ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 168
ಸಾರ
ಶೋಕಾಕುಲ ಚಿತ್ತದ ಶಾಂತಿಗಾಗಿ ರಾಜಾ ಸೇನಜಿತ್ ಮತ್ತು ಬ್ರಾಹ್ಮಣ ಸಂವಾದದಲ್ಲಿ ಪಿಂಗಲಗೀತೆ (1-53).
12168001 1ಯುಧಿಷ್ಠಿರ ಉವಾಚ। 12168001a ಧರ್ಮಾಃ ಪಿತಾಮಹೇನೋಕ್ತಾ ರಾಜಧರ್ಮಾಶ್ರಿತಾಃ ಶುಭಾಃ।
12168001c ಧರ್ಮಮಾಶ್ರಮಿಣಾಂ ಶ್ರೇಷ್ಠಂ ವಕ್ತುಮರ್ಹಸಿ ಪಾರ್ಥಿವ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಪಾರ್ಥಿವ! ಇದೂವರೆಗೆ ನೀನು ರಾಜಧರ್ಮವನ್ನು ಆಶ್ರಯಿಸಿದವರ ಶುಭ ಧರ್ಮಗಳ ಕುರಿತು ಹೇಳಿದೆ. ಈಗ ಆಶ್ರಮಿಗಳ ಶ್ರೇಷ್ಠ ಧರ್ಮದ ಕುರಿತು ಹೇಳಬೇಕು.”
12168002 ಭೀಷ್ಮ ಉವಾಚ।
12168002a ಸರ್ವತ್ರ ವಿಹಿತೋ ಧರ್ಮಃ ಸ್ವರ್ಗ್ಯಃ ಸತ್ಯಫಲಂ ತಪಃ।
12168002c ಬಹುದ್ವಾರಸ್ಯ ಧರ್ಮಸ್ಯ ನೇಹಾಸ್ತಿ ವಿಫಲಾ ಕ್ರಿಯಾ।।
ಭೀಷ್ಮನು ಹೇಳಿದನು: “ಸರ್ವತ್ರ ಸ್ವರ್ಗಸಂಬಂಧೀ ಸತ್ಯಫಲವನ್ನು ನೀಡುವ ತಪಸ್ಸಿನ ಉಲ್ಲೇಖವಿದೆ. ಧರ್ಮಕ್ಕೆ ಅನೇಕ ದ್ವಾರಗಳಿವೆ. ಇಲ್ಲಿ ಯಾವ ಕ್ರಿಯೆಗಳೂ ವಿಫಲವಾಗುವುದಿಲ್ಲ.
12168003a ಯಸ್ಮಿನ್ಯಸ್ಮಿಂಸ್ತು ವಿನಯೇ2 ಯೋ ಯೋ ಯಾತಿ ವಿನಿಶ್ಚಯಮ್।
12168003c ಸ ತಮೇವಾಭಿಜಾನಾತಿ ನಾನ್ಯಂ ಭರತಸತ್ತಮ।।
ಭರತಸತ್ತಮ! ಯಾರ್ಯಾರು ಯಾವ್ಯಾವ ವಿಷಯಗಳ ಕುರಿತು ಪೂರ್ಣ ನಿಶ್ಚಯವನ್ನು ಪಡೆದಿರುತ್ತಾರೋ ಅವನ್ನೇ ಅವರು ಕರ್ತವ್ಯಗಳೆಂದು ತಿಳಿಯುತ್ತಾರೆ. ಅನ್ಯವನ್ನು ಕರ್ತ್ಯವ್ಯಗಳೆಂದು ತಿಳಿಯುವುದಿಲ್ಲ.
12168004a ಯಥಾ ಯಥಾ ಚ ಪರ್ಯೇತಿ ಲೋಕತಂತ್ರಮಸಾರವತ್।
12168004c ತಥಾ ತಥಾ ವಿರಾಗೋಽತ್ರ ಜಾಯತೇ ನಾತ್ರ ಸಂಶಯಃ।।
ಸಂಸಾರದ ವಿಷಯಗಳು ಸಾರಹೀನವೆಂದು ಅರಿತುಕೊಂಡು ಬಂದಂತೆ ವೈರಾಗ್ಯವು ಹುಟ್ಟಿಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
12168005a ಏವಂ ವ್ಯವಸಿತೇ ಲೋಕೇ ಬಹುದೋಷೇ ಯುಧಿಷ್ಠಿರ।
12168005c ಆತ್ಮಮೋಕ್ಷನಿಮಿತ್ತಂ ವೈ ಯತೇತ ಮತಿಮಾನ್ನರಃ।।
ಯುಧಿಷ್ಠಿರ! ಹೀಗೆ ಈ ಲೋಕದಲ್ಲಿ ಅನೇಕ ದೋಷಗಳಿವೆ ಎಂದು ತಿಳಿದುಕೊಂಡು ಮನುಷ್ಯನು ತನ್ನ ಮೋಕ್ಷಕ್ಕೆ ಪ್ರಯತ್ನಿಸಬೇಕು.”
12168006 ಯುಧಿಷ್ಠಿರ ಉವಾಚ।
12168006a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ।
12168006c ಯಯಾ ಬುದ್ಧ್ಯಾ ನುದೇಚ್ಚೋಕಂ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನನಷ್ಟವಾದಾಗ ಅಥವಾ ಪತ್ನಿ, ಪುತ್ರ ಅಥವಾ ತಂದೆಯ ಮೃತ್ಯುವಾದಾಗ ಯಾವ ಬುದ್ಧಿಯಿಂದ ಮನುಷ್ಯನು ತನ್ನ ಶೋಕವನ್ನು ನಿವಾರಿಸಿಕೊಳ್ಳಬೇಕು. ಅದರ ಕುರಿತು ನನಗೆ ಹೇಳು.”
12168007 ಭೀಷ್ಮ ಉವಾಚ।
12168007a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ।
12168007c ಅಹೋ ದುಃಖಮಿತಿ ಧ್ಯಾಯನ್ ಶೋಕಸ್ಯಾಪಚಿತಿಂ ಚರೇತ್।।
ಭೀಷ್ಮನು ಹೇಳಿದನು: “ಧನವು ನಷ್ಟವಾದರೆ ಅಥವಾ ಪತ್ನಿ, ಪುತ್ರ ಅಥವಾ ತಂದೆಯು ಮೃತರಾದರೆ “ಅಯ್ಯೋ ದುಃಖವೇ!” ಎಂದು ಯೋಚಿಸಿ ಶೋಕವನ್ನು ದೂರಗೊಳಿಸುವಂಥದ್ದನ್ನು ಮಾಡಬೇಕು.
12168008a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12168008c ಯಥಾ ಸೇನಜಿತಂ ವಿಪ್ರಃ ಕಶ್ಚಿದಿತ್ಯಬ್ರವೀದ್ವಚಃ।।
ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಓರ್ವ ವಿಪ್ರನು ಸೇನಜಿತನಿಗೆ ಹೇಳಿದುದನ್ನು ಉದಾಹರಿಸುತ್ತಾರೆ.
12168009a ಪುತ್ರಶೋಕಾಭಿಸಂತಪ್ತಂ ರಾಜಾನಂ ಶೋಕವಿಹ್ವಲಮ್।
12168009c ವಿಷಣ್ಣವದನಂ ದೃಷ್ಟ್ವಾ ವಿಪ್ರೋ ವಚನಮಬ್ರವೀತ್।।
ಪುತ್ರಶೋಕಾಭಿಸಂತಪ್ತನಾದ ಮತ್ತು ಶೋಕವಿಹ್ವಲನಾದ ಹಾಗೂ ವಿಷಣ್ಣವದನನಾಗಿದ್ದ ರಾಜನನ್ನು ನೋಡಿ ವಿಪ್ರನು ಈ ಮಾತನ್ನಾಡಿದನು:
12168010a ಕಿಂ ನು ಖಲ್ವಸಿ ಮೂಢಸ್ತ್ವಂ3 ಶೋಚ್ಯಃ ಕಿಮನುಶೋಚಸಿ।
12168010c ಯದಾ ತ್ವಾಮಪಿ ಶೋಚಂತಃ ಶೋಚ್ಯಾ ಯಾಸ್ಯಂತಿ ತಾಂ ಗತಿಮ್।।
“ನೀನು ಮೂಢನಲ್ಲವೇ? ನೀನೇ ಶೋಚನೀಯನಾಗಿರುವಾಗ ಯಾರಿಗಾಗಿ ಶೋಕಿಸುತ್ತಿರುವೆ? ಮುಂದೆ ಒಂದು ದಿನ ಇನ್ನೊಬ್ಬ ಶೋಚನೀಯ ಮನುಷ್ಯನು ನಿನಗೋಸ್ಕರವಾಗಿ ಶೋಕಿಸುತ್ತಾ ಇದೇ ಗತಿಯನ್ನು ಹೊಂದುತ್ತಾನೆ.
12168011a ತ್ವಂ ಚೈವಾಹಂ ಚ ಯೇ ಚಾನ್ಯೇ ತ್ವಾಂ ರಾಜನ್ಪರ್ಯುಪಾಸತೇ।
12168011c ಸರ್ವೇ ತತ್ರ ಗಮಿಷ್ಯಾಮೋ ಯತ ಏವಾಗತಾ ವಯಮ್।।
ರಾಜನ್! ನಾನು, ನೀನು ಮತ್ತು ನಿನ್ನ ಬಳಿ ಇಲ್ಲಿ ಕುಳಿತಿರುವ ಎಲ್ಲರೂ ಎಲ್ಲಿಂದ ನಾವೆಲ್ಲರೂ ಬಂದಿದ್ದೇವೋ ಅಲ್ಲಿಗೇ ಹೋಗುತ್ತೇವೆ.”
12168012 ಸೇನಜಿದುವಾಚ।
12168012a ಕಾ ಬುದ್ಧಿಃ ಕಿಂ ತಪೋ ವಿಪ್ರ ಕಃ ಸಮಾಧಿಸ್ತಪೋಧನ।
12168012c ಕಿಂ ಜ್ಞಾನಂ ಕಿಂ ಶ್ರುತಂ ವಾ ತೇ ಯತ್ಪ್ರಾಪ್ಯ ನ ವಿಷೀದಸಿ4।।
ಸೇನಜಿತುವು ಹೇಳಿದನು: “ತಪೋಧನ! ವಿಪ್ರ! ನಿನ್ನಲ್ಲಿ ಯಾವ ಬುದ್ಧಿಯಿದೆ ಅಥವಾ ತಪಸ್ಸಿದೆ ಅಥವಾ ಸಮಾಧಿ ಅಥವಾ ಶಾಸ್ತ್ರಜ್ಞಾನವಿದೆ ಎಂದು ನಿನಗೆ ಯಾವುದೇ ತರಹದ ವಿಷಾದವೂ ಆಗುತ್ತಿಲ್ಲ?”
12168013 ಬ್ರಾಹ್ಮಣ ಉವಾಚ।
12168013a ಪಶ್ಯ ಭೂತಾನಿ ದುಃಖೇನ ವ್ಯತಿಷಕ್ತಾನಿ ಸರ್ವಶಃ। 12168013c 5ಆತ್ಮಾಪಿ ಚಾಯಂ ನ ಮಮ ಸರ್ವಾ ವಾ ಪೃಥಿವೀ ಮಮ।।
ಬ್ರಾಹ್ಮಣನು ಹೇಳಿದನು: “ನೋಡು! ಈ ಪೃಥ್ವಿಯಲ್ಲಿ ಎಲ್ಲ ಭೂತಗಳೂ ದುಃಖಗ್ರಸ್ತರಾಗುತ್ತಿರುವುದನ್ನು ನೋಡು. ಈ ಶರೀರವೂ ನನ್ನದಲ್ಲ ಅಥವಾ ಇಡೀ ಪೃಥ್ವಿಯೂ ನನ್ನದಲ್ಲ.
12168014a ಯಥಾ ಮಮ ತಥಾನ್ಯೇಷಾಮಿತಿ ಬುದ್ಧ್ಯಾ ನ ಮೇ ವ್ಯಥಾ।
12168014c ಏತಾಂ ಬುದ್ಧಿಮಹಂ ಪ್ರಾಪ್ಯ ನ ಪ್ರಹೃಷ್ಯೇ ನ ಚ ವ್ಯಥೇ।।
ಈ ಎಲ್ಲ ವಸ್ತುಗಳು ನನ್ನವು ಹೇಗೋ ಹಾಗೆ ಇತರರಿಗೂ ಸೇರಿವೆ. ಹೀಗೆ ಯೋಚಿಸಿದರೆ ಇವುಗಳಿಗಾಗಿ ನನ್ನ ಮನಸ್ಸಿನಲ್ಲಿ ಯಾವ ವ್ಯಥೆಯೂ ಉಂಟಾಗುವುದಿಲ್ಲ. ಇದೇ ವಿಚಾರದಿಂದ ನನಗೆ ಹರ್ಷವಾಗುತ್ತದೆಯೇ ಹೊರತು ಶೋಕವಾಗುವುದಿಲ್ಲ.
12168015a ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ।
12168015c ಸಮೇತ್ಯ ಚ ವ್ಯಪೇಯಾತಾಂ ತದ್ವದ್ ಭೂತಸಮಾಗಮಃ।।
ಸಮುದ್ರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಮತ್ತೆ ಬೇರಾಗುವುದೋ ಹಾಗೆ ಈ ಲೋಕದಲ್ಲಿ ಪ್ರಾಣಿಗಳ ಸಮಾಗಮವು ನಡೆಯುತ್ತಿರುತ್ತದೆ.
12168016a ಏವಂ ಪುತ್ರಾಶ್ಚ ಪೌತ್ರಾಶ್ಚ ಜ್ಞಾತಯೋ ಬಾಂಧವಾಸ್ತಥಾ।
12168016c ತೇಷು ಸ್ನೇಹೋ ನ ಕರ್ತವ್ಯೋ ವಿಪ್ರಯೋಗೋ ಹಿ ತೈರ್ಧ್ರುವಮ್।।
ಹೀಗೆಯೇ ಪುತ್ರರು, ಪೌತ್ರರು, ಜ್ಞಾತಿ-ಬಾಂಧವರು ಸಿಗುತ್ತಾರೆ. ಅವರ ಕುರಿತು ಎಂದೂ ಹೆಚ್ಚಿನ ಆಸಕ್ತಿಯನ್ನು ತೋರಿಸಬಾರದು. ಏಕೆಂದರೆ ಒಂದು ದಿನ ಅವರು ಬಿಟ್ಟುಹೋಗುವುದು ನಿಶ್ಚಿತವಾಗಿದೆ.
12168017a ಅದರ್ಶನಾದಾಪತಿತಃ ಪುನಶ್ಚಾದರ್ಶನಂ ಗತಃ।
12168017c ನ ತ್ವಾಸೌ ವೇದ ನ ತ್ವಂ ತಂ ಕಃ ಸನ್ಕಮನುಶೋಚಸಿ।।
ನಿನ್ನ ಮಗನು ಕಾಣದಲ್ಲಿಂದ ಬಂದಿದ್ದನು ಮತ್ತು ಪುನಃ ಕಾಣದಲ್ಲಿಗೇ ಹೋಗಿದ್ದಾನೆ. ಅವನು ನಿನಗೆ ಪರಿಚಿತನಾಗಿರಲಿಲ್ಲ ಮತ್ತು ನೀನು ಅವನಿಗೆ ಪರಿಚಿತನಾಗಿರಲಿಲ್ಲ. ಆದರೂ ನೀನು ಅವನಿಗೆ ಏನೆಂದು ಶೋಕಿಸುತ್ತಿರುವೆ?
12168018a ತೃಷ್ಣಾರ್ತಿಪ್ರಭವಂ ದುಃಖಂ ದುಃಖಾರ್ತಿಪ್ರಭವಂ ಸುಖಮ್।
12168018c ಸುಖಾತ್ಸಂಜಾಯತೇ ದುಃಖಮೇವಮೇತತ್ಪುನಃ ಪುನಃ।
12168018e ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್6।।
ತೃಷ್ಣೆಯಿಂದ ದುಃಖವು ಹುಟ್ಟುತ್ತದೆ ಮತ್ತು ದುಃಖದ ನಾಶವೇ ಸುಖವು. ಸುಖದ ನಂತರ ದುಃಖವು ಹುಟ್ಟುತ್ತದೆ. ಹೀಗೆ ಪುನಃ ಪುನಃ ದುಃಖವೇ ಆಗುತ್ತಿರುತ್ತದೆ. ಸುಖದ ನಂತರ ದುಃಖವುಂಟಾಗುತ್ತದೆ ಮತ್ತು ದುಃಖದ ನಂತರ ಸುಖವುಂಟಾಗುತ್ತದೆ.
12168019a ಸುಖಾತ್ತ್ವಂ ದುಃಖಮಾಪನ್ನಃ ಪುನರಾಪತ್ಸ್ಯಸೇ ಸುಖಮ್।
12168019c ನ ನಿತ್ಯಂ ಲಭತೇ ದುಃಖಂ ನ ನಿತ್ಯಂ ಲಭತೇ ಸುಖಮ್।।
ಈಗ ನೀನು ಸುಖದಿಂದ ದುಃಖವನ್ನು ಪಡೆದುಕೊಂಡಿದ್ದೀಯೆ. ಪುನಃ ನಿನಗೆ ಸುಖವುಂಟಾಗುತ್ತದೆ. ಇಲ್ಲಿ ಯಾರಿಗೂ ನಿತ್ಯವೂ ದುಃಖವು ದೊರೆಯುವುದಿಲ್ಲ ಮತ್ತು ನಿತ್ಯ ಸುಖವೂ ದೊರೆಯುವುದಿಲ್ಲ.
12168020a 7ನಾಲಂ ಸುಖಾಯ ಸುಹೃದೋ ನಾಲಂ ದುಃಖಾಯ ಶತ್ರವಃ। 12168020c ನ ಚ ಪ್ರಜ್ಞಾಲಮರ್ಥಾನಾಂ ನ ಸುಖಾನಾಮಲಂ ಧನಮ್।।
ಸುಹೃದನು ಸುಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಶತ್ರುವು ದುಃಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಬುದ್ಧಿಯಲ್ಲಿ ಧನವನ್ನು ನೀಡುವ ಶಕ್ತಿಯಿರುವುದಿಲ್ಲ ಮತ್ತು ಧನಕ್ಕೆ ಸುಖವನ್ನು ನೀಡುವ ಶಕ್ತಿಯಿರುವುದಿಲ್ಲ.
12168021a ನ ಬುದ್ಧಿರ್ಧನಲಾಭಾಯ ನ ಜಾಡ್ಯಮಸಮೃದ್ಧಯೇ।
12168021c ಲೋಕಪರ್ಯಾಯವೃತ್ತಾಂತಂ ಪ್ರಾಜ್ಞೋ ಜಾನಾತಿ ನೇತರಃ।।
ಬುದ್ಧಿಯು ಧನಲಾಭಕ್ಕೆ ಕಾರಣವಲ್ಲ ಮತ್ತು ಮೂರ್ಖತನವು ಬಡತನಕ್ಕೆ ಕಾರಣವಲ್ಲ. ವಾಸ್ತವವಾಗಿ ಸಂಸಾರಚಕ್ರದ ಗತಿಯ ವೃತ್ತಾಂತವನ್ನು ಪ್ರಾಜ್ಞನು ಮಾತ್ರ ತಿಳಿದಿರುತ್ತಾನೆ. ಇತರರಿಗೆ ಇದು ತಿಳಿಯುವುದಿಲ್ಲ.
12168022a ಬುದ್ಧಿಮಂತಂ ಚ ಮೂಢಂ ಚ ಶೂರಂ ಭೀರುಂ ಜಡಂ ಕವಿಮ್।
12168022c ದುರ್ಬಲಂ ಬಲವಂತಂ ಚ ಭಾಗಿನಂ ಭಜತೇ ಸುಖಮ್।।
ಬುದ್ಧಿವಂತನಾಗಿರಲಿ, ಮೂಢನಾಗಿರಲಿ, ಶೂರನಾಗಿರಲಿ, ಹೇಡಿಯಾಗಿರಲಿ, ಮೂರ್ಖನಾಗಿರಲಿ, ಕವಿಯಾಗಿರಲಿ, ದುರ್ಬಲನಾಗಿರಲಿ ಮತ್ತು ಬಲವಂತನಾಗಿರಲಿ – ದೈವವು ಯಾರಿಗೆ ಅನುಕೂಲವಾಗಿರುವುದೋ ಅವರಿಗೆ ಪ್ರಯತ್ನವಿಲ್ಲದೇ ಸುಖವು ಪ್ರಾಪ್ತವಾಗುತ್ತದೆ.
12168023a ಧೇನುರ್ವತ್ಸಸ್ಯ ಗೋಪಸ್ಯ ಸ್ವಾಮಿನಸ್ತಸ್ಕರಸ್ಯ ಚ।
12168023c ಪಯಃ ಪಿಬತಿ ಯಸ್ತಸ್ಯಾ ಧೇನುಸ್ತಸ್ಯೇತಿ ನಿಶ್ಚಯಃ।।
ಹಾಲುನೀಡುವ ಹಸುವು ಅದರ ಕರುವಿನದ್ದೋ? ಅಥವಾ ಅದರ ಹಾಲುಕರೆಯುವವನದ್ದೋ? ಅದರ ಮಾಲೀಕನದ್ದೋ? ಅದನ್ನು ಕದ್ದುಕೊಂಡು ಹೋದವನದ್ದೋ? ವಾಸ್ತವವಾಗಿ ಯಾರು ಅದರ ಹಾಲನ್ನು ಕುಡಿಯುತ್ತಾನೋ ಹಸುವು ಅವನದಾಗುತ್ತದೆ ಎಂದು ವಿದ್ವಾಂಸರ ನಿಶ್ಚಯವು.
12168024a ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ।
12168024c ತೇ ನರಾಃ ಸುಖಮೇಧಂತೇ ಕ್ಲಿಶ್ಯತ್ಯಂತರಿತೋ ಜನಃ।।
ಈ ಲೋಕದಲ್ಲಿ ಅತ್ಯಂತ ಮೂಢನಾಗಿರುವವನು ಮತ್ತು ಅತ್ಯಂತ ಬುದ್ಧಿವಂತನಾಗಿರುವವನು ಇವರಿಬ್ಬರೇ ಸುಖವನ್ನು ಅನುಭವಿಸುತ್ತಾರೆ. ಮಧ್ಯದಲ್ಲಿರುವ ಜನರು ಕಷ್ಟವನ್ನೇ ಅನುಭವಿಸುತ್ತಾರೆ.
12168025a ಅಂತ್ಯೇಷು ರೇಮಿರೇ ಧೀರಾ ನ ತೇ ಮಧ್ಯೇಷು ರೇಮಿರೇ।
12168025c ಅಂತ್ಯಪ್ರಾಪ್ತಿಂ ಸುಖಾಮಾಹುರ್ದುಃಖಮಂತರಮಂತಯೋಃ।।
ಜ್ಞಾನಿಗಳು ಅಂತ್ಯದಲ್ಲಿ ರಮಿಸುತ್ತಾರೆ. ಮಧ್ಯದಲ್ಲಿ ರಮಿಸುವುದಿಲ್ಲ. ಅಂತ್ಯಪ್ರಾಪ್ತಿಯು ಸುಖವೆಂದು ಹೇಳುತ್ತಾರೆ ಮತ್ತು ಆದಿ ಮತ್ತು ಅಂತ್ಯಗಳ ಮಧ್ಯವು ದುಃಖರೂಪವೆಂದು ಹೇಳುತ್ತಾರೆ.
12168026a 8ಯೇ ತು ಬುದ್ಧಿಸುಖಂ ಪ್ರಾಪ್ತಾ ದ್ವಂದ್ವಾತೀತಾ ವಿಮತ್ಸರಾಃ। 12168026c ತಾನ್ನೈವಾರ್ಥಾ ನ ಚಾನರ್ಥಾ ವ್ಯಥಯಂತಿ ಕದಾ ಚನ।।
ಆದರೆ ದ್ವಂದ್ವಾತೀತರಾದ ಮತ್ತು ವಿಮತ್ಸರರಾದವರಿಗೆ ಜ್ಞಾನಜನಿತ ಸುಖವು ಪ್ರಾಪ್ತವಾಗುತ್ತದೆ. ಅಂಥವರನ್ನು ಅರ್ಥ ಮತ್ತು ಅನರ್ಥ ಎರಡೂ ಎಂದೂ ಪೀಡಿಸುವುದಿಲ್ಲ.
12168027a ಅಥ ಯೇ ಬುದ್ಧಿಮಪ್ರಾಪ್ತಾ ವ್ಯತಿಕ್ರಾಂತಾಶ್ಚ ಮೂಢತಾಮ್।
12168027c ತೇಽತಿವೇಲಂ ಪ್ರಹೃಷ್ಯಂತಿ ಸಂತಾಪಮುಪಯಾಂತಿ ಚ।।
ಮೂಢತೆಯನ್ನು ದಾಟಿರುವ ಆದರೆ ಇನ್ನೂ ಜ್ಞಾನವನ್ನು ಪಡೆದುಕೊಂಡಿರದ ಜನರು ಸುಖದ ಪರಿಸ್ಥಿತಿ ಬಂದಾಗ ಅತ್ಯಂತ ಹರ್ಷದಿಂದ ಬೀಗುತ್ತಾರೆ ಮತ್ತು ದುಃಖದ ಪರಿಸ್ಥಿತಿ ಬಂದಾಗ ಅತಿಶಯ ಸಂತಾಪವನ್ನು ಅನುಭವಿಸುತ್ತಾರೆ.
12168028a ನಿತ್ಯಪ್ರಮುದಿತಾ ಮೂಢಾ ದಿವಿ ದೇವಗಣಾ ಇವ।
12168028c ಅವಲೇಪೇನ ಮಹತಾ ಪರಿದೃಬ್ಧಾ9 ವಿಚೇತಸಃ।।
ಮೂಢರು ಸ್ವರ್ಗದಲ್ಲಿರುವ ದೇವತೆಗಳಂತೆ ಸದಾ ವಿಷಯಸುಖದಲ್ಲಿ ಮಗ್ನರಾಗಿರುತ್ತಾರೆ. ಏಕೆಂದರೆ ಅವರ ಚಿತ್ತವು ವಿಷಯಾಸಕ್ತಿಯ ಕೆಸರನ್ನು ಲೇಪಿಸಿಕೊಂಡು ಮಹಾ ಮೋಹಿತಗೊಂಡಿರುತ್ತದೆ.
12168029a ಸುಖಂ ದುಃಖಾಂತಮಾಲಸ್ಯಂ ದುಃಖಂ ದಾಕ್ಷ್ಯಂ ಸುಖೋದಯಮ್।
12168029c ಭೂತಿಶ್ಚೈವ ಶ್ರಿಯಾ ಸಾರ್ಧಂ ದಕ್ಷೇ ವಸತಿ ನಾಲಸೇ।।
ಮೊದಮೊದಲು ಆಲಸ್ಯವು ಸುಖವೆಂದೆನಿಸುತ್ತದೆ. ಆದರೆ ಅದು ಅಂತ್ಯದಲ್ಲಿ ದುಃಖದಾಯಿಯಾಗುತ್ತದೆ. ಕಾರ್ಯಕೌಶಲವು ದುಃಖಕರವೆಂದು ತೋರುತ್ತದೆ ಆದರೆ ಅದು ಸುಖವನ್ನು ನೀಡುತ್ತದೆ. ಕಾರ್ಯಕುಶಲ ಪುರುಷನಲ್ಲಿಯೇ ಲಕ್ಷ್ಮೀಸಹಿತ ಐಶ್ವರ್ಯವು ನಿವಾಸಿಸುತ್ತದೆ; ಆಲಸಿಯಲ್ಲಲ್ಲ.
12168030a ಸುಖಂ ವಾ ಯದಿ ವಾ ದುಃಖಂ ದ್ವೇಷ್ಯಂ ವಾ ಯದಿ ವಾ ಪ್ರಿಯಮ್।
12168030c ಪ್ರಾಪ್ತಂ ಪ್ರಾಪ್ತಮುಪಾಸೀತ ಹೃದಯೇನಾಪರಾಜಿತಃ।।
ಆದುದರಿಂದ ಸುಖವಾಗಲೀ, ದುಃಖವಾಗಲೀ, ಪ್ರಿಯವಾಗಲೀ, ಅಪ್ರಿಯವಾದುದಾಗಲೀ, ಯಾವುದು ಪ್ರಾಪ್ತವಾಗುತ್ತದೆಯೋ ಅದನ್ನು ಬುದ್ಧಿವಂತನು ಹೃದಯಪೂರ್ವಕವಾಗಿ ಸ್ವಾಗತಿಸಬೇಕು. ಎಂದೂ ಸೋಲಬಾರದು.
12168031a ಶೋಕಸ್ಥಾನಸಹಸ್ರಾಣಿ ಹರ್ಷಸ್ಥಾನಶತಾನಿ10 ಚ।
12168031c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್11।।
ಶೋಕದ ಸಾವಿರಾರು ಸ್ಥಾನಗಳಿವೆ ಮತ್ತು ಹರ್ಷದ ನೂರಾರು ಸ್ಥಾನಗಳಿವೆ. ಆದರೆ ಅವು ಪ್ರತಿದಿನವೂ ಮೂರ್ಖರ ಮೇಲೆ ಪ್ರಭಾವ ಬೀರುತ್ತವೆಯೇ ಹೊರತು ಜ್ಞಾನಿಯ ಮೇಲಲ್ಲ.
12168032a ಬುದ್ಧಿಮಂತಂ ಕೃತಪ್ರಜ್ಞಂ ಶುಶ್ರೂಷುಮನಸೂಯಕಮ್।
12168032c ದಾಂತಂ ಜಿತೇಂದ್ರಿಯಂ ಚಾಪಿ ಶೋಕೋ ನ ಸ್ಪೃಶತೇ ನರಮ್।।
ಬುದ್ಧಿವಂತ, ಕೃತಪ್ರಜ್ಞ, ಕೇಳುವ, ಅನಸೂಯಕ, ದಾಂತ, ಮತ್ತು ಜಿತೇಂದ್ರಿಯ ನರನನ್ನು ಶೋಕವು ಮುಟ್ಟುವುದೂ ಇಲ್ಲ.
12168033a ಏತಾಂ ಬುದ್ಧಿಂ ಸಮಾಸ್ಥಾಯ ಗುಪ್ತಚಿತ್ತಶ್ಚರೇದ್ಬುಧಃ।
12168033c ಉದಯಾಸ್ತಮಯಜ್ಞಂ ಹಿ ನ ಶೋಕಃ ಸ್ಪ್ರಷ್ಟುಮರ್ಹತಿ।।
ವಿದ್ವಾಂಸನು ಇದೇ ಬುದ್ಧಿಯನ್ನು ಆಶ್ರಯಿಸಿ ಕಾಮ-ಕ್ರೋಧಾದಿ ಶತ್ರುಗಳಿಂದ ಚಿತ್ತವನ್ನು ರಕ್ಷಿಸಿಕೊಂಡು ವರ್ತಿಸಬೇಕು. ಉತ್ಪತ್ತಿ ಮತ್ತು ವಿನಾಶಗಳನ್ನು ತತ್ತ್ವತಃ ತಿಳಿದುಕೊಂಡವನನ್ನು ಶೋಕವು ಮುಟ್ಟುವುದಿಲ್ಲ.
12168034a ಯನ್ನಿಮಿತ್ತಂ ಭವೇಚ್ಚೋಕಸ್ತ್ರಾಸೋ12 ವಾ ದುಃಖಮೇವ ವಾ।
12168034c ಆಯಾಸೋ ವಾ ಯತೋಮೂಲಸ್ತದೇಕಾಂಗಮಪಿ ತ್ಯಜೇತ್।।
ಯಾವುದರಿಂದ ಶೋಕ, ಸಂಕಟ ಅಥವಾ ದುಃಖವುಂಟಾಗುವುದೋ ಅಥವಾ ಆಯಾಸವಾಗುವುದೋ ಅದರ ಮೂಲವು ದೇಹದ ಒಂದು ಅಂಗವೇ ಆಗಿದ್ದರೂ ಅದನ್ನು ತ್ಯಜಿಸಬೇಕು.
12168035a ಯದ್ಯತ್ತ್ಯಜತಿ ಕಾಮಾನಾಂ ತತ್ಸುಖಸ್ಯಾಭಿಪೂರ್ಯತೇ।
12168035c ಕಾಮಾನುಸಾರೀ ಪುರುಷಃ ಕಾಮಾನನು ವಿನಶ್ಯತಿ।।
ಯಾವ ಯಾವ ಕಾಮನೆಗಳನ್ನು ತ್ಯಜಿಸುತ್ತೇವೋ ಅವೇ ಸುಖವನ್ನು ನೀಡುವಂಥಹುದಾಗುತ್ತವೆ. ಕಾಮನೆಗಳನ್ನು ಅನುಸರಿಸಿ ಹೋಗುವ ಪುರುಷನು ಕಾಮನೆಗಳೊಂದಿಗೆ ನಾಶಹೊಂದುತ್ತಾನೆ.
12168036a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್।
12168036c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್।।
ಈ ಲೋಕದಲ್ಲಾಗುವ ಕಾಮ ಸುಖ ಮತ್ತು ಸ್ವರ್ಗಲೋಕದಲ್ಲಿ ದೊರೆಯುವ ಮಹಾ ಸುಖ ಇವುಗಳು ತೃಷ್ಣಾಕ್ಷಯದ ಸುಖದ ಹದಿನಾರನೇ ಒಂದು ಭಾಗಕ್ಕೂ ಹೋಲುವುದಿಲ್ಲ.
12168037a ಪೂರ್ವದೇಹಕೃತಂ ಕರ್ಮ ಶುಭಂ ವಾ ಯದಿ ವಾಶುಭಮ್।
12168037c ಪ್ರಾಜ್ಞಂ ಮೂಢಂ ತಥಾ ಶೂರಂ ಭಜತೇ ಯಾದೃಶಂ ಕೃತಮ್।।
ಮನುಷ್ಯನು ಪ್ರಾಜ್ಞನಾಗಿರಲಿ, ಮೂಢನಾಗಿರಲಿ ಅಥವಾ ಶೂರನಾಗಿರಲಿ ಹಿಂದಿನ ಜನ್ಮದಲ್ಲಿ ಮಾಡಿದ ಶುಭಾಶುಭಕರ್ಮಗಳ ಫಲವನ್ನು ಆ ಕರ್ಮಗಳಿಗೆ ತಕ್ಕಂತೆ ಅನುಭವಿಸಲೇ ಬೇಕಾಗುತ್ತದೆ.
12168038a ಏವಮೇವ ಕಿಲೈತಾನಿ ಪ್ರಿಯಾಣ್ಯೇವಾಪ್ರಿಯಾಣಿ ಚ।
12168038c ಜೀವೇಷು ಪರಿವರ್ತಂತೇ ದುಃಖಾನಿ ಚ ಸುಖಾನಿ ಚ।।
ಹೀಗೆ ಜೀವಿಗಳಿಗೆ ಪ್ರಿಯ-ಅಪ್ರಿಯ ಮತ್ತು ಸುಖ-ದುಃಖಗಳು ಮತ್ತೆ ಮತ್ತೆ ಕ್ರಮಬದ್ಧವಾಗಿ ಉಂಟಾಗುತ್ತಿರುತ್ತವೆ. ಇದರಲ್ಲಿ ಸಂದೇಹವೇ ಇಲ್ಲ.
12168039a ತದೇವಂ ಬುದ್ಧಿಮಾಸ್ಥಾಯ ಸುಖಂ ಜೀವೇದ್ಗುಣಾನ್ವಿತಃ।
12168039c ಸರ್ವಾನ್ಕಾಮಾನ್ಜುಗುಪ್ಸೇತ ಸಂಗಾನ್ಕುರ್ವೀತ ಪೃಷ್ಠತಃ।
12168039e ವೃತ್ತ ಏಷ ಹೃದಿ ಪ್ರೌಢೋ ಮೃತ್ಯುರೇಷ ಮನೋಮಯಃ13।।
ಇದೇ ಬುದ್ಧಿಯನ್ನು ಆಶ್ರಯಿಸಿದವನು ಗುಣಾನ್ವಿತನಾಗಿ ಸುಖದಿಂದ ಜೀವಿಸುತ್ತಾನೆ. ಆದುದರಿಂದ ಸರ್ವ ಕಾಮನೆಯಗಳನ್ನೂ ಜುಗುಪ್ಸೆಯಿಂದ ನೋಡಿ ಅದಕ್ಕೆ ಬೆನ್ನು ತೋರಿಸಬೇಕು. ಹೃದಯದಲ್ಲಿ ಉತ್ಪನ್ನವಾದ ಕಾಮನೆಗಳು ಹೃದಯದಲ್ಲಿಯೇ ಪುಷ್ಟಿಗೊಂಡು ಅದೇ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಮೃತ್ಯುವಾಗುತ್ತದೆ.
12168040a ಯದಾ ಸಂಹರತೇ ಕಾಮಾನ್ಕೂರ್ಮೋಽಂಗಾನೀವ ಸರ್ವಶಃ।
12168040c ತದಾತ್ಮಜ್ಯೋತಿರಾತ್ಮಾ ಚ ಆತ್ಮನ್ಯೇವ ಪ್ರಸೀದತಿ।।
ಆಮೆಯು ಹೇಗೆ ತನ್ನ ಅಂಗಾಗಳನ್ನು ಎಲ್ಲ ಕಡೆಗಳಿಂದ ಒಳಗೆ ಸೆಳೆದುಕೊಳ್ಳುತ್ತದೆಯೋ ಹಾಗೆ ಈ ಜೀವವು ತನ್ನ ಎಲ್ಲ ಕಾಮನೆಗಳನ್ನೂ ಸಂಕೋಚಗೊಳಿಸಿಕೊಂಡಾಗ ತನ್ನ ವಿಶುದ್ಧ ಅಂತಃಕರಣದಲ್ಲಿಯೇ ಸ್ವಯಂ ಪ್ರಕಾಶಿತವಾದ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತದೆ.
12168041a ಕಿಂ ಚಿದೇವ ಮಮತ್ವೇನ ಯದಾ ಭವತಿ ಕಲ್ಪಿತಮ್।
12168041c ತದೇವ ಪರಿತಾಪಾರ್ಥಂ ಸರ್ವಂ ಸಂಪದ್ಯತೇ ತದಾ।।
ಯಾವುದೇ ವಿಷಯದಲ್ಲಿ ಮಮತ್ವವನ್ನು ಕಲ್ಪಿಸಿಕೊಂಡಾಗ ಮನುಷ್ಯನೇ ಆ ವಿಷಯಕ್ಕೆ ಸಮಾನವಾದ ದುಃಖಕ್ಕೆ ಕಾರಣನಾಗುತ್ತಾನೆ.
12168042a ನ ಬಿಭೇತಿ ಯದಾ ಚಾಯಂ ಯದಾ ಚಾಸ್ಮಾನ್ನ ಬಿಭ್ಯತಿ।
12168042c ಯದಾ ನೇಚ್ಚತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ।।
ಯಾವಾಗ ಮನುಷ್ಯನಿಗೆ ಯಾರೊಡನೆಯೂ ಭಯವಿಲ್ಲವೋ ಅಥವಾ ಯಾರೂ ಅವನಿಗೆ ಹೆದರುವುದಿಲ್ಲವೋ, ಯಾವಾಗ ಅವನು ಯಾವುದನ್ನೂ ಬಯಸುವುದಿಲ್ಲವೋ ಮತ್ತು ಯಾರನ್ನೂ ದ್ವೇಷಿಸುವುದಿಲ್ಲವೋ ಆಗ ಅವನು ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ.
12168043a ಉಭೇ ಸತ್ಯಾನೃತೇ ತ್ಯಕ್ತ್ವಾ ಶೋಕಾನಂದೌ ಭಯಾಭಯೇ।
12168043c ಪ್ರಿಯಾಪ್ರಿಯೇ ಪರಿತ್ಯಜ್ಯ ಪ್ರಶಾಂತಾತ್ಮಾ ಭವಿಷ್ಯಸಿ।।
ಸತ್ಯ-ಅಸತ್ಯ, ಶೋಕ-ಆನಂದ, ಭಯ-ಅಭಯ ಮತ್ತು ಪ್ರಿಯ-ಅಪ್ರಿಯವಾದವುಗಳನ್ನು ಪರಿತ್ಯಜಿದವನು ಪ್ರಶಾಂತಾತ್ಮನಾಗುತ್ತಾನೆ.
12168044a ಯದಾ ನ ಕುರುತೇ ಧೀರಃ ಸರ್ವಭೂತೇಷು ಪಾಪಕಮ್।
12168044c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ।।
ಯಾವ ಧೀರನು ಸರ್ವಭೂತಗಳಿಗೂ ಮನಸಾ-ವಾಚಾ ಮತ್ತು ಕರ್ಮಣಾ ಪಾಪವನ್ನೆಸಗುವುದಿಲ್ಲವೋ ಅವನು ಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ.
12168045a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ।
12168045c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್।।
ದುರ್ಮತಿಗಳಿಗೆ ತ್ಯಜಿಸಲು ಕಷ್ಟಸಾಧ್ಯವಾದ, ಶರೀರವು ಜೀರ್ಣವಾದರೂ ಜೀರ್ಣವಾಗದ, ಮತ್ತು ಪ್ರಾಣಾಂತಿಕ ರೋಗದಂತಿರುವ ತೃಷ್ಣೆಯನ್ನು ತ್ಯಜಿಸುವವನಿಗೆ ಸುಖವುಂಟಾಗುತ್ತದೆ.
12168046a ಅತ್ರ ಪಿಂಗಲಯಾ ಗೀತಾ ಗಾಥಾಃ ಶ್ರೂಯಂತಿ ಪಾರ್ಥಿವ।
12168046c ಯಥಾ ಸಾ ಕೃಚ್ಚ್ರಕಾಲೇಽಪಿ ಲೇಭೇ ಧರ್ಮಂ ಸನಾತನಮ್।।
ಪಾರ್ಥಿವ! ಈ ವಿಷಯದಲ್ಲಿ ಪಿಂಗಲೆಯು ಹಾಡಿದ್ದ ಗಾಥೆಗಳು ಕೇಳಿಬರುತ್ತವೆ. ಇದನ್ನು ಅನುಸರಿಸಿ ಅವಳು ಸಂಕಟಕಾಲದಲ್ಲಿಯೂ ಸನಾತನ ಧರ್ಮವನ್ನು ಪಡೆದುಕೊಂಡಿದ್ದಳು.
12168047a ಸಂಕೇತೇ ಪಿಂಗಲಾ ವೇಶ್ಯಾ ಕಾಂತೇನಾಸೀದ್ವಿನಾಕೃತಾ।
12168047c ಅಥ ಕೃಚ್ಚ್ರಗತಾ ಶಾಂತಾಂ ಬುದ್ಧಿಮಾಸ್ಥಾಪಯತ್ತದಾ।।
ಒಮ್ಮೆ ವೇಶ್ಯಾ ಪಿಂಗಲೆಯು ಬಹಳ ಹೊತ್ತು ಸಂಕೇತಿಸಿದ ಸ್ಥಾನದಲ್ಲಿ ಕುಳಿತುಕೊಂಡಿದ್ದರೂ ಅವಳ ಪ್ರಿಯತಮನು ಅವಳ ಬಳಿ ಬರಲಿಲ್ಲ. ಆಗ ಸಂಕಟದಲ್ಲಿದ್ದರೂ ಶಾಂತಳಾಗಿದ್ದುಕೊಂಡು ಅವಳು ಹೀಗೆ ಯೋಚಿಸತೊಡಗಿದಳು:
12168048 ಪಿಂಗಲೋವಾಚ।
12168048a ಉನ್ಮತ್ತಾಹಮನುನ್ಮತ್ತಂ ಕಾಂತಮನ್ವವಸಂ ಚಿರಮ್।
12168048c ಅಂತಿಕೇ ರಮಣಂ ಸಂತಂ ನೈನಮಧ್ಯಗಮಂ ಪುರಾ।।
ಪಿಂಗಲೆಯು ಹೇಳಿದಳು: “ನನ್ನ ನಿಜವಾದ ಪ್ರಿಯತಮನು ದೀರ್ಘಕಾಲದಿಂದ ನನ್ನ ಹತ್ತಿರವೇ ಇದ್ದಾನೆ. ಸದಾ ನಾನು ಅವನ ಜೊತೆಯೇ ಇದ್ದೇನೆ. ಅವನು ಎಂದೂ ಉನ್ಮತ್ತನಾಗುವುದಿಲ್ಲ. ಆದರೆ ನಾನು ಎಷ್ಟು ಉನ್ಮತ್ತಳಾಗಿದ್ದೇನೆಂದರೆ ಇದಕ್ಕೂ ಮೊದಲು ಅವನನ್ನು ನಾನು ಗುರುತಿಸಲೇ ಇಲ್ಲ!
12168049a ಏಕಸ್ಥೂಣಂ ನವದ್ವಾರಮಪಿಧಾಸ್ಯಾಮ್ಯಗಾರಕಮ್।
12168049c ಕಾ ಹಿ ಕಾಂತಮಿಹಾಯಾಂತಮಯಂ ಕಾಂತೇತಿ ಮಂಸ್ಯತೇ।।
ಒಂದೇ ಕಂಭವಿರುವ ಮತ್ತು ಒಂಭತ್ತು ದ್ವಾರಗಳಿರುವ ಈ ಶರೀರವೆಂಬ ಮನೆಯನ್ನು ಇಂದಿನಿಂದ ಇತರರಿಗೆ ಮುಚ್ಚಿಬಿಡುತ್ತೇನೆ. ಇಲ್ಲಿಗೆ ಬಂದಿರುವ ಆ ಸತ್ಯ ಪ್ರಿಯತಮನನ್ನು ತಿಳಿದೂ ಕೂಡ ಯಾವ ನಾರಿಯು ಬೇರೆ ಯಾವುದೋ ಎಲುಬು-ಮಾಂಸಗಳ ಗೊಂಬೆಯನ್ನು ತನ್ನ ಪ್ರಾಣವಲ್ಲಭನೆಂದು ಸ್ವೀಕರಿಸಿಯಾಳು?
12168050a ಅಕಾಮಾಃ ಕಾಮರೂಪೇಣ ಧೂರ್ತಾ ನರಕರೂಪಿಣಃ।
12168050c ನ ಪುನರ್ವಂಚಯಿಷ್ಯಂತಿ ಪ್ರತಿಬುದ್ಧಾಸ್ಮಿ ಜಾಗೃಮಿ।।
ಈಗ ನಾನು ಮೋಹನಿದ್ರೆಯಿಂದ ಎಚ್ಚೆತ್ತಿದ್ದೇನೆ ಮತ್ತು ನಿರಂತರವಾಗಿ ಎಚ್ಚೆತ್ತೇ ಇರುತ್ತೇನೆ. ಕಾಮನೆಗಳನ್ನೂ ತ್ಯಜಿಸಿದ್ದೇನೆ. ಆದುದರಿಂದ ಆ ನರಕರೂಪೀ ಧೂರ್ತ ಮನುಷ್ಯರು ಕಾಮದ ರೂಪವನ್ನು ಧರಿಸಿ ಇನ್ನು ನನಗೆ ಮೋಸಮಾಡಲಾರರು.
12168051a ಅನರ್ಥೋಽಪಿ ಭವತ್ಯರ್ಥೋ ದೈವಾತ್ಪೂರ್ವಕೃತೇನ ವಾ।
12168051c ಸಂಬುದ್ಧಾಹಂ ನಿರಾಕಾರಾ ನಾಹಮದ್ಯಾಜಿತೇಂದ್ರಿಯಾ।।
ಭಾಗ್ಯದಿಂದ ಅಥವಾ ಪೂರ್ವಕೃತ ಶುಭಕರ್ಮಗಳ ಪ್ರಭಾವದಿಂದ ಒಮ್ಮೊಮ್ಮೆ ಅನರ್ಥವೂ ಅರ್ಥರೂಪವಾಗುತ್ತದೆ. ನಿರಾಶಳಾದ ನಾನು ಇಂದು ಉತ್ತಮ ಜ್ಞಾನವನ್ನು ಪಡೆದುಕೊಂಡಿದ್ದೇನೆ. ಇಂದು ನಾನು ಅಜಿತೇಂದ್ರಿಯಳಾಗಿಲ್ಲ.
12168052a ಸುಖಂ ನಿರಾಶಃ ಸ್ವಪಿತಿ ನೈರಾಶ್ಯಂ ಪರಮಂ ಸುಖಮ್।
12168052c ಆಶಾಮನಾಶಾಂ ಕೃತ್ವಾ ಹಿ ಸುಖಂ ಸ್ವಪಿತಿ ಪಿಂಗಲಾ।।
ಆಶಯಗಳಿಲ್ಲದವನು ಸುಖವಾಗಿ ನಿದ್ರಿಸುತ್ತಾನೆ. ಆಶಯಗಳಿಲ್ಲದಿರುವುದೇ ಪರಮ ಸುಖವು. ಆಶಯಗಳನ್ನು ನಿರಾಶಯಗಳನ್ನಾಗಿ ಮಾಡಿಕೊಂಡು ಪಿಂಗಲೆಯು ಸುಖವಾಗಿ ನಿದ್ರಿಸುತ್ತಾಳೆ.”””
12168053 ಭೀಷ್ಮ ಉವಾಚ।
12168053a ಏತೈಶ್ಚಾನ್ಯೈಶ್ಚ ವಿಪ್ರಸ್ಯ ಹೇತುಮದ್ಭಿಃ ಪ್ರಭಾಷಿತೈಃ।
12168053c ಪರ್ಯವಸ್ಥಾಪಿತೋ ರಾಜಾ ಸೇನಜಿನ್ಮುಮುದೇ ಸುಖಮ್।।
ಭೀಷ್ಮನು ಹೇಳಿದನು: “ಬ್ರಾಹ್ಮಣನ ಈ ಮತ್ತು ಅನ್ಯ ಯುಕ್ತಿಯುಕ್ತ ಮಾತುಗಳಿಂದ ರಾಜಾ ಸೇತಜಿತುವಿನ ಚಿತ್ತವು ಸ್ಥಿರಗೊಂಡಿತು. ಅವನು ಶೋಕವನ್ನು ತ್ಯಜಿಸಿ ಸುಖಿಯಾದನು ಮತ್ತು ಪ್ರಸನ್ನನಾಗಿರತೊಡಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬ್ರಾಹ್ಮಣಸೇನಜಿತ್ಸಂವಾದಕಥನೇ ಅಷ್ಟಷಷ್ಟ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬ್ರಾಹ್ಮಣಸೇನಜಿತ್ಸಂವಾದಕಥನ ಎನ್ನುವ ನೂರಾಅರವತ್ತೆಂಟನೇ ಅಧ್ಯಾಯವು.-
ಸೇನಜಿತ್ ಮತ್ತು ಬ್ರಾಹ್ಮಣರ ಸಂವಾದವು ಈ ಮೊದಲು ಇದೇ ಶಾಂತಿಪರ್ವದ ಅಧ್ಯಾಯ 24ರಲ್ಲಿ ವ್ಯಾಸನು ಯುಧಿಷ್ಠಿರನಿಗೆ ಉಪದೇಶರೂಪದಲ್ಲಿ ಹೇಳಿದ್ದಿದೆ. ↩︎
-
ವಿಷಯೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಈ ಅನುವಾದದಲ್ಲಿ ವಿಷಯೇ ಎನ್ನುವುದನ್ನೇ ಸರಿಯೆಂದು ಪರಿಗಣಿಸಿದ್ದೇನೆ. ↩︎
-
ಕಿಂ ನು ಮುಹ್ಯಸಿ ಮೂಢಸ್ತ್ವಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಇದರ ನಂತರ ಇನ್ನೊಂದು ಅಧಿಕ ಶ್ಲೋಕವಿದೆ: ಹೃಷ್ಯಂತಮವಸೀದಂತಂ ಸುಖದುಃಖವಿಪರ್ಯಯೇ। ಆತ್ಮಾನಮನುಶೋಚಾಮಿ ಮಮೈಷ ಹೃದಿ ಸಂಸ್ಥಿತಃ।। (ಗೀತಾ ಪ್ರೆಸ್) ↩︎
-
ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಉತ್ತಮಾಧಮಮಧ್ಯಾನಿ ತೇಷು ತೇಷ್ವಿಹ ಕರ್ಮಸು। ಅಹಮೇಕೋ ನ ಮೇ ಕಶ್ಚಿನ್ನಾಹಮನ್ಯಸ್ಯ ಕಸ್ಯಚಿತ್। ನ ತಂ ಪಶ್ಯಾಮಿ ಯಸ್ಯಾಹಂ ತಂ ನ ಪಶ್ಯಾಮಿ ಯೋ ಮಮ।। (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸುಖದುಃಖೇ ಮನುಷ್ಯಾಣಾಂ ಚಕ್ರವತ್ ಪರಿವರ್ತತಃ।। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ೮ ಅಧಿಕ ಶ್ಲೋಕಗಳಿವೆ: ಶರೀರಮೇವಾಯತನಂ ಸುಖಸ್ಯ ದುಃಖಸ್ಯ ಚಾಪ್ಯಾಯತನಂ ಶರೀರಮ್। ಯದ್ಯಚ್ಛರೀರೇಣ ಕರೋತಿ ಕರ್ಮ ತೇನೈವ ದೇಹೀ ಸಮುಪಾಶ್ನುತೇ ತತ್।। ಜೀವಿತಂ ಚ ಶರೀರೇಣ ಜಾತ್ಯೈವ ಸಹ ಜಾಯತೇ। ಉಭೇ ಸಹ ವಿವರ್ತೇತೇ ಉಭೇ ಸಹ ವಿನಶ್ಯತ।। ಸ್ನೇಹಪಾಶೈರ್ಬಹುವಿಧೈರಾವಿಷ್ಟವಿಷಯಾ ಜನಾಃ। ಅಕೃತಾರ್ಥಾಶ್ಚ ಸೀದಂತೇ ಜಲೈಃ ಸೈಕತಸೇತವಃ।। ಸ್ನೇಹೇನ ತಿಲವತ್ಸರ್ವಂ ಸರ್ಗಚಕ್ರೇ ನಿಪೀಡ್ಯತೇ। ತಿಲಪೀಡೈರಿವಾಕ್ರಮ್ಯ ಕ್ಲೇಶೈರಜ್ಞಾನಸಂಭವೈಃ।। ಸಂಚಿನೋತ್ಯಶುಭಂ ಕರ್ಮ ಕಲತ್ರಾಪೇಕ್ಷಯಾ ನರಃ। ಏಕಃ ಕ್ಲೇಶಾನವಾಪ್ನೋತಿ ಪರತ್ರೇಹ ಚ ಮಾನವಃ।। ಪುತ್ರದಾರಕುಟುಂಬೇಷು ಪ್ರಸಕ್ತಾಃ ಸರ್ವಮಾನವಾಃ। ಶೋಕಪಂಕಾರ್ಣವೇ ಮಗ್ನಾ ಜೀರ್ಣಾ ವನಗಜಾ ಇವ।। ಪುತ್ರನಾಶೇ ವಿತ್ತನಾಶೇ ಜ್ಞಾತಿಸಂಬಂಧಿನಾಮಪಿ। ಪ್ರಾಪ್ಯತೇ ಸುಮಹದ್ದುಃಖಂ ದಾವಾಗ್ನಿಪ್ರತಿಮಂ ವಿಭೋ। ದೈವಾಯತ್ತಮಿದಂ ಸರ್ವಂ ಸುಖದುಃಖೇ ಭವಾಭವೌ।। ಅಸುಹೃತ್ಸಸುಹೃಚ್ಚಾಪಿ ಸಶತ್ರುರ್ಮಿತ್ರವಾನಪಿ। ಸಪ್ರಜ್ಞಃ ಪ್ರಜ್ಞಯಾ ಹೀನೋ ದೈವೇನ ಲಭತೇ ಸುಖಮ್।। (ಗೀತಾ ಪ್ರೆಸ್) ↩︎
-
ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠವೆಂದು ಈ ಒಂದು ಶ್ಲೋಕಾರ್ಧವಿದೆ: ಸುಖಂ ಸ್ವಪಿತಿ ದುರ್ಮೇಧಾಃ ಸ್ವಾನಿ ಕರ್ಮಾಣ್ಯಚಿಂತಯನ್। ಅವಿಜ್ಞಾನೇನ ಮಹತಾ ಕಂಬಲೇನೇವ ಸಂವೃತಃ।। (ಗೀತಾ ಪ್ರೆಸ್) ↩︎
-
ಪರಿಭೂತ್ಯಾ (ಗೀತಾ ಪ್ರೆಸ್). ↩︎
-
ಭಯಸ್ಥಾನಶತಾನಿ (ಗೀತಾ ಪ್ರೆಸ್). ↩︎
-
ಇದೇ ಶ್ಲೋಕವು ಮಹಾಭಾರತದಲ್ಲಿ ಇತರ ನಾಲ್ಕು ಕಡೆ ಬರುತ್ತದೆ: ಅರಣ್ಯಕ ಪರ್ವದ ಎರಡನೇ ಅಧ್ಯಾಯದಲ್ಲಿ, ಸ್ತ್ರೀಪರ್ವದ ಎರಡನೇ ಅಧ್ಯಾಯದಲ್ಲಿ ಮತ್ತು ಇದೇ ಶಾಂತಿಪರ್ವದ ಅಧ್ಯಾಯ ೨೬ರಲ್ಲಿ ಮತ್ತು ೩೧೭ನೇ ಅಧ್ಯಾಯದಲ್ಲಿ. ↩︎
-
ಭವೇಚ್ಛೋಕಸ್ತಾಪೋ (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಕ್ರೋಧೋ ನಾಮ ಶರೀರಸ್ಥೋ ದೇಹಿನಾಂ ಪ್ರೋಚ್ಯತೇ ಬುಧೈಃ। (ಗೀತಾ ಪ್ರೆಸ್). ↩︎