ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 131
ಸಾರ
ರಾಜನು ಕೋಶವನ್ನು ಸಂಗ್ರಹಿಸುವುದರ ಅವಶ್ಯಕತೆ, ದಸ್ಯು ವೃತ್ತಿಯ ನಿಂದನೆ (1-18).
12131001 ಭೀಷ್ಮ ಉವಾಚ।
12131001a ಸ್ವರಾಷ್ಟ್ರಾತ್ಪರರಾಷ್ಟ್ರಾಚ್ಚ ಕೋಶಂ ಸಂಜನಯೇನ್ನೃಪಃ।
12131001c ಕೋಶಾದ್ಧಿ ಧರ್ಮಃ ಕೌಂತೇಯ ರಾಜ್ಯಮೂಲಃ ಪ್ರವರ್ತತೇ।।
ಭೀಷ್ಮನು ಹೇಳಿದನು: “ಕೌಂತೇಯ! ನೃಪನು ಸ್ವರಾಷ್ಟ್ರದಿಂದಲೂ ಪರರಾಷ್ಟ್ರದಿಂದಲೂ ಕೋಶವನ್ನು ತುಂಬಿಸಬೇಕು. ಕೋಶದಿಂದಲೇ ಧರ್ಮ ಮತ್ತು ರಾಜ್ಯಮೂಲವು ವೃದ್ಧಿಯಾಗುತ್ತದೆ.
12131002a ತಸ್ಮಾತ್ಸಂಜನಯೇತ್ಕೋಶಂ ಸಂಹೃತ್ಯ ಪರಿಪಾಲಯೇತ್।
12131002c ಪರಿಪಾಲ್ಯಾನುಗೃಹ್ಣೀಯಾದೇಷ ಧರ್ಮಃ ಸನಾತನಃ।।
ಅದುದರಿಂದ ಕೋಶವನ್ನು ಸಂಗ್ರಹಿಸಬೇಕು. ಸಂಗ್ರಹಿಸಿ ಅದನ್ನು ರಕ್ಷಿಸಬೇಕು. ಕೋಶವನ್ನು ಪರಿಪಾಲಿಸುವುದಲ್ಲದೇ ಅದನ್ನು ವೃದ್ಧಿಗೊಳಿಸುತ್ತಲೂ ಇರಬೇಕು. ಇದೇ ಸನಾತನ ರಾಜಧರ್ಮ.
12131003a ನ ಕೋಶಃ ಶುದ್ಧಶೌಚೇನ ನ ನೃಶಂಸೇನ ಜಾಯತೇ।
12131003c ಪದಂ ಮಧ್ಯಮಮಾಸ್ಥಾಯ ಕೋಶಸಂಗ್ರಹಣಂ ಚರೇತ್।।
ಶುದ್ಧ-ಶೌಚನಿಗೆ ಕೋಶವನ್ನು ಕೂಡಿಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕ್ರೂರಿಯಿಂದಲೂ ಅದು ಸಾಧ್ಯವಿಲ್ಲ. ಮಧ್ಯಮ ಪದವನ್ನು ಆಶ್ರಯಿಸಿ ಕೋಶಸಂಗ್ರಹಣೆಯನ್ನು ಮಾಡಬೇಕು.
12131004a ಅಬಲಸ್ಯ ಕುತಃ ಕೋಶೋ ಹ್ಯಕೋಶಸ್ಯ ಕುತೋ ಬಲಮ್।
12131004c ಅಬಲಸ್ಯ ಕುತೋ ರಾಜ್ಯಮರಾಜ್ಞಃ ಶ್ರೀಃ ಕುತೋ ಭವೇತ್।।
ಅಬಲನಿಗೆ ಎಲ್ಲಿಯ ಕೋಶ? ಕೋಶವಿಲ್ಲದವನಿಗೆ ಎಲ್ಲಿಯ ಬಲ? ಅಬಲನಿಗೆ ಎಲ್ಲಿಯ ರಾಜ್ಯ? ಮತ್ತು ರಾಜ್ಯವಿಲ್ಲದವನಿಗೆ ಶ್ರೀಯು ಹೇಗೆ ಒಲಿದಾಳು?
12131005a ಉಚ್ಚೈರ್ವೃತ್ತೇಃ ಶ್ರಿಯೋ ಹಾನಿರ್ಯಥೈವ ಮರಣಂ ತಥಾ।
12131005c ತಸ್ಮಾತ್ಕೋಶಂ ಬಲಂ ಮಿತ್ರಾಣ್ಯಥ ರಾಜಾ ವಿವರ್ಧಯೇತ್।।
ಉನ್ನತ ಸ್ಥಾನದಲ್ಲಿರುವವನ ಶ್ರೀಯು ಹಾನಿಯಾಯಿತೆಂದರೆ ಅದು ಅವನಿಗೆ ಮರಣಕ್ಕೆ ಸಮನಾಗುತ್ತದೆ. ಆದುದರಿಂದ ರಾಜನು ಕೋಶ, ಬಲ ಮತ್ತು ಮಿತ್ರರನ್ನು ವರ್ಧಿಸುತ್ತಿರಬೇಕು.
12131006a ಹೀನಕೋಶಂ ಹಿ ರಾಜಾನಮವಜಾನಂತಿ ಮಾನವಾಃ।
12131006c ನ ಚಾಸ್ಯಾಲ್ಪೇನ ತುಷ್ಯಂತಿ ಕಾರ್ಯಮಭ್ಯುತ್ಸಹಂತಿ ಚ।।
ಕೋಶಹೀನನಾದ ರಾಜನನ್ನು ಜನರು ಕೀಳಾಗಿ ಕಾಣುತ್ತಾರೆ. ಅಲ್ಪದಿಂದ ಅವರು ತುಷ್ಟರಾಗುವುದಿಲ್ಲ ಮತ್ತು ರಾಜನ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಉತ್ಸಾಹಿತರಾಗಿರುವುದಿಲ್ಲ.
12131007a ಶ್ರಿಯೋ ಹಿ ಕಾರಣಾದ್ರಾಜಾ ಸತ್ಕ್ರಿಯಾಂ ಲಭತೇ ಪರಾಮ್।
12131007c ಸಾಸ್ಯ ಗೂಹತಿ ಪಾಪಾನಿ ವಾಸೋ ಗುಹ್ಯಮಿವ ಸ್ತ್ರಿಯಾಃ।।
ಶ್ರೀಯ ಕಾರಣದಿಂದಲೇ ರಾಜನು ಪರಮ ಸತ್ಕಾರಗಳನ್ನು ಪಡೆಯುತ್ತಾನೆ. ಬಟ್ಟೆಯು ಸ್ತ್ರೀಯ ಗುಪ್ತಸ್ಥಾನಗಳನ್ನು ಹೇಗೆ ಮುಚ್ಚುವುದೋ ಅದೇ ರೀತಿ ಐಶ್ವರ್ಯವು ರಾಜನ ಪಾಪಗಳನ್ನು ಅಡಗಿಸುತ್ತದೆ.
12131008a ಋದ್ಧಿಮಸ್ಯಾನುವರ್ತಂತೇ1 ಪುರಾ ವಿಪ್ರಕೃತಾ ಜನಾಃ।
12131008c ಶಾಲಾವೃಕಾ ಇವಾಜಸ್ರಂ ಜಿಘಾಂಸೂನಿವ ವಿಂದತಿ।
12131008e ಈದೃಶಸ್ಯ ಕುತೋ ರಾಜ್ಞಃ ಸುಖಂ ಭರತಸತ್ತಮ2।।
ಭರತಸತ್ತಮ! ಹಿಂದೆ ತಿರಸ್ಕೃತರಾದ ಜನರು, ನಾಯಿಗಳು ತಮ್ಮನ್ನು ಕೊಲ್ಲುವ ಚಾಂಡಾಲನನ್ನೇ ಹಿಂಬಾಲಿಸಿ ಹೋಗುವಂತೆ, ವೃದ್ಧಿಹೊಂದುತ್ತಿರುವವನನ್ನು ಹಿಂಬಾಲಿಸುತ್ತಾರೆ. ಈ ರೀತಿಯಿರುವಾಗ ರಾಜನಿಗೆ ಎಲ್ಲಿಯ ಸುಖ?
12131009a ಉದ್ಯಚ್ಚೇದೇವ ನ ಗ್ಲಾಯೇದುದ್ಯಮೋ ಹ್ಯೇವ ಪೌರುಷಮ್।
12131009c ಅಪ್ಯಪರ್ವಣಿ ಭಜ್ಯೇತ ನ ನಮೇತೇಹ ಕಸ್ಯ ಚಿತ್।।
ಒಣಗಿದ ಕಟ್ಟಿಗೆಯು ಮುರಿದುಹೋಗಬಹುದು ಆದರೆ ಎಂದೂ ಬಗ್ಗುವುದಿಲ್ಲ. ಹಾಗೆ ರಾಜನಾದವನು ಯಾವಾಗಲೂ ಸೆಟೆದೇ ನಿಂತಿರಬೇಕು. ತಲೆಬಾಗಿಸಬಾರದು. ಉದ್ಯಮಿಯಾಗಿರುವುದೇ ಪುರುಷ ಲಕ್ಷಣವು.
12131010a ಅಪ್ಯರಣ್ಯಂ ಸಮಾಶ್ರಿತ್ಯ ಚರೇದ್ದಸ್ಯುಗಣೈಃ3 ಸಹ।
12131010c ನ ತ್ವೇವೋದ್ಧೃತಮರ್ಯಾದೈರ್ದಸ್ಯುಭಿಃ ಸಹಿತಶ್ಚರೇತ್।
ಅರಣ್ಯವನ್ನಾಶ್ರಯಿಸಿ ಮೃಗಗಣಗಳೊಡನೆಯಾದರೂ ಸಂಚರಿಸುತ್ತಿರಬಹುದು. ಆದರೆ ಲೋಕಮರ್ಯಾದೆಯನ್ನು ಮೀರಿ ನಡೆಯುತ್ತಿರುವ ದಸ್ಯುಗಳೊಡನೆ ಎಂದೂ ಸೇರಬಾರದು.
12131010e ದಸ್ಯೂನಾಂ ಸುಲಭಾ ಸೇನಾ ರೌದ್ರಕರ್ಮಸು ಭಾರತ।।
12131011a ಏಕಾಂತೇನ ಹ್ಯಮರ್ಯಾದಾತ್ಸರ್ವೋಽಪ್ಯುದ್ವಿಜತೇ ಜನಃ।
12131011c ದಸ್ಯವೋಽಪ್ಯುಪಶಂಕಂತೇ ನಿರನುಕ್ರೋಶಕಾರಿಣಃ।।
ಭಾರತ! ರೌದ್ರಕರ್ಮಗಳನ್ನು ಮಾಡಲು ದಸ್ಯುಗಳಿಗೆ ಸುಲಭವಾಗಿ ಸೈನ್ಯವು ಸಿಗುತ್ತದೆ. ಮರ್ಯಾದಾಶೂನ್ಯರಾದ ದಸ್ಯುಗಳ ವಿಷಯದಲ್ಲಿ ಎಲ್ಲ ಜನರೂ ಉದ್ವಿಗ್ನರಾಗಿರುತ್ತಾರೆ. ಕ್ರೂರಕರ್ಮಗಳನ್ನೆಸಗುವ ದಸ್ಯುಗಳು ಎಲ್ಲರನೂ ಸಂಶಯಗಸ್ತರಾಗಿಯೇ ನೋಡುತ್ತಾರೆ.
12131012a ಸ್ಥಾಪಯೇದೇವ ಮರ್ಯಾದಾಂ ಜನಚಿತ್ತಪ್ರಸಾದಿನೀಮ್।
12131012c ಅಲ್ಪಾಪ್ಯಥೇಹ ಮರ್ಯಾದಾ ಲೋಕೇ ಭವತಿ ಪೂಜಿತಾ।।
ಜನರ ಚಿತ್ತವನ್ನು ಪ್ರಸನ್ನಗೊಳಿಸುವ ಮರ್ಯಾದೆಯನ್ನು ರಾಜನು ಸ್ಥಾಪಿಸಬೇಕು. ಅಲ್ಪಪ್ರಯೋಜನದಲ್ಲಿಯೂ ಕಟ್ಟುಪಾಡುಗಳಿರುವುದು ಲೋಕದಲ್ಲಿ ಮಾನ್ಯವಾಗುತ್ತದೆ.
12131013a ನಾಯಂ ಲೋಕೋಽಸ್ತಿ ನ ಪರ ಇತಿ ವ್ಯವಸಿತೋ ಜನಃ।
12131013c ನಾಲಂ ಗಂತುಂ ಚ ವಿಶ್ವಾಸಂ ನಾಸ್ತಿಕೇ ಭಯಶಂಕಿನಿ।।
“ಇಹವೂ ಇಲ್ಲ ಪರವೂ ಇಲ್ಲ” ಎಂದು ಅಭಿಪ್ರಾಯಪಡುವ ಜನರೂ ಇದ್ದಾರೆ. ಈ ರೀತಿಯ ನಾಸ್ತಿಕ್ಯವು ಭಯ-ಶಂಕೆಗಳಿಗೆ ಕಾರಣವಾಗುತ್ತದೆ. ಆದುದರಿಂದ ಅಂಥವರಲ್ಲಿ ವಿಶ್ವಾಸವನ್ನಿಡಬಾರದು.
12131014a ಯಥಾ ಸದ್ಭಿಃ ಪರಾದಾನಮಹಿಂಸಾ ದಸ್ಯುಭಿಸ್ತಥಾ।
12131014c ಅನುರಜ್ಯಂತಿ ಭೂತಾನಿ ಸಮರ್ಯಾದೇಷು ದಸ್ಯುಷು।।
ದಸ್ಯುಗಳಲ್ಲಿಯೂ ಕೂಡ ಮರ್ಯಾದೆಯಿಂದ ನಡೆದುಕೊಳ್ಳುವರರಿದ್ದಾರೆ. ಸಾಧು ದಸ್ಯುಗಳು ಅಹಿಂಸೆಯಿಂದ ಇನ್ನೊಬ್ಬರ ಧನವನ್ನು ಅಪಹಿಸಿಕೊಳ್ಳುವರು. ಮರ್ಯಾದೆಯಿಂದಿರುವ ದಸ್ಯುಗಳ ವಿಷಯದಲ್ಲಿ ಜನರು ಅನುಕಂಪತೋರಿಸುತ್ತಾರೆ.
12131015a ಅಯುಧ್ಯಮಾನಸ್ಯ ವಧೋ ದಾರಾಮರ್ಷಃ ಕೃತಘ್ನತಾ।
12131015c ಬ್ರಹ್ಮವಿತ್ತಸ್ಯ ಚಾದಾನಂ ನಿಃಶೇಷಕರಣಂ ತಥಾ।
12131015e ಸ್ತ್ರಿಯಾ ಮೋಷಃ ಪರಿಸ್ಥಾನಂ ದಸ್ಯುಷ್ವೇತದ್ವಿಗರ್ಹಿತಮ್।।
12131016a ಸ ಏಷ ಏವ ಭವತಿ ದಸ್ಯುರೇತಾನಿ ವರ್ಜಯನ್।
ಯುದ್ಧಮಾಡದೇ ಇರುವವನ್ನು ಕೊಲ್ಲುವುದು, ಸ್ತ್ರೀಯನ್ನು ಬಲಾತ್ಕರಿಸುವುದು, ಕೃತಘ್ನತೆ, ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದು, ಕನ್ಯೆಯನ್ನು ಅಪಹರಿಸುವುದು, ಗ್ರಾಮವನ್ನು ಕೊಳ್ಳೆಹೊಡೆದು ತಾನೇ ಅದರ ಅಧಿಪತಿಯಾಗುವುದು – ಇವುಗಳನ್ನು ದಸ್ಯುಗಳೂ ನಿಂದಿಸುತ್ತಾರೆ. ಇವುಗಳನ್ನು ದಸ್ಯುಗಳೂ ವರ್ಜಿಸಬೇಕು.
12131016c ಅಭಿಸಂದಧತೇ ಯೇ ನ ವಿನಾಶಾಯಾಸ್ಯ ಭಾರತ।
12131016e ನಶೇಷಮೇವೋಪಾಲಭ್ಯ ನ ಕುರ್ವಂತೀತಿ ನಿಶ್ಚಯಃ।।
ಭಾರತ! ಯಾರ ಸಕಲ ಸರ್ವಸ್ವವನ್ನೂ ದೋಚಿಕೊಂಡು ಹೋಗಿರುವರೋ ಅವರು ಸಮಯ ಬಂದಾಗ ಆ ದಸ್ಯುಗಳ ಸರ್ವಸ್ವವನ್ನೂ ಅಪಹರಿಸುತ್ತಾರೆ. ಇದು ನಿಜ.
12131017a ತಸ್ಮಾತ್ಸಶೇಷಂ ಕರ್ತವ್ಯಂ ಸ್ವಾಧೀನಮಪಿ ದಸ್ಯುಭಿಃ।
12131017c ನ ಬಲಸ್ಥೋಽಹಮಸ್ಮೀತಿ ನೃಶಂಸಾನಿ ಸಮಾಚರೇತ್।।
ಆದುದರಿಂದ ದಸ್ಯುಗಳು ಇತರರ ಸಂಪೂರ್ಣವನ್ನೂ ಕಸಿದುಕೊಳ್ಳದೇ ಅವರ ಸ್ವಾಧೀನದಲ್ಲಿ ಸ್ವಲ್ಪವನ್ನಾದರೂ ಇರಿಸಬೇಕು. ತಾನೇ ಬಲಿಷ್ಠನೆಂದು ಕ್ರೂರಕೃತ್ಯಗಳನ್ನು ಮಾಡಬಾರದು.
12131018a ಸಶೇಷಕಾರಿಣಸ್ತಾತ ಶೇಷಂ ಪಶ್ಯಂತಿ ಸರ್ವತಃ।
12131018c ನಿಃಶೇಷಕಾರಿಣೋ ನಿತ್ಯಮಶೇಷಕರಣಾದ್ಭಯಮ್।।
ಅಯ್ಯಾ! ಇತರರಿಗೆ ಉಳಿಸಿದ ದರೋಡೆಕೋರರು ತಮ್ಮಲ್ಲಿಯೂ ಸಲ್ಪ ಉಳಿಯುವನ್ನು ಕಾಣುತ್ತಾರೆ. ಇತರರ ಸ್ವತ್ತನ್ನು ನಿಃಶೇಷವಾಗಿ ಕಸಿದುಕೊಂಡವರಿಗೆ ತಮ್ಮ ಸ್ವತ್ತೂ ನಿಃಶೇಷವಾಗಿ ಕಳೆದುಹೋಗುತ್ತದೆ ಎಂಬ ನಿತ್ಯ ಭಯವಿರುತ್ತದೆ.”