167: ಕೃತಘ್ನೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 167

ಸಾರ

ರಾಜಧರ್ಮ ಮತ್ತು ಗೌತಮರು ಪುನಃ ಜೀವಿತರಾಗುವುದು (1-24).

12167001 ಭೀಷ್ಮ ಉವಾಚ।
12167001a ತತಶ್ಚಿತಾಂ ಬಕಪತೇಃ ಕಾರಯಾಮಾಸ ರಾಕ್ಷಸಃ।
12167001c ರತ್ನೈರ್ಗಂಧೈಶ್ಚ ಬಹುಭಿರ್ವಸ್ತ್ರೈಶ್ಚ ಸಮಲಂಕೃತಾಮ್।।

ಭೀಷ್ಮನು ಹೇಳಿದನು: “ಅನಂತರ ವಿರೂಪಾಕ್ಷನು ಬಕರಾಜನಿಗೆ ಒಂದು ಚಿತೆಯನ್ನು ಸಿದ್ಧಗೊಳಿಸಿದನು. ಅದನ್ನು ಅನೇಕ ರತ್ನಗಳಿಂದ, ಸುಗಂಧಿತ ಚಂದನಗಳಿಂದ ಮತ್ತು ವಸ್ತ್ರಗಳಿಂದ ಅಲಂಕರಿಸಲಾಗಿತ್ತು.

12167002a ತತ್ರ ಪ್ರಜ್ವಾಲ್ಯ ನೃಪತೇ ಬಕರಾಜಂ ಪ್ರತಾಪವಾನ್।
12167002c ಪ್ರೇತಕಾರ್ಯಾಣಿ ವಿಧಿವದ್ರಾಕ್ಷಸೇಂದ್ರಶ್ಚಕಾರ ಹ।।

ನೃಪತೇ! ಅದರ ಮೇಲೆ ಬಕರಾಜನನ್ನಿಟ್ಟು ಚಿತೆಯನ್ನು ಪ್ರಜ್ವಲಿಸಿ ಪ್ರತಾಪವಾನ್ ರಾಕ್ಷಸೇಂದ್ರನು ವಿಧಿವತ್ತಾಗಿ ಅವನ ಪ್ರೇತಕಾರ್ಯಗಳನ್ನು ನಡೆಸಿದನು.

12167003a ತಸ್ಮಿನ್ಕಾಲೇಽಥ ಸುರಭಿರ್ದೇವೀ ದಾಕ್ಷಾಯಣೀ ಶುಭಾ।
12167003c ಉಪರಿಷ್ಟಾತ್ತತಸ್ತಸ್ಯ ಸಾ ಬಭೂವ ಪಯಸ್ವಿನೀ।।

ಆ ಸಮಯದಲ್ಲಿ ದಿವ್ಯ ಧೇನು ದಕ್ಷಕನ್ಯೆ ಸುರಭಿಯು ಅಲ್ಲಿಗೆ ಬಂದು ಆಕಾಶದಲ್ಲಿ ನೇರವಾಗಿ ಚಿತೆಯ ಮೇಲೆ ನಿಂತುಕೊಂಡಳು.

12167004a ತಸ್ಯಾ ವಕ್ತ್ರಾಚ್ಚ್ಯುತಃ ಫೇನಃ ಕ್ಷೀರಮಿಶ್ರಸ್ತದಾನಘ।
12167004c ಸೋಽಪತದ್ವೈ ತತಸ್ತಸ್ಯಾಂ ಚಿತಾಯಾಂ ರಾಜಧರ್ಮಣಃ।।

ಅವಳ ಮುಖದಿಂದ ಬಿದ್ದ ಧೂಮಮಿಶ್ರಿತ ಹಾಲಿನ ನೊರೆಯು ಕೆಳಗೆ ಬಿದ್ದು ರಾಜಧರ್ಮನ ಚಿತೆಯ ಮೇಲೆ ಬಿದ್ದಿತು.

12167005a ತತಃ ಸಂಜೀವಿತಸ್ತೇನ ಬಕರಾಜಸ್ತದಾನಘ।
12167005c ಉತ್ಪತ್ಯ ಚ ಸಮೇಯಾಯ ವಿರೂಪಾಕ್ಷಂ ಬಕಾಧಿಪಃ।।

ಅನಘ! ಅದರಿಂದ ಆಗ ಬಕರಾಜನು ಜೀವಿತಗೊಂಡು ಮೇಲೆದ್ದನು ಮತ್ತು ವಿರೂಪಾಕ್ಷನನ್ನು ಕೂಡಿದನು.

12167006a ತತೋಽಭ್ಯಯಾದ್ದೇವರಾಜೋ ವಿರೂಪಾಕ್ಷಪುರಂ ತದಾ।
12167006c ಪ್ರಾಹ ಚೇದಂ ವಿರೂಪಾಕ್ಷಂ ದಿಷ್ಟ್ಯಾಯಂ ಜೀವತೀತ್ಯುತ।।

ಆಗ ದೇವರಾಜ ಇಂದ್ರನು ವಿರೂಪಾಕ್ಷನ ಪುರಕ್ಕೆ ಬಂದನು ಮತ್ತು ವಿರೂಪಾಕ್ಷನಿಗೆ ಹೇಳಿದನು: “ಅದೃಷ್ಟವಶಾತ್ ನಿನ್ನಿಂದಾಗಿ ಬಕರಾಜನು ಜೀವಿತನಾದನು.”

12167007a ಶ್ರಾವಯಾಮಾಸ ಚೇಂದ್ರಸ್ತಂ ವಿರೂಪಾಕ್ಷಂ ಪುರಾತನಮ್।
12167007c ಯಥಾ ಶಾಪಃ ಪುರಾ ದತ್ತೋ ಬ್ರಹ್ಮಣಾ ರಾಜಧರ್ಮಣಃ।।

ಇಂದ್ರನು ಆಗ ವಿರೂಪಾಕ್ಷನಿಗೆ ಹಿಂದೆ ರಾಜಧರ್ಮನಿಗೆ ಬ್ರಹ್ಮನಿತ್ತಿದ್ದ ಶಾಪದ ಘಟನೆಯನ್ನು ಹೇಳಿದನು.

12167008a ಯದಾ ಬಕಪತೀ ರಾಜನ್ ಬ್ರಹ್ಮಾಣಂ ನೋಪಸರ್ಪತಿ।
12167008c ತತೋ ರೋಷಾದಿದಂ ಪ್ರಾಹ ಬಕೇಂದ್ರಾಯ ಪಿತಾಮಹಃ।।

ರಾಜನ್! ಒಮ್ಮೆ ಬಕರಾಜನು ಬ್ರಹ್ಮಸಭೆಯಲ್ಲಿ ಉಪಸ್ಥಿತನಾಗಿರಲಿಲ್ಲ. ಆಗ ಪಿತಾಮಹನು ರೋಷದಿಂದ ಬಕೇಂದ್ರನಿಗೆ ಹೀಗೆ ಹೇಳಿದ್ದನು:

12167009a ಯಸ್ಮಾನ್ಮೂಢೋ ಮಮ ಸದೋ ನಾಗತೋಽಸೌ ಬಕಾಧಮಃ।
12167009c ತಸ್ಮಾದ್ವಧಂ ಸ ದುಷ್ಟಾತ್ಮಾ ನಚಿರಾತ್ಸಮವಾಪ್ಸ್ಯತಿ।।

“ಆ ಮೂರ್ಖ ಬಕಾಧಮನು ನನ್ನ ಸಭೆಗೆ ಬರಲಿಲ್ಲ. ಆದುದರಿಂದ ಶೀಘ್ರವೇ ಆ ದುಷ್ಟಾತ್ಮನಿಗೆ ವಧೆಯ ಕಷ್ಟವನ್ನು ಅನುಭವಿಸಬೇಕಾಗುತ್ತದೆ!”

12167010a ತದಾಯಂ ತಸ್ಯ ವಚನಾನ್ನಿಹತೋ ಗೌತಮೇನ ವೈ।
12167010c ತೇನೈವಾಮೃತಸಿಕ್ತಶ್ಚ ಪುನಃ ಸಂಜೀವಿತೋ ಬಕಃ।।

ಬ್ರಹ್ಮನ ಆ ಮಾತಿನಂತೆಯೇ ಗೌತಮನು ಅವನನ್ನು ವಧಿಸಿದನು ಮತ್ತು ಬ್ರಹ್ಮನು ಪುನಃ ಅಮೃತವನ್ನು ಸಿಂಪಡಿಸಿ ರಾಜಧರ್ಮನಿಗೆ ಜೀವದಾನವನ್ನು ನೀಡಿದನು.

12167011a ರಾಜಧರ್ಮಾ ತತಃ ಪ್ರಾಹ ಪ್ರಣಿಪತ್ಯ ಪುರಂದರಮ್।
12167011c ಯದಿ ತೇಽನುಗ್ರಹಕೃತಾ ಮಯಿ ಬುದ್ಧಿಃ ಪುರಂದರ।
12167011e ಸಖಾಯಂ ಮೇ ಸುದಯಿತಂ ಗೌತಮಂ ಜೀವಯೇತ್ಯುತ।।

ಆಗ ರಾಜಧರ್ಮನು ಪುರಂದರನನ್ನು ನಮಸ್ಕರಿಸಿ ಹೇಳಿದನು: “ಪುರಂದರ! ನನ್ನಮೇಲೆ ಅನುಗ್ರಹವನ್ನು ಮಾಡುವ ಬುದ್ಧಿಯಿದ್ದರೆ ನನ್ನ ಪ್ರೀತಿಯ ಸಖ ಗೌತಮನು ಜೀವಿಸಲಿ!”

12167012a ತಸ್ಯ ವಾಕ್ಯಂ ಸಮಾಜ್ಞಾಯ ವಾಸವಃ ಪುರುಷರ್ಷಭ।
12167012c ಸಂಜೀವಯಿತ್ವಾ ಸಖ್ಯೇ ವೈ ಪ್ರಾದಾತ್ತಂ ಗೌತಮಂ ತದಾ।।

ಪುರುಷರ್ಷಭ! ಅವನ ಮಾತನ್ನು ತಿಳಿದ ವಾಸವನು ಗೌತಮನನ್ನು ಪುನಃ ಜೀವಗೊಳಿಸಿ ಸಖನಿಗಿತ್ತನು.

12167013a ಸಭಾಂಡೋಪಸ್ಕರಂ ರಾಜಂಸ್ತಮಾಸಾದ್ಯ ಬಕಾಧಿಪಃ।
12167013c ಸಂಪರಿಷ್ವಜ್ಯ ಸುಹೃದಂ ಪ್ರೀತ್ಯಾ ಪರಮಯಾ ಯುತಃ।।

ರಾಜನ್! ಪಾತ್ರೆಗಳು ಮತ್ತು ಸುವರ್ಣ ಮೊದಲಾದ ಎಲ್ಲ ಸಾಮಾಗ್ರಿಸಹಿತ ಪ್ರಿಯ ಸುಹೃದ ಗೌತಮನನ್ನು ಪಡೆದ ಬಕರಾಜನು ಅತ್ಯಂತ ಪ್ರೇಮದಿಂದ ಅವನನ್ನು ಹೃದಯಪೂರ್ವಕವಾಗಿ ಆಲಂಗಿಸಿದನು.

12167014a ಅಥ ತಂ ಪಾಪಕರ್ಮಾಣಂ ರಾಜಧರ್ಮಾ ಬಕಾಧಿಪಃ।
12167014c ವಿಸರ್ಜಯಿತ್ವಾ ಸಧನಂ ಪ್ರವಿವೇಶ ಸ್ವಮಾಲಯಮ್।।

ಆಗ ಬಕರಾಜ ರಾಜಧರ್ಮನು ಆ ಪಾಪಚಾರಿಯನ್ನು ಧನಸಹಿತ ಬೀಳ್ಕೊಟ್ಟು ತನ್ನ ಮನೆಯನ್ನು ಪ್ರವೇಶಿಸಿದನು.

12167015a ಯಥೋಚಿತಂ ಚ ಸ ಬಕೋ ಯಯೌ ಬ್ರಹ್ಮಸದಸ್ತದಾ।
12167015c ಬ್ರಹ್ಮಾ ಚ ತಂ ಮಹಾತ್ಮಾನಮಾತಿಥ್ಯೇನಾಭ್ಯಪೂಜಯತ್।।

ನಂತರ ಬಕನು ಯಥೋಚಿತವಾಗಿ ಬ್ರಹ್ಮಸದನಕ್ಕೆ ಹೋದನು. ಬ್ರಹ್ಮನೂ ಕೂಡ ಆ ಮಹಾತ್ಮನ ಅತಿಥಿಸತ್ಕಾರವನ್ನು ನಡೆಸಿದನು.

12167016a ಗೌತಮಶ್ಚಾಪಿ ಸಂಪ್ರಾಪ್ಯ ಪುನಸ್ತಂ ಶಬರಾಲಯಮ್।
12167016c ಶೂದ್ರಾಯಾಂ ಜನಯಾಮಾಸ ಪುತ್ರಾನ್ ದುಷ್ಕೃತಕಾರಿಣಃ।।

ಗೌತಮನೂ ಕೂಡ ಶಬರಾಲಯಕ್ಕೆ ಹೋಗಿ ಪುನಃ ಅಲ್ಲಿಯೇ ವಾಸಿಸತೊಡಗಿದನು. ಅಲ್ಲಿ ಅವನು ಶೂದ್ರಕನ್ಯೆಯಲ್ಲಿಯೇ ಪಾಪಚಾರೀ ಪುತ್ರರನ್ನು ಹುಟ್ಟಿಸಿದನು.

12167017a ಶಾಪಶ್ಚ ಸುಮಹಾಂಸ್ತಸ್ಯ ದತ್ತಃ ಸುರಗಣೈಸ್ತದಾ।
12167017c ಕುಕ್ಷೌ ಪುನರ್ಭ್ವಾಂ ಭಾರ್ಯಾಯಾಂ ಜನಯಿತ್ವಾ ಚಿರಾತ್ಸುತಾನ್।
12167017e ನಿರಯಂ ಪ್ರಾಪ್ಸ್ಯತಿ ಮಹತ್ ಕೃತಘ್ನೋಽಯಮಿತಿ ಪ್ರಭೋ।।

ಆಗ ಸುರಗಣಗಳು ಗೌತಮನಿಗೆ ಮಹಾ ಶಾಪವನ್ನಿತ್ತರು: “ಇವನು ಕೃತಘ್ನನು. ಇತರ ಪತಿಗಳನ್ನು ಸ್ವೀಕರಿಸುವ ಶೂದ್ರಕನ್ಯೆಯ ಹೊಟ್ಟೆಯಲ್ಲಿ ಅನೇಕ ಸಮಯದವರೆಗೆ ಪುತ್ರರನ್ನು ಹುಟ್ಟಿಸುತ್ತಿದ್ದಾನೆ. ಈ ಪಾಪದ ಕಾರಣದಿಂದ ಇವನು ನರಕದಲ್ಲಿ ಬೀಳುತ್ತಾನೆ.”

12167018a ಏತತ್ಪ್ರಾಹ ಪುರಾ ಸರ್ವಂ ನಾರದೋ ಮಮ ಭಾರತ।
12167018c ಸಂಸ್ಮೃತ್ಯ ಚಾಪಿ ಸುಮಹದಾಖ್ಯಾನಂ ಪುರುಷರ್ಷಭ।
12167018e ಮಯಾಪಿ ಭವತೇ ಸರ್ವಂ ಯಥಾವದುಪವರ್ಣಿತಮ್।।

ಭಾರತ! ಇವೆಲ್ಲವನ್ನೂ ಹಿಂದೆ ನನಗೆ ನಾರದನು ಹೇಳಿದನು. ಪುರುಷರ್ಷಭ! ಈ ಸುಮಹದಾಖ್ಯಾನವನ್ನು ನೆನಪಿಸಿಕೊಂಡು ನಿನಗೆ ಯಥಾವತ್ತಾಗಿ ಸರ್ವವನ್ನೂ ಹೇಳಿದ್ದೇನೆ.

12167019a ಕುತಃ ಕೃತಘ್ನಸ್ಯ ಯಶಃ ಕುತಃ ಸ್ಥಾನಂ ಕುತಃ ಸುಖಮ್।
12167019c ಅಶ್ರದ್ಧೇಯಃ ಕೃತಘ್ನೋ ಹಿ ಕೃತಘ್ನೇ ನಾಸ್ತಿ ನಿಷ್ಕೃತಿಃ।।

ಕೃತಘ್ನನಿಗೆ ಎಲ್ಲಿಯ ಯಶಸ್ಸು? ಅವನಿಗೆ ಹೇಗೆ ಸ್ಥಾನ ಸುಖಗಳು ದೊರೆಯುತ್ತವೆ? ಕೃತಘ್ನನು ವಿಶ್ವಾಸಕ್ಕೆ ಯೋಗ್ಯನಾಗುವುದಿಲ್ಲ. ಕೃತಘ್ನನ ಉದ್ಧಾರಕ್ಕಾಗಿ ಶಾಸ್ತ್ರಗಳಲ್ಲಿಯೂ ಯಾವ ಪ್ರಾಯಶ್ಚಿತ್ತಗಳೂ ಇಲ್ಲ.

12167020a ಮಿತ್ರದ್ರೋಹೋ ನ ಕರ್ತವ್ಯಃ ಪುರುಷೇಣ ವಿಶೇಷತಃ।
12167020c ಮಿತ್ರಧ್ರುಙ್ನಿರಯಂ ಘೋರಮನಂತಂ ಪ್ರತಿಪದ್ಯತೇ।।

ಪುರುಷನು ವಿಶೇಷವಾಗಿ ಮಿತ್ರದ್ರೋಹವನ್ನು ಮಾಡಬಾರದು. ಮಿತ್ರದ್ರೋಹಿಯು ಅನಂತಕಾಲದ ವರೆಗೆ ಘೋರ ನರಕದಲ್ಲಿ ಬೀಳುತ್ತಾನೆ.

12167021a ಕೃತಜ್ಞೇನ ಸದಾ ಭಾವ್ಯಂ ಮಿತ್ರಕಾಮೇನ ಚಾನಘ।
12167021c ಮಿತ್ರಾತ್ ಪ್ರಭವತೇ ಸತ್ಯಂ ಮಿತ್ರಾತ್ ಪ್ರಭವತೇ ಬಲಮ್1। 12167021e 2ಸತ್ಕಾರೈರುತ್ತಮೈರ್ಮಿತ್ರಂ ಪೂಜಯೇತ ವಿಚಕ್ಷಣಃ।।

ಅನಘ! ಸದಾ ಕೃತಜ್ಞನಾಗಿರಬೇಕು. ಮಿತ್ರನ ಇಚ್ಛೆಯನ್ನಿರಿಸಿಕೊಂಡಿರಬೇಕು. ಏಕೆಂದರೆ ಮಿತ್ರನಿಂದ ಸರ್ವವೂ ದೊರೆಯುತ್ತದೆ. ಮಿತ್ರನಿಂದ ಬಲವೂ ದೊರೆಯುತ್ತದೆ. ಆದುದರಿಂದ ಬುದ್ಧಿವಂತನು ಉತ್ತಮ ಸತ್ಕಾರಗಳಿಂದ ಮಿತ್ರನನ್ನು ಪೂಜಿಸಬೇಕು.

12167022a ಪರಿತ್ಯಾಜ್ಯೋ ಬುಧೈಃ ಪಾಪಃ ಕೃತಘ್ನೋ ನಿರಪತ್ರಪಃ।
12167022c ಮಿತ್ರದ್ರೋಹೀ ಕುಲಾಂಗಾರಃ ಪಾಪಕರ್ಮಾ ನರಾಧಮಃ।।

ಪಾಪಿ, ಕೃತಘ್ನ, ನಿರ್ಲಜ್ಜ, ಮಿತ್ರದ್ರೋಹೀ, ಕುಲಾಂಗಾರ ಮತು ಪಾಪಕರ್ಮಿ ನರಾಧಮನನ್ನು ವಿದ್ವಾಂಸರು ಸದಾ ಪರಿತ್ಯಜಿಸುತ್ತಾರೆ.

12167023a ಏಷ ಧರ್ಮಭೃತಾಂ ಶ್ರೇಷ್ಠ ಪ್ರೋಕ್ತಃ ಪಾಪೋ ಮಯಾ ತವ।
12167023c ಮಿತ್ರದ್ರೋಹೀ ಕೃತಘ್ನೋ ವೈ ಕಿಂ ಭೂಯಃ ಶ್ರೋತುಮಿಚ್ಚಸಿ।।

ಧರ್ಮಭೃತರಲ್ಲಿ ಶ್ರೇಷ್ಠ! ಹೀಗೆ ನಾನು ನಿನಗೆ ಪಾಪೀ, ಮಿತ್ರದ್ರೋಹೀ ಕೃತಘ್ನನ ಕುರಿತು ಹೇಳಿದೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?””

12167024 ವೈಶಂಪಾಯನ ಉವಾಚ।
12167024a ಏತಚ್ಚ್ರುತ್ವಾ ತದಾ ವಾಕ್ಯಂ ಭೀಷ್ಮೇಣೋಕ್ತಂ ಮಹಾತ್ಮನಾ।
12167024c ಯುಧಿಷ್ಠಿರಃ ಪ್ರೀತಮನಾ ಬಭೂವ ಜನಮೇಜಯ।।

ವೈಶಂಪಾಯನನು ಹೇಳಿದನು: “ಜನಮೇಜಯ! ಮಹಾತ್ಮ ಭೀಷ್ಮನಾಡಿದ ಈ ಮಾತನ್ನು ಕೇಳಿ ಯುಧಿಷ್ಠಿರನು ಪ್ರೀತಮನಸ್ಕನಾದನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ಸಪ್ತಷಷ್ಟ್ಯಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ತೇಳನೇ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಃ। ಇದು ಶ್ರೀ ಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವವು। ಇದೂವರೆಗಿನ ಒಟ್ಟು ಮಹಾಪರ್ವಗಳು – 11/18, ಉಪಪರ್ವಗಳು-85/100, ಅಧ್ಯಾಯಗಳು-1495/1995, ಶ್ಲೋಕಗಳು-56082/73784.

  1. ಮಿತ್ರಾತ್ ಪೂಜಾಂ ಲಭೇತ ಚ।। (ಗೀತಾ ಪ್ರೆಸ್). ↩︎

  2. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಿತ್ರಾದ್ ಭೋಗಾಂಶ್ಚ ಭುಂಜೀತ ಮಿತ್ರೇಣಾಪತ್ಸು ಮುಚ್ಯತೇ। (ಗೀತಾ ಪ್ರೆಸ್). ↩︎