ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 124
ಸಾರ
ಶೀಲದ ಪ್ರಭಾವ, ಶೀಲದ ಅಭಾವದಿಂದ ಧರ್ಮ, ಸತ್ಯ, ಸದಾಚಾರ, ಬಲ ಮತ್ತು ಲಕ್ಷ್ಮಿ – ಇವು ಇಲ್ಲವಾಗುವುದರ ವರ್ಣನೆಯನ್ನು ತಿಳಿಸುವ ಇಂದ್ರ ಮತ್ತು ಪ್ರಹ್ರಾದರ ಸಂವಾದ (1-69).
12124001 ಯುಧಿಷ್ಠಿರ ಉವಾಚ।
12124001a ಇಮೇ ಜನಾ ನರಶ್ರೇಷ್ಠ ಪ್ರಶಂಸಂತಿ ಸದಾ ಭುವಿ।
12124001c ಧರ್ಮಸ್ಯ ಶೀಲಮೇವಾದೌ ತತೋ ಮೇ ಸಂಶಯೋ ಮಹಾನ್।।
ಯುಧಿಷ್ಠಿರನು ಹೇಳಿದನು: “ನರಶ್ರೇಷ್ಠ! ಭುವಿಯಲ್ಲಿ ಜನರು ಸದಾ ಮೊದಲು ಧರ್ಮದ ಶೀಲವನ್ನೇ ಪ್ರಶಂಸಿಸುತ್ತಾರೆ. ಇದರ ಕುರಿತು ನನ್ನಲ್ಲಿ ಮಹಾ ಸಂಶಯವಿದೆ.
12124002a ಯದಿ ತಚ್ಚಕ್ಯಮಸ್ಮಾಭಿರ್ಜ್ಞಾತುಂ ಧರ್ಮಭೃತಾಂ ವರ।
12124002c ಶ್ರೋತುಮಿಚ್ಚಾಮಿ ತತ್ಸರ್ವಂ ಯಥೈತದುಪಲಭ್ಯತೇ।।
ಧರ್ಮಭೃತರಲ್ಲಿ ಶ್ರೇಷ್ಠ! ನನಗೆ ತಿಳಿದುಕೊಳ್ಳಲು ಶಕ್ಯವಿದ್ದರೆ ಈ ಶೀಲವು ಹೇಗೆ ಉಪಲಬ್ಧವಾಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ.
12124003a ಕಥಂ ನು ಪ್ರಾಪ್ಯತೇ ಶೀಲಂ ಶ್ರೋತುಮಿಚ್ಚಾಮಿ ಭಾರತ।
12124003c ಕಿಂಲಕ್ಷಣಂ ಚ ತತ್ಪ್ರೋಕ್ತಂ ಬ್ರೂಹಿ ಮೇ ವದತಾಂ ವರ।।
ಭಾರತ! ಮಾತನಾಡುವವರಲ್ಲಿ ಶ್ರೇಷ್ಠ! ನಾವು ಹೇಗೆ ಶೀಲವನ್ನು ಪಡೆದುಕೊಳ್ಳಬಹುದು? ಇದನ್ನು ಕೇಳಲು ಇಚ್ಛಿಸುತ್ತೇನೆ. ಆ ಶೀಲದ ಲಕ್ಷಣವು ಏನು? ನನಗೆ ಹೇಳು.”
12124004 ಭೀಷ್ಮ ಉವಾಚ।
12124004a ಪುರಾ ದುರ್ಯೋಧನೇನೇಹ ಧೃತರಾಷ್ಟ್ರಾಯ ಮಾನದ।
12124004c ಆಖ್ಯಾತಂ ತಪ್ಯಮಾನೇನ ಶ್ರಿಯಂ ದೃಷ್ಟ್ವಾ ತಥಾಗತಾಮ್।।
12124005a ಇಂದ್ರಪ್ರಸ್ಥೇ ಮಹಾರಾಜ ತವ ಸಭ್ರಾತೃಕಸ್ಯ ಹ।
12124005c ಸಭಾಯಾಂ ಚಾವಹಸನಂ ತತ್ಸರ್ವಂ ಶೃಣು ಭಾರತ।।
ಭೀಷ್ಮನು ಹೇಳಿದನು: “ಮಾನದ! ಮಹಾರಾಜ! ಭಾರತ! ಹಿಂದೆ ಇಂದ್ರಪ್ರಸ್ಥದಲ್ಲಿ ಸಹೋದರರಿಂದ ಕೂಡಿದ್ದ ನಿನ್ನ ಸಂಪತ್ತನ್ನು ಮತ್ತು ಸಭೆಯಲ್ಲಿ ನಡೆದ ಅಪಮಾನವನ್ನು ನೋಡಿ ಸಂತಪ್ತನಾದ ದುರ್ಯೋಧನನು ಕೌರವ ಸಭೆಯಲ್ಲಿ ತನ್ನ ಮನಸ್ಸಿನ ಆತಂಕವನ್ನು ವ್ಯಕ್ತಪಡಿಸಿದುದನ್ನು ಎಲ್ಲವನ್ನೂ ಕೇಳು.
12124006a ಭವತಸ್ತಾಂ ಸಭಾಂ ದೃಷ್ಟ್ವಾ ಸಮೃದ್ಧಿಂ ಚಾಪ್ಯನುತ್ತಮಾಮ್।
12124006c ದುರ್ಯೋಧನಸ್ತದಾಸೀನಃ ಸರ್ವಂ ಪಿತ್ರೇ ನ್ಯವೇದಯತ್।।
ನಿನ್ನ ಸಭೆಯನ್ನೂ ಅನುತ್ತಮ ಸಮೃದ್ಧಿಯನ್ನೂ ನೋಡಿ ದುರ್ಯೋಧನನು ಎಲ್ಲರೊಡನೆ ಆಸೀನನಾಗಿದ್ದ ತಂದೆಗೆ ನಿವೇದಿಸಿದನು:
12124007a ಶ್ರುತ್ವಾ ಚ ಧೃತರಾಷ್ಟ್ರೋಽಪಿ ದುರ್ಯೋಧನವಚಸ್ತದಾ।
12124007c ಅಬ್ರವೀತ್ಕರ್ಣಸಹಿತಂ ದುರ್ಯೋಧನಮಿದಂ ವಚಃ।।
ಧೃತರಾಷ್ಟ್ರನಾದರೋ ದುರ್ಯೋಧನನ ವಚನವನ್ನು ಕೇಳಿ ಕರ್ಣಸಹಿತನಾಗಿದ್ದ ದುರ್ಯೋಧನನಿಗೆ ಈ ಮಾತನ್ನಾಡಿದನು:
12124008a ಕಿಮರ್ಥಂ ತಪ್ಯಸೇ ಪುತ್ರ ಶ್ರೋತುಮಿಚ್ಚಾಮಿ ತತ್ತ್ವತಃ।
12124008c ಶ್ರುತ್ವಾ ತ್ವಾಮನುನೇಷ್ಯಾಮಿ ಯದಿ ಸಮ್ಯಗ್ಭವಿಷ್ಯಸಿ।।
“ಪುತ್ರ! ನೀನು ಯಾವ ಕಾರಣಕ್ಕಾಗಿ ಪರಿತಪಿಸುತ್ತಿರುವೆ? ಅದನ್ನು ತತ್ತ್ವತಃ ಕೇಳಲು ಇಚ್ಛಿಸುತ್ತೇನೆ. ಅದನ್ನು ಕೇಳಿ ಉಚಿತವೆನಿಸಿದರೆ ನಿನ್ನನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತೇನೆ.
12124009a ಯಥಾ ತ್ವಂ ಮಹದೈಶ್ವರ್ಯಂ ಪ್ರಾಪ್ತಃ ಪರಪುರಂಜಯ।
12124009c ಕಿಂಕರಾ ಭ್ರಾತರಃ ಸರ್ವೇ ಮಿತ್ರಾಃ ಸಂಬಂಧಿನಸ್ತಥಾ।।
ಪರಪುರಂಜಯ! ಅವರಲ್ಲಿರುವಂತೆ ನಿನ್ನಲ್ಲಿಯೂ ಮಹದೈಶ್ವರ್ಯವಿದೆ. ನಿನ್ನ ಎಲ್ಲ ಸಹೋದರರೂ ಮಿತ್ರರೂ ಮತ್ತು ಸಂಬಂಧಿಗಳೂ ನಿನಗೆ ಕಿಂಕರರಾಗಿದ್ದಾರೆ.
12124010a ಆಚ್ಚಾದಯಸಿ ಪ್ರಾವಾರಾನಾಶ್ನಾಸಿ ಪಿಶಿತೋದನಮ್।
12124010c ಆಜಾನೇಯಾ ವಹಂತಿ ತ್ವಾಂ ಕಸ್ಮಾಚ್ಚೋಚಸಿ ಪುತ್ರಕ।।
ಉತ್ತಮ ವಸ್ತ್ರಗಳನ್ನೇ ತೊಡುತ್ತಿರುವೆ. ಮಾಂಸದ ಭೋಜನವನ್ನೇ ಉಣ್ಣುತ್ತಿರುವೆ. ಶ್ರೇಷ್ಟ ತಳಿಯ ಆಜಾನೇಯ ಅಶ್ವಗಳೇ ನಿನ್ನ ರಥವನ್ನು ಎಳೆಯುತ್ತವೆ. ನೀನು ಯಾವುದಕ್ಕಾಗಿ ಶೋಕಿಸುತ್ತಿರುವೆ ಪುತ್ರ?”
12124011 ದುರ್ಯೋಧನ ಉವಾಚ।
12124011a ದಶ ತಾನಿ ಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಮ್।
12124011c ಭುಂಜತೇ ರುಕ್ಮಪಾತ್ರೀಷು ಯುಧಿಷ್ಠಿರನಿವೇಶನೇ।।
ದುರ್ಯೋಧನನು ಹೇಳಿದನು: “ಯುಧಿಷ್ಠಿರನ ಮನೆಯಲ್ಲಿ ಹತ್ತು ಸಾವಿರ ಮಹಾತ್ಮಾ ಸ್ನಾತಕರು ಚಿನ್ನದ ಪಾತ್ರೆಗಳಲ್ಲಿ ಭೋಜನಮಾಡುತ್ತಾರೆ.
12124012a ದೃಷ್ಟ್ವಾ ಚ ತಾಂ ಸಭಾಂ ದಿವ್ಯಾಂ ದಿವ್ಯಪುಷ್ಪಫಲಾನ್ವಿತಾಮ್।
12124012c ಅಶ್ವಾಂಸ್ತಿತ್ತಿರಕಲ್ಮಾಷಾನ್ರತ್ನಾನಿ ವಿವಿಧಾನಿ ಚ।।
12124013a ದೃಷ್ಟ್ವಾ ತಾಂ ಪಾಂಡವೇಯಾನಾಮೃದ್ಧಿಮಿಂದ್ರೋಪಮಾಂ ಶುಭಾಮ್।
12124013c ಅಮಿತ್ರಾಣಾಂ ಸುಮಹತೀಮನುಶೋಚಾಮಿ ಮಾನದ।।
ಮಾನದ! ದಿವ್ಯಪುಷ್ಪಫಲಗಳಿಂದ ಕೂಡಿದ ಆ ದಿವ್ಯ ಸಭೆಯನ್ನು ನೋಡಿ, ತಿತ್ತಿರಪಕ್ಷಿಗಳಂತೆ ಚಿತ್ರವರ್ಣದ ಕಲ್ಮಾಷಜಾತಿಯ ಕುದುರೆಗಳನ್ನೂ, ವಿವಿಧ ರತ್ನಗಳನ್ನೂ, ಅಮಿತ್ರ ಪಾಂಡವೇಯನ ಇಂದ್ರೋಪಮ ಶುಭ ಮಹಾ ಸಂವೃದ್ಧಿಯನ್ನು ನೋಡಿ ಶೋಕಿಸುತ್ತಿದ್ದೇನೆ.”
12124014 ಧೃತರಾಷ್ಟ್ರ ಉವಾಚ।
12124014a ಯದೀಚ್ಚಸಿ ಶ್ರಿಯಂ ತಾತ ಯಾದೃಶೀಂ ತಾಂ ಯುಧಿಷ್ಠಿರೇ।
12124014c ವಿಶಿಷ್ಟಾಂ ವಾ ನರವ್ಯಾಘ್ರ ಶೀಲವಾನ್ಭವ ಪುತ್ರಕ।।
ಧೃತರಾಷ್ಟ್ರನು ಹೇಳಿದನು: “ಮಗೂ! ನರವ್ಯಾಘ್ರ! ಪುತ್ರಕ! ಯುಧಿಷ್ಠಿರನಂತಹ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಇಚ್ಛಿಸುವೆಯಾದರೆ ಶೀಲವಂತನಾಗು.
12124015a ಶೀಲೇನ ಹಿ ತ್ರಯೋ ಲೋಕಾಃ ಶಕ್ಯಾ ಜೇತುಂ ನ ಸಂಶಯಃ।
12124015c ನ ಹಿ ಕಿಂ ಚಿದಸಾಧ್ಯಂ ವೈ ಲೋಕೇ ಶೀಲವತಾಂ ಭವೇತ್।।
ಶೀಲದಿಂದಲೇ ಮೂರೂ ಲೋಕಗಳನ್ನೂ ಗೆಲ್ಲಲು ಶಕ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಶೀಲವಂತರಿಗೆ ಲೋಕದಲ್ಲಿ ಯಾವುದನ್ನೂ ಗೆಲ್ಲಲು ಅಸಾಧ್ಯವೆನಿಸುವುದಿಲ್ಲ.
12124016a ಏಕರಾತ್ರೇಣ ಮಾಂಧಾತಾ ತ್ರ್ಯಹೇಣ ಜನಮೇಜಯಃ।
12124016c ಸಪ್ತರಾತ್ರೇಣ ನಾಭಾಗಃ ಪೃಥಿವೀಂ ಪ್ರತಿಪೇದಿವಾನ್।।
ಮಾಂಧಾತನು ಒಂದು ರಾತ್ರಿಯಲ್ಲಿಯೂ, ಜನಮೇಜಯನು ಮೂರು ದಿನಗಳಲ್ಲಿಯೂ, ನಾಭಾಗನು ಏಳು ರಾತ್ರಿಗಳಲ್ಲಿಯೂ ಈ ಪೃಥ್ವಿಯನ್ನು ಪಡೆದುಕೊಂಡರು.
12124017a ಏತೇ ಹಿ ಪಾರ್ಥಿವಾಃ ಸರ್ವೇ ಶೀಲವಂತೋ ದಮಾನ್ವಿತಾಃ।1 12124017c ಅತಸ್ತೇಷಾಂ ಗುಣಕ್ರೀತಾ ವಸುಧಾ ಸ್ವಯಮಾಗಮತ್।।
ಈ ಪಾರ್ಥಿವರೆಲ್ಲರೂ ಶೀಲವಂತರೂ ದಮಾನ್ವಿತರೂ ಆಗಿದ್ದರು. ಅವರ ಗುಣಮೌಲ್ಯಗಳಿಂದಲೇ ಕ್ರಯಿಸಲ್ಪಟ್ಟ ವಸುಧೆಯು ತಾನಾಗಿಯೇ ಅವರಿಗೆ ಒಲಿದು ಬಂದಳು.
12124018a 2ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್। 12124018c ನಾರದೇನ ಪುರಾ ಪ್ರೋಕ್ತಂ ಶೀಲಮಾಶ್ರಿತ್ಯ ಭಾರತ।।
ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ನಾರದನು ಹಿಂದೆ ಶೀಲದ ಕುರಿತು ಹೇಳಿದುದನ್ನು ಉದಾಹರಿಸುತ್ತಾರೆ.
12124019a ಪ್ರಹ್ರಾದೇನ ಹೃತಂ ರಾಜ್ಯಂ ಮಹೇಂದ್ರಸ್ಯ ಮಹಾತ್ಮನಃ।
12124019c ಶೀಲಮಾಶ್ರಿತ್ಯ ದೈತ್ಯೇನ ತ್ರೈಲೋಕ್ಯಂ ಚ ವಶೀಕೃತಮ್।।
ಪ್ರಹ್ರಾದನು ಮಹಾತ್ಮ ಮಹೇಂದ್ರನ ರಾಜ್ಯವನ್ನು ಅಪಹರಿಸಿದನು. ಶೀಲವನ್ನು ಆಶ್ರಯಿಸಿ ಆ ದೈತ್ಯನು ತ್ರೈಲೋಕ್ಯವನ್ನೂ ವಶೀಕರಿಸಿಕೊಂಡನು.
12124020a ತತೋ ಬೃಹಸ್ಪತಿಂ ಶಕ್ರಃ ಪ್ರಾಂಜಲಿಃ ಸಮುಪಸ್ಥಿತಃ।
12124020c ಉವಾಚ ಚ ಮಹಾಪ್ರಾಜ್ಞಃ ಶ್ರೇಯ ಇಚ್ಚಾಮಿ ವೇದಿತುಮ್।।
ಆಗ ಶಕ್ರನು ಕೈಮುಗಿದು ಬೃಹಸ್ಪತಿಯ ಬಳಿಸಾರಿ “ಮಹಾಪ್ರಾಜ್ಞ! ಶ್ರೇಯದ ಸಾಧನೆಯನ್ನು ತಿಳಿಯಬಯಸುತ್ತೇನೆ” ಎಂದನು.
12124021a ತತೋ ಬೃಹಸ್ಪತಿಸ್ತಸ್ಮೈ ಜ್ಞಾನಂ ನೈಃಶ್ರೇಯಸಂ ಪರಮ್।
12124021c ಕಥಯಾಮಾಸ ಭಗವಾನ್ ದೇವೇಂದ್ರಾಯ ಕುರೂದ್ವಹ।।
ಕುರೂದ್ವಹ! ಆಗ ಬೃಹಸ್ಪತಿಯು ಅವನಿಗೆ ಪರಮ ಶ್ರೇಯಸ್ಸಿನ ಸಾಧನದ ಕುರಿತು ಭಗವಾನ್ ದೇವೇಂದ್ರನಿಗೆ ಹೇಳಿದನು.
12124022a ಏತಾವಚ್ಚ್ರೇಯ ಇತ್ಯೇವ ಬೃಹಸ್ಪತಿರಭಾಷತ।
12124022c ಇಂದ್ರಸ್ತು ಭೂಯಃ ಪಪ್ರಚ್ಚ ಕ್ವ ವಿಶೇಷೋ ಭವೇದಿತಿ।।
“ಇದೇ ಶ್ರೇಯಸ್ಸಿನ ಉಪಾಯವು” ಎಂದು ಬೃಹಸ್ಪತಿಯು ಹೇಳಿದನು. ಇಂದ್ರನಾದರೋ ಪುನಃ “ಇದಕ್ಕಿಂತಲೂ ಹೆಚ್ಚಿನ ಶ್ರೇಯಸ್ಸು ಯಾವುದರಿಂದ ಉಂಟಾಗುತ್ತದೆ?” ಎಂದು ಪ್ರಶ್ನಿಸಿದನು.
12124023 ಬೃಹಸ್ಪತಿರುವಾಚ 12124023a ವಿಶೇಷೋಽಸ್ತಿ ಮಹಾಂಸ್ತಾತ ಭಾರ್ಗವಸ್ಯ ಮಹಾತ್ಮನಃ।
12124023c ತತ್ರಾಗಮಯ ಭದ್ರಂ ತೇ ಭೂಯ ಏವ ಪುರಂದರ।।
ಬೃಹಸ್ಪತಿಯು ಹೇಳಿದನು: “ಅಯ್ಯಾ! ಪುರಂದರ! ಇದಕ್ಕಿಂತಲೂ ವಿಶೇಷ ಜ್ಞಾನವು ಮಹಾತ್ಮ ಭಾರ್ಗವನಲ್ಲಿದೆ. ಅವನಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ””
12124024 ಧೃತರಾಷ್ಟ್ರ ಉವಾಚ।
12124024a ಆತ್ಮನಸ್ತು ತತಃ ಶ್ರೇಯೋ ಭಾರ್ಗವಾತ್ಸುಮಹಾಯಶಾಃ।
12124024c ಜ್ಞಾನಮಾಗಮಯತ್ಪ್ರೀತ್ಯಾ ಪುನಃ ಸ ಪರಮದ್ಯುತಿಃ।।
ಧೃತರಾಷ್ಟ್ರನು ಹೇಳಿದನು: “ಅನಂತರ ತನಗೆ ಶ್ರೇಯವಾಗುವುದರ ಕುರಿತ ಜ್ಞಾನವನ್ನು ಪಡೆಯಲು ಪರಮದ್ಯುತಿ ಇಂದ್ರನು ಪುನಃ ಭಾರ್ಗವನ ಬಳಿ ಹೋದನು.
12124025a ತೇನಾಪಿ ಸಮನುಜ್ಞಾತೋ ಭಾರ್ಗವೇಣ ಮಹಾತ್ಮನಾ।
12124025c ಶ್ರೇಯೋಽಸ್ತೀತಿ ಪುನರ್ಭೂಯಃ ಶುಕ್ರಮಾಹ ಶತಕ್ರತುಃ।।
ಮಹಾತ್ಮ ಭಾರ್ಗವನಿಂದ ಉಪದೇಶವನ್ನು ಪಡೆದ ಶತಕ್ರತುವು ಇನ್ನೂ ಶ್ರೇಯಸ್ಕರವಾದುದನ್ನು ಪುನಃ ಕೇಳಲು ಶುಕ್ರನು ಹೇಳಿದನು.
12124026a ಭಾರ್ಗವಸ್ತ್ವಾಹ ಧರ್ಮಜ್ಞಃ ಪ್ರಹ್ರಾದಸ್ಯ ಮಹಾತ್ಮನಃ।
12124026c ಜ್ಞಾನಮಸ್ತಿ ವಿಶೇಷೇಣ ತತೋ ಹೃಷ್ಟಶ್ಚ ಸೋಽಭವತ್।।
ಧರ್ಮಜ್ಞ ಭಾರ್ಗವನಾದರೋ ಹೇಳಿದನು: “ಮಹಾತ್ಮಾ ಪ್ರಹ್ರಾದನಿಗೆ ಶ್ರೇಯಸ್ಸಾಧನ ವಿಷಯದಲ್ಲಿ ನಾನು ಹೇಳಿರುವುದಕ್ಕಿಂತಲೂ ವಿಶೇಷ ಜ್ಞಾನವಿದೆ” ಎಂದನು. ಅದನ್ನು ಕೇಳಿ ಇಂದ್ರನು ಹೃಷ್ಟನಾದನು.
12124027a ಸ ತತೋ ಬ್ರಾಹ್ಮಣೋ ಭೂತ್ವಾ ಪ್ರಹ್ರಾದಂ ಪಾಕಶಾಸನಃ।
12124027c ಸೃತ್ವಾ ಪ್ರೋವಾಚ ಮೇಧಾವೀ ಶ್ರೇಯ ಇಚ್ಚಾಮಿ ವೇದಿತುಮ್।।
ಆಗ ಪಾಕಶಾಸನನು ಬ್ರಾಹ್ಮಣನಾಗಿ ಪ್ರಹ್ರಾದನಲ್ಲಿಗೆ ಹೋಗಿ “ಮೇಧವೀ! ಶೇಯವಾದುದನ್ನು ತಿಳಿಯಲು ಇಚ್ಛಿಸುತ್ತೇನೆ” ಎಂದನು.
12124028a ಪ್ರಹ್ರಾದಸ್ತ್ವಬ್ರವೀದ್ವಿಪ್ರಂ ಕ್ಷಣೋ ನಾಸ್ತಿ ದ್ವಿಜರ್ಷಭ।
12124028c ತ್ರೈಲೋಕ್ಯರಾಜ್ಯೇ ಸಕ್ತಸ್ಯ ತತೋ ನೋಪದಿಶಾಮಿ ತೇ।।
ಪ್ರಹ್ರಾದನಾದರೋ ವಿಪ್ರನಿಗೆ “ದ್ವಿಜರ್ಷಭ! ತ್ರೈಲೋಕ್ಯದ ರಾಜ್ಯಭಾರದಲ್ಲಿ ಸತ್ಕನಾಗಿರುವ ನನಗೆ ನಿನಗೆ ಉಪದೇಶಿಸಿಸಲು ಒಂದು ಕ್ಷಣವೂ ದೊರೆಯುತ್ತಿಲ್ಲ” ಎಂದು ಹೇಳಿದನು.
12124029a ಬ್ರಾಹ್ಮಣಸ್ತ್ವಬ್ರವೀದ್ವಾಕ್ಯಂ ಕಸ್ಮಿನ್ಕಾಲೇ ಕ್ಷಣೋ ಭವೇತ್।
12124029c ತತೋಪದಿಷ್ಟಮಿಚ್ಚಾಮಿ ಯದ್ಯತ್ಕಾರ್ಯಾಂತರಂ ಭವೇತ್।।
ಆಗ ಬ್ರಾಹ್ಮಣನು ಈ ಮಾತನ್ನಾಡಿದನು: “ಯಾವಾಗ ನಿನಗೆ ಉಪದೇಶಿಸಲು ಸಮಯವು ಸಿಗುವುದೋ ಆವಾಗಲೇ ನಿನ್ನಿಂದ ಉಪದೇಶವನ್ನು ಪಡೆಯಲು ಇಚ್ಛಿಸುತ್ತೇನೆ.”
12124030a ತತಃ ಪ್ರೀತೋಽಭವದ್ರಾಜಾ ಪ್ರಹ್ರಾದೋ ಬ್ರಹ್ಮವಾದಿನೇ।
12124030c ತಥೇತ್ಯುಕ್ತ್ವಾ ಶುಭೇ ಕಾಲೇ ಜ್ಞಾನತತ್ತ್ವಂ ದದೌ ತದಾ।।
ಬ್ರಾಹ್ಮಣನಾಡಿದುದಕ್ಕೆ ಪ್ರೀತನಾದ ರಾಜಾ ಪ್ರಹ್ರಾದನು ಹಾಗೆಯೇ ಆಗಲೆಂದು ಶುಭ ಕಾಲದಲ್ಲಿ ಅವನಿಗೆ ಜ್ಞಾನತತ್ತ್ವವನ್ನು ನೀಡಿದನು.
12124031a ಬ್ರಾಹ್ಮಣೋಽಪಿ ಯಥಾನ್ಯಾಯಂ ಗುರುವೃತ್ತಿಮನುತ್ತಮಾಮ್।
12124031c ಚಕಾರ ಸರ್ವಭಾವೇನ ಯದ್ವತ್ಸ ಮನಸೇಚ್ಚತಿ।।
ಬ್ರಾಹ್ಮಣನಾದರೋ ಪ್ರಹ್ರಾದನ ವಿಷಯದಲ್ಲಿ ಯಥಾನ್ಯಾಯವಾದ ಅನುತ್ತಮ ಗುರುವೃತ್ತಿಯನ್ನೇ ಇಟ್ಟುಕೊಂಡು ಅವನ ಮನಸ್ಸು ಇಚ್ಛಿಸಿದಂತೆ ಸರ್ವಭಾವದಿಂದ ಅವನ ಸೇವೆಯನ್ನು ಮಾಡುತ್ತಿದ್ದನು.
12124032a ಪೃಷ್ಟಶ್ಚ ತೇನ ಬಹುಶಃ ಪ್ರಾಪ್ತಂ ಕಥಮರಿಂದಮ।
12124032c ತ್ರೈಲೋಕ್ಯರಾಜ್ಯಂ ಧರ್ಮಜ್ಞ ಕಾರಣಂ ತದ್ಬ್ರವೀಹಿ ಮೇ।।
ಅನೇಕ ಬಾರಿ ಅವನಲ್ಲಿ “ಅರಿಂದಮ! ಧರ್ಮಜ್ಞ! ನಿನಗೆ ತ್ರೈಲೋಕ್ಯರಾಜ್ಯವು ದೊರಕಿದುದರ ಕಾರಣವನ್ನು ನನಗೆ ತಿಳಿಸು” ಎಂದು ಕೇಳುತ್ತಿದ್ದನು.
12124033 ಪ್ರಹ್ರಾದ ಉವಾಚ।
12124033a ನಾಸೂಯಾಮಿ ದ್ವಿಜಶ್ರೇಷ್ಠ3 ರಾಜಾಸ್ಮೀತಿ ಕದಾ ಚನ।
12124033c ಕವ್ಯಾನಿ4 ವದತಾಂ ತಾತ ಸಂಯಚ್ಚಾಮಿ ವಹಾಮಿ ಚ।।
ಪ್ರಹ್ರಾದನು ಹೇಳಿದನು: “ದ್ವಿಜಶ್ರೇಷ್ಠ! ರಾಜನಾಗಿದ್ದೇನೆಂದು ನಾನು ಎಂದೂ ಅಭಿಮಾನಪಡುವುದಿಲ್ಲ. ಅಯ್ಯಾ! ದ್ವಿಜರು ಹೇಳಿದುದನ್ನು ಸಂಯಮದಿಂದ ಕೇಳುತ್ತೇನೆ ಮತ್ತು ಅದರಂತೆ ಮಾಡುತ್ತೇನೆ.
12124034a ತೇ ವಿಸ್ರಬ್ಧಾಃ ಪ್ರಭಾಷಂತೇ ಸಂಯಚ್ಚಂತಿ ಚ ಮಾಂ ಸದಾ।
12124034c ತೇ ಮಾ ಕವ್ಯಪದೇ ಸಕ್ತಂ ಶುಶ್ರೂಷುಮನಸೂಯಕಮ್।।
12124035a ಧರ್ಮಾತ್ಮಾನಂ ಜಿತಕ್ರೋಧಂ ಸಂಯತಂ ಸಂಯತೇಂದ್ರಿಯಮ್।
12124035c ಸಮಾಚಿನ್ವಂತಿ ಶಾಸ್ತಾರಃ ಕ್ಷೌದ್ರಂ ಮಧ್ವಿವ ಮಕ್ಷಿಕಾಃ।।
ಬ್ರಾಹ್ಮಣರು ನನ್ನಲ್ಲಿ ವಿಶ್ವಾಸವನ್ನಿಟ್ಟು ಮಾತನಾಡುತ್ತಾರೆ. ನನ್ನನ್ನು ಸದಾ ನಿಯಂತ್ರಿಸುತ್ತಾರೆ. ಶುಕ್ರರು ಹೇಳಿರುವ ನೀತಿಶಾಸ್ತ್ರಾನುಸಾರವಾಗಿ ನಡೆಯುತ್ತಿರುವ, ಬ್ರಾಹ್ಮಣರ ಶುಶ್ರೂಷೆಯಲ್ಲಿಯೇ ನಿರತರಾಗಿರುವ, ಅವರ ಅನುಗ್ರಹದಿಂದಲೇ ದೋಷದೃಷ್ಟಿಯಿಲ್ಲದ, ಧರ್ಮಾತ್ಮನಾದ, ಕ್ರೋಧವನ್ನು ಜಯಿಸಿರುವ, ಮನಸ್ಸನ್ನೂ ಮತ್ತು ಇಂದ್ರಿಯಗಳನ್ನೂ ವಶಪಡಿಸಿಕೊಂಡಿರುವ ನನ್ನನ್ನು ನಿಯಂತೃಗಳಾದ ಬ್ರಾಹ್ಮಣರು – ಜೇನು ಹುಳುಗಳು ಪುಷ್ಪರಸವನ್ನು ತಂದು ಜೇನುಗೂಡಿನಲ್ಲಿ ಸಿಂಪಡಿಸುವಂತೆ – ಶಾಸ್ತ್ರದಿಂದ ಉದ್ಧೃತವಾದ ವಾಕ್ಯಗಳಿಂದ ಸಿಂಪಡಿಸುತ್ತಾರೆ.
12124036a ಸೋಽಹಂ ವಾಗಗ್ರಪಿಷ್ಟಾನಾಂ ರಸಾನಾಮವಲೇಹಿತಾ।
12124036c ಸ್ವಜಾತ್ಯಾನಧಿತಿಷ್ಠಾಮಿ ನಕ್ಷತ್ರಾಣೀವ ಚಂದ್ರಮಾಃ।।
ಅವರು ಹೇಳುವ ಶ್ರೇಷ್ಠವಾದ ನೀತಿವಿದ್ಯೆಗಳ ರಸವನ್ನು ನಾನು ಯಾವಾಗಲೂ ಆಸ್ವಾದಿಸುತ್ತಿರುತ್ತೇನೆ. ಅದರ ಫಲವಾಗಿಯೇ ನನಗೆ ಚಂದ್ರನು ನಕ್ಷತ್ರಗಳನ್ನು ಅನುಶಾಸನಮಾಡುವಂತೆ ಸ್ವಜಾತಿಯವರನ್ನು ಅನುಶಾಸನ ಮಾಡುತ್ತೇನೆ.
12124037a ಏತತ್ಪೃಥಿವ್ಯಾಮಮೃತಮೇತಚ್ಚಕ್ಷುರನುತ್ತಮಮ್।
12124037c ಯದ್ಬ್ರಾಹ್ಮಣಮುಖೇ ಕವ್ಯಮೇತಚ್ಚ್ರುತ್ವಾ ಪ್ರವರ್ತತೇ।।
ಬ್ರಾಹ್ಮಣರ ಮುಖದಿಂದ ಹೊರಡುವ ಶುಕ್ರನೀತಿವಾಕ್ಯಗಳೇ ಈ ಭೂಮಂದಲದಲ್ಲಿ ಅಮೃತವಾಗಿವೆ. ಸರ್ವೋತ್ತಮ ನೇತ್ರಗಳಾಗಿವೆ. ಶುಕ್ರನೀತಿಯನ್ನು ಕೇಳಿ ಅದಕ್ಕನುಸಾರವಾಗಿ ವರ್ತಿಸಬೇಕು.””
12124038 ಧೃತರಾಷ್ಟ್ರ ಉವಾಚ।
12124038a ಏತಾವಚ್ಚ್ರೇಯ ಇತ್ಯಾಹ ಪ್ರಹ್ರಾದೋ ಬ್ರಹ್ಮವಾದಿನಮ್।
12124038c ಶುಶ್ರೂಷಿತಸ್ತೇನ ತದಾ ದೈತ್ಯೇಂದ್ರೋ ವಾಕ್ಯಮಬ್ರವೀತ್।।
ಧೃತರಾಷ್ಟ್ರನು ಹೇಳಿದನು: “”ಇದೇ ಶ್ರೇಯಸ್ಸಿನ ಮಾರ್ಗ” ಎಂದು ಪ್ರಹ್ರಾದನು ಬ್ರಹ್ಮವಾದಿನಿಗೆ ಹೇಳಿದನು. ಅನಂತರ ತನ್ನ ಶುಶ್ರೂಷೆಯನ್ನು ಮಾಡುತ್ತಿದ್ದವನಿಗೆ ದೈತ್ಯೇಂದ್ರನು ಪುನಃ ಹೇಳಿದನು.
12124039a ಯಥಾವದ್ಗುರುವೃತ್ತ್ಯಾ ತೇ ಪ್ರೀತೋಽಸ್ಮಿ ದ್ವಿಜಸತ್ತಮ।
12124039c ವರಂ ವೃಣೀಷ್ವ ಭದ್ರಂ ತೇ ಪ್ರದಾತಾಸ್ಮಿ ನ ಸಂಶಯಃ।।
“ದ್ವಿಜಸತ್ತಮ! ನಿನ್ನ ಗುರುಶುಶ್ರೂಷಾವೃತ್ತಿಯಿಂದ ನಾನು ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ. ವರವನ್ನು ಕೇಳು. ಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ.”
12124040a ಕೃತಮಿತ್ಯೇವ ದೈತ್ಯೇಂದ್ರಮುವಾಚ ಸ ಚ ವೈ ದ್ವಿಜಃ।
12124040c ಪ್ರಹ್ರಾದಸ್ತ್ವಬ್ರವೀತ್ಪ್ರೀತೋ ಗೃಹ್ಯತಾಂ ವರ ಇತ್ಯುತ।।
ಆ ದ್ವಿಜನು “ಕೊಟ್ಟಾಯಿತು” ಎಂದು ಮಾತ್ರ ಹೇಳಿದನು. ಪ್ರಹ್ರಾದನಾದರೋ ಪ್ರೀತನಾಗಿ “ವರವನ್ನು ಸ್ವೀಕರಿಸು” ಎಂದು ಹೇಳಿದನು.
12124041 ಬ್ರಾಹ್ಮಣ ಉವಾಚ।
12124041a ಯದಿ ರಾಜನ್ ಪ್ರಸನ್ನಸ್ತ್ವಂ ಮಮ ಚೇಚ್ಚಸಿ ಚೇದ್ಧಿತಮ್।
12124041c ಭವತಃ ಶೀಲಮಿಚ್ಚಾಮಿ ಪ್ರಾಪ್ತುಮೇಷ ವರೋ ಮಮ।।
ಬ್ರಾಹ್ಮಣನು ಹೇಳಿದನು: “ರಾಜನ್! ಒಂದು ವೇಳೆ ನೀನು ನನ್ನಮೇಲೆ ಪ್ರಸನ್ನನಾಗಿದ್ದರೆ ಮತ್ತು ನನ್ನ ಹಿತವನ್ನು ಬಯಸುವೆಯಾದರೆ ನಾನು ನಿನ್ನ ಶೀಲವನ್ನು ಪಡೆಯಲು ಇಚ್ಛಿಸುತ್ತೇನೆ. ಅದೇ ನನ್ನ ವರವು.””
12124042 ಧೃತರಾಷ್ಟ್ರ ಉವಾಚ।
12124042a ತತಃ ಪ್ರೀತಶ್ಚ ದೈತ್ಯೇಂದ್ರೋ ಭಯಂ ಚಾಸ್ಯಾಭವನ್ಮಹತ್।
12124042c ವರೇ ಪ್ರದಿಷ್ಟೇ ವಿಪ್ರೇಣ ನಾಲ್ಪತೇಜಾಯಮಿತ್ಯುತ।।
ಧೃತರಾಷ್ಟ್ರನು ಹೇಳಿದನು: “ಆಗ ಪ್ರೀತನಾದ ದೈತ್ಯೇಂದ್ರನಿಗೆ ಮಹಾ ಭಯವೂ ಉಂಟಾಯಿತು. ವರವನ್ನು ಕೇಳುತ್ತಿರುವ ವಿಪ್ರನು ಅಲ್ಪತೇಜಸ್ವಿಯಲ್ಲ ಎಂದು ತಿಳಿದು ಹೇಳಿದನು:
12124043a ಏವಮಸ್ತ್ವಿತಿ ತಂ ಪ್ರಾಹ ಪ್ರಹ್ರಾದೋ ವಿಸ್ಮಿತಸ್ತದಾ।
12124043c ಉಪಾಕೃತ್ಯ ತು ವಿಪ್ರಾಯ ವರಂ ದುಃಖಾನ್ವಿತೋಽಭವತ್।।
ವಿಸ್ಮಿತನಾದ ಪ್ರಹ್ರಾದನು ಹಾಗೆಯೇ ಆಗಲಿ ಎಂದು ವಿಪ್ರನಿಗೆ ವರವನ್ನಿತ್ತು ದುಃಖಾನ್ವಿತನಾದನು.
12124044a ದತ್ತೇ ವರೇ ಗತೇ ವಿಪ್ರೇ ಚಿಂತಾಸೀನ್ಮಹತೀ ತತಃ।
12124044c ಪ್ರಹ್ರಾದಸ್ಯ ಮಹಾರಾಜ ನಿಶ್ಚಯಂ ನ ಚ ಜಗ್ಮಿವಾನ್।।
ವರವನ್ನು ಕೊಟ್ಟನಂತರ ವಿಪ್ರನು ಹೊರಟುಹೋದನು. ಆಗ ಪ್ರಹ್ರಾದನಿಗೆ ಮಹಾ ಚಿಂತೆಯುಂಟಾಯಿತು. ಯೋಚಿಸತೊಡಗಿದನು. ಆದರೆ ಆ ಮಹಾರಾಜನು ಯಾವುದೇ ನಿಶ್ಚಯಕ್ಕೂ ಬರಲು ಸಾಧ್ಯವಾಗಲಿಲ್ಲ.
12124045a ತಸ್ಯ ಚಿಂತಯತಸ್ತಾತ ಚಾಯಾಭೂತಂ ಮಹಾದ್ಯುತೇ।
12124045c ತೇಜೋ ವಿಗ್ರಹವತ್ತಾತ ಶರೀರಮಜಹಾತ್ತದಾ।।
ಅಯ್ಯಾ! ಮಹಾದ್ಯುತೇ! ಹಾಗೆ ಚಿಂತಿಸುತ್ತಿರುವಾಗ ಅವನ ಶರೀರದಿಂದ ಛಾಯಾರೂಪದಲ್ಲಿದ್ದ ತೇಜಸ್ಸು ಮೂರ್ತಿಮತ್ತಾಗಿ ರೂಪಗೊಂಡು ಹೊರಬಂದಿತು.
12124046a ತಮಪೃಚ್ಚನ್ಮಹಾಕಾಯಂ ಪ್ರಹ್ರಾದಃ ಕೋ ಭವಾನಿತಿ।
12124046c ಪ್ರತ್ಯಾಹ ನನು ಶೀಲೋಽಸ್ಮಿ ತ್ಯಕ್ತೋ ಗಚ್ಚಾಮ್ಯಹಂ ತ್ವಯಾ।।
ಆ ಮಹಾಕಾಯನನ್ನು ಪ್ರಹ್ರಾದನು “ನೀನು ಯಾರು?” ಎಂದು ಪ್ರಶ್ನಿಸಿದನು. ಅದು ಉತ್ತರಿಸಿತು: “ನಾನು ಶೀಲ. ನಿನ್ನನ್ನು ತ್ಯಜಿಸಿ ಹೋಗುತ್ತಿದ್ದೇನೆ.
12124047a ತಸ್ಮಿನ್ ದ್ವಿಜವರೇ ರಾಜನ್ವತ್ಸ್ಯಾಮ್ಯಹಮನಿಂದಿತಮ್।
12124047c ಯೋಽಸೌ ಶಿಷ್ಯತ್ವಮಾಗಮ್ಯ ತ್ವಯಿ ನಿತ್ಯಂ ಸಮಾಹಿತಃ।
12124047e ಇತ್ಯುಕ್ತ್ವಾಂತರ್ಹಿತಂ ತದ್ವೈ ಶಕ್ರಂ ಚಾನ್ವವಿಶತ್ಪ್ರಭೋ।।
ನಿನ್ನಲ್ಲಿ ಶಿಷ್ಯವೃತ್ತಿಯನ್ನು ಅವಲಂಬಿಸಿ ಏಕಾಗ್ರಚಿತ್ತನಾಗಿ ಅನುದಿನವೂ ನಿನ್ನ ಸೇವೆಗೈಯುತ್ತಿದ್ದ ನಿಷ್ಕಳಂಕ ದ್ವಿಜಶ್ರೇಷ್ಠನ ಶರೀರದಲ್ಲಿ ವಾಸಿಸುತ್ತೇನೆ.” ಹೀಗೆ ಹೇಳಿ ಅವನು ಅಂತರ್ಹಿತನಾಗಿ ಶಕ್ರನನ್ನು ಪ್ರವೇಶಿಸಿದನು.
12124048a ತಸ್ಮಿಂಸ್ತೇಜಸಿ ಯಾತೇ ತು ತಾದೃಗ್ರೂಪಸ್ತತೋಽಪರಃ।
12124048c ಶರೀರಾನ್ನಿಃಸೃತಸ್ತಸ್ಯ ಕೋ ಭವಾನಿತಿ ಚಾಬ್ರವೀತ್।।
ಆ ತೇಜಸ್ಸು ಹೊರಟು ಹೋಗಲು ಅಂತಹುದೇ ರೂಪದ ಇನ್ನೊಂದು ತೇಜಸ್ಸು ಅವನ ಶರೀರದಿಂದ ಹೊರಹೊರಟಿತು. “ನೀನು ಯಾರು” ಎಂದು ಅದಕ್ಕೂ ಅವನು ಕೇಳಿದನು.
12124049a ಧರ್ಮಂ ಪ್ರಹ್ರಾದ ಮಾಂ ವಿದ್ಧಿ ಯತ್ರಾಸೌ ದ್ವಿಜಸತ್ತಮಃ।
12124049c ತತ್ರ ಯಾಸ್ಯಾಮಿ ದೈತ್ಯೇಂದ್ರ ಯತಃ ಶೀಲಂ ತತೋ ಹ್ಯಹಮ್।।
“ಪ್ರಹ್ರಾದ! ನನ್ನನ್ನು ಧರ್ಮವೆಂದು ತಿಳಿ. ಆ ದ್ವಿಜಸತ್ತಮನು ಎಲ್ಲಿರುವನೋ ಅಲ್ಲಿಗೆ ಹೋಗುತ್ತಿದ್ದೇನೆ. ದೈತ್ಯೇಂದ್ರ! ಎಲ್ಲಿ ಶೀಲವಿರುವುದೋ ಅಲ್ಲಿ ನಾನೂ ಇರುತ್ತೇನೆ.”
12124050a ತತೋಽಪರೋ ಮಹಾರಾಜ ಪ್ರಜ್ವಲನ್ನಿವ ತೇಜಸಾ।
12124050c ಶರೀರಾನ್ನಿಃಸೃತಸ್ತಸ್ಯ ಪ್ರಹ್ರಾದಸ್ಯ ಮಹಾತ್ಮನಃ।।
ಮಹಾರಾಜ! ಆಗ ಇನ್ನೊಂದು ಪ್ಜ್ವಲಿಸುತ್ತಿರುವ ತೇಜಸ್ಸು ಮಹಾತ್ಮ ಪ್ರಹ್ರಾದ ಶರೀರದಿಂದ ಹೊರಹೊರಟಿತು.
12124051a ಕೋ ಭವಾನಿತಿ ಪೃಷ್ಟಶ್ಚ ತಮಾಹ ಸ ಮಹಾದ್ಯುತಿಃ।
12124051c ಸತ್ಯಮಸ್ಮ್ಯಸುರೇಂದ್ರಾಗ್ರ್ಯ ಯಾಸ್ಯೇಽಹಂ ಧರ್ಮಮನ್ವಿಹ।।
ನೀನು ಯಾರೆಂದು ಕೇಳಲು, ಆ ಮಹಾದ್ಯುತಿಯು ಹೇಳಿದನು: “ಅಸುರೇಂದ್ರ! ನಾನು ಸತ್ಯ. ಧರ್ಮವಿರುವಲ್ಲಿಗೆ ಹೋಗುತ್ತಿದ್ದೇನೆ.”
12124052a ತಸ್ಮಿನ್ನನುಗತೇ ಧರ್ಮಂ ಪುರುಷೇ ಪುರುಷೋಽಪರಃ।
12124052c ನಿಶ್ಚಕ್ರಾಮ ತತಸ್ತಸ್ಮಾತ್ ಪೃಷ್ಟಶ್ಚಾಹ ಮಹಾತ್ಮನಾ।
12124052e ವೃತ್ತಂ ಪ್ರಹ್ರಾದ ಮಾಂ ವಿದ್ಧಿ ಯತಃ ಸತ್ಯಂ ತತೋ ಹ್ಯಹಮ್।।
ಅವನು ಧರ್ಮ ಪುರುಷನನ್ನು ಅನುಸರಿಸಿ ಹೋದ ನಂತರ ಇನ್ನೊಬ್ಬ ಪುರುಷನು ಪ್ರಹ್ರಾದನಿಂದ ಹೊರಬಂದನು. ಆ ಮಹಾತ್ಮನನ್ನೂ ಕೇಳಲು ಅವನು “ಪ್ರಹ್ರಾದ! ನನ್ನನ್ನು ಸದಾಚಾರನೆಂದು ತಿಳಿ. ಎಲ್ಲಿ ಸತ್ಯವಿರುತ್ತದೆಯೋ ಅಲ್ಲಿ ನಾನಿರುತ್ತೇನೆ.”
12124053a ತಸ್ಮಿನ್ಗತೇ ಮಹಾಶ್ವೇತಃ ಶರೀರಾತ್ತಸ್ಯ ನಿರ್ಯಯೌ।
12124053c ಪೃಷ್ಟಶ್ಚಾಹ ಬಲಂ ವಿದ್ಧಿ ಯತೋ ವೃತ್ತಮಹಂ ತತಃ।
12124053e ಇತ್ಯುಕ್ತ್ವಾ ಚ ಯಯೌ ತತ್ರ ಯತೋ ವೃತ್ತಂ ನರಾಧಿಪ।।
ನರಾಧಿಪ! ಅವನು ಹೊರಟುಹೋದ ನಂತರ ಪ್ರಹ್ರಾದನ ಶರೀದಿಂದ ಮಹಾಶ್ವೇತನೊಬ್ಬನು ಹೊರಬಂದನು. ಅವನನ್ನು ಕೇಳಲು ಅವನು “ನನ್ನನ್ನು ಬಲವೆಂದು ತಿಳಿ. ಸದಾಚಾರವಿರುವಲ್ಲಿ ಹೋಗುತ್ತಿದ್ದೇನೆ” ಎಂದು ಹೇಳಿ ಅವನು ಸದಾಚಾರವಿರುವಲ್ಲಿಗೆ ಹೊರಟು ಹೋದನು.
12124054a ತತಃ ಪ್ರಭಾಮಯೀ ದೇವೀ ಶರೀರಾತ್ತಸ್ಯ ನಿರ್ಯಯೌ।
12124054c ತಾಮಪೃಚ್ಚತ್ಸ ದೈತ್ಯೇಂದ್ರಃ ಸಾ ಶ್ರೀರಿತ್ಯೇವಮಬ್ರವೀತ್।।
ಅನಂತರ ಪ್ರಭಾಮಯಿಯಾದ ದೇವಿಯು ಅವನ ಶರೀರದಿಂದ ಹೊರಹೊರಟಳು. ದೈತ್ಯೇಂದ್ರನು ಅವಳನ್ನು ಕೇಳಲು ಅವಳು ಶ್ರೀಯೆಂದು ಹೇಳಿದಳು.
12124055a ಉಷಿತಾಸ್ಮಿ ಸುಖಂ ವೀರ ತ್ವಯಿ ಸತ್ಯಪರಾಕ್ರಮೇ।
12124055c ತ್ವಯಾ ತ್ಯಕ್ತಾ ಗಮಿಷ್ಯಾಮಿ ಬಲಂ ಯತ್ರ ತತೋ ಹ್ಯಹಮ್।।
“ವೀರ! ನಿನ್ನ ಸತ್ಯಪರಾಕ್ರಮಗಳಲ್ಲಿ ನಾನು ವಾಸಿಸಿಕೊಂಡಿದ್ದೆ. ಈಗ ನಾನು ನಿನ್ನನ್ನು ತ್ಯಜಿಸಿ ಹೋಗುತ್ತಿದ್ದೇನೆ. ಬಲವು ಇರುವಲ್ಲಿ ನಾನೂ ಇರುತ್ತೇನೆ.”
12124056a ತತೋ ಭಯಂ ಪ್ರಾದುರಾಸೀತ್ಪ್ರಹ್ರಾದಸ್ಯ ಮಹಾತ್ಮನಃ।
12124056c ಅಪೃಚ್ಚತ ಚ ತಾಂ ಭೂಯಃ ಕ್ವ ಯಾಸಿ ಕಮಲಾಲಯೇ।।
12124057a ತ್ವಂ ಹಿ ಸತ್ಯವ್ರತಾ ದೇವೀ ಲೋಕಸ್ಯ ಪರಮೇಶ್ವರೀ।
12124057c ಕಶ್ಚಾಸೌ ಬ್ರಾಹ್ಮಣಶ್ರೇಷ್ಠಸ್ತತ್ತ್ವಮಿಚ್ಚಾಮಿ ವೇದಿತುಮ್।।
ಆಗ ಮಹಾತ್ಮ ಪ್ರಹ್ರಾದನಿಗೆ ಭಯವುಂಟಾಯಿತು. ಅವಳನ್ನು ಪುನಃ ಕೇಳಿದನು: “ಕಮಲಾಲಯೇ! ನೀನು ನನ್ನನ್ನು ಬಿಟ್ಟು ಎಲ್ಲಿಗೆ ಹೋಗುತ್ತಿರುವೆ? ನೀನು ಸತ್ಯವ್ರತೆ. ದೇವೀ! ನೀನು ಲೋಕದ ಪರಮೇಶ್ವರಿಯು. ಆ ಬ್ರಾಹ್ಮಣಶ್ರೇಷ್ಠನು ಯಾರು ಎನ್ನುವುದನ್ನು ತತ್ತ್ವವಾಗಿ ಕೇಳಬಯಸುತ್ತೇನೆ.”
12124058 ಶ್ರೀರುವಾಚ।
12124058a ಸ ಶಕ್ರೋ ಬ್ರಹ್ಮಚಾರೀ ಚ ಯಸ್ತ್ವಯಾ ಚೋಪಶಿಕ್ಷಿತಃ।
12124058c ತ್ರೈಲೋಕ್ಯೇ ತೇ ಯದೈಶ್ವರ್ಯಂ ತತ್ತೇನಾಪಹೃತಂ ಪ್ರಭೋ।।
ಶ್ರೀಯು ಹೇಳಿದಳು: “ಪ್ರಭೋ! ನೀನು ಉಪದೇಶವನ್ನಿತ್ತ ಆ ಬ್ರಹ್ಮಚಾರಿಯು ಶಕ್ರನು. ತ್ರೈಲೋಕ್ಯಗಳಲ್ಲಿರುವ ಐಶ್ವರ್ಯವನ್ನು ನಿನ್ನಿಂದ ಅಪಹರಿಸಿಕೊಂಡನು.
12124059a ಶೀಲೇನ ಹಿ ತ್ವಯಾ ಲೋಕಾಃ ಸರ್ವೇ ಧರ್ಮಜ್ಞ ನಿರ್ಜಿತಾಃ।
12124059c ತದ್ವಿಜ್ಞಾಯ ಮಹೇಂದ್ರೇಣ ತವ ಶೀಲಂ ಹೃತಂ ಪ್ರಭೋ।।
ಧರ್ಮಜ್ಞ! ಶೀಲದಿಂದಲೇ ನೀನು ಲೋಕಗಳೆಲ್ಲವನ್ನೂ ಗೆದ್ದಿದ್ದೆ. ಪ್ರಭೋ! ಅದನ್ನು ತಿಳಿದ ಮಹೇಂದ್ರನು ನಿನ್ನ ಶೀಲವನ್ನು ಅಪಹರಿಸಿದನು.
12124060a ಧರ್ಮಃ ಸತ್ಯಂ ತಥಾ ವೃತ್ತಂ ಬಲಂ ಚೈವ ತಥಾ ಹ್ಯಹಮ್।
12124060c ಶೀಲಮೂಲಾ ಮಹಾಪ್ರಾಜ್ಞ ಸದಾ ನಾಸ್ತ್ಯತ್ರ ಸಂಶಯಃ।।
ಮಹಾಪ್ರಾಜ್ಞ! ಧರ್ಮ, ಸತ್ಯ, ಸದಾಚಾರ, ಬಲ ಮತ್ತು ನನಗೆ ಕೂಡ ಶೀಲವೇ ಮೂಲವು. ಅದರಲ್ಲಿ ಸಂಶಯವಿಲ್ಲ.”””
12124061 ಭೀಷ್ಮ ಉವಾಚ।
12124061a ಏವಮುಕ್ತ್ವಾ ಗತಾ ತು ಶ್ರೀಸ್ತೇ ಚ ಸರ್ವೇ ಯುಧಿಷ್ಠಿರ।
12124061c ದುರ್ಯೋಧನಸ್ತು ಪಿತರಂ ಭೂಯ ಏವಾಬ್ರವೀದಿದಮ್।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಶ್ರೀಯೊಂದಿಗೆ ಎಲ್ಲರೂ ಪ್ರಹ್ರಾದನನ್ನು ಬಿಟ್ಟು ಹೊರಟು ಹೋದರು ಎಂದು ಹೇಳಿದ ತಂದೆಗೆ ದುರ್ಯೋಧನನು ಪುನಃ ಹೇಳಿದನು:
12124062a ಶೀಲಸ್ಯ ತತ್ತ್ವಮಿಚ್ಚಾಮಿ ವೇತ್ತುಂ ಕೌರವನಂದನ।
12124062c ಪ್ರಾಪ್ಯತೇ ಚ ಯಥಾ ಶೀಲಂ ತಮುಪಾಯಂ ವದಸ್ವ ಮೇ।।
“ಕೌರವನಂದನ! ಶೀಲದ ತತ್ತ್ವವನ್ನು ತಿಳಿಯಲು ಬಯಸುತ್ತೇನೆ. ಶೀಲವನ್ನು ಪಡೆದುಕೊಳ್ಳುವ ಉಪಾಯವನ್ನು ಹೇಳು.”
12124063 ಧೃತರಾಷ್ಟ್ರ ಉವಾಚ।
12124063a ಸೋಪಾಯಂ ಪೂರ್ವಮುದ್ದಿಷ್ಟಂ ಪ್ರಹ್ರಾದೇನ ಮಹಾತ್ಮನಾ।
12124063c ಸಂಕ್ಷೇಪತಸ್ತು ಶೀಲಸ್ಯ ಶೃಣು ಪ್ರಾಪ್ತಿಂ ನರಾಧಿಪ।।
ಧೃತರಾಷ್ಟ್ರನು ಹೇಳಿದನು: “ನರಾಧಿಪ! ಇದರ ಉಪಾಯವನ್ನು ಹಿಂದೆಯೇ ಮಹಾತ್ಮ ಪ್ರಹ್ರಾದನು ಹೇಳಿದ್ದನು. ಶೀಲವನ್ನು ಪಡೆದುಕೊಳ್ಳುವ ಉಪಾಯವನ್ನು ಸಂಕ್ಷಿಪ್ತವಾಗಿ ಕೇಳು.
12124064a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ।
12124064c ಅನುಗ್ರಹಶ್ಚ ದಾನಂ ಚ ಶೀಲಮೇತತ್ ಪ್ರಶಸ್ಯತೇ।।
ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ, ಕರ್ಮಗಳಿಂದಾಗಲೀ ಸರ್ವ ಭೂತಗಳಲ್ಲಿ ದ್ರೋಹವನ್ನೆಸಗದೇ ಇರುವುದು, ಸರ್ವಭೂತಗಳಲ್ಲಿಯೂ ದಯಾಪರನಾಗಿರುವುದು, ಮತ್ತು ದಾನ ಇವನ್ನು ಶೀಲವೆಂದು ಪ್ರಶಂಸಿಸುತ್ತಾರೆ.
12124065a ಯದನ್ಯೇಷಾಂ ಹಿತಂ ನ ಸ್ಯಾದಾತ್ಮನಃ ಕರ್ಮ ಪೌರುಷಮ್।
12124065c ಅಪತ್ರಪೇತ ವಾ ಯೇನ ನ ತತ್ಕುರ್ಯಾತ್ಕಥಂ ಚನ।।
ಯಾವ ಕರ್ಮ-ಪೌರುಷಗಳು ಇತರರಿಗೆ ಹಿತವನ್ನುಂಟುಮಾಡುವುದಿಲ್ಲವೋ ಮತ್ತು ಯಾವುದನ್ನು ಮಾಡುವುದರಿಂದ ನಾಚಿಕೆಪಟ್ಟುಕೊಳ್ಳಬೇಕಾಗುವುದೋ ಅವುಗಳನ್ನು ಎಂದೂ ಮಾಡಬಾರದು.
12124066a ತತ್ತು ಕರ್ಮ ತಥಾ ಕುರ್ಯಾದ್ಯೇನ ಶ್ಲಾಘೇತ ಸಂಸದಿ।
12124066c ಏತಚ್ಚೀಲಂ ಸಮಾಸೇನ ಕಥಿತಂ ಕುರುಸತ್ತಮ।।
ಕುರುಸತ್ತಮ! ಯಾವುದನ್ನು ಮಾಡಿದರೆ ಅದನ್ನು ಸಂಸದಿಯಲ್ಲಿ ಶ್ಲಾಘನೀಯವಾಗುತ್ತದೆಯೋ ಆ ಕರ್ಮವೇ ಶೀಲ. ಇದನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ.
12124067a ಯದ್ಯಪ್ಯಶೀಲಾ ನೃಪತೇ ಪ್ರಾಪ್ನುವಂತಿ ಕ್ವ ಚಿಚ್ಚ್ರಿಯಮ್।
12124067c ನ ಭುಂಜತೇ ಚಿರಂ ತಾತ ಸಮೂಲಾಶ್ಚ ಪತಂತಿ ತೇ।।
ದುಃಶೀಲರಾದವರೂ ಕೆಲವೊಮ್ಮೆ ರಾಜ್ಯಶ್ರೀಯನ್ನು ಪಡೆದುಕೊಳ್ಳಬಹುದು. ಆದರೆ ಅವರು ಆ ಸಂಪತ್ತನ್ನು ಹೆಚ್ಚುಕಾಲ ಉಪಭೋಗಿಸುವುದಿಲ್ಲ. ಸಮೂಲವಾಗಿ ನಾಶಹೊಂದುತ್ತಾರೆ.
12124068a ಏತದ್ವಿದಿತ್ವಾ ತತ್ತ್ವೇನ ಶೀಲವಾನ್ ಭವ ಪುತ್ರಕ।
12124068c ಯದೀಚ್ಚಸಿ ಶ್ರಿಯಂ ತಾತ ಸುವಿಶಿಷ್ಟಾಂ ಯುಧಿಷ್ಠಿರಾತ್।।
ಪುತ್ರಕ! ಇದನ್ನು ತತ್ತ್ವತಃ ತಿಳಿದುಕೊಂಡು ಶೀಲವಂತನಾಗು. ಆಗ ಮಗೂ ನೀನು ಬಯಸುವ ಯುಧಿಷ್ಠಿರನಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಪಡೆದುಕೊಳ್ಳುತ್ತೀಯೆ.””
12124069 ಭೀಷ್ಮ ಉವಾಚ।
12124069a ಏತತ್ಕಥಿತವಾನ್ಪುತ್ರೇ ಧೃತರಾಷ್ಟ್ರೋ ನರಾಧಿಪ।
12124069c ಏತತ್ಕುರುಷ್ವ ಕೌಂತೇಯ ತತಃ ಪ್ರಾಪ್ಸ್ಯಸಿ ತತ್ಫಲಮ್।।
ಭೀಷ್ಮನು ಹೇಳಿದನು: “ನರಾಧಿಪ! ಕೌಂತೇಯ! ಹೀಗೆ ಧೃತರಾಷ್ಟ್ರನು ಪುತ್ರನಿಗೆ ಹೇಳಿದನು. ಇದನ್ನು ಮಾಡು. ಅದರ ಫಲವನ್ನು ಪಡೆದುಕೊಳ್ಳುತ್ತೀಯೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಶೀಲವರ್ಣನಂ ನಾಮ ಚತುರ್ವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಶೀಲವರ್ಣನ ಎನ್ನುವ ನೂರಾಇಪ್ಪತ್ನಾಲ್ಕನೇ ಅಧ್ಯಾಯವು.