160: ಖಡ್ಗೋತ್ಪತ್ತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 160

ಸಾರ

ಖಡ್ಗದ ಉತ್ಪತ್ತಿ ಮತ್ತು ಅದರ ಪರಂಪರಾಮಹಿಮೆಯ ವರ್ಣನೆ (1-87)

12160001 ವೈಶಂಪಾಯನ ಉವಾಚ।
12160001a ಕಥಾಂತರಮಥಾಸಾದ್ಯ ಖಡ್ಗಯುದ್ಧವಿಶಾರದಃ।
12160001c ನಕುಲಃ ಶರತಲ್ಪಸ್ಥಮಿದಮಾಹ ಪಿತಾಮಹಮ್।।

ವೈಶಂಪಾಯನನು ಹೇಳಿದನು: “ಕಥಾಪ್ರಸಂಗದ ಸಮಾಪ್ತಿಯ ಸಮಯದಲ್ಲಿ ಖಡ್ಗಯುದ್ಧವಿಶಾರದ ನಕುಲನು ಶರತಲ್ಪದಮೇಲಿದ್ದ ಪಿತಾಮಹನಿಗೆ ಹೇಳಿದನು:

12160002a ಧನುಃ ಪ್ರಹರಣಂ ಶ್ರೇಷ್ಠಮಿತಿ ವಾದಃ1 ಪಿತಾಮಹ।
12160002c ಮತಸ್ತು ಮಮ ಧರ್ಮಜ್ಞ ಖಡ್ಗ ಏವ ಸುಸಂಶಿತಃ।।

“ಪಿತಾಮಹ! ಧರ್ಮಜ್ಞ! ಧನುಸ್ಸೇ ಶ್ರೇಷ್ಠವಾದ ಪ್ರಹರಣವೆಂದು ವಾದವಿದೆ. ಆದರೆ ಹರಿತ ಖಡ್ಗವೇ ಶ್ರೇಷ್ಠ ಪ್ರಹರಣವೆಂದು ನನಗೆ ಅನಿಸುತ್ತದೆ.

12160003a ವಿಶೀರ್ಣೇ ಕಾರ್ಮುಕೇ ರಾಜನ್ಪ್ರಕ್ಷೀಣೇಷು ಚ ವಾಜಿಷು।
12160003c ಖಡ್ಗೇನ ಶಕ್ಯತೇ ಯುದ್ಧೇ ಸಾಧ್ವಾತ್ಮಾ ಪರಿರಕ್ಷಿತುಮ್।।

ರಾಜನ್! ಯುದ್ಧದಲ್ಲಿ ಧನುಸ್ಸು ತುಂಡಾಗಿ ಕುದುರೆಗಳೂ ನಷ್ಟವಾದಾಗ ಖಡ್ಗದಿಂದ ತನ್ನನ್ನು ರಕ್ಷಿಸಿಕೊಳ್ಳಲು ಶಕ್ಯವಾಗುತ್ತದೆ.

12160004a ಶರಾಸನಧರಾಂಶ್ಚೈವ ಗದಾಶಕ್ತಿಧರಾಂಸ್ತಥಾ।
12160004c ಏಕಃ ಖಡ್ಗಧರೋ ವೀರಃ ಸಮರ್ಥಃ ಪ್ರತಿಬಾಧಿತುಮ್।।

ಖಡ್ಗಧರ ವೀರನೊಬ್ಬನೇ ಧನುರ್ಧಾರಿಯನ್ನೂ, ಗದೆ-ಶಕ್ತಿ ಧರರನ್ನೂ ಎದುರಿಸಲು ಸಮರ್ಥನಾಗುತ್ತಾನೆ.

12160005a ಅತ್ರ ಮೇ ಸಂಶಯಶ್ಚೈವ ಕೌತೂಹಲಮತೀವ ಚ।
12160005c ಕಿಂ ಸ್ವಿತ್ಪ್ರಹರಣಂ ಶ್ರೇಷ್ಠಂ ಸರ್ವಯುದ್ಧೇಷು ಪಾರ್ಥಿವ।।

ಪಾರ್ಥಿವ! ಈ ವಿಷಯದಲ್ಲಿ ನನಗೆ ಸಂಶಯವೂ ಅತೀವ ಕುತೂಹಲವೂ ಉಂಟಾಗಿದೆ. ಸರ್ವಯುದ್ಧಗಳಲ್ಲಿ ಯಾವ ಆಯುಧವು ಶ್ರೇಷ್ಠವಾದುದು?

12160006a ಕಥಂ ಚೋತ್ಪಾದಿತಃ ಖಡ್ಗಃ ಕಸ್ಯಾರ್ಥಾಯ ಚ ಕೇನ ವಾ।
12160006c ಪೂರ್ವಾಚಾರ್ಯಂ ಚ ಖಡ್ಗಸ್ಯ ಪ್ರಬ್ರೂಹಿ ಪ್ರಪಿತಾಮಹ।।

ಪ್ರಪಿತಾಮಹ! ಖಡ್ಗವು ಹೇಗೆ ಮತ್ತು ಯಾವ ಕಾರಣಕ್ಕಾಗಿ ಉತ್ಪನ್ನವಾಯಿತು? ಯಾರಿಂದ ಉತ್ಪನ್ನವಾಯಿತು? ಖಡ್ಗಯುದ್ಧದ ಪ್ರಥಮ ಆಚಾರ್ಯನು ಯಾರಾಗಿದ್ದನು? ಇದನ್ನು ಹೇಳು.”

12160007a ತಸ್ಯ ತದ್ವಚನಂ ಶ್ರುತ್ವಾ ಮಾದ್ರೀಪುತ್ರಸ್ಯ ಧೀಮತಃ।
12160007c ಸರ್ವಕೌಶಲಸಂಯುಕ್ತಂ ಸೂಕ್ಷ್ಮಚಿತ್ರಾರ್ಥವಚ್ಚುಭಮ್।।
12160008a ತತಸ್ತಸ್ಯೋತ್ತರಂ ವಾಕ್ಯಂ ಸ್ವರವರ್ಣೋಪಪಾದಿತಮ್।
12160008c ಶಿಕ್ಷಾನ್ಯಾಯೋಪಸಂಪನ್ನಂ ದ್ರೋಣಶಿಷ್ಯಾಯ ಪೃಚ್ಚತೇ।।
12160009a ಉವಾಚ ಸರ್ವಧರ್ಮಜ್ಞೋ ಧನುರ್ವೇದಸ್ಯ ಪಾರಗಃ।
12160009c ಶರತಲ್ಪಗತೋ ಭೀಷ್ಮೋ ನಕುಲಾಯ ಮಹಾತ್ಮನೇ।।

ಧೀಮತ ಮಾದ್ರೀಪುತ್ರನ ಸರ್ವಕೌಶಲಯುಕ್ತವೂ ಸೂಕ್ಷ್ಮವೂ ಚಿತ್ರಾರ್ಥವುಳ್ಳದ್ದೂ ಮತ್ತು ಆ ಶುಭ ಮಾತನ್ನು ಕೇಳಿ ಶರತಲ್ಪಗತಾನಾಗಿದ್ದ ಧನುರ್ವೇದಪಾರಂಗತ ಸರ್ವಧರ್ಮಜ್ಞ ಭೀಷ್ಮನು ಶಿಕ್ಷಣವನ್ನು ಪಡೆದಿದ್ದ ದ್ರೋಣಶಿಷ್ಯನ ಪ್ರಶ್ನೆಗೆ ಸ್ವರವರ್ಣಗಳಿಂದ ಕೂಡಿದ ಉತ್ತರವನ್ನು ನೀಡುತ್ತಾ ಮಹಾತ್ಮಾ ನಕುಲನಿಗೆ ಹೇಳಿದನು:

12160010a ತತ್ತ್ವಂ ಶೃಣುಷ್ವ ಮಾದ್ರೇಯ ಯದೇತತ್ಪರಿಪೃಚ್ಚಸಿ।
12160010c ಪ್ರಬೋಧಿತೋಽಸ್ಮಿ ಭವತಾ ಧಾತುಮಾನಿವ ಪರ್ವತಃ।।

“ಮಾದ್ರೇಯ! ನೀನು ಕೇಳಿದ ಪ್ರಶ್ನೆಯ ತತ್ತ್ವವನ್ನು ಕೇಳು. ಗೈರಿಕಾದಿ ಧಾತುಗಳಿಂದ ಕೂಡಿದ ಪರ್ವತದಂತೆ ಮಲಗಿದ್ದ ನಾನು ನಿನ್ನ ಈ ಪ್ರಶ್ನೆಯಿಂದ ಎಚ್ಚೆತ್ತಿದ್ದೇನೆ.

12160011a ಸಲಿಲೈಕಾರ್ಣವಂ ತಾತ ಪುರಾ ಸರ್ವಮಭೂದಿದಮ್।
12160011c ನಿಷ್ಪ್ರಕಂಪನನಾಕಾಶಮನಿರ್ದೇಶ್ಯಮಹೀತಲಮ್।।

ಅಯ್ಯಾ! ಪೂರ್ವಕಾಲದಲ್ಲಿ ಈ ಸಂಪೂರ್ಣ ಜಗತ್ತೂ ನೀರಿನ ಒಂದೇ ಮಹಾಸಾಗರದ ರೂಪದಲ್ಲಿತ್ತು. ಆಗ ಇದಕ್ಕೆ ಕಂಪನವೆನ್ನುವುದಿಲ್ಲವಾಗಿತ್ತು. ಆಕಾಶವೆನ್ನುವುದೂ ಇರಲಿಲ್ಲ. ಭೂಮಿಯೂ ಇರಲಿಲ್ಲ.

12160012a ತಮಃಸಂವೃತಮಸ್ಪರ್ಶಮತಿಗಂಭೀರದರ್ಶನಮ್।
12160012c ನಿಃಶಬ್ದಂ ಚಾಪ್ರಮೇಯಂ ಚ ತತ್ರ ಜಜ್ಞೇ ಪಿತಾಮಹಃ।।

ಎಲ್ಲವೂ ಅಂಧಕಾರದಿಂದ ಆವೃತವಾಗಿತ್ತು. ಶಬ್ದ-ಸ್ಪರ್ಶಗಳ ಅನುಭವವೂ ಆಗುತ್ತಿರಲಿಲ್ಲ. ಆ ಏಕಾರ್ಣವು ಗಂಭೀರವಾಗಿ ಕಾಣುತ್ತಿತ್ತು. ಅದಕ್ಕೆ ಯಾವ ಸೀಮೆಯೂ ಇರಲಿಲ್ಲ. ಅದರಲ್ಲಿಯೇ ಪಿತಾಮಹ ಬ್ರಹ್ಮನ ಜನ್ಮವಾಯಿತು.

12160013a ಸೋಽಸೃಜದ್ವಾಯುಮಗ್ನಿಂ ಚ ಭಾಸ್ಕರಂ ಚಾಪಿ ವೀರ್ಯವಾನ್।
12160013c ಆಕಾಶಮಸೃಜಚ್ಚೋರ್ಧ್ವಮಧೋ ಭೂಮಿಂ ಚ ನೈರೃತಿಮ್।।

ಆ ವೀರ್ಯವಾನ ಬ್ರಹ್ಮನು ವಾಯು, ಅಗ್ನಿ ಮತ್ತು ಭಾಸ್ಕರರನ್ನು ಸೃಷ್ಟಿಸಿದನು. ಆಕಾಶ, ಮೇಲೆ, ಕೆಳಗೆ, ಭೂಮಿ ಮತ್ತು ರಾಕ್ಷಸಸಮೂಹಗಳನ್ನೂ ಸೃಷ್ಟಿಸಿದನು.

12160014a ನಭಃ ಸಚಂದ್ರತಾರಂ ಚ ನಕ್ಷತ್ರಾಣಿ ಗ್ರಹಾಂಸ್ತಥಾ।
12160014c ಸಂವತ್ಸರಾನಹೋರಾತ್ರಾನೃತೂನಥ ಲವಾನ್ ಕ್ಷಣಾನ್।।

ಚಂದ್ರ-ತಾರೆಗಳಿಂದ ಯುಕ್ತವಾದ ಆಕಾಶ, ನಕ್ಷತ್ರಗಳು, ಗ್ರಹಗಳು, ಸಂವತ್ಸರಗಳು, ಹಗಲು-ರಾತ್ರಿಗಳು, ಋತುಗಳು, ಲವಗಳು ಮತ್ತು ಕ್ಷಣಗಳನ್ನೂ ಸೃಷ್ಟಿಸಿದನು.

12160015a ತತಃ ಶರೀರಂ ಲೋಕಸ್ಥಂ ಸ್ಥಾಪಯಿತ್ವಾ ಪಿತಾಮಹಃ।
12160015c ಜನಯಾಮಾಸ ಭಗವಾನ್ಪುತ್ರಾನುತ್ತಮತೇಜಸಃ।।
12160016a ಮರೀಚಿಮೃಷಿಮತ್ರಿಂ ಚ ಪುಲಸ್ತ್ಯಂ ಪುಲಹಂ ಕ್ರತುಮ್।
12160016c ವಸಿಷ್ಠಾಂಗಿರಸೌ ಚೋಭೌ ರುದ್ರಂ ಚ ಪ್ರಭುಮೀಶ್ವರಮ್।।

ಅನಂತರ ಭಗವಾನ್ ಪಿತಾಮಹನು ಲೌಕಿಕ ಶರೀರವನ್ನು ಧಾರಣೆಮಾಡಿ ಅನುತ್ತಮ ತೇಜಸ್ವೀ ಪುತ್ರರನ್ನು ಹುಟ್ಟಿಸಿದನು. ಋಷಿಗಳಾದ ಮರೀಚಿ, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ, ಅಂಗಿರಸ ಹಾಗೂ ಪ್ರಭು ಈಶ್ವರ ರುದ್ರರನ್ನು ಸೃಷ್ಟಿಸಿದನು.

12160017a ಪ್ರಾಚೇತಸಸ್ತಥಾ ದಕ್ಷಃ ಕನ್ಯಾಃ ಷಷ್ಟಿಮಜೀಜನತ್।
12160017c ತಾ ವೈ ಬ್ರಹ್ಮರ್ಷಯಃ ಸರ್ವಾಃ ಪ್ರಜಾರ್ಥಂ ಪ್ರತಿಪೇದಿರೇ।।

ಪ್ರಾಚೇತಸ ದಕ್ಷನು ಅರವತ್ತು ಕನ್ಯೆಯರನ್ನು ಹುಟ್ಟಿಸಿದನು. ಪ್ರಜೆಗಳ ಉತ್ಪತ್ತಿಗಾಗಿ ಅವರೆಲ್ಲರನ್ನೂ ಬ್ರಹ್ಮರ್ಷಿಗಳು ಪತ್ನೀರೂಪದಲ್ಲಿ ಪಡೆದುಕೊಂಡರು.

12160018a ತಾಭ್ಯೋ ವಿಶ್ವಾನಿ ಭೂತಾನಿ ದೇವಾಃ ಪಿತೃಗಣಾಸ್ತಥಾ।
12160018c ಗಂಧರ್ವಾಪ್ಸರಸಶ್ಚೈವ ರಕ್ಷಾಂಸಿ ವಿವಿಧಾನಿ ಚ।।
12160019a ಪತತ್ರಿಮೃಗಮೀನಾಶ್ಚ ಪ್ಲವಂಗಾಶ್ಚ ಮಹೋರಗಾಃ।
12160019c ನಾನಾಕೃತಿಬಲಾಶ್ಚಾನ್ಯೇ ಜಲಕ್ಷಿತಿವಿಚಾರಿಣಃ।।
12160020a ಔದ್ಭಿದಾಃ ಸ್ವೇದಜಾಶ್ಚೈವ ಅಂಡಜಾಶ್ಚ ಜರಾಯುಜಾಃ।
12160020c ಜಜ್ಞೇ ತಾತ ತಥಾ ಸರ್ವಂ ಜಗತ್ ಸ್ಥಾವರಜಂಗಮಮ್।।

ಅವರಿಂದಲೇ ಸಮಸ್ತ ಪ್ರಾಣಿಗಳು, ದೇವತೆಗಳು, ಪಿತೃಗಳು, ಗಂಧರ್ವರು, ಅಪ್ಸರೆಯರು, ವಿವಿಧ ರಾಕ್ಷಸರು, ಪಕ್ಷಿಗಳು, ಮೃಗಗಳು, ಮೀನುಗಳು, ವಾನರರು, ಮಹೋರಗಗಳು, ನಾನಾ ಆಕೃತಿ-ಬಲಗಳುಳ್ಳ ನೀರು-ಆಕಾಶಗಾಮಿಗಳು, ಉದ್ಭಿದ-ಸ್ವೇದಜ-ಅಂಡಜ ಮತ್ತು ಜರಾಯುಜ ಪ್ರಾಣಿಗಳು ಹುಟ್ಟಿದವು. ಹೀಗೆ ಜಗತ್ತಿನ ಸ್ಥಾವರ-ಜಂಗಮಗಳೆಲ್ಲವೂ ಉತ್ಪನ್ನವಾದವು.

12160021a ಭೂತಸರ್ಗಮಿಮಂ ಕೃತ್ವಾ ಸರ್ವಲೋಕಪಿತಾಮಹಃ।
12160021c ಶಾಶ್ವತಂ ವೇದಪಠಿತಂ ಧರ್ಮಂ ಚ ಯುಯುಜೇ ಪುನಃ।।

ಈ ಭೂತಸೃಷ್ಟಿಯನ್ನು ಮಾಡಿ ಸರ್ವಲೋಕಪಿತಾಮಹನು ಅವುಗಳ ಮೇಲೆ ಪುನಃ ವೇದೋಕ್ತ ಸನಾತನ ಧರ್ಮದ ಪಾಲನೆಯ ಭಾರವನ್ನು ಹೊರಿಸಿದನು.

12160022a ತಸ್ಮಿನ್ಧರ್ಮೇ ಸ್ಥಿತಾ ದೇವಾಃ ಸಹಾಚಾರ್ಯಪುರೋಹಿತಾಃ।
12160022c ಆದಿತ್ಯಾ ವಸವೋ ರುದ್ರಾಃ ಸಸಾಧ್ಯಾ ಮರುದಶ್ವಿನಃ।।

ಆಚಾರ್ಯಪುರೋಹಿತಗಣಗಳೊಂದಿಗೆ ದೇವತೆಗಳು, ಆದಿತ್ಯರು, ವಸುಗಳು, ರುದ್ರರು, ಸಾಧ್ಯರು, ಮರುದ್ಗಣಗಳು ಮತ್ತು ಅಶ್ವಿನೀ ಕುಮಾರರು – ಇವರು ಆ ಸನಾತನ ಧರ್ಮದಲ್ಲಿ ಪ್ರತಿಷ್ಠಿತರಾದರು.

12160023a ಭೃಗ್ವತ್ರ್ಯಂಗಿರಸಃ ಸಿದ್ಧಾಃ ಕಾಶ್ಯಪಶ್ಚ ತಪೋಧನಃ।
12160023c ವಸಿಷ್ಠಗೌತಮಾಗಸ್ತ್ಯಾಸ್ತಥಾ ನಾರದಪರ್ವತೌ।।
12160024a ಋಷಯೋ ವಾಲಖಿಲ್ಯಾಶ್ಚ ಪ್ರಭಾಸಾಃ ಸಿಕತಾಸ್ತಥಾ।
12160024c ಘೃತಾಚಾಃ ಸೋಮವಾಯವ್ಯಾ ವೈಖಾನಸಮರೀಚಿಪಾಃ।।
12160025a ಅಕೃಷ್ಟಾಶ್ಚೈವ ಹಂಸಾಶ್ಚ ಋಷಯೋಽಥಾಗ್ನಿಯೋನಿಜಾಃ।
12160025c ವಾನಪ್ರಸ್ಥಾಃ ಪೃಶ್ನಯಶ್ಚ ಸ್ಥಿತಾ ಬ್ರಹ್ಮಾನುಶಾಸನೇ।।

ಸಿದ್ಧರಾಗಿದ್ದ ಭೃಗು, ಅತ್ರಿ ಮತ್ತು ಅಂಗಿರಸರು, ತಪೋಧನ ಕಾಶ್ಯಪರು, ವಸಿಷ್ಠ-ಗೌತಮ-ಅಗಸ್ತ್ಯರು, ನಾರದ-ಪರ್ವತರು, ವಾಲಖಿಲ್ಯ ಋಷಿಗಳು, ಪ್ರಭಾಸ, ಸಿಕತ, ಘೃತಾಚರು2, ಸೋಮಪರು3, ವಾಯವ್ಯರು4, ಮರೀಚಿಪರು5, ವೈಖಾನಸರು, ಅಕೃಷ್ಟರು6, ಹಂಸರು7, ಅಗ್ನಿಯೋನಿಜ ಋಷಿಗಳು, ವಾನಪ್ರಸ್ಥರು ಮತ್ತು ಪೃಶ್ನಯರು ಬ್ರಹ್ಮನ ಅನುಶಾಸನದಂತೆ ಸನಾತನ ಧರ್ಮವನ್ನು ಪಾಲಿಸತೊಡಗಿದರು.

12160026a ದಾನವೇಂದ್ರಾಸ್ತ್ವತಿಕ್ರಮ್ಯ ತತ್ಪಿತಾಮಹಶಾಸನಮ್।
12160026c ಧರ್ಮಸ್ಯಾಪಚಯಂ ಚಕ್ರುಃ ಕ್ರೋಧಲೋಭಸಮನ್ವಿತಾಃ।।

ಆದರೆ ದಾನವೇಂದ್ರರು ಪಿತಾಮಹನ ಶಾಸನವನ್ನು ಉಲ್ಲಂಘಿಸಿ ಕ್ರೋಧಲೋಭಸಮನ್ವಿತರಾಗಿ ಧರ್ಮಕ್ಕೆ ಹಾನಿಯನ್ನುಂಟುಮಾಡತೊಡಗಿದರು.

12160027a ಹಿರಣ್ಯಕಶಿಪುಶ್ಚೈವ ಹಿರಣ್ಯಾಕ್ಷೋ ವಿರೋಚನಃ।
12160027c ಶಂಬರೋ ವಿಪ್ರಚಿತ್ತಿಶ್ಚ ಪ್ರಹ್ರಾದೋ ನಮುಚಿರ್ಬಲಿಃ।।
12160028a ಏತೇ ಚಾನ್ಯೇ ಚ ಬಹವಃ ಸಗಣಾ ದೈತ್ಯದಾನವಾಃ।
12160028c ಧರ್ಮಸೇತುಮತಿಕ್ರಮ್ಯ ರೇಮಿರೇಽಧರ್ಮನಿಶ್ಚಯಾಃ।।

ಹಿರಣ್ಯಕಶಿಪು, ಹಿರಣ್ಯಾಕ್ಷ, ವಿರೋಚನ, ಶಂಬರ, ವಿಪ್ರಚಿತ್ತಿ, ಪ್ರಹ್ರಾದ, ನಮುಚಿ, ಬಲಿ ಮತ್ತು ಅನ್ಯ ಅನೇಕ ದೈತ್ಯದಾನವರು ತಮ್ಮ ಗಣಗಳೊಂದಿಗೆ ಧರ್ಮಮರ್ಯಾದೆಗಳನ್ನು ಉಲ್ಲಂಗಿಸಿ ಅಧರ್ಮನಿಶ್ಚಯಿಗಳಾಗಿ ರಮಿಸತೊಡಗಿದರು.

12160029a ಸರ್ವೇ ಸ್ಮ ತುಲ್ಯಜಾತೀಯಾ ಯಥಾ ದೇವಾಸ್ತಥಾ ವಯಮ್।
12160029c ಇತ್ಯೇವಂ ಹೇತುಮಾಸ್ಥಾಯ ಸ್ಪರ್ಧಮಾನಾಃ ಸುರರ್ಷಿಭಿಃ।।

“ನಾವು ಮತ್ತು ದೇವತೆಗಳು ಒಂದೇ ಜಾತಿಯವರು; ಆದುದರಿಂದ ದೇವತೆಗಳು ಹೇಗಿರುವರೋ ಹಾಗೆಯೇ ನಾವೂ ಇದ್ದೇವೆ” ಎಂದು ಜಾತೀಯ ಧರ್ಮವನ್ನು ಆಶ್ರಯಿಸಿ ದೈತ್ಯಗಣಗಳು ಸುರರು ಮತ್ತು ಋಷಿಗಳೊಂದಿಗೆ ಸ್ಪರ್ಧಿಸತೊಡಗಿದರು.

12160030a ನ ಪ್ರಿಯಂ ನಾಪ್ಯನುಕ್ರೋಶಂ ಚಕ್ರುರ್ಭೂತೇಷು ಭಾರತ।
12160030c ತ್ರೀನುಪಾಯಾನತಿಕ್ರಮ್ಯ ದಂಡೇನ ರುರುಧುಃ ಪ್ರಜಾಃ।
12160030e ನ ಜಗ್ಮುಃ ಸಂವಿದಂ ತೈಶ್ಚ ದರ್ಪಾದಸುರಸತ್ತಮಾಃ।।

ಭಾರತ! ಅವರು ಪ್ರಾಣಿಗಳಿಗೆ ಪ್ರಿಯರಾಗಿರಲಿಲ್ಲ ಮತ್ತು ದಯಾವಂತರಾಗಿರಲಿಲ್ಲ. ಅವರು ಸಾಮ-ದಾನ-ಭೇದ ಈ ಮೂರು ಉಪಾಯಗಳನ್ನೂ ಅತಿಕ್ರಮಿಸಿ ಕೇವಲ ದಂಡದ ಮೂಲಕ ಪ್ರಜೆಗಳನ್ನು ಪೀಡಿಸತೊಡಗಿದರು. ಆ ಅಸುರಸತ್ತಮರು ದರ್ಪದಿಂದ ಆ ಪ್ರಜೆಗಳೊಂದಿಗೆ ಮಾತನ್ನೂ ಆಡುತ್ತಿರಲಿಲ್ಲ.

12160031a ಅಥ ವೈ ಭಗವಾನ್ ಬ್ರಹ್ಮಾ ಬ್ರಹ್ಮರ್ಷಿಭಿರುಪಸ್ಥಿತಃ।
12160031c ತದಾ ಹಿಮವತಃ ಪೃಷ್ಠೇ ಸುರಮ್ಯೇ ಪದ್ಮತಾರಕೇ।।
12160032a ಶತಯೋಜನವಿಸ್ತಾರೇ ಮಣಿಮುಕ್ತಾಚಯಾಚಿತೇ।

ಆಗ ಭಗವಾನ್ ಬ್ರಹ್ಮನು ಬ್ರಹ್ಮರ್ಷಿಗಳೊಂದಿಗೆ ಹಿಮಾಲಯದ ಸುರಮ್ಯ ಶತಯೋಜನ ವಿಸ್ತಾರದ ಮಣಿಮುತ್ತುಗಳಿಂದ ವ್ಯಾಪಿತವಾದ ಪದ್ಮತಾರಕ ಶಿಖರದ ಮೇಲೆ ಕುಳಿತಿದ್ದನು.

12160032c ತಸ್ಮಿನ್ಗಿರಿವರೇ ಪುತ್ರ ಪುಷ್ಪಿತದ್ರುಮಕಾನನೇ।
12160032e ತಸ್ಥೌ ಸ ವಿಬುಧಶ್ರೇಷ್ಠೋ ಬ್ರಹ್ಮಾ ಲೋಕಾರ್ಥಸಿದ್ಧಯೇ।।

ಪುತ್ರ! ಪುಷ್ಪಿತವೃಕ್ಷಕಾನನಗಳಿಂದ ಕೂಡಿದ್ದ ಆ ಶ್ರೇಷ್ಠ ಗಿರಿಶಿಖರದ ಮೇಲೆ ಸುರಶ್ರೇಷ್ಠ ಬ್ರಹ್ಮನು ಲೋಕಾರ್ಥಸಿದ್ಧಿಗಾಗಿ ತಂಗಿದ್ದನು.

12160033a ತತೋ ವರ್ಷಸಹಸ್ರಾಂತೇ ವಿತಾನಮಕರೋತ್ ಪ್ರಭುಃ।
12160033c ವಿಧಿನಾ ಕಲ್ಪದೃಷ್ಟೇನ ಯಥೋಕ್ತೇನೋಪಪಾದಿತಮ್।।
12160034a ಋಷಿಭಿರ್ಯಜ್ಞಪಟುಭಿರ್ಯಥಾವತ್ಕರ್ಮಕರ್ತೃಭಿಃ।
12160034c ಮರುದ್ಭಿಃ8 ಪರಿಸಂಸ್ತೀರ್ಣಂ ದೀಪ್ಯಮಾನೈಶ್ಚ ಪಾವಕೈಃ।।
12160035a ಕಾಂಚನೈರ್ಯಜ್ಞಭಾಂಡೈಶ್ಚ ಭ್ರಾಜಿಷ್ಣುಭಿರಲಂಕೃತಮ್।
12160035c ವೃತಂ ದೇವಗಣೈಶ್ಚೈವ ಪ್ರಬಭೌ ಯಜ್ಞಮಂಡಲಮ್।।
12160036a ತಥಾ ಬ್ರಹ್ಮರ್ಷಿಭಿಶ್ಚೈವ ಸದಸ್ಯೈರುಪಶೋಭಿತಮ್।

ಸಹಸ್ರಾರು ವರ್ಷಗಳ ನಂತರ ಪ್ರಭು ಬ್ರಹ್ಮನು ಶಾಸ್ತ್ರೋಕ್ತ ವಿಧಿಯನ್ನನುಸರಿಸಿ ಅಲ್ಲಿ ಒಂದು ಯಜ್ಞವನ್ನು ಆರಂಭಿಸಿದನು. ಋಷಿಗಳು ಮತ್ತು ಯಜ್ಞಪಟುಗಳು ಅದರಲ್ಲಿ ಯಥಾವತ್ತಾಗಿ ಕರ್ಮಕರ್ತೃಗಳಾಗಿದ್ದರು. ಸಮಿತ್ತುಗಳು ಹರಡಿಕೊಂಡಿದ್ದವು. ಅಗ್ನಿಗಳು ಉರಿಯುತ್ತಿದ್ದವು. ಕಾಂಚನದ ಯಜ್ಞಪಾತ್ರೆಗಳ ಹೊಳೆಯುವಿಕೆಯಿಂದ ಯಜ್ಞಮಂಟಪವು ಶೋಭಿಸುತ್ತಿತ್ತು. ಆ ಯಜ್ಞಮಂಡಲವು ಶ್ರೇಷ್ಠ ದೇವತೆಗಳಿಂದ ಮತ್ತು ಸಭಾಸದ ಮಹರ್ಷಿಗಳಿಂದ ಸುಶೋಭಿತಗೊಂಡಿತ್ತು.

12160036c ತತ್ರ ಘೋರತಮಂ ವೃತ್ತಮೃಷೀಣಾಂ ಮೇ ಪರಿಶ್ರುತಮ್।।
12160037a ಚಂದ್ರಮಾ ವಿಮಲಂ ವ್ಯೋಮ ಯಥಾಭ್ಯುದಿತತಾರಕಮ್।
12160037c ವಿದಾರ್ಯಾಗ್ನಿಂ ತಥಾ ಭೂತಮುತ್ಥಿತಂ ಶ್ರೂಯತೇ ತತಃ।।

ಅಲ್ಲಿ ಒಂದು ಅತ್ಯಂತ ಘೋರ ಘಟನೆಯು ನಡೆಯಿತು. ಅದರ ಕುರಿತು ನಾನು ಋಷಿಗಳಿಂದಲೇ ಕೇಳಿದ್ದೇನೆ. ವಿಮಲ ಆಕಾಶದಲ್ಲಿ ನಕ್ಷತ್ರಗಳೊಂದಿಗೆ ಚಂದ್ರಮನು ಹೇಗೆ ಉದಯಿಸುತ್ತಾನೋ ಹಾಗೆ ಕಿಡಿಗಳು ಹರಡಿಕೊಂಡಿದ್ದ ಆ ಅಗ್ನಿಯಲ್ಲಿ ಒಂದು ಭೂತವು ಪ್ರಕಟವಾಯಿತೆಂದು ಕೇಳಿದ್ದೇವೆ.

12160038a ನೀಲೋತ್ಪಲಸವರ್ಣಾಭಂ ತೀಕ್ಷ್ಣದಂಷ್ಟ್ರಂ ಕೃಶೋದರಮ್।
12160038c ಪ್ರಾಂಶು ದುರ್ದರ್ಶನಂ ಚೈವಾಪ್ಯತಿತೇಜಸ್ತಥೈವ ಚ।।

ಅದರ ಶರೀರದ ಬಣ್ಣವು ನೀಲಕಮಲದಂತೆ ಶ್ಯಾಮವರ್ಣದ್ದಾಗಿತ್ತು. ಅದು ತೀಕ್ಷ್ಣದಂಷ್ಟ್ರವೂ, ಅದರ ಉದರವು ಅತ್ಯಂತ ಕೃಶವಾಗಿಯೂ ಇತ್ತು. ಅದು ಅತ್ಯಂತ ಎತ್ತರವಾಗಿಯೂ ಪರಮ ದರ್ಧರ್ಷವಾಗಿಯೂ ಮತ್ತು ಅಮಿತ ತೇಜಸ್ವಿಯಾಗಿಯೂ ತೋರುತ್ತಿತ್ತು.

12160039a ತಸ್ಮಿನ್ನುತ್ಪತಮಾನೇ ಚ ಪ್ರಚಚಾಲ ವಸುಂಧರಾ।
12160039c ತತ್ರೋರ್ಮಿಕಲಿಲಾವರ್ತಶ್ಚುಕ್ಷುಭೇ ಚ ಮಹಾರ್ಣವಃ।।

ಅದು ಉತ್ಪತ್ತಿಯಾಗುವಾಗ ವಸುಂಧರೆಯು ನಡುಗಿದಳು. ಸಮುದ್ರವು ಕ್ಷೋಭೆಗೊಂಡು ಅದರಲ್ಲಿ ಮಹಾ ಅಲೆಗಳು ಸುಳಿಗಳು ಹುಟ್ಟಿಕೊಂಡವು.

12160040a ಪೇತುರುಲ್ಕಾ ಮಹೋತ್ಪಾತಾಃ ಶಾಖಾಶ್ಚ ಮುಮುಚುರ್ದ್ರುಮಾಃ।
12160040c ಅಪ್ರಸನ್ನಾ ದಿಶಃ ಸರ್ವಾಃ ಪವನಶ್ಚಾಶಿವೋ ವವೌ।
12160040e ಮುಹುರ್ಮುಹುಶ್ಚ ಭೂತಾನಿ ಪ್ರಾವ್ಯಥಂತ ಭಯಾತ್ತಥಾ।।

ಆಕಾಶದಿಂದ ಉಲ್ಕೆಗಳು ಬಿದ್ದವು. ಮಹೋತ್ಪಾತಗಳು ಪ್ರಕಟವಾದವು. ವೃಕ್ಷಗಳು ತಮ್ಮ ರೆಂಬೆಗಳನ್ನು ಉದುರಿಸತೊಡಗಿದವು. ಎಲ್ಲ ದಿಕ್ಕುಗಳೂ ಅಪ್ರಸನ್ನಗೊಂಡು ಅಮಂಗಲಸೂಚಕ ಗಾಳಿಯು ಬೀಸತೊಡಗಿತು. ಪ್ರಾಣಿಗಳು ಬಾರಿಬಾರಿಗೂ ಸಂಕಟಪಡುತ್ತಿದ್ದವು.

12160041a ತತಃ ಸುತುಮುಲಂ ದೃಷ್ಟ್ವಾ ತದದ್ಭುತಮುಪಸ್ಥಿತಮ್।
12160041c ಮಹರ್ಷಿಸುರಗಂಧರ್ವಾನುವಾಚೇದಂ ಪಿತಾಮಹಃ।।

ಆ ಭಯಂಕರ ತುಮುಲಗಳನ್ನು ಮತ್ತು ಉತ್ಪನ್ನವಾಗಿದ್ದ ಆ ಅದ್ಭುತಭೂತವನ್ನು ನೋಡಿ ಪಿತಾಮಹನು ಸುರಗಂಧರ್ವರೊಡನಿದ್ದ ಮಹರ್ಷಿಗಳಿಗೆ ಹೇಳಿದನು:

12160042a ಮಯೈತಚ್ಚಿಂತಿತಂ ಭೂತಮಸಿರ್ನಾಮೈಷ ವೀರ್ಯವಾನ್।
12160042c ರಕ್ಷಣಾರ್ಥಾಯ ಲೋಕಸ್ಯ ವಧಾಯ ಚ ಸುರದ್ವಿಷಾಮ್।।

“ನಾನೇ ಈ ಭೂತದ ಕುರಿತು ಚಿಂತನೆಮಾಡಿದ್ದೆನು. ಇದು ಅಸಿ ಎಂಬ ಹೆಸರಿನ ವೀರ್ಯವಾನ್ ಆಯುಧವು. ಇದು ಲೋಕದ ರಕ್ಷಣೆಗಾಗಿ ಮತ್ತು ಸುರದ್ವೇಷಿಗಳ ವಧೆಗಾಗಿ ಉತ್ಪನ್ನವಾಗಿದೆ.”

12160043a ತತಸ್ತದ್ರೂಪಮುತ್ಸೃಜ್ಯ ಬಭೌ ನಿಸ್ತ್ರಿಂಶ ಏವ ಸಃ।
12160043c ವಿಮಲಸ್ತೀಕ್ಷ್ಣಧಾರಶ್ಚ ಕಾಲಾಂತಕ ಇವೋದ್ಯತಃ।।

ಆಗ ಆ ಭೂತವು ತನ್ನ ರೂಪವನ್ನು ತ್ಯಜಿಸಿ ಮೂವತ್ತು ಅಂಗುಲಕ್ಕಿಂತಲೂ ಸ್ವಲ್ಪ ದೊಡ್ಡದಾದ ಖಡ್ಗದ ರೂಪದಲ್ಲಿ ಪ್ರಕಾಶಿತಗೊಂಡಿತು. ಅದರ ಅಲಗು ಅತ್ಯಂತ ತೀಕ್ಷ್ಣವಾಗಿತ್ತು. ಫಳಫಳನೆ ಹೊಳೆಯುತ್ತಿದ್ದ ಆ ಖಡ್ಗವು ಕಾಲಾಂತಕನು ಮೇಲೇರುತ್ತಿರುವಂತೆ ತೋರುತ್ತಿತ್ತು.

12160044a ತತಸ್ತಂ ಶಿತಿಕಂಠಾಯ ರುದ್ರಾಯರ್ಷಭಕೇತವೇ।
12160044c ಬ್ರಹ್ಮಾ ದದಾವಸಿಂ ದೀಪ್ತಮಧರ್ಮಪ್ರತಿವಾರಣಮ್।।

ಆಗ ಬ್ರಹ್ಮನು ಅಧರ್ಮವನ್ನು ತಡೆಯಲು ಶಕ್ಯವಾಗಿ ಬೆಳಗುತ್ತಿದ್ದ ಆ ಖಡ್ಗವನ್ನು ಋಷಭಕೇತು ಶಿತಿಕಂಠ ರುದ್ರನಿಗೆ ನೀಡಿದನು.

12160045a ತತಃ ಸ ಭಗವಾನ್ರುದ್ರೋ ಬ್ರಹ್ಮರ್ಷಿಗಣಸಂಸ್ತುತಃ।
12160045c ಪ್ರಗೃಹ್ಯಾಸಿಮಮೇಯಾತ್ಮಾ ರೂಪಮನ್ಯಚ್ಚಕಾರ ಹ।।
12160046a ಚತುರ್ಬಾಹುಃ ಸ್ಪೃಶನ್ಮೂರ್ಧ್ನಾ ಭೂಸ್ಥಿತೋಽಪಿ ನಭಸ್ತಲಮ್।

ಬ್ರಹ್ಮರ್ಷಿಗಣಗಳಿಂದ ಸ್ತುತಿಸಲ್ಪಡಲು ಭಗವಾನ್ ರುದ್ರನು ಆಗ ಆ ಅಮೇಯಾತ್ಮ ಖಡ್ಗವನ್ನು ಹಿಡಿದು ಅನ್ಯ ರೂಪವನ್ನು ಧರಿಸಿದನು. ಚತುರ್ಬಾಹುವಾದ ಅವನು ಭೂಮಿಯ ಮೇಲೆ ನಿಂತಿದ್ದರೂ ಅವನ ನೆತ್ತಿಯು ನಭಸ್ತಲವನ್ನು ಮುಟ್ಟುವಂತಿತ್ತು.

12160046c ಊರ್ಧ್ವದೃಷ್ಟಿರ್ಮಹಾಲಿಂಗೋ ಮುಖಾಜ್ಜ್ವಾಲಾಃ ಸಮುತ್ಸೃಜನ್।
12160046e ವಿಕುರ್ವನ್ಬಹುಧಾ ವರ್ಣಾನ್ನೀಲಪಾಂಡುರಲೋಹಿತಾನ್।।

ಉರ್ಧ್ವದೃಷ್ಟಿಯನ್ನಿಟ್ಟಿದ್ದ ಆ ಮಹಾಲಿಂಗನು ಬಾಯಿಯಿಂದ ಅಗ್ನಿಜ್ವಾಲೆಗಳನ್ನು ಉಗುಳುತ್ತಿದ್ದನು. ಕಪ್ಪು, ಬಿಳಿ, ಕೆಂಪು ಮೊದಲಾದ ಬಣ್ಣಗಳನ್ನು ಪ್ರಕಟಿಸುತ್ತಿದ್ದನು.

12160047a ಬಿಭ್ರತ್ಕೃಷ್ಣಾಜಿನಂ ವಾಸೋ ಹೇಮಪ್ರವರತಾರಕಮ್।
12160047c ನೇತ್ರಂ ಚೈಕಂ ಲಲಾಟೇನ ಭಾಸ್ಕರಪ್ರತಿಮಂ ಮಹತ್।
12160047e ಶುಶುಭಾತೇ ಚ ವಿಮಲೇ ದ್ವೇ ನೇತ್ರೇ ಕೃಷ್ಣಪಿಂಗಲೇ।।

ರುದ್ರನು ಆ ಸಮಯದಲ್ಲಿ ಸುವರ್ಣಮಯ ತಾರೆಗಳಿಂದ ಕೂಡಿದ ಕೃಷ್ಣಾಜಿನವನ್ನೇ ವಸ್ತ್ರವಾಗಿ ಧರಿಸಿದ್ದನು. ಸೂರ್ಯಸದೃಶವಾದ ಕಣ್ಣನ್ನು ಹಣೆಯಲ್ಲಿ ಧರಿಸಿದ್ದನು. ಉಳಿದೆರಡು ಕಣ್ಣುಗಳು ಕಪ್ಪು ಮತ್ತು ಕಂದುಹಳದೀಬಣ್ಣ ಮಿಶ್ರಿತ ಬಣ್ಣದಿಂದ ನಿರ್ಮಲವಾಗಿ ಪ್ರಕಾಶಿಸುತ್ತಿದ್ದವು.

12160048a ತತೋ ದೇವೋ ಮಹಾದೇವಃ ಶೂಲಪಾಣಿರ್ಭಗಾಕ್ಷಿಹಾ।
12160048c ಸಂಪ್ರಗೃಹ್ಯ ತು ನಿಸ್ತ್ರಿಂಶಂ ಕಾಲಾರ್ಕಾನಲಸಂನಿಭಮ್।।
12160049a ತ್ರಿಕೂಟಂ ಚರ್ಮ ಚೋದ್ಯಮ್ಯ ಸವಿದ್ಯುತಮಿವಾಂಬುದಮ್।
12160049c ಚಚಾರ ವಿವಿಧಾನ್ಮಾರ್ಗಾನ್ಮಹಾಬಲಪರಾಕ್ರಮಃ।
12160049e ವಿಧುನ್ವನ್ನಸಿಮಾಕಾಶೇ ದಾನವಾಂತಚಿಕೀರ್ಷಯಾ।।

ಅನಂತರ ಭಗನ ಕಣ್ಣುಗಳನ್ನು ಕಿತ್ತಿದ್ದ ಮಹಾಬಲ ಪರಾಕ್ರಮಿ ದೇವ ಮಹಾದೇವ ಶೂಲಪಾಣಿಯು ಕಾಲ ಮತ್ತು ಅಗ್ನಿಸಮಾನ ತೇಜಸ್ಸಿನ ಆ ಖಡ್ಗವನ್ನು ಮತ್ತು ಮಿಂಚಿನಿಂದೊಡಗೂಡಿದ ಮೋಡದಂತೆ ಹೊಳೆಯುತ್ತಿದ್ದ ಮೂರುಕೋನೆಗಳಿದ್ದ ಗುರಾಣಿಯನ್ನೂ ಹಿಡಿದು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ದಾನವರನ್ನು ಅಂತ್ಯಗೊಳಿಸಲು ಬಯಸಿ ಖಡ್ಗವನ್ನು ಆಕಾಶದಲ್ಲಿ ತಿರುಗಿಸತೊಡಗಿದನು.

12160050a ತಸ್ಯ ನಾದಂ ವಿನದತೋ ಮಹಾಹಾಸಂ ಚ ಮುಂಚತಃ।
12160050c ಬಭೌ ಪ್ರತಿಭಯಂ ರೂಪಂ ತದಾ ರುದ್ರಸ್ಯ ಭಾರತ।।

ಭಾರತ! ಆಗ ಜೋರಾಗಿ ಗರ್ಜಿಸುತ್ತಿದ್ದ ಮತ್ತು ಮಹಾ ಅಟ್ಟಹಾಸಗೈಯುತ್ತಿದ್ದ ರುದ್ರನ ಸ್ವರೂಪವು ಅತ್ಯಂತ ಭಯಂಕರವಾಗಿ ತೋರುತ್ತಿತ್ತು.

12160051a ತದ್ರೂಪಧಾರಿಣಂ ರುದ್ರಂ ರೌದ್ರಕರ್ಮ ಚಿಕೀರ್ಷವಃ।
12160051c ನಿಶಮ್ಯ ದಾನವಾಃ ಸರ್ವೇ ಹೃಷ್ಟಾಃ ಸಮಭಿದುದ್ರುವುಃ।।

ರೌದ್ರಕರ್ಮವನ್ನೆಸಗಲು ಆ ರೌದ್ರ ರೂಪವನ್ನು ಧರಿಸಿದ್ದ ರುದ್ರನನ್ನು ನೋಡಿ ಸರ್ವ ದಾನವರೂ ಹೃಷ್ಟರಾಗಿ ಅವನ ಮೇಲೆ ಎರಗಿದರು.

12160052a ಅಶ್ಮಭಿಶ್ಚಾಪ್ಯವರ್ಷಂತ ಪ್ರದೀಪ್ತೈಶ್ಚ ತಥೋಲ್ಮುಕೈಃ।
12160052c ಘೋರೈಃ ಪ್ರಹರಣೈಶ್ಚಾನ್ಯೈಃ ಶಿತಧಾರೈರಯೋಮುಖೈಃ।।

ಕೆಲವರು ರುದ್ರನ ಮೇಲೆ ಕಲ್ಲಿನ ಮಳೆಗರೆದರು. ಕೆಲವರು ಪ್ರಜ್ವಲಿಸುತ್ತಿದ್ದ ಪಂಜುಗಳನ್ನು ಅವನ ಮೇಲೆ ಸುರಿದರು. ಕೆಲವರು ಸುಘೋರ ಅಸ್ತ್ರ-ಶಸ್ತ್ರಗಳಿಂದ ಅವನನ್ನು ಪ್ರಹರಿಸಿದರು. ಇನ್ನು ಕೆಲವರು ತೀಕ್ಷ್ಣ ಅಲಗುಗಳಿದ್ದ ಲೋಹನಿರ್ಮಿತ ಆಯುಧಗಳಿಂದ ರುದ್ರನನ್ನು ಪ್ರಹರಿಸಿದರು.

12160053a ತತಸ್ತದ್ದಾನವಾನೀಕಂ ಸಂಪ್ರಣೇತಾರಮಚ್ಯುತಮ್।
12160053c ರುದ್ರಖಡ್ಗಬಲೋದ್ಧೂತಂ ಪ್ರಚಚಾಲ ಮುಮೋಹ ಚ।।

ಆಗ ದೇವಸೇನಾಪತಿಯ ಕಾರ್ಯವನ್ನು ನಿಶ್ಚಲನಾಗಿ ನಿರ್ವಹಿಸುತ್ತಾ ಖಡ್ಗವನ್ನೆತ್ತಿ ನಿಂತಿದ್ದ ಬಲಶಾಲೀ ಅಚ್ಯುತ ರುದ್ರನನ್ನು ನೋಡಿ ದಾನವಸೇನೆಯು ತತ್ತರಿಸಿ ಭ್ರಾಂತಗೊಂಡಿತು.

12160054a ಚಿತ್ರಂ ಶೀಘ್ರತರತ್ವಾಚ್ಚ ಚರಂತಮಸಿಧಾರಿಣಮ್।
12160054c ತಮೇಕಮಸುರಾಃ ಸರ್ವೇ ಸಹಸ್ರಮಿತಿ ಮೇನಿರೇ।।

ಶೀಘ್ರವಾಗಿ ಕಾಲುಹಾಕಿ ವಿಚಿತ್ರ ಗತಿಯಲ್ಲಿ ಸಂಚರಿಸುತ್ತಿದ್ದ ಆ ಏಕಮಾತ್ರ ಖಡ್ಗಧಾರೀ ರುದ್ರನನ್ನು ಆ ಎಲ್ಲ ಅಸುರರೂ ಸಹಸ್ರ ರುದ್ರರಿರುವರೋ ಎಂದು ಅಂದುಕೊಳ್ಳತೊಡಗಿದರು.

12160055a ಚಿಂದನ್ ಭಿಂದನ್ರುಜನ್ ಕೃಂತನ್ದಾರಯನ್ ಪ್ರಮಥನ್ನಪಿ।
12160055c ಅಚರದ್ದೈತ್ಯಸಂಘೇಷು ರುದ್ರೋಽಗ್ನಿರಿವ ಕಕ್ಷಗಃ।।

ಒಣಗಿದ ಹುಲ್ಲಿನ ರಾಶಿಯನ್ನು ಹೊಕ್ಕ ಅಗ್ನಿಯಂತೆ ರುದ್ರನು ಶತ್ರುಸಮುದಾಯದಲ್ಲಿ ದೈತ್ಯರನ್ನು ಕೊಲ್ಲುತ್ತಾ, ಕಡಿಯುತ್ತಾ, ಗರ್ಜಿಸಿ ಹೊಡೆಯುತ್ತಾ, ಗಾಯಗೊಳಿಸಿ ಕತ್ತರಿಸುತ್ತಾ ಹಾಗೂ ಸೀಳುತ್ತಾ ಕೆಳಕ್ಕುರುಳಿಸಿ ಸಂಚರಿಸುತ್ತಿದ್ದನು.

12160056a ಅಸಿವೇಗಪ್ರರುಗ್ಣಾಸ್ತೇ9 ಚಿನ್ನಬಾಹೂರುವಕ್ಷಸಃ।
12160056c ಸಂಪ್ರಕೃತ್ತೋತ್ತಮಾಂಗಾಶ್ಚ10 ಪೇತುರುರ್ವ್ಯಾಂ ಮಹಾಸುರಾಃ।।

ಖಡ್ಗದ ವೇಗದಿಂದ ಬಾಹುಗಳು ಮತ್ತು ತೊಡೆಗಳು ತುಂಡಾಗಿ ಮತ್ತು ಎದೆಗಳು ಸೀಳಿ ಅವರು ಗಾಯಗೊಂಡರು. ಶಿರಸ್ಸುಗಳು ಕತ್ತರಿಸಿ ಮಹಾಸುರವು ಭೂಮಿಯ ಮೇಲೆ ಬಿದ್ದರು.

12160057a ಅಪರೇ ದಾನವಾ ಭಗ್ನಾ ರುದ್ರಘಾತಾವಪೀಡಿತಾಃ11
12160057c ಅನ್ಯೋನ್ಯಮಭಿನರ್ದಂತೋ ದಿಶಃ ಸಂಪ್ರತಿಪೇದಿರೇ।।

ಇತರ ದಾನವರು ರುದ್ರನ ಖಡ್ಗಪ್ರಹಾರದಿಂದುಂಟಾದ ಗಾಯಗಳಿಂದ ಪೀಡಿತರಾಗಿ ಅನ್ಯೋನ್ಯರನ್ನು ಕರೆಯುತ್ತಾ ದಿಕ್ಕಾಪಾಲಾಗಿ ಓಡಿ ಹೋದರು.

12160058a ಭೂಮಿಂ ಕೇ ಚಿತ್ಪ್ರವಿವಿಶುಃ ಪರ್ವತಾನಪರೇ ತಥಾ।
12160058c ಅಪರೇ ಜಗ್ಮುರಾಕಾಶಮಪರೇಽಂಭಃ ಸಮಾವಿಶನ್।।

ಕೆಲವರು ಭೂಮಿಯನ್ನು ಪ್ರವೇಶಿಸಿದರು. ಇನ್ನು ಕೆಲವರು ಪರ್ವತಗಳಲ್ಲಿ ಅಡಗಿಕೊಂಡರು. ಕೆಲವರು ಆಕಾಶಕ್ಕೆ ಹಾರಿದರು ಮತ್ತು ಇನ್ನು ಅನೇಕ ದಾನವರು ನೀರನ್ನು ಪ್ರವೇಶಿಸಿದರು.

12160059a ತಸ್ಮಿನ್ಮಹತಿ ಸಂವೃತ್ತೇ ಸಮರೇ ಭೃಶದಾರುಣೇ।
12160059c ಬಭೌ ಭೂಮಿಃ ಪ್ರತಿಭಯಾ ತದಾ ರುಧಿರಕರ್ದಮಾ।।

ಅಲ್ಲಿ ಅತ್ಯಂತ ದಾರುಣ ಮಾಹಾ ಯುದ್ಧವು ಆರಂಭವಾಗಲು ಭೂಮಿಯ ಮೇಲೆ ರಕ್ತ ಮತ್ತು ಮಾಂಸಗಳ ಕೆಸರು ತುಂಬಿಕೊಂಡಿತು. ಅದರಿಂದ ಅದು ಅತ್ಯಂತ ಭಯಂಕರವಾಗಿ ಕಾಣುತ್ತಿತ್ತು.

12160060a ದಾನವಾನಾಂ ಶರೀರೈಶ್ಚ ಮಹದ್ಭಿಃ ಶೋಣಿತೋಕ್ಷಿತೈಃ।
12160060c ಸಮಾಕೀರ್ಣಾ ಮಹಾಬಾಹೋ ಶೈಲೈರಿವ ಸಕಿಂಶುಕೈಃ।।

ಮಹಾಬಾಹೋ! ರಕ್ತದಿಂದ ತೋಯ್ದು ಕೆಳಗಿ ಬಿದ್ದ ದಾನವರ ಮಹಾ ಶರೀರಗಳಿಂದ ಭೂಮಿಯು ಪಲಾಶಪುಷ್ಪಗಳಿಂದ ಕೂಡಿದ ಪರ್ವತಶಿಖರಗಳಿಂದ ಆಚ್ಛಾದಿತಗೊಂಡಂತೆ ಕಾಣುತ್ತಿತ್ತು.

12160061a ರುಧಿರೇಣ ಪರಿಕ್ಲಿನ್ನಾ ಪ್ರಬಭೌ ವಸುಧಾ ತದಾ।
12160061c ರಕ್ತಾರ್ದ್ರವಸನಾ ಶ್ಯಾಮಾ ನಾರೀವ ಮದವಿಹ್ವಲಾ।।

ರಕ್ತದಿಂದ ತೋಯ್ದುಹೋಗಿದ್ದ ವಸುಧೆಯು ಆಗ ಕೆಂಪುವಸ್ತ್ರವನ್ನುಟ್ಟಿದ್ದ ಮದವಿಹ್ವಲ ಶ್ಯಾಮವರ್ಣದ ಸ್ತ್ರೀಯಂತೆ ತೋರುತ್ತಿದ್ದಳು.

12160062a ಸ ರುದ್ರೋ ದಾನವಾನ್ ಹತ್ವಾ ಕೃತ್ವಾ ಧರ್ಮೋತ್ತರಂ ಜಗತ್।
12160062c ರೌದ್ರಂ ರೂಪಂ ವಿಹಾಯಾಶು ಚಕ್ರೇ ರೂಪಂ ಶಿವಂ ಶಿವಃ।।

ದಾನವರನ್ನು ವಧಿಸಿ ಜಗತ್ತಿನಲ್ಲಿ ಧರ್ಮಪ್ರಧಾನತೆಯನ್ನು ಸ್ಥಾಪಿಸಿ ಭಗವಾನ್ ರುದ್ರನು ಆ ರೌದ್ರ ರೂಪವನ್ನು ತ್ಯಜಿಸಿದನು ಮತ್ತು ಶಿವನು ತನ್ನ ಕಲ್ಯಾಣಕಾರೀ ಮಂಗಲಮಯ ರೂಪದಿಂದ ಶೋಭಿಸಿದನು.

12160063a ತತೋ ಮಹರ್ಷಯಃ ಸರ್ವೇ ಸರ್ವೇ ದೇವಗಣಾಸ್ತಥಾ।
12160063c ಜಯೇನಾದ್ಭುತಕಲ್ಪೇನ ದೇವದೇವಮಥಾರ್ಚಯನ್।।

ಆಗ ಎಲ್ಲ ಮಹರ್ಷಿಗಳೂ ಸರ್ವದೇವಗಣಗಳೂ ಆ ಅದ್ಭುತ ವಿಜಯದಿಂದ ಸಂತುಷ್ಟರಾಗಿ ದೇವದೇವನನ್ನು ಪೂಜಿಸಿದರು.

12160064a ತತಃ ಸ ಭಗವಾನ್ರುದ್ರೋ ದಾನವಕ್ಷತಜೋಕ್ಷಿತಮ್।
12160064c ಅಸಿಂ ಧರ್ಮಸ್ಯ ಗೋಪ್ತಾರಂ ದದೌ ಸತ್ಕೃತ್ಯ ವಿಷ್ಣವೇ।।

ಅನಂತರ ಭಗವಾನ್ ರುದ್ರನು ದಾನವರ ರಕ್ತದಿಂದ ತೋಯ್ದುಹೋಗಿದ್ದ ಆ ಖಡ್ಗವನ್ನು ಧರ್ಮರಕ್ಷಕ ವಿಷ್ಣುವಿಗೆ ಸತ್ಕರಿಸಿ ನೀಡಿದನು.

12160065a ವಿಷ್ಣುರ್ಮರೀಚಯೇ ಪ್ರಾದಾನ್ಮರೀಚಿರ್ಭಗವಾಂಶ್ಚ ತಮ್।
12160065c ಮಹರ್ಷಿಭ್ಯೋ ದದೌ ಖಡ್ಗಮೃಷಯೋ ವಾಸವಾಯ ತು।।

ವಿಷ್ಣುವು ಮರೀಚಿಗೆ, ಮರೀಚಿಯು ಮಹರ್ಷಿಗಳಿಗೆ ಮತ್ತು ಮಹರ್ಷಿಗಳು ಆ ಖಡ್ಗವನ್ನು ಇಂದ್ರನಿಗೆ ನೀಡಿದರು.

12160066a ಮಹೇಂದ್ರೋ ಲೋಕಪಾಲೇಭ್ಯೋ ಲೋಕಪಾಲಾಸ್ತು ಪುತ್ರಕ।
12160066c ಮನವೇ ಸೂರ್ಯಪುತ್ರಾಯ ದದುಃ ಖಡ್ಗಂ ಸುವಿಸ್ತರಮ್।।

ಪುತ್ರಕ! ಅನಂತರ ಮಹೇಂದ್ರನು ಲೋಕಪಾಲಕರಿಗೆ ಮತ್ತು ಲೋಕಪಾಲಕರು ಸೂರ್ಯಪುತ್ರ ಮನುವಿಗೆ ಆ ವಿಶಾಲ ಖಡ್ಗವನ್ನಿತ್ತರು.

12160067a ಊಚುಶ್ಚೈನಂ ತಥೈವಾದ್ಯಂ ಮಾನುಷಾಣಾಂ ತ್ವಮೀಶ್ವರಃ।
12160067c ಅಸಿನಾ ಧರ್ಮಗರ್ಭೇಣ ಪಾಲಯಸ್ವ ಪ್ರಜಾ ಇತಿ।।

ಖಡ್ಗವನ್ನಿತ್ತು ಅವರು ಮನುವಿಗೆ ಹೇಳಿದರು: “ನೀನು ಮನುಷ್ಯರ ಈಶ್ವರನು. ಆದುದರಿಂದ ಈ ಧರ್ಮಗರ್ಭಿತ ಖಡ್ಗದಿಂದ ಪ್ರಜೆಗಳನ್ನು ಪಾಲಿಸು.

12160068a ಧರ್ಮಸೇತುಮತಿಕ್ರಾಂತಾಃ ಸೂಕ್ಷ್ಮಸ್ಥೂಲಾರ್ಥಕಾರಣಾತ್।
12160068c ವಿಭಜ್ಯ ದಂಡಂ ರಕ್ಷ್ಯಾಃ ಸ್ಯುರ್ಧರ್ಮತೋ ನ ಯದೃಚ್ಚಯಾ।।
12160069a ದುರ್ವಾಚಾ ನಿಗ್ರಹೋ ದಂಡೋ ಹಿರಣ್ಯಬಹುಲಸ್ತಥಾ।
12160069c ವ್ಯಂಗನಂ ಚ ಶರೀರಸ್ಯ ವಧೋ ವಾನಲ್ಪಕಾರಣಾತ್।।
12160070a ಅಸೇರೇತಾನಿ ರೂಪಾಣಿ ದುರ್ವಾಚಾದೀನಿ ನಿರ್ದಿಶೇತ್।

ಯಾರು ಸ್ಥೂಲ ಮತ್ತು ಸೂಕ್ಷ್ಮಶರೀರಗಳ ಸುಖಕ್ಕಾಗಿ ಧರ್ಮಸೇತುವನ್ನು ಅತಿಕ್ರಮಿಸುವರೋ ಅವರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ದಂಡಗಳನ್ನಿತ್ತು ಧರ್ಮಪೂರ್ವಕವಾಗಿ ಸಮಸ್ತ ಪ್ರಜೆಗಳನ್ನು ರಕ್ಷಿಸು. ಯಾರಮೇಲೂ ಸ್ವೇಚ್ಛಾಚಾರವನ್ನು ನಡೆಸಬೇಡ. ಕಟುವಚನದಿಂದ ಅಪರಾಧಿಯನ್ನು ನಿಗ್ರಹಿಸುವುದಕ್ಕೆ ವಾಗ್ದಂಡ ಎಂದು ಹೇಳುತ್ತಾರೆ. ಅಪರಾಧಿಯಿಂದ ಅಧಿಕ ಸುವರ್ಣವನ್ನು ವಸೂಲಿಮಾಡುವುದನ್ನು ಅರ್ಥದಂಡ ಎನ್ನುತ್ತಾರೆ. ಶರೀರದ ಯಾವುದಾದರೂ ಅಂಗವನ್ನು ಕತ್ತರಿಸುವುದನ್ನು ಕಾಯದಂಡ ಎಂದು ಹೇಳುತ್ತಾರೆ. ಯಾವುದೇ ಮಹಾ ಅಪರಾಧದ ಕಾರಣದಿಂದ ಅಪರಾಧಿಯನ್ನು ವಧಿಸುವುದಾದರೆ ಅದನ್ನು ಪ್ರಾಣದಂಡ ಎಂದು ಹೇಳುತ್ತಾರೆ. ಈ ನಾಲ್ಕೂ ದಂಡಗಳೂ ಖಡ್ಗದ ದುರ್ನಿವಾರ ಅಥವಾ ದುರ್ಧರ್ಷ ರೂಪಗಳು.

12160070c ಅಸೇರೇವ ಪ್ರಮಾಣಾನಿ ಪರಿಮಾಣವ್ಯತಿಕ್ರಮಾತ್।।
12160071a ಅಧಿಸೃಜ್ಯಾಥ ಪುತ್ರಂ ಸ್ವಂ ಪ್ರಜಾನಾಮಧಿಪಂ ತತಃ।
12160071c ಮನುಃ ಪ್ರಜಾನಾಂ ರಕ್ಷಾರ್ಥಂ ಕ್ಷುಪಾಯ ಪ್ರದದಾವಸಿಮ್।।
12160072a ಕ್ಷುಪಾಜ್ಜಗ್ರಾಹ ಚೇಕ್ಷ್ವಾಕುರಿಕ್ಷ್ವಾಕೋಶ್ಚ ಪುರೂರವಾಃ।

ಪ್ರಜೆಗಳು ಧರ್ಮವನ್ನು ಉಲ್ಲಂಘಿಸಿದಾಗ ಖಡ್ಗಪ್ರಮಾಣಿತವಾದ ಈ ದಂಡವನ್ನು ಯಥಾಯೋಗ್ಯವಾಗಿ ಪ್ರಯೋಗಿಸಿ ಧರ್ಮವನ್ನು ರಕ್ಷಿಸಬೇಕು.” ಹೀಗೆ ಹೇಳಿ ಲೋಕಪಾಲಕರು ತಮ್ಮ ಪುತ್ರ ಪ್ರಜಾಪಾಲಕ ಮನುವನ್ನು ಬೀಳ್ಕೊಟ್ಟರು. ನಂತರ ಮನುವು ಪ್ರಜಾರಕ್ಷಣೆಗಾಗಿ ಆ ಖಡ್ಗವನ್ನು ಕ್ಷುಪಕನಿಗೆ ಕೊಟ್ಟನು. ಕ್ಷುಪನಿಂದ ಇಕ್ಷ್ವಾಕು ಮತ್ತು ಇಕ್ಷ್ವಾಕುವಿನಿಂದ ಪುರೂರವನು ಆ ಖಡ್ಗವನ್ನು ಪಡೆದುಕೊಂಡರು.

12160072c ಆಯುಶ್ಚ ತಸ್ಮಾಲ್ಲೇಭೇ ತಂ ನಹುಷಶ್ಚ ತತೋ ಭುವಿ।।
12160073a ಯಯಾತಿರ್ನಹುಷಾಚ್ಚಾಪಿ ಪೂರುಸ್ತಸ್ಮಾಚ್ಚ ಲಬ್ಧವಾನ್।

ಪುರೂರವನಿಂದ ಆಯು, ಆಯುವಿನಿಂದ ನಹುಷ, ನಹುಷನಿಂದ ಯಯಾತಿ, ಮತ್ತು ಯಯಾತಿಯಿಂದ ಪೂರುವು ಈ ಖಡ್ಗವನ್ನು ಭೂತಲದಲ್ಲಿ ಪಡೆದುಕೊಂಡರು.

12160073c ಆಮೂರ್ತರಯಸಸ್ತಸ್ಮಾತ್ತತೋ ಭೂಮಿಶಯೋ ನೃಪಃ।।
12160074a ಭರತಶ್ಚಾಪಿ ದೌಃಷಂತಿರ್ಲೇಭೇ ಭೂಮಿಶಯಾದಸಿಮ್।

ಪೂರುವಿನಿಂದ ಅಮೂರ್ತರಯ, ಅಮೂರ್ತರಯನಿಂದ ನೃಪ ಭೂಮಿಶಯ ಮತ್ತು ಭೂಮಿಶಯನಿಂದ ಈ ಖಡ್ಗವನ್ನು ದುಷ್ಯಂತಕುಮಾರ ಭರತನು ಪಡೆದುಕೊಂಡನು.

12160074c ತಸ್ಮಾಚ್ಚ ಲೇಭೇ ಧರ್ಮಜ್ಞೋ ರಾಜನ್ನೈಡಬಿಡಸ್ತಥಾ12।।
12160075a ತತಶ್ಚೈಡಬಿಡಾಲ್ಲೇಭೇ13 ಧುಂಧುಮಾರೋ ಜನೇಶ್ವರಃ।

ರಾಜನ್! ಅವನಿಂದ ಧರ್ಮಜ್ಞ ಐಡಬಿಡನು ಆ ಖಡ್ಗವನ್ನು ಪಡೆದನು. ಅನಂತರ ಐಡಬಿಡನಿಂದ ಜನೇಶ್ವರ ಧುಂಧುಮಾರನು ಪಡೆದುಕೊಂಡನು.

12160075c ಧುಂಧುಮಾರಾಚ್ಚ ಕಾಂಬೋಜೋ ಮುಚುಕುಂದಸ್ತತೋಽಲಭತ್।।
12160076a ಮುಚುಕುಂದಾನ್ಮರುತ್ತಶ್ಚ ಮರುತ್ತಾದಪಿ ರೈವತಃ।
12160076c ರೈವತಾದ್ಯುವನಾಶ್ವಶ್ಚ ಯುವನಾಶ್ವಾತ್ತತೋ ರಘುಃ।।
12160077a ಇಕ್ಷ್ವಾಕುವಂಶಜಸ್ತಸ್ಮಾದ್ಧರಿಣಾಶ್ವಃ ಪ್ರತಾಪವಾನ್।
12160077c ಹರಿಣಾಶ್ವಾದಸಿಂ ಲೇಭೇ ಶುನಕಃ ಶುನಕಾದಪಿ।।
12160078a ಉಶೀನರೋ ವೈ ಧರ್ಮಾತ್ಮಾ ತಸ್ಮಾದ್ಭೋಜಾಃ ಸಯಾದವಾಃ।
12160078c ಯದುಭ್ಯಶ್ಚ ಶಿಬಿರ್ಲೇಭೇ ಶಿಬೇಶ್ಚಾಪಿ ಪ್ರತರ್ದನಃ।।
12160079a ಪ್ರತರ್ದನಾದಷ್ಟಕಶ್ಚ ರುಶದಶ್ವೋಽಷ್ಟಕಾದಪಿ14

ಧುಂಧುಮಾರನಿಂದ ಕಾಂಬೋಜ, ಕಾಂಬೋಜನಿಂದ ಮುಚುಕುಂದ, ಮುಚುಕುಂದನಿಂದ ಮರುತ್ತ, ಮರುತ್ತನಿಂದ ರೈವತ, ರೈವತನಿಂದ ಯುವನಾಶ್ವ, ಯುವನಾಶ್ವನಿಂದ ಇಕ್ಷ್ವಾಕುವಂಶೀ ರಘು, ರಘುವಿನಿಂದ ಪ್ರತಾಪವಾನ್ ಹರಿಣಾಶ್ವ, ಹರಿಣಾಶ್ವನಿಂದ ಶುನಕ, ಶುನಕನಿಂದ ಧರ್ಮಾತ್ಮಾ ಉಶೀನರ, ಉಶೀನರನಿಂದ ಯದುವಂಶೀ ಭೋಜ, ಯದುವಂಶೀಯನಿಂದ ಶಿಬಿ, ಶಿಬಿಯಿಂದ ಪ್ರತರ್ದನ, ಪ್ರತರ್ದನನಿಂದ ಅಷ್ಟಕ, ಅಷ್ಟಕನಿಂದ ರುಶದಶ್ವನು ಈ ಖಡ್ಗವನ್ನು ಪಡೆದುಕೊಂಡನು.

12160079c ರುಶದಶ್ವಾದ್ಭರದ್ವಾಜೋ15 ದ್ರೋಣಸ್ತಸ್ಮಾತ್ಕೃಪಸ್ತತಃ।
12160079e ತತಸ್ತ್ವಂ ಭ್ರಾತೃಭಿಃ ಸಾರ್ಧಂ ಪರಮಾಸಿಮವಾಪ್ತವಾನ್।।

ರುಶದಶ್ವನಿಂದ ಭರದ್ವಾಜ ವಂಶೀಯ ದ್ರೋಣನೂ ನಂತರ ದ್ರೋಣನಿಂದ ಕೃಪನೂ ಖಡ್ಗವಿದ್ಯೆಯನ್ನು ಪಡೆದುಕೊಂಡರು. ನಂತರ ಕೃಪನಿಂದ ಸಹೋದರರೊಂದಿಗೆ ನೀನು ಈ ಪರಮ ಖಡ್ಗವನ್ನು ಪಡೆದುಕೊಂಡೆ.

12160080a ಕೃತ್ತಿಕಾಶ್ಚಾಸ್ಯ ನಕ್ಷತ್ರಮಸೇರಗ್ನಿಶ್ಚ ದೈವತಮ್।
12160080c ರೋಹಿಣ್ಯೋ ಗೋತ್ರಮಸ್ಯಾಥ ರುದ್ರಶ್ಚ ಗುರುರುತ್ತಮಃ।।

ಖಡ್ಗದ ನಕ್ಷತ್ರವು ಕೃತ್ತಿಕಾ. ಅಗ್ನಿಯು ಅದರ ದೇವತೆ. ಗೋತ್ರವು ರೋಹಿಣೀ ಮತ್ತು ಅದರ ಉತ್ತಮ ಗುರುವು ರುದ್ರದೇವನು.

12160081a ಅಸೇರಷ್ಟೌ ಚ ನಾಮಾನಿ ರಹಸ್ಯಾನಿ ನಿಬೋಧ ಮೇ।
12160081c ಪಾಂಡವೇಯ ಸದಾ ಯಾನಿ ಕೀರ್ತಯಽಲ್ಲಭತೇ ಜಯಮ್।।
12160082a ಅಸಿರ್ವಿಶಸನಃ ಖಡ್ಗಸ್ತೀಕ್ಷ್ಣವರ್ತ್ಮಾ ದುರಾಸದಃ।
12160082c ಶ್ರೀಗರ್ಭೋ ವಿಜಯಶ್ಚೈವ ಧರ್ಮಪಾಲಸ್ತಥೈವ ಚ।।

ಪಾಂಡವೇಯ! ಖಡ್ಗಕ್ಕೆ ಎಂಟು ರಹಸ್ಯ ನಾಮಗಳಿವೆ. ಅವನ್ನು ನನ್ನಿಂದ ಕೇಳು. ಆ ನಾಮಗಳ ಕೀರ್ತನೆಯಿಂದ ಕೀರ್ತಿ-ಜಯಗಳು ದೊರೆಯುತ್ತವೆ: (೧) ಅಸಿ (೨) ವಿಶಸನ (೩) ಖಡ್ಗ (೪) ತೀಕ್ಷ್ಣಧಾರ (೫) ದುರಾಸದ (೬) ಶ್ರೀಗರ್ಭ (೭) ವಿಜಯ (೮) ಧರ್ಮಪಾಲ.

12160083a ಅಗ್ರ್ಯಃ ಪ್ರಹರಣಾನಾಂ ಚ ಖಡ್ಗೋ ಮಾದ್ರವತೀಸುತ।
12160083c ಮಹೇಶ್ವರಪ್ರಣೀತಶ್ಚ ಪುರಾಣೇ ನಿಶ್ಚಯಂ ಗತಃ।।

ಮಾದ್ರವತೀಸುತ! ಆಯುಧಗಳಲ್ಲಿ ಖಡ್ಗವು ಅಗ್ರಣೀಯವು. ಮಹೇಶ್ವರನು ಮೊದಲು ಇದನ್ನು ಉಪಯೋಗಿಸಿದ್ದನು. ಪುರಾಣದಲ್ಲಿ ಇದನ್ನು ನಿಶ್ಚಯಿಸಲಾಗಿದೆ.

12160084a ಪೃಥುಸ್ತೂತ್ಪಾದಯಾಮಾಸ ಧನುರಾದ್ಯಮರಿಂದಮ।
12160084c ತೇನೇಯಂ ಪೃಥಿವೀ ಪೂರ್ವಂ ವೈನ್ಯೇನ ಪರಿರಕ್ಷಿತಾ16।।

ಅರಿಂದಮ! ಧನುಸ್ಸನ್ನು ಮೊದಲು ಉತ್ಪಾದಿಸಿದವನು ಪೃಥುವು. ವೇನನ ಮಗ ಪೃಥುವು ಅದರಿಂದಲೇ ಹಿಂದೆ ಈ ಭೂಮಿಯನ್ನು ರಕ್ಷಿಸಿದನು.

12160085a ತದೇತದಾರ್ಷಂ ಮಾದ್ರೇಯ ಪ್ರಮಾಣಂ ಕರ್ತುಮರ್ಹಸಿ।
12160085c ಅಸೇಶ್ಚ ಪೂಜಾ ಕರ್ತವ್ಯಾ ಸದಾ ಯುದ್ಧವಿಶಾರದೈಃ।।

ಮಾದ್ರೇಯ! ಆದುದರಿಂದ ಯುದ್ಧವಿಶಾರದರಿಗೆ ಸದಾ ಖಡ್ಗವನ್ನು ಪೂಜಿಸುವುದು ಕರ್ತವ್ಯವಾಗಿದೆ. ಇದು ಮಹರ್ಷಿಗಳ ಅಭಿಮತವಾಗಿದೆ. ನೀನೂ ಕೂಡ ಇದನ್ನು ಮಾಡಬೇಕು.

12160086a ಇತ್ಯೇಷ ಪ್ರಥಮಃ ಕಲ್ಪೋ ವ್ಯಾಖ್ಯಾತಸ್ತೇ ಸುವಿಸ್ತರಃ।
12160086c ಅಸೇರುತ್ಪತ್ತಿಸಂಸರ್ಗೋ ಯಥಾವದ್ಭರತರ್ಷಭ।।

ಭರತರ್ಷಭ! ಹೀಗೆ ನಾನು ಖಡ್ಗದ ಉತ್ಪತ್ತಿ ಪ್ರಸಂಗವನ್ನು ವಿಸ್ತಾರವಾಗಿ ಯಥಾವತ್ತಾಗಿ ಹೇಳಿದ್ದೇನೆ. ಇದರಿಂದ ಎಲ್ಲ ಆಯುಧಗಳಿಗಿಂತಲೂ ಖಡ್ಗವೇ ಶ್ರೇಷ್ಠ ಮತ್ತು ಪ್ರಥಮ ಆಯುಧವೆಂದು ಸ್ಪಷ್ಟವಾಗುತ್ತದೆ.

12160087a ಸರ್ವಥೈತದಿಹ ಶ್ರುತ್ವಾ ಖಡ್ಗಸಾಧನಮುತ್ತಮಮ್।
12160087c ಲಭತೇ ಪುರುಷಃ ಕೀರ್ತಿಂ ಪ್ರೇತ್ಯ ಚಾನಂತ್ಯಮಶ್ನುತೇ।।

ಖಡ್ಗಪ್ರಾಪ್ತಿಯ ಈ ಉತ್ತಮ ಪ್ರಸಂಗವನ್ನು ಸಂಪೂರ್ಣವಾಗಿ ಕೇಳಿದ ಪುರುಷನು ಇಹದಲ್ಲಿ ಕೀರ್ತಿಯನ್ನೂ ಪರದಲ್ಲಿ ಅಕ್ಷಯ ಪುಣ್ಯ ಲೋಕಗಳನ್ನು ಪಡೆದುಕೊಳ್ಳುತ್ತಾನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಖಡ್ಗೋತ್ಪತ್ತಿಕಥನೇ ಷಷ್ಟ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಖಡ್ಗೋತ್ಪತ್ತಿಕಥನ ಎನ್ನುವ ನೂರಾಅರವತ್ತನೇ ಅಧ್ಯಾಯವು.


  1. ಶ್ರೇಷ್ಠಮತೀವಾತ್ರ (ಗೀತಾ ಪ್ರೆಸ್). ↩︎

  2. ತುಪ್ಪವನ್ನೇ ತಿಂದುಕೊಂಡು ಇರುವವರು (ಗೀತಾ ಪ್ರೆಸ್). ↩︎

  3. ಸೋಮವನ್ನು ಕುಡಿಯುವವರು (ಗೀತಾ ಪ್ರೆಸ್). ↩︎

  4. ಗಾಳಿಯನ್ನೇ ಕುಡಿದುಕೊಂಡಿರುವವರು (ಗೀತಾ ಪ್ರೆಸ್). ↩︎

  5. ಸೂರ್ಯನ ಕಿರಣಗಳನ್ನೇ ಕುಡಿದುಕೊಂಡಿರುವವರು (ಗೀತಾ ಪ್ರೆಸ್). ↩︎

  6. ಬಿತ್ತಿ-ಬೆಳೆಸದೇ ಇರುವ ಧಾನ್ಯಗಳನ್ನು ತಿಂದುಕೊಂಡಿರುವವರು (ಗೀತಾ ಪ್ರೆಸ್). ↩︎

  7. ಸಂನ್ಯಾಸಿಗಳು (ಗೀತಾ ಪ್ರೆಸ್). ↩︎

  8. ಸಮಿದ್ಭಿಃ (ಗೀತಾ ಪ್ರೆಸ್). ↩︎

  9. ಅಸಿವೇಗಪ್ರಭಗ್ನಾಸ್ತೇ (ಗೀತಾ ಪ್ರೆಸ್). ↩︎

  10. ಸಂಪ್ರಕೀರ್ಣಾಂತ್ರಗಾತ್ರಾಶ್ಚ (ಗೀತಾ ಪ್ರೆಸ್). ↩︎

  11. ಖಡ್ಗಪಾತಾವಪೀಡಿತಾಃ। (ಗೀತಾ ಪ್ರೆಸ್). ↩︎

  12. ರಾಜನ್ನೈಲವಿಲಸ್ತಥಾ। (ಗೀತಾ ಪ್ರೆಸ್). ↩︎

  13. ತತಸ್ತ್ವೈಲವಿಲಾಲ್ಲೇಭೇ। (ಗೀತಾ ಪ್ರೆಸ್). ↩︎

  14. ಪೃಷದಶ್ವೋಽಷ್ಟಕಾದಪಿ। (ಗೀತಾ ಪ್ರೆಸ್). ↩︎

  15. ಪೃಷದಶ್ವಾದ್ಭರದ್ವಾಜೋ (ಗೀತಾ ಪ್ರೆಸ್). ↩︎

  16. ತೇನೇಯಂ ಪೃಥಿವೀ ದುಗ್ಧಾ ಸಸ್ಯಾನಿ ಸುಬಹೂನ್ಯಪಿ। ಧರ್ಮೇಣ ಚ ಯಥಾಪೂರ್ವಂ ವೈನ್ಯೇನ ಪರಿರಕ್ಷಿತಾ।। (ಗೀತಾ ಪ್ರೆಸ್). ↩︎