141: ಕಪೋತಲುಬ್ಧಕಸಂವಾದೋಪಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 141

ಸಾರ

ಶರಣಾಗತರ ರಕ್ಷಣೆಯ ಕುರಿತಾಗಿ ಕಪೋಥ-ಲುಬ್ಧಕರ ಸಂವಾದಕಥನದ ಪ್ರಾರಂಭ (1-5). ಭಿರುಗಾಳಿ-ಮಳೆಗೆ ಸಿಲುಕಿ ಪೀಡಿತನಾದ ವ್ಯಾಧನು ಪಾರಿವಾಳಗಳು ವಾಸಿಸುತ್ತಿದ್ದ ಮರದ ಬುಡಕ್ಕೆ ಶರಣಾಗತನಾಗಿ ಬಂದುದು (6-27).

12141001 ಯುಧಿಷ್ಠಿರ ಉವಾಚ।
12141001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ।
12141001c ಶರಣಂ ಪಾಲಯಾನಸ್ಯ ಯೋ ಧರ್ಮಸ್ತಂ ವದಸ್ವ ಮೇ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಶರಣಾಗತನನನ್ನು ಪರಿಪಾಲಿಸುವವನಿಗೆ ಯಾವ ಧರ್ಮವು ಪ್ರಾಪ್ತವಾಗುತ್ತದೆ ಎನ್ನುವುದನ್ನು ನನಗೆ ಹೇಳು.”

12141002 ಭೀಷ್ಮ ಉವಾಚ।
12141002a ಮಹಾನ್ ಧರ್ಮೋ ಮಹಾರಾಜ ಶರಣಾಗತಪಾಲನೇ।
12141002c ಅರ್ಹಃ ಪ್ರಷ್ಟುಂ ಭವಾಂಶ್ಚೈವ ಪ್ರಶ್ನಂ ಭರತಸತ್ತಮ।।

ಭೀಷ್ಮನು ಹೇಳಿದನು: “ಮಹಾರಾಜ! ಭರತಸತ್ತಮ! ಶರಣಾಗತಪಾಲನೆಯು ಮಹಾನ್ ಧರ್ಮವು. ಈ ಪ್ರಶ್ನೆಯನ್ನು ಕೇಳಲು ನೀನು ಅರ್ಹನಾಗಿರುವೆ.

12141003a ನೃಗಪ್ರಭೃತಯೋ1 ರಾಜನ್ ರಾಜಾನಃ ಶರಣಾಗತಾನ್।
12141003c ಪರಿಪಾಲ್ಯ ಮಹಾರಾಜ ಸಂಸಿದ್ಧಿಂ ಪರಮಾಂ ಗತಾಃ।।

ರಾಜನ್! ಮಹಾರಾಜ! ನೃಗನೇ ಮೊದಲಾದ ರಾಜರು ಶರಣಾಗತರನ್ನು ಪರಿಪಾಲಿಸಿ ಪರಮ ಸಂಸಿದ್ಧಿಯನ್ನು ಪಡೆದುಕೊಂಡರು.

12141004a ಶ್ರೂಯತೇ ಹಿ ಕಪೋತೇನ ಶತ್ರುಃ ಶರಣಮಾಗತಃ।
12141004c ಪೂಜಿತಶ್ಚ ಯಥಾನ್ಯಾಯಂ ಸ್ವೈಶ್ಚ ಮಾಂಸೈರ್ನಿಮಂತ್ರಿತಃ।।

ಪಾರಿವಾಳವೊಂದು ಶರಣಾಗತನಾದ ಶತ್ರುವನ್ನು ಯಥಾನ್ಯಾಯವಾಗಿ ಸತ್ಕರಿಸಿ ತನ್ನ ಮಾಂಸವನ್ನೇ ತಿನ್ನಲು ಆಮಂತ್ರಿಸಿತು ಎಂದು ಕೇಳಿದ್ದೇವೆ.”

12141005 ಯುಧಿಷ್ಠಿರ ಉವಾಚ।
12141005a ಕಥಂ ಕಪೋತೇನ ಪುರಾ ಶತ್ರುಃ ಶರಣಮಾಗತಃ।
12141005c ಸ್ವಮಾಂಸೈರ್ಭೋಜಿತಃ ಕಾಂ ಚ ಗತಿಂ ಲೇಭೇ ಸ ಭಾರತ।।

ಯುಧಿಷ್ಠಿರನು ಹೇಳಿದನು: “ಭಾರತ! ಹಿಂದೆ ಪಾರಿವಾಳವು ಶರಣಾಗತನಾದ ಶತ್ರುವಿಗೆ ಹೇಗೆ ತನ್ನ ಮಾಂಸವನ್ನೇ ಉಣ್ಣಿಸಿತು ಮತ್ತು ಹೀಗೆ ಮಾಡಿದ ಅದಕ್ಕೆ ಯಾವ ಸದ್ಗತಿಯು ಪ್ರಾಪ್ತವಾಯಿತು?”

12141006 ಭೀಷ್ಮ ಉವಾಚ।
12141006a ಶೃಣು ರಾಜನ್ ಕಥಾಂ ದಿವ್ಯಾಂ ಸರ್ವಪಾಪಪ್ರಣಾಶಿನೀಮ್।
12141006c ನೃಪತೇರ್ಮುಚುಕುಂದಸ್ಯ ಕಥಿತಾಂ ಭಾರ್ಗವೇಣ ಹ।।

ಭೀಷ್ಮನು ಹೇಳಿದನು: “ರಾಜನ್! ನೃಪತಿ ಮುಚುಕುಂದನಿಗೆ ಭಾರ್ಗವನು2 ಹೇಳಿದ್ದ ಈ ಸರ್ವಪಾಪಪ್ರಣಾಶಿನೀ ದಿವ್ಯ ಕಥೆಯನ್ನು ಕೇಳು.

12141007a ಇಮಮರ್ಥಂ ಪುರಾ ಪಾರ್ಥ ಮುಚುಕುಂದೋ ನರಾಧಿಪಃ।
12141007c ಭಾರ್ಗವಂ ಪರಿಪಪ್ರಚ್ಚ ಪ್ರಣತೋ ಭರತರ್ಷಭ।।

ಪಾರ್ಥ! ಭರತರ್ಷಭ! ಹಿಂದೆ ನರಾಧಿಪ ಮುಚುಕುಂದನು ಭಾರ್ಗವನಿಗೆ ನಮಸ್ಕರಿಸಿ ಇದೇ ಪ್ರಶ್ನೆಯನ್ನು ಕೇಳಿದ್ದನು.

12141008a ತಸ್ಮೈ ಶುಶ್ರೂಷಮಾಣಾಯ ಭಾರ್ಗವೋಽಕಥಯತ್ಕಥಾಮ್।
12141008c ಇಯಂ ಯಥಾ ಕಪೋತೇನ ಸಿದ್ಧಿಃ ಪ್ರಾಪ್ತಾ ನರಾಧಿಪ।।

ಕೇಳಲು ಉತ್ಸುಕನಾಗಿದ್ದ ನರಾಧಿಪನಿಗೆ ಭಾರ್ಗವನು ಸಿದ್ಧಿಯನ್ನು ಪಡೆದುಕೊಂಡ ಪಾರಿವಾಳದ ಈ ಕಥೆಯನ್ನು ಹೇಳಿದನು.

12141009a ಧರ್ಮನಿಶ್ಚಯಸಂಯುಕ್ತಾಂ ಕಾಮಾರ್ಥಸಹಿತಾಂ ಕಥಾಮ್।
12141009c ಶೃಣುಷ್ವಾವಹಿತೋ ರಾಜನ್ ಗದತೋ ಮೇ ಮಹಾಭುಜ।।

ರಾಜನ್! ಮಹಾಭುಜ! ಧರ್ಮನಿಶ್ಚಯಸಂಯುಕ್ತವಾದ ಮತ್ತು ಕಾಮಾರ್ಥಸಹಿತವಾದ ಈ ಕಥೆಯನ್ನು ಹೇಳುತ್ತೇನೆ. ಸಮಾಹಿತನಾಗಿ ಕೇಳು.

12141010a ಕಶ್ಚಿತ್ ಕ್ಷುದ್ರಸಮಾಚಾರಃ ಪೃಥಿವ್ಯಾಂ ಕಾಲಸಂಮತಃ।
12141010c ಚಚಾರ ಪೃಥಿವೀಂ ಪಾಪೋ ಘೋರಃ ಶಕುನಿಲುಬ್ಧಕಃ।।

ಯಾವುದೋ ಒಂದು ಮಹಾವನದಲ್ಲಿ ಓರ್ವ ಹಕ್ಕಿಗಳನ್ನು ಹಿಡಿಯುವ ವ್ಯಾಧನು ಸಂಚರಿಸುತ್ತಿದ್ದನು. ಅವನು ಪಾಪಿಯೂ ಘೋರನೂ ಆಗಿದ್ದು ಭೂಮಿಯ ಮೇಲಿನ ಕಾಲನಂತೆಯೇ ತೋರುತ್ತಿದ್ದನು.

12141011a ಕಾಕೋಲ ಇವ ಕೃಷ್ಣಾಂಗೋ ರೂಕ್ಷಃ ಪಾಪಸಮಾಹಿತಃ3
12141011c ಯವಮಧ್ಯಃ ಕೃಶಗ್ರೀವೋ ಹ್ರಸ್ವಪಾದೋ ಮಹಾಹನುಃ4।।

ಅವನ ಶರೀರವು ಕಾಕೋಲ ಕಾಗೆಯಂತೆ ಕಪ್ಪಾಗಿತ್ತು. ಕಠೋರನಾಗಿದ್ದನು ಮತ್ತು ಪಾಪಸಮಾಹಿತನಾಗಿದ್ದನು. ಅವನ ಹೊಟ್ಟೆಯು ದೊಡ್ಡದಾಗಿತ್ತು. ಕತ್ತು ಸಣ್ಣದಾಗಿತ್ತು. ಕಾಲುಗಳು ಸಣ್ಣಗಾಗಿದ್ದವು ಮತ್ತು ಅವನ ಹಲ್ಲುಗಳು ದೊಡ್ಡವಾಗಿದ್ದವು.

12141012a ನೈವ ತಸ್ಯ ಸುಹೃತ್ಕಶ್ಚಿನ್ನ ಸಂಬಂಧೀ ನ ಬಾಂಧವಃ।
12141012c ಸ ಹಿ ತೈಃ ಸಂಪರಿತ್ಯಕ್ತಸ್ತೇನ ಘೋರೇಣ ಕರ್ಮಣಾ।।

ಅವನಿಗೆ ಸ್ನೇಹಿತರ್ಯಾರೂ ಇರಲಿಲ್ಲ. ಸಂಬಂಧಿ-ಬಾಂಧವರೂ ಇರಲಿಲ್ಲ. ಅವನ ಘೋರ ಕರ್ಮಗಳಿಂದಾಗಿ ಎಲ್ಲರೂ ಅವನನ್ನು ಪರಿತ್ಯಜಿಸಿದ್ದರು.

12141013a 5ಸ ವೈ ಕ್ಷಾರಕಮಾದಾಯ ದ್ವಿಜಾನ್ ಹತ್ವಾ ವನೇ ಸದಾ। 12141013c ಚಕಾರ ವಿಕ್ರಯಂ ತೇಷಾಂ ಪತಂಗಾನಾಂ ನರಾಧಿಪ।।

ನರಾಧಿಪ! ಪ್ರತಿದಿನ ಅವನು ಬಲೆಯನ್ನು ತೆಗೆದುಕೊಂಡು ವನಕ್ಕೆ ಹೋಗಿ ಅನೇಕ ಪಕ್ಷಿಗಳನ್ನು ಕೊಂದು ಆ ಪಕ್ಷಿಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದನು.

12141014a ಏವಂ ತು ವರ್ತಮಾನಸ್ಯ ತಸ್ಯ ವೃತ್ತಿಂ ದುರಾತ್ಮನಃ।
12141014c ಅಗಮತ್ಸುಮಹಾನ್ಕಾಲೋ ನ ಚಾಧರ್ಮಮಬುಧ್ಯತ।।

ಆ ದುರಾತ್ಮನು ಬಹಳ ಕಾಲದ ವರೆಗೆ ಹೀಗೆಯೇ ತನ್ನ ವೃತ್ತಿಯು ನಡೆಸಿಕೊಂಡು ಬಂದನು. ಆದರೂ ಅವನಿಗೆ ತನ್ನ ಅಧರ್ಮದ ಕುರಿತು ಅರಿವೆಯೇ ಮೂಡಲಿಲ್ಲ.

12141015a ತಸ್ಯ ಭಾರ್ಯಾಸಹಾಯಸ್ಯ ರಮಮಾಣಸ್ಯ ಶಾಶ್ವತಮ್।
12141015c ದೈವಯೋಗವಿಮೂಢಸ್ಯ ನಾನ್ಯಾ ವೃತ್ತಿರರೋಚತ।।

ಸದಾ ತನ್ನ ಪತ್ನಿಯೊಡನೆ ಸಂಚರಿಸುತ್ತಿದ್ದ ಆ ವ್ಯಾಧನು ದೈವಯೋಗದಿಂದ ಎಂಥಹ ವಿಮೂಢನಾಗಿದ್ದನೆಂದರೆ ಅವನಿಗೆ ಬೇರೆ ಯಾವ ವೃತ್ತಿಯೂ ಹಿಡಿಸುತ್ತಿರಲಿಲ್ಲ.

12141016a ತತಃ ಕದಾ ಚಿತ್ತಸ್ಯಾಥ ವನಸ್ಥಸ್ಯ ಸಮುದ್ಗತಃ।
12141016c ಪಾತಯನ್ನಿವ ವೃಕ್ಷಾಂಸ್ತಾನ್ಸುಮಹಾನ್ವಾತಸಂಭ್ರಮಃ।।

ಅನಂತರ ಒಂದು ದಿನ ಅವನು ವನದಲ್ಲಿ ಸಂಚರಿಸುತ್ತಿದ್ದಾಗ ನಾಲ್ಕೂ ಕಡೆಗಳಿಂದ ಜೋರಾದ ಭಿರುಗಾಳಿಯು ಬೀಸತೊಡಗಿತು. ಗಾಳಿಯ ಪ್ರಚಂಡ ವೇಗದಿಂದ ಸಮಸ್ತ ವೃಕ್ಷಗಳು ಕೆಳಗುರುಳುತ್ತವೆಯೋ ಎಂದು ತೋರುತ್ತಿತ್ತು.

12141017a ಮೇಘಸಂಕುಲಮಾಕಾಶಂ ವಿದ್ಯುನ್ಮಂಡಲಮಂಡಿತಮ್।
12141017c ಸಂಚನ್ನಂ ಸುಮುಹೂರ್ತೇನ ನೌಸ್ಥಾನೇನೇವ ಸಾಗರಃ।।
12141018a ವಾರಿಧಾರಾಸಮೂಹೈಶ್ಚ ಸಂಪ್ರಹೃಷ್ಟಃ ಶತಕ್ರತುಃ।
12141018c ಕ್ಷಣೇನ ಪೂರಯಾಮಾಸ ಸಲಿಲೇನ ವಸುಂಧರಾಮ್।।

ಮಿಂಚಿನ ಮಂಡಲಗಳ ಮಧ್ಯೆ ಆಕಾಶದಲ್ಲಿ ಮೇಘಸಂಕುಲಗಳು ಕಾಣಿಸಿಕೊಂಡವು. ಕ್ಷಣದಲ್ಲಿಯೇ ಸಮುದ್ರದಲ್ಲಿ ನಾವೆಗಳು ತುಂಬಿಕೊಳ್ಳುವಂತೆ ಶತಕ್ರತುವು ಸಂಪ್ರಹೃಷ್ಟನಾಗಿ ಧಾರಕಾರ ಮಳೆಯ ಸಮೂಹಗಳಿಂದ ಕ್ಷಣಮಾತ್ರದಲ್ಲಿ ಭೂಮಿಯನ್ನು ತುಂಬಿಸಿಬಿಟ್ಟನು.

12141019a ತತೋ ಧಾರಾಕುಲೇ ಲೋಕೇ6 ಸಂಭ್ರಮನ್ನಷ್ಟಚೇತನಃ।
12141019c ಶೀತಾರ್ತಸ್ತದ್ವನಂ ಸರ್ವಮಾಕುಲೇನಾಂತರಾತ್ಮನಾ।।

ಹೀಗೆ ಲೋಕದಲ್ಲಿ ಧಾರಾಕಾರ ಮಳೆಯು ಸುರಿಯುತ್ತಿರಲು ವ್ಯಾಧನು ಛಳಿಯಿಂದ ಪೀಡಿತನಾಗಿ ನಷ್ಟಚೇತನನಾದನು ಮತ್ತು ವ್ಯಾಕುಲನಾಗಿ ವನದಲ್ಲೆಲ್ಲಾ ತಿರುಗಾಡತೊಡಗಿದನು.

12141020a ನೈವ ನಿಮ್ನಂ ಸ್ಥಲಂ ವಾಪಿ ಸೋಽವಿಂದತ ವಿಹಂಗಹಾ।
12141020c ಪೂರಿತೋ ಹಿ ಜಲೌಘೇನ ಮಾರ್ಗಸ್ತಸ್ಯ ವನಸ್ಯ ವೈ।।

ಅವನು ನಡೆಯುತ್ತಿದ್ದ ಆ ವನ ಮಾರ್ಗವು ನೀರಿನಲ್ಲಿ ಮುಳುಗಿಹೋಗಿತ್ತು. ಅವನಿಗೆ ತಗ್ಗು-ಎತ್ತರವು ಎಲ್ಲಿ ಎಂದು ಏನೂ ತಿಳಿಯುವಂತಿರಲಿಲ್ಲ.

12141021a ಪಕ್ಷಿಣೋ ವಾತವೇಗೇನ ಹತಾ ಲೀನಾಸ್ತದಾಭವನ್।
12141021c ಮೃಗಾಃ ಸಿಂಹಾ ವರಾಹಾಶ್ಚ ಸ್ಥಲಾನ್ಯಾಶ್ರಿತ್ಯ ತಸ್ಥಿರೇ।।

ಭಿರುಗಾಳಿಯ ವೇಗಕ್ಕೆ ಸಿಲುಕಿ ಹಲವಾರು ಪಕ್ಷಿಗಳು ಹತಗೊಂಡು ಕೆಳಗೆ ಬಿದ್ದವು. ಕೆಲವೊಂದಿಷ್ಟು ತಮ್ಮ ಗೂಡುಗಳಲ್ಲಿ ಅಡಗಿಕೊಂಡವು. ಸಿಂಹ-ವರಾಹ ಮೊದಲಾದ ಮೃಗಗಳು ಗುಹೆಗಳನ್ನು ಆಶ್ರಯಿಸಿ ನಿಂತುಕೊಂಡವು.

12141022a ಮಹತಾ ವಾತವರ್ಷೇಣ ತ್ರಾಸಿತಾಸ್ತೇ ವನೌಕಸಃ।
12141022c ಭಯಾರ್ತಾಶ್ಚ ಕ್ಷುಧಾರ್ತಾಶ್ಚ ಬಭ್ರಮುಃ ಸಹಿತಾ ವನೇ।।

ಭಾರೀ ಚಂಡಮಾರುತ ಮತ್ತು ಮಳೆಯಿಂದ ಆತಂಕಕ್ಕೊಳಗಾದ ವನೌಕಸ ಜೀವಜಂತುಗಳು ಭಯ ಮತ್ತು ಹಸಿವೆಯಿಂದ ಪೀಡಿತಗೊಂಡು ಹಿಂಡು ಹಿಂಡಾಗಿ ವನದಲ್ಲಿ ಸುತ್ತುವರೆಯುತ್ತಿದ್ದವು.

12141023a ಸ ತು ಶೀತಹತೈರ್ಗಾತ್ರೈರ್ಜಗಾಮೈವ ನ ತಸ್ಥಿವಾನ್। 12141023c 7ಸೋಽಪಶ್ಯದ್ವನಷಂಡೇಷು ಮೇಘನೀಲಂ ವನಸ್ಪತಿಮ್।।

ಛಳಿಯಿಂದ ಅಂಗಾಗಗಳೆಲ್ಲವೂ ನಡುಗುತ್ತಿದ್ದ ಆ ವ್ಯಾಧನು ನಡೆಯಲಾರನಾಗಿದ್ದನು ಮತ್ತು ಎಲ್ಲಿಯೂ ನಿಲ್ಲಲೂ ಅವನಿಗೆ ಕಷ್ಟವಾಗುತ್ತಿತ್ತು. ಇದೇ ಅವಸ್ಥೆಯಲ್ಲಿ ಅವನು ವೃಕ್ಷಸಮೂಹಗಳ ಮಧ್ಯದಲ್ಲಿ ಒಂದು ಮೇಘನೀಲ ವೃಕ್ಷವನ್ನು ಕಂಡನು.

<12141024a 8ತಾರಾಢ್ಯಂ ಕುಮುದಾಕಾರಮಾಕಾಶಂ ನಿರ್ಮಲಂ ಚ ಹ। 12141024c ಮೇಘೈರ್ಮುಕ್ತಂ ನಭೋ ದೃಷ್ಟ್ವಾ ಲುಬ್ಧಕಃ ಶೀತವಿಹ್ವಲಃ।।
12141025a ದಿಶೋಽವಲೋಕಯಾಮಾಸ ವೇಲಾಂ ಚೈವ ದುರಾತ್ಮವಾನ್।
12141025c ದೂರೇ ಗ್ರಾಮನಿವೇಶಶ್ಚ ತಸ್ಮಾದ್ದೇಶಾದಿತಿ ಪ್ರಭೋ।
12141025e ಕೃತಬುದ್ಧಿರ್ವನೇ ತಸ್ಮಿನ್ವಸ್ತುಂ ತಾಂ ರಜನೀಂ ತದಾ।।

ಪ್ರಭೋ! ತಾರೆಗಳಿಂದ ತುಂಬಿದ್ದ ಅತ್ಯಂತ ನಿರ್ಮಲ ಆಕಾಶವು ವಿಕಸಿತ ಕುಮುದಕುಸುಮಗಳಿಂದ ಸುಶೋಭಿತ ಸರೋವರದಂತೆ ತೋರುತ್ತಿತ್ತು. ಆಕಾಶವು ಮೇಘಗಳಿಂದ ಮುಕ್ತವಾದುದನ್ನು ನೋಡಿ ಛಳಿಯಿಂದ ನಡುಗುತ್ತಿದ್ದ ಆ ವ್ಯಾಧನು ಎಲ್ಲದಿಕ್ಕುಗಳಲ್ಲಿಯೂ ಕಣ್ಣುಹಾಯಿಸಿ ಗಾಢ ಅಂಧಕಾರದಿಂದ ತುಂಬಿದ್ದ ರಾತ್ರಿಯನ್ನು ಕಂಡು ತನ್ನ ನಿವಾಸ ಗ್ರಾಮವು ಇಲ್ಲಿಂತ ಅತಿ ದೂರದಲ್ಲಿದೆ ಎಂದು ಮನದಲ್ಲಿಯೇ ಯೋಚಿಸಿ, ಅಲ್ಲಿಯೇ ಉಳಿದು ಆ ರಾತ್ರಿಯನ್ನು ವನದಲ್ಲಿಯೇ ಕಳೆಯುವ ಮನಸ್ಸುಮಾಡಿದನು.

12141026a ಸೋಽಂಜಲಿಂ ಪ್ರಯತಃ ಕೃತ್ವಾ ವಾಕ್ಯಮಾಹ ವನಸ್ಪತಿಮ್।
12141026c ಶರಣಂ ಯಾಮಿ ಯಾನ್ಯಸ್ಮಿನ್ ದೈವತಾನೀಹ ಭಾರತ।।

ಭಾರತ! ಕೈಮುಗಿದು ನಮಸ್ಕರಿಸಿ ಅವನು ಆ ವೃಕ್ಷಕ್ಕೆ “ಈ ವೃಕ್ಷದಲ್ಲಿರುವ ದೇವತೆಗಳ ಶರಣುಹೊಗುತ್ತೇನೆ” ಎಂದು ಹೇಳಿದನು.

12141027a ಸ ಶಿಲಾಯಾಂ ಶಿರಃ ಕೃತ್ವಾ ಪರ್ಣಾನ್ಯಾಸ್ತೀರ್ಯ ಭೂತಲೇ।
12141027c ದುಃಖೇನ ಮಹತಾವಿಷ್ಟಸ್ತತಃ ಸುಷ್ವಾಪ ಪಕ್ಷಿಹಾ।।

ಹೀಗೆ ಹೇಳಿ ನೆಲದ ಮೇಲೆ ಎಲೆಗಳನ್ನು ಹಾಸಿ ಒಂದು ಶಿಲೆಯ ಮೇಲೆ ತಲೆಯನ್ನಿಟ್ಟು ಮಹಾ ದುಃಖದಿಂದ ಮಲಗಿದ ಆ ಪಕ್ಷಿವ್ಯಾಧನು ನಿದ್ರಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕಪೋತಲುಬ್ಧಕಸಂವಾದೋಪಕ್ರಮೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕಪೋತಲುಬ್ಧಕಸಂವಾದೋಪಕ್ರಮ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.


  1. ಶಿಬಿಪ್ರಭೃತಯೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  2. ಭಾರ್ಗವ ಪರಶುರಾಮ (ಗೀತಾ ಪ್ರೆಸ್). ↩︎

  3. ರಕ್ತಾಕ್ಷಃ ಕಾಲಸಮ್ಮಿತಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  4. ದೀರ್ಘಜಂಘೋ ಹ್ರಸ್ವಪಾದೋ ಮಹಾವಕ್ತ್ರೋ ಮಹಾಹನುಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  5. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ನರಃ ಪಾಪಸಮಾಚಾರಸ್ತ್ಯಕ್ತವ್ಯೋ ದೂರತೋ ಬುಧೈಃ। ಆತ್ಮಾನಂ ಯೋಽಭಿಸಂಧತ್ತೇ ಸೋಽನ್ಯಸ್ಯ ಸ್ತ್ಯಾತ್ಕಥಂ ಹಿತಃ।। ಯೇ ನೃಶಂಸಾ ದುರಾತ್ಮಾನಃ ಪ್ರಾಣಿಪ್ರಾಣಹರಾ ನರಾಃ। ಉದ್ದೇಜನೀಯಾ ಭೂತಾನಾಂ ವ್ಯಾಲಾ ಇವ ಭವಂತಿ ತೇ।। ↩︎

  6. ಕಾಲೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  7. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡೂವರೆ ಅಧಿಕ ಶ್ಲೋಕಗಳಿವೆ: ದದರ್ಶ ಪತಿತಾಂ ಭೂಮೌ ಕಪೋತೀಂ ಶೀತವಿಹ್ವಲಾಮ್। ದೃಷ್ಟ್ವಾಽಽರ್ತೋಽಪಿ ಹಿ ಪಪಾತ್ಮಾ ಸತಾಂ ಪಂಜರಕೇಽಕ್ಷಿಪತ್। ಸ್ವಯಂ ದುಃಖಾಭಿಭೂತೋಽಪಿ ದುಃಖಮೇವಾಕರೋತ್ಪರೇ।। ಾಪಾತ್ಮಾ ಪಾಪಕಾರಿತ್ವಾತ್ ಪಾಪಮೆವ ಚಕಾರ ಸಃ। ↩︎

  8. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ಸೇವ್ಯಮಾನಂ ವಿಹಂಗೈಘೈಶ್ಛಾಯಾವಾಸಫಲಾರ್ಥಿಭಿಃ। ಧಾತ್ರಾ ಪರೋಪಕಾರಾಯ ಸ ಸಾಧುರಿವ ನಿರ್ಮಿತಃ।। ಅಥಾಭವತ್ ಕ್ಷಣೇನೈವ ವಿಯದ್ವಿಮಲತಾರಕಮ್। ಮಹತ್ಸರ ಇವೋತ್ಫುಲ್ಲಂ ಕುಮುದನ್ಛುರಿತೋದಕಮ್।। ↩︎