150: ಪವನಶಾಲ್ಮಲಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 150

ಸಾರ

ನಾರದನು ಶಾಲ್ಮಲೀ ವೃಕ್ಷವನ್ನು ಪ್ರಶಂಸಿಸಿ ಪ್ರಶ್ನಿಸಿದುದು ಮತ್ತು ಅದರ ಅಹಂಕಾರವನ್ನು ಕಂಡು ನಿಂದಿಸಿದುದು (1-36).

12150001 1ಭೀಷ್ಮ ಉವಾಚ। 12150001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12150001c ಸಂವಾದಂ ಭರತಶ್ರೇಷ್ಠ ಶಲ್ಮಲೇಃ ಪವನಸ್ಯ ಚ।।

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪವನ ಮತ್ತು ಶಾಲ್ಮಲೀ2 ವೃಕ್ಷಗಳ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

12150002a ಹಿಮವಂತಂ ಸಮಾಸಾದ್ಯ ಮಹಾನಾಸೀದ್ವನಸ್ಪತಿಃ।
12150002c ವರ್ಷಪೂಗಾಭಿಸಂವೃದ್ಧಃ ಶಾಖಾಸ್ಕಂಧಪಲಾಶವಾನ್।।

ಹಿಮಾಲಯ ಪರ್ವತದ ಮೇಲೆ ಒಂದು ಅತೀ ದೊಡ್ಡ ವೃಕ್ಷವಿತ್ತು. ಅದು ಅನೇಕ ವರ್ಷಗಳಿಂದ ಬೆಳೆದು ಪ್ರಬಲವಾಗಿತ್ತು. ಅದರ ಬುಡ, ಶಾಖೆಗಳು ಮತ್ತು ಎಲೆಗಳು ಸಮೃದ್ಧವಾಗಿದ್ದವು.

12150003a ತತ್ರ ಸ್ಮ ಮತ್ತಾ ಮಾತಂಗಾ ಧರ್ಮಾರ್ತಾಃ3 ಶ್ರಮಕರ್ಶಿತಾಃ।
12150003c ವಿಶ್ರಮಂತಿ ಮಹಾಬಾಹೋ ತಥಾನ್ಯಾ ಮೃಗಜಾತಯಃ।।

ಮಹಾಬಾಹೋ! ಅದರ ಕೆಳಗೆ ಅನೇಕ ಮದಿಸಿದ ಆನೆಗಳು ಮತ್ತು ಹಾಗೆಯೆ ಅನ್ಯ ಮೃಗಜಾತಿಗಳು ಬಿಸಿಲಿನಿಂದ ಆರ್ತರಾಗಿ ಮತ್ತು ಬಳಲಿಕೆಯಿಂದ ಪೀಡಿತರಾಗಿ ವಿಶ್ರಮಿಸುತ್ತಿದ್ದವು.

12150004a ನಲ್ವಮಾತ್ರಪರೀಣಾಹೋ ಘನಚ್ಚಾಯೋ ವನಸ್ಪತಿಃ।
12150004c ಶುಕಶಾರಿಕಸಂಘುಷ್ಟಃ ಫಲವಾನ್ಪುಷ್ಪವಾನಪಿ।।

ಆ ವೃಕ್ಷದ ಎತ್ತರವು ನಾಲ್ಕುನೂರು ಮೊಳಗಳಿದ್ದವು. ಅದರ ನೆರಳು ಅತಿ ದೊಡ್ಡದಾಗಿಯೂ ದಟ್ಟವಾಗಿಯೂ ಇತ್ತು. ಅದರ ಮೇಲೆ ಗಿಳಿಗಳು ಮತ್ತು ಮೈನಾ ಪಕ್ಷಿಗಳು ಗೂಡುಕಟ್ಟಿದ್ದವು. ಆ ವೃಕ್ಷವು ಫಲ ಮತ್ತು ಹೂವುಗಳೆರಡರಿಂದಲೂ ತುಂಬಿತ್ತು.

12150005a ಸಾರ್ಥಿಕಾ ವಣಿಜಶ್ಚಾಪಿ ತಾಪಸಾಶ್ಚ ವನೌಕಸಃ।
12150005c ವಸಂತಿ ವಾಸಾನ್ಮಾರ್ಗಸ್ಥಾಃ ಸುರಮ್ಯೇ ತರುಸತ್ತಮೇ।।

ದಲಗಳೊಂದಿಗೆ ಸಂಚರಿಸುತ್ತಿದ್ದ ವರ್ತಕರು, ವನೌಕಸ ತಾಪಸರೂ ಮತ್ತು ಇತರ ಪ್ರಯಾಣಿಕರೂ ಆ ರಮ್ಯ ವೃಕ್ಷಶ್ರೇಷ್ಠನ ಕೆಳಗೆ ತಂಗುತ್ತಿದ್ದರು.

12150006a ತಸ್ಯಾ ತಾ ವಿಪುಲಾಃ ಶಾಖಾ ದೃಷ್ಟ್ವಾ ಸ್ಕಂಧಾಂಶ್ಚ ಸರ್ವತಃ।
12150006c ಅಭಿಗಮ್ಯಾಬ್ರವೀದೇನಂ ನಾರದೋ ಭರತರ್ಷಭ।।

ಭರತರ್ಷಭ! ಎಲ್ಲಕಡೆ ಹರಡಿದ್ದ ಅದರ ಆ ವಿಪುಲ ಶಾಖೆಗಳನ್ನೂ ಮತ್ತು ಬುಡವನ್ನೂ ನೋಡಿ ನಾರದನು ಆಗಮಿಸಿ ಅದಕ್ಕೆ ಇಂತೆಂದನು:

12150007a ಅಹೋ ನು ರಮಣೀಯಸ್ತ್ವಮಹೋ ಚಾಸಿ ಮನೋರಮಃ।
12150007c ಪ್ರೀಯಾಮಹೇ ತ್ವಯಾ ನಿತ್ಯಂ ತರುಪ್ರವರ ಶಲ್ಮಲೇ।।

“ಅಹೋ ಶಲ್ಮಲೇ! ನೀನು ಅತ್ಯಂತ ರಮಣೀಯನೂ ಮನೋಹರನೂ ಆಗಿರುವೆ. ತರುಪ್ರವರ! ನಿನ್ನಿಂದ ನಮಗೆ ಸದಾ ಪ್ರಸನ್ನತೆಯೇ ಉಂಟಾಗುತ್ತದೆ.

12150008a ಸದೈವ ಶಕುನಾಸ್ತಾತ ಮೃಗಾಶ್ಚಾಧಸ್ತಥಾ ಗಜಾಃ।
12150008c ವಸಂತಿ ತವ ಸಂಹೃಷ್ಟಾ ಮನೋಹರತರಾಸ್ತಥಾ।।

ಅಯ್ಯಾ! ಮನೋಹರ ವೃಕ್ಷವೇ! ನಿನ್ನ ಶಾಖೆಗಳ ಮೇಲೆ ಸದಾ ಅನೇಕ ಪಕ್ಷಿಗಳು ಮತ್ತು ಕೆಳಗೆ ಅನೇಕಾನೇಕ ಮೃಗಗಳು ಮತ್ತು ಆನೆಗಳು ಪ್ರಸನ್ನತಾ ಪೂರ್ವಕವಾಗಿ ತಂಗುತ್ತಿರುತ್ತವೆ.

12150009a ತವ ಶಾಖಾ ಮಹಾಶಾಖ ಸ್ಕಂಧಂ ಚ ವಿಪುಲಂ ತಥಾ।
12150009c ನ ವೈ ಪ್ರಭಗ್ನಾನ್ಪಶ್ಯಾಮಿ ಮಾರುತೇನ ಕಥಂ ಚನ।।

ಮಹಾಶಾಖಾ! ನಿನ್ನ ಶಾಖೆಗಳನ್ನು ಮತ್ತು ದಪ್ಪನಾದ ಬುಡವನ್ನು ವಾಯುದೇವನು ಎಂದೂ ಮುರಿಯಲಿಲ್ಲ ಎನ್ನುವುದನ್ನು ನೋಡುತ್ತಿದ್ದೇನೆ.

12150010a ಕಿಂ ನು ತೇ ಮಾರುತಸ್ತಾತ ಪ್ರೀತಿಮಾನಥ ವಾ ಸುಹೃತ್।
12150010c ತ್ವಾಂ ರಕ್ಷತಿ ಸದಾ ಯೇನ ವನೇಽಸ್ಮಿನ್ಪವನೋ ಧ್ರುವಮ್।।

ಅಯ್ಯಾ! ಈ ವನದಲ್ಲಿ ನಿನ್ನನ್ನು ಪವನನು ನಿಶ್ಚಿತರೂಪದಲ್ಲಿ ರಕ್ಷಿಸುತ್ತಿದ್ದಾನೆಂದರೆ ಮಾರುತನು ನಿನ್ನ ಮೇಲೆ ವಿಶೇಷವಾಗಿ ಪ್ರೀತಿಯನ್ನಿಟ್ಟಿದ್ದಾನೆಯೇ ಅಥವಾ ಅವನು ನಿನ್ನ ಮಿತ್ರನೇ?

12150011a ವಿವಾನ್ ಹಿ4 ಪವನಃ ಸ್ಥಾನಾದ್ವೃಕ್ಷಾನುಚ್ಚಾವಚಾನಪಿ।
12150011c ಪರ್ವತಾನಾಂ ಚ ಶಿಖರಾಣ್ಯಾಚಾಲಯತಿ ವೇಗವಾನ್।।

ಪವನನು ಎಷ್ಟು ವೇಗಶಾಲಿಯೆಂದರೆ ಚಿಕ್ಕ-ದೊಡ್ಡ ಮರಗಳನ್ನೇನು ಪರ್ವತಗಳ ಶಿಖರಗಳನ್ನು ಕೂಡ ಅವುಗಳ ಸ್ಥಾನಗಳಿಂದ ಅಲ್ಲಾಡಿಸಿಬಿಡುತ್ತಾನೆ.

12150012a ಶೋಷಯತ್ಯೇವ ಪಾತಾಲಂ ವಿವಾನ್ಗಂಧವಹಃ ಶುಚಿಃ।
12150012c ಹ್ರದಾಂಶ್ಚ ಸರಿತಶ್ಚೈವ ಸಾಗರಾಂಶ್ಚ ತಥೈವ ಹ।।

ಗಂಧವಾಹೀ ಪವಿತ್ರ ವಾಯುವು ಪಾತಾಲ, ಸರೋವರ, ನದಿಗಳು ಮತ್ತು ಸಮುದ್ರಗಳನ್ನೂ ಕೂಡ ಒಣಗಿಸಿಬಿಡಬಲ್ಲನು.

12150013a ತ್ವಾಂ ಸಂರಕ್ಷೇತ ಪವನಃ ಸಖಿತ್ವೇನ ನ ಸಂಶಯಃ।
12150013c ತಸ್ಮಾದ್ಬಹಲಶಾಖೋಽಸಿ ಪರ್ಣವಾನ್ಪುಷ್ಪವಾನಪಿ।।

ನಿನ್ನ ಮೇಲಿನ ಸಖಿತ್ವದಿಂದ ಪವನನು ನಿನ್ನನ್ನು ರಕ್ಷಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದಲೇ ನೀನು ಬಲವತ್ತಾದ ರೆಂಬೆಗಳಿಂದ ಕೂಡಿದ್ದೀಯೆ ಮತ್ತು ಎಲೆ-ಪುಷ್ಪಗಳಿಂದ ಸಮೃದ್ಧನಾಗಿದ್ದೀಯೆ.

12150014a ಇದಂ ಚ ರಮಣೀಯಂ ತೇ ಪ್ರತಿಭಾತಿ ವನಸ್ಪತೇ।
12150014c ಯದಿಮೇ ವಿಹಗಾಸ್ತಾತ ರಮಂತೇ ಮುದಿತಾಸ್ತ್ವಯಿ।।

ಅಯ್ಯಾ ವನಸ್ಪತೇ! ನೀನು ಅತ್ಯಂತ ರಮಣೀಯನಾಗಿ ಕಾಣುತ್ತಿದ್ದೀಯೆ. ನಿನ್ನ ಮೇಲೆ ಪಕ್ಷಿಗಳು ಸಂತೋಷದಿಂದ ರಮಿಸುತ್ತಿವೆ.

12150015a ಏಷಾಂ ಪೃಥಕ್ಸಮಸ್ತಾನಾಂ ಶ್ರೂಯತೇ ಮಧುರಃ ಸ್ವರಃ।
12150015c ಪುಷ್ಪಸಂಮೋದನೇ ಕಾಲೇ ವಾಶತಾಂ ಸುಮನೋಹರಮ್।।

ವಸಂತ ಋತುವಿನಲ್ಲಿ ಮನೋರಮವಾಗಿ ಕೂಗುವ ಈ ಪಕ್ಷಿಗಳ ಪ್ರತ್ಯೇಕವಾದ ಮತ್ತು ಒಟ್ಟಾದ ಮಧುರ ಸ್ವರಗಳು ಕೇಳಿಬರುತ್ತವೆ.

12150016a ತಥೇಮೇ ಮುದಿತಾ ನಾಗಾಃ ಸ್ವಯೂಥಕುಲಶೋಭಿನಃ।
12150016c ಘರ್ಮಾರ್ತಾಸ್ತ್ವಾಂ ಸಮಾಸಾದ್ಯ ಸುಖಂ ವಿಂದಂತಿ ಶಲ್ಮಲೇ।।

ಶಲ್ಮಲೇ! ತಮ್ಮ ಯೂಥಕುಲದಲ್ಲಿ ಸುಶೋಭಿತ ಗಜರಾಜನು ಘೀಳಿಡುತ್ತಾ ಬಿಸಿಲಿನಿಂದ ಪೀಡಿತನಾಗಿ ನಿನ್ನ ಬಳಿಬಂದು ಸುಖವನ್ನು ಹೊಂದುತ್ತಾನೆ.

12150017a ತಥೈವ ಮೃಗಜಾತೀಭಿರನ್ಯಾಭಿರುಪಶೋಭಸೇ।
12150017c ತಥಾ ಸಾರ್ಥಾಧಿವಾಸೈಶ್ಚ ಶೋಭಸೇ ಮೇರುವದ್ದ್ರುಮ।।

ವೃಕ್ಷವೇ! ಹೀಗೆಯೇ ಇತರ ಜಾತಿಗಳ ಪಶುಗಳೂ ಕೂಡ ನಿನ್ನ ಶೋಭೆಯನ್ನು ಹೆಚ್ಚಿಸುತ್ತವೆ. ನೀನು ಎಲ್ಲರ ನಿವಾಸಸ್ಥಾನವಾಗಿರುವ ಕಾರಣದಿಂದ ಮೇರುಪರ್ವತದಂತೆ ಶೋಭಿಸುತ್ತೀಯೆ.

12150018a ಬ್ರಾಹ್ಮಣೈಶ್ಚ ತಪಃಸಿದ್ಧೈಸ್ತಾಪಸೈಃ ಶ್ರಮಣೈರಪಿ।
12150018c ತ್ರಿವಿಷ್ಟಪಸಮಂ ಮನ್ಯೇ ತವಾಯತನಮೇವ ಹ।।

ಬ್ರಾಹ್ಮಣರಿಂದಲೂ, ತಪಃಸಿದ್ಧ ತಾಪಸರೂ, ಶ್ರಮಣರೂ5 ಕೂಡಿರುವ ನಿನ್ನ ಈ ಸ್ಥಾನವು ನನಗೆ ಸ್ವರ್ಗದ ಸಮಾನವಾಗಿ ತೋರುತ್ತಿದೆ.

12150019a ಬಂಧುತ್ವಾದಥ ವಾ ಸಖ್ಯಾಚ್ಚಲ್ಮಲೇ ನಾತ್ರ ಸಂಶಯಃ।
12150019c ಪಾಲಯತ್ಯೇವ ಸತತಂ ಭೀಮಃ ಸರ್ವತ್ರಗೋಽನಿಲಃ।।

ಶಲ್ಮಲೇ! ಬಂಧುತ್ವದಿಂದ ಅಥವಾ ಸಖ್ಯದಿಂದ ಸರ್ವತ್ರಗ ಭೀಮ ಅನಿಲನು ಸತತನೂ ನಿನ್ನನ್ನು ಪಾಲಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12150020a ನ್ಯಗ್ಭಾವಂ ಪರಮಂ ವಾಯೋಃ ಶಲ್ಮಲೇ ತ್ವಮುಪಾಗತಃ।
12150020c ತವಾಹಮಸ್ಮೀತಿ ಸದಾ ಯೇನ ರಕ್ಷತಿ ಮಾರುತಃ।।

ಶಲ್ಮಲೇ! ನೀನು ವಾಯುವಿನ ಎದಿರು ಅತ್ಯಂತ ವಿನಮ್ರನಾಗಿ “ನಾನು ನಿನ್ನವನೇ ಆಗಿದ್ದೇನೆ” ಎಂದು ಹೇಳುತ್ತಿರಬಹುದು. ಆದುದರಿಂದಲೇ ಮಾರುತನು ಸದಾ ನಿನ್ನನ್ನು ರಕ್ಷಿಸುತ್ತಿರಬಹುದು.

12150021a ನ ತಂ ಪಶ್ಯಾಮ್ಯಹಂ ವೃಕ್ಷಂ ಪರ್ವತಂ ವಾಪಿ ತಂ ದೃಢಮ್।
12150021c ಯೋ ನ ವಾಯುಬಲಾದ್ಭಗ್ನಃ ಪೃಥಿವ್ಯಾಮಿತಿ ಮೇ ಮತಿಃ।।

ವಾಯುವಿನ ಬಲದಿಂದ ಭಗ್ನವಾಗದ ಯಾವ ದೃಢ ವೃಕ್ಷವನ್ನಾಗಲೀ ಪರ್ವತವನ್ನಾಗಲೀ ಈ ಭೂಮಿಯಲ್ಲಿ ನೋಡಿಲ್ಲ ಎಂದು ನನ್ನ ಮತ.

12150022a ತ್ವಂ ಪುನಃ ಕಾರಣೈರ್ನೂನಂ ಶಲ್ಮಲೇ ರಕ್ಷ್ಯಸೇ ಸದಾ।
12150022c ವಾಯುನಾ ಸಪರೀವಾರಸ್ತೇನ ತಿಷ್ಠಸ್ಯಸಂಶಯಮ್।।

ಶಲ್ಮಲೇ! ಅವಶ್ಯವಾಗಿಯೂ ಯಾವುದೋ ಕಾರಣದಿಂದ ಪ್ರೇರಿತನಾಗಿ ವಾಯುದೇವನು ನಿಶ್ಚಿತರೂಪದಲ್ಲಿ ಸಪರಿವಾರ ನಿನ್ನ ರಕ್ಷಣೆಯನ್ನು ಮಾಡುತ್ತಿದ್ದಾನೆ. ಇದರಿಂದಲೇ ನೀನು ಹೀಗೆ ನಿಂತಿದ್ದೀಯೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.”

12150023 ಶಲ್ಮಲಿರುವಾಚ।
12150023a ನ ಮೇ ವಾಯುಃ ಸಖಾ ಬ್ರಹ್ಮನ್ನ ಬಂಧುರ್ನ ಚ ಮೇ ಸುಹೃತ್।
12150023c ಪರಮೇಷ್ಠೀ ತಥಾ ನೈವ ಯೇನ ರಕ್ಷತಿ ಮಾನಿಲಃ।।

ಶಲ್ಮಲಿಯು ಹೇಳಿತು: “ಬ್ರಹ್ಮನ್! ವಾಯುವು ನನ್ನ ಸಖನೂ ಅಲ್ಲ, ಬಂಧುವೂ ಅಲ್ಲ, ಸುಹೃದನೂ ಅಲ್ಲ. ನನ್ನನ್ನು ರಕ್ಷಿಸಲು ಆ ಅನಿಲನು ಪರಮೇಷ್ಠಿ ಬ್ರಹ್ಮನೂ ಅಲ್ಲ.

12150024a ಮಮ ತೇಜೋಬಲಂ ವಾಯೋರ್ಭೀಮಮಪಿ ಹಿ ನಾರದ।
12150024c ಕಲಾಮಷ್ಟಾದಶೀಂ ಪ್ರಾಣೈರ್ನ ಮೇ ಪ್ರಾಪ್ನೋತಿ ಮಾರುತಃ।।

ನಾರದ! ನನ್ನ ತೇಜೋಬಲವು ವಾಯುವಿಗಿಂತ ಭಯಂಕರವಾಗಿದೆ. ವಾಯುವು ನನ್ನ ಪ್ರಾಣಶಕ್ತಿಯ ಹದಿನೆಂಟರಲ್ಲಿ ಒಂದು ಅಂಶದಷ್ಟನ್ನೂ ಹೊಂದಿಲ್ಲ.

12150025a ಆಗಚ್ಚನ್ಪರಮೋ6 ವಾಯುರ್ಮಯಾ ವಿಷ್ಟಂಭಿತೋ ಬಲಾತ್।
12150025c ರುಜನ್ ದ್ರುಮಾನ್ಪರ್ವತಾಂಶ್ಚ ಯಚ್ಚಾನ್ಯದಪಿ ಕಿಂ ಚನ।।

ವಾಯುವ ಪರಮ ಬಲದಿಂದ ವೃಕ್ಷ, ಪರ್ವತ ಮತ್ತು ಇತರ ವಸ್ತುಗಳನ್ನು ಮುರಿಯುತ್ತಾ ನನ್ನ ಬಳಿ ಬಂದಾಗ ನಾನು ಬಲದಿಂದ ಅವನ ವೇಗವನ್ನು ತಡೆಯುತ್ತೇನೆ.

12150026a ಸ ಮಯಾ ಬಹುಶೋ ಭಗ್ನಃ ಪ್ರಭಂಜನ್ವೈ ಪ್ರಭಂಜನಃ।
12150026c ತಸ್ಮಾನ್ನ ಬಿಭ್ಯೇ ದೇವರ್ಷೇ ಕ್ರುದ್ಧಾದಪಿ ಸಮೀರಣಾತ್।।

ದೇವರ್ಷೇ! ಈ ರೀತಿ ನಾನು ಧ್ವಂಸಮಾಡುವ ವಾಯುವಿನ ಗತಿಯನ್ನು ಅನೇಕ ಬಾರಿ ತಡೆದಿದ್ದೇನೆ. ಅದರಿಂದ ಅವನು ಕುಪಿತನಾದರೂ ನನಗೆ ಅವನ ಭಯವಿಲ್ಲ.”

12150027 ನಾರದ ಉವಾಚ।
12150027a ಶಲ್ಮಲೇ ವಿಪರೀತಂ ತೇ ದರ್ಶನಂ ನಾತ್ರ ಸಂಶಯಃ।
12150027c ನ ಹಿ ವಾಯೋರ್ಬಲೇನಾಸ್ತಿ ಭೂತಂ ತುಲ್ಯಬಲಂ ಕ್ವ ಚಿತ್।।

ನಾರದನು ಹೇಳಿದನು: “ಶಲ್ಮಲೇ! ಈ ವಿಷಯದಲ್ಲಿ ನಿನ್ನ ದೃಷ್ಟಿಯು ವಿಪರೀತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ವಾಯುವಿನ ಬಲದ ಸಮಾನ ಯಾವ ಜೀವಿಯ ಬಲವೂ ಇಲ್ಲ.

12150028a ಇಂದ್ರೋ ಯಮೋ ವೈಶ್ರವಣೋ ವರುಣಶ್ಚ ಜಲೇಶ್ವರಃ।
12150028c ನ ತೇಽಪಿ ತುಲ್ಯಾ ಮರುತಃ ಕಿಂ ಪುನಸ್ತ್ವಂ ವನಸ್ಪತೇ।।

ವನಸ್ಪತೇ! ಇಂದ್ರ, ಯಮ, ವೈಶ್ರವಣ ಕುಬೇರ ಮತ್ತು ಜಲೇಶ್ವರ ವರುಣ ಇವರೂ ಕೂಡ ವಾಯುವಿನ ಸಮಾನ ಬಲಶಾಲಿಗಳಲ್ಲ. ಇನ್ನು ನಿನ್ನಂತಹ ಸಾಧಾರಣ ವೃಕ್ಷವೇನು?

12150029a ಯದ್ಧಿ ಕಿಂ ಚಿದಿಹ ಪ್ರಾಣಿ ಶಲ್ಮಲೇ ಚೇಷ್ಟತೇ ಭುವಿ।
12150029c ಸರ್ವತ್ರ ಭಗವಾನ್ವಾಯುಶ್ಚೇಷ್ಟಾಪ್ರಾಣಕರಃ ಪ್ರಭುಃ।।

ಶಲ್ಮಲೇ! ಭುವಿಯಲ್ಲಿ ಯಾವ ಜೀವಿಯೂ ಸ್ವಲ್ಪವಾದರೂ ಚಲಿಸುತ್ತಿದೆ ಎಂದರೆ ಆ ಚಲನಾಶಕ್ತಿ ಮತ್ತು ಜೀವವನ್ನು ನೀಡುವವನು ಸರ್ವತ್ರ ಸಾಮರ್ಥ್ಯಶಾಲೀ ಪ್ರಭು ಭಗವಾನ್ ವಾಯುವೇ ಆಗಿದ್ದಾನೆ.

12150030a ಏಷ ಚೇಷ್ಟಯತೇ ಸಮ್ಯಕ್ ಪ್ರಾಣಿನಃ ಸಮ್ಯಗಾಯತಃ।
12150030c ಅಸಮ್ಯಗಾಯತೋ ಭೂಯಶ್ಚೇಷ್ಟತೇ ವಿಕೃತೋ ನೃಷು।।

ಇವನು ಸರಿಯಾಗಿ ಪ್ರಾಣವೇ ಮೊದಲಾದ ರೂಪಗಳಲ್ಲಿ ವಿಸ್ತರಿತನಾದಾಗ ಸಮಸ್ತ ಪ್ರಾಣಿಗಳಲ್ಲಿಯೂ ಚಲನೆಯುಂಟಾಗುತ್ತದೆ ಮತ್ತು ಇವನು ಸರಿಯಾಗಿ ಕೆಲಸಮಾಡದಿದ್ದರೆ ಪ್ರಾಣಿಗಳ ಶರೀರದಲ್ಲಿ ವಿಕೃತಿಯುಂಟಾಗುತ್ತದೆ.

12150031a ಸ ತ್ವಮೇವಂವಿಧಂ ವಾಯುಂ ಸರ್ವಸತ್ತ್ವಭೃತಾಂ ವರಮ್।
12150031c ನ ಪೂಜಯಸಿ ಪೂಜ್ಯಂ ತಂ ಕಿಮನ್ಯದ್ಬುದ್ಧಿಲಾಘವಾತ್।।

ಸರ್ವಸತ್ತ್ವಗಳಲ್ಲಿಯೇ ಶ್ರೇಷ್ಠ ಪೂಜ್ಯ ವಾಯುವನ್ನು ಈ ರೀತಿ ನೀನು ಗೌರವಿಸುವುದಿಲ್ಲವೆಂದಾದರೆ ಇದು ನಿನ್ನ ಬುದ್ಧಿಯ ಲಘುತ್ವವಲ್ಲದೇ ಇನ್ನೇನು?

12150032a ಅಸಾರಶ್ಚಾಸಿ ದುರ್ಬುದ್ಧೇ ಕೇವಲಂ ಬಹು ಭಾಷಸೇ।
12150032c ಕ್ರೋಧಾದಿಭಿರವಚ್ಚನ್ನೋ ಮಿಥ್ಯಾ ವದಸಿ ಶಲ್ಮಲೇ।।

ಶಲ್ಮಲೇ! ದುರ್ಬುದ್ಧೇ! ನೀನು ಸಾರಹೀನನು. ಕೇವಲ ಅತಿಯಾಗಿ ಮಾತನಾಡುತ್ತೀಯೆ. ಕ್ರೋಧ ಮೊದಲಾದ ದುರ್ಗುಣಗಳಿಂದ ಪ್ರೇರಿತನಾಗಿ ಸುಳ್ಳು ಹೇಳುತ್ತಿದ್ದೀಯೆ.

12150033a ಮಮ ರೋಷಃ ಸಮುತ್ಪನ್ನಸ್ತ್ವಯ್ಯೇವಂ ಸಂಪ್ರಭಾಷತಿ।
12150033c ಬ್ರವೀಮ್ಯೇಷ ಸ್ವಯಂ ವಾಯೋಸ್ತವ ದುರ್ಭಾಷಿತಂ ಬಹು।।

ನೀನು ಈ ರೀತಿ ಮಾತನಾಡುವುದರಿಂದ ನನ್ನ ಮನದಲ್ಲಿ ರೋಷವುಂಟಾಗಿದೆ. ಸ್ವಯಂ ನಾನೇ ವಾಯುವಿಗೆ ನಿನ್ನ ಈ ದುರ್ವಚನಗಳನ್ನು ತಿಳಿಸುತ್ತೇನೆ.

12150034a ಚಂದನೈಃ ಸ್ಪಂದನೈಃ7 ಶಾಲೈಃ ಸರಲೈರ್ದೇವದಾರುಭಿಃ।
12150034c ವೇತಸೈರ್ಬಂಧನೈಶ್ಚಾಪಿ ಯೇ ಚಾನ್ಯೇ ಬಲವತ್ತರಾಃ।।
12150035a ತೈಶ್ಚಾಪಿ ನೈವಂ ದುರ್ಬುದ್ಧೇ ಕ್ಷಿಪ್ತೋ ವಾಯುಃ ಕೃತಾತ್ಮಭಿಃ।
12150035c ತೇ ಹಿ ಜಾನಂತಿ ವಾಯೋಶ್ಚ ಬಲಮಾತ್ಮನ ಏವ ಚ।।
12150036a ತಸ್ಮಾತ್ತೇ ವೈ ನಮಸ್ಯಂತಿ ಶ್ವಸನಂ ದ್ರುಮಸತ್ತಮಾಃ।
12150036c ತ್ವಂ ತು ಮೋಹಾನ್ನ ಜಾನೀಷೇ ವಾಯೋರ್ಬಲಮನಂತಕಮ್8।।

ಚಂದನ, ನೆಮ್ಮಿಗಿಡ, ಶಾಲ, ಸರಲ, ದೇವದಾರು, ಬಾಗಿರುವ ಬೆತ್ತ, ಮತ್ತು ಅನ್ಯ ಬಲವತ್ತರ ಕೃತಾತ್ಮ ವೃಕ್ಷಗಳೂ ವಾಯುವನ್ನು ನಿನ್ನಂತೆ ಆಕ್ಷೇಪಿಸುವುದಿಲ್ಲ. ದುರ್ಬುದ್ಧೇ! ಅವರು ವಾಯುವಿನ ಮತ್ತು ತಮ್ಮ ಬಲವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದುದರಿಂದ ಆ ಶ್ರೇಷ್ಠ ವೃಕ್ಷಗಳು ವಾಯುದೇವನ ಎದಿರು ತಲೆಬಾಗುತ್ತಾರೆ. ನೀನಾದರೋ ಮೋಹಪರವಶನಾಗಿ ವಾಯುವಿನ ಅನಂತ ಬಲವನ್ನು ತಿಳಿದುಕೊಂಡಿಲ್ಲ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಪವನಶಾಲ್ಮಲಿಸಂವಾದೇ ಪಂಚಾಶದಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಪವನಶಾಲ್ಮಲಿಸಂವಾದ ಎನ್ನುವ ನೂರಾಐವತ್ತನೇ ಅಧ್ಯಾಯವು.


  1. ಗೀತಾ ಪ್ರೆಸ್ ನಲ್ಲಿ ಈ ಒಂದು ಅಧ್ಯಾಯವನ್ನು ಎರಡು ಅಧ್ಯಾಯಗಳನ್ನಾಗಿ ನೀಡಲಾಗಿದೆ. ೧-೧೯ ಶ್ಲೋಕಗಳು ಒಂದು ಅಧ್ಯಾಯವಾದರೆ ೨೦-೩೬ ಶ್ಲೋಕಗಳು ಇನ್ನೊಂದು ಅಧ್ಯಾಯವಾಗಿದೆ. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಯುಧಿಷ್ಠಿರನ ಪ್ರಶ್ನೆಯನ್ನೊಡಗೂಡಿದ ಈ ಮೂರು ಅಧಿಕ ಶ್ಲೋಕಗಳಿವೆ: ಯುಧಿಷ್ಠಿರ ಉವಾಚ। ಬಲಿನಃ ಪ್ರತ್ಯಮಿತ್ರಸ್ಯ ನಿತ್ಯಮಾಸನ್ನವರ್ತಿನಃ। ಉಪಕಾರಾಪಕಾರಾಭ್ಯಾಂ ಸಮರ್ಥಸ್ಯೋದ್ಯತಸ್ಯ ಚ।। ಮೋಹಾದ್ವಿಕತ್ಥನಾಮಾತ್ರೈರಸಾರೋಽಲ್ಪಬಲೋ ಲಘುಃ। ವಾಗ್ಭಿರಪ್ರತಿರೂಪಾಭಿರಭಿದ್ರುಹಾ ಪಿತಾಮಹ।। ಆತ್ಮನೋ ಬಲಮಾಸ್ಥಾಯ ಕಥಂ ವರ್ತೇತ ಮಾನವಃ। ಆಗಚ್ಛತೋಽತಿಕ್ರುದ್ಧಸ್ಯ ತಸ್ಯೋದ್ಧರಣಕಾಮ್ಯಯಾ।। ಅರ್ಥಾತ್ – ಯುಧಿಷ್ಠಿರನು ಹೇಳಿದನು: “ಬಲವಂತ, ನಿತ್ಯ ನಿಕಟವರ್ತಿ, ಉಪಕಾರ ಮತ್ತು ಅಪಕಾರಮಾಡುವುದರಲ್ಲಿ ಸಮರ್ಥ ಹಾಗೂ ನಿತ್ಯವೂ ಉದ್ಯೋಗಶೀಲ ಶತ್ರುವೆನೊಡನೆ ಯಾರಾದರೂ ಅಲ್ಪ ಬಲಶಾಲೀ, ಸಾರವಿಲ್ಲದ ಮತ್ತು ಎಲ್ಲ ವಿಷಯಗಳಲ್ಲಿಯೂ ಸ್ವಲ್ಪವೇ ಸಾಮರ್ಥ್ಯವಿರುವ ಮನುಷ್ಯನು ಮೋಹವಶನಾಗಿ ಜಂಬ ಕೊಚ್ಚಿಕೊಳ್ಳುತ್ತಾ ಅಯೋಗ್ಯ ಮಾತನಾಡಿ ವೈರವನ್ನು ಕಟ್ಟಿಕೊಂಡರೆ ಆ ಬಲವಾನ್ ಶತ್ರುವು ಅತ್ಯಂತ ಕುಪಿತನಾಗಿ ಆ ದುರ್ಬಲ ಮನುಷ್ಯನನ್ನು ಕಿತ್ತೊಗೆಯಲು ಆಕ್ರಮಣಿಸಿದರೆ ಆಗ ಆ ಆಕ್ರಾಂತ ಮನುಷ್ಯನು ತನ್ನದೇ ಬಲದ ಮೇಲೆ ಭರವಸೆಯನ್ನಿಟ್ಟು ಹೇಗೆ ಆ ಆಕ್ರಮಣಕಾರಿಯೊಡನೆ ವರ್ತಿಸಬೇಕು? ↩︎

  2. ಬೂರುಗದ ಮರ https://kn.wikipedia.org/s/9s9↩︎

  3. ಘರ್ಮಾರ್ತಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಶಬ್ಧವು ಸರಿಯೆಂದು ತೋರುತ್ತದೆ. ↩︎

  4. ಭಗವಾನ್ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  5. ಭಿಕ್ಷುಗಳು, ಯಾಚಕರು, ಧ್ಯಾನಪರ ಯೋಗಿಗಳು. ↩︎

  6. ಪರುಷೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  7. ಸ್ಯಂದನೈಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಈ ಶಬ್ಧವೇ ಸರಿಯಾಗಿ ತೋರುತ್ತದೆ. ಸ್ಯಂದನ ಎಂದರೆ ತಿನಿಷವೃಕ್ಷ ಅಥವಾ ನೆಮ್ಮಿ ಗಿಡ. ↩︎

  8. ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಶ್ಲೋಕಾರ್ಧವಿದೆ: ಏವಂ ತಸ್ಮಾದ್ಗಮಿಷ್ಯಾಮಿ ಸಕಾಶಂ ಮಾತರಿಷ್ವನಃ।। ↩︎