ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 159
ಸಾರ
ನಾನಾ ವಿಧದ ಪಾಪಗಳು ಮತ್ತು ಅವುಗಳ ಪ್ರಾಯಶ್ಚಿತ್ತಗಳ ವರ್ಣನೆ (1-72).
12159001 ಭೀಷ್ಮ ಉವಾಚ।
12159001a ಕೃತಾರ್ಥೋ1 ಯಕ್ಷ್ಯಮಾಣಶ್ಚ ಸರ್ವವೇದಾಂತಗಶ್ಚ ಯಃ।
12159001c ಆಚಾರ್ಯಪಿತೃಭಾರ್ಯಾರ್ಥಂ2 ಸ್ವಾಧ್ಯಾಯಾರ್ಥಮಥಾಪಿ ವಾ।।
12159002a ಏತೇ ವೈ ಸಾಧವೋ ದೃಷ್ಟಾ ಬ್ರಾಹ್ಮಣಾ ಧರ್ಮಭಿಕ್ಷವಃ।
12159002c ಅಸ್ವೇಭ್ಯೋ3 ದೇಯಮೇತೇಭ್ಯೋ ದಾನಂ ವಿದ್ಯಾವಿಶೇಷತಃ4।।
ಭೀಷ್ಮನು ಹೇಳಿದನು: “ಯಜ್ಞಮಾಡಲು ಇಚ್ಛಿಸುವ, ಸರ್ವವೇದಾಂಗಗಳನ್ನೂ ಕಲಿತಿರುವ ಕೃತಾರ್ಥ ಧರ್ಮಭಿಕ್ಷು ಸಾಧು ಬ್ರಾಹ್ಮಣರನ್ನು ಹುಡುಕಿ ನಮ್ಮಂಥವರು ಆಚಾರ್ಯ-ಪಿತೃಕರ್ಮಗಳಿಗೆ, ಅಥವಾ ಸ್ವಾಧ್ಯಾಯಕ್ಕೆ, ವಿಶೇಷವಾಗಿ ವಿದ್ಯಾರ್ಜನೆಗೆ, ದಾನಮಾಡಬೇಕು.
12159003a ಅನ್ಯತ್ರ ದಕ್ಷಿಣಾ ಯಾ ತು ದೇಯಾ ಭರತಸತ್ತಮ।
12159003c ಅನ್ಯೇಭ್ಯೋ ಹಿ ಬಹಿರ್ವೇದ್ಯಾಂ ನಾಕೃತಾನ್ನಂ ವಿಧೀಯತೇ।।
ಭರತಸತ್ತಮ! ಅನ್ಯ ಸನ್ನಿವೇಶಗಳಲ್ಲಿ ಬ್ರಾಹ್ಮಣರಿಗೆ ಕೇವಲ ದಕ್ಷಿಣೆಗಳನ್ನು ನೀಡಬೇಕು. ಅನ್ಯರಿಗೂ ಯಜ್ಞವೇದಿಯ ಹೊರಗೆ ಅಕ್ಕಿಯನ್ನು ನೀಡುವ ವಿಧಾನವಿದೆ.
12159004a ಸರ್ವರತ್ನಾನಿ ರಾಜಾ ಚ ಯಥಾರ್ಹಂ ಪ್ರತಿಪಾದಯೇತ್।
12159004c ಬ್ರಾಹ್ಮಣಾಶ್ಚೈವ ಯಜ್ಞಾಶ್ಚ ಸಹಾನ್ನಾಃ5 ಸಹದಕ್ಷಿಣಾಃ6।।
ರಾಜನು ಯಥಾರ್ಹವಾಗಿ ಸರ್ವ ರತ್ನಗಳನ್ನೂ ದಾನಮಾಡಬೇಕು. ಏಕೆಂದರೆ ಬ್ರಾಹ್ಮಣರೇ ದಕ್ಷಿಣಾಯುಕ್ತ ಅನ್ನಯುಕ್ತ ಯಜ್ಞಗಳು.
12159005a ಯಸ್ಯ ತ್ರೈವಾರ್ಷಿಕಂ ಭಕ್ತಂ ಪರ್ಯಾಪ್ತಂ ಭೃತ್ಯವೃತ್ತಯೇ।
12159005c ಅಧಿಕಂ ವಾಪಿ ವಿದ್ಯೇತ ಸ ಸೋಮಂ ಪಾತುಮರ್ಹತಿ।।
ಯಾವ ಬ್ರಾಹ್ಮಣನಲ್ಲಿ ತನ್ನ ಕುಟುಂಬಜನರ ಭರಣ-ಪೋಷಣೆಗೆ ಮೂರು ವರ್ಷಗಳಿಗೆ ಸಾಕಾಗುವಷ್ಟು ಅಥವಾ ಅದಕ್ಕಿಂತಲೂ ಅಧಿಕ ಧನವಿರುವುದೋ ಅವನು ಸೋಮಪಾನಕ್ಕೆ ಅಧಿಕಾರಿಯಾಗುತ್ತಾನೆ. ಅವನು ಸೋಮಯಾಗವನ್ನು ಕೈಗೊಳ್ಳಬೇಕು.
12159006a ಯಜ್ಞಶ್ಚೇತ್ ಪ್ರತಿವಿದ್ಧಃ ಸ್ಯಾದಂಗೇನೈಕೇನ ಯಜ್ವನಃ।
12159006c ಬ್ರಾಹ್ಮಣಸ್ಯ ವಿಶೇಷೇಣ ಧಾರ್ಮಿಕೇ ಸತಿ ರಾಜನಿ।।
12159007a ಯೋ ವೈಶ್ಯಃ ಸ್ಯಾದ್ಬಹುಪಶುರ್ಹೀನಕ್ರತುರಸೋಮಪಃ।
12159007c ಕುಟುಂಬಾತ್ತಸ್ಯ ತದ್ದ್ರವ್ಯಂ ಯಜ್ಞಾರ್ಥಂ ಪಾರ್ಥಿವೋ ಹರೇತ್।।
ಧಾರ್ಮಿಕ ರಾಜನಿದ್ದರೂ ಯಾರಾದರೂ ಯಜ್ಞಕರ್ತನ, ವಿಶೇಷವಾಗಿ ಬ್ರಾಹ್ಮಣನ ಯಜ್ಞವು – ಅದು ಸೋಮಯಜ್ಞವಾಗಿಲ್ಲದಿದ್ದರೆ - ದ್ರವ್ಯದ ಅಭಾವದಿಂದ ನಿಂತುಹೋದರೆ ರಾಜನು ತನ್ನ ದೇಶದಲ್ಲಿರುವ ಅನೇಕ ಪಶುಗಳನ್ನು ಹೊಂದಿದ ವೈಭವಯುಕ್ತ ವೈಶ್ಯನ ಕುಟುಂಬದಿಂದ ಆ ಧನವನ್ನು ಬ್ರಾಹ್ಮಣನಿಗೆ ಕೊಡಿಸಬೇಕು.
12159008a ಆಹರೇದ್ವೇಶ್ಮತಃ ಕಿಂ ಚಿತ್ಕಾಮಂ ಶೂದ್ರಸ್ಯ ದ್ರವ್ಯತಃ।
12159008c ನ ಹಿ ವೇಶ್ಮನಿ ಶೂದ್ರಸ್ಯ ಕಶ್ಚಿದಸ್ತಿ ಪರಿಗ್ರಹಃ।।
ಆದರೆ ರಾಜನು ತನ್ನ ಇಚ್ಛೆಯಂತೆ ಶೂದ್ರನ ಮನೆಯಿಂದ ಸ್ವಲ್ಪವೂ ಧನವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಯಜ್ಞಗಳಲ್ಲಿ ಶೂದ್ರರಿಗೆ ಸ್ವಲ್ಪವೂ ಅಧಿಕಾರವಿಲ್ಲ.
12159009a ಯೋಽನಾಹಿತಾಗ್ನಿಃ ಶತಗುರಯಜ್ವಾ ಚ ಸಹಸ್ರಗುಃ।
12159009c ತಯೋರಪಿ ಕುಟುಂಬಾಭ್ಯಾಮಾಹರೇದವಿಚಾರಯನ್।।
ಒಂದು ನೂರು ಗೋವುಗಳಿದ್ದೂ ಅಗ್ನಿಹೋತ್ರ ಮಾಡದೇ ಇರುವ ಮತ್ತು ಸಾವಿರ ಗೋವುಗಳಿದ್ದೂ ಯಜ್ಞವನ್ನು ಮಾಡದೇ ಇರುವ ವೈಶ್ಯನ ಕುಟುಂಬದಿಂದ ರಾಜನು ವಿಚಾರಿಸದೆಯೇ ಧನವನ್ನು ತೆಗೆದುಕೊಳ್ಳಬಹುದು.
12159010a ಅದಾತೃಭ್ಯೋ ಹರೇನ್ನಿತ್ಯಂ ವ್ಯಾಖ್ಯಾಪ್ಯ ನೃಪತಿಃ ಪ್ರಭೋ7।
12159010c ತಥಾ ಹ್ಯಾಚರತೋ ಧರ್ಮೋ ನೃಪತೇಃ ಸ್ಯಾದಥಾಖಿಲಃ।।
ಪ್ರಭೋ! ಧನವಿದ್ದರೂ ದಾನಮಾಡದಿರುವವರಿಂದ ಅವರ ದೋಷವನ್ನು ವ್ಯಾಖ್ಯಾಯಿಸಿ ನೃಪತಿಯು ಎಂದೂ ಧನವನ್ನು ಧರ್ಮಕಾರ್ಯಕ್ಕಾಗಿ ಪಡೆದುಕೊಳ್ಳಬಹುದು. ಇದರಿಂದ ನೃಪತಿಗೆ ಸಂಪೂರ್ಣ ಧರ್ಮಪ್ರಾಪ್ತಿಯಾಗುತ್ತದೆ.
12159011a ತಥೈವ ಸಪ್ತಮೇ ಭಕ್ತೇ ಭಕ್ತಾನಿ ಷಡನಶ್ನತಾ।
12159011c ಅಶ್ವಸ್ತನವಿಧಾನೇನ ಹರ್ತವ್ಯಂ ಹೀನಕರ್ಮಣಃ।
ಅನ್ನದ ಅಭಾವದ ಕಾರಣದಿಂದ ಆರು ಹೊತ್ತು ಊಟಮಾಡದೇ ಇದ್ದ ಬ್ರಾಹ್ಮಣನು ಯಾರಾದರೂ ಹೀನ ಕರ್ಮಿಗಳಿಂದ ಅವನ ಏಳನೇ ಹೊತ್ತಿನ ಊಟಕ್ಕಾಗುವಷ್ಟನ್ನು ಅಪಹರಿಸಬಹುದು.
12159011e ಖಲಾತ್ ಕ್ಷೇತ್ರಾತ್ತಥಾಗಾರಾದ್ಯತೋ ವಾಪ್ಯುಪಪದ್ಯತೇ।।
12159012a ಆಖ್ಯಾತವ್ಯಂ ನೃಪಸ್ಯೈತತ್ಪೃಚ್ಚತೋಽಪೃಚ್ಚತೋಽಪಿ ವಾ।
ಕಣದಿಂದ, ಹೊಲದಿಂದ ಅಥವಾ ಗುಡಾಣದಿಂದ ಎಲ್ಲಿ ದೊರಕೊತ್ತದೋ ಅಲ್ಲಿಂದ ಅವನು ಊಟಕ್ಕೆ ಸಾಕಾಗುವಷ್ಟು ಮಾತ್ರವನ್ನೇ ಅಪಹರಿಸಿಕೊಂಡು, ರಾಜನು ಕೇಳಲಿ ಅಥವಾ ಕೇಳದಿರಲಿ, ಅವನ ಬಳಿ ಈ ವಿಷಯವನ್ನು ಹೇಳಿಕೊಳ್ಳಬೇಕು.
12159012c ನ ತಸ್ಮೈ ಧಾರಯೇದ್ದಂಡಂ ರಾಜಾ ಧರ್ಮೇಣ ಧರ್ಮವಿತ್।।
12159013a ಕ್ಷತ್ರಿಯಸ್ಯ ಹಿ ಬಾಲಿಶ್ಯಾದ್ ಬ್ರಾಹ್ಮಣಃ ಕ್ಲಿಶ್ಯತೇ ಕ್ಷುಧಾ।
ಧರ್ಮದ ಪ್ರಕಾರ ಧರ್ಮವಿದು ರಾಜನು ಅವನನ್ನು ದಂಡಿಸಬಾರದು. ಏಕೆಂದರೆ ಕ್ಷತ್ರಿಯನ ಮೂರ್ಖತನದಿಂದಲೇ ಬ್ರಾಹ್ಮಣನು ಹಸಿವೆಯ ಕಷ್ಟವನ್ನು ಅನುಭವಿಸುತ್ತಾನೆ.
12159013c ಶ್ರುತಶೀಲೇ ಸಮಾಜ್ಞಾಯ ವೃತ್ತಿಮಸ್ಯ ಪ್ರಕಲ್ಪಯೇತ್।
12159013e ಅಥೈನಂ ಪರಿರಕ್ಷೇತ ಪಿತಾ ಪುತ್ರಮಿವೌರಸಮ್।।
ಅವನ ವಿದ್ಯೆ-ಶೀಲಗಳನ್ನು ತಿಳಿದುಕೊಂಡು ರಾಜನು ಅವನಿಗೆ ವೃತ್ತಿಯನ್ನು ಕಲ್ಪಿಸಿಕೊಡಬೇಕು. ಪಿತನು ಔರಸ ಪುತ್ರನನ್ನು ಹೇಗೆ ಪಾಲಿಸುತ್ತಾನೋ ಹಾಗೆ ಅವನನ್ನು ರಕ್ಷಿಸಬೇಕು.
12159014a ಇಷ್ಟಿಂ ವೈಶ್ವಾನರೀಂ ನಿತ್ಯಂ ನಿರ್ವಪೇದಬ್ದಪರ್ಯಯೇ।
12159014c ಅವಿಕಲ್ಪಃ ಪುರಾಧರ್ಮೋ ಧರ್ಮವಾದೈಸ್ತು ಕೇವಲಮ್[^8}।।
ಪ್ರತಿವರ್ಷ ಮಾಡಬೇಕಾದ ಆಗ್ರಾಯಣ ಮೊದಲಾದ ಯಜ್ಞಗಳನ್ನು ಮಾಡಲಿಕ್ಕಾಗದೇ ಇದ್ದರೆ ಅದರ ಬದಲಾಗಿ ಪ್ರತಿದಿನ ವೈಶ್ವಾನರೀ ಇಷ್ಟಿಯನ್ನು ಮಾಡಬೇಕು. ಮುಖ್ಯ ಕರ್ಮದ ಸ್ಥಾನದಲ್ಲಿ ಮಾಡುವ ಗೌಣ ಕರ್ಮಗಳನ್ನು ಅನುಕಲ್ಪ ಎನ್ನುತ್ತಾರೆ. ಧರ್ಮಜ್ಞರು ಹೇಳಿರುವ ಅನುಕಲ್ಪವೂ ಪರಮ ಧರ್ಮವೆನಿಸಿಕೊಳ್ಳುತ್ತದೆ.
12159015a ವಿಶ್ವೈಸ್ತು ದೇವೈಃ ಸಾಧ್ಯೈಶ್ಚ ಬ್ರಾಹ್ಮಣೈಶ್ಚ ಮಹರ್ಷಿಭಿಃ।
12159015c ಆಪತ್ಸು ಮರಣಾದ್ಭೀತೈರ್ಲಿಂಗಪ್ರತಿನಿಧಿಃ8 ಕೃತಃ।।
ಏಕೆಂದರೆ ವಿಶ್ವೇದೇವರು, ಸಾಧ್ಯರು, ಬ್ರಾಹ್ಮಣರು ಮತ್ತು ಮಹರ್ಷಿಗಳು ಮರಣಭಯದಿಂದ ಆಪತ್ಕಾಲದಲ್ಲಿ ಪ್ರತ್ಯೇಕ ವಿಧಿಗಳಿಗೂ ಪ್ರತಿವಿಧಿಗಳನ್ನು ಮಾಡಿದ್ದಾರೆ.
12159016a ಪ್ರಭುಃ ಪ್ರಥಮಕಲ್ಪಸ್ಯ ಯೋಽನುಕಲ್ಪೇನ ವರ್ತತೇ।
12159016c ನ ಸಾಂಪರಾಯಿಕಂ ತಸ್ಯ ದುರ್ಮತೇರ್ವಿದ್ಯತೇ ಫಲಮ್।।
ಮುಖ್ಯವಿಧಿಯನ್ನು ಮಾಡುವ ಸಾಮರ್ಥ್ಯವಿದ್ದರೂ ಗೌಣವಿಧಿಯನ್ನು ನಡೆಸುವ ದುರ್ಬುದ್ಧಿಯು ಪಾರಲೌಕಿಕ ಫಲಗಳನ್ನು ಪಡೆಯುವುದಿಲ್ಲ.
12159017a ನ ಬ್ರಾಹ್ಮಣಾನ್ವೇದಯೇತ ಕಶ್ಚಿದ್ರಾಜನಿ ಮಾನವಃ9।
12159017c ಅವೀರ್ಯೋ ವೇದನಾದ್ವಿದ್ಯಾತ್ಸುವೀರ್ಯೋ ವೀರ್ಯವತ್ತರಮ್10।।
ಬ್ರಾಹ್ಮಣ ಮನುಷ್ಯನು ಎಂದೂ ತನ್ನ ಕಷ್ಟಗಳನ್ನು ರಾಜನಲ್ಲಿ ಹೇಳಿಕೊಳ್ಳಬಾರದು. ಏಕೆಂದರೆ ರಾಜನ ವೀರ್ಯಕ್ಕಿಂತ ಬ್ರಾಹ್ಮಣನ ಸ್ವವೀರ್ಯವೇ ಬಲವತ್ತರವಾದುದು.
12159018a ತಸ್ಮಾದ್ರಾಜ್ಞಾ ಸದಾ ತೇಜೋ ದುಃಸಹಂ ಬ್ರಹ್ಮವಾದಿನಾಮ್।
12159018c ಮಂತಾ11 ಶಾಸ್ತಾ ವಿಧಾತಾ ಚ ಬ್ರಾಹ್ಮಣೋ ದೇವ ಉಚ್ಯತೇ।
ಆದುದರಿಂದ ಬ್ರಹ್ಮವಾದಿಗಳ ತೇಜಸ್ಸು ರಾಜರಿಗೆ ಸದಾ ದುಃಸ್ಸಹವಾದುದು. ಬ್ರಾಹ್ಮಣನು ಈ ಜಗತ್ತಿನ ಕರ್ತಾ, ಶಾಸಕ, ವಿಧಾತಾ ಮತ್ತು ದೇವನೆಂದು ಹೇಳುತ್ತಾರೆ.
12159018e ತಸ್ಮಿನ್ನಾಕುಶಲಂ ಬ್ರೂಯಾನ್ನ ಶುಕ್ತಾಮೀರಯೇದ್ಗಿರಮ್12।।
12159019a ಕ್ಷತ್ರಿಯೋ ಬಾಹುವೀರ್ಯೇಣ ತರತ್ಯಾಪದಮಾತ್ಮನಃ।
12159019c ಧನೇನ ವೈಶ್ಯಃ ಶೂದ್ರಶ್ಚ ಮಂತ್ರೈರ್ಹೋಮೈಶ್ಚ ವೈ ದ್ವಿಜಃ।।
ಆದುದರಿಂದ ಅವನೊಂದಿಗೆ ಅಕುಶಲ ಮಾತನ್ನಾಡಬಾರದು. ಕಠೋರವಾದ ಮಾತನ್ನಾಡಬಾರದು. ಕ್ಷತ್ರಿಯನು ತನ್ನ ಬಾಹುವೀರ್ಯದಿಂದ, ವೈಶ್ಯರ ಮತ್ತು ಶೂದ್ರದ ಧನದಿಂದ ಮತ್ತು ದ್ವಿಜರ ಮಂತ್ರ ಮತ್ತು ಹೋಮಗಳಿಂದ ತನಗೊದಗಿದ ವಿಪತ್ತಿನಿಂದ ಪಾರಾಗಬಲ್ಲನು.
12159020a ನ ವೈ ಕನ್ಯಾ ನ ಯುವತಿರ್ನಾಮಂತ್ರೋ ನ ಚ ಬಾಲಿಶಃ।
12159020c ಪರಿವೇಷ್ಟಾಗ್ನಿಹೋತ್ರಸ್ಯ ಭವೇನ್ನಾಸಂಸ್ಕೃತಸ್ತಥಾ।
ಕನ್ಯೆ, ಯುವತಿ, ಮಂತ್ರಗಳನ್ನು ತಿಳಿಯದವನು, ಮೂರ್ಖ ಮತ್ತು ಸಂಸ್ಕಾರಹೀನನಿಗೆ ಅಗ್ನಿಯಲ್ಲಿ ಹವನ ಮಾಡುವ ಅಧಿಕಾರವಿಲ್ಲ.
12159020e ನರಕೇ ನಿಪತಂತ್ಯೇತೇ ಜುಹ್ವಾನಾಃ ಸ ಚ ಯಸ್ಯ ತತ್13।।
12159021a ಪ್ರಾಜಾಪತ್ಯಮದತ್ತ್ವಾಶ್ವಮಗ್ನ್ಯಾಧೇಯಸ್ಯ ದಕ್ಷಿಣಾಮ್।
12159021c ಅನಾಹಿತಾಗ್ನಿರಿತಿ ಸ ಪ್ರೋಚ್ಯತೇ ಧರ್ಮದರ್ಶಿಭಿಃ।।
ಅವರು ಹವನ ಮಾಡಿದರೆ ಸ್ವಯಂ ನರಕದಲ್ಲಿ ಬೀಳುತ್ತಾರಲ್ಲದೇ ಯಾರಿಗಾಗಿ ಹವನ ಮಾಡಿದರೋ ಅವರೂ ಕೂಡ ನರಕದಲ್ಲಿ ಬೀಳುತ್ತಾರೆ. ಅಗ್ನಿಹೋತ್ರವನ್ನು ಆರಂಭಿಸಿ ಪ್ರಜಾಪತಿ ದೇವತೆಗೆ ಅವಶ್ಯರೂಪ ದಕ್ಷಿಣೆ-ದಾನಗಳನ್ನು ನೀಡದಿದ್ದರೆ ಧರ್ಮದರ್ಶಿಗಳು ಅವನನ್ನು ಅನಾಹಿತಾಗ್ನಿ14 ಎಂದು ಕರೆಯುತ್ತಾರೆ.
12159022a ಪುಣ್ಯಾನ್ಯನ್ಯಾನಿ ಕುರ್ವೀತ ಶ್ರದ್ದಧಾನೋ ಜಿತೇಂದ್ರಿಯಃ।
12159022c ಅನಾಪ್ತದಕ್ಷಿಣೈರ್ಯಜ್ಞೈರ್ನ ಯಜೇತ ಕಥಂ ಚನ।।
ಮನುಷ್ಯನು ಯಾವುದೇ ಅನ್ಯ ಪುಣ್ಯ ಕರ್ಮಗಳನ್ನೇ ಮಾಡಲಿ ಅವುಗಳನ್ನು ಶ್ರದ್ಧೆಯಿಂದ ಜಿತೇಂದ್ರಿಯನಾಗಿದ್ದುಕೊಂಡು ಮಾಡಬೇಕು. ಪರ್ಯಾಪ್ತ ದಕ್ಷಿಣೆಗಳನ್ನು ಕೊಡದೇ ಯಾವುದೇ ಯಜ್ಞವನ್ನು ಮಾಡಬಾರದು.
12159023a ಪ್ರಜಾಃ ಪಶೂಂಶ್ಚ ಸ್ವರ್ಗಂ ಚ ಹಂತಿ ಯಜ್ಞೋ ಹ್ಯದಕ್ಷಿಣಃ।
12159023c ಇಂದ್ರಿಯಾಣಿ ಯಶಃ ಕೀರ್ತಿಮಾಯುಶ್ಚಾಸ್ಯೋಪಕೃಂತತಿ।।
ದಕ್ಷಿಣೆಗಳಿಲ್ಲದ ಯಜ್ಞವು ಪ್ರಜೆ-ಪಶುಗಳನ್ನು ನಾಶಗೊಳಿಸುತ್ತದೆ ಮತ್ತು ಸ್ವರ್ಗಮಾರ್ಗದಲ್ಲಿ ವಿಘ್ನವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲದೇ ಅದು ಇಂದ್ರಿಯಗಳು, ಯಶಸ್ಸು, ಕೀರ್ತಿ, ಮತ್ತು ಆಯುಸ್ಸನ್ನು ಕ್ಷೀಣಗೊಳಿಸುತ್ತದೆ.
12159024a ಉದಕ್ಯಾ ಹ್ಯಾಸತೇ ಯೇ ಚ ಯೇ ಚ ಕೇ ಚಿದನಗ್ನಯಃ।
12159024c ಕುಲಂ15 ಚಾಶ್ರೋತ್ರಿಯಂ ಯೇಷಾಂ ಸರ್ವೇ ತೇ ಶೂದ್ರಧರ್ಮಿಣಃ16।।
ರಜಸ್ವಲೆಯೊಡನೆ ಸಂಭೋಗಮಾಡುವ, ಮನೆಯಲ್ಲಿ ಅಗ್ನಿಯನ್ನು ಸ್ಥಾಪಿಸಿಕೊಂಡಿರದ, ಮತ್ತು ಅವೈದಿಕ ರೀತಿಯಲ್ಲಿ ಹವನ ಮಾಡುವ ಬ್ರಾಹ್ಮಣರೆಲ್ಲರೂ ಶೂದ್ರಧರ್ಮಿಗಳೇ.
12159025a ಉದಪಾನೋದಕೇ ಗ್ರಾಮೇ ಬ್ರಾಹ್ಮಣೋ ವೃಷಲೀಪತಿಃ।
12159025c ಉಷಿತ್ವಾ ದ್ವಾದಶ ಸಮಾಃ ಶೂದ್ರಕರ್ಮೇಹ ಗಚ್ಚತಿ।।
ಒಂದೇ ಬಾವಿಯಿರುವ ಗ್ರಾಮದಲ್ಲಿ ಹನ್ನೆರಡು ವರ್ಷಗಳು ವಾಸಿಸುವ ಮತ್ತು ಶೂದ್ರ ಕನ್ಯೆಯನ್ನು ವಿವಾಹವಾದ ಬ್ರಾಹ್ಮಣನು ಶೂದ್ರಕರ್ಮಿಯೇ ಆಗುತ್ತಾನೆ.
12159026a ಅನಾರ್ಯಾಂ17 ಶಯನೇ ಬಿಭ್ರದುಜ್ಝನ್ಬಿಭ್ರಚ್ಚ ಯೋ ದ್ವಿಜಾಮ್18।
12159026c ಅಬ್ರಾಹ್ಮಣೋ ಮನ್ಯಮಾನ19ಸ್ತೃಣೇಷ್ವಾಸೀತ ಪೃಷ್ಠತಃ।
12159026e ತಥಾ ಸ ಶುಧ್ಯತೇ ರಾಜನ್ ಶೃಣು ಚಾತ್ರ ವಚೋ ಮಮ।।
ಅನಾರ್ಯೆಯೊಡನೆ ಸಮಾಗಮ ಮಾಡಿದವನು, ಬಡ್ಡಿಯಿಂದ ಜೀವನ ನಡಿಸುತ್ತಿರುವವನು ಮತ್ತು ಬ್ರಾಹ್ಮಣರನ್ನು ಅಬ್ರಾಹ್ಮಣರೆಂದು ತಿಳಿಯುವವನು ಹುಲ್ಲಿನ ಮೇಲೆ ಬಿಸಿಲಿನಲ್ಲಿ ಸೂರ್ಯನ ಕಡೆಗೆ ಬೆನ್ನುಮಾಡಿಕೊಂಡು ಕುಳಿತುಕೊಳ್ಳಬೇಕು. ಅದರಿಂದ ಅವನು ಶುದ್ಧನಾಗುತ್ತಾನೆ. ರಾಜನ್! ನನ್ನ ಮಾತನ್ನು ಕೇಳು.
12159027a ಯದೇಕರಾತ್ರೇಣ ಕರೋತಿ ಪಾಪಂ ಕೃಷ್ಣಂ ವರ್ಣಂ20 ಬ್ರಾಹ್ಮಣಃ ಸೇವಮಾನಃ।
12159027c ಸ್ಥಾನಾಸನಾಭ್ಯಾಂ ವಿಚರನ್ವ್ರತೀ ಸಂಸ್ ತ್ರಿಭಿರ್ವರ್ಷೈಃ ಶಮಯೇದಾತ್ಮಪಾಪಮ್।।
ಬ್ರಾಹ್ಮಣನು ಒಂದು ರಾತ್ರಿಯಾದರೂ ನೀಚವರ್ಣದವರ ಸೇವೆಯನ್ನು ಮಾಡಿದರೆ ಅಥವಾ ಜೊತೆಯಲ್ಲಿ ಒಂದೇ ಆಸನದಲ್ಲಿಯೇ ಕುಳಿತುಕೊಂಡಿದ್ದರೆ ಅವನು ಮೂರು ವರ್ಷಗಳು ವ್ರತಸ್ಥನಾಗಿದ್ದು ದೇಶಪರ್ಯಟನೆ ಮಾಡಿ ತನ್ನ ಪಾಪವನ್ನು ಕಳೆದುಕೊಳ್ಳಬೇಕು.
12159028a ನ ನರ್ಮಯುಕ್ತಂ ವಚನಂ ಹಿನಸ್ತಿ ನ ಸ್ತ್ರೀಷು ರಾಜನ್ನ ವಿವಾಹಕಾಲೇ।
12159028c ನ ಗುರ್ವರ್ಥೇ ನಾತ್ಮನೋ ಜೀವಿತಾರ್ಥೇ ಪಂಚಾನೃತಾನ್ಯಾಹುರಪಾತಕಾನಿ।।
ರಾಜನ್! ಹಾಸ್ಯದಲ್ಲಿ ನುಡಿದ ಸುಳ್ಳು ಪಾಪವನ್ನುಂಟುಮಾಡುವುದಿಲ್ಲ. ವಿನೋದದಲ್ಲಿ, ಸ್ತ್ರೀಯರೊಡನೆಯ ಸಂಭಾಷಣೆಯಲ್ಲಿ, ವಿವಾಹಕಾಲದಲ್ಲಿ, ಆಚಾರ್ಯನ ಸಲುವಾಗಿ ಮತ್ತು ತನ್ನ ಪ್ರಾಣರಕ್ಷಣೆಗಾಗಿ ಹೇಳುವ ಈ ಐದು ಬಗೆಯ ಸುಳ್ಳುಗಳು ಪಾಪವನ್ನುಂಟುಮಾಡುವುದಿಲ್ಲವೆಂದು ಹೇಳುತ್ತಾರೆ.
12159029a ಶ್ರದ್ದಧಾನಃ ಶುಭಾಂ ವಿದ್ಯಾಂ ಹೀನಾದಪಿ ಸಮಾಚರೇತ್।
12159029c ಸುವರ್ಣಮಪಿ ಚಾಮೇಧ್ಯಾದಾದದೀತೇತಿ ಧಾರಣಾ।।
ಹೀನವರ್ಣದರೂ ಉತ್ತಮ ವಿದ್ಯೆಯನ್ನು ಶ್ರದ್ಧೆಯಿಂದಲೇ ಕಲಿಯಬೇಕು. ಚಿನ್ನವು ಅಪವಿತ್ರ ಸ್ಥಳದಲ್ಲಿಯೇ ಇದ್ದರೂ ಸ್ವಲ್ಪವೂ ವಿಚಾರಮಾಡದೇ ಅದನ್ನು ತೆಗೆದುಕೊಳ್ಳಬೇಕು.
12159030a ಸ್ತ್ರೀರತ್ನಂ ದುಷ್ಕುಲಾಚ್ಚಾಪಿ ವಿಷಾದಪ್ಯಮೃತಂ ಪಿಬೇತ್।
12159030c ಅದುಷ್ಟಾ ಹಿ ಸ್ತ್ರಿಯೋ ರತ್ನಮಾಪ ಇತ್ಯೇವ ಧರ್ಮತಃ।।
ದುಷ್ಕುಲದಲ್ಲಿ ಹುಟ್ಟಿದ್ದರೂ ಉತ್ತಮ ಸ್ತ್ರೀಯನ್ನು ಪರಿಗ್ರಹಿಸಬೇಕು. ರತ್ನವು ಎಲ್ಲಿಯೇ ಯಾರಲ್ಲಿಯೇ ಇದ್ದರೂ ಅದನ್ನು ಪಡೆದುಕೊಳ್ಳಬಹುದು. ನೀರು ಹೀನಸ್ಥಳದಲ್ಲಿದ್ದರೂ ಅದನ್ನು ಕುಡಿಯಬಹುದು. ಏಕೆಂದರೆ ಸ್ತ್ರೀಯರು, ರತ್ನ ಮತ್ತು ನೀರು ಯಾವಾಗಲೂ ಧರ್ಮತಃ ದೂಷಣೀಯಗಳಲ್ಲ.
12159031a ಗೋಬ್ರಾಹ್ಮಣಹಿತಾರ್ಥಂ ಚ ವರ್ಣಾನಾಂ ಸಂಕರೇಷು ಚ।
12159031c ಗೃಹ್ಣೀಯಾತ್ತು ಧನುರ್ವೈಶ್ಯಃ ಪರಿತ್ರಾಣಾಯ ಚಾತ್ಮನಃ।।
ಗೋ-ಬ್ರಾಹ್ಮಣರ ಹಿತಕ್ಕಾಗಿ, ವರ್ಣಸಂಕರವನ್ನು ತಡೆಯುವುದಕ್ಕೆ ಮತ್ತು ಆತ್ಮರಕ್ಷಣೆಗೆ ವೈಶ್ಯನು ಶಸ್ತ್ರಗಳನ್ನು ಹಿಡಿಯಬಹುದು.
12159032a ಸುರಾಪಾನಂ ಬ್ರಹ್ಮಹತ್ಯಾ ಗುರುತಲ್ಪಮಥಾಪಿ ವಾ।
12159032c ಅನಿರ್ದೇಶ್ಯಾನಿ ಮನ್ಯಂತೇ ಪ್ರಾಣಾಂತಾನೀತಿ ಧಾರಣಾ।।
ಸುರಾಪಾನ, ಬ್ರಹ್ಮಹತ್ಯೆ ಮತ್ತು ಗುರುಪತ್ನೀಸಮಾಗಮ – ಇವುಗಳಿಗೆ ಯಾವುದೇ ಪ್ರಾಯಶ್ಚಿತ್ತಗಳನ್ನು ಹೇಳಿಲ್ಲ21. ಪ್ರಾಣಾಂತವೇ ಇದಕ್ಕೆ ಪ್ರಾಯಶ್ಚಿತ್ತವೆಂದು ತಿಳಿಯುತ್ತಾರೆ.
12159033a ಸುವರ್ಣಹರಣಂ ಸ್ತೈನ್ಯಂ ವಿಪ್ರಾಸಂಗಶ್ಚ ಪಾತಕಮ್।
12159033c ವಿಹರನ್ಮದ್ಯಪಾನಂ ಚಾಪ್ಯಗಮ್ಯಾಗಮನಂ ತಥಾ।।
12159034a ಪತಿತೈಃ ಸಂಪ್ರಯೋಗಾಚ್ಚ ಬ್ರಾಹ್ಮಣೈರ್ಯೋನಿತಸ್ತಥಾ।
12159034c ಅಚಿರೇಣ ಮಹಾರಾಜ ತಾದೃಶೋ ವೈ ಭವತ್ಯುತ।।
ಸುವರ್ಣಹರಣ, ಅಮೂಲ್ಯವಸ್ತುಗಳನ್ನು ಕದಿಯುವುದು, ಬ್ರಾಹ್ಮಣರ ಧನವನ್ನು ಅಪಹರಿಸುವುದು ಇವು ಮಹಾಪಾತಕಗಳು. ಮಹಾರಾಜ! ಮದ್ಯಪಾನ, ಅಯೋಗ್ಯಳೊಂದಿಗೆ ಸಂಭೋಗಮಾಡುವುದು, ಪತಿತರೊಡನೆ ಸಂಪರ್ಕ, ಬ್ರಾಹ್ಮಣೇತರನಾಗಿದ್ದುಕೊಂಡು ಬ್ರಾಹ್ಮಣಸ್ತ್ರೀಯೊಡನೆ ಕೂಡುವುದು – ಇಂತಹ ಸ್ವೇಚ್ಛಾಚಾರಗಳಿಂದ ಮನುಷ್ಯನು ಬೇಗನೆ ಪತಿತನಾಗುತ್ತಾನೆ.
12159035a ಸಂವತ್ಸರೇಣ ಪತತಿ ಪತಿತೇನ ಸಹಾಚರನ್।
12159035c ಯಾಜನಾಧ್ಯಾಪನಾದ್ಯೌನಾನ್ನ ತು ಯಾನಾಸನಾಶನಾತ್।।
ಒಂದು ವರ್ಷಗಳ ಕಾಲ ಪತಿತನೊಡನೆ ಒಡನಾಟ ಮಾಡುವುದರಿಂದ, ಅವನಿಂದ ಯಜ್ಞವನ್ನು ಮಾಡಿಸುವುದರಿಂದ ಅಥವಾ ಅವನಿಗೆ ವೇದಾಧ್ಯಯನ ಮಾಡಿಸುವುದರಿಂದ ಅಥವಾ ಅವನೊಂದಿಗೆ ವಿವಾಹಸಂಬಂಧವನ್ನು ಮಾಡಿಕೊಳ್ಳುವುದರಿಂದ ತಾನೂ ಪತಿತನಾಗುತ್ತಾನೆ.
12159036a ಏತಾನಿ ಚ ತತೋಽನ್ಯಾನಿ ನಿರ್ದೇಶ್ಯಾನೀತಿ ಧಾರಣಾ।
12159036c ನಿರ್ದೇಶ್ಯಕೇನ ವಿಧಿನಾ ಕಾಲೇನಾವ್ಯಸನೀ ಭವೇತ್।।
ಈ ಪಾಪಗಳಿಗೆ ಪ್ರಾಯಶ್ಚಿತ್ತಗಳೇ ಇಲ್ಲವೆಂದು ಹೇಳಿದ್ದಾರೆ. ಅನ್ಯ ಪಾಪಗಳಿಗೆ ಹೇಳಿದ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೆ ಪಾಪವ್ಯಸನದಿಂದ ಮುಕ್ತನಾಗುತ್ತಾನೆ. ಪುನಃ ಆ ಪಾಪಗಳನ್ನು ಮಾಡದೇ ಇದ್ದರೆ ಶುದ್ಧನಾಗುತ್ತಾನೆ.
12159037a ಅನ್ನಂ ತಿರ್ಯಘ್ನ ಹೋತವ್ಯಂ22 ಪ್ರೇತಕರ್ಮಣ್ಯಪಾತಿತೇ।
12159037c ತ್ರಿಷು ತ್ವೇತೇಷು ಪೂರ್ವೇಷು ನ ಕುರ್ವೀತ ವಿಚಾರಣಾಮ್।।
ಹಿಂದೆ ಹೇಳಿದ ಈ ಮೂರು ಮಹಾಪಾತಕಗಳನ್ನು ಮಾಡಿದವನ ಮರಣಾನಂತರದ ಪ್ರೇತಕರ್ಮಗಳನ್ನು ಮಾಡದೇ ಅವನ ಅನ್ನ ಮತ್ತು ಧನಗಳನ್ನು, ಏನೂ ವಿಚಾರಮಾಡದೇ, ತೆಗೆದುಕೊಳ್ಳಬೇಕು.
12159038a ಅಮಾತ್ಯಾನ್ವಾ ಗುರೂನ್ವಾಪಿ ಜಹ್ಯಾದ್ಧರ್ಮೇಣ ಧಾರ್ಮಿಕಃ।
12159038c ಪ್ರಾಯಶ್ಚಿತ್ತಮಕುರ್ವಾಣೈರ್ನೈತೈರರ್ಹತಿ ಸಂವಿದಮ್।।
ಧಾರ್ಮಿಕ ರಾಜನು ತನ್ನ ಅಮಾತ್ಯರಾಗಲೀ ಪುರೋಹಿತರಾಗಲೀ ಪತಿತರಾದರೆ ಅವರನ್ನೂ ಧಾರ್ಮಿಕವಾಗಿ ತ್ಯಜಿಸಬೇಕು. ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವವರೆಗೂ ಅವರೊಂದಿಗೆ ಮಾತನ್ನೂ ಆಡಕೂಡದು.
12159039a ಅಧರ್ಮಕಾರೀ ಧರ್ಮೇಣ ತಪಸಾ ಹಂತಿ ಕಿಲ್ಬಿಷಮ್।
12159039c ಬ್ರುವನ್ಸ್ತೇನ ಇತಿ ಸ್ತೇನಂ ತಾವತ್ಪ್ರಾಪ್ನೋತಿ ಕಿಲ್ಬಿಷಮ್।
12159039e ಅಸ್ತೇನಂ ಸ್ತೇನ ಇತ್ಯುಕ್ತ್ವಾ ದ್ವಿಗುಣಂ ಪಾಪಮಾಪ್ನುಯಾತ್।।
ಅಧರ್ಮಕಾರಿಯು ಧರ್ಮ ಮತ್ತು ತಪಸ್ಸುಗಳಿಂದ ತನ್ನ ಪಾಪವನ್ನು ಕಳೆದುಕೊಳ್ಳುತ್ತಾನೆ. ಕಳ್ಳನನ್ನು ತೋರಿಸಿ “ಇವನು ಕಳ್ಳ” ಎಂದು ಹೇಳಿದವನು ಕಳ್ಳನ ಪಾಪಕ್ಕೆ ಸಮನಾದ ಪಾಪವನ್ನೇ ಹೊಂದುತ್ತಾನೆ. ಕಳ್ಳನಲ್ಲದವನನ್ನು “ಕಳ್ಳ” ಎಂದು ಹೇಳಿದವನಿಗೆ ಕಳ್ಳನ ಪಾಪಕ್ಕಿಂತಲೂ ಇಮ್ಮಡಿಯಾದ ಪಾಪವು ತಗಲುತ್ತದೆ.
12159040a ತ್ರಿಭಾಗಂ ಬ್ರಹ್ಮಹತ್ಯಾಯಾಃ ಕನ್ಯಾ ಪ್ರಾಪ್ನೋತಿ ದುಷ್ಯತೀ।
12159040c ಯಸ್ತು ದೂಷಯಿತಾ ತಸ್ಯಾಃ ಶೇಷಂ ಪ್ರಾಪ್ನೋತಿ ಕಿಲ್ಬಿಷಮ್।।
ದೂಷಿತಳಾದ ಕನ್ಯೆಯು ಬ್ರಹ್ಮಹತ್ಯೆಯ ನಾಲ್ಕನೇ ಮೂರು ಭಾಗಗಳ ಪಾಪವನ್ನು ಪಡೆದುಕೊಳ್ಳುತ್ತಾಳೆ. ಅವಳನ್ನು ದೂಷಿತಗೊಳಿಸಿದವನು ಉಳಿದ ಪಾಪವನ್ನು ಪಡೆದುಕೊಳ್ಳುತ್ತಾನೆ.
12159041a ಬ್ರಾಹ್ಮಣಾಯಾವಗೂರ್ಯೇಹ ಸ್ಪೃಷ್ಟ್ವಾ ಗುರುತರಂ ಭವೇತ್।
12159041c ವರ್ಷಾಣಾಂ ಹಿ ಶತಂ ಪಾಪಃ ಪ್ರತಿಷ್ಠಾಂ ನಾಧಿಗಚ್ಚತಿ।।
12159042a ಸಹಸ್ರಂ ತ್ವೇವ ವರ್ಷಾಣಾಂ ನಿಪಾತ್ಯ ನರಕೇ ವಸೇತ್।
ಈ ಲೋಕದಲ್ಲಿ ಬ್ರಾಹ್ಮಣನನ್ನು ನಿಂದಿಸುವ ಮತ್ತು ನೂಕಿ ಬೀಳಿಸುವವನಿಗೆ ಅತಿ ದೊಡ್ಡ ಪಾಪವು ತಗಲುತ್ತದೆ. ಅಂತಹ ಪಾಪಿಗೆ ನೂರಾರು ವರ್ಷಗಳ ಪರ್ಯಂತ ನೆಲೆಯೇ ದೊರಕುವುದಿಲ್ಲ. ಸಹಸ್ರಾರು ವರ್ಷಗಳ ಪರ್ಯಂತ ನರಕದಲ್ಲಿಯೇ ಬಿದ್ದಿರಬೇಕಾಗುತ್ತದೆ.
12159042c ತಸ್ಮಾನ್ನೈವಾವಗೂರ್ಯಾದ್ಧಿ ನೈವ ಜಾತು ನಿಪಾತಯೇತ್।।
12159043a ಶೋಣಿತಂ ಯಾವತಃ ಪಾಂಸೂನ್ಸಂಗೃಹ್ಣೀಯಾದ್ದ್ವಿಜಕ್ಷತಾತ್।
12159043c ತಾವತೀಃ ಸ ಸಮಾ ರಾಜನ್ನರಕೇ ಪರಿವರ್ತತೇ।।
ರಾಜನ್! ಆದುದರಿಂದ ಬ್ರಾಹ್ಮಣರನ್ನು ನಿಂದಿಸಬಾರದು ಮತ್ತು ಅವರನ್ನು ದೂಡಿ ಕೆಳಕ್ಕುರುಳಿಸಬಾರದು. ಬ್ರಾಹ್ಮಣನ ಗಾಯದಿಂದ ಕೆಳಕ್ಕೆ ಬಿದ್ದ ರಕ್ತವು ಎಷ್ಟು ಧೂಳಿನ ಕಣಗಳನ್ನು ನೆನೆಸುತ್ತದೆಯೋ ಅಷ್ಟು ಸಂಖ್ಯೆಯ ವರ್ಷಗಳು ಅವನನ್ನು ಗಾಯಗೊಳಿಸಿದವನು ನರಕದಲ್ಲಿ ಬಿದ್ದಿರಬೇಕಾಗುತ್ತದೆ.
12159044a ಭ್ರೂಣಹಾಹವಮಧ್ಯೇ ತು ಶುಧ್ಯತೇ ಶಸ್ತ್ರಪಾತಿತಃ।
12159044c ಆತ್ಮಾನಂ ಜುಹುಯಾದ್ವಹ್ನೌ ಸಮಿದ್ಧೇ ತೇನ ಶುಧ್ಯತಿ।।
ಭ್ರೂಣಹತ್ಯೆಯನ್ನು ಮಾಡಿದವನು ಯುದ್ಧದಲ್ಲಿ ಶಸ್ತ್ರಪ್ರಹಾರದಿಂದ ಬಿದ್ದಾಗ ಶುದ್ಧನಾಗುತ್ತಾನೆ. ಅಥವಾ ಪ್ರಜ್ವಲಿತ ಅಗ್ನಿಯಲ್ಲಿ ಆತ್ಮಾರ್ಪಣೆಮಾಡಿಕೊಳ್ಳುವುದರಿಂದಲೂ ಶುದ್ಧನಾಗುತ್ತಾನೆ.
12159045a ಸುರಾಪೋ ವಾರುಣೀಮುಷ್ಣಾಂ ಪೀತ್ವಾ ಪಾಪಾದ್ವಿಮುಚ್ಯತೇ।
12159045c ತಯಾ ಸ ಕಾಯೇ ನಿರ್ದಗ್ಧೇ ಮೃತ್ಯುನಾ ಪ್ರೇತ್ಯ ಶುಧ್ಯತಿ।
12159045e ಲೋಕಾಂಶ್ಚ ಲಭತೇ ವಿಪ್ರೋ ನಾನ್ಯಥಾ ಲಭತೇ ಹಿ ಸಃ।।
ಸುರಾಪಾನಮಾಡಿದವನು ಕುದಿಯುತ್ತಿರುವ ಮದ್ಯವನ್ನು ಕುಡಿಯುವುದರಿಂದ ಪಾಪಮುಕ್ತನಾಗುತ್ತಾನೆ. ಕುದಿಯುತ್ತಿರುವ ಮದ್ಯದಿಂದ ಶರೀರವು ಸುಟ್ಟು ಮರಣವನ್ನಪ್ಪುವುದರಿಂದಲೂ ಅವನು ಶುದ್ಧನಾಗುತ್ತಾನೆ. ಇದರಿಂದ ಆ ವಿಪ್ರನಿಗೆ ಉತ್ತಮ ಲೋಕಗಳು ದೊರೆಯುತ್ತವೆ. ಅನ್ಯಥಾ ಇಲ್ಲ.
12159046a ಗುರುತಲ್ಪಮಧಿಷ್ಠಾಯ ದುರಾತ್ಮಾ ಪಾಪಚೇತನಃ।
12159046c ಸೂರ್ಮೀಂ ಜ್ವಲಂತೀಮಾಶ್ಲಿಷ್ಯ ಮೃತ್ಯುನಾ ಸ ವಿಶುಧ್ಯತಿ।।
ಗುರುಪತ್ನಿಯೊಡನೆ ಸಮಾಗಮ ಮಾಡಿದ ಪಾಪಚೇತನ ದುರಾತ್ಮನು ಕಾದ ಲೋಹದ ಸ್ತ್ರೀಪ್ರತಿಮೆಯನ್ನು ಆಲಂಗಿಸಿ ಮೃತ್ಯುವನ್ನು ಹೊಂದುವುದರಿಂದ ಶುದ್ಧನಾಗುತ್ತಾನೆ.
12159047a ಅಥ ವಾ ಶಿಶ್ನವೃಷಣಾವಾದಾಯಾಂಜಲಿನಾ ಸ್ವಯಮ್।
12159047c ನೈರೃತೀಂ ದಿಶಮಾಸ್ಥಾಯ ನಿಪತೇತ್ಸ ತ್ವಜಿಹ್ಮಗಃ।।
ಅಥವಾ ಶಿಶ್ನ-ವೃಷಣಗಳನ್ನು ಕತ್ತರಿಸಿ ಬೊಗಸೆಯಲ್ಲಿಟ್ಟುಕೊಂಡು ಪ್ರಾಣ ಹೋಗುವವರೆಗೂ ನೈಋತ್ಯದಿಕ್ಕಿನಲ್ಲಿ ನಡೆದುಹೋಗುತ್ತಾ ಬೀಳಬೇಕು. ಆಗ ಅವನು ಶುದ್ಧನಾಗುತ್ತಾನೆ.
12159048a ಬ್ರಾಹ್ಮಣಾರ್ಥೇಽಪಿ ವಾ ಪ್ರಾಣಾನ್ಸಂತ್ಯಜೇತ್ತೇನ ಶುಧ್ಯತಿ।
12159048c ಅಶ್ವಮೇಧೇನ ವಾಪೀಷ್ಟ್ವಾ ಗೋಮೇಧೇನಾಪಿ ವಾ ಪುನಃ।
12159048e ಅಗ್ನಿಷ್ಟೋಮೇನ ವಾ ಸಮ್ಯಗಿಹ ಪ್ರೇತ್ಯ ಚ ಪೂಯತೇ।।
ಅಥವಾ ಬ್ರಾಹ್ಮಣನಿಗಾಗಿ ಪ್ರಾಣವನ್ನು ತೊರೆದರೂ ಗುರುತಲ್ಪಗನು ಶುದ್ಧನಾಗುತ್ತಾನೆ. ಅಶ್ವಮೇಧ ಅಥವಾ ಗೋಮೇಧ ಅಥವಾ ಅಗ್ನಿಷ್ಟೋಮ ಯಾಗವನ್ನು ಮಾಡಿಯೂ ಗುರುತಲ್ಪಗನು ಪಾಪದಿಂದ ಮುಕ್ತನಾಗಿ ಇಹ ಮತ್ತು ಪರಲೋಕಗಳಲ್ಲಿ ಪೂಜಿತನಾಗುತ್ತಾನೆ.
12159049a ತಥೈವ ದ್ವಾದಶ ಸಮಾಃ ಕಪಾಲೀ ಬ್ರಹ್ಮಹಾ ಭವೇತ್।
12159049c ಬ್ರಹ್ಮಚಾರೀ ಚರೇದ್ ಭೈಕ್ಷಂ ಸ್ವಕರ್ಮೋದಾಹರನ್ಮುನಿಃ।।
12159050a ಏವಂ ವಾ ತಪಸಾ ಯುಕ್ತೋ ಬ್ರಹ್ಮಹಾ ಸವನೀ ಭವೇತ್।
ಇದೇ ರೀತಿ ಬ್ರಹ್ಮಹತ್ಯೆಯನ್ನು ಮಾಡಿದವನು ಅವನ ಕಪಾಲವನ್ನು ಹಿಡಿದು “ನಾನು ಬ್ರಹ್ಮಘಾತಕ” ಎಂದು ಹೇಳಿಕೊಳ್ಳುತ್ತಾ ಹನ್ನೆರಡು ವರ್ಷಗಳು ತ್ರಿಕಾಲ ಸ್ನಾನಮಾಡುತ್ತಾ ಬ್ರಹ್ಮಚಾರಿಯಾಗಿ ಮುನಿಧರ್ಮವನ್ನಾಚರಿಸುತ್ತಾ ಭೈಕ್ಷ್ಯವೃತ್ತಿಯನ್ನು ನಡೆಸಿಕೊಂಡು ಸಂಚರಿಸುತ್ತಿರಬೇಕು. ಹೀಗೆ ಮಾಡುವುದರಿಂದ ಅಥವಾ ಕಠಿಣ ತಪಸ್ಸನ್ನಾಚರಿಸುವುದರಿಂದ ಬ್ರಹ್ಮಘಾತಿಯು ಮಹಾಪಾಪದಿಂದ ಮುಕ್ತನಾಗುತ್ತಾನೆ.
12159050c ಏವಂ ವಾ ಗರ್ಭಮಜ್ಞಾತಾ ಚಾತ್ರೇಯೀಂ ಯೋಽಭಿಗಚ್ಚತಿ23।
12159050e ದ್ವಿಗುಣಾ ಬ್ರಹ್ಮಹತ್ಯಾ ವೈ ಆತ್ರೇಯೀವ್ಯಸನೇ ಭವೇತ್।।
ತಿಳಿಯದೇ ಗರ್ಭಿಣೀ ಸ್ತ್ರೀಯನ್ನು ಕೊಂದವನು ಬ್ರಹ್ಮಹತ್ಯಾ ಪಾಪದ ಎರಡು ಪಟ್ಟಿನ ಪಾಪವನ್ನು ಆ ಗರ್ಭಿಣೀ ಸ್ತ್ರೀಯ ನಿಧನದಿಂದ ಹೊಂದುತ್ತಾನೆ.
12159051a ಸುರಾಪೋ ನಿಯತಾಹಾರೋ ಬ್ರಹ್ಮಚಾರೀ ಕ್ಷಮಾಚರಃ24।
12159051c ಊರ್ಧ್ವಂ ತ್ರಿಭ್ಯೋಽಥ ವರ್ಷೇಭ್ಯೋ ಯಜೇತಾಗ್ನಿಷ್ಟುತಾ ಪರಮ್।
12159051e ಋಷಭೈಕಸಹಸ್ರಂ ಗಾ ದತ್ತ್ವಾ ಶುಭಮವಾಪ್ನುಯಾತ್।।
ಸುರಾಪಾನಮಾಡಿದವನು ನಿಯತಾಹಾರಿಯಾಗಿ ಬ್ರಹ್ಮಚಾರಿಯಾಗಿ ಮೂರುವರ್ಷಗಳು ಕ್ಷಮಾಚಾರಿಯಾಗಿರಬೇಕು. ಅನಂತರ ಅಗ್ನಿಷ್ಟುದ್ಯಾಗವನ್ನು25 ಮಾಡಬೇಕು. ಯಜ್ಞದಕ್ಷಿಣೆಯಾಗಿ ಒಂದು ಸಾವಿರ ಹೋರಿಗಳನ್ನಾಗಲೀ ಒಂದು ಸಾವಿರ ಹಸುಗಳನ್ನಾಗಲೀ ದಾನಮಾಡಬೇಕು.
12159052a ವೈಶ್ಯಂ ಹತ್ವಾ ತು ವರ್ಷೇ ದ್ವೇ ಋಷಭೈಕಶತಾಶ್ಚ ಗಾಃ।
12159052c ಶೂದ್ರಂ ಹತ್ವಾಬ್ದಮೇವೈಕಮೃಷಭೈಕಾದಶಾಶ್ಚ ಗಾಃ।।
ವೈಶ್ಯನನ್ನು ಕೊಂದವನು ಎರಡು ವರ್ಷ ಈ ರೀತಿ ವ್ರತಸ್ಥನಾಗಿದ್ದು ಅಗ್ನಿಷ್ಟುದ್ಯಾಗವನ್ನು ಮಾಡಿ ಒಂದು ನೂರು ಹೋರಿಗಳನ್ನಾಗಲೀ ಒಂದು ನೂರು ಗೋವುಗಳನ್ನಾಗಲೀ ದಾನಮಾಡಬೇಕು. ಶೂದ್ರನನ್ನು ಕೊಂದವನು ಇದೇ ನಿಯಮದಿಂದ ಒಂದು ವರ್ಷಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸಿ ಅನಂತರ ಅಗ್ನಿಷ್ಟುದ್ಯಾಗವನ್ನು ಮಾಡಿ ಒಂದು ಹೋರಿಯನ್ನೂ ನೂರು ಹಸುಗಳನ್ನೂ ದಾನಮಾಡಬೇಕು.
12159053a ಶ್ವಬರ್ಬರಖರಾನ್ ಹತ್ವಾ ಶೌದ್ರಮೇವ ವ್ರತಂ ಚರೇತ್।
12159053c ಮಾರ್ಜಾರಚಾಷಮಂಡೂಕಾನ್ಕಾಕಂ ಭಾಸಂ ಚ ಮೂಷಕಮ್।।
12159054a ಉಕ್ತಃ ಪಶುಸಮೋ ಧರ್ಮೋ ರಾಜನ್ ಪ್ರಾಣಿನಿಪಾತನಾತ್।
ನಾಯಿ, ಹಂದಿ ಕತ್ತೆಗಳನ್ನು ಕೊಂದರೂ ಶೂದ್ರವಧೆಯ ಪ್ರಾಯಶ್ಚಿತ್ತವನ್ನೇ ಮಾಡಿಕೊಳ್ಳಬೇಕು. ರಾಜನ್! ಬೆಕ್ಕು, ನವಿಲು, ಕಾಗೆ, ಹಾವು, ಇಲಿ – ಇವುಗಳನ್ನು ಕೊಂದರೆ ಇತರ ಪಶುವಧೆಗೆ ಸಮಾನ ಪಾಪವೇ ಪ್ರಾಪ್ತವಾಗುತ್ತದೆ ಎಂದು ಹೇಳಿದ್ದಾರೆ.
12159054c ಪ್ರಾಯಶ್ಚಿತ್ತಾನ್ಯಥಾನ್ಯಾನಿ ಪ್ರವಕ್ಷ್ಯಾಮ್ಯನುಪೂರ್ವಶಃ।।
12159055a ತಲ್ಪೇ ಚಾನ್ಯಸ್ಯ ಚೌರ್ಯೇ ಚ26 ಪೃಥಕ್ಸಂವತ್ಸರಂ ಚರೇತ್।
12159055c ತ್ರೀಣಿ ಶ್ರೋತ್ರಿಯಭಾರ್ಯಾಯಾಂ ಪರದಾರೇ ತು ದ್ವೇ ಸ್ಮೃತೇ।।
12159056a ಕಾಲೇ ಚತುರ್ಥೇ ಭುಂಜಾನೋ ಬ್ರಹ್ಮಚಾರೀ ವ್ರತೀ ಭವೇತ್।
12159056c ಸ್ಥಾನಾಸನಾಭ್ಯಾಂ ವಿಹರೇತ್ತ್ರಿರಹ್ನೋಽಭ್ಯುದಿತಾದಪಃ।
12159056e ಏವಮೇವ ನಿರಾಚಾಂತೋ ಯಶ್ಚಾಗ್ನೀನಪವಿಧ್ಯತಿ।।
ಇತರ ಪ್ರಾಯಶ್ಚಿತ್ತಗಳನ್ನು ಅನುಕ್ರಮವಾಗಿ ಹೇಳುತ್ತೇನೆ. ಇರುವೆ-ಗೊದ್ದ ಮೊದಲಾದವುಗಳು ಕಾಲಿಗೆ ಸಿಕ್ಕಿ ಸತ್ತರೆ ಅಂತಹ ಪಾಪವು ಕೇವಲ ಪಶ್ಚಾತ್ತಾಪದಿಂದ ಪರಿಹಾರವಾಗುತ್ತದೆ. ಇತರ ಪ್ರಾಣಿಗಳನ್ನು ಕೊಂದರೆ ಹಿಂದೆ ಹೇಳಿದಂತೆ ಒಂದು ವರ್ಷಗಳ ಪ್ರಾಯಶ್ಚಿತ್ತವನ್ನು ನಡೆಸಬೇಕು. ಶ್ರೋತ್ರೀಯನ ಪತ್ನಿಯೊಡನೆ ಸಮಾಗಮ ಮಾಡಿದರೆ ಮೂರು ವರ್ಷಗಳು ಮತ್ತು ಪರಸ್ತ್ರೀಯೊಂದಿಗೆ ಸಮಾಗಮ ಮಾಡಿದರೆ ಎರಡು ವರ್ಷಗಳು ಬ್ರಹ್ಮಚರ್ಯವ್ರತದಿಂದಿದ್ದು, ದಿನದ ನಾಲ್ಕನೇ ಯಾಮದಲ್ಲಿ ಒಮ್ಮೆ ಮಾತ್ರ ಊಟಮಾಡಬೇಕು.27 ತನಗಾಗಿ ಪ್ರತ್ಯೇಕ ಸ್ಥಾನಾಸನಗಳನ್ನು ಕಲ್ಪಿಸಿಕೊಂಡು28 ಪ್ರಪಂಚಪರ್ಯಟನೆ ಮಾಡುತ್ತಿರಬೇಕು. ಇದರಿಂದಲೇ ಅವನು ಆ ಪಾಪಗಳನ್ನು ನಿವಾರಿಸಿಕೊಳ್ಳಬಹುದು. ಅಗ್ನಿಯನ್ನು ಅಪವಿತ್ರಗೊಳಿಸಿದವನಿಗೂ ಇದೇ ಪ್ರಾಯಶ್ಚಿತ್ತವನ್ನು ಹೇಳಿದ್ದಾರೆ.
12159057a ತ್ಯಜತ್ಯಕಾರಣೇ ಯಶ್ಚ ಪಿತರಂ ಮಾತರಂ ತಥಾ29।
12159057c ಪತಿತಃ ಸ್ಯಾತ್ಸ ಕೌರವ್ಯ ತಥಾ ಧರ್ಮೇಷು ನಿಶ್ಚಯಃ।
12159058a ಗ್ರಾಸಾಚ್ಚಾದನಮತ್ಯರ್ಥಂ ದದ್ಯಾದಿತಿ ನಿದರ್ಶನಮ್।।
ಕೌರವ್ಯ! ಅಕಾರಣವಾಗಿ ತಂದೆ-ತಾಯಿಯರನ್ನು ತ್ಯಜಿಸಿದವನು ಪತಿತನಾಗುತ್ತಾನೆ ಎನ್ನುವುದು ಧರ್ಮದ ನಿಶ್ಚಯವು. ಪಿತ್ರಾರ್ಜಿತ ಆಸ್ತಿಯಿಂದ ಅವನಿಗೆ ಊಟ-ಬಟ್ಟೆಗೆ ಸಾಕಾಗುವಷ್ಟನ್ನೇ ಕೊಡಬೇಕೆಂದು ನಿದರ್ಶನವಿದೆ.
12159058c ಭಾರ್ಯಾಯಾಂ ವ್ಯಭಿಚಾರಿಣ್ಯಾಂ ನಿರುದ್ಧಾಯಾಂ ವಿಶೇಷತಃ।
12159058e ಯತ್ಪುಂಸಾಂ ಪರದಾರೇಷು ತಚ್ಚೈನಾಂ ಚಾರಯೇದ್ವ್ರತಮ್।।
ಪತ್ನಿಯು ವ್ಯಭಿಚಾರಮಾಡಿ ನಂತರ ಅದನ್ನು ನಿಲ್ಲಿಸಿದ್ದೇ ಆದರೆ ಪರಸ್ತ್ರೀಗಮನ ಮಾಡಿದ ಪುರುಷನಿಗೆ ಹೇಳಿರುವ ಪ್ರಾಯಶ್ಚಿತ್ತವನ್ನೇ ಅವಳೂ ಆಚರಿಸಬೇಕು.
12159059a ಶ್ರೇಯಾಂಸಂ ಶಯನೇ ಹಿತ್ವಾ ಯಾ ಪಾಪೀಯಾಂಸಮೃಚ್ಚತಿ।
12159059c ಶ್ವಭಿಸ್ತಾಂ ಖಾದಯೇದ್ರಾಜಾ ಸಂಸ್ಥಾನೇ ಬಹುಸಂವೃತೇ।।
ಪತಿಯನ್ನು ಪರಿತ್ಯಜಿಸಿ ಬೇರೆ ಪಾಪಿಯೊಡನೆ ಶಯ್ಯಾಸುಖವನ್ನು ಅನುಭವಿಸಿದವಳನ್ನು ರಾಜನಾದವನು ವಿಶಾಲ ಮೈದಾನದಲ್ಲಿ ನಿಲ್ಲಿಸಿ ನಾಯಿಗಳಿಂದ ಕಚ್ಚಿಸಬೇಕು.
12159060a ಪುಮಾಂಸಂ ಬಂಧಯೇತ್ಪ್ರಾಜ್ಞಃ ಶಯನೇ ತಪ್ತ ಆಯಸೇ।
12159060c ಅಪ್ಯಾದಧೀತ ದಾರೂಣಿ ತತ್ರ ದಹ್ಯೇತ ಪಾಪಕೃತ್।।
12159061a ಏಷ ದಂಡೋ ಮಹಾರಾಜ ಸ್ತ್ರೀಣಾಂ ಭರ್ತೃವ್ಯತಿಕ್ರಮೇ।
12159061c ಸಂವತ್ಸರಾಭಿಶಸ್ತಸ್ಯ ದುಷ್ಟಸ್ಯ ದ್ವಿಗುಣೋ ಭವೇತ್।।
12159062a ದ್ವೇ ತಸ್ಯ ತ್ರೀಣಿ ವರ್ಷಾಣಿ ಚತ್ವಾರಿ ಸಹಸೇವಿನಃ।
12159062c ಕುಚರಃ ಪಂಚ ವರ್ಷಾಣಿ ಚರೇದ್ಭೈಕ್ಷಂ ಮುನಿವ್ರತಃ।।
ಹೀಗೆ ವ್ಯಭಿಚಾರ ಮಾಡಿದ ಪುರುಷರನ್ನು ಪ್ರಾಜ್ಞ ರಾಜನು ಕಾಯಿಸಿದ ಕಬ್ಬಿಣದ ಮಂಚದಲ್ಲಿ ಮಲಗಿಸಿ ಮೇಲೆ ಕಟ್ಟಿಗೆಯನ್ನಿಟ್ಟು ಬೆಂಕಿ ಹೊತ್ತಿಸಿ ಸುಡಬೇಕು. ಪತಿಯನ್ನು ತಿರಸ್ಕರಿಸಿ ಪರಪುರುಷನನ್ನು ಸೇರುವ ಸ್ತ್ರೀಗೂ ಇದೇ ಶಿಕ್ಷೆಯೇ ವಿಹಿತವಾಗಿದೆ. ಒಂದು ವರ್ಷದ ವರೆಗೂ ಈ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳದೇ ಇದ್ದರೆ ಅವರು ಎರಡುಪಟ್ಟು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗುತ್ತದೆ. ಎರಡು, ಮೂರು, ನಾಲ್ಕು, ಅಥವಾ ಐದು ವರ್ಷಗಳು ಪತಿತನ ಸಹವಾಸದಲ್ಲಿದ್ದರೆ ಅಷ್ಟೇ ವರ್ಷಗಳ ಪರ್ಯಂತ ಮುನಿವ್ರತನಾಗಿ ಭೂಮಿಯಲ್ಲಿ ಅಲೆದಾಡುತ್ತಾ ಭಿಕ್ಷಾಟನೆ ಮಾಡಬೇಕು.
12159063a ಪರಿವಿತ್ತಿಃ ಪರಿವೇತ್ತಾ ಯಯಾ ಚ ಪರಿವಿದ್ಯತೇ।
12159063c ಪಾಣಿಗ್ರಾಹಶ್ಚ ಧರ್ಮೇಣ ಸರ್ವೇ ತೇ ಪತಿತಾಃ ಸ್ಮೃತಾಃ।।
ಅಣ್ಣನ ಮದುವೆಯಾಗುವುದಕ್ಕೆ ಮೊದಲೇ ತಮ್ಮನು ಮದುವೆಯಾದರೆ ಅಣ್ಣನನ್ನು ಪರಿವಿತ್ತಿ ಎಂದೂ ತಮ್ಮನನ್ನು ಪರಿವೇತ್ತಾ ಎಂದೂ ಕರೆಯುತ್ತಾರೆ. ತಮ್ಮನ ಪತ್ನಿಯನ್ನು ಪರಿವೇದನೀಯಾ ಎಂದೂ ಕರೆಯುತ್ತಾರೆ. ಧರ್ಮತಃ ಇವರೆಲ್ಲರೂ ಪತಿತರೇ ಆಗುತ್ತಾರೆ.
12159064a ಚರೇಯುಃ ಸರ್ವ ಏವೈತೇ ವೀರಹಾ ಯದ್ವ್ರತಂ ಚರೇತ್।
12159064c ಚಾಂದ್ರಾಯಣಂ ಚರೇನ್ಮಾಸಂ ಕೃಚ್ಚ್ರಂ ವಾ ಪಾಪಶುದ್ಧಯೇ।।
ಈ ಮೂವರೂ ಯಜ್ಞಹೀನ ಬ್ರಾಹ್ಮಣನಿಗೆ ಹೇಳಿದ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಅಥವಾ ಒಂದು ತಿಂಗಳು ಚಾಂದ್ರಾಯಣ ವ್ರತವನ್ನಾಗಲೀ ಕೃಚ್ಛ್ರವ್ರತವನ್ನಾಗಲೀ ಆಚರಿಸಬೇಕು.
12159065a ಪರಿವೇತ್ತಾ ಪ್ರಯಚ್ಚೇತ ಪರಿವಿತ್ತಾಯ ತಾಂ ಸ್ನುಷಾಮ್।
12159065c ಜ್ಯೇಷ್ಠೇನ ತ್ವಭ್ಯನುಜ್ಞಾತೋ ಯವೀಯಾನ್ ಪ್ರತ್ಯನಂತರಮ್।
12159065e ಏನಸೋ ಮೋಕ್ಷಮಾಪ್ನೋತಿ ಸಾ ಚ ತೌ ಚೈವ ಧರ್ಮತಃ।।
ಪರಿವೇತ್ತ (ತಮ್ಮ) ನು ಪರಿವೇತ್ತಿಗೆ (ಅಣ್ಣನಿಗೆ) ತಾನು ಪಾಣಿಗ್ರಹಣ ಮಾಡಿಕೊಂಡವಳನ್ನು ಸೊಸೆಯ ರೂಪದಲ್ಲಿ ಅರ್ಪಿಸಬೇಕು. ಅಣ್ಣನ ಅನುಮತಿಯನ್ನು ಪಡೆದು ನಂತರ ಅವಳನ್ನು ಪತ್ನಿಯನ್ನಾಗಿ ಸ್ವೀಕರಿಸಬೇಕು. ಹೀಗೆ ಮಾಡಿದರೆ ಮೂವರೂ ಧರ್ಮಾನುಸಾರವಾಗಿ ಪಾಪಮುಕ್ತರಾಗುತ್ತಾರೆ.
12159066a ಅಮಾನುಷೀಷು ಗೋವರ್ಜಮನಾವೃಷ್ಟಿರ್ನ ದುಷ್ಯತಿ।
12159066c ಅಧಿಷ್ಠಾತಾರಮತ್ತಾರಂ ಪಶೂನಾಂ ಪುರುಷಂ ವಿದುಃ।।
ಪ್ರಾಣಿಜಾತಿಯಲ್ಲಿ ಗೋವೊಂದನ್ನು ಬಿಟ್ಟು ಉಳಿದ ಪ್ರಾಣಿಗಳಿಗೆ ಹಿಂಸೆಮಾಡಿದರೆ ಮನುಷ್ಯನು ಪಾಪಿಯಾಗುವುದಿಲ್ಲ. ಏಕೆಂದರೆ ಮನುಷ್ಯನು ಪ್ರಾಣಿಗಳಿಗೆ ಆಶ್ರಯದಾತನೆಂದೂ ಅವುಗಳ ಭಕ್ಷಕನೆಂದೂ ವಿದ್ವಾಂಸರು ತಿಳಿದಿದ್ದಾರೆ.
12159067a ಪರಿಧಾಯೋರ್ಧ್ವವಾಲಂ ತು ಪಾತ್ರಮಾದಾಯ ಮೃನ್ಮಯಮ್।।
12159067c ಚರೇತ್ಸಪ್ತ ಗೃಹಾನ್ ಭೈಕ್ಷಂ ಸ್ವಕರ್ಮ ಪರಿಕೀರ್ತಯನ್।
12159068a ತತ್ರೈವ ಲಬ್ಧಭೋಜೀ ಸ್ಯಾದ್ದ್ವಾದಶಾಹಾತ್ಸ ಶುಧ್ಯತಿ।।
12159068c ಚರೇತ್ಸಂವತ್ಸರಂ ಚಾಪಿ ತದ್ವ್ರತಂ ಯನ್ನಿರಾಕೃತಿ।।
ಗೋವಧೆಯನ್ನು ಮಾಡಿದವನು ಚಮರೀಮೃಗದ ಪುಚ್ಛವನ್ನು ಮೇಲ್ಮುಖವಾಗಿ ಕಟ್ಟಿಕೊಂಡು ಮಣ್ಣಿನ ಮಡಿಕೆಯನ್ನು ಹಿಡಿದು “ನಾನು ಗೋವಧೆಯನ್ನು ಮಾಡಿದವನು” ಎಂದು ಹೇಳಿಕೊಳ್ಳುತ್ತಾ ಏಳು ಮನೆಗಳಿಗೆ ಭಿಕ್ಷೆಗಾಗಿ ಹೋಗಬೇಕು. ಆ ಏಳು ಮನೆಗಳಲ್ಲಿ ಎಷ್ಟು ಭಿಕ್ಷವು ಸಿಗುವುದೋ ಅಷ್ಟನ್ನೇ ಊಟಮಾಡಬೇಕು. ಹೀಗೆ ಹನ್ನೆರಡು ದಿವಸಗಳವರೆಗೆ ಮಾಡಿದರೆ ಗೋವನ್ನು ಕೊಂದವನು ಆ ಮಹಾಪಾಪದಿಂದ ವಿಮುಕ್ತನಾಗುತ್ತಾನೆ. ಹೆಚ್ಚು ಗೋವುಗಳನ್ನು ವಧಿಸಿದ್ದರೆ ಒಂದು ವರ್ಷಗಳ ಕಾಲ ಈ ವ್ರತವನ್ನು ಆಚರಿಸುವುದರಿಂದ ಪಾಪಮುಕ್ತನಾಗುತ್ತಾನೆ.
12159069a ಭವೇತ್ತು ಮಾನುಷೇಷ್ವೇವಂ ಪ್ರಾಯಶ್ಚಿತ್ತಮನುತ್ತಮಮ್।
12159069c ದಾನಂ ವಾದಾನಸಕ್ತೇಷು ಸರ್ವಮೇವ ಪ್ರಕಲ್ಪಯೇತ್।
12159069e ಅನಾಸ್ತಿಕೇಷು ಗೋಮಾತ್ರಂ ಪ್ರಾಣಮೇಕಂ30 ಪ್ರಚಕ್ಷತೇ।।
ಇದು ಮನುಷ್ಯರಲ್ಲಿ ಅನುತ್ತಮವಾದ ಪ್ರಾಯಶ್ಚಿತ್ತ ವಿಧಿಯು. ದಾನನೀಡಲು ಶಕ್ತರಾದವರಿಗೆ ಮಹಾದಾನಗಳ ಮೂಲಕ ಪಾಪಗಳನ್ನು ಪರಿಹರಿಸಿಕೊಳ್ಳುವ ವಿಧಿಯೂ ಇದೆ. ಆದರೆ ಈ ಎಲ್ಲ ಪ್ರಾಯಶ್ಚಿತ್ತಗಳನ್ನೂ ವಿಚಾರಿಸಿ ಮಾಡಿಕೊಳ್ಳಬೇಕು. ಅನಾಸ್ತಿಕರು ಒಂದು ಗೋದಾನದಿಂದ ಗೋವಧೆಯ ಪ್ರಾಯಶ್ಚಿತ್ತವನ್ನು ಮಾಡಿಕೊಂಡಂತಾಗುತ್ತದೆ.
12159070a ಶ್ವವರಾಹಮನುಷ್ಯಾಣಾಂ ಕುಕ್ಕುಟಸ್ಯ ಖರಸ್ಯ ಚ।
12159070c ಮಾಂಸಂ ಮೂತ್ರಪುರೀಷಂ ಚ ಪ್ರಾಶ್ಯ ಸಂಸ್ಕಾರಮರ್ಹತಿ।।
ನಾಯಿ, ಹಂದಿ, ಮನುಷ್ಯ, ಕೋಳಿ, ಕತ್ತೆ – ಇವುಗಳ ಮಾಂಸ-ಮೂತ್ರ-ಮಲಗಳನ್ನು ಸೇವಿಸಿದ ಬ್ರಾಹ್ಮಣನು ಪುನಃ ಉಪನಯನ ಸಂಸ್ಕಾರವನ್ನು ಮಾಡಿಕೊಳ್ಳಬೇಕು.
12159071a ಬ್ರಾಹ್ಮಣಸ್ಯ ಸುರಾಪಸ್ಯ ಗಂಧಮಾಘ್ರಾಯ ಸೋಮಪಃ।
12159071c ಅಪಸ್ತ್ರ್ಯಹಂ ಪಿಬೇದುಷ್ಣಾಸ್ತ್ರ್ಯಹಮುಷ್ಣಂ ಪಯಃ ಪಿಬೇತ್।
12159071e ತ್ರ್ಯಹಮುಷ್ಣಂ ಘೃತಂ ಪೀತ್ವಾ ವಾಯುಭಕ್ಷೋ ಭವೇತ್ತ್ರ್ಯಹಮ್।।
ಸೋಮಯಾಗವನ್ನು ಮಾಡಿ ಸೋಮವನ್ನು ಕುಡಿದ ಬ್ರಾಹ್ಮಣನು ಮದ್ಯದ ವಾಸನೆಯನ್ನು ಆಘ್ರಾಣಿಸಿದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಮೂರು ದಿನ ಬಿಸಿಯಾದ ನೀರನ್ನು ಕುಡಿಯ ಬೇಕು. ಇನ್ನು ಮೂರು ದಿನ ಬಿಸಿಯಾದ ಹಾಲನ್ನು ಕುಡಿಯಬೇಕು. ನಂತರ ಮೂರು ದಿನ ವಾಯುಭಕ್ಷನಾಗಿರಬೇಕು.
12159072a ಏವಮೇತತ್ಸಮುದ್ದಿಷ್ಟಂ ಪ್ರಾಯಶ್ಚಿತ್ತಂ ಸನಾತನಮ್।
12159072c ಬ್ರಾಹ್ಮಣಸ್ಯ ವಿಶೇಷೇಣ ತತ್ತ್ವಜ್ಞಾನೇನ ಜಾಯತೇ31।।
ಈ ಎಲ್ಲ ಸನಾತನ ಪ್ರಾಯಶ್ಚಿತ್ತಗಳನ್ನೂ ವಿಶೇಷವಾಗಿ ತತ್ತ್ವಜ್ಞಾನೀ ಬ್ರಾಹ್ಮಣನಿಗೆ ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಪ್ರಾಯಶ್ಚಿತ್ತೀಯೇ ಏಕೋನಷಷ್ಟ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಪ್ರಾಯಶ್ಚಿತ್ತ ಎನ್ನುವ ನೂರಾಐವತ್ತೊಂಭತ್ತನೇ ಅಧ್ಯಾಯವು.
-
ಹೃತಾರ್ಥೋ (ಗೀತಾ ಪ್ರೆಸ್). ↩︎
-
ಆಚಾರ್ಯಪಿತೃಕಾರ್ಯಾರ್ಥಂ (ಗೀತಾ ಪ್ರೆಸ್). ↩︎
-
ನಿಃಸ್ವೇಭ್ಯೋ (ಗೀತಾ ಪ್ರೆಸ್). ↩︎
-
ವಿದ್ಯಾ ಚ ಭಾರತ (ಗೀತಾ ಪ್ರೆಸ್). ↩︎
-
ಯಜ್ಞಾಶ್ಚ (ಗೀತಾ ಪ್ರೆಸ್). ↩︎
-
ಅನ್ಯೋನ್ಯಂ ವಿಭವಾಚಾರಾ ಯಜಂತೇ ಗುಣತಃ ಸದಾ। ಎಂಬ ಅಧಿಕ ಶ್ಲೋಕವಿದೆ (ಗೀತಾ ಪ್ರೆಸ್). ↩︎
-
ಸದಾ (ಗೀತಾ ಪ್ರೆಸ್). ↩︎
-
ಮರಣಾದ್ಭೀತೈರ್ವಿಧಿಃ ಪ್ರತಿನಿಧೀಕೃತಃ। (ಗೀತಾ ಪ್ರೆಸ್). ↩︎
-
ವೇದವಿತ್ (ಗೀತಾ ಪ್ರೆಸ್). ↩︎
-
ಸ್ವವೀರ್ಯಾದ್ರಾಜವೀರ್ಯಾಚ್ಚ ಸ್ವವೀರ್ಯಂ ಬಲವತ್ತರಮ್। (ಗೀತಾ ಪ್ರೆಸ್). ↩︎
-
ಕರ್ತಾ (ಗೀತಾ ಪ್ರೆಸ್). ↩︎
-
ಶುಷ್ಕಾಮೀರಯೇದ್ಗಿರಮ್। (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ತಸ್ಮಾದ್ವೈತಾನಕುಶಲೋ ಹೋತಾ ಸ್ಯಾದ್ವೇದಪಾರಗಃ। (ಗೀತಾ ಪ್ರೆಸ್). ↩︎
-
ದಕ್ಷಿಣೆಗಳನ್ನು ಕೊಡದೇ ಅಗ್ನಿಸ್ಥಾಪನೆ ಮಾಡಿಸಿಕೊಳ್ಳುವುದು ವ್ಯರ್ಥ (ಗೀತಾ ಪ್ರೆಸ್). ↩︎
-
ಹೋಮಂ (ಗೀತಾ ಪ್ರೆಸ್). ↩︎
-
ಪಾಪಕರ್ಮಿಣಃ। (ಗೀತಾ ಪ್ರೆಸ್). ↩︎
-
ಅಭಾರ್ಯಾಂ (ಗೀತಾ ಪ್ರೆಸ್). ↩︎
-
ಕಷಾಯಪಃ (ಭಾರತ ದರ್ಶನ). ↩︎
-
ಅಬ್ರಾಹ್ಮಣ ಇವ ವಂದಿತ್ವಾ (ಭಾರತ ದರ್ಶನ). ↩︎
-
ನಿಕೃಷ್ಟವರ್ಣಂ ಎಂಬ ಪಾಠಾಂತರವಿದೆ. ಆದರೆ ಮೂರು ಪಾದಗಳಲ್ಲಿಯೂ ಹನ್ನೊಂದು ಅಕ್ಷರಗಳಿರುವುದರಿಂದ ಈ ಎರಡನೆಯ ಪಾದದಲ್ಲಿಯೂ ಹನ್ನೊಂದು ಅಕ್ಷರವೇ ಇರಬೇಕು. ಆದುದರಿಂದ ಕೃಷ್ಣಂ ವರ್ಣಂ ಎನ್ನುವುದೇ ಶುದ್ಧಪಾಠವೆಂದು ತೋರುತ್ತದೆ (ಭಾರತ ದರ್ಶನ). ↩︎
-
ಅನಿರ್ದೇಶ್ಯಾನಿ ಎನ್ನುವುದಕ್ಕೆ ವ್ಯಾಖ್ಯಾನಕಾರರು ಬುದ್ಧಿಪೂರ್ವಕಾನಿ ಕೃತಾನಿ ಚೇತ್ ಎಂದು ಅರ್ಥಮಾಡಿದ್ದಾರೆ. ತಿಳಿಯದೇ ಮಾಡಿದರೆ ಪ್ರಾಯಶ್ಚಿತ್ತವದೆ ಬುದ್ಧಿಪೂರ್ವಕವಾಗಿ ಮಾಡಿದರೆ ಮರಣಾಂತವೇ ಪ್ರಾಯಶ್ಚಿತ್ತ (ಭಾರತ ದರ್ಶನ). ↩︎
-
ಅನ್ನಂ ವೀರ್ಯಃ ಗ್ರಹೀತವ್ಯಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಏವಂ ತು ಸಮಭಿಜ್ಞಾತಾಮಾತ್ರೇಯೀಂ ವಾ ನಿಪಾತಯೇತ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಕ್ಷಿತೀಶಯಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಅಗ್ನಿಷ್ಟೋಮ (ಗೀತಾ ಪ್ರೆಸ್). ↩︎
-
ಅಲ್ಪೇ ಪಾಪ್ಯಥ ಶೋಚೇತ (ಭಾರತ ದರ್ಶನ). ↩︎
-
ಆಪಸ್ತಂಬಧರ್ಮಸೂತ್ರದಲ್ಲಿ ಕಾಲೇ ಚತುರ್ಥೇ ಎನ್ನುವುದಕ್ಕೆ ನಾಲ್ಕನೆಯ ಭೋಜನ ಕಾಲದಲ್ಲಿ ಎಂದರೆ ಇಂದು ಮಧ್ಯಾಹ್ನ ಊಟಮಾಡಿದರೆ ಇಂದು ನಾಳಿನ ರಾತ್ರಿಯಲ್ಲಿ ಊಟಮಾಡುವುದು (ಭಾರತ ದರ್ಶನ). ↩︎
-
ಸ್ಥಾನಾಸನಾಭ್ಯಾಂ ಎನ್ನುವುದಕ್ಕೆ ಹಗಲಿನಲ್ಲಿ ನಿಂತಿರುವುದು ಮತ್ತು ರಾತ್ರಿಯಲ್ಲಿ ಕುಳಿತಿರುವುದು ಎಂದೂ ವ್ಯಾಖ್ಯಾನಮಾಡಿದ್ದಾರೆ (ಭಾರತ ದರ್ಶನ). ↩︎
-
ಗುರುಮ್। (ಭಾರತ ದರ್ಶನ). ↩︎
-
ದಾನಮೇಕಂ (ಭಾರತ ದರ್ಶನ). ↩︎
-
ಯದಜ್ಞಾನೇನ ಸಂಭವೇತ್। (ಭಾರತ ದರ್ಶನ). ↩︎