ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 170
ಸಾರ
ತ್ಯಾಗದ ಮಹತ್ವವನ್ನು ತಿಳಿಸುವ ಶಮ್ಯಾಕಗೀತೆ1 (1-23).
12170001 ಯುಧಿಷ್ಠಿರ ಉವಾಚ।
12170001a ಧನಿನೋ ವಾಧನಾ ಯೇ ಚ ವರ್ತಯಂತಿ ಸ್ವತಂತ್ರಿಣಃ।
12170001c ಸುಖದುಃಖಾಗಮಸ್ತೇಷಾಂ ಕಃ ಕಥಂ ವಾ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?”
12170002 ಭೀಷ್ಮ ಉವಾಚ।
12170002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12170002c ಶಮ್ಯಾಕೇನ ವಿಮುಕ್ತೇನ2 ಗೀತಂ ಶಾಂತಿಗತೇನ ಹ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ.
12170003a ಅಬ್ರವೀನ್ಮಾಂ ಪುರಾ ಕಶ್ಚಿದ್ಬ್ರಾಹ್ಮಣಸ್ತ್ಯಾಗಮಾಸ್ಥಿತಃ।
12170003c ಕ್ಲಿಶ್ಯಮಾನಃ ಕುದಾರೇಣ ಕುಚೈಲೇನ ಬುಭುಕ್ಷಯಾ।।
ಹಿಂದೊಮ್ಮೆ ಕುಪತ್ನಿ ಮತ್ತು ಹಸಿವೆಯಿಂದ ಅತ್ಯಂತ ಕಷ್ಟವನ್ನು ಅನುಭವಿಸುತ್ತಿದ್ದ, ಹಳೆಯ ಹರಿದ ವಸ್ತ್ರಗಳನ್ನುಟ್ಟಿದ್ದ ತ್ಯಾಗೀ ಬ್ರಾಹ್ಮಣನೋರ್ವನು ನನ್ನ ಬಳಿಬಂದು ಹೇಳಿದನು:
12170004a ಉತ್ಪನ್ನಮಿಹ ಲೋಕೇ ವೈ ಜನ್ಮಪ್ರಭೃತಿ ಮಾನವಮ್।
12170004c ವಿವಿಧಾನ್ಯುಪವರ್ತಂತೇ ದುಃಖಾನಿ ಚ ಸುಖಾನಿ ಚ।।
“ಈ ಲೋಕದಲ್ಲಿ ಹುಟ್ಟಿದ ಮನುಷ್ಯನಿಗೆ ಹುಟ್ಟಿದಾಗಿನಿಂದ ವಿವಿಧ ಸುಖ ದುಃಖಗಳು ಒಂದರ ನಂತರ ಇನ್ನೊಂದು ಪ್ರಾಪ್ತವಾಗುತ್ತಲೇ ಇರುತ್ತವೆ.
12170005a ತಯೋರೇಕತರೇ ಮಾರ್ಗೇ ಯದ್ಯೇನಮಭಿಸಂನಯೇತ್।
12170005c ನ ಸುಖಂ ಪ್ರಾಪ್ಯ ಸಂಹೃಷ್ಯೇನ್ನ ದುಃಖಂ ಪ್ರಾಪ್ಯ ಸಂಜ್ವರೇತ್।।
ಒಂದು ವೇಳೆ ವಿಧಾತನು ಅವರನ್ನು ಒಂದೇ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದರೆ ಕೇವಲ ಸುಖವನ್ನು ಪಡೆದವನು ಹರ್ಷಿತನಾಗುತ್ತಿರಲಿಲ್ಲ ಮತ್ತು ಕೇವಲ ದುಃಖವನ್ನು ಪಡೆದವನು ಪರಿತಪಿಸುತ್ತಿರಲಿಲ್ಲ.
12170006a ನ ವೈ ಚರಸಿ ಯಚ್ಚ್ರೇಯ ಆತ್ಮನೋ ವಾ ಯದೀಹಸೇ।
12170006c ಅಕಾಮಾತ್ಮಾಪಿ ಹಿ ಸದಾ ಧುರಮುದ್ಯಮ್ಯ ಚೈವ ಹಿ।।
ನೀನು ಕಾಮನಾರಹಿತನಾಗಿದ್ದರೂ ಆತ್ಮಕಲ್ಯಾಣ ಸಾಧಕ ಕಾರ್ಯಗಳನ್ನು ಮಾಡುತ್ತಿಲ್ಲ ಮತ್ತು ನಿನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿಲ್ಲ. ಏಕೆಂದರೆ ನೀನು ರಾಜ್ಯಭಾರದ ಸಂಪೂರ್ಣ ಹೊಣೆಯನ್ನು ಹೊತ್ತಿಕೊಂಡಿರುವೆ.
12170007a ಅಕಿಂಚನಃ ಪರಿಪತನ್ಸುಖಮಾಸ್ವಾದಯಿಷ್ಯಸಿ।
12170007c ಅಕಿಂಚನಃ ಸುಖಂ ಶೇತೇ ಸಮುತ್ತಿಷ್ಠತಿ ಚೈವ ಹಿ।।
ನಿನ್ನಲ್ಲಿರುವ ಎಲ್ಲವನ್ನೂ ತ್ಯಜಿಸಿ ಅಕಿಂಚನನಾದರೆ ನೀನು ನಿಶ್ಚಿಂತೆಯಿಂದ ಎಲ್ಲಕಡೆ ತಿರುಗುತ್ತಾ ಸುಖವನ್ನು ಅನುಭವಿಸುತ್ತೀಯೆ. ಅಕಿಂಚನನ ಬಳಿ ಏನೂ ಇರುವುದಿಲ್ಲದಿರುವುದರಿಂದಲೇ ಅವನು ಸುಖವಾಗಿ ನಿದ್ರಿಸುತ್ತಾನೆ ಮತ್ತು ಸುಖವಾಗಿ ಎಚ್ಚರಗೊಳ್ಳುತ್ತಾನೆ.
12170008a ಆಕಿಂಚನ್ಯಂ ಸುಖಂ ಲೋಕೇ ಪಥ್ಯಂ ಶಿವಮನಾಮಯಮ್।
12170008c ಅನಮಿತ್ರಮಥೋ ಹ್ಯೇತದ್ದುರ್ಲಭಂ ಸುಲಭಂ ಸತಾಮ್3।।
ಲೋಕದಲ್ಲಿ ಏನೂ ಇಲ್ಲದೇ ಇರುವುದು ಸುಖಕರವಾದುದು, ಹಿತಕರವಾದುದು ಮತ್ತು ಕಲ್ಯಾಣಕರವಾದುದು. ಇದು ಶತ್ರುಗಳಿಲ್ಲದಿರುವಂಥಹುದು. ಇದು ದುರ್ಲಭವಾದುದು ಮತ್ತು ಸತ್ಪುರುಷರಿಗೇ ಸಾಧ್ಯವಾಗುವಂಥಹುದು.
12170009a ಅಕಿಂಚನಸ್ಯ ಶುದ್ಧಸ್ಯ ಉಪಪನ್ನಸ್ಯ ಸರ್ವಶಃ।
12170009c ಅವೇಕ್ಷಮಾಣಸ್ತ್ರೀಽಲ್ಲೋಕಾನ್ನ ತುಲ್ಯಮುಪಲಕ್ಷಯೇ।।
ಮೂರು ಲೋಕಗಳಲ್ಲಿ ನೋಡಿದರೂ ನಾನು ಶುದ್ಧ, ವೈರಾಗ್ಯ ಸಂಪನ್ನ ಅಕಿಂಚನನ ಸಮಾನ ಪುರುಷನನ್ನು ಇದೂವರೆಗೂ ಕಂಡಿಲ್ಲ.
12170010a ಆಕಿಂಚನ್ಯಂ ಚ ರಾಜ್ಯಂ ಚ ತುಲಯಾ ಸಮತೋಲಯಮ್।
12170010c ಅತ್ಯರಿಚ್ಯತ ದಾರಿದ್ರ್ಯಂ ರಾಜ್ಯಾದಪಿ ಗುಣಾಧಿಕಮ್।।
ಅಕಿಂಚನನನ್ನೂ ರಾಜ್ಯವನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ ರಾಜ್ಯಕ್ಕಿಂತ ಅಕಿಂಚನನ ಭಾರವೇ ಹೆಚ್ಚಾಗಿರುತ್ತದೆ.
12170011a ಆಕಿಂಚನ್ಯೇ ಚ ರಾಜ್ಯೇ ಚ ವಿಶೇಷಃ ಸುಮಹಾನಯಮ್।
12170011c ನಿತ್ಯೋದ್ವಿಗ್ನೋ ಹಿ ಧನವಾನ್ಮೃತ್ಯೋರಾಸ್ಯಗತೋ ಯಥಾ।।
ಅಕಿಂಚನನಿಗೂ ರಾಜ್ಯಕ್ಕೂ ಇರುವ ವಿಶೇಷವಾದ ಒಂದು ಅಂತರವೆಂದರೆ – ಧನವಂತನು ಮೃತ್ಯುವಿನ ಬಾಯಲ್ಲಿ ಬಿದ್ದವನಂತೆ ಸದಾ ಉದ್ವಿಗ್ನನಾಗಿಯೇ ಇರುತ್ತಾನೆ.
12170012a ನೈವಾಸ್ಯಾಗ್ನಿರ್ನ ಚಾದಿತ್ಯೋ ನ ಮೃತ್ಯುರ್ನ ಚ ದಸ್ಯವಃ।
12170012c ಪ್ರಭವಂತಿ ಧನಜ್ಯಾನಿನಿರ್ಮುಕ್ತಸ್ಯ ನಿರಾಶಿಷಃ।।
ಆದರೆ ಧನವನ್ನು ತ್ಯಜಿಸಿ ಧನಸಂಗ್ರಹಣೆಯ ಆಸಕ್ತಿಯಿಂದ ವಿಮುಕ್ತನಾಗಿರುವ ಮತ್ತು ಮನಸ್ಸಿನಲ್ಲಿ ಯಾವವಿಧದ ಕಾಮನೆಗಳನ್ನೂ ಇಟ್ಟುಕೊಂಡಿರದವನಿಗೆ ಅಗ್ನಿಯಿಂದಲೂ ಭಯವಿಲ್ಲ, ಅಶುಭಗಳೂ ಇಲ್ಲ, ಮೃತ್ಯುವಿನ ಭಯವೂ ಇಲ್ಲ ಮತ್ತು ಕಳ್ಳರ ಭಯವೂ ಇಲ್ಲ.
12170013a ತಂ ವೈ ಸದಾ ಕಾಮಚರಮನುಪಸ್ತೀರ್ಣಶಾಯಿನಮ್।
12170013c ಬಾಹೂಪಧಾನಂ ಶಾಮ್ಯಂತಂ ಪ್ರಶಂಸಂತಿ ದಿವೌಕಸಃ।।
ಸ್ವೇಚ್ಛೆಯಿಂದ ಸಂಚರಿಸುತ್ತಿರುವ, ಹಾಸಲು ಯಾವುದೇ ಹಚ್ಚಡವಾಗಲೀ ಹೊದೆಯಲು ಹೊದಿಕೆಯಾಗಲೀ ಇಲ್ಲದೇ ತೋಳುಗಳನ್ನೇ ತಲೆದಿಂಬನ್ನಾಗಿಟ್ಟುಕೊಂಡು ನೆಲದ ಮೇಲೆ ಮಲಗುವ ಶಾಂತಸ್ವಭಾವದ ಮನುಷ್ಯನನ್ನು ದೇವತೆಗಳೂ ಪ್ರಶಂಸಿಸುತ್ತಾರೆ.
12170014a ಧನವಾನ್ ಕ್ರೋಧಲೋಭಾಭ್ಯಾಮಾವಿಷ್ಟೋ ನಷ್ಟಚೇತನಃ।
12170014c ತಿರ್ಯಗೀಕ್ಷಃ ಶುಷ್ಕಮುಖಃ ಪಾಪಕೋ ಭ್ರುಕುಟೀಮುಖಃ।।
ಧನವಂತನು ಕ್ರೋಧ-ಲೋಭಗಳಿಂದ ಆವಿಷ್ಟನಾಗಿ ಬುದ್ಧಿಗೆಟ್ಟಿರುತ್ತಾನೆ. ಯಾವಾಗಲೂ ಕುಟಿಲದೃಷ್ಟಿಯಿಂದಲೇ ಇತರರನ್ನು ನೋಡುತ್ತಿರುತ್ತಾನೆ ಮತ್ತು ಅವನ ಮುಖವು ಯಾವಾಗಲೂ ಬಾಡಿಯೇ ಇರುತ್ತದೆ. ಪಾಪಕಾರ್ಯಗಳಲ್ಲಿ ಮಗ್ನನಾದ ಅವನು ಹುಬ್ಬುಗಳನ್ನು ಗಂಟಿಕ್ಕಿಕೊಂಡಿರುತ್ತಾನೆ.
12170015a ನಿರ್ದಶಂಶ್ಚಾಧರೋಷ್ಠಂ ಚ ಕ್ರುದ್ಧೋ ದಾರುಣಭಾಷಿತಾ।
12170015c ಕಸ್ತಮಿಚ್ಚೇತ್ಪರಿದ್ರಷ್ಟುಂ ದಾತುಮಿಚ್ಚತಿ ಚೇನ್ಮಹೀಮ್।।
ಕ್ರುದ್ಧನಾದ ಅಂತಹ ಧನವಂತನು ಯಾವಾಗಲೂ ಕೆಳತುಟಿಯನ್ನು ಕಡಿಯುತ್ತಿರುತ್ತಾನೆ. ಕಠೋರವಾಗಿ ಮಾತನಾಡುತ್ತಾನೆ. ಅಂಥವನು ಇಡೀ ಭೂಮಿಯನ್ನೇ ದಾನವಾಗಿ ಕೊಡಲು ಬಂದರೂ ಯಾರು ತಾನೇ ಅವನನ್ನು ನೋಡಲು ಇಚ್ಛಿಸುತ್ತಾರೆ?
12170016a ಶ್ರಿಯಾ ಹ್ಯಭೀಕ್ಷ್ಣಂ ಸಂವಾಸೋ ಮೋಹಯತ್ಯವಿಚಕ್ಷಣಮ್।
12170016c ಸಾ ತಸ್ಯ ಚಿತ್ತಂ ಹರತಿ ಶಾರದಾಭ್ರಮಿವಾನಿಲಃ।।
ಧನಸಂಪತ್ತಿಯ ನಿರಂತರ ಸಹವಾಸವು ಮೂರ್ಖನನ್ನು ಮೋಹಗೊಳಿಸುತ್ತದೆ. ಗಾಳಿಯು ಶರತ್ಕಾಲದ ಮೇಘಗಳನ್ನು ಚದುರಿಸಿಕೊಂಡು ಹೋಗುವಂತೆ ಅಪಾರ ಸಂಪತ್ತಿಯು ಮೂರ್ಖನ ಬುದ್ಧಿಯನ್ನು ಅಪಹರಿಸಿಬಿಡುತ್ತದೆ.
12170017a ಅಥೈನಂ ರೂಪಮಾನಶ್ಚ ಧನಮಾನಶ್ಚ ವಿಂದತಿ।
12170017c ಅಭಿಜಾತೋಽಸ್ಮಿ ಸಿದ್ಧೋಽಸ್ಮಿ ನಾಸ್ಮಿ ಕೇವಲಮಾನುಷಃ।
12170017e ಇತ್ಯೇಭಿಃ ಕಾರಣೈಸ್ತಸ್ಯ ತ್ರಿಭಿಶ್ಚಿತ್ತಂ ಪ್ರಸಿಚ್ಯತೇ।।
ಆಗ ಅವನನ್ನು ರೂಪ ಮತ್ತು ಧನದ ಅಭಿಮಾನಗಳು ಆವರಿಸುತ್ತವೆ. ಉತ್ತಮ ಕುಲದಲ್ಲಿ ಹುಟ್ಟಿದ್ದೇನೆ, ಸಾಧಿಸಿದವನಾಗಿದ್ದೇನೆ, ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಕಾರಣಗಳಿಂದ ಅವನ ಮನಸ್ಸು ಎಚ್ಚರತಪ್ಪುತ್ತದೆ.
12170018a ಸ ಪ್ರಸಿಕ್ತಮನಾ ಭೋಗಾನ್ವಿಸೃಜ್ಯ ಪಿತೃಸಂಚಿತಾನ್।
12170018c ಪರಿಕ್ಷೀಣಃ ಪರಸ್ವಾನಾಮಾದಾನಂ ಸಾಧು ಮನ್ಯತೇ।।
ಭೋಗಾಸಕ್ತನಾಗಿ ದುಂದುವೆಚ್ಚಮಾಡುತ್ತಾ ಪಿತ್ರಾರ್ಜಿತ ಸಂಪತ್ತನ್ನು ಕಳೆದುಕೊಂಡು ದರಿದ್ರನಾಗಿ ಇತರರ ಸ್ವತ್ತನ್ನು ಅಪಹರಿಸುವುದೇ ಯೋಗ್ಯವೆಂದು ಭಾವಿಸುತ್ತಾನೆ.
12170019a ತಮತಿಕ್ರಾಂತಮರ್ಯಾದಮಾದದಾನಂ ತತಸ್ತತಃ।
12170019c ಪ್ರತಿಷೇಧಂತಿ ರಾಜಾನೋ ಲುಬ್ಧಾ ಮೃಗಮಿವೇಷುಭಿಃ।।
ಹೀಗೆ ಲೋಕಮರ್ಯಾದೆಯನ್ನೂ ಅತಿಕ್ರಮಿಸಿ ಅಲ್ಲಲ್ಲಿ ಕಳ್ಳತನ ಮಾಡಿ ಧನಸಂಪಾದನೆಯನ್ನು ಪ್ರಾರಂಭಿಸುವ ಮನುಷ್ಯನನ್ನು ಬೇಡರು ಜಿಂಕೆಯನ್ನು ಬಾಣಗಳಿಂದ ಪ್ರಹರಿಸುವಂತೆ ರಾಜರು ದಂಡನೆಗಳಿಂದ ತಡೆಯುತ್ತಾರೆ.
12170020a ಏವಮೇತಾನಿ ದುಃಖಾನಿ ತಾನಿ ತಾನೀಹ ಮಾನವಮ್।
12170020c ವಿವಿಧಾನ್ಯುಪವರ್ತಂತೇ ಗಾತ್ರಸಂಸ್ಪರ್ಶಜಾನಿ ಚ।।
ಹೀಗೆ ಮನಸ್ಸಿಗೆ ಪರಿತಾಪವನ್ನುಂಟುಮಾಡುವ ಮತ್ತು ಶರೀರಕ್ಕೂ ಘಾಸಿಯಾಗುವಂತೆ ಮಾಡುವ ವಿವಿಧ ದುಃಖಗಳು ಮನುಷ್ಯನಿಗಾಗುತ್ತವೆ.
12170021a ತೇಷಾಂ ಪರಮದುಃಖಾನಾಂ ಬುದ್ಧ್ಯಾ ಭೈಷಜ್ಯಮಾಚರೇತ್।
12170021c ಲೋಕಧರ್ಮಂ ಸಮಾಜ್ಞಾಯ4 ಧ್ರುವಾಣಾಮಧ್ರುವೈಃ ಸಹ।।
ಅನಿತ್ಯವಾದ ಶರೀರದೊಡನೆ ಸೇರಿಬಂದಿರುವ ಆ ಪರಮದುಃಖಗಳಿಗೆ ಲೋಕಧರ್ಮವನ್ನು ತಿಳಿದುಕೊಂಡು ಬುದ್ಧಿಯ ಮೂಲಕ ಶಾಶ್ವತ ಚಿಕಿತ್ಸೆಯನ್ನು ನಡೆಸಬೇಕು.
12170022a ನಾತ್ಯಕ್ತ್ವಾ ಸುಖಮಾಪ್ನೋತಿ ನಾತ್ಯಕ್ತ್ವಾ ವಿಂದತೇ ಪರಮ್।
12170022c ನಾತ್ಯಕ್ತ್ವಾ ಚಾಭಯಃ ಶೇತೇ ತ್ಯಕ್ತ್ವಾ ಸರ್ವಂ ಸುಖೀ ಭವ।।
ತ್ಯಾಗಮಾಡದೇ ಸುಖವನ್ನು ಹೊಂದುವುದಿಲ್ಲ. ತ್ಯಾಗಮಾಡದೇ ಪರಮ ಪದವನ್ನು ಪಡೆಯುವುದಿಲ್ಲ. ತ್ಯಾಗಮಾಡದೇ ಅಭಯನಾಗಿ ನಿದ್ರಿಸುವುದಿಲ್ಲ. ಆದುದರಿಂದ ಎಲ್ಲವನ್ನೂ ತ್ಯಜಿಸಿ ಸುಖಿಯಾಗಿರು.”
12170023a ಇತ್ಯೇತದ್ಧಾಸ್ತಿನಪುರೇ ಬ್ರಾಹ್ಮಣೇನೋಪವರ್ಣಿತಮ್।
12170023c ಶಮ್ಯಾಕೇನ ಪುರಾ ಮಹ್ಯಂ ತಸ್ಮಾತ್ತ್ಯಾಗಃ ಪರೋ ಮತಃ।।
ಹಿಂದೆ ನಾನು ಹಸ್ತಿನಾಪುರದಲ್ಲಿದ್ದಾಗ ಬ್ರಾಹ್ಮಣ ಶಮ್ಯಾಕನು ನನಗೆ ತ್ಯಾಗದ ಮಹಿಮೆಯನ್ನು ಹೀಗೆ ಹೇಳಿದ್ದನು. ಆದುದರಿಂದ ತ್ಯಾಗವೇ ಪರಮಶ್ರೇಷ್ಠವೆಂಬ ಮತವಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಮ್ಯಾಕಗೀತಾಯಾಂ ಸಪ್ತತ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಮ್ಯಾಕಗೀತಾ ಎನ್ನುವ ನೂರಾಎಪ್ಪತ್ತನೇ ಅಧ್ಯಾಯವು.