ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 154
ಸಾರ
ಮನಸ್ಸು ಮತ್ತು ಇಂದ್ರಿಯಗಳ ಸಂಯಮರೂಪ ದಮೆಯ ಮಹಾತ್ಮ್ಯೆ (1-28).
12154001 ಯುಧಿಷ್ಠಿರ ಉವಾಚ।
12154001a ಸ್ವಾಧ್ಯಾಯಕೃತಯತ್ನಸ್ಯ ಬ್ರಾಹ್ಮಣಸ್ಯ1 ಪಿತಾಮಹ।
12154001c ಧರ್ಮಕಾಮಸ್ಯ ಧರ್ಮಾತ್ಮನ್ಕಿಂ ನು ಶ್ರೇಯ ಇಹೋಚ್ಯತೇ।।
ಯುಧಿಷ್ಠಿರನು ಹೇಳಿದನು: “ಧರ್ಮಾತ್ಮಾ! ಪಿತಾಮಹ! ಸ್ವಾಧ್ಯಾಯದಲ್ಲಿ ಯತ್ನಶೀಲನಾಗಿರುವ ಮತ್ತು ಧರ್ಮವನ್ನಾಚರಿಸಲು ಬಯಸುವ ಬ್ರಾಹ್ಮಣನಿಗೆ ಇಲ್ಲಿ ಯಾವುದು ಶ್ರೇಯವೆಂದು ಹೇಳಲಾಗಿದೆ?
12154002a ಬಹುಧಾದರ್ಶನೇ ಲೋಕೇ ಶ್ರೇಯೋ ಯದಿಹ ಮನ್ಯಸೇ।
12154002c ಅಸ್ಮಿಽಲ್ಲೋಕೇ ಪರೇ ಚೈವ ತನ್ಮೇ ಬ್ರೂಹಿ ಪಿತಾಮಹ।।
ಪಿತಾಮಹ! ಇಲ್ಲಿ ಇದು ಶ್ರೇಯಸ್ಸು ಎನ್ನುವ ಅನೇಕ ದರ್ಶನಗಳು ಈ ಲೋಕದಲ್ಲಿವೆ. ಆದರೆ ನೀನು ಈ ಲೋಕ ಮತ್ತು ಪರಲೋಕಗಳಲ್ಲಿ ಯಾವುದನ್ನು ಶ್ರೇಯಸ್ಸೆಂದು ತಿಳಿದಿದ್ದೀಯೋ ಅದನ್ನು ನನಗೆ ಹೇಳು.
12154003a ಮಹಾಮಯಂ ಧರ್ಮಪಥೋ ಬಹುಶಾಖಶ್ಚ ಭಾರತ।
12154003c ಕಿಂ ಸ್ವಿದೇವೇಹ ಧರ್ಮಾಣಾಮನುಷ್ಠೇಯತಮಂ ಮತಮ್।।
ಭಾರತ! ಧರ್ಮದ ಈ ಮಾರ್ಗವು ಅತ್ಯಂತ ದೊಡ್ಡದು. ಇದಕ್ಕೆ ಅನೇಕ ಕವಲುಗಳಿವೆ. ಈ ಧರ್ಮಗಳಲ್ಲಿ ಯಾವುದು ಸರ್ವೋತ್ತಮವಾದುದು ಮತ್ತು ಅನುಷ್ಠಾನಯೋಗ್ಯವಾದುದು ಎಂದು ಹೇಳಲಾಗಿದೆ?
12154004a ಧರ್ಮಸ್ಯ ಮಹತೋ ರಾಜನ್ಬಹುಶಾಖಸ್ಯ ತತ್ತ್ವತಃ।
12154004c ಯನ್ಮೂಲಂ ಪರಮಂ ತಾತ ತತ್ಸರ್ವಂ ಬ್ರೂಹ್ಯತಂದ್ರಿತಃ2।।
ರಾಜನ್! ತತ್ತ್ವತಃ ಅನೇಕ ಶಾಖೆಗಳಿರುವ ಈ ಮಹಾ ಧರ್ಮದ ಪರಮ ಮೂಲವು ಯಾವುದು? ಆಯಾಸಗೊಳ್ಳದೇ ಅವೆಲ್ಲವನ್ನೂ ಹೇಳು.”
12154005 ಭೀಷ್ಮ ಉವಾಚ।
12154005a ಹಂತ ತೇ ಕಥಯಿಷ್ಯಾಮಿ ಯೇನ ಶ್ರೇಯಃ ಪ್ರಪತ್ಸ್ಯಸೇ।
12154005c ಪೀತ್ವಾಮೃತಮಿವ ಪ್ರಾಜ್ಞೋ ಜ್ಞಾನತೃಪ್ತೋ ಭವಿಷ್ಯಸಿ।।
ಭೀಷ್ಮನು ಹೇಳಿದನು: “ನಿಲ್ಲು. ನಿನಗೆ ನಾನು ಹೇಳುತ್ತೇನೆ. ಅದರಿಂದ ನೀನು ಶ್ರೇಯಸ್ಸನ್ನು ಪಡೆದುಕೊಳ್ಳಬಹುದು. ಅಮೃತವನ್ನು ಕುಡಿದರೆ ಹೇಗೆ ಪೂರ್ಣ ತೃಪ್ತಿಯಾಗುತ್ತದೆಯೋ ಹಾಗೆ ಪ್ರಾಜ್ಞನಾದ ನೀನು ಇದನ್ನು ಕೇಳಿ ಜ್ಞಾನತೃಪ್ತನಾಗುತ್ತೀಯೆ.
12154006a ಧರ್ಮಸ್ಯ ವಿಧಯೋ ನೈಕೇ ತೇ ತೇ ಪ್ರೋಕ್ತಾ ಮಹರ್ಷಿಭಿಃ।
12154006c ಸ್ವಂ ಸ್ವಂ ವಿಜ್ಞಾನಮಾಶ್ರಿತ್ಯ ದಮಸ್ತೇಷಾಂ ಪರಾಯಣಮ್।।
ಮಹರ್ಷಿಗಳು ತಮ್ಮ ತಮ್ಮ ಜ್ಞಾನದ ಅನುಸಾರ ಧರ್ಮದ ಒಂದಲ್ಲ ಅನೇಕ ವಿಧಿಗಳನ್ನು ಹೇಳಿದ್ದಾರೆ. ದಮೆ3ಯೇ ಅವೆಲ್ಲವುಗಳ ಆಧಾರವಾಗಿದೆ.
12154007a ದಮಂ ನಿಃಶ್ರೇಯಸಂ ಪ್ರಾಹುರ್ವೃದ್ಧಾ ನಿಶ್ಚಯದರ್ಶಿನಃ।
12154007c ಬ್ರಾಹ್ಮಣಸ್ಯ ವಿಶೇಷೇಣ ದಮೋ ಧರ್ಮಃ ಸನಾತನಃ।।
ನಿಶ್ಚಯದರ್ಶೀ ವೃದ್ಧರು ದಮೆಯೇ ಅತ್ಯಂತ ಶ್ರೇಯಸ್ಕರವಾದುದು ಎಂದು ಹೇಳುತ್ತಾರೆ. ವಿಶೇಷವಾಗಿ ದಮೆಯು ಬ್ರಾಹ್ಮಣರ ಸನಾತನ ಧರ್ಮವು.
12154008a ನಾದಾಂತಸ್ಯ4 ಕ್ರಿಯಾಸಿದ್ಧಿರ್ಯಥಾವದುಪಲಭ್ಯತೇ।
12154008c ದಮೋ ದಾನಂ ತಥಾ ಯಜ್ಞಾನಧೀತಂ ಚಾತಿವರ್ತತೇ।।
ದಮೆಯ ಕಾರಣದಿಂದಲೇ ಅವನಿಗೆ ಅವನ ಶುಭ ಕರ್ಮಗಳ ಯಥಾಪ್ರಕಾರ ಸಿದ್ಧಿ ಪ್ರಾಪ್ತವಾಗುತ್ತದೆ. ಆದುದರಿಂದ ದಮೆಯು ದಾನ, ಯಜ್ಞ ಮತ್ತು ಸ್ವಾಧ್ಯಾಯಕ್ಕಿಂತಲೂ ಹೆಚ್ಚಿನದು.
12154009a ದಮಸ್ತೇಜೋ ವರ್ಧಯತಿ ಪವಿತ್ರಂ ಚ ದಮಃ ಪರಮ್।
12154009c ವಿಪಾಪ್ಮಾ ತೇಜಸಾ ಯುಕ್ತಃ ಪುರುಷೋ ವಿಂದತೇ ಮಹತ್।।
ದಮೆಯು ತೇಜಸ್ಸನ್ನು ವರ್ಧಿಸುತ್ತದೆ. ದಮೆಯು ಪರಮ ಪವಿತ್ರವಾದುದು. ದಮೆಯಿಂದ ಪಾಪರಹಿತನಾದ ತೇಜೋಯುಕ್ತ ಪುರುಷನು ಪರಮಪದವನ್ನು ಪಡೆದುಕೊಳ್ಳುತ್ತಾನೆ.
12154010a ದಮೇನ ಸದೃಶಂ ಧರ್ಮಂ ನಾನ್ಯಂ ಲೋಕೇಷು ಶುಶ್ರುಮ।
12154010c ದಮೋ ಹಿ ಪರಮೋ ಲೋಕೇ ಪ್ರಶಸ್ತಃ ಸರ್ವಧರ್ಮಿಣಾಮ್।।
ದಮೆಯ ಸದೃಶವಾದ ಬೇರೆ ಯಾವ ಧರ್ಮವನ್ನೂ ನಾವು ಲೋಕಗಳಲ್ಲಿ ಕೇಳಿಲ್ಲ. ಲೋಕದಲ್ಲಿ ದಮೆಯೇ ಪರಮ ಧರ್ಮವು. ಇದು ಸರ್ವಧರ್ಮಿಗಳಿಗೂ ಪ್ರಶಸ್ತವಾದುದು.
12154011a ಪ್ರೇತ್ಯ ಚಾಪಿ ಮನುಷ್ಯೇಂದ್ರ ಪರಮಂ ವಿಂದತೇ ಸುಖಮ್।
12154011c ದಮೇನ ಹಿ ಸಮಾಯುಕ್ತೋ ಮಹಾಂತಂ ಧರ್ಮಮಶ್ನುತೇ।।
ಮನುಷ್ಯೇಂದ್ರ! ದಮೆಯಿಂದ ಮರಣಾನಂತರವೂ ಪರಮ ಸುಖವನ್ನು ಪಡೆದುಕೊಳ್ಳುತ್ತಾನೆ. ದಮೆಯಿಂದ ಸಮಾಯುಕ್ತನಾದವನು ಮಹಾ ಪರಮ ಧರ್ಮವನ್ನು ಪಡೆದುಕೊಳ್ಳುತ್ತಾನೆ.
12154012a ಸುಖಂ ದಾಂತಃ ಪ್ರಸ್ವಪಿತಿ ಸುಖಂ ಚ ಪ್ರತಿಬುಧ್ಯತೇ।
12154012c ಸುಖಂ ಪರ್ಯೇತಿ ಲೋಕಾಂಶ್ಚ ಮನಶ್ಚಾಸ್ಯ ಪ್ರಸೀದತಿ।।
ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದ ದಾಂತನು ಸುಖವಾಗಿಯೇ ಮಲಗುತ್ತಾನೆ, ಎಚ್ಚೆತ್ತಿರುವಾಗಲೂ ಸುಖವಾಗಿರುತ್ತಾನೆ ಮತ್ತು ಸುಖವಾಗಿಯೇ ಲೋಕಕಾರ್ಯಗಳಲ್ಲಿ ತೊಡಗಿರುತ್ತಾನೆ. ಅವನ ಮನಸ್ಸೂ ಕೂಡ ಪ್ರಸನ್ನವಾಗಿರುತ್ತದೆ.
12154013a ಅದಾಂತಃ ಪುರುಷಃ ಕ್ಲೇಶಮಭೀಕ್ಷ್ಣಂ ಪ್ರತಿಪದ್ಯತೇ।
12154013c ಅನರ್ಥಾಂಶ್ಚ ಬಹೂನನ್ಯಾನ್ ಪ್ರಸೃಜತ್ಯಾತ್ಮದೋಷಜಾನ್।।
ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರದ ಅದಾಂತ ಪುರುಷನು ನಿರಂತರವಾಗಿ ಕ್ಲೇಶಗಳನ್ನು ಅನುಭವಿಸುತ್ತಾನೆ. ತನ್ನದೇ ದೋಷದಿಂದ ಇನ್ನೂ ಅನೇಕ ಅನರ್ಥಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.
12154014a ಆಶ್ರಮೇಷು ಚತುರ್ಷ್ವಾಹುರ್ದಮಮೇವೋತ್ತಮಂ ವ್ರತಮ್।
12154014c ತಸ್ಯ ಲಿಂಗಾನಿ ವಕ್ಷ್ಯಾಮಿ ಯೇಷಾಂ ಸಮುದಯೋ ದಮಃ।।
ನಾಲ್ಕು ಆಶ್ರಮದವರಿಗೂ ದಮೆಯೇ ಉತ್ತಮ ವ್ರತವೆಂದು ಹೇಳಲಾಗಿದೆ. ಈಗ ನಾನು ದಮೆಯು ಉದಯವಾಗಿರುವವನಲ್ಲಿ ಕಾಣುವ ಲಕ್ಷಣಗಳನ್ನು ಹೇಳುತ್ತೇನೆ.
12154015a ಕ್ಷಮಾ ಧೃತಿರಹಿಂಸಾ ಚ ಸಮತಾ ಸತ್ಯಮಾರ್ಜವಮ್।
12154015c ಇಂದ್ರಿಯಾವಜಯೋ ದಾಕ್ಷ್ಯಂ ಮಾರ್ದವಂ ಹ್ರೀರಚಾಪಲಮ್।।
12154016a ಅಕಾರ್ಪಣ್ಯಮಸಂರಂಭಃ ಸಂತೋಷಃ ಪ್ರಿಯವಾದಿತಾ।
12154016c ಅವಿವಿತ್ಸಾನಸೂಯಾ ಚಾಪ್ಯೇಷಾಂ ಸಮುದಯೋ ದಮಃ।।
ಕ್ಷಮೆ, ಧೀರತೆ, ಅಹಿಂಸೆ, ಸಮತಾ, ಸತ್ಯವಾದಿತ್ವ, ಸರಳತೆ, ಇಂದ್ರಿಯ ವಿಜಯ, ದಕ್ಷತೆ, ಕೋಮಲತೆ, ಲಜ್ಜೆ, ಸ್ಥಿರತೆ, ಉದಾರತೆ, ಕ್ರೋಧವಿಲ್ಲದಿರುವುದು, ಸಂತೋಷ, ಪ್ರಿಯ ಮಾತು, ಯಾರಿಗೂ ಕಷ್ಟವನ್ನುಂಟುಮಾಡದೇ ಇರುವುದು, ಮತ್ತು ಇನ್ನೊಬ್ಬರ ದೋಷಗಳನ್ನು ಹುಡುಕದಿರುವುದು – ಈ ಸದ್ಗುಣಗಳು ಕಾಣಿಸಿಕೊಂಡರೆ ಅದನ್ನೇ ದಮೆ ಎಂದು ಹೇಳಬಹುದು.
12154017a ಗುರುಪೂಜಾ ಚ ಕೌರವ್ಯ ದಯಾ ಭೂತೇಷ್ವಪೈಶುನಮ್।
12154017c ಜನವಾದೋಽಮೃಷಾವಾದಃ ಸ್ತುತಿನಿಂದಾವಿವರ್ಜನಮ್।।
12154018a ಕಾಮಃ ಕ್ರೋಧಶ್ಚ ಲೋಭಶ್ಚ ದರ್ಪಃ ಸ್ತಂಭೋ ವಿಕತ್ಥನಮ್।
12154018c ಮೋಹ ಈರ್ಷ್ಯಾವಮಾನಶ್ಚೇತ್ಯೇತದ್ದಾಂತೋ ನ ಸೇವತೇ।।
ಕೌರವ್ಯ! ದಾಂತನಲ್ಲಿ ಗುರುಜನರ ಕುರಿತು ಆದರದ ಭಾವ, ಸಮಸ್ತ ಪ್ರಾಣಿಗಳ ಮೇಲೆ ದಯೆ ಮತ್ತು ಯಾರನ್ನೂ ನಿಂದಿಸದೇ ಇರುವ ಸ್ವಭಾವಗಳಿರುತ್ತವೆ. ಕಾಮ, ಕ್ರೋಧ, ಲೋಭ, ದರ್ಪ, ಜಡತೆ, ಜಂಬ ಕೊಚ್ಚಿಕೊಳ್ಳುವುದು, ಮೋಹ, ಈರ್ಷ್ಯೆ, ಅಪಮಾನ ಈ ದುರ್ಗುಣಗಳು ದಾಂತನ ಬಳಿಯೂ ಸುಳಿಯುವುದಿಲ್ಲ.
12154019a ಅನಿಂದಿತೋ ಹ್ಯಕಾಮಾತ್ಮಾಥಾಲ್ಪೇಚ್ಚೋಽಥಾನಸೂಯಕಃ।
12154019c ಸಮುದ್ರಕಲ್ಪಃ ಸ ನರೋ ನ ಕದಾ ಚನ ಪೂರ್ಯತೇ।।
ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವನಿಗೆ ನಿಂದೆಯುಂಟಾಗುವುದಿಲ್ಲ. ಅವನ ಮನಸ್ಸಿನಲ್ಲಿ ಯಾವ ಕಾಮನೆಗಳೂ ಹುಟ್ಟುವುದಿಲ್ಲ. ಅವನು ಸಣ್ಣ ಸಣ್ಣ ವಸ್ತುಗಳಿಗಾಗಿ ಇನ್ನೊಬ್ಬರ ಎದಿರು ಕೈ ಚಾಚುವುದಿಲ್ಲ ಅಥವಾ ತುಚ್ಛ ವಿಷಯ-ಸುಖಗಳ ಅಭಿಲಾಷೆಯನ್ನಿಟ್ಟುಕೊಂಡಿರುವುದಿಲ್ಲ. ಇನ್ನೊಬ್ಬರ ದೋಷಗಳನ್ನು ನೋಡುವುದಿಲ್ಲ. ಅವನು ಸಮುದ್ರದಂತೆ ಅಗಾಧವಾಗಿಯೂ ಗಂಭೀರನಾಗಿಯೂ ಇರುತ್ತಾನೆ. ಸಮುದ್ರವು ಹೇಗೆ ಅನಂತ ಜಲರಾಶಿಯನ್ನು ಪಡೆದುಕೊಂಡೂ ತುಂಬಿ ಉಕ್ಕುವುದಿಲ್ಲವೋ ಹಾಗೆ ಅವನೂ ಕೂಡ ನಿರಂತರ ಧರ್ಮಸಂಚಯದಿಂದ ತೃಪ್ತಿಯನ್ನೇ ಹೊಂದುವುದಿಲ್ಲ.
12154020a ಅಹಂ ತ್ವಯಿ ಮಮ ತ್ವಂ ಚ ಮಯಿ ತೇ ತೇಷು ಚಾಪ್ಯಹಮ್।
12154020c ಪೂರ್ವಸಂಬಂಧಿಸಂಯೋಗಾನ್ನೈತದ್ದಾಂತೋ ನಿಷೇವತೇ।।
“ನಾನು ನಿನ್ನೊಡನೆ ಸ್ನೇಹದಿಂದಿದ್ದೇನೆ, ನೀನು ನನ್ನಲ್ಲಿ ಸ್ನೇಹದಿಂದಿದ್ದೀಯೆ, ಅವರು ನನ್ನಲ್ಲಿ ಅನುರಕ್ತರಾಗಿದ್ದಾರೆ ಮತ್ತು ನಾನು ಅವರಲ್ಲಿ” ಈ ರೀತಿಯ ಪೂರ್ವ ಸಂಬಂಧ-ಸಂಯೋಗಗಳನ್ನು ದಾಂತನು ಯೋಚಿಸುವುದಿಲ್ಲ.
12154021a ಸರ್ವಾ ಗ್ರಾಮ್ಯಾಸ್ತಥಾರಣ್ಯಾ ಯಾಶ್ಚ ಲೋಕೇ ಪ್ರವೃತ್ತಯಃ।
12154021c ನಿಂದಾಂ ಚೈವ ಪ್ರಶಂಸಾಂ ಚ ಯೋ ನಾಶ್ರಯತಿ ಮುಚ್ಯತೇ।।
ಲೋಕದಲ್ಲಿ ಗ್ರಾಮೀಣರ ಮತ್ತು ವನವಾಸಿಗಳ ಸರ್ವಪ್ರವೃತ್ತಿಗಳನ್ನು ಮತ್ತು ನಿಂದೆ-ಪ್ರಶಂಸೆಗಳನ್ನು ಆಶ್ರಯಿಸಿದೇ ಇರುವವರು ಮೋಕ್ಷವನ್ನು ಹೊಂದುತ್ತಾರೆ.
12154022a ಮೈತ್ರೋಽಥ ಶೀಲಸಂಪನ್ನಃ ಸುಸಹಾಯಪರಶ್ಚ ಯಃ5।
12154022c ಮುಕ್ತಶ್ಚ ವಿವಿಧೈಃ ಸಂಗೈಸ್ತಸ್ಯ ಪ್ರೇತ್ಯ ಮಹತ್ ಫಲಮ್।।
ಮೈತ್ರೀಭಾವವಿರುವ, ಶೀಲಸಂಪನ್ನ, ಇತರರಿಗೆ ಸಹಾಯಮಾಡುವ, ವಿವಿಧ ಸಂಗಗಳಿಂದ ಮುಕ್ತನಾಗಿರುವವನಿಗೆ ಮರಣಾನಂತರ ಮಹಾ ಫಲವು ದೊರೆಯುತ್ತದೆ.
12154023a ಸುವೃತ್ತಃ ಶೀಲಸಂಪನ್ನಃ ಪ್ರಸನ್ನಾತ್ಮಾತ್ಮವಿದ್ಬುಧಃ।
12154023c ಪ್ರಾಪ್ಯೇಹ ಲೋಕೇ ಸತ್ಕಾರಂ ಸುಗತಿಂ ಪ್ರತಿಪದ್ಯತೇ।।
ಸದಾಚಾರೀ, ಶೀಲಸಂಪನ್ನ, ಪ್ರಸನ್ನಾತ್ಮಾ, ಆತ್ಮಜ್ಞಾನವಿರುವವನು ಈ ಲೋಕದಲ್ಲಿ ಸತ್ಕಾರಗಳನ್ನು ಪಡೆದು ಮರಣಾನಂತರ ಸದ್ಗತಿಯನ್ನು ಹೊಂದುತ್ತಾನೆ.
12154024a ಕರ್ಮ ಯಚ್ಚುಭಮೇವೇಹ ಸದ್ಭಿರಾಚರಿತಂ ಚ ಯತ್।
12154024c ತದೇವ ಜ್ಞಾನಯುಕ್ತಸ್ಯ ಮುನೇರ್ಧರ್ಮೋ ನ ಹೀಯತೇ।।
ಯಾವುದನ್ನು ಶುಭಕರ್ಮವೆಂದು ಹೇಳಲಾಗಿದೆಯೋ ಮತ್ತು ಸತ್ಪುರುಷರು ಹೇಗೆ ನಡೆದುಕೊಂಡಿದ್ದರೋ ಅದೇ ಜ್ಞಾನಯುಕ್ತ ಮುನಿಯ ಧರ್ಮ. ಅದರಿಂದ ಅವನ ಧರ್ಮವು ಎಂದೂ ನಷ್ಟವಾಗುವುದಿಲ್ಲ.
12154025a ನಿಷ್ಕ್ರಮ್ಯ ವನಮಾಸ್ಥಾಯ ಜ್ಞಾನಯುಕ್ತೋ ಜಿತೇಂದ್ರಿಯಃ।
12154025c ಕಾಲಾಕಾಂಕ್ಷೀ ಚರನ್ನೇವಂ ಬ್ರಹ್ಮಭೂಯಾಯ ಕಲ್ಪತೇ।।
ಮನೆಯಿಂದ ಹೊರಟು ಅರಣ್ಯವನ್ನು ಸೇರಿ ಮೃತ್ಯುಕಾಲವನ್ನೇ ಪ್ರತೀಕ್ಷಿಸುತ್ತಾ ಸಂಚರಿಸುವ ಜ್ಞಾನಯುಕ್ತ ಜಿತೇಂದ್ರಿಯನು ಬ್ರಹ್ಮಭಾವವನ್ನು ಹೊಂದಲು ಸಮರ್ಥನಾಗುತ್ತಾನೆ.
12154026a ಅಭಯಂ ಯಸ್ಯ ಭೂತೇಭ್ಯೋ ಭೂತಾನಾಮಭಯಂ ಯತಃ।
12154026c ತಸ್ಯ ದೇಹಾದ್ವಿಮುಕ್ತಸ್ಯ ಭಯಂ ನಾಸ್ತಿ ಕುತಶ್ಚನ।।
ಅನ್ಯ ಜೀವಿಗಳಿಗೆ ಅಭಯದಾಯಕನಾದ ಮತ್ತು ಅನ್ಯ ಜೀವಿಗಳಿಗೆ ಭಯಪಡದ ಆ ದೇಹಾಭಿಮಾನರಹಿತ ಮಹಾತ್ಮನಿಗೆ ಎಲ್ಲಿಂದಲೂ ಭಯವಿರುವುದಿಲ್ಲ.
12154027a ಅವಾಚಿನೋತಿ ಕರ್ಮಾಣಿ ನ ಚ ಸಂಪ್ರಚಿನೋತಿ ಹ।
12154027c ಸಮಃ ಸರ್ವೇಷು ಭೂತೇಷು ಮೈತ್ರಾಯಣಗತಿಶ್ಚರೇತ್।।
ಅವನು ಪ್ರಾರಬ್ಧ ಕರ್ಮಗಳನ್ನು ಕ್ಷೀಣಿಸಿಕೊಳ್ಳುತ್ತಾನೆ ಮತ್ತು ಹೊಸ ಕರ್ಮಗಳನ್ನು ಸಂಪಾದಿಸಿಕೊಳ್ಳುವುದಿಲ್ಲ. ಸರ್ವ ಭೂತಗಳಲ್ಲಿಯೂ ಸಮಭಾವವನ್ನಿರಿಸಿ ಎಲ್ಲರ ಮಿತ್ರರಂತೆ ಅಭಯದಾನ ನೀಡುತ್ತಾ ಸಂಚರಿಸುತ್ತಾನೆ.
12154028a ಶಕುನೀನಾಮಿವಾಕಾಶೇ ಜಲೇ ವಾರಿಚರಸ್ಯ ವಾ।
12154028c ಯಥಾ ಗತಿರ್ನ ದೃಶ್ಯೇತ ತಥಾ ತಸ್ಯ ನ ಸಂಶಯಃ।।
ಆಕಾಶದಲ್ಲಿ ಹಾರುವ ಪಕ್ಷಿಗಳ ಮತ್ತು ನೀರಿನಲ್ಲಿ ಸಂಚರಿಸುವ ಜಲಚರ ಜಂತುಗಳ ಪಾದಚಿಹ್ನೆಯು ಹೇಗೆ ಕಾಣಲು ಸಿಗುವುದಿಲ್ಲವೋ ಹಾಗೆ ಜ್ಞಾನಿಯ ಗತಿಯನ್ನು ತಿಳಿದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.
12154029a ಗೃಹಾನುತ್ಸೃಜ್ಯ ಯೋ ರಾಜನ್ಮೋಕ್ಷಮೇವಾಭಿಪದ್ಯತೇ।
12154029c ಲೋಕಾಸ್ತೇಜೋಮಯಾಸ್ತಸ್ಯ ಕಲ್ಪಂತೇ ಶಾಶ್ವತೀಃ ಸಮಾಃ।।
ರಾಜನ್! ಮನೆಯನ್ನು ತೊರೆದು ಮೋಕ್ಷವನ್ನು ಅರಸಿ ಹೋಗುವವನಿಗೆ ಅನಂತ ವರ್ಷಗಳ ದಿವ್ಯ ತೇಜೋಮಯ ಲೋಕವು ಪ್ರಾಪ್ತವಾಗುತ್ತದೆ.
12154030a ಸಂನ್ಯಸ್ಯ ಸರ್ವಕರ್ಮಾಣಿ ಸಂನ್ಯಸ್ಯ ವಿಧಿವತ್ತಪಃ।
12154030c ಸಂನ್ಯಸ್ಯ ವಿವಿಧಾ ವಿದ್ಯಾಃ ಸರ್ವಂ ಸಂನ್ಯಸ್ಯ ಚೈವ ಹ।।
12154031a ಕಾಮೇಷು ಚಾಪ್ಯನಾವೃತ್ತಃ ಪ್ರಸನ್ನಾತ್ಮಾತ್ಮವಿಚ್ಚುಚಿಃ।
12154031c ಪ್ರಾಪ್ಯೇಹ ಲೋಕೇ ಸತ್ಕಾರಂ ಸ್ವರ್ಗಂ ಸಮಭಿಪದ್ಯತೇ।।
ಸರ್ವಕರ್ಮಗಳನ್ನೂ ತ್ಯಾಗಮಾಡಿ, ತಪಸ್ಸನ್ನೂ ತ್ಯಾಗಮಾಡಿ, ವಿವಿಧ ವಿದ್ಯೆಗಳನ್ನೂ ತ್ಯಾಗಮಾಡಿ , ಮತ್ತು ಸರ್ವವನ್ನೂ ತ್ಯಾಗಮಾಡಿ, ಕಾಮಗಳನ್ನು ತೊರೆದು ಪ್ರಸನ್ನಾತ್ಮನೂ ಶುಚಿಯೂ ಆಗಿರುವವನಿಗೆ ಈ ಲೋಕದಲ್ಲಿ ಸತ್ಕಾರ ಮತ್ತು ಪರಲೋಕದಲ್ಲಿ ಸ್ವರ್ಗವು ದೊರೆಯುತ್ತದೆ.
12154032a ಯಚ್ಚ ಪೈತಾಮಹಂ ಸ್ಥಾನಂ ಬ್ರಹ್ಮರಾಶಿಸಮುದ್ಭವಮ್।
12154032c ಗುಹಾಯಾಂ ಪಿಹಿತಂ ನಿತ್ಯಂ ತದ್ದಮೇನಾಭಿಪದ್ಯತೇ।।
ಬ್ರಹ್ಮರಾಶಿಯಿಂದ ಉತ್ಪನ್ನನಾಗಿರುವ ಪಿತಾಮಹ ಬ್ರಹ್ಮನ ಉತ್ತಮ ಧಾಮವು ಹೃದಯಗುಹೆಯಲ್ಲಿ ಅಡಗಿಕೊಂಡಿದೆ. ಅದನ್ನು ದಮೆಯಿಂದಲೇ ನಿತ್ಯವೂ ಪಡೆದುಕೊಳ್ಳಬಹುದು.
12154033a ಜ್ಞಾನಾರಾಮಸ್ಯ ಬುದ್ಧಸ್ಯ ಸರ್ವಭೂತಾವಿರೋಧಿನಃ।
12154033c ನಾವೃತ್ತಿಭಯಮಸ್ತೀಹ ಪರಲೋಕೇ ಭಯಂ ಕುತಃ।।
ಯಾವ ಪ್ರಾಣಿಯೊಡನೆಯೂ ವಿರೋಧವಿಲ್ಲದ ಮತ್ತು ಜ್ಞಾನಸ್ವರೂಪ ಆತ್ಮನಲ್ಲಿ ರಮಿಸುತ್ತಿರುವ ಜ್ಞಾನಿಗೆ ಈ ಲೋಕದಲ್ಲಿ ಪುನಃ ಜನ್ಮತಾಳುವ ಭಯವಿರುವುದಿಲ್ಲ. ಹಾಗಿರುವಾಗ ಅವನಿಗೆ ಪರಲೋಕದ ಭಯವು ಎಲ್ಲಿಂದ?
12154034a ಏಕ ಏವ ದಮೇ ದೋಷೋ ದ್ವಿತೀಯೋ ನೋಪಪದ್ಯತೇ।
12154034c ಯದೇನಂ ಕ್ಷಮಯಾ ಯುಕ್ತಮಶಕ್ತಂ ಮನ್ಯತೇ ಜನಃ।।
ದಮೆಯಲ್ಲಿ ಒಂದೇ ಒಂದು ದೋಷವಿದೆ. ಎರಡನೆಯದು ಇಲ್ಲ. ಅದು ಏನೆಂದರೆ ಕ್ಷಮಾಶೀಲನಾಗಿರುವುದರ ಕಾರಣದಿಂದ ಅವನನ್ನು ಜನರು ಅಸಮರ್ಥನೆಂದು ತಿಳಿದುಕೊಳ್ಳುತ್ತಾರೆ.
12154035a ಏತಸ್ಯ ತು ಮಹಾಪ್ರಾಜ್ಞ ದೋಷಸ್ಯ ಸುಮಹಾನ್ಗುಣಃ।
12154035c ಕ್ಷಮಾಯಾಂ ವಿಪುಲಾ ಲೋಕಾಃ ಸುಲಭಾ ಹಿ ಸಹಿಷ್ಣುನಾ।।
ಮಹಾಪ್ರಾಜ್ಞ! ಇದೊಂದು ದೋಷವೇ ಅದರ ಮಹಾಗುಣವಾಗಿದೆ. ಕ್ಷಮೆಯಿಂದ ಸಹಿಷ್ಣುವಿಗೆ ವಿಪುಲ ಲೋಕಗಳು ಸುಲಭವಾಗುತ್ತವೆ.
12154036a ದಾಂತಸ್ಯ ಕಿಮರಣ್ಯೇನ ತಥಾದಾಂತಸ್ಯ ಭಾರತ।
12154036c ಯತ್ರೈವ ಹಿ ವಸೇದ್ದಾಂತಸ್ತದರಣ್ಯಂ ಸ ಆಶ್ರಮಃ।।
ಭಾರತ! ಸಂಯಮಿಯು ಅರಣ್ಯಕ್ಕೆ ಹೋಗುವ ಅವಶ್ಯಕತೆಯಾದರೂ ಏನಿದೆ? ಮತ್ತು ಅಸಂಯಮಿಯು ಅರಣ್ಯಕ್ಕೆ ಹೋಗುವುದರಿಂದ ಲಾಭವಾದರೂ ಏನಿದೆ? ಸಂಯಮಿಯು ಎಲ್ಲಿಯೇ ಇರಲಿ ಅದೇ ಅವನಿಗೆ ವನ ಮತ್ತು ಆಶ್ರಮವು.””
12154037 ವೈಶಂಪಾಯನ ಉವಾಚ।
12154037a ಏತದ್ ಭೀಷ್ಮಸ್ಯ ವಚನಂ ಶ್ರುತ್ವಾ ರಾಜಾ ಯುಧಿಷ್ಠಿರಃ।
12154037c ಅಮೃತೇನೇವ ಸಂತೃಪ್ತಃ ಪ್ರಹೃಷ್ಟಃ ಸಮಪದ್ಯತ।।
ವೈಶಂಪಾಯನನು ಹೇಳಿದನು: “ಭೀಷ್ಮನ ಈ ಮಾತನ್ನು ಕೇಳಿ ರಾಜಾ ಯುಧಿಷ್ಠಿರನು ಅಮೃತವನ್ನು ಕುಡಿದವನಂತೆಯೇ ಸಂತೃಪ್ತನಾಗಿ ಪ್ರಹೃಷ್ಟನಾದನು.
12154038a ಪುನಶ್ಚ ಪರಿಪಪ್ರಚ್ಚ ಭೀಷ್ಮಂ ಧರ್ಮಭೃತಾಂ ವರಮ್।
12154038c ತಪಃ ಪ್ರತಿ ಸ ಚೋವಾಚ ತಸ್ಮೈ ಸರ್ವಂ ಕುರೂದ್ವಹ।।
ಕರೂದ್ವಹ! ಅವನು ಪುನಃ ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನಲ್ಲಿ ತಪಸ್ಸಿನ ಕುರಿತು ಕೇಳಿದನು. ಆಗ ಭೀಷ್ಮನು ಅವನಿಗೆ ಈ ವಿಷಯದಲ್ಲಿ ಎಲ್ಲವನ್ನೂ ಹೇಳಿದನು.