139: ವಿಶ್ವಾಮಿತ್ರಶ್ವಪಚಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 139

ಸಾರ

ಭಯಂಕರ ಸಂಕಟಕಾಲದಲ್ಲಿ ಬ್ರಾಹ್ಮಣನು ಹೇಗೆ ಜೀವನ ನಿರ್ವಹಣೆ ಮಾಡಬೇಕು ಎನ್ನುವುದರ ಕುರಿತು ವಿಶ್ವಾಮಿತ್ರ-ಚಾಂಡಾಲರ ಸಂವಾದ (1-94).

12139001 ಯುಧಿಷ್ಠಿರ ಉವಾಚ।
12139001a ಹೀನೇ ಪರಮಕೇ ಧರ್ಮೇ ಸರ್ವಲೋಕಾತಿಲಂಘಿನಿ।
12139001c ಅಧರ್ಮೇ ಧರ್ಮತಾಂ ನೀತೇ ಧರ್ಮೇ ಚಾಧರ್ಮತಾಂ ಗತೇ।।
12139002a ಮರ್ಯಾದಾಸು ಪ್ರಭಿನ್ನಾಸು ಕ್ಷುಭಿತೇ ಧರ್ಮನಿಶ್ಚಯೇ।
12139002c ರಾಜಭಿಃ ಪೀಡಿತೇ ಲೋಕೇ ಚೋರೈರ್ವಾಪಿ ವಿಶಾಂ ಪತೇ।।
12139003a ಸರ್ವಾಶ್ರಮೇಷು ಮೂಢೇಷು ಕರ್ಮಸೂಪಹತೇಷು ಚ।
12139003c ಕಾಮಾನ್ಮೋಹಾಚ್ಚ ಲೋಭಾಚ್ಚ ಭಯಂ ಪಶ್ಯತ್ಸು ಭಾರತ।।
12139004a ಅವಿಶ್ವಸ್ತೇಷು ಸರ್ವೇಷು ನಿತ್ಯಭೀತೇಷು ಪಾರ್ಥಿವ।
12139004c ನಿಕೃತ್ಯಾ ಹನ್ಯಮಾನೇಷು ವಂಚಯತ್ಸು ಪರಸ್ಪರಮ್।।
12139005a ಸಂಪ್ರದೀಪ್ತೇಷು ದೇಶೇಷು ಬ್ರಾಹ್ಮಣ್ಯೇ ಚಾಭಿಪೀಡಿತೇ।
12139005c ಅವರ್ಷತಿ ಚ ಪರ್ಜನ್ಯೇ ಮಿಥೋ ಭೇದೇ ಸಮುತ್ಥಿತೇ।।
12139006a ಸರ್ವಸ್ಮಿನ್ದಸ್ಯುಸಾದ್ಭೂತೇ ಪೃಥಿವ್ಯಾಮುಪಜೀವನೇ।
12139006c ಕೇನ ಸ್ವಿದ್ ಬ್ರಾಹ್ಮಣೋ ಜೀವೇಜ್ಜಘನ್ಯೇ ಕಾಲ ಆಗತೇ।।

ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ಭಾರತ! ಪಾರ್ಥಿವ! ಎಲ್ಲರೂ ಧರ್ಮವನ್ನು ಉಲ್ಲಂಘಿಸುತ್ತಿರುವುದರಿಂದ ಧರ್ಮವು ಕ್ಷೀಣಿಸುತ್ತಿರುವಾಗ, ಅಧರ್ಮವನ್ನು ಧರ್ಮವೆಂದೂ ಧರ್ಮವನ್ನು ಅಧರ್ಮವೆಂದೂ ಜನರು ತಿಳಿದುಕೊಂಡಿರುವಾಗ, ಎಲ್ಲ ಕಟ್ಟುಪಾಡುಗಳೂ ಒಡೆದುಹೋದಾಗ, ಧರ್ಮದ ನಿಶ್ಚಯವು ಡೋಲಾಯಮಾನವಾಗುವಾಗ, ಜನರು ರಾಜ ಮತ್ತು ಕಳ್ಳರಿಂದ ಪೀಡಿತರಾದಾಗ, ಎಲ್ಲ ಆಶ್ರಮಗಳಲ್ಲಿರುವವರೂ ಮೂಢರಾಗಿ ಕರ್ಮಗಳಿಂದ ಲುಪ್ತರಾದಾಗ, ಕಾಮ-ಮೋಹ-ಲೋಭಗಳಿಂದ ಭಯವೇ ಕಾಣಿಸಿಕೊಂಡಾಗ, ಎಲ್ಲರಲ್ಲಿಯೂ ಅವಿಶ್ವಾಸವೇ ಇದ್ದಾಗ ಮತ್ತು ನಿತ್ಯವೂ ಭೀತಿಯಿರುವಾಗ, ಜನರು ಮೋಸದಿಂದ ಕೊಲ್ಲುತ್ತಿರುವಾಗ ಮತ್ತು ಪರಸ್ಪರರನ್ನು ವಂಚಿಸುತ್ತಿರುವಾಗ, ದೇಶದಲ್ಲೆಲ್ಲಾ ಬೆಂಕಿಯು ಸುಡುತ್ತಿರುವಾಗ, ಬ್ರಾಹ್ಮಣರು ಪೀಡಿತರಾಗಿರುವಾಗ, ಮಳೆಯು ಸುರಿಯದೇ ಇರುವಾಗ ಮತ್ತು ಮಿಥ್ಯ ಭೇದಗಳು ಉಂಟಾದಾಗ, ಎಲ್ಲೆಲ್ಲಿಯೂ ದಸ್ಯುಗಳೇ ತುಂಬಿಕೊಂಡಾಗ ಮತ್ತು ಭೂಮಿಯ ಮೇಲೆ ಉಪಜೀವನವನ್ನು ಮಾಡುವುದೇ ಕಷ್ಟವಾದಾಗ, ಅಂಥಹ ಅಧಮ ಸಮಯದಲ್ಲಿ ಬ್ರಾಹ್ಮಣನು ಯಾವ ಉಪಾಯದಿಂದ ಜೀವನಿರ್ವಹಣೆಯನ್ನು ಮಾಡಬೇಕು?

12139007a ಅತಿತ್ಯಕ್ಷುಃ ಪುತ್ರಪೌತ್ರಾನನುಕ್ರೋಶಾನ್ನರಾಧಿಪ।
12139007c ಕಥಮಾಪತ್ಸು ವರ್ತೇತ ತನ್ಮೇ ಬ್ರೂಹಿ ಪಿತಾಮಹ।।

ನರಾಧಿಪ! ಪಿತಾಮಹ! ಇಂಥಹ ಆಪತ್ತಿನಲ್ಲಿ ಸಿಲುಕಿಕೊಂಡ ಬ್ರಾಹ್ಮಣನು ದಯಾವಶನಾಗಿ ತನ್ನ ಪುತ್ರ-ಪೌತ್ರರನ್ನು ಪರಿತ್ಯಜಿಸಲಾರದೇ ಇದ್ದಾಗ ಅವನು ಹೇಗೆ ಜೀವನವನ್ನು ನಡೆಸಬೇಕು? ಇದನ್ನು ನನಗೆ ಹೇಳು.

12139008a ಕಥಂ ಚ ರಾಜಾ ವರ್ತೇತ ಲೋಕೇ ಕಲುಷತಾಂ ಗತೇ।
12139008c ಕಥಮರ್ಥಾಚ್ಚ ಧರ್ಮಾಚ್ಚ ನ ಹೀಯೇತ ಪರಂತಪ।।

ಪರಂತಪ! ಲೋಕವು ಕಲುಷಿತಗೊಂಡಾಗ, ಅರ್ಥ ಮತ್ತು ಧರ್ಮಗಳು ಕ್ಷೀಣಿಸದಂತೆ ರಾಜನು ಹೇಗೆ ನಡೆದುಕೊಳ್ಳಬೇಕು?”

12139009 ಭೀಷ್ಮ ಉವಾಚ।
12139009a ರಾಜಮೂಲಾ ಮಹಾರಾಜ ಯೋಗಕ್ಷೇಮಸುವೃಷ್ಟಯಃ।
12139009c ಪ್ರಜಾಸು ವ್ಯಾಧಯಶ್ಚೈವ ಮರಣಂ ಚ ಭಯಾನಿ ಚ।।

ಭೀಷ್ಮನು ಹೇಳಿದನು: “ಮಹಾರಾಜ! ಪ್ರಜೆಗಳ ಯೋಗಕ್ಷೇಮ, ಉತ್ತಮ ಮಳೆ, ವ್ಯಾಧಿ, ಮೃತ್ಯು ಮತ್ತು ಭಯ ಇವೆಲ್ಲವಕ್ಕೆ ಮುಖ್ಯ ಕಾರಣನು ರಾಜನೇ ಆಗಿರುತ್ತಾನೆ.

12139010a ಕೃತಂ ತ್ರೇತಾ ದ್ವಾಪರಶ್ಚ ಕಲಿಶ್ಚ ಭರತರ್ಷಭ।
12139010c ರಾಜಮೂಲಾನಿ ಸರ್ವಾಣಿ ಮಮ ನಾಸ್ತ್ಯತ್ರ ಸಂಶಯಃ।।

ಭರತರ್ಷಭ! ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಈ ಎಲ್ಲ ಯುಗಗಳಿಗೂ ರಾಜನೇ ಮೂಲ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ.

12139011a ತಸ್ಮಿಂಸ್ತ್ವಭ್ಯಾಗತೇ ಕಾಲೇ ಪ್ರಜಾನಾಂ ದೋಷಕಾರಕೇ।
12139011c ವಿಜ್ಞಾನಬಲಮಾಸ್ಥಾಯ ಜೀವಿತವ್ಯಂ ತದಾ ಭವೇತ್।।

ಪ್ರಜೆಗಳಲ್ಲಿ ದೋಷಕಾರಕವಾದ ಇಂಥಹ ಕಾಲವು ಬಂದಾಗ ವಿಜ್ಞಾನಬಲವನ್ನು ಉಪಯೋಗಿಸಿ ಜೀವನವನ್ನು ನಿರ್ವಹಿಸಬೇಕು.

12139012a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12139012c ವಿಶ್ವಾಮಿತ್ರಸ್ಯ ಸಂವಾದಂ ಚಂಡಾಲಸ್ಯ ಚ ಪಕ್ಕಣೇ।।

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಚಾಂಡಾಲನ ಮನೆಯಲ್ಲಿ ವಿಶ್ವಾಮಿತ್ರ ಮತ್ತು ಚಾಂಡಾಲನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

12139013a ತ್ರೇತಾದ್ವಾಪರಯೋಃ ಸಂಧೌ ಪುರಾ ದೈವವಿಧಿಕ್ರಮಾತ್।
12139013c ಅನಾವೃಷ್ಟಿರಭೂದ್ ಘೋರಾ ರಾಜನ್ ದ್ವಾದಶವಾರ್ಷಿಕೀ।।

ರಾಜನ್! ಹಿಂದೆ ದೈವವಿಧಿಕ್ರಮದಂತೆ ತ್ರೇತ ಮತ್ತು ದ್ವಾಪರಗಳ ಸಂಧಿಯಲ್ಲಿ ಹನ್ನೆರಡು ವರ್ಷಗಳ ಘೋರ ಆನಾವೃಷ್ಟಿ1ಯು ಉಂಟಾಯಿತು.

12139014a ಪ್ರಜಾನಾಮಭಿವೃದ್ಧಾನಾಂ ಯುಗಾಂತೇ ಪರ್ಯುಪಸ್ಥಿತೇ।
12139014c ತ್ರೇತಾನಿರ್ಮೋಕ್ಷಸಮಯೇ ದ್ವಾಪರಪ್ರತಿಪಾದನೇ।।

ತ್ರೇತಾಯುಗವು ಮುಗಿಯುತ್ತಿರುವಾಗ ಮತ್ತು ದ್ವಾಪರ ಯುಗವು ಕಾಲಿಡುತ್ತಿರುವಾಗ, ಪ್ರಜೆಗಳ ಸಂಖ್ಯೆಯು ಹೆಚ್ಚಾಗಿತ್ತು ಮತ್ತು ಯುಗಾಂತವು ಸಮೀಪಿಸಿತ್ತು.

12139015a ನ ವವರ್ಷ ಸಹಸ್ರಾಕ್ಷಃ ಪ್ರತಿಲೋಮೋಽಭವದ್ಗುರುಃ।
12139015c ಜಗಾಮ ದಕ್ಷಿಣಂ ಮಾರ್ಗಂ ಸೋಮೋ ವ್ಯಾವೃತ್ತಲಕ್ಷಣಃ।।

ಸಹಸ್ರಾಕ್ಷನು ಮಳೆಸುರಿಸಲಿಲ್ಲ. ಗುರುವು ವಕ್ರಿಯಾದನು. ಚಂದ್ರನು ವಿಕೃತನಾಗಿ ದಕ್ಷಿಣಮಾರ್ಗದಲ್ಲಿ ಹೊರಟು ಹೋದನು.

12139016a ನಾವಶ್ಯಾಯೋಽಪಿ ರಾತ್ರ್ಯಂತೇ ಕುತ ಏವಾಭ್ರರಾಜಯಃ।
12139016c ನದ್ಯಃ ಸಂಕ್ಷಿಪ್ತತೋಯೌಘಾಃ ಕ್ವ ಚಿದಂತರ್ಗತಾಭವನ್।।

ಬೆಳಗಿನ ಮಂಜೂ ಇರಲಿಲ್ಲ, ಮೋಡಗಳು ಎಲ್ಲಿಂದ ಉತ್ಪನ್ನವಾಗುತ್ತಿದ್ದವು? ನದಿಗಳು ಬತ್ತಿಹೋಗಿದ್ದವು ಮತ್ತು ಎಷ್ಟೋ ನದಿಗಳು ಅದೃಶ್ಯವಾಗಿಬಿಟ್ಟಿದ್ದವು.

12139017a ಸರಾಂಸಿ ಸರಿತಶ್ಚೈವ ಕೂಪಾಃ ಪ್ರಸ್ರವಣಾನಿ ಚ।
12139017c ಹತತ್ವಿಟ್ಕಾನ್ಯಲಕ್ಷ್ಯಂತ ನಿಸರ್ಗಾದ್ದೈವಕಾರಿತಾತ್।।

ಸರೋವರಗಳು, ನದಿಗಳು, ಬಾವಿಗಳು ಮತ್ತು ಕಾರಂಜಿಗಳು ದೈವದ ಕಾರಣದಿಂದ ಅಥವಾ ಸ್ವಾಭಾವಿಕ ಅನಾವೃಷ್ಟಿಯಿಂದ ನೀರಿಲ್ಲದೇ ಕಾಣುತ್ತಲೇ ಇರಲಿಲ್ಲ.

12139018a ಉಪಶುಷ್ಕಜಲಸ್ಥಾಯಾ ವಿನಿವೃತ್ತಸಭಾಪ್ರಪಾ।
12139018c ನಿವೃತ್ತಯಜ್ಞಸ್ವಾಧ್ಯಾಯಾ ನಿರ್ವಷಟ್ಕಾರಮಂಗಲಾ।।
12139019a ಉತ್ಸನ್ನಕೃಷಿಗೋರಕ್ಷ್ಯಾ ನಿವೃತ್ತವಿಪಣಾಪಣಾ।
12139019c ನಿವೃತ್ತಪೂಗಸಮಯಾ ಸಂಪ್ರನಷ್ಟಮಹೋತ್ಸವಾ।।

ಸಣ್ಣ ಸಣ್ಣ ಜಲಾಶಯಗಳು ಒಣಗಿಹೋದವು. ಪಾನೀಯಶಾಲೆಗಳು ಮುಚ್ಚಲ್ಪಟ್ಟವು. ಯಜ್ಞ-ಸ್ವಾಧ್ಯಾಯಗಳು ನಿಂತುಹೋದವು. ವಷಟ್ಕಾರ-ಮಂಗಲಕಾರ್ಯಗಳು ಇಲ್ಲವಾದವು. ಕೃಷಿ ಮತ್ತು ಗೋರಕ್ಷೆಗಳು ನಿಂತುಬಿಟ್ಟವು. ಸಂತೆ-ಮಾರುಕಟ್ಟೆಗಳು ನಿಂತುಹೋದವು. ಕೂಟಸಮಾರಂಭಗಳು ನಿಂತುಹೋದವು. ಮಹೋತ್ಸವಗಳು ನಷ್ಟವಾದವು.

12139020a ಅಸ್ಥಿಕಂಕಾಲಸಂಕೀರ್ಣಾ ಹಾಹಾಭೂತಜನಾಕುಲಾ।
12139020c ಶೂನ್ಯಭೂಯಿಷ್ಠನಗರಾ ದಗ್ಧಗ್ರಾಮನಿವೇಶನಾ।।

ಅಸ್ಥಿಗಳ ರಾಶಿಗಳು ಕಾಣಿಸಿಕೊಂಡವು. ಜನರಲ್ಲಿ ಹಾಹಾಕಾರವುಂಟಾಯಿತು. ನಗರಗಳು ಶೂನ್ಯವಾದವು ಮತ್ತು ಗ್ರಾಮನಿವೇಶನಗಳು ಸುಟ್ಟುಹೋದವು.

12139021a ಕ್ವ ಚಿಚ್ಚೋರೈಃ ಕ್ವ ಚಿಚ್ಚಸ್ತ್ರೈಃ ಕ್ವ ಚಿದ್ರಾಜಭಿರಾತುರೈಃ।
12139021c ಪರಸ್ಪರಭಯಾಚ್ಚೈವ ಶೂನ್ಯಭೂಯಿಷ್ಠನಿರ್ಜನಾ।।

ಕೆಲವೆಡೆ ಕಳ್ಳಕಾಕರಿಂದ, ಕೆಲವೆಡೆ ಶಸ್ತ್ರಗಳಿಂದ ಮತ್ತು ಇನ್ನು ಕೆಲವೆಡೆ ರಾಜರಿಂದ ಪೀಡಿತರಾದ ಜನರ ಪರಸ್ಪರ ಭಯದಿಂದ ಭೂಮಿಯು ನಿರ್ಜನಗೊಂಡು ಶೂನ್ಯವಾಗಿಬಿಟ್ಟಿತ್ತು.

12139022a ಗತದೈವತಸಂಕಲ್ಪಾ ವೃದ್ಧಬಾಲವಿನಾಕೃತಾ।
12139022c ಗೋಜಾವಿಮಹಿಷೈರ್ಹೀನಾ ಪರಸ್ಪರಹರಾಹರಾ।।

ದೈವಸಂಕಲ್ಪಗಳು ಹೊರಟು ಹೋಗಿ ವೃದ್ಧ-ಬಾಲಕರು ಇಲ್ಲದಂತಾಗಿ ಮತ್ತು ಗೋವುಗಳು-ಕುರಿಗಳು ಮತ್ತು ಎಮ್ಮೆಗಳು ಇಲ್ಲವಂತಾಗಿ ಪ್ರಾಣಿಗಳು ಹಸಿವೆಯಿಂದ ಪರಸ್ಪರರನ್ನು ಸಂಹರಿಸತೊಡಗಿದವು.

12139023a ಹತವಿಪ್ರಾ ಹತಾರಕ್ಷಾ ಪ್ರನಷ್ಟೌಷಧಿಸಂಚಯಾ।
12139023c ಶ್ಯಾವಭೂತನರಪ್ರಾಯಾ2 ಬಭೂವ ವಸುಧಾ ತದಾ।।

ವಿಪ್ರರು ಹತರಾಗಿದ್ದರು. ರಕ್ಷಕರೂ ಹತರಾಗಿದ್ದರು. ಔಷಧಿಸಂಚಯಗಳೂ ನಷ್ಟವಾಗಿದ್ದವು. ಆಗ ವಸುಧೆಯು ನರರ ಹಾಹಾಕಾರದಿಂದ ತುಂಬಿಹೋಗಿತ್ತು.

12139024a ತಸ್ಮಿನ್ ಪ್ರತಿಭಯೇ ಕಾಲೇ ಕ್ಷೀಣೇ ಧರ್ಮೇ ಯುಧಿಷ್ಠಿರ।
12139024c ಬಭ್ರಮುಃ ಕ್ಷುಧಿತಾ ಮರ್ತ್ಯಾಃ ಖಾದಂತಃ ಸ್ಮ ಪರಸ್ಪರಮ್।।

ಯುಧಿಷ್ಠಿರ! ಇಂತಹ ಭಯಂಕರ ಸಮಯದಲ್ಲಿ ಧರ್ಮವು ಕ್ಷೀಣಿಸುತ್ತಿರಲು ಹಸಿವೆಯಿಂದ ಪೀಡಿತರಾದ ಮನುಷ್ಯರು ಪರಸ್ಪರರನ್ನೇ ತಿನ್ನತೊಡಗಿದರು.

12139025a ಋಷಯೋ ನಿಯಮಾಂಸ್ತ್ಯಕ್ತ್ವಾ ಪರಿತ್ಯಕ್ತಾಗ್ನಿದೈವತಾಃ।
12139025c ಆಶ್ರಮಾನ್ಸಂಪರಿತ್ಯಜ್ಯ ಪರ್ಯಧಾವನ್ನಿತಸ್ತತಃ।।

ಋಷಿಗಳು ನಿಯಮಗಳನ್ನು ತ್ಯಜಿಸಿ, ಅಗ್ನಿದೇವತೆಯನ್ನು ಪರಿತ್ಯಜಿಸಿ, ಆಶ್ರಮಗಳನ್ನು ಪರಿತ್ಯಜಿಸಿ ಅಲ್ಲಲ್ಲಿ ಓಡ ತೊಡಗಿದರು.

12139026a ವಿಶ್ವಾಮಿತ್ರೋಽಥ ಭಗವಾನ್ಮಹರ್ಷಿರನಿಕೇತನಃ।
12139026c ಕ್ಷುಧಾ ಪರಿಗತೋ ಧೀಮಾನ್ಸಮಂತಾತ್ಪರ್ಯಧಾವತ।।

ಅನಿಕೇತನ3 ಭಗವಾನ್ ಮಹರ್ಷಿ ವಿಶ್ವಾಮಿತ್ರನೂ ಕೂಡ ಹಸಿವೆಯಿಂದ ಪೀಡಿತನಾಗಿ ಎಲ್ಲಕಡೆ ಓಡುತ್ತಿದ್ದನು.

12139027a 4ಸ ಕದಾ ಚಿತ್ಪರಿಪತನ್ ಶ್ವಪಚಾನಾಂ ನಿವೇಶನಮ್। 12139027c ಹಿಂಸ್ರಾಣಾಂ ಪ್ರಾಣಿಹಂತೃಣಾಮಾಸಸಾದ ವನೇ ಕ್ವ ಚಿತ್।।

ಒಮ್ಮೆ ಅವನು ಪರಿತಪಿಸುತ್ತಾ ವನದಲ್ಲಿ ಪ್ರಾಣಿಗಳನ್ನು ಕೊಲ್ಲುವ ಹಿಂಸಕ ಚಾಂಡಾಲರ ಬಸದಿಯನ್ನು ಹೇಗೋ ತಲುಪಿದನು.

12139028a ವಿಭಿನ್ನಕಲಶಾಕೀರ್ಣಂ ಶ್ವಚರ್ಮಾಚ್ಚಾದನಾಯುತಮ್।
12139028c ವರಾಹಖರಭಗ್ನಾಸ್ಥಿಕಪಾಲಘಟಸಂಕುಲಮ್।।

ಅಲ್ಲಿ ಒಡೆದ ಮಡಕೆಗಳು ಹರಡಿಕೊಂಡಿದ್ದವು. ನಾಯಿಯ ಚರ್ಮಗಳನ್ನು ಸುಲಿಯುವ ಉಪಕರಣಗಳಿದ್ದವು. ಹಂದಿ ಮತ್ತು ಕತ್ತೆಗಳ ಎಲುಬುಗಳು ಮತ್ತು ತಲೆಬುರುಡೆಗಳು ಹರಡಿಕೊಂಡಿದ್ದವು.

12139029a ಮೃತಚೇಲಪರಿಸ್ತೀರ್ಣಂ ನಿರ್ಮಾಲ್ಯಕೃತಭೂಷಣಮ್।
12139029c ಸರ್ಪನಿರ್ಮೋಕಮಾಲಾಭಿಃ ಕೃತಚಿಹ್ನಕುಟೀಮಠಮ್।।

ಮೃತರ ಶರೀರಗಳಿಂದ ಕಳಚಿದ ವಸ್ತ್ರಗಳನ್ನು ಎಲ್ಲೆಲ್ಲಿಯೂ ಹರಡಲಾಗಿತ್ತು. ಮತ್ತು ಆ ಶವಗಳಿಂದ ತೆಗೆದಿದ್ದ ಹೂಮಾಲೆಗಳಿಂದಲೂ ಅಲಂಕರಿಸಲಾಗಿತ್ತು. ಚಾಂಡಾಲರ ಮನೆಗಳು ಸರ್ಪಗಳ ಪೊರೆಗಳಿಂದಲೂ ವಿಭೂಷಿತಗೊಂಡಿದ್ದವು ಮತ್ತು ಚಿತ್ರಿತವಾಗಿದ್ದವು.

12139030a ಉಲೂಕಪಕ್ಷಧ್ವಜಿಭಿರ್ದೇವತಾಯತನೈರ್ವೃತಮ್।
12139030c ಲೋಹಘಂಟಾಪರಿಷ್ಕಾರಂ ಶ್ವಯೂಥಪರಿವಾರಿತಮ್।।

ಅಲ್ಲಿದ್ದ ಯಾವುದೋ ದೇವಾಲಯದಿಂದ ಗೂಬೆಯ ಕೂಗು ಕೇಳಿಬರುತ್ತಿತ್ತು. ಲೋಹದ ಪಾತ್ರೆಗಳನ್ನು ಜೋಡಿಸಿಡಲಾಗಿತ್ತು. ನಾಯಿಗಳ ಹಿಂಡುಗಳು ಮನೆಗಳಲ್ಲಿ ಸೇರಿಕೊಂಡಿದ್ದವು.

12139031a ತತ್ ಪ್ರವಿಶ್ಯ ಕ್ಷುಧಾವಿಷ್ಟೋ ಗಾಧೇಃ ಪುತ್ರೋ ಮಹಾನೃಷಿಃ।
12139031c ಆಹಾರಾನ್ವೇಷಣೇ ಯುಕ್ತಃ ಪರಂ ಯತ್ನಂ ಸಮಾಸ್ಥಿತಃ।।

ಆ ಬಸದಿಯನ್ನು ಪ್ರವೇಶಿಸಿ ಹಸಿವೆಯಿಂದ ಪೀಡಿತನಾಗಿದ್ದ ಗಾಧಿಯ ಪುತ್ರ ಮಹಾನೃಷಿಯು ಆಹಾರವನ್ನು ಹುಡುಕುತ್ತಾ ಪರಮ ಯತ್ನವನ್ನು ಮಾಡಿದನು.

12139032a ನ ಚ ಕ್ವ ಚಿದವಿಂದತ್ಸ ಭಿಕ್ಷಮಾಣೋಽಪಿ ಕೌಶಿಕಃ।
12139032c ಮಾಂಸಮನ್ನಂ ಮೂಲಫಲಮನ್ಯದ್ವಾ ತತ್ರ ಕಿಂ ಚನ।।

ಭಿಕ್ಷೆಬೇಡುತ್ತಿದ್ದ ಕೌಶಿಕನಿಗೆ ಅಲ್ಲಿ ಮಾಂಸವಾಗಲೀ, ಅನ್ನವಾಗಲೀ, ಫಲ-ಮೂಲಗಳಾಗಲೀ ದೊರಕಲಿಲ್ಲ.

12139033a ಅಹೋ ಕೃಚ್ಚ್ರಂ ಮಯಾ ಪ್ರಾಪ್ತಮಿತಿ ನಿಶ್ಚಿತ್ಯ ಕೌಶಿಕಃ।
12139033c ಪಪಾತ ಭೂಮೌ ದೌರ್ಬಲ್ಯಾತ್ತಸ್ಮಿಂಶ್ಚಂಡಾಲಪಕ್ಕಣೇ।।

“ಅಯ್ಯೋ! ಎಂತಹ ಕಷ್ಟವು ಬಂದೊದಗಿತು?” ಎಂದು ಯೋಚಿಸುತ್ತಾ ಕೌಶಿಕನು ದೌರ್ಬಲ್ಯದ ಕಾರಣದಿಂದ ಆ ಚಾಂಡಾಲರ ಬಸದಿಯಲ್ಲಿಯೇ ನೆಲದ ಮೇಲೆ ಬಿದ್ದುಬಿಟ್ಟನು.

12139034a ಚಿಂತಯಾಮಾಸ ಸ ಮುನಿಃ ಕಿಂ ನು ಮೇ ಸುಕೃತಂ ಭವೇತ್।
12139034c ಕಥಂ ವೃಥಾ ನ ಮೃತ್ಯುಃ ಸ್ಯಾದಿತಿ ಪಾರ್ಥಿವಸತ್ತಮ।।

ಪಾರ್ಥಿವಸತ್ತಮ! “ನನಗೆ ಹೇಗೆ ಒಳಿತಾಗಬಹುದು? ಹೇಗೆ ವೃಥಾ ನನ್ನ ಮೃತ್ಯುವಾಗಬಾರದು?” ಎಂದು ಅವನು ಯೋಚಿಸಿದನು.

12139035a ಸ ದದರ್ಶ ಶ್ವಮಾಂಸಸ್ಯ ಕುತಂತೀಂ ವಿತತಾಂ ಮುನಿಃ।
12139035c ಚಂಡಾಲಸ್ಯ ಗೃಹೇ ರಾಜನ್ಸದ್ಯಃ ಶಸ್ತ್ರಹತಸ್ಯ ಚ।।

ರಾಜನ್! ಅಷ್ಟರಲ್ಲಿಯೇ ಅವನು ಚಾಂಡಾಲನ ಮನೆಯಲ್ಲಿ ಆಗಷ್ಟೇ ಶಸ್ತ್ರದಿಂದ ಕೊಂದಿದ್ದ ನಾಯಿಯ ಮೊಣಕಾಲಿನ ಭಾಗದ ಒಂದು ದೊಡ್ಡ ತುಂಡು ಬಿದ್ದುದನ್ನು ನೋಡಿದನು.

12139036a ಸ ಚಿಂತಯಾಮಾಸ ತದಾ ಸ್ತೇಯಂ ಕಾರ್ಯಮಿತೋ ಮಯಾ।
12139036c ನ ಹೀದಾನೀಮುಪಾಯೋಽನ್ಯೋ ವಿದ್ಯತೇ ಪ್ರಾಣಧಾರಣೇ।।

“ಈ ಮಾಂಸವನ್ನು ಇಲ್ಲಿಂದ ಕದ್ದುಕೊಂಡು ಹೋಗುತ್ತೇನೆ ಏಕೆಂದರೆ ಈ ಸಮಯದಲ್ಲಿ ನನ್ನ ಪ್ರಾಣಗಳನ್ನು ರಕ್ಷಿಸಿಕೊಳ್ಳಲು ಬೇರೆ ಯಾವ ಉಪಾಯವೂ ಇಲ್ಲವಾಗಿದೆ” ಎಂದು ಅವನು ಯೋಚಿಸಿದನು.

12139037a ಆಪತ್ಸು ವಿಹಿತಂ ಸ್ತೇಯಂ ವಿಶಿಷ್ಟಸಮಹೀನತಃ।
12139037c ಪರಂ ಪರಂ ಭವೇತ್ಪೂರ್ವಮಸ್ತೇಯಮಿತಿ ನಿಶ್ಚಯಃ।।

“ಆಪತ್ಕಾಲದಲ್ಲಿ ಪ್ರಾಣರಕ್ಷಣೆಗಾಗಿ ಬ್ರಾಹ್ಮಣನಿಗೆ ಶ್ರೇಷ್ಠ, ಸಮಾನ ಮತ್ತು ಹೀನ ಮನುಷ್ಯರ ಮನೆಯಿಂದ ಕಳ್ಳತನ ಮಾಡುವುದು ಉಚಿತವೇ ಆಗಿದೆ. ಇದು ಶಾಸ್ತ್ರದ ನಿಶ್ಚಿತ ವಿಧಾನ.

12139038a ಹೀನಾದಾದೇಯಮಾದೌ ಸ್ಯಾತ್ಸಮಾನಾತ್ತದನಂತರಮ್।
12139038c ಅಸಂಭವಾದಾದದೀತ ವಿಶಿಷ್ಟಾದಪಿ ಧಾರ್ಮಿಕಾತ್।।

ಮೊದಲು ಹೀನ ಪುರುಷನ ಮನೆಯಿಂದ ಭಕ್ಷ್ಯ ಪದಾರ್ಥವನ್ನು ಕದಿಯಬೇಕು. ಅದರಿಂದ ಅವನ ಉದ್ದೇಶವು ಪೂರ್ಣವಾಗದೇ ಇದ್ದರೆ ಸಮಾನ ವ್ಯಕ್ತಿಯ ಮನೆಯಿಂದ ವಸ್ತುವನ್ನು ಕದಿಯಬೇಕು. ಅಲ್ಲಿಯೂ ಕೂಡ ಅಭೀಷ್ಟಸಿದ್ಧಿಯಾಗದೇ ಇದ್ದರೆ ತನಗಿಂತಲೂ ವಿಶಿಷ್ಠ ಧರ್ಮಾತ್ಮ ಪುರುಷನಲ್ಲಿಂದ ಅವನು ಖಾದ್ಯ ವಸ್ತುವನ್ನು ಅಪಹರಿಸಬಹುದು.

12139039a ಸೋಽಹಮಂತಾವಸಾನಾನಾಂ ಹರಮಾಣಃ ಪರಿಗ್ರಹಾತ್।
12139039c ನ ಸ್ತೇಯದೋಷಂ ಪಶ್ಯಾಮಿ ಹರಿಷ್ಯಾಮ್ಯೇತದಾಮಿಷಮ್।।

ಆದುದರಿಂದ ಈ ಚಾಂಡಲರ ಮನೆಯಿಂದ ಈ ನಾಯಿಯ ಮಾಂಸವನ್ನು ಕದ್ದೇಬಿಡುತ್ತೇನೆ. ಇಲ್ಲಿ ಯಾರಿಂದಲಾದರೂ ದಾನವನ್ನು ಕೇಳಿ ಪಡೆಯುವುದಕ್ಕಿಂತ ಹೆಚ್ಚಿನ ದೋಷವು ಈ ಕದಿಯುವುದರಿಂದ ನನಗೆ ಕಾಣುತ್ತಿಲ್ಲ. ಆದುದರಿಂದ ಅವಶ್ಯವಾಗಿ ಇದನ್ನು ಅಪಹರಿಸುತ್ತೇನೆ.”

12139040a ಏತಾಂ ಬುದ್ಧಿಂ ಸಮಾಸ್ಥಾಯ ವಿಶ್ವಾಮಿತ್ರೋ ಮಹಾಮುನಿಃ।
12139040c ತಸ್ಮಿನ್ದೇಶೇ ಪ್ರಸುಷ್ವಾಪ ಪತಿತೋ ಯತ್ರ ಭಾರತ।।

ಭಾರತ! ಈ ನಿಶ್ಚಯವನ್ನು ಮಾಡಿ ಮಹಾಮುನಿ ವಿಶ್ವಾಮಿತ್ರನು ಚಾಂಡಾಲರು ವಾಸಿಸುತ್ತಿದ್ದ ಅದೇ ಸ್ಥಾನದಲ್ಲಿಯೇ ಮಲಗಿಕೊಂಡುಬಿಟ್ಟನು.

12139041a ಸ ವಿಗಾಢಾಂ ನಿಶಾಂ ದೃಷ್ಟ್ವಾ ಸುಪ್ತೇ ಚಂಡಾಲಪಕ್ಕಣೇ।
12139041c ಶನೈರುತ್ಥಾಯ ಭಗವಾನ್ ಪ್ರವಿವೇಶ ಕುಟೀಮಠಮ್।।

ಗಾಢ ಅಂಧಕಾರಯುಕ್ತ ರಾತ್ರಿಯಾಗಲು ಮತ್ತು ಚಾಂಡಲರ ಬಸದಿಯ ಎಲ್ಲರೂ ನಿದ್ರಿಸುತ್ತಿರಲು ಭಗವಾನ್ ವಿಶ್ವಾಮಿತ್ರನು ಮೆಲ್ಲನೇ ಎದ್ದು ಆ ಚಾಂಡಾಲನ ಮನೆಯನ್ನು ಪ್ರವೇಶಿಸಿದನು.

12139042a ಸ ಸುಪ್ತ ಏವ ಚಂಡಾಲಃ ಶ್ಲೇಷ್ಮಾಪಿಹಿತಲೋಚನಃ।
12139042c ಪರಿಭಿನ್ನಸ್ವರೋ ರೂಕ್ಷ ಉವಾಚಾಪ್ರಿಯದರ್ಶನಃ।।

ಮಲಗಿದ್ದಂತೆ ತೋರುತ್ತಿದ್ದ ಚಾಂಡಾಲನ ಕಣ್ಣುಗಳು ಕೊಳೆಯಿಂದ ಮುಚ್ಚಿಕೊಂಡಿದ್ದವು. ಆದರೆ ಅವನು ಎಚ್ಚೆತ್ತಿದ್ದನು. ನೋಡಲು ಭಯಾನಕನಾಗಿದ್ದ ಸ್ವಭಾವತಃ ಕ್ರೂರಿಯಾಗಿ ಕಾಣುತ್ತಿದ್ದ ಅವನು ಒಳಗೆ ಬಂದ ಮುನಿಯನ್ನು ನೋಡಿ ಗಡಸು ಸ್ವರದಲ್ಲಿ ಹೇಳಿದನು:

12139043a ಕಃ ಕುತಂತೀಂ ಘಟ್ಟಯತಿ ಸುಪ್ತೇ ಚಂಡಾಲಪಕ್ಕಣೇ।
12139043c ಜಾಗರ್ಮಿ ನಾವಸುಪ್ತೋಽಸ್ಮಿ ಹತೋಽಸೀತಿ ಚ ದಾರುಣಃ।।
12139044a ವಿಶ್ವಾಮಿತ್ರೋಽಹಮಿತ್ಯೇವ ಸಹಸಾ ತಮುವಾಚ ಸಃ।
12139044c ಸಹಸಾಭ್ಯಾಗತಭಯಃ ಸೋದ್ವೇಗಸ್ತೇನ ಕರ್ಮಣಾ।।

“ಅರೇ! ಚಾಂಡಾಲರ ಮನೆಗಳಲ್ಲಿ ಎಲ್ಲರೂ ಮಲಗಿಬಿಟ್ಟಿದ್ದಾರೆ. ಮತ್ತೆ ಯಾರು ಇಲ್ಲಿ ಬಂದು ನಾಯಿಯ ಮಾಂಸವನ್ನು ಕದಿಯುವ ಯತ್ನವನ್ನು ಮಾಡುತ್ತಿದ್ದಾನೆ? ನಾನು ಎಚ್ಚೆತ್ತಿದ್ದೇನೆ. ನಿದ್ರೆಮಾಡುತ್ತಿಲ್ಲ. ಈಗ ನೀನು ಹತನಾದಂತೆಯೇ!” ಅವನ ಮಾತನ್ನು ಕೇಳಿ ಭಯದಿಂದ ಗಾಬರಿಗೊಂಡ ವಿಶ್ವಾಮಿತ್ರನು ತಾನು ಮಾಡುತ್ತಿರುವ ಕೆಲಸದಿಂದ ಉದ್ವಿಗ್ನನಾಗಿ “ನಾನು ವಿಶ್ವಾಮಿತ್ರ!” ಎಂದು ಹೇಳಿದನು.

12139045a 5ಚಂಡಾಲಸ್ತದ್ವಚಃ ಶ್ರುತ್ವಾ ಮಹರ್ಷೇರ್ಭಾವಿತಾತ್ಮನಃ। 12139045c ಶಯನಾದುಪಸಂಭ್ರಾಂತ ಇಯೇಷೋತ್ಪತಿತುಂ ತತಃ।।

ಭಾವಿತಾತ್ಮ ಮಹರ್ಷಿಯ ಆ ಮಾತನ್ನು ಕೇಳಿ ಚಾಂಡಾಲನು ಗಾಬರಿಗೊಂಡು ಕೂಡಲೇ ಹಾಸಿಗೆಯಿಂದ ಮೇಲೆದ್ದು ಋಷಿಯ ಬಳಿ ಹೋದನು.

12139046a ಸ ವಿಸೃಜ್ಯಾಶ್ರು ನೇತ್ರಾಭ್ಯಾಂ ಬಹುಮಾನಾತ್ ಕೃತಾಂಜಲಿಃ।
12139046c ಉವಾಚ ಕೌಶಿಕಂ ರಾತ್ರೌ ಬ್ರಹ್ಮನ್ಕಿಂ ತೇ ಚಿಕೀರ್ಷಿತಮ್।।

ಅವನು ಆದರದೊಂದಿಗೆ ಕೈಮುಗಿದು ಕಣ್ಣೀರು ಸುರಿಸುತ್ತಾ ಕೌಶಿಕನಿಗೆ ಇಂತೆಂದನು: “ಬ್ರಹ್ಮನ್! ಈ ರಾತ್ರಿಯಲ್ಲಿ ಇಲ್ಲಿ ನೀನು ಏನು ಮಾಡುತ್ತಿರುವೆ?”

12139047a ವಿಶ್ವಾಮಿತ್ರಸ್ತು ಮಾತಂಗಮುವಾಚ ಪರಿಸಾಂತ್ವಯನ್।
12139047c ಕ್ಷುಧಿತೋಽಹಂ ಗತಪ್ರಾಣೋ ಹರಿಷ್ಯಾಮಿ ಶ್ವಜಾಘನೀಮ್।।

ವಿಶ್ವಾಮಿತ್ರನಾದರೋ ಮಾತಂಗನನ್ನು ಸಮಾಧಾನಪಡಿಸುತ್ತಾ ಹೇಳಿದನು: “ನಾನು ಹಸಿದಿದ್ದೇನೆ. ಪ್ರಾಣಹೋಗುತ್ತಿದೆ. ಈ ನಾಯಿಯ ಮಾಂಸವನ್ನು ಕದಿಯುತ್ತಿದ್ದೇನೆ.

12139048a ಅವಸೀದಂತಿ ಮೇ ಪ್ರಾಣಾಃ ಸ್ಮೃತಿರ್ಮೇ6 ನಶ್ಯತಿ ಕ್ಷುಧಾ। 12139048c 7ಸ್ವಧರ್ಮಂ ಬುಧ್ಯಮಾನೋಽಪಿ ಹರಿಷ್ಯಾಮಿ ಶ್ವಜಾಘನೀಮ್।।

ನನ್ನ ಪ್ರಾಣಗಳು ಕುಸಿಯುತ್ತಿವೆ. ಹಸಿವೆಯಿಂದ ನನ್ನ ಸ್ಮರಣಶಕ್ತಿಯು ಕುಂಠಿತವಾಗುತ್ತಿದೆ. ಸ್ವಧರ್ಮವನ್ನು ತಿಳಿದಿದ್ದರೂ ಈ ನಾಯಿಯ ಮಾಂಸವನ್ನು ಕದಿಯುತ್ತಿದ್ದೇನೆ.

12139049a ಅಟನ್ ಭೈಕ್ಷಂ ನ ವಿಂದಾಮಿ ಯದಾ ಯುಷ್ಮಾಕಮಾಲಯೇ।
12139049c ತದಾ ಬುದ್ಧಿಃ ಕೃತಾ ಪಾಪೇ ಹರಿಷ್ಯಾಮಿ ಶ್ವಜಾಘನೀಮ್।।

ನಿಮ್ಮ ಮನೆಗಳಲ್ಲಿ ಸುತ್ತಾಡಿದರೂ ನನಗೆ ಭಿಕ್ಷವು ದೊರೆಯಲಿಲ್ಲ. ಆಗ ಈ ನಾಯಿಯ ಮಾಂಸವನ್ನು ಕದಿಯುವ ಪಾಪಬುದ್ಧಿಯನ್ನು ಮಾಡಿದೆನು.

12139050a ತೃಷಿತಃ ಕಲುಷಂ ಪಾತಾ ನಾಸ್ತಿ ಹ್ರೀರಶನಾರ್ಥಿನಃ।
12139050c ಕ್ಷುದ್ಧರ್ಮಂ ದೂಷಯತ್ಯತ್ರ ಹರಿಷ್ಯಾಮಿ ಶ್ವಜಾಘನೀಮ್।।

ಆಹಾರವನ್ನು ಅರಸುತ್ತಿರುವವನಿಗೆ ಕಲುಷಿತ ಅಹಾರದಿಂದಲಾದರೂ ತೃಪ್ತಿಯಾದರೆ ಅದರಲ್ಲಿ ದೋಷವೇನಿಲ್ಲ. ಈ ಹಸಿವೆಯ ಧರ್ಮವನ್ನು ದೂಷಿಸುತ್ತಾ ನಾನು ಈ ನಾಯಿಯ ಮಾಂಸವನ್ನು ಕದಿಯುತ್ತಿದ್ದೇನೆ.

12139051a ಅಗ್ನಿರ್ಮುಖಂ ಪುರೋಧಾಶ್ಚ ದೇವಾನಾಂ ಶುಚಿಪಾದ್ವಿಭುಃ।
12139051c ಯಥಾ ಸ ಸರ್ವಭುಗ್ಬ್ರಹ್ಮಾ ತಥಾ ಮಾಂ ವಿದ್ಧಿ ಧರ್ಮತಃ।।

ದೇವತೆಗಳ ಮುಖನಾದ ಅಗ್ನಿಯು ಪುರೋಹಿತನು. ಪವಿತ್ರ ದ್ರವ್ಯವನ್ನೇ ಪರಿಗ್ರಹಿಸುತ್ತಾನೆ. ಆ ಪ್ರಭುವು ಹೇಗೆ ಸರ್ವಭಕ್ಷಿಯೋ ಹಾಗೆ ನಾನೂ ಕೂಡ ಸರ್ವಭಕ್ಷಿಯಾಗುತ್ತೇನೆ. ಆದುದರಿಂದ ನೀನು ಧರ್ಮತಃ ನನ್ನನ್ನು ಬ್ರಾಹ್ಮಣನೆಂದೇ ತಿಳಿದುಕೋ.”

12139052a ತಮುವಾಚ ಸ ಚಂಡಾಲೋ ಮಹರ್ಷೇ ಶೃಣು ಮೇ ವಚಃ।
12139052c ಶ್ರುತ್ವಾ ತಥಾ ಸಮಾತಿಷ್ಠ ಯಥಾ ಧರ್ಮಾನ್ನ ಹೀಯಸೇ।।

ಆಗ ಚಾಂಡಾಲನು ಅವನಿಗೆ ಹೇಳಿದನು: “ಮಹರ್ಷೇ! ನನ್ನ ಮಾತನ್ನು ಕೇಳು. ಅದನ್ನು ಕೇಳಿ ನಿನ್ನ ಧರ್ಮವು ನಷ್ಟವಾಗದ ರೀತಿಯಲ್ಲಿ ಮಾಡು.

12139053a 8ಮೃಗಾಣಾಮಧಮಂ ಶ್ವಾನಂ ಪ್ರವದಂತಿ ಮನೀಷಿಣಃ। 12139053c ತಸ್ಯಾಪ್ಯಧಮ ಉದ್ದೇಶಃ ಶರೀರಸ್ಯೋರುಜಾಘನೀ।।

ನಾಯಿಯು ಪ್ರಾಣಿಗಳಲ್ಲಿಯೇ ಅಧಮಪ್ರಾಣಿ ಎಂದು ಮನೀಷಿಣರು ಹೇಳುತ್ತಾರೆ. ನಾಯಿಯ ಶರೀರದಲ್ಲಿಯೂ ಮೊಣಕಾಲಿನ ಭಾಗವು ಅಧಮವಾದುದು.

12139054a ನೇದಂ ಸಮ್ಯಗ್ ವ್ಯವಸಿತಂ ಮಹರ್ಷೇ ಕರ್ಮ ವೈಕೃತಮ್।
12139054c ಚಂಡಾಲಸ್ವಸ್ಯ ಹರಣಮಭಕ್ಷ್ಯಸ್ಯ ವಿಶೇಷತಃ।।

ಮಹರ್ಷೇ! ನಿನ್ನ ಈ ನಿಶ್ಚಯವು ಸರಿಯಾದುದಲ್ಲ. ಚಾಂಡಾಲನ ಧನವನ್ನು, ಅದರಲ್ಲೂ ವಿಶೇಷವಾಗಿ ಅಭಕ್ಷ್ಯ ಪದಾರ್ಥವನ್ನು ಅಪಹರಿಸುವುದು ಧರ್ಮದೃಷ್ಟಿಯಲ್ಲಿ ಅತ್ಯಂತ ನಿಂದನೀಯವು.

12139055a ಸಾಧ್ವನ್ಯಮನುಪಶ್ಯ ತ್ವಮುಪಾಯಂ ಪ್ರಾಣಧಾರಣೇ।
12139055c ನ ಮಾಂಸಲೋಭಾತ್ತಪಸೋ ನಾಶಸ್ತೇ ಸ್ಯಾನ್ಮಹಾಮುನೇ।।

ಮಹಾಮುನೇ! ನಿನ್ನ ಪ್ರಾಣರಕ್ಷಣೆಗಾಗಿ ಅನ್ಯ ಉಪಾಯವನ್ನು ನೋಡಿಕೊಳ್ಳಬೇಕು. ಮಾಂಸದ ಲೋಭದಿಂದ ನಿನ್ನ ತಪಸ್ಸು ನಾಶವಾಗಬಾರದು.

12139056a ಜಾನತೋಽವಿಹಿತೋ ಮಾರ್ಗೋ ನ ಕಾರ್ಯೋ ಧರ್ಮಸಂಕರಃ।
12139056c ಮಾ ಸ್ಮ ಧರ್ಮಂ ಪರಿತ್ಯಾಕ್ಷೀಸ್ತ್ವಂ ಹಿ ಧರ್ಮವಿದುತ್ತಮಃ।।

ಧರ್ಮಮಾರ್ಗವನ್ನು ನೀನು ತಿಳಿದಿದ್ದೀಯೆ. ಧರ್ಮಸಂಕರದ ಕಾರ್ಯವನ್ನು ಮಾಡಬೇಡ. ಧರ್ಮವನ್ನು ಪರಿತ್ಯಜಿಸಬೇಡ. ಏಕೆಂದರೆ ನೀನು ಧರ್ಮವಿದುಗಳಲ್ಲಿಯೇ ಉತ್ತಮನು.”

12139057a ವಿಶ್ವಾಮಿತ್ರಸ್ತತೋ ರಾಜನ್ನಿತ್ಯುಕ್ತೋ ಭರತರ್ಷಭ।
12139057c ಕ್ಷುಧಾರ್ತಃ ಪ್ರತ್ಯುವಾಚೇದಂ ಪುನರೇವ ಮಹಾಮುನಿಃ।।

ಭರತರ್ಷಭ! ರಾಜನ್! ಚಾಂಡಲನು ಹೀಗೆ ಹೇಳಲು ಹಸಿವೆಯಿಂದ ಬಳಲಿದ್ದ ಮಹಾಮುನಿ ವಿಶ್ವಾಮಿತ್ರನು ಪುನಃ ಹೀಗೆ ಉತ್ತರಿಸಿದನು:

12139058a ನಿರಾಹಾರಸ್ಯ ಸುಮಹಾನ್ಮಮ ಕಾಲೋಽಭಿಧಾವತಃ।
12139058c ನ ವಿದ್ಯತೇಽಭ್ಯುಪಾಯಶ್ಚ ಕಶ್ಚಿನ್ಮೇ ಪ್ರಾಣಧಾರಣೇ।।

ನಿರಾಹಾರನಾಗಿ ನಾನು ಆಹಾರವನ್ನು ಹುಡುಕುತ್ತಾ ಬಹಳ ಕಾಲದಿಂದ ಅಲ್ಲಿಂದಿಲ್ಲಿಗೆ ಓಡುತ್ತಿದ್ದೇನೆ. ಆದರೆ ನನ್ನ ಪ್ರಾಣಗಳ ರಕ್ಷಣೆಗೆ ಯಾವ ಉಪಾಯವೂ ದೊರಕಲಿಲ್ಲ.

12139059a ಯೇನ ತೇನ ವಿಶೇಷೇಣ ಕರ್ಮಣಾ ಯೇನ ಕೇನ ಚಿತ್।
12139059c ಅಭ್ಯುಜ್ಜೀವೇತ್ಸೀದಮಾನಃ ಸಮರ್ಥೋ ಧರ್ಮಮಾಚರೇತ್।।

ಸಾಯುತ್ತಿರುವವನು ಯಾವುದಾದರೂ ವಿಶೇಷ ಕರ್ಮದಿಂದ ಮತ್ತು ಯಾವುದರಿಂದಲಾದರೂ ತನ್ನ ಜೀವವನ್ನು ಉಳಿಸಿಕೊಂಡರೆ ಅವನು ಧರ್ಮವನ್ನು ಆಚರಿಸಲು ಸಮರ್ಥನಾಗುತ್ತಾನೆ.

12139060a ಐಂದ್ರೋ ಧರ್ಮಃ ಕ್ಷತ್ರಿಯಾಣಾಂ ಬ್ರಾಹ್ಮಣಾನಾಮಥಾಗ್ನಿಕಃ।
12139060c ಬ್ರಹ್ಮವಹ್ನಿರ್ಮಮ ಬಲಂ ಭಕ್ಷ್ಯಾಮಿ ಸಮಯಂ ಕ್ಷುಧಾ9।।

ಇಂದ್ರನ ಪಾಲನಾರೂಪ ಧರ್ಮವು ಕ್ಷತ್ರಿಯರ ಧರ್ಮ. ಮತ್ತು ಅಗ್ನಿಯ ಸರ್ವಭಕ್ಷಿತ್ವ ಗುಣವು ಬ್ರಾಹ್ಮಣರ ಗುಣ. ನನ್ನ ಬಲವು ದೇವರೂಪೀ ಅಗ್ನಿಯು. ಆದುದರಿಂದ ನಾನು ಹಸಿವೆಗಾಗಿ ಎಲ್ಲವನ್ನೂ ಭಕ್ಷಿಸುತ್ತೇನೆ.

12139061a ಯಥಾ ಯಥಾ ವೈ ಜೀವೇದ್ಧಿ ತತ್ಕರ್ತವ್ಯಮಪೀಡಯಾ10
12139061c ಜೀವಿತಂ ಮರಣಾಚ್ಚ್ರೇಯೋ ಜೀವನ್ ಧರ್ಮಮವಾಪ್ನುಯಾತ್।।

ಯಾವ್ಯಾವುದರಿಂದ ಜೀವವುಳಿಯುವುದೋ ಆ ಕರ್ಮಗಳನ್ನು ನಾಚಿಕೊಳ್ಳದೇ ಮಾಡಬೇಕು. ಮರಣಕ್ಕಿಂತಲೂ ಜೀವಿತವಾಗಿರುವುದು ಶ್ರೇಯಸ್ಕರವು. ಜೀವವಿದ್ದರೆ ಧರ್ಮವನ್ನು ಪಡೆದುಕೊಳ್ಳಬಹುದು.

12139062a ಸೋಽಹಂ ಜೀವಿತಮಾಕಾಂಕ್ಷನ್ನಭಕ್ಷಸ್ಯಾಪಿ ಭಕ್ಷಣಮ್।
12139062c ವ್ಯವಸ್ಯೇ ಬುದ್ಧಿಪೂರ್ವಂ ವೈ ತದ್ಭವಾನನುಮನ್ಯತಾಮ್।।

ಆದುದರಿಂದ ನಾನು ಜೀವನದ ಆಕಾಂಕ್ಷೆಯನ್ನಿಟ್ಟುಕೊಂಡು ಅಭಕ್ಷ್ಯ ಪದಾರ್ಥವನ್ನೂ ಭಕ್ಷಿಸುವ ಬುದ್ಧಿಪೂರ್ವಕ ನಿಶ್ಚಯವನ್ನು ಮಾಡಿದ್ದೇನೆ. ಅದನ್ನು ನೀನು ಅನುಮೋದಿಸು.

12139063a ಜೀವನ್ ಧರ್ಮಂ ಚರಿಷ್ಯಾಮಿ11 ಪ್ರಣೋತ್ಸ್ಯಾಮ್ಯಶುಭಾನಿ ಚ।
12139063c ತಪೋಭಿರ್ವಿದ್ಯಯಾ ಚೈವ ಜ್ಯೋತೀಂಷೀವ ಮಹತ್ತಮಃ।।

ಮೊದಲು ಜೀವನ ಧರ್ಮವನ್ನು ಆಚರಿಸುತ್ತೇನೆ. ಅನಂತರ ಮಹತ್ತಮ ತಪಸ್ಸು ಮತ್ತು ವಿದ್ಯೆಯ ಮೂಲಕ ಸೂರ್ಯಚಂದ್ರರು ಕತ್ತಲೆಯನ್ನು ಹೋಗಲಾಡಿಸುವಂತೆ ಎಲ್ಲ ಅಶುಭಕರ್ಮಗಳನ್ನೂ ನಾಶಪಡಿಸುತ್ತೇನೆ.”

12139064 ಶ್ವಪಚ ಉವಾಚ।
12139064a ನೈತತ್ಖಾದನ್ ಪ್ರಾಪ್ಸ್ಯಸೇ ಪ್ರಾಣಮನ್ಯಂ ನಾಯುರ್ದೀರ್ಘಂ ನಾಮೃತಸ್ಯೇವ ತೃಪ್ತಿಮ್।
12139064c ಭಿಕ್ಷಾಮನ್ಯಾಂ ಭಿಕ್ಷ ಮಾ ತೇ ಮನೋಽಸ್ತು ಶ್ವಭಕ್ಷಣೇ ಶ್ವಾ ಹ್ಯಭಕ್ಷೋ ದ್ವಿಜಾನಾಮ್।।

ಶ್ವಪಚನು ಹೇಳಿದನು: “ಇದನ್ನು ತಿನ್ನುವುದರಿಂದ ಅತಿ ದೊಡ್ಡ ಆಯುಸ್ಸೇನೂ ದೊರಕುವುದಿಲ್ಲ. ಇದರಿಂದ ಪ್ರಾಣಶಕ್ತಿಯೂ ದೊರೆಯುವುದಿಲ್ಲ ಮತ್ತು ಅಮೃತಕ್ಕೆ ಸಮಾನ ತೃಪ್ತಿಯೂ ಉಂಟಾಗುವುದಿಲ್ಲ. ಆದುದರಿಂದ ನೀನು ಬೇರೆ ಏನನ್ನಾದರೂ ಭಿಕ್ಷಾರೂಪದಲ್ಲಿ ಕೇಳು. ನಾಯಿಯ ಮಾಂಸವನ್ನು ತಿನ್ನುವ ಮನಸ್ಸುಮಾಡಬಾರದು. ದ್ವಿಜರಿಗೆ ನಾಯಿಯು ಅಭಕ್ಷ್ಯವಾದುದು.”

12139065 ವಿಶ್ವಾಮಿತ್ರ ಉವಾಚ।
12139065a ನ ದುರ್ಭಿಕ್ಷೇ ಸುಲಭಂ ಮಾಂಸಮನ್ಯಚ್ ಚ್ವಪಾಕ ನಾನ್ನಂ ನ ಚ ಮೇಽಸ್ತಿ ವಿತ್ತಮ್।
12139065c ಕ್ಷುಧಾರ್ತಶ್ಚಾಹಮಗತಿರ್ನಿರಾಶಃ ಶ್ವಮಾಂಸೇ ಚಾಸ್ಮಿನ್ ಷಡ್ರಸಾನ್ಸಾಧು ಮನ್ಯೇ।।

ವಿಶ್ವಾಮಿತ್ರನು ಹೇಳಿದನು: “ಶ್ವಪಾಕ! ದುರ್ಭಿಕ್ಷವು ನಡೆಯುತ್ತಿರುವಾಗ ಅನ್ಯ ಅನ್ನ ಅಥವಾ ಮಾಂಸವು ಸುಲಭವಾಗಿ ದೊರೆಯುವುದಿಲ್ಲ ಎಂದು ನನಗೆ ತಿಳಿದಿದೆ. ನನ್ನಲ್ಲಿ ಧನವೂ ಇಲ್ಲ. ಕ್ಷುಧಾರ್ತನಾಗಿದ್ದೇನೆ. ನಿರಾಶ್ರಯನೂ ನಿರಾಶನೂ ಆಗಿದ್ದೇನೆ. ಈ ನಾಯಿಯ ಮಾಂಸದಿಂದಲೇ ನನಗೆ ಷಡ್ರಸ ಭೋಜನದ ಆನಂದವು ಪ್ರಾಪ್ತವಾಗುತ್ತದೆ ಎಂದು ನನಗನ್ನಿಸುತ್ತಿದೆ.”

12139066 ಶ್ವಪಚ ಉವಾಚ।
12139066a ಪಂಚ ಪಂಚನಖಾ ಭಕ್ಷ್ಯಾ ಬ್ರಹ್ಮಕ್ಷತ್ರಸ್ಯ ವೈ ದ್ವಿಜ।
12139066c ಯದಿ ಶಾಸ್ತ್ರಂ ಪ್ರಮಾಣಂ ತೇ ಮಾಭಕ್ಷ್ಯೇ ಮಾನಸಂ ಕೃಥಾಃ।।

ಶ್ವಪಚನು ಹೇಳಿದನು: “ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗೆ ಐದು ಉಗುರಿರುವ ಐದು ಪ್ರಾಣಿಗಳು ಆಪತ್ಕಾಲದಲ್ಲಿ ಭಕ್ಷ್ಯಯೋಗ್ಯವೆಂದು ಹೇಳಿದ್ದಾರೆ. ಶಾಸ್ತ್ರದ ಪ್ರಮಾಣವನ್ನು ಸ್ವೀಕರಿಸುವೆಯಾದರೆ ನೀನು ಅಭಕ್ಷ್ಯ ಪದಾರ್ಥದ ಕಡೆ ಮನಗೊಡಬಾರದು.”

12139067 ವಿಶ್ವಾಮಿತ್ರ ಉವಾಚ।
12139067a ಅಗಸ್ತ್ಯೇನಾಸುರೋ ಜಗ್ಧೋ ವಾತಾಪಿಃ ಕ್ಷುಧಿತೇನ ವೈ।
12139067c ಅಹಮಾಪದ್ಗತಃ ಕ್ಷುಬ್ಧೋ ಭಕ್ಷಯಿಷ್ಯೇ ಶ್ವಜಾಘನೀಮ್।।

ವಿಶ್ವಾಮಿತ್ರನು ಹೇಳಿದನು: “ಹಸಿದಿದ್ದ ಅಗಸ್ತ್ಯನು ವಾತಾಪಿ ಎಂಬ ಹೆಸರಿನ ಅಸುರನನ್ನು ತಿಂದಿದ್ದನು. ನಾನಾದರೋ ಹಸಿವೆಯಿಂದ ಮಹಾ ಆಪತ್ತಿನಲ್ಲಿ ಸಿಲುಕಿಕೊಂಡಿದ್ದೇನೆ. ಆದುದರಿಂದ ನಾಯಿಯ ಮೊಣಕಾಲನ್ನು ನಾನು ಅವಶ್ಯವಾಗಿ ತಿನ್ನುತ್ತೇನೆ.”

12139068 ಶ್ವಪಚ ಉವಾಚ।
12139068a ಭಿಕ್ಷಾಮನ್ಯಾಮಾಹರೇತಿ ನ ಚೈತತ್ಕರ್ತುಮರ್ಹಸಿ।
12139068c ನ ನೂನಂ ಕಾರ್ಯಮೇತದ್ವೈ ಹರ ಕಾಮಂ ಶ್ವಜಾಘನೀಮ್।।

ಶ್ವಪಚನು ಹೇಳಿದನು: “ನೀನು ಅನ್ಯ ಭಿಕ್ಷೆಯನ್ನು ತೆಗೆದುಕೊಂಡು ಹೋಗು. ಹೀಗೆ ಮಾಡಬಾರದು. ಬೇಕಾದರೆ ಈ ನಾಯಿಯ ಮೊಣಕಾಲನ್ನು ತೆಗೆದುಕೊಂಡು ಹೋಗು. ಆದರೆ ಇದನ್ನು ಭಕ್ಷಿಸಬಾರದು.”

12139069 ವಿಶ್ವಾಮಿತ್ರ ಉವಾಚ।
12139069a ಶಿಷ್ಟಾ ವೈ ಕಾರಣಂ ಧರ್ಮೇ ತದ್ವೃತ್ತಮನುವರ್ತಯೇ।
12139069c ಪರಾಂ ಮೇಧ್ಯಾಶನಾದೇತಾಂ ಭಕ್ಷ್ಯಾಂ ಮನ್ಯೇ ಶ್ವಜಾಘನೀಮ್।।

ವಿಶ್ವಾಮಿತ್ರನು ಹೇಳಿದನು: “ಶಿಷ್ಟರೇ ಧರ್ಮಕ್ಕೆ ಕಾರಣರು. ನಾನೂ ಅವರ ಶಿಷ್ಟಾಚಾರವನ್ನೇ ಅನುಸರಿಸುತ್ತೇನೆ. ಆದುದರಿಂದ ಈ ನಾಯಿಯ ಮೊಣಕಾಲನ್ನೇ ಪವಿತ್ರ ಭೋಜನದ ಸಮವೆಂದೂ ಭಕ್ಷಣೀಯವೆಂದೂ ತಿಳಿಯುತ್ತೇನೆ.”

12139070 ಶ್ವಪಚ ಉವಾಚ।
12139070a ಅಸತಾ ಯತ್ಸಮಾಚೀರ್ಣಂ ನ ಸ ಧರ್ಮಃ ಸನಾತನಃ।
12139070c ನಾವೃತ್ತಮನುಕಾರ್ಯಂ ವೈ ಮಾ ಚಲೇನಾನೃತಂ ಕೃಥಾಃ।।

ಶ್ವಪಚನು ಹೇಳಿದನು: “ಅಸಾಧು ಪುರುಷನು ಮಾಡಿದ ಅನುಚಿತ ಕಾರ್ಯವು ಸನಾತನ ಧರ್ಮವೆನಿಸಿಕೊಳ್ಳುವುದಿಲ್ಲ. ಆದುದರಿಂದ ನೀನು ಇಲ್ಲಿ ಅಯೋಗ್ಯಕರ್ಮವನ್ನೆಸಗಬೇಡ. ಯಾವುದೋ ನೆಪವನ್ನು ಹೇಳಿಕೊಂಡು ಪಾಪವನ್ನೆಸಗಲು ಮುಂದಾಗಬೇಡ.”

12139071 ವಿಶ್ವಾಮಿತ್ರ ಉವಾಚ।
12139071a ನ ಪಾತಕಂ ನಾವಮತಮೃಷಿಃ ಸನ್ಕರ್ತುಮರ್ಹಸಿ।
12139071c ಸಮೌ ಚ ಶ್ವಮೃಗೌ ಮನ್ಯೇ ತಸ್ಮಾದ್ ಭಕ್ಷ್ಯಾ ಶ್ವಜಾಘನೀ।।

ವಿಶ್ವಾಮಿತ್ರನು ಹೇಳಿದನು: “ಯಾವ ಶ್ರೇಷ್ಠ ಋಷಿಗೂ ಪಾತಕ ಅಥವಾ ನಿಂದನೀಯವಾದ ಇಂತಹ ಕರ್ಮವನ್ನೆಸಗಲು ಸಾಧ್ಯವಿಲ್ಲ. ನಾಯಿ ಮತ್ತು ಮೃಗ ಇವೆರಡೂ ಪಶುಗಳೇ ಆದುದರಿಂದ ನನ್ನ ಮತದಲ್ಲಿ ಸಮಾನವಾಗಿವೆ. ಆದುದರಿಂದ ನಾನು ಈ ನಾಯಿಯ ಮೊಣಕಾಲಭಾಗವನ್ನು ಅವಶ್ಯವಾಗಿ ತಿನ್ನುತ್ತೇನೆ.”

12139072 ಶ್ವಪಚ ಉವಾಚ।
12139072a ಯದ್ಬ್ರಾಹ್ಮಣಾರ್ಥೇ ಕೃತಮರ್ಥಿತೇನ ತೇನರ್ಷಿಣಾ ತಚ್ಚ ಭಕ್ಷ್ಯಾಧಿಕಾರಮ್।
12139072c ಸ ವೈ ಧರ್ಮೋ ಯತ್ರ ನ ಪಾಪಮಸ್ತಿ ಸರ್ವೈರುಪಾಯೈರ್ಹಿ ಸ ರಕ್ಷಿತವ್ಯಃ।।

ಶ್ವಪಚನು ಹೇಳಿದನು: “ಬ್ರಾಹ್ಮಣರು ಪ್ರಾರ್ಥಿಸಿಕೊಂಡಾಗ ಋಷಿ ಅಗಸ್ತ್ಯನು ವಾತಾಪಿಯನ್ನು ಭಕ್ಷಿಸಿದ್ದನು. ಪಾಪವಿಲ್ಲದಿರುವುದೇ ಧರ್ಮವು. ಬ್ರಾಹ್ಮಣನು ಗುರುವು. ಆದುದರಿಂದ ಸರ್ವೋಪಾಯಗಳಿಂದ ಅವನನ್ನು ಮತ್ತು ಅವನ ಧರ್ಮವನ್ನು ರಕ್ಷಿಸಬೇಕು.”

12139073 ವಿಶ್ವಾಮಿತ್ರ ಉವಾಚ।
12139073a ಮಿತ್ರಂ ಚ ಮೇ ಬ್ರಾಹ್ಮಣಶ್ಚಾಯಮಾತ್ಮಾ ಪ್ರಿಯಶ್ಚ ಮೇ ಪೂಜ್ಯತಮಶ್ಚ ಲೋಕೇ।
12139073c ತಂ ಭರ್ತುಕಾಮೋಽಹಮಿಮಾಂ ಹರಿಷ್ಯೇ ನೃಶಂಸಾನಾಮೀದೃಶಾನಾಂ ನ ಬಿಭ್ಯೇ।।

ವಿಶ್ವಾಮಿತ್ರನು ಹೇಳಿದನು: “ಈ ಬ್ರಾಹ್ಮಣ ಶರೀರವು ನನ್ನ ಮಿತ್ರ. ಇಡೀ ಜಗತ್ತಿನಲ್ಲಿ ಇದು ನನಗೆ ಅತ್ಯಂತ ಪ್ರಿಯವೂ ಆದರಣೀಯವೂ ಆಗಿದೆ. ಇದನ್ನು ಜೀವಿತವಿರಿಸಿಕೊಳ್ಳಲು ನಾನು ಈ ನಾಯಿಯ ಮೊಣಕಾಲಿನ ಭಾಗವನ್ನು ಕೊಂಡೊಯ್ಯ ಬಯಸುತ್ತೇನೆ. ಆದುದರಿಂದ ಇಂತಹ ಹಿಂಸಾಕರ್ಮದಿಂದ ನನಗೆ ಸ್ವಲ್ಪವೂ ಭಯವಾಗುತ್ತಿಲ್ಲ.”

12139074 ಶ್ವಪಚ ಉವಾಚ।
12139074a ಕಾಮಂ ನರಾ ಜೀವಿತಂ ಸಂತ್ಯಜಂತಿ ನ ಚಾಭಕ್ಷ್ಯೈಃ ಪ್ರತಿಕುರ್ವಂತಿ ತತ್ರ।
12139074c ಸರ್ವಾನ್ಕಾಮಾನ್ ಪ್ರಾಪ್ನುವಂತೀಹ ವಿದ್ವನ್ ಪ್ರಿಯಸ್ವ ಕಾಮಂ ಸಹಿತಃ ಕ್ಷುಧಾ ವೈ।।

ಶ್ವಪಚನು ಹೇಳಿದನು: “ವಿದ್ವನ್! ಉತ್ತಮ ಪುರುಷನು ತನ್ನ ಪ್ರಾಣಗಳನ್ನು ತ್ಯಜಿಸಬಾರದಾದರೂ ಎಂದೂ ಅಭಕ್ಷ್ಯವನ್ನು ಭಕ್ಷಿಸುವ ವಿಚಾರವನ್ನು ಮಾಡಬಾರದು. ಇದರಿಂದಲೇ ಅವರು ತಮ್ಮ ಸರ್ವಕಾಮನೆಗಳನ್ನು ಪೂರೈಸಿಕೊಳ್ಳುತ್ತಾರೆ. ಆದುದರಿಂದ ನೀನೂ ಕೂಡ ಹಸಿವೆಯಿಂದಲೇ ಉಪವಾಸದ ಮೂಲಕ ನಿನ್ನ ಮನೋಕಾಮನೆಗಳನ್ನು ಪೂರೈಸಿಕೋ.”

12139075 ವಿಶ್ವಾಮಿತ್ರ ಉವಾಚ।
12139075a ಸ್ಥಾನೇ ತಾವತ್ಸಂಶಯಃ ಪ್ರೇತ್ಯಭಾವೇ ನಿಃಸಂಶಯಂ ಕರ್ಮಣಾಂ ವಾ ವಿನಾಶಃ।
12139075c ಅಹಂ ಪುನರ್ವರ್ತ ಇತ್ಯಾಶಯಾತ್ಮಾ ಮೂಲಂ ರಕ್ಷನ್ ಭಕ್ಷಯಿಷ್ಯಾಮ್ಯಭಕ್ಷ್ಯಮ್।।

ವಿಶ್ವಾಮಿತ್ರನು ಹೇಳಿದನು: “ಉಪವಾಸಮಾಡಿ ಪ್ರಾಣವು ಹೊರಟುಹೋದರೆ ನಂತರ ಏನಾಗುತ್ತದೆ? ಇದು ಸಂಶಯಯುಕ್ತವಾದ ವಿಷಯ. ಆದರೆ ಹೀಗೆ ಮಾಡುವುದರಿಂದ ಪುಣ್ಯಕರ್ಮಗಳ ವಿನಾಶವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಾನು ಜೀವನರಕ್ಷಣೆಯ ನಂತರ ಪುನಃ ಪ್ರತಿದಿನ ವ್ರತ ಮತ್ತು ಶಮ, ದಮ ಮೊದಲಾದವುಗಳಲ್ಲಿ ತತ್ಪರನಾಗಿ ಪಾಪಕರ್ಮಗಳ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ. ಈ ಸಮಯದಲ್ಲಂತೂ ಧರ್ಮದ ಮೂಲವಾದ ಶರೀರವನ್ನು ರಕ್ಷಿಸಿಕೊಳ್ಳುವುದು ಅವಶ್ಯಕವಾಗಿದೆ. ಆದುದರಿಂದ ನಾನು ಈ ಅಭಕ್ಷ್ಯ ಪದಾರ್ಥವನ್ನು ತಿನ್ನುತ್ತೇನೆ.

12139076a ಬುದ್ಧ್ಯಾತ್ಮಕೇ ವ್ಯಸ್ತಮಸ್ತೀತಿ ತುಷ್ಟೋ ಮೋಹಾದೇಕತ್ವಂ ಯಥಾ ಚರ್ಮ ಚಕ್ಷುಃ।
12139076c ಯದ್ಯಪ್ಯೇನಃ ಸಂಶಯಾದಾಚರಾಮಿ ನಾಹಂ ಭವಿಷ್ಯಾಮಿ ಯಥಾ ತ್ವಮೇವ।।

ಈ ನಾಯಿಯ ಮಾಂಸಸೇವನೆಯು ಎರಡು ಪ್ರಕಾರದಲ್ಲಾಗಬಹುದು: ಬುದ್ಧಿ ಮತ್ತು ವಿಚಾರಪೂರ್ವಕವಾಗಿ ಒಂದು ಮತ್ತು ಇನ್ನೊಂದು ಅಜ್ಞಾನ ಹಾಗೂ ಆಸಕ್ತಿಪೂರ್ವಕವಾಗಿ. ಮೊದಲನೆಯ ಪ್ರಕಾರದಂತೆ ಧರ್ಮದ ಮೂಲ ಮತ್ತು ಜ್ಞಾನಪ್ರಾಪ್ತಿಗೆ ಸಾಧಕವಾದ ಶರೀರದ ರಕ್ಷಣೆಯಲ್ಲಿ ಪುಣ್ಯವಿದೆ. ಈ ವಿಷಯವು ಸ್ಪಷ್ಟವಾಗಿದೆ. ಇದೇ ತರಹ ಮೋಹ ಮತ್ತು ಆಸಕ್ತಿಪೂರ್ವಕ ಕರ್ಮದಲ್ಲಿ ಪ್ರವೃತ್ತನಾಗುವುದರಿಂದ ಆಗುವ ದೋಷಗಳೂ ಸ್ಪಷ್ಟವಾಗಿವೆ. ಒಂದುವೇಳೆ ನಾನು ಸಂಶಯಯುಕ್ತನಾಗಿಯೇ ಈ ಕಾರ್ಯವನ್ನು ಮಾಡಲು ಹೊರಟಿರುವೆನಾದರೂ ನನಗೆ ಈ ನಾಯಿಯ ಮಾಂಸವನ್ನು ತಿಂದು ನಿನ್ನಂತೆ ನಾನು ಚಾಂಡಾಲನಾಗುವುದಿಲ್ಲ ಎಂಬ ದೃಢ ವಿಶ್ವಾಸವಿದೆ.”

12139077 ಶ್ವಪಚ ಉವಾಚ।
12139077a ಪತನೀಯಮಿದಂ ದುಃಖಮಿತಿ ಮೇ ವರ್ತತೇ ಮತಿಃ।
12139077c ದುಷ್ಕೃತೀ ಬ್ರಾಹ್ಮಣಂ ಸಂತಂ ಯಸ್ತ್ವಾಮಹಮುಪಾಲಭೇ।।

ಶ್ವಪಚನು ಹೇಳಿದನು: “ಈ ನಾಯಿಯ ಮಾಂಸವನ್ನು ತಿನ್ನುವುದು ನಿನಗೆ ದುಃಖದಾಯಕ ಪತನವಾಗುತ್ತದೆ ಎಂದು ನನಗನ್ನಿಸುತ್ತದೆ. ಆದುದರಿಂದ ಪಾಪಿಯಾದರೂ ನಾನು ಉತ್ತಮ ಬ್ರಾಹ್ಮಣನಾದ ನಿನಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈ ರೀತಿ ನಾನು ನಿನಗೆ ಧರ್ಮದ ಉಪದೇಶವನ್ನು ಮಾಡುವುದು ಅವಶ್ಯವಾಗಿಯೂ ಧೂರ್ತತನವೇ ಸರಿ.”

12139078 ವಿಶ್ವಾಮಿತ್ರ ಉವಾಚ।
12139078a ಪಿಬಂತ್ಯೇವೋದಕಂ ಗಾವೋ ಮಂಡೂಕೇಷು ರುವತ್ಸ್ವಪಿ।
12139078c ನ ತೇಽಧಿಕಾರೋ ಧರ್ಮೇಽಸ್ತಿ ಮಾ ಭೂರಾತ್ಮಪ್ರಶಂಸಕಃ।।

ವಿಶ್ವಾಮಿತ್ರನು ಹೇಳಿದನು: “ಕಪ್ಪೆಗಳು ಗೊಟರುಹಾಕುತ್ತಿದ್ದರೂ ಗೋವುಗಳು ಕೆರೆಯಲ್ಲಿ ನೀರನ್ನು ಕುಡಿಯುತ್ತವೆ. ಧರ್ಮೋಪದೇಶವನ್ನು ಮಾಡುವ ಯಾವ ಅಧಿಕಾರವೂ ನಿನಗಿಲ್ಲ. ಆದುದರಿಂದ ನೀನು ನಿನ್ನದೇ ಪ್ರಶಂಸೆಯನ್ನು ಮಾಡಿಕೊಳ್ಳಬೇಡ!”

12139079 ಶ್ವಪಚ ಉವಾಚ।
12139079a ಸುಹೃದ್ ಭೂತ್ವಾನುಶಾಸ್ಮಿ ತ್ವಾ ಕೃಪಾ ಹಿ ತ್ವಯಿ ಮೇ ದ್ವಿಜ।
12139079c ತದೇವಂ ಶ್ರೇಯ ಆಧತ್ಸ್ವ ಮಾ ಲೋಭಾಚ್ಚ್ವಾನಮಾದಿಥಾಃ।।

ಶ್ವಪಚನು ಹೇಳಿದನು: “ದ್ವಿಜ! ನಾನು ನಿನ್ನ ಹಿತೈಷೀ ಮತ್ತು ಸ್ನೇಹಿತನಾಗಿ ನಿನಗೆ ಈ ಧರ್ಮಾಚರಣೆಯ ಸಲಹೆಯನ್ನು ನೀಡುತ್ತಿದ್ದೇನೆ. ಏಕೆಂದರೆ ನನಗೆ ನಿನ್ನಮೇಲೆ ದಯೆಯುಂಟಾಗಿದೆ. ಈ ಕಲ್ಯಾಣಕಾರೀ ಮಾತನ್ನು ಸ್ವೀಕರಿಸು. ಲೋಭದಿಂದ ಈ ನಾಯಿಯ ಮಾಂಸವನ್ನು ಕೊಂಡೊಯ್ಯಬೇಡ.”

12139080 ವಿಶ್ವಾಮಿತ್ರ ಉವಾಚ।
12139080a ಸುಹೃನ್ಮೇ ತ್ವಂ ಸುಖೇಪ್ಸುಶ್ಚೇದಾಪದೋ ಮಾಂ ಸಮುದ್ಧರ।
12139080c ಜಾನೇಽಹಂ ಧರ್ಮತೋಽತ್ಮಾನಂ ಶ್ವಾನೀಮುತ್ಸೃಜ ಜಾಘನೀಮ್।।

ವಿಶ್ವಾಮಿತ್ರನು ಹೇಳಿದನು: “ನೀನು ನನ್ನ ಸ್ನೇಹಿತನಾಗಿದ್ದರೆ ಮತ್ತು ನನಗೆ ಸುಖವನ್ನು ನೀಡಲು ಬಯಸಿದ್ದರೆ ಈ ಆಪತ್ತಿನಿಂದ ನನ್ನನ್ನು ಉದ್ಧರಿಸು. ನಾನು ನನ್ನ ಧರ್ಮವನ್ನು ಅರಿತಿದ್ದೇನೆ. ನೀನು ಈ ನಾಯಿಯ ಮೊಣಕಾಲ ಭಾಗವನ್ನು ನನಗೆ ಕೊಟ್ಟುಬಿಡು. ಸಾಕು.”

12139081 ಶ್ವಪಚ ಉವಾಚ।
12139081a ನೈವೋತ್ಸಹೇ ಭವತೇ ದಾತುಮೇತಾಂ ನೋಪೇಕ್ಷಿತುಂ ಹ್ರಿಯಮಾಣಂ ಸ್ವಮನ್ನಮ್।
12139081c ಉಭೌ ಸ್ಯಾವಃ ಸ್ವಮಲೇನಾವಲಿಪ್ತೌ ದಾತಾಹಂ ಚ ತ್ವಂ ಚ ವಿಪ್ರ ಪ್ರತೀಚ್ಚನ್।।

ಶ್ವಪಚನು ಹೇಳಿದನು: “ಈ ಅಭಕ್ಷ್ಯವಸ್ತುವನ್ನು ನಿನಗೆ ಕೊಡಲು ಬಯಸುವುದಿಲ್ಲ ಮತ್ತು ನೀನು ಈ ಅನ್ನವನ್ನು ಅಪಹರಿಸುವುದನ್ನೂ ಉಪೇಕ್ಷಿಸುವುದಿಲ್ಲ. ಇದನ್ನು ನೀಡುವ ನಾನು ಮತ್ತು ತೆಗೆದುಕೊಳ್ಳುವ ಬ್ರಾಹ್ಮಣ ನೀನು ಇಬ್ಬರೂ ಪಾಪಲಿಪ್ತರಾಗಿ ನರಕದಲ್ಲಿ ಬೀಳುತ್ತೇವೆ.”

12139082 ವಿಶ್ವಾಮಿತ್ರ ಉವಾಚ।
12139082a ಅದ್ಯಾಹಮೇತದ್ವೃಜಿನಂ ಕರ್ಮ ಕೃತ್ವಾ ಜೀವಂಶ್ಚರಿಷ್ಯಾಮಿ ಮಹಾಪವಿತ್ರಮ್।
12139082c ಪ್ರಪೂತಾತ್ಮಾ ಧರ್ಮಮೇವಾಭಿಪತ್ಸ್ಯೇ ಯದೇತಯೋರ್ಗುರು ತದ್ವೈ ಬ್ರವೀಹಿ।।

ವಿಶ್ವಾಮಿತ್ರನು ಹೇಳಿದನು: “ಇಂದು ನಾನು ಈ ಪಾಪಕರ್ಮವನ್ನು ಮಾಡಿಯೂ ಜೀವಿತನಾಗಿ ಉಳಿದರೆ ಪರಮ ಪವಿತ್ರ ಧರ್ಮದ ಅನುಷ್ಠಾನವನ್ನು ಮಾಡುತ್ತೇನೆ. ಅದರಿಂದ ನನ್ನ ತನುಮನಗಳು ಪವಿತ್ರವಾಗುವವು ಮತ್ತು ನಾನು ಧರ್ಮದ ಫಲವನ್ನೇ ಪಡೆದುಕೊಳ್ಳುತ್ತೇನೆ. ಜೀವಿತನಾಗಿದ್ದು ಧರ್ಮಾಚರಣೆಯನ್ನು ಮಾಡುವುದು ಮತ್ತು ಉಪವಾಸ ಮಾಡಿ ಪ್ರಾಣವನ್ನು ಕೊಡುವುದು – ಈ ಎರಡರಲ್ಲಿ ಯಾವುದು ದೊಡ್ಡದು ಎನ್ನುವುದನ್ನು ನನಗೆ ಹೇಳು.”

12139083 ಶ್ವಪಚ ಉವಾಚ।
12139083a ಆತ್ಮೈವ ಸಾಕ್ಷೀ ಕಿಲ ಲೋಕಕೃತ್ಯೇ12 ತ್ವಮೇವ ಜಾನಾಸಿ ಯದತ್ರ ದುಷ್ಟಮ್।
12139083c ಯೋ ಹ್ಯಾದ್ರಿಯೇದ್ ಭಕ್ಷ್ಯಮಿತಿ ಶ್ವಮಾಂಸಂ ಮನ್ಯೇ ನ ತಸ್ಯಾಸ್ತಿ ವಿವರ್ಜನೀಯಮ್।।

ಶ್ವಪಚನು ಹೇಳಿದನು: “ಯಾವ ಜನರಿಗೆ ಯಾವ ಕಾರ್ಯವು ಧರ್ಮ ಎನ್ನುವುದಕ್ಕೆ ಆತ್ಮವೇ ಸಾಕ್ಷಿಯು. ಈ ಅಭಕ್ಷ್ಯವನ್ನು ತಿನ್ನುವುದರಲ್ಲಿರುವ ಪಾಪವನ್ನು ನೀನೂ ಕೂಡ ತಿಳಿದಿದ್ದೀಯೆ. ನನ್ನ ಅನಿಸಿಕೆಯಂತೆ ನಾಯಿಯ ಮಾಂಸವನ್ನು ಭಕ್ಷಣೀಯ ಎಂದು ಆದರಿಸುವವನಿಗೆ ಸಂಸಾರದಲ್ಲಿ ಯಾವುದೂ ತ್ಯಾಜ್ಯವಿಲ್ಲ.”

12139084 ವಿಶ್ವಾಮಿತ್ರ ಉವಾಚ।
12139084a ಉಪಾದಾನೇ ಖಾದನೇ ವಾಸ್ಯ ದೋಷಃ ಕಾರ್ಯೋ ನ್ಯಾಯೈರ್ನಿತ್ಯಮತ್ರಾಪವಾದಃ।
12139084c ಯಸ್ಮಿನ್ನ ಹಿಂಸಾ ನಾನೃತೇ ವಾಕ್ಯಲೇಶೋ ಭಕ್ಷ್ಯಕ್ರಿಯಾ ತತ್ರ ನ ತದ್ ಗರೀಯಃ।।

ವಿಶ್ವಾಮಿತ್ರನು ಹೇಳಿದನು: “ನಿನ್ನಿಂದ ದಾನವನ್ನು ಸ್ವೀಕರಿಸುವುದು ಮತ್ತು ಅಭಕ್ಷ್ಯ ವಸ್ತುವನ್ನು ತಿನ್ನುವುದು ಇವೆರಡೂ ದೋಷಯುಕ್ತವಾದುದು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೂ ತಿನ್ನದೇ ಇರುವುದರಿಂದ ಪ್ರಾಣಹೋಗುವ ಸಂಭವವಿರುವಾಗ ಈ ವಿಷಯದಲ್ಲಿ ಶಾಸ್ತ್ರಗಳಲ್ಲಿ ಸದಾ ಅಪವಾದ ವಚನಗಳೇ ದೊರೆಯುತ್ತವೆ. ಇದರಲ್ಲಿ ಹಿಂಸೆ ಮತು ಅಸತ್ಯದ ದೋಷಗಳಂತೂ ಇಲ್ಲವೇ ಇಲ್ಲ ಮತ್ತು ಲೇಶಮಾತ್ರ ನಿಂದಾರೂಪ ದೋಷವಿದೆ. ಪ್ರಾಣಹೋಗುವ ಸಮಯದಲ್ಲಿಯೂ ಅಭಕ್ಷ್ಯ-ಭಕ್ಷಣವನ್ನು ನಿಷೇಧಿಸುವ ಮಾತು ಆದರಣೀಯವಲ್ಲ.”

12139085 ಶ್ವಪಚ ಉವಾಚ।
12139085a ಯದ್ಯೇಷ ಹೇತುಸ್ತವ ಖಾದನಸ್ಯ ನ ತೇ ವೇದಃ ಕಾರಣಂ ನಾನ್ಯಧರ್ಮಃ।
12139085c ತಸ್ಮಾದಭಕ್ಷ್ಯೇ ಭಕ್ಷಣಾದ್ವಾ ದ್ವಿಜೇಂದ್ರ ದೋಷಂ ನ ಪಶ್ಯಾಮಿ ಯಥೇದಮಾತ್ಥ।।

ಶ್ವಪಚನು ಹೇಳಿದನು: “ದ್ವಿಜೇಂದ್ರ! ಈ ಅಭಕ್ಷ್ಯವನ್ನು ತಿನ್ನುವುದಕ್ಕಿಂತ ನಿನಗೆ ಪ್ರಾಣರಕ್ಷಣೆಯೇ ಪ್ರಧಾನವಾದರೆ ನಿನಗೆ ವೇದಗಳು ಪ್ರಮಾಣವಲ್ಲವೆಂದೂ ಶ್ರೇಷ್ಠ ಪುರುಷರ ಆಚರಣೆಯು ಧರ್ಮವಲ್ಲವೆಂದೂ ಆದಂತಾಯಿತು. ಆದುದರಿಂದ ನಾನು ನಿನಗೋಕ್ಷರ ಭಕ್ಷ್ಯವಸ್ತುವನ್ನು ತಿನ್ನದೇ ಇರುವುದರಿಂದ ಅಥವಾ ಅಭಕ್ಷ್ಯ ವಸ್ತುವನ್ನು ತಿನ್ನುವುದರಿಂದ ಯಾವ ದೋಷವನ್ನೂ ಕಾಣುತ್ತಿಲ್ಲ. ಇಲ್ಲಿ ಈ ಮಾಂಸಕ್ಕಾಗಿ ನಿನ್ನ ಮಹಾ ಆಗ್ರಹವನ್ನು ನೋಡಿದ್ದೇನೆ.”

12139086 ವಿಶ್ವಾಮಿತ್ರ ಉವಾಚ।
12139086a ನ ಪಾತಕಂ ಭಕ್ಷಣಮಸ್ಯ ದೃಷ್ಟಂ ಸುರಾಂ ಪೀತ್ವಾ ಪತತೀತೀಹ ಶಬ್ದಃ।
12139086c ಅನ್ಯೋನ್ಯಕರ್ಮಾಣಿ ತಥಾ ತಥೈವ ನ ಲೇಶಮಾತ್ರೇಣ ಕೃತ್ಯಂ ಹಿನಸ್ತಿ।।

ವಿಶ್ವಾಮಿತ್ರನು ಹೇಳಿದನು: “ಅಭಕ್ಷ್ಯ ವಸ್ತುವನ್ನು ತಿನ್ನುವುದರಿಂದ ಬ್ರಹ್ಮಹತ್ಯಾದಿ ಮಹಾ ಪಾತಕಗಳು ತಗಲುತ್ತವೆ ಎಂದು ಯಾವ ಶಾಸ್ತ್ರವಚನವೂ ಇಲ್ಲ. ಮದ್ಯಸೇವನೆಯಿಂದ ಬ್ರಾಹ್ಮಣನು ಪತಿತನಾಗುತ್ತಾನೆ ಎಂಬ ಶಾಸ್ತ್ರವಾಕ್ಯವು ಸ್ಪಷ್ಟವಾಗಿದೆ ಹೌದು. ಆದುದರಿಂದ ಬ್ರಾಹ್ಮಣರಿಗೆ ಸುರಾಪಾನವು ಅವಶ್ಯ ತ್ಯಾಜ್ಯವು. ಇತರ ಕರ್ಮಗಳು ಹೇಗೆ ನಿಷಿದ್ಧವೋ ಹಾಗೆ ಅಭಕ್ಷ್ಯ-ಭಕ್ಷಣವೂ ನಿಷಿದ್ಧವೇ. ಆಪತ್ತಿನ ಸಮಯದಲ್ಲಿ ಒಂದು ಸಲ ಮಾಡಿದ ಯಾವುದೇ ಸಾಮಾನ್ಯ ಪಾಪವು ಅವನು ಆಜೀವನ ಪರ್ಯಂತ ಮಾಡಿದ ಪುಣ್ಯಕರ್ಮಗಳನ್ನು ನಾಶಗೊಳಿಸುವುದಿಲ್ಲ.”

12139087 ಶ್ವಪಚ ಉವಾಚ।
12139087a ಅಸ್ಥಾನತೋ ಹೀನತಃ ಕುತ್ಸಿತಾದ್ವಾ ತಂ ವಿದ್ವಾಂಸಂ ಬಾಧತೇ ಸಾಧುವೃತ್ತಮ್।
12139087c ಸ್ಥಾನಂ ಪುನರ್ಯೋ ಲಭತೇ ನಿಷಂಗಾತ್ ತೇನಾಪಿ ದಂಡಃ ಸಹಿತವ್ಯ ಏವ।।

ಶ್ವಪಚನು ಹೇಳಿದನು: “ಅಯೋಗ್ಯ ಸ್ಥಾನದಲ್ಲಿದ್ದುಕೊಂಡು ಅನುಚಿತ ಕರ್ಮವನ್ನು ಮಾಡುವ ಹಾಗೂ ನಿಂದಿತ ಪುರುಷನಿಂದ ನಿಷಿದ್ಧ ವಸ್ತುವನ್ನು ತೆಗೆದುಕೊಳ್ಳುವ ವಿದ್ವಾಂಸನಿಗೆ ಅವನ ಸದಾಚಾರವೇ ಹಾಗೆ ಮಾಡುವುದನ್ನು ತಡೆಯುತ್ತದೆ. ಆದರೆ ಯಾರು ಪುನಃ ಪುನಃ ಅತ್ಯಂತ ಆಗ್ರಹದಿಂದ ನಾಯಿಯ ಮಾಂಸವನ್ನು ಸ್ವೀಕರಿಸುತ್ತಾನೋ ಅವನಿಗೇ ಅದರ ದಂಡವನ್ನೂ ಸಹಿಸಬೇಕಾಗುತ್ತದೆ.””

12139088 ಭೀಷ್ಮ ಉವಾಚ।
12139088a ಏವಮುಕ್ತ್ವಾ ನಿವವೃತೇ ಮಾತಂಗಃ ಕೌಶಿಕಂ ತದಾ।
12139088c ವಿಶ್ವಾಮಿತ್ರೋ ಜಹಾರೈವ ಕೃತಬುದ್ಧಿಃ ಶ್ವಜಾಘನೀಮ್।।

ಭೀಷ್ಮನು ಹೇಳಿದನು: “ಹೀಗೆ ಹೇಳಿ ಮಾತಂಗನು ಕೌಶಿಕನನ್ನು ತಡೆಯುವುದರಿಂದ ಹಿಂದೆಸರಿದನು. ವಿಶ್ವಾಮಿತ್ರನು ನಾಯಿಯ ಮೊಣಕಾಲಭಾಗವನ್ನು ತೆಗೆದುಕೊಂಡು ಹೋಗುವ ನಿಶ್ಚಯವನ್ನು ಮಾಡಿಬಿಟ್ಟಿದ್ದನು.

12139089a ತತೋ ಜಗ್ರಾಹ ಪಂಚಾಂಗೀಂ13 ಜೀವಿತಾರ್ಥೀ ಮಹಾಮುನಿಃ।
12139089c ಸದಾರಸ್ತಾಮುಪಾಕೃತ್ಯ ವನೇ ಯಾತೋ ಮಹಾಮುನಿಃ।।

ಜೀವಿತಾರ್ಥಿಯಾದ ಮಹಾಮುನಿಯು ಆ ಮಾಂಸದ ತುಂಡನ್ನು ತೆಗೆದುಕೊಂಡನು. ಪತ್ನಿಯೊಂದಿಗೆ ಅದನ್ನು ಸೇವಿಸಲು ಮಹಾಮುನಿಯು ವನಕ್ಕೆ ತೆರಳಿದನು.

12139090a 14ಏತಸ್ಮಿನ್ನೇವ ಕಾಲೇ ತು ಪ್ರವವರ್ಷಾಥ ವಾಸವಃ। 12139090c ಸಂಜೀವಯನ್ ಪ್ರಜಾಃ ಸರ್ವಾ ಜನಯಾಮಾಸ ಚೌಷಧೀಃ।।

ಅದೇ ಸಮಯದಲ್ಲಿ ವಾಸವನು ಮಳೆಸುರಿಸಿದನು. ಪ್ರಜೆಗಳೆಲ್ಲವನ್ನೂ ಸಂಜೀವನಗೊಳಿಸಿ ಔಷಧಿಗಳನ್ನೂ ಹುಟ್ಟಿಸಿದನು.

12139091a ವಿಶ್ವಾಮಿತ್ರೋಽಪಿ ಭಗವಾಂಸ್ತಪಸಾ ದಗ್ಧಕಿಲ್ಬಿಷಃ।
12139091c ಕಾಲೇನ ಮಹತಾ ಸಿದ್ಧಿಮವಾಪ ಪರಮಾದ್ಭುತಾಮ್।।

ಭಗವಾನ್ ವಿಶ್ವಾಮಿತ್ರನೂ ಕೂಡ ತಪಸ್ಸಿನಿಂದ ಪಾಪಗಳನ್ನು ಸುಟ್ಟು ಮಹಾ ಸಮಯದ ನಂತರ ಪರಮಾದ್ಭುತ ಸಿದ್ಧಿಯನ್ನು ಪಡೆದುಕೊಂಡನು.

12139092a 15ಏವಂ ವಿದ್ವಾನದೀನಾತ್ಮಾ ವ್ಯಸನಸ್ಥೋ ಜಿಜೀವಿಷುಃ। 12139092c ಸರ್ವೋಪಾಯೈರುಪಾಯಜ್ಞೋ ದೀನಮಾತ್ಮಾನಮುದ್ಧರೇತ್।।

ಹೀಗೆ ಸಂಕಟದಲ್ಲಿ ಬಿದ್ದು ಜೀವದ ರಕ್ಷಣೆಯನ್ನು ಬಯಸುವ ವಿದ್ವಾನನು ದೀನಚಿತ್ತನಾಗದೇ ಯಾವುದಾದರೂ ಉಪಾಯವನ್ನು ಹುಡುಕಬೇಕು ಮತ್ತು ಎಲ್ಲ ಉಪಾಯಗಳಿಂದ ತನ್ನನ್ನು ತಾನು ಆಪತ್ಕಾಲದಿಂದ ಉದ್ಧರಿಸಿಕೊಳ್ಳಬೇಕು.

12139093a ಏತಾಂ ಬುದ್ಧಿಂ ಸಮಾಸ್ಥಾಯ ಜೀವಿತವ್ಯಂ ಸದಾ ಭವೇತ್।
12139093c ಜೀವನ್ಪುಣ್ಯಮವಾಪ್ನೋತಿ ನರೋ ಭದ್ರಾಣಿ ಪಶ್ಯತಿ।।

ಈ ಬುದ್ಧಿಯನ್ನು ಆಶ್ರಯಿಸಿ ಜೀವಿತವಾಗಿರಲು ಪ್ರಯತ್ನಿಸಬೇಕು. ಏಕೆಂದರೆ ಜೀವಿತವಾಗಿರುವ ಪುರುಷನು ಪುಣ್ಯ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾನೆ ಮತ್ತು ಕಲ್ಯಾಣದ ಭಾಗಿಯಾಗುತ್ತಾನೆ.

12139094a ತಸ್ಮಾತ್ಕೌಂತೇಯ ವಿದುಷಾ ಧರ್ಮಾಧರ್ಮವಿನಿಶ್ಚಯೇ।
12139094c ಬುದ್ಧಿಮಾಸ್ಥಾಯ ಲೋಕೇಽಸ್ಮಿನ್ವರ್ತಿತವ್ಯಂ ಯತಾತ್ಮನಾ।।

ಕೌಂತೇಯ! ಆದುದರಿಂದ ತನ್ನ ಮನಸ್ಸನ್ನು ವಶದಲ್ಲಿರಿಸಿಕೊಂಡಿರುವ ವಿದ್ವಾನನು ಈ ಜಗತ್ತಿನಲ್ಲಿ ಧರ್ಮ ಮತ್ತು ಅಧರ್ಮಗಳ ನಿರ್ಣಯವನ್ನು ಮಾಡಲು ತನ್ನದೇ ವಿಶುದ್ಧ ಬುದ್ಧಿಯನ್ನು ಆಶ್ರಯಿಸಿ ಯಥಾಯೋಗ್ಯವಾಗಿ ನಡೆದುಕೊಳ್ಳಬೇಕು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ವಿಶ್ವಾಮಿತ್ರಶ್ವಪಚಸಂವಾದೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ವಿಶ್ವಾಮಿತ್ರಶ್ವಪಚಸಂವಾದ ಎನ್ನುವ ನೂರಾಮೂವತ್ತೊಂಭತ್ತನೇ ಅಧ್ಯಾಯವು.


  1. ಬರಗಾಲ . ↩︎

  2. ಸರ್ವಭೂತರುತಪ್ರಾಯಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  3. ಗುರುತೇ ಸಿಗದಂತಾಗಿದ್ದ? ↩︎

  4. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ತ್ಯಕ್ತ್ವಾ ದಾರಾಂಶ್ಚ ಪುತ್ರಾಂಶ್ಚ ಕಸ್ಮಿಂಶ್ಚ ಜನಸಂಸಧಿ। ಭಕ್ಷ್ಯಾಭಕ್ಷ್ಯಸಮೋ ಭೂತ್ವಾ ನಿರಗ್ನಿರನಿಕೇತನಃ।। ↩︎

  5. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ವಿಶ್ವಾಮಿತ್ರೋಽಹಮಾಯುಷ್ಮನ್ನಾಗತೋಽಹಂ ಬುಭುಕ್ಷಿತಃ। ಮಾ ವಧೀರ್ಮಮ ಸದ್ಬುದ್ಧೇ ಯದಿ ಸಮ್ಯಕ್ ಪ್ರಪಶ್ಯಸಿ।। ↩︎

  6. ಶ್ರುತಿರ್ಮೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  7. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಅಧಿಕ ಶ್ಲೋಕಾರ್ಧವಿದೆ: ದುರ್ಬಲೋ ನಷ್ಟಸಂಜ್ಞಶ್ಚ ಭಕ್ಷ್ಯಾಭಕ್ಷ್ಯವಿವರ್ಜಿತಃ। ↩︎

  8. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಧರ್ಮಂ ವಾಪಿ ವಿಪ್ರರ್ಷೇ ಶೃಣು ಯತ್ತೇ ಬ್ರವೀಮ್ಯಹಮ್। ↩︎

  9. ಶಮಯನ್ ಕ್ಷುಧಾಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  10. ತತ್ಕರ್ತವ್ಯಮಹೇಲಯಾ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  11. ಬಲವಂತಂ ಕರಿಷ್ಯಾಮಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  12. ಕುಲಧರ್ಮಕೃತ್ಯೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  13. ಸ ಶ್ವಾಂಗಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  14. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಮೂರು ಅಧಿಕ ಶ್ಲೋಕಗಳಿವೆ: ಅಥಾಸ್ಯ ಬುದ್ಧಿರಭವದ್ವಿಧಿನಾಹಂ ಸ್ವಜಾಘನೀಮ್। ಭಕ್ಷ್ಯಾಮಿ ಯಥಾಕಾಮಂ ಪೂರ್ವಂ ಸಂತರ್ಪ್ಯ ದೇವತಾಃ।। ತತೋಽಗ್ನಿಮುಪಸಂಹೃತ್ಯ ಬ್ರಾಹ್ಮೇಣ ವಿಧಿನಾ ಮುನಿಃ। ಐಂದ್ರಾಗ್ನೇಯೇನ ವಿಧಿನಾ ಚರುಂ ಶ್ರಪಯತ್ ಸ್ವಯಮ್।। ತತಃ ಸಮಾರಭತ್ಕರ್ಮ ದೈವಂ ಪಿತ್ರ್ಯಂಚ ಭಾರತ। ಆಹೂಯ ದೇವಾನಿಂದ್ರಾದೀನ್ ಭಾಗಂ ಭಾಗಂ ವಿಧಿಕ್ರಮಾತ್।। ↩︎

  15. ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಸ ಸಂಹೃತ್ಯ ಚ ತತ್ಕರ್ಮ ಅನಾಸ್ವಾಧ್ಯ ಚ ದದ್ದವಿಃ। ತೋಷಯಾಮಾಸ ದೇವಾಂಶ್ಚ ಪಿತೄಂಶ್ಚ ದ್ವಿಜಸತ್ತಮಃ।। ↩︎