155: ತಪಃಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 155

ಸಾರ

ತಪಸ್ಸಿನ ಮಹಿಮೆ (1-13).

12155001 ಭೀಷ್ಮ ಉವಾಚ।
12155001a ಸರ್ವಮೇತತ್ತಪೋಮೂಲಂ ಕವಯಃ ಪರಿಚಕ್ಷತೇ।
12155001c ನ ಹ್ಯತಪ್ತತಪಾ ಮೂಢಃ ಕ್ರಿಯಾಫಲಮವಾಪ್ಯತೇ।।

ಭೀಷ್ಮನು ಹೇಳಿದನು: “ಈ ಎಲ್ಲವುಗಳ ಮೂಲವೂ ತಪಸ್ಸೆಂದು ವಿದ್ವಾಂಸರು ಹೇಳುತ್ತಾರೆ. ತಪಸ್ಸನ್ನು ಮಾಡದ ಮೂಢನಿಗೆ ಶುಭ ಕರ್ಮಗಳ ಫಲವು ದೊರೆಯುವುದಿಲ್ಲ.

12155002a ಪ್ರಜಾಪತಿರಿದಂ ಸರ್ವಂ ತಪಸೈವಾಸೃಜತ್ ಪ್ರಭುಃ।
12155002c ತಥೈವ ವೇದಾನ್ ಋಷಯಸ್ತಪಸಾ ಪ್ರತಿಪೇದಿರೇ।।

ಪ್ರಭು ಪ್ರಜಾಪತಿಯು ತಪಸ್ಸಿನಿಂದಲೇ ಈ ಎಲ್ಲವನ್ನೂ ಸೃಷ್ಟಿಸಿದನು. ಹಾಗೆಯೇ ಋಷಿಗಳು ತಪಸ್ಸಿನಿಂದಲೇ ವೇದಗಳನ್ನು ಪಡೆದುಕೊಂಡರು.

12155003a ತಪಸೋ ಹ್ಯಾನುಪೂರ್ವ್ಯೇಣ ಫಲಮೂಲಾನಿಲಾಶನಾಃ1
12155003c ತ್ರೀಽಲ್ಲೋಕಾಂಸ್ತಪಸಾ ಸಿದ್ಧಾಃ ಪಶ್ಯಂತಿ ಸುಸಮಾಹಿತಾಃ।।

ಫಲ, ಮೂಲಗಳು ಮತ್ತು ಅನ್ನಗಳನ್ನು ಕ್ರಮೇಣವಾಗಿ ತಪಸ್ಸಿನಿಂದಲೇ ಸೃಷ್ಟಿಸಲಾಯಿತು. ತಪಸ್ಸಿನಿಂದ ಸಿದ್ಧರಾದ ಏಕಾಗ್ರಚಿತ್ತ ಮಹಾತ್ಮರು ಮೂರು ಲೋಕಗಳನ್ನೂ ಪ್ರತ್ಯಕ್ಷ ನೋಡುತ್ತಾರೆ.

12155004a ಔಷಧಾನ್ಯಗದಾದೀನಿ ತಿಸ್ರೋ ವಿದ್ಯಾಶ್ಚ ಸಂಸ್ಕೃತಾಃ2
12155004c ತಪಸೈವ ಹಿ ಸಿಧ್ಯಂತಿ ತಪೋಮೂಲಂ ಹಿ ಸಾಧನಮ್।।

ಔಷಧ, ಆರೋಗ್ಯ ಮೊದಲಾದವುಗಳು, ಮೂರು ವಿದ್ಯೆಗಳು ಮತ್ತು ಸತ್ಕರ್ಮಗಳು ತಪಸ್ಸಿನಿಂದಲೇ ಸಿದ್ಧಿಸುತ್ತವೆ. ಏಕೆಂದರೆ ಸಾಧನೆಗಳ ಮೂಲವೇ ತಪಸ್ಸು.

12155005a ಯದ್ದುರಾಪಂ ದುರಾಮ್ನಾಯಂ ದುರಾಧರ್ಷಂ ದುರುತ್ಸಹಮ್।
12155005c ಸರ್ವಂ ತತ್ತಪಸಾ ಶಕ್ಯಂ ತಪೋ ಹಿ ದುರತಿಕ್ರಮಮ್3।।

ಪಡೆಯಲು ಕಷ್ಟಕರವಾಗಿರುವ, ಸುರಕ್ಷಿತವಾಗಿಟ್ಟುಕೊಳ್ಳಿರಲು ಅಸಾಧ್ಯವಾಗಿರುವ, ಸಹಿಸಲು ಕಷ್ಟಕರವಾಗಿರುವ ಮತ್ತು ನೆರವೇರಿಸಲು ಕಷ್ಟವಾದ ಎಲ್ಲವೂ ತಪಸ್ಸಿನಿಂದ ಶಕ್ಯವಾಗುತ್ತದೆ. ಏಕೆಂದರೆ ತಪಸ್ಸನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

12155006a ಸುರಾಪೋಽಸಂಮತಾದಾಯೀ ಭ್ರೂಣಹಾ ಗುರುತಲ್ಪಗಃ।
12155006c ತಪಸೈವ ಸುತಪ್ತೇನ ನರಃ ಪಾಪಾದ್ವಿಮುಚ್ಯತೇ।।

ಸುರಾಪಾನಮಾಡಿದ, ಸಮ್ಮತಿಯಿಲ್ಲದೇ ಪರರ ವಸ್ತುವನ್ನು ತೆಗೆದುಕೊಂಡ, ಭ್ರೂಣಹತ್ಯೆಮಾಡಿದ, ಮತ್ತು ಗುರುಪತ್ನಿಯೊಡನೆ ಮಲಗಿದ ನರನು ಚೆನ್ನಾಗಿ ತಪಿಸಿದ ತಪಸ್ಸಿನ ಮೂಲಕವೇ ತನ್ನ ಪಾಪದಿಂದ ಮುಕ್ತನಾಗುತ್ತಾನೆ.

12155007a ತಪಸೋ ಬಹುರೂಪಸ್ಯ ತೈಸ್ತೈರ್ದ್ವಾರೈಃ ಪ್ರವರ್ತತಃ।
12155007c ನಿವೃತ್ತ್ಯಾ ವರ್ತಮಾನಸ್ಯ ತಪೋ ನಾನಶನಾತ್ಪರಮ್।।

ತಪಸ್ಸಿಗೆ ಬಹುರೂಪಗಳಿವೆ ಮತ್ತು ಬೇರೆ ಬೇರೆ ಜನರು ಬೇರೆ ಬೇರೆ ಮಾರ್ಗಗಳನ್ನು ಬಳಸಿ ತಪಸ್ಸನ್ನಾಚರಿಸುತ್ತಾರೆ. ಆದರೆ ನಿವೃತ್ತಿಮಾರ್ಗದವರಿಗೆ ಉಪವಾಸಕ್ಕಿಂತ ದೊಡ್ಡದಾದ ತಪಸ್ಸಿಲ್ಲ.

12155008a ಅಹಿಂಸಾ ಸತ್ಯವಚನಂ ದಾನಮಿಂದ್ರಿಯನಿಗ್ರಹಃ।
12155008c ಏತೇಭ್ಯೋ ಹಿ ಮಹಾರಾಜ ತಪೋ ನಾನಶನಾತ್ ಪರಮ್।।

ಮಹಾರಾಜ! ಅಹಿಂಸೆ, ಸತ್ಯವಚನ, ದಾನ, ಮತ್ತು ಇಂದ್ರಿಯನಿಗ್ರಹ – ಇವುಗಳಿಗೂ ಹೆಚ್ಚಿನ ತಪಸ್ಸುಗಳಿವೆ. ಆದರೆ ಉಪವಾಸಕ್ಕಿಂತ ದೊಡ್ಡ ತಪಸ್ಸು ಇಲ್ಲ.

12155009a ನ ದುಷ್ಕರತರಂ ದಾನಾನ್ನಾತಿಮಾತರಮಾಶ್ರಮಃ।
12155009c ತ್ರೈವಿದ್ಯೇಭ್ಯಃ ಪರಂ ನಾಸ್ತಿ ಸಂನ್ಯಾಸಃ ಪರಮಂ ತಪಃ।।

ದಾನಕ್ಕಿಂತ ಹೆಚ್ಚು ದುಷ್ಕರವಾದ ಕರ್ಮವಿಲ್ಲ. ತಾಯಿಗಿಂತ ದೊಡ್ಡ ಆಶ್ರಯವಿಲ್ಲ. ಮೂರು ವೇದಗಳಿಗಿಂತ ಹೆಚ್ಚಿನ ವಿದ್ಯೆಯಿಲ್ಲ ಮತ್ತು ಸಂನ್ಯಾಸಕ್ಕಿಂತ ಪರಮ ತಪಸ್ಸಿಲ್ಲ.

12155010a ಇಂದ್ರಿಯಾಣೀಹ ರಕ್ಷಂತಿ ಧನಧಾನ್ಯಾಭಿಗುಪ್ತಯೇ4
12155010c ತಸ್ಮಾದರ್ಥೇ ಚ ಧರ್ಮೇ ಚ ತಪೋ ನಾನಶನಾತ್ಪರಮ್।।

ಇಲ್ಲಿ ಧನ-ಧಾನ್ಯಗಳನ್ನು ರಕ್ಷಿಸಿಕೊಳ್ಳಲು ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಾರೆ. ಆದರೆ ಧರ್ಮ ಮತ್ತು ಅರ್ಥ ಇವೆರಡರ ಸಿದ್ಧಿಗೂ ತಪಸ್ಸೇ ಶ್ರೇಷ್ಠ ಸಾಧನವು ಮತ್ತು ಉಪವಾಸಕ್ಕಿಂತ ದೊಡ್ಡ ತಪಸ್ಸು ಇನ್ನೊಂದಿಲ್ಲ.

12155011a ಋಷಯಃ ಪಿತರೋ ದೇವಾ ಮನುಷ್ಯಾ ಮೃಗಸತ್ತಮಾಃ5
12155011c ಯಾನಿ ಚಾನ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।।
12155012a ತಪಃಪರಾಯಣಾಃ ಸರ್ವೇ ಸಿಧ್ಯಂತಿ ತಪಸಾ ಚ ತೇ।
12155012c ಇತ್ಯೇವಂ ತಪಸಾ ದೇವಾ ಮಹತ್ತ್ವಂ ಚಾಪ್ಯವಾಪ್ನುವನ್6।।

ಋಷಿಗಳು, ಪಿತೃಗಳು, ದೇವತೆಗಳು, ಮನುಷ್ಯರು, ಮೃಗಪಕ್ಷಿಗಳು, ಮತ್ತು ಅನ್ಯ ಸ್ಥಾವರ-ಚರ ಭೂತಗಳು ಎಲ್ಲರೂ ತಪಸ್ಸಿನಲ್ಲಿಯೇ ತತ್ಪರರಾಗಿದ್ದಾರೆ. ತಪಸ್ಸಿನಿಂದಲೇ ಅವರಿಗೆ ಸಿದ್ಧಿಯುಂಟಾಗುತ್ತದೆ. ಇದೇ ರೀತಿಯಲ್ಲಿ ತಪಸ್ಸಿನಿಂದಲೇ ದೇವತೆಗಳು ಮಹತ್ತ್ವವನ್ನು ಪಡೆದುಕೊಂಡರು.

12155013a ಇಮಾನೀಷ್ಟವಿಭಾಗಾನಿ ಫಲಾನಿ ತಪಸಾ ಸದಾ।
12155013c ತಪಸಾ ಶಕ್ಯತೇ ಪ್ರಾಪ್ತುಂ ದೇವತ್ವಮಪಿ ನಿಶ್ಚಯಾತ್।।

ಭಿನ್ನ ಭಿನ್ನ ಅಭೀಷ್ಟಗಳು ತಪಸ್ಸಿನಿಂದಲೇ ಸುಲಭಗೊಳ್ಳುತ್ತವೆ. ನಿಶ್ಚಯವಾಗಿಯೂ ತಪಸ್ಸಿನಿಂದ ದೇವತ್ವವನ್ನೂ ಪಡೆದುಕೊಳ್ಳಬಹುದು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ತಪಃಪ್ರಶಂಸಾಯಾಂ ಪಂಚಪಂಚಾಶದಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ತಪಃಪ್ರಶಂಸಾ ಎನ್ನುವ ನೂರಾಐವತ್ತೈದನೇ ಅಧ್ಯಾಯವು.

  1. ತಪಸೈವ ಸಸರ್ಜಾನ್ನಂ ಫಲಮೂಲಾನಿ ಯಾನಿ ಚ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  2. ಔಷಧಾನ್ಯಗದಾದೀನಿ ಕ್ರಿಯಾಶ್ಚ ವಿವಿಧಾಸ್ತಥಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  3. ಯದ್ದುರಾಪಂ ಭವೇತ್ಕಿಂಚಿತ್ತತ್ಸರ್ವಂ ತಪಸೋ ಭವೇತ್। ಐಶ್ವರ್ಯಮೃಷಯಃ ಪ್ರಾಪ್ತಾಸ್ತಪಸೈವ ನ ಸಂಶಯಃ।। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  4. ಸ್ವರ್ಗಧರ್ಮಾಭಿಗುಪ್ತಯೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ. ↩︎

  5. ಮೃಗಪಕ್ಷಿಣಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ. ↩︎

  6. ಪ್ರತಿಪೇದಿರೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎