123 ಕಾಮಾಂದಕಾಂಗರಿಷ್ಟಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 123

ಸಾರ

ತ್ರಿವರ್ಗದ ವಿಚಾರ ಮತ್ತು ಪಾಪದ ಕಾರಣದಿಂದಾಗಿ ಪದಚ್ಯುತನಾದ ರಾಜನ ಪುನರುತ್ಥಾನದ ವಿಷಯದಲ್ಲಿ ಅಂಗಾರಿಷ್ಟ ಮತ್ತು ಕಾಮಂದರ ಸಂವಾದ (1-24).

12123001 ಯುಧಿಷ್ಠಿರ ಉವಾಚ।
12123001a ತಾತ ಧರ್ಮಾರ್ಥಕಾಮಾನಾಂ ಶ್ರೋತುಮಿಚ್ಚಾಮಿ ನಿಶ್ಚಯಮ್।
12123001c ಲೋಕಯಾತ್ರಾ ಹಿ ಕಾರ್ತ್ಸ್ನ್ಯೇನ ತ್ರಿಷ್ವೇತೇಷು ಪ್ರತಿಷ್ಠಿತಾ।।

ಯುಧಿಷ್ಠಿರನು ಹೇಳಿದನು: “ತಾತ! ಧರ್ಮಾರ್ತಕಾಮಗಳ ಕುರಿತು ನಿಶ್ಚಯವನ್ನು ಕೇಳಬಯಸುತ್ತೇನೆ. ಏಕೆಂದರೆ ಲೋಕಯಾತ್ರೆಯು ಸಂಪೂರ್ಣವಾಗಿ ಈ ಮೂರರಲ್ಲಿ ಪ್ರತಿಷ್ಠಿತವಾಗಿದೆ.

12123002a ಧರ್ಮಾರ್ಥಕಾಮಾಃ ಕಿಂಮೂಲಾಸ್ತ್ರಯಾಣಾಂ ಪ್ರಭವಶ್ಚ ಕಃ।
12123002c ಅನ್ಯೋನ್ಯಂ ಚಾನುಷಜ್ಜಂತೇ ವರ್ತಂತೇ ಚ ಪೃಥಕ್ಪೃಥಕ್।।

ಧರ್ಮಾರ್ಥಕಾಮಗಳ ಮೂಲವು ಯಾವುದು? ಅವುಗಳ ಉತ್ಪತ್ತಿಗೆ ಕಾರಣರ್ಯಾರು? ಅವು ಏಕೆ ಕೆಲವೊಮ್ಮೆ ಒಂದಾಗಿಯೇ ಇರುತ್ತವೆ ಮತ್ತು ಇನ್ನೊಮ್ಮೆ ಬೇರೆ ಬೇರೆಯಾಗಿರುತ್ತವೆ?”

12123003 ಭೀಷ್ಮ ಉವಾಚ।
12123003a ಯದಾ ತೇ ಸ್ಯುಃ ಸುಮನಸೋ ಲೋಕಸಂಸ್ಥಾರ್ಥನಿಶ್ಚಯೇ1
12123003c ಕಾಲಪ್ರಭವಸಂಸ್ಥಾಸು ಸಜ್ಜಂತೇ ಚ ತ್ರಯಸ್ತದಾ।।

ಭೀಷ್ಮನು ಹೇಳಿದನು: “ಯಾವಾಗ ಜನರು ಸುಮನಸರಾಗಿದ್ದು ಅರ್ಥನಿಶ್ಚಯವನ್ನು ಮಾಡಿ ಕಾಲ-ಕಾರಣ-ಅನುಷ್ಠಾನಗಳು ಒದಗಿರುವಾಗ ಆ ಮೂರೂ ಒಂದಾಗಿರುತ್ತವೆ.

12123004a ಧರ್ಮಮೂಲಸ್ತು ದೇಹೋಽರ್ಥಃ2 ಕಾಮೋಽರ್ಥಫಲಮುಚ್ಯತೇ।
12123004c ಸಂಕಲ್ಪಮೂಲಾಸ್ತೇ ಸರ್ವೇ ಸಂಕಲ್ಪೋ ವಿಷಯಾತ್ಮಕಃ।।

ಅರ್ಥಕ್ಕೆ ಧರ್ಮವೇ ಮೂಲ. ಕಾಮವು ಅರ್ಥದ ಫಲವೆಂದು ಹೇಳಲ್ಪಟ್ಟಿದೆ. ಆದರೆ ಇವಕ್ಕೆ ಸಂಕಲ್ಪವೇ ಮೂಲಕಾರಣವು. ಮತ್ತು ಸಂಕಲ್ಪವು ವಿಷಯಾತ್ಮವು.

12123005a ವಿಷಯಾಶ್ಚೈವ ಕಾರ್ತ್ಸ್ನ್ಯೇನ ಸರ್ವ ಆಹಾರಸಿದ್ಧಯೇ।
12123005c ಮೂಲಮೇತತ್ತ್ರಿವರ್ಗಸ್ಯ ನಿವೃತ್ತಿರ್ಮೋಕ್ಷ ಉಚ್ಯತೇ।।

ಎಲ್ಲ ವಿಷಯಗಳೂ ಸಂಪೂರ್ಣವಾಗಿ ಇಂದ್ರಿಯಗಳ ಉಪಭೋಗಕ್ಕಾಗಿಯೇ ಇವೆ. ಇವೇ ತ್ರಿವರ್ಗದ ಮೂಲವಾಗಿವೆ. ಇವುಗಳಿಂದ ನಿವೃತ್ತಿಯೇ ಮೋಕ್ಷವೆನಿಸಿಕೊಳ್ಳುತ್ತದೆ.

12123006a ಧರ್ಮಃ ಶರೀರಸಂಗುಪ್ತಿರ್ಧರ್ಮಾರ್ಥಂ ಚಾರ್ಥ ಇಷ್ಯತೇ।
12123006c ಕಾಮೋ ರತಿಫಲಶ್ಚಾತ್ರ ಸರ್ವೇ ಚೈತೇ ರಜಸ್ವಲಾಃ।।

ಧರ್ಮದಿಂದ ಶರೀರದ ರಕ್ಷಣೆಯಾಗುತ್ತದೆ. ಧರ್ಮದ ಉಪಾರ್ಜನೆಗಾಗಿಯೇ ಅರ್ಥವನ್ನು ಬಯಸುತ್ತೇವೆ. ರತಿಫಲವನ್ನು ಕೊಡುವುದು ಕಾಮ. ಇವೆಲ್ಲವೂ ರಜೋಗುಣಸ್ವರೂಪವಾಗಿರುತ್ತವೆ.

12123007a ಸಂನಿಕೃಷ್ಟಾಂಶ್ಚರೇದೇನಾನ್ನ ಚೈನಾನ್ಮನಸಾ ತ್ಯಜೇತ್।
12123007c ವಿಮುಕ್ತಸ್ತಮಸಾ ಸರ್ವಾನ್ ಧರ್ಮಾದೀನ್ಕಾಮನೈಷ್ಠಿಕಾನ್।।

ಸನ್ನಿಹಿತವಾಗಿರುವ ಧರ್ಮಾರ್ಥಕಾಮಗಳನ್ನು ತನಗೆ ಹಿತವಾಗುವ ರೀತಿಯಲ್ಲಿ ಸೇವಿಸಬೇಕು. ಮನಸ್ಸಿನಿಂದ ಧರ್ಮಾರ್ಥಕಾಮಗಳನ್ನು ತ್ಯಜಿಸಬಾರದು. ತಪಸ್ಸಿನಿಂದಲೂ ವಿಚಾರಪರತೆಯಿಂದಲೂ ಇವುಗಳಿಂದ ಮುಕ್ತರಾಗಬೇಕು3.

12123008a ಶ್ರೇಷ್ಠಬುದ್ಧಿಸ್ತ್ರಿವರ್ಗಸ್ಯ ಯದಯಂ ಪ್ರಾಪ್ನುಯಾತ್ ಕ್ಷಣಾತ್।
12123008c ಬುದ್ಧ್ಯಾ ಬುಧ್ಯೇದಿಹಾರ್ಥೇ ನ ತದಹ್ನಾ ತು ನಿಕೃಷ್ಟಯಾ4।।

ಧರ್ಮಾರ್ಥಕಾಮಗಳಲ್ಲಿರುವ ಶ್ರೇಷ್ಠಬುದ್ಧಿಯು ಮೋಕ್ಷದಲ್ಲಿಯೇ ಇದ್ದಿದ್ದರೆ ಅದನ್ನು ಕ್ಷಣದಲ್ಲಿಯೇ ಪಡೆದುಕೊಳ್ಳಬಹುದಾಗಿತ್ತು. ಆದರೆ ನಿಕೃಷ್ಟಬುದ್ಧಿಯಿರುವವನು ತನ್ನ ಬುದ್ಧಿಯಿಂದ ಇದನ್ನು ತಿಳಿದುಕೊಂಡಿರುವುದಿಲ್ಲ.

12123009a ಅಪಧ್ಯಾನಮಲೋ ಧರ್ಮೋ ಮಲೋಽರ್ಥಸ್ಯ ನಿಗೂಹನಮ್। 12123009c 5ಸಂಪ್ರಮೋದಮಲಃ ಕಾಮೋ ಭೂಯಃ ಸ್ವಗುಣವರ್ತಿತಃ।।

ಫಲಾಪೇಕ್ಷೆಯೇ ಧರ್ಮದ ಮಲ. ಕೂಡಿಡುವುದೇ ಅರ್ಥದ ಮಲ. ಸಂಪ್ರಮೋದವೇ ಕಾಮದ ಮಲ. ಆದರೆ ಇವುಗಳ ಸ್ವಗುಣಗಳೇ ಫಲಾಪೇಕ್ಷೆ, ಕೂಡಿದುವುದು ಮತ್ತು ಸಂಪ್ರಮತ್ತನಾಗಿರುವುದು.

12123010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12123010c ಕಾಮಂದಸ್ಯ ಚ ಸಂವಾದಮಂಗಾರಿಷ್ಠಸ್ಯ ಚೋಭಯೋಃ।।

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಕಾಮಂದ ಮತ್ತು ಅಂಗಾರಿಷ್ಠರ ನಡುವಿನ ಸಂವದವನ್ನು ಉದಾಹರಿಸುತ್ತಾರೆ.

12123011a ಕಾಮಂದಮೃಷಿಮಾಸೀನಮಭಿವಾದ್ಯ ನರಾಧಿಪಃ।
12123011c ಅಂಗಾರಿಷ್ಠೋಽಥ ಪಪ್ರಚ್ಚ ಕೃತ್ವಾ ಸಮಯಪರ್ಯಯಮ್।।

ನರಾಧಿಪ ಅಂಗಾರಿಷ್ಠನು ಕುಳಿತಿದ್ದ ಕಾಮಂದಋಷಿಯನ್ನು ನಮಸ್ಕರಿಸಿ ಸಮಯವು ಬಂದೊದಗಿದೆಯೆಂದು ಭಾವಿಸಿ, ಕೇಳಿದನು.

12123012a ಯಃ ಪಾಪಂ ಕುರುತೇ ರಾಜಾ ಕಾಮಮೋಹಬಲಾತ್ಕೃತಃ।
12123012c ಪ್ರತ್ಯಾಸನ್ನಸ್ಯ ತಸ್ಯರ್ಷೇ ಕಿಂ ಸ್ಯಾತ್ಪಾಪಪ್ರಣಾಶನಮ್।।

“ಋಷೇ! ಕಾಮಮೋಹಗಳ ಬಲದಿಂದ ಸೆಳೆಯಲ್ಪಟ್ಟು ರಾಜನು ಪಾಪಗಳನ್ನು ಮಾಡುತ್ತಾನೆ. ಅವನು ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ತನ್ನ ಪಾಪವನ್ನು ಹೋಗಲಾಡಿಸಿಕೊಳ್ಳಬಹುದು?

12123013a ಅಧರ್ಮೋ ಧರ್ಮ ಇತಿ ಹ ಯೋಽಜ್ಞಾನಾದಾಚರೇದಿಹ।
12123013c ತಂ ಚಾಪಿ ಪ್ರಥಿತಂ ಲೋಕೇ ಕಥಂ ರಾಜಾ ನಿವರ್ತಯೇತ್।।

ಅಜ್ಞಾನದಿಂದ ಅಧರ್ಮವನ್ನು ಧರ್ಮವೆಂದೇ ತಿಳಿದು ಆಚರಿಸುತ್ತಿರುವ ಲೋಕ ವಿಖ್ಯಾತನಾದವನನ್ನು ರಾಜನು ಹೇಗೆ ಅಧರ್ಮದಿಂದ ತಡೆಯಬೇಕು?”

12123014 ಕಾಮಂದ ಉವಾಚ।
12123014a ಯೋ ಧರ್ಮಾರ್ಥೌ ಸಮುತ್ಸೃಜ್ಯ ಕಾಮಮೇವಾನುವರ್ತತೇ।
12123014c ಸ ಧರ್ಮಾರ್ಥಪರಿತ್ಯಾಗಾತ್ ಪ್ರಜ್ಞಾನಾಶಮಿಹಾರ್ಚತಿ।।

ಕಾಮಂದನು ಹೇಳಿದನು: “ಧರ್ಮಾರ್ಥಗಳನ್ನು ಬಿಟ್ಟು ಕಾಮವನ್ನೇ ಅನುಸರಿಸುವವನು ಧರ್ಮಾರ್ಥಪರಿತ್ಯಾಗದಿಂದಾಗಿ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಾನೆ.

12123015a ಪ್ರಜ್ಞಾಪ್ರಣಾಶಕೋ ಮೋಹಸ್ತಥಾ ಧರ್ಮಾರ್ಥನಾಶಕಃ।
12123015c ತಸ್ಮಾನ್ನಾಸ್ತಿಕತಾ ಚೈವ ದುರಾಚಾರಶ್ಚ ಜಾಯತೇ।।

ಪ್ರಜ್ಞಾನಾಶವೇ ಮೋಹ. ಅದು ಧರ್ಮಾರ್ಥಗಳೆರಡನ್ನೂ ನಾಶಮಾಡುತ್ತದೆ. ಅದರಿಂದ ನಾಸ್ತಿಕತೆಯೂ ದುರಾಚಾರಗಳೂ ಹುಟ್ಟುತ್ತವೆ.

12123016a ದುರಾಚಾರಾನ್ಯದಾ ರಾಜಾ ಪ್ರದುಷ್ಟಾನ್ನ ನಿಯಚ್ಚತಿ।
12123016c ತಸ್ಮಾದುದ್ವಿಜತೇ ಲೋಕಃ ಸರ್ಪಾದ್ವೇಶ್ಮಗತಾದಿವ।।

ದುರಾಚಾರಿಗಳನ್ನು ಮತ್ತು ದುಷ್ಟರನ್ನು ರಾಜನು ನಿಯಂತ್ರಿಸದೇ ಇದ್ದರೆ ಮನೆಯೊಳಗೆ ಹಾವು ಹೊಕ್ಕಿಕೊಂಡರೆ ಹೇಗೋ ಹಾಗೆ ಜನರು ಉದ್ವಿಗ್ನರಾಗುತ್ತಾರೆ.

12123017a ತಂ ಪ್ರಜಾ ನಾನುವರ್ತಂತೇ ಬ್ರಾಹ್ಮಣಾ ನ ಚ ಸಾಧವಃ।
12123017c ತತಃ ಸಂಕ್ಷಯಮಾಪ್ನೋತಿ6 ತಥಾ ವಧ್ಯತ್ವಮೇತಿ ಚ।।

ಅಂಥಹ ರಾಜನನ್ನು ಬ್ರಾಹ್ಮಣರೂ ಸಾಧುಗಳೂ ಅನುಸರಿಸುವುದಿಲ್ಲ. ಅವನು ವಧ್ಯನೆಂದು ನಿರ್ಣಯಿಸಿ ಅವರೇ ಅವನನ್ನು ನಾಶಗೊಳಿಸುತ್ತಾರೆ.

12123018a ಅಪಧ್ವಸ್ತಸ್ತ್ವವಮತೋ ದುಃಖಂ ಜೀವತಿ ಜೀವಿತಮ್।
12123018c ಜೀವೇಚ್ಚ ಯದಪಧ್ವಸ್ತಸ್ತಚ್ಚುದ್ಧಂ ಮರಣಂ ಭವೇತ್।।

ಒಂದು ವೇಳೆ ವಧಿಸಲ್ಪಡದಿದ್ದರೂ ಅವನು ರಾಜಪದವಿಯಿಂದ ಭ್ರಷ್ಟನಾಗಿ ದುಃಖದ ಜೀವನವನ್ನು ಜೀವಿಸುತ್ತಾನೆ. ಭ್ರಷ್ಟನಾದನಂತರವೂ ಅವನು ಜೀವಿಸಿದ್ದರೆ ಆ ಜೀವನವು ಅವನಿಗೆ ಸ್ಪಷ್ಟ ಮರಣವಾಗಿಯೇ ಪರಿಣಮಿಸುತ್ತದೆ.

12123019a ಅತ್ರೈತದಾಹುರಾಚಾರ್ಯಾಃ ಪಾಪಸ್ಯ ಚ ನಿಬರ್ಹಣಮ್।
12123019c ಸೇವಿತವ್ಯಾ ತ್ರಯೀ ವಿದ್ಯಾ ಸತ್ಕಾರೋ ಬ್ರಾಹ್ಮಣೇಷು ಚ।।

ಅಂತಹ ಸಂದರ್ಭದಲ್ಲಿ ರಾಜನು ಪಾಪಕ್ಕೆ ಪಶ್ಚಾತ್ತಾಪ ಪಡಬೇಕು. ವೇದಗಳ ಅಧ್ಯಯನ ಮಾಡಬೇಕು ಮತ್ತು ಬ್ರಾಹ್ಮಣರನ್ನು ಸತ್ಕರಿಸಬೇಕು ಎಂದು ಆಚಾರ್ಯರು ಹೇಳುತ್ತಾರೆ.

12123020a ಮಹಾಮನಾ ಭವೇದ್ಧರ್ಮೇ ವಿವಹೇಚ್ಚ ಮಹಾಕುಲೇ।
12123020c ಬ್ರಾಹ್ಮಣಾಂಶ್ಚಾಪಿ ಸೇವೇತ ಕ್ಷಮಾಯುಕ್ತಾನ್ಮನಸ್ವಿನಃ।।

ಧರ್ಮದಲ್ಲಿಯೇ ಮಹಾಮನಸ್ಸನ್ನಿಡಬೇಕು. ಮಹಾಕುಲದ ಕನ್ಯೆಯೊಂದಿಗೆ ವಿವಾಹವಾಗಬೇಕು. ಮನಸ್ವಿಗಳೂ ಕ್ಷಯಾಯುಕ್ತರೂ ಆದ ಬ್ರಾಹ್ಮಣರನ್ನು ಸೇವಿಸಬೇಕು.

12123021a ಜಪೇದುದಕಶೀಲಃ ಸ್ಯಾತ್ಸುಮುಖೋ ನಾನ್ಯದಾಸ್ಥಿತಃ।
12123021c ಧರ್ಮಾನ್ವಿತಾನ್ಸಂಪ್ರವಿಶೇದ್ಬಹಿಃ ಕೃತ್ವೈವ ದುಷ್ಕೃತೀನ್।।

ನೀರಿನಲ್ಲಿ ನಿಂತು ಜಪಿಸಬೇಕು. ಪ್ರಸನ್ನವದನನಾಗಿರಬೇಕು. ಧರ್ಮಾರ್ವಿತರ ಸಹವಾಸವನ್ನು ಮಾಡಬೇಕು. ಪಾಪಿಷ್ಠರನ್ನು ದೇಶದ ಹೊರಹಾಕಬೇಕು.

12123022a ಪ್ರಸಾದಯೇನ್ಮಧುರಯ ವಾಚಾಪ್ಯಥ ಚ ಕರ್ಮಣಾ।
12123022c ಇತ್ಯಸ್ಮೀತಿ ವದೇನ್ನಿತ್ಯಂ ಪರೇಷಾಂ ಕೀರ್ತಯನ್ಗುಣಾನ್।।

ಸುಮಧುರ ಮಾತುಗಳಿಂದ ಮತ್ತು ಉತ್ತಮ ಕರ್ಮಗಳಿಂದ ಎಲ್ಲರನ್ನೂ ಪ್ರಸನ್ನಗೊಳಿಸಬೇಕು. ಇತರರ ಗುಣಗಳನ್ನು ಕೊಂಡಾಡುತ್ತಾ ಎಲ್ಲರೊಡನೆಯೂ ನಾನು ನಿಮ್ಮವನಾಗಿದ್ದೇನೆ ಎಂದು ಹೇಳಿಕೊಳ್ಳಬೇಕು.

12123023a ಅಪಾಪೋ ಹ್ಯೇವಮಾಚಾರಃ ಕ್ಷಿಪ್ರಂ ಬಹುಮತೋ ಭವೇತ್।
12123023c ಪಾಪಾನ್ಯಪಿ ಚ ಕೃಚ್ಚ್ರಾಣಿ ಶಮಯೇನ್ನಾತ್ರ ಸಂಶಯಃ।।

ಹೀಗೆ ಆಚರಿಸುವವನು ಕ್ಷಿಪ್ರವಾಗಿ ಅಪಾಪಿಯಾಗುತ್ತಾನೆ ಮ್ತ್ತು ಬಹುಜನರ ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಇದರಿಂದ ಕಠೋರ ಪಾಪಗಳನ್ನು ಮಾಡಿದ್ದರೂ ಅದನ್ನು ಉಪಶಮನಗೊಳಿಸಬಹುದು. ಅದರಲ್ಲಿ ಸಂಶಯವಿಲ್ಲ.

12123024a ಗುರವೋಽಪಿ ಪರಂ ಧರ್ಮಂ ಯದ್ಬ್ರೂಯುಸ್ತತ್ತಥಾ ಕುರು।
12123024c ಗುರೂಣಾಂ ಹಿ ಪ್ರಸಾದಾದ್ಧಿ ಶ್ರೇಯಃ ಪರಮವಾಪ್ಸ್ಯಸಿ।।

ಗುರುವೇ ಪರಮ ಧರ್ಮವು. ಅವನು ಹೇಳಿದ ಹಾಗೆ ಮಾಡು. ಗುರುಜನರ ಕೃಪೆಯಿಂದಲೇ ನೀನು ಪರಮ ಶ್ರೇಯಸ್ಸನ್ನು ಪಡೆದುಕೊಳ್ಳುತ್ತೀಯೆ.””

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಮಾಂದಕಾಂಗರಿಷ್ಟಸಂವಾದೇ ತ್ರಯೋವಿಂಶತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಮಾಂದಕಾಂಗರಿಷ್ಟಸಂವಾದ ಎನ್ನುವ ನೂರಾಇಪ್ಪತ್ಮೂರನೇ ಅಧ್ಯಾಯವು.

  1. ಲೋಕೇ ಧರ್ಮಾರ್ಥನಿಶ್ಚಯೇ। (ಭಾರತ ದರ್ಶನ). ↩︎

  2. ಧರ್ಮಮೂಲಃ ಸದೈವಾರ್ಥಃ (ಭಾರತ ದರ್ಶನ). ↩︎

  3. ಧರ್ಮಾರ್ಥಕಾಮಗಳನ್ನು ಆಸಕ್ತಿರಹಿತನಾಗಿ ಫಲತ್ಯಾಗದ ಮೂಲಕ ಸೇವಿಸಬೇಕು (ಭಾರತ ದರ್ಶನ). ↩︎

  4. ಬುದ್ಧ್ಯಾ ಬುದ್ಧಿರಿಹಾರ್ಥೇನ ತದಜ್ಞಾನನಿಕೃಷ್ಟಯಾ। (ಭಾರತ ದರ್ಶನ). ↩︎

  5. ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಅರ್ಥಾರ್ಥಮನ್ಯದ್ಭವತಿ ವಿಪರೀತಮಥಾಪರಮ್। ಅನರ್ಥಾರ್ಥಮವಪ್ಯಾರ್ಥಮನ್ಯತ್ರಾದ್ಯೋಪಕಾರಕಮ್।। (ಭಾರತ ದರ್ಶನ). ↩︎

  6. ಸಂಶಯಮಾಪ್ನೋತಿ (ಭಾರತ ದರ್ಶನ). ↩︎