145: ಲುಬ್ಧಕಸ್ವರ್ಗಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 145

ಸಾರ

ವ್ಯಾಧನಿಗೆ ಸ್ವರ್ಗಲೋಕಪ್ರಾಪ್ತಿ (1-18).

12145001 ಭೀಷ್ಮ ಉವಾಚ।
12145001a ವಿಮಾನಸ್ಥೌ ತು ತೌ ರಾಜಽಲ್ಲುಬ್ಧಕೋ ವೈ ದದರ್ಶ ಹ।
12145001c ದೃಷ್ಟ್ವಾ ತೌ ದಂಪತೀ ದುಃಖಾದಚಿಂತಯತ ಸದ್ಗತಿಮ್।।

ಭೀಷ್ಮನು ಹೇಳಿದನು: “ರಾಜನ್! ಅವರಿಬ್ಬರೂ ವಿಮಾನಸ್ಥರಾಗಿದ್ದುದನ್ನು ವ್ಯಾಧನು ನೋಡಿದನು. ಆ ದಂಪತಿಗಳನ್ನು ನೋಡಿ ದುಃಖದಿಂದ ಅವನು ಸದ್ಗತಿಯ ಕುರಿತು ಚಿಂತಿಸತೊಡಗಿದನು.

12145002a ಕೀದೃಶೇನೇಹ1 ತಪಸಾ ಗಚ್ಚೇಯಂ ಪರಮಾಂ ಗತಿಮ್।
12145002c ಇತಿ ಬುದ್ಧ್ಯಾ ವಿನಿಶ್ಚಿತ್ಯ ಗಮನಾಯೋಪಚಕ್ರಮೇ।।
12145003a ಮಹಾಪ್ರಸ್ಥಾನಮಾಶ್ರಿತ್ಯ ಲುಬ್ಧಕಃ ಪಕ್ಷಿಜೀವನಃ।
12145003c ನಿಶ್ಚೇಷ್ಟೋ ಮಾರುತಾಹಾರೋ ನಿರ್ಮಮಃ ಸ್ವರ್ಗಕಾಂಕ್ಷಯಾ।।

ನಾನೂ ಕೂಡ ಇಂತಹ ತಪಸ್ಸನ್ನಾಚರಿಸಿ ಪರಮಗತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಬುದ್ಧಿಯಿಂದ ನಿಶ್ಚಯಿಸಿ ಪಕ್ಷಿಗಳನ್ನು ಹಿಡಿದು ಜೀವನ ನಡೆಸುತ್ತಿದ್ದ ಆ ವ್ಯಾಧನು ಮಹಾಪ್ರಸ್ಥಾನವನ್ನಾಶ್ರಯಿಸಿ ಹೊರಟನು. ಅವನು ನಿಶ್ಚೇಷ್ಟನಾದನು. ಕೇವಲ ಗಾಳಿಯನ್ನೇ ಸೇವಿಸಿದನು. ಸ್ವರ್ಗದ ಆಕಾಂಕ್ಷೆಯಿಂದ ಮಮಕಾರವನ್ನು ತೊರೆದನು.

12145004a ತತೋಽಪಶ್ಯತ್ಸುವಿಸ್ತೀರ್ಣಂ ಹೃದ್ಯಂ ಪದ್ಮವಿಭೂಷಿತಮ್।
12145004c ನಾನಾದ್ವಿಜಗಣಾಕೀರ್ಣಂ ಸರಃ ಶೀತಜಲಂ ಶುಭಮ್।

ನಂತರ ಅವನು ಕಮಲಗಳಿಂದ ವಿಭೂಷಿತವಾಗಿದ್ದ ಒಂದು ವಿಸ್ತಾರವಾದ ಮನೋಹರ ಸರೋವರವನ್ನು ಕಂಡನು. ನಾನಾ ಪ್ರಕಾರದ ಜಲಪಕ್ಷಿಗಳು ಅಲ್ಲಿ ಕಲರವವನ್ನುಂಟುಮಾಡುತ್ತಿದ್ದವು. ಆ ಸರೋವರದಲ್ಲಿ ಶುಭ ಶೀತಜಲವಿತ್ತು.

12145004e ಪಿಪಾಸಾರ್ತೋಽಪಿ ತದ್ದೃಷ್ಟ್ವಾ ತೃಪ್ತಃ ಸ್ಯಾನ್ನಾತ್ರ ಸಂಶಯಃ।।
12145005a ಉಪವಾಸಕೃಶೋಽತ್ಯರ್ಥಂ ಸ ತು ಪಾರ್ಥಿವ ಲುಬ್ಧಕಃ।
12145005c ಉಪಸರ್ಪತ ಸಂಹೃಷ್ಟಃ ಶ್ವಾಪದಾಧ್ಯುಷಿತಂ ವನಮ್।।
12145006a ಮಹಾಂತಂ ನಿಶ್ಚಯಂ ಕೃತ್ವಾ ಲುಬ್ಧಕಃ ಪ್ರವಿವೇಶ ಹ।
12145006c ಪ್ರವಿಶನ್ನೇವ ಚ ವನಂ ನಿಗೃಹೀತಃ ಸ ಕಂಟಕೈಃ।।
12145007a ಸ ಕಂಟಕವಿಭುಗ್ನಾಂಗೋ ಲೋಹಿತಾರ್ದ್ರೀಕೃತಚ್ಚವಿಃ।

ಪಾರ್ಥಿವ! ಆ ಸರೋವರವು ಬಾಯಾರಿಕೆಯಿಂದ ಎಷ್ಟೇ ಪೀಡಿತನಾದವನಿಗೂ ನೋಡಿದ ಮಾತ್ರಕ್ಕೇ ತೃಪ್ತನಾಗುವಂತಿತ್ತು. ಆ ವ್ಯಾಧನಾದರೋ ಉಪವಾಸದಿಂದ ಅತ್ಯಂತ ದುರ್ಬಲನಾಗಿಬಿಟ್ಟಿದ್ದನು. ಆದರೂ ಅವನು ಸರೋವರದ ಕಡೆ ದೃಷ್ಟಿಯನ್ನೂ ಹಾಯಿಸದೇ ಅತ್ಯಂತ ಹರ್ಷದೊಂದಿಗೆ ಕ್ರೂರ ಪ್ರಾಣಿಗಳಿಂದ ತುಂಬಿದ್ದ ವನವನ್ನು ಪ್ರವೇಶಿಸಿದನು. ಮಹಾ ಅಂತ್ಯದ ನಿಶ್ಚಯವನ್ನು ಮಾಡಿ ವ್ಯಾಧನು ಆ ವನವನ್ನು ಪ್ರವೇಶಿಸಿದನು. ಪ್ರವೇಶಿಸುತ್ತಲೇ ಮುಳ್ಳಿನ ಪೊದೆಗಳಲ್ಲಿ ಸಿಲುಕಿಹಾಕಿಕೊಂಡನು. ಮುಳ್ಳುಗಳಿಂದ ಅವನ ಶರೀರವೆಲ್ಲಾ ಗಾಯಗೊಂಡು ರಕ್ತಸುರಿಯಲು ಪ್ರಾರಂಭಿಸಿತು.

12145007c ಬಭ್ರಾಮ ತಸ್ಮಿನ್ವಿಜನೇ ನಾನಾಮೃಗಸಮಾಕುಲೇ।।
12145008a ತತೋ ದ್ರುಮಾಣಾಂ ಮಹತಾಂ ಪವನೇನ ವನೇ ತದಾ।
12145008c ಉದತಿಷ್ಠತ ಸಂಘರ್ಷಾತ್ಸುಮಹಾನ್ ಹವ್ಯವಾಹನಃ।।
12145009a ತದ್ವನಂ ವೃಕ್ಷಸಂಕೀರ್ಣಂ ಲತಾವಿಟಪಸಂಕುಲಮ್।
12145009c ದದಾಹ ಪಾವಕಃ ಕ್ರುದ್ಧೋ ಯುಗಾಂತಾಗ್ನಿಸಮಪ್ರಭಃ।।

ನಾನಾಮೃಗ ಸಂಕುಲಗಳಿಂದ ತುಂಬಿದ್ದ ಆ ನಿರ್ಜನ ವನದಲ್ಲಿ ಅವನು ಅಲಿಂದಿಲ್ಲಿಗೆ ಸುತ್ತಾಡತೊಡಗಿದನು. ಅಷ್ಟರಲ್ಲಿಯೇ ಪ್ರಚಂಡ ಗಾಳಿಯು ಬೀಸಿ ವನದಲ್ಲಿದ್ದ ದೊಡ್ಡ ದೊಡ್ಡ ಮರಗಳು ಒಂದಕ್ಕೊಂದು ತಾಗಿ ಅತಿ ದೊಡ್ಡ ಕಾಡಾಗ್ನಿಯು ಹುಟ್ಟಿಕೊಂಡಿತು. ಬೆಂಕಿಯ ದೊಡ್ಡ ದೊಡ್ಡ ಜ್ವಾಲೆಗಳು ಮೇಲೇಳತೊಡಗಿದವು. ಪ್ರಲಯಕಾಲದ ಸಂವರ್ತಕ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಆ ಕುಪಿತ ಅಗ್ನಿದೇವನು ಲತೆಗಳು, ಪೊದೆಗಳು ಮತ್ತು ವೃಕ್ಷಗಳಿಂದ ವ್ಯಾಪ್ತವಾಗಿದ್ದ ಆ ವನವನ್ನು ಸುಡಲು ತೊಡಗಿದನು.

12145010a ಸಜ್ವಾಲೈಃ ಪವನೋದ್ಧೂತೈರ್ವಿಸ್ಫುಲಿಂಗೈಃ ಸಮನ್ವಿತಃ।
12145010c ದದಾಹ ತದ್ವನಂ ಘೋರಂ ಮೃಗಪಕ್ಷಿಸಮಾಕುಲಮ್।।

ಗಾಳಿಯಿಂದ ಮೇಲೆದ್ದ ಕಿಡಿಗಳಿಂದ ಮತ್ತು ಜ್ವಾಲೆಗಳಿಂದ ಸಮನ್ವಿತನಾದ ಅಗ್ನಿಯು ಘೋರ ಮೃಗಪಕ್ಷಿಗಳಿಂದ ಕೂಡಿದ್ದ ಆ ವನವನ್ನು ಸುಟ್ಟನು.

12145011a ತತಃ ಸ ದೇಹಮೋಕ್ಷಾರ್ಥಂ ಸಂಪ್ರಹೃಷ್ಟೇನ ಚೇತಸಾ।
12145011c ಅಭ್ಯಧಾವತ ಸಂವೃದ್ಧಂ ಪಾವಕಂ ಲುಬ್ಧಕಸ್ತದಾ।।

ಆಗ ದೇಹಮೋಕ್ಷಕ್ಕಾಗಿ ಪ್ರಹೃಷ್ಟ ಚೇತನನಾದ ವ್ಯಾಧನು ಜೋರಾಗಿ ಉರಿಯುತ್ತಿದ್ದ ಬೆಂಕಿಯ ಕಡೆ ಓಡಿದನು.

12145012a ತತಸ್ತೇನಾಗ್ನಿನಾ ದಗ್ಧೋ ಲುಬ್ಧಕೋ ನಷ್ಟಕಿಲ್ಬಿಷಃ।
12145012c ಜಗಾಮ ಪರಮಾಂ ಸಿದ್ಧಿಂ ತದಾ ಭರತಸತ್ತಮ।।

ಭರತಸತ್ತಮ! ಆ ಅಗ್ನಿಯಿಂದ ಸುಟ್ಟ ವ್ಯಾಧನು ಪಾಪಗಳನ್ನು ಕಳೆದುಕೊಂಡು ಪರಮ ಸಿದ್ಧಿಯನ್ನು ಪಡೆದುಕೊಂಡನು.

12145013a ತತಃ ಸ್ವರ್ಗಸ್ಥಮಾತ್ಮಾನಂ ಸೋಽಪಶ್ಯದ್ವಿಗತಜ್ವರಃ।
12145013c ಯಕ್ಷಗಂಧರ್ವಸಿದ್ಧಾನಾಂ ಮಧ್ಯೇ ಭ್ರಾಜಂತಮಿಂದ್ರವತ್।।

ಅನಂತರ ತಾನು ವಿಗತಜ್ವರನಾಗಿ ಸ್ವರ್ಗಸ್ಥನಾಗಿ ಯಕ್ಷಗಂಧರ್ವಸಿದ್ಧರ ಮಧ್ಯೆ ಇಂದ್ರನಂತೆ ಹೊಳೆಯುತ್ತಿರುವುದನ್ನು ಕಂಡನು.

12145014a ಏವಂ ಖಲು ಕಪೋತಶ್ಚ ಕಪೋತೀ ಚ ಪತಿವ್ರತಾ।
12145014c ಲುಬ್ಧಕೇನ ಸಹ ಸ್ವರ್ಗಂ ಗತಾಃ ಪುಣ್ಯೇನ ಕರ್ಮಣಾ।।

ಹೀಗೆ ಆ ಧರ್ಮಾತ್ಮ ಪಾರಿವಾಳ, ಅವನ ಪತಿವ್ರತಾ ಪತ್ನಿ, ಮತ್ತು ವ್ಯಾಧ ಈ ಮೂವರೂ ಒಟ್ಟಿಗೇ ತಮ್ಮ ಪುಣ್ಯಕರ್ಮಗಳ ಬಲದಿಂದ ಸ್ವರ್ಗಲೋಕವನ್ನು ಸೇರಿದರು.

12145015a ಯಾಪಿ ಚೈವಂವಿಧಾ ನಾರೀ ಭರ್ತಾರಮನುವರ್ತತೇ।
12145015c ವಿರಾಜತೇ ಹಿ ಸಾ ಕ್ಷಿಪ್ರಂ ಕಪೋತೀವ ದಿವಿ ಸ್ಥಿತಾ।।

ಈ ರೀತಿ ತನ್ನ ಪತಿಯನ್ನು ಅನುಸರಿಸುವ ಸ್ತ್ರೀಯು ಆ ಕಪೋತಿಯಂತೆ ಶೀಘ್ರದಲ್ಲಿಯೇ ಸ್ವರ್ಗಲೋಕದಲ್ಲಿ ತನ್ನ ತೇಜಸ್ಸಿನಿಂದ ಪ್ರಕಾಶಿಸುತ್ತಾಳೆ.

12145016a ಏವಮೇತತ್ಪುರಾ ವೃತ್ತಂ ಲುಬ್ಧಕಸ್ಯ ಮಹಾತ್ಮನಃ।
12145016c ಕಪೋತಸ್ಯ ಚ ಧರ್ಮಿಷ್ಠಾ ಗತಿಃ ಪುಣ್ಯೇನ ಕರ್ಮಣಾ।।

ಹಿಂದೆ ಇದು ಹೀಗೆಯೇ ನಡೆಯಿತು. ಮಹಾತ್ಮ ವ್ಯಾಧ ಮತ್ತು ಧರ್ಮಿಷ್ಠ ಪಾರಿವಾಳಗಳು ಪುಣ್ಯ ಕರ್ಮಗಳಿಂದ ಉತ್ತಮ ಗತಿಯನ್ನು ಪಡೆದುಕೊಂಡರು.

12145017a ಯಶ್ಚೇದಂ ಶೃಣುಯಾನ್ನಿತ್ಯಂ ಯಶ್ಚೇದಂ ಪರಿಕೀರ್ತಯೇತ್।
12145017c ನಾಶುಭಂ ವಿದ್ಯತೇ ತಸ್ಯ ಮನಸಾಪಿ ಪ್ರಮಾದ್ಯತಃ।।

ನಿತ್ಯವೂ ಇದನ್ನು ಯಾರು ಕೇಳುತ್ತಾರೋ ಮತ್ತು ಇದನ್ನು ವರ್ಣಿಸುತ್ತಾರೋ ಅವರಿಬ್ಬರು ಮನಸ್ಸಿನಲ್ಲಿ ಹುಟ್ಟಿದ ಪ್ರಮಾದಗಳಿಂದಲೂ ಅಶುಭವನ್ನು ಹೊಂದುವುದಿಲ್ಲ.

12145018a ಯುಧಿಷ್ಠಿರ ಮಹಾನೇಷ ಧರ್ಮೋ ಧರ್ಮಭೃತಾಂ ವರ।
12145018c ಗೋಘ್ನೇಷ್ವಪಿ ಭವೇದಸ್ಮಿನ್ನಿಷ್ಕೃತಿಃ ಪಾಪಕರ್ಮಣಃ।
12145018e ನಿಷ್ಕೃತಿರ್ನ ಭವೇತ್ತಸ್ಮಿನ್ಯೋ ಹನ್ಯಾಚ್ಚರಣಾಗತಮ್2।।

ಯುಧಿಷ್ಠಿರ! ಧರ್ಮಭೃತರಲ್ಲಿ ಶ್ರೇಷ್ಠ! ಈ ಶರಣಾಗತ ಪಾಲನೆಯು ಮಹಾ ಧರ್ಮವು. ಇದರಿಂದ ಗೋವಧೆಯನ್ನು ಮಾಡಿದ ಪುರುಷನಿಗೂ ಪಾಪದ ಪ್ರಾಯಶ್ಚಿತ್ತವಾಗುತ್ತದೆ. ಶರಣಾಗತನನ್ನು ವಧಿಸುವವನು ಎಂದೂ ಪಾಪದಿಂದ ಮುಕ್ತನಾಗುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲುಬ್ಧಕಸ್ವರ್ಗಗಮನೇ ಪಂಚಚತ್ವಾರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲುಬ್ಧಕಸ್ವರ್ಗಗಮನ ಎನ್ನುವ ನೂರಾನಲ್ವತ್ತೈದನೇ ಅಧ್ಯಾಯವು.


  1. ಈದೃಶೇನೈವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  2. ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಇತಿಹಾಸಮಿಮಂ ಶ್ರುತ್ವಾ ಪುಣ್ಯಂ ಪಾಪಪ್ರಣಾಶನಮ್। ನ ದುರ್ಗತಿಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಛತಿ।। ↩︎