122 ದಂಡೋತ್ಪತ್ತ್ಯುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 122

ಸಾರ

ದಂಡದ ಉತ್ಪತ್ತಿ ಮತ್ತು ಅದು ಕ್ಷತ್ರಿಯರ ಕೈಯಲ್ಲಿ ಬಂದ ಪರಂಪರೆಯನ್ನು ವರ್ಣಿಸುವ ವಸುಹೋಮ ಮತ್ತು ಮಾಂಧಾತರ ಸಂವಾದ (1-55).

12122001 ಭೀಷ್ಮ ಉವಾಚ।
12122001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12122001c ಅಂಗೇಷು ರಾಜಾ ದ್ಯುತಿಮಾನ್ವಸುಹೋಮ ಇತಿ ಶ್ರುತಃ।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಅಂಗದೇಶದ ರಾಜರಲ್ಲಿ ದ್ಯುತಿಮಾನ್ ವಸುಹೋಮ ಎನ್ನುವವನು ಖ್ಯಾತನಾಗಿದ್ದನು.

12122002a ಸ ರಾಜಾ ಧರ್ಮನಿತ್ಯಃ ಸನ್ಸಹ ಪತ್ನ್ಯಾ ಮಹಾತಪಾಃ।
12122002c ಮುಂಜಪೃಷ್ಠಂ ಜಗಾಮಾಥ ದೇವರ್ಷಿಗಣಪೂಜಿತಮ್।।

ಮಹಾತಪಸ್ವಿಯೂ ಧರ್ಮನಿತ್ಯನೂ ಆಗಿದ್ದ ಆ ರಾಜನು ಪತ್ನಿಯೊಡನೆ ದೇವರ್ಷಿಗಣಪೂಜಿತವಾದ ಮುಂಜಪೃಷ್ಠಕ್ಕೆ ಹೋದನು.

12122003a ತತ್ರ ಶೃಂಗೇ ಹಿಮವತೋ ಮೇರೌ ಕನಕಪರ್ವತೇ।
12122003c ಯತ್ರ ಮುಂಜವಟೇ ರಾಮೋ ಜಟಾಹರಣಮಾದಿಶತ್।।

ಕನಕಪರ್ವತ ಮೇರುವಿನ ಸಮೀಪದ ಹಿಮಾಯಲಯ ಶಿಖರದ ಮೇಲಿದ್ದ ಆ ಮುಂಚವಟಿಯಲ್ಲಿಯೇ ರಾಮನು1 ತನ್ನ ಜಟೆಯನ್ನು ತೆಗೆಯಲು ಆದೇಶವನ್ನಿತ್ತಿದ್ದನು.

12122004a ತದಾಪ್ರಭೃತಿ ರಾಜೇಂದ್ರ ಋಷಿಭಿಃ ಸಂಶಿತವ್ರತೈಃ।
12122004c ಮುಂಜಪೃಷ್ಠ ಇತಿ ಪ್ರೋಕ್ತಃ ಸ ದೇಶೋ ರುದ್ರಸೇವಿತಃ।।

ರಾಜೇಂದ್ರ! ಅಂದಿನಿಂದ ಕಠೋರವ್ರತನಿಷ್ಠ ಋಷಿಗಳು ರುದ್ರಸೇವಿತವಾದ ಆ ಪ್ರದೇಶವನ್ನು ಮುಂಜಪೃಷ್ಠ ಎಂದೇ ಕರೆದರು.

12122005a ಸ ತತ್ರ ಬಹುಭಿರ್ಯುಕ್ತಃ ಸದಾ ಶ್ರುತಿಮಯೈರ್ಗುಣೈಃ।
12122005c ಬ್ರಾಹ್ಮಣಾನಾಮನುಮತೋ ದೇವರ್ಷಿಸದೃಶೋಽಭವತ್।।

ಅವನು ಅಲ್ಲಿ ಸದಾ ಅನೇಕ ಶ್ರುತಿಮಯಗುಣಗಳಿಂದ ಯುಕ್ತನಾಗಿದ್ದ ಅವನನ್ನು ಬ್ರಾಹ್ಮಣರೂ ಗೌರವಿಸತೊಡಗಲು ಅವನು ದೇವರ್ಷಿಸದೃಶನಾದನು.

12122006a ತಂ ಕದಾ ಚಿದದೀನಾತ್ಮಾ ಸಖಾ ಶಕ್ರಸ್ಯ ಮಾನಿತಃ।
12122006c ಅಭ್ಯಾಗಚ್ಚನ್ಮಹೀಪಾಲೋ ಮಾಂಧಾತಾ ಶತ್ರುಕರ್ಶನಃ।।

ಒಮ್ಮೆ ಅದೀನಾತ್ಮಾ ಶಕ್ರನ ಸಖ ಮತ್ತು ಸನ್ಮಾನಿತ ಮಹೀಪಾಲ ಶತ್ರುಕರ್ಶನ ಮಾಂಧಾತನು ಅಲ್ಲಿಗೆ ಆಗಮಿಸಿದನು.

12122007a ಸೋಽಭಿಸೃತ್ಯ ತು ಮಾಂಧಾತಾ ವಸುಹೋಮಂ ನರಾಧಿಪಮ್।
12122007c ದೃಷ್ಟ್ವಾ ಪ್ರಕೃಷ್ಟಂ ತಪಸಾ ವಿನಯೇನಾಭ್ಯತಿಷ್ಠತ।।

ಮಾಂಧಾತನಾದರೋ ನರಾಧಿಪ ವಸುಹೋಮನ ಬಳಿಸಾರಿ ಅವನ ಕಷ್ಟಕರ ತಪಸ್ಸನ್ನು ನೋಡಿ ವಿನೀತನಾಗಿ ನಿಂತುಕೊಂಡನು.

12122008a ವಸುಹೋಮೋಽಪಿ ರಾಜ್ಞೋ ವೈ ಗಾಮರ್ಘ್ಯಂ ಚ ನ್ಯವೇದಯತ್।
12122008c ಅಷ್ಟಾಂಗಸ್ಯ ಚ ರಾಜ್ಯಸ್ಯ ಪಪ್ರಚ್ಚ ಕುಶಲಂ ತದಾ।।

ವಸುಹೋಮನೂ ಕೂಡ ಗೋವು-ಅರ್ಘ್ಯಗಳನ್ನು ರಾಜನಿಗೆ ನಿವೇದಿಸಿ ರಾಜ್ಯದ ಅಷ್ಟಾಂಗಗಳ ಕುಶಲತೆಯ ಕುರಿತು ಪ್ರಶ್ನಿಸಿದನು.

12122009a ಸದ್ಭಿರಾಚರಿತಂ ಪೂರ್ವಂ ಯಥಾವದನುಯಾಯಿನಮ್।
12122009c ಅಪೃಚ್ಚದ್ವಸುಹೋಮಸ್ತಂ ರಾಜನ್ ಕಿಂ ಕರವಾಣಿ ತೇ।।

ಹಿಂದೆ ಸಾಧು-ಸತ್ಪುರುಷರು ಯಾವ ಧರ್ಮಮಾರ್ಗವನ್ನು ಅನುಸರಿಸಿ ನಡೆಯುತ್ತಿದ್ದರೋ ಅದೇ ಮಾರ್ಗದಲ್ಲಿ ಯಥಾವತ್ತಾಗಿ ನಡೆದುಕೊಳ್ಳುತ್ತಿದ್ದ ಮಾಂಧಾತನನ್ನು ವಸುಹೋಮನು ಪ್ರಶ್ನಿಸಿದನು: “ರಾಜನ್! ನಿನಗೆ ನಾನು ಯಾವ ಕಾರ್ಯವನ್ನು ಮಾಡಿಕೊಡಲಿ?”

12122010a ಸೋಽಬ್ರವೀತ್ಪರಮಪ್ರೀತೋ ಮಾಂಧಾತಾ ರಾಜಸತ್ತಮಮ್।
12122010c ವಸುಹೋಮಂ ಮಹಾಪ್ರಾಜ್ಞಮಾಸೀನಂ ಕುರುನಂದನ।।

ಕುರುನಂದನ! ಪರಮಪ್ರೀತನಾದ ಮಾಂಧಾತನು ಕುಳಿತಿದ್ದ ಮಹಾಪ್ರಾಜ್ಞ ರಾಜಸತ್ತಮ ಮಸುಹೋಮನಿಗೆ ಹೇಳಿದನು:

12122011a ಬೃಹಸ್ಪತೇರ್ಮತಂ ರಾಜನ್ನಧೀತಂ ಸಕಲಂ ತ್ವಯಾ।
12122011c ತಥೈವೌಶನಸಂ ಶಾಸ್ತ್ರಂ ವಿಜ್ಞಾತಂ ತೇ ನರಾಧಿಪ।।

“ರಾಜನ್! ನೀನು ಬೃಹಸ್ಪತಿಯ ಮತ ಸಕಲವನ್ನೂ ಅಧ್ಯಯನಮಾಡಿರುವೆ. ಹಾಗೆಯೇ ಔಶನಸ ಶುಕ್ರಾಚಾರ್ಯನ ಶಾಸ್ತ್ರವೂ ನಿನಗೆ ತಿಳಿದಿದೆ.

12122012a ತದಹಂ ಶ್ರೋತುಮಿಚ್ಚಾಮಿ ದಂಡ ಉತ್ಪದ್ಯತೇ ಕಥಮ್।
12122012c ಕಿಂ ವಾಪಿ ಪೂರ್ವಂ ಜಾಗರ್ತಿ ಕಿಂ ವಾ ಪರಮಮುಚ್ಯತೇ।।

ಆದುದರಿಂದ ನಾನು ದಂಡದ ಉತ್ಪತ್ತಿಯು ಹೇಗಾಯಿತೆಂದು ಕೇಳಬಯಸುತ್ತೇನೆ. ಅದರ ಮೊದಲು ಯಾವುದು ಪ್ರಪಂಚದ ರಕ್ಷಣೆಗೆ ಜಾಗೃತವಾಗಿತ್ತು? ಅದನ್ನು ಪರಮ ಶ್ರೇಷ್ಠವೆಂದು ಏಕೆ ಹೇಳುತ್ತಾರೆ?

12122013a ಕಥಂ ಕ್ಷತ್ರಿಯಸಂಸ್ಥಶ್ಚ ದಂಡಃ ಸಂಪ್ರತ್ಯವಸ್ಥಿತಃ।
12122013c ಬ್ರೂಹಿ ಮೇ ಸುಮಹಾಪ್ರಾಜ್ಞ ದದಾಮ್ಯಾಚಾರ್ಯವೇತನಮ್।।

ಆ ದಂಡವು ಕ್ಷತ್ರಿಯನ ಕೈಗೆ ಬಂದುದು ಹೇಗೆ? ಮಹಾಪ್ರಾಜ್ಞ! ನನಗೆ ಇದನ್ನು ಹೇಳು. ನಾನು ನಿನಗೆ ಆಚಾರ್ಯವೇತನವನ್ನು ನೀಡುತ್ತೇನೆ.”

12122014 ವಸುಹೋಮ ಉವಾಚ।
12122014a ಶೃಣು ರಾಜನ್ಯಥಾ ದಂಡಃ ಸಂಭೂತೋ ಲೋಕಸಂಗ್ರಹಃ।
12122014c ಪ್ರಜಾವಿನಯರಕ್ಷಾರ್ಥಂ ಧರ್ಮಸ್ಯಾತ್ಮಾ ಸನಾತನಃ।।

ವಸುಹೋಮನು ಹೇಳಿದನು: “ರಾಜನ್! ಪ್ರಜಾವಿನಯರಕ್ಷಣೆಗಾಗಿ ಲೋಕಸಂಗ್ರಹಕಾರಕ ಸನಾತನ ಧರ್ಮದ ಆತ್ಮವಾಗಿರುವ ಈ ದಂಡವು ಹೇಗೆ ಹುಟ್ಟಿತೆನ್ನುವುದನ್ನು ಕೇಳು.

12122015a ಬ್ರಹ್ಮಾ ಯಿಯಕ್ಷುರ್ಭಗವಾನ್ಸರ್ವಲೋಕಪಿತಾಮಹಃ।
12122015c ಋತ್ವಿಜಂ ನಾತ್ಮನಾ ತುಲ್ಯಂ ದದರ್ಶೇತಿ ಹಿ ನಃ ಶ್ರುತಮ್।।

ಸರ್ವಲೋಕಪಿತಾಮಹ ಭಗವಾನ್ ಬ್ರಹ್ಮನು ಯಜ್ಞಮಾಡಲು ಬಯಸಿದಾಗ ತನ್ನ ಸಮನಾನಾದ ಋತ್ವಿಜನು ಅವನಿಗೆ ಕಾಣಸಿಗಲಿಲ್ಲ ಎಂದು ನಾವು ಕೇಳಿದ್ದೇವೆ.

12122016a ಸ ಗರ್ಭಂ ಶಿರಸಾ ದೇವೋ ವರ್ಷಪೂಗಾನಧಾರಯತ್।
12122016c ಪೂರ್ಣೇ ವರ್ಷಸಹಸ್ರೇ ತು ಸ ಗರ್ಭಃ ಕ್ಷುವತೋಽಪತತ್।।

ಆಗ ಆ ದೇವನು ತನ್ನ ಶಿರಸ್ಸಿನಲ್ಲಿಯೇ ಅನೇಕ ವರ್ಷಗಳ ಪರ್ಯಂತ ಗರ್ಭವನ್ನು ಧರಿಸಿದನು. ಸಹಸ್ರವರ್ಷಗಳು ತುಂಬಿದಾಗ ಬ್ರಹ್ಮನು ಶೀನಲು ಆ ಗರ್ಭವು ಕೆಳಕ್ಕೆ ಬಿದ್ದಿತು.

12122017a ಸ ಕ್ಷುಪೋ ನಾಮ ಸಂಭೂತಃ ಪ್ರಜಾಪತಿರರಿಂದಮ।
12122017c ಋತ್ವಿಗಾಸೀತ್ತದಾ ರಾಜನ್ಯಜ್ಞೇ ತಸ್ಯ ಮಹಾತ್ಮನಃ।।

ರಾಜನ್! ಅರಿಂದಮ! ಅದರಿಂದ ಕ್ಷುಪ ಎಂಬ ಹೆಸರಿನ ಪ್ರಜಾಪತಿಯು ಹುಟ್ಟಿದನು. ಆ ಮಹಾತ್ಮನ ಯಜ್ಞಕ್ಕೆ ಅವನೇ ಋತ್ವಿಜನಾದನು.

12122018a ತಸ್ಮಿನ್ ಪ್ರವೃತ್ತೇ ಸತ್ರೇ ತು ಬ್ರಹ್ಮಣಃ ಪಾರ್ಥಿವರ್ಷಭ।
12122018c ಹೃಷ್ಟರೂಪಪ್ರಚಾರತ್ವಾದ್ದಂಡಃ ಸೋಽಂತರ್ಹಿತೋಽಭವತ್।।

ಪಾರ್ಥಿವರ್ಷಭ! ಬ್ರಹ್ಮನ ಆ ಸತ್ರವು ನಡೆಯುತ್ತಿರಲು ಹೃಷ್ಟರೂಪಪ್ರಚಾರತ್ವ2ದಿಂದಾಗಿ ದಂಡವು ಅಂತರ್ಹಿತವಾಯಿತು.

12122019a ತಸ್ಮಿನ್ನಂತರ್ಹಿತೇ ಚಾಥ ಪ್ರಜಾನಾಂ ಸಂಕರೋಽಭವತ್।
12122019c ನೈವ ಕಾರ್ಯಂ ನ ಚಾಕಾರ್ಯಂ ಭೋಜ್ಯಾಭೋಜ್ಯಂ ನ ವಿದ್ಯತೇ।।

ಅದು ಅಂತರ್ಹಿತವಾಗಲು ಪ್ರಜೆಗಳಲ್ಲಿ ಸಂಕರವುಂಟಾಯಿತು. ಕಾರ್ಯ-ಅಕಾರ್ಯ ಮತ್ತು ಭೋಜ್ಯ-ಅಭೋಜ್ಯಗಳ್ಯಾವುವೂ ತಿಳಿಯದಂತಾಯಿತು.

12122020a ಪೇಯಾಪೇಯಂ ಕುತಃ ಸಿದ್ಧಿರ್ಹಿಂಸಂತಿ ಚ ಪರಸ್ಪರಮ್।
12122020c ಗಮ್ಯಾಗಮ್ಯಂ ತದಾ ನಾಸೀತ್ಪರಸ್ವಂ ಸ್ವಂ ಚ ವೈ ಸಮಮ್।।

ಪೇಯಾಪೇಯಾಗಳ ಕುರಿತು ಇನ್ನೇನು? ಪರಸ್ಪರರನ್ನು ಹಿಂಸಿಸತೊಡಗಿದರು. ಗಮ್ಯಾಗಮ್ಯಗಳ ವಿಚಾರವೂ ಜನರಲ್ಲಿರಲಿಲ್ಲ. ಪರರ ಐಶ್ವರ್ಯವನ್ನೂ ತಮ್ಮದೆಂದೇ ಭಾವಿಸತೊಡಗಿದರು.

12122021a ಪರಸ್ಪರಂ ವಿಲುಂಪಂತೇ ಸಾರಮೇಯಾ ಇವಾಮಿಷಮ್।
12122021c ಅಬಲಂ ಬಲಿನೋ ಜಘ್ನುರ್ನಿರ್ಮರ್ಯಾದಮವರ್ತತ।।

ಮಾಂಸದ ತುಂಡಿಗೆ ಕಚ್ಚಾಡುವ ನಾಯಿಗಳಂತೆ ಪರಸ್ಪರರ ಸ್ವತ್ತನ್ನು ಅಪಹರಿಸತೊಡಗಿದರು. ಬಲಶಾಲಿಗಳು ಅಬಲರನ್ನು ಕೊಂದರು. ಮರ್ಯಾದೆಯೇ ಇಲ್ಲದ ಸ್ವೇಚ್ಛಾಚಾರವರು ಸರ್ವತ್ರ ವ್ಯಾಪಿಸಿತು.

12122022a ತತಃ ಪಿತಾಮಹೋ ವಿಷ್ಣುಂ ಭಗವಂತಂ ಸನಾತನಮ್।
12122022c ಸಂಪೂಜ್ಯ ವರದಂ ದೇವಂ ಮಹಾದೇವಮಥಾಬ್ರವೀತ್।।

ಆಗ ಪಿತಾಮಹನು ಸನಾತನ ಭಗವಂತ ವಿಷ್ಣುವನ್ನು ಪೂಜಿಸಿ, ವರದ ದೇವ ಮಹಾದೇವನಿಗೆ ಇಂತೆಂದನು:

12122023a ಅತ್ರ ಸಾಧ್ವನುಕಂಪಾ ವೈ ಕರ್ತುಮರ್ಹಸಿ ಕೇವಲಮ್3
12122023c ಸಂಕರೋ ನ ಭವೇದತ್ರ ಯಥಾ ವೈ ತದ್ವಿಧೀಯತಾಮ್।।

“ಇಲ್ಲಿ ನೀನು ಅನುಕಂಪವನ್ನು ತೋರಿಸುವ ಕೃಪೆಮಾಡಬೇಕು. ಕೇವಲ ಸಂಕರವು ನಡೆಯದಂತೆ ಉಪಾಯವನ್ನು ತೋರಿಸಿಕೊಡಬೇಕು.”

12122024a ತತಃ ಸ ಭಗವಾನ್ ಧ್ಯಾತ್ವಾ ಚಿರಂ ಶೂಲಜಟಾಧರಃ।
12122024c ಆತ್ಮಾನಮಾತ್ಮನಾ ದಂಡಮಸೃಜದ್ದೇವಸತ್ತಮಃ।।

ಆಗ ಸ್ವಲ್ಪ ಕಾಲ ಧ್ಯಾನಿಸಿ, ಭಗವಾನ್ ಶೂಲಜಟಾಧರ ದೇವಸತ್ತಮನು ತನ್ನಿಂದಲೇ ತನ್ನನ್ನು ದಂಡರೂಪದಲ್ಲಿ ಸೃಷ್ಟಿಸಿಕೊಂಡನು.

12122025a ತಸ್ಮಾಚ್ಚ ಧರ್ಮಚರಣಾಂ ನೀತಿಂ ದೇವೀಂ ಸರಸ್ವತೀಮ್।
12122025c ಅಸೃಜದ್ದಂಡನೀತಿಃ ಸಾ ತ್ರಿಷು ಲೋಕೇಷು ವಿಶ್ರುತಾ।।

ಆ ಧರ್ಮಚರಣಗಳ ನೀತಿಯನ್ನು ದೇವೀ ಸರಸ್ವತಿಯು ರಚಿಸಿದಳು. ಅ ದಂಡನೀತಿಯು ಮೂರು ಲೋಕಗಳಲ್ಲಿಯೂ ವಿಶ್ರುತವಾಯಿತು.

12122026a ಭೂಯಃ ಸ ಭಗವಾನ್ ಧ್ಯಾತ್ವಾ ಚಿರಂ ಶೂಲವರಾಯುಧಃ।
12122026c ತಸ್ಯ ತಸ್ಯ ನಿಕಾಯಸ್ಯ ಚಕಾರೈಕೈಕಮೀಶರಮ್।।

ಆ ಶೂಲವರಾಯುಧ ಭಗವಂತನು ಪುನಃ ಸ್ವಲ್ಪ ಹೊತ್ತು ಧ್ಯಾನಿಸಿ ಒಂದೊಂದು ಸಮೂಹಕ್ಕೂ ಒಬ್ಬೊಬ್ಬರನ್ನು ಈಶ್ವರರನ್ನಾಗಿ ಮಾಡಿದನು.

12122027a ದೇವಾನಾಮೀಶ್ವರಂ ಚಕ್ರೇ ದೇವಂ ದಶಶತೇಕ್ಷಣಮ್।
12122027c ಯಮಂ ವೈವಸ್ವತಂ ಚಾಪಿ ಪಿತೄಣಾಮಕರೋತ್ಪತಿಮ್।।

ಸಾವಿರ ಕಣ್ಣಿನತೆ ದೇವನನ್ನು ದೇವತೆಗಳ ಈಶ್ವರನನ್ನಾಗಿ ಮಾಡಿದನು. ವೈವಸ್ವತ ಯಮನನ್ನು ಪಿತೃಗಳ ಪತಿಯನ್ನಾಗಿ ಮಾಡಿದನು.

12122028a ಧನಾನಾಂ ರಕ್ಷಸಾಂ ಚಾಪಿ ಕುಬೇರಮಪಿ ಚೇಶ್ವರಮ್।
12122028c ಪರ್ವತಾನಾಂ ಪತಿಂ ಮೇರುಂ ಸರಿತಾಂ ಚ ಮಹೋದಧಿಮ್।।

ಧನಗಳ ಮತ್ತು ರಾಕ್ಷಸರ ಈಶ್ವರನನ್ನಾಗಿ ಕುಬೇರನನ್ನು, ಪರ್ವತಗಳ ಪತಿಯನ್ನಾಗಿ ಮೇರುವನ್ನು ಮತ್ತು ನದಿಗಳ ಪತಿಯನ್ನಾಗಿ ಮಹೋದಧಿಯನ್ನು ಮಾಡಿದನು.

12122029a ಅಪಾಂ ರಾಜ್ಯೇಽಸುರಾಣಾಂ ಚ ವಿದಧೇ ವರುಣಂ ಪ್ರಭುಮ್।
12122029c ಮೃತ್ಯುಂ ಪ್ರಾಣೇಶ್ವರಮಥೋ ತೇಜಸಾಂ ಚ ಹುತಾಶನಮ್।।

ವರುಣನನ್ನು ನೀರು ಮತ್ತು ಅಸುರರ ರಾಜ್ಯಕ್ಕೆ ಪ್ರಭುವನ್ನಾಗಿ ಮಾಡಿದನು. ಮೃತ್ಯುವನ್ನು ಪ್ರಾಣಗಳಿಗೂ ತೇಜಸ್ಸುಗಳಿಗೆ ಯಜ್ಞೇಶ್ವರನನ್ನೂ ಅಧಿಪತಿಗಳನ್ನಾಗಿ ಮಾಡಿದನು.

12122030a ರುದ್ರಾಣಾಮಪಿ ಚೇಶಾನಂ ಗೋಪ್ತಾರಂ ವಿದಧೇ ಪ್ರಭುಃ।
12122030c ಮಹಾತ್ಮಾನಂ ಮಹಾದೇವಂ ವಿಶಾಲಾಕ್ಷಂ ಸನಾತನಮ್।।

ಪ್ರಭುವು ಮಹಾತ್ಮ ಮಹಾದೇವ ವಿಶಾಲಾಕ್ಷ ಸನಾತನ ಈಶಾನನನ್ನು ರುದ್ರರ ರಕ್ಷಕನನ್ನಾಗಿ ಮಾಡಿದನು.

12122031a ವಸಿಷ್ಠಮೀಶಂ ವಿಪ್ರಾಣಾಂ ವಸೂನಾಂ ಜಾತವೇದಸಮ್।
12122031c ತೇಜಸಾಂ ಭಾಸ್ಕರಂ ಚಕ್ರೇ ನಕ್ಷತ್ರಾಣಾಂ ನಿಶಾಕರಮ್।।

ವಸಿಷ್ಠನನ್ನು ವಿಪ್ರರ, ಜಾತವೇದಸನನ್ನು ವಸುಗಳ, ಭಾಸ್ಕರನನ್ನು ತೇಜಸ್ಸುಗಳು ಮತ್ತು ನಿಶಾಕರನನ್ನು ನಕ್ಷತ್ರಗಳ ಅಧಿಪತಿಗಳನ್ನಾಗಿ ಮಾಡಿದನು.

12122032a ವೀರುಧಾಮಂಶುಮಂತಂ ಚ ಭೂತಾನಾಂ ಚ ಪ್ರಭುಂ ವರಮ್।
12122032c ಕುಮಾರಂ ದ್ವಾದಶಭುಜಂ ಸ್ಕಂದಂ ರಾಜಾನಮಾದಿಶತ್।।

ಅಂಶುಮಂತ ಚಂದ್ರನನ್ನು ಓಷಧಿಲತೆಗಳಿಗೆ ಅಧಿಪತಿಯನ್ನಾಗಿ ಮಾಡಿದನು. ಹನ್ನೆರಡು ಭುಜಗಳ ಶ್ರೇಷ್ಠ ಪ್ರಭು ಸ್ಕಂದ ಕುಮಾರನನ್ನು ಭೂತಗಳ ರಾಜನನ್ನಾಗಿ ಮಾಡಿದನು.

12122033a ಕಾಲಂ ಸರ್ವೇಶಮಕರೋತ್ಸಂಹಾರವಿನಯಾತ್ಮಕಮ್।
12122033c ಮೃತ್ಯೋಶ್ಚತುರ್ವಿಭಾಗಸ್ಯ ದುಃಖಸ್ಯ ಚ ಸುಖಸ್ಯ ಚ।।

ಸಂಹಾರವಿನಯಾತ್ಮಕನಾದ ಸರ್ವೇಶ ಕಾಲನನ್ನು ನಾಲ್ಕುವಿಧದ ಮೃತ್ಯುಗಳಿಗೂ. ಸುಖ-ದುಃಖಗಳಿಗೂ ಅಧಿಪತಿಯನ್ನಾಗಿ ಮಾಡಿದನು.

12122034a ಈಶ್ವರಃ ಸರ್ವದೇಹಸ್ತು4 ರಾಜರಾಜೋ ಧನಾಧಿಪಃ5
12122034c ಸರ್ವೇಷಾಮೇವ ರುದ್ರಾಣಾಂ ಶೂಲಪಾಣಿರಿತಿ ಶ್ರುತಿಃ।।

ಶೂಲಪಾಣಿಯು ಸರ್ವದೇಹಗಳ ಈಶ್ವರನೆಂದೂ, ರಾಜರಾಜನೆಂದೂ, ಧನಾಧಿಪನೆಂದೂ ಮತ್ತು ಸರ್ವ ರುದ್ರರ ಅಧಿಪತಿಯೆಂದೂ ಕೇಳಿದ್ದೇವೆ.

12122035a ತಮೇಕಂ6 ಬ್ರಹ್ಮಣಃ ಪುತ್ರಮನುಜಾತಂ ಕ್ಷುಪಂ ದದೌ।
12122035c ಪ್ರಜಾನಾಮಧಿಪಂ ಶ್ರೇಷ್ಠಂ ಸರ್ವಧರ್ಮಭೃತಾಮಪಿ।।

ಅವನು ಬ್ರಹ್ಮನ ಕಿರಿಯ ಪುತ್ರ ಕ್ಷುಪನನ್ನು ಎಲ್ಲ ಪ್ರಜೆಗಳಿಗೂ ಮತ್ತು ಎಲ್ಲ ಧರ್ಮಾತ್ಮರಿಗೂ ಅಧಿಪತಿಯನ್ನಾಗಿ ಮಾಡಿದನು.

12122036a ಮಹಾದೇವಸ್ತತಸ್ತಸ್ಮಿನ್ವೃತ್ತೇ ಯಜ್ಞೇ ಯಥಾವಿಧಿ।
12122036c ದಂಡಂ ಧರ್ಮಸ್ಯ ಗೋಪ್ತಾರಂ ವಿಷ್ಣವೇ ಸತ್ಕೃತಂ ದದೌ।।

ಬ್ರಹ್ಮನ ಯಜ್ಞವು ಯಥಾವಿಧಿಯಾಗಿ ಸಂಪೂರ್ಣವಾಗಲು ಮಹಾದೇವನು ಧರ್ಮರಕ್ಷಕ ಮಹಾವಿಷ್ಣುವಿಗೆ ಸತ್ಕೃತವಾದ ದಂಡವನ್ನು ಕೊಟ್ಟನು.

12122037a ವಿಷ್ಣುರಂಗಿರಸೇ ಪ್ರಾದಾದಂಗಿರಾ ಮುನಿಸತ್ತಮಃ।
12122037c ಪ್ರಾದಾದಿಂದ್ರಮರೀಚಿಭ್ಯಾಂ ಮರೀಚಿರ್ಭೃಗವೇ ದದೌ।।

ವಿಷ್ಣುವು ಅದನ್ನು ಅಂಗಿರಸನಿಗೆ ಕೊಟ್ಟನು. ಆ ಮುನಿಸತ್ತಮನು ಅದನ್ನು ಇಂದ್ರ ಮತ್ತು ಮರೀಚರಿಗೆ ಕೊಟ್ಟನು. ಮರೀಚಿಯು ಅದನ್ನು ಭೃಗುವಿಗೆ ಕೊಟ್ಟನು.

12122038a ಭೃಗುರ್ದದಾವೃಷಿಭ್ಯಸ್ತು ತಂ ದಂಡಂ ಧರ್ಮಸಂಹಿತಮ್।
12122038c ಋಷಯೋ ಲೋಕಪಾಲೇಭ್ಯೋ ಲೋಕಪಾಲಾಃ ಕ್ಷುಪಾಯ ಚ।।

ಧರ್ಮಸಂಹಿತವಾದ ಆ ದಂಡವನ್ನು ಭೃಗುವು ಋಷಿಗಳಿಗೂ, ಋಷಿಗಳು ಲೋಕಪಾಲರಿಗೂ ಮತ್ತು ಲೋಕಪಾಲರು ಕ್ಷುಪನಿಗೂ ಕೊಟ್ಟರು.

12122039a ಕ್ಷುಪಸ್ತು ಮನವೇ ಪ್ರಾದಾದಾದಿತ್ಯತನಯಾಯ ಚ।
12122039c ಪುತ್ರೇಭ್ಯಃ ಶ್ರಾದ್ಧದೇವಸ್ತು ಸೂಕ್ಷ್ಮಧರ್ಮಾರ್ಥಕಾರಣಾತ್।
12122039e ತಂ ದದೌ ಸೂರ್ಯಪುತ್ರಸ್ತು ಮನುರ್ವೈ ರಕ್ಷಣಾತ್ಮಕಮ್।।

ಕ್ಷುಪನಾದರೋ ಅದನ್ನು ಆದಿತ್ಯ ತನಯ ಮನು ಶ್ರಾದ್ಧದೇವನಿಗೂ ಶ್ರಾದ್ಧದೇವನು ಸೂಕ್ಷ್ಮಧರ್ಮಾರ್ಥಕಾರಣಗಳಿಂದ ತನ್ನ ಪುತ್ರರಿಗೂ ನೀಡಿದನು. ಸೂರ್ಯಪುತ್ರನು ರಕ್ಷಣಾತ್ಮಕವಾದ ಅದನ್ನು ಮನುವಿಗೆ ನೀಡಿದನು.

12122040a ವಿಭಜ್ಯ ದಂಡಃ ಕರ್ತವ್ಯೋ ಧರ್ಮೇಣ ನ ಯದೃಚ್ಚಯಾ।
12122040c ದುರ್ವಾಚಾ ನಿಗ್ರಹೋ ಬಂಧೋ7 ಹಿರಣ್ಯಂ ಬಾಹ್ಯತಃಕ್ರಿಯಾ।।

ಧರ್ಮಾನುಸಾರವಾಗಿ ನ್ಯಾಯಾನ್ಯಾಯಗಳನ್ನು ವಿಚಾರಿಸಿಯೇ ದಂಡವನ್ನು ಉಪಯೋಗಿಸಬೇಕು. ಮನಬಂದಂತೆ ದಂಡವನ್ನು ಉಪಯೋಗಿಸಬಾರದು. ದುಷ್ಟರನ್ನು ನಿಗ್ರಹಿಸುವುದೇ ದಂಡದ ಮುಖ್ಯ ಉದ್ದೇಶ. ಹಿರಣ್ಯದಿಂದ ಬೊಕ್ಕಸವನ್ನು ತೊಂಬುವುದಕ್ಕಾಗಿ ಅಲ್ಲ. ಅದೊಂದು ಬಾಹ್ಯಕ್ರಿಯೆಯು ಮಾತ್ರ.

12122041a ವ್ಯಂಗತ್ವಂ ಚ ಶರೀರಸ್ಯ ವಧೋ ವಾ ನಾಲ್ಪಕಾರಣಾತ್।
12122041c ಶರೀರಪೀಡಾಸ್ತಾಸ್ತಾಸ್ತು ದೇಹತ್ಯಾಗೋ ವಿವಾಸನಮ್।।

ಅಲ್ಪಕಾರಣಕ್ಕಾಗಿ ಪ್ರಜೆಗಳನ್ನು ಅಂಗವಿಕಲರನ್ನಾಗಿ ಮಾಡಬಾರದು, ಮರಣ ದಂಡನೆಯನ್ನು ನೀಡಬಾರದು, ಶರೀರ ಪೀಡೆಗಳನ್ನು ಕೊಡಬಾರದು, ದೇಹತ್ಯಾಗಮಾಡುವಂತೆ ಮಾಡಬಾರದು, ಮತ್ತು ದೇಶದಿಂದ ಹೊರಹಾಕಲೂ ಬಾರದು.

12122042a ಆನುಪೂರ್ವ್ಯಾ ಚ ದಂಡೋಽಸೌ ಪ್ರಜಾ ಜಾಗರ್ತಿ ಪಾಲಯನ್।
12122042c ಇಂದ್ರೋ ಜಾಗರ್ತಿ ಭಗವಾನಿಂದ್ರಾದಗ್ನಿರ್ವಿಭಾವಸುಃ।।

ಈ ದಂಡವು ಅನುಕ್ರಮವಾಗಿ ಪ್ರಜೆಗಳನ್ನು ರಕ್ಷಿಸುತ್ತಾ ಜಾಗೃತವಾಗಿರುತ್ತದೆ. ಇಂದ್ರನು ಜಾಗೃತನಾಗಿರುತ್ತಾನೆ. ಭಗವಾನ್ ಇಂದ್ರನಿಂದ ವಿಭಾವಸು ಅಗ್ನಿಯು ಜಾಗೃತನಾಗಿರುತ್ತಾನೆ.

12122043a ಅಗ್ನೇರ್ಜಾಗರ್ತಿ ವರುಣೋ ವರುಣಾಚ್ಚ ಪ್ರಜಾಪತಿಃ।
12122043c ಪ್ರಜಾಪತೇಸ್ತತೋ ಧರ್ಮೋ ಜಾಗರ್ತಿ ವಿನಯಾತ್ಮಕಃ।।

ಅಗ್ನಿಯಿಂದ ವರುಣನೂ, ವರುಣನಿಂದ ಪ್ರಜಾಪತಿಯೂ, ಪ್ರಜಾಪತಿಯಿಂದ ವಿನಯಾತ್ಮಕ ಧರ್ಮನೂ ಜಾಗೃತರಾಗಿರುತ್ತಾರೆ.

12122044a ಧರ್ಮಾಚ್ಚ ಬ್ರಹ್ಮಣಃ ಪುತ್ರೋ ವ್ಯವಸಾಯಃ ಸನಾತನಃ।
12122044c ವ್ಯವಸಾಯಾತ್ತತಸ್ತೇಜೋ ಜಾಗರ್ತಿ ಪರಿಪಾಲಯನ್।।

ಧರ್ಮನಿಂದ ಅದು ಬ್ರಹ್ಮನ ಪುತ್ರ ಸನಾತನ ವ್ಯವಸಾಯನಿಗೆ ಹೋಯಿತು. ವ್ಯವಸಾಯನಿಂದ ತೇಜಸ್ಸು ಅದನ್ನು ಪಡೆದುಕೊಂಡು ಜಾಗೃತವಾಗಿ ಪ್ರಜೆಗಳನ್ನು ಪರಿಪಾಲಿಸುತ್ತದೆ.

12122045a ಓಷಧ್ಯಸ್ತೇಜಸಸ್ತಸ್ಮಾದೋಷಧಿಭ್ಯಶ್ಚ ಪರ್ವತಾಃ।
12122045c ಪರ್ವತೇಭ್ಯಶ್ಚ ಜಾಗರ್ತಿ ರಸೋ ರಸಗುಣಾತ್ತಥಾ।।
12122046a ಜಾಗರ್ತಿ ನಿರೃತಿರ್ದೇವೀ ಜ್ಯೋತೀಂಷಿ ನಿರೃತೇರಪಿ।
12122046c ವೇದಾಃ ಪ್ರತಿಷ್ಠಾ ಜ್ಯೋತಿರ್ಭ್ಯಸ್ತತೋ ಹಯಶಿರಾಃ ಪ್ರಭುಃ।।

ತೇಜಸ್ಸಿನಿಂದ ಓಷಧಿಗಳೂ, ಓಷಧಿಗಳಿಂದ ಪರ್ವತಗಳೂ, ವರ್ವತಗಳಿಂದ ರಸಗಳೂ, ಪರ್ವತಗಳಿಂದ ರಸಗಳೂ ಜಾಗೃತಗೊಂಡವು. ರಸಗುಣಗಳಿಂದ ನಿರೃತಿದೇವಿಯೂ, ನಿರೃತಿಯಿಂದ ಜ್ಯೋತಿಸ್ಸುಗಳೂ ದಂಡವನ್ನು ಪಡೆದು ಜಾಗೃತವಾದವು. ಜ್ಯೋತಿಸ್ಸುಗಳಿಂದ ದಂಡವನ್ನು ಪಡೆದುಕೊಂಡು ವೇದಗಳು ಪ್ರತಿಷ್ಠಿತವಾದವು. ವೇದಗಳಿಂದ ಪ್ರಭು ಹಯಶಿರನು ಅದನ್ನು ಪಡೆದುಕೊಂಡನು.

12122047a ಬ್ರಹ್ಮಾ ಪಿತಾಮಹಸ್ತಸ್ಮಾಜ್ಜಾಗರ್ತಿ ಪ್ರಭುರವ್ಯಯಃ।
12122047c ಪಿತಾಮಹಾನ್ಮಹಾದೇವೋ ಜಾಗರ್ತಿ ಭಗವಾನ್ ಶಿವಃ।।

ಹಯಶಿರನಿಂದ ಪ್ರಭು ಅವ್ಯಯ ಪಿತಾಮಹ ಬ್ರಹ್ಮನು ಜಾಗೃತಗೊಂಡನು. ಪಿತಾಮಹನಿಂದ ಮಹಾದೇವ ಭಗವಾನ್ ಶಿವನು ಜಾಗೃತಗೊಂಡನು.

12122048a ವಿಶ್ವೇದೇವಾಃ ಶಿವಾಚ್ಚಾಪಿ ವಿಶ್ವೇಭ್ಯಶ್ಚ ತಥರ್ಷಯಃ।
12122048c ಋಷಿಭ್ಯೋ ಭಗವಾನ್ಸೋಮಃ ಸೋಮಾದ್ದೇವಾಃ ಸನಾತನಾಃ।।
12122049a ದೇವೇಭ್ಯೋ ಬ್ರಾಹ್ಮಣಾ ಲೋಕೇ ಜಾಗ್ರತೀತ್ಯುಪಧಾರಯ।

ಶಿವನಿಂದ ವಿಶ್ವೇದೇವತೆಗಳೂ, ವಿಶ್ವೇದೇವತೆಗಳಿಂದ ಋಷಿಗಳೂ, ಋಷಿಗಳಿಂದ ಭಗವಾನ್ ಸೋಮನೂ, ಸೋಮನಿಂದ ಸನಾತನ ದೇವತೆಗಳೂ, ದೇವತೆಗಳಿಂದ ಬ್ರಾಹ್ಮಣರೂ ಆ ದಂಡವನ್ನು ಅನುಕ್ರಮವಾಗಿ ಪಡೆದುಕೊಂಡು ಲೋಕದ ರಕ್ಷಣೆಯಲ್ಲಿ ಜಾಗರೂಕರಾಗಿರುತ್ತಾರೆ.

12122049c ಬ್ರಾಹ್ಮಣೇಭ್ಯಶ್ಚ ರಾಜನ್ಯಾ ಲೋಕಾನ್ರಕ್ಷಂತಿ ಧರ್ಮತಃ।
12122049e ಸ್ಥಾವರಂ ಜಂಗಮಂ ಚೈವ ಕ್ಷತ್ರಿಯೇಭ್ಯಃ ಸನಾತನಮ್।।

ರಾಜರು ಬ್ರಾಹ್ಮಣರಿಂದ ದಂಡವನ್ನು ಪಡೆದುಕೊಂಡು ಕ್ಷತ್ರಿಯ ಧರ್ಮಾನುಸಾರವಾಗಿ ಲೋಕವನ್ನು ರಕ್ಷಿಸುತ್ತಿದ್ದಾರೆ. ಕ್ಷತ್ರಿಯರಿಂದಲೇ ಸನಾತನ ಸ್ಥಾವರ-ಜಂಗಮಗಳೂ ರಕ್ಷಿಸಲ್ಪಟ್ಟಿವೆ.

12122050a ಪ್ರಜಾ ಜಾಗ್ರತಿ ಲೋಕೇಽಸ್ಮಿನ್ದಂಡೋ ಜಾಗರ್ತಿ ತಾಸು ಚ।
12122050c ಸರ್ವಸಂಕ್ಷೇಪಕೋ ದಂಡಃ ಪಿತಾಮಹಸಮಃ ಪ್ರಭುಃ8।।

ಈ ಲೋಕದಲ್ಲಿ ಪ್ರಜೆಗಳು ಜಾಗೃತವಾಗಿರುತ್ತಾರೆ. ಅವರಲ್ಲಿ ದಂಡವು ಜಾಗೃತವಾಗಿರುತ್ತದೆ. ಪಿತಮಾಹಸಮ ಪ್ರಭು ದಂಡವು ಸರ್ವವನ್ನೂ ಮರ್ಯಾದೆಯೊಳಗೆ ಇಡುತ್ತದೆ.

12122051a ಜಾಗರ್ತಿ ಕಾಲಃ ಪೂರ್ವಂ ಚ ಮಧ್ಯೇ ಚಾಂತೇ ಚ ಭಾರತ।
12122051c ಈಶ್ವರಃ ಸರ್ವಲೋಕಸ್ಯ ಮಹಾದೇವಃ ಪ್ರಜಾಪತಿಃ।।

ಭಾರತ! ಸರ್ವಲೋಕದ ಈಶ್ವರ ಮಹಾದೇವ ಪ್ರಜಾಪತಿ ಕಾಲನ ಸಮನಾದ ದಂಡವು ಮೊದಲೂ, ಮಧ್ಯದಲ್ಲಿಯೂ ಮತ್ತು ಅಂತ್ಯದಲ್ಲಿಯೂ ಜಾಗೃತವಾಗಿಯೇ ಇರುತ್ತದೆ.

12122052a ದೇವದೇವಃ ಶಿವಃ ಶರ್ವೋ ಜಾಗರ್ತಿ ಸತತಂ ಪ್ರಭುಃ।
12122052c ಕಪರ್ದೀ ಶಂಕರೋ ರುದ್ರೋ ಭವಃ ಸ್ಥಾಣುರುಮಾಪತಿಃ।।

ದೇವದೇವ ಶಿವ ಶರ್ವ ಪ್ರಭು ಕಪರ್ದೀ ಶಂಕರ ರುದ್ರ ಭವ ಸ್ಥಾಣು ಉಮಾಪತಿಯು ಸತತವೂ ದಂಡರೂಪದಲ್ಲಿ ಜಾಗೃತನಾಗಿರುತ್ತಾನೆ.

12122053a ಇತ್ಯೇಷ ದಂಡೋ ವಿಖ್ಯಾತ ಆದೌ ಮಧ್ಯೇ ತಥಾವರೇ।
12122053c ಭೂಮಿಪಾಲೋ ಯಥಾನ್ಯಾಯಂ ವರ್ತೇತಾನೇನ ಧರ್ಮವಿತ್।।

ಹೀಗೆ ದಂದವು ಆದಿಮಧ್ಯಾಂತ್ಯಗಳಲ್ಲಿಯೂ ವಿಖ್ಯಾತವಾಗಿದೆ. ಧರ್ಮವಿದು ಭೂಮಿಪಾಲನು ದಂಡವನ್ನು ಬಳಸಿ ಯಥಾನ್ಯಾಯವಾಗಿ ವ್ಯವಹರಿಸಬೇಕು.””

12122054 ಭೀಷ್ಮ ಉವಾಚ।
12122054a ಇತೀದಂ ವಸುಹೋಮಸ್ಯ ಶೃಣುಯಾದ್ಯೋ ಮತಂ ನರಃ।
12122054c ಶ್ರುತ್ವಾ ಚ ಸಮ್ಯಗ್ವರ್ತೇತ ಸ ಕಾಮಾನಾಪ್ನುಯಾನ್ನೃಪಃ।।

ಭೀಷ್ಮನು ಹೇಳಿದನು: “ಯಾವ ನೃಪನು ವಸುಹೋಮನ ಈ ಅಭಿಪ್ರಾಯವನ್ನು ಕೇಳುವನೋ ಮತ್ತು ಆಚರಣೆಗೆ ತರುವನೋ ಅವನು ಸಕಲವಿಧದ ಕಾಮನೆಗಳನ್ನು ಪಡೆದುಕೊಳ್ಳುತ್ತಾನೆ.

12122055a ಇತಿ ತೇ ಸರ್ವಮಾಖ್ಯಾತಂ ಯೋ ದಂಡೋ ಮನುಜರ್ಷಭ।
12122055c ನಿಯಂತಾ ಸರ್ವಲೋಕಸ್ಯ ಧರ್ಮಾಕ್ರಾಂತಸ್ಯ ಭಾರತ।।

ಮನುಜರ್ಷಭ! ಭಾರತ! ಧರ್ಮಾಕ್ರಾಂತವಾಗಿರುವ ಸರ್ವಲೋಕಗಳನ್ನು ನಿಯಂತ್ರಿಸುವ ದಂಡದ ಕುರಿತು ಎಲ್ಲವನ್ನೂ ನಿನಗೆ ಹೇಳಿದ್ದೇನೆ.”

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದಂಡೋತ್ಪತ್ತ್ಯುಪಾಖ್ಯಾನೇ ದ್ವಾವಿಂಶತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ದಂಡೋತ್ಪತ್ತ್ಯುಪಾಖ್ಯಾನ ಎನ್ನುವ ನೂರಾಇಪ್ಪತ್ತೆರಡನೇ ಅಧ್ಯಾಯವು.

  1. ಪರಶುರಾಮ . ↩︎

  2. ಹೃಷ್ಟರೂಪಪ್ರಚಾರತ್ವ ಎಂದರೆ ಏನು? ಯಜ್ಞವು ಪ್ರತ್ಯಕ್ಷದರ್ಶನ ಪ್ರಧಾನವಾಗಿದ್ದುದರಿಂದ ದಂಡವು ಅಂತರ್ಹಿತವಾಯಿತು. ಬ್ರಹ್ಮನು ದೃಷ್ಟರೂಪವಾದ ಯಜ್ಞದೀಕ್ಷೆಯನ್ನು ವಹಿಸಿರುವುದರಿಂದ ಯಜ್ಞವೇ ಬ್ರಹ್ಮನಿಗೆ ಪ್ರಧಾನಕಾರ್ಯವಾಗಿದ್ದುದರಿಂದ, ಪ್ರಜಾನಿಯಮರೂಪವಾದ ಅವನಲ್ಲಿದ್ದ ದಂಡಧರ್ಮವು ಲುಪ್ತವಾಯಿತು (ಭಾರತ ದರ್ಶನ). ↩︎

  3. ಶಂಕರ (ಭಾರತ ದರ್ಶನ). ↩︎

  4. ಸರ್ವದೇವಸ್ತು (ಭಾರತ ದರ್ಶನ). ↩︎

  5. ಧನಾಧಿಪಃ (ಭಾರತ ದರ್ಶನ). ↩︎

  6. ತಮೇನಂ (ಭಾರತ ದರ್ಶನ). ↩︎

  7. ದಂಡೋ (ಭಾರತ ದರ್ಶನ). ↩︎

  8. ಸರ್ವಂ ಸಂಕ್ಷಿಪತೇ ದಂಡಃ ಪಿತಾಮಹಸಮಪ್ರಭಃ। (ಭಾರತ ದರ್ಶನ). ↩︎