ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 151
ಸಾರ
ನಾರದನ ಮಾತುಗಳನ್ನು ಕೇಳಿ ವಾಯುವು ಶಾಲ್ಮಲಿಯನ್ನು ಬೆದರಿಸುವುದು ಮತ್ತು ಶಾಲ್ಮಲಿಯು ಮನಸ್ಸಿನಲ್ಲಿಯೇ ಯೋಚಿಸಿದುದು (1-18). ಶಾಲ್ಮಲಿಯು ಸೋಲನ್ನು ಸ್ವೀಕರಿಸಿದುದು ಮತ್ತು ಬಲಶಾಲಿಯೊಂದಿಗೆ ವೈರವನ್ನು ಕಟ್ಟಿಕೊಳ್ಳಬಾರದೆಂಬ ಉಪದೇಶ (19-34).
12151001 1ಭೀಷ್ಮ ಉವಾಚ। 12151001a ಏವಮುಕ್ತ್ವಾ ತು ರಾಜೇಂದ್ರ ಶಲ್ಮಲಿಂ ಬ್ರಹ್ಮವಿತ್ತಮಃ।
12151001c ನಾರದಃ ಪವನೇ ಸರ್ವಂ ಶಲ್ಮಲೇರ್ವಾಕ್ಯಮಬ್ರವೀತ್।।
ಭೀಷ್ಮನು ಹೇಳಿದನು: “ರಾಜೇಂದ್ರ! ಶಾಲ್ಮಲಿಗೆ ಹೀಗೆ ಹೇಳಿ ಬ್ರಹ್ಮವಿತ್ತಮ ನಾರದನು ಪವನನಿಗೆ ಶಾಲ್ಮಲಿಯ ಮಾತುಗಳೆಲ್ಲವನ್ನೂ ಹೇಳಿದನು.
12151002a ಹಿಮವತ್ಪೃಷ್ಠಜಃ ಕಶ್ಚಿಚ್ಚಲ್ಮಲಿಃ ಪರಿವಾರವಾನ್।
12151002c ಬೃಹನ್ಮೂಲೋ ಬೃಹಚ್ಚಾಖಃ ಸ ತ್ವಾಂ ವಾಯೋಽವಮನ್ಯತೇ।।
“ವಾಯೋ! ಹಿಮಾಲಯದ ಪೃಷ್ಠಭಾಗದಲ್ಲಿ ಅತಿದೊಡ್ಡ ಪರಿವಾರಯುಕ್ತವಾದ ಒಂದು ಶಾಲ್ಮಲೀ ವೃಕ್ಷವಿದೆ. ದೊಡ್ಡ ಬುಡವಿರುವ ಮತ್ತು ವಿಶಾಲ ಶಾಖೆಗಳಿರುವ ಆ ವೃಕ್ಷವು ನಿನ್ನನ್ನು ಅಪಮಾನಿಸುತ್ತಿದೆ.
12151003a ಬಹೂನ್ಯಾಕ್ಷೇಪಯುಕ್ತಾನಿ ತ್ವಾಮಾಹ ವಚನಾನಿ ಸಃ।
12151003c ನ ಯುಕ್ತಾನಿ ಮಯಾ ವಾಯೋ ತಾನಿ ವಕ್ತುಂ ತ್ವಯಿ ಪ್ರಭೋ।।
ಪ್ರಭೋ! ವಾಯೋ! ಅವನು ನಿನ್ನ ವಿಷಯದಲ್ಲಿ ಅನೇಕ ಆಕ್ಷೇಪಯುಕ್ತ ಮಾತುಗಳನ್ನಾಡಿದ್ದಾನೆ. ಅವುಗಳನ್ನು ನಿನ್ನ ಎದಿರು ಹೇಳುವುದು ಉಚಿತವಲ್ಲ.
12151004a ಜಾನಾಮಿ ತ್ವಾಮಹಂ ವಾಯೋ ಸರ್ವಪ್ರಾಣಭೃತಾಂ ವರಮ್।
12151004c ವರಿಷ್ಠಂ ಚ ಗರಿಷ್ಠಂ ಚ ಕ್ರೋಧೇ ವೈವಸ್ವತಂ ಯಥಾ।।
ವಾಯೋ! ನಾನು ನಿನ್ನನ್ನು ಅರಿತಿದ್ದೇನೆ. ನೀನು ಸಮಸ್ತ ಪ್ರಾಣಭೃತರಲ್ಲಿ ಶ್ರೇಷ್ಠನು. ವರಿಷ್ಠನು ಮತ್ತು ಗರಿಷ್ಠನು. ಕ್ರೋಧದಲ್ಲಿ ನೀನು ವೈವಸ್ವತನ ಸಮನಾಗಿದ್ದೀಯೆ.”
12151005a ಏವಂ ತು ವಚನಂ ಶ್ರುತ್ವಾ ನಾರದಸ್ಯ ಸಮೀರಣಃ।
12151005c ಶಲ್ಮಲಿಂ ತಮುಪಾಗಮ್ಯ ಕ್ರುದ್ಧೋ ವಚನಮಬ್ರವೀತ್।।
ನಾರದನ ಈ ಮಾತನ್ನು ಕೇಳಿ ಸಮೀರಣನು ಕ್ರುದ್ಧನಾಗಿ ಶಾಲ್ಮಲೀ ವೃಕ್ಷದ ಬಳಿಬಂದು ಈ ಮಾತನ್ನಾಡಿದನು:
12151006a ಶಲ್ಮಲೇ ನಾರದೇ ಯತ್ತತ್ತ್ವಯೋಕ್ತಂ ಮದ್ವಿಗರ್ಹಣಮ್।
12151006c ಅಹಂ ವಾಯುಃ ಪ್ರಭಾವಂ ತೇ ದರ್ಶಯಾಮ್ಯಾತ್ಮನೋ ಬಲಮ್।।
“ಶಾಲ್ಮಲೇ! ನೀನು ನಾರದನ ಎದಿರು ನನ್ನ ನಿಂದನೆಯನ್ನು ಮಾಡಿದ್ದೀಯೆ. ನಾನು ವಾಯು. ನಿನಗೆ ನನ್ನ ಬಲ ಮತ್ತು ಪ್ರಭಾವಗಳನ್ನು ತೋರಿಸುತ್ತೇನೆ.
12151007a ನಾಹಂ ತ್ವಾ ನಾಭಿಜಾನಾಮಿ2 ವಿದಿತಶ್ಚಾಸಿ ಮೇ ದ್ರುಮ।
12151007c ಪಿತಾಮಹಃ ಪ್ರಜಾಸರ್ಗೇ ತ್ವಯಿ ವಿಶ್ರಾಂತವಾನ್ ಪ್ರಭುಃ।।
ವೃಕ್ಷವೇ! ನೀನು ನನಗೆ ಗೊತ್ತಿಲ್ಲವೆಂದೇನಿಲ್ಲ. ನಾನು ನಿನ್ನನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಪಿತಾಮಹನು ಪ್ರಜೆಗಳನ್ನು ಸೃಷ್ಟಿಸುವಾಗ ನಿನ್ನ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆದಿದ್ದನು.
12151008a ತಸ್ಯ ವಿಶ್ರಮಣಾದೇವ ಪ್ರಸಾದೋ ಯಃ ಕೃತಸ್ತವ।
12151008c ರಕ್ಷ್ಯಸೇ ತೇನ ದುರ್ಬುದ್ಧೇ ನಾತ್ಮವೀರ್ಯಾದ್ದ್ರುಮಾಧಮ।।
ದುರ್ಬುದ್ಧೇ! ವೃಕ್ಷಗಳಲ್ಲಿ ಅಧಮ! ಅವನು ನಿನ್ನ ಕೆಳಗೆ ವಿಶ್ರಾಂತಿಹೊಂದಿದುರಿಂದಲೇ ನಾನು ನಿನ್ನ ಮೇಲೆ ಕೃಪೆಯನ್ನು ತೋರಿಸಿದ್ದೆ ಮತ್ತು ಇದೇ ನಿನ್ನ ರಕ್ಷೆಯಾಗಿತ್ತು. ನೀನು ನಿನ್ನ ವೀರ್ಯದಿಂದ ರಕ್ಷಿಸಲ್ಪಟ್ಟಿಲ್ಲ.
12151009a ಯನ್ಮಾ ತ್ವಮವಜಾನೀಷೇ ಯಥಾನ್ಯಂ ಪ್ರಾಕೃತಂ ತಥಾ।
12151009c ದರ್ಶಯಾಮ್ಯೇಷ ಆತ್ಮಾನಂ ಯಥಾ ಮಾಮವಭೋತ್ಸ್ಯಸೇ3।।
ಅನ್ಯ ಸಾಮಾನ್ಯರಂತೆ ನೀನು ನನ್ನನ್ನು ಅಪಮಾನಿಸಿರುವೆಯಾದುದರಿಂದ ನಾನು ನಿನಗೆ ನನ್ನ ಆ ರೂಪವನ್ನು ತೋರಿಸುತ್ತೇನೆ ಯಾವುದರಿಂದ ನೀನು ನನ್ನನ್ನು ಪುನಃ ಅಪಮಾನಿಸುವುದಿಲ್ಲ.”
12151010a ಏವಮುಕ್ತಸ್ತತಃ ಪ್ರಾಹ ಶಲ್ಮಲಿಃ ಪ್ರಹಸನ್ನಿವ।
12151010c ಪವನ ತ್ವಂ ವನೇ ಕ್ರುದ್ಧೋ ದರ್ಶಯಾತ್ಮಾನಮಾತ್ಮನಾ।।
ಪವನನ ಆ ಮಾತನ್ನು ಕೇಳಿ ಶಾಲ್ಮಲಿಯು ನಗುತ್ತಾ ಹೇಳಿತು: “ಪವನ! ಕ್ರುದ್ಧನಾಗಿ ಸ್ವಯಂ ನೀನು ನಿನ್ನ ಎಲ್ಲ ಶಕ್ತಿಯನ್ನೂ ತೋರಿಸು!
12151011a ಮಯಿ ವೈ ತ್ಯಜ್ಯತಾಂ ಕ್ರೋಧಃ ಕಿಂ ಮೇ ಕ್ರುದ್ಧಃ ಕರಿಷ್ಯಸಿ।
12151011c ನ ತೇ ಬಿಭೇಮಿ ಪವನ ಯದ್ಯಪಿ ತ್ವಂ ಸ್ವಯಂಪ್ರಭುಃ4।।
ಪವನ! ನಿನ್ನ ಕ್ರೋಧವನ್ನು ನನ್ನ ಮೇಲೆ ಸುರಿಸು. ನೀನು ಕ್ರುದ್ಧನಾಗಿ ನನಗೇನು ಮಾಡಬಲ್ಲೆ? ನೀನು ನನಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರೂ ನಾನು ನಿನಗೆ ಹೆದರುವುದಿಲ್ಲ.”
12151012a ಇತ್ಯೇವಮುಕ್ತಃ ಪವನಃ ಶ್ವ ಇತ್ಯೇವಾಬ್ರವೀದ್ವಚಃ।
12151012c ದರ್ಶಯಿಷ್ಯಾಮಿ ತೇ ತೇಜಸ್ತತೋ ರಾತ್ರಿರುಪಾಗಮತ್।।
ಇದನ್ನು ಕೇಳಿದ ಪವನನು ಹೇಳಿದನು: “ಆಯಿತು! ನಾಳೆ ನಾನು ನಿನಗೆ ನನ್ನ ಪರಾಕ್ರಮವನ್ನು ತೋರಿಸುತ್ತೇನೆ.” ಅಷ್ಟರಲ್ಲಿಯೇ ರಾತ್ರಿಯಾಯಿತು.
12151013a ಅಥ ನಿಶ್ಚಿತ್ಯ ಮನಸಾ ಶಲ್ಮಲಿರ್ವಾತಕಾರಿತಮ್।
12151013c ಪಶ್ಯಮಾನಸ್ತದಾತ್ಮಾನಮಸಮಂ ಮಾತರಿಶ್ವನಃ।।
ಆಗ ಶಾಲ್ಮಲಿಯು ವಾಯುವು ಮಾಡಲಿರುವ ಕೃತ್ಯವನ್ನು ತನ್ನ ಮನಸ್ಸಿನಲ್ಲಿಯೇ ಯೋಚಿಸಿ ವಾಯುವಿಗೆ ಸಮನಾದ ಬಲಶಾಲಿಯು ತಾನು ಅಲ್ಲವೆಂದು ತಿಳಿದು ಯೋಚಿಸಿದನು:
12151014a ನಾರದೇ ಯನ್ಮಯಾ ಪ್ರೋಕ್ತಂ ಪವನಂ ಪ್ರತಿ ತನ್ಮೃಷಾ।
12151014c ಅಸಮರ್ಥೋ ಹ್ಯಹಂ ವಾಯೋರ್ಬಲೇನ ಬಲವಾನ್ ಹಿ ಸಃ।।
“ನಾನು ನಾರದನ ಮುಂದೆ ಏನೆಲ್ಲ ಹೇಳಿದ್ದೆನೋ ಅವು ಸುಳ್ಳಿನ ಮಾತಾಗಿದ್ದವು. ನಾನು ವಾಯುವನ್ನು ಎದುರಿಸಲು ಅಸಮರ್ಥನಾಗಿದ್ದೇನೆ ಏಕೆಂದರೆ ಅವನು ನನಗಿಂತಲೂ ಹೆಚ್ಚಿನ ಬಲಶಾಲಿಯು.
12151015a ಮಾರುತೋ ಬಲವಾನ್ನಿತ್ಯಂ ಯಥೈನಂ ನಾರದೋಽಬ್ರವೀತ್।
12151015c ಅಹಂ ಹಿ ದುರ್ಬಲೋಽನ್ಯೇಭ್ಯೋ ವೃಕ್ಷೇಭ್ಯೋ ನಾತ್ರ ಸಂಶಯಃ।।
12151016a ಕಿಂ ತು ಬುದ್ಧ್ಯಾ ಸಮೋ ನಾಸ್ತಿ ಮಮ ಕಶ್ಚಿದ್ವನಸ್ಪತಿಃ।
ನಾರದನು ಹೇಳಿದಂತೆ ವಾಯುವು ನಿತ್ಯ ಬಲಶಾಲಿಯು. ನಾನಾದರೋ ಇತರ ವೃಕ್ಷಗಳಿಗಿಂತಲೂ ದುರ್ಬಲನು. ಇದರಲ್ಲಿ ಸಂಶಯವಿಲ್ಲ. ಆದರೆ ಬುದ್ಧಿಯಲ್ಲಿ ಬೇರೆ ಯಾವ ವೃಕ್ಷವೂ ನನ್ನ ಸಮನಾಗಿಲ್ಲ.
12151016c ತದಹಂ ಬುದ್ಧಿಮಾಸ್ಥಾಯ ಭಯಂ ಮೋಕ್ಷ್ಯೇ ಸಮೀರಣಾತ್।।
12151017a ಯದಿ ತಾಂ ಬುದ್ಧಿಮಾಸ್ಥಾಯ ಚರೇಯುಃ ಪರ್ಣಿನೋ ವನೇ।
12151017c ಅರಿಷ್ಟಾಃ ಸ್ಯುಃ ಸದಾ ಕ್ರುದ್ಧಾತ್ಪವನಾನ್ನಾತ್ರ ಸಂಶಯಃ।।
ನಾನು ಬುದ್ಧಿಯನ್ನು ಆಶ್ರಯಿಸಿ ಸಮೀರಣನ ಭಯದಿಂದ ಮುಕ್ತನಾಗುತ್ತೇನೆ. ವನದಲ್ಲಿರುವ ಇತರ ವೃಕ್ಷಗಳೂ ಕೂಡ ತಮ್ಮ ಬುದ್ಧಿಯನ್ನು ಆಶ್ರಯಿಸಿದರೆ ನಿಸ್ಸಂದೇಹವಾಗಿ ಕುಪಿತ ವಾಯುವಿನಿಂದ ಅವರಿಗೆ ಯಾವ ಅನಿಷ್ಟವೂ ಆಗಲಾರದು.
12151018a ತೇಽತ್ರ ಬಾಲಾ ನ ಜಾನಂತಿ ಯಥಾ ನೈನಾನ್ಸಮೀರಣಃ।
12151018c ಸಮೀರಯೇತ ಸಂಕ್ರುದ್ಧೋ ಯಥಾ ಜಾನಾಮ್ಯಹಂ ತಥಾ।।
ಆದರೆ ಅವರು ಮೂರ್ಖರು. ವಾಯುವು ಕುಪಿತನಾಗಿ ಹೇಗೆ ಅವರನ್ನು ಸದೆಬಡಿಯುತ್ತಾನೆ ಎನ್ನುವುದನ್ನು ತಿಳಿಯಲಾರರು. ನಾನು ಇವೆಲ್ಲವನ್ನೂ ಚೆನ್ನಾಗಿ ತಿಳಿದುಕೊಂಡಿದ್ದೇನೆ.”
12151019a ತತೋ ನಿಶ್ಚಿತ್ಯ ಮನಸಾ ಶಲ್ಮಲಿಃ ಕ್ಷುಭಿತಸ್ತದಾ।
12151019c ಶಾಖಾಃ ಸ್ಕಂಧಾನ್ ಪ್ರಶಾಖಾಶ್ಚ ಸ್ವಯಮೇವ ವ್ಯಶಾತಯತ್।।
ಮನಸ್ಸಿನಲ್ಲಿ ಈ ರೀತಿ ನಿಶ್ಚಯಿಸಿ ಶಾಲ್ಮಲಿಯು ಕ್ಷುಭಿತನಾಗಿ ಸ್ವಯಂ ತಾನೇ ತನ್ನ ಶಾಖೆಗಳನ್ನೂ, ರೆಂಬೆಗಳನ್ನೂ, ಉಪಶಾಖೆಗಳನ್ನೂ ಕೆಳಗೆ ಬೀಳಿಸಿಬಿಟ್ಟನು.
12151020a ಸ ಪರಿತ್ಯಜ್ಯ ಶಾಖಾಶ್ಚ ಪತ್ರಾಣಿ ಕುಸುಮಾನಿ ಚ।
12151020c ಪ್ರಭಾತೇ ವಾಯುಮಾಯಾಂತಂ ಪ್ರತ್ಯೈಕ್ಷತ ವನಸ್ಪತಿಃ।।
ಆ ವೃಕ್ಷವು ರೆಂಬೆಗಳನ್ನೂ, ಎಲೆ-ಕುಸುಮಗಳನ್ನೂ ಬೀಳಿಸಿ ಬೆಳಗಾಗುವಾಗ ವಾಯುವು ಬರುವುದನ್ನು ನಿರೀಕ್ಷಿಸಿದನು.
12151021a ತತಃ ಕ್ರುದ್ಧಃ ಶ್ವಸನ್ವಾಯುಃ ಪಾತಯನ್ವೈ ಮಹಾದ್ರುಮಾನ್।
12151021c ಆಜಗಾಮಾಥ ತಂ ದೇಶಂ ಸ್ಥಿತೋ ಯತ್ರ ಸ ಶಲ್ಮಲಿಃ।।
ಆಗ ವಾಯುವು ಕ್ರುದ್ಧನಾಗಿ ಏದುಸಿರುಬಿಡುತ್ತಾ ಮಹಾವೃಕ್ಷಗಳನ್ನು ಬೀಳಿಸುತ್ತಾ ಶಾಲ್ಮಲಿಯು ಇದ್ದ ಪ್ರದೇಶಕ್ಕೆ ಆಗಮಿಸಿದನು.
12151022a ತಂ ಹೀನಪರ್ಣಂ ಪತಿತಾಗ್ರಶಾಖಂ ವಿಶೀರ್ಣಪುಷ್ಪಂ ಪ್ರಸಮೀಕ್ಷ್ಯ ವಾಯುಃ।
12151022c ಉವಾಚ ವಾಕ್ಯಂ ಸ್ಮಯಮಾನ ಏನಂ ಮುದಾ ಯುತಂ ಶಲ್ಮಲಿಂ ರುಗ್ಣಶಾಖಮ್।।
ಎಲೆಗಳಿಂದ ರಹಿತನಾಗಿದ್ದ, ಮುಖ್ಯ ಶಾಖೆಗಳು ಕೆಳಗೆ ಬಿದ್ದಿದ್ದ, ಪುಷ್ಪಗಳನ್ನು ನೆಲದ ಮೇಲೆ ಹಾಸಿದ್ದ ಮತ್ತು ರೆಂಬೆಗಳು ಕತ್ತರಿಸಲ್ಪಟ್ಟ ಆ ವೃಕ್ಷವನ್ನು ನೋಡಿ ವಾಯುವು ಮುದಿತನಾಗಿ ಮುಗುಳ್ನಗುತ್ತಾ ಹೇಳಿದನು:
12151023a ಅಹಮಪ್ಯೇವಮೇವ ತ್ವಾಂ ಕುರ್ವಾಣಃ ಶಲ್ಮಲೇ ರುಷಾ।
12151023c ಆತ್ಮನಾ ಯತ್ ಕೃತಂ ಕೃತ್ಸ್ನಂ ಶಾಖಾನಾಮಪಕರ್ಷಣಮ್।।
12151024a ಹೀನಪುಷ್ಪಾಗ್ರಶಾಖಸ್ತ್ವಂ ಶೀರ್ಣಾಂಕುರಪಲಾಶವಾನ್।
12151024c ಆತ್ಮದುರ್ಮಂತ್ರಿತೇನೇಹ ಮದ್ವೀರ್ಯವಶಗೋಽಭವಃ।।
“ಶಾಲ್ಮಲೇ! ನಾನೂ ಕೂಡ ರೋಷಗೊಂಡು ನಿನ್ನನ್ನು ಹೀಗೆಯೇ ಮಾಡಬೇಕೆಂದಿದ್ದೆ. ಸ್ವಯಂ ನೀನೇ ಈ ಕಷ್ಟ ಕೆಲಸವನ್ನು ಮಾಡಿಕೊಂಡುಬಿಟ್ಟಿದ್ದೀಯೆ. ನಿನ್ನ ರೆಂಬೆಗಳು ಕೆಳಗೆ ಬಿದ್ದುಬಿಟ್ಟಿವೆ. ಹೂವುಗಳು, ಎಲೆಗಳು, ಮೊಗ್ಗುಗಳು ಮತ್ತು ಅಂಕುರಗಳು ಎಲ್ಲವೂ ನಾಶವಾಗಿಬಿಟ್ಟಿವೆ. ನೀನು ನಿನ್ನದೇ ದುರ್ಬುದ್ದಿಯಿಂದ ಈ ವಿಪತ್ತನ್ನು ತಂದುಕೊಂಡಿದ್ದೀಯೆ. ನಿನಗೆ ನನ್ನ ಬಲವೀರ್ಯಗಳ ಬಲಿಯಾಗಬೇಕಾಯಿತು.”
12151025a ಏತಚ್ಚ್ರುತ್ವಾ ವಚೋ ವಾಯೋಃ ಶಲ್ಮಲಿರ್ವ್ರೀಡಿತಸ್ತದಾ।
12151025c ಅತಪ್ಯತ ವಚಃ ಸ್ಮೃತ್ವಾ ನಾರದೋ ಯತ್ತದಾಬ್ರವೀತ್।।
ವಾಯುವಿನ ಈ ಮಾತನ್ನು ಕೇಳಿ ಶಾಲ್ಮಲಿಯು ಲಜ್ಜಿತಗೊಂಡು ನಾರದನು ಹೇಳಿದ್ದ ಮಾತುಗಳನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಟ್ಟಿತು.
12151026a ಏವಂ ಯೋ ರಾಜಶಾರ್ದೂಲ ದುರ್ಬಲಃ ಸನ್ಬಲೀಯಸಾ।
12151026c ವೈರಮಾಸಜ್ಜತೇ ಬಾಲಸ್ತಪ್ಯತೇ ಶಲ್ಮಲಿರ್ಯಥಾ।।
ರಾಜಶಾರ್ದೂಲ! ಇದೇ ರೀತಿಯಲ್ಲಿ ಸ್ವಯಂ ದುರ್ಬಲನಾಗಿದ್ದು ಬಲಶಾಲಿಯೊಂದಿಗೆ ವೈರವನ್ನು ಕಟ್ಟಿಕೊಳ್ಳುವ ಮೂರ್ಖನು ಶಾಲ್ಮಲಿಯಂತೆ ಪಶ್ಚಾತ್ತಾಪಪಡಬೇಕಾಗುತ್ತದೆ.
12151027a ತಸ್ಮಾದ್ವೈರಂ ನ ಕುರ್ವೀತ ದುರ್ಬಲೋ ಬಲವತ್ತರೈಃ।
12151027c ಶೋಚೇದ್ಧಿ ವೈರಂ ಕುರ್ವಾಣೋ ಯಥಾ ವೈ ಶಲ್ಮಲಿಸ್ತಥಾ।।
ಆದುದರಿಂದ ದುರ್ಬಲನು ಬಲವತ್ತರವಾದವರೊಡನೆ ವೈರವನ್ನು ಕಟ್ಟಿಕೊಳ್ಳಬಾರದು. ಹಾಗೆ ವೈರವನ್ನು ಕಟ್ಟಿಕೊಳ್ಳುವವನು ಶಾಲ್ಮಲಿಯಂತೆ ಶೋಚನೀಯ ಸ್ಥಿತಿಯನ್ನು ಹೊಂದುತ್ತಾನೆ.
12151028a ನ ಹಿ ವೈರಂ ಮಹಾತ್ಮಾನೋ ವಿವೃಣ್ವಂತ್ಯಪಕಾರಿಷು।
12151028c ಶನೈಃ ಶನೈರ್ಮಹಾರಾಜ ದರ್ಶಯಂತಿ ಸ್ಮ ತೇ ಬಲಮ್।।
ಮಹಾರಾಜ! ಮಹಾಮನಸ್ವೀ ಪುರುಷನು ತನ್ನನ್ನು ಅವಹೇಳನ ಮಾಡುವವನ ಮೇಲೆ ವೈರಭಾವವನ್ನು ಪ್ರಕಟಿಸುವುದಿಲ್ಲ. ಅವರು ನಿಧಾನವಾಗಿ ತಮ್ಮ ಬಲವನ್ನು ತೋರಿಸುತ್ತಾರೆ.
12151029a ವೈರಂ ನ ಕುರ್ವೀತ ನರೋ ದುರ್ಬುದ್ಧಿರ್ಬುದ್ಧಿಜೀವಿನಾ।
12151029c ಬುದ್ಧಿರ್ಬುದ್ಧಿಮತೋ ಯಾತಿ ತೂಲೇಷ್ವಿವ5 ಹುತಾಶನಃ।।
ದುರ್ಬುದ್ಧಿ ನರನು ಬುದ್ಧಿಜೀವಿಯೊಡನೆ ವೈರವನ್ನು ಮಾಡಬಾರದು. ಏಕೆಂದರೆ ಹತ್ತಿಯ ರಾಶಿಯನ್ನು ಹುತಾಶನನು ಹೇಗೋ ಹಾಗೆ ಬುದ್ಧಿಮಾನನ ಬುದ್ಧಿಯು ಸುಡುತ್ತದೆ.
12151030a ನ ಹಿ ಬುದ್ಧ್ಯಾ ಸಮಂ ಕಿಂ ಚಿದ್ವಿದ್ಯತೇ ಪುರುಷೇ ನೃಪ।
12151030c ತಥಾ ಬಲೇನ ರಾಜೇಂದ್ರ ನ ಸಮೋಽಸ್ತೀತಿ ಚಿಂತಯೇತ್।।
ರಾಜೇಂದ್ರ! ನೃಪ! ಪುರುಷನಲ್ಲಿ ಬುದ್ಧಿಯ ಸಮಾನ ಬೇರೆ ಯಾವುದೂ ಇಲ್ಲ. ಜಗತ್ತಿನಲ್ಲಿ ಬುದ್ಧಿಬಲದಿಂದ ಯುಕ್ತನಾಗಿರುವವನನ್ನು ಎದುರಿಸುವ ಬೇರೆ ಯಾವ ಪುರುಷನೂ ಇಲ್ಲ.
12151031a ತಸ್ಮಾತ್ ಕ್ಷಮೇತ ಬಾಲಾಯ ಜಡಾಯ ಬಧಿರಾಯ6 ಚ।
12151031c ಬಲಾಧಿಕಾಯ ರಾಜೇಂದ್ರ ತದ್ದೃಷ್ಟಂ ತ್ವಯಿ ಶತ್ರುಹನ್।।
ರಾಜೇಂದ್ರ! ಶತ್ರುಹನ್! ಆದುದರಿಂದ ಬಾಲಕ, ಜಡ, ಕಿವುಡ ಮತ್ತು ಬಲದಲ್ಲಿ ತನಗಿಂತಲೂ ಅಧಿಕನಾಗಿರುವವನು – ಇವರೆಲ್ಲರೂ ಮಾಡಿದ ಪ್ರತಿಕೂಲ ಕರ್ಮಗಳನ್ನು ಕ್ಷಮಿಸಿಬಿಡಬೇಕು. ಈ ಕ್ಷಮಾಭಾವವನ್ನು ನಿನ್ನಲ್ಲಿ ಕಾಣುತ್ತಿದ್ದೇನೆ.
12151032a ಅಕ್ಷೌಹಿಣ್ಯೋ ದಶೈಕಾ ಚ ಸಪ್ತ ಚೈವ ಮಹಾದ್ಯುತೇ।
12151032c ಬಲೇನ ನ ಸಮಾ ರಾಜನ್ನರ್ಜುನಸ್ಯ ಮಹಾತ್ಮನಃ।।
ಮಹಾದ್ಯುತೇ! ರಾಜನ್! ಹದಿನೆಂಟು ಅಕ್ಷೌಹಿಣೀ ಸೇನೆಯೂ ಮಹಾತ್ಮಾ ಅರ್ಜುನನ ಸಮನಾಗಿರಲಿಲ್ಲ.
12151033a ಹತಾಸ್ತಾಶ್ಚೈವ ಭಗ್ನಾಶ್ಚ ಪಾಂಡವೇನ ಯಶಸ್ವಿನಾ।
12151033c ಚರತಾ ಬಲಮಾಸ್ಥಾಯ ಪಾಕಶಾಸನಿನಾ ಮೃಧೇ।।
ಪಾಂಡು ಮತ್ತು ಇಂದ್ರರ ಯಶಸ್ವೀ ಪುತ್ರನು ತನ್ನ ಬಲವನ್ನಾಶ್ರಯಿಸಿ ಇಲ್ಲಿ ರಣದಲ್ಲಿ ಸಂಚರಿಸುತ್ತಿದ್ದ ಸಮಸ್ತ ಸೇನೆಗಳನ್ನೂ ಸದೆಬಡಿದು ನಾಶಗೊಳಿಸಿದನು.
12151034a ಉಕ್ತಾಸ್ತೇ ರಾಜಧರ್ಮಾಶ್ಚ ಆಪದ್ಧರ್ಮಾಶ್ಚ ಭಾರತ।
12151034c ವಿಸ್ತರೇಣ ಮಹಾರಾಜ ಕಿಂ ಭೂಯಃ ಪ್ರಬ್ರವೀಮಿ ತೇ।।
ಭಾರತ! ಮಹಾರಾಜ! ನಾನು ನಿನಗೆ ರಾಜಧರ್ಮ ಮತ್ತು ಆಪದ್ಧರ್ಮಗಳ ಕುರಿತು ವಿಸ್ತಾರವಾಗಿ ಹೇಳಿದ್ದೇನೆ. ನಿನಗೆ ಇನ್ನೂ ಏನನ್ನು ಹೇಳಬೇಕು?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಪವನಶಾಲ್ಮಲಿಸಂವಾದೇ ಏಕಪಂಚಾಶದಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಪವನಶಾಲ್ಮಲಿಸಂವಾದ ಎನ್ನುವ ನೂರಾಐವತ್ತೊಂದನೇ ಅಧ್ಯಾಯವು.
-
ಗೀತಾ ಪ್ರೆಸ್ ನಲ್ಲಿ ಈ ಅಧ್ಯಾಯವೂ ಕೂಡ ಎರಡು ಅಧ್ಯಾಯಗಳನ್ನಾಗಿ ಕೊಡಲಾಗಿದೆ. ಶ್ಲೋಕ ೧-೧೮ ಒಂದು ಅಧ್ಯಾಯ ಮತ್ತು ೧೯-೩೪ ಇನ್ನೊಂದು ಅಧ್ಯಾಯ. ↩︎
-
ಅಹಂ ತ್ವಾಮಭಿಜಾನಾಮಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಯಥಾ ಮಾಂ ನಾವಮನ್ಯಸೇ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಗೀತಾ ಪ್ರೆಸ್ ನಲ್ಲಿ ಇದರ ನಂತರ ಈ ಅಧಿಕ ಶ್ಲೋಕಗಳಿವೆ: ಬಲಾಧಿಕೋಽಹಂ ತ್ವತ್ತಶ್ಚ ನ ಭೀಃ ಕಾರ್ಯಾ ಮಯಾ ತವ। ಯೇ ತು ಬುದ್ಧ್ಯಾ ಹಿ ಬಲಿನಸ್ತೇ ಭವಂತಿ ಬಲೀಯಸಃ। ಪ್ರಾಣಮಾತ್ರಬಲಾ ಯೇ ವೈ ನೈವ ತೇ ಬಲಿನೋ ಮತಾಃ।। ↩︎
-
ತೃಣೇಷ್ವಿವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಜಡಾಂಧಬಧಿರಾಯ ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎