126 ಋಷಭಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 1261

ಸಾರ

ಋಷಭನು ರಾಜಾ ಸುಮಿತ್ರನಿಗೆ ವೀರದ್ಯುಮ್ನ ಮತ್ತು ತನು ಮುನಿಯ ವೃತ್ತಾಂತವನ್ನು ಹೇಳಿದುದು (1-26). ತನು ಮುನಿಯು ವೀರದ್ಯುಮ್ನನಿಗೆ ಆಶೆಯ ಸ್ವರೂಪವನ್ನು ಪರಿಚಯಿಸಿದುದು ಮತ್ತು ಋಷಭನ ಉಪದೇಶದಿಂದ ಸುಮಿತ್ರನು ಆಶೆಯ್ನನು ತ್ಯಜಿಸಿದುದು (27-52).

12126001 ಭೀಷ್ಮ ಉವಾಚ।
12126001a ತತಸ್ತೇಷಾಂ ಸಮಸ್ತಾನಾಮೃಷೀಣಾಮೃಷಿಸತ್ತಮಃ।
12126001c ಋಷಭೋ ನಾಮ ವಿಪ್ರರ್ಷಿಃ ಸ್ಮಯನ್ನಿವ ತತೋಽಬ್ರವೀತ್।।

ಭೀಷ್ಮನು ಹೇಳಿದನು: “ಆಗ ಆ ಸಮಸ್ತ ಋಷಿಗಳಲ್ಲಿದ್ದ ಋಷಿಸತ್ತಮ ಋಷಭ ಎಂಬ ಹೆಸರಿನ ವಿಪ್ರರ್ಷಿಯು ನಸುಗುತ್ತಾ ಹೇಳಿದನು:

12126002a ಪುರಾಹಂ ರಾಜಶಾರ್ದೂಲ ತೀರ್ಥಾನ್ಯನುಚರನ್ ಪ್ರಭೋ।
12126002c ಸಮಾಸಾದಿತವಾನ್ದಿವ್ಯಂ ನರನಾರಾಯಣಾಶ್ರಮಮ್।।

“ಪ್ರಭೋ! ರಾಜಶಾರ್ದೂಲ! ಹಿಂದೆ ನಾನು ತೀರ್ಥಗಳಲ್ಲಿ ಸಂಚರಿಸುತ್ತಾ ದಿವ್ಯ ನರನಾರಾಯಣಾಶ್ರಮಕ್ಕೆ ಹೋದೆನು.

12126003a ಯತ್ರ ಸಾ ಬದರೀ ರಮ್ಯಾ ಹ್ರದೋ ವೈಹಾಯಸಸ್ತಥಾ।
12126003c ಯತ್ರ ಚಾಶ್ವಶಿರಾ ರಾಜನ್ವೇದಾನ್ಪಠತಿ ಶಾಶ್ವತಾನ್।।

ರಾಜನ್! ಅಲ್ಲಿ ಬದರೀ ವೃಕ್ಷವಿದೆ. ರಮ್ಯ ವೈಹಾಯ ಸರೋವರವೂ ಇದೆ. ಅಲ್ಲಿ ಅಶ್ವಶಿರನು ಶಾಶ್ವತವಾಗಿ ವೇದಗಳನ್ನು ಪಠಿಸುತ್ತಿರುತ್ತಾನೆ.

12126004a ತಸ್ಮಿನ್ಸರಸಿ ಕೃತ್ವಾಹಂ ವಿಧಿವತ್ತರ್ಪಣಂ ಪುರಾ।
12126004c ಪಿತೄಣಾಂ ದೇವತಾನಾಂ ಚ ತತೋಽಶ್ರಮಮಿಯಾಂ ತದಾ।।

ಆ ಸರಸ್ಸಿನಲ್ಲಿ ನಾನು ಮೊದಲು ವಿಧಿವತ್ತಾಗಿ ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣಗಳನ್ನಿತ್ತು ಆ ಆಶ್ರಮವನ್ನು ಪ್ರವೇಶಿಸಿದೆನು.

12126005a ರೇಮಾತೇ ಯತ್ರ ತೌ ನಿತ್ಯಂ ನರನಾರಾಯಣಾವೃಷೀ।
12126005c ಅದೂರಾದಾಶ್ರಮಂ ಕಂ ಚಿದ್ವಾಸಾರ್ಥಮಗಮಂ ತತಃ।।

ಅಲ್ಲಿ ನರನಾರಾಯಣಋಷಿಗಳನ್ನು ಸಂದರ್ಶಿಸಿ ನಂತರ ಹತ್ತಿರದಲ್ಲಿಯೇ ಇದ್ದ ಇನ್ನೊಂದು ಅಶ್ರಮಕ್ಕೆ ಉಳಿದುಕೊಳ್ಳಲು ಹೋದೆನು.

12126006a ತತಶ್ಚೀರಾಜಿನಧರಂ ಕೃಶಮುಚ್ಚಮತೀವ ಚ।
12126006c ಅದ್ರಾಕ್ಷಮೃಷಿಮಾಯಾಂತಂ ತನುಂ ನಾಮ ತಪೋನಿಧಿಮ್।।

ಅದೇ ಆಶ್ರಮಕ್ಕೆ ನಾರುಮಡಿಯನ್ನುಟ್ಟಿದ್ದ ಕೃಷ್ಣಾಜಿನವನ್ನು ಧರಿಸಿದ್ದ ಕೃಶನಾಗಿಯೂ ಅತ್ಯಂತ ಎತ್ತರನಾಗಿಯೂ ಇದ್ದ ತನು ಎಂಬ ಹೆಸರಿನ ತಪೋನಿಧಿಯನ್ನು ಕಂಡೆನು.

12126007a ಅನ್ಯೈರ್ನರೈರ್ಮಹಾಬಾಹೋ ವಪುಷಾಷ್ಟಗುಣಾನ್ವಿತಮ್।
12126007c ಕೃಶತಾ ಚಾಪಿ ರಾಜರ್ಷೇ ನ ದೃಷ್ಟಾ ತಾದೃಶೀ ಕ್ವ ಚಿತ್।।

ಮಹಾಬಾಹೋ! ಅವನ ಶರೀರವು ಅನ್ಯರ ಶರೀರಕ್ಕಿಂತ ಎಂಟು ಪಟ್ಟು ಎತ್ತರವಾಗಿತ್ತು. ರಾಜರ್ಷೇ! ಅವನಷ್ಟು ತೆಳುವಾದ ಶರೀರವನ್ನು ನಾನು ನೋಡಿಯೇ ಇರಲಿಲ್ಲ.

12126008a ಶರೀರಮಪಿ ರಾಜೇಂದ್ರ ತಸ್ಯ ಕಾನಿಷ್ಠಿಕಾಸಮಮ್।
12126008c ಗ್ರೀವಾ ಬಾಹೂ ತಥಾ ಪಾದೌ ಕೇಶಾಶ್ಚಾದ್ಭುತದರ್ಶನಾಃ।।

ರಾಜೇಂದ್ರ! ಅವನ ಶರೀರವು ಕಿರುಬೆರಳಿನಷ್ಟು ತೆಳ್ಳಗಾಗಿತ್ತು. ಅವನ ಕುತ್ತಿಗೆ, ಬಾಹುಗಳು, ಪಾದಗಳು ಮತ್ತು ಕೂದಲು ಅದ್ಭುತವಾಗಿ ತೋರುತ್ತಿದ್ದವು.

12126009a ಶಿರಃ ಕಾಯಾನುರೂಪಂ ಚ ಕರ್ಣೌ ನೇತ್ರೇ ತಥೈವ ಚ।
12126009c ತಸ್ಯ ವಾಕ್ಚೈವ ಚೇಷ್ಟಾ ಚ ಸಾಮಾನ್ಯೇ ರಾಜಸತ್ತಮ।।

ರಾಜಸತ್ತಮ! ಅವನ ತಲೆ, ಕಿವಿಗಳು ಮತ್ತು ಕಣ್ಣುಗಳು ಕಾಯಕ್ಕೆ ಅನುರೂಪವಾಗಿದ್ದವು. ಅವನ ಮಾತು ಮತ್ತು ಚೇಷ್ಟೆಗಳು ಸಾಮಾನ್ಯವಾಗಿದ್ದವು.

12126010a ದೃಷ್ಟ್ವಾಹಂ ತಂ ಕೃಶಂ ವಿಪ್ರಂ ಭೀತಃ ಪರಮದುರ್ಮನಾಃ।
12126010c ಪಾದೌ ತಸ್ಯಾಭಿವಾದ್ಯಾಥ ಸ್ಥಿತಃ ಪ್ರಾಂಜಲಿರಗ್ರತಃ।।

ಆ ಕೃಶ ವಿಪ್ರನನ್ನು ಕಂಡು ಭೀತನೂ ಪರಮ ದುರ್ಮನನೂ ಆಗಿ ಅವ ಪಾದಗಳಿಗೆರಗಿ ಕೈಮುಗಿದು ಅವನ ಎದಿರು ನಿಂತುಕೊಂಡೆನು.

12126011a ನಿವೇದ್ಯ ನಾಮ ಗೋತ್ರಂ ಚ ಪಿತರಂ ಚ ನರರ್ಷಭ।
12126011c ಪ್ರದಿಷ್ಟೇ ಚಾಸನೇ ತೇನ ಶನೈರಹಮುಪಾವಿಶಮ್।।

ನರರ್ಷಭ! ನನ್ನ ನಾಮಗೋತ್ರಗಳನ್ನೂ ತಂದೆಯ ಹೆಸರನ್ನೂ ನಿವೇದಿಸಿಕೊಂಡು ಅವನು ತೋರಿಸಿದ ಆಸನದಲ್ಲಿ ಮೆಲ್ಲನೇ ಕುಳಿತುಕೊಂಡೆನು.

12126012a ತತಃ ಸ ಕಥಯಾಮಾಸ ಕಥಾ ಧರ್ಮಾರ್ಥಸಂಹಿತಾಃ।
12126012c ಋಷಿಮಧ್ಯೇ ಮಹಾರಾಜ ತತ್ರ ಧರ್ಮಭೃತಾಂ ವರಃ।।

ಮಹಾರಾಜ! ಆಗ ಅಲ್ಲಿ ಋಷಿಗಳ ಮಧ್ಯದಲ್ಲಿ ಆ ಧರ್ಮಭೃತರಲ್ಲಿ ಶ್ರೇಷ್ಠನು ಧರ್ಮಾರ್ಥಸಂಹಿತ ಕಥೆಗಳನ್ನು ಹೇಳತೊಡಗಿದನು.

12126013a ತಸ್ಮಿಂಸ್ತು ಕಥಯತ್ಯೇವ ರಾಜಾ ರಾಜೀವಲೋಚನಃ।
12126013c ಉಪಾಯಾಜ್ಜವನೈರಶ್ವೈಃ ಸಬಲಃ ಸಾವರೋಧನಃ।।

ಅವನು ಕಥೆಗಳನ್ನು ಹೇಳುತ್ತಿರುವಾಗಲೇ ಓರ್ವ ರಾಜೀವಲೋಚನ ರಾಜನು ಸೈನ್ಯ ಸಮೇತನಾಗಿ ತನ್ನ ಅಂತಃಪುರದ ಸ್ತ್ರೀಯರೊಡನೆ ವೇಗವಾದ ಕುದುರೆಗಳನ್ನೇರಿ ಅಲ್ಲಿಗೆ ಬಂದನು.

12126014a ಸ್ಮರನ್ ಪುತ್ರಮರಣ್ಯೇ ವೈ ನಷ್ಟಂ ಪರಮದುರ್ಮನಾಃ।
12126014c ಭೂರಿದ್ಯುಮ್ನಪಿತಾ ಧೀಮಾನ್ರಘುಶ್ರೇಷ್ಠೋ ಮಹಾಯಶಾಃ।।

ಅರಣ್ಯದಲ್ಲಿ ಕಳೆದುಹೋಗಿದ್ದ ಪುತ್ರನನ್ನು ಸ್ಮರಿಸಿಕೊಳ್ಳುತ್ತಾ ಪರಮ ದುಃಖಿತನಾಗಿದ ಅವನು ಭೂರಿದ್ಯುಮ್ನನ ಪಿತ ಧೀಮಾನ್ ಮಹಾಯಶಸ್ವೀ ರಘುಶ್ರೇಷ್ಠನಾಗಿದ್ದನು.

12126015a ಇಹ ದ್ರಕ್ಷ್ಯಾಮಿ ತಂ ಪುತ್ರಂ ದ್ರಕ್ಷ್ಯಾಮೀಹೇತಿ ಪಾರ್ಥಿವಃ।
12126015c ಏವಮಾಶಾಕೃತೋ ರಾಜಂಶ್ಚರನ್ವನಮಿದಂ ಪುರಾ।।

ರಾಜನ್! “ಪುತ್ರನನ್ನು ಇಲ್ಲಿ ಕಾಣುತ್ತೇನೆ! ಇಲ್ಲಿ ನೋಡುತ್ತೇನೆ!” ಎಂಬ ಆಶೆಯನ್ನಿತ್ತುಕೊಂಡು ಆ ಪಾರ್ಥಿವನು ಈ ವನದಲ್ಲೆಲ್ಲಾ ಅಲೆಯುತ್ತಿದ್ದನು.

12126016a ದುರ್ಲಭಃ ಸ ಮಯಾ ದ್ರಷ್ಟುಂ ನೂನಂ ಪರಮಧಾರ್ಮಿಕಃ।
12126016c ಏಕಃ ಪುತ್ರೋ ಮಹಾರಣ್ಯೇ ನಷ್ಟ ಇತ್ಯಸಕೃತ್ತದಾ।।

“ಪರಮಧಾರ್ಮಿಕನಾಗಿದ್ದ ಅವನು ನನಗೆ ಕಾಣಲೂ ದುರ್ಲಭವಾಗಿಬಿಟ್ಟನಲ್ಲ! ನನ್ನ ಓರ್ವನೇ ಪುತ್ರನು ಮಹಾರಣ್ಯದಲ್ಲಿ ಕಳೆದುಹೋದನಲ್ಲಾ!” ಎಂದು ವಿಲಪಿಸುತ್ತಿದ್ದನು.

12126017a ದುರ್ಲಭಃ ಸ ಮಯಾ ದ್ರಷ್ಟುಮಾಶಾ ಚ ಮಹತೀ ಮಮ।
12126017c ತಯಾ ಪರೀತಗಾತ್ರೋಽಹಂ ಮುಮೂರ್ಷುರ್ನಾತ್ರ ಸಂಶಯಃ।।

“ದುರ್ಲಭವಾಗಿದ್ದರೂ ಅವನನ್ನು ನೋಡಲೇ ಬೇಕೆಂದು ನನಗೆ ಮಹಾ ಆಶೆಯುಂಟಾಗಿದೆ. ಆ ಆಶೆಯು ನನ್ನ ಶರೀರವನ್ನು ಸಂಪೂರ್ಣವಾಗಿ ವ್ಯಾಪಿಸಿದೆ. ಅವನನ್ನು ಕಾಣದಿದ್ದರೆ ಮೃತ್ಯುವನ್ನೇ ಅಪ್ಪುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

12126018a ಏತಚ್ಚ್ರುತ್ವಾ ಸ ಭಗವಾಂಸ್ತನುರ್ಮುನಿವರೋತ್ತಮಃ।
12126018c ಅವಾಕ್ಶಿರಾ ಧ್ಯಾನಪರೋ ಮುಹೂರ್ತಮಿವ ತಸ್ಥಿವಾನ್।।

ಇದನ್ನು ಕೇಳಿ ಭಗವಾನ್ ತನು ಮುನಿವರೋತ್ತಮನು ತಲೆತಗ್ಗಿಸಿ ಧ್ಯಾನಪರನಾಗಿ ಮುಹೂರ್ತಕಾಲ ಕುಳಿತನು.

12126019a ತಮನುಧ್ಯಾಂತಮಾಲಕ್ಷ್ಯ ರಾಜಾ ಪರಮದುರ್ಮನಾಃ।
12126019c ಉವಾಚ ವಾಕ್ಯಂ ದೀನಾತ್ಮಾ ಮಂದಂ ಮಂದಮಿವಾಸಕೃತ್।।

ಅವನು ಧ್ಯಾನಾಸಕ್ತನಾದುದನ್ನು ನೋಡಿ ಪರಮ ದುಃಖಿತನಾದ ದೀನಾತ್ಮ ರಾಜನು ಮೆಲ್ಲ ಮೆಲ್ಲನೇ ಈ ಮಾತನ್ನಾಡಿದನು:

12126020a ದುರ್ಲಭಂ ಕಿಂ ನು ವಿಪ್ರರ್ಷೇ ಆಶಾಯಾಶ್ಚೈವ ಕಿಂ ಭವೇತ್।
12126020c ಬ್ರವೀತು ಭಗವಾನೇತದ್ಯದಿ ಗುಹ್ಯಂ ನ ತನ್ಮಯಿ।।

“ವಿಪ್ರರ್ಷೇ! ಯಾವುದು ದುರ್ಲಭವಾದುದು? ಆಶೆಗಿಂತಲೂ ದೊಡ್ಡದು ಯಾವುದು? ಭಗವಾನ್! ಗುಹ್ಯವಾಗಿಲ್ಲದಿದ್ದರೆ ಇದನ್ನು ನನಗೆ ಹೇಳಬೇಕು.”

12126021a ಮಹರ್ಷಿರ್ಭಗವಾಂಸ್ತೇನ ಪೂರ್ವಮಾಸೀದ್ವಿಮಾನಿತಃ।
12126021c ಬಾಲಿಶಾಂ ಬುದ್ಧಿಮಾಸ್ಥಾಯ ಮಂದಭಾಗ್ಯತಯಾತ್ಮನಃ।।

ತನುವು ಹೇಳಿದನು: “ನಿನ್ನ ಈ ಮಗನು ಹಿಂದೆ ಮೂರ್ಖಬುದ್ಧಿಯನ್ನಾಶ್ರಯಿಸಿ ತನ್ನ ದೌರ್ಭಾಗ್ಯದ ಕಾರಣದಿಂದ ಪೂಜನೀಯ ಮಹರ್ಷಿಯೋರ್ವನನ್ನು ಅಪಮಾನಿಸಿದ್ದನು.

12126022a ಅರ್ಥಯನ್ಕಲಶಂ ರಾಜನ್ಕಾಂಚನಂ ವಲ್ಕಲಾನಿ ಚ।
12126022c ನಿರ್ವಿಣ್ಣಃ ಸ ತು ವಿಪ್ರರ್ಷಿರ್ನಿರಾಶಃ ಸಮಪದ್ಯತ।।

ರಾಜನ್! ಕಾಂಚನ ಕಲಶವನ್ನೂ ವಲ್ಕಲಗಳನ್ನೂ ಕೇಳಿ ಬಂದಿದ್ದ ವಿಪ್ರರ್ಷಿಯನ್ನು ಅವನು ನಿರ್ವಿಣ್ಣನನ್ನಾಗಿಯೂ ನಿರಾಶನನ್ನಾಗಿಯೂ ಮಾಡಿದ್ದನು.”

12126023a ಏವಮುಕ್ತ್ವಾಭಿವಾದ್ಯಾಥ ತಮೃಷಿಂ ಲೋಕಪೂಜಿತಮ್।
12126023c ಶ್ರಾಂತೋ ನ್ಯಷೀದದ್ಧರ್ಮಾತ್ಮಾ ಯಥಾ ತ್ವಂ ನರಸತ್ತಮ।।

ನರಸತ್ತಮ! ಹೀಗೆ ಹೇಳಲು ಆ ಧರ್ಮಾತ್ಮನು ಲೋಕಪೂಜಿತನಾದ ಆ ಋಷಿಯನ್ನು ಅಭಿವಂದಿಸಿ ನಿನ್ನಹಾಗೆಯೇ ಬಳಲಿ ಕುಳಿತಿಕೊಂಡನು.

12126024a ಅರ್ಘ್ಯಂ ತತಃ ಸಮಾನೀಯ ಪಾದ್ಯಂ ಚೈವ ಮಹಾನೃಷಿಃ।
12126024c ಆರಣ್ಯಕೇನ ವಿಧಿನಾ ರಾಜ್ಞೇ ಸರ್ವಂ ನ್ಯವೇದಯತ್।।

ಆಗ ಆ ಮಹಾನೃಷಿಯು ಅರ್ಘ್ಯ-ಪಾದ್ಯಗಳನ್ನು ತರಿಸಿ ಆರಣ್ಯಕ ವಿಧಿಯಂತೆ ಎಲ್ಲವನ್ನೂ ರಾಜನಿಗೆ ನಿವೇದಿಸಿದನು.

12126025a ತತಸ್ತೇ ಮುನಯಃ ಸರ್ವೇ ಪರಿವಾರ್ಯ ನರರ್ಷಭಮ್।
12126025c ಉಪಾವಿಶನ್ಪುರಸ್ಕೃತ್ಯ ಸಪ್ತರ್ಷಯ ಇವ ಧ್ರುವಮ್।।

ಆಗ ಮುನಿಗಳೆಲ್ಲರೂ ಆ ನರರ್ಷಭನನ್ನು ಸಪ್ತರ್ಷಿಗಳು ಧ್ರುವನನ್ನು ಹೇಗೋ ಹಾಗೆ ಸುತ್ತುವರೆದು ಕುಳಿತುಕೊಂಡರು.

12126026a ಅಪೃಚ್ಚಂಶ್ಚೈವ ತೇ ತತ್ರ ರಾಜಾನಮಪರಾಜಿತಮ್।
12126026c ಪ್ರಯೋಜನಮಿದಂ ಸರ್ವಮಾಶ್ರಮಸ್ಯ ಪ್ರವೇಶನಮ್।।

ಆ ರಾಜ ಅಪರಜಿತನನ್ನು ಅವರಿ ಕೇಳಿದರು: “ಈ ಆಶ್ರಮಕ್ಕೆ ಪ್ರವೇಶಿಸಿದುದರ ಕಾರಣವೇನು?”

12126027 ರಾಜೋವಾಚ।
12126027a ವೀರದ್ಯುಮ್ನ ಇತಿ ಖ್ಯಾತೋ ರಾಜಾಹಂ ದಿಕ್ಷು ವಿಶ್ರುತಃ।
12126027c ಭೂರಿದ್ಯುಮ್ನಂ ಸುತಂ ನಷ್ಟಮನ್ವೇಷ್ಟುಂ ವನಮಾಗತಃ।।

ರಾಜನು ಹೇಳಿದನು: “ದಿಕ್ಕುಗಳಲ್ಲಿ ವಿಶ್ರುತನಾದ ವೀರದ್ಯುಮ್ನ ಎಂಬ ಖ್ಯಾತ ರಾಜನು ನಾನು. ಕಳೆದುಹೋದ ನನ್ನ ಸುತ ಭೂರಿದ್ಯುಮ್ನನನ್ನು ಹುಡುಕಿಕೊಂಡು ವನಕ್ಕೆ ಬಂದಿದ್ದೇನೆ.

12126028a ಏಕಪುತ್ರಃ ಸ ವಿಪ್ರಾಗ್ರ್ಯ ಬಾಲ ಏವ ಚ ಸೋಽನಘ।
12126028c ನ ದೃಶ್ಯತೇ ವನೇ ಚಾಸ್ಮಿಂಸ್ತಮನ್ವೇಷ್ಟುಂ ಚರಾಮ್ಯಹಮ್।।

ವಿಪ್ರ್ಯಾಗ್ರರೇ! ಅವನು ನನ್ನ ಓರ್ವನೇ ಪುತ್ರನು. ಅನಘನೂ ಕೂಡ. ಈ ವನದಲ್ಲಿ ಅವನು ನನಗೆ ಕಾಣಲಿಲ್ಲ. ಆವನನ್ನು ಹುಡುಕುತ್ತಲೇ ನಾನು ಸಂಚರಿಸುತ್ತಿದ್ದೇನೆ.””

12126029 ಋಷಭ ಉವಾಚ।
12126029a ಏವಮುಕ್ತೇ ತು ವಚನೇ ರಾಜ್ಞಾ ಮುನಿರಧೋಮುಖಃ।
12126029c ತೂಷ್ಣೀಮೇವಾಭವತ್ತತ್ರ ನ ಚ ಪ್ರತ್ಯುಕ್ತವಾನ್ನೃಪಮ್।।

ಋಷಭನು ಹೇಳಿದನು: “ರಾಜನು ಹೀಗೆ ಹೇಳಲು ಮುನಿಯು ಅಧೋಮುಖನಾಗಿ ಕುಳಿತನು. ಬಹಳ ಹೊತ್ತು ಸುಮ್ಮನೇ ಇದ್ದನು. ರಾಜನಿಗೆ ಏನನ್ನೂ ಹೇಳಲಿಲ್ಲ.

12126030a ಸ ಹಿ ತೇನ ಪುರಾ ವಿಪ್ರೋ ರಾಜ್ಞಾ ನಾತ್ಯರ್ಥಮಾನಿತಃ।
12126030c ಆಶಾಕೃಶಂ ಚ ರಾಜೇಂದ್ರ ತಪೋ ದೀರ್ಘಂ ಸಮಾಸ್ಥಿತಃ।।

ಹಿಂದ ಅದೇ ರಾಜನೇ ಆ ವಿಪ್ರನಿಗೆ ವಿಶೇಷ ಮರ್ಯಾದೆಯನ್ನು ತೋರಿಸಿರಲಿಲ್ಲ. ರಾಜೇಂದ್ರ! ಅವನಿಂದ ಆಶಾಕೃಶನಾಗಿದ್ದ ಅವನು ದೀರ್ಘ ತಪಸ್ಸಿನಲ್ಲಿ ತೊಡಗಿದ್ದನು.

12126031a ಪ್ರತಿಗ್ರಹಮಹಂ ರಾಜ್ಞಾಂ ನ ಕರಿಷ್ಯೇ ಕಥಂ ಚನ।
12126031c ಅನ್ಯೇಷಾಂ ಚೈವ ವರ್ಣಾನಾಮಿತಿ ಕೃತ್ವಾ ಧಿಯಂ ತದಾ।।

ಆಗ ಅವನು ಯಾವ ರಾಜರಿಂದಲೂ ಅನ್ಯ ವರ್ಣದವರಿಂದಲೂ ಯಾವ ದಾನವನ್ನೂ ಸ್ವೀಕರಿಸುವುದಿಲ್ಲ ಎಂದು ನಿಶ್ಚಯಿಸಿದ್ದನು.

12126032a ಆಶಾ ಹಿ ಪುರುಷಂ ಬಾಲಂ ಲಾಲಾಪಯತಿ ತಸ್ಥುಷೀ।
12126032c ತಾಮಹಂ ವ್ಯಪನೇಷ್ಯಾಮಿ ಇತಿ ಕೃತ್ವಾ ವ್ಯವಸ್ಥಿತಃ।।

ಬಹಳಕಾಲದವರೆಗೆ ಇರುವ ಆಶೆಯೇ ಪುರುಷನು ಮೂಢನಂತೆ ಲಾಪಾಪಿಸುವಂತೆ ಮಾಡುತ್ತದೆ. ನಾನು ಅದನ್ನು ಕಿತ್ತುಹಾಕುತ್ತೇನೆ ಎಂದು ಅವನು ತಪೋನಿಷ್ಠನಾಗಿದ್ದನು.

12126033 ರಾಜೋವಾಚ।
12126033a ಆಶಾಯಾಃ ಕಿಂ ಕೃಶತ್ವಂ ಚ ಕಿಂ ಚೇಹ ಭುವಿ ದುರ್ಲಭಮ್।
12126033c ಬ್ರವೀತು ಭಗವಾನೇತತ್ತ್ವಂ ಹಿ ಧರ್ಮಾರ್ಥದರ್ಶಿವಾನ್।।

ರಾಜನು ಹೇಳಿದನು: “ಭಗವನ್! ನೀನು ಧರ್ಮಾರ್ಥದರ್ಶಿಯಾಗಿರುವೆ. ಆಶೆಗಿಂತಲೂ ಬಲವಾದ ದುರ್ಬಲತೆಯೂ ಯಾವುದಿದೆ? ಈ ಭುವಿಯಲ್ಲಿ ದುರ್ಲಭವಾದುದು ಯಾವುದು? ಇದರ ಕುರಿತು ತತ್ತ್ವತಃ ನನಗೆ ಹೇಳಬೇಕು.””

12126034 ಋಷಭ ಉವಾಚ।
12126034a ತತಃ ಸಂಸ್ಮೃತ್ಯ ತತ್ಸರ್ವಂ ಸ್ಮಾರಯಿಷ್ಯನ್ನಿವಾಬ್ರವೀತ್।
12126034c ರಾಜಾನಂ ಭಗವಾನ್ವಿಪ್ರಸ್ತತಃ ಕೃಶತನುಸ್ತನುಃ।।

ಋಷಭನು ಹೇಳಿದನು: “ಆಗ ಕೃಶಶರೀರೀ ಭಗವಾನ್ ತನುವು ಹಿಂದೆ ನಡೆದುದೆಲ್ಲವನ್ನು ಸ್ಮರಿಸಿಕೊಳ್ಳುತ್ತಾ ಮತ್ತು ರಾಜನಿಗೂ ಸ್ಮರಣೆಗೆ ತಂದುಕೊಡುತ್ತಾ ಹೇಳಿದನು:

12126035a ಕೃಶತ್ವೇ ನ ಸಮಂ ರಾಜನ್ನಾಶಾಯಾ ವಿದ್ಯತೇ ನೃಪ।
12126035c ತಸ್ಯಾ ವೈ ದುರ್ಲಭತ್ವಾತ್ತು ಪ್ರಾರ್ಥಿತಾಃ ಪಾರ್ಥಿವಾ ಮಯಾ।।

“ರಾಜನ್! ನೃಪ! ಆಶೆಗೆ ಸಮಾನ ದುರ್ಬಲತೆಯು ಬೇರೆ ಯಾವುದೂ ಇಲ್ಲ. ಪಾರ್ಥಿವ! ನನ್ನ ಆಶೆಯು ದುರ್ಲಭವಾಗಿದ್ದುದರಿಂದಲೇ ನಾನು ನಿನ್ನನ್ನು ಪ್ರಾರ್ಥಿಸಿದ್ದೆನು.”

12126036 ರಾಜೋವಾಚ।
12126036a ಕೃಶಾಕೃಶೇ ಮಯಾ ಬ್ರಹ್ಮನ್ ಗೃಹೀತೇ ವಚನಾತ್ತವ।
12126036c ದುರ್ಲಭತ್ವಂ ಚ ತಸ್ಯೈವ ವೇದವಾಕ್ಯಮಿವ ದ್ವಿಜ।।

ರಾಜನು ಹೇಳಿದನು: “ಬ್ರಹ್ಮನ್! ದ್ವಿಜ! ನಿನ್ನ ಮಾತಿನಿಂದ ಆಶೆಯಿಂದ ಬಂಧಿಸಲ್ಪಟ್ಟಿರುವವರು ದುರ್ಬಲರು ಎಂದು ತಿಳಿದುಕೊಂಡಿದ್ದೇನೆ. ಯಾವುದರ ಕುರಿತು ಆಶೆಯಿರುವುದೋ ಅದೇ ದುರ್ಲಭವು. ಇದನ್ನೇ ವೇದವಾಕ್ಯವೆಂದು ತಿಳಿಯುತ್ತೇನೆ.

12126037a ಸಂಶಯಸ್ತು ಮಹಾಪ್ರಾಜ್ಞ ಸಂಜಾತೋ ಹೃದಯೇ ಮಮ।
12126037c ತನ್ಮೇ ಸತ್ತಮ ತತ್ತ್ವೇನ ವಕ್ತುಮರ್ಹಸಿ ಪೃಚ್ಚತಃ।।

ಮಹಪ್ರಾಜ್ಞ! ನನ್ನ ಹೃದಯದಲ್ಲಿ ಸಂಶಯವೊಂದು ಹುಟ್ಟಿಕೊಂಡಿದೆ. ಸತ್ತಮ! ಕೇಳುತ್ತರುವ ನನಗೆ ತತ್ತ್ವತಃ ಅದನ್ನು ಹೇಳಬೇಕು.

12126038a ತ್ವತ್ತಃ ಕೃಶತರಂ ಕಿಂ ನು ಬ್ರವೀತು ಭಗವಾನಿದಮ್।
12126038c ಯದಿ ಗುಹ್ಯಂ ನ ತೇ ವಿಪ್ರ ಲೋಕೇಽಸ್ಮಿನ್ಕಿಂ ನು ದುರ್ಲಭಮ್।।

ಬಗವನ್! ನಿನಗಿಂತಲೂ ಕೃಶವಾಗಿರುವುದು ಏನಿದೆ? ವಿಪ್ರ! ಇದು ರಹಸ್ಯವಾಗಿಲ್ಲದಿದ್ದರೆ – ಈ ಲೋಕದಲ್ಲಿ ದುರ್ಲಭವಾದುದು ಏನಿದೆ?”

12126039 ಕೃಶತನುರುವಾಚ।
12126039a ದುರ್ಲಭೋಽಪ್ಯಥ ವಾ ನಾಸ್ತಿ ಯೋಽರ್ಥೀ ಧೃತಿಮಿವಾಪ್ನುಯಾತ್।
12126039c ಸುದುರ್ಲಭತರಸ್ತಾತ ಯೋಽರ್ಥಿನಂ ನಾವಮನ್ಯತೇ।।

ಕೃಶತನುವು ಹೇಳಿದನು: “ಅಯ್ಯಾ! ತಾನು ಅತಿಯಾಗಿ ಅಪೇಕ್ಷಿಸಿದುದನ್ನು ಯಾಚಿಸದೇ ಇರುವ ಧೈರ್ಯವಂತನು ದುರ್ಲಭ ಅಥವಾ ಅಂತವನು ಇಲ್ಲವೇ ಇಲ್ಲ ಎಂದು ಹೇಳಬಹುದು.

12126040a ಸಂಶ್ರುತ್ಯ ನೋಪಕ್ರಿಯತೇ ಪರಂ ಶಕ್ತ್ಯಾ ಯಥಾರ್ಹತಃ।
12126040c ಸಕ್ತಾ ಯಾ ಸರ್ವಭೂತೇಷು ಸಾಶಾ ಕೃಶತರೀ ಮಯಾ।।

ಯಾಚಕನನ್ನು ಕೇಳಿ ಅವನಲ್ಲಿ ಆಶೆಯನ್ನು ಹುಟ್ಟಿಸಿ ಪರಮ ಶಕ್ತಿಯನ್ನುಪಯೋಗಿಸಿ ಯಥಾರ್ಹವಾಗಿ ಯಾಚಿಸಿದುದನ್ನು ಕೊಡದೇ ಇದ್ದಾಗ ಸರ್ವಭೂತಗಳಲ್ಲಿ ಯಾವ ಆಶೆಯರುವುದೋ ಅದು ನನಗಿಂತಲೂ ಕೃಶವಾಗಿರುತ್ತದೆ.

12126041a 2ಏಕಪುತ್ರಃ ಪಿತಾ ಪುತ್ರೇ ನಷ್ಟೇ ವಾ ಪ್ರೋಷಿತೇ ತಥಾ। 12126041c ಪ್ರವೃತ್ತಿಂ ಯೋ ನ ಜಾನಾತಿ ಸಾಶಾ ಕೃಶತರೀ ಮಯಾ।।

ಒಬ್ಬನೇ ಪುತ್ರನಿರುವ ಪಿತನು ತನ್ನ ಪುತ್ರನು ನಷ್ಟವಾದರೆ ಅಥವಾ ದೂರಹೋದವನ ಕುರಿತಾದ ಯಾವ ಸಮಾಚಾರವೂ ದೊರೆಯದೇ ಇದ್ದಾಗ ಅವನನ್ನು ಕಾಣಬೇಕೆಂಬ ಯಾವ ಆಶೆಯು ತಂದೆಯಲ್ಲಿ ಉಂಟಾಗುತ್ತದೆಯೋ ಅದು ನನಗಿಂತಲೂ ಕೃಶವಾಗಿರುತ್ತದೆ.

12126042a ಪ್ರಸವೇ ಚೈವ ನಾರೀಣಾಂ ವೃದ್ಧಾನಾಂ ಪುತ್ರಕಾರಿತಾ।
12126042c ತಥಾ ನರೇಂದ್ರ ಧನಿನಾಮಾಶಾ ಕೃಶತರೀ ಮಯಾ3।।

ಮಕ್ಕಳಿಲ್ಲದ ಸ್ತ್ರೀಯರಿಗೆ ವೃದ್ಧಾಪ್ಯದಲ್ಲಾದರೂ ಮಕ್ಕಳನ್ನು ಹಡೆಯಬೇಕೆಂಬ ಯಾವ ಆಶೆಯಿರುವುದೋ, ಧನಿಕರಿಗೆ ಇನ್ನೂ ಹೆಚ್ಚು ಧನವನ್ನು ಕೂಡಿದಬೇಕೆಂಬ ಯಾವ ಆಶೆಯಿರುವುದೋ ಅದು ನನಗಿಂತಲೂ ಕೃಶವಾಗಿರುತ್ತದೆ.””

12126043 ಋಷಭ ಉವಾಚ।
12126043a ಏತಚ್ಚ್ರುತ್ವಾ ತತೋ ರಾಜನ್ಸ ರಾಜಾ ಸಾವರೋಧನಃ।
12126043c ಸಂಸ್ಪೃಶ್ಯ ಪಾದೌ ಶಿರಸಾ ನಿಪಪಾತ ದ್ವಿಜರ್ಷಭೇ।।

ಋಷಭನು ಹೇಳಿದನು: “ರಾಜನ್! ಇದನ್ನು ಕೇಳಿ ರಾಜನು ತನ ರಾಣಿಯೊಡನೆ ದ್ವಿಜರ್ಷಭನ ಪಾದಗಳನ್ನು ಮುಟ್ಟಿ ಶಿರಸಾ ಅಡ್ಡಬಿದ್ದನು.”

12126044 ರಾಜೋವಾಚ।
12126044a ಪ್ರಸಾದಯೇ ತ್ವಾ ಭಗವನ್ ಪುತ್ರೇಣೇಚ್ಚಾಮಿ ಸಂಗತಿಮ್4। 12126044c 5ವೃಣೀಷ್ವ ಚ ವರಂ ವಿಪ್ರ ಯಮಿಚ್ಚಸಿ ಯಥಾವಿಧಿ।।

ರಾಜನು ಹೇಳಿದನು: “ಭಗವನ್! ನೀನು ಪ್ರಸನ್ನನಾಗಬೇಕು. ಪುತ್ರನೊಂದಿಗೆ ಸಮಾಗಮವನ್ನು ಬಯಸುತ್ತೇನೆ. ವಿಪ್ರ! ಬಯಸಿದ ವರವನ್ನು ಯಥಾವಿಧಿಯಾಗಿ ಕೇಳಿಕೋ!””

12126045 ಋಷಭ ಉವಾಚ।
12126045a ಅಬ್ರವೀಚ್ಚ ಹಿ ತಂ ವಾಕ್ಯಂ ರಾಜಾ ರಾಜೀವಲೋಚನಃ।
12126045c ಸತ್ಯಮೇತದ್ಯಥಾ ವಿಪ್ರ ತ್ವಯೋಕ್ತಂ ನಾಸ್ತ್ಯತೋ ಮೃಷಾ।।

ಋಷಭನು ಹೇಳಿದನು: “ಅದನ್ನು ಹೇಳಿ ರಾಜೀವಲೋಚನ ರಾಜನು ಈ ಮಾತನ್ನೂ ಹೇಳಿದನು: “ವಿಪ್ರ! ನೀನು ಹೇಳಿದುದೆಲ್ಲವೂ ಸತ್ಯವದುದು. ಅದರಲ್ಲಿ ಸುಳ್ಳೆಂಬುದು ಯಾವುದೂ ಇಲ್ಲ.”

12126046a ತತಃ ಪ್ರಹಸ್ಯ ಭಗವಾಂಸ್ತನುರ್ಧರ್ಮಭೃತಾಂ ವರಃ।
12126046c ಪುತ್ರಮಸ್ಯಾನಯತ್ ಕ್ಷಿಪ್ರಂ ತಪಸಾ ಚ ಶ್ರುತೇನ ಚ।।

ಆಗ ಆ ಧರ್ಮಭೃತರಲ್ಲಿ ಶ್ರೇಷ್ಠ ಭಗವಾನನು ತನ್ನ ತಪಸ್ಸು ಮತ್ತು ವಿದ್ಯೆಯ ಮೂಲಕ ಕ್ಷಿಪ್ರವಾಗಿ ಅವನ ಪುತ್ರನಲ್ಲು ಅಲ್ಲಿಗೇ ಬರುವಂತೆ ಮಾಡಿದನು.

12126047a ತಂ ಸಮಾನಾಯ್ಯ ಪುತ್ರಂ ತು ತದೋಪಾಲಭ್ಯ ಪಾರ್ಥಿವಮ್।
12126047c ಆತ್ಮಾನಂ ದರ್ಶಯಾಮಾಸ ಧರ್ಮಂ ಧರ್ಮಭೃತಾಂ ವರಃ।।

ಆ ಪುತ್ರನನ್ನು ಅಲ್ಲಿಗೇ ಕರೆಯಿಸಿಕೊಂಡು ಅವನು ರಾಜನಿಗೆ ದೊರಕುವಂತೆ ಮಾಡಿ ಆ ಧರ್ಮಭೃತರಲ್ಲಿ ಶ್ರೇಷ್ಠನು ತನ್ನ ಧರ್ಮಸ್ವರೂಪವನ್ನು ತೋರಿಸಿಕೊಟ್ಟನು.

12126048a ಸಂದರ್ಶಯಿತ್ವಾ ಚಾತ್ಮಾನಂ ದಿವ್ಯಮದ್ಭುತದರ್ಶನಮ್।
12126048c ವಿಪಾಪ್ಮಾ ವಿಗತಕ್ರೋಧಶ್ಚಚಾರ ವನಮಂತಿಕಾತ್।।

ತನ್ನ ದಿವ್ಯ ಅದ್ಭುತದರ್ಶನವನ್ನು ತೋರಿಸಿ ಆ ಪಾಪರಹಿತ ವಿಗತಕ್ರೋಧನು ವನದೆಡೆಗೆ ಹೊರಟು ಹೋದನು.

12126049a ಏತದ್ದೃಷ್ಟಂ ಮಯಾ ರಾಜಂಸ್ತತಶ್ಚ ವಚನಂ ಶ್ರುತಮ್।
12126049c ಆಶಾಮಪನಯಸ್ವಾಶು ತತಃ ಕೃಶತರೀಮಿಮಾಮ್।।

ರಾಜನ್! ಇದನ್ನು ನಾನು ನೋಡಿದೆ. ಅವನ ಮಾತುಗಳನ್ನೂ ನಾನು ಕೇಳಿದೆ. ನೀನೂ ಕೂಡ ಶರೀರವನ್ನು ಕೃಶಗೊಳಿಸುವ ಆಶೆಯನ್ನು ತೊರೆ.””

12126050 ಭೀಷ್ಮ ಉವಾಚ।
12126050a ಸ ತತ್ರೋಕ್ತೋ ಮಹಾರಾಜ ಋಷಭೇಣ ಮಹಾತ್ಮನಾ।
12126050c ಸುಮಿತ್ರೋಽಪನಯತ್ ಕ್ಷಿಪ್ರಮಾಶಾಂ ಕೃಶತರೀಂ ತದಾ।।

ಭೀಷ್ಮನು ಹೇಳಿದನು: “ಮಹಾರಾಜ! ಮಹಾತ್ಮ ಋಷಭನು ಹೀಹೆ ಹೇಳಲು ಸುಮಿತ್ರನು ಬೇಗನೇ ಅತ್ಯಂತ ದುರ್ಬಲವಾದ ಆಶೆಯನ್ನು ತೊರೆದನು.

12126051a ಏವಂ ತ್ವಮಪಿ ಕೌಂತೇಯ ಶ್ರುತ್ವಾ ವಾಣೀಮಿಮಾಂ ಮಮ।
12126051c ಸ್ಥಿರೋ ಭವ ಯಥಾ ರಾಜನ್ ಹಿಮವಾನಚಲೋತ್ತಮಃ।।

ಕೌಂತೇಯ! ಈ ರೀತಿ ನೀನೂ ಕೂಡ ನನ್ನ ಈ ಮಾತನ್ನು ಕೇಳಿ ಅಚಲೋತ್ತಮ ಹಿಮವಾನನಂತೆ ಸ್ಥಿರನಾಗು.

12126052a ತ್ವಂ ಹಿ ದ್ರಷ್ಟಾ ಚ ಶ್ರೋತಾ ಚ ಕೃಚ್ಚ್ರೇಷ್ವರ್ಥಕೃತೇಷ್ವಿಹ।
12126052c ಶ್ರುತ್ವಾ ಮಮ ಮಹಾರಾಜ ನ ಸಂತಪ್ತುಮಿಹಾರ್ಹಸಿ।।

ಮಹಾರಾಜ! ಇಂಥಹ ಕಷ್ಟಪರಿಸ್ಥಿಯಿಯಲ್ಲಿಯೂ ನೀನು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿರುವೆ. ನನ್ನನ್ನು ಕೇಳಿಯೂ ಕೂಡ ನೀನು ಸಂಪಪಿಸಬಾರದು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಭಗೀತಾಸು ಷಡ್ವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಭಗೀತಾ ಎನ್ನುವ ನೂರಾಇಪ್ಪತ್ತಾರನೇ ಅಧ್ಯಾಯವು.


  1. ಈ ಅಧ್ಯಾಯವು ಎರಡು ಅಧ್ಯಾಯಗಳಲ್ಲಿಯೂ ಇದೆ (ಗೀತಾ ಪ್ರೆಸ್). ↩︎

  2. ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಕೃತಘ್ನೇಷು ಚ ಯಾ ಸಕ್ತಾ ನೃಶಂಸೇಷ್ವಲಸೇಷು ಚ। ಅಪಕಾರಿಷು ಚಾಸಕ್ತಾ ಸಾಶಾ ಕೃತಸ್ತರೀ ಮಯಾ।। ↩︎

  3. ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕವಿದೆ: ಪ್ರದಾನಾಕಾಂಕ್ಷಿಣೀನಾಂ ಚ ಕನ್ಯಾಯಾಂ ವಯಸಿ ಸ್ಥಿತೇ। ಶ್ರುತ್ವಾ ಕಥಾಸ್ತಥಾಯುಕ್ತಾಃ ಸಾಶಾ ಕೃಶತರೀ ಮಯಾ।। ↩︎

  4. ಸಂಗತಿಮ್। ಎಂಬ ಪಾಠಾಂತರವಿದೆ (ಭಾರತ ದರ್ಶನ). ↩︎

  5. ಭಾರತ ದರ್ಶನದಲ್ಲಿ ಈ ಶ್ಲೋಕಕ್ಕೆ ಬದಲಾಗಿ ಇನ್ನೊಂದು ಶ್ಲೋಕವಿದೆ: ಯದೇತದುಕ್ತಂ ಭವತಾ ಸಂಪ್ರತಿ ದ್ವಿಜಸತ್ತಮ। ಸತ್ಯಮೇತನ್ನ ಸಂದೇಹೋ ಯದೇತದ್ವ್ಯಾಹೃತಂ ಮಯಾ।। ↩︎