ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 135
ಸಾರ
ಮುಂದೆ ಬರುವ ಸಂಕಟದ ಕುರಿತು ಸಾವಧಾನದಿಂದಿರಲು ದೂರದರ್ಶೀ, ತತ್ಕಾಲಜ್ಞ ಮತ್ತು ದೀರ್ಘಸೂತ್ರೀ – ಈ ಮೂರು ಮೀನುಗಳ ದೃಷ್ಟಾಂತ (1-23).
12135001 ಭೀಷ್ಮ ಉವಾಚ।
12135001a 1ಅತ್ರೈವ ಚೇದಮವ್ಯಗ್ರಃ ಶೃಣ್ವಾಖ್ಯಾನಮನುತ್ತಮಮ್। 12135001c ದೀರ್ಘಸೂತ್ರಂ ಸಮಾಶ್ರಿತ್ಯ ಕಾರ್ಯಾಕಾರ್ಯವಿನಿಶ್ಚಯೇ।।
ಭೀಷ್ಮನು ಹೇಳಿದನು: “ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ನಿಶ್ಚಯಿಸುವಾಗ ದೀರ್ಘಸೂತ್ರಿಯಾಗಿರುವವನ ಕುರಿತಾದ ಒಂದು ಸುಂದರ ಉಪಾಖ್ಯಾನವನ್ನು ಹೇಳುತ್ತೇನೆ. ನೀನು ಸ್ವಸ್ಥಚಿತ್ತನಾಗಿ ಕೇಳು.
12135002a ನಾತಿಗಾಧೇ ಜಲಸ್ಥಾಯೇ ಸುಹೃದಃ ಶಕುಲಾಸ್ತ್ರಯಃ।
12135002c ಪ್ರಭೂತಮತ್ಸ್ಯೇ ಕೌಂತೇಯ ಬಭೂವುಃ ಸಹಚಾರಿಣಃ।।
ಕೌಂತೇಯ! ಅತಿಯಾಗಿ ಆಳವಾಗಿರದ ಒಂದು ಕೆರೆಯಲ್ಲಿ ಅನೇಕ ಮೀನುಗಳು ವಾಸಿಸುತ್ತಿದ್ದವು. ಅವುಗಳಲ್ಲಿ ಮೂರು ಕಾರ್ಯಕುಶಲ ಮೀನುಗಳೂ ಸೇರಿಕೊಂಡಿದ್ದವು. ಅವು ಸದಾ ಒಟ್ಟಾಗಿ ಸಂಚರಿಸುತ್ತಿದ್ದವು ಮತ್ತು ಪರಸ್ಪರ ಮೈತಿಭಾವವನ್ನು ಹೊಂದಿದ್ದವು.
12135003a ಅತ್ರೈಕಃ ಪ್ರಾಪ್ತಕಾಲಜ್ಞೋ ದೀರ್ಘದರ್ಶೀ ತಥಾಪರಃ।
12135003c ದೀರ್ಘಸೂತ್ರಶ್ಚ ತತ್ರೈಕಸ್ತ್ರಯಾಣಾಂ ಜಲಚಾರಿಣಾಮ್।।
ಆ ಮೂರು ಮೀನುಗಳಲ್ಲಿ ಒಂದು ಪ್ರಾಪ್ತಕಾಲಜ್ಞನಾಗಿತ್ತು2. ಇನ್ನೊಂದು ದೀರ್ಘದರ್ಶಿಯಾಗಿತ್ತು3, ಮತ್ತು ಇನ್ನೊಂದು ದೀರ್ಘಸೂತ್ರನಾಗಿತ್ತು4.
12135004a ಕದಾ ಚಿತ್ತಜ್ಜಲಸ್ಥಾಯಂ ಮತ್ಸ್ಯಬಂಧಾಃ ಸಮಂತತಃ।
12135004c ನಿಃಸ್ರಾವಯಾಮಾಸುರಥೋ ನಿಮ್ನೇಷು ವಿವಿಧೈರ್ಮುಖೈಃ।।
ಒಮ್ಮೆ ಬೆಸ್ತರು ಆ ಜಲಾಶಯಕ್ಕೆ ನಾಲ್ಕೂ ಕಡೆಗಳಿಂದ ಕೋಡಿಗಳನ್ನು ತೋಡಿ ಅನೇಕ ಕಡೆಗಳಿಂದ ಅದರ ನೀರನ್ನು ಸುತ್ತಲಿದ್ದ ಕೆಳಭೂಮಿಗಳಿಗೆ ಹಾಯಿಸತೊಡಗಿದರು.
12135005a ಪ್ರಕ್ಷೀಯಮಾಣಂ ತಂ ಬುದ್ಧ್ವಾ ಜಲಸ್ಥಾಯಂ ಭಯಾಗಮೇ।
12135005c ಅಬ್ರವೀದ್ದೀರ್ಘದರ್ಶೀ ತು ತಾವುಭೌ ಸುಹೃದೌ ತದಾ।।
ಜಲಾಶಯದ ನೀರು ಕಡಿಮೆಯಾಗುತ್ತಿರುವುದನ್ನು ನೋಡಿ ಭಯವುಂಟಾಗಲಿದೆಯೆಂದು ತಿಳಿದು ದೀರ್ಘದರ್ಶಿಯು ತನ್ನ ಆ ಇಬ್ಬರು ಮಿತ್ರರಿಗೆ ಹೇಳಿತು:
12135006a ಇಯಮಾಪತ್ಸಮುತ್ಪನ್ನಾ ಸರ್ವೇಷಾಂ ಸಲಿಲೌಕಸಾಮ್।
12135006c ಶೀಘ್ರಮನ್ಯತ್ರ ಗಚ್ಚಾಮಃ ಪಂಥಾ ಯಾವನ್ನ ದುಷ್ಯತಿ।।
“ಇಲ್ಲಿರುವ ಸರ್ವ ಜಲಚರ ಪ್ರಾಣಿಗಳಿಗೂ ಆಪತ್ತುಬಂದೊದಗಿದೆ ಎಂದು ಅನಿಸುತ್ತಿದೆ. ನಮಗೆ ಹೊರಗೋಗುವ ಮಾರ್ಗವು ದೂಷಿತವಾಗುವರೊಳಗೆ ಶೀಘ್ರದಲ್ಲಿಯೇ ಬೇರೆ ಎಲ್ಲಿಯಾದರೂ ಹೋಗೋಣ.
12135007a ಅನಾಗತಮನರ್ಥಂ ಹಿ ಸುನಯೈರ್ಯಃ ಪ್ರಬಾಧತೇ।
12135007c ನ ಸ ಸಂಶಯಮಾಪ್ನೋತಿ ರೋಚತಾಂ ವಾಂ ವ್ರಜಾಮಹೇ।।
ಮುಂದಾಗಬಹುದಾದ ಸಂಕಟವನ್ನು ಅದು ಆಗುವ ಮೊದಲೇ ಉತ್ತಮ ನೀತಿಯನ್ನುಪಯೋಗಿಸಿ ಕಳೆದುಕೊಳ್ಳುವನಿಗೆ ಪ್ರಾಣಹೋಗುವ ಸಂಶಯದಲ್ಲಿ ಬೀಳುವುದಿಲ್ಲ. ನಿಮಗೆ ನನ್ನ ಈ ಮಾತು ಸರಿಯೆಂದು ಅನಿಸಿದರೆ ಬನ್ನಿ. ಇನ್ನೊಂದು ಜಲಾಶಯಕ್ಕೆ ಹೋಗೋಣ.”
12135008a ದೀರ್ಘಸೂತ್ರಸ್ತು ಯಸ್ತತ್ರ ಸೋಽಬ್ರವೀತ್ಸಮ್ಯಗುಚ್ಯತೇ।
12135008c ನ ತು ಕಾರ್ಯಾ ತ್ವರಾ ಯಾವದಿತಿ ಮೇ ನಿಶ್ಚಿತಾ ಮತಿಃ।।
ಆಗ ಅಲ್ಲಿದ್ದ ದೀರ್ಘಸೂತ್ರಿಯು ಹೇಳಿತು: “ನೀನು ಸರಿಯಾದುದನ್ನೇ ಹೇಳಿದ್ದೀಯೆ. ಆದರೆ ನಮಗೆ ಈಗ ಅವಸರ ಮಾಡಬಾರದು ಎಂದು ನನ್ನ ಬುದ್ಧಿಯು ನಿಶ್ಚಿತವಾಗಿ ಹೇಳುತ್ತಿದೆ.”
12135009a ಅಥ ಸಂಪ್ರತಿಪತ್ತಿಜ್ಞಃ ಪ್ರಾಬ್ರವೀದ್ದೀರ್ಘದರ್ಶಿನಮ್।
12135009c ಪ್ರಾಪ್ತೇ ಕಾಲೇ ನ ಮೇ ಕಿಂ ಚಿನ್ನ್ಯಾಯತಃ ಪರಿಹಾಸ್ಯತೇ।।
ಆಗ ಪ್ರತ್ಯುತ್ಪನ್ನಮತಿಯು ದೀರ್ಘದರ್ಶಿಯಲ್ಲಿ ಹೇಳಿತು: “ಕಾಲವು ಪ್ರಾಪ್ತವಾದಾಗ ನನ್ನ ಬುದ್ಧಿಯು ಯಾವುದಾದರೂ ಉಪಾಯವನ್ನು ಹುಡುಕುವುದರಲ್ಲಿ ಎಂದೂ ಅಸಫಲವಾಗುವುದಿಲ್ಲ.”
12135010a ಏವಮುಕ್ತೋ ನಿರಾಕ್ರಾಮದ್ದೀರ್ಘದರ್ಶೀ ಮಹಾಮತಿಃ।
12135010c ಜಗಾಮ ಸ್ರೋತಸೈಕೇನ ಗಂಭೀರಸಲಿಲಾಶಯಮ್।।
ಇದನ್ನು ಕೇಳಿ ಮಹಾಮತಿ ದೀರ್ಘದರ್ಶಿಯು ಅಲ್ಲಿಂದ ತಪ್ಪಿಸಿಕೊಂಡು ಒಂದು ಕೋಡಿಯ ಮೂಲಕ ಅನ್ಯ ಆಳವಾಗಿದ್ದ ಜಲಾಶಯಕ್ಕೆ ಹೊರಟು ಹೋಯಿತು.
12135011a ತತಃ ಪ್ರಸ್ರುತತೋಯಂ ತಂ ಸಮೀಕ್ಷ್ಯ ಸಲಿಲಾಶಯಮ್।
12135011c ಬಬಂಧುರ್ವಿವಿಧೈರ್ಯೋಗೈರ್ಮತ್ಸ್ಯಾನ್ಮತ್ಸ್ಯೋಪಜೀವಿನಃ।।
ಮೀನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದ ಆ ಬೆಸ್ತರು ಜಲಾಶಯದ ನೀರು ಕಡಿಮೆಯಾಗುತ್ತಿದ್ದನ್ನು ನೋಡಿ ವಿವಿಧ ಉಪಾಯಗಳಿಂದ ಅಲ್ಲಿದ್ದ ಮೀನುಗಳನ್ನು ಬಂಧಿಸಿದರು.
12135012a ವಿಲೋಡ್ಯಮಾನೇ ತಸ್ಮಿಂಸ್ತು ಸ್ರುತತೋಯೇ ಜಲಾಶಯೇ।
12135012c ಅಗಚ್ಚದ್ ಗ್ರಹಣಂ ತತ್ರ ದೀರ್ಘಸೂತ್ರಃ ಸಹಾಪರೈಃ।।
ಹರಿದುಹೋಗಿ ನೀರು ಕಡಿಮೆಯಾದ ಆ ಜಲಾಶಯವನ್ನು ಸೋಸುತ್ತಿದ್ದಾಗ ಇತರರೊಂದಿಗೆ ದೀರ್ಘಸೂತ್ರೀ ಮೀನೂ ಕೂಡ ಬಲೆಯಲ್ಲಿ ಸಿಕ್ಕಿಕೊಂಡಿತು.
12135013a ಉದ್ದಾನಂ ಕ್ರಿಯಮಾಣಂ ಚ ಮತ್ಸ್ಯಾನಾಂ ವೀಕ್ಷ್ಯ ರಜ್ಜುಭಿಃ।
12135013c ಪ್ರವಿಶ್ಯಾಂತರಮನ್ಯೇಷಾಮಗ್ರಸತ್ ಪ್ರತಿಪತ್ತಿಮಾನ್।।
ಮೀನುಗಳಿಂದ ತುಂಬಿದ್ದ ಆ ಬಲೆಯನ್ನು ಹಗ್ಗಗಳನ್ನೆಳೆದು ಮೇಲಕ್ಕೆತ್ತುವಾಗ ಪ್ರತ್ಯುತ್ಪನ್ನಮತಿ ಮೀನೂ ಕೂಡ ಇತರ ಮೀನುಗಳೊಡನೆ ಆ ಬಲೆಯನ್ನು ಪ್ರವೇಶಿಸಿತ್ತು.
12135014a ಗ್ರಸ್ತಮೇವ ತದುದ್ದಾನಂ ಗೃಹೀತ್ವಾಸ್ತ ತಥೈವ ಸಃ।
12135014c ಸರ್ವಾನೇವ ತು ತಾಂಸ್ತತ್ರ ತೇ ವಿದುರ್ಗ್ರಥಿತಾ ಇತಿ।।
ಬಾಯಿಯಿಂದ ಕಚ್ಚಿಕೊಳ್ಳಲು ಯೋಗ್ಯವಾಗಿದ್ದ ಆ ಬಲೆಯ ತಂತುವನ್ನು ಕಚ್ಚಿಹಿಡಿದು ಅದೂ ಕೂಡ ಇತರ ಮೀನುಗಳಂತೆ ಬಲೆಯಲ್ಲಿ ಬಂಧಿತಗೊಂಡಂತೆ ತೋರುತ್ತಿತ್ತು.
12135015a ತತಃ ಪ್ರಕ್ಷಾಲ್ಯಮಾನೇಷು ಮತ್ಸ್ಯೇಷು ವಿಮಲೇ ಜಲೇ।
12135015c ತ್ಯಕ್ತ್ವಾ ರಜ್ಜುಂ ವಿಮುಕ್ತೋಽಭೂಚ್ಚೀಘ್ರಂ ಸಂಪ್ರತಿಪತ್ತಿಮಾನ್।।
ಅನಂತರ ಆ ಮೀನುಗಳನ್ನು ಶುದ್ಧ ನೀರಿನಲ್ಲಿ ತೊಳೆಯುವಾಗ ಪ್ರತ್ಯುತ್ಪನ್ನಮತಿ ಮೀನು ಬಲೆಯನ್ನು ಬಿಟ್ಟು ಶೀಘ್ರದಲ್ಲಿಯೇ ಶುದ್ಧ ನೀರಿನ ಕೊಳದಲ್ಲಿ ಸೇರಿಕೊಂಡುಬಿಟ್ಟಿತು.
12135016a ದೀರ್ಘಸೂತ್ರಸ್ತು ಮಂದಾತ್ಮಾ ಹೀನಬುದ್ಧಿರಚೇತನಃ।
12135016c ಮರಣಂ ಪ್ರಾಪ್ತವಾನ್ಮೂಢೋ ಯಥೈವೋಪಹತೇಂದ್ರಿಯಃ।।
ಹೀನಬುದ್ಧಿ ಮಂದಾತ್ಮಾ ಅಚೇತನ ಮೂಢ ದೀರ್ಘಸೂತ್ರನಾದರೋ ಇಂದ್ರಿಯಗಳು ನಷ್ಟಹೋದಾಗ ನಷ್ಟವಾಗುವಂತೆ ಮರಣವನ್ನಪ್ಪಿತು.
12135017a ಏವಂ ಪ್ರಾಪ್ತತಮಂ ಕಾಲಂ ಯೋ ಮೋಹಾನ್ನಾವಬುಧ್ಯತೇ।
12135017c ಸ ವಿನಶ್ಯತಿ ವೈ ಕ್ಷಿಪ್ರಂ ದೀರ್ಘಸೂತ್ರೋ ಯಥಾ ಝಷಃ।।
ಹೀಗೆ ಮೋಹಿತನಾಗಿ ತನಗೆ ಬಂದೊದಗುವ ಆಪತ್ತಿನ ಕಾಲವನ್ನು ತಿಳಿಯದೇ ಇರುವವನು ಆ ದೀರ್ಘಸೂತ್ರೀ ಮೀನಿನಂತೆ ಕ್ಷಿಪ್ರವಾಗಿ ನಾಶಹೊಂದುತ್ತಾನೆ.
12135018a ಆದೌ ನ ಕುರುತೇ ಶ್ರೇಯಃ ಕುಶಲೋಽಸ್ಮೀತಿ ಯಃ ಪುಮಾನ್।
12135018c ಸ ಸಂಶಯಮವಾಪ್ನೋತಿ ಯಥಾ ಸಂಪ್ರತಿಪತ್ತಿಮಾನ್।।
ತಾನು ಅತ್ಯಂತ ಕುಶಲನು ಮತ್ತು ಮೊದಲಿನಿಂದಲೇ ತನ್ನನ್ನು ಅಪಾಯದಿಂದ ಪಾರುಗೊಳಿಸುವ ಉಪಾಯವನ್ನು ಮಾಡಿಕೊಳ್ಳುವುದಿಲ್ಲ ಎಂದಿರುವ ಮನುಷ್ಯನು ಪ್ರತ್ಯುತ್ಪನ್ನಮತಿ ಮೀನಿನಂತೆ ಪ್ರಾಣಸಂಶಯ ಪರಿಸ್ಥಿತಿಯಲ್ಲಿ ಬೀಳುತ್ತಾನೆ.
12135019a ಅನಾಗತವಿಧಾನಂ ತು ಯೋ ನರಃ ಕುರುತೇ ಕ್ಷಮಮ್।
12135019c ಶ್ರೇಯಃ ಪ್ರಾಪ್ನೋತಿ ಸೋಽತ್ಯರ್ಥಂ ದೀರ್ಘದರ್ಶೀ ಯಥಾ ಹ್ಯಸೌ5।।
ಸಂಕಟವು ಬಂದೊದಗುವುದಕ್ಕೆ ಮೊದಲೇ ತನ್ನ ಸುರಕ್ಷಣೆಯ ಉಪಾಯವನ್ನು ಮಾಡಿಕೊಳ್ಳುವವನು ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆ.
12135020a ಕಲಾಃ ಕಾಷ್ಠಾ ಮುಹೂರ್ತಾಶ್ಚ ದಿನಾ ನಾಡ್ಯಃ ಕ್ಷಣಾ ಲವಾಃ।
12135020c ಪಕ್ಷಾ ಮಾಸಾಶ್ಚ ಋತವಸ್ತುಲ್ಯಾಃ ಸಂವತ್ಸರಾಣಿ ಚ।।
12135021a ಪೃಥಿವೀ ದೇಶ ಇತ್ಯುಕ್ತಃ ಕಾಲಃ ಸ ಚ ನ ದೃಶ್ಯತೇ।
12135021c ಅಭಿಪ್ರೇತಾರ್ಥಸಿದ್ಧ್ಯರ್ಥಂ ನ್ಯಾಯತೋ ಯಚ್ಚ ತತ್ತಥಾ6।।
ಕಲಾ, ಕಾಷ್ಠಾ, ಮುಹೂರ್ತ, ದಿನ, ರಾತ್ರಿ, ಕ್ಷಣ, ಲವ, ಪಕ್ಷ, ಮಾಸ, ಋತು, ಸಂವತ್ಸರಗಳು ಇವುಗಳನ್ನು ಕಾಲವೆನ್ನುತ್ತಾರೆ. ಭೂಮಿಯನ್ನು ದೇಶ ಎನ್ನುತ್ತಾರೆ. ಆದರೆ ಕಾಲವು ಕಾಣಿಸುವುದಿಲ್ಲ. ಅಭೀಷ್ಟ ಮನೋರಥದ ಸಿದ್ಧಿಗಾಗಿ ದೇಶ ಮತ್ತು ಕಾಲಗಳ ಕುರಿತು ವಿಚಾರಿಸಿ ಅದರಂತೆ ನಡೆದುಕೊಳ್ಳುವುದು ನ್ಯಾಯತರವಾದುದು.
12135022a ಏತೌ ಧರ್ಮಾರ್ಥಶಾಸ್ತ್ರೇಷು ಮೋಕ್ಷಶಾಸ್ತ್ರೇಷು ಚರ್ಷಿಭಿಃ।
12135022c ಪ್ರಧಾನಾವಿತಿ ನಿರ್ದಿಷ್ಟೌ ಕಾಮೇಶಾಭಿಮತೌ ನೃಣಾಮ್।।
ಋಷಿಗಳು ಧರ್ಮಶಾಸ್ತ್ರ, ಅರ್ಥಶಾಸ್ತ್ರ ಮತ್ತು ಮೋಕ್ಷಶಾಸ್ತ್ರಗಳಲ್ಲಿ ಈ ದೇಶ-ಕಾಲಗಳನ್ನೇ ಕಾರ್ಯಸಿದ್ಧಿಯ ಪ್ರಧಾನ ಉಪಾಯಗಳೆಂದು ಹೇಳಿದ್ದಾರೆ. ಮನುಷ್ಯರ ಕಾಮನಸಿದ್ಧಿಗೂ ದೇಶ-ಕಾಲಗಳೇ ಪ್ರಧಾನವೆಂಬ ಅಭಿಪ್ರಾಯವಿದೆ.
12135023a ಪರೀಕ್ಷ್ಯಕಾರೀ ಯುಕ್ತಸ್ತು ಸಮ್ಯಕ್ಸಮುಪಪಾದಯೇತ್।
12135023c ದೇಶಕಾಲಾವಭಿಪ್ರೇತೌ ತಾಭ್ಯಾಂ ಫಲಮವಾಪ್ನುಯಾತ್।।
ಚೆನ್ನಾಗಿ ಯೋಚಿಸಿ ಪರೀಕ್ಷಿಸಿ ಕೆಲಸಮಾಡುವವನು ಮತ್ತು ಸತತ ಸಾವಧಾನದಿಂದಿರುವವನು ಅಭೀಷ್ಟ ದೇಶ-ಕಾಲಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನೆ ಮತ್ತು ಅವುಗಳ ಸಹಯೋಗದಿಂದ ಇಚ್ಛಾನುಸಾರ ಫಲವನ್ನು ಪಡೆದುಕೊಳ್ಳುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಶಾಕುಲೋಪಾಖ್ಯಾನೇ ಪಂಚತ್ರಿಂಶಾತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಶಾಕುಲೋಪಾಖ್ಯಾನ ಎನ್ನುವ ನೂರಾಮೂವತ್ತೈದನೇ ಅಧ್ಯಾಯವು.-
ಗೀತಾ ಪ್ರೆಸ್ ಸಂಪುಟದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಅನಾಗತವಿಧಾತಾ ಚ ಪರ್ಯುತ್ಪನ್ನಮತಿಶ್ಚ ಯಃ। ದ್ವಾವೇವ ಸುಖಮೇಧೇತೇ ದೀರ್ಘಸೂತ್ರೀ ವಿನಶ್ಯತಿ।। ಅರ್ಥಾತ: ಸಂಕಟವು ಬರುವುದಕ್ಕೆ ಮೊದಲೇ ತನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಮಾಡಿಟ್ಟುಕೊಂದಿರುವವನನ್ನು ಅನಾಗತವಿಧಾತಾ ಎಂದು ಕರೆಯುತ್ತಾರೆ. ಸರಿಯಾದ ಸಮಯದಲ್ಲಿಯೇ ಆತ್ಮರಕ್ಷಣೆಯ ಉಪಾಯವು ಹೊಳೆಯುವವನಿಗೆ ಪ್ರತ್ಯುತ್ಪನ್ನಮತಿ ಎಂದು ಕರೆಯುತ್ತಾರೆ. ಈ ಎರಡು ಪ್ರಕಾರದ ಜನರು ಮಾತ್ರ ತಮ್ಮ ಸುಖದ ಉನ್ನತಿಯನ್ನು ಮಾಡಿಕೊಳ್ಳುತ್ತಾರೆ. ಆದರೆ ಕಾರ್ಯದಲ್ಲಿ ಅನಾವಶ್ಯಕ ವಿಳಂಬವನ್ನು ಮಾಡುವ ದೀರ್ಘಸೂತ್ರಿಯು ನಾಶಹೊಂದುತ್ತಾನೆ. ↩︎
-
ಪ್ರತ್ಯುತ್ಪನ್ನಮತಿ ಅಥವಾ ಸರಿಯಾದ ಸಮಯದಲ್ಲಿ ಆತ್ಮರಕ್ಷಣೆಯ ಉಪಾಯವು ಹೊಳೆಯುವವನು. ↩︎
-
ಸಂಕಟವು ಬರುವುದಕ್ಕೆ ಮೊದಲೇ ತನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಮಾಡಿಟ್ಟುಕೊಳ್ಳುವವನು. ↩︎
-
ಕಾರ್ಯದಲ್ಲಿ ಅನಾವಶ್ಯಕ ವಿಳಂಬವನ್ನು ಮಾಡುವವನು. ↩︎
-
ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಷ್ಚ ಯಃ। ದ್ವಾವೇವ ಸುಖಮೇಧೇತೇ ದೀರ್ಘಸೂತ್ರೋ ವಿನಶ್ಯತಿ।। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಕಾಷ್ಠಾಃ ಕಲಾ ಮುಹೂರ್ತಾಶ್ಚ ದಿವಾ ರಾತ್ರಿಸ್ತಥಾ ಲವಾಃ। ಮಾಸಾಃ ಪಕ್ಷಾಃ ಷಡೃತವಃ ಕಲ್ಪಃ ಸಂವತ್ಸರಾಸ್ತಥಾ।। ಪೃಥಿವೀ ದೇಶಇ ತ್ಯುಕ್ತಃ ಕಾನಃ ಸ ಚ ನ ಕೃಶ್ಯತೇ। ಅಭಿಪ್ರೇತಾರ್ಥಸಿದ್ಧ್ಯರ್ಥಂ ಧ್ಯಾಯತೇ ಯಚ್ಚ ತತ್ತಥಾ।। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎