ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 156
ಸಾರ
ಸತ್ಯದ ಲಕ್ಷಣ, ಸ್ವರೂಪ ಮತ್ತು ಮಹಿಮೆಯ ವರ್ಣನೆ (1-26).
12156001 ಯುಧಿಷ್ಠಿರ ಉವಾಚ।
12156001a ಸತ್ಯಂ ಧರ್ಮೇ ಪ್ರಶಂಸಂತಿ ವಿಪ್ರರ್ಷಿಪಿತೃದೇವತಾಃ।
12156001c ಸತ್ಯಮಿಚ್ಚಾಮ್ಯಹಂ ಶ್ರೋತುಂ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿಪ್ರರ್ಷಿಗಳು, ಪಿತೃಗಳು ಮತ್ತು ದೇವತೆಗಳು ಧರ್ಮದಲ್ಲಿ ಸತ್ಯವನ್ನೇ ಪ್ರಶಂಸಿಸುತ್ತಾರೆ. ಸತ್ಯದ ಕುರಿತು ಕೇಳಲು ಬಯಸುತ್ತೇನೆ. ಅದರ ಕುರಿತು ಹೇಳು.
12156002a ಸತ್ಯಂ ಕಿಂಲಕ್ಷಣಂ ರಾಜನ್ಕಥಂ ವಾ ತದವಾಪ್ಯತೇ।
12156002c ಸತ್ಯಂ ಪ್ರಾಪ್ಯ ಭವೇತ್ಕಿಂ ಚ ಕಥಂ ಚೈವ ತದುಚ್ಯತೇ।।
ರಾಜನ್! ಸತ್ಯದ ಲಕ್ಷಣವೇನು? ಅದನ್ನು ಹೇಗೆ ಪಡೆದುಕೊಳ್ಳಬಹುದು? ಸತ್ಯವನ್ನು ಪಾಲಿಸುವುದರಲ್ಲಿ ಯಾವ ಲಾಭವಿದೆ? ಅದು ಹೇಗಿರುತ್ತದೆ ಎಂದು ಹೇಳುತ್ತಾರೆ?”
12156003 ಭೀಷ್ಮ ಉವಾಚ।
12156003a ಚಾತುರ್ವರ್ಣ್ಯಸ್ಯ ಧರ್ಮಾಣಾಂ ಸಂಕರೋ ನ ಪ್ರಶಸ್ಯತೇ।
12156003c ಅವಿಕಾರಿತಮಂ ಸತ್ಯಂ ಸರ್ವವರ್ಣೇಷು ಭಾರತ।।
ಭೀಷ್ಮನು ಹೇಳಿದನು: “ಭಾರತ! ನಾಲ್ಕೂ ವರ್ಣದವರ ಸಮ್ಮಿಶ್ರಣವನ್ನು ಉತ್ತಮವೆಂದು ಹೇಳುವುದಿಲ್ಲ. ನಿರ್ವಿಕಾರ ಸತ್ಯವು ಸರ್ವವರ್ಣದವರಲ್ಲಿಯೂ ಇದೆ.
12156004a ಸತ್ಯಂ ಸತ್ಸು ಸದಾ ಧರ್ಮಃ ಸತ್ಯಂ ಧರ್ಮಃ ಸನಾತನಃ।
12156004c ಸತ್ಯಮೇವ ನಮಸ್ಯೇತ ಸತ್ಯಂ ಹಿ ಪರಮಾ ಗತಿಃ।।
ಸತ್ಪುರುಷರ ಧರ್ಮವು ಸದಾ ಸತ್ಯವೇ ಆಗಿದೆ. ಸತ್ಯವು ಸನಾತನ ಧರ್ಮವು. ಸತ್ಯಕ್ಕೇ ನಮಸ್ಕರಿಸಬೇಕು ಏಕೆಂದರೆ ಸತ್ಯವೇ ಪರಮ ಗತಿಯು.
12156005a ಸತ್ಯಂ ಧರ್ಮಸ್ತಪೋ ಯೋಗಃ ಸತ್ಯಂ ಬ್ರಹ್ಮ ಸನಾತನಮ್।
12156005c ಸತ್ಯಂ ಯಜ್ಞಃ ಪರಃ ಪ್ರೋಕ್ತಃ ಸತ್ಯೇ ಸರ್ವಂ ಪ್ರತಿಷ್ಠಿತಮ್।।
ಸತ್ಯವೇ ಧರ್ಮ, ತಪಸ್ಸು ಮತ್ತು ಯೋಗವು. ಸತ್ಯವು ಸನಾತನ ಬ್ರಹ್ಮವು. ಸತ್ಯವನ್ನು ಪರಮ ಯಜ್ಞವೆಂದು ಹೇಳುತ್ತಾರೆ. ಸತ್ಯದಲ್ಲಿಯೇ ಎಲ್ಲವೂ ಪ್ರತಿಷ್ಠಿತಗೊಂಡಿವೆ.
12156006a ಆಚಾರಾನಿಹ ಸತ್ಯಸ್ಯ ಯಥಾವದನುಪೂರ್ವಶಃ।
12156006c ಲಕ್ಷಣಂ ಚ ಪ್ರವಕ್ಷ್ಯಾಮಿ ಸತ್ಯಸ್ಯೇಹ ಯಥಾಕ್ರಮಮ್।।
ಈಗ ನಾನು ಸತ್ಯದ ಆಚಾರ ಮತ್ತು ಲಕ್ಷಣಗಳನ್ನು ಯಥಾವತ್ತಾಗಿ ಹೇಳುತ್ತೇನೆ.
12156007a ಪ್ರಾಪ್ಯತೇ ಹಿ ಯಥಾ ಸತ್ಯಂ ತಚ್ಚ ಶ್ರೋತುಂ ತ್ವಮರ್ಹಸಿ।
12156007c ಸತ್ಯಂ ತ್ರಯೋದಶವಿಧಂ ಸರ್ವಲೋಕೇಷು ಭಾರತ।।
ಹಾಗೆಯೇ ಸತ್ಯವು ಹೇಗೆ ಪ್ರಾಪ್ತವಾಗುತ್ತದೆ ಎನ್ನುವುದನ್ನೂ ನೀನು ಕೇಳಬೇಕು. ಭಾರತ! ಸರ್ವಲೋಕಗಳಲ್ಲಿ ಸತ್ಯವು ಈ ಹದಿಮೂರು ವಿಧಗಳಲ್ಲಿದೆ.
12156008a ಸತ್ಯಂ ಚ ಸಮತಾ ಚೈವ ದಮಶ್ಚೈವ ನ ಸಂಶಯಃ।
12156008c ಅಮಾತ್ಸರ್ಯಂ ಕ್ಷಮಾ ಚೈವ ಹ್ರೀಸ್ತಿತಿಕ್ಷಾನಸೂಯತಾ।।
12156009a ತ್ಯಾಗೋ ಧ್ಯಾನಮಥಾರ್ಯತ್ವಂ ಧೃತಿಶ್ಚ ಸತತಂ ಸ್ಥಿರಾ।
12156009c ಅಹಿಂಸಾ ಚೈವ ರಾಜೇಂದ್ರ ಸತ್ಯಾಕಾರಾಸ್ತ್ರಯೋದಶ।।
ರಾಜೇಂದ್ರ! ಸತ್ಯ, ಸಮತಾ, ದಮೆ, ಅಮಾತ್ಸರ್ಯ, ಕ್ಷಮೆ, ಲಜ್ಜೆ, ಸಹನಶೀಲನೆ, ಅನಸೂಯತೆ, ತ್ಯಾಗ, ಧ್ಯಾನ, ಆರ್ಯತ್ವ ಅಂದರೆ ಶ್ರೇಷ್ಠ ಆಚರಣೆ, ಸತತ ಸ್ಥಿರತೆಯಿಂದಿರುವ ಧೃತಿ, ಮತ್ತು ಅಹಿಂಸಾ – ಈ ಹದಿಮೂರು ಸತ್ಯದ ಆಕಾರಗಳು.
12156010a ಸತ್ಯಂ ನಾಮಾವ್ಯಯಂ ನಿತ್ಯಮವಿಕಾರಿ ತಥೈವ ಚ।
12156010c ಸರ್ವಧರ್ಮಾವಿರುದ್ಧಂ ಚ ಯೋಗೇನೈತದವಾಪ್ಯತೇ।।
ನಿತ್ಯವೂ ಒಂದೇ ಆಗಿದ್ದು, ಅವಿನಾಶಿಯೂ ಅವಿಕಾರಿಯೂ ಆಗಿರುವುದೇ ಸತ್ಯ. ಸರ್ವಧರ್ಮಗಳಿಗೂ ಅವಿರೋಧವಾಗಿರುವ ಯೋಗದಿಂದಲೇ ಸತ್ಯದ ಪ್ರಾಪ್ತಿಯಾಗುತ್ತದೆ.
12156011a ಆತ್ಮನೀಷ್ಟೇ ತಥಾನಿಷ್ಟೇ ರಿಪೌ ಚ ಸಮತಾ ತಥಾ।
12156011c ಇಚ್ಚಾದ್ವೇಷಕ್ಷಯಂ ಪ್ರಾಪ್ಯ ಕಾಮಕ್ರೋಧಕ್ಷಯಂ ತಥಾ।।
ತನ್ನ ಇಷ್ಟವಾಗಿರುವವರಲ್ಲಿ ಮತ್ತು ಅನಿಷ್ಟ ಶತ್ರುಗಳಲ್ಲಿ ಸಮನಾಗಿರುವುದೇ ಸಮತೆಯು. ಇಚ್ಛೆ (ರಾಗ), ದ್ವೇಷ ಹಾಗೂ ಕಾಮ-ಕ್ರೋಧಗಳನ್ನು ಕಳೆದುಕೊಳ್ಳುವುದೇ ಸಮತೆಯನ್ನು ಪಡೆದುಕೊಳ್ಳುವ ಉಪಾಯವು.
12156012a ದಮೋ ನಾನ್ಯಸ್ಪೃಹಾ ನಿತ್ಯಂ ಧೈರ್ಯಂ ಗಾಂಭೀರ್ಯಮೇವ ಚ।
12156012c ಅಭಯಂ ಕ್ರೋಧಶಮನಂ1 ಜ್ಞಾನೇನೈತದವಾಪ್ಯತೇ।।
ಬೇರೆಯವರ ವಸ್ತುಗಳನ್ನು ಬಯಸದೇ ಇರುವುದು, ಸದಾ ಗಂಭೀರವಾಗಿರುವುದು ಮತ್ತು ಧೈರ್ಯದಿಂದಿರುವುದು, ಭಯವನ್ನು ತ್ಯಜಿಸುವುದು ಮತ್ತು ಕ್ರೋಧವನ್ನು ತಣಿಸಿಕೊಳ್ಳುವುದು ಇವೆಲ್ಲವೂ ದಮೆಯ ಲಕ್ಷಣಗಳು. ಇದು ಜ್ಞಾನದಿಂದ ಪ್ರಾಪ್ತವಾಗುತ್ತದೆ.
12156013a ಅಮಾತ್ಸರ್ಯಂ ಬುಧಾಃ ಪ್ರಾಹುರ್ದಾನಂ ಧರ್ಮೇ ಚ ಸಂಯಮಮ್।
12156013c ಅವಸ್ಥಿತೇನ ನಿತ್ಯಂ ಚ ಸತ್ಯೇನಾಮತ್ಸರೀ ಭವೇತ್।।
ದಾನ-ಧರ್ಮಗಳನ್ನು ಮಾಡುವಾಗ ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳುವುದನ್ನೇ ಅಮಾತ್ಸರ್ಯ ಎಂದು ತಿಳಿದವರು ಹೇಳುತ್ತಾರೆ. ನಿತ್ಯವೂ ಸತ್ಯಪಾಲನೆಯಿಂದಲೇ ಮನುಷ್ಯನು ಅಮತ್ಸರಿಯಾಗುತ್ತಾನೆ.
12156014a ಅಕ್ಷಮಾಯಾಃ ಕ್ಷಮಾಯಾಶ್ಚ ಪ್ರಿಯಾಣೀಹಾಪ್ರಿಯಾಣಿ ಚ।
12156014c ಕ್ಷಮತೇ ಸರ್ವತಃ ಸಾಧುಃ ಸಾಧ್ವಾಪ್ನೋತಿ ಚ ಸತ್ಯವಾನ್।।
ಪ್ರಿಯವಾಗಿರಲೀ ಮತ್ತು ಅಪ್ರಿಯವಾಗಿರಲೀ ಅಕ್ಷಮ್ಯವಾದವುಗಳನ್ನೂ ಕ್ಷಮಿಸುವುದೇ ಕ್ಷಮೆ. ಸತ್ಯವಂತ ಸಾಧುವಿಗೇ ಕ್ಷಮೆಯು ಪ್ರಾಪ್ತವಾಗುತ್ತದೆ.
12156015a ಕಲ್ಯಾಣಂ ಕುರುತೇ ಗಾಢಂ ಹ್ರೀಮಾನ್ನ ಶ್ಲಾಘತೇ ಕ್ವ ಚಿತ್2।
12156015c ಪ್ರಶಾಂತವಾಙ್ಮನಾ ನಿತ್ಯಂ ಹ್ರೀಸ್ತು ಧರ್ಮಾದವಾಪ್ಯತೇ।।
ಗಾಢವಾದ ಕಲ್ಯಾಣವನ್ನು ಮಾಡಿಯೂ ತನ್ನನ್ನು ತಾನು ಹೊಗಳಿಕೊಳ್ಳದಿರುವವನೇ ಲಜ್ಜಾವಂತನು. ಪ್ರಶಾಂತ ಮಾತು-ಮನಸ್ಸುಗಳಿಂದ ಮತ್ತು ಧರ್ಮದಿಂದ ಲಜ್ಜೆಯು ಪ್ರಾಪ್ತವಾಗುತ್ತದೆ.
12156016a ಧರ್ಮಾರ್ಥಹೇತೋಃ ಕ್ಷಮತೇ ತಿತಿಕ್ಷಾ ಕ್ಷಾಂತಿರುಚ್ಯತೇ।
12156016c ಲೋಕಸಂಗ್ರಹಣಾರ್ಥಂ ತು ಸಾ ತು ಧೈರ್ಯೇಣ ಲಭ್ಯತೇ।।
ಧರ್ಮಾರ್ಥಗಳಿಗಾಗಿ ಕಷ್ಟಗಳನ್ನು ಸಹಿಸಿಕೊಳ್ಳುವುದನ್ನೇ ತಿತಿಕ್ಷಾ ಅಥವಾ ಸಹನಶೀಲತೆ ಎನ್ನುತ್ತಾರೆ. ಲೋಕಸಂಗ್ರಹಣಾರ್ಥವಾಗಿ ಅದನ್ನು ಪಾಲಿಸಬೇಕು. ಅದು ಧೈರ್ಯದಿಂದ ಉಪಲಬ್ಧವಾಗುತ್ತದೆ.
12156017a ತ್ಯಾಗಃ ಸ್ನೇಹಸ್ಯ ಯಸ್ತ್ಯಾಗೋ ವಿಷಯಾಣಾಂ ತಥೈವ ಚ।
12156017c ರಾಗದ್ವೇಷಪ್ರಹೀಣಸ್ಯ ತ್ಯಾಗೋ ಭವತಿ ನಾನ್ಯಥಾ।।
ವಿಷಯಗಳ ಕುರಿತಾದ ಸ್ನೇಹವನ್ನು ತ್ಯಜಿಸುವುದೇ ತ್ಯಾಗವು. ರಾಗ-ದ್ವೇಷಗಳನ್ನು ಕಳೆದುಕೊಳ್ಳುವುದರಿಂದಲೇ ತ್ಯಾಗದ ಸಿದ್ಧಿಯಾಗುತ್ತದೆ. ಅನ್ಯಥಾ ಇಲ್ಲ.
12156018a ಆರ್ಯತಾ ನಾಮ ಭೂತಾನಾಂ ಯಃ ಕರೋತಿ ಪ್ರಯತ್ನತಃ।
12156018c ಶುಭಂ ಕರ್ಮ ನಿರಾಕಾರೋ ವೀತರಾಗತ್ವಮೇವ ಚ।।
ಪ್ರಾಣಿಗಳ ಹಿತಕ್ಕಾಗಿ ಪ್ರಯತ್ನಪೂರ್ವಕವಾಗಿ ಶುಭ ಕರ್ಮಗಳನ್ನು ನಿರಾಕಾರನಾಗಿ ಮಾಡುತ್ತಿರುವುದಕ್ಕೇ ಆರ್ಯತಾ ಎಂಬ ಹೆಸರು. ಇದು ಅನುರಾಗವನ್ನು ತೊರೆಯುವುದರಿಂದಲೇ ಪ್ರಾಪ್ತವಾಗುತ್ತದೆ.
12156019a ಧೃತಿರ್ನಾಮ ಸುಖೇ ದುಃಖೇ ಯಥಾ ನಾಪ್ನೋತಿ ವಿಕ್ರಿಯಾಮ್।
12156019c ತಾಂ ಭಜೇತ ಸದಾ ಪ್ರಾಜ್ಞೋ ಯ ಇಚ್ಚೇದ್ಭೂತಿಮಾತ್ಮನಃ।।
ಸುಖ ಅಥವಾ ದುಃಖವೊದಗಿದಾಗ ಮನೋವಿಕಾರಹೊಂದದೇ ಇರುವುದರ ಹೆಸರು ಧೃತಿ. ತನ್ನ ಉನ್ನತಿಯನ್ನು ಬಯಸುವ ಪ್ರಾಜ್ಞನು ಸದಾ ತನ್ನಲ್ಲಿ ಧೃತಿಯನ್ನಿಟ್ಟುಕೊಂಡಿರಬೇಕು.
12156020a ಸರ್ವಥಾ ಕ್ಷಮಿಣಾ ಭಾವ್ಯಂ ತಥಾ ಸತ್ಯಪರೇಣ ಚ।
12156020c ವೀತಹರ್ಷಭಯಕ್ರೋಧೋ ಧೃತಿಮಾಪ್ನೋತಿ ಪಂಡಿತಃ।।
ಸರ್ವಥಾ ಕ್ಷಮಿಯಾಗಿರಬೇಕು ಮತ್ತು ಸತ್ಯ ತತ್ಪರನಾಗಿರಬೇಕು. ಹರ್ಷ-ಭಯ-ಕ್ರೋಧಗಳನ್ನು ಕಳೆದುಕೊಂಡ ಪಂಡಿತನು ಧೃತಿಯನ್ನು ಹೊಂದುತ್ತಾನೆ.
12156021a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ।
12156021c ಅನುಗ್ರಹಶ್ಚ ದಾನಂ ಚ ಸತಾಂ ಧರ್ಮಃ ಸನಾತನಃ।।
ಮನಸ್ಸು, ಮಾತು ಮತ್ತು ಕರ್ಮಗಳಿಂದ ಸರ್ವಭೂತಗಳಿಗೂ ದ್ರೋಹವನ್ನೆಸಗದೇ ಇರುವುದು, ದಯೆ ಮತ್ತು ದಾನ ಇವು ಸತ್ಪುರುಷರ ಸನಾತನ ಧರ್ಮವು.
12156022a ಏತೇ ತ್ರಯೋದಶಾಕಾರಾಃ ಪೃಥಕ್ಸತ್ಯೈಕಲಕ್ಷಣಾಃ।
12156022c ಭಜಂತೇ ಸತ್ಯಮೇವೇಹ ಬೃಂಹಯಂತಿ ಚ ಭಾರತ।।
ಭಾರತ! ಈ ಹದಿಮೂರು ಆಕಾರಗಳ ಪ್ರತ್ಯೇಕ ಪ್ರತ್ಯೇಕ ಧರ್ಮಗಳು ಸತ್ಯದ ಲಕ್ಷಣಗಳೇ ಆಗಿವೆ. ಇವುಗಳು ಸತ್ಯವನ್ನೇ ಆಶ್ರಯಿಸಿವೆ ಮತ್ತು ಸತ್ಯವನ್ನೇ ವೃದ್ಧಿಸುತ್ತವೆ.
12156023a ನಾಂತಃ ಶಕ್ಯೋ ಗುಣಾನಾಂ ಹಿ ವಕ್ತುಂ ಸತ್ಯಸ್ಯ ಭಾರತ।
12156023c ಅತಃ ಸತ್ಯಂ ಪ್ರಶಂಸಂತಿ ವಿಪ್ರಾಃ ಸಪಿತೃದೇವತಾಃ।।
ಭಾರತ! ಸತ್ಯದ ಅನಂತ ಗುಣಗಳನ್ನು ಹೇಳಲು ಶಕ್ಯವಿಲ್ಲ. ಆದುದರಿಂದ ಪಿತೃಗಳು ಮತ್ತು ದೇವತೆಗಳೊಂದಿಗೆ ವಿಪ್ರರು ಸತ್ಯವನ್ನು ಪ್ರಶಂಸಿಸುತ್ತಾರೆ.
12156024a ನಾಸ್ತಿ ಸತ್ಯಾತ್ಪರೋ ಧರ್ಮೋ ನಾನೃತಾತ್ಪಾತಕಂ ಪರಮ್।
12156024c ಸ್ಥಿತಿರ್ಹಿ ಸತ್ಯಂ ಧರ್ಮಸ್ಯ ತಸ್ಮಾತ್ಸತ್ಯಂ ನ ಲೋಪಯೇತ್।।
ಸತ್ಯಕ್ಕಿಂತಲೂ ಪರಮ ಧರ್ಮವಿಲ್ಲ. ಸುಳ್ಳಿಗಿಂತ ಪರಮ ಪಾತಕವಿಲ್ಲ. ಸತ್ಯವೇ ಧರ್ಮದ ಸ್ಥಿತಿಯು. ಆದುದರಿಂದ ಸತ್ಯವನ್ನು ಎಂದೂ ಲೋಪಗೊಳಿಸಬಾರದು.
12156025a ಉಪೈತಿ ಸತ್ಯಾದ್ದಾನಂ ಹಿ ತಥಾ ಯಜ್ಞಾಃ ಸದಕ್ಷಿಣಾಃ।
12156025c ವ್ರತಾಗ್ನಿಹೋತ್ರಂ ವೇದಾಶ್ಚ ಯೇ ಚಾನ್ಯೇ ಧರ್ಮನಿಶ್ಚಯಾಃ।।
ದಾನ, ದಕ್ಷಿಣಾಯುಕ್ತ ಯಜ್ಞಗಳು, ವ್ರತಾಗ್ನಿಹೋಮಗಳು, ವೇದಗಳು ಮತ್ತು ಅನ್ಯ ಧರ್ಮನಿಶ್ಚಯಗಳಿಂದ ದೊರೆಯುವ ಫಲವನ್ನು ಸತ್ಯದಿಂದಲೇ ಪಡೆದುಕೊಳ್ಳಬಹುದು.
12156026a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್।
12156026c ಅಶ್ವಮೇಧಸಹಸ್ರಾದ್ಧಿ ಸತ್ಯಮೇವಾತಿರಿಚ್ಯತೇ3।।
ಸಹಸ್ರ ಅಶ್ವಮೇಧಗಳ ಫಲ ಮತ್ತು ಸತ್ಯ ಇವೆರಡರ ತುಲನೆ ಮಾಡಿದರೆ ನಿಶ್ಚಯವಾಗಿಯೂ ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚಿನದಾಗಿರುತ್ತದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಸತ್ಯಪ್ರಶಂಸಾಯಾಂ ಷಟ್ಪಂಚಾಶದಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಸತ್ಯಪ್ರಶಂಸಾ ಎನ್ನುವ ನೂರಾಐವತ್ತಾರನೇ ಅಧ್ಯಾಯವು.