ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 127
ಸಾರ
ಧರ್ಮದ ವಿಷಯವಾಗಿ ಯಮ ಮತ್ತು ಗೌತಮರ ಸಂವಾದ (1-10).
12127001 ಯುಧಿಷ್ಠಿರ ಉವಾಚ।
12127001a ನಾಮೃತಸ್ಯೇವ ಪರ್ಯಾಪ್ತಿರ್ಮಮಾಸ್ತಿ ಬ್ರುವತಿ ತ್ವಯಿ।
12127001c ತಸ್ಮಾತ್ಕಥಯ ಭೂಯಸ್ತ್ವಂ ಧರ್ಮಮೇವ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಭಾರತ! ಅಮೃತದಂತೆ ನೀನು ಹೇಳುತ್ತಿರುವುದನ್ನು ಕೇಳುವುದರಲ್ಲಿ ನನಗೆ ಇನ್ನೂ ತೃಪ್ತಿಯೇ ಆದಂತಿಲ್ಲ. ಆದುದರಿಂದ ಪಿತಾಮಹ! ಧರ್ಮದ ಕುರಿತು ಇನ್ನೂ ಹೇಳು!”
12127002 ಭೀಷ್ಮ ಉವಾಚ।
12127002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12127002c ಗೌತಮಸ್ಯ ಚ ಸಂವಾದಂ ಯಮಸ್ಯ ಚ ಮಹಾತ್ಮನಃ।।
ಭೀಷ್ಮನು ಹೇಳಿದನು: “ಇದರ ಕುರಿತಾಗಿ ಗೌತಮ ಮತ್ತು ಮಹಾತ್ಮ ಯಮನ ಸಂವಾದ ರೂಪದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
12127003a ಪಾರಿಯಾತ್ರಗಿರಿಂ ಪ್ರಾಪ್ಯ ಗೌತಮಸ್ಯಾಶ್ರಮೋ ಮಹಾನ್।
12127003c ಉವಾಸ ಗೌತಮೋ ಯತ್ರ ಕಾಲಂ ತದಪಿ ಮೇ ಶೃಣು।।
ಪಾರಿಯಾತ್ರಗಿರಿಯಲ್ಲಿ ಗೌತಮನು ಮಹಾನ್ ಆಶ್ರಮವನ್ನು ಪಡೆದು ಅಲ್ಲಿ ಎಷ್ಟು ಕಾಲ ಗೌತಮನು ವಾಸಿಸಿದನು ಎನ್ನುವುದನ್ನು ಕೇಳು!
12127004a ಷಷ್ಟಿಂ ವರ್ಷಸಹಸ್ರಾಣಿ ಸೋಽತಪ್ಯದ್ಗೌತಮಸ್ತಪಃ।
12127004c ತಮುಗ್ರತಪಸಂ ಯುಕ್ತಂ ತಪಸಾ ಭಾವಿತಂ ಮುನಿಮ್।।
12127005a ಉಪಯಾತೋ ನರವ್ಯಾಘ್ರ ಲೋಕಪಾಲೋ ಯಮಸ್ತದಾ।
12127005c ತಮಪಶ್ಯತ್ಸುತಪಸಮೃಷಿಂ ವೈ ಗೌತಮಂ ಮುನಿಮ್।।
ನರವ್ಯಾಘ್ರ! ಗೌತಮನು ಅಲ್ಲಿ ಅರವತ್ತು ಸಾವಿರ ವರ್ಷಗಳು ತಪಸ್ಸನ್ನು ಆಚರಿಸಿದನು. ಹಾಗೆ ಅವನು ಉಗ್ರ ತಪಸ್ಸಿನಲ್ಲಿ ನಿರತನಾಗಿರಲು ಆ ತಾಪಸಿ ಭಾವಿತ ಮುನಿಯನ್ನು ಲೋಕಪಾಲ ಯಮನು ನೋಡಿದನು. ಅವನು ಮಹಾತಪಸ್ವಿ ಋಷಿ ಮುನಿ ಗೌತಮನಿಗೆ ಕಾಣಿಸಿಕೊಂಡನು.
12127006a ಸ ತಂ ವಿದಿತ್ವಾ ಬ್ರಹ್ಮರ್ಷಿರ್ಯಮಮಾಗತಮೋಜಸಾ।
12127006c ಪ್ರಾಂಜಲಿಃ ಪ್ರಯತೋ ಭೂತ್ವಾ ಉಪಸೃಪ್ತಸ್ತಪೋಧನಃ।।
ತನ್ನ ತೇಜಸ್ಸಿನಿಂದಲೇ ಯಮನು ಬಂದಿದ್ದಾನೆ ಎಂದು ತಿಳಿದ ಆ ತಪೋಧನ ಬ್ರಹ್ಮರ್ಷಿಯು ಕೈಮುಗಿದು ತಲೆಬಾಗಿ ಅವನ ಬಳಿಸಾರಿದನು.
12127007a ತಂ ಧರ್ಮರಾಜೋ ದೃಷ್ಟ್ವೈವ ನಮಸ್ಕೃತ್ಯ ನರರ್ಷಭಮ್।
12127007c ನ್ಯಮಂತ್ರಯತ ಧರ್ಮೇಣ ಕ್ರಿಯತಾಂ ಕಿಮಿತಿ ಬ್ರುವನ್।।
ನರರ್ಷಭನನ್ನು ಕಂಡಕೂಡಲೇ ಧರ್ಮರಾಜನು ನಮಸ್ಕರಿಸಿ “ನಾನು ಏನು ಮಾಡಲಿ?” ಎಂದು ಪ್ರಶ್ನಿಸಿ, ಧರ್ಮದ ಕುರಿತಾದ ಪ್ರಶ್ನೆಗಳನ್ನು ಕೇಳಲು ಸಮ್ಮತಿಸಿದನು.
12127008 ಗೌತಮ ಉವಾಚ।
12127008a ಮಾತಾಪಿತೃಭ್ಯಾಮಾನೃಣ್ಯಂ ಕಿಂ ಕೃತ್ವಾ ಸಮವಾಪ್ನುಯಾತ್।
12127008c ಕಥಂ ಚ ಲೋಕಾನಶ್ನಾತಿ ಪುರುಷೋ ದುರ್ಲಭಾನ್ ಶುಭಾನ್।।
ಗೌತಮನು ಹೇಳಿದನು: “ಏನನ್ನು ಮಾಡುವುದರಿಂದ ಮಾತಾ-ಪಿತೃಗಳ ಋಣವನ್ನು ತೀರಿಸಬಹುದು? ಪುರುಷನು ಹೇಗೆ ದುರ್ಲಭವಾದ ಶುಭ ಲೋಕಗಳನ್ನು ಪಡೆಯಬಹುದು?”
12127009 ಯಮ ಉವಾಚ।
12127009a ತಪಃಶೌಚವತಾ ನಿತ್ಯಂ ಸತ್ಯಧರ್ಮರತೇನ ಚ।
12127009c ಮಾತಾಪಿತ್ರೋರಹರಹಃ ಪೂಜನಂ ಕಾರ್ಯಮಂಜಸಾ।।
ಯಮನು ಹೇಳಿದನು: “ನಿತ್ಯವೂ ತಪಸ್ಸು, ಶೌಚ, ಸತ್ಯ-ಧರ್ಮರತನಾಗಿರಬೇಕು. ಇವುಗಳ ಜೊತೆಗೆ ನಿತ್ಯವೂ ಮಾತಾ-ಪಿತೃಗಳ ಶುಶ್ರೂಷೆಯನ್ನು ಮಾಡುತ್ತಿರಬೇಕು.
12127010a ಅಶ್ವಮೇಧೈಶ್ಚ ಯಷ್ಟವ್ಯಂ ಬಹುಭಿಃ ಸ್ವಾಪ್ತದಕ್ಷಿಣೈಃ।
12127010c ತೇನ ಲೋಕಾನುಪಾಶ್ನಾತಿ ಪುರುಷೋಽದ್ಭುತದರ್ಶನಾನ್।।
ಪರ್ಯಾಪ್ತ ದಕ್ಷಿಣೆಗಳಿಂದ ಕೂಡಿದ ಅನೇಕ ಅಶ್ವಮೇಧಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸುವುದರಿಂದ ಪುರುಷನು ಅದ್ಭುತವಾಗಿ ಕಾಣುವ ಲೋಕಗಳನ್ನು ಪಡೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಯಮಗೌತಮಸಂವಾದೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಯಮಗೌತಮಸಂವಾದ ಎನ್ನುವ ನೂರಾಇಪ್ಪತ್ತೇಳನೇ ಅಧ್ಯಾಯವು.