ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 133
ಸಾರ
ಮರ್ಯಾದೆಯಿಂದಿದ್ದ ದಸ್ಯುವು ದುರ್ಗತಿಯನ್ನು ಹೊಂದುವುದಿಲ್ಲ ಎನ್ನುವುದರ ಕುರಿತಾದ ಕಾಪವ್ಯನ ಕಥೆ (1-26).
12133001 ಭೀಷ್ಮ ಉವಾಚ।
12133001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12133001c ಯಥಾ ದಸ್ಯುಃ ಸಮರ್ಯಾದಃ ಪ್ರೇತ್ಯಭಾವೇ ನ ನಶ್ಯತಿ।।
ಭೀಷ್ಮನು ಹೇಳಿದನು: “ಮರ್ಯಾದೆಯಿಂದಿದ್ದ ದಸ್ಯುವು ದುರ್ಗತಿಯನ್ನು ಹೊಂದುವುದಿಲ್ಲ ಎನ್ನುವುದರ ಕುರಿತು ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
12133002a ಪ್ರಹರ್ತಾ ಮತಿಮಾನ್ ಶೂರಃ ಶ್ರುತವಾನನೃಶಂಸವಾನ್।
12133002c ರಕ್ಷನ್ನಕ್ಷಯಿಣಂ ಧರ್ಮಂ ಬ್ರಹ್ಮಣ್ಯೋ ಗುರುಪೂಜಕಃ।।
12133003a ನಿಷಾದ್ಯಾಂ ಕ್ಷತ್ರಿಯಾಜ್ಜಾತಃ ಕ್ಷತ್ರಧರ್ಮಾನುಪಾಲಕಃ।
12133003c ಕಾಪವ್ಯೋ ನಾಮ ನೈಷಾದಿರ್ದಸ್ಯುತ್ವಾತ್ಸಿದ್ಧಿಮಾಪ್ತವಾನ್।।
ಕಾಪವ್ಯ1 ಎಂಬ ಹೆಸರಿನ ನೈಷಾದಿಯು ದಸ್ಯುವಾಗಿದ್ದರೂ ಸಿದ್ಧಿಯನ್ನು ಹೊಂದಿದನು. ಅವನು ಪ್ರಹಾರಕುಶಲನೂ, ಬುದ್ಧಿವಂತನೂ, ಶೂರನೂ, ಶಾಸ್ತ್ರಜ್ಞನೂ, ಅಕ್ರೂರಿಯೂ ಆಗಿದ್ದನು. ಆಶ್ರಮವಾಸಿಗಳ ಧರ್ಮವನ್ನು ರಕ್ಷಿಸುತ್ತಿದ್ದನು. ಬ್ರಹ್ಮಣ್ಯನೂ ಗುರುಪೂಜಕನೂ ಆಗಿದ್ದನು. ಅವನು ಕ್ಷತ್ರಾಣಿಯಲ್ಲಿ ನಿಷಾದನಿಂದ ಹುಟ್ಟಿದ್ದನು. ಕ್ಷತ್ರಧರ್ಮವನ್ನು ಪಾಲಿಸುತ್ತಿದ್ದನು.
12133004a ಅರಣ್ಯೇ ಸಾಯಪೂರ್ವಾಹ್ಣೇ ಮೃಗಯೂಥಪ್ರಕೋಪಿತಾ।
12133004c ವಿಧಿಜ್ಞೋ ಮೃಗಜಾತೀನಾಂ ನಿಪಾನಾನಾಂ ಚ ಕೋವಿದಃ।।
ಅವನು ಸಾಯಂಕಾಲ ಮತ್ತು ಬೆಳಿಗ್ಗೆ ಅರಣ್ಯದಲ್ಲಿ ಮೃಗಸಮೂಹಗಳನ್ನು ಕುಪಿತಗೊಳಿಸುತ್ತಿದ್ದನು. ಅವನು ಮೃಗಜಾತಿಗಳ ವಿಧಿಗಳನ್ನು ತಿಳಿದುಕೊಂಡಿದ್ದನು. ನಿಷಾದರಲ್ಲಿಯೇ ಕೋವಿದನಾಗಿದ್ದನು.
12133005a ಸರ್ವಕಾನನದೇಶಜ್ಞಃ ಪಾರಿಯಾತ್ರಚರಃ ಸದಾ।
12133005c ಧರ್ಮಜ್ಞಃ ಸರ್ವಭೂತಾನಾಮಮೋಘೇಷುರ್ದೃಢಾಯುಧಃ।।
ಸರ್ವಕಾನನ ಪ್ರದೇಶಗಳನ್ನೂ ತಿಳಿದುಕೊಂಡಿದ್ದನು. ಸದಾ ಪಾರಿಯಾತ್ರ ಪರ್ವತದ ಮೇಲೆ ಸಂಚರಿಸುತ್ತಿದ್ದ ಅವನು ಸರ್ವಭೂತಗಳ ಧರ್ಮವನ್ನು ತಿಳಿದುಕೊಂಡಿದ್ದನು. ದೃಢಾಯುಧನಾಗಿದ್ದ ಅವನ ಪ್ರಹಾರವು ಎಂದೂ ವ್ಯರ್ಥವಾಗುತ್ತಿರಲಿಲ್ಲ.
12133006a ಅಪ್ಯನೇಕಶತಾಃ ಸೇನಾ ಏಕ ಏವ ಜಿಗಾಯ ಸಃ।
12133006c ಸ ವೃದ್ಧಾವಂಧಪಿತರೌ ಮಹಾರಣ್ಯೇಽಭ್ಯಪೂಜಯತ್।।
ಅನೇಕ ನೂರು ಮಂದಿಗಳ ಸೇನೆಯನ್ನೂ ಒಬ್ಬನೇ ಗೆಲ್ಲುತ್ತಿದ್ದನು. ಅವನು ಆ ಮಹಾರಣ್ಯದಲ್ಲಿದ್ದ ಅಂಧ ವೃದ್ಧ ತಂದೆ-ತಾಯಿಯರ ಸೇವೆಗೈಯುತ್ತಿದ್ದನು.
12133007a ಮಧುಮಾಂಸೈರ್ಮೂಲಫಲೈರನ್ನೈರುಚ್ಚಾವಚೈರಪಿ।
12133007c ಸತ್ಕೃತ್ಯ ಭೋಜಯಾಮಾಸ ಸಮ್ಯಕ್ಪರಿಚಚಾರ ಚ।।
ಮಧು, ಮಾಂಸ, ಮೂಲ, ಫಲಗಳು ಮತ್ತು ಅನ್ಯ ಆಹಾರಪದಾರ್ಥಗಳಿಂದ ಅವರನ್ನು ಸತ್ಕರಿಸಿ ಭೋಜನ ಮಾಡಿಸಿ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಿದ್ದನು.
12133008a ಆರಣ್ಯಕಾನ್ ಪ್ರವ್ರಜಿತಾನ್ ಬ್ರಾಹ್ಮಣಾನ್ ಪರಿಪಾಲಯನ್।
12133008c ಅಪಿ ತೇಭ್ಯೋ ಮೃಗಾನ್ ಹತ್ವಾ ನಿನಾಯ ಚ ಮಹಾವನೇ।।
ವಾನಪ್ರಸ್ಥಾಶ್ರಮದಲ್ಲಿದ್ದವರನ್ನೂ ಸಂನ್ಯಾಸಿ ಬ್ರಾಹ್ಮಣರನ್ನೂ ಪರಿಪಾಲಿಸುತ್ತಿದ್ದನು. ಮೃಗಗಳನ್ನು ಬೇಟೆಯಾಡಿ ಆ ಮಹಾವನದಲ್ಲಿದ್ದ ಅವರಿಗೆ ಕೊಂಡೊಯ್ಯುತ್ತಿದ್ದನು.
12133009a ಯೇ ಸ್ಮ ನ ಪ್ರತಿಗೃಹ್ಣಂತಿ ದಸ್ಯುಭೋಜನಶಂಕಯಾ।
12133009c ತೇಷಾಮಾಸಜ್ಯ ಗೇಹೇಷು ಕಾಲ್ಯ ಏವ ಸ ಗಚ್ಚತಿ।।
ದಸ್ಯುವಿತ್ತ ಭೋಜನವನ್ನು ತಿನ್ನಬಾರದೆಂದು ಶಂಕಿಸಿ ಅವನಿತ್ತ ಭೋಜನವನ್ನು ಸ್ವೀಕರಿಸದೇ ಇದ್ದವರಿಗೆ ಅವನು ಫಲ-ಮೂಲಾದಿ ಆಹಾರಗಳನ್ನು ಬೆಳಿಗ್ಗೆಯೇ ಹೋಗಿ ಇಟ್ಟು ಬರುತ್ತಿದ್ದನು.
12133010a ತಂ ಬಹೂನಿ ಸಹಸ್ರಾಣಿ ಗ್ರಾಮಣಿತ್ವೇಽಭಿವವ್ರಿರೇ।
12133010c ನಿರ್ಮರ್ಯಾದಾನಿ ದಸ್ಯೂನಾಂ ನಿರನುಕ್ರೋಶಕಾರಿಣಾಮ್।।
ಹೀಗೆ ನಡೆಯುತ್ತಿರಲು ಒಮ್ಮೆ ಅನೇಕ ಸಾವಿರ ದರೋಡೆಕೋರರು ಕಾಪವ್ಯನನ್ನು ತಮ್ಮ ಅಧಿಪತಿಯನ್ನಾಗಿ ಮಾಡಿಕೊಳ್ಳಬೇಕೆಂಬ ಆಶಯದಿಂದ ಅವನನ್ನು ಸುತ್ತುವರೆದು ಪ್ರಾರ್ಥಿಸಿದರು:
12133011 ದಸ್ಯವ ಊಚುಃ।
12133011a ಮುಹೂರ್ತದೇಶಕಾಲಜ್ಞ ಪ್ರಾಜ್ಞ ಶೀಲದೃಢಾಯುಧ2।
12133011c ಗ್ರಾಮಣೀರ್ಭವ ನೋ ಮುಖ್ಯಃ ಸರ್ವೇಷಾಮೇವ ಸಂಮತಃ।।
ದಸ್ಯುಗಳು ಹೇಳಿದರು: “ನೀನು ದೇಶ, ಕಾಲ ಮತ್ತು ಮುಹೂರ್ತಗಳನ್ನು ತಿಳಿದಿರುವೆ. ಪ್ರಾಜ್ಞನಾಗಿರುವೆ. ಶೂರನೂ ದೃಢಾಯುಧನೂ ಆಗಿರುವೆ. ನಮ್ಮೆಲ್ಲರಿಗೂ ನೀನು ಸಮ್ಮತನಾಗಿರುವೆ. ಆದುದರಿಂದ ನೀನು ನಮಗೆ ಮುಖ್ಯನಾಗು.
12133012a ಯಥಾ ಯಥಾ ವಕ್ಷ್ಯಸಿ ನಃ ಕರಿಷ್ಯಾಮಸ್ತಥಾ ತಥಾ।
12133012c ಪಾಲಯಾಸ್ಮಾನ್ಯಥಾನ್ಯಾಯಂ ಯಥಾ ಮಾತಾ ಯಥಾ ಪಿತಾ।।
ನೀನು ಯಾವ ಯಾವ ರೀತಿಯಲ್ಲಿ ಹೇಳುವೆಯೋ ನಾವು ಹಾಗೆಯೇ ಮಾಡುತ್ತೇವೆ. ತಂದೆ-ತಾಯಿಗಳು ಮಕ್ಕಳನ್ನು ಪಾಲಿಸುವಂತೆ ಯಥಾನ್ಯಾಯವಾಗಿ ನಮ್ಮನ್ನು ಪಾಲಿಸು.”
12133013 ಕಾಪವ್ಯ ಉವಾಚ।
12133013a ಮಾ ವಧೀಸ್ತ್ವಂ ಸ್ತ್ರಿಯಂ ಭೀರುಂ ಮಾ ಶಿಶುಂ ಮಾ ತಪಸ್ವಿನಮ್।
12133013c ನಾಯುಧ್ಯಮಾನೋ ಹಂತವ್ಯೋ ನ ಚ ಗ್ರಾಹ್ಯಾ ಬಲಾತ್ಸ್ತ್ರಿಯಃ।।
ಕಾಪವ್ಯನು ಹೇಳಿದನು: “ನೀವು ಸ್ತ್ರೀಯರವನ್ನಾಗಲೀ, ಭಯಗೊಂಡಿರುವವರನ್ನಾಗಲೀ, ಶಿಶುಗಳನ್ನಾಗಲೀ, ತಪಸ್ವಿಯನ್ನಾಗಲೀ ಕೊಲ್ಲಬಾರದು. ನಿಮ್ಮೊಡನೇ ಯುದ್ಧಮಾಡದೇ ಇರುವವರನ್ನೂ ಕೊಲ್ಲಬಾರದು. ಸ್ತ್ರೀಯರನ್ನು ಬಲಾತ್ಕಾರವಾಗಿ ಅಪಹರಿಸಬಾರದು.
12133014a ಸರ್ವಥಾ ಸ್ತ್ರೀ ನ ಹಂತವ್ಯಾ ಸರ್ವಸತ್ತ್ವೇಷು ಯುಧ್ಯತಾ।
12133014c ನಿತ್ಯಂ ಗೋಬ್ರಾಹ್ಮಣೇ ಸ್ವಸ್ತಿ ಯೋದ್ಧವ್ಯಂ ಚ ತದರ್ಥತಃ।।
ಸರ್ವಜೀವಿಗಳಲ್ಲಿ ಸರ್ವಥಾ ಸ್ತ್ರೀಯರನ್ನು ಕೊಲ್ಲಬಾರದು. ನಿತ್ಯವೂ ಬ್ರಾಹ್ಮಣರ ಹಿತಕ್ಕಾಗಿ ಯುದ್ಧಮಾಡಬೇಕು. ಅವಶ್ಯವಿದ್ದರೆ ಬ್ರಾಹ್ಮಣನ ಸಲುವಾಗಿಯೂ ಯುದ್ಧಮಾಡಬೇಕು.
12133015a ಸಸ್ಯಂ ಚ ನಾಪಹಂತವ್ಯಂ ಸೀರವಿಘ್ನಂ ಚ ಮಾ ಕೃಥಾಃ।
12133015c ಪೂಜ್ಯಂತೇ ಯತ್ರ ದೇವಾಶ್ಚ ಪಿತರೋಽತಿಥಯಸ್ತಥಾ।।
ಹೊಲದಲ್ಲಿದ್ದ ಬೆಳೆಗಳನ್ನು ಅಪಹರಿಸಬಾರದು. ವಿವಾಹಾದಿ ಸಮಾರಂಭಗಳಿಗೆ ವಿಘ್ನವನ್ನುಂಟುಮಾಡಬಾರದು. ದೇವತೆಗಳು, ಪಿತೃಗಳು ಮತ್ತು ಅತಿಥಿಗಳ ಪೂಜೆಯಾಗುತ್ತಿರುವಲ್ಲಿ ಹಲ್ಲೆಗಳನ್ನು ನಡೆಸಬಾರದು.
12133016a ಸರ್ವಭೂತೇಷ್ವಪಿ ಚ ವೈ ಬ್ರಾಹ್ಮಣೋ ಮೋಕ್ಷಮರ್ಹತಿ।
12133016c ಕಾರ್ಯಾ ಚಾಪಚಿತಿಸ್ತೇಷಾಂ ಸರ್ವಸ್ವೇನಾಪಿ ಯಾ ಭವೇತ್।।
ಸರ್ವಭೂತಗಳಲ್ಲಿಯೂ ಬ್ರಾಹ್ಮಣನು ನಮ್ಮಿಂದ ಮುಕ್ತನಾಗಲು ಅರ್ಹನಾಗಿದ್ದಾನೆ. ಅವರನ್ನು ಬಿಟ್ಟುಬಿಡುವುದಲ್ಲದೇ ನಮ್ಮ ಸರ್ವಸ್ವದಿಂದಲೂ ಅವರ ಅಭಿವೃದ್ಧಿಗೆ ಪ್ರಯತ್ನಪಡಬೇಕು.
12133017a ಯಸ್ಯ ಹ್ಯೇತೇ ಸಂಪ್ರರುಷ್ಟಾ ಮಂತ್ರಯಂತಿ ಪರಾಭವಮ್।
12133017c ನ ತಸ್ಯ ತ್ರಿಷು ಲೋಕೇಷು ತ್ರಾತಾ ಭವತಿ ಕಶ್ಚನ।।
ಯಾರಕುರಿತು ಬ್ರಾಹ್ಮಣರು ರೋಷಗೊಂಡು ಅವನ ಪರಾಭವಕ್ಕೆ ಯೋಚಿಸುವರೋ ಅವನನ್ನು ಮೂರು ಲೋಕಗಳಲ್ಲಿ ಯಾರೂ ರಕ್ಷಿಸಲಿಕ್ಕಾಗುವುದಿಲ್ಲ.
12133018a ಯೋ ಬ್ರಾಹ್ಮಣಾನ್ಪರಿಭವೇದ್ವಿನಾಶಂ ವಾಪಿ ರೋಚಯೇತ್।
12133018c ಸೂರ್ಯೋದಯ ಇವಾವಶ್ಯಂ3 ಧ್ರುವಂ ತಸ್ಯ ಪರಾಭವಃ।।
ಬಾಹ್ಮಣರನ್ನು ಕಾಡುವವನು ಮತ್ತು ಅವರ ವಿನಾಶವನ್ನು ಬಯಸುವವನ ಪರಾಭವವು ಅವಶ್ಯವಾಗಿ ಸೂರ್ಯೋದಯದಷ್ಟೇ ನಿಶ್ಚಿತವಾದುದು.
12133019a ಇಹೈವ ಫಲಮಾಸೀನಃ ಪ್ರತ್ಯಾಕಾಂಕ್ಷತಿ ಶಕ್ತಿತಃ4।
12133019c ಯೇ ಯೇ ನೋ ನ ಪ್ರದಾಸ್ಯಂತಿ ತಾಂಸ್ತಾನ್ಸೇನಾಭಿಯಾಸ್ಯತಿ।।
ಇಲ್ಲಿಯೇ ಇದ್ದುಕೊಂಡು ಶಕ್ತಿಯಾದಷ್ಟು ಫಲವನ್ನು ನಿರೀಕ್ಷಿಸುತ್ತಿರಬೇಕು5. ಯಾರು ಕೊಡುವುದಿಲ್ಲವೋ ಅಂಥವರ ಮೇಲೆ ಮಾತ್ರ ಆಕ್ರಮಣ ಮಾಡಬೇಕು.
12133020a ಶಿಷ್ಟ್ಯರ್ಥಂ ವಿಹಿತೋ ದಂಡೋ ನ ವಧಾರ್ಥಂ ವಿನಿಶ್ಚಯಃ6।
12133020c ಯೇ ಚ ಶಿಷ್ಟಾನ್ಪ್ರಬಾಧಂತೇ ಧರ್ಮಸ್ತೇಷಾಂ ವಧಃ ಸ್ಮೃತಃ।।
ದುಷ್ಟರನ್ನು ಶಿಕ್ಷಿಸುವ ಸಲುವಾಗಿಯೇ ದಂಡವು ವಿಹಿತವಾಗಿದೆ. ವಧೆಗಾಗಿ ಅದನ್ನು ಬಳಸಬಾರದು. ಶಿಷ್ಟರನ್ನು ಯಾರು ಬಾಧಿಸುತ್ತಾರೋ ಅವರನ್ನು ವಧಿಸುವುದೇ ಧರ್ಮವೆಂದು ಹೇಳಿದ್ದಾರೆ.
12133021a ಯೇ ಹಿ ರಾಷ್ಟ್ರೋಪರೋಧೇನ ವೃತ್ತಿಂ7 ಕುರ್ವಂತಿ ಕೇ ಚನ।
12133021c ತದೇವ ತೇಽನು ಮೀಯಂತೇ ಕುಣಪಂ ಕೃಮಯೋ ಯಥಾ।।
ರಾಷ್ಟ್ರವನ್ನು ಹಾಳುಮಾಡುವ ವೃತ್ತಿಯಲ್ಲಿರುವವರು ಹೆಣಕ್ಕೆ ಮುತ್ತಿರುವ ಕೃಮಿಗಳಂತೆ ನಾಶವಾಗುತ್ತಾರೆ.
12133022a ಯೇ ಪುನರ್ಧರ್ಮಶಾಸ್ತ್ರೇಣ ವರ್ತೇರನ್ನಿಹ ದಸ್ಯವಃ।
12133022c ಅಪಿ ತೇ ದಸ್ಯವೋ ಭೂತ್ವಾ ಕ್ಷಿಪ್ರಂ ಸಿದ್ಧಿಮವಾಪ್ನುಯುಃ।।
ದಸ್ಯುಗಳಾಗಿದ್ದರೂ ಪುನಃ ದರ್ಮಶಾಸ್ತ್ರಗಳಲ್ಲಿರುವಂತೆ ವರ್ತಿಸಿದರೆ ಅವರು ದಸ್ಯುಗಳಾಗಿದ್ದುಕೊಂಡೂ ಬೇಗನೆ ಸಿದ್ಧಿಯನ್ನು ಹೊಂದುತ್ತಾರೆ.””
12133023 ಭೀಷ್ಮ ಉವಾಚ।
12133023a ತತ್ಸರ್ವಮುಪಚಕ್ರುಸ್ತೇ ಕಾಪವ್ಯಸ್ಯಾನುಶಾಸನಮ್।
12133023c ವೃತ್ತಿಂ8 ಚ ಲೇಭಿರೇ ಸರ್ವೇ ಪಾಪೇಭ್ಯಶ್ಚಾಪ್ಯುಪಾರಮನ್।।
ಭೀಷ್ಮನು ಹೇಳಿದನು: “ಅವರೆಲ್ಲರು ಕಾಪವ್ಯನ ಅನುಶಾಸನದಂತೆಯೇ ನಡೆದುಕೊಂಡರು. ಅವರೆಲ್ಲರೂ ವೃತ್ತಿಗಳನ್ನು ಪಡೆದುಕೊಂಡು ಪಾಪಗಳಿಂದಲೂ ವಿಮುಕ್ತರಾದರು.
12133024a ಕಾಪವ್ಯಃ ಕರ್ಮಣಾ ತೇನ ಮಹತೀಂ ಸಿದ್ಧಿಮಾಪ್ತವಾನ್।
12133024c ಸಾಧೂನಾಮಾಚರನ್ ಕ್ಷೇಮಂ ದಸ್ಯೂನ್ಪಾಪಾನ್ನಿವರ್ತಯನ್।।
ಕಾಪವ್ಯನು ಸಾಧುಗಳಿಗೆ ಕ್ಷೇಮವನ್ನುಂಟುಮಾಡುತ್ತಿದ್ದುದರಿಂದ ಮತ್ತು ದಸ್ಯುಗಳನ್ನು ಪಾಪಕರ್ಮಗಳಿಂದ ವಿಮುಖರನ್ನಾಗಿ ಮಾಡಿದ್ದುದರಿಂದ ಮಹಾ ಸಿದ್ಧಿಯನ್ನು ಪಡೆದುಕೊಂಡನು.
12133025a ಇದಂ ಕಾಪವ್ಯಚರಿತಂ ಯೋ ನಿತ್ಯಮನುಕೀರ್ತಯೇತ್।
12133025c ನಾರಣ್ಯೇಭ್ಯಃ ಸ ಭೂತೇಭ್ಯೋ ಭಯಮಾರ್ಚೇತ್ಕದಾ ಚನ।।
ಈ ಕಾಪವ್ಯಚರಿತವನ್ನು ನಿತ್ಯವೂ ಕೀರ್ತನೆಮಾಡುವವನು ಅರಣ್ಯವಾಸೀ ಪ್ರಾಣಿಗಳಿಂದ ಕಿಂಚಿತ್ತೂ ಭಯವುಂಟಾಗುವುದಿಲ್ಲ.
12133026a ಭಯಂ ತಸ್ಯ ನ ಮರ್ತ್ಯೇಭ್ಯೋ ನಾಮರ್ತ್ಯೇಭ್ಯಃ ಕಥಂ ಚನ9।
12133026c ನ ಸತೋ ನಾಸತೋ10 ರಾಜನ್ಸ ಹ್ಯರಣ್ಯೇಷು ಗೋಪತಿಃ।।
ಭಾರತ! ಅವನಿಗೆ ಮರ್ತ್ಯರಿಂದಲೂ ಅಮಾನುಷರಿಂದಲೂ ಎಂದೂ ಭಯವಿರುವುದಿಲ್ಲ. ರಾಜನ್! ಅಂಥವನು ಅರಣ್ಯಕ್ಕೇ ಅಧಿಪತಿಯಾಗಬಹುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಕಾಪವ್ಯಚರಿತೇ ತ್ರಿಸ್ತ್ರಿಂಶಾತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಕಾಪವ್ಯಚರಿತ ಎನ್ನುವ ನೂರಾಮೂವತ್ಮೂರನೇ ಅಧ್ಯಾಯವು.
-
ಕಾಯವ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ದೃಢವ್ರತಃ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಸೂರ್ಯೋದಯ ಇವ ಧ್ವಾಂತೇ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಪ್ರತ್ಯಾಕಾಂಕ್ಷೇತ ಸರ್ವಶಃ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ಇಲ್ಲಿಯೇ ಇದ್ದುಕೊಂಡು ದಾರಿಹೋಕರಿಂದ ಹಣದ ಸುಲಿಗೆಯನ್ನು ಮಾಡಬೇಕು (ಭಾತರ ದರ್ಶನ). ↩︎
-
ನ ವೃದ್ಧ್ಯರ್ಥಂ ವಿನಿಶ್ಚಯಃ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ವೃದ್ಧಿಂ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ವೃದ್ಧಿಂ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ನ ಭಯಂ ತಸ್ಯ ಭೂತೇಭ್ಯಃ ಸರ್ವೇಭ್ಯಶ್ಚೈವ ಭಾರತ। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎
-
ನಾಸತೋ ವಿದ್ಯತೇ ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎