು ಸಿದ್ಧಪುರುಷರಿಗೂ ತಿಳಿಯಲು ಅಸಾಧ್ಯನು ಎನ್ನುವುದರಲ್ಲಿ ಸಂಶಯವಿಲ್ಲ.
12175020a ಸ ಏವ ಭಗವಾನ್ವಿಷ್ಣುರನಂತ ಇತಿ ವಿಶ್ರುತಃ।
12175020c ಸರ್ವಭೂತಾತ್ಮಭೂತಸ್ಥೋ ದುರ್ವಿಜ್ಞೇಯೋಽಕೃತಾತ್ಮಭಿಃ।।
ಆ ಸ್ವಯಂಭುವೇ ಭಗವಾನ್ ವಿಷ್ಣು. ಅವನು ಅನಂತನೆಂದು ಪ್ರಸಿದ್ಧನಾಗಿದ್ದಾನೆ. ಅವನೇ ಸರ್ವಭೂತಗಳಲ್ಲಿ ನೆಲೆಸಿದ್ದಾನೆ. ಅಕೃತಾತ್ಮರಿಗೆ ಅವನು ತಿಳಿಯಲಸಾಧ್ಯನು.
12175021a ಅಹಂಕಾರಸ್ಯ ಯಃ ಸ್ರಷ್ಟಾ ಸರ್ವಭೂತಭವಾಯ ವೈ।
12175021c ಯತಃ ಸಮಭವದ್ವಿಶ್ವಂ ಪೃಷ್ಟೋಽಹಂ ಯದಿಹ ತ್ವಯಾ।।
ಅವನೇ ಸರ್ವಭೂತಗಳ ಉತ್ಪತ್ತಿಗಾಗಿ ಅಹಂಕಾರವನ್ನು ಸೃಷ್ಟಿಸಿದನು. ಈ ಜಗತ್ತು ಯಾವುದರಿಂದ ಉಂಟಾಯಿತು ಎಂಬ ನಿನ್ನ ಪ್ರಶ್ನೆಗೆ ನಾನು ಹೇಳಿದ್ದೇನೆ.”
12175022 ಭರದ್ವಾಜ ಉವಾಚ।
12175022a ಗಗನಸ್ಯ ದಿಶಾಂ ಚೈವ ಭೂತಲಸ್ಯಾನಿಲಸ್ಯ ಚ।
12175022c ಕಾನ್ಯತ್ರ ಪರಿಮಾಣಾನಿ ಸಂಶಯಂ ಚಿಂಧಿ ಮೇಽರ್ಥತಃ।।
ಭರದ್ವಾಜನು ಹೇಳಿದನು: “ಆಕಾಶ, ದಿಕ್ಕುಗಳು, ಭೂತಲ ಮತ್ತು ವಾಯುವಿನ ಪರಿಮಾಣಗಳೇನು? ಅರ್ಥತಃ ಇದನ್ನು ಹೇಳಿ ನನ್ನ ಸಂಶಯವನ್ನು ಹೋಗಲಾಡಿಸು.”
12175023 ಭೃಗುರುವಾಚ।
12175023a ಅನಂತಮೇತದಾಕಾಶಂ ಸಿದ್ಧಚಾರಣಸೇವಿತಮ್।
12175023c ರಮ್ಯಂ ನಾನಾಶ್ರಯಾಕೀರ್ಣಂ ಯಸ್ಯಾಂತೋ ನಾಧಿಗಮ್ಯತೇ।।
ಭೃಗುವು ಹೇಳಿದನು: “ಈ ಆಕಾಶವು ಅನಂತವು. ಇದರಲ್ಲಿ ಸಿದ್ಧ-ಚಾರಣರು ವಾಸಿಸುತ್ತಾರೆ. ನಾನಾ ಲೋಕಗಳಿಗೆ ಆಶ್ರಯವಾಗಿರುವ ಇದು ರಮ್ಯವಾಗಿದೆ ಮತ್ತು ಇದರ ಕೊನೆಯೇ ಸಿಗುವುದಿಲ್ಲ.
12175024a ಊರ್ಧ್ವಂ ಗತೇರಧಸ್ತಾತ್ತು ಚಂದ್ರಾದಿತ್ಯೌ ನ ದೃಶ್ಯತಃ।
12175024c ತತ್ರ ದೇವಾಃ ಸ್ವಯಂ ದೀಪ್ತಾ ಭಾಸ್ವರಾಶ್ಚಾಗ್ನಿವರ್ಚಸಃ।।
ಅದರ ಮೇಲೆ ಮತ್ತು ಕೆಳಗೆ ಹೋದರೆ ಚಂದ್ರ-ಸೂರ್ಯರು ಕಾಣಿಸುವುದಿಲ್ಲ. ಅಲ್ಲಿ ಅಗ್ನಿವರ್ಚಸ ದೇವತೆಗಳು ಸ್ವಯಂ ಪ್ರಭೆಯಿಂದ ಬೆಳಗುತ್ತಿರುತ್ತಾರೆ.
12175025a ತೇ ಚಾಪ್ಯಂತಂ ನ ಪಶ್ಯಂತಿ ನಭಸಃ ಪ್ರಥಿತೌಜಸಃ।
12175025c ದುರ್ಗಮತ್ವಾದನಂತತ್ವಾದಿತಿ ಮೇ ವಿದ್ಧಿ ಮಾನದ।।
ಮಾನದ! ಆದರೆ ಆ ತೇಜಸ್ವೀ ನಕ್ಷತ್ರ ಸ್ವರೂಪೀ ದೇವತೆಗಳಿಗೂ ಕೂಡ ಆಕಾಶದ ಕೊನೆಯನ್ನು ನೋಡಲಿಕ್ಕಾಗುವುದಿಲ್ಲ. ಏಕೆಂದರೆ ಅದು ದುರ್ಗಮ ಮತ್ತು ಅನಂತವಾಗಿದೆ. ಇದನ್ನು ನನ್ನಿಂದ ಚೆನ್ನಾಗಿ ತಿಳಿದುಕೋ.
12175026a ಉಪರಿಷ್ಟೋಪರಿಷ್ಟಾತ್ತು ಪ್ರಜ್ವಲದ್ಭಿಃ ಸ್ವಯಂಪ್ರಭೈಃ।
12175026c ನಿರುದ್ಧಮೇತದಾಕಾಶಮಪ್ರಮೇಯಂ ಸುರೈರಪಿ।।
ಮೇಲೆ ಮೇಲೆ ಪ್ರಕಾಶಿತವಾಗುವ ಸ್ವಯಂ ಪ್ರಕಾಶ ದೇವತೆಗಳಿಂದ ಈ ಅಪ್ರಮೇಯ ಆಕಾಶವು ತುಂಬಿರುವಂತೆ ತೋರುತ್ತದೆ.
12175027a ಪೃಥಿವ್ಯಂತೇ ಸಮುದ್ರಾಸ್ತು ಸಮುದ್ರಾಂತೇ ತಮಃ ಸ್ಮೃತಮ್।
12175027c ತಮಸೋಽಂತೇ ಜಲಂ ಪ್ರಾಹುರ್ಜಲಸ್ಯಾಂತೇಽಗ್ನಿರೇವ ಚ।।
ಪೃಥ್ವಿಯ ಅಂತ್ಯದಲ್ಲಿ ಸಮುದ್ರವಿದೆ. ಸಮುದ್ರದ ಅಂತ್ಯದಲ್ಲಿ ಘೋರ ಅಂಧಕಾರವಿದೆ. ಅಂಧಕಾರದ ಅಂತ್ಯದಲ್ಲಿ ಜಲವಿದೆ ಮತ್ತು ಜಲದ ಅಂತ್ಯದಲ್ಲಿ ಅಗ್ನಿಯಿದೆಯೆಂದು ಹೇಳುತ್ತಾರೆ.
12175028a ರಸಾತಲಾಂತೇ ಸಲಿಲಂ ಜಲಾಂತೇ ಪನ್ನಗಾಧಿಪಃ।
12175028c ತದಂತೇ ಪುನರಾಕಾಶಮಾಕಾಶಾಂತೇ ಪುನರ್ಜಲಮ್।।
ರಸಾತಲದ ಕೊನೆಯಲ್ಲಿ ನೀರಿದೆ. ನೀರಿನ ಅಂತ್ಯದಲ್ಲಿ ನಾಗರಾಜ ಶೇಷನಿದ್ದಾನೆ. ಅವನ ನಂತರ ಪುನಃ ಆಕಾಶವಿದೆ ಮತ್ತು ಆಕಾಶದ ಅಂತ್ಯದಲ್ಲಿ ಪುನಃ ಜಲವಿದೆ.
12175029a ಏವಮಂತಂ ಭಗವತಃ ಪ್ರಮಾಣಂ ಸಲಿಲಸ್ಯ ಚ।
12175029c ಅಗ್ನಿಮಾರುತತೋಯೇಭ್ಯೋ ದುರ್ಜ್ಞೇಯಂ ದೈವತೈರಪಿ।।
ಹೀಗೆ ಭಗವಂತ, ಆಕಾಶ, ಜಲ, ಮತ್ತು ಅಗ್ನಿ-ವಾಯುಗಳ ಪರಿಮಾಣವನ್ನು ತಿಳಿಯಲು ದೇವತೆಗಳಿಗೂ ಅತ್ಯಂತ ಕಠಿಣವಿದೆ.
12175030a ಅಗ್ನಿಮಾರುತತೋಯಾನಾಂ ವರ್ಣಾಃ ಕ್ಷಿತಿತಲಸ್ಯ ಚ।
12175030c ಆಕಾಶಸದೃಶಾ ಹ್ಯೇತೇ ಭಿದ್ಯಂತೇ ತತ್ತ್ವದರ್ಶನಾತ್।।
ಅಗ್ನಿ, ವಾಯು, ಜಲ ಮತ್ತು ಪೃಥ್ವೀ – ಇವುಗಳ ವರ್ಣ-ರೂಪಗಳು ಆಕಾಶದಂತೆಯೇ ಇರುತ್ತದೆ. ಆದುದರಿಂದ ಇವು ಆಕಾಶಕ್ಕಿಂತ ಭಿನ್ನವಲ್ಲ. ತತ್ತ್ವಜ್ಞಾನವಿಲ್ಲದ ಕಾರಣದಿಂದಲೇ ಅವುಗಳಲ್ಲಿ ಭೇದವು ಕಾಣಿಸುತ್ತದೆ.
12175031a ಪಠಂತಿ ಚೈವ ಮುನಯಃ ಶಾಸ್ತ್ರೇಷು ವಿವಿಧೇಷು ಚ।
12175031c ತ್ರೈಲೋಕ್ಯೇ ಸಾಗರೇ ಚೈವ ಪ್ರಮಾಣಂ ವಿಹಿತಂ ಯಥಾ।
12175031e ಅದೃಶ್ಯಾಯ ತ್ವಗಮ್ಯಾಯ ಕಃ ಪ್ರಮಾಣಮುದಾಹರೇತ್।।
12175032a ಸಿದ್ಧಾನಾಂ ದೇವತಾನಾಂ ಚ ಯದಾ ಪರಿಮಿತಾ ಗತಿಃ।
ಋಷಿಗಳು ವಿವಿಧ ಶಾಸ್ತ್ರಗಳಲ್ಲಿ ಮೂರು ಲೋಕಗಳು ಮತ್ತು ಸಮುದ್ರಗಳ ಕುರಿತು ಕೆಲವು ನಿಶ್ಚಿತ ಪ್ರಮಾಣಗಳನ್ನು ಹೇಳಿದ್ದಾರೆ. ಆದರೆ ಯಾವುದು ದೃಷ್ಟಿಗೆ ಸಿಗುವುದಿಲ್ಲವೋ ಮತ್ತು ಎಲ್ಲಿ ಇಂದ್ರಿಯಗಳು ತಲುಪುವುದಿಲ್ಲವೋ ಆ ಪರಮಾತ್ಮನ ಪರಿಮಾಣವನ್ನು ಯಾರಾದರೂ ಹೇಗೆ ಹೇಳಬಲ್ಲರು? ಈ ಸಿದ್ಧರು ಮತ್ತು ದೇವತೆಗಳ ಜ್ಞಾನವೂ ಕೂಡ ಪರಿಮಿತವಾದುದಲ್ಲವೇ?
12175032c ತದಾ ಗೌಣಮನಂತಸ್ಯ ನಾಮಾನಂತೇತಿ ವಿಶ್ರುತಮ್।
12175032e ನಾಮಧೇಯಾನುರೂಪಸ್ಯ ಮಾನಸಸ್ಯ ಮಹಾತ್ಮನಃ।।
ಆದುದರಿಂದ ಪರಮಾತ್ಮ ಮಾನಸದೇವನು ತನ್ನ ನಾಮಕ್ಕೆ ಅನುಗುಣವಾಗಿಯೇ ಅನಂತನು. ಅವನ ಸುಪ್ರಸಿದ್ಧ ಅನಂತ ನಾಮವು ಅವನ ಗುಣಕ್ಕೆ ಅನುಸಾರವಾಗಿಯೇ ಇದೆ.
12175033a ಯದಾ ತು ದಿವ್ಯಂ ತದ್ರೂಪಂ ಹ್ರಸತೇ ವರ್ಧತೇ ಪುನಃ।
12175033c ಕೋಽನ್ಯಸ್ತದ್ವೇದಿತುಂ ಶಕ್ತೋ ಯೋಽಪಿ ಸ್ಯಾತ್ತದ್ವಿಧೋಽಪರಃ।।
ಪರಮಾತ್ಮನ ದಿವ್ಯ ರೂಪವು ಚಿಕ್ಕದಾದಾಗ ಮತ್ತು ಪುನಃ ದೊಡ್ಡದಾದಾಗ ಅವನ ಪರಿಮಾಣವನ್ನು ಯಥಾರ್ಥ ತಿಳಿಯಲು ಶಕ್ಯನಾದ, ಅವನಿಗಿಂತಲೂ ಭಿನ್ನನಾದ ಬೇರೆ ಯಾವ ಪ್ರತಿಭಾಶಾಲಿಯಿದ್ದಾನೆ?
12175034a ತತಃ ಪುಷ್ಕರತಃ ಸೃಷ್ಟಃ ಸರ್ವಜ್ಞೋ ಮೂರ್ತಿಮಾನ್ಪ್ರಭುಃ।
12175034c ಬ್ರಹ್ಮಾ ಧರ್ಮಮಯಃ ಪೂರ್ವಃ ಪ್ರಜಾಪತಿರನುತ್ತಮಃ।।
ಅನಂತರ ಪದ್ಮದಿಂದ ಸರ್ವಜ್ಞ, ಮೂರ್ತಿಮಾನ್, ಪ್ರಭಾವಶಾಲೀ, ಪರಮ ಉತ್ತಮ ಮತ್ತು ಪ್ರಥಮ ಪ್ರಜಾಪತಿ ಧರ್ಮಮಯ ಬ್ರಹ್ಮನ ಪ್ರಾದುರ್ಭಾವವಾಯಿತು.”
12175035 ಭರದ್ವಾಜ ಉವಾಚ।
12175035a ಪುಷ್ಕರಾದ್ಯದಿ ಸಂಭೂತೋ ಜ್ಯೇಷ್ಠಂ ಭವತಿ ಪುಷ್ಕರಮ್।
12175035c ಬ್ರಹ್ಮಾಣಂ ಪೂರ್ವಜಂ ಚಾಹ ಭವಾನ್ಸಂದೇಹ ಏವ ಮೇ।।
ಭರದ್ವಾಜನು ಹೇಳಿದನು: “ಬ್ರಹ್ಮನು ಕಮಲದಲ್ಲಿ ಹುಟ್ಟಿದನೆಂದರೆ ಕಮಲವೇ ಜ್ಯೇಷ್ಠವಾದಂತಾಯಿತು. ಆದರೆ ನೀನು ಬ್ರಹ್ಮನನ್ನು ಪೂರ್ವಜ ಎಂದು ಹೇಳಿದ್ದೀಯೆ. ಆದುದರಿಂದ ನನಗೆ ಈ ಸಂದೇಹವು ಉಳಿದುಕೊಂಡುಬಿಟ್ಟಿದೆ.”
12175036 ಭೃಗುರುವಾಚ।
12175036a ಮಾನಸಸ್ಯೇಹ ಯಾ ಮೂರ್ತಿರ್ಬ್ರಹ್ಮತ್ವಂ ಸಮುಪಾಗತಾ।
12175036c ತಸ್ಯಾಸನವಿಧಾನಾರ್ಥಂ ಪೃಥಿವೀ ಪದ್ಮಮುಚ್ಯತೇ।।
ಭೃಗುವು ಹೇಳಿದನು: “ಮಾನಸದೇವನ ಸ್ವರೂಪವನ್ನೇನು ಹೇಳಿದೆನೋ ಅದೇ ಬ್ರಹ್ಮರೂಪದಲ್ಲಿ ಪ್ರಕಟವಾಗಿದೆ. ಅದೇ ಬ್ರಹ್ಮನ ಆಸನವಾದುದಕ್ಕಾಗಿ ಪೃಥ್ವಿಯನ್ನು ಪದ್ಮ ಎಂದು ಕರೆಯುತ್ತಾರೆ.
12175037a ಕರ್ಣಿಕಾ ತಸ್ಯ ಪದ್ಮಸ್ಯ ಮೇರುರ್ಗಗನಮುಚ್ಚ್ರಿತಃ।
12175037c ತಸ್ಯ ಮಧ್ಯೇ ಸ್ಥಿತೋ ಲೋಕಾನ್ ಸೃಜತೇ ಜಗತಃ ಪ್ರಭುಃ।।
ಈ ಕಮಲದ ದಂಟು ಆಕಾಶದ ಎತ್ತರದ ವರೆಗೂ ಹೋಗಿರುವ ಮೇರು ಪರ್ವತವು. ಅದರ ಮಧ್ಯದಲ್ಲಿ ಸ್ಥಿತನಾಗಿ ಪ್ರಭುವು ಲೋಕಗಳನ್ನು ಸೃಷ್ಟಿಸುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಪಂಚಸಪ್ತತ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೈದನೇ ಅಧ್ಯಾಯವು.-
ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ನಾರಾಯಣೋ ಜಗನ್ಮೂರ್ತಿರಂತರಾತ್ಮಾ ಸನಾತನಃ। ಕೂಟಸ್ಥೋಽಕ್ಷರ ಅವ್ಯಕ್ತೋ ನಿರ್ಲೇಪೋ ವ್ಯಾಪಕಃ ಪ್ರಭುಃ।। ಪ್ರಕೃತೇಃ ಪರತೋ ನಿತ್ಯಮಿಂದ್ರಿಯೈರಪ್ಯಗೋಚರಃ। ಸ ಸಿಸೃಕ್ಷುಃ ಸಹಸ್ರಾಂಶಾದಸೃಜತ್ ಪುರುಷಂ ಪ್ರಭುಃ।। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಹಾನ್ಸಸರ್ಜಾಹಂಕಾರಂ ಸ ಚಾಪಿ ಭಗವಾನಥ। (ಗೀತಾ ಪ್ರೆಸ್). ↩︎
-
ತೈತ್ತರೀಯ ಉಪನಿಷತ್ತಿನಲ್ಲಿ ಆಕಾಶಾದ್ವಾಯುಃ। ವಾಯೋರಗ್ನಿಃ। ಅಗ್ನೇರಾಪಃ। ಅದ್ಭ್ಯಃ ಪೃಥಿವೀ। ಪೃಥಿವ್ಯಾ ಓಷಧಯಃ। ಎಂದು ಸೃಷ್ಟಿಕ್ರಮವನ್ನು ಹೇಳಿದೆ (ಭಾರತ ದರ್ಶನ). ↩︎
-
ಹ್ಯಚಿಂತಾತ್ಮಾ ಸಿದ್ಧೈರಪಿ (ಗೀತಾ ಪ್ರೆಸ್). ↩︎