ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 143
ಸಾರ
ವ್ಯಾಧನ ವೈರಾಗ್ಯ (1-10).
12143001 ಭೀಷ್ಮ ಉವಾಚ।
12143001a ತತಸ್ತಂ ಲುಬ್ಧಕಃ ಪಶ್ಯನ್ ಕೃಪಯಾಭಿಪರಿಪ್ಲುತಃ।
12143001c ಕಪೋತಮಗ್ನೌ ಪತಿತಂ ವಾಕ್ಯಂ ಪುನರುವಾಚ ಹ।।
ಭೀಷ್ಮನು ಹೇಳಿದನು: “ಕೃಪೆಯಿಂದ ವ್ಯಾಕುಲನಾದ ವ್ಯಾಧನು ಅಗ್ನಿಯಲ್ಲಿ ಬಿದ್ದ ಪಾರಿವಾಳವನ್ನು ನೋಡಿ ಪುನಃ ಈ ಮಾತನ್ನಾಡಿದನು:
12143002a ಕಿಮೀದೃಶಂ ನೃಶಂಸೇನ ಮಯಾ ಕೃತಮಬುದ್ಧಿನಾ।
12143002c ಭವಿಷ್ಯತಿ ಹಿ ಮೇ ನಿತ್ಯಂ ಪಾತಕಂ ಹೃದಿ ಜೀವತಃ[^1]।।
“ಅಯ್ಯೋ! ಕ್ರೂರಿಯೂ ಮೂಢನೂ ಆದ ನಾನು ಇದೇನು ಮಾಡಿಬಿಟ್ಟೆ! ಏಕೆಂದರೆ ನಿತ್ಯವೂ ಪಾಪವು ನನ್ನ ಹೃದಯದಲ್ಲಿ ಜೀವಿಸಿದೆ.
12143003a ಸ ವಿನಿಂದನ್ನಥಾತ್ಮಾನಂ ಪುನಃ ಪುನರುವಾಚ ಹ।
12143003c ಧಿಘ್ಮಾಮಸ್ತು[^2] ಸುದುರ್ಬುದ್ಧಿಂ ಸದಾ ನಿಕೃತಿನಿಶ್ಚಯಮ್।
ಹೀಗೆ ಪುನಃ ಪುನಃ ತನ್ನನ್ನು ನಿಂದಿಸಿಕೊಳ್ಳುತ್ತಾ ಹೀಗೆ ಹೇಳಿದನು: “ಸದಾ ಮೋಸವನ್ನೇ ನಿಶ್ಚಯಿಸಿರುವ ನನ್ನಂಥಹ ಅತಿ ದುರ್ಬುದ್ಧಿಗೆ ಧಿಕ್ಕಾರ!
12143003e ಶುಭಂ ಕರ್ಮ ಪರಿತ್ಯಜ್ಯ ಯೋಽಹಂ ಶಕುನಿಲುಬ್ಧಕಃ।।
12143004a ನೃಶಂಸಸ್ಯ ಮಮಾದ್ಯಾಯಂ ಪ್ರತ್ಯಾದೇಶೋ ನ ಸಂಶಯಃ।
12143004c ದತ್ತಃ ಸ್ವಮಾಂಸಂ ದದತಾ ಕಪೋತೇನ ಮಹಾತ್ಮನಾ।।
ಶುಭಕರ್ಮವನ್ನು ಪರಿತ್ಯಜಿಸಿ ನಾನು ಪಕ್ಷಿಗಳನ್ನು ಹಿಡಿಯುವ ವ್ಯಾಧನಾದೆ. ಇಂದು ಕ್ರೂರನಾಗಿರುವ ನನಗೆ ತನ್ನ ಮಾಂಸವನ್ನಿತ್ತು ಮಹಾತ್ಮ ಪಾರಿವಾಳವು ಉಪದೇಶವನ್ನು ನೀಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.
12143005a ಸೋಽಹಂ ತ್ಯಕ್ಷ್ಯೇ ಪ್ರಿಯಾನ್ ಪ್ರಾಣಾನ್ ಪುತ್ರದಾರಂ ವಿಸೃಜ್ಯ ಚ।
12143005c ಉಪದಿಷ್ಟೋ ಹಿ ಮೇ ಧರ್ಮಃ ಕಪೋತೇನಾತಿಧರ್ಮಿಣಾ।।
ಈಗ ನಾನು ಪತ್ನೀ ಪುತ್ರರನ್ನು ಬಿಟ್ಟು ನನ್ನ ಪ್ರಾಣಗಳನ್ನೂ ತ್ಯಜಿಸುತ್ತೇನೆ. ಅತಿಧರ್ಮಿ ಪಾರಿವಾಳವು ನನಗೆ ಧರ್ಮವನ್ನು ಉಪದೇಶಿಸಿದೆ.
12143006a ಅದ್ಯ ಪ್ರಭೃತಿ ದೇಹಂ ಸ್ವಂ ಸರ್ವಭೋಗೈರ್ವಿವರ್ಜಿತಮ್।
12143006c ಯಥಾ ಸ್ವಲ್ಪಂ ಜಲಂ ಗ್ರೀಷ್ಮೇ ಶೋಷಯಿಷ್ಯಾಮ್ಯಹಂ ತಥಾ।।
ಇಂದಿನಿಂದ ನಾನು ಸರ್ವಭೋಗಗಳನ್ನೂ ವರ್ಜಿಸಿ ನನ್ನ ದೇಹವನ್ನು ಗ್ರೀಷ್ಮಋತುವಿನಲ್ಲಿ ಸಣ್ಣ ಕೊಳದಲ್ಲಿ ಸ್ವಲ್ಪವೇ ನೀರಿರುವಂತೆ ಶೋಷಿಸುತ್ತೇನೆ.
12143007a ಕ್ಷುತ್ಪಿಪಾಸಾತಪಸಹಃ ಕೃಶೋ ಧಮನಿಸಂತತಃ।
12143007c ಉಪವಾಸೈರ್ಬಹುವಿಧೈಶ್ಚರಿಷ್ಯೇ ಪಾರಲೌಕಿಕಮ್।।
ಹಸಿವು-ಬಾಯಾರಿಕೆ-ಬಿಸಿಲನ್ನು ಸಹಿಸಿಕೊಂಡು ನರಗಳು ಕಾಣಿಸಿಕೊಳ್ಳುವಷ್ಟು ಕೃಶನಾಗುತ್ತೇನೆ. ಪಾರಲೌಕಿಕ ಸುಖವನ್ನು ನೀಡುವ ಬಹುವಿಧದ ಉಪವಾಸಗಳನ್ನಾಚರಿಸುತ್ತೇನೆ.
12143008a ಅಹೋ ದೇಹಪ್ರದಾನೇನ ದರ್ಶಿತಾತಿಥಿಪೂಜನಾ।
12143008c ತಸ್ಮಾದ್ಧರ್ಮಂ ಚರಿಷ್ಯಾಮಿ ಧರ್ಮೋ ಹಿ ಪರಮಾ ಗತಿಃ।
12143008e ದೃಷ್ಟೋ ಹಿ ಧರ್ಮೋ ಧರ್ಮಿಷ್ಠೈರ್ಯಾದೃಶೋ ವಿಹಗೋತ್ತಮೇ।।
ಆಹಾ! ಈ ಪಕ್ಷಿಯು ತನ್ನ ದೇಹವನ್ನಿತ್ತು ಅತಿಥಿಪೂಜನೆಯನ್ನು ತೋರಿಸಿಕೊಟ್ಟಿದೆ. ಆದುದರಿಂದ ನಾನೂ ಕೂಡ ಧರ್ಮದ ಆಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮ ಗತಿಯು. ಆ ಧರ್ಮಿಷ್ಠ ಶ್ರೇಷ್ಠ ಪಕ್ಷಿಯು ಯಾವ ಧರ್ಮವನ್ನು ತೋರಿಸಿದೆಯೋ ಅದೇ ಧರ್ಮವನ್ನು ನಾನೂ ಕೂಡ ನಡೆಸುತ್ತೇನೆ.”
12143009a ಏವಮುಕ್ತ್ವಾ ವಿನಿಶ್ಚಿತ್ಯ ರೌದ್ರಕರ್ಮಾ ಸ ಲುಬ್ಧಕಃ।
12143009c ಮಹಾಪ್ರಸ್ಥಾನಮಾಶ್ರಿತ್ಯ ಪ್ರಯಯೌ ಸಂಶಿತವ್ರತಃ।।
ಹೀಗೆ ಹೇಳಿ ಧರ್ಮಾಚರಣೆಯ ನಿಶ್ಚಯವನ್ನು ಮಾಡಿ ಆ ರೌದ್ರ ಕರ್ಮಿ ವ್ಯಾಧನು ಕಠೋರ ವ್ರತವನ್ನು ಆಶ್ರಯಿಸಿ ಮಹಾಪ್ರಸ್ಥಾನದ ಪಥದಲ್ಲಿ ಹೊರಟುಹೋದನು.
12143010a ತತೋ ಯಷ್ಟಿಂ ಶಲಾಕಾಶ್ಚ ಕ್ಷಾರಕಂ ಪಂಜರಂ ತಥಾ।
12143010c ತಾಂಶ್ಚ ಬದ್ಧಾ ಕಪೋತಾನ್ ಸ ಸಂಪ್ರಮುಚ್ಯೋತ್ಸಸರ್ಜ ಹ।।
ಹೊರಡುವಾಗ ಅವನು ತನ್ನ ಪಂಜರದಲ್ಲಿ ಬಂಧಿಯಾಗಿದ್ದ ಪಾರಿವಾಳವನ್ನು ಮುಕ್ತಗೊಳಿಸಿ ತನ್ನ ಕೋಲು, ಈಟಿ, ಬಲೆ ಮತ್ತು ಪಂಚರಗಳನ್ನು ಅಲ್ಲಿಯೇ ಬಿಟ್ಟುಬಿಟ್ಟನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲುಬ್ಧಕೋಪರತೌ ತ್ರಿಸ್ಚತ್ವಾರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲುಬ್ಧಕೋಪರತಿ ಎನ್ನುವ ನೂರಾನಲ್ವತ್ಮೂರನೇ ಅಧ್ಯಾಯವು.