ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 134
ಸಾರ
ರಾಜನು ಯಾವ ಮಾರ್ಗದಿಂದ ಕೋಶವನ್ನು ತುಂಬಿಸಿಕೊಳ್ಳಬೇಕು ಎನ್ನುವುದರ ಕುರಿತಾದ ಬ್ರಹ್ಮಗೀತೆ (1-10).
12134001 ಭೀಷ್ಮ ಉವಾಚ।
12134001a ಅತ್ರ ಗಾಥಾ ಬ್ರಹ್ಮಗೀತಾಃ ಕೀರ್ತಯಂತಿ ಪುರಾವಿದಃ।
12134001c ಯೇನ ಮಾರ್ಗೇಣ ರಾಜಾನಃ ಕೋಶಂ ಸಂಜನಯಂತಿ ಚ।।
ಭೀಷ್ಮನು ಹೇಳಿದನು: “ರಾಜನು ಯಾವ ಮಾರ್ಗದಿಂದ ಕೋಶವನ್ನು ತುಂಬಿಸಿಕೊಳ್ಳಬೇಕು ಎನ್ನುವುದರ ಕುರಿತು ಹಿಂದಿನದನ್ನು ತಿಳಿದವರು ಈ ಬ್ರಹ್ಮಗೀತೆಯ ಕೀರ್ತನೆಯನ್ನು ಮಾಡುತ್ತಾರೆ.
12134002a ನ ಧನಂ ಯಜ್ಞಶೀಲಾನಾಂ ಹಾರ್ಯಂ ದೇವಸ್ವಮೇವ ತತ್।
12134002c ದಸ್ಯೂನಾಂ ನಿಷ್ಕ್ರಿಯಾಣಾಂ ಚ ಕ್ಷತ್ರಿಯೋ ಹರ್ತುಮರ್ಹತಿ।।
ಯಜ್ಞಶೀಲರ ಧನವನ್ನು ಅಪಹರಿಸಬಾರದು. ದೇವರ ಸ್ವತ್ತನ್ನೂ ಅಪಹರಿಸಬಾರದು. ಕ್ಷತ್ರಿಯನಾದವನು ದಸ್ಯುಗಳ ಮತ್ತು ವರ್ಣಾಶ್ರಮ ಯುಕ್ತ ಕರ್ಮಗಳನ್ನು ಮಾಡದೇ ಇರುವವರ ಧನವನ್ನು ಅಪಹರಿಸಬಹುದು.
12134003a ಇಮಾಃ ಪ್ರಜಾಃ ಕ್ಷತ್ರಿಯಾಣಾಂ ರಕ್ಷ್ಯಾಶ್ಚಾದ್ಯಾಶ್ಚ1 ಭಾರತ।
12134003c ಧನಂ ಹಿ ಕ್ಷತ್ರಿಯಸ್ಯೇಹ ದ್ವಿತೀಯಸ್ಯ ನ ವಿದ್ಯತೇ।।
ಭಾರತ! ಕ್ಷತ್ರಿಯರು ರಕ್ಷಿಸಬೇಕೆಂದೇ ಈ ಪ್ರಜೆಗಳಿದ್ದಾರೆ. ಇವರೇ ಕ್ಷತ್ರಿಯರಿಗೆ ಸೇರಿದ ಧನ. ಬೇರೆ ಯಾರಿಗೂ ಅವರು ಸೇರಿಲ್ಲ.
12134004a ತದಸ್ಯ ಸ್ಯಾದ್ಬಲಾರ್ಥಂ ವಾ ಧನಂ ಯಜ್ಞಾರ್ಥಮೇವ ವಾ।
12134004c ಅಭೋಗ್ಯಾ ಹ್ಯೋಷಧೀಶ್ಚಿತ್ತ್ವಾ ಭೋಗ್ಯಾ ಏವ ಪಚಂತ್ಯುತ।।
ಆದರೆ ತನ್ನದೇ ಆಗಿರುವ ಧನವನ್ನು ರಾಜನು ಸೈನ್ಯದ ಸಂಗ್ರಹಕ್ಕಾಗಿಯಾಗಲೀ ಯಜ್ಞಮಾಡುವುದಕ್ಕಾಗಲೀ ಉಪಯೋಗಿಸಿಕೊಳ್ಳಬೇಕು. ಭತ್ತ-ಗೋಧಿ ಮೊದಲಾದ ಹುಲ್ಲಿನ ಪೈರುಗಳಲ್ಲಿ ತಿನ್ನಲು ಯೋಗ್ಯವಲ್ಲದವುಗಳನ್ನು ಬಿಟ್ಟು ಭೋಗ್ಯವಾದ ಧಾನ್ಯಗಳನ್ನೇ ಬಳಸಬೇಕು.
12134005a ಯೋ ವೈ ನ ದೇವಾನ್ನ ಪಿತೃನ್ನ ಮರ್ತ್ಯಾನ್ ಹವಿಷಾರ್ಚತಿ।
12134005c ಆನಂತಿಕಾಂ ತಾಂ ಧನಿತಾಮಾಹುರ್ವೇದವಿದೋ ಜನಾಃ।।
ದೇವತೆಗಳನ್ನು, ಪಿತೃಗಳನ್ನು ಮತ್ತು ಅತಿಥಿಗಳನ್ನು ತೃಪ್ತಿಗೊಳಿಸದೇ ಇರುವವನಲ್ಲಿರುವ ಧನವು ವ್ಯರ್ಥವಾದುದೆಂದು ವೇದವಿದರು ಹೇಳುತ್ತಾರೆ.
12134006a ಹರೇತ್ತದ್ದ್ರವಿಣಂ ರಾಜನ್ ಧಾರ್ಮಿಕಃ ಪೃಥಿವೀಪತಿಃ।
12134006c ನ ಹಿ ತತ್ ಪ್ರೀಣಯೇಲ್ಲೋಕಾನ್ನ ಕೋಶಂ ತದ್ವಿಧಂ ನೃಪಃ।।
ರಾಜನ್! ಧಾರ್ಮಿಕ ಪೃಥಿವೀಪತಿಯು ಅಂಥಹ ವ್ಯರ್ಥವದ ಧನವನ್ನು ಕಸಿದುಕೊಂಡು ಅದರ ಮೂಲಕ ಪ್ರಜೆಗಳಿಗೆ ಅನುಕೂಲಗಳನ್ನು ಮಾಡಿಕೊಟ್ಟು ಪ್ರೀತಗೊಳಿಸಬೇಕು. ತನ್ನ ಕೋಶವನ್ನು ತುಂಬಿಸಿಕೊಳ್ಳುವುದಕ್ಕೆ ರಾಜನು ಇವನ್ನು ಬಳಸಬಾರದು.
12134007a ಅಸಾಧುಭ್ಯೋ ನಿರಾದಾಯ ಸಾಧುಭ್ಯೋ ಯಃ ಪ್ರಯಚ್ಚತಿ।
12134007c ಆತ್ಮಾನಂ ಸಂಕ್ರಮಂ ಕೃತ್ವಾ ಮನ್ಯೇ2 ಧರ್ಮವಿದೇವ ಸಃ।।
ತನ್ನನ್ನೇ ಸೇತುವನ್ನಾಗಿಸಿಕೊಂಡು ದುಷ್ಟರಿಂದ ಧನವನ್ನು ತೆಗೆದುಕೊಂಡು ಸತ್ಪುರುಷರಿಗೆ ನೀಡುವ ರಾಜನು ಸಂಪೂರ್ಣಧರ್ಮವನ್ನು ತಿಳಿದವನಾಗಿರುತ್ತಾನೆ.
12134008a 3ಔದ್ಭಿಜ್ಜಾ ಜಂತವಃ ಕೇ ಚಿದ್ಯುಕ್ತವಾಚೋ ಯಥಾ ತಥಾ4। 12134008c ಅನಿಷ್ಟತಃ ಸಂಭವಂತಿ ತಥಾಯಜ್ಞಃ ಪ್ರತಾಯತೇ5।।
ತರು-ಗುಲ್ಮಾದಿಗಳು ಮತ್ತು ಕೆಲವು ಜಂತುಗಳು ತಾವಾಗಿಯೇ ಹುಟ್ಟಿಕೊಳ್ಳುವಂತೆ ಯಜ್ಞಕ್ಕೆ ಅನಿಷ್ಟ ಜನರು ತಾವಾಗಿಯೇ ಹುಟ್ಟಿಕೊಳ್ಳುತ್ತಾರೆ.
12134009a ಯಥೈವ ದಂಶಮಶಕಂ ಯಥಾ ಚಾಂಡಪಿಪೀಲಿಕಮ್।
12134009c ಸೈವ ವೃತ್ತಿರಯಜ್ಞೇಷು ತಥಾ ಧರ್ಮೋ ವಿಧೀಯತೇ।।
ನೊಣ ಮೊದಲಾದ ಕೀಟಗಳು ಮತ್ತು ಇರುವೆಗಳೊಡನೆ ಹೇಗೋ ಹಾಗೆ ಯಜ್ಞವಿರೋಧಿಗಳ ಕುರಿತೂ ನಡೆದುಕೊಳ್ಳಬೇಕು ಎಂದು ಧರ್ಮಶಾಸನವಿದೆ.
12134010a ಯಥಾ ಹ್ಯಕಸ್ಮಾದ್ಭವತಿ ಭೂಮೌ ಪಾಂಸುತೃಣೋಲಪಮ್6।
12134010c ತಥೈವೇಹ ಭವೇದ್ಧರ್ಮಃ ಸೂಕ್ಷ್ಮಃ ಸೂಕ್ಷ್ಮತರೋಽಪಿ ಚ।।
ಅಕಸ್ಮಾತ್ತಾಗಿ ಭೂಮಿಯ ಮೇಲಾಗುವ ಧೂಳು ಅಥವಾ ಹುಲ್ಲಿನಂತೆ ಧರ್ಮವೂ ಕೂಡ ಸೂಕ್ಷ್ಮಕ್ಕಿಂತಲೂ ಅತಿ ಸೂಕ್ಷ್ಮವಾಗಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಚತುಸ್ತ್ರಿಂಶಾತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ನೂರಾಮೂವತ್ನಾಲ್ಕನೇ ಅಧ್ಯಾಯವು.
-
ರಾಜ್ಯಭೋಗಾಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಕೃತ್ಸ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ತಥಾ ತಥಾ ಜಯೇಲ್ಲೋಕಾನ್ಯುಕ್ತ್ಯಾ ಹೈವ ಯಥಾ ಯಥಾ। ↩︎
-
ಉದ್ಭಿಜ್ಜಾ ಜಂತವೋ ಯದ್ವಚ್ಛುಕ್ಲಜೀವಾ ಯಥಾ ಯಥಾ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಅನಿಮಿತ್ತಾತ್ಸಂಭವಂತಿ ತಥಾ ಯಜ್ಞಃ ಪ್ರಜಾಯತೇ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಪಾಂಸುವಿಲೋಲಿತಃ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎