157: ಲೋಭನಿರೂಪಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 157

ಸಾರ

ಕಾಮ, ಕ್ರೋಧ ಮೊದಲಾದ ಹದಿಮೂರು ದೋಷಗಳ ನಿರೂಪಣೆ ಮತ್ತು ಅವುಗಳ ನಾಶದ ಉಪಾಯ (1-18).

12157001 ಯುಧಿಷ್ಠಿರ ಉವಾಚ।
12157001a ಯತಃ ಪ್ರಭವತಿ ಕ್ರೋಧಃ ಕಾಮಶ್ಚ ಭರತರ್ಷಭ।
12157001c ಶೋಕಮೋಹೌ ವಿವಿತ್ಸಾ1 ಚ ಪರಾಸುತ್ವಂ ತಥಾ ಮದಃ।।
12157002a ಲೋಭೋ ಮಾತ್ಸರ್ಯಮೀರ್ಷ್ಯಾ ಚ ಕುತ್ಸಾಸೂಯಾ ಕೃಪಾ ತಥಾ।
12157002c ಏತತ್ಸರ್ವಂ ಮಹಾಪ್ರಾಜ್ಞ ಯಾಥಾತಥ್ಯೇನ ಮೇ ವದ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ಕ್ರೋಧ, ಕಾಮ, ಶೋಕ, ಮೋಹ, ಪಡೆದುಕೊಳ್ಳಬೇಕೆನ್ನುವ ಆಸೆ, ಇತರರನ್ನು ಕೊಲ್ಲುವ ಇಚ್ಛೆ, ಮದ, ಲೋಭ, ಮಾತ್ಸರ್ಯ, ಈರ್ಷ್ಯೆ, ನಿಂದನೆ, ದೋಷದೃಷ್ಟಿ ಮತ್ತು ಕಂಜೂಸಿ (ದೈನ್ಯಭಾವ) ಈ ದೋಷಗಳು ಎಲ್ಲಿಂದ ಉತ್ಪನ್ನವಾಗುತ್ತವೆ? ಇವೆಲ್ಲವನ್ನೂ ನನಗೆ ತಿಳಿಯುವಂತೆ ಯಥಾವತ್ತಾಗಿ ಹೇಳು.”

12157003 ಭೀಷ್ಮ ಉವಾಚ।
12157003a ತ್ರಯೋದಶೈತೇಽತಿಬಲಾಃ ಶತ್ರವಃ ಪ್ರಾಣಿನಾಂ ಸ್ಮೃತಾಃ।
12157003c ಉಪಾಸತೇ ಮಹಾರಾಜ ಸಮಸ್ತಾಃ ಪುರುಷಾನಿಹ।।

ಭೀಷ್ಮನು ಹೇಳಿದನು: “ಮಹಾರಾಜ! ಈ ಹದಿಮೂರನ್ನು ಪ್ರಾಣಿಗಳ ಅತಿಬಲಶಾಲೀ ಶತ್ರುಗಳೆಂದು ಹೇಳಲಾಗಿದೆ. ಇವು ಇಲ್ಲಿ ಮನುಷ್ಯರನ್ನು ಎಲ್ಲ ಕಡೆಗಳಿಂದ ಮುತ್ತಿಕೊಂಡಿರುತ್ತವೆ.

12157004a ಏತೇ ಪ್ರಮತ್ತಂ ಪುರುಷಮಪ್ರಮತ್ತಾ ನುದಂತಿ2 ಹಿ।
12157004c ವೃಕಾ ಇವ ವಿಲುಂಪಂತಿ ದೃಷ್ಟ್ವೈವ ಪುರುಷೇತರಾನ್।।

ಇವು ಪ್ರಮತ್ತವಾಗಿದ್ದುಕೊಂಡು ಅಪ್ರಮತ್ತ ಪುರುಷನನ್ನು ಪೀಡಿಸುತ್ತವೆ. ಅಂಥಹ ಪುರುಷರನ್ನು ನೋಡಿದೊಡನೆಯೇ ಇವು ತೋಳಗಳಂತೆ ಬಲಪೂರ್ವಕವಾಗಿ ಅವನ ಮೇಲೆ ಬೀಳುತ್ತವೆ.

12157005a ಏಭ್ಯಃ ಪ್ರವರ್ತತೇ ದುಃಖಮೇಭ್ಯಃ ಪಾಪಂ ಪ್ರವರ್ತತೇ।
12157005c ಇತಿ ಮರ್ತ್ಯೋ ವಿಜಾನೀಯಾತ್ಸತತಂ ಭರತರ್ಷಭ।।

ಭರತರ್ಷಭ! ಇವುಗಳಿಂದಲೇ ದುಃಖವುಂಟಾಗುತ್ತದೆ ಮತ್ತು ಇವುಗಳ ಪ್ರೇರಣೆಯಿಂದಲೇ ಮನುಷ್ಯನು ಪಾಪಕರ್ಮಗಳನ್ನೆಸಗುತ್ತಾನೆ. ಮನುಷ್ಯರು ಸದಾ ಇದನ್ನು ಗಮನದಲ್ಲಿಟ್ಟುಕೊಂಡಿರಬೇಕು.

12157006a ಏತೇಷಾಮುದಯಂ ಸ್ಥಾನಂ ಕ್ಷಯಂ ಚ ಪುರುಷೋತ್ತಮ।
12157006c ಹಂತ ತೇ ವರ್ತಯಿಷ್ಯಾಮಿ ತನ್ಮೇ ನಿಗದತಃ ಶೃಣು3।।

ಪುರುಷೋತ್ತಮ! ನಿಲ್ಲು! ಇವುಗಳ ಉದಯ ಸ್ಥಾನ ಮತ್ತು ಕ್ಷಯಗಳ ಕುರಿತು ಹೇಳುತ್ತೇನೆ4. ನಾನು ಹೇಳುವುದನ್ನು ಕೇಳು.

12157007a ಲೋಭಾತ್ ಕ್ರೋಧಃ ಪ್ರಭವತಿ ಪರದೋಷೈರುದೀರ್ಯತೇ।
12157007c ಕ್ಷಮಯಾ ತಿಷ್ಠತೇ ರಾಜನ್ ಶ್ರೀಮಾಂಶ್ಚ5 ವಿನಿವರ್ತತೇ।।

ರಾಜನ್! ಶ್ರೀಮಾನ್! ಲೋಭದಿಂದ ಕ್ರೋಧವುಂಟಾಗುತ್ತದೆ ಮತ್ತು ಇತರರ ದೋಷಗಳನ್ನು ನೋಡುವುದರಿಂದ ಕ್ರೋಧವು ಹೆಚ್ಚಾಗುತ್ತದೆ. ಕ್ಷಮೆಯಿಂದ ಕ್ರೋಧವು ನಿಂತುಕೊಳ್ಳುತ್ತದೆ ಮತ್ತು ಕ್ಷಮೆಯಿಂದಲೇ ಹಿಂದಿರುಗುತ್ತದೆ.

12157008a ಸಂಕಲ್ಪಾಜ್ಜಾಯತೇ ಕಾಮಃ ಸೇವ್ಯಮಾನೋ ವಿವರ್ಧತೇ। 12157008c 6ಅವದ್ಯದರ್ಶನಾದ್ವ್ಯೇತಿ ತತ್ತ್ವಜ್ಞಾನಾಚ್ಚ ಧೀಮತಾಮ್।।

ಕಾಮವು ಸಂಕಲ್ಪದಿಂದ ಹುಟ್ಟುತ್ತದೆ ಮತ್ತು ಅದರ ಸೇವೆಗೈಯುವುದರಿಂದ ಹೆಚ್ಚಾಗುತ್ತದೆ. ಧೀಮತರ ತತ್ತ್ವಜ್ಞಾನದಿಂದ ಮತ್ತು ಕಾಮವನ್ನು ಅವಲೋಕಿಸದೇ ಇರುವುದರಿಂದ ಅದು ನಷ್ಟವಾಗುತ್ತದೆ.

12157009a 7ವಿರುದ್ಧಾನಿ ಹಿ ಶಾಸ್ತ್ರಾಣಿ ಪಶ್ಯಂತೀಹಾಲ್ಪಬುದ್ಧಯಃ। 12157009c ವಿವಿತ್ಸಾ ಜಾಯತೇ ತತ್ರ ತತ್ತ್ವಜ್ಞಾನಾನ್ನಿವರ್ತತೇ8।।

ಧರ್ಮ ವಿರುದ್ಧ ಶಾಸ್ತ್ರಗಳನ್ನು ಅವಲೋಕಿಸುವ ಅಲ್ಪಬುದ್ಧಿಗಳಲ್ಲಿ ಅನುಚಿತ ಕರ್ಮಗಳನ್ನೆಸಗುವ ವಿವಿತ್ಸತೆಯು ಉತ್ಪನ್ನವಾಗುತ್ತದೆ. ಅದು ತತ್ತ್ವಜ್ಞಾನದಿಂದ ನಿವೃತ್ತಗೊಳ್ಳುತ್ತದೆ.

12157010a ಪ್ರೀತೇಃ ಶೋಕಃ ಪ್ರಭವತಿ ವಿಯೋಗಾತ್ತಸ್ಯ ದೇಹಿನಃ।
12157010c ಯದಾ ನಿರರ್ಥಕಂ ವೇತ್ತಿ ತದಾ ಸದ್ಯಃ ಪ್ರಣಶ್ಯತಿ।।

ಪ್ರಿಯವಾದ ಜೀವಿಯ ವಿಯೋಗದಿಂದ ಶೋಕವುಂಟಾಗುತ್ತದೆ. ಶೋಕವು ನಿರರ್ಥಕವಾದುದು ಎಂದು ತಿಳಿದುಕೊಂಡಾಗ ಕೂಡಲೇ ಶೋಕದ ಶಾಂತಿಯಾಗಿಬಿಡುತ್ತದೆ.

12157011a ಪರಾಸುತಾ ಕ್ರೋಧಲೋಭಾದಭ್ಯಾಸಾಚ್ಚ ಪ್ರವರ್ತತೇ।
12157011c ದಯಯಾ ಸರ್ವಭೂತಾನಾಂ ನಿರ್ವೇದಾತ್ಸಾ ನಿವರ್ತತೇ।।

ಕ್ರೋಧ, ಲೋಭ ಮತ್ತು ಅಭ್ಯಾಸದ ಕಾರಣಗಳಿಂದಾಗಿ ಪರಾಸುತಾ ಅರ್ಥಾತ್ ಇತರರನ್ನು ಕೊಲ್ಲುವ ಇಚ್ಛೆಯುಂಟಾಗುತ್ತದೆ. ಸಮಸ್ತ ಪ್ರಾಣಿಗಳ ಮೇಲೆ ದಯೆ ಮತ್ತು ವೈರಾಗ್ಯವುಂಟಾಗುವುದರಿಂದ ಅದು ನಿವೃತ್ತವಾಗಿಬಿಡುತ್ತದೆ.

12157012a ಸತ್ತ್ವತ್ಯಾಗಾತ್ತು ಮಾತ್ಸರ್ಯಮಹಿತಾನಿ ಚ ಸೇವತೇ।
12157012c ಏತತ್ತು ಕ್ಷೀಯತೇ ತಾತ ಸಾಧೂನಾಮುಪಸೇವನಾತ್।।

ಅಯ್ಯಾ! ಸತ್ಯದ ತ್ಯಾಗ ಮತ್ತು ಅಹಿತರ ಸಂಗದೋಷದಿಂದ ಮಾತ್ಸರ್ಯವುಂಟಾಗುತ್ತದೆ. ಸತ್ಪುರುಷರ ಸೇವವೆಯಿಂದ ಮಾತ್ಸರ್ಯವು ಕ್ಷೀಣಿಸುತ್ತದೆ.

12157013a ಕುಲಾಜ್ಜ್ಞಾನಾತ್ತಥೈಶ್ವರ್ಯಾನ್ಮದೋ ಭವತಿ ದೇಹಿನಾಮ್।
12157013c ಏಭಿರೇವ ತು ವಿಜ್ಞಾತೈರ್ಮದಃ ಸದ್ಯಃ ಪ್ರಣಶ್ಯತಿ।।

ತನ್ನ ಉತ್ತಮ ಕುಲ, ಜ್ಞಾನ ಮತ್ತು ಐಶ್ವರ್ಯದಿಂದ ಜೀವಿಗಳಿಗೆ ಮದವುಂಟಾಗುತ್ತದೆ. ಇದರ ಯಥಾರ್ಥ ಸ್ವರೂಪವನ್ನು ತಿಳಿದುಕೊಂಡಾಗ ಇದೂ ಕೂಡ ಕೂಡಲೇ ನಾಶವಾಗಿಬಿಡುತ್ತದೆ.

12157014a ಈರ್ಷ್ಯಾ ಕಾಮಾತ್ ಪ್ರಭವತಿ ಸಂಘರ್ಷಾಚ್ಚೈವ9 ಭಾರತ।
12157014c ಇತರೇಷಾಂ ತು ಮರ್ತ್ಯಾನಾಂ10 ಪ್ರಜ್ಞಯಾ ಸಾ ಪ್ರಣಶ್ಯತಿ।।

ಭಾರತ! ಕಾಮದಿಂದ ಮತ್ತು ಇತರರ ಹರ್ಷಗಳಿಂದ ಈರ್ಷ್ಯೆಯುಂಟಾಗುತ್ತದೆ. ಮರ್ತ್ಯರ ಕುರಿತಾದ ಪ್ರಜ್ಞೆಯಿಂದ ಇದು ನಾಶವಾಗುತ್ತದೆ.

12157015a ವಿಭ್ರಮಾಲ್ಲೋಕಬಾಹ್ಯಾನಾಂ ದ್ವೇಷ್ಯೈರ್ವಾಕ್ಯೈರಸಂಗತೈಃ।
12157015c ಕುತ್ಸಾ ಸಂಜಾಯತೇ ರಾಜನ್ನುಪೇಕ್ಷಾಭಿಃ11 ಪ್ರಶಾಮ್ಯತಿ।।

ರಾಜನ್! ಲೋಕಬಹಿಷ್ಕೃತ ಅಸಂಗತರ ದ್ವೇಷಪೂರ್ಣ ಭ್ರಮಿಕ ಮಾತುಗಳನ್ನು ಕೇಳುವುದರಿಂದ ನಿಂದಿಸುವ ಅಭ್ಯಾಸವುಂಟಾಗುತ್ತದೆ. ಅವರನ್ನು ಉಪೇಕ್ಷಿಸುವುದರಿಂದ ಅದು ನಾಶವಾಗುತ್ತದೆ.

12157016a ಪ್ರತಿಕರ್ತುಮಶಕ್ಯಾಯ ಬಲಸ್ಥಾಯಾಪಕಾರಿಣೇ।
12157016c ಅಸೂಯಾ ಜಾಯತೇ ತೀವ್ರಾ ಕಾರುಣ್ಯಾದ್ವಿನಿವರ್ತತೇ।।

ತಮಗೆ ಅಪಕಾರವನ್ನೆಸಗಿದ ಬಲಶಾಲಿಗಳಿಗೆ ಪ್ರತೀಕಾರವನ್ನೆಸಗಲು ಅಶಕ್ಯರಾದಾಗ ಅಸೂಯೆಯು ಹುಟ್ಟುತ್ತದೆ. ತೀವ್ರ ಕಾರುಣ್ಯದಿಂದ ಅದು ಹಿಂದೆ ಸರಿಯುತ್ತದೆ.

12157017a ಕೃಪಣಾನ್ಸತತಂ ದೃಷ್ಟ್ವಾ ತತಃ ಸಂಜಾಯತೇ ಕೃಪಾ।
12157017c ಧರ್ಮನಿಷ್ಠಾಂ ಯದಾ ವೇತ್ತಿ ತದಾ ಶಾಮ್ಯತಿ ಸಾ ಕೃಪಾ।।

ಸತತವೂ ಕೃಪಣರನ್ನು ನೋಡುವುದರಿಂದ ಕೃಪಣತ್ವವು ಹುಟ್ಟುತ್ತದೆ. ಧರ್ಮನಿಷ್ಠರ ಉದಾರತೆಯನ್ನು ತಿಳಿದುಕೊಂಡಾಗ ಕೃಪಣತೆಯು ನಾಶವಾಗುತ್ತದೆ.

12157018a 12ಏತಾನ್ಯೇವ ಜಿತಾನ್ಯಾಹುಃ ಪ್ರಶಮಾಚ್ಚ ತ್ರಯೋದಶ। 12157018c ಏತೇ ಹಿ ಧಾರ್ತರಾಷ್ಟ್ರಾಣಾಂ ಸರ್ವೇ ದೋಷಾಸ್ತ್ರಯೋದಶ।
12157018e ತ್ವಯಾ ಸರ್ವಾತ್ಮನಾ ನಿತ್ಯಂ ವಿಜಿತಾ ಜೇಷ್ಯಸೇ ಚ ತಾನ್13।।

ಈ ಹದಿಮೂರು ದೋಷಗಳನ್ನು ಶಾಂತಿಯ ಮೂಲಕ ಗೆಲ್ಲಬಹುದು ಎಂದು ಹೇಳುತ್ತಾರೆ. ಧಾರ್ತರಾಷ್ಟ್ರರಲ್ಲಿ ಈ ಎಲ್ಲ ಹದಿಮೂರು ದೋಷಗಳೂ ಇದ್ದವು. ನಿತ್ಯವೂ ಸರ್ವಾತ್ಮನಾಗಿರುವ ನೀನು ಇವರೆಲ್ಲರನ್ನೂ ಗೆದ್ದಿರುವೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲೋಭನಿರೂಪಣೇ ಸಪ್ತಪಂಚಾಶದಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲೋಭನಿರೂಪಣೆ ಎನ್ನುವ ನೂರಾಐವತ್ತೇಳನೇ ಅಧ್ಯಾಯವು.


  1. ವಿಧಿತ್ಸಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ವಿವಿತ್ಸಾ ಎಂದರೆ ಪಡೆದುಕೊಳ್ಳಬೇಕೆನ್ನುವ ಆಸೆ (ಜಿ.ಎನ್, ಚಕ್ರವರ್ತಿ, ಸಂಸ್ಕೃತ-ಕನ್ನಡ ನಿಘಂಟು) ಮತ್ತು ವಿಧಿತ್ಸಾ ಎಂದರೆ ಶಾಸ್ತ್ರಗಳ ವಿರುದ್ಧ ಹೋಗುವುದು. ಮುಂದಿನ ಶ್ಲೋಕ ೯ನ್ನು ನೋಡಿದರೆ ವಿಧಿತ್ಸಾ ಎನ್ನುವುದೇ ಸರಿಯೆಂದು ತೋರುತ್ತದೆ. ↩︎

  2. ಪುರುಷಮಪ್ರಮತ್ತಾಸ್ತುದಂತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  3. ಏತೇಷಾಮುದಯಂ ಸ್ಥಾನಂ ಕ್ಷಯಂ ಚ ಪೃಥಿವೀಪತೇ। ಹಂತ ತೇ ಕಥಯಿಷ್ಯಾಮಿ ಕ್ರೋಧಸ್ಯೋತ್ಪತ್ತಿಮಾದಿತಃ।। ಯಥಾತತ್ತ್ವಂ ಕ್ಷಿತಿಪತೇ ತದಿಹೈಕಮನಾಃ ಶೃಣು। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  4. ಈ ಮುಂದಿನ ಶ್ಲೋಕಗಳಲ್ಲಿ ಕುತ್ಸ ಮತ್ತು ಮೋಹ ಇವುಗಳ ನಿರೂಪಣೆಗಳಿಲ್ಲ. ಆದರೆ ಗೀತಾ ಪ್ರೆಸ್ ನಲ್ಲಿ ಮೋಹದ ನಿರೂಪಣೆಯಿದೆ. ಕುತ್ಸದ ನಿರೂಪಣೆಯಿಲ್ಲ. ↩︎

  5. ಕ್ಷಮಯಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  6. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದೂವರೆ ಅಧಿಕ ಶ್ಲೋಕವಿದೆ: ಯದಾ ಪ್ರಾಜ್ಞೋ ವಿರಮತೇ ತದಾ ಸದ್ಯಃ ಪ್ರಣಶ್ಯತಿ।। ಪರಾಸುತಾ ಕ್ರೋಧಲೋಭಾದಭ್ಯಾಸಾಚ್ಚ ಪ್ರವರ್ತತೇ। ದಯಯಾ ಸರ್ವಭೂತಾನಾಂ ನಿರ್ವೇದಾತ್ಸಾ ನಿವರ್ತತೇ।। ↩︎

  7. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜ್ಞಾನಪ್ರಭವೋ ಮೋಹಃ ಪಾಪಾಭ್ಯಾಸಾತ್ ಪ್ರವರ್ತತೇ। ಯದಾ ಪ್ರಾಜ್ಞೇಷು ರಮತೇ ತದಾ ಸದ್ಯಃ ಪ್ರಣಶ್ಯತಿ।। ಮೋಹವು ಹದಿಮೂರು ದೋಷಗಳಲ್ಲಿ ಸೇರಿಕೊಂಡಿರುವುದರಿಂದ ಈ ಶ್ಲೋಕವು ಅಗತ್ಯವಿದೆ ಎಂದು ತೋರುತ್ತದೆ. ↩︎

  8. ವಿರುದ್ಧಾನೀಹ ಶಾಸ್ತ್ರಾಣಿ ಯೇ ಪಶ್ಯಂತಿ ಕುರೂದ್ವಹ। ವಿಧಿತ್ಸಾ ಜಾಯತೇ ತೇಷಾಂ ತತ್ತ್ವಜ್ಞಾನಾನ್ನಿವರ್ತತೇ।। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  9. ಸಂಹರ್ಷಾಚ್ಚೈವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇದೇ ಇಲ್ಲಿ ಸರಿಯೆಂದು ತೋರುತ್ತದೆ. ↩︎

  10. ಸತ್ತ್ವಾನಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  11. ರಾಜನ್ ಲೋಕಾನ್ ಪ್ರೇಕ್ಷ್ಯಾಭಿಶಾಮ್ಯತಿ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  12. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜ್ಞಾನಪ್ರಭವೋ ಲೋಭೋ ಭೂತಾನಾಂ ದೃಶ್ಯತೇ ಸದಾ। ಅಸ್ಥಿರತ್ವಂ ಚ ಭೋಗಾನಾಂ ದೃಷ್ಟ್ವಾ ಜ್ಞಾತ್ವಾ ನಿವರ್ತತೇ।। ↩︎

  13. ತ್ವಯಾ ಸತ್ಯಾರ್ಥಿನಾ ನಿತ್ಯಂ ವಿಜಿತಾ ಜ್ಯೇಷ್ಠಸೇವನಾತ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎