136: ಮಾರ್ಜಾರಮೂಷಿಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಆಪದ್ಧರ್ಮ ಪರ್ವ

ಅಧ್ಯಾಯ 136

ಸಾರ

ಶತ್ರುಗಳಿಂದ ಮುತ್ತಲ್ಪಟ್ಟ ರಾಜನ ಕರ್ತವ್ಯದ ಕುರಿತು ಬೆಕ್ಕು ಮತ್ತು ಇಲಿಯ ಸಂವಾದ (1-211).

12136001 ಯುಧಿಷ್ಠಿರ ಉವಾಚ।
12136001a ಸರ್ವತ್ರ ಬುದ್ಧಿಃ ಕಥಿತಾ ಶ್ರೇಷ್ಠಾ ತೇ ಭರತರ್ಷಭ।
12136001c ಅನಾಗತಾ ತಥೋತ್ಪನ್ನಾ ದೀರ್ಘಸೂತ್ರಾ ವಿನಾಶಿನೀ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ನೀನು ಎಲ್ಲ ಸಂದರ್ಭಗಳಲ್ಲಿ ಅನಾಗತ (ಸಂಕಟವು ಬರುವುದರ ಮೊದಲೇ ಆತ್ಮರಕ್ಷಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳುವ) ಮತ್ತು ಪ್ರತ್ಯುತ್ಪನ್ನ (ಸಮಯ ಬಂದಾಗ ತನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಕಂಡುಕೊಳ್ಳುವ) ಬುದ್ಧಿಯೇ ಶ್ರೇಷ್ಠವೆಂದು ಹೇಳಿದ್ದೀಯೆ. ಮತ್ತು ಆಲಸ್ಯದಿಂದ ಕಾರ್ಯಕೈಗೊಳ್ಳುವುದರಲ್ಲಿ ವಿಲಂಬಮಾಡುವ ಬುದ್ಧಿಯು ವಿನಾಶಕಾರೀ ಎಂದೂ ಹೇಳಿದ್ದೀಯೆ.

12136002a ತದಿಚ್ಛಾಮಿ ಪರಾಂ ಬುದ್ಧಿಂ ಶ್ರೋತುಂ ಭರತಸತ್ತಮ।
12136002c ಯಥಾ ರಾಜನ್ನ ಮುಹ್ಯೇತ ಶತ್ರುಭಿಃ ಪರಿವಾರಿತಃ।।
12136003a ಧರ್ಮಾರ್ಥಕುಶಲ ಪ್ರಾಜ್ಞ ಸರ್ವಶಾಸ್ತ್ರವಿಶಾರದ।
12136003c ಪೃಚ್ಚಾಮಿ ತ್ವಾಂ ಕುರುಶ್ರೇಷ್ಠ ತನ್ಮೇ ವ್ಯಾಖ್ಯಾತುಮರ್ಹಸಿ।।

ಭರತಸತ್ತಮ! ಈಗ ನಾನು ಶತ್ರುಗಳಿಂದ ಪರಿವಾರಿತನಾದ ರಾಜನನ್ನೂ ಕೂಡ ಮೋಹಗೊಳಿಸದೇ ಇರುವ ಪರಮ ಬುದ್ಧಿಯ ಕುರಿತು ಕೇಳ ಬಯಸುತ್ತೇನೆ. ಧರ್ಮಾರ್ಥಕುಶಲ! ಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಕುರುಶ್ರೇಷ್ಠ! ನಿನ್ನನ್ನು ಕೇಳುತ್ತಿದ್ದೇನೆ. ಇದನ್ನು ನನಗೆ ಹೇಳಬೇಕು.

12136004a ಶತ್ರುಭಿರ್ಬಹುಭಿರ್ಗ್ರಸ್ತೋ ಯಥಾ ವರ್ತೇತ ಪಾರ್ಥಿವಃ।
12136004c ಏತದಿಚ್ಚಾಮ್ಯಹಂ ಶ್ರೋತುಂ ಸರ್ವಮೇವ ಯಥಾವಿಧಿ।।

ಅನೇಕ ಶತ್ರುಗಳ ಆಕ್ರಮಣಕ್ಕೊಳಗಾದ ಪಾರ್ಥಿವನು ಹೇಗೆ ವರ್ತಿಸಬೇಕು? ಇದನ್ನು ಸಂಪೂರ್ಣವಾಗಿ ಯಥಾವಿಧಿಯಾಗಿ ಕೇಳ ಬಯಸುತ್ತೇನೆ.

12136005a ವಿಷಮಸ್ಥಂ ಹಿ ರಾಜಾನಂ ಶತ್ರವಃ ಪರಿಪಂಥಿನಃ।
12136005c ಬಹವೋಽಪ್ಯೇಕಮುದ್ಧರ್ತುಂ ಯತಂತೇ ಪೂರ್ವತಾಪಿತಾಃ।।

ರಾಜನು ಸಂಕಟದಲ್ಲಿ ಸಿಲುಕಿದಾಗ ಅವನಿಂದ ಹಿಂದೆ ಪೀಡಿತರಾಗಿದ್ದ ಅನೇಕ ಶತ್ರುಗಳು ಒಂದಾಗಿ ಆ ಅಸಹಾಯಕ ರಾಜನನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಾರೆ.

12136006a ಸರ್ವತಃ ಪ್ರಾರ್ಥ್ಯಮಾನೇನ ದುರ್ಬಲೇನ ಮಹಾಬಲೈಃ।
12136006c ಏಕೇನೈವಾಸಹಾಯೇನ ಶಕ್ಯಂ ಸ್ಥಾತುಂ ಕಥಂ ಭವೇತ್।।

ಅನೇಕ ಮಹಾಬಲಶಾಲೀ ಶತ್ರುಗಳು ಓರ್ವ ದುರ್ಬಲ ರಾಜನನ್ನು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಲು ಸಿದ್ಧರಾದಾಗ ಏಕಮಾತ್ರ ಆ ಅಸಹಾಯಕ ರಾಜನು ಹೇಗೆ ಅವರನ್ನು ಎದುರಿಸಲು ಶಕ್ಯನಾಗುತ್ತಾನೆ?

12136007a ಕಥಂ ಮಿತ್ರಮರಿಂ ಚೈವ ವಿಂದೇತ ಭರತರ್ಷಭ।
12136007c ಚೇಷ್ಟಿತವ್ಯಂ ಕಥಂ ಚಾತ್ರ ಶತ್ರೋರ್ಮಿತ್ರಸ್ಯ ಚಾಂತರೇ।।

ಭರತರ್ಷಭ! ರಾಜನಾದವನು ಹೇಗೆ ತನ್ನ ಮಿತ್ರ ಮತ್ತು ಶತ್ರುವನ್ನು ತನ್ನ ವಶಪಡಿಸಿಕೊಳ್ಳುತ್ತಾನೆ? ಮತ್ತು ಆ ಶತ್ರು-ಮಿತ್ರರ ಮಧ್ಯೆ ಅವನು ಹೇಗೆ ವರ್ತಿಸಬೇಕಾಗುತ್ತದೆ?

12136008a ಪ್ರಜ್ಞಾತಲಕ್ಷಣೇ ರಾಜನ್ನಮಿತ್ರೇ ಮಿತ್ರತಾಂ ಗತೇ।
12136008c ಕಥಂ ನು ಪುರುಷಃ ಕುರ್ಯಾತ್ಕಿಂ ವಾ ಕೃತ್ವಾ ಸುಖೀ ಭವೇತ್।।

ರಾಜನ್! ಮೊದಲು ಮಿತ್ರನ ಲಕ್ಷಣಗಳನ್ನು ಹೊಂದಿದ್ದವನು ಶತ್ರುವಾಗಿ ಬಂದರೆ ಅವನೊಡನೆ ಯಾವುದೇ ಪುರುಷನು ಹೇಗೆ ನಡೆದುಕೊಳ್ಳಬೇಕು? ಅಥವಾ ಯಾವುದನ್ನು ಮಾಡಿ ಅವನು ಸುಖಿಯಾಗಿರಬಲ್ಲನು?

12136009a ವಿಗ್ರಹಂ ಕೇನ ವಾ ಕುರ್ಯಾತ್ಸಂಧಿಂ ವಾ ಕೇನ ಯೋಜಯೇತ್।
12136009c ಕಥಂ ವಾ ಶತ್ರುಮಧ್ಯಸ್ಥೋ ವರ್ತೇತಾಬಲವಾನಿತಿ।।

ಯಾರೊಂದಿಗೆ ಯುದ್ಧಮಾಡಬೇಕು? ಅಥವಾ ಯಾರೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು? ಅಥವಾ ಬಲವಾನ್ ಪುರುಷನು ಶತ್ರುಗಳ ಮಧ್ಯೆ ಸೇರಿಕೊಂಡಿದ್ದರೆ ಅವನೊಂದಿಗೆ ಹೇಗೆ ನಡೆದುಕೊಳ್ಳಬೇಕು?

12136010a ಏತದ್ವೈ ಸರ್ವಕೃತ್ಯಾನಾಂ ಪರಂ ಕೃತ್ಯಂ ಪರಂತಪ।
12136010c ನೈತಸ್ಯ ಕಶ್ಚಿದ್ವಕ್ತಾಸ್ತಿ ಶ್ರೋತಾ ಚಾಪಿ ಸುದುರ್ಲಭಃ।।
12136011a ಋತೇ ಶಾಂತನವಾದ್ಭೀಷ್ಮಾತ್ಸತ್ಯಸಂಧಾಜ್ಜಿತೇಂದ್ರಿಯಾತ್।
12136011c ತದನ್ವಿಷ್ಯ ಮಹಾಬಾಹೋ ಸರ್ವಮೇತದ್ವದಸ್ವ ಮೇ।।

ಪರಂತಪ! ಮಹಾಬಾಹೋ! ಇದು ಸರ್ವಕಾರ್ಯಗಳಲ್ಲಿಯೂ ಶ್ರೇಷ್ಠವಾದುದು. ಸತ್ಯಸಂಧ ಜಿತೇಂದ್ರಿಯ ಶಾಂತನವ ಭೀಷ್ಮನಲ್ಲದೇ ಬೇರೆ ಯಾರೂ ಇದರ ಕುರಿತು ಹೇಳಲಾರರು. ಇದನ್ನು ಕೇಳುವವರೂ ದುರ್ಲಭವೇ ಸರಿ. ಆದುದರಿಂದ ಅದನ್ನು ಅನುಸಂಧಾನ ಮಾಡಿ ಸರ್ವವನ್ನೂ ನನಗೆ ಹೇಳು.”

12136012 ಭೀಷ್ಮ ಉವಾಚ।
12136012a ತ್ವದ್ಯುಕ್ತೋಽಯಮನುಪ್ರಶ್ನೋ ಯುಧಿಷ್ಠಿರ ಗುಣೋದಯಃ।
12136012c ಶೃಣು ಮೇ ಪುತ್ರ ಕಾರ್ತ್ಸ್ನ್ಯೇನ ಗುಹ್ಯಮಾಪತ್ಸು ಭಾರತ।।

ಭೀಷ್ಮನು ಹೇಳಿದನು: “ಭಾರತ! ಯುಧಿಷ್ಠಿರ! ನೀನು ಕೇಳಿದ ಈ ವಿಸ್ತಾರ ಪ್ರಶ್ನೆಯು ಗುಣಪ್ರದವಾಗಿದೆ. ಪುತ್ರ! ಗುಹ್ಯವಾದ ಇದನ್ನು ನನ್ನಿಂದ ಸಂಪೂರ್ಣವಾಗಿ ಕೇಳು.

12136013a ಅಮಿತ್ರೋ ಮಿತ್ರತಾಂ ಯಾತಿ ಮಿತ್ರಂ ಚಾಪಿ ಪ್ರದುಷ್ಯತಿ।
12136013c ಸಾಮರ್ಥ್ಯಯೋಗಾತ್ಕಾರ್ಯಾಣಾಂ ತದ್ಗತ್ಯಾ ಹಿ ಸದಾ ಗತಿಃ1।।

ಕಾರ್ಯಗಳ ಸಾಮರ್ಥ್ಯಯೋಗಗಳಿಂದ ಅಮಿತ್ರನು ಮಿತ್ರನಾಗುತ್ತಾನೆ ಮತ್ತು ಮಿತ್ರನೂ ಕೂಡ ದ್ವೇಷಿಯಾಗುತ್ತಾನೆ. ಅದು ಸದಾ ಒಂದೇ ರೀತಿಯಾಗಿರುವುದಿಲ್ಲ.

12136014a ತಸ್ಮಾದ್ವಿಶ್ವಸಿತವ್ಯಂ ಚ ವಿಗ್ರಹಂ ಚ ಸಮಾಚರೇತ್।
12136014c ದೇಶಂ ಕಾಲಂ ಚ ವಿಜ್ಞಾಯ ಕಾರ್ಯಾಕಾರ್ಯವಿನಿಶ್ಚಯೇ।।

ಆದುದರಿಂದ ದೇಶ-ಕಾಲಗಳನ್ನು ತಿಳಿದುಕೊಂಡು ಕರ್ತವ್ಯ-ಅಕರ್ತವ್ಯಗಳನ್ನು ನಿಶ್ಚಯಿಸಿ ಕೆಲವರೊಂದಿಗೆ ವಿಶ್ವಾಸವನ್ನಿಡಬೇಕು ಮತ್ತು ಇನ್ನು ಕೆಲವರೊಂದಿಗೆ ಯುದ್ಧಮಾಡಬೇಕು.

12136015a ಸಂಧಾತವ್ಯಂ ಬುಧೈರ್ನಿತ್ಯಂ ವ್ಯವಸ್ಯಂ ಚ ಹಿತಾರ್ಥಿಭಿಃ।
12136015c ಅಮಿತ್ರೈರಪಿ ಸಂಧೇಯಂ ಪ್ರಾಣಾ ರಕ್ಷ್ಯಾಶ್ಚ ಭಾರತ।।

ಭಾರತ! ಹಿತಾರ್ಥಿ ವಿದ್ವಾಂಸರೊಂದಿಗೆ ಸಂಧಿ ಮಾಡಿಕೊಳ್ಳಬೇಕು. ಪ್ರಾಣವನ್ನು ರಕ್ಷಿಸಿಕೊಳ್ಳಲು ಶತ್ರುಗಳೊಂದಿಗೂ ಸಂಧಿಯನ್ನು ಮಾಡಿಕೊಳ್ಳಬೇಕಾಗುತ್ತದೆ.

12136016a ಯೋ ಹ್ಯಮಿತ್ರೈರ್ನರೋ ನಿತ್ಯಂ ನ ಸಂದಧ್ಯಾದಪಂಡಿತಃ।
12136016c ನ ಸೋಽರ್ಥಮಾಪ್ನುಯಾತ್ಕಿಂ ಚಿತ್ ಫಲಾನ್ಯಪಿ ಚ ಭಾರತ।।

ಭಾರತ! ತನ್ನ ಶತ್ರುಗಳೊಡನೆ ಎಂದೂ ಸಂಧಿಯನ್ನು ಮಾಡಿಕೊಳ್ಳದೇ ಇರುವ ಅಪಂಡಿತ ನರನು ತನ್ನ ಉದ್ದೇಶಗಳನ್ನು ಪೂರೈಸಿಕೊಳ್ಳಲಾರನು ಮತ್ತು ಯಾವ ಫಲವನ್ನೂ ಪಡೆದುಕೊಳ್ಳಲಾರನು.

12136017a ಯಸ್ತ್ವಮಿತ್ರೇಣ ಸಂಧತ್ತೇ ಮಿತ್ರೇಣ ಚ ವಿರುಧ್ಯತೇ।
12136017c ಅರ್ಥಯುಕ್ತಿಂ ಸಮಾಲೋಕ್ಯ ಸುಮಹದ್ವಿಂದತೇ ಫಲಮ್।।

ಅರ್ಥಯುಕ್ತಿಯನ್ನು ನೋಡಿಕೊಂಡು ಯಾರು ಅಮಿತ್ರರೊಂದಿಗೆ ಸಂಧಿಯನ್ನು ಮಾಡಿಕೊಳ್ಳುತ್ತಾನೋ ಮತ್ತು ಮಿತ್ರರನ್ನು ವಿರೋಧಿಸುತ್ತಾನೋ ಅವನು ಮಹಾ ಫಲವನ್ನು ಪಡೆದುಕೊಳ್ಳುತ್ತಾನೆ.

12136018a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12136018c ಮಾರ್ಜಾರಸ್ಯ ಚ ಸಂವಾದಂ ನ್ಯಗ್ರೋಧೇ ಮೂಷಕಸ್ಯ ಚ।।

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಒಂದು ವಟವೃಕ್ಷದಲ್ಲಿ ವಾಸಿಸುತ್ತಿದ್ದ ಬೆಕ್ಕು ಮತ್ತು ಇಲಿಯ ಸಂವಾದವನ್ನು ಉದಾಹರಿಸುತ್ತಾರೆ.

12136019a ವನೇ ಮಹತಿ ಕಸ್ಮಿಂಶ್ಚಿನ್ನ್ಯಗ್ರೋಧಃ ಸುಮಹಾನಭೂತ್।
12136019c ಲತಾಜಾಲಪರಿಚ್ಚನ್ನೋ ನಾನಾದ್ವಿಜಗಣಾಯುತಃ।।

ಯಾವುದೋ ಒಂದು ಮಹಾವನದಲ್ಲಿ ವಿಶಾಲ ವಟವೃಕ್ಷವೊಂದಿತ್ತು. ಅದು ಲತಾಸಮೂಹಗಳಿಂದ ಮುಚ್ಚಿತ್ತು ಮತ್ತು ನಾನಾ ಪಕ್ಷಿಗಣಗಳಿಂದ ಸುಶೋಭಿತವಾಗಿತ್ತು.

12136020a ಸ್ಕಂಧವಾನ್ಮೇಘಸಂಕಾಶಃ ಶೀತಚ್ಚಾಯೋ ಮನೋರಮಃ।
12136020c ವೈರಂತ್ಯಮಭಿತೋ2 ಜಾತಸ್ತರುರ್ವ್ಯಾಲಮೃಗಾಕುಲಃ।।

ಅನೇಕ ರೆಂಬೆಗಳಿಂದ ಕೂಡಿದ್ದ ಆ ವೃಕ್ಷವು ಮೇಘದಂತೆ ಮನೋರಮ ನೆರಳನ್ನು ನೀಡುತ್ತಿತ್ತು. ವನದ ಸಮೀಪದಲ್ಲಿದ್ದ ಕಾರಣ ಅನೇಕ ಸರ್ಪ ಮತ್ತು ಪಶುಗಳಿಗೆ ಆಶ್ರಯವಾಗಿತ್ತು.

12136021a ತಸ್ಯ ಮೂಲಂ ಸಮಾಶ್ರಿತ್ಯ ಕೃತ್ವಾ ಶತಮುಖಂ ಬಿಲಮ್।
12136021c ವಸತಿ ಸ್ಮ ಮಹಾಪ್ರಾಜ್ಞಃ ಪಲಿತೋ ನಾಮ ಮೂಷಕಃ।।

ಅದರ ಬುಡವನ್ನು ಆಶ್ರಯಿಸಿ ನೂರು ಬಾಗಿಲುಗಳ ಬಿಲವನ್ನು ಮಾಡಿಕೊಂಡು ಪಲಿತ ಎಂಬ ಹೆಸರಿನ ಮಹಾಪ್ರಾಜ್ಞ ಇಲಿಯು ವಾಸಿಸುತ್ತಿತ್ತು.

12136022a ಶಾಖಾಶ್ಚ ತಸ್ಯ ಸಂಶ್ರಿತ್ಯ ವಸತಿ ಸ್ಮ ಸುಖಂ ಪುರಃ।
12136022c ಲೋಮಶೋ ನಾಮ ಮಾರ್ಜಾರಃ ಪಕ್ಷಿಸತ್ತ್ವಾವಸಾದಕಃ3।।

ಅದರ ಶಾಖೆಗಳನ್ನು ಆಶ್ರಯಿಸಿ ಮೊದಲಿನಿಂದಲೇ ಲೋಮಶ ಎಂಬ ಹೆಸರಿನ ಬೆಕ್ಕೊಂದು ಸುಖವಾಗಿ ವಾಸಿಸುತ್ತಿತ್ತು. ಅದು ಅಲ್ಲಿದ್ದ ಪಕ್ಷಿಗಳನ್ನೇ ತಿಂದುಕೊಂಡಿತ್ತು.

12136023a ತತ್ರ ಚಾಗತ್ಯ ಚಂಡಾಲೋ ವೈರಂತ್ಯಕೃತಕೇತನಃ।
12136023c ಅಯೋಜಯತ್ತಮುನ್ಮಾಥಂ ನಿತ್ಯಮಸ್ತಂ ಗತೇ ರವೌ।।
12136024a ತತ್ರ ಸ್ನಾಯುಮಯಾನ್ ಪಾಶಾನ್ಯಥಾವತ್ಸಂನಿಧಾಯ ಸಃ।
12136024c ಗೃಹಂ ಗತ್ವಾ ಸುಖಂ ಶೇತೇ ಪ್ರಭಾತಾಮೇತಿ ಶರ್ವರೀಮ್।।

ಅದೇ ವನದಲ್ಲಿ ಓರ್ವ ಚಂಡಾಲನೂ ಮನೆಮಾಡಿಕೊಂಡು ವಾಸಿಸುತ್ತಿದ್ದನು. ಅವನು ಪ್ರತಿದಿನ ಸೂರ್ಯಾಸ್ತವಾದ ಬಳಿಕ ಅಲ್ಲಿ ಹೋಗಿ ಬಲೆಯನ್ನು ಬೀಸುತ್ತಿದ್ದನು ಮತ್ತು ಅದರ ಹಗ್ಗಗಳನ್ನು ಯಥಾವತ್ತಾಗಿ ಬಿಗಿದು ಮನೆಗೆ ಬಂದು ಸುಖವಾಗಿ ರಾತ್ರಿ ಮಲಗುತ್ತಿದ್ದನು ಮತ್ತು ಬೆಳಿಗ್ಗೆ ಅಲ್ಲಿಗೆ ಹೋಗುತ್ತಿದ್ದನು.

12136025a ತತ್ರ ಸ್ಮ ನಿತ್ಯಂ ಬಧ್ಯಂತೇ ನಕ್ತಂ ಬಹುವಿಧಾ ಮೃಗಾಃ।
12136025c ಕದಾ ಚಿತ್ತತ್ರ ಮಾರ್ಜಾರಸ್ತ್ವಪ್ರಮತ್ತೋಽಪ್ಯಬಧ್ಯತ।।

ರಾತ್ರಿಯಲ್ಲಿ ಆ ಬಲೆಯಲ್ಲಿ ನಿತ್ಯವೂ ಬಹುವಿಧದ ಮೃಗಗಳು ಸಿಕ್ಕಿಕೊಳ್ಳುತ್ತಿದ್ದವು. ಒಮ್ಮೆ ಅಪ್ರಮತ್ತವಾಗಿದ್ದ ಆ ಬೆಕ್ಕೂ ಬಲೆಯೊಳಗೆ ಸಿಕ್ಕಿಹಾಕಿಕೊಂಡಿತು.

12136026a ತಸ್ಮಿನ್ಬದ್ಧೇ ಮಹಾಪ್ರಾಜ್ಞಃ ಶತ್ರೌ ನಿತ್ಯಾತತಾಯಿನಿ।
12136026c ತಂ ಕಾಲಂ ಪಲಿತೋ ಜ್ಞಾತ್ವಾ ವಿಚಚಾರ ಸುನಿರ್ಭಯಃ।।

ನಿತ್ಯವೂ ಆತತಾಯಿ ಶತ್ರುವಿನಂತಿದ್ದ ಆ ಬೆಕ್ಕು ಬಲೆಯೊಳಗೆ ಸಿಕ್ಕಿಹಾಕಿಕೊಂಡಿದುದನ್ನು ತಿಳಿದ ಮಹಾಪ್ರಾಜ್ಞ ಪಲಿತನು ನಿರ್ಭಯನಾಗಿ ಅಲ್ಲಿ ಸಂಚರಿಸತೊಡಗಿದನು.

12136027a ತೇನಾನುಚರತಾ ತಸ್ಮಿನ್ವನೇ ವಿಶ್ವಸ್ತಚಾರಿಣಾ।
12136027c ಭಕ್ಷಂ ವಿಚರಮಾಣೇನ ನಚಿರಾದ್ದೃಷ್ಟಮಾಮಿಷಮ್।।

ಆ ವನದಲ್ಲಿ ವಿಶ್ವಸ್ತನಾಗಿ ಆಹಾರವನ್ನು ಹುಡುಕುತ್ತಾ ತಿರುಗಾಡುತ್ತಿದ್ದ ಅದು ಬಹಳ ಸಮಯದ ನಂತರ ಬಲೆಯ ಮೇಲೆ ಹರಡಿದ್ದ ಮಾಂಸವನ್ನು ನೋಡಿತು.

12136028a ಸ ತಮುನ್ಮಾಥಮಾರುಹ್ಯ ತದಾಮಿಷಮಭಕ್ಷಯತ್।
12136028c ತಸ್ಯೋಪರಿ ಸಪತ್ನಸ್ಯ ಬದ್ಧಸ್ಯ ಮನಸಾ ಹಸನ್।।

ಆ ಬಲೆಯನ್ನೇರಿ ಅದು ಮಾಂಸವನ್ನು ತಿನ್ನತೊಡಗಿತು. ಅದರ ಮೇಲೇರಿ ಮಾಂಸವನ್ನು ತಿನ್ನುತ್ತಿದ್ದ ಅದು ತನ್ನ ಶತ್ರುವಿನ ಕುರಿತು ಮನಸ್ಸಿನಲ್ಲಿಯೇ ನಗುತ್ತಿತ್ತು.

12136029a ಆಮಿಷೇ ತು ಪ್ರಸಕ್ತಃ ಸ ಕದಾ ಚಿದವಲೋಕಯನ್।
12136029c ಅಪಶ್ಯದಪರಂ ಘೋರಮಾತ್ಮನಃ ಶತ್ರುಮಾಗತಮ್।।

ಅಷ್ಟರಲ್ಲಿಯೇ ಅದರ ದೃಷ್ಟಿಯು ಬೇರೊಂದುಕಡೆ ಬಿದ್ದಿತು. ಅದು ಇನ್ನೊಂದು ಭಯಂಕರ ಶತ್ರುವು ಅಲ್ಲಿಗೆ ಬರುತ್ತಿರುವುದನ್ನು ನೋಡಿತು.

12136030a ಶರಪ್ರಸೂನಸಂಕಾಶಂ ಮಹೀವಿವರಶಾಯಿನಮ್।
12136030c ನಕುಲಂ ಹರಿಕಂ ನಾಮ ಚಪಲಂ ತಾಮ್ರಲೋಚನಮ್।।

ಸರಕಂಡೇ ಹೂವಿನ ಬಣ್ಣದ ಆ ಹರಿಕ ಎಂಬ ಹೆಸರಿನ ಚಪಲ ಮುಂಗುಸಿಯು ನೆಲದಲ್ಲಿ ಬಿಲವನ್ನು ಮಾಡಿಕೊಂಡು ಮಲಗುತ್ತಿತ್ತು. ಅದರ ಕಣ್ಣುಗಳು ತಾಮ್ರದಂತೆ ಕೆಂಪಾಗಿದ್ದವು.

12136031a ತೇನ ಮೂಷಕಗಂಧೇನ ತ್ವರಮಾಣಮುಪಾಗತಮ್।
12136031c ಭಕ್ಷಾರ್ಥಂ ಲೇಲಿಹದ್ವಕ್ತ್ರಂ ಭೂಮಾವೂರ್ಧ್ವಮುಖಂ ಸ್ಥಿತಮ್।।

ಇಲಿಯ ವಾಸನೆಯಿಂದ ಅತ್ಯಂತ ಅವಸರದಲ್ಲಿ ಅದನ್ನು ತಿನ್ನಲು ನಾಲಿಗೆಯನ್ನು ಚಪ್ಪರಿಸುತ್ತಾ ಆ ಮುಂಗುಸಿಯು ಮೇಲೆ ಮುಖಮಾಡಿಕೊಂಡು ನಿಂತಿತು.

12136032a ಶಾಖಾಗತಮರಿಂ ಚಾನ್ಯದಪಶ್ಯತ್ಕೋಟರಾಲಯಮ್।
12136032c ಉಲೂಕಂ ಚಂದ್ರಕಂ ನಾಮ ತೀಕ್ಷ್ಣತುಂಡಂ ಕ್ಷಪಾಚರಮ್।।

ಆಗ ಇಲಿಯು ಮರದ ರೆಂಬೆಯಮೇಲೆ ಕೊಟರೆಯಲ್ಲಿ ವಾಸಿಸುತ್ತಿದ್ದ ಇನ್ನೊಂದು ಶತ್ರು ಚಂದ್ರಕ ಎಂಬ ಹೆಸರಿನ ಗೂಬೆಯನ್ನು ನೋಡಿತು. ರಾತ್ರಿ ಸಂಚರಿಸುತ್ತಿದ್ದ ಆ ಪಕ್ಷಿಯ ಕೊಕ್ಕು ತೀಕ್ಷ್ಣವಾಗಿತ್ತು.

12136033a ಗತಸ್ಯ ವಿಷಯಂ ತಸ್ಯ ನಕುಲೋಲೂಕಯೋಸ್ತದಾ।
12136033c ಅಥಾಸ್ಯಾಸೀದಿಯಂ ಚಿಂತಾ ತತ್ಪ್ರಾಪ್ಯ ಸುಮಹದ್ಭಯಮ್।।

ಮುಂಗುಸಿ ಮತ್ತು ಗೂಬೆ ಇಬ್ಬರಿಗೂ ಆಹಾರವಾಗಿದ್ದ ಆ ಇಲಿಗೆ ಅತ್ಯಂತ ಭಯವುಂಟಾಯಿತು. ಅದು ಈ ರೀತಿ ಚಿಂತಿಸತೊಡಗಿತು:

12136034a ಆಪದ್ಯಸ್ಯಾಂ ಸುಕಷ್ಟಾಯಾಂ ಮರಣೇ ಸಮುಪಸ್ಥಿತೇ।
12136034c ಸಮಂತಾದ್ಭಯ ಉತ್ಪನ್ನೇ ಕಥಂ ಕಾರ್ಯಂ ಹಿತೈಷಿಣಾ।।

“ಅಯ್ಯೋ! ಈ ಅತ್ಯಂತ ಕಷ್ಟದಲ್ಲಿ ಮರಣವು ಸಮೀಪವಾಗಿಬಿಟ್ಟಿದೆ! ಎಲ್ಲ ಕಡೆಗಳಿಂದಲೂ ಭಯವು ಉತ್ಪನ್ನವಾಗಿಬಿಟ್ಟಿದೆ. ಈಗ ನನ್ನ ಹಿತವನ್ನು ಬಯಸಿ ನಾನು ಏನನ್ನು ಮಾಡಬೇಕು?”

12136035a ಸ ತಥಾ ಸರ್ವತೋ ರುದ್ಧಃ ಸರ್ವತ್ರ ಸಮದರ್ಶನಃ।
12136035c ಅಭವದ್ಭಯಸಂತಪ್ತಶ್ಚಕ್ರೇ ಚೇಮಾಂ ಪರಾಂ ಗತಿಮ್4।।

ಹೀಗೆ ಎಲ್ಲ ಕಡೆಗಳಿಂದ ಅದರ ಮಾರ್ಗವು ಮುಚ್ಚಿಕೊಂಡಿತ್ತು. ಸರ್ವತ್ರ ಭಯವೊಂದೇ ಕಾಣುತ್ತಿತ್ತು. ಆ ಭಯದಿಂದ ಸಂತಪ್ತಗೊಂಡ ಆ ಇಲಿಯು ಈ ಪರಮ ಗತಿಯನ್ನು ತಲುಪಿ ಯೋಚಿಸಿತು:

12136036a ಆಪದ್ವಿನಾಶಭೂಯಿಷ್ಠಾ ಶತೈಕೀಯಂ ಚ ಜೀವಿತಮ್।
12136036c ಸಮಂತಸಂಶಯಾ ಚೇಯಮಸ್ಮಾನಾಪದುಪಸ್ಥಿತಾ।।

“ಆಪತ್ತಿನಲ್ಲಿ ಸಿಲುಕಿಕೊಂಡು ನಾಶವಾಗಬಹುದಾದ ಪರಿಸ್ಥಿತಿಯಲ್ಲಿಯೂ ಕೂಡ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಇಂದು ಎಲ್ಲಕಡೆಗಳಿಂದಲೂ ನನ್ನ ಪ್ರಾಣಕ್ಕೆ ಸಂಶಯವುಂಟಾಗುತ್ತಿದೆ. ಆದುದರಿಂದ ನಾನು ಅತ್ಯಂತ ಭಾರೀ ಆಪತ್ತಿನಲ್ಲಿ ಸಿಲುಕಿಕೊಂಡುಬಿಟ್ಟಿದ್ದೇನೆ.

12136037a ಗತಂ ಹಿ ಸಹಸಾ ಭೂಮಿಂ ನಕುಲೋ ಮಾಂ ಸಮಾಪ್ನುಯಾತ್।
12136037c ಉಲೂಕಶ್ಚೇಹ ತಿಷ್ಠಂತಂ ಮಾರ್ಜಾರಃ ಪಾಶಸಂಕ್ಷಯಾತ್।।

ಒಮ್ಮೆಲೇ ನೆಲದ ಮೇಲೆ ಹಾರಿ ಹೋದರೆ ಮುಂಗುಸಿಯು ನನ್ನನ್ನು ಹಿಡಿದುಕೊಂಡುಬಿಡುತ್ತದೆ. ಇಲ್ಲಿಯೇ ನಿಂತುಕೊಂಡರೆ ಗೂಬೆಯು ಹಿಡಿದುಕೊಂಡುಬಿಡುತ್ತದೆ. ಈ ಬಲೆಯನ್ನು ಕತ್ತರಿಸಿ ಒಳಗೆ ನುಸುಳಿಕೊಂಡರೆ ಬೆಕ್ಕು ನನ್ನನ್ನು ಬಿಡುವುದಿಲ್ಲ.

12136038a ನ ತ್ವೇವಾಸ್ಮದ್ವಿಧಃ ಪ್ರಾಜ್ಞಃ ಸಂಮೋಹಂ ಗಂತುಮರ್ಹತಿ।
12136038c ಕರಿಷ್ಯೇ ಜೀವಿತೇ ಯತ್ನಂ ಯಾವದುಚ್ಚ್ವಾಸನಿಗ್ರಹಮ್5।।

ಆದರೂ ನನ್ನಂತಹ ಪ್ರಾಜ್ಞನು ಗಾಬರಿಗೊಳ್ಳಬಾರದು. ಉಸಿರಾಟವು ಇರುವವರೆಗೆ ಜೀವಿತವಾಗಿರಲು ಪ್ರಯತ್ನಿಸಬೇಕು.

12136039a ನ ಹಿ ಬುದ್ಧ್ಯಾನ್ವಿತಾಃ ಪ್ರಾಜ್ಞಾ ನೀತಿಶಾಸ್ತ್ರವಿಶಾರದಾಃ।
12136039c ಸಂಭ್ರಮಂತ್ಯಾಪದಂ6 ಪ್ರಾಪ್ಯ ಮಹತೋಽರ್ಥಾನವಾಪ್ಯ ಚ7।।

ಬುದ್ಧಿವಂತ, ಪ್ರಾಜ್ಞ ನೀತಿಶಾಸ್ತ್ರವಿಶಾರದನು ಆಪತ್ತು ಬಂದೊದಗಿದಾಗ, ಅದು ಏಷ್ಟೇ ಮಹಾ ಅನರ್ಥಕಾರಿಯಾಗಿರಲಿ, ಗಾಬರಿಗೊಳ್ಳುವುದಿಲ್ಲ.

12136040a ನ ತ್ವನ್ಯಾಮಿಹ ಮಾರ್ಜಾರಾದ್ಗತಿಂ ಪಶ್ಯಾಮಿ ಸಾಂಪ್ರತಮ್।
12136040c ವಿಷಮಸ್ಥೋ ಹ್ಯಯಂ ಜಂತುಃ ಕೃತ್ಯಂ ಚಾಸ್ಯ ಮಹನ್ಮಯಾ।।

ಈಗ ಈ ಬೆಕ್ಕಿನ ಸಹಾಯವನ್ನು ಪಡೆಯುವುದನ್ನು ಬಿಟ್ಟು ನನಗೆ ಬೇರೆ ಯಾವ ಮಾರ್ಗವೂ ಕಾಣುತ್ತಿಲ್ಲ. ನನ್ನ ಕಡು ಶತ್ರುವಾಗಿದ್ದರೂ ಈ ಪ್ರಾಣಿಯು ಸ್ವಯಂ ಸಂಕಟದಲ್ಲಿ ಸಿಕ್ಕಿಕೊಂಡಿದೆ. ನನ್ನಿಂದ ಇದಕ್ಕೂ ಮಹಾ ಉಪಕಾರವಾಗಬಲ್ಲದು.

12136041a ಜೀವಿತಾರ್ಥೀ ಕಥಂ ತ್ವದ್ಯ ಪ್ರಾರ್ಥಿತಃ ಶತ್ರುಭಿಸ್ತ್ರಿಭಿಃ।
12136041c ತಸ್ಮಾದಿಮಮಹಂ ಶತ್ರುಂ ಮಾರ್ಜಾರಂ ಸಂಶ್ರಯಾಮಿ ವೈ।।

ಮೂರು ಶತ್ರುಗಳು ನನ್ನ ಮೇಲೆ ಗುರಿಯನ್ನಿಟ್ಟಿರುವಾಗ ಇಂದು ನಾನು ಹೇಗೆ ನನ್ನ ಜೀವವನ್ನು ಉಳಿಸಿಕೊಳ್ಳಬಹುದು? ಆದುದರಿಂದ ಇಂದು ನಾನು ನನ್ನ ಶತ್ರು ಈ ಬೆಕ್ಕನ್ನೇ ಆಶ್ರಯಿಸುತ್ತೇನೆ.

12136042a ಕ್ಷತ್ರವಿದ್ಯಾಂ ಸಮಾಶ್ರಿತ್ಯ ಹಿತಮಸ್ಯೋಪಧಾರಯೇ8
12136042c ಯೇನೇಮಂ ಶತ್ರುಸಂಘಾತಂ ಮತಿಪೂರ್ವೇಣ ವಂಚಯೇ।।

ಕ್ಷತ್ರವಿದ್ಯೆಯನ್ನು ಆಶ್ರಯಿಸಿ ಇದರ ಹಿತಗಳನ್ನು ಅಥಮಾಡಿಕೊಳ್ಳುತ್ತೇನೆ. ಈ ಬುದ್ಧಿಯನ್ನುಪಯೋಗಿಸಿ ಶತ್ರುಸಮುದಾಯವನ್ನು ವಂಚಿಸಿ ನನ್ನನ್ನು ನಾನು ಉಳಿಸಿಕೊಳ್ಳುತ್ತೇನೆ.

12136043a ಅಯಮತ್ಯಂತಶತ್ರುರ್ಮೇ ವೈಷಮ್ಯಂ ಪರಮಂ ಗತಃ।
12136043c ಮೂಢೋ ಗ್ರಾಹಯಿತುಂ ಸ್ವಾರ್ಥಂ ಸಂಗತ್ಯಾ ಯದಿ ಶಕ್ಯತೇ।।

ಈ ಬೆಕ್ಕು ನನ್ನ ಅತ್ಯಂತ ಶತ್ರುವಾಗಿದ್ದರೂ ಈ ಸಮಯದಲ್ಲಿ ಪರಮ ವಿಷಮ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ಶಕ್ಯವಾದರೆ ಈ ಮೂಢನನ್ನು ಸಂಗತಿಯ ಮೂಲಕ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಒಪ್ಪಿಸುತ್ತೇನೆ.

12136044a ಕದಾ ಚಿದ್ವ್ಯಸನಂ ಪ್ರಾಪ್ಯ ಸಂಧಿಂ ಕುರ್ಯಾನ್ಮಯಾ ಸಹ।
12136044c ಬಲಿನಾ ಸಂನಿವಿಷ್ಟಸ್ಯ ಶತ್ರೋರಪಿ ಪರಿಗ್ರಹಃ।
12136044e ಕಾರ್ಯ ಇತ್ಯಾಹುರಾಚಾರ್ಯಾ ವಿಷಮೇ ಜೀವಿತಾರ್ಥಿನಾ।।

ವ್ಯಸನದಲ್ಲಿ ಸಿಲುಕಿದುದರಿಂದ ನನ್ನೊಂದಿಗೆ ಸಂಧಿಯನ್ನೂ ಮಾಡಿಕೊಳ್ಳಬಹುದೇನೋ! ಆಚಾರ್ಯರ ಹೇಳಿಕೆಯಂತೆ ಸಂಕಟವು ಬಂದೊದಗಿದಾಗ ಜೀವ ರಕ್ಷಣೆಯನ್ನು ಬಯಸುವವನು ಬಲಶಾಲಿಯಾಗಿದ್ದರೂ ತನ್ನ ನಿಕಟವರ್ತೀ ಶತ್ರುವಿನೊಂದಿಗೆ ಸೇರಿಕೊಳ್ಳುತ್ತಾನೆ.

12136045a ಶ್ರೇಯಾನ್ ಹಿ ಪಂಡಿತಃ ಶತ್ರುರ್ನ ಚ ಮಿತ್ರಮಪಂಡಿತಮ್।
12136045c ಮಮ ಹ್ಯಮಿತ್ರೇ ಮಾರ್ಜಾರೇ ಜೀವಿತಂ ಸಂಪ್ರತಿಷ್ಠಿತಮ್।।

ವಿದ್ವಾನ್ ಶತ್ರುವೂ ಶ್ರೇಯಸ್ಸನ್ನುಂಟುಮಾಡಬಲ್ಲನು. ಮತ್ತು ಮೂರ್ಖ ಮಿತ್ರನೂ ಶ್ರೇಯಸ್ಕರನಾಗದೇ ಇರಬಹುದು. ನನ್ನ ಜೀವಿತವಾದರೋ ಶತ್ರುವಾಗಿರುವ ಈ ಬೆಕ್ಕಿನ ಮೇಲೆಯೇ ಅವಲಂಬಿಸಿದೆ.

12136046a ಹಂತೈನಂ ಸಂಪ್ರವಕ್ಷ್ಯಾಮಿ ಹೇತುಮಾತ್ಮಾಭಿರಕ್ಷಣೇ।
12136046c ಅಪೀದಾನೀಮಯಂ ಶತ್ರುಃ ಸಂಗತ್ಯಾ ಪಂಡಿತೋ ಭವೇತ್।।

ಸರಿ! ಈಗ ನಾನು ಇದಕ್ಕೆ ಆತ್ಮರಕ್ಷಣೆಗೆ ಒಂದು ಯುಕ್ತಿಯನ್ನು ಹೇಳುತ್ತೇನೆ. ಈ ಶತ್ರುವು ಈ ಸಮಯದಲ್ಲಿ ನನ್ನ ಸಂಗತಿಯಿಂದ ಪಂಡಿತನಾಗುವ ಸಂಭವವಿದೆ. ವಿವೇಕದಿಂದ ಕಾರ್ಯಕೈಗೊಳ್ಳಬೇಕು.”

12136047a 9ತತೋಽರ್ಥಗತಿತತ್ತ್ವಜ್ಞಃ ಸಂಧಿವಿಗ್ರಹಕಾಲವಿತ್। 12136047c ಸಾಂತ್ವಪೂರ್ವಮಿದಂ ವಾಕ್ಯಂ ಮಾರ್ಜಾರಂ ಮೂಷಕೋಽಬ್ರವೀತ್।।

ಅನಂತರ ಆ ಅರ್ಥಗತಿತತ್ತ್ವಜ್ಞ, ಸಂಧಿ-ವಿಗ್ರಹ ಕಾಲವನ್ನು ತಿಳಿದಿದ್ದ ಇಲಿಯು ಬೆಕ್ಕಿಗೆ ಸಾಂತ್ವಪೂರ್ವಕವಾದ ಈ ಮಾತನ್ನಾಡಿತು:

12136048a ಸೌಹೃದೇನಾಭಿಭಾಷೇ ತ್ವಾ ಕಚ್ಚಿನ್ಮಾರ್ಜಾರ ಜೀವಸಿ।
12136048c ಜೀವಿತಂ ಹಿ ತವೇಚ್ಚಾಮಿ ಶ್ರೇಯಃ ಸಾಧಾರಣಂ ಹಿ ನೌ।।

“ಬೆಕ್ಕೇ! ನಾನು ನಿನ್ನೊಂದಿಗೆ ಸೌಹಾರ್ದತೆಯಿಂದ ಮಾತನಾಡುತ್ತಿದ್ದೇನೆ. ನೀನು ಜೀವಿತವಾಗಿದ್ದೀಯೆ ತಾನೇ? ನೀನೂ ಜೀವಂತವಾಗಿರಬೇಕೆಂದೇ ನಾನು ಇಚ್ಛಿಸುತ್ತೇನೆ. ಏಕೆಂದರೆ ಇದರಿಂದ ನಮಗಿಬ್ಬರಿಗೂ ಒಂದೇ ರೀತಿಯಲ್ಲಿ ಶ್ರೇಯಸ್ಸನ್ನುಂಟುಮಾಡುತ್ತದೆ.

12136049a ನ ತೇ ಸೌಮ್ಯ ವಿಷತ್ತವ್ಯಂ ಜೀವಿಷ್ಯಸಿ ಯಥಾ ಪುರಾ10
12136049c ಅಹಂ ತ್ವಾಮುದ್ಧರಿಷ್ಯಾಮಿ ಪ್ರಾಣಾನ್ಜಹ್ಯಾಂ ಹಿ ತೇ ಕೃತೇ।।

ಸೌಮ್ಯ! ವಿಷಾದಿಸಬೇಡ. ಹಿಂದಿನಂತೆಯೇ ನೀನು ಬದುಕಬಹುದು. ನನ್ನ ಪ್ರಾಣಗಳನ್ನು ನೀನು ತೆಗೆದುಕೊಳ್ಳದೇ ಇದ್ದರೆ ನಾನು ನಿನ್ನನ್ನು ಪಾರುಗೊಳಿಸುತ್ತೇನೆ.

12136050a ಅಸ್ತಿ ಕಶ್ಚಿದುಪಾಯೋಽತ್ರ ಪುಷ್ಕಲಃ11 ಪ್ರತಿಭಾತಿ ಮಾಮ್।
12136050c ಯೇನ ಶಕ್ಯಸ್ತ್ವಯಾ ಮೋಕ್ಷಃ ಪ್ರಾಪ್ತುಂ ಶ್ರೇಯೋ ಯಥಾ ಮಯಾ।।

ನಿನ್ನನ್ನು ಬಿಡುಗಡೆಗೊಳಿಸುವ ಮತ್ತು ನನಗೂ ಶ್ರೇಯಸ್ಸನ್ನುಂಟುಮಾಡುವ ಒಂದು ಪುಷ್ಕಲ ಉಪಾಯವು ನನಗೆ ಹೊಳೆಯುತ್ತಿದೆ.

12136051a ಮಯಾ ಹ್ಯುಪಾಯೋ ದೃಷ್ಟೋಽಯಂ ವಿಚಾರ್ಯ ಮತಿಮಾತ್ಮನಃ।
12136051c ಆತ್ಮಾರ್ಥಂ ಚ ತ್ವದರ್ಥಂ ಚ ಶ್ರೇಯಃ ಸಾಧಾರಣಂ ಹಿ ನೌ।।

ನನ್ನ ಮನಸ್ಸಿನಲ್ಲಿಯೇ ವಿಚಾರಿಸಿ ಈ ಉಪಾಯವನ್ನು ಕಂಡುಕೊಂಡಿದ್ದೇನೆ. ಇದರಿಂದ ನನಗೂ ಮತ್ತು ನಿನಗೂ ಸಮಾನವಾದ ಶ್ರೇಯಸ್ಸುಂಟಾಗುತ್ತದೆ.

12136052a ಇದಂ ಹಿ ನಕುಲೋಲೂಕಂ ಪಾಪಬುದ್ಧ್ಯಭಿತಃ ಸ್ಥಿತಮ್।
12136052c ನ ಧರ್ಷಯತಿ ಮಾರ್ಜಾರ ತೇನ ಮೇ ಸ್ವಸ್ತಿ ಸಾಂಪ್ರತಮ್।।

ಬೆಕ್ಕೇ! ನೋಡು. ಈ ಮುಂಗುಸಿ ಮತ್ತು ಗೂಬೆಗಳೆರಡೂ ಪಾಪಬುದ್ಧಿಯಿಂದ ಇಲ್ಲಿ ನಿಂತಿವೆ. ನನ್ನ ಮೇಲೆಯೇ ಕಣ್ಣಿಟ್ಟಿವೆ. ಅವು ನನ್ನ ಮೇಲೆ ಆಕ್ರಮಣ ಮಾಡದೇ ಇರುವ ವರೆಗೆ ನಾನು ಸುರಕ್ಷಿತನಾಗಿದ್ದೇನೆ.

12136053a ಕೂಜಂಶ್ಚಪಲನೇತ್ರೋಽಯಂ ಕೌಶಿಕೋ ಮಾಂ ನಿರೀಕ್ಷತೇ।
12136053c ನಗಶಾಖಾಗ್ರಹಸ್ತಿಷ್ಠಂಸ್ತಸ್ಯಾಹಂ ಭೃಶಮುದ್ವಿಜೇ।।

ಈ ಚಂಚಲ ನೇತ್ರಗಳ ಪಾಪೀ ಉಲೂಕವು ಮರದ ರೆಂಬೆಯಮೇಲೆ ಕುಳಿತು ಹೂ ಹೂ ಎನ್ನುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಿದೆ. ಇದರಿಂದ ನನಗೆ ಅತ್ಯಂತ ಭಯವಾಗುತ್ತಿದೆ.

12136054a ಸತಾಂ ಸಾಪ್ತಪದಂ ಸಖ್ಯಂ ಸವಾಸೋ ಮೇಽಸಿ ಪಂಡಿತಃ।
12136054c ಸಾಂವಾಸ್ಯಕಂ ಕರಿಷ್ಯಾಮಿ ನಾಸ್ತಿ ತೇ ಮೃತ್ಯುತೋ ಭಯಮ್।।

ಏಳು ಹೆಜ್ಜೆ ಜೊತೆಯಾಗಿ ನಡೆದರೂ ಸತ್ಪುರುಷರಲ್ಲಿ ಸಖ್ಯವಾಗಿಹೋಗುತ್ತದೆ. ನಾವಾದರೋ ಸದಾ ಜೊತೆಗೆ ಇದ್ದೇವೆ. ಆದುದರಿಂದ ಪಂಡಿತನಾದ ನೀನು ನನಗೆ ಮಿತ್ರನೇ ಆಗಿರುವೆ. ನಾನು ಮಿತ್ರೋಚಿತ ಧರ್ಮವನ್ನು ಅವಶ್ಯವಾಗಿ ಆಚರಿಸುತ್ತೇನೆ. ಆದುದರಿಂದ ನೀನು ಈಗ ಯಾವುದಕ್ಕೂ ಭಯಪಡಬೇಕಾಗಿಲ್ಲ.

12136055a ನ ಹಿ ಶಕ್ನೋಷಿ ಮಾರ್ಜಾರ ಪಾಶಂ ಚೇತ್ತುಂ ವಿನಾ ಮಯಾ।
12136055c ಅಹಂ ಚೇತ್ಸ್ಯಾಮಿ ತೇ ಪಾಶಂ ಯದಿ ಮಾಂ ತ್ವಂ ನ ಹಿಂಸಸಿ।।

ಬೆಕ್ಕೇ! ನನ್ನ ಸಹಾಯವಿಲ್ಲದೇ ನೀನು ಈ ಬಲೆಯ ಪಾಶವನ್ನು ಕಡಿದುಕೊಳ್ಳಲಾರೆ. ನನ್ನನ್ನು ನೀನು ಹಿಂಸಿಸದೇ ಇದ್ದರೆ ನಾನು ಈ ಪಾಶವನ್ನು ಕಡಿದುಹಾಕುತ್ತೇನೆ.

12136056a ತ್ವಮಾಶ್ರಿತೋ ನಗಸ್ಯಾಗ್ರಂ ಮೂಲಂ ತ್ವಹಮುಪಾಶ್ರಿತಃ।
12136056c ಚಿರೋಷಿತಾವಿಹಾವಾಂ ವೈ ವೃಕ್ಷೇಽಸ್ಮಿನ್ವಿದಿತಂ ಹಿ ತೇ।।

ನೀನು ಈ ವೃಕ್ಷದ ಮೇಲೆ ವಾಸಿಸ್ತುತ್ತೀಯೆ ಮತ್ತು ನಾನಾದರೋ ಇದರ ಬುಡದಲ್ಲಿ ವಾಸಿಸುತ್ತೇನೆ. ಹೀಗೆ ನಾವಿಬ್ಬರೂ ದೀರ್ಘಕಾಲದಿಂದ ಈ ವೃಕ್ಷದ ಆಶ್ರಯದಲ್ಲಿದ್ದೇವೆ. ಇದು ನಿನಗೂ ತಿಳಿದಿದ್ದೇ ಆಗಿದೆ.

12136057a ಯಸ್ಮಿನ್ನಾಶ್ವಸತೇ ಕಶ್ಚಿದ್ಯಶ್ಚ ನಾಶ್ವಸತೇ ಕ್ವ ಚಿತ್।
12136057c ನ ತೌ ಧೀರಾಃ ಪ್ರಶಂಸಂತಿ ನಿತ್ಯಮುದ್ವಿಗ್ನಚೇತಸೌ।।

ಯಾರ ಮೇಲೂ ವಿಶ್ವಾಸವನ್ನಿಡದವನು ಮತ್ತು ಯಾರೂ ವಿಶ್ವಾಸವನ್ನಿಡದವನು ಇಬ್ಬರೂ ನಿತ್ಯ ಉದ್ವಿಗ್ನಚೇತಸರು ಎಂದು ಧೀರರು ಹೇಳುತ್ತಾರೆ.

12136058a ತಸ್ಮಾದ್ವಿವರ್ಧತಾಂ ಪ್ರೀತಿಃ ಸತ್ಯಾ ಸಂಗತಿರಸ್ತು ನೌ।
12136058c ಕಾಲಾತೀತಮಪಾರ್ಥಂ ಹಿ ನ ಪ್ರಶಂಸಂತಿ ಪಂಡಿತಾಃ।।

ಆದುದರಿಂದ ನಮ್ಮೊಳಗೆ ಸದಾ ಪ್ರೀತಿಯಿರಲಿ ಮತ್ತು ಸತ್ಯ ಸಂಗತಿಯಿರಲಿ. ಆಪತ್ತಿನ ಕಾಲವು ಕಳೆದುಹೋದ ನಂತರ ಪಂಡಿತರು ಇದರ ಕುರಿತು ಮಾತನಾಡುವುದಿಲ್ಲ.

12136059a ಅರ್ಥಯುಕ್ತಿಮಿಮಾಂ ತಾವದ್ಯಥಾಭೂತಾಂ ನಿಶಾಮಯ।
12136059c ತವ ಜೀವಿತಮಿಚ್ಚಾಮಿ ತ್ವಂ ಮಮೇಚ್ಚಸಿ ಜೀವಿತಮ್।।

ನಮ್ಮಿಬ್ಬರ ಪ್ರಯೋಜನಕಾರಿಯಾಗುವ ಈ ಯುಕ್ತಿಯನ್ನು ಯಥಾರ್ಥರೂಪದಲ್ಲಿ ಕೇಳು. ನೀನು ಜೀವಿತವಿರಬೇಕೆಂದು ಬಯಸುತ್ತೇನೆ. ಮತ್ತು ನಾನೂ ಜೀವಿತವಿರಬೇಕೆಂದು ಬಯಸುತ್ತೇನೆ.

12136060a ಕಶ್ಚಿತ್ತರತಿ ಕಾಷ್ಠೇನ ಸುಗಂಭೀರಾಂ ಮಹಾನದೀಮ್।
12136060c ಸ ತಾರಯತಿ ತತ್ಕಾಷ್ಠಂ ಸ ಚ ಕಾಷ್ಠೇನ ತಾರ್ಯತೇ।।

ಅತ್ಯಂತ ಗಂಭೀರವಾದ ಮಹಾನದಿಯನ್ನು ಕಟ್ಟಿಗೆಯ ತುಂಡಿನ ಮೂಲಕ ದಾಟುವವನೂ ಆ ಕಟ್ಟಿಗೆಯನ್ನು ದಾಟಿಸುತ್ತಾನೆ ಮತ್ತು ಆ ಕಟ್ಟಿಗೆಯೂ ಅವನನ್ನು ದಾಟಿಸುತ್ತದೆ.

12136061a ಈದೃಶೋ ನೌ ಸಮಾಯೋಗೋ ಭವಿಷ್ಯತಿ ಸುನಿಸ್ತರಃ।
12136061c ಅಹಂ ತ್ವಾಂ ತಾರಯಿಷ್ಯಾಮಿ ತ್ವಂ ಚ ಮಾಂ ತಾರಯಿಷ್ಯಸಿ।।

ಹೀಗೆ ನಮ್ಮಿಬ್ಬರ ಈ ಸಂಯೋಗವು ಸ್ಥಿರವಾಗಿರುವುದು. ನಾನು ನಿನ್ನನ್ನು ಈ ಸಂಕಟದಿಂದ ಪಾರುಮಾಡುತ್ತೇನೆ. ನೀನೂ ಕೂಡ ನನ್ನನ್ನು ಪಾರುಮಾಡುತ್ತೀಯೆ.”

12136062a ಏವಮುಕ್ತ್ವಾ ತು ಪಲಿತಸ್ತದರ್ಥಮುಭಯೋರ್ಹಿತಮ್।
12136062c ಹೇತುಮದ್ ಗ್ರಹಣೀಯಂ ಚ ಕಾಲಾಕಾಂಕ್ಷೀ ವ್ಯಪೈಕ್ಷತ।।

ಹೀಗೆ ಪಲಿತನು ಇಬ್ಬರಿಗೂ ಹಿತಕರವಾದ, ಯುಕ್ತಿಯುಕ್ತವಾದ ಮತ್ತು ಒಪ್ಪಿಕೊಳ್ಳಲು ಯೋಗ್ಯವಾದ ಮಾತನ್ನು ಹೇಳಿ ಉತ್ತರಕ್ಕಾಗಿ ಪ್ರತೀಕ್ಷೆ ಮಾಡುತ್ತಾ ಆ ಬೆಕ್ಕನ್ನು ನೋಡತೊಡಗಿತು.

12136063a ಅಥ ಸುವ್ಯಾಹೃತಂ ತಸ್ಯ ಶ್ರುತ್ವಾ ಶತ್ರುರ್ವಿಚಕ್ಷಣಃ।
12136063c ಹೇತುಮದ್ಗ್ರಹಣೀಯಾರ್ಥಂ ಮಾರ್ಜಾರೋ ವಾಕ್ಯಮಬ್ರವೀತ್।।

ತನ್ನ ಆ ಶತ್ರುವಿನ ಯುಕ್ತಿಯುಕ್ತ ಮತ್ತು ಸ್ವೀಕರಿಸಲು ಯೋಗ್ಯವಾದ ಸುಂದರ ಭಾಷಣವನ್ನು ಕೇಳಿ ಬೆಕ್ಕು ಮಾತನಾಡಿತು.

12136064a ಬುದ್ಧಿಮಾನ್ವಾಕ್ಯಸಂಪನ್ನಸ್ತದ್ವಾಕ್ಯಮನುವರ್ಣಯನ್।
12136064c ತಾಮವಸ್ಥಾಮವೇಕ್ಷ್ಯಾಂತ್ಯಾಂ ಸಾಮ್ನೈವ ಪ್ರತ್ಯಪೂಜಯತ್।।

ಅದು ಬುದ್ಧಿಶಾಲಿಯಾಗಿತ್ತು. ವಾಕ್ಯಸಂಪನ್ನವಾಗಿತ್ತು. ಮೊದಲೇ ಅದು ತನ್ನ ಮನಸ್ಸಿನಲ್ಲಿಯೇ ಇಲಿಯ ಮಾತನ್ನು ಮೆಲಕು ಹಾಕಿ ನಂತರ ತನ್ನ ದಶೆಯನ್ನು ನೋಡಿಕೊಂಡು ಸಾಮನೀತಿಯಿಂದಲೇ ಆ ಇಲಿಯನ್ನು ಪ್ರಶಂಸಿಸಿತು.

12136065a ತತಸ್ತೀಕ್ಷ್ಣಾಗ್ರದಶನೋ ವೈಡೂರ್ಯಮಣಿಲೋಚನಃ।
12136065c ಮೂಷಕಂ ಮಂದಮುದ್ವೀಕ್ಷ್ಯ ಮಾರ್ಜಾರೋ ಲೋಮಶೋಽಬ್ರವೀತ್।।

ಅನಂತರ ತೀಕ್ಷ್ಣಎದುರುಹಲ್ಲುಗಳಿದ್ದ ವೈಡೂರ್ಯದ ಮಣಿಯಂಥಹ ಕಣ್ಣುಗಳಿದ್ದ ಲೋಮಶ ಬೆಕ್ಕು ಇಲಿಯಮೇಲೆ ಮಂದದೃಷ್ಟಿಯನ್ನು ಹಾಯಿಸಿ ಹೇಳಿತು:

12136066a ನಂದಾಮಿ ಸೌಮ್ಯ ಭದ್ರಂ ತೇ ಯೋ ಮಾಂ ಜೀವಂತಮಿಚ್ಚಸಿ।
12136066c ಶ್ರೇಯಶ್ಚ ಯದಿ ಜಾನೀಷೇ ಕ್ರಿಯತಾಂ ಮಾ ವಿಚಾರಯ।।

“ಸೌಮ್ಯ! ನಿನಗೆ ಮಂಗಳವಾಗಲಿ! ನಾನು ಜೀವಂತವಾಗಿರಬೇಕೆಂದು ನೀನು ಇಚ್ಛಿಸುತ್ತೀಯೆ ಎನ್ನುವುದನ್ನು ತಿಳಿದು ಸಂತೋಷವಾಗುತ್ತಿದೆ. ನಮ್ಮ ಶ್ರೇಯಸ್ಸಿನ ಉಪಾಯವಿದೆಯಾದರೆ ಅದನ್ನು ಮಾಡು. ಅದರಲ್ಲಿ ವಿಚಾರಿಸಬೇಡ.

12136067a ಅಹಂ ಹಿ ದೃಢಮಾಪನ್ನಸ್ತ್ವಮಾಪನ್ನತರೋ ಮಯಾ।
12136067c ದ್ವಯೋರಾಪನ್ನಯೋಃ ಸಂಧಿಃ ಕ್ರಿಯತಾಂ ಮಾ ವಿಚಾರಯ12।।

ನಾನು ಭಾರೀ ವಿಪತ್ತಿನಲ್ಲಿ ಸಿಲುಕಿಕೊಂಡಿದ್ದೇನೆ ಮತ್ತು ನೀನೂ ಕೂಡ ಮಹಾ ಸಂಕಟದಲ್ಲಿ ಬಿದ್ದಿದ್ದೀಯೆ. ಈ ರೀತಿ ಆಪತ್ತಿನಲ್ಲಿರುವ ನಾವಿಬ್ಬರೂ ಸಂಧಿಮಾಡಿಕೊಳ್ಳಬೇಕು. ಅದರಲ್ಲಿ ವಿಚಾರಿಸಬೇಕಾದ್ದಿಲ್ಲ.

12136068a ವಿಧತ್ಸ್ವ ಪ್ರಾಪ್ತಕಾಲಂ ಯತ್ಕಾರ್ಯಂ ಸಿಧ್ಯತು ಚಾವಯೋಃ13
12136068c ಮಯಿ ಕೃಚ್ಚ್ರಾದ್ವಿನಿರ್ಮುಕ್ತೇ ನ ವಿನಂಕ್ಷ್ಯತಿ ತೇ ಕೃತಮ್।।

ಕಾಲವು ಪ್ರಾಪ್ತವಾದಾಗ ನಿನ್ನ ಅಭೀಷ್ಟಗಳ ಸಿದ್ಧಿಗಾಗಿ ಏನೇ ಕಾರ್ಯವಿದ್ದರೂ ಅದನ್ನು ನಾನು ಮಾಡುತ್ತೇನೆ. ನಾನು ಈ ಸಂಕಟದಿಂದ ಮುಕ್ತನಾದರೆ ನೀನು ಮಾಡಿದ ಈ ಉಪಕಾರವು ನಷ್ಟವಾಗಿಹೋಗುವುದಿಲ್ಲ. ನಾನು ಇದಕ್ಕೆ ಪ್ರತ್ಯುಪಕಾರವನ್ನು ಖಂಡಿತಾ ಮಾಡುತ್ತೇನೆ.

12136069a ನ್ಯಸ್ತಮಾನೋಽಸ್ಮಿ ಭಕ್ತೋಽಸ್ಮಿ ಶಿಷ್ಯಸ್ತ್ವದ್ಧಿತಕೃತ್ತಥಾ।
12136069c ನಿದೇಶವಶವರ್ತೀ ಚ ಭವಂತಂ ಶರಣಂ ಗತಃ।।

ಈ ಸಮಯದಲ್ಲಿ ನನ್ನ ಮನಸ್ಸು ಭಗ್ನವಾಗಿಬಿಟ್ಟಿದೆ. ನಾನು ನಿನ್ನ ಭಕ್ತ ಮತ್ತು ಶಿಷ್ಯನಾಗಿಬಿಟ್ಟಿದ್ದೇನೆ. ನಿನಗೆ ಹಿತವಾದುದನ್ನೇ ಮಾಡುತ್ತೇನೆ. ಮತ್ತು ಸದಾ ನಿನ್ನ ಆಜ್ಞೆಯ ಅಧೀನನಾಗಿರುತ್ತೇನೆ. ನಾನು ಎಲ್ಲ ರೀತಿಯಲ್ಲಿಯೂ ನಿನ್ನ ಶರಣು ಬಂದಿದ್ದೇನೆ.”

12136070a ಇತ್ಯೇವಮುಕ್ತಃ ಪಲಿತೋ ಮಾರ್ಜಾರಂ ವಶಮಾಗತಮ್।
12136070c ವಾಕ್ಯಂ ಹಿತಮುವಾಚೇದಮಭಿನೀತಾರ್ಥಮರ್ಥವತ್।।

ಬೆಕ್ಕು ಹೀಗೆ ಹೇಳಲು ತನ್ನ ಉದ್ದೇಶವನ್ನು ಚೆನ್ನಾಗಿ ಅರಿತಿದ್ದ ಪಲಿತನು ಅಭಿಪ್ರಾಯಪೂರ್ಣವಾದ ಮತ್ತು ಹಿತವಾದ ಈ ಮಾತನ್ನಾಡಿತು:

12136071a ಉದಾರಂ ಯದ್ಭವಾನಾಹ ನೈತಚ್ಚಿತ್ರಂ ಭವದ್ವಿಧೇ।
12136071c ವಿದಿತೋ ಯಸ್ತು ಮಾರ್ಗೋ ಮೇ ಹಿತಾರ್ಥಂ ಶೃಣು ತಂ ಮಮ।।

“ನೀನಾಡಿದ ಈ ಉದಾರತಾಪೂರ್ಣ ಮಾತು ನಿನ್ನಂತಹ ಬುದ್ಧಿವಂತನಿಗೆ ಹೊಸತೇನೂ ಅಲ್ಲ. ನಮ್ಮಿಬ್ಬರ ಹಿತಾರ್ಥವಾಗಿ ನಾನು ಯಾವ ಮಾರ್ಗವನ್ನು ಕಂಡುಕೊಂಡಿದ್ದೇನೆ ಅದನ್ನು ಕೇಳು.

12136072a ಅಹಂ ತ್ವಾನುಪ್ರವೇಕ್ಷ್ಯಾಮಿ ನಕುಲಾನ್ಮೇ ಮಹದ್ಭಯಮ್।
12136072c ತ್ರಾಯಸ್ವ ಮಾಂ ಮಾ ವಧೀಶ್ಚ ಶಕ್ತೋಽಸ್ಮಿ ತವ ಮೋಕ್ಷಣೇ।।

ಈ ಮುಂಗುಸಿಯಿಂದ ನನಗೆ ಮಹಾ ಭಯವಾಗುತ್ತಿದೆ. ಆದುದರಿಂದ ನಾನು ನಿನ್ನ ಜೊತೆಗೇ ಈ ಬಲೆಯನ್ನು ಪ್ರವೇಶಿಸುತ್ತೇನೆ. ಆದರೆ ಭೋ! ನನ್ನನ್ನು ನೀನು ಕೊಲ್ಲಬೇಡ. ಜೀವಂತವಾಗಿರಲು ಬಿಡು. ಏಕೆಂದರೆ ಜೀವಂತವಾಗಿದ್ದರೆ ಮಾತ್ರ ನಾನು ನಿನ್ನನ್ನು ರಕ್ಷಿಸಲು ಸಮರ್ಥನಾಗುತ್ತೇನೆ.

12136073a ಉಲೂಕಾಚ್ಚೈವ ಮಾಂ ರಕ್ಷ ಕ್ಷುದ್ರಃ ಪ್ರಾರ್ಥಯತೇ ಹಿ ಮಾಮ್।
12136073c ಅಹಂ ಚೇತ್ಸ್ಯಾಮಿ ತೇ ಪಾಶಾನ್ಸಖೇ ಸತ್ಯೇನ ತೇ ಶಪೇ।।

ಅಲ್ಲಿ ನೀಚ ಗೂಬೆಯೂ ಕೂಡ ನನ್ನ ಪ್ರಾಣಗಳ ಗ್ರಾಹಕನಾಗಿ ನಿಂತಿದ್ದಾನೆ. ಇದರಿಂದಲೂ ನೀನು ನನ್ನನ್ನು ಉಳಿಸು. ಸಖಾ! ನಾನು ಶಪಥಮಾಡಿ ನಿನಗೆ ಹೇಳುತ್ತಿದ್ದೇನೆ; ನಾನು ನಿನ್ನ ಈ ಬಂಧನವನ್ನು ಕಡಿದು ಹಾಕುತ್ತೇನೆ.”

12136074a ತದ್ವಚಃ ಸಂಗತಂ ಶ್ರುತ್ವಾ ಲೋಮಶೋ ಯುಕ್ತಮರ್ಥವತ್।
12136074c ಹರ್ಷಾದುದ್ವೀಕ್ಷ್ಯ ಪಲಿತಂ ಸ್ವಾಗತೇನಾಭ್ಯಪೂಜಯತ್।।

ಇಲಿಯ ಆ ಯುಕ್ತಿಯುಕ್ತ ಅರ್ಥಪೂರ್ಣ ಸುಸಂಗತ ಮಾತನ್ನು ಕೇಳಿ ಲೋಮಶನು ಹರ್ಷದಿಂದ ಪಲಿತನನ್ನು ನೋಡಿ ಸ್ವಾಗತಿಸಿ ಪ್ರಶಂಸಿಸಿತು.

12136075a ಸ ತಂ ಸಂಪೂಜ್ಯ ಪಲಿತಂ ಮಾರ್ಜಾರಃ ಸೌಹೃದೇ ಸ್ಥಿತಃ।
12136075c ಸುವಿಚಿಂತ್ಯಾಬ್ರವೀದ್ಧೀರಃ ಪ್ರೀತಸ್ತ್ವರಿತ ಏವ ಹಿ।।

ಹೀಗೆ ಪಲಿತನನ್ನು ಪ್ರಶಂಸಿಸಿ ಸೌಹಾರ್ದತೆಯಲ್ಲಿದ್ದ ಧೀರ ಬೆಕ್ಕು ಚೆನ್ನಾಗಿ ಯೋಚಿಸಿ ಪ್ರೀತನಾಗಿ ತ್ವರೆಮಾಡಿ ಹೀಗೆ ಹೇಳಿತು:

12136076a ಕ್ಷಿಪ್ರಮಾಗಚ್ಚ ಭದ್ರಂ ತೇ ತ್ವಂ ಮೇ ಪ್ರಾಣಸಮಃ ಸಖಾ।
12136076c ತವ ಪ್ರಾಜ್ಞ ಪ್ರಸಾದಾದ್ಧಿ ಕ್ಷಿಪ್ರಂ ಪ್ರಾಪ್ಸ್ಯಾಮಿ ಜೀವಿತಮ್।।

“ಬೇಗನೇ ಬಾ. ನಿನಗೆ ಮಂಗಳವಾಗಲಿ. ನೀನು ನನ್ನ ಪ್ರಾಣಸಖನಿಗೆ ಸಮನಾಗಿರುವೆ. ಪ್ರಾಜ್ಞ! ನಿನ್ನ ಪ್ರಸಾದದಿಂದ ನಾನು ಬೇಗನೇ ಜೀವದಿಂದ ಉಳಿಯಬಲ್ಲೆ.

12136077a ಯದ್ಯದೇವಂಗತೇನಾದ್ಯ ಶಕ್ಯಂ ಕರ್ತುಂ ಮಯಾ ತವ।
12136077c ತದಾಜ್ಞಾಪಯ ಕರ್ತಾಹಂ ಸಂಧಿರೇವಾಸ್ತು ನೌ ಸಖೇ।।

ಸಖಾ! ಈ ದಶೆಯಲ್ಲಿರುವ ಸೇವಕನಾದ ನನ್ನಿಂದ ನಿನಗೆ ಆಗಬೇಕಾದ ಎಲ್ಲ ಕೆಲಸಗಳನ್ನೂ ಮಾಡಿಸಿಕೊಳ್ಳಬಲ್ಲೆ. ನನಗೆ ಆಜ್ಞೆಯನ್ನು ನೀಡು. ಅವಶ್ಯವಾಗಿ ನಾನು ಅದನ್ನು ನಡೆಸಿಕೊಡುತ್ತೇನೆ. ನಮ್ಮಿಬ್ಬರಲ್ಲಿ ಸಂಧಿಯು ಇರಬೇಕು.

12136078a ಅಸ್ಮಾತ್ತೇ ಸಂಶಯಾನ್ಮುಕ್ತಃ ಸಮಿತ್ರಗಣಬಾಂಧವಃ।
12136078c ಸರ್ವಕಾರ್ಯಾಣಿ ಕರ್ತಾಹಂ ಪ್ರಿಯಾಣಿ ಚ ಹಿತಾನಿ ಚ।।

ಈ ಸಂಕಟದಿಂದ ಪಾರಾದ ನಂತರ ನಾನು ನನ್ನ ಎಲ್ಲ ಮಿತ್ರ-ಬಾಂಧವ ಗಣಗಳೊಂದಿಗೆ ನಿನಗೆ ಪ್ರಿಯವಾದ ಮತ್ತು ಹಿತವಾದ ಎಲ್ಲ ಕಾರ್ಯಗಳನ್ನೂ ಮಾಡಿಕೊಂಡಿರುತ್ತೇನೆ.

12136079a ಮುಕ್ತಶ್ಚ ವ್ಯಸನಾದಸ್ಮಾತ್ಸೌಮ್ಯಾಹಮಪಿ ನಾಮ ತೇ।
12136079c ಪ್ರೀತಿಮುತ್ಪಾದಯೇಯಂ ಚ ಪ್ರತಿಕರ್ತುಂ ಚ ಶಕ್ನುಯಾಮ್14।।

ಸೌಮ್ಯ! ಈ ವಿಪತ್ತಿನಿಂದ ಪಾರಾದ ನಂತರ ನಾನೂ ಕೂಡ ನಿನ್ನ ಹೃದಯದಲ್ಲಿ ಪ್ರೀತಿಯನ್ನುಂಟುಮಾಡುತ್ತೇನೆ. ನೀನು ನನಗೆ ಪ್ರಿಯಕರನು. ಅದಕ್ಕೆ ನಾನೂ ಕೂಡ ಪ್ರತ್ಯುಪಕಾರವನ್ನು ಮಾಡುವಂತಾಗಲಿ.”

12136080a 15ಗ್ರಾಹಯಿತ್ವಾ ತು ತಂ ಸ್ವಾರ್ಥಂ ಮಾರ್ಜಾರಂ ಮೂಷಕಸ್ತದಾ। 12136080c ಪ್ರವಿವೇಶ ಸುವಿಸ್ರಬ್ಧಃ ಸಮ್ಯಗರ್ಥಾಂಶ್ಚಚಾರ ಹ16।।

ತನ್ನ ಸ್ವಾರ್ಥದ ಮಾತನ್ನು ಬೆಕ್ಕು ಸ್ವೀಕರಿಸುವಂತೆ ಮಾಡಿ ಆ ಇಲಿಯು ಬೆಕ್ಕಿನ ಮೇಲೆ ವಿಶ್ವಾಸವನ್ನಿಟ್ಟು ತನ್ನ ಉಪಾಯವನ್ನು ಕಾರ್ಯಗತಗೊಳಿಸಿತು.

12136081a ಏವಮಾಶ್ವಾಸಿತೋ ವಿದ್ವಾನ್ಮಾರ್ಜಾರೇಣ ಸ ಮೂಷಕಃ।
12136081c ಮಾರ್ಜಾರೋರಸಿ ವಿಸ್ರಬ್ಧಃ ಸುಷ್ವಾಪ ಪಿತೃಮಾತೃವತ್।।

ವಿದ್ವಾನ್ ಬೆಕ್ಕಿನಿಂದ ಹೀಗೆ ಆಶ್ವಾಸಿತನಾದ ಇಲಿಯು ತಂದೆ-ತಾಯಿಯ ಮಡಿಲಿನಂತೆ ಆ ಬೆಕ್ಕಿನ ಎದೆಯಮೇಲೆ ನಿರ್ಭಯನಾಗಿ ಮಲಗಿತು.

12136082a ಲೀನಂ ತು ತಸ್ಯ ಗಾತ್ರೇಷು ಮಾರ್ಜಾರಸ್ಯಾಥ ಮೂಷಕಮ್।
12136082c ತೌ ದೃಷ್ಟ್ವಾ ನಕುಲೋಲೂಕೌ ನಿರಾಶೌ ಜಗ್ಮತುರ್ಗೃಹಾನ್।।

ಬೆಕ್ಕಿನ ಅಂಗಗಳಲ್ಲಿ ಅಡಗಿಕೊಂಡ ಇಲಿಯನ್ನು ನೋಡಿ ಮುಂಗುಸಿ ಮತ್ತು ಗೂಬೆ ಎರಡೂ ನಿರಾಶಗೊಂಡವು.

12136083a 17ಲೀನಸ್ತು ತಸ್ಯ ಗಾತ್ರೇಷು ಪಲಿತೋ ದೇಶಕಾಲವಿತ್। 12136083c ಚಿಚ್ಚೇದ ಪಾಶಾನ್ನೃಪತೇ ಕಾಲಾಕಾಂಕ್ಷೀ ಶನೈಃ ಶನೈಃ।।

ನೃಪತೇ! ಬೆಕ್ಕಿನ ಶರೀರದಲ್ಲಿ ಅಡಗಿಕೊಂಡ್ದ ದೇಶಕಾಲವಿದು ಕಾಲಾಕಾಂಕ್ಷೀ ಪಲಿತನು ಮೆಲ್ಲ ಮೆಲ್ಲನೇ ಬಲೆಯ ಪಾಶಗಳನ್ನು ಕಡಿದುಹಾಕಿದನು.

12136084a ಅಥ ಬಂಧಪರಿಕ್ಲಿಷ್ಟೋ ಮಾರ್ಜಾರೋ ವೀಕ್ಷ್ಯ ಮೂಷಕಮ್।
12136084c ಚಿಂದಂತಂ ವೈ ತದಾ ಪಾಶಾನತ್ವರಂತಂ ತ್ವರಾನ್ವಿತಃ।।
12136085a ತಮತ್ವರಂತಂ ಪಲಿತಂ ಪಾಶಾನಾಂ ಚೇದನೇ ತದಾ।
12136085c ಸಂಚೋದಯಿತುಮಾರೇಭೇ ಮಾರ್ಜಾರೋ ಮೂಷಕಂ ತದಾ।।

ಆ ಬಂಧನದಿಂದ ಪೀಡಿತನಾಗಿ ಬಿಡಿಸಿಕೊಳ್ಳುವ ಅವಸರದಲ್ಲಿದ್ದ ಬೆಕ್ಕು ಇಲಿಯು ಮೆಲ್ಲ ಮೆಲ್ಲನೇ ಪಾಶಗಳನ್ನು ಕಡಿಯುತ್ತಿರುವುದನ್ನು ನೋಡಿತು. ಆಗ ತ್ವರೆಮಾಡದೇ ಪಾಶಗಳನ್ನು ಕಡಿಯುತ್ತಿದ್ದ ಇಲಿ ಪಲಿತನನ್ನು ತ್ವರೆಮಾಡಲು ಪ್ರಚೋದಿಸುತ್ತಾ ಬೆಕ್ಕು ಹೀಗೆ ಹೇಳಿತು:

12136086a ಕಿಂ ಸೌಮ್ಯ ನಾಭಿತ್ವರಸೇ ಕಿಂ ಕೃತಾರ್ಥೋಽವಮನ್ಯಸೇ।
12136086c ಚಿಂಧಿ ಪಾಶಾನಮಿತ್ರಘ್ನ ಪುರಾ ಶ್ವಪಚ ಏತಿ ಸಃ।।

“ಸೌಮ್ಯ! ನೀನು ಏಕೆ ತ್ವರೆಮಾಡುತ್ತಿಲ್ಲ? ನಿನ್ನ ಕೆಲಸವು ಆಯಿತೆಂದು ಈಗ ನನ್ನನ್ನು ಅಪಮಾನಿಸುತ್ತಿದ್ದೀಯಾ? ಅಮಿತ್ರಘ್ನ! ಆ ಚಂಡಾಲನು ಬರುವ ಮೊದಲೇ ಈ ಪಾಶಗಳನ್ನು ಕತ್ತರಿಸು!”

12136087a ಇತ್ಯುಕ್ತಸ್ತ್ವರತಾ ತೇನ ಮತಿಮಾನ್ಪಲಿತೋಽಬ್ರವೀತ್।
12136087c ಮಾರ್ಜಾರಮಕೃತಪ್ರಜ್ಞಂ ವಶ್ಯಮಾತ್ಮಹಿತಂ ವಚಃ।।

ಅವಸರಲ್ಲಿದ್ದ ಬೆಕ್ಕಿನ ಈ ಮಾತನ್ನು ಕೇಳಿ ಮತಿಮಾನ್ ಪಲಿತನು ಅಕೃತಪ್ರಜ್ಞ ಆ ಬೆಕ್ಕಿಗೆ ತನಗೆ ಹಿತಕರವೂ ಲಾಭದಾಯಕವೂ ಆದ ಈ ಮಾತನ್ನು ಹೇಳಿತು:

12136088a ತೂಷ್ಣೀಂ ಭವ ನ ತೇ ಸೌಮ್ಯ ತ್ವರಾ ಕಾರ್ಯಾ ನ ಸಂಭ್ರಮಃ।
12136088c ವಯಮೇವಾತ್ರ ಕಾಲಜ್ಞಾ ನ ಕಾಲಃ ಪರಿಹಾಸ್ಯತೇ।।

“ಸೌಮ್ಯ! ಸುಮ್ಮನಿರು. ನೀನು ಅವಸರ ಮಾಡಬಾರದು. ಗಾಬರಿಗೊಳ್ಳುವುದಕ್ಕೆ ಕಾರಣವೇನೂ ಇಲ್ಲ. ನಾನು ಸಮಯವನ್ನು ಚೆನ್ನಾಗಿ ಬಲ್ಲೆ. ಸರಿಯಾದ ಕಾಲಬಂದಾಗ ನಾನು ಎಂದೂ ತಪ್ಪುವುದಿಲ್ಲ.

12136089a ಅಕಾಲೇ ಕೃತ್ಯಮಾರಬ್ಧಂ ಕರ್ತುಂ ನಾರ್ಥಾಯ ಕಲ್ಪತೇ।
12136089c ತದೇವ ಕಾಲ ಆರಬ್ಧಂ ಮಹತೇಽರ್ಥಾಯ ಕಲ್ಪತೇ।।

ಅಕಾಲದಲ್ಲಿ ಆರಂಭಿಸಿದ ಕಾರ್ಯವು ಮಾಡುವವನಿಗೆ ಲಾಭದಾಯಕವಾಗುವುದಿಲ್ಲ ಮತ್ತು ಅದನ್ನೇ ಉಪಯುಕ್ತ ಸಮಯದಲ್ಲಿ ಆರಂಭಿಸಿದರೆ ಮಹಾ ಫಲವು ಸಿದ್ಧಿಸುತ್ತದೆ.

12136090a ಅಕಾಲವಿಪ್ರಮುಕ್ತಾನ್ಮೇ ತ್ವತ್ತ ಏವ ಭಯಂ ಭವೇತ್।
12136090c ತಸ್ಮಾತ್ಕಾಲಂ ಪ್ರತೀಕ್ಷಸ್ವ ಕಿಮಿತಿ ತ್ವರಸೇ ಸಖೇ।।

ಸಖೇ! ಸಮಯಕ್ಕೆ ಮೊದಲೇ ನೀನು ಈ ಬಲೆಯಿಂದ ವಿಮುಕ್ತನಾದರೆ ನನಗೆ ನಿನ್ನಿಂದಲೇ ಭಯವು ಉತ್ಪನ್ನವಾಗಬಹುದು. ಆದುದರಿಂದ ಇನ್ನೂ ಸ್ವಲ್ಪ ಹೊತ್ತು ಪ್ರತೀಕ್ಷೆಯಲ್ಲಿರು. ಏಕೆ ನೀನು ಈ ರೀತಿ ಅವಸರಮಾಡುತ್ತಿರುವೆ?

12136091a ಯಾವತ್ಪಶ್ಯಾಮಿ ಚಂಡಾಲಮಾಯಾಂತಂ ಶಸ್ತ್ರಪಾಣಿನಮ್।
12136091c ತತಶ್ಚೇತ್ಸ್ಯಾಮಿ ತೇ ಪಾಶಂ ಪ್ರಾಪ್ತೇ ಸಾಧಾರಣೇ ಭಯೇ।।

ಶಸ್ತ್ರವನ್ನು ಹಿಡಿದು ಚಂಡಾಲನು ಬರುತ್ತಿರುವುದನ್ನು ನೋಡಿದ ಮತ್ತು ನನಗೆ ನಿನ್ನಿಂದ ಭಯವು ಕಡಿಮೆಯಾದ ಕೂಡಲೇ ಶೀಘ್ರವಾಗಿ ನಾನು ಈ ಬಂಧನವನ್ನು ಕಡಿದು ಹಾಕುತ್ತೇನೆ.

12136092a ತಸ್ಮಿನ್ಕಾಲೇ ಪ್ರಮುಕ್ತಸ್ತ್ವಂ ತರುಮೇವಾಧಿರೋಹಸಿ।
12136092c ನ ಹಿ ತೇ ಜೀವಿತಾದನ್ಯತ್ಕಿಂ ಚಿತ್ಕೃತ್ಯಂ ಭವಿಷ್ಯತಿ।।

ಬಿಡುಗಡೆ ಹೊಂದಿದ ಕೂಡಲೇ ನೀನು ವೃಕ್ಷವನ್ನೇರುತ್ತೀಯೆ. ನಿನ್ನ ಜೀವದ ರಕ್ಷಣೆಯಲ್ಲದೇ ಆಗ ನಿನಗೆ ಬೇರಾವ ಕಾರ್ಯವನ್ನು ಮಾಡುವುದೂ ಇರುವುದಿಲ್ಲ.

12136093a ತತೋ ಭವತ್ಯತಿಕ್ರಾಂತೇ ತ್ರಸ್ತೇ ಭೀತೇ ಚ ಲೋಮಶ।
12136093c ಅಹಂ ಬಿಲಂ ಪ್ರವೇಕ್ಷ್ಯಾಮಿ ಭವಾನ್ ಶಾಖಾಂ ಗಮಿಷ್ಯತಿ।।

ಲೋಮಶ! ಭಯದಿಂದ ನಡುಗಿ ಆಕ್ರಾಂತನಾಗಿ ನೀನು ಓಡುವಾಗ ನಾನು ಬಿಲದಲ್ಲಿ ನುಸುಳಿಕೊಳ್ಳುತ್ತೇನೆ ಮತ್ತು ನೀನು ಮರದ ರೆಂಬೆಗಳನ್ನೇರಿ ಕುಳಿತುಕೋ!”

12136094a ಏವಮುಕ್ತಸ್ತು ಮಾರ್ಜಾರೋ ಮೂಷಕೇಣಾತ್ಮನೋ ಹಿತಮ್।
12136094c ವಚನಂ ವಾಕ್ಯತತ್ತ್ವಜ್ಞೋ ಜೀವಿತಾರ್ಥೀ ಮಹಾಮತಿಃ।।

ಇಲಿಯು ಹೀಗೆ ಹೇಳಲು ವಾಕ್ಯತತ್ತ್ವಜ್ಞ ಮತ್ತು ಜೀವಿತಾರ್ಥೀ ಮಹಾಮತಿ ಬೆಕ್ಕು ತನಗೆ ಹಿತಕರವಾದ ಮಾತನ್ನಾಡತೊಡಗಿತು.

12136095a ಅಥಾತ್ಮಕೃತ್ಯತ್ವರಿತಃ ಸಮ್ಯಕ್ ಪ್ರಶ್ರಯಮಾಚರನ್।
12136095c ಉವಾಚ ಲೋಮಶೋ ವಾಕ್ಯಂ ಮೂಷಕಂ ಚಿರಕಾರಿಣಮ್।।

ತನ್ನ ಕೆಲಸವು ಬೇಗನೇ ಆಗಬೇಕೆಂದಿದ್ದ ಲೋಮಶನು ಒಳ್ಳೆಯ ವಿನಯತೆಯನ್ನು ಬಳಸಿ ತಡಮಾಡುತ್ತಿದ್ದ ಇಲಿಗೆ ಈ ಮಾತನ್ನಾಡಿದನು:

12136096a ನ ಹ್ಯೇವಂ ಮಿತ್ರಕಾರ್ಯಾಣಿ ಪ್ರೀತ್ಯಾ ಕುರ್ವಂತಿ ಸಾಧವಃ।
12136096c ಯಥಾ ತ್ವಂ ಮೋಕ್ಷಿತಃ ಕೃಚ್ಚ್ರಾತ್ತ್ವರಮಾಣೇನ ವೈ ಮಯಾ।।

“ಸಾಧು ಜನರು ಮಿತ್ರರ ಕಾರ್ಯಗಳನ್ನು ಅತ್ಯಂತ ಪ್ರೀತಿ-ಪ್ರಸನ್ನತೆಗಳಿಂದ ಮಾಡುತ್ತಾರೆ. ನಿನ್ನ ಹಾಗೆ ಮಾಡುವುದಿಲ್ಲ. ನಾನಾದರೋ ತ್ವರೆಮಾಡಿ ನಿನ್ನನ್ನು ಸಂಕಟದಿಂದ ಉಳಿಸಿದ್ದೆ.

12136097a ತಥೈವ ತ್ವರಮಾಣೇನ ತ್ವಯಾ ಕಾರ್ಯಂ ಹಿತಂ ಮಮ।
12136097c ಯತ್ನಂ ಕುರು ಮಹಾಪ್ರಾಜ್ಞ ಯಥಾ ಸ್ವಸ್ತ್ಯಾವಯೋರ್ಭವೇತ್।।

ಹಾಗೆಯೇ ನನಗೆ ಹಿತವಾದ ಕಾರ್ಯದಲ್ಲಿಯೂ ನೀನು ತ್ವರೆಮಾಡಬೇಕು. ಮಹಾಪ್ರಾಜ್ಞ! ನಾವಿಬ್ಬರೂ ಸುರಕ್ಷಿತರಾಗಿರುವಂತೆ ಪ್ರಯತ್ನಮಾಡು.

12136098a ಅಥ ವಾ ಪೂರ್ವವೈರಂ ತ್ವಂ ಸ್ಮರನ್ಕಾಲಂ ವಿಕರ್ಷಸಿ।
12136098c ಪಶ್ಯ ದುಷ್ಕೃತಕರ್ಮತ್ವಂ ವ್ಯಕ್ತಮಾಯುಃಕ್ಷಯೋ ಮಮ18।।

ಅಥವಾ ನಮ್ಮ ಪೂರ್ವವೈರವನ್ನು ಸ್ಮರಿಸಿಕೊಂಡು ನೀನು ಸಮಯ ಕಳೆಯುತ್ತಿರುವೆಯಾದರೆ ನಿನ್ನ ಈ ದುಷ್ಕರ್ಮದಿಂದ ನನ್ನ ಆಯಸ್ಸು ಕ್ಷೀಣವಾಗುತ್ತಿರುವುದನ್ನು ನೋಡು.

12136099a ಯಚ್ಚ ಕಿಂ ಚಿನ್ಮಯಾಜ್ಞಾನಾತ್ಪುರಸ್ತಾದ್ವಿಪ್ರಿಯಂ ಕೃತಮ್।
12136099c ನ ತನ್ಮನಸಿ ಕರ್ತವ್ಯಂ ಕ್ಷಮಯೇ ತ್ವಾಂ ಪ್ರಸೀದ ಮೇ।।

ಈ ಮೊದಲು ಅಜ್ಞಾನದಿಂದ ನಿನಗೆ ಅಪ್ರಿಯವಾದುದನ್ನು ಏನಾದರೂ ನಾನು ಮಾಡಿದರೆ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಅದನ್ನು ಕ್ಷಮಿಸಿ ನನ್ನ ಮೇಲೆ ಕರುಣೆತೋರು.”

12136100a ತಮೇವಂವಾದಿನಂ ಪ್ರಾಜ್ಞಃ ಶಾಸ್ತ್ರವಿದ್ಬುದ್ಧಿಸಂಮತಃ।
12136100c ಉವಾಚೇದಂ ವಚಃ ಶ್ರೇಷ್ಠಂ ಮಾರ್ಜಾರಂ ಮೂಷಕಸ್ತದಾ।।

ಈ ರೀತಿ ಮಾತನಾಡುತ್ತಿದ್ದ ಬೆಕ್ಕಿಗೆ ಪ್ರಾಜ್ಞ ಶಾಸ್ತ್ರವಿದು ಬುದ್ಧಿಸಂಮತ ಇಲಿಯು ಈ ಶ್ರೇಷ್ಠ ಮಾತನ್ನಾಡಿತು:

12136101a ಶ್ರುತಂ ಮೇ ತವ ಮಾರ್ಜಾರ ಸ್ವಮರ್ಥಂ ಪರಿಗೃಹ್ಣತಃ।
12136101c ಮಮಾಪಿ ತ್ವಂ ವಿಜಾನೀಹಿ ಸ್ವಮರ್ಥಂ ಪರಿಗೃಹ್ಣತಃ।।

“ಬೆಕ್ಕೇ! ನಿನ್ನ ಸ್ವಾರ್ಥಸಿದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಏನೆಲ್ಲ ನೀನು ಹೇಳಿದೆಯೋ ಅದನ್ನು ನಾನು ಕೇಳಿದೆ ಮತ್ತು ನಾನೂ ಕೂಡ ನನ್ನ ಒಳಿತನ್ನು ಎದುರಿಟ್ಟುಕೊಂಡು ಏನೆಲ್ಲ ಹೇಳಿದೆನೋ ಅದನ್ನು ನೀನೂ ಕೂಡ ಚೆನ್ನಾಗಿ ಅರ್ಥಮಾಡಿಕೊಂಡಿರುವೆ.

12136102a ಯನ್ಮಿತ್ರಂ ಭೀತವತ್ಸಾಧ್ಯಂ ಯನ್ಮಿತ್ರಂ ಭಯಸಂಹಿತಮ್।
12136102c ಸುರಕ್ಷಿತಂ ತತಃ ಕಾರ್ಯಂ ಪಾಣಿಃ ಸರ್ಪಮುಖಾದಿವ।।

ಭಯಗೊಂಡವನೊಂದಿಗೆ ಮಿತ್ರನಾದವನು ಮತ್ತು ಸ್ವಯಂ ಭಯಭೀತನಾಗಿ ಅವನ ಮಿತ್ರನಾಗಿರುವವನು – ಇವರಿಬ್ಬರ ರಕ್ಷಣೆಯೂ ಆಗಬೇಕು. ಮತ್ತು ಹಾವಿನ ಹೆಡೆಯ ಮುಂದೆ ಕೈಯಾಡಿಸಿ ಅದನ್ನು ಆಟವಾಡಿಸುವಂತೆ ಇಬ್ಬರ ಕಾರ್ಯವನ್ನೂ ಸುರಕ್ಷಿತವಾಗಿದ್ದುಕೊಂಡೇ ಮಾಡಬೇಕು.

12136103a ಕೃತ್ವಾ ಬಲವತಾ ಸಂಧಿಮಾತ್ಮಾನಂ ಯೋ ನ ರಕ್ಷತಿ।
12136103c ಅಪಥ್ಯಮಿವ ತದ್ಭುಕ್ತಂ ತಸ್ಯಾನರ್ಥಾಯ ಕಲ್ಪತೇ।।

ಬಲಶಾಲಿಯೊಂದಿಗೆ ಸಂಧಿಮಾಡಿಕೊಂಡು ಯಾರು ತನ್ನ ರಕ್ಷಣೆಯ ಕುರಿತು ಯೋಚಿಸುವುದಿಲ್ಲವೋ ಅವನ ಆ ಸಂಬಂಧವು ಅಪಥ್ಯ ಆಹಾರವನ್ನು ಸೇವಿಸಿದಂತೆ ಹಿತಕರವಾಗಿರುವುದಿಲ್ಲ.

12136104a ನ ಕಶ್ಚಿತ್ಕಸ್ಯ ಚಿನ್ಮಿತ್ರಂ ನ ಕಶ್ಚಿತ್ಕಸ್ಯ ಚಿತ್ಸುಹೃತ್19। 12136104c 20ಅರ್ಥೈರರ್ಥಾ ನಿಬಧ್ಯಂತೇ ಗಜೈರ್ವನಗಜಾ ಇವ।।

ಯಾರೂ ಯಾರ ಮಿತ್ರನೂ ಅಲ್ಲ ಮತ್ತು ಯಾರೂ ಯಾರ ಅಸುಹೃದಯನೂ ಅಲ್ಲ. ಸಾಕಿದ ಆನೆಯನ್ನು ಬಳಸಿ ಕಾಡಾನೆಯನ್ನು ಬಂಧಿಸುವಂತೆ ಅರ್ಥದಿಂದಲೇ ಅರ್ಥವನ್ನು ಸಾಧಿಸುತ್ತಾರೆ.

12136105a ನ ಹಿ ಕಶ್ಚಿತ್ಕೃತೇ ಕಾರ್ಯೇ ಕರ್ತಾರಂ ಸಮವೇಕ್ಷತೇ।
12136105c ತಸ್ಮಾತ್ಸರ್ವಾಣಿ ಕಾರ್ಯಾಣಿ ಸಾವಶೇಷಾಣಿ ಕಾರಯೇತ್।।

ಕಾರ್ಯವು ಮುಗಿದ ಮೇಲೆ ಆ ಕಾರ್ಯವನ್ನು ಮಾಡಿದವನನ್ನು ಯಾರೂ ತಿರುಗಿ ನೋಡುವುದಿಲ್ಲ. ಆದುದರಿಂದ ಎಲ್ಲ ಕಾರ್ಯಗಳನ್ನೂ ಸ್ವಲ್ಪ ಉಳಿಸಿಯೇ ಮಾಡಬೇಕು.

12136106a ತಸ್ಮಿನ್ಕಾಲೇಽಪಿ ಚ ಭವಾನ್ದಿವಾಕೀರ್ತಿಭಯಾನ್ವಿತಃ।
12136106c ಮಮ ನ ಗ್ರಹಣೇ ಶಕ್ತಃ ಪಲಾಯನಪರಾಯಣಃ।।

ಚಂಡಾಲನು ಬಂದ ಸಮಯದಲ್ಲಿ ನೀನು ಅವನ ಭಯದಿಂದ ಪೀಡಿತನಾಗಿ ಓಡಿ ಹೋಗುತ್ತೀಯೆ. ಆಗ ನೀನು ನನ್ನನ್ನು ಹಿಡಿಯಲು ಶಕ್ಯನಾಗುವುದಿಲ್ಲ.

12136107a ಚಿನ್ನಂ ತು ತಂತುಬಾಹುಲ್ಯಂ ತಂತುರೇಕೋಽವಶೇಷಿತಃ।
12136107c ಚೇತ್ಸ್ಯಾಮ್ಯಹಂ ತದಪ್ಯಾಶು ನಿರ್ವೃತೋ ಭವ ಲೋಮಶ।।

ನಾನು ಅನೇಕ ತಂತುಗಳನ್ನು ಕಡಿದುಹಾಕಿದ್ದೇನೆ. ಒಂದೇ ಒಂದು ತಂತುವನ್ನು ಬಿಟ್ಟಿದ್ದೇನೆ. ಅದನ್ನೂ ಕೂಡ ಶೀಘ್ರದಲ್ಲಿಯೇ ತುಂಡರಿಸುತ್ತೇನೆ. ಆದುದರಿಂದ ಲೋಮಶ! ನೀನು ಶಾಂತಿಯಿಂದಿರು. ಗಾಬರಿಪಡಬೇಡ.”

12136108a ತಯೋಃ ಸಂವದತೋರೇವಂ ತಥೈವಾಪನ್ನಯೋರ್ದ್ವಯೋಃ।
12136108c ಕ್ಷಯಂ ಜಗಾಮ ಸಾ ರಾತ್ರಿರ್ಲೋಮಶಂ ಚಾವಿಶದ್ಭಯಮ್।।

ಹೀಗೆ ಆಪತ್ತಿನಲ್ಲಿ ಸಿಲುಕಿದ್ದ ಅವರಿಬ್ಬರ ನಡುವೆ ಸಂವಾದವು ನಡೆಯುತ್ತಿರಲು ಆ ರಾತ್ರಿಯು ಕಳೆಯಿತು. ಆಗ ಲೋಮಶನನ್ನು ಭಯವು ಆವರಿಸಿತು.

12136109a ತತಃ ಪ್ರಭಾತಸಮಯೇ ವಿಕೃತಃ ಕೃಷ್ಣಪಿಂಗಲಃ।
12136109c ಸ್ಥೂಲಸ್ಫಿಗ್ವಿಕಚೋ21 ರೂಕ್ಷಃ ಶ್ವಚಕ್ರಪರಿವಾರಿತಃ।।
12136110a ಶಂಕುಕರ್ಣೋ ಮಹಾವಕ್ತ್ರಃ ಪಲಿತೋ22 ಘೋರದರ್ಶನಃ।
12136110c ಪರಿಘೋ ನಾಮ ಚಂಡಾಲಃ ಶಸ್ತ್ರಪಾಣಿರದೃಶ್ಯತ।।

ಅನಂತರ ಪ್ರಭಾತ ಸಮಯದಲ್ಲಿ ಪರಿಘ ಎಂಬ ಹೆಸರಿನ ಚಂಡಾಲನು ಶಸ್ತ್ರಗಳನ್ನು ಹಿಡಿದು ಕಾಣಿಸಿಕೊಂಡನು. ಅವನು ವಿಕಾರರೂಪಿಯೂ, ಕಪ್ಪು-ಹಳದೀ ವರ್ಣದವನೂ, ವಿಶಾಲ ನಿತಂಬವುಳ್ಳವನೂ, ಬೋಳುಮಂಡೆಯವನೂ, ಕ್ರೂರಿಯೂ ಆಗಿದ್ದನು. ನಾಯಿಗಳು ಅವನನ್ನು ಸುತ್ತುವರೆದು ಬರುತ್ತಿದ್ದವು. ಗೂಟದಂತಹ ಕಿವಿಗಳಿದ್ದ, ದೊಡ್ಡ ತಲೆಯ, ಬಿಳೀ ಮಂಡೆಯ ಅವನು ಘೋರನಾಗಿ ಕಾಣುತ್ತಿದ್ದನು.

12136111a ತಂ ದೃಷ್ಟ್ವಾ ಯಮದೂತಾಭಂ ಮಾರ್ಜಾರಸ್ತ್ರಸ್ತಚೇತನಃ।
12136111c ಉವಾಚ ಪಲಿತಂ ಭೀತಃ ಕಿಮಿದಾನೀಂ ಕರಿಷ್ಯಸಿ।।

ಯಮದೂತನಂತಿದ್ದ ಅವನನ್ನು ನೋಡಿ ಬೆಕ್ಕಿನ ಚಿತ್ತವು ಭಯದಿಂದ ವ್ಯಾಕುಲಗೊಂಡಿತು. ಭೀತನಾಗಿ ಅದು ಪಲಿತನಿಗೆ ಹೇಳಿದನು: “ಈಗ ಏನು ಮಾಡುವೆ?”

12136112a ಅಥ ಚಾಪಿ ಸುಸಂತ್ರಸ್ತೌ ತಂ ದೃಷ್ಟ್ವಾ ಘೋರದರ್ಶನಮ್23
12136112c ಕ್ಷಣೇನ ನಕುಲೋಲೂಕೌ ನೈರಾಶ್ಯಂ ಜಗ್ಮತುಸ್ತದಾ।।

ಘೋರವಾಗಿ ಕಾಣುತ್ತಿದ್ದ ಅವನನ್ನು ನೋಡಿ ಹೆದರಿದ ಮುಂಗುಸಿ-ಗೂಬೆಗಳೂ ಕೂಡ ಕ್ಷಣದಲ್ಲಿಯೇ ನಿರಾಶರಾಗಿ ಹೊರಟುಹೋದವು.

12136113a ಬಲಿನೌ ಮತಿಮಂತೌ ಚ ಸಂಘಾತಂ ಚಾಪ್ಯುಪಾಗತೌ।
12136113c ಅಶಕ್ಯೌ ಸುನಯಾತ್ತಸ್ಮಾತ್ಸಂಪ್ರಧರ್ಷಯಿತುಂ ಬಲಾತ್।।

ಬಲಶಾಲಿಗಳೂ ಮತಿಮಂತರೂ ಆಗಿದ್ದ ಆ ಮುಂಗುಸಿ-ಗೂಬೆಗಳೆರಡೂ ಒಟ್ಟಾಗಿ ಇಲಿಯನ್ನು ಆಕ್ರಮಣಿಸಲು ಅಲ್ಲಿಗೆ ಬಂದಿದ್ದವು. ಆದರೆ ಇಲಿಯ ಉತ್ತಮ ಉಪಾಯದಿಂದ ಬಲವನ್ನುಪಯೋಗಿಸಿ ಅದನ್ನು ಆಕ್ರಮಣಿಸಲು ಅವರಿಗೆ ಶಕ್ಯವಾಗಲಿಲ್ಲ.

12136114a ಕಾರ್ಯಾರ್ಥಂ ಕೃತಸಂಧೀ ತೌ ದೃಷ್ಟ್ವಾ ಮಾರ್ಜಾರಮೂಷಕೌ।
12136114c ಉಲೂಕನಕುಲೌ ತೂರ್ಣಂ ಜಗ್ಮತುಃ ಸ್ವಂ ಸ್ವಮಾಲಯಮ್।।

ಕಾರ್ಯಸಿದ್ಧಿಗಾಗಿ ಬೆಕ್ಕು-ಇಲಿಗಳೆರಡೂ ಸಂಧಿಯನ್ನು ಮಾಡಿಕೊಂಡಿದ್ದುದನ್ನು ನೋಡಿ ಗೂಬೆ ಮತ್ತು ಮುಂಗುಸಿಗಳು ತಕ್ಷಣವೇ ತಮ್ಮ ತಮ್ಮ ಮನೆಗಳಿಗೆ ತೆರಳಿದವು.

12136115a ತತಶ್ಚಿಚ್ಚೇದ ತಂ ತಂತುಂ ಮಾರ್ಜಾರಸ್ಯ ಸ ಮೂಷಕಃ।
12136115c ವಿಪ್ರಮುಕ್ತೋಽಥ ಮಾರ್ಜಾರಸ್ತಮೇವಾಭ್ಯಪತದ್ದ್ರುಮಮ್।।

ಆಗ ಇಲಿಯು ಬೆಕ್ಕಿನ ಬಲೆಯ ತಂತುವನ್ನು ತುಂಡುಮಾಡಿತು. ವಿಮುಕ್ತನಾದ ಬೆಕ್ಕು ಕೂಡಲೇ ಓಡಿಹೋಗಿ ಮರವನ್ನೇರಿತು.

12136116a ಸ ಚ ತಸ್ಮಾದ್ಭಯಾನ್ಮುಕ್ತೋ ಮುಕ್ತೋ ಘೋರೇಣ ಶತ್ರುಣಾ।
12136116c ಬಿಲಂ ವಿವೇಶ ಪಲಿತಃ ಶಾಖಾಂ ಭೇಜೇ24 ಚ ಲೋಮಶಃ।।

ಘೋರ ಶತ್ರುವಾದ ಬೆಕ್ಕಿನ ಭಯದಿಂದಲೂ ಮುಕ್ತನಾದ ಪಲಿತನು ಬಿಲವನ್ನು ಹೊಕ್ಕಿತು. ಲೋಮಶನು ರೆಂಬೆಯನ್ನೇರಿದನು.

12136117a ಉನ್ಮಾಥಮಪ್ಯಥಾದಾಯ ಚಂಡಾಲೋ ವೀಕ್ಷ್ಯ ಸರ್ವಶಃ। 12136117c ವಿಹತಾಶಃ ಕ್ಷಣೇನಾಥ ತಸ್ಮಾದ್ದೇಶಾದಪಾಕ್ರಮತ್।
12136117e ಜಗಾಮ ಚ ಸ್ವಭವನಂ ಚಂಡಾಲೋ ಭರತರ್ಷಭ।।

ಭರತರ್ಷಭ! ಚಂಡಾಲನು ಆ ಬಲೆಯನ್ನು ಮೇಲೆ ಕೆಳಗೆ ಮಾಡಿ ಎಲ್ಲಕಡೆ ನೋಡಿ, ಹತಾಶನಾಗಿ ಕ್ಷಣದಲ್ಲಿಯೇ ಆ ಪ್ರದೇಶದಿಂದ ಹೊರಟು ಸ್ವಭವನಕ್ಕೆ ತೆರಳಿದನು.

12136118a ತತಸ್ತಸ್ಮಾದ್ಭಯಾನ್ಮುಕ್ತೋ ದುರ್ಲಭಂ ಪ್ರಾಪ್ಯ ಜೀವಿತಮ್।
12136118c ಬಿಲಸ್ಥಂ ಪಾದಪಾಗ್ರಸ್ಥಃ ಪಲಿತಂ ಲೋಮಶೋಽಬ್ರವೀತ್।।

ಅನಂತರ ಆ ಭಯದಿಂದ ಮುಕ್ತನಾದ ಮತ್ತು ದುರ್ಲಭವಾದ ಜೀವಿತವನ್ನು ಪಡೆದುಕೊಂಡ ಲೋಮಶನು ಮರದ ಮೇಲಿನಿಂದಲೇ ಬಿಲದಲ್ಲಿದ್ದ ಇಲಿಗೆ ಹೇಳಿತು:

12136119a ಅಕೃತ್ವಾ ಸಂವಿದಂ ಕಾಂ ಚಿತ್ಸಹಸಾಹಮುಪಪ್ಲುತಃ।
12136119c ಕೃತಜ್ಞಂ ಕೃತಕಲ್ಯಾಣಂ ಕಚ್ಚಿನ್ಮಾಂ ನಾಭಿಶಂಕಸೇ।।

“ನನ್ನೊಡನೆ ಮಾತನಾಡದೆಯೇ ನೀನು ಏಕೆ ಒಮ್ಮಿಂದೊಮ್ಮೆಲೇ ಹಾರಿ ಬಿಲವನ್ನು ಸೇರಿಕೊಂಡುಬಿಟ್ಟೆ? ನಾನಾದರೋ ನಿನಗೆ ಅತ್ಯಂತ ಕೃತಜ್ಞನಾಗಿದ್ದೇನೆ. ನಾನೂ ಕೂಡ ನಿನಗೆ ಕಲ್ಯಾಣವಾದುದನ್ನೇ ಮಾಡಿದ್ದೇನೆ. ನಿನಗೆ ನನ್ನ ಮೇಲೆ ಸ್ವಲ್ಪವೂ ಶಂಕೆಯಿಲ್ಲ ತಾನೇ?

12136120a ಗತ್ವಾ ಚ ಮಮ ವಿಶ್ವಾಸಂ ದತ್ತ್ವಾ ಚ ಮಮ ಜೀವಿತಮ್।
12136120c ಮಿತ್ರೋಪಭೋಗಸಮಯೇ ಕಿಂ ತ್ವಂ ನೈವೋಪಸರ್ಪಸಿ।।

ಆಪತ್ತಿನ ಸಮಯದಲ್ಲಿ ನೀನು ನನ್ನ ಮೇಲೆ ವಿಶ್ವಾಸವನ್ನಿಟ್ಟು ನನಗೆ ಜೀವಿತವನ್ನು ಕೊಟ್ಟೆ. ಮಿತ್ರತ್ವದ ಸುಖವನ್ನು ಪಡೆಯುವ ಈ ಸಮಯದಲ್ಲಿ ನೀನು ನನ್ನ ಬಳಿ ಏಕೆ ಬರುತ್ತಿಲ್ಲ?

12136121a ಕೃತ್ವಾ ಹಿ ಪೂರ್ವಂ ಮಿತ್ರಾಣಿ ಯಃ ಪಶ್ಚಾನ್ನಾನುತಿಷ್ಠತಿ।
12136121c ನ ಸ ಮಿತ್ರಾಣಿ ಲಭತೇ ಕೃಚ್ಚ್ರಾಸ್ವಾಪತ್ಸು ದುರ್ಮತಿಃ।।

ಮೊದಲು ಮಿತ್ರನಾಗಿ ನಂತರ ಬದಲುವ ದುರ್ಮತಿಗೆ ಆಪತ್ತಿನ ಸಮಯದಲ್ಲಿ ಅವನಿಗೆ ಆ ಮಿತ್ರರು ದೊರೆಯುವುದಿಲ್ಲ.

12136122a ತತ್ಕೃತೋಽಹಂ25 ತ್ವಯಾ ಮಿತ್ರಂ ಸಾಮರ್ಥ್ಯಾದಾತ್ಮನಃ ಸಖೇ।
12136122c ಸ ಮಾಂ ಮಿತ್ರತ್ವಮಾಪನ್ನಮುಪಭೋಕ್ತುಂ ತ್ವಮರ್ಹಸಿ।।

ಸಖಾ! ನೀನು ನಿನ್ನ ಶಕ್ತ್ಯಾನುಸಾರ ನನಗೆ ಉಪಕಾರವನ್ನು ಮಾಡಿದೆ ಮತ್ತು ನಾನು ನಿನ್ನ ಮಿತ್ರನಾಗಿಬಿಟ್ಟಿದ್ದೇನೆ. ಆದುದರಿಂದ ನನ್ನೊಡನೆ ಇದ್ದುಕೊಂಡು ನೀನು ಈ ಮೈತ್ರಿಯ ಸುಖವನ್ನು ಅನುಭವಿಸಬೇಕು.

12136123a ಯಾನಿ ಮೇ ಸಂತಿ ಮಿತ್ರಾಣಿ ಯೇ ಚ ಮೇ ಸಂತಿ ಬಾಂಧವಾಃ।
12136123c ಸರ್ವೇ ತ್ವಾಂ ಪೂಜಯಿಷ್ಯಂತಿ ಶಿಷ್ಯಾ ಗುರುಮಿವ ಪ್ರಿಯಮ್।।

ನನಗಿರುವ ಎಲ್ಲ ಮಿತ್ರರೂ ಮತ್ತು ಬಾಂಧವರೆಲ್ಲರೂ ನಿನ್ನನ್ನು ಪ್ರಿಯ ಗುರುವನ್ನು ಶಿಷ್ಯರಂತೆ ಪೂಜಿಸುತ್ತಾರೆ.

12136124a ಅಹಂ ಚ ಪೂಜಯಿಷ್ಯೇ ತ್ವಾಂ ಸಮಿತ್ರಗಣಬಾಂಧವಮ್।
12136124c ಜೀವಿತಸ್ಯ ಪ್ರದಾತಾರಂ ಕೃತಜ್ಞಃ ಕೋ ನ ಪೂಜಯೇತ್।।

ನಾನೂ ಕೂಡ ಮಿತ್ರ-ಬಾಂಧವ ಗಣಗಳೊಂದಿಗೆ ನಿನ್ನನ್ನು ಪೂಜಿಸುತ್ತೇನೆ. ಕೃತಜ್ಞನಾದ ಯಾರು ತಾನೇ ಜೀವಿತವನ್ನು ನೀಡಿದವನನ್ನು ಪೂಜಿಸುವುದಿಲ್ಲ?

12136125a ಈಶ್ವರೋ ಮೇ ಭವಾನಸ್ತು ಶರೀರಸ್ಯ ಗೃಹಸ್ಯ ಚ।
12136125c ಅರ್ಥಾನಾಂ ಚೈವ ಸರ್ವೇಷಾಮನುಶಾಸ್ತಾ ಚ ಮೇ ಭವ।।

ನೀನು ನನ್ನ ಶರೀರದ, ಗೃಹದ, ಸ್ವತ್ತುಗಳ ಮತ್ತು ಎಲ್ಲವುಗಳ ಈಶ್ವರನಾಗು. ನೀನು ನನ್ನ ಅನುಶಾಸಕನೂ ಆಗು.

12136126a ಅಮಾತ್ಯೋ ಮೇ ಭವ ಪ್ರಾಜ್ಞ ಪಿತೇವ ಹಿ ಪ್ರಶಾಧಿ ಮಾಮ್।
12136126c ನ ತೇಽಸ್ತಿ ಭಯಮಸ್ಮತ್ತೋ ಜೀವಿತೇನಾತ್ಮನಃ ಶಪೇ।।

ಪ್ರಾಜ್ಞ! ನೀನು ನನ್ನ ಅಮಾತ್ಯನಾಗು. ತಂದೆಯಂತೆಯೇ ನೀನು ನನಗೆ ಉಪದೇಶವನ್ನು ನೀಡು. ನಾನು ನನ್ನ ಜೀವದ ಮೇಲೆ ಆಣೆಯನ್ನಿಟ್ಟು ಹೇಳುತ್ತಿದ್ದೇನೆ – ನಿನಗೆ ನಮ್ಮಿಂದ ಯಾವ ರೀತಿಯ ಭಯವೂ ಇಲ್ಲ.

12136127a ಬುದ್ಧ್ಯಾ ತ್ವಮುಶನಾಃ ಸಾಕ್ಷಾದ್ಬಲೇ ತ್ವಧಿಕೃತಾ ವಯಮ್।
12136127c ತ್ವನ್ಮಂತ್ರಬಲಯುಕ್ತೋ ಹಿ ವಿಂದೇತ ಜಯಮೇವ ಹ26।।

ಬುದ್ಧಿಯಲ್ಲಿ ನೀನು ಸಾಕ್ಷಾತ್ ಶುಕ್ರಾಚಾರ್ಯನಂತಿದ್ದೀಯೆ. ಬಲದಲ್ಲಿ ನೀನು ನನ್ನನ್ನೂ ಮೀರಿಸಿದ್ದೀಯೆ. ನಿನ್ನಲ್ಲಿ ಮಂತ್ರಿತ್ವದ ಬಲವಿದೆ. ನಿನ್ನಲ್ಲಿ ಜಯವೂ ಇದೆ.”

12136128a ಏವಮುಕ್ತಃ ಪರಂ ಸಾಂತ್ವಂ ಮಾರ್ಜಾರೇಣ ಸ ಮೂಷಕಃ।
12136128c ಉವಾಚ ಪರಮಾರ್ಥಜ್ಞಃ ಶ್ಲಕ್ಷ್ಣಮಾತ್ಮಹಿತಂ ವಚಃ।।

ಈ ರೀತಿ ಬೆಕ್ಕು ಪರಮ ಸಾಂತ್ವನದ ಮಾತನ್ನಾಡಲು ಪರಮಾರ್ಥಜ್ಞ ಇಲಿಯು ಮಧುರವಾಣಿಯಲ್ಲಿ ತನಗೆ ಹಿತವಾದ ಈ ಮಾತನ್ನಾಡಿತು:

12136129a ಯದ್ಭವಾನಹ ತತ್ಸರ್ವಂ ಮಯಾ ತೇ ಲೋಮಶ ಶ್ರುತಮ್।
12136129c ಮಮಾಪಿ ತಾವದ್ ಬ್ರುವತಃ ಶೃಣು ಯತ್ಪ್ರತಿಭಾತಿ ಮಾಮ್।।

“ಲೋಮಶ! ನೀನು ಹೇಳಿದುದೆಲ್ಲವನ್ನೂ ನಾನು ಕೇಳಿದೆ. ಈಗ ನನ್ನ ಬುದ್ಧಿಗೆ ಏನು ಹೊಳೆಯುತ್ತಿದೆಯೋ ಅದನ್ನು ಹೇಳುತ್ತೇನೆ. ಕೇಳು.

12136130a ವೇದಿತವ್ಯಾನಿ ಮಿತ್ರಾಣಿ ಬೋದ್ಧವ್ಯಾಶ್ಚಾಪಿ ಶತ್ರವಃ।
12136130c ಏತತ್ಸುಸೂಕ್ಷ್ಮಂ ಲೋಕೇಽಸ್ಮಿನ್ ದೃಶ್ಯತೇ ಪ್ರಾಜ್ಞಸಂಮತಮ್।।

ಮಿತ್ರರನ್ನು ಅರ್ಥಮಾಡಿಕೊಳ್ಳಬೇಕು. ಮತ್ತು ಶತ್ರುಗಳನ್ನೂ ತಿಳಿದುಕೊಲ್ಲಬೇಕು. ಈ ಲೋಕದಲ್ಲಿ ಇದು ಸೂಕ್ಷ್ಮವಾದುದು ಎಂದು ಪ್ರಾಜ್ಞರ ಅಭಿಪ್ರಾಯವಿದೆ.

12136131a ಶತ್ರುರೂಪಾಶ್ಚ ಸುಹೃದೋ ಮಿತ್ರರೂಪಾಶ್ಚ ಶತ್ರವಃ।
12136131c ಸಾಂತ್ವಿತಾಸ್ತೇ27 ನ ಬುಧ್ಯಂತೇ ರಾಗಲೋಭವಶಂ ಗತಾಃ।।

ಮಿತ್ರರು ಶತ್ರುಗಳಾಗಬಹುದು ಮತ್ತು ಶತ್ರುಗಳು ಮಿತ್ರರಾಗಬಹುದು. ಆದರೆ ಶಾಂತಿಯ ಸಮಯದಲ್ಲಿ ರಾಗಲೋಭವಶರಾದ ಅವರನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ.

12136132a ನಾಸ್ತಿ ಜಾತ್ಯಾ ರಿಪುರ್ನಾಮ ಮಿತ್ರಂ ನಾಮ ನ ವಿದ್ಯತೇ।
12136132c ಸಾಮರ್ಥ್ಯಯೋಗಾಜ್ಜಾಯಂತೇ ಮಿತ್ರಾಣಿ ರಿಪವಸ್ತಥಾ।।

ಹುಟ್ಟಿನಿಂದ ಯಾರೂ ಶತ್ರುವೆಂದಾಗಲೀ ಅಥವಾ ಮಿತ್ರನೆಂದಾಗಲೀ ಇರುವುದಿಲ್ಲ. ಸಾಮರ್ಥ್ಯಯೋಗದಿಂದ ಮಿತ್ರರಾಗುತ್ತಾರೆ ಮತ್ತು ಶತ್ರುಗಳೂ ಆಗುತ್ತಾರೆ.

12136133a ಯೋ ಯಸ್ಮಿನ್ಜೀವತಿ ಸ್ವಾರ್ಥಂ ಪಶ್ಯೇತ್ತಾವತ್ಸ ಜೀವತಿ28
12136133c ಸ ತಸ್ಯ ತಾವನ್ಮಿತ್ರಂ ಸ್ಯಾದ್ಯಾವನ್ನ ಸ್ಯಾದ್ವಿಪರ್ಯಯಃ।।

ಯಾರು ಮತ್ತೊಬ್ಬನು ಜೀವಿಸಿರುವವರೆಗೆ ತನ್ನ ಸ್ವಾರ್ಥವನ್ನು ನೋಡಿಕೊಂಡು ಜೀವಿಸುತ್ತಾನೋ ಅವನು ಅವನ ಮಿತ್ರನಾಗಿರುತ್ತಾನೆ. ಅದು ವ್ಯತ್ಯಾಸವಾದಕೂಡಲೇ ಆ ಮೈತ್ರಿಯು ಅಳಿದುಹೋಗುತ್ತದೆ.

12136134a ನಾಸ್ತಿ ಮೈತ್ರೀ ಸ್ಥಿರಾ ನಾಮ ನ ಚ ಧ್ರುವಮಸೌಹೃದಮ್।
12136134c ಅರ್ಥಯುಕ್ತ್ಯಾ ಹಿ ಜಾಯಂತೇ ಮಿತ್ರಾಣಿ ರಿಪವಸ್ತಥಾ।।

ಮೈತ್ರಿಯು ಸ್ಥಿರವಾದುದಲ್ಲ. ಶತ್ರುತ್ವವೂ ಕೂಡ ಸದಾ ಸ್ಥಿರವಾಗಿರುವಂಥಹುದಲ್ಲ. ಸ್ವಾರ್ಥದ ಸಂಬಂಧದಿಂದ ಮಿತ್ರರು ಮತ್ತು ಶತ್ರುಗಳಾಗುತ್ತಿರುತ್ತಾರೆ.

12136135a ಮಿತ್ರಂ ಚ ಶತ್ರುತಾಮೇತಿ ಕಸ್ಮಿಂಶ್ಚಿತ್ಕಾಲಪರ್ಯಯೇ।
12136135c ಶತ್ರುಶ್ಚ ಮಿತ್ರತಾಮೇತಿ ಸ್ವಾರ್ಥೋ ಹಿ ಬಲವತ್ತರಃ।।

ಕಾಲಪರ್ಯಾಯದಿಂದಾಗಿ ಕೆಲವೊಮ್ಮೆ ಮಿತ್ರುವು ಶತ್ರುವಾಗುತ್ತಾನೆ ಮತ್ತು ಶತ್ರುವೂ ಮಿತ್ರನಾಗುತ್ತಾನೆ. ಏಕೆಂದರೆ ಸ್ವಾರ್ಥವು ಬಲವತ್ತರವಾದುದು.

12136136a ಯೋ ವಿಶ್ವಸತಿ ಮಿತ್ರೇಷು ನ ಚಾಶ್ವಸತಿ ಶತ್ರುಷು।
12136136c ಅರ್ಥಯುಕ್ತಿಮವಿಜ್ಞಾಯ ಚಲಿತಂ ತಸ್ಯ ಜೀವಿತಮ್।।

ಅರ್ಥಯುಕ್ತಿಯನ್ನು ತಿಳಿಯದೇ ಕೇವಲ ಮಿತ್ರರಲ್ಲಿ ವಿಶ್ವಾಸವನ್ನಿಡುವ ಮತ್ತು ಕೇವಲ ಶತ್ರುಗಳಲ್ಲಿ ವಿಶ್ವಾಸವಿಡದೇ ಇರುವವನ ಜೀವನವು ಚಂಚಲವಾಗಿರುತ್ತದೆ.

12136137a ಅರ್ಥಯುಕ್ತಿಮವಿಜ್ಞಾಯ ಯಃ ಶುಭೇ ಕುರುತೇ ಮತಿಮ್।
12136137c ಮಿತ್ರೇ ವಾ ಯದಿ ವಾ ಶತ್ರೌ ತಸ್ಯಾಪಿ ಚಲಿತಾ ಮತಿಃ29।।

ಅರ್ಥಯುಕ್ತಿಯನ್ನು ತಿಳಿದುಕೊಳ್ಳದೇ ಯಾರು ಮಿತ್ರರಲ್ಲಿಯಾಗಲೀ ಶತ್ರುವಿನಲ್ಲಿಯಾಗಲೀ ಕೇವಲ ಶುಭ ವಿಚಾರವನ್ನೇ ಇಟ್ಟುಕೊಂಡಿರುತ್ತಾನೋ ಅವನ ಬುದ್ಧಿಯೂ ಚಂಚಲವಾಗಿರುತ್ತದೆ.

12136138a ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇಽಪಿ ನ ವಿಶ್ವಸೇತ್।
12136138c ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃಂತತಿ।।

ವಿಶ್ವಾಸಪಾತ್ರನಲ್ಲದವನಲ್ಲಿ ಎಂದೂ ವಿಶ್ವಾಸವನ್ನಿಡಬಾರದು. ಮತ್ತು ವಿಶ್ವಾಸಪಾತ್ರನಾದವನಲ್ಲಿಯೂ ಅಧಿಕವಾಗಿ ವಿಶ್ವಾಸವನ್ನಿಡಬಾರದು. ಏಕೆಂದರೆ ವಿಶ್ವಾಸದಿಂದ ಉತ್ಪನ್ನವಾಗುವ ಭಯವು ಮೂಲವನ್ನೇ ಕಡಿದುಹಾಕುತ್ತದೆ.

12136139a ಅರ್ಥಯುಕ್ತ್ಯಾ ಹಿ ದೃಶ್ಯಂತೇ ಪಿತಾ ಮಾತಾ ಸುತಾಸ್ತಥಾ।
12136139c ಮಾತುಲಾ ಭಾಗಿನೇಯಾಶ್ಚ ತಥಾ ಸಂಬಂಧಿಬಾಂಧವಾಃ।।

ತಂದೆ-ತಾಯಿ, ಪುತ್ರ, ಮಾವ, ಅಳಿಯ ಮೊದಲಾದ ಸಂಬಂಧಗಳು ಮತ್ತು ಬಂದು-ಬಾಂಧವರು ಇವರೆಲ್ಲರಲ್ಲಿ ಸ್ವಾರ್ಥದ ಸಂಬಂಧದಿಂದಲೇ ಸ್ನೇಹವುಂಟಾಗುತ್ತದೆ.

12136140a ಪುತ್ರಂ ಹಿ ಮಾತಾಪಿತರು ತ್ಯಜತಃ ಪತಿತಂ ಪ್ರಿಯಮ್।
12136140c ಲೋಕೋ ರಕ್ಷತಿ ಚಾತ್ಮಾನಂ ಪಶ್ಯ ಸ್ವಾರ್ಥಸ್ಯ ಸಾರತಾಮ್।।

ಪತಿತನಾಗಿದ್ದರೆ ತಮ್ಮ ಪ್ರಿಯ ಪುತ್ರನನ್ನೂ ತಂದೆ-ತಾಯಿಗಳು ತ್ಯಜಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ರಕ್ಷಣೆಯನ್ನೇ ಮಾಡಿಕೊಳ್ಳಲು ಬಯಸುತ್ತಾರೆ. ನೋಡು. ಸ್ವಾರ್ಥವೇ ಈ ಜಗತ್ತಿನ ಸಾರವೆನ್ನಬಹುದು.

12136141a ತಂ ಮನ್ಯೇ ನಿಕೃತಿಪ್ರಜ್ಞಂ ಯೋ ಮೋಕ್ಷಂ ಪ್ರತ್ಯನಂತರಮ್।
12136141c ಕೃತ್ಯಂ ಮೃಗಯಸೇ ಕರ್ತುಂ ಸುಖೋಪಾಯಮಸಂಶಯಮ್।।

ಬಂಧನದಿಂದ ಬಿಡುಗಡೆ ಹೊಂದಿದ ನಂತರ ನೀನು ಏಕೆ ಹೀಗೆ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಲು ಹೊರಟಿರುವೆ? ನಾವಿಬ್ಬರೂ ಪರಸ್ಪರರ ಉಪಕಾರಕ್ಕೆ ಪ್ರತೀಕಾರವನ್ನು ಮಾಡಿಯಾಗಿದೆ. ಆದರೂ ಏಕೆ ಈಗ ನನಗೆ ಸುಖವನ್ನುಂಟುಮಾಡುವುದಕ್ಕೆ ಅವಕಾಶವನ್ನು ಹುಡುಕುತ್ತಿರುವೆ?

12136142a ಅಸ್ಮಿನ್ನಿಲಯ ಏವ ತ್ವಂ ನ್ಯಗ್ರೋಧಾದವತಾರಿತಃ।
12136142c ಪೂರ್ವಂ ನಿವಿಷ್ಟಮುನ್ಮಾಥಂ ಚಪಲತ್ವಾನ್ನ ಬುದ್ಧವಾನ್।।

ನೀನು ಇದೇ ಸ್ಥಳದಲ್ಲಿ ನ್ಯಗ್ರೋಧ ವೃಕ್ಷದಿಂದ ಇಳಿದು, ಮೊದಲೇ ಹಾಸಿದ್ದ ಬಲೆಯಲ್ಲಿ, ಚಪಲತೆಯ ಕಾರಣದಿಂದ ಅದರ ಕುರಿತು ಧ್ಯಾನವನ್ನಿಡದೇ ಅದರಲ್ಲಿ ಸಿಕ್ಕಿಕೊಂಡೆ.

12136143a ಆತ್ಮನಶ್ಚಪಲೋ ನಾಸ್ತಿ ಕುತೋಽನ್ಯೇಷಾಂ ಭವಿಷ್ಯತಿ।
12136143c ತಸ್ಮಾತ್ಸರ್ವಾಣಿ ಕಾರ್ಯಾಣಿ ಚಪಲೋ ಹಂತ್ಯಸಂಶಯಮ್।।

ಚಪಲನಾದವನು ತನಗೆ ಒಳ್ಳೆಯದಾಗುವುದನ್ನೇ ಮಾಡದಿರುವಾಗ ಇನ್ನೊಬ್ಬನಿಗೆ ಹೇಗೆ ತಾನೇ ಒಳಿತನ್ನು ಮಾಡುತ್ತಾನೆ? ಆದುದರಿಂದ ಚಪಲನಾದವನು ಸರ್ವಕಾರ್ಯಗಳನ್ನೂ ನಾಶಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12136144a ಬ್ರವೀತಿ ಮಧುರಂ ಕಂ ಚಿತ್ಪ್ರಿಯೋ ಮೇ ಹ ಭವಾನಿತಿ।
12136144c ತನ್ಮಿಥ್ಯಾಕರಣಂ ಸರ್ವಂ ವಿಸ್ತರೇಣಾಪಿ ಮೇ ಶೃಣು।।

“ನನಗೆ ನೀನು ಅತ್ಯಂತ ಪ್ರಿಯನಾಗಿದ್ದೀಯೆ” ಎಂದು ನೀನು ಹೇಳುತ್ತಿರುವುದೂ ನೀನು ಮಾಡುತ್ತಿರುವ ಮೋಡಿ. ಇದು ಹೇಗೆಂದು ವಿಸ್ತಾರವಾಗಿ ನನ್ನಿಂದ ಕೇಳು.

12136145a ಕಾರಣಾತ್ಪ್ರಿಯತಾಮೇತಿ ದ್ವೇಷ್ಯೋ ಭವತಿ ಕಾರಣಾತ್।
12136145c ಅರ್ಥಾರ್ಥೀ ಜೀವಲೋಕೋಽಯಂ ನ ಕಶ್ಚಿತ್ಕಸ್ಯ ಚಿತ್ಪ್ರಿಯಃ।।

ಕಾರಣದಿಂದಲೇ ಪ್ರೀತಿಪಾತ್ರನಾಗುತ್ತಾನೆ ಮತ್ತು ಕಾರಣದಿಂದಲೇ ದ್ವೇಷವುಂಟಾಗುತ್ತದೆ. ಈ ಜೀವ-ಜಗತ್ತು ಸ್ವಾರ್ಥದಿಂದಲೇ ನಡೆಯುತ್ತದೆ. ಯಾರೂ ಯಾರ ಪ್ರಿಯನೂ ಅಲ್ಲ.

12136146a ಸಖ್ಯಂ ಸೋದರಯೋರ್ಭ್ರಾತ್ರೋರ್ದಂಪತ್ಯೋರ್ವಾ ಪರಸ್ಪರಮ್।
12136146c ಕಸ್ಯ ಚಿನ್ನಾಭಿಜಾನಾಮಿ ಪ್ರೀತಿಂ ನಿಷ್ಕಾರಣಾಮಿಹ।।

ಸಹೋದರರ ನಡುವಿನ ಸಖ್ಯ, ಮತ್ತು ಪತಿ-ಪತ್ನಿಯರ ಪರಸ್ಪರ ಪ್ರೇಮ ಇವೂ ಕೂಡ ಸ್ವಾರ್ಥವಶವೇ ಆಗಿವೆ. ಈ ಜಗತ್ತಿನಲ್ಲಿ ಯಾರ ಪ್ರೀತಿಯನ್ನೂ ನಿಷ್ಕಾರಣವೆಂದು ಯಾರೂ ತಿಳಿದುಕೊಳ್ಳುವುದಿಲ್ಲ.

12136147a ಯದ್ಯಪಿ ಭ್ರಾತರಃ ಕ್ರುದ್ಧಾ ಭಾರ್ಯಾ ವಾ ಕಾರಣಾಂತರೇ।
12136147c ಸ್ವಭಾವತಸ್ತೇ ಪ್ರೀಯಂತೇ ನೇತರಃ ಪ್ರೀಯತೇ ಜನಃ।।

ಕಾರಣಾಂತರದಿಂದ ಸಹೋದರನು ಅಥವಾ ಪತ್ನಿಯು ಕುಪಿತರಾಗಬಹುದು. ಆದರೂ ಅವರು ಸ್ವಭಾವತಃ ಪರಸ್ಪರರಲ್ಲಿ ಪ್ರೀತಿಮಾಡುವಂತೆ ಇತರರು ಅವರೊಡನೆ ಪ್ರೀತಿಮಾಡುವುದಿಲ್ಲ.

12136148a ಪ್ರಿಯೋ ಭವತಿ ದಾನೇನ ಪ್ರಿಯವಾದೇನ ಚಾಪರಃ।
12136148c ಮಂತ್ರಹೋಮಜಪೈರನ್ಯಃ ಕಾರ್ಯಾರ್ಥಂ ಪ್ರೀಯತೇ ಜನಃ।।

ಕೊಡುವುದರಿಂದ ಪ್ರಿಯರಾಗುತ್ತಾರೆ. ಪ್ರೀತಿಯ ಮಾತನ್ನಾಡುವುದರಿಂದ ಪ್ರಿಯರಾಗುತ್ತಾರೆ. ಅನ್ಯರು ಕಾರ್ಯಸಿದ್ಧಿಗಾಗಿ ಮಂತ್ರಹೋಮಜಪಗಳಿಂದ ಜನರನ್ನು ಪ್ರೀತಿಸುತ್ತಾರೆ.

12136149a ಉತ್ಪನ್ನೇ ಕಾರಣೇ ಪ್ರೀತಿರ್ನಾಸ್ತಿ ನೌ ಕಾರಣಾಂತರೇ।
12136149c ಪ್ರಧ್ವಸ್ತೇ ಕಾರಣಸ್ಥಾನೇ ಸಾ ಪ್ರೀತಿರ್ವಿನಿವರ್ತತೇ।।

ಯಾವುದೋ ಕಾರಣದಿಂದ ಉತ್ಪನ್ನವಾದ ಪ್ರೀತಿಯು ಆ ಕಾರಣವು ಮುಗಿದ ನಂತರ ಇರುವುದಿಲ್ಲ. ಆ ಕಾರಣದ ಸ್ಥಾನನಷ್ಟವಾದೊಡನೆಯೇ ಅದರಿಂದಾಗಿ ಮಾಡಿದ ಪ್ರೀತಿಯೂ ಕೂಡ ಸ್ವತಃ ನಿವೃತ್ತವಾಗಿಬಿಡುತ್ತದೆ.

12136150a ಕಿಂ ನು ತತ್ಕಾರಣಂ ಮನ್ಯೇ ಯೇನಾಹಂ ಭವತಃ ಪ್ರಿಯಃ।
12136150c ಅನ್ಯತ್ರಾಭ್ಯವಹಾರಾರ್ಥಾತ್ತತ್ರಾಪಿ ಚ ಬುಧಾ ವಯಮ್।।

ಇನ್ನು ನನ್ನನ್ನು ಆಹಾರವನ್ನಾಗಿ ತಿನ್ನುವುದರ ಹೊರತಾಗಿ ಬೇರೆ ಯಾವ ಕಾರಣವು ಉಳಿದುಕೊಂಡಿದೆಯೆಂದು ನಾನು ನಿನಗೆ ನನ್ನ ಮೇಲೆ ಪ್ರೀತಿಯಿಂದೆಯೆಂದು ತಿಳಿದುಕೊಳ್ಳಲಿ? ಈಗ ನಿನ್ನಲ್ಲಿರುವ ಸ್ವಾರ್ಥವನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ.

12136151a ಕಾಲೋ ಹೇತುಂ ವಿಕುರುತೇ ಸ್ವಾರ್ಥಸ್ತಮನುವರ್ತತೇ।
12136151c ಸ್ವಾರ್ಥಂ ಪ್ರಾಜ್ಞೋಽಭಿಜಾನಾತಿ ಪ್ರಾಜ್ಞಂ ಲೋಕೋಽನುವರ್ತತೇ।।

ಕಾಲವು ಕಾರಣದ ಸ್ವರೂಪವನ್ನು ಬದಲಾಯಿಸುತ್ತದೆ. ಮತ್ತು ಸ್ವಾರ್ಥವು ಆ ಕಾಲದ ಅನುಸರಣೆಯನ್ನು ಮಾಡುತ್ತಿರುತ್ತದೆ. ಪ್ರಾಜ್ಞರು ಆ ಸ್ವಾರ್ಥವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಲೋಕವು ಪ್ರಾಜ್ಞರನ್ನು ಅನುಸರಿಸುತ್ತದೆ.

12136152a ನ ತ್ವೀದೃಶಂ ತ್ವಯಾ ವಾಚ್ಯಂ ವಿದುಷಿ ಸ್ವಾರ್ಥಪಂಡಿತೇ।
12136152c ಅಕಾಲೇಽವಿಷಮಸ್ಥಸ್ಯ30 ಸ್ವಾರ್ಥಹೇತುರಯಂ ತವ।।

ಪ್ರಾಜ್ಞನಾದ ನಾನು ನಿನ್ನ ಈ ಸ್ವಾರ್ಥವನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಆದುದರಿಂದ ನೀನು ನನ್ನಲ್ಲಿ ಇಂತಹ ಮಾತುಗಳನ್ನಾಡಬಾರದು. ಕಷ್ಟದಲ್ಲಿ ಸಿಲುಕಿಕೊಂಡಿರದೇ ಇದ್ದರೂ ಅಕಾಲದಲ್ಲಿ ನೀನು ನನ್ನ ಮೇಲೆ ತೋರಿಸುವ ಈ ಪ್ರೀತಿಗೆ ಸ್ವಾರ್ಥವೇ ಕಾರಣವು.

12136153a ತಸ್ಮಾನ್ನಾಹಂ ಚಲೇ ಸ್ವಾರ್ಥಾತ್ಸುಸ್ಥಿತಃ ಸಂಧಿವಿಗ್ರಹೇ।
12136153c ಅಭ್ರಾಣಾಮಿವ ರೂಪಾಣಿ ವಿಕುರ್ವಂತಿ ಕ್ಷಣೇ ಕ್ಷಣೇ।।

ಆದುದರಿಂದ ನಾನೂ ಕೂಡ ನನ್ನ ಸ್ವಾರ್ಥ್ಯದಿಂದ ವಿಚಲಿತನಾಗುವುದಿಲ್ಲ. ಸಂಧಿ ಮತ್ತು ವಿಗ್ರಹಗಳ ವಿಷಯದಲ್ಲಿ ನನ್ನ ವಿಚಾರವು ಸುನಿಶ್ಚಿತವಾಗಿದೆ. ಮಿತ್ರತಾ ಮತ್ತು ಶತ್ರುತ್ವದ ರೂಪಗಳು ಮೋಡಗಳಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತವೆ.

12136154a ಅದ್ಯೈವ ಹಿ ರಿಪುರ್ಭೂತ್ವಾ ಪುನರದ್ಯೈವ ಸೌಹೃದಮ್।
12136154c ಪುನಶ್ಚ ರಿಪುರದ್ಯೈವ ಯುಕ್ತೀನಾಂ ಪಶ್ಯ ಚಾಪಲಮ್।।

ಇಂದೇ ನೀನು ನನ್ನ ಶತ್ರುವಾಗಿದ್ದು ಪುನಃ ಇಂದೇ ನನ್ನ ಮಿತ್ರನೂ ಆಗಬಲ್ಲೆ. ಮತ್ತು ಅದರ ನಂತರ ಇಂದೇ ಪುನಃ ನನ್ನ ಶತ್ರುವೂ ಆಗಬಲ್ಲೆ. ಈ ಸ್ವಾರ್ಥ್ಯದ ಸಂಬಂಧವು ಎಷ್ಟು ಚಂಚಲ ಎನ್ನುವುದನ್ನು ನೋಡು.

12136155a ಆಸೀತ್ತಾವತ್ತು ಮೈತ್ರೀ ನೌ ಯಾವದ್ಧೇತುರಭೂತ್ಪುರಾ।
12136155c ಸಾ ಗತಾ ಸಹ ತೇನೈವ ಕಾಲಯುಕ್ತೇನ ಹೇತುನಾ।।

ಮೊದಲು ಉಪಯುಕ್ತ ಕಾರಣವಿದ್ದಾಗ ನಮ್ಮಿಬ್ಬರ ನಡುವೆ ಮೈತ್ರಿಯುಂಟಾಗಿತ್ತು. ಆದರೆ ಕಾಲವು ಉಪಸ್ಥಿತ ಗೊಳಿಸಿದ್ದ ಆ ಕಾರಣವು ನಿವೃತ್ತವಾದುದರ ಜೊತೆಗೆ ನಮ್ಮ ಮೈತ್ರಿಯೂ ಹೊರಟು ಹೋಯಿತು.

12136156a ತ್ವಂ ಹಿ ಮೇಽತ್ಯಂತತಃ ಶತ್ರುಃ31 ಸಾಮರ್ಥ್ಯಾನ್ಮಿತ್ರತಾಂ ಗತಃ।
12136156c ತತ್ ಕೃತ್ಯಮಭಿನಿರ್ವೃತ್ತಂ ಪ್ರಕೃತಿಃ ಶತ್ರುತಾಂ ಗತಾ।।

ನನ್ನ ಅತ್ಯಂತ ಶತ್ರುವಾಗಿದ್ದ ನೀನು ವಿಶೇಷ ಪ್ರಯೋಜನದ ಕಾರಣದಿಂದ ನನ್ನ ಮಿತ್ರನಾಗಿದ್ದೆ. ಆ ಪ್ರಯೋಜನವು ಸಿದ್ಧಿಯಾದ ನಂತರ ನಿನ್ನ ಪ್ರಕೃತಿಯು ಪುನಃ ಸಹಜ ಶತ್ರುಭಾವವನ್ನೇ ಹೊಂದಿದೆ.

12136157a ಸೋಽಹಮೇವಂ ಪ್ರಣೀತಾನಿ ಜ್ಞಾತ್ವಾ ಶಾಸ್ತ್ರಾಣಿ ತತ್ತ್ವತಃ।
12136157c ಪ್ರವಿಶೇಯಂ ಕಥಂ ಪಾಶಂ ತ್ವತ್ಕೃತಂ ತದ್ವದಸ್ವ ಮೇ।।

ಇಲ್ಲದಿದ್ದರೆ ಶಾಸ್ತ್ರಗಳನ್ನು ತತ್ತ್ವತಃ ತಿಳಿದುಕೊಂಡಿದ್ದ ನಾನು ಹೇಗೆ ತಾನೇ ನಿನ್ನೊಡನೆ ಬಲೆಯನ್ನು ಪ್ರವೇಶಿಸುತ್ತಿದ್ದೆ? ನೀನೇ ನನಗೆ ಹೇಳು.

12136158a ತ್ವದ್ವೀರ್ಯೇಣ ವಿಮುಕ್ತೋಽಹಂ ಮದ್ವೀರ್ಯೇಣ ತಥಾ ಭವಾನ್।
12136158c ಅನ್ಯೋನ್ಯಾನುಗ್ರಹೇ ವೃತ್ತೇ ನಾಸ್ತಿ ಭೂಯಃ ಸಮಾಗಮಃ।।

ನಿನ್ನ ವೀರ್ಯದಿಂದ ನಾನು ವಿಮುಕ್ತನಾಗಿದ್ದೇನೆ. ನನ್ನ ವೀರ್ಯದಿಂದ ನೀನೂ ಮುಕ್ತನಾಗಿದ್ದೀಯೆ. ಅನ್ಯೋನ್ಯರಿಗೆ ಅನುಗ್ರಹ ಮಾಡಿ ಮುಗಿದಮೇಲೆ ಮತ್ತೆ ಒಂದಾಗುವುದು ಬೇಡ.

12136159a ತ್ವಂ ಹಿ ಸೌಮ್ಯ ಕೃತಾರ್ಥೋಽದ್ಯ ನಿರ್ವೃತ್ತಾರ್ಥಾಸ್ತಥಾ ವಯಮ್।
12136159c ನ ತೇಽಸ್ತ್ಯನ್ಯನ್ಮಯಾ ಕೃತ್ಯಂ ಕಿಂ ಚಿದನ್ಯತ್ರ ಭಕ್ಷಣಾತ್।।

ಸೌಮ್ಯ! ಇಂದು ನೀನು ಕೃತಾರ್ಥನಾಗಿದ್ದೀಯೆ. ಮತ್ತು ನನ್ನ ಉದ್ದೇಶವೂ ಕೂಡ ಸಿದ್ಧಿಯಾಯಿತು. ಆದುದರಿಂದ ನನ್ನನ್ನು ತಿನ್ನುವುದರ ಹೊರತಾಗಿ ಬೇರೆ ಯಾವ ಪ್ರಯೋಜನವೂ ನಿನಗೆ ಈಗ ಸಿದ್ಧಿಯಾಗುವಂಥಹುದಿಲ್ಲ.

12136160a ಅಹಮನ್ನಂ ಭವಾನ್ಭೋಕ್ತಾ ದುರ್ಬಲೋಽಹಂ ಭವಾನ್ಬಲೀ।
12136160c ನಾವಯೋರ್ವಿದ್ಯತೇ ಸಂಧಿರ್ನಿಯುಕ್ತೇ ವಿಷಮೇ ಬಲೇ।।

ನಾನು ಅನ್ನ ಮತ್ತು ತಿನ್ನುವವನು ನೀನು. ನಾನು ದುರ್ಬಲ ಮತ್ತು ನೀನು ಬಲಶಾಲಿ. ಬಲದಲ್ಲಿ ವ್ಯತ್ಯಾಸವಿರುವ ನಮ್ಮಿಬ್ಬರ ನಡುವೆ ಸಂಧಿಯು ಯುಕ್ತವಾದುದು ಎಂದು ಅನಿಸುವುದಿಲ್ಲ.

12136161a ಸಂಮನ್ಯೇಽಹಂ ತವ ಪ್ರಜ್ಞಾಂ ಯನ್ಮೋಕ್ಷಾತ್ಪ್ರತ್ಯನಂತರಮ್।
12136161c ಭಕ್ಷ್ಯಂ ಮೃಗಯಸೇ ನೂನಂ ಸುಖೋಪಾಯಮಸಂಶಯಮ್।।

ನಾನು ನಿನ್ನ ವಿಚಾರವನ್ನು ತಿಳಿದುಕೊಂಡುಬಿಟ್ಟಿದ್ದೇನೆ. ನಿಶ್ಚಯವಾಗಿಯೂ ನೀನು ಬಲೆಯಿಂದ ತಪ್ಪಿಸಿಕೊಂಡ ನಂತರದಿಂದ ನಿನಗೆ ಸಹಜವಾದ ಉಪಾಯ ಮತ್ತು ಪ್ರಯತ್ನಗಳಿಂದ ಆಹಾರವನ್ನು ಹುಡುಕುತ್ತಿದ್ದೀಯೆ.

12136162a ಭಕ್ಷ್ಯಾರ್ಥಮೇವ ಬದ್ಧಸ್ತ್ವಂ ಸ ಮುಕ್ತಃ ಪ್ರಸೃತಃ ಕ್ಷುಧಾ।
12136162c ಶಾಸ್ತ್ರಜ್ಞಮಭಿಸಂಧಾಯ ನೂನಂ ಭಕ್ಷಯಿತಾದ್ಯ ಮಾಮ್।।
12136163a ಜಾನಾಮಿ ಕ್ಷುಧಿತಂ ಹಿ ತ್ವಾಮಾಹಾರಸಮಯಶ್ಚ ತೇ।
12136163c ಸ ತ್ವಂ ಮಾಮಭಿಸಂಧಾಯ ಭಕ್ಷ್ಯಂ ಮೃಗಯಸೇ ಪುನಃ।।

ಆಹಾರವನ್ನು ಹುಡುಕುತ್ತಿರುವಾಗಲೇ ನೀನು ಆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ ಮತ್ತು ಅದರಿಂದ ಬಿಡುಗಡೆ ಹೊಂದಿ ಈಗ ಇನ್ನೂ ಹಸಿವೆಯಿಂದ ಪೀಡಿತನಾಗಿದ್ದೀಯೆ. ನಿಶ್ಚಯವಾಗಿಯೂ ಈಗ ನಿನ್ನ ಶಾಸ್ತ್ರೀಯ ಬುದ್ಧಿಯನ್ನು ಉಪಯೋಗಿಸಿ ನನ್ನನ್ನು ತಿಂದುಬಿಡುತ್ತೀಯೆ. ನಿನಗೆ ಹಸಿವೆಯಾಗಿದೆ ಮತ್ತು ಇದು ನಿನ್ನ ಭೋಜನದ ಸಮಯವೆಂದು ನನಗೆ ಗೊತ್ತಿದೆ. ಆದುದರಿಂದ ಪುನಃ ನನ್ನೊಂದಿಗೆ ಸಂಧಿಮಾಡಿಕೊಂಡು ನಿನಗಾಗಿ ಭೋಜನವನ್ನು ಹುಡುಕುತ್ತಿದ್ದೀಯೆ.

12136164a ಯಚ್ಚಾಪಿ ಪುತ್ರದಾರಂ ಸ್ವಂ ತತ್ಸಂನಿಸೃಜಸೇ ಮಯಿ।
12136164c ಶುಶ್ರೂಷಾಂ ನಾಮ ಮೇ ಕರ್ತುಂ ಸಖೇ ಮಮ ನ ತತ್ಕ್ಷಮಮ್।।

ಸಖೇ! ನಿನ್ನ ಹೆಂಡತಿ-ಮಕ್ಕಳೊಂದಿಗೆ ನನ್ನ ಶುಶ್ರೂಷೆಮಾಡುವೆಯೆಂದು ಏನು ನೀನು ಹೇಳುತ್ತಿರುವೆಯೋ ಅದು ನನ್ನ ಯೋಗದಲ್ಲಿಲ್ಲ.

12136165a ತ್ವಯಾ ಮಾಂ ಸಹಿತಂ ದೃಷ್ಟ್ವಾ ಪ್ರಿಯಾ ಭಾರ್ಯಾ ಸುತಾಶ್ಚ ಯೇ।
12136165c ಕಸ್ಮಾನ್ಮಾಂ ತೇ ನ ಖಾದೇಯುರ್ಹೃಷ್ಟಾಃ ಪ್ರಣಯಿನಸ್ತ್ವಯಿ।।

ನಿನ್ನಲ್ಲಿ ಪ್ರೀತಿಯನ್ನಿಟ್ಟಿರುವ ನಿನ್ನ ಪ್ರಿಯ ಪತ್ನಿ ಮತ್ತು ಮಕ್ಕಳು ನಿನ್ನೊಂದಿಗೆ ನನ್ನನ್ನು ನೋಡಿ ಹರ್ಷಿತರಾಗಿ ನನ್ನನ್ನು ತಿನ್ನದೇ ಹೇಗೆ ಇರುತ್ತಾರೆ?

12136166a ನಾಹಂ ತ್ವಯಾ ಸಮೇಷ್ಯಾಮಿ ವೃತ್ತೋ ಹೇತುಃ ಸಮಾಗಮೇ।
12136166c ಶಿವಂ ಧ್ಯಾಯಸ್ವ ಮೇಽತ್ರಸ್ಥಃ ಸುಕೃತಂ ಸ್ಮರ್ಯತೇ ಯದಿ।।

ಈಗ ನಾನು ನಿನ್ನೊಂದಿಗೆ ಬರುವುದಿಲ್ಲ. ನಮ್ಮಿಬ್ಬರ ಸಮಾಗಮದ ಉದ್ದೇಶವು ಪೂರ್ತಿಯಾಗಿ ಹೋಯಿತು. ಒಂದುವೇಳೆ ನಿನಗೆ ನನ್ನ ಶುಭ ಕರ್ಮದ ಸ್ಮರಣೆಯಿದ್ದರೆ ನೀನು ಸ್ವಯಂ ಸ್ವಸ್ಥನಾಗಿದ್ದುಕೊಂಡು ನನ್ನ ಕಲ್ಯಾಣದ ಕುರಿತೂ ಚಿಂತನೆಯನ್ನು ಮಾಡು.

12136167a ಶತ್ರೋರನ್ನಾದ್ಯಭೂತಃ ಸನ್ ಕ್ಲಿಷ್ಟಸ್ಯ ಕ್ಷುಧಿತಸ್ಯ ಚ।
12136167c ಭಕ್ಷ್ಯಂ ಮೃಗಯಮಾಣಸ್ಯ ಕಃ ಪ್ರಾಜ್ಞೋ ವಿಷಯಂ ವ್ರಜೇತ್।।

ದುಷ್ಟನಾಗಿರುವ, ಕಷ್ಟದಲ್ಲಿ ಸಿಲುಕಿರುವ, ಹಸಿದಿರುವ ಮತ್ತು ಆಹಾರವನ್ನು ಹುಡುಕುತ್ತಿರುವ ಮತ್ತು ತನ್ನ ಶತ್ರುವಾಗಿರುವವನ ಎದುರಿಗೆ ಬುದ್ಧಿವಂತನಾದವನು ಹೇಗೆ ತಾನೇ ಹೋಗುತ್ತಾನೆ?

12136168a ಸ್ವಸ್ತಿ ತೇಽಸ್ತು ಗಮಿಷ್ಯಾಮಿ ದೂರಾದಪಿ ತವೋದ್ವಿಜೇ।
12136168c ನಾಹಂ ತ್ವಯಾ ಸಮೇಷ್ಯಾಮಿ ನಿರ್ವೃತೋ ಭವ ಲೋಮಶ32।।

ಲೋಮಶ! ನಿನಗೆ ಮಂಗಳವಾಗಲಿ. ನಾನೀಗ ಹೋಗುತ್ತೇನೆ. ದೂರದಿಂದಲೂ ನನಗೆ ನಿನ್ನ ಭಯವಾಗುತ್ತಿದೆ. ನಾನು ನಿನ್ನೊಡನೆ ಬರುವುದಿಲ್ಲ. ನೀನು ನಿರ್ವೃತ್ತನಾಗು.

12136169a ಬಲವತ್ಸಂನಿಕರ್ಷೋ ಹಿ ನ ಕದಾ ಚಿತ್ ಪ್ರಶಸ್ಯತೇ। 12136169c 33ಪ್ರಶಾಂತಾದಪಿ ಮೇ ಪ್ರಾಜ್ಞ ಭೇತವ್ಯಂ ಬಲಿನಃ ಸದಾ।।

ದುರ್ಬಲನಿಗೆ ಬಲಶಾಲಿಯ ಹತ್ತಿರ ಇರುವುದು ಎಂದೂ ಚೆನ್ನಾಗಿರುವುದಿಲ್ಲ. ಪ್ರಾಜ್ಞ! ಪ್ರಶಾಂತನಾಗಿದ್ದರೂ ಬಲಶಾಲಿಯಿಂದ ನನಗೆ ಸದಾ ಭಯವಾಗುತ್ತದೆ.

12136170a ಯದಿ ತ್ವರ್ಥೇನ ಮೇ ಕಾರ್ಯಂ ಬ್ರೂಹಿ ಕಿಂ ಕರವಾಣಿ ತೇ।
12136170c ಕಾಮಂ ಸರ್ವಂ ಪ್ರದಾಸ್ಯಾಮಿ ನ ತ್ವಾತ್ಮಾನಂ ಕದಾ ಚನ।।

ನಿನಗೆ ನನ್ನಿಂದ ಏನಾದರೂ ಆಗಬೇಕಾದರೆ ಹೇಳು ನಿನಗೆ ನಾನು ಏನು ಮಾಡಬೇಕು? ಬಯಸಿದ ಎಲ್ಲವನ್ನೂ ಕೊಡುತ್ತೇನೆ. ಆದರೆ ನನ್ನ ಪ್ರಾಣವನ್ನು ಎಂದೂ ಕೊಡುವುದಿಲ್ಲ.

12136171a ಆತ್ಮಾರ್ಥೇ ಸಂತತಿಸ್ತ್ಯಾಜ್ಯಾ ರಾಜ್ಯಂ ರತ್ನಂ ಧನಂ ತಥಾ।
12136171c ಅಪಿ ಸರ್ವಸ್ವಮುತ್ಸೃಜ್ಯ ರಕ್ಷೇದಾತ್ಮಾನಮಾತ್ಮನಾ।।

ತನ್ನ ರಕ್ಷಣೆಗಾಗಿ ಸಂತತಿ, ರಾಜ್ಯ, ರತ್ನ, ಧನ ಎಲ್ಲವನ್ನೂ ತ್ಯಜಿಸಬಹುದು. ಆದರೆ ತನ್ನ ಸರ್ವಸ್ವವನ್ನು ತ್ಯಜಿಸಿದರೂ ಸ್ವಯಂ ತನ್ನ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

12136172a ಐಶ್ವರ್ಯಧನರತ್ನಾನಾಂ ಪ್ರತ್ಯಮಿತ್ರೇಽಪಿ ತಿಷ್ಠತಾಮ್।
12136172c ದೃಷ್ಟಾ ಹಿ ಪುನರಾವೃತ್ತಿರ್ಜೀವತಾಮಿತಿ ನಃ ಶ್ರುತಮ್।।

ಜೀವಂತವಾಗಿದ್ದರೆ ಶತ್ರುವು ತನ್ನ ಅಧಿಕಾರದಕ್ಕೆ ತೆಗೆದುಕೊಂಡಿರುವ ಐಶ್ವರ್ಯ, ಧನ-ರತ್ನಗಳನ್ನು ಪುನಃ ಹಿಂತೆಗೆದುಕೊಳ್ಳಬಹುದು ಎಂದು ಕೇಳಿದ್ದೇವೆ. ಇದನ್ನು ಪ್ರತ್ಯಕ್ಷವಾಗಿ ನೋಡಿದ್ದೇವೆ ಕೂಡ.

12136173a ನ ತ್ವಾತ್ಮನಃ ಸಂಪ್ರದಾನಂ ಧನರತ್ನವದಿಷ್ಯತೇ।
12136173c ಆತ್ಮಾ ತು ಸರ್ವತೋ ರಕ್ಷ್ಯೋ ದಾರೈರಪಿ ಧನೈರಪಿ।।

ಧನ-ರತ್ನಗಳಂತೆ ತನ್ನ ಪ್ರಾಣವನ್ನೂ ಶತ್ರುವಿಗೆ ಕೊಡುವುದು ಸರಿಯಲ್ಲ. ಧನ-ರತ್ನಗಳನ್ನು ನೀಡಿಯಾದರೂ ತನ್ನ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

12136174a ಆತ್ಮರಕ್ಷಿತತಂತ್ರಾಣಾಂ ಸುಪರೀಕ್ಷಿತಕಾರಿಣಾಮ್।
12136174c ಆಪದೋ ನೋಪಪದ್ಯಂತೇ ಪುರುಷಾಣಾಂ ಸ್ವದೋಷಜಾಃ।।

ಆತ್ಮರಕ್ಷಣೆಯಲ್ಲಿ ತತ್ಪರನಾಗಿರುವ ಮತ್ತು ಚೆನ್ನಾಗಿ ಪರೀಕ್ಷಾಪೂರ್ವಕ ನಿರ್ಣಯಿಸಿ ಕಾರ್ಯಮಾಡುವವನಿಗೆ ತನ್ನದೇ ದೋಷದಿಂದ ಉತ್ಪನ್ನವಾಗಬಹುದಾದ ಆಪತ್ತುಗಳು ಪ್ರಾಪ್ತವಾಗುವುದಿಲ್ಲ.

12136175a ಶತ್ರೂನ್ಸಮ್ಯಗ್ವಿಜಾನಂತಿ ದುರ್ಬಲಾ ಯೇ ಬಲೀಯಸಃ।
12136175c ತೇಷಾಂ ನ ಚಾಲ್ಯತೇ ಬುದ್ಧಿರಾತ್ಮಾರ್ಥಂ ಕೃತನಿಶ್ಚಯಾ।।

ತನ್ನ ಬಲಶಾಲೀ ಶತ್ರುವನ್ನು ಚೆನ್ನಾಗಿ ತಿಳಿದುಕೊಂಡಿರುವ ದುರ್ಬಲನ ಶಾಸ್ತ್ರಾರ್ಥಜ್ಞಾನದಿಂದ ಸ್ಥಿರವಾಗಿರುವ ಬುದ್ಧಿಯು ಎಂದೂ ವಿಚಲಿತವಾಗುವುದಿಲ್ಲ.”

12136176a ಇತ್ಯಭಿವ್ಯಕ್ತಮೇವಾಸೌ ಪಲಿತೇನಾವಭರ್ತ್ಸಿತಃ।
12136176c ಮಾರ್ಜಾರೋ ವ್ರೀಡಿತೋ ಭೂತ್ವಾ ಮೂಷಕಂ ವಾಕ್ಯಮಬ್ರವೀತ್।।

ಪಲಿತನು ಈ ರೀತಿ ಸ್ವಷ್ಟರೂಪದಲ್ಲಿ ತನ್ನ ಕಟ್ಟುನಿಟ್ಟಿನ ಅಭಿವ್ಯಕ್ತವನ್ನು ಹೇಳಲು ನಾಚಿಕೊಂಡ ಬೆಕ್ಕು ಇಲಿಗೆ ಹೀಗೆ ಹೇಳಿತು:

12136177a 34ಸಂಮನ್ಯೇಽಹಂ ತವ ಪ್ರಜ್ಞಾಂ ಯಸ್ತ್ವಂ ಮಮ ಹಿತೇ ರತಃ। 12136177c ಉಕ್ತವಾನರ್ಥತತ್ತ್ವೇನ ಮಯಾ ಸಂಭಿನ್ನದರ್ಶನಃ।।

“ನನ್ನ ಹಿತದಲ್ಲಿಯೇ ನಿರತನಾಗಿರುವ ನಿನ್ನ ಪ್ರಜ್ಞೆಯನ್ನು ನಾನು ಸಮ್ಮಾನಿಸುತ್ತೇನೆ. ನೀನು ಯಥಾರ್ಥರೂಪದಲ್ಲಿ ಶಾಸ್ತ್ರಗಳ ಸಾರವನ್ನೇ ಹೇಳಿದ್ದೀಯೆ. ನನ್ನ ಮತ್ತು ನಿನ್ನ ವಿಚಾರಗಳಲ್ಲಿ ಸಂಪೂರ್ಣ ಹೊಂದಾಣಿಕೆಯಿದೆ.

12136178a ನ ತು ಮಾಮನ್ಯಥಾ ಸಾಧೋ ತ್ವಂ ವಿಜ್ಞಾತುಮಿಹಾರ್ಹಸಿ।
12136178c ಪ್ರಾಣಪ್ರದಾನಜಂ ತ್ವತ್ತೋ ಮಮ ಸೌಹೃದಮಾಗತಮ್।।

ಸಾಧೋ! ಆದರೆ ನೀನು ನನ್ನನ್ನು ತಪ್ಪುತಿಳಿದುಕೊಳ್ಳಬಾರದು. ನಾನು ನಿನಗಿಂತ ಭಿನ್ನವಾಗಿಲ್ಲ. ನನ್ನ ಪ್ರಾಣವನ್ನು ನೀಡಿದ ನಿನ್ನ ಮೇಲೆ ನನಗೆ ಅತ್ಯಂತ ಸೌಹಾರ್ದತೆಯುಂಟಾಗಿದೆ.

12136179a ಧರ್ಮಜ್ಞೋಽಸ್ಮಿ ಗುಣಜ್ಞೋಽಸ್ಮಿ ಕೃತಜ್ಞೋಽಸ್ಮಿ ವಿಶೇಷತಃ।
12136179c ಮಿತ್ರೇಷು ವತ್ಸಲಶ್ಚಾಸ್ಮಿ ತ್ವದ್ವಿಧೇಷು35 ವಿಶೇಷತಃ।।

ನಾನು ಧರ್ಮವನ್ನು ತಿಳಿದುಕೊಂಡಿದ್ದೇನೆ ಮತ್ತು ಗುಣಗಳನ್ನೂ ತಿಳಿದುಕೊಂಡಿದ್ದೇನೆ. ವಿಶೇಷವಾಗಿ ಕೃತಜ್ಞನೂ ಆಗಿದ್ದೇನೆ. ಮಿತ್ರರಲ್ಲಿ, ಅದರಲ್ಲೂ ವಿಶೇಷವಾಗಿ ನಿನ್ನಂಥವರಲ್ಲಿ ವಾತ್ಸಲ್ಯವುಳ್ಳವನೂ ಆಗಿದ್ದೇನೆ.

12136180a ತನ್ಮಾಮೇವಂಗತೇ ಸಾಧೋ ನ ಯಾವಯಿತುಮರ್ಹಸಿ।
12136180c ತ್ವಯಾ ಹಿ ಯಾವ್ಯಮಾನೋಽಹಂ ಪ್ರಾಣಾನ್ಜಹ್ಯಾಂ ಸಬಾಂಧವಃ।।

ಸಾಧೋ! ಆದುದರಿಂದ ನೀನು ಮೊದಲಿನಂತೆಯೇ ಮತ್ತೊಮ್ಮೆ ನನ್ನೊಡನೆ ವರ್ತಿಸು, ನನ್ನೊಟ್ಟಿಗೇ ಬಾ. ಬೇಕಾದರೆ ನಾನು ಬಾಂಧವರೊಂದಿಗೆ ನಿನಗಾಗಿ ನನ್ನ ಪ್ರಾಣವನ್ನೂ ತ್ಯಜಿಸಬಲ್ಲೆನು.

12136181a ಧಿಕ್ ಶಬ್ದೋ ಹಿ36 ಬುಧೈರ್ದೃಷ್ಟೋ ಮದ್ವಿಧೇಷು ಮನಸ್ವಿಷು।
12136181c ಮರಣಂ ಧರ್ಮತತ್ತ್ವಜ್ಞ ನ ಮಾಂ ಶಂಕಿತುಮರ್ಹಸಿ।।

ಧರ್ಮತತ್ತ್ವಜ್ಞ! ವಿದ್ವಾಂಸರು ನನ್ನಂಥಹ ಮನಸ್ವಿಗಳಿಗೆ ಧಿಕ್ಕಾರ ಎಂಬ ಶಬ್ಧವನ್ನೇ ಬಳಸುತ್ತಾರೆ. ನನ್ನಿಂದ ನಿನಗೆ ಮರಣವಾಗುತ್ತದೆಯೆಂದು ನೀನು ಶಂಕಿಸಬಾರದು.”

12136182a ಇತಿ ಸಂಸ್ತೂಯಮಾನೋ ಹಿ ಮಾರ್ಜಾರೇಣ ಸ ಮೂಷಕಃ।
12136182c ಮನಸಾ ಭಾವಗಂಭೀರಂ ಮಾರ್ಜಾರಂ ವಾಕ್ಯಮಬ್ರವೀತ್।।

ಮಾರ್ಜಾರನಿಂದ ಈ ರೀತಿ ಸಂಸ್ತುತಿಸಲ್ಪಟ್ಟರೂ ಇಲಿಯು ಮನಸ್ಸಿನಲ್ಲಿ ಗಂಭೀರಭಾವವನ್ನು ತಾಳಿ ಬೆಕ್ಕಿಗೆ ಹೇಳಿತು:

12136183a ಸಾಧುರ್ಭವಾನ್ ಶ್ರುತಾರ್ಥೋಽಸ್ಮಿ ಪ್ರೀಯತೇ ನ ಚ ವಿಶ್ವಸೇ।
12136183c ಸಂಸ್ತವೈರ್ವಾ ಧನೌಘೈರ್ವಾ ನಾಹಂ ಶಕ್ಯಃ ಪುನಸ್ತ್ವಯಾ।।

“ಅಯ್ಯಾ! ನೀನು ಅತ್ಯಂತ ಸಾಧುಸ್ವಭಾವದವನು. ನಿನ್ನ ಈ ಮಾತನ್ನು ನಾನು ಕೇಳಿದೆ. ಅದರಿಂದ ನಾನು ಪ್ರಸನ್ನನಾಗಿದ್ದೇನೆ. ಆದರೆ ನಿನ್ನ ಮೇಲೆ ವಿಶ್ವಾಸವನ್ನಿಡಲಾರೆ. ನೀನು ನನ್ನನ್ನು ಎಷ್ಟೇ ಸ್ತುತಿಸಿದರೂ ಧನವನ್ನಿತ್ತರೂ ನಾನು ಈಗ ನಿನ್ನೊಂದಿಗೆ ಒಡನಾಡಲಾರೆ.

12136184a ನ ಹ್ಯಮಿತ್ರವಶಂ ಯಾಂತಿ ಪ್ರಾಜ್ಞಾ ನಿಷ್ಕಾರಣಂ ಸಖೇ।
12136184c ಅಸ್ಮಿನ್ನರ್ಥೇ ಚ ಗಾಥೇ ದ್ವೇ ನಿಬೋಧೋಶನಸಾ ಕೃತೇ।।

ಸಖೇ! ಪ್ರಾಜ್ಞನಾದವನು ನಿಷ್ಕಾರಣವಾಗಿ ತನ್ನ ಶತ್ರುವಿನ ವಶಕ್ಕೆ ಬರುವುದಿಲ್ಲ. ಈ ವಿಷಯದಲ್ಲಿ ಶುಕ್ರಾಚಾರ್ಯನು ಎರಡು ಗಾಥೆಗಳನ್ನು ಹೇಳಿದ್ದಾನೆ.

12136185a ಶತ್ರುಸಾಧಾರಣೇ ಕೃತ್ಯೇ ಕೃತ್ವಾ ಸಂಧಿಂ ಬಲೀಯಸಾ।
12136185c ಸಮಾಹಿತಶ್ಚರೇದ್ಯುಕ್ತ್ಯಾ ಕೃತಾರ್ಥಶ್ಚ ನ ವಿಶ್ವಸೇತ್।।

ತಾನು ಮತ್ತು ತನ್ನ ಶತ್ರುವು ಒಟ್ಟಿಗೇ ಒಂದೇ ಸಂಕಟದಲ್ಲಿ ಸಿಲುಕಿಕೊಂಡಾಗ ನಿರ್ಬಲನು ಸಬಲ ಶತ್ರುವಿನೊಂದಿಗೆ ಕೂಡಿ ಅತ್ಯಂತ ಸಾವಧಾನದಿಂದ ಮತ್ತು ಯುಕ್ತಿಯಿಂದ ತನ್ನ ಕೆಲಸವನ್ನು ಪೂರೈಸಿಕೊಳ್ಳಬೇಕು ಮತ್ತು ಕೆಲಸವಾದ ನಂತರ ಆ ಶತ್ರುವಿನ ಮೇಲೆ ವಿಶ್ವಾಸವನ್ನಿಡಬಾರದು.

12136186a 37ತಸ್ಮಾತ್ಸರ್ವಾಸ್ವವಸ್ಥಾಸು ರಕ್ಷೇಜ್ಜೀವಿತಮಾತ್ಮನಃ। 12136186c ದ್ರವ್ಯಾಣಿ ಸಂತತಿಶ್ಚೈವ ಸರ್ವಂ ಭವತಿ ಜೀವತಃ।।

ಆದುದರಿಂದ ಸರ್ವಾವಸ್ಥೆಗಳಲ್ಲಿಯೂ ತನ್ನ ಜೀವವನ್ನು ರಕ್ಷಿಸಿಕೊಳ್ಳಬೇಕು. ಏಕೆಂದರೆ ಜೀವವೊಂದಿದ್ದರೆ ಸಂಪತ್ತು ಮತ್ತು ಸಂತತಿ ಎಲ್ಲವೂ ದೊರೆಯಬಹುದು.

12136187a ಸಂಕ್ಷೇಪೋ ನೀತಿಶಾಸ್ತ್ರಾಣಾಮವಿಶ್ವಾಸಃ ಪರೋ ಮತಃ।
12136187c ನೃಷು ತಸ್ಮಾದವಿಶ್ವಾಸಃ ಪುಷ್ಕಲಂ ಹಿತಮಾತ್ಮನಃ।।

ನೀತಿಶಾಸ್ತ್ರಗಳನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಯಾರೊಡನೆಯೂ ವಿಶ್ವಾಸವನ್ನಿಡದೇ ಇರುವುದೇ ಉತ್ತಮವು. ಆದುದರಿಂದ ಇನ್ನೊಬ್ಬರೊಂದಿಗೆ ವಿಶ್ವಾಸವನ್ನಿಡದೇ ಇರುವುದೇ ತನಗೆ ಪುಷ್ಕಲ ಹಿತವನ್ನೀಯುತ್ತದೆ.

12136188a ವಧ್ಯಂತೇ ನ ಹ್ಯವಿಶ್ವಸ್ತಾಃ ಶತ್ರುಭಿರ್ದುರ್ಬಲಾ ಅಪಿ।
12136188c ವಿಶ್ವಸ್ತಾಸ್ತ್ವಾಶು ವಧ್ಯಂತೇ ಬಲವಂತೋಽಪಿ ದುರ್ಬಲೈಃ।।

ವಿಶ್ವಾಸವನ್ನಿಡದೇ ಸಾವಧಾನದಿಂದಿರುವವರು ದುರ್ಬಲರಾದರೂ ಶತ್ರುವಿನಿಂದ ಹತರಾಗುವುದಿಲ್ಲ. ಆದರೆ ವಿಶ್ವಾಸವಿಟ್ಟಿರುವ ಬಲವಂತನನ್ನು ದುರ್ಬಲರೂ ವಧಿಸಬಲ್ಲರು.

12136189a ತ್ವದ್ವಿಧೇಭ್ಯೋ ಮಯಾ ಹ್ಯಾತ್ಮಾ ರಕ್ಷ್ಯೋ ಮಾರ್ಜಾರ ಸರ್ವದಾ।
12136189c ರಕ್ಷ ತ್ವಮಪಿ ಚಾತ್ಮಾನಂ ಚಂಡಾಲಾಜ್ಜಾತಿಕಿಲ್ಬಿಷಾತ್।।

ಬೆಕ್ಕೇ! ನಿನ್ನಂಥವರಿಂದ ಸದಾ ನನ್ನನ್ನು ರಕ್ಷಿಸಿಕೊಳ್ಳಬೇಕು. ಮತ್ತು ನೀನೂ ಕೂಡ ನಿನ್ನ ಜನ್ಮಜಾತ ಶತ್ರು ಚಂಡಾಲನಿಂದ ನಿನ್ನನ್ನು ರಕ್ಷಿಸಿಕೋ.”

12136190a ಸ ತಸ್ಯ ಬ್ರುವತಸ್ತ್ವೇವಂ ಸಂತ್ರಾಸಾಜ್ಜಾತಸಾಧ್ವಸಃ।
12136190c ಸ್ವಬಿಲಂ ಹಿ38 ಜವೇನಾಶು ಮಾರ್ಜಾರಃ ಪ್ರಯಯೌ ತತಃ।।

ಇಲಿಯು ಹೀಗೆ ಹೇಳುತ್ತಿದ್ದಾಗ ಚಂಡಾಲನ ಹೆಸರನ್ನು ಕೇಳಿದ ಕೂಡಲೇ ಬೆಕ್ಕು ಭಯಭೀತಗೊಂಡಿತು ಮತ್ತು ವೇಗದಿಂದ ತನ್ನ ಮನೆಯೆಡೆಗೆ ಓಡಿ ಹೋಯಿತು.

12136191a ತತಃ ಶಾಸ್ತ್ರಾರ್ಥತತ್ತ್ವಜ್ಞೋ ಬುದ್ಧಿಸಾಮರ್ಥ್ಯಮಾತ್ಮನಃ।
12136191c ವಿಶ್ರಾವ್ಯ ಪಲಿತಃ ಪ್ರಾಜ್ಞೋ ಬಿಲಮನ್ಯಜ್ಜಗಾಮ ಹ।।

ಅನಂತರ ಶಾಸ್ತ್ರಾರ್ಥತತ್ತ್ವಜ್ಞ ಪ್ರಾಜ್ಞ ಪಲಿತನು ತನ್ನ ಬುದ್ಧಿಸಾಮಾರ್ಥ್ಯವನ್ನು ತೋರಿಸಿ ತನ್ನ ಬಿಲಕ್ಕೆ ಹೊರಟುಹೋಯಿತು.

12136192a ಏವಂ ಪ್ರಜ್ಞಾವತಾ ಬುದ್ಧ್ಯಾ ದುರ್ಬಲೇನ ಮಹಾಬಲಾಃ।
12136192c ಏಕೇನ ಬಹವೋಽಮಿತ್ರಾಃ ಪಲಿತೇನಾಭಿಸಂಧಿತಾಃ।।
12136193a ಅರಿಣಾಪಿ ಸಮರ್ಥೇನ ಸಂಧಿಂ ಕುರ್ವೀತ ಪಂಡಿತಃ।
12136193c ಮೂಷಕಶ್ಚ ಬಿಡಾಲಶ್ಚ ಮುಕ್ತಾವನ್ಯೋನ್ಯಸಂಶ್ರಯಾತ್।।

ಈ ರೀತಿ ದುರ್ಬಲನೂ ಮತ್ತು ಒಬ್ಬಂಟಿಗನೂ ಆಗಿದ್ದೂ ಬುದ್ಧಿವಂತ ಪಲಿತ ಇಲಿಯು ತನ್ನ ಬುದ್ಧಿ ಬಲದಿಂದ ತನಗಿಂತಲೂ ಹೆಚ್ಚು ಪ್ರಬಲವಾಗಿದ್ದ ಶತ್ರುಗಳನ್ನು ದೂರಮಾಡಿಕೊಂಡಿತು. ಆದುದರಿಂದ ಆಪತ್ತಿನಲ್ಲಿ ಪಂಡಿತನು ಶತ್ರುವಿನೊಂದಿಗೂ ಸಂಧಿಯನ್ನು ಮಾಡಿಕೊಳ್ಳಬೇಕು. ಇಲಿ ಮತ್ತು ಬೆಕ್ಕು ಅನ್ಯೋನ್ಯರನ್ನು ಆಶ್ರಯಿಸಿ ಆಪತ್ತಿನಿಂದ ಮುಕ್ತರಾದರು.

12136194a ಇತ್ಯೇಷ ಕ್ಷತ್ರಧರ್ಮಸ್ಯ ಮಯಾ ಮಾರ್ಗೋಽನುದರ್ಶಿತಃ।
12136194c ವಿಸ್ತರೇಣ ಮಹೀಪಾಲ ಸಂಕ್ಷೇಪೇಣ ಪುನಃ ಶೃಣು।।

ಮಹೀಪಾಲ! ಈ ದೃಷ್ಟಾಂತದಿಂದ ನಾನು ನಿನಗೆ ಕ್ಷತ್ರಧರ್ಮದ ಮಾರ್ಗವನ್ನು ವಿಸ್ತಾರವಾಗಿ ತೋರಿಸಿಕೊಟ್ಟಿದ್ದೇನೆ. ಈಗ ಸಂಕ್ಷಿಪ್ತವಾಗಿ ಪುನಃ ಕೇಳು.

12136195a ಅನ್ಯೋನ್ಯಕೃತವೈರೌ ತು ಚಕ್ರತುಃ ಪ್ರೀತಿಮುತ್ತಮಾಮ್।
12136195c ಅನ್ಯೋನ್ಯಮಭಿಸಂಧಾತುಮಭೂಚ್ಚೈವ ತಯೋರ್ಮತಿಃ।।

ಬೆಕ್ಕು ಮತ್ತು ಇಲಿ ಅನ್ಯೋನ್ಯರ ಬದ್ಧವೈರಿಗಳಾಗಿದ್ದರೂ ಉತ್ತಮ ಪ್ರೀತಿಯಿಂದಲೇ ನಡೆದುಕೊಂಡರು. ಅನ್ಯೋನ್ಯರೊಡನೆ ಸಂಧಿಮಾಡಿಕೊಳ್ಳುವ ಬುದ್ಧಿಯು ಅವರಲ್ಲಿ ಹುಟ್ಟಿಕೊಂಡಿತು.

12136196a ತತ್ರ ಪ್ರಾಜ್ಞೋಽಭಿಸಂಧತ್ತೇ ಸಮ್ಯಗ್ಬುದ್ಧಿಬಲಾಶ್ರಯಾತ್।
12136196c ಅಭಿಸಂಧೀಯತೇ ಪ್ರಾಜ್ಞಃ ಪ್ರಮಾದಾದಪಿ ಚಾಬುಧೈಃ।।

ಇಂತಹ ಸಮಯದಲ್ಲಿ ಪ್ರಾಜ್ಞನಾದವನು ಉತ್ತಮ ಬುದ್ಧಿಬಲದ ಸಹಾಯದಿಂದ ಶತ್ರುವನ್ನು ದೂರಮಾಡಿಕೊಳ್ಳಬೇಕು. ಇದೇ ರೀತಿಯಲ್ಲಿ ಪ್ರಾಜ್ಞನು ಸಾವಧಾನದಿಂದ ಇಲ್ಲದಿದ್ದರೆ ಇನ್ನೊಬ್ಬ ಬುದ್ಧಿವಂತನಿಂದ ನಾಶಹೊಂದುತ್ತಾನೆ.

12136197a ತಸ್ಮಾದಭೀತವದ್ಭೀತೋ ವಿಶ್ವಸ್ತವದವಿಶ್ವಸನ್।
12136197c ನ ಹ್ಯಪ್ರಮತ್ತಶ್ಚಲತಿ ಚಲಿತೋ ವಾ ವಿನಶ್ಯತಿ।।

ಆದುದರಿಂದ ಭಯಭೀತನಾಗಿದ್ದರೂ ನಿರ್ಭಯನಂತೆ ಮತ್ತು ವಿಶ್ವಾಸವಿಲ್ಲದಿದ್ದರೂ ವಿಶ್ವಾಸವನ್ನಿಟ್ಟಿರುವವನಂತೆ ಇರಬೇಕು. ಎಂದೂ ಅಸಾವಧಾನತೆಯಿಂದ ನಡೆಯಬಾರದು. ಹಾಗಿದ್ದರೆ ನಷ್ಟವನ್ನು ಹೊಂದುತ್ತಾನೆ.

12136198a ಕಾಲೇನ ರಿಪುಣಾ ಸಂಧಿಃ ಕಾಲೇ ಮಿತ್ರೇಣ ವಿಗ್ರಹಃ।
12136198c ಕಾರ್ಯ ಇತ್ಯೇವ ತತ್ತ್ವಜ್ಞಾಃ39 ಪ್ರಾಹುರ್ನಿತ್ಯಂ ಯುಧಿಷ್ಠಿರ।।

ಯುಧಿಷ್ಠಿರ! ಕಾಲಕ್ಕನುಗುಣವಾಗಿ ಶತ್ರುವಿನೊಂದಿಗೂ ಸಂಧಿಯನ್ನು ಮಾಡಿಕೊಳ್ಳಬೇಕು ಮತ್ತು ಮಿತ್ರನೊಂದಿಗೂ ಯುದ್ಧ ಮಾಡಬೇಕು. ತತ್ತ್ವಜ್ಞರು ಸದಾ ಇದನ್ನೇ ಹೇಳುತ್ತಾರೆ.

12136199a ಏವಂ ಮತ್ವಾ ಮಹಾರಾಜ ಶಾಸ್ತ್ರಾರ್ಥಮಭಿಗಮ್ಯ ಚ।
12136199c ಅಭಿಯುಕ್ತೋಽಪ್ರಮತ್ತಶ್ಚ ಪ್ರಾಗ್ಭಯಾದ್ಭೀತವಚ್ಚರೇತ್।।

ಮಹಾರಾಜ! ಹೀಗೆ ಶಾಸ್ತ್ರಾರ್ಥವನ್ನು ಮನದಟ್ಟುಮಾಡಿಕೊಂಡು ಅಪ್ರಮತ್ತನಾಗಿದ್ದುಕೊಂಡು ಆಪತ್ತು ಬರುವ ಮೊದಲೇ ಭಯವಿಲ್ಲದಿದ್ದರೂ ಭಯಭೀತನಾದಂತೆ ವರ್ತಿಸಬೇಕು.

12136200a ಭೀತವತ್ಸಂವಿಧಿಃ ಕಾರ್ಯಃ ಪ್ರತಿಸಂಧಿಸ್ತಥೈವ ಚ।
12136200c ಭಯಾದುತ್ಪದ್ಯತೇ ಬುದ್ಧಿರಪ್ರಮತ್ತಾಭಿಯೋಗಜಾ।।

ಬಲಶಾಲೀ ಶತ್ರುವಿನ ಮುಂದೆ ಭಯಗೊಂಡವನಂತೆ ಇರಬೇಕು. ಅದೇ ರೀತಿಯಲ್ಲಿ ಅವನೊಂದಿಗೆ ಸಂಧಿಯನ್ನೂ ಮಾಡಿಕೊಳ್ಳಬೇಕು. ಸಾವಧಾನದಿಂದಿರುವ ಪುರುಷನು ಉದ್ಯೋಗಶೀಲನಾಗಿದ್ದರೆ ಸ್ವಯಂ ಅವನಲ್ಲಿ ಸಂಕಟದಿಂದ ಪಾರಾಗುವ ಬುದ್ಧಿಯು ಉತ್ಪನ್ನವಾಗುತ್ತದೆ.

12136201a ನ ಭಯಂ ವಿದ್ಯತೇ ರಾಜನ್ ಭೀತಸ್ಯಾನಾಗತೇ ಭಯೇ।
12136201c ಅಭೀತಸ್ಯ ತು ವಿಸ್ರಂಭಾತ್ಸುಮಹಜ್ಜಾಯತೇ ಭಯಮ್।।

ರಾಜನ್! ಭಯವುಂಟಾಗುವುದಕ್ಕೆ ಮೊದಲೇ ಅದರ ಕುರಿತು ಸಶಂಕಿತನಾಗಿರುವವನಿಗೆ ಪ್ರಾಯಶಃ ಭಯದ ಸನ್ನಿವೇಶವೇ ಬರುವುದಿಲ್ಲ. ಆದರೆ ನಿಃಶಂಕನಾಗಿ ಇನ್ನೊಬ್ಬರ ಮೇಲೆ ವಿಶ್ವಾಸವನ್ನಿಡುವವನಿಗೆ ಒಮ್ಮಿಂದೊಮ್ಮೆಲೇ ಅತಿ ದೊಡ್ಡ ಭಯವನ್ನು ಎದುರಿಸಬೇಕಾಗಿ ಬರುತ್ತದೆ.

12136202a ನ ಭೀರುರಿತಿ ಚಾತ್ಯಂತಂ40 ಮಂತ್ರೋಽದೇಯಃ ಕಥಂ ಚನ।
12136202c ಅವಿಜ್ಞಾನಾದ್ಧಿ ವಿಜ್ಞಾತೇ ಗಚ್ಚೇದಾಸ್ಪದದರ್ಶಿಷು।।

ತನಗೆ ಭಯವಿಲ್ಲ ಎಂದು ತಿಳಿದಿರುವವನಿಗೆ ಯಾವುದೇ ಸಲಹೆಯನ್ನು ನೀಡಬಾರದು. ಏಕೆಂದರೆ ಅವನು ಇನ್ನೊಬ್ಬರ ಸಲಹೆಯನ್ನು ಕೇಳುವುದೇ ಇಲ್ಲ. ಭಯವೇನೆಂದು ತಿಳಿಯದೇ ಇರುವವನಿಗಿಂತ ಭಯವನ್ನು ತಿಳಿದವನೇ ಸರಿ. ಏಕೆಂದರೆ ಅವನು ಅದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿಯಲು ಪರಿಣಾಮದರ್ಶಿಗಳ ಬಳಿ ಹೋಗುತ್ತಾನೆ.

12136203a ತಸ್ಮಾದಭೀತವದ್ ಭೀತೋ ವಿಶ್ವಸ್ತವದವಿಶ್ವಸನ್।
12136203c ಕಾರ್ಯಾಣಾಂ ಗುರುತಾಂ ಬುದ್ಧ್ವಾ ನಾನೃತಂ ಕಿಂ ಚಿದಾಚರೇತ್।।

ಆದುದರಿಂದ ಭೀತನಾಗಿದ್ದರೂ ಭಯವಿಲ್ಲದವಂತೆ ಇರಬೇಕಾಗುತ್ತದೆ. ವಿಶ್ವಾಸವಿಲ್ಲದಿದ್ದರೂ ವಿಶ್ವಾಸವಿರುವವನಂತೆ ಇರಬೇಕಾಗುತ್ತದೆ. ಏಕೆಂದರೆ ಕಠಿಣತೆಯನ್ನು ನೋಡಿಕೊಂಡು ಯಾರೂ ಎಂದೂ ಮಿಥ್ಯಾಚರಣೆಯನ್ನು ಮಾಡಬಾರದು.

12136204a ಏವಮೇತನ್ಮಯಾ ಪ್ರೋಕ್ತಮಿತಿಹಾಸಂ ಯುಧಿಷ್ಠಿರ।
12136204c ಶ್ರುತ್ವಾ ತ್ವಂ ಸುಹೃದಾಂ ಮಧ್ಯೇ ಯಥಾವತ್ಸಮುಪಾಚರ।।

ಯುಧಿಷ್ಠಿರ! ಹೀಗೆ ನಾನು ನಿನಗೆ ಈ ಇತಿಹಾಸವನ್ನು ಹೇಳಿದ್ದೇನೆ. ಇದನ್ನು ಕೇಳಿ ನೀನು ಸುಹೃದಯರ ಮಧ್ಯೆ ಯಥಾಯೋಗ್ಯವಾಗಿ ನಡೆದುಕೋ.

12136205a ಉಪಲಭ್ಯ ಮತಿಂ ಚಾಗ್ರ್ಯಾಮರಿಮಿತ್ರಾಂತರಂ ತಥಾ।
12136205c ಸಂಧಿವಿಗ್ರಹಕಾಲಂ ಚ ಮೋಕ್ಷೋಪಾಯಂ ತಥಾಪದಿ।।

ಶ್ರೇಷ್ಠ ಬುದ್ಧಿಯನ್ನು ಆಶ್ರಯಿಸಿ ಶತ್ರು-ಮಿತ್ರರ ನಡುವಿನ ಭೇದ, ಸಂಧಿ-ವಿಗ್ರಹಗಳ ಕಾಲ ಮತ್ತು ಆಪತ್ತಿನಲ್ಲಿ ಬಿಡುಗಡೆಹೊಂದುವ ಉಪಾಯವನ್ನು ತಿಳಿದುಕೋ.

12136206a ಶತ್ರುಸಾಧಾರಣೇ ಕೃತ್ಯೇ ಕೃತ್ವಾ ಸಂಧಿಂ ಬಲೀಯಸಾ।
12136206c ಸಮಾಗಮಂ ಚರೇದ್ಯುಕ್ತ್ಯಾ ಕೃತಾರ್ಥೋ ನ ಚ ವಿಶ್ವಸೇತ್।।

ತನ್ನ ಮತ್ತು ಶತ್ರುವಿನ ಪ್ರಯೋಜನವು ಒಂದೇ ಸಮನಾಗಿದ್ದರೆ ಬಲಶಾಲೀ ಶತ್ರುವಿನೊಂದಿಗೆ ಸಂಧಿಯನ್ನು ಮಾಡಿಕೊಂಡು ಅವನೊಂದಿಗೆ ಸೇರಿ ಯುಕ್ತಿಪೂರ್ವಕವಾಗಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳಬೇಕು ಮತ್ತು ಕಾರ್ಯವು ಪೂರ್ಣವಾದ ನಂತರ ಪುನಃ ಅವನ ಮೇಲೆ ಎಂದೂ ವಿಶ್ವಾಸವನ್ನು ಇಡಬಾರದು.

12136207a ಅವಿರುದ್ಧಾಂ ತ್ರಿವರ್ಗೇಣ ನೀತಿಮೇತಾಂ ಯುಧಿಷ್ಠಿರ।
12136207c ಅಭ್ಯುತ್ತಿಷ್ಠ ಶ್ರುತಾದಸ್ಮಾದ್ಭೂಯಸ್ತ್ವಂ ರಂಜಯನ್ ಪ್ರಜಾಃ।।

ಯುಧಿಷ್ಠಿರ! ಈ ನೀತಿಯು ಧರ್ಮ-ಅರ್ಥ-ಕಾಮ ಈ ತ್ರಿವರ್ಗಗಳಿಗೆ ಅನುಕೂಲವಾಗಿದೆ. ನೀನು ಈ ನೀತಿಯನ್ನು ಆಶ್ರಯಿಸು. ನನ್ನನ್ನು ಕೇಳಿ ಪುನಃ ಪ್ರಜೆಗಳನ್ನು ರಂಜಿಸಲು ಎದ್ದೇಳು.

12136208a ಬ್ರಾಹ್ಮಣೈಶ್ಚಾಪಿ ತೇ ಸಾರ್ಧಂ ಯಾತ್ರಾ ಭವತು ಪಾಂಡವ।
12136208c ಬ್ರಾಹ್ಮಣಾ ಹಿ ಪರಂ ಶ್ರೇಯೋ ದಿವಿ ಚೇಹ ಚ ಭಾರತ।।

ಪಾಂಡವ! ಭಾರತ! ನಿನ್ನ ಜೀವನ ಯಾತ್ರೆಯು ಬ್ರಾಹ್ಮಣರೊಂದಿಗೆ ಸಾಗಲಿ. ಬ್ರಾಹ್ಮಣರು ಇಹದಲ್ಲಿ ಮತ್ತು ಪರಲೋಕದಲ್ಲಿ ಪರಮ ಶ್ರೇಯಸ್ಸನ್ನು ನೀಡುತ್ತಾರೆ.

12136209a ಏತೇ ಧರ್ಮಸ್ಯ ವೇತ್ತಾರಃ ಕೃತಜ್ಞಾಃ ಸತತಂ ಪ್ರಭೋ।
12136209c ಪೂಜಿತಾಃ ಶುಭಕರ್ಮಾಣಃ ಪೂರ್ವಜಿತ್ಯಾ41 ನರಾಧಿಪ।।

ಪ್ರಭೋ! ನರಾಧಿಪ! ಧರ್ಮವನ್ನು ತಿಳಿದಿರುವ ಇವರು ಸತತವೂ ಕೃತಜ್ಞರಾಗಿರುತ್ತಾರೆ. ಪೂಜಿಸಿದರೆ ಅವರು ನಿನ್ನ ಶುಭಕಾರಕರೂ ಶುಭಚಿಂತಕರೂ ಆಗುತ್ತಾರೆ.

12136210a ರಾಜ್ಯಂ ಶ್ರೇಯಃ ಪರಂ ರಾಜನ್ಯಶಃ ಕೀರ್ತಿಂ ಚ ಲಪ್ಸ್ಯಸೇ।
12136210c ಕುಲಸ್ಯ ಸಂತತಿಂ ಚೈವ ಯಥಾನ್ಯಾಯಂ ಯಥಾಕ್ರಮಮ್।।

ರಾಜನ್! ಬ್ರಾಹ್ಮಣರನು ಸತ್ಕರಿಸುವುದರಿಂದ ನೀನು ಯಥಾನ್ಯಾಯವಾಗಿ ಮತ್ತು ಯಥಾಕ್ರಮವಾಗಿ ರಾಜ್ಯ, ಪರಮ ಶ್ರೇಯಸ್ಸು, ಯಶಸ್ಸು, ಕೀರ್ತಿ ಮತ್ತು ಕುಲದ ಸಂತತಿಯನ್ನೂ ಪಡೆದುಕೊಳ್ಳುತ್ತೀಯೆ.

12136211a ದ್ವಯೋರಿಮಂ ಭಾರತ ಸಂಧಿವಿಗ್ರಹಂ ಸುಭಾಷಿತಂ ಬುದ್ಧಿವಿಶೇಷಕಾರಿತಮ್।
12136211c ತಥಾನ್ವವೇಕ್ಷ್ಯ ಕ್ಷಿತಿಪೇನ ಸರ್ವದಾ ನಿಷೇವಿತವ್ಯಂ ನೃಪ ಶತ್ರುಮಂಡಲೇ।।

ಭಾರತ! ನೃಪ! ಈ ಸುಭಾಷಿತವು ಸಂಧಿ ಮತ್ತು ವಿಗ್ರಹಗಳ ಜ್ಞಾನ ಮತ್ತು ವಿಶೇಷ ಬುದ್ಧಿಯನ್ನು ನೀಡುತ್ತದೆ. ಇದನ್ನು ಚೆನ್ನಾಗಿ ತಿಳಿದುಕೊಂಡು ಕ್ಷಿತಿಪನು ಸರ್ವದಾ ಶತ್ರುಮಂಡಲದಲ್ಲಿ ಇದರಂತೆ ನಡೆದುಕೊಳ್ಳಬೇಕು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಮಾರ್ಜಾರಮೂಷಿಕಸಂವಾದೇ ಷಟ್ತ್ರಿಂಶಾತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಮಾರ್ಜಾರಮೂಷಿಕಸಂವಾದ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.


  1. ಅನಿತ್ಯಾ ವೈ ಸದಾ ಗತಿಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  2. ಅರಣ್ಯಮಭಿಮತೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  3. ಪಕ್ಷಿಸಂಘಾತಖಾದಕಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  4. ಚ ಪರಮಾಂ ಮತಿಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  5. ಯಾವದ್ಯುಕ್ತ್ಯಾ ಪ್ರತಿಗ್ರಹಾತ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  6. ನಿಮಜ್ಜತ್ಯಾಪದಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  7. ಮಹತೀಂ ದಾರುಣಾಮಪಿ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  8. ನೀತಿಶಾಸ್ತ್ರಂ ಸಮಾಶ್ರಿತ್ಯ ಹಿತಮಸ್ಯೋಪವರ್ಣಯೇ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  9. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಏವಂ ವಿಚಿಂತಯಾಮಾಸ ಮೂಷಿಕಃ ಶತ್ರುಚೇಷ್ಟಿತಮ್। ↩︎

  10. ನ ತೇ ಸೌಮ್ಯ ಭಯಂ ಕಾರ್ಯಂ ಜೀವಿಷ್ಯಸಿ ಯಥಾಸುಖಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  11. ದುಷ್ಕರಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  12. ಮಾ ಚಿರಾಯ ಚ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  13. ಸಿದ್ಧಿಕರಂ ವಿಭೋ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  14. ಪ್ರೀತಿಕರ್ತುಶ್ಚ ಸತ್ಕ್ರಿಯಾಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  15. ಗೀತಾ ಪ್ರೆಸ್ ನಲ್ಲಿ ಇದರ ಮೊದಲು ಒಂದು ಅಧಿಕ ಶ್ಲೋಕವಿದೆ: ಪ್ರತ್ಯುಪಕುರ್ವನ್ ಬಹ್ವಪಿ ನ ಭಾತಿ ಪೂರ್ವೋಪಕಾರಿಣಾ ತುಲ್ಯಃ। ಏಕಃ ಕರೋತಿ ಹಿ ಕೃತೇ ನಿಷ್ಕಾರಣಮೇವ ಕುರುತೇಽನ್ಯಃ।। ↩︎

  16. ಪ್ರವಿವೇಶ ತು ವಿಶ್ರಮ್ಯ ಕ್ರೋಡಮಸ್ಯ ಕೃತಾಗಸಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  17. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಮೂರು ಶ್ಲೋಕಗಳಿವೆ: ತಥೈವ ತೌ ಸುಸಂತ್ರಸ್ತೌ ದೃಢಮಾಗತತಂದ್ರಿತೌ। ದೃಷ್ಟ್ವಾ ತಯೋಃ ಪರಾಂ ಪ್ರೀತಿಂ ವಿಸ್ಮಯಂ ಪರಮಂ ಗತೌ।। ಬಲಿನೌ ಮತಿಮಂತೌ ಚ ಸುವೃತ್ತೌ ಚಾಪ್ಯುಪಾಸಿತೌ। ಅಶಕ್ತೌ ತು ನಯಾತ್ತಸ್ಮಾತ್ಸಂಪ್ರಧರ್ಷಯಿತುಂ ಬಲಾತ್।। ಕಾರ್ಯಾರ್ಥಂ ಕೃತಸಂಧೀ ತೌ ದೃಷ್ಟ್ವಾ ಮಾರ್ಜಾರಮೂಷಿಕೌ। ಉಲೂಕನಕುಲೌ ತೂರ್ಣಂ ಜಗ್ಮತುಸ್ತೌ ಸ್ವಮಾಲಯಮ್।। ಆದರೆ ಪುಣೆಯ ಪರಿಷ್ಕೃತ ಸಂಪುಟದಲ್ಲಿ ಈ ಶ್ಲೋಕಗಳು ಮುಂದೆ ಬರುತ್ತವೆ. ↩︎

  18. ವ್ಯಕ್ತಮಾಯುಃಕ್ಷಯಂ ತವ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  19. ನ ಕಶ್ಚಿತ್ಕಸ್ಯಚಿನ್ಮಿತ್ರಂ ನ ಕಶ್ಚಿತ್ಕಸ್ಯಚಿದ್ರಿಪುಃ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  20. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಅರ್ಥತಸ್ತು ನಿಬದ್ಧ್ಯಂತೇ ಮಿತ್ರಾಣಿ ರಿಪವಸ್ತಥಾ। ↩︎

  21. ಸ್ಥೂಲಸ್ಫಿಗ್ ವಿಕೃತೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  22. ಮಲಿನೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  23. ಘೋರಸಂಕುಲಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  24. ಲೇಭೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  25. ಸತ್ಕೃತೋಽಹಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  26. ದತ್ವಾ ಜೀವಿತಮದ್ಯ ಮೇ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  27. ಸಂಧಿತಾಸ್ತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  28. ಪಶ್ಯೇತ್ ಪೀಡಾಂ ನ ಜೀವತಿ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  29. ಈ ಎರಡು ಶ್ಲೋಕಗಳ ಪಾಠಾಂತರವು ಈ ರೀತಿಯಿದೆ: ಯೋ ವಿಶ್ವಸಿತಿ ಮಿತ್ರೇಷು ನ ವಿಶ್ವಸಿತಿ ಶತ್ರುಷು। ಅರ್ಥಯುಕ್ತಿಮವಿಜ್ಞಾಯ ಯಃ ಪ್ರೀತೌ ಕುರುತೇ ಮನಃ।। ಮಿತ್ರೋ ವಾ ಯದಿ ವಾ ಶತ್ರೌ ತಸ್ಯಾಪಿ ಚಲಿತಾ ಮತಿಃ। (ಗೀತಾ ಪ್ರೆಸ್). ↩︎

  30. ಅಕಾಲೇ ಹಿ ಸಮರ್ಥಸ್ಯ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  31. ತ್ವಂ ಹಿ ಮೇ ಜಾತಿತಃ ಶತ್ರುಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  32. ವಿಶ್ವಸ್ತಂ ವಾ ಪ್ರಮತ್ತಂ ವಾ ಏದತೇವ ಕೃತಂ ಭವೇತ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  33. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಯದಿ ತ್ವಂ ಸುಕೃತಂ ವೇತ್ಸಿ ತತ್ಸಖ್ಯಮನುಸಾರಯ। ↩︎

  34. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸತ್ಯಂ ಶಪೇ ತ್ವಯಾಹಂ ವೈ ಮಿತ್ರದ್ರೋಹೋ ವಿಗರ್ಹಿತಃ। ↩︎

  35. ತ್ವದ್ಭಕ್ತಶ್ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  36. ವಿಶ್ರಂಭೋ ಹಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  37. ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು, ಶುಕ್ರಾಚಾರ್ಯನ ಎರಡನೇ ಗಾಥೆಯನ್ನು ಸೂಚಿಸುವ ಈ ಒಂದು ಅಧಿಕ ಶ್ಲೋಕವಿದೆ: ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್। ನಿತ್ಯಂ ವಿಶ್ವಾಸಯೇದನ್ಯಾನ್ಪರೇಷಾಂ ತು ನ ವಿಶ್ವಸೇತ್।। ↩︎

  38. ಶಾಖಂ ಹಿತ್ವಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  39. ಸಂಧಿಜ್ಞಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  40. ಅಭೀಶ್ಚರತಿ ಯೋ ನಿತ್ಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎

  41. ಪೂಜಯೇತ್ ತಾನ್ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎