149: ಗೃಧ್ರಗೋಮಾಯುಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 149

ಸಾರ

ಮೃತನಾದವನ ಪುನರ್ಜೀವನ ಪ್ರಾಪ್ತಿಯ ವಿಷಯದಲ್ಲಿ ಓರ್ವ ಬಾಲಕನು ಜೀವಿತನಾಗುವ ಕಥೆ; ಅಲ್ಲಿ ಹದ್ದು ಮತ್ತು ನರಿಯ ಸಂವಾದ (1-117).

12149001 1ಭೀಷ್ಮ ಉವಾಚ। 12149001a ಶೃಣು ಪಾರ್ಥ ಯಥಾವೃತ್ತಮಿತಿಹಾಸಂ ಪುರಾತನಮ್।
12149001c ಗೃಧ್ರಜಂಬುಕಸಂವಾದಂ ಯೋ ವೃತ್ತೋ ವೈದಿಶೇ2 ಪುರಾ।।

ಭೀಷ್ಮನು ಹೇಳಿದನು: “ಪಾರ್ಥ! ಹಿಂದೆ ವಿದಿಶದಲ್ಲಿ ನಡೆದ ಪುರಾತನ ಇತಿಹಾಸವಾದ ಹದ್ದು ಮತ್ತು ನರಿಯ ಸಂವಾದವನ್ನು ನಡೆದಂತೆ ಕೇಳು.

12149002a 3ದುಃಖಿತಾಃ ಕೇ ಚಿದಾದಾಯ ಬಾಲಮಪ್ರಾಪ್ತಯೌವನಮ್। 12149002c ಕುಲಸರ್ವಸ್ವಭೂತಂ ವೈ ರುದಂತಃ ಶೋಕವಿಹ್ವಲಾಃ।।

ಇನ್ನೂ ಯೌವನವನ್ನು ಪಡೆಯದಿದ್ದ ಕುಲದ ಸರ್ವಸ್ವವಾಗಿದ್ದ ಬಾಲಕನನ್ನು ಎತ್ತಿಕೊಂಡು ಅವನ ಕೆಲವು ದುಃಖಿತ ಜನರು ಶೋಕವಿಹ್ವಲರಾಗಿ ರೋದಿಸುತ್ತಿದ್ದರು.

12149003a ಬಾಲಂ ಮೃತಂ ಗೃಹೀತ್ವಾಥ ಶ್ಮಶಾನಾಭಿಮುಖಾಃ ಸ್ಥಿತಾಃ।
12149003c ಅಂಕೇನಾಂಕಂ ಚ ಸಂಕ್ರಮ್ಯ ರುರುದುರ್ಭೂತಲೇ ತದಾ4।।

ಆ ಮೃತ ಬಾಲಕನನ್ನು ಎತ್ತಿಕೊಂಡು ಅವರು ಶ್ಮಶಾನದ ಕಡೆ ಹೊರಟರು. ಅಲ್ಲಿ ಹೋಗಿ ಅವನನ್ನು ನೆಲದ ಮೇಲೆ ಇಟ್ಟುಕೊಂಡು ಅತ್ಯಂತ ದುಃಖಿತರಾಗಿ ರೋದಿಸಿದರು.

12149004a 5ತೇಷಾಂ ರುದಿತಶಬ್ದೇನ ಗೃಧ್ರೋಽಭ್ಯೇತ್ಯ ವಚೋಽಬ್ರವೀತ್। 12149004c ಏಕಾತ್ಮಕಮಿಮಂ ಲೋಕೇ ತ್ಯಕ್ತ್ವಾ ಗಚ್ಚತ ಮಾಚಿರಮ್।।
12149005a ಇಹ ಪುಂಸಾಂ ಸಹಸ್ರಾಣಿ ಸ್ತ್ರೀಸಹಸ್ರಾಣಿ ಚೈವ ಹಿ।
12149005c ಸಮಾನೀತಾನಿ ಕಾಲೇನ ಕಿಂ ತೇ ವೈ ಜಾತ್ವಬಾಂಧವಾಃ।।

ಅವರ ರೋದನ ಶಬ್ಧವನ್ನು ಕೇಳಿ ಅಲ್ಲಿಗೆ ಬಂದ ಹದ್ದೊಂದು ಅವರಿಗೆ ಈ ಮಾತನ್ನಾಡಿತು: “ಈ ಲೋಕದಲ್ಲಿ ನಿಮಗಿರುವ ಈ ಒಬ್ಬನೇ ಮಗನನ್ನು ಇಲ್ಲಿ ಬಿಟ್ಟು ಹೊರಟು ಹೋಗಿರಿ. ತಡಮಾಡಬೇಡಿ. ಇಲ್ಲಿಗೆ ಕಾಲನು ಸಹಸ್ರಾರು ಸ್ತ್ರೀ-ಪುರುಷರನ್ನು ತರುತ್ತಾನೆ ಮತ್ತು ಅವರೆಲ್ಲರ ಬಂಧು ಬಾಂಧವರೂ ಅವರನ್ನು ಇಲ್ಲಿಯೇ ಬಿಟ್ಟು ಹೊರಟು ಹೋಗುತ್ತಾರೆ.

12149006a ಸಂಪಶ್ಯತ ಜಗತ್ಸರ್ವಂ ಸುಖದುಃಖೈರಧಿಷ್ಠಿತಮ್।
12149006c ಸಂಯೋಗೋ ವಿಪ್ರಯೋಗಶ್ಚ ಪರ್ಯಾಯೇಣೋಪಲಭ್ಯತೇ।।

ಈ ಜಗತ್ತೆಲ್ಲವೂ ಸುಖ-ದುಃಖಗಳಿಂದ ವ್ಯಾಪ್ತವಾಗಿದೆ ನೋಡಿ! ಇಲ್ಲಿ ಎಲ್ಲರ ಸಂಯೋಗ-ವಿಯೋಗಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ.

12149007a ಗೃಹೀತ್ವಾ ಯೇ ಚ ಗಚ್ಚಂತಿ ಯೇಽನುಯಾಂತಿ ಚ ತಾನ್ಮೃತಾನ್।
12149007c ತೇಽಪ್ಯಾಯುಷಃ ಪ್ರಮಾಣೇನ ಸ್ವೇನ ಗಚ್ಚಂತಿ ಜಂತವಃ।।

ಮೃತರನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗುವವರು ಮತ್ತು ಶ್ಮಶಾನಕ್ಕೆ ತೆಗೆದುಕೊಂಡು ಹೋಗದೇ ಇರುವವರು ಎಲ್ಲ ಜೀವಜಂತುಗಳೂ ತಮ್ಮ ಆಯಸ್ಸು ಪೂರ್ಣವಾದ ಕೂಡಲೇ ಈ ಜಗತ್ತಿನಿಂದ ಹೊರಟು ಹೋಗುತ್ತಾರೆ.

12149008a ಅಲಂ ಸ್ಥಿತ್ವಾ ಶ್ಮಶಾನೇಽಸ್ಮಿನ್ ಗೃಧ್ರಗೋಮಾಯುಸಂಕುಲೇ।
12149008c ಕಂಕಾಲಬಹುಲೇ ಘೋರೇ ಸರ್ವಪ್ರಾಣಿಭಯಂಕರೇ।।

ಹದ್ದು-ನರಿಗಳ ಸಂಕುಲಗಳಿಂದ ಕೂಡಿರುವ, ಸರ್ವಪ್ರಾಣಿಗಳಿಗೂ ಭಯಂಕರವಾಗಿರುವ ಮತ್ತು ಅನೇಕ ಕಂಕಾಲಗಳಿರುವ ಈ ಘೋರ ಶ್ಮಶಾನದಲ್ಲಿ ನಿಂತುಕೊಳ್ಳಬೇಡಿ.

12149009a ನ ಪುನರ್ಜೀವಿತಃ ಕಶ್ಚಿತ್ಕಾಲಧರ್ಮಮುಪಾಗತಃ।
12149009c ಪ್ರಿಯೋ ವಾ ಯದಿ ವಾ ದ್ವೇಷ್ಯಃ ಪ್ರಾಣಿನಾಂ ಗತಿರೀದೃಶೀ।।

ಪ್ರಿಯನಾಗಿರಲಿ ಅಥವಾ ದ್ವೇಷಿಯಾಗಿರಲಿ, ಕಾಲಧರ್ಮವನ್ನು ಸೇರಿದವರು ಪುನಃ ಜೀವಿತರಾಗುವುದಿಲ್ಲ. ಎಲ್ಲ ಪ್ರಾಣಿಗಳಿಗೂ ಇದೇ ಗತಿ.

12149010a ಸರ್ವೇಣ ಖಲು ಮರ್ತವ್ಯಂ ಮರ್ತ್ಯಲೋಕೇ ಪ್ರಸೂಯತಾ।
12149010c ಕೃತಾಂತವಿಹಿತೇ ಮಾರ್ಗೇ ಕೋ ಮೃತಂ ಜೀವಯಿಷ್ಯತಿ।।

ಈ ಮರ್ತ್ಯಲೋಕದಲ್ಲಿ ಹುಟ್ಟಿದ ಎಲ್ಲರೂ ಸಾಯಲೇಬೇಕಲ್ಲವೇ? ಕೃತಾಂತನು ವಿಧಿಸಿದ ಮಾರ್ಗದಲ್ಲಿ ಹೋದ ಮೃತನನ್ನು ಯಾರು ತಾನೇ ಜೀವಿತಗೊಳಿಸಬಲ್ಲರು?

12149011a ಕರ್ಮಾಂತವಿಹಿತೇ ಲೋಕೇ ಚಾಸ್ತಂ ಗಚ್ಚತಿ ಭಾಸ್ಕರೇ।
12149011c ಗಮ್ಯತಾಂ ಸ್ವಮಧಿಷ್ಠಾನಂ ಸುತಸ್ನೇಹಂ ವಿಸೃಜ್ಯ ವೈ।।

ಭಾಸ್ಕರನು ಅಸ್ತನಾಗುತ್ತಿದ್ದಾನೆ. ಜನರು ತಮ್ಮ ದಿನದ ಕೆಲಸಗಳನ್ನು ಮುಗಿಸಿ ನಿವೃತ್ತರಾಗುತ್ತಿದ್ದಾರೆ. ನೀವೂ ಕೂಡ ನಿಮ್ಮ ಸುತಸ್ನೇಹವನ್ನು ಬಿಟ್ಟು ನಿಮ್ಮ ಮನೆಗಳಿಗೆ ಹೊರಟು ಹೋಗಿರಿ.”

12149012a ತತೋ ಗೃಧ್ರವಚಃ ಶ್ರುತ್ವಾ ವಿಕ್ರೋಶಂತಸ್ತದಾ ನೃಪ।
12149012c ಬಾಂಧವಾಸ್ತೇಽಭ್ಯಗಚ್ಚಂತ ಪುತ್ರಮುತ್ಸೃಜ್ಯ ಭೂತಲೇ।।

ನೃಪ! ಹದ್ದಿನ ಆ ಮಾತನ್ನು ಕೇಳಿ ಜೋರಾಗಿ ಅಳುತ್ತಾ ಆ ಬಾಂಧವರು ಪುತ್ರನನ್ನು ನೆಲದ ಮೇಲೆಯೇ ಬಿಟ್ಟು ಹೊರಟು ಹೋಗಲು ಸಿದ್ಧರಾದರು.

12149013a 6ವಿನಿಶ್ಚಿತ್ಯಾಥ ಚ ತತಃ ಸಂತ್ಯಜಂತಃ ಸ್ವಮಾತ್ಮಜಮ್। 12149013c ನಿರಾಶಾ ಜೀವಿತೇ ತಸ್ಯ ಮಾರ್ಗಮಾರುಹ್ಯ ಧಿಷ್ಠಿತಾಃ।।

ತಮ್ಮ ಆ ಮಗನ ಜೀವಿತದಲ್ಲಿ ನಿರಾಶರಾಗಿ ದುಃಖಿತರಾಗಿ ಅಲ್ಲಿಂದ ಹೊರಡಲು ನಿಶ್ಚಯಿಸಿ ಹೊರಟರು.

12149014a ಧ್ವಾಂಕ್ಷಭ್ರಸಮವರ್ಣಸ್ತು7 ಬಿಲಾನ್ನಿಃಸೃತ್ಯ ಜಂಬುಕಃ।
12149014c ಗಚ್ಚಮಾನಾನ್ಸ್ಮ ತಾನಾಹ ನಿರ್ಘೃಣಾಃ ಖಲು ಮಾನವಾಃ।।

ಆಗ ಮೋಡದ ಬಣ್ಣದ ನರಿಯೊಂದು ತನ್ನ ಬಿಲದಿಂದ ಹೊರಬಂದು ಹೊರಡುತ್ತಿದ್ದ ಅವರಿಗೆ ಹೇಳಿತು: “ಮನುಷ್ಯರೇ! ನೀವೆಷ್ಟು ನಿರ್ದಯಿಗಳು!

12149015a ಆದಿತ್ಯೋಽಯಂ ಸ್ಥಿತೋ ಮೂಢಾಃ ಸ್ನೇಹಂ ಕುರುತ ಮಾ ಭಯಮ್।
12149015c ಬಹುರೂಪೋ ಮುಹೂರ್ತಶ್ಚ ಜೀವೇತಾಪಿ ಕದಾ ಚನ।।

ಮೂಢರೇ! ಸೂರ್ಯನು ಇನ್ನೂ ಮುಳುಗಿಲ್ಲ! ಭಯಪಡಬೇಡಿ. ಮಗುವಿಗೆ ಸ್ನೇಹವನ್ನು ತೋರಿಸಿ. ಅನೇಕ ಪ್ರಕಾರದ ಮುಹೂರ್ತಗಳು ಬರುತ್ತಿರುತ್ತವೆ. ಯಾವುದೋ ಶುಭ ಗಳಿಗೆಯಲ್ಲಿ ಇವನು ಜೀವಿತನೂ ಆಗಬಹುದು.

12149016a ಯೂಯಂ ಭೂಮೌ ವಿನಿಕ್ಷಿಪ್ಯ ಪುತ್ರಸ್ನೇಹವಿನಾಕೃತಾಃ।
12149016c ಶ್ಮಶಾನೇ ಪುತ್ರಮುತ್ಸೃಜ್ಯ ಕಸ್ಮಾದ್ಗಚ್ಚಥ ನಿರ್ಘೃಣಾಃ।।

ನೀವು ಎಂಥಹ ನಿರ್ದಯಿಗಳು! ಪುತ್ರಸ್ನೇಹವನ್ನು ತ್ಯಜಿಸಿ ಈ ಪುತ್ರನನ್ನು ಶ್ಮಶಾನ ಭೂಮಿಗೆ ತಂದು ಹಾಕಿಬಿಟ್ಟಿರಿ! ಇವನನ್ನು ಇಲ್ಲಿ ಬಿಟ್ಟು ಎಲ್ಲಿ ಹೋಗುತ್ತಿದ್ದೀರಿ?

12149017a ನ ವೋಽಸ್ತ್ಯಸ್ಮಿನ್ಸುತೇ ಸ್ನೇಹೋ ಬಾಲೇ ಮಧುರಭಾಷಿಣಿ।
12149017c ಯಸ್ಯ ಭಾಷಿತಮಾತ್ರೇಣ ಪ್ರಸಾದಮುಪಗಚ್ಚಥ।।

ಈ ಮಧುರ ಭಾಷಿಣೀ ಬಾಲಕನ ಮೇಲೆ ನಿಮಗೆ ಸ್ವಲ್ಪವೂ ಸುತಸ್ನೇಹವಿಲ್ಲವೆಂದು ತೋರುತ್ತಿದೆ. ಕೇವಲ ಯಾರ ತೊದಲು ಮಾತಿನಿಂದಲೇ ನೀವು ಸಂತೋಷಪಡುತ್ತಿದ್ದರೋ ಆ ಬಾಲಕನೇ ಇವನಲ್ಲವೇ?

12149018a ನ ಪಶ್ಯಥ8 ಸುತಸ್ನೇಹಂ ಯಾದೃಶಃ ಪಶುಪಕ್ಷಿಣಾಮ್।
12149018c ನ ಯೇಷಾಂ ಧಾರಯಿತ್ವಾ ತಾನ್ ಕಶ್ಚಿದಸ್ತಿ ಫಲಾಗಮಃ।।
12149019a ಚತುಷ್ಪಾತ್ ಪಕ್ಷಿಕೀಟಾನಾಂ ಪ್ರಾಣಿನಾಂ ಸ್ನೇಹಸಂಗಿನಾಮ್।
12149019c ಪರಲೋಕಗತಿಸ್ಥಾನಾಂ ಮುನಿಯಜ್ಞಕ್ರಿಯಾ ಇವ।।

ಪಶುಪಕ್ಷಿಗಳಲ್ಲಿ ಯಾವರೀತಿಯ ಸುತಸ್ನೇಹವಿದೆಯೆಂಬುದನ್ನು ನೀವು ನೋಡಿಲ್ಲವೇ? ಪುತ್ರಸ್ನೇಹವನ್ನು ಧಾರಣೆಮಾಡಿರುವ ಅವರಿಗೆ ಯಾವ ಫಲವೂ ದೊರಕುವುದಿಲ್ಲ. ಯಜ್ಞಕ್ರಿಯೆಗಳನ್ನು ಮಾಡುವ ಮುನಿಗಳಿಗೆ ಪರಲೋಕದಲ್ಲಿ ದೊರಕುವ ಫಲವು ಸ್ನೇಹಸಂಗಿಗಳಾದ ಪಕ್ಷಿಕೀಟಾದಿ ಪ್ರಾಣಿಗಳಿಗೆ ದೊರೆಯಲಾರದು.

12149020a ತೇಷಾಂ ಪುತ್ರಾಭಿರಾಮಾಣಾಮಿಹ ಲೋಕೇ ಪರತ್ರ ಚ।
12149020c ನ ಗುಣೋ ದೃಶ್ಯತೇ ಕಶ್ಚಿತ್ ಪ್ರಜಾಃ ಸಂಧಾರಯಂತಿ ಚ।।

ಪುತ್ರರಲ್ಲಿ ಸ್ನೇಹವನ್ನಿಟ್ಟುಕೊಳ್ಳುವ ಆ ಪಶುಪಕ್ಷಿಗಳಿಗೆ ಇಹ ಮತ್ತು ಪರಲೋಕದಲ್ಲಿ ಸಂತಾನ ಪಾಲನೆಯ ಯಾವ ಲಾಭವೂ ಕಾಣುವುದಿಲ್ಲ. ಆದರೂ ಅವು ತಮ್ಮ ಸಂತಾನಗಳನ್ನು ರಕ್ಷಿಸುತ್ತವೆ.

12149021a ಅಪಶ್ಯತಾಂ ಪ್ರಿಯಾನ್ ಪುತ್ರಾನ್ನೈಷಾಂ ಶೋಕೋಽನುತಿಷ್ಠತಿ।
12149021c ನ ಚ ಪುಷ್ಣಂತಿ ಸಂವೃದ್ಧಾಸ್ತೇ ಮಾತಾಪಿತರೌ ಕ್ವ ಚಿತ್।।

ದೊಡ್ಡವರಾದ ನಂತರ ತಮ್ಮ ಮಾತಾ-ಪಿತೃಗಳ ಪಾಲನ-ಪೋಷಣೆಯನ್ನು ಮಾಡದೇ ಇದ್ದರೂ ಕೂಡ ಅವರು ತಮ್ಮ ಪ್ರೀತಿಯ ಮಕ್ಕಳನ್ನು ನೋಡದೇ ಇದ್ದರೆ ಅವರ ಶೋಕವು ನಿಲ್ಲುವುದಿಲ್ಲ.

12149022a ಮಾನುಷಾಣಾಂ ಕುತಃ ಸ್ನೇಹೋ ಯೇಷಾಂ ಶೋಕೋ ಭವಿಷ್ಯತಿ।
12149022c ಇಮಂ ಕುಲಕರಂ ಪುತ್ರಂ ಕಥಂ ತ್ಯಕ್ತ್ವಾ ಗಮಿಷ್ಯಥ।।

ಆದರೆ ಮನುಷ್ಯರಲ್ಲಿ ಇಷ್ಟೊಂದು ಸ್ನೇಹವು ಎಲ್ಲಿಂದ ಎಂದು ಅವರಿಗೆ ಅಷ್ಟೊಂದು ಶೋಕವುಂಟಾಗುತ್ತದೆ? ಇವನು ನಿಮ್ಮ ಕುಲಕರ ಪುತ್ರನು. ಇವನನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತಿದ್ದೀರಿ?

12149023a ಚಿರಂ ಮುಂಚತ ಬಾಷ್ಪಂ ಚ ಚಿರಂ ಸ್ನೇಹೇನ ಪಶ್ಯತ।
12149023c ಏವಂವಿಧಾನಿ ಹೀಷ್ಟಾನಿ ದುಸ್ತ್ಯಜಾನಿ ವಿಶೇಷತಃ।।

ಇವನಿಗಾಗಿ ಇನ್ನೂ ಸ್ವಲ್ಪ ಹೊತ್ತು ಕಣ್ಣೀರು ಸುರಿಸಿರಿ ಮತ್ತು ಇನ್ನೂ ಸ್ವಲ್ಪ ಹೊತ್ತು ಇವನನ್ನು ಸ್ನೇಹದಿಂದ ನೋಡಿರಿ. ಏಕೆಂದರೆ ಇಂತಹ ಪ್ರಿಯ ಸಂತಾನವನ್ನು ಬಿಟ್ಟು ಹೋಗುವುದು ಅತ್ಯಂತ ಕಷ್ಟವಾಗುತ್ತದೆ.

12149024a ಕ್ಷೀಣಸ್ಯಾರ್ಥಾಭಿಯುಕ್ತಸ್ಯ ಶ್ಮಶಾನಾಭಿಮುಖಸ್ಯ ಚ।
12149024c ಬಾಂಧವಾ ಯತ್ರ ತಿಷ್ಠಂತಿ ತತ್ರಾನ್ಯೋ ನಾವತಿಷ್ಠತೇ।।

ಶರೀರವು ಕ್ಷೀಣವಾಗುತ್ತಿರುವ, ದರಿದ್ರನಾಗಿರುವ ಮತ್ತು ಶ್ಮಶಾನಾಭಿಮುಖನಾಗಿರುವವನ ಬಳಿ ಅವನ ಬಾಂಧವರು ನಿಂತುಕೊಳ್ಳುತ್ತಾರೆಯೇ ಹೊರತು ಬೇರೆ ಯಾರೂ ಅಲ್ಲಿರುವುದಿಲ್ಲ.

12149025a ಸರ್ವಸ್ಯ ದಯಿತಾಃ ಪ್ರಾಣಾಃ ಸರ್ವಃ ಸ್ನೇಹಂ ಚ ವಿಂದತಿ।
12149025c ತಿರ್ಯಗ್ಯೋನಿಷ್ವಪಿ ಸತಾಂ ಸ್ನೇಹಂ ಪಶ್ಯತ ಯಾದೃಶಮ್।।

ಸರ್ವರಿಗೂ ಅವರವರ ಪ್ರಾಣಗಳು ಇಷ್ಟವಾಗಿರುತ್ತವೆ ಮತ್ತು ಎಲ್ಲರೂ ಇತರರ ಸ್ನೇಹವನ್ನು ಬಯಸುತ್ತಾರೆ. ತಿರ್ಯಗ್ಯೋನಿಗಳಲ್ಲಿರುವ ಪ್ರಾಣಿಗಳಲ್ಲಿಯೂ ತಮ್ಮ ಸಂತಾನಗಳ ಮೇಲೆ ಎಂತಹ ಪ್ರೇಮವಿರುತ್ತದೆ ಎನ್ನುವುದನ್ನು ನೋಡಿರಿ.

12149026a ತ್ಯಕ್ತ್ವಾ ಕಥಂ ಗಚ್ಚೇಥೇಮಂ ಪದ್ಮಲೋಲಾಯತಾಕ್ಷಕಮ್।
12149026c ಯಥಾ ನವೋದ್ವಾಹಕೃತಂ ಸ್ನಾನಮಾಲ್ಯವಿಭೂಷಿತಮ್।।

ಸ್ನಾನ-ಮಾಲ್ಯಾ ವಿಭೂಷಿತನಾಗಿ ಹೊಸ ಮದುಮಗನಂತೆ ಕಾಣುವ ಈ ಪದ್ಮಲೋಲಾಯತಾಕ್ಷ9ನನ್ನು ಬಿಟ್ಟು ಹೇಗೆ ತಾನೇ ಹೋಗುತ್ತಿರುವಿರಿ?””

12149027 ಭೀಷ್ಮ ಉವಾಚ ।
12149027a ಜಂಬುಕಸ್ಯ ವಚಃ ಶ್ರುತ್ವಾ ಕೃಪಣಂ ಪರಿದೇವತಃ।
12149027c ನ್ಯವರ್ತಂತ ತದಾ ಸರ್ವೇ ಶವಾರ್ಥಂ ತೇ ಸ್ಮ ಮಾನುಷಾಃ।।

ಭೀಷ್ಮನು ಹೇಳಿದನು: “ಕೃಪಣನಾಗಿ ಪರಿವೇದಿಸುತ್ತಿದ್ದ ನರಿಯ ಆ ಮಾತನ್ನು ಕೇಳಿ ಆ ಎಲ್ಲ ಮನುಷ್ಯರೂ ಶವದ ಬಳಿ ಹಿಂದಿರುಗಿದರು.

12149028 ಗೃಧ್ರ ಉವಾಚ ।
12149028a ಅಹೋ ಧಿಕ್ಸುನೃಶಂಸೇನ ಜಂಬುಕೇನಾಲ್ಪಮೇಧಸಾ।
12149028c ಕ್ಷುದ್ರೇಣೋಕ್ತಾ ಹೀನಸತ್ತ್ವಾ ಮಾನುಷಾಃ ಕಿಂ ನಿವರ್ತಥ।।

ಹದ್ದು ಹೇಳಿತು: “ಅಯ್ಯೋ! ಈ ಕ್ಷುದ್ರ ಅಲ್ಪಬುದ್ಧಿಯ ಕ್ರೂರ ನರಿಗೆ ಧಿಕ್ಕಾರ! ಇದರ ಮಾತನ್ನು ಕೇಳಿ ಹೀನಸತ್ತ್ವರಾದ ಈ ಮನುಷ್ಯರು ಹಿಂದಿರುಗಿಬಿಟ್ಟರಲ್ಲಾ!

12149029a ಪಂಚಭೂತಪರಿತ್ಯಕ್ತಂ ಶೂನ್ಯಂ ಕಾಷ್ಠತ್ವಮಾಗತಮ್।
12149029c ಕಸ್ಮಾಚ್ಚೋಚಥ ನಿಶ್ಚೇಷ್ಟಮಾತ್ಮಾನಂ ಕಿಂ ನ ಶೋಚಥ।।

ಪಂಚಭೂತಗಳಿಂದ ಪರಿತ್ಯಕ್ತನಾದ ಇವನು ಒಣ ಕಟ್ಟಿಗೆಯಂತಾಗಿಬಿಟ್ಟಿದ್ದಾನೆ. ನೀವು ಇವನಿಗಾಗಿ ಏಕೆ ಶೋಕಿಸುತ್ತಿರುವಿರಿ? ಒಂದು ದಿನ ನಿಮ್ಮದೂ ಇದೇ ಅವಸ್ಥೆಯಾಗುವುದು. ನಿಮ್ಮ ಕುರಿತು ಏಕೆ ಶೋಕಿಸುವುದಿಲ್ಲ?

12149030a ತಪಃ ಕುರುತ ವೈ ತೀವ್ರಂ ಮುಚ್ಯಧ್ವಂ ಯೇನ ಕಿಲ್ಬಿಷಾತ್।
12149030c ತಪಸಾ ಲಭ್ಯತೇ ಸರ್ವಂ ವಿಲಾಪಃ ಕಿಂ ಕರಿಷ್ಯತಿ।।

ತೀವ್ರ ತಪಸ್ಸನ್ನಾಚರಿಸಿರಿ. ಅದರಿಂದ ನೀವು ಪಾಪಮುಕ್ತರಾಗುತ್ತೀರಿ. ತಪಸ್ಸಿನಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು. ಏಕೆ ವಿಲಪಿಸುತ್ತಿದ್ದೀರಿ?

12149031a ಅನಿಷ್ಟಾನಿ ಚ ಭಾಗ್ಯಾನಿ ಜಾನೀತ ಸಹ ಮೂರ್ತಿಭಿಃ।
12149031c ಯೇನ ಗಚ್ಚತಿ ಲೋಕೋಽಯಂ10 ದತ್ತ್ವಾ ಶೋಕಮನಂತಕಮ್।।

ಅನಿಷ್ಟಗಳು ಮತ್ತು ಭಾಗ್ಯಗಳು ಶರೀದೊಂದಿಗೇ ಹುಟ್ಟುತ್ತವೆ. ಕೊನೆಯಿಲ್ಲದ ಶೋಕವನ್ನಿತ್ತು ಇವನು ಈ ಲೋಕವನ್ನು ಬಿಟ್ಟು ಹೊರಟುಹೋಗಿದ್ದಾನೆ.

12149032a ಧನಂ ಗಾಶ್ಚ ಸುವರ್ಣಂ ಚ ಮಣಿರತ್ನಮಥಾಪಿ ಚ।
12149032c ಅಪತ್ಯಂ ಚ ತಪೋಮೂಲಂ ತಪೋಯೋಗಾಚ್ಚ ಲಭ್ಯತೇ।।

ಧನ, ಗೋವುಗಳು, ಸುವರ್ಣ, ಮಣಿ-ರತ್ನಗಳು ಮತ್ತು ಸಂತಾನ ಇವುಗಳಿಗೆ ತಪಸ್ಸೇ ಮೂಲವು. ತಪೋಯೋಗದಿಂದಲೇ ಇವು ದೊರೆಯುತ್ತವೆ.

12149033a ಯಥಾಕೃತಾ ಚ ಭೂತೇಷು ಪ್ರಾಪ್ಯತೇ ಸುಖದುಃಖತಾ।
12149033c ಗೃಹೀತ್ವಾ ಜಾಯತೇ ಜಂತುರ್ದುಃಖಾನಿ ಚ ಸುಖಾನಿ ಚ।।

ಹಿಂದೆ ಮಾಡಿದ ಕರ್ಮಗಳ ಅನುಸಾರ ಸುಖ-ದುಃಖಗಳನ್ನು ಪಡೆದುಕೊಂಡೇ ಜೀವಿಯು ಹುಟ್ಟುತ್ತಾನೆ ಮತ್ತು ತನ್ನ ಕರ್ಮಾನುಸಾರ ಸುಖ-ದುಃಖಗಳನ್ನು ಅನುಭವಿಸಿ ಹೊರಟುಹೋಗುತ್ತಾನೆ.

12149034a ನ ಕರ್ಮಣಾ ಪಿತುಃ ಪುತ್ರಃ ಪಿತಾ ವಾ ಪುತ್ರಕರ್ಮಣಾ।
12149034c ಮಾರ್ಗೇಣಾನ್ಯೇನ ಗಚ್ಚಂತಿ ತ್ಯಕ್ತ್ವಾ ಸುಕೃತದುಷ್ಕೃತೇ।।

ತಂದೆಯ ಕರ್ಮದೊಂದಿಗೆ ಮಗನಿಗೆ ಮತ್ತು ಮಗನ ಕರ್ಮದೊಂದಿಗೆ ತಂದೆಯ ಯಾವ ಸಂಬಂಧವೂ ಇಲ್ಲ. ತಮ್ಮ ತಮ್ಮ ಪಾಪ-ಪುಣ್ಯಗಳ ಬಂಧನದಲ್ಲಿ ಬಂಧಿಸಲ್ಪಟ್ಟು ಜೀವಗಳು ಕರ್ಮಾನುಸಾರ ವಿಭಿನ್ನ ಮಾರ್ಗಗಳಲ್ಲಿ ಹೋಗುತ್ತಿರುತ್ತವೆ.

12149035a ಧರ್ಮಂ ಚರತ ಯತ್ನೇನ ತಥಾಧರ್ಮಾನ್ನಿವರ್ತತ11
12149035c ವರ್ತಧ್ವಂ ಚ ಯಥಾಕಾಲಂ ದೈವತೇಷು ದ್ವಿಜೇಷು ಚ।।

ನೀವು ಪ್ರಯತ್ನಪಟ್ಟು ಧರ್ಮದಲ್ಲಿಯೇ ನಡೆದುಕೊಳ್ಳಿ. ಅಧರ್ಮದಿಂದ ಹಿಂದೆಸರಿಯಿರಿ. ದೇವತೆಗಳು ಮತ್ತು ದ್ವಿಜರ ಸೇವೆಯಲ್ಲಿ ಯಥಾಕಾಲ ತತ್ಪರರಾಗಿರಿ.

12149036a ಶೋಕಂ ತ್ಯಜತ ದೈನ್ಯಂ ಚ ಸುತಸ್ನೇಹಾನ್ನಿವರ್ತತ।
12149036c ತ್ಯಜ್ಯತಾಮಯಮಾಕಾಶೇ ತತಃ ಶೀಘ್ರಂ ನಿವರ್ತತ।।

ಶೋಕ ಮತ್ತು ದೀನತೆಗಳನ್ನು ತ್ಯಜಿಸಿ ಸುತಸ್ನೇಹದಿಂದ ನಿವೃತ್ತರಾಗಿರಿ. ಇವನನ್ನು ಇದೇ ಶೂನ್ಯ ಸ್ಥಳದಲ್ಲಿ ಬಿಟ್ಟು ಶೀಘ್ರವಾಗಿ ಹಿಂದೆಹೋಗಿ.

12149037a ಯತ್ಕರೋತಿ ಶುಭಂ ಕರ್ಮ ತಥಾಧರ್ಮಂ12 ಸುದಾರುಣಮ್।
12149037c ತತ್ಕರ್ತೈವ ಸಮಶ್ನಾತಿ ಬಾಂಧವಾನಾಂ ಕಿಮತ್ರ ಹಿ।।

ಶುಭ ಮತ್ತು ದಾರುಣ ಕರ್ಮಗಳನ್ನು ಮಾಡಿದರೆ ಅದರ ಫಲವನ್ನು ಕರ್ಮವನ್ನು ಮಾಡಿದವನೇ ಅನುಭವಿಸುತ್ತಾನೆ. ಅದರಲ್ಲಿ ಬಾಂಧವರೇನು ಮಾಡಬಲ್ಲರು?

12149038a ಇಹ ತ್ಯಕ್ತ್ವಾ ನ ತಿಷ್ಠಂತಿ ಬಾಂಧವಾ ಬಾಂಧವಂ ಪ್ರಿಯಮ್।
12149038c ಸ್ನೇಹಮುತ್ಸೃಜ್ಯ ಗಚ್ಚಂತಿ ಬಾಷ್ಪಪೂರ್ಣಾವಿಲೇಕ್ಷಣಾಃ।।

ಬಾಂಧವರು ತಮ್ಮ ಪ್ರಿಯ ಬಾಂಧವನನ್ನು ಇಲ್ಲಿ ಇಟ್ಟು ಇಲ್ಲಿಯೇ ನಿಂತುಕೊಳ್ಳುವುದಿಲ್ಲ. ಸ್ನೇಹವನ್ನು ಬಿಟ್ಟು ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಹೊರಟು ಹೋಗುತ್ತಾರೆ.

12149039a ಪ್ರಾಜ್ಞೋ ವಾ ಯದಿ ವಾ ಮೂರ್ಖಃ ಸಧನೋ ನಿರ್ಧನೋಽಪಿ ವಾ।
12149039c ಸರ್ವಃ ಕಾಲವಶಂ ಯಾತಿ ಶುಭಾಶುಭಸಮನ್ವಿತಃ।।

ಪ್ರಾಜ್ಞನಾಗಿರಲಿ ಅಥವಾ ಮೂರ್ಖನಾಗಿರಲೀ, ಧನಿಕನಾಗಿರಲಿ ಅಥವಾ ದರಿದ್ರನಾಗಿರಲಿ, ಎಲ್ಲರೂ ತಮ್ಮ ಶುಭಾಶುಭ ಕರ್ಮಫಲಗಳೊಂದಿಗೆ ಕಾಲವಶರಾಗುತ್ತಾರೆ.

12149040a ಕಿಂ ಕರಿಷ್ಯಥ ಶೋಚಿತ್ವಾ ಮೃತಂ ಕಿಮನುಶೋಚಥ।
12149040c ಸರ್ವಸ್ಯ ಹಿ ಪ್ರಭುಃ ಕಾಲೋ ಧರ್ಮತಃ ಸಮದರ್ಶನಃ।।

ಶೋಕಿಸಿ ನೀವು ಏನು ಮಾಡಬಲ್ಲಿರಿ? ಈ ಮೃತನಿಗಾಗಿ ಏಕೆ ಶೋಕಿಸುತ್ತಿರುವಿರಿ? ಸರ್ವರಿಗೂ ಕಾಲನೇ ಪ್ರಭುವು ಮತ್ತು ಕಾಲನು ಧರ್ಮತಃ ಎಲ್ಲರ ಮೇಲೂ ಸಮಾನ ದೃಷ್ಟಿಯನ್ನಿಟ್ಟಿರುತ್ತಾನೆ.

12149041a ಯೌವನಸ್ಥಾಂಶ್ಚ ಬಾಲಾಂಶ್ಚ ವೃದ್ಧಾನ್ಗರ್ಭಗತಾನಪಿ।
12149041c ಸರ್ವಾನಾವಿಶತೇ ಮೃತ್ಯುರೇವಂಭೂತಮಿದಂ ಜಗತ್।।

ಈ ಮೃತ್ಯುವು ಯುವಕರನ್ನು, ಬಾಲಕರನ್ನು, ವೃದ್ಧರನ್ನು ಮತ್ತು ಗರ್ಭದಲ್ಲಿರುವವರನ್ನು ಎಲ್ಲರನ್ನೂ ಪ್ರವೇಶಿಸುತ್ತಾನೆ. ಈ ಜಗತ್ತಿನ ಎಲ್ಲ ಜೀವಿಗಳ ದಶೆಯೂ ಇದೇ ಆಗಿರುತ್ತದೆ.”

12149042 ಜಂಬುಕ ಉವಾಚ ।
12149042a ಅಹೋ ಮಂದೀಕೃತಃ ಸ್ನೇಹೋ ಗೃಧ್ರೇಣೇಹಾಲ್ಪಮೇಧಸಾ।
12149042c ಪುತ್ರಸ್ನೇಹಾಭಿಭೂತಾನಾಂ ಯುಷ್ಮಾಕಂ ಶೋಚತಾಂ ಭೃಶಮ್।।

ನರಿಯು ಹೇಳಿತು: “ಅಯ್ಯೋ! ಈ ಮಂದಬುದ್ಧಿ ಹದ್ದು ನಿಮ್ಮ ಸ್ನೇಹವನ್ನು ಶಿಥಿಲಗೊಳಿಸಿಬಿಟ್ಟಿತು! ನೀವಾದರೋ ಪುತ್ರಸ್ನೇಹದಿಂದ ತುಂಬಿದವರಾಗಿ ಅತ್ಯಂತ ಶೋಕದಿಂದಿದ್ದೀರಿ.

12149043a ಸಮೈಃ ಸಮ್ಯಕ್ ಪ್ರಯುಕ್ತೈಶ್ಚ ವಚನೈಃ ಪ್ರಶ್ರಯೋತ್ತರೈಃ।
12149043c ಯದ್ಗಚ್ಚಥ ಜಲಸ್ಥಾಯಂ ಸ್ನೇಹಮುತ್ಸೃಜ್ಯ ದುಸ್ತ್ಯಜಮ್।।

ಹದ್ದಿನ ಉತ್ತಮ ಯುಕ್ತಿಗಳಿಂದ ಕೂಡಿದ ನ್ಯಾಯಸಂಗತ ಮತ್ತು ವಿಶ್ವಾಸೋತ್ಪಾದಕ ವಚನಗಳಿಂದ ಪ್ರಭಾವಿತರಾಗಿ ಇವರೆಲ್ಲರೂ ತ್ಯಜಿಸಲು ಕಷ್ಟವಾದ ಸ್ನೇಹವನ್ನು ಪರಿತ್ಯಜಿಸಿ ಹೊರಟು ಹೋಗುತ್ತಿದ್ದಾರಲ್ಲಾ! ಇದೆಂಥಹ ಆಶ್ಚರ್ಯವು!

12149044a ಅಹೋ ಪುತ್ರವಿಯೋಗೇನ ಮೃತಶೂನ್ಯೋಪಸೇವನಾತ್।
12149044c ಕ್ರೋಶತಾಂ ವೈ ಭೃಶಂ ದುಃಖಂ ವಿವತ್ಸಾನಾಂ ಗವಾಮಿವ।।
12149045a ಅದ್ಯ ಶೋಕಂ ವಿಜಾನಾಮಿ ಮಾನುಷಾಣಾಂ ಮಹೀತಲೇ।
12149045c ಸ್ನೇಹಂ ಹಿ ಕರುಣಂ ದೃಷ್ಟ್ವಾ ಮಮಾಪ್ಯಶ್ರೂಣ್ಯಥಾಗಮನ್।।

ಅಯ್ಯೋ! ಪುತ್ರವಿಯೋಗದಿಂದ ಪೀಡಿತರಾಗಿ ಮೃತಕರ ಈ ಶೂನ್ಯ ಸ್ಥಾನಕ್ಕೆ ಬಂದು ಅತ್ಯಂತ ದುಃಖದಿಂದ ರೋದಿಸುತ್ತಿರುವ ಈ ಭೂತಲವಾಸೀ ಮನುಷ್ಯರ ಹೃದಯದಲ್ಲಿ ಕರುವಿಲ್ಲದ ಗೋವಿನಂತೆ ಎಷ್ಟೊಂದು ದುಃಖವಾಗುತ್ತಿರಲಿಕ್ಕಿಲ್ಲ? ಇದರ ಅನುಭವವು ಇಂದು ನನಗೆ ಆಗುತ್ತಿದೆ. ಏಕೆಂದರೆ ಇವರ ಸ್ನೇಹದ ನೆಪದಿಂದ ನನ್ನ ಕಣ್ಣುಗಳಿಂದಲೂ ಕಣ್ಣೀರು ಸುರಿಯುತ್ತಿದೆ!

12149046a ಯತ್ನೋ ಹಿ ಸತತಂ ಕಾರ್ಯಃ ಕೃತೋ ದೈವೇನ ಸಿಧ್ಯತಿ।
12149046c ದೈವಂ ಪುರುಷಕಾರಶ್ಚ ಕೃತಾಂತೇನೋಪಪದ್ಯತೇ।।

ಅಭೀಷ್ಟಸಿದ್ಧಿಗಾಗಿ ಸದಾ ಪ್ರಯತ್ನಪಡುತ್ತಲೇ ಇರಬೇಕು. ಆಗ ದೈವಯೋಗದಿಂದ ಅದರ ಸಿದ್ಧಿಯಾಗುತ್ತದೆ. ದೈವ ಮತ್ತು ಪುರುಷಾರ್ಥ ಎರಡೂ ಕಾಲದಿಂದಲೇ ಸಂಪನ್ನವಾಗುತ್ತವೆ.

12149047a ಅನಿರ್ವೇದಃ ಸದಾ ಕಾರ್ಯೋ ನಿರ್ವೇದಾದ್ಧಿ ಕುತಃ ಸುಖಮ್।
12149047c ಪ್ರಯತ್ನಾತ್ ಪ್ರಾಪ್ಯತೇ ಹ್ಯರ್ಥಃ ಕಸ್ಮಾದ್ಗಚ್ಚಥ ನಿರ್ದಯಾಃ।।

ಖೇದ ಮತ್ತು ಶಿಥಿಲತೆಗೆ ಎಂದೂ ಮನಸ್ಸಿನಲ್ಲಿ ಸ್ಥಾನವನ್ನೀಡಬಾರದು. ಖೇದವಿದ್ದರೆ ಸುಖವೆಲ್ಲಿಂದ ಬರುತ್ತದೆ? ಪ್ರಯತ್ನದಿಂದಲೇ ಅಭಿಲಾಷೆಗಳು ಪೂರ್ಣಗೊಳ್ಳುತ್ತವೆ. ಆದುದರಿಂದ ನೀವು ಈ ಬಾಲಕನ ರಕ್ಷಣೆಯ ಪ್ರಯತ್ನವನ್ನು ಬಿಟ್ಟು ನಿರ್ದಯಿಗಳಾಗಿ ಎಲ್ಲಿಗೆ ಹೋಗುತ್ತಿರುವಿರಿ?

12149048a ಆತ್ಮಮಾಂಸೋಪವೃತ್ತಂ ಚ ಶರೀರಾರ್ಧಮಯೀಂ ತನುಮ್।
12149048c ಪಿತೃಣಾಂ ವಂಶಕರ್ತಾರಂ ವನೇ ತ್ಯಕ್ತ್ವಾ ಕ್ವ ಯಾಸ್ಯಥ।।

ಈ ಬಾಲಕನು ನಿಮ್ಮದೇ ರಕ್ತ-ಮಾಂಸಗಳಿಂದ ಮಾಡಲ್ಪಟ್ಟಿದ್ದಾನೆ. ನಿಮ್ಮ ಅರ್ಧಶರೀರದ ಸಮಾನನಾಗಿದ್ದಾನೆ ಮತ್ತು ಪಿತೃಗಳ ವಂಶವೃದ್ಧಿಮಾಡುವವನಾಗಿದ್ದಾನೆ. ಇವನನ್ನು ವನದಲ್ಲಿ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ?

12149049a ಅಥ ವಾಸ್ತಂ ಗತೇ ಸೂರ್ಯೇ ಸಂಧ್ಯಾಕಾಲ ಉಪಸ್ಥಿತೇ।
12149049c ತತೋ ನೇಷ್ಯಥ ವಾ ಪುತ್ರಮಿಹಸ್ಥಾ ವಾ ಭವಿಷ್ಯಥ।।

ಆಗಲಿ! ಎಲ್ಲಿಯವರಿಗೆ ಸೂರ್ಯಾಸ್ತವಾಗುವುದಿಲ್ಲವೋ ಮತ್ತು ಸಂಧ್ಯಾಕಾಲವು ಉಪಸ್ಥಿತವಾಗುವುದೋ ಅಲ್ಲಿಯವರೆಗಾದರೂ ನೀವು ಇಲ್ಲಿ ನಿಲ್ಲಿ. ನಂತರ ನಿಮ್ಮ ಈ ಪುತ್ರನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಅಥವಾ ಇಲ್ಲಿಯೇ ಬಿಟ್ಟು ಹೋಗಿ.”

12149050 ಗೃಧ್ರ ಉವಾಚ ।
12149050a ಅದ್ಯ ವರ್ಷಸಹಸ್ರಂ ಮೇ ಸಾಗ್ರಂ ಜಾತಸ್ಯ ಮಾನುಷಾಃ।
12149050c ನ ಚ ಪಶ್ಯಾಮಿ ಜೀವಂತಂ ಮೃತಂ ಸ್ತ್ರೀಪುಂನಪುಂಸಕಮ್।।

ಹದ್ದು ಹೇಳಿತು: “ಮನುಷ್ಯರೇ! ನಾನು ಹುಟ್ಟಿ ಇಂದಿಗೆ ಒಂದು ಸಾವಿರ ವರ್ಷಕ್ಕಿಂತಲೂ ಹೆಚ್ಚಾಗಿದೆ. ಆದರೆ ನಾನು ಎಂದೂ ಯಾವುದೇ ಸ್ತ್ರೀ-ಪುರುಷ ಅಥವಾ ನಪುಂಸಕನು ಮರಣಾನಂತರ ಜೀವಿತನಾದುದನ್ನು ಕಂಡಿಲ್ಲ.

12149051a ಮೃತಾ ಗರ್ಭೇಷು ಜಾಯಂತೇ ಮ್ರಿಯಂತೇ ಜಾತಮಾತ್ರಕಾಃ।
12149051c ವಿಕ್ರಮಂತೋ ಮ್ರಿಯಂತೇ ಚ ಯೌವನಸ್ಥಾಸ್ತಥಾಪರೇ।।

ಕೆಲವರು ಗರ್ಭದಲ್ಲಿಯೇ ಸತ್ತುಹೋಗುತ್ತಾರೆ. ಕೆಲವರು ಹುಟ್ಟುತ್ತಲೇ ಸತ್ತುಹೋಗುತ್ತಾರೆ. ಕೆಲವರು ನಡೆಯಲು ಬಂದಾಗ ಸಾಯುತ್ತಾರೆ. ಇನ್ನು ಕೆಲವರು ಯೌವನಾವಸ್ಥೆಯಲ್ಲಿ ಸತ್ತು ಹೋಗುತ್ತಾರೆ.

12149052a ಅನಿತ್ಯಾನೀಹ ಭಾಗ್ಯಾನಿ ಚತುಷ್ಪಾತ್ಪಕ್ಷಿಣಾಮಪಿ।
12149052c ಜಂಗಮಾಜಂಗಮಾನಾಂ13 ಚಾಪ್ಯಾಯುರಗ್ರೇಽವತಿಷ್ಠತೇ।।

ಈ ಲೋಕದಲ್ಲಿ ಪಶುಪಕ್ಷಿಗಳ ಭಾಗ್ಯಗಳೂ ಅನಿತ್ಯವಾದವು. ಸ್ಥಾವರ ಜಂಗಮಗಳ ಜೀವನದಲ್ಲಿಯೂ ಆಯಸ್ಸು ಪ್ರಧಾನವಾಗಿರುತ್ತದೆ.

12149053a ಇಷ್ಟದಾರವಿಯುಕ್ತಾಶ್ಚ ಪುತ್ರಶೋಕಾನ್ವಿತಾಸ್ತಥಾ।
12149053c ದಹ್ಯಮಾನಾಃ ಸ್ಮ ಶೋಕೇನ ಗೃಹಂ ಗಚ್ಚಂತಿ ನಿತ್ಯದಾ।।

ಪ್ರಿಯ ಪತ್ನಿಯ ವಿಯೋಗದಿಂದ ಮತ್ತು ಪುತ್ರಶೋಕದಿಂದ ಸಂತಪ್ತರಾದ ಎಷ್ಟೊಂದು ಪ್ರಾಣಿಗಳು ಪ್ರತಿದಿನ ಶೋಕಾಗ್ನಿಯಲ್ಲಿ ಸುಡುತ್ತಾ ಈ ಶ್ಮಶಾನದಿಂದ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ!

12149054a ಅನಿಷ್ಟಾನಾಂ ಸಹಸ್ರಾಣಿ ತಥೇಷ್ಟಾನಾಂ ಶತಾನಿ ಚ।
12149054c ಉತ್ಸೃಜ್ಯೇಹ ಪ್ರಯಾತಾ ವೈ ಬಾಂಧವಾ ಭೃಶದುಃಖಿತಾಃ।।

ಎಷ್ಟೋ ಬಾಂಧವರು ಅತ್ಯಂತ ದುಃಖಿತರಾಗಿ ಇಲ್ಲಿ ಸಾವಿರಾರು ಅಪ್ರಿಯ ಮತ್ತು ನೂರಾರು ಪ್ರಿಯ ವ್ಯಕ್ತಿಗಳನ್ನು ಬಿಟ್ಟು ಹೊರಟುಹೋಗಿದ್ದಾರೆ.

12149055a ತ್ಯಜ್ಯತಾಮೇಷ ನಿಸ್ತೇಜಾಃ ಶೂನ್ಯಃ ಕಾಷ್ಠತ್ವಮಾಗತಃ।
12149055c ಅನ್ಯದೇಹವಿಷಕ್ತೋ ಹಿ ಶಾವಂ ಕಾಷ್ಠಮುಪಾಸತೇ।।
12149056a ಭ್ರಾಂತಜೀವಸ್ಯ ವೈ ಬಾಷ್ಪಂ ಕಸ್ಮಾದ್ಧಿತ್ವಾ ನ ಗಚ್ಚಥ।
12149056c ನಿರರ್ಥಕೋ ಹ್ಯಯಂ ಸ್ನೇಹೋ ನಿರರ್ಥಶ್ಚ ಪರಿಗ್ರಹಃ।।

ಈ ಮೃತ ಬಾಲಕನು ತೇಜೋಹೀನನಾಗಿ ಒಣಗಿದ ಕಟ್ಟಿಗೆಯಂತೆ ಆಗಿಬಿಟ್ಟಿದ್ದಾನೆ. ಇವನ ಜೀವವು ಇನ್ನೊಂದು ಶರೀರದಲ್ಲಿ ಆಸಕ್ತವಾಗಿದೆ. ಈ ನಿಷ್ಪ್ರಾಣ ಬಾಲಕನ ಶವವು ಕಟ್ಟಿಗೆಯಂತೆ ಆಗಿಬಿಟ್ಟಿದೆ. ನೀವುಗಳು ಇವನನ್ನು ಇಲ್ಲಿಯೇ ಬಿಟ್ಟು ಏಕೆ ಹೊರಟುಹೋಗುತ್ತಿಲ್ಲ? ನಿಮ್ಮ ಈ ಸ್ನೇಹವು ನಿರರ್ಥಕವಾದುದು ಮತ್ತು ಈ ಪರಿಶ್ರಮದಲ್ಲಿ ಯಾವ ಫಲವೂ ಇಲ್ಲ.

12149057a ನ ಚಕ್ಷುರ್ಭ್ಯಾಂ ನ ಕರ್ಣಾಭ್ಯಾಂ ಸಂಶೃಣೋತಿ ಸಮೀಕ್ಷತೇ।
12149057c ತಸ್ಮಾದೇನಂ ಸಮುತ್ಸೃಜ್ಯ ಸ್ವಗೃಹಾನ್ಗಚ್ಚತಾಶು ವೈ।।

ಇವನು ಕಣ್ಣುಗಳಿಂದ ನೋಡುತ್ತಿಲ್ಲ ಮತ್ತು ಕಿವಿಗಳಿಂದ ಕೇಳುತ್ತಿಲ್ಲ. ಆದುದರಿಂದ ನೀವು ಇವನನ್ನು ಇಲ್ಲಿಯೇ ಬಿಟ್ಟು ನಿಮ್ಮ ಮನೆಗಳಿಗೆ ಏಕೆ ತೆರಳುತ್ತಿಲ್ಲ?

12149058a ಮೋಕ್ಷಧರ್ಮಾಶ್ರಿತೈರ್ವಾಕ್ಯೈರ್ಹೇತುಮದ್ಭಿರನಿಷ್ಠುರೈಃ।
12149058c ಮಯೋಕ್ತಾ ಗಚ್ಚತ ಕ್ಷಿಪ್ರಂ ಸ್ವಂ ಸ್ವಮೇವ ನಿವೇಶನಮ್।।

ನನ್ನ ಈ ಮಾತು ಬಹಳ ನಿಷ್ಠುರವಾದುದೆಂದು ತೋರುತ್ತದೆ. ಆದರೂ ಇದು ಹೇತುಗರ್ಭಿತವಾಗಿದೆ ಮತ್ತು ಮೋಕ್ಷಧರ್ಮದ ಕುರಿತಾಗಿದೆ. ಆದುದರಿಂದ ಇದನ್ನು ಒಪ್ಪಿಕೊಂಡು ನನ್ನ ಮಾತಿನಂತೆ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ತೆರಳಿರಿ.

12149059a ಪ್ರಜ್ಞಾವಿಜ್ಞಾನಯುಕ್ತೇನ ಬುದ್ಧಿಸಂಜ್ಞಾಪ್ರದಾಯಿನಾ।
12149059c ವಚನಂ ಶ್ರಾವಿತಾ ರೂಕ್ಷಂ ಮಾನುಷಾಃ ಸಂನಿವರ್ತತ।।

ಮನುಷ್ಯರೇ! ನಾನು ಪ್ರಜ್ಞೆ ಮತ್ತು ವಿಜ್ಞಾನಯುಕ್ತವಾದ ಮತ್ತು ಇತರರಿಗೂ ಬುದ್ಧಿಸಂಜ್ಞೆಗಳನ್ನು ನೀಡುವ ಮಾತನಾಡುತ್ತಿದ್ದೇನೆ. ಕಠೋರವಾದ ನನ್ನ ಈ ಮಾತನ್ನು ಕೇಳಿ ಹಿಂದಿರುಗಿರಿ.”

12149060 14ಜಂಬುಕ ಉವಾಚ । 12149060a ಇಮಂ ಕನಕವರ್ಣಾಭಂ ಭೂಷಣೈಃ ಸಮಲಂಕೃತಮ್।
12149060c ಗೃಧ್ರವಾಕ್ಯಾತ್ಕಥಂ ಪುತ್ರಂ ತ್ಯಜಧ್ವಂ ಪಿತೃಪಿಂಡದಮ್।।

ನರಿಯು ಹೇಳಿತು: “ಬಂಗಾರದ ವರ್ಣದಿಂದ ಕೂಡಿರುವ ಮತ್ತು ಭೂಷಣಗಳಿಂದ ಸಮಲಂಕೃತನಾಗಿರುವ ಹಾಗೂ ಪಿತೃಪಿಂಡಗಳನ್ನು ನೀಡುವ ಈ ಪುತ್ರನನ್ನು ಹದ್ದಿನ ಮಾತನ್ನು ಕೇಳಿ ಹೇಗೆ ತಾನೇ ಬಿಟ್ಟುಹೋಗುತ್ತಿದ್ದೀರಿ?

12149061a ನ ಸ್ನೇಹಸ್ಯ ವಿರೋಧೋಽಸ್ತಿ ವಿಲಾಪರುದಿತಸ್ಯ ವೈ।
12149061c ಮೃತಸ್ಯಾಸ್ಯ ಪರಿತ್ಯಾಗಾತ್ತಾಪೋ ವೈ ಭವಿತಾ ಧ್ರುವಮ್।।

ಈ ಮೃತ ಬಾಲಕನನ್ನು ಇಲ್ಲಿ ಬಿಟ್ಟು ಹೋಗುವುದರಿಂದ ನಿಮ್ಮ ಸ್ನೇಹವೇನೂ ಕಡಿಮೆಯಾಗುವುದಿಲ್ಲ ಮತ್ತು ನಿಮ್ಮ ಈ ರೋದನ-ವಿಲಾಪಗಳು ನಿಂತುಹೋಗುವುದಿಲ್ಲ. ಬದಲಾಗಿ ನಿಮ್ಮ ಸಂತಾಪವು ನಿಶ್ಚಯವಾಗಿ ಇನ್ನೂ ಹೆಚ್ಚಾಗುತ್ತದೆ.

12149062a ಶ್ರೂಯತೇ ಶಂಬುಕೇ ಶೂದ್ರೇ ಹತೇ ಬ್ರಾಹ್ಮಣದಾರಕಃ।
12149062c ಜೀವಿತೋ ಧರ್ಮಮಾಸಾದ್ಯ ರಾಮಾತ್ಸತ್ಯಪರಾಕ್ರಮಾತ್।।

ಸತ್ಯಪರಾಕ್ರಮೀ ರಾಮನು ಶಂಬುಕ ಎಂಬ ಹೆಸರಿನ ಶೂದ್ರನನ್ನು ಕೊಂದನಂತರ ಆ ಧರ್ಮದ ಪ್ರಭಾವದಿಂದ ಓರ್ವ ಮೃತ ಬ್ರಾಹ್ಮಣ ಪುತ್ರನು ಜೀವಿತನಾದನೆಂದು ಕೇಳಿದ್ದೇವೆ.

12149063a ತಥಾ ಶ್ವೇತಸ್ಯ ರಾಜರ್ಷೇರ್ಬಾಲೋ ದಿಷ್ಟಾಂತಮಾಗತಃ।
12149063c ಶ್ವೋಽಭೂತೇ ಧರ್ಮನಿತ್ಯೇನ ಮೃತಃ ಸಂಜೀವಿತಃ ಪುನಃ।।

ಹಾಗೆಯೇ ರಾಜರ್ಷಿ ಶ್ವೇತನ ಬಾಲಕನು ತೀರಿಕೊಂಡಿದ್ದನು. ಆದರೆ ಧರ್ಮನಿಷ್ಠ ಶ್ವೇತನು ಅವನನ್ನು ಪುನಃ ಜೀವಿತಗೊಳಿಸಿದ್ದನು.

12149064a ತಥಾ ಕಶ್ಚಿದ್ಭವೇತ್ಸಿದ್ಧೋ ಮುನಿರ್ವಾ ದೇವತಾಪಿ ವಾ।
12149064c ಕೃಪಣಾನಾಮನುಕ್ರೋಶಂ ಕುರ್ಯಾದ್ವೋ ರುದತಾಮಿಹ।।

ಹೀಗೆಯೇ ಯಾರಾದರೂ ಸಿದ್ಧ ಮುನಿ ಅಥವಾ ದೇವತೆಯು ದೊರಕಿದರೆ ದುಃಖದಿಂದ ರೋದಿಸುತ್ತಿರುವ ನಿಮ್ಮ ಮೇಲೆ ದಯೆಯನ್ನುಂಟುಮಾಡಬಹುದು.””

12149065 ಭೀಷ್ಮ ಉವಾಚ ।
12149065a ಇತ್ಯುಕ್ತಾಃ ಸಂನ್ಯವರ್ತಂತ ಶೋಕಾರ್ತಾಃ ಪುತ್ರವತ್ಸಲಾಃ।
12149065c ಅಂಕೇ ಶಿರಃ ಸಮಾಧಾಯ ರುರುದುರ್ಬಹುವಿಸ್ತರಮ್।।

ಭೀಷ್ಮನು ಹೇಳಿದನು: “ನರಿಯು ಹೀಗೆ ಹೇಳಲು ಪುತ್ರವತ್ಸಲ ಬಾಂಧವರು ಶೋಕದಿಂದ ಪೀಡಿತರಾಗಿ ಹಿಂದಿರುಗಿದರು ಮತ್ತು ಬಾಲಕನ ತಲೆಯನ್ನು ತಮ್ಮ ತೊಡೆಯಮೇಲಿಟ್ಟುಕೊಂಡು ಜೋರಾಗಿ ರೋದಿಸತೊಡಗಿದರು.

12149066 15ಗೃಧ್ರ ಉವಾಚ । 12149066a ಅಶ್ರುಪಾತಪರಿಕ್ಲಿನ್ನಃ ಪಾಣಿಸ್ಪರ್ಶನಪೀಡಿತಃ।
12149066c ಧರ್ಮರಾಜಪ್ರಯೋಗಾಚ್ಚ ದೀರ್ಘಾಂ ನಿದ್ರಾಂ ಪ್ರವೇಶಿತಃ।।

ಹದ್ದು ಹೇಳಿತು: “ನಿಮ್ಮ ಕಣ್ಣೀರಿನಿಂದ ತೋಯಿಸುತ್ತಿರುವ ಮತ್ತು ನೀವು ಕೈಗಳಿಂದ ಒತ್ತುತ್ತಿರುವ ಈ ಬಾಲಕನು ಧರ್ಮರಾಜನ ಪ್ರಯೋಗದಿಂದ ದೀರ್ಘನಿದ್ರೆಯನ್ನು ಪ್ರವೇಶಿಸಿಬಿಟ್ಟಿದ್ದಾನೆ.

12149067a ತಪಸಾಪಿ ಹಿ ಸಂಯುಕ್ತೋ ನ ಕಾಲೇ ನೋಪಹನ್ಯತೇ16
12149067c ಸರ್ವಸ್ನೇಹಾವಸಾನಂ17 ತದಿದಂ ತತ್ ಪ್ರೇತಪತ್ತನಮ್।।

ತಪಸ್ಸಿನಿಂದ ಸಂಯುಕ್ತರಾಗಿರುವವರೂ ಕಾಲವನ್ನು ಮೀರಲಾರರು. ಈ ಪ್ರೇತಪಟ್ಟಣದಲ್ಲಿ ಎಲ್ಲ ಸ್ನೇಹಗಳೂ ಕೊನೆಗೊಳ್ಳುತ್ತವೆ.

12149068a ಬಾಲವೃದ್ಧಸಹಸ್ರಾಣಿ ಸದಾ ಸಂತ್ಯಜ್ಯ ಬಾಂಧವಾಃ।
12149068c ದಿನಾನಿ ಚೈವ ರಾತ್ರೀಶ್ಚ ದುಃಖಂ ತಿಷ್ಠಂತಿ ಭೂತಲೇ।।

ಭೂತಲದಲ್ಲಿ ಸಹಸ್ರಾರು ಬಾಲಕರು ಮತ್ತು ವೃದ್ಧರನ್ನು ಸದಾ ತ್ಯಜಿಸಿ ಬಾಂಧವರು ದಿನ ರಾತ್ರಿ ದುಃಖಪಡುತ್ತಿರುತ್ತಾರೆ.

12149069a ಅಲಂ ನಿರ್ಬಂಧಮಾಗಮ್ಯ ಶೋಕಸ್ಯ ಪರಿವಾರಣಮ್।
12149069c ಅಪ್ರತ್ಯಯಂ ಕುತೋ ಹ್ಯಸ್ಯ ಪುನರದ್ಯೇಹ ಜೀವಿತಮ್।।

ಪುನಃ ಪುನಃ ಹಿಂದಿರುಗಿ ಬಂದು ಶೋಕಪಡುವುದರಿಂದ ಶೋಕವು ಕಡಿಮೆಯಾಗುವುದಿಲ್ಲ. ಇನ್ನು ಇವನು ಜೀವಿತಗೊಳ್ಳುವ ಯಾವ ಭರವಸೆಯೂ ಇಲ್ಲವಾಗಿದೆ. ಇಂದು ಇವನ ಪುನರ್ಜೀವನವು ಹೇಗೆ ಸಾಧ್ಯವಿದೆ?

12149070a ನೈಷ ಜಂಬುಕವಾಕ್ಯೇನ ಪುನಃ ಪ್ರಾಪ್ಸ್ಯತಿ ಜೀವಿತಮ್।
12149070c ಮೃತಸ್ಯೋತ್ಸೃಷ್ಟದೇಹಸ್ಯ ಪುನರ್ದೇಹೋ ನ ವಿದ್ಯತೇ।।

ನರಿಯ ಮಾತಿನಿಂದ ಇವನು ಪುನಃ ಜೀವವನ್ನು ಪಡೆದುಕೊಳ್ಳುವುದಿಲ್ಲ. ಒಮ್ಮೆ ದೇಹವನ್ನು ಬಿಟ್ಟುಹೋದ ಜೀವವು ಪುನಃ ಆ ದೇಹವನ್ನು ಸೇರುವುದಿಲ್ಲ.

12149071a ನ ವೈ ಮೂರ್ತಿಪ್ರದಾನೇನ ನ ಜಂಬುಕಶತೈರಪಿ।
12149071c ಶಕ್ಯೋ ಜೀವಯಿತುಂ ಹ್ಯೇಷ ಬಾಲೋ ವರ್ಷಶತೈರಪಿ।।

ನೂರಾರು ನರಿಗಳು ತಮ್ಮ ಶರೀರವನ್ನು ಬಲಿಕೊಟ್ಟರೂ ನೂರು ವರ್ಷಗಳಾದರೂ ಈ ಬಾಲಕನ್ನು ಜೀವಿತಗೊಳಿಸಲು ಶಕ್ಯವಿಲ್ಲ.

12149072a ಅಪಿ ರುದ್ರಃ ಕುಮಾರೋ ವಾ ಬ್ರಹ್ಮಾ ವಾ ವಿಷ್ಣುರೇವ ವಾ।
12149072c ವರಮಸ್ಮೈ ಪ್ರಯಚ್ಚೇಯುಸ್ತತೋ ಜೀವೇದಯಂ ಶಿಶುಃ।।

ರುದ್ರ, ಕುಮಾರ ಕಾರ್ತಿಕೇಯ ಅಥವಾ ಬ್ರಹ್ಮ ಅಥವಾ ವಿಷ್ಣು ಇವನಿಗೆ ವರವನ್ನಿತ್ತರೆ ಈ ಶಿಶುವು ಪುನಃ ಜೀವಿತಗೊಳ್ಳಬಹುದು.

12149073a ನ ಚ ಬಾಷ್ಪವಿಮೋಕ್ಷೇಣ ನ ಚಾಶ್ವಾಸಕೃತೇನ ವೈ।
12149073c ನ ದೀರ್ಘರುದಿತೇನೇಹ ಪುನರ್ಜೀವೋ ಭವಿಷ್ಯತಿ।।

ಕಣ್ಣೀರು ಸುರಿಸುವುದರಿಂದ ಅಥವಾ ದೀರ್ಘ ನಿಟ್ಟುಸಿರುಬಿಡುವುದರಿಂದ ಅಥವಾ ಬಹಳ ಹೊತ್ತು ಅಳುತ್ತಿರುವುದರಿಂದ ಇವನು ಪುನಃ ಜೀವಿತನಾಗುವುದಿಲ್ಲ.

12149074a ಅಹಂ ಚ ಕ್ರೋಷ್ಟುಕಶ್ಚೈವ ಯೂಯಂ ಚೈವಾಸ್ಯ ಬಾಂಧವಾಃ।
12149074c ಧರ್ಮಾಧರ್ಮೌ ಗೃಹೀತ್ವೇಹ ಸರ್ವೇ ವರ್ತಾಮಹೇಽಧ್ವನಿ।।

ನಾನು, ಈ ನರಿ ಮತ್ತು ಇವನ ಬಾಂಧವರಾದ ನೀವು ಎಲ್ಲರೂ ಧರ್ಮ ಮತ್ತು ಅಧರ್ಮವನ್ನು ಹೊತ್ತು ಇಲ್ಲಿ ನಮ್ಮ ನಮ್ಮ ದಾರಿಯಲ್ಲಿ ಸಾಗುತ್ತಿದ್ದೇವೆ.

12149075a ಅಪ್ರಿಯಂ ಪರುಷಂ ಚಾಪಿ ಪರದ್ರೋಹಂ ಪರಸ್ತ್ರಿಯಮ್।
12149075c ಅಧರ್ಮಮನೃತಂ ಚೈವ ದೂರಾತ್ ಪ್ರಾಜ್ಞೋ ನಿವರ್ತಯೇತ್।।

ಪ್ರಾಜ್ಞನಾದವನು ಅಪ್ರಿಯವಾದುದನ್ನು, ಕಠೋರತೆಯನ್ನು, ಪರದ್ರೋಹವನ್ನು, ಪರಸ್ತ್ರೀಯನ್ನು, ಅಧರ್ಮವನ್ನು ಮತ್ತು ಸುಳ್ಳನ್ನು ದೂರದಿಂದಲೇ ತಡೆಯಬೇಕು.

12149076a ಸತ್ಯಂ ಧರ್ಮಂ ಶುಭಂ ನ್ಯಾಯ್ಯಂ ಪ್ರಾಣಿನಾಂ ಮಹತೀಂ ದಯಾಮ್।
12149076c ಅಜಿಹ್ಮತ್ವಮಶಾಠ್ಯಂ ಚ ಯತ್ನತಃ ಪರಿಮಾರ್ಗತ।।

ಸತ್ಯ, ಧರ್ಮ, ಶುಭ, ನ್ಯಾಯ, ಪ್ರಾಣಿಗಳ ಮೇಲೆ ಅತಿ ದೊಡ್ಡ ದಯೆ, ಕುಟಿಲತೆಯಿಲ್ಲದಿರುವುದು, ಶಠತ್ವದ ತ್ಯಾಗ ಇವುಗಳನ್ನು ಪ್ರಯತ್ನಪೂರ್ವಕವಾಗಿ ಅನುಸರಿಸಬೇಕು.

12149077a ಮಾತರಂ ಪಿತರಂ ಚೈವ ಬಾಂಧವಾನ್ಸುಹೃದಸ್ತಥಾ।
12149077c ಜೀವತೋ ಯೇ ನ ಪಶ್ಯಂತಿ ತೇಷಾಂ ಧರ್ಮವಿಪರ್ಯಯಃ।।

ತಾಯಿ-ತಂದೆಯರು, ಬಾಂಧವರು ಮತ್ತು ಸುಹೃದರು ಜೀವಿಸಿರುವಾಗ ಆವರನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವವರಿಗೆ ಧರ್ಮಹಾನಿಯುಂಟಾಗುತ್ತದೆ.

12149078a ಯೋ ನ ಪಶ್ಯತಿ ಚಕ್ಷುರ್ಭ್ಯಾಂ ನೇಂಗತೇ ಚ ಕಥಂ ಚನ।
12149078c ತಸ್ಯ ನಿಷ್ಠಾವಸಾನಾಂತೇ ರುದಂತಃ ಕಿಂ ಕರಿಷ್ಯಥ।।

ಕಣ್ಣುಗಳಿಂದ ನೋಡದ ಮತ್ತು ಅಂಗಾಂಗಗಳನ್ನೂ ಹಂದಾಡಿಸದೇ ಇರುವವನ ಜೀವನವು ಅಂತ್ಯವಾಗಲು ನೀವು ರೋದಿಸಿ ಏನು ತಾನೇ ಮಾಡಬಲ್ಲಿರಿ?””

12149079 ಭೀಷ್ಮ ಉವಾಚ ।
12149079a ಇತ್ಯುಕ್ತಾಸ್ತಂ ಸುತಂ ತ್ಯಕ್ತ್ವಾ ಭೂಮೌ ಶೋಕಪರಿಪ್ಲುತಾಃ।
12149079c ದಹ್ಯಮಾನಾಃ ಸುತಸ್ನೇಹಾತ್ ಪ್ರಯಯುರ್ಬಾಂಧವಾ ಗೃಹಾನ್।।

ಭೀಷ್ಮನು ಹೇಳಿದನು: “ಹದ್ದು ಹೀಗೆ ಹೇಳಲು ಶೋಕದಲ್ಲಿ ಮುಳುಗಿಹೋಗಿದ್ದ ಬಂಧುಗಳು ತಮ್ಮ ಪುತ್ರನನ್ನು ನೆಲದ ಮೇಲೆ ಮಲಗಿಸಿ ಅವನ ಮೇಲಿನ ಸ್ನೇಹದಿಂದ ಸುಡುತ್ತಾ ತಮ್ಮ ಮನೆಗಳ ಕಡೆ ಹೊರಟರು.

12149080 ಜಂಬುಕ ಉವಾಚ ।
12149080a ದಾರುಣೋ ಮರ್ತ್ಯಲೋಕೋಽಯಂ ಸರ್ವಪ್ರಾಣಿವಿನಾಶನಃ।
12149080c ಇಷ್ಟಬಂಧುವಿಯೋಗಶ್ಚ ತಥೈವಾಲ್ಪಂ ಚ ಜೀವಿತಮ್।।

ನರಿಯು ಹೇಳಿತು: “ಈ ಮರ್ತ್ಯಲೋಕವು ಅತ್ಯಂತ ದಾರುಣವಾದುದು. ಇಲ್ಲಿ ಸಮಸ್ತ ಪ್ರಾಣಿಗಳ ನಾಶವೇ ನಡೆಯುತ್ತದೆ. ಪ್ರಿಯ ಬಂಧುಜನರಿಗೆ ವಿಯೋಗದ ಕಷ್ಟವೂ ಪ್ರಾಪ್ತವಾಗುತ್ತದೆ. ಇಲ್ಲಿಯ ಜೀವನವು ಅತಿ ಅಲ್ಪವಾದುದು.

12149081a ಬಹ್ವಲೀಕಮಸತ್ಯಂ ಚ ಪ್ರತಿವಾದಾಪ್ರಿಯಂವದಮ್।
12149081c ಇಮಂ ಪ್ರೇಕ್ಷ್ಯ ಪುನರ್ಭಾವಂ ದುಃಖಶೋಕಾಭಿವರ್ಧನಮ್।।
12149082a ನ ಮೇ ಮಾನುಷಲೋಕೋಽಯಂ ಮುಹೂರ್ತಮಪಿ ರೋಚತೇ।

ಈ ಲೋಕದಲ್ಲಿ ಎಲ್ಲವೂ ಅಸತ್ಯ ಮತ್ತು ಅತ್ಯಂತ ಕಹಿಯಾದುದು. -ವಿರುದ್ಧವಾಗಿ ಮಾತನಾಡುವವರು ಬಹಳಷ್ಟು ಇದ್ದಾರೆ. ಆದರೆ ಪ್ರಿಯವಾಗಿ ಮಾತನಾಡುವವರು ಬಹಳ ವಿರಳ. ಇಲ್ಲಿಯ ಭಾವವು ಶೋಕ ಮತ್ತು ದುಃಖಗಳನ್ನು ಹೆಚ್ಚಿಸುವಂತಹುದು. ಇದನ್ನು ನೋಡಿ ನನಗೆ ಈ ಮನುಷ್ಯಲೋಕವು ಒಂದು ಮುಹೂರ್ತಕಾಲವೂ ಇಷ್ಟವಾಗುವುದಿಲ್ಲ.

12149082c ಅಹೋ ಧಿಗ್ಗೃಧ್ರವಾಕ್ಯೇನ ಸಂನಿವರ್ತಥ ಮಾನುಷಾಃ।।
12149083a ಪ್ರದೀಪ್ತಾಃ ಪುತ್ರಶೋಕೇನ ಯಥೈವಾಬುದ್ಧಯಸ್ತಥಾ।
12149083c ಕಥಂ ಗಚ್ಚಥ ಸಸ್ನೇಹಾಃ ಸುತಸ್ನೇಹಂ ವಿಸೃಜ್ಯ ಚ।
12149083E ಶ್ರುತ್ವಾ ಗೃಧ್ರಸ್ಯ ವಚನಂ ಪಾಪಸ್ಯೇಹಾಕೃತಾತ್ಮನಃ।।

ಅಯ್ಯೋ! ಮನುಷ್ಯರಿಗೆ ಧಿಕ್ಕಾರ! ಪಾಪಿಯೂ, ಅಕೃತಾತ್ಮನೂ ಆದ ಈ ಹದ್ದಿನ ಮಾತನ್ನು ಕೇಳಿ ಪುತ್ರಶೋಕದಿಂದ ಪೀಡಿತರಾದ ನೀವು ಬುದ್ಧಿಯಿಲ್ಲದವರಂತೆ ಹೊರಟುಹೋಗುತ್ತಿದ್ದೀರಿ! ಸುತಸ್ನೇಹವನ್ನು ಬಿಟ್ಟು ಸ್ನೇಹವುಳ್ಳವರಾದ ನೀವು ಎಲ್ಲಿಗೆ ಹೋಗುತ್ತಿದ್ದೀರಿ?

12149084a ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್।
12149084c ಸುಖದುಃಖಾನ್ವಿತೇ ಲೋಕೇ ನೇಹಾಸ್ತ್ಯೇಕಮನಂತಕಮ್।।

ಸುಖದ ನಂತರ ದುಃಖವೂ ದುಃಖದ ನಂತರ ಸುಖವೂ ಬರುತ್ತಿರುತ್ತದೆ. ಸುಖ ಮತ್ತು ದುಃಖಗಳು ನಿರಂತರವಾಗಿ ನಡೆಯುತ್ತಿರುವ ಈ ಲೋಕದಲ್ಲಿ ಸುಖ ಅಥವಾ ದುಃಖವು ಒಂದೇ ಇರುವುದಿಲ್ಲ.

12149085a ಇಮಂ ಕ್ಷಿತಿತಲೇ ನ್ಯಸ್ಯ ಬಾಲಂ ರೂಪಸಮನ್ವಿತಮ್।
12149085c ಕುಲಶೋಕಾಕರಂ18 ಮೂಢಾಃ ಪುತ್ರಂ ತ್ಯಕ್ತ್ವಾ ಕ್ವ ಯಾಸ್ಯಥ।।
12149086a ರೂಪಯೌವನಸಂಪನ್ನಂ ದ್ಯೋತಮಾನಮಿವ ಶ್ರಿಯಾ।

ಈ ರೂಪಸಮನ್ವಿತ ಬಾಲಕನು ನಿಮ್ಮ ಕುಲದ ಶೋಭೆಯನ್ನು ಹೆಚ್ಚಿಸುವವನು. ರೂಪಯೌವನ ಸಂಪನ್ನನು. ಅಗ್ನಿಯ ಕಾಂತಿಯಿಂದ ಹೊಳೆಯುತ್ತಿರುವನು. ಮೂಢರೇ! ಈ ಬಾಲಕನನ್ನು ನೆಲದ ಮೇಲೆ ಇರಿಸಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ?

12149086c ಜೀವಂತಮೇನಂ ಪಶ್ಯಾಮಿ ಮನಸಾ ನಾತ್ರ ಸಂಶಯಃ।।
12149087a ವಿನಾಶಶ್ಚಾಪ್ಯನರ್ಹೋಽಸ್ಯ ಸುಖಂ ಪ್ರಾಪ್ಸ್ಯಥ ಮಾನುಷಾಃ।

ಮನುಷ್ಯರೇ! ನಾನು ನನ್ನ ಮನಸ್ಸಿನಲ್ಲಿ ಇವನು ಜೀವಂತನಾಗಿರುವನೆಂದೇ ಕಾಣುತ್ತಿದ್ದೇನೆ. ಇದರಲ್ಲಿ ಸಂಶಯವಿಲ್ಲ. ಇವನ ನಾಶವಾಗಿಲ್ಲ. ನಿಮಗೆ ಅವಶ್ಯವಾಗಿಯೂ ಸುಖವುಂಟಾಗುತ್ತದೆ.

12149087c ಪುತ್ರಶೋಕಾಗ್ನಿದಗ್ಧಾನಾಂ ಮೃತಮಪ್ಯದ್ಯ ವಃ ಕ್ಷಮಮ್।।
12149088a ದುಃಖಸಂಭಾವನಾಂ19 ಕೃತ್ವಾ ಧಾರಯಿತ್ವಾ ಸ್ವಯಂ ಸುಖಮ್।
12149088c ತ್ಯಕ್ತ್ವಾ ಗಮಿಷ್ಯಥ ಕ್ವಾದ್ಯ ಸಮುತ್ಸೃಜ್ಯಾಲ್ಪಬುದ್ಧಿವತ್।।

ಪುತ್ರಶೋಕಾಗ್ನಿಯಲ್ಲಿ ಬೆಂದು ಸ್ವಯಂ ನೀವೂ ಮೃತರಾದವರಂತೆ ಆಗಿಬಿಟ್ಟಿದ್ದೀರಿ. ಆದುದರಿಂದ ಈ ರೀತಿ ನೀವು ಹಿಂದಿರುಗಿ ಹೋಗುವುದು ಉಚಿತವಲ್ಲ. ಇವನಿಗೆ ದುಃಖವನ್ನಿತ್ತು ಸ್ವಯಂ ನೀವು ಸುಖವನ್ನು ಪಡೆದುಕೊಂಡು ಇವನನ್ನು ಇಂದು ಇಲ್ಲಿಯೇ ಬಿಟ್ಟು ಅಲ್ಪಬುದ್ಧಿಯವರಂತೆ ಎಲ್ಲಿಗೆ ಹೋಗುತ್ತಿದ್ದೀರಿ?””

12149089 ಭೀಷ್ಮ ಉವಾಚ।
12149089a ತಥಾ ಧರ್ಮವಿರೋಧೇನ ಪ್ರಿಯಮಿಥ್ಯಾಭಿಧ್ಯಾಯಿನಾ।
12149089c ಶ್ಮಶಾನವಾಸಿನಾ ನಿತ್ಯಂ ರಾತ್ರಿಂ ಮೃಗಯತಾ ತದಾ।।
12149090a ತತೋ ಮಧ್ಯಸ್ಥತಾಂ ನೀತಾ ವಚನೈರಮೃತೋಪಮೈಃ।
12149090c ಜಂಬುಕೇನ ಸ್ವಕಾರ್ಯಾರ್ಥಂ ಬಾಂಧವಾಸ್ತಸ್ಯ ಧಿಷ್ಠಿತಾಃ।।

ಭೀಷ್ಮನು ಹೇಳಿದನು: “ಆ ನರಿಯು ಸದಾ ಶ್ಮಶಾನ ಭೂಮಿಯಲ್ಲಿಯೇ ವಾಸಿಸುತ್ತಿತ್ತು ಮತ್ತು ತನ್ನ ಕಾರ್ಯಸಾಧನೆಗೆ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಆದುದರಿಂದ ಅದು ಧರ್ಮವಿರೋಧೀ, ಸುಳ್ಳು ಮತ್ತು ಅಮೃತಸಮಾನ ಮಾತನ್ನಾಡಿ ಆ ಬಾಲಕನ ಬಾಂಧವರನ್ನು ಮಧ್ಯದಲ್ಲಿಯೇ ಹಿಡಿದಿಟ್ಟುಕೊಂಡಿತ್ತು. ಅವರು ಹೊರಟು ಹೋಗುತ್ತಲೂ ಇರಲಿಲ್ಲ ಮತ್ತು ಅಲ್ಲಿಯೇ ನಿಲ್ಲುತ್ತಲೂ ಇರಲಿಲ್ಲ. ಅಂತ್ಯದಲ್ಲಿ ಅವರಿಗೆ ಅಲ್ಲಿಯೇ ನಿಲ್ಲಬೇಕಾಯಿತು.

12149091 ಗೃಧ್ರ ಉವಾಚ।
12149091a ಅಯಂ ಪ್ರೇತಸಮಾಕೀರ್ಣೋ ಯಕ್ಷರಾಕ್ಷಸಸೇವಿತಃ।
12149091c ದಾರುಣಃ ಕಾನನೋದ್ದೇಶಃ ಕೌಶಿಕೈರಭಿನಾದಿತಃ।।

ಹದ್ದು ಹೇಳಿತು: “ಈ ಪ್ರದೇಶವು ಪ್ರೇತಗಳಿಂದ ತುಂಬಿಕೊಂಡಿದೆ. ಯಕ್ಷ ರಾಕ್ಷಸರು ಇಲ್ಲಿಗೆ ಬರುತ್ತಿರುತ್ತಾರೆ. ಹಲವಾರು ಗೂಬೆಗಳು ಕೂಗಿ ಕರೆಯುತ್ತಿವೆ. ಆದುದರಿಂದ ಈ ಕಾನನ ಪ್ರದೇಶವು ಅತ್ಯಂತ ದಾರುಣವಾಗಿದೆ.

12149092a ಭೀಮಃ ಸುಘೋರಶ್ಚ ತಥಾ ನೀಲಮೇಘಸಮಪ್ರಭಃ।
12149092c ಅಸ್ಮಿನ್ ಶವಂ ಪರಿತ್ಯಜ್ಯ ಪ್ರೇತಕಾರ್ಯಾಣ್ಯುಪಾಸತ।।

ಭಯಂಕರವಾದ ಘೋರವಾದ ಮತ್ತು ನೀಲಮೇಘದ ಸಮನಾದ ಕತ್ತಲೆಯು ಕವಿಯುತ್ತಿದೆ. ಈ ಶವವನ್ನು ಇಲ್ಲಿಯೇ ಬಿಟ್ಟು ನೀವು ಪ್ರೇತಕಾರ್ಯಗಳಲ್ಲಿ ತೊಡಗಿರಿ.

12149093a ಭಾನುರ್ಯಾವನ್ನ ಯಾತ್ಯಸ್ತಂ ಯಾವಚ್ಚ ವಿಮಲಾ ದಿಶಃ।
12149093c ತಾವದೇನಂ ಪರಿತ್ಯಜ್ಯ ಪ್ರೇತಕಾರ್ಯಾಣ್ಯುಪಾಸತ।।

ಸೂರ್ಯನು ಮುಳುಗುವುದರೊಳಗೆ ಮತ್ತು ದಿಕ್ಕುಗಳು ನಿರ್ಮಲವಾಗಿರುವಾಗಿರುವಾಗಲೇ ಇವನನ್ನು ಇಲ್ಲಿಯೇ ಬಿಟ್ಟು ಪ್ರೇತಕಾರ್ಯಗಳಲ್ಲಿ ತೊಡಗಿರಿ.

12149094a ನದಂತಿ ಪರುಷಂ ಶ್ಯೇನಾಃ ಶಿವಾಃ ಕ್ರೋಶಂತಿ ದಾರುಣಾಃ।
12149094c ಮೃಗೇಂದ್ರಾಃ ಪ್ರತಿನಂದಂತಿ ರವಿರಸ್ತಂ ಚ ಗಚ್ಚತಿ।।

ಇಲ್ಲಿ ತೋಳಗಳು ಕ್ರೂರವಾಗಿ ಕೂಗುತ್ತಿವೆ. ನರಿಗಳು ದಾರುಣವಾಗಿ ಕೂಗುತ್ತಿವೆ. ಮೃಗೇಂದ್ರ ಸಿಂಹಗಳು ಗರ್ಜಿಸುತ್ತಿವೆ. ರವಿಯು ಅಸ್ತಂಗತನಾಗುತ್ತಿದ್ದಾನೆ.

12149095a ಚಿತಾಧೂಮೇನ ನೀಲೇನ ಸಂರಜ್ಯಂತೇ ಚ ಪಾದಪಾಃ।
12149095c ಶ್ಮಶಾನೇ ಚ ನಿರಾಹಾರಾಃ ಪ್ರತಿನಂದಂತಿ ದೇಹಿನಃ।।

ಚಿತೆಯ ಕಪ್ಪು ಹೊಗೆಗಳಿಂದ ಇಲ್ಲಿರುವ ವೃಕ್ಷಗಳೂ ಅದೇ ಬಣ್ಣವನ್ನು ಹೊಂದಿವೆ. ಶ್ಮಶಾನದಲ್ಲಿರುವ ನಿರಾಹಾರ ಪ್ರಾಣಿಗಳು ಗರ್ಜಿಸುತ್ತಿವೆ.

12149096a ಸರ್ವೇ ವಿಕ್ರಾಂತವೀರ್ಯಾಶ್ಚ20 ಅಸ್ಮಿನ್ ದೇಶೇ ಸುದಾರುಣಾಃ।
12149096c ಯುಷ್ಮಾನ್ ಪ್ರಧರ್ಷಯಿಷ್ಯಂತಿ ವಿಕೃತಾ ಮಾಂಸಭೋಜನಾಃ।।

ಈ ದಾರುಣ ಪ್ರದೇಶದಲ್ಲಿರುವ ಎಲ್ಲ ಪ್ರಾಣಿಗಳೂ ವಿಕ್ರಾಂತವೀರ್ಯವುಳ್ಳವುಗಳಾಗಿವೆ. ಮಾಂಸಾಹಾರಿಗಳಾದ ಈ ವಿಕೃತ ಪ್ರಾಣಿಗಳು ನಿಮ್ಮನ್ನು ಬೆದರಿಸುತ್ತಿವೆ.

12149097a ದೂರಾಚ್ಚಾಯಂ21 ವನೋದ್ದೇಶೋ ಭಯಮತ್ರ ಭವಿಷ್ಯತಿ।
12149097c ತ್ಯಜ್ಯತಾಂ ಕಾಷ್ಠಭೂತೋಽಯಂ ಮೃಷ್ಯತಾಂ ಜಾಂಬುಕಂ ವಚಃ।।

ಈ ವನಪ್ರದೇಶವು ಕ್ರೂರಮೃಗಗಳಿಂದ ತುಂಬಿಕೊಂಡಿದೆ. ಇನ್ನು ಇಲ್ಲಿ ನಿಮಗೆ ಅತ್ಯಂತ ದೊಡ್ಡ ಭಯವನ್ನು ಎದುರಿಸಬೇಕಾಗುತ್ತದೆ. ಈ ಬಾಲಕನಾದರೋ ಈಗ ಕಟ್ಟಿಗೆಯಂತಾಗಿಬಿಟ್ಟಿದ್ದಾನೆ. ಇವನನ್ನು ಬಿಟ್ಟುಬಿಡಿ ಮತ್ತು ನರಿಯ ಮಾತಿನ ಲೋಭಕ್ಕೆ ಸಿಲುಕಿಕೊಳ್ಳಬೇಡಿ.

12149098a ಯದಿ ಜಂಬುಕವಾಕ್ಯಾನಿ ನಿಷ್ಫಲಾನ್ಯನೃತಾನಿ ಚ।
12149098c ಶ್ರೋಷ್ಯಥ ಭ್ರಷ್ಟವಿಜ್ಞಾನಾಸ್ತತಃ ಸರ್ವೇ ವಿನಂಕ್ಷ್ಯಥ।।

ಒಂದು ವೇಳೆ ನೀವು ವಿವೇಕಭ್ರಷ್ಟರಾಗಿ ನರಿಯ ಸುಳ್ಳು ಮತ್ತು ನಿಷ್ಫಲ ಮಾತುಗಳನ್ನು ಕೇಳುತ್ತಾ ಇದ್ದರೆ ಎಲ್ಲರೂ ನಾಶವಾಗಿ ಹೋಗುತ್ತೀರಿ.”

12149099 ಜಂಬುಕ ಉವಾಚ।
12149099a ಸ್ಥೀಯತಾಂ ನೇಹ ಭೇತವ್ಯಂ ಯಾವತ್ತಪತಿ ಭಾಸ್ಕರಃ।
12149099c ತಾವದಸ್ಮಿನ್ಸುತಸ್ನೇಹಾದನಿರ್ವೇದೇನ ವರ್ತತ।।
12149100a ಸ್ವೈರಂ ರುದತ ವಿಸ್ರಬ್ಧಾಃ ಸ್ವೈರಂ ಸ್ನೇಹೇನ ಪಶ್ಯತ। 12149100c 22ಸ್ಥೀಯತಾಂ ಯಾವದಾದಿತ್ಯಃ ಕಿಂ ವಃ ಕ್ರವ್ಯಾದಭಾಷಿತೈಃ।।

ನರಿಯು ಹೇಳಿತು: “ನಿಲ್ಲಿ! ಹೆದರಬೇಡಿ! ಎಲ್ಲಿಯವರೆಗೆ ಭಾಸ್ಕರನು ಬೆಳಕನ್ನು ನೀಡುತ್ತಾನೋ ಅಲ್ಲಿಯವರೆಗೆ ನೀವು ಸ್ವಲ್ಪವೂ ಹೆದರಬೇಕಾಗಿಲ್ಲ. ಅಲ್ಲಿಯವರೆಗೆ ಈ ಬಾಲಕನ ಮೇಲಿರುವ ನಿಮ್ಮ ಸ್ನೇಹವನ್ನು ತೋರಿಸಿ ಮಮತಾಪೂರ್ಣರಾಗಿ ನಡೆದುಕೊಳ್ಳಿ. ನಿರ್ಭಯರಾಗಿ ದೀರ್ಘಕಾಲದವರೆಗೆ ಸ್ನೇಹದೃಷ್ಟಿಯಿಂದ ನೋಡಿರಿ ಮತ್ತು ಬೇಕಾದಷ್ಟು ರೋದಿಸಿರಿ. ಆದಿತ್ಯನು ಕಾಣುವವರೆಗೆ ಇಲ್ಲಿಯೇ ನಿಲ್ಲಿ. ಈ ಮಾಂಸಾಹಾರೀ ಹದ್ದಿನ ಮಾತಿನಿಂದೇನಾಗಬೇಕಾಗಿದೆ?

12149101a ಯದಿ ಗೃಧ್ರಸ್ಯ ವಾಕ್ಯಾನಿ ತೀವ್ರಾಣಿ ರಭಸಾನಿ ಚ।
12149101c ಗೃಹ್ಣೀತ ಮೋಹಿತಾತ್ಮಾನಃ ಸುತೋ ವೋ ನ ಭವಿಷ್ಯತಿ।।

ಒಂದು ವೇಳೆ ನೀವು ಈ ಹದ್ದಿನ ತೀವ್ರವೂ ರಭಸವೂ ಆದ ಮಾತುಗಳನ್ನು ಸ್ವೀಕರಿಸಿ ಮೋಹಿತಾತ್ಮರಾದರೆ ನಿಮ್ಮ ಈ ಸುತನಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ.””

12149102 ಭೀಷ್ಮ ಉವಾಚ।
12149102a ಗೃಧ್ರೋಽನಸ್ತಮಿತೇ ತ್ವಾಹ ಗತೇಽಸ್ತಮಿತಿ ಜಂಬುಕಃ।
12149102c ಮೃತಸ್ಯ ತಂ ಪರಿಜನಮೂಚತುಸ್ತೌ ಕ್ಷುಧಾನ್ವಿತೌ।।

ಭೀಷ್ಮನು ಹೇಳಿದನು: “ಆ ಹದ್ದು ಮತ್ತು ನರಿಗಳು ಹಸಿದಿದ್ದವು ಮತ್ತು ತಮ್ಮ ಉದ್ದೇಶ ಸಾಧನೆಗಾಗಿ ಮೃತಕನ ಬಂಧುಗಳೊಂದಿಗೆ ಹೀಗೆ ಮಾತನಾಡುತ್ತಿದ್ದವು. ಹದ್ದು ಸೂರ್ಯಾಸ್ತವಾಗಿ ಹೋಯಿತು ಎಂದು ಹೇಳುತ್ತಿತ್ತು ಮತ್ತು ನರಿಯು ಇನ್ನೂ ಸೂರ್ಯಾಸ್ತವಾಗಿಲ್ಲ ಎಂದು ಹೇಳುತ್ತಿತ್ತು.

12149103a ಸ್ವಕಾರ್ಯದಕ್ಷಿಣೌ ರಾಜನ್ ಗೃಧ್ರೋ ಜಂಬುಕ ಏವ ಚ।
12149103c ಕ್ಷುತ್ಪಿಪಾಸಾಪರಿಶ್ರಾಂತೌ ಶಾಸ್ತ್ರಮಾಲಂಬ್ಯ ಜಲ್ಪತಃ।।

ರಾಜನ್! ಹದ್ದು ಮತ್ತು ನರಿ ತಮ್ಮ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವುದರಲ್ಲಿ ಕಂಕಣಬದ್ಧರಾಗಿದ್ದರು. ಅವರಿಬ್ಬರನ್ನೂ ಹಸಿವು ಬಾಯಾರಿಕೆಗಳು ಕಾಡುತ್ತಿದ್ದವು ಮತ್ತು ಇಬ್ಬರೂ ಶಾಸ್ತ್ರಗಳನ್ನು ಆಧರಿಸಿ ಮಾತನಾಡುತ್ತಿದ್ದವು.

12149104a ತಯೋರ್ವಿಜ್ಞಾನವಿದುಷೋರ್ದ್ವಯೋರ್ಜಂಬುಕಪತ್ರಿಣೋಃ23
12149104c ವಾಕ್ಯೈರಮೃತಕಲ್ಪೈರ್ಹಿ ಪ್ರಾತಿಷ್ಠಂತ ವ್ರಜಂತಿ ಚ।।

ಅವುಗಳಲ್ಲಿ ಒಂದು ನರಿಯಾಗಿತ್ತು ಮತ್ತು ಇನ್ನೊಂದು ಪಕ್ಷಿಯಾಗಿತ್ತು. ಅವೆರಡೂ ಜ್ಞಾನದ ಮಾತುಗಳನ್ನು ತಿಳಿದಿದ್ದವು. ಆ ಇಬ್ಬರ ಅಮೃತರೂಪೀ ಮಾತುಗಳಿಂದ ಪ್ರಭಾವಿತರಾಗಿ ಆ ಮೃತಕನ ಮನುಷ್ಯ ಬಾಂಧವರು ಒಮ್ಮೆ ಅಲ್ಲಿಯೇ ನಿಲ್ಲುತ್ತಿದ್ದರು ಮತ್ತು ಕೆಲವೊಮ್ಮೆ ಹಿಂದಿರುಗಿ ಹೋಗುತ್ತಿದ್ದರು.

12149105a ಶೋಕದೈನ್ಯಸಮಾವಿಷ್ಟಾ ರುದಂತಸ್ತಸ್ಥಿರೇ ತದಾ।
12149105c ಸ್ವಕಾರ್ಯಕುಶಲಾಭ್ಯಾಂ ತೇ ಸಂಭ್ರಾಮ್ಯಂತೇ ಹ ನೈಪುಣಾತ್।।

ಶೋಕ ಮತ್ತು ದೈನ್ಯತೆಯಿಂದ ಆವಿಷ್ಟರಾಗಿ ಅವರು ರೋದಿಸುತ್ತಾ ಅಲ್ಲಿಯೇ ನಿಂತುಕೊಂಡರು. ತಮ್ಮ ತಮ್ಮ ಕಾರ್ಯಸಿದ್ಧಿಯನ್ನು ಮಾಡಿಕೊಳ್ಳುವುದರಲ್ಲಿ ಕುಶಲರಾಗಿದ್ದ ಹದ್ದು ಮತ್ತು ನರಿಗಳು ನಿಪುಣತೆಯಿಂದ ಅವರನ್ನು ಚಕ್ರದಂತೆ ತಿರುಗಿಸುತ್ತಿದ್ದರು.

12149106a ತಥಾ ತಯೋರ್ವಿವದತೋರ್ವಿಜ್ಞಾನವಿದುಷೋರ್ದ್ವಯೋಃ।
12149106c ಬಾಂಧವಾನಾಂ ಸ್ಥಿತಾನಾಂ ಚ ಉಪಾತಿಷ್ಠತ ಶಂಕರಃ।।
12149107a ತತಸ್ತಾನಾಹ ಮನುಜಾನ್ವರದೋಽಸ್ಮೀತಿ ಶೂಲಭೃತ್।

ಜ್ಞಾನ-ವಿಜ್ಞಾನದ ವಿಷಯಗಳನ್ನು ತಿಳಿದಿದ್ದ ಆ ಎರಡೂ ಜಂತುಗಳ ನಡುವೆ ಈ ರೀತಿ ವಾದ-ವಿವಾದವು ನಡೆಯುತ್ತಿದ್ದಾಗ ಮೃತಕನ ಬಾಂಧವರು ಅಲ್ಲಿಯೇ ನಿಂತಿದ್ದರು. ಇಷ್ಟರಲ್ಲಿಯೇ ದೇವಿಯಿಂದ ಪ್ರೇರಿತನಾದ ದೇವ ಶಂಕರನು ಅವರ ಎದಿರು ಪ್ರಕಟನಾದನು. ಅವನ ಕಣ್ಣುಗಳು ಕರುಣಾರಸದಿಂದ ಒದ್ದೆಯಾಗಿತ್ತು. ವರದಾಯಕ ಶಂಕರನು ಆ ಮನುಷ್ಯರಿಗೆ “ನಿಮಗೆ ವರವನ್ನು ನೀಡುತ್ತೇನೆ” ಎಂದು ಹೇಳಿದನು.

12149107c ತೇ ಪ್ರತ್ಯೂಚುರಿದಂ ವಾಕ್ಯಂ ದುಃಖಿತಾಃ ಪ್ರಣತಾಃ ಸ್ಥಿತಾಃ।।
12149108a ಏಕಪುತ್ರವಿಹೀನಾನಾಂ ಸರ್ವೇಷಾಂ ಜೀವಿತಾರ್ಥಿನಾಮ್।
12149108c ಪುತ್ರಸ್ಯ ನೋ ಜೀವದಾನಾಜ್ಜೀವಿತಂ ದಾತುಮರ್ಹಸಿ।।

ಆಗ ಆ ದುಃಖಿತ ಮನುಷ್ಯರು ಭಗವಂತನಿಗೆ ಪ್ರಣಮಿಸಿ ಎದ್ದು ನಿಂತು ಹೀಗೆ ಹೇಳಿದರು: “ಪ್ರಭೋ! ಈ ಒಬ್ಬನೇ ಮಗನಿಂದ ವಿಹೀನರಾಗಿ ನಾವು ಮೃತರಾದಂತೆಯೇ ಆಗಿಬಿಟ್ಟಿದ್ದೇವೆ. ನೀನು ನಮ್ಮ ಈ ಪುತ್ರನನ್ನು ಜೀವಿತಗೊಳಿಸಿ ಜೀವನಾರ್ಥಿಗಳಾದ ನಮ್ಮೆಲ್ಲರಿಗೂ ಜೀವನದಾನದ ಕೃಪೆ ಮಾಡು.”

12149109a ಏವಮುಕ್ತಃ ಸ ಭಗವಾನ್ವಾರಿಪೂರ್ಣೇನ ಪಾಣಿನಾ24
12149109c ಜೀವಂ ತಸ್ಮೈ ಕುಮಾರಾಯ ಪ್ರಾದಾದ್ವರ್ಷಶತಾಯ ವೈ।।

ನೀರು ತುಂಬಿದ ಕಣ್ಣುಗಳುಳ್ಳ ಅವರು ಭಗವಂತನಿಗೆ ಹೀಗೆ ಹೇಳಲು ಅವನು ಆ ಬಾಲಕನನ್ನು ಜೀವಿತಗೊಳಿಸಿದನು ಮತ್ತು ಅವನಿಗೆ ನೂರು ವರ್ಷಗಳ ಆಯುಷ್ಯವನ್ನು ದಯಪಾಲಿಸಿದನು.

12149110a ತಥಾ ಗೋಮಾಯುಗೃಧ್ರಾಭ್ಯಾಮದದತ್ ಕ್ಷುದ್ವಿನಾಶನಮ್।
12149110c ವರಂ ಪಿನಾಕೀ ಭಗವಾನ್ಸರ್ವಭೂತಹಿತೇ ರತಃ।।

ಇಷ್ಟೇ ಅಲ್ಲದೇ ಸರ್ವಭೂತಹಿತಕಾರೀ ಪಿನಾಕಪಾಣೀ ಭಗವಾನ್ ಶಿವನು ಹದ್ದು ಮತ್ತು ನರಿಗಳಿಗೆ ಅವರ ಹಸಿವೆಯು ನೀಗುವಂತೆ ವರವನ್ನಿತ್ತನು.

12149111a ತತಃ ಪ್ರಣಮ್ಯ ತಂ ದೇವಂ ಶ್ರೇಯೋ25ಹರ್ಷಸಮನ್ವಿತಾಃ।
12149111c ಕೃತಕೃತ್ಯಾಃ ಸುಖಂ ಹೃಷ್ಟಾಃ ಪ್ರಾತಿಷ್ಠಂತ ತದಾ ವಿಭೋ।।

ವಿಭೋ! ಆಗ ಅವರೆಲ್ಲರೂ ಶ್ರೇಯ-ಹರ್ಷಗಳಿಂದ ಉಲ್ಲಸಿತರಾಗಿ ಕೃತಕೃತ್ಯರಾಗಿ ಮಹಾದೇವನನ್ನು ಪ್ರಣಮಿಸಿದರು ಮತ್ತು ಸುಖ ಹಾಗೂ ಪ್ರಸನ್ನತೆಗಳೊಂದಿಗೆ ಅಲ್ಲಿಂದ ಹೊರಟರು.

12149112a ಅನಿರ್ವೇದೇನ ದೀರ್ಘೇಣ ನಿಶ್ಚಯೇನ ಧ್ರುವೇಣ ಚ।
12149112c ದೇವದೇವಪ್ರಸಾದಾಚ್ಚ ಕ್ಷಿಪ್ರಂ ಫಲಮವಾಪ್ಯತೇ।।

ವೇದನೆಗಳಿಗೊಳಗಾಗದೇ ದೃಢ ಮತ್ತು ಪ್ರಬಲ ನಿಶ್ಚಯದಿಂದ ಪ್ರಯತ್ನಮಾಡಿದರೆ ದೇವಾಧಿದೇವನ ಪ್ರಸಾದದಿಂದ ಬೇಗನೇ ಫಲವನ್ನು ಪಡೆದುಕೊಳ್ಳುತ್ತಾರೆ.

12149113a ಪಶ್ಯ ದೇವಸ್ಯ ಸಂಯೋಗಂ ಬಾಂಧವಾನಾಂ ಚ ನಿಶ್ಚಯಮ್।
12149113c ಕೃಪಣಾನಾಂ ಹಿ ರುದತಾಂ ಕೃತಮಶ್ರುಪ್ರಮಾರ್ಜನಮ್।।
12149114a ಪಶ್ಯ ಚಾಲ್ಪೇನ ಕಾಲೇನ ನಿಶ್ಚಯಾನ್ವೇಷಣೇನ ಚ।

ದೈವಸಂಯೋಗ ಮತ್ತು ಆ ಬಂಧು-ಬಾಂಧವರ ದೃಢ ನಿಶ್ಚಯವನ್ನು ನೋಡು! ಇದರಿಂದಾಗಿ ಸ್ವಲ್ಪವೇ ಸಮಯದಲ್ಲಿ ದೀನತಾಪೂರ್ವಕವಾಗಿ ರೋದಿಸುತ್ತಿದ್ದ ಆ ಮನುಷ್ಯರ ಕಣ್ಣೀರನ್ನು ಒರೆಸಲಾಯಿತು. ಇದು ಅವರು ನಿಶ್ಚಯಪೂರ್ವಕವಾಗಿ ಮಾಡಿದ ಅನುಸಂಧಾನ ಮತ್ತು ಪ್ರಯತ್ನದ ಫಲವು.

12149114c ಪ್ರಸಾದಂ ಶಂಕರಾತ್ಪ್ರಾಪ್ಯ ದುಃಖಿತಾಃ ಸುಖಮಾಪ್ನುವನ್।।
12149115a ತೇ ವಿಸ್ಮಿತಾಃ ಪ್ರಹೃಷ್ಟಾಶ್ಚ ಪುತ್ರಸಂಜೀವನಾತ್ಪುನಃ।

ಶಂಕರನ ಕೃಪೆಯಿಂದಾಗಿ ಆ ದುಃಖಿತ ಜನರು ಸುಖವನ್ನು ಪಡೆದುಕೊಂಡರು. ಪುತ್ರನು ಪುನರ್ಜೀವಿತನಾದ ಆ ಆಶ್ಚರ್ಯವನ್ನು ಕಂಡು ಪ್ರಹೃಷ್ಟರೂ ವಿಸ್ಮಿತರೂ ಆದರು.

12149115c ಬಭೂವುರ್ಭರತಶ್ರೇಷ್ಠ ಪ್ರಸಾದಾಚ್ಚಂಕರಸ್ಯ ವೈ।।
12149116a ತತಸ್ತೇ ತ್ವರಿತಾ ರಾಜನ್ ಶ್ರುತ್ವಾ ಶೋಕಮಘೋದ್ಭವಮ್।
12149116c ವಿವಿಶುಃ ಪುತ್ರಮಾದಾಯ ನಗರಂ ಹೃಷ್ಟಮಾನಸಾಃ।।

ಭರತಶ್ರೇಷ್ಠ! ರಾಜನ್! ಶಂಕರನ ಪ್ರಸಾದದಿಂದ ಆ ಎಲ್ಲರೂ ಪುತ್ರಶೋಕವನ್ನು ತ್ಯಜಿಸಿ ಪ್ರಸನ್ನಚಿತ್ತರಾಗಿ ಪುತ್ರನನ್ನು ಜೊತೆಯಲ್ಲಿ ಕರೆದುಕೊಂಡು ತಮ್ಮ ನಗರವನ್ನು ಪ್ರವೇಶಿಸಿದರು.

12149116E ಏಷಾ ಬುದ್ಧಿಃ ಸಮಸ್ತಾನಾಂ ಚಾತುರ್ವರ್ಣ್ಯೇ ನಿದರ್ಶಿತಾ 12149117a ಧರ್ಮಾರ್ಥಮೋಕ್ಷಸಂಯುಕ್ತಮಿತಿಹಾಸಮಿಮಂ ಶುಭಮ್।
12149117c ಶ್ರುತ್ವಾ ಮನುಷ್ಯಃ ಸತತಮಿಹ ಪ್ರೇತ್ಯ ಚ ಮೋದತೇ।।

ಚಾತುರ್ವರ್ಣ್ಯದವರೆಲ್ಲರಿಗೂ ಇದು ಬುದ್ಧಿ ಪ್ರದರ್ಶಕವಾಗಿದೆ. ಧರ್ಮ, ಅರ್ಥ ಮತ್ತು ಮೋಕ್ಷಯುಕ್ತವಾದ ಈ ಶುಭ ಇತಿಹಾಸವನ್ನು ಸದಾ ಕೇಳುವುದರಿಂದ ಮನುಷ್ಯನು ಇಹ ಮತ್ತು ಪರಲೋಕಗಳಲ್ಲಿ ಆನಂದವನ್ನು ಅನುಭವಿಸುತ್ತಾನೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಗೃಧ್ರಗೋಮಾಯುಸಂವಾದೇ ಕುಮಾರಸಂಜೀವನೇ ಏಕೋನಪಂಚಾಶದಧಿಕಶತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಗೃಧ್ರಗೋಮಾಯುಸಂವಾದೇ ಕುಮಾರಸಂಜೀವನ ಎನ್ನುವ ನೂರಾನಲ್ವತ್ತೊಂಭತ್ತನೇ ಅಧ್ಯಾಯವು.

  1. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಯುಧಿಷ್ಠಿರ ಉವಾಚ। ಕಚ್ಚಿತ್ಪಿತಾಮಹೇನಾಸೀಚ್ಛೃತಂ ವಾ ದೃಷ್ಟಮೇವ ಚ। ಕಚ್ಚಿನ್ಮರ್ತ್ಯೋ ಮೃತೋ ರಾಜನ್ ಪುನರುಜ್ಜೀವಿತೋಽಭವತ್।। ↩︎

  2. ನೈಮಿಷೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  3. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಕಸ್ಯಾಚಿದ್ಬ್ರಾಹ್ಮಣಸ್ಯಾಸೀದ್ದುಃಖಲಬ್ಧಃ ಸುತೋ ಮೃತಃ। ಬಾಲ ಏವ ವಿಶಾಲಾಕ್ಷೋ ಬಾಲಗ್ರಹನಿಪೀಡಿತಃ।। ↩︎

  4. ರುರುದುರ್ಭೃಶದುಃಖಿತಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  5. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಶೋಚಂತಸ್ತಸ್ಯ ಪೂರ್ವೋಕ್ತಾನ್ ಭಾಷಿತಾಂಶ್ಚಾಸಕೃತ್ ಪುನಃ। ತಂ ಬಾಲಂ ಭೂತಲೇ ಕ್ಷಿಪ್ಯ ಪ್ರತಿಗಂತುಂ ನ ಶಕ್ನುಯುಃ।। ↩︎

  6. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ವಿನಿಷ್ಚಿತ್ಯಾಥ ಚ ತದಾ ವಿಕೋಶಂತಸ್ತತಸ್ತತಃ। ಮೃತಮಿತ್ಯೇವ ಗಚ್ಛಂತೋ ನಿರಾಶಾಸ್ತಸ್ಯ ದರ್ಶನೇ।। ↩︎

  7. ಧ್ವಾಂಕ್ಷಪಕ್ಷಸವರ್ಣಸ್ತು ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  8. ತೇ ಪಶ್ಯತ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  9. ಕಮಲದ ದಳದಳಗಳಂತಹ ವಿಶಾಲ ಮತ್ತು ಚಂಚಲ ಕಣ್ಣುಗಳಿರುವ ↩︎

  10. ಬಾಲೋಽಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  11. ನ ಚಾಧರ್ಮೇ ಮನಃ ಕೃಥಾಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  12. ತಥಾ ಕರ್ಮ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  13. ಜಂಗಮಾನಾಂ ನಗಾನಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  14. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ಶೋಕೋ ದ್ವಿಗುಣತಾಂ ಯಾತ್ ದೃಷ್ಟ್ವಾ ಸ್ಮೃತ್ವಾ ಚ ಚೇಷ್ಟಿತಮ್। ಇತ್ಯೇತದ್ವಚನಂ ಶೃತ್ವಾ ಸಂನಿವೃತ್ತಾಸ್ತು ಮಾನುಷಾಃ। ಅಪಶ್ಯತ್ತಂ ತದಾ ಸುಪ್ತಂ ದ್ರುತಮಾಗತ್ಯ ಜಂಬುಕಃ।। ↩︎

  15. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತೇಷಾಂ ರುದಿತಶಬ್ದೇನ ಗೃಧ್ರೋಽಭ್ಯೇತ್ಯ ವಚೋಽಬ್ರವೀತ್। ↩︎

  16. ಧನವಂತೋ ಮಹಾಧಿಯಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  17. ಸರ್ವೇ ಮೃತ್ಯುವಶಂ ಯಾಂತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  18. ಕುಲಶೋಭಾಕರಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  19. ಸುಖಸಂಭಾವನಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  20. ವಿಕ್ರಾಂತದೇಹಾಶ್ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  21. ಕ್ರೂರಶ್ಚಾಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  22. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದಾರುಣೇಽಸ್ಮಿನ್ವನೋದ್ದೇಶೇ ಭಯಂ ವೋ ನ ಭವಿಷ್ಯತಿ। ಅಯಂ ಸೌಮ್ಯೋ ವನೋದ್ದೇಶೇ ಪಿತೄಣಾಂ ನಿಧನಾಕರಃ।। ↩︎

  23. ಮೃಗಪತತ್ರಿಣೋಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  24. ಚಕ್ಷುಷಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ. ↩︎

  25. ಪ್ರಾಯೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎