120 ರಾಜಧರ್ಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 120

ಸಾರ

ರಾಜಧರ್ಮದ ಸಂಕ್ಷಿಪ್ತ ವರ್ಣನೆ (1-54).

12120001 ಯುಧಿಷ್ಠಿರ ಉವಾಚ।
12120001a ರಾಜವೃತ್ತಾನ್ಯನೇಕಾನಿ ತ್ವಯಾ ಪ್ರೋಕ್ತಾನಿ ಭಾರತ।
12120001c ಪೂರ್ವೈಃ ಪೂರ್ವನಿಯುಕ್ತಾನಿ ರಾಜಧರ್ಮಾರ್ಥವೇದಿಭಿಃ।।

ಯುಧಿಷ್ಠಿರನು ಹೇಳಿದನು: “ಭಾರತ! ಹಿಂದೆ ಪೂರ್ವನಿಯುಕ್ತ ಅನೇಕ ರಾಜಧರ್ಮಾರ್ಥಗಳನ್ನು ತಿಳಿದಿದ್ದ ರಾಜರು ಅನುಷ್ಠಾನಮಾಡುತ್ತಿದ್ದ ಅನೇಕ ರಾಜವ್ಯವಹಾರಗಳ ಕುರಿತು ಹೇಳಿದ್ದೀಯೆ.

12120002a ತದೇವ ವಿಸ್ತರೇಣೋಕ್ತಂ ಪೂರ್ವೈರ್ದೃಷ್ಟಂ ಸತಾಂ ಮತಮ್।
12120002c ಪ್ರಣಯಂ ರಾಜಧರ್ಮಾಣಾಂ ಪ್ರಬ್ರೂಹಿ ಭರತರ್ಷಭ।।

ಭರತರ್ಷಭ! ಹಿಂದೆ ಕಂಡುಕೊಂಡಿದ್ದ ಮತ್ತು ಸಜ್ಜನ ಸಮ್ಮತವಾದ ರಾಜಧರ್ಮಗಳನ್ನು ವಿಸ್ತಾರವಾಗಿಯೇ ನೀನು ಹೇಳಿದ್ದೀಯೆ. ಅದನ್ನೇ ಸಂಕ್ಷೇಪಿಸಿ ಹೇಳು.”

12120003 ಭೀಷ್ಮ ಉವಾಚ।
12120003a ರಕ್ಷಣಂ ಸರ್ವಭೂತಾನಾಮಿತಿ ಕ್ಷತ್ರೇ ಪರಂ ಮತಮ್।
12120003c ತದ್ಯಥಾ ರಕ್ಷಣಂ ಕುರ್ಯಾತ್ತಥಾ ಶೃಣು ಮಹೀಪತೇ।।

ಭೀಷ್ಮನು ಹೇಳಿದನು: “ಮಹೀಪತೇ! ಸರ್ವಭೂತಗಳ ರಕ್ಷಣೆಯೇ ಕ್ಷತ್ರಧರ್ಮದ ಪರಮ ಮತವು. ಅಂತಹಾ ರಕ್ಷಣೆಯನ್ನು ಹೇಗೆ ನೀಡಬೇಕು ಎನ್ನುವುದನ್ನು ಕೇಳು.

12120004a ಯಥಾ ಬರ್ಹಾಣಿ ಚಿತ್ರಾಣಿ ಬಿಭರ್ತಿ ಭುಜಗಾಶನಃ।
12120004c ತಥಾ ಬಹುವಿಧಂ ರಾಜಾ ರೂಪಂ ಕುರ್ವೀತ ಧರ್ಮವಿತ್।।

ಭುಜಗಾಶನ ನವಿಲು ಹೇಗೆ ವಿಚಿತ್ರ ಬಣ್ಣಗಳ ರೆಕ್ಕೆಗಳನ್ನು ಪ್ರದರ್ಶಿಸುತ್ತದೆಯೋ ಹಾಗೆ ಧರ್ವವಿದು ರಾಜನು ಬಹುವಿಧದ ರೂಪಗಳನ್ನು ಪ್ರದರ್ಶಿಸಬೇಕು.

12120005a ತೈಕ್ಷ್ಣ್ಯಂ ಜಿಹ್ಮತ್ವಮಾದಾಂತ್ಯಂ ಸತ್ಯಮಾರ್ಜವಮೇವ ಚ।
12120005c ಮಧ್ಯಸ್ಥಃ ಸತ್ತ್ವಮಾತಿಷ್ಠಂಸ್ತಥಾ ವೈ ಸುಖಮೃಚ್ಚತಿ।।

ರಾಜನು ಮಧ್ಯಸ್ವಭಾವದಲ್ಲಿದ್ದುಕೊಂಡು ಸಂದರ್ಭಕ್ಕೆ ತಕ್ಕಂತೆ ತೀಕ್ಷ್ಣತೆ, ಕುಟಿಲನೀತಿ, ಅಭಯಪ್ರದಾನ, ಸತ್ಯನಿಷ್ಠೆ, ಸರಳತೆ ಮತ್ತು ಉತ್ತಮ ಸ್ವಭಾವಗಳನ್ನು ಪ್ರದರ್ಶಿಸಬೇಕು. ಇದರಿಂದ ರಾಜನು ಸುಖವನ್ನು ಹೊಂದುತ್ತಾನೆ.

12120006a ಯಸ್ಮಿನ್ನರ್ಥೇ ಹಿತಂ ಯತ್ಸ್ಯಾತ್ತದ್ವರ್ಣಂ ರೂಪಮಾವಿಶೇತ್।
12120006c ಬಹುರೂಪಸ್ಯ ರಾಜ್ಞೋ ಹಿ ಸೂಕ್ಷ್ಮೋಽಪ್ಯರ್ಥೋ ನ ಸೀದತಿ।।

ಯಾವ ಕಾರ್ಯದಲ್ಲಿ ಯಾವುದು ಹಿತವೋ ಅಂತಹ ರೂಪವನ್ನೇ ಧರಿಸಬೇಕು. ಹೀಗೆ ರಾಜವ್ಯವಹಾರಗಳಲ್ಲಿ ಬಹುರೂಪಗಳನ್ನು ಧರಿಸಬಲ್ಲ ರಾಜನ ಸಣ್ಣ ಸಣ್ಣ ಕೆಲಸಗಳೂ ಹಾಳಾಗುವುದಿಲ್ಲ.

12120007a ನಿತ್ಯಂ ರಕ್ಷಿತಮಂತ್ರಃ ಸ್ಯಾದ್ಯಥಾ ಮೂಕಃ ಶರಚ್ಚಿಖೀ।
12120007c ಶ್ಲಕ್ಷ್ಣಾಕ್ಷರತನುಃ ಶ್ರೀಮಾನ್ ಭವೇಚ್ಚಾಸ್ತ್ರವಿಶಾರದಃ।।

ಶರದೃತುವಿನಲ್ಲಿ ನವಿಲು ಮೌನವಾಗಿರುವಂತೆ ರಾಜನೂ ಮೌನಿಯಾಗಿದ್ದುಕೊಂಡು ಗುಪ್ತವಿಷಯಗಳನ್ನು ಬಹಿರಂಗವಾಗದಂತೆ ರಕ್ಷಿಸಬೇಕು. ಸುಮಧುರ ಮಾತುಗಳನ್ನಾಡುತ್ತಿರಬೇಕು. ಸೌಮ್ಯ ಮುಖಭಾವವನ್ನು ಹೊಂದಿರಬೇಕು. ಶೋಭಾಸಂಪನ್ನನಾಗಿರಬೇಕು. ಮತ್ತು ಶಾಸ್ತ್ರವಿಶಾರದನಾಗಿರಬೇಕು.

12120008a ಆಪದ್ದ್ವಾರೇಷು ಯತ್ತಃ ಸ್ಯಾಜ್ಜಲಪ್ರಸ್ರವಣೇಷ್ವಿವ।
12120008c ಶೈಲವರ್ಷೋದಕಾನೀವ ದ್ವಿಜಾನ್ಸಿದ್ಧಾನ್ಸಮಾಶ್ರಯೇತ್।।
12120009a ಅರ್ಥಕಾಮಃ ಶಿಖಾಂ ರಾಜಾ ಕುರ್ಯಾದ್ಧರ್ಮಧ್ವಜೋಪಮಾಮ್।

ಪ್ರವಾಹದ ಸಮಯದಲ್ಲಿ ಗ್ರಾಮಕ್ಕೆ ಮುಳುಗಡೆಯ ಸಂಕಟವು ಬಂದೊದಗಿದಾಗ ಗ್ರಾಮಸ್ಥರು ಕಟ್ಟೆಯನ್ನು ಕಟ್ಟಿ ಸಂಕಟದಿಂದ ಪಾರಾಗುವಂತೆ ರಾಜನು ಆಪತ್ತು ಒದಗಬಹುದಾದ ದ್ವಾರಗಳಲ್ಲಿ ಸರ್ವದಾ ಜಾಗರೂಕನಾಗಿದ್ದು ಆಪತ್ತು ಒದಗಿಬರುವುದೆಂದು ತಿಳಿದೊಡನೆಯೇ ಅದಕ್ಕೆ ಸಂಬಂಧಿಸಿದ ಬಾಗಿಲನ್ನು ಮುಚ್ಚಬೇಕು.

12120009c ನಿತ್ಯಮುದ್ಯತದಂಡಃ ಸ್ಯಾದಾಚರೇಚ್ಚಾಪ್ರಮಾದತಃ।
12120009e ಲೋಕೇ ಚಾಯವ್ಯಯೌ ದೃಷ್ಟ್ವಾ ವೃಕ್ಷಾದ್ವೃಕ್ಷಮಿವಾಪ್ಲವನ್1।।

ಅಪರಾಧಿಗಳನ್ನು ದಂಡಿಸಅಲು ನಿತ್ಯವೂ ಉದ್ಯತನಾಗಿರಬೇಕು. ಯಾವುದೇ ಕಾರ್ಯವನ್ನೂ ಅಪ್ರಮತ್ತನಾಗಿ ಮಾಡಬೇಕು. ಪ್ರಜೆಗಳ ಆಯ-ವ್ಯಯಗಳನ್ನು ನೋಡಿ ಮರದಿಂದ ರಸವನ್ನು ತೆಗೆಯುವಂತೆ ಜನರ ಧನವನ್ನು ತೆಗೆದುಕೊಳ್ಳುತ್ತಿರಬೇಕು.

12120010a ಮೃಜಾವಾನ್ಸ್ಯಾತ್ಸ್ವಯೂಥ್ಯೇಷು ಭಾವಾನಿ2 ಚರಣೈಃ ಕ್ಷಿಪೇತ್।
12120010c ಜಾತಪಕ್ಷಃ ಪರಿಸ್ಪಂದೇದ್ರಕ್ಷೇದ್ವೈಕಲ್ಯಮಾತ್ಮನಃ।।

ತನ್ನ ಸೇನೆಯೊಂದಿಗೆ ವಿಶುದ್ಧ ವ್ಯವಹಾರವನ್ನಿಟ್ಟುಕೊಂಡಿರಬೇಕು. ಶತ್ರುಸೇನೆಗಳನ್ನು ಕಾಲಿನಿಂದ ತುಳಿಯಬೇಕು. ತನ್ನ ಪಕ್ಷವು ಬಲಿಷ್ಠವಾಗಿದೆಯೆಂದು ನಿರ್ದಿಷ್ಟಮಾಡಿಕೊಂಡ ನಂತರವೇ ಶತ್ರುವಿನೊಡನೆ ಯುದ್ಧಕ್ಕೆ ಹೋಗಬೇಕು. ತನ್ನ ದೌರ್ಬಲ್ಯವನ್ನು ಚೆನ್ನಾಗಿ ತಿಳಿದುಕೊಂಡಿರಬೇಕು ಮತ್ತು ನ್ಯೂನತೆಗಳನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸುತ್ತಿರಬೇಕು.

12120011a ದೋಷಾನ್ವಿವೃಣುಯಾಚ್ಚತ್ರೋಃ ಪರಪಕ್ಷಾನ್ವಿಧೂನಯೇತ್।
12120011c ಕಾನನೇಷ್ವಿವ ಪುಷ್ಪಾಣಿ ಬರ್ಹೀವಾರ್ಥಾನ್3 ಸಮಾಚರೇತ್।।

ಶತ್ರುವಿನ ದೋಷಗಳನ್ನು ಪ್ರಕಾಶಗೊಳಿಸಬೇಕು. ಪರಪಕ್ಷದವರನ್ನು ತನ್ನ ಕಡೆ ಸೆಳೆದುಕೊಳ್ಳಬೇಕು. ಕಾನನಪುಷ್ಪಗಳನ್ನು ಸಂಗ್ರಹಿಸುವಂತೆ ರಾಜನು ಹೊರಗಿನ ಧನವನ್ನು ಸಂಗ್ರಹಿಸುತ್ತಾ ರಾಜ್ಯಭಾರ ಮಾಡಬೇಕು.

12120012a ಉಚ್ಚ್ರಿತಾನಾಶ್ರಯೇತ್4 ಸ್ಫೀತಾನ್ನರೇಂದ್ರಾನಚಲೋಪಮಾನ್।
12120012c ಶ್ರಯೇಚ್ಚಾಯಾಮವಿಜ್ಞಾತಾಂ ಗುಪ್ತಂ ಶರಣಮಾಶ್ರಯೇತ್5।।

ಪರ್ವತೋಪಮವಾಗಿ ನಿಂತಿರುವ ಸಂಪದ್ಭರಿತ ರಾಜರನ್ನು ಆಶ್ರಯಿಸಬೇಕು. ಮರಕ್ಕೆ ತಿಳಿಯದಂತೆ ಅದರ ನೆರಳಿನಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಅವರಿಗೆ ತಿಳಿಯದಂತೆ ಅವರ ಆಶ್ರಯದಲ್ಲಿರಬೇಕು.

12120013a ಪ್ರಾವೃಷೀವಾಸಿತಗ್ರೀವೋ ಮಜ್ಜೇತ ನಿಶಿ ನಿರ್ಜನೇ।
12120013c ಮಾಯೂರೇಣ ಗುಣೇನೈವ ಸ್ತ್ರೀಭಿಶ್ಚಾಲಕ್ಷಿತಶ್ಚರೇತ್।

ಮಳೆಸುರಿಯುವಾಗ ರಾತ್ರಿ ನಿರ್ಜನಪ್ರದೇಶದಲ್ಲಿ ಅಡಗಿಕೊಳ್ಳುವ ನವಿಲಿನಂತೆ ಆ ಸಮಯದಲ್ಲಿ ರಾಜನು ಅದೃಶ್ಯನಾಗಿಯೇ ಇರಬೇಕು. ಗಂಡುನವಿಲಿನ ಗುಣದಂತೆ ಆ ಸಮಯದಲ್ಲಿ ಸ್ತ್ರೀಯರ ಕಡೆಗೂ ದೃಷ್ಟಿಹಾಯಿಸಬಾರದು.

12120013e ನ ಜಹ್ಯಾಚ್ಚ ತನುತ್ರಾಣಂ ರಕ್ಷೇದಾತ್ಮಾನಮಾತ್ಮನಾ।।
12120014a ಚಾರಭೂಮಿಷ್ವಭಿಗಮಾನ್ ಪಾಶಾಂಶ್ಚ ಪರಿವರ್ಜಯೇತ್।

ಆ ಸಮಯದಲ್ಲಿ ತನ್ನ ಕವಚಗಳನ್ನು ತೆಗೆದಿಡಬಾರದು. ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕು. ಶತ್ರುಗಳು ಪಸರಿಸಿದ ಚಾರಜಾಲಗಳನ್ನು ಪರಿತ್ಯಜಿಸಬೇಕು.

12120014c ಪೀಡಯೇಚ್ಚಾಪಿ6 ತಾಂ ಭೂಮಿಂ ಪ್ರಣಶ್ಯೇದ್ಗಹನೇ ಪುನಃ।।
12120015a ಹನ್ಯಾತ್ ಕ್ರುದ್ಧಾನತಿವಿಷಾನ್ಯೇ ಜಿಹ್ಮಗತಯೋಽಹಿತಾನ್।

ಶತ್ರುಗಳ ಚಾರರಿರುವ ಪ್ರದೇಶಗಳನ್ನು ಪೀಡಿಸಿ ಅಥವಾ ಮೈತ್ರಿಯಿಂದ ಪುನಃ ತನ್ನ ವಶದಲ್ಲಿ ತೆಗೆದುಕೊಳ್ಳಬೇಕು. ನಂತರ ಕ್ರುದ್ಧ ಅತಿವಿಷದ ಸರ್ಪಗಳಂತಿರುವ ಅಹಿತರಾದ ಅವರನ್ನು ನಾಶಗೊಳಿಸಬೇಕು.

12120015c ನಾಶ್ರಯೇದ್ಬಾಲಬರ್ಹಾಣಿ ಸನ್ನಿವಾಸಾನಿ ವಾಸಯೇತ್7।।
12120016a ಸದಾ ಬರ್ಹಿನಿಭಃ ಕಾಮಂ ಪ್ರಸಕ್ತಿಕೃತಮಾಚರೇತ್8
12120016c ಸರ್ವತಶ್ಚಾದದೇತ್ ಪ್ರಜ್ಞಾಂ ಪತಂಗಾನ್9 ಗಹನೇಷ್ವಿವ।

ದುರ್ಬಲರಾದವರನ್ನು ಆಶ್ರಯಿಸಬಾರದು. ಯೋಗ್ಯರನ್ನು ಹತ್ತಿರದಲ್ಲಿಟ್ಟುಕೊಂಡಿರಬೇಕು. ನವಿಲಿನಂತೆ ಸದಾ ಸ್ವೇಚ್ಛೆಯಿಂದ ಪ್ರಶಸ್ತ ಕಾರ್ಯಗಳನ್ನು ಮಾಡುತ್ತಿರಬೇಕು. ನವಿಲು ತನ್ನ ರೆಕ್ಕೆಗಳನ್ನು ಹರಡಿಕೊಂಡು ಪ್ರದರ್ಶಿಸುವಂತೆ ರಾಜನು ತನ್ನ ಸೈನಿಕರ ಮತ್ತು ಸಹಾಯಕರ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲರಿಂದಲೂ ಜ್ಞಾನವನ್ನು ಪಡೆದುಕೊಳ್ಳಬೇಕು. ಶತ್ರುಗಳೊಡನೆ ಕಾಡಿನಲ್ಲಿರುವ ಪತಂಗಗಳಂತೆ ನಡೆದುಕೊಳ್ಳಬೇಕು.

12120016e ಏವಂ ಮಯೂರವದ್ರಾಜಾ ಸ್ವರಾಷ್ಟ್ರಂ ಪರಿಪಾಲಯೇತ್।।
12120017a ಆತ್ಮವೃದ್ಧಿಕರೀಂ ನೀತಿಂ ವಿದಧೀತ ವಿಚಕ್ಷಣಃ।

ಮಯೂರದಂತೆ ಈ ರೀತಿಯಲ್ಲಿ ರಾಜನು ಸ್ವರಾಷ್ಟ್ರವನ್ನು ಪರಿಪಾಲಿಸಬೇಕು. ವಿಚಕ್ಷಣನಾಗಿ ಆತ್ಮವೃದ್ಧಿಕಾರಕ ನೀತಿಯನ್ನು ಆಶ್ರಯಿಸಬೇಕು.

12120017c ಆತ್ಮಸಂಯಮನಂ ಬುದ್ಧ್ಯಾ ಪರಬುದ್ಧ್ಯಾವತಾರಣಮ್।
12120017e ಬುದ್ಧ್ಯಾ ಚಾತ್ಮಗುಣಪ್ರಾಪ್ತಿರೇತಚ್ಚಾಸ್ತ್ರನಿದರ್ಶನಮ್।।

ತನ್ನದೇ ಬುದ್ಧಿಯಿಂದ ಆತ್ಮಸಂಯಮನವನ್ನು ಮಾಡಿಕೊಳ್ಳಬೇಕು. ಇತರರ ಬುದ್ಧಿಯಿಂದ ಮಾಡಬೇಕಾದ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ಶಾಸ್ತ್ರೀಯ ಬುದ್ಧಿಯಿಂದ ಸದ್ಗುಣಗಳನ್ನು ಪಡೆದುಕೊಳ್ಳಬೇಕು. ಇದೇ ಶಾಸ್ತ್ರದ ನಿದರ್ಶನವು.

12120018a ಪರಂ ಚಾಶ್ವಾಸಯೇತ್ಸಾಮ್ನಾ ಸ್ವಶಕ್ತಿಂ ಚೋಪಲಕ್ಷಯೇತ್।
12120018c ಆತ್ಮನಃ ಪರಿಮರ್ಶೇನ ಬುದ್ಧಿಂ ಬುದ್ಧ್ಯಾ ವಿಚಾರಯೇತ್।

ಸುಮಧುರ ಮಾತುಗಳಿಂದ ಇತರರನ್ನು ಸಮಾಧಾನಗೊಳಿಸಬೇಕು. ತನ್ನ ವಿಷಯದಲ್ಲಿ ಇತರರಿಗೆ ವಿಶ್ವಾಸವುಂಟಾಗುವಂತೆ ಮಾಡಬೇಕು. ತನ್ನ ಶಕ್ತಿಯು ಎಷ್ಟು ಎನ್ನುವುದನ್ನು ಇತರರಿಗೆ ತೋರಿಸಬೇಕು. ತನ್ನ ಪರಾಮರ್ಶೆಯಿಂದ ಮತ್ತು ಬುದ್ಧಿಯಿಂದ ಮಾಡಬೇಕಾದ ಕರ್ತವ್ಯಗಳನ್ನು ನಿಶ್ಚಯಿಸಬೇಕು.

12120018e ಸಾಂತ್ವಯೋಗಮತಿಃ ಪ್ರಾಜ್ಞಃ ಕಾರ್ಯಾಕಾರ್ಯವಿಚಾರಕಃ।।
12120019a ನಿಗೂಢಬುದ್ಧಿರ್ಧೀರಃ ಸ್ಯಾದ್ವಕ್ತವ್ಯೇ ವಕ್ಷ್ಯತೇ ತಥಾ।

ಸಾಂತ್ವನ ಬುದ್ಧಿಯಿರುವ, ಪ್ರಾಜ್ಞ, ಕಾರ್ಯಾಕಾರ್ಯಗಳನ್ನು ವಿಚಾರಿಸುವ, ನಿಗೂಢ ಬುದ್ಧಿಯಿರುವ ಧೀರ ರಾಜನಿಗೆ ಹೇಳಬೇಕಾದ ವಿಷಯಗಳನ್ನು ಮಾತ್ರವೇ ಹೇಳಬೇಕು.

12120019c ಸಂನಿಕೃಷ್ಟಾಂ ಕಥಾಂ ಪ್ರಾಜ್ಞೋ ಯದಿ ಬುದ್ಧ್ಯಾ ಬೃಹಸ್ಪತಿಃ।
12120019e ಸ್ವಭಾವಮೇಷ್ಯತೇ ತಪ್ತಂ ಕೃಷ್ಣಾಯಸಮಿವೋದಕೇ।।

ಕಾಯಿಸಿದ ಕಬ್ಬಿಣವನ್ನು ನೀರಿನಲ್ಲಿ ಹಾಕಿದೊಡನೆಯೇ ಅದು ತನ್ನ ಪೂರ್ವಸ್ವಭಾವವಾದ ಕಠಿಣತೆಯನ್ನೇ ಪಡೆದುಕೊಳ್ಳುವಂತೆ ಪ್ರಾಜ್ಞನಾದವನು ಬುದ್ಧಿಯಲ್ಲಿ ಬೃಹಸ್ಪತಿಯೇ ಆಗಿದ್ದರೂ ಕೆಳಮಟ್ಟದ ಮಾತುಗಳನ್ನಾಡಿದರೆ ಅದು ಅವನ ಸ್ವಭಾವವೆಂದೇ ಭಾವಿಸಬೇಕು.

12120020a ಅನುಯುಂಜೀತ ಕೃತ್ಯಾನಿ ಸರ್ವಾಣ್ಯೇವ ಮಹೀಪತಿಃ।
12120020c ಆಗಮೈರುಪದಿಷ್ಟಾನಿ ಸ್ವಸ್ಯ ಚೈವ ಪರಸ್ಯ ಚ।।

ಶಾಸ್ತ್ರಗಳಲ್ಲಿ ಹೇಳಿರುವ ಸಮಸ್ತ ಕರ್ಮಗಳನ್ನೂ ಮಹೀಪತಿಯು ತಾನೂ ಮಾಡಬೇಕು ಮತ್ತು ಇತರರಿಂದಲೂ ಮಾಡಿಸಬೇಕು.

12120021a ಕ್ಷುದ್ರಂ ಕ್ರೂರಂ10 ತಥಾ ಪ್ರಾಜ್ಞಂ ಶೂರಂ ಚಾರ್ಥವಿಶಾರದಮ್।
12120021c ಸ್ವಕರ್ಮಣಿ ನಿಯುಂಜೀತ ಯೇ ಚಾನ್ಯೇ ವಚನಾಧಿಕಾಃ11।।

ಅರ್ಥವಿಶಾರದ ರಾಜನು ತನ್ನ ಕೆಲಸಗಳಿಗೆ ಕ್ಷುದ್ರ, ಕ್ರೂರ, ಪ್ರಾಜ್ಞ, ಶೂರ ಮತ್ತು ಅನ್ಯ ವಚನಾಧಿಕರನ್ನು ನಿಯೋಜಿಸಿಕೊಳ್ಳಬೇಕು.

12120022a ಅಪ್ಯದೃಷ್ಟ್ವಾ ನಿಯುಕ್ತಾನಿ ಅನುರೂಪೇಷು ಕರ್ಮಸು12
12120022c ಸರ್ವಾಂಸ್ತಾನನುವರ್ತೇತ ಸ್ವರಾಂಸ್ತಂತ್ರೀರಿವಾಯತಾ।।

ಸೇವಕರನ್ನು ಅವರವರ ಯೋಗ್ಯತೆಗೆ ತಕ್ಕುದಾದ ಕರ್ಮಗಳಲ್ಲಿ ನಿಯೋಜಿಸಿ ವೀಣೆಯ ತಂತಿಗಳು ಸಪ್ತಸ್ವರಗಳನ್ನೂ ಶ್ರುತಿಬದ್ಧವಾಗಿ ನುದಿಸುವಂತೇ ಎಲ್ಲರೂ ಆ ಅಧಿಕಾರಿಗಳನ್ನೇ ಅನುಸರಿಸಿ ನಡೆಯುವಂತೆ ಮಾಡಬೇಕು.

12120023a ಧರ್ಮಾಣಾಮವಿರೋಧೇನ ಸರ್ವೇಷಾಂ ಪ್ರಿಯಮಾಚರೇತ್।
12120023c ಮಮಾಯಮಿತಿ ರಾಜಾ ಯಃ ಸ ಪರ್ವತ ಇವಾಚಲಃ।।

ರಾಜನಾದವನು ಧರ್ಮಕ್ಕೆ ವಿರುದ್ಧವಾಗದ ರೀತಿಯಲ್ಲಿ ಎಲ್ಲ ಪ್ರಿಯಕರ್ಮಗಳನ್ನೂ ಆಚರಿಸಬೇಕು. “ಇವರು ನನ್ನವರು” ಎಂದು ಪ್ರಜೆಗಳ ಕುರಿತು ಭಾವಿಸುವ ರಾಜನು ಪರ್ವತದಂತೆ ಅವಿಚಲನಾಗಿರುತ್ತಾನೆ.

12120024a ವ್ಯವಸಾಯಂ ಸಮಾಧಾಯ ಸೂರ್ಯೋ ರಶ್ಮಿಮಿವಾಯತಾಮ್।
12120024c ಧರ್ಮಮೇವಾಭಿರಕ್ಷೇತ ಕೃತ್ವಾ ತುಲ್ಯೇ ಪ್ರಿಯಾಪ್ರಿಯೇ।।

ಸೂರ್ಯನು ತನ್ನ ವಿಸ್ತೃತ ಕಿರಣಗಳಿಂದ ಸಕಲವನ್ನೂ ರಕ್ಷಿಸುವಂತೆ ರಾಜನಾದವನು ಪ್ರಿಯರನ್ನೂ ಅಪ್ರಿಯರನ್ನೂ ಸಮನಾಗಿ ಕಾಣುತ್ತಾ ಸುದೃಢ ಪ್ರಯತ್ನಗಳಿಂದ ಧರ್ಮದ ರಕ್ಷಣೆಯನ್ನು ಮಾಡಬೇಕು.

12120025a ಕುಲಪ್ರಕೃತಿದೇಶಾನಾಂ ಧರ್ಮಜ್ಞಾನ್ಮೃದುಭಾಷಿಣಃ।
12120025c ಮಧ್ಯೇ ವಯಸಿ ನಿರ್ದೋಷಾನ್ಹಿತೇ ಯುಕ್ತಾನ್ಜಿತೇಂದ್ರಿಯಾನ್।।
12120026a ಅಲುಬ್ಧಾನ್ ಶಿಕ್ಷಿತಾನ್ದಾಂತಾನ್ ಧರ್ಮೇಷು ಪರಿನಿಷ್ಠಿತಾನ್।
12120026c ಸ್ಥಾಪಯೇತ್ಸರ್ವಕಾರ್ಯೇಷು ರಾಜಾ ಧರ್ಮಾರ್ಥರಕ್ಷಿಣಃ।।

ಧರ್ಮಾರ್ಥಗಳನ್ನು ರಕ್ಷಿಸುವ ರಾಜನು ಸರ್ವಕಾರ್ಯಗಳಲ್ಲಿ ಕುಲ-ಸ್ವಭಾವ ಮತ್ತು ದೇಶಗಳ ಧರ್ಮಗಳನ್ನು ತಿಳಿದುಕೊಂಡಿರುವ, ಮೃದುಭಾಷೀ, ಮಧ್ಯವಯಸ್ಕ, ರಾಜನ ಹಿತದಲ್ಲಿಯೇ ಯುಕ್ತರಾಗಿರುವ, ನಿರ್ದೋಷೀ, ಜಿತೇಂದ್ರಿಯ, ಆಸೆಬುರುಕರಲ್ಲದ, ಶಿಕ್ಷಣವನ್ನು ಪಡೆದ, ದಾಂತ ಧರ್ಮಗಳಲ್ಲಿ ನಿಷ್ಠರಾಗಿರುವವರನ್ನು ನಿಯೋಜಿಸಿಕೊಳ್ಳಬೇಕು.

12120027a ಏತೇನೈವ13 ಪ್ರಕಾರೇಣ ಕೃತ್ಯಾನಾಮಾಗತಿಂ ಗತಿಮ್।
12120027c ಯುಕ್ತಃ ಸಮನುತಿಷ್ಠೇತ ತುಷ್ಟಶ್ಚಾರೈರುಪಸ್ಕೃತಃ।।

ಈ ರೀತಿಯಲ್ಲಿ ರಾಜನು ಜಾಗರೂಕನಾಗಿದ್ದುಕೊಂಡು ರಾಜ್ಯಕಾರ್ಯಗಳನ್ನು ಆರಂಭಿಸಿ ಸಮಾಪ್ತಿಗೊಳಿಸಬೇಕು. ಚಾರರ ಮೂಲಕ ರಾಜ್ಯದ ವಿಷಯಗಳನ್ನು ತಿಳಿದುಕೊಂಡು ಸಂತುಷ್ಟನಾಗಿರಬೇಕು.

12120028a ಅಮೋಘಕ್ರೋಧಹರ್ಷಸ್ಯ ಸ್ವಯಂ ಕೃತ್ಯಾನ್ವವೇಕ್ಷಿಣಃ14
12120028c ಆತ್ಮಪ್ರತ್ಯಯಕೋಶಸ್ಯ ವಸುಧೈವ15 ವಸುಂಧರಾ।।

ಯಾರ ಕ್ರೋಧ-ಹರ್ಷಗಳು ವಿಫಲವಾಗುವುದಿಲ್ಲವೋ, ಯಾರು ಸ್ವಯಂ ತಾನೇ ಕೃತ್ಯಗಳನ್ನು ನೋಡಿಕೊಳ್ಳುವನೋ, ಯಾರಿಗೆ ಆತ್ಮವಿಶ್ವಾಸವೇ ಕೋಶರೂಪವಾಗಿರುವುದೋ ಅಂಥಹ ರಾಜನಿಗೆ ವಸುಂಧರೆಯೇ ಐಶ್ವರ್ಯವನ್ನು ಕೊಡುವಂತಾಗುತ್ತದೆ.

12120029a ವ್ಯಕ್ತಶ್ಚಾನುಗ್ರಹೋ ಯಸ್ಯ ಯಥಾರ್ಥಶ್ಚಾಪಿ ನಿಗ್ರಹಃ।
12120029c ಗುಪ್ತಾತ್ಮಾ ಗುಪ್ತರಾಷ್ಟ್ರಶ್ಚ ಸ ರಾಜಾ ರಾಜಧರ್ಮವಿತ್।।

ಯಾರ ಅನುಗ್ರಹಕಾರ್ಯಗಳು ಎಲ್ಲರ ಗಮನಕ್ಕೆ ಬರುತ್ತದೆಯೋ, ಯಾರ ಶಿಕ್ಷೆಗಳು ಯಥಾರ್ಹ ಕಾರಣಗಳಿಂದ ಕೂಡಿರುವವೋ, ಯಾರು ತನ್ನನ್ನೂ ತನ್ನ ರಾಷ್ಟ್ರವನ್ನೂ ರಕ್ಷಿಸಿಕೊಳ್ಳುವನೋ ಆ ರಾಜನೇ ರಾಜಧರ್ಮವನ್ನು ತಿಳಿದವನು.

12120030a ನಿತ್ಯಂ ರಾಷ್ಟ್ರಮವೇಕ್ಷೇತ ಗೋಭಿಃ ಸೂರ್ಯ ಇವೋತ್ಪತನ್।
12120030c ಚಾರಾಂಶ್ಚ ನಚರಾನ್ವಿದ್ಯಾತ್ತಥಾ ಬುದ್ಧ್ಯಾ ನ ಸಂಜ್ವರೇತ್16।।

ಉದಯಿಸಿದ ಸೂರ್ಯನು ಹೇಗೆ ತನ್ನ ಕಿರಣಗಳ ಮುಖಾಂತರ ಎಲ್ಲವನ್ನೂ ನೋಡುವನೋ ಹಾಗೆ ರಾಜನೂ ಕೂಡ ಗುಪ್ತಚಾರರ ಊಲಕ ಎಲ್ಲವನ್ನೂ ವೀಕ್ಷಿಸುತ್ತಿರಬೇಕು. ಚಾರರ ಮೂಲಕ ದೂರದಲ್ಲಿ ನಡೆಯುತ್ತಿರುವುದನ್ನೂ ತಿಳಿದುಕೊಳ್ಳುತ್ತಿರಬೇಕು. ಬುದ್ಧಿಯನ್ನುಪಯೋಗಿಸಿ ನಿಶ್ಚಯಿಸಬೇಕು.

12120031a ಕಾಲಪ್ರಾಪ್ತಮುಪಾದದ್ಯಾನ್ನಾರ್ಥಂ ರಾಜಾ ಪ್ರಸೂಚಯೇತ್।
12120031c ಅಹನ್ಯಹನಿ ಸಂದುಹ್ಯಾನ್ಮಹೀಂ ಗಾಮಿವ ಬುದ್ಧಿಮಾನ್।।

ಬುದ್ಧಿಮಾನ ರಾಜನು ಕಾಲವು ಪ್ರಾಪ್ತವಾದಾಗ ಮಾತ್ರ ಪ್ರಜೆಗಳಿಂದ ಧನವನ್ನು ಸಂಗ್ರಹಿಸಬೇಕು. ತನ್ನ ಅರ್ಥಸಂಗ್ರಹದ ನೀತಿಯನ್ನು ಯಾರಲ್ಲಿಯೂ ಪ್ರಕಟಪಡಿಸಬಾರದು. ಬುದ್ಧಿವಂತನು ಗೋರಕ್ಷಣೆಯನ್ನು ಮಾಡುತ್ತಾ ಹಸುವಿನ ಹಾಲನ್ನು ಕರೆದುಕೊಳ್ಳುವಂತೆ ಬುದ್ಧಿವಂತ ರಾಜನು ಪ್ರಜೆಗಳ ರಕ್ಷಣೆಯನ್ನು ಮಾಡುತ್ತಾ ಅವರಿಂದ ಧನವನ್ನು ಸಂಗ್ರಹಿಸಬೇಕು.

12120032a ಯಥಾ ಕ್ರಮೇಣ ಪುಷ್ಪೇಭ್ಯಶ್ಚಿನೋತಿ ಮಧು ಷಟ್ಪದಃ।
12120032c ತಥಾ ದ್ರವ್ಯಮುಪಾದಾಯ ರಾಜಾ ಕುರ್ವೀತ ಸಂಚಯಮ್।।

ಜೇನುಹುಳುವು ಹೇಗೆ ಅನುಕ್ರಮವಾಗಿ ಅನೇಕ ಪುಷ್ಪಗಳಿಂದ ರಸವನ್ನು ಸಂಗ್ರಹಿಸಿ ಜೇನುತುಪ್ಪವನ್ನು ಸಿದ್ಧಗೊಳಿಸುವುದೋ ಅದೇ ರೀತಿಯಲ್ಲಿ ರಾಜನೂ ಕೂಡ ಸಮಸ್ತ ಪ್ರಜೆಗಳಿಂದಲೂ ಸ್ವಲ್ಪ ಸ್ವಲ್ವವಾಗಿಯೇ ಧನವನ್ನು ಸಂಗ್ರಹಿಸಿಕೊಳ್ಳಬೇಕು.

12120033a ಯದ್ಧಿ17 ಗುಪ್ತಾವಶಿಷ್ಟಂ ಸ್ಯಾತ್ತದ್ಧಿತಂ18 ಧರ್ಮಕಾಮಯೋಃ।
12120033c ಸಂಚಯಾನುವಿಸರ್ಗೀ ಸ್ಯಾದ್ರಾಜಾ ಶಾಸ್ತ್ರವಿದಾತ್ಮವಾನ್।।

ಸಂಗ್ರಹಿಸಿದ ಧನವನ್ನು ಮೊದಲು ಪ್ರಜೆಗಳ ಹಿತಕ್ಕಾಗಿ ಬಳಸಬೇಕು. ಉಳಿದುದನ್ನು ಧರ್ಮಕಾರ್ಯಗಳಿಗೆ ನಿಯೋಜಿಸಬೇಕು. ಉಳಿದುದನ್ನು ಸುಖೋಪಭೋಗಗಳಿಗೆ ಉಪಯೋಗಿಸಬೇಕು. ಜಿತೇಂದ್ರಿಯನೂ ಶಾಸ್ತ್ರವಿದಾತ್ಮವಂತನೂ ಆದ ರಾಜನು ಬೇರೆ ಯಾವುದಕ್ಕೂ ಪ್ರಜೆಗಳಿಂದ ಪಡೆದ ಧನವನ್ನು ಉಪಯೋಗಿಸಬಾರದು.

12120034a ನಾಲ್ಪಮರ್ಥಂ19 ಪರಿಭವೇನ್ನಾವಮನ್ಯೇತ ಶಾತ್ರವಾನ್।
12120034c ಬುದ್ಧ್ಯಾವಬುಧ್ಯೇದಾತ್ಮಾನಂ ನ ಚಾಬುದ್ಧಿಷು ವಿಶ್ವಸೇತ್।।

ಬಂದ ಧನವು ಸ್ವಲ್ಪವೇ ಆದರೂ ಅದನ್ನು ತಿರಸ್ಕರಿಸಬಾರದು. ಶತ್ರುವು ಶಕ್ತಿವಿಹೀನನಾಗಿದ್ದರೂ ಅವನನ್ನು ಹೀಯಾಳಿಸಬಾರದು. ಬುದ್ಧಿಯ ಮೂಲಕ ತನ್ನ ಸ್ವರೂಪವನ್ನು ತಿಳಿದುಕೊಳ್ಳಬೇಕು. ಬುದ್ಧಿವಿಹೀನರಲ್ಲಿ ವಿಶ್ವಾಸವನ್ನಿಡಬಾರದು.

12120035a ಧೃತಿರ್ದಾಕ್ಷ್ಯಂ ಸಂಯಮೋ ಬುದ್ಧಿರಗ್ರ್ಯಾ20 ಧೈರ್ಯಂ ಶೌರ್ಯಂ ದೇಶಕಾಲೋಽಪ್ರಮಾದಃ।
12120035c ಸ್ವಲ್ಪಸ್ಯ ವಾ ಮಹತೋ ವಾಪಿ ವೃದ್ಧೌ21 ಧನಸ್ಯೈತಾನ್ಯಷ್ಟ ಸಮಿಂಧನಾನಿ।।

ಧಾರಣಾಶಕ್ತಿ, ಚತುರತೆ, ಸಂಯಮ, ಬುದ್ಧಿ, ಧೈರ್ಯ, ಶೌರ್ಯ, ಕೇಶ-ಕಾಲಗಳಲ್ಲಿ ಅಪ್ರಮತ್ತತೆಯಿಂದಿರುವುದು ಈ ಗುಣಗಳು ಅಲ್ಪ ಅಥವಾ ಹೆಚ್ಚಿನ ಧನದ ವೃದ್ಧಿಗೆ ಮುಖ್ಯಸಾಧನಗಳು. ಧನವೆಂಬ ಅಗ್ನಿಯನ್ನು ಉರಿಸಲು ಇವು ಸಮಿತ್ತುಗಳ ರೂಪದಂತಿವೆ.

12120036a ಅಗ್ನಿಸ್ತೋಕೋ ವರ್ಧತೇ ಹ್ಯಾಜ್ಯಸಿಕ್ತೋ ಬೀಜಂ ಚೈಕಂ ಬಹುಸಾಹಸ್ರಮೇತಿ।
12120036c ಕ್ಷಯೋದಯೌ ವಿಪುಲೌ ಸಂನಿಶಾಮ್ಯ ತಸ್ಮಾದಲ್ಪಂ ನಾವಮನ್ಯೇತ ವಿದ್ವಾನ್।।

ಬೆಂಕಿಯು ಸ್ವಲ್ಪವೇ ಇದ್ದರೂ ತುಪ್ಪದಿಂದ ಸಿಕ್ತವಾದೊಡನೆಯೇ ವರ್ಧಿಸುತ್ತದೆ. ಒಂದು ಸಣ್ಣ ಬೀಜವನ್ನು ಬಿತ್ತಿದರೂ ಅದರಿಂದ ಸಾವಿರಾರು ಬೀಜಗಳು ಹುಟ್ಟಿಕೊಳ್ಳುತ್ತವೆ. ಆದುದರಿಂದ ಬೃಹತ್ತಾದ ಆಯ-ವ್ಯಯಗಳನ್ನು ವಿಚಾರಮಾಡುತ್ತಾ ಲಭಿಸಿದ ವಿತ್ತವು ಅಲ್ಪವಾದರೂ ಅದನ್ನು ಅನಾದರಿಸಬಾರದು.

12120037a ಬಾಲೋಽಬಾಲಃ ಸ್ಥವಿರೋ ವಾ ರಿಪುರ್ಯಃ ಸದಾ ಪ್ರಮತ್ತಂ ಪುರುಷಂ ನಿಹನ್ಯಾತ್।
12120037c ಕಾಲೇನಾನ್ಯಸ್ತಸ್ಯ ಮೂಲಂ ಹರೇತ ಕಾಲಜ್ಞಾತಾ ಪಾರ್ಥಿವಾನಾಂ ವರಿಷ್ಠಃ।।

ಸದಾ ಪ್ರಮತ್ತನಾಗಿರುವ ಪುರುಷನನ್ನು ಶತ್ರುವು ಬಾಲಕನಾಗಿರಲಿ, ಪ್ರೌಢನಾಗಿರಲಿ, ವೃದ್ಧನೇ ಆಗಿರಲಿ ನಾಶಮಾಡಿಬಿಡಬಹುದು. ಕಾಲವನ್ನು ನೋಡಿ ಶತ್ರುವು ಅವನ ಮೂಲವನ್ನೇ ನಿರ್ನಾಮಮಾಡಬಹುದು. ಆದುದರಿಂದ ಕಾಲವನ್ನು ತಿಳಿದುಕೊಂಡಿರುವವನು ಪಾರ್ಥಿವರಲ್ಲಿಯೇ ವರಿಷ್ಠನೆನಿಸಿಕೊಳ್ಳುತ್ತಾನೆ.

12120038a ಹರೇತ್ಕೀರ್ತಿಂ ಧರ್ಮಮಸ್ಯೋಪರುಂಧ್ಯಾದ್ ಅರ್ಥೇ ದೀರ್ಘಂ ವೀರ್ಯಮಸ್ಯೋಪಹನ್ಯಾತ್।
12120038c ರಿಪುರ್ದ್ವೇಷ್ಟಾ ದುರ್ಬಲೋ ವಾ ಬಲೀ ವಾ ತಸ್ಮಾಚ್ಚತ್ರೌ ನೈವ ಹೇಡೇದ್ಯತಾತ್ಮಾ।।

ದ್ವೇಷವನ್ನು ಸಾಧಿಸುವ ಶತ್ರುವು, ಬಲಿಷ್ಠನಾಗಿರಲಿ ಅಥವಾ ದುರ್ಬಲನಾಗಿರಲಿ, ರಾಜನ ಕೀರ್ತಿಯನ್ನು ನಷ್ಟಗೊಳಿಸುತ್ತಾನೆ. ಧರ್ಮಕಾರ್ಯಗಳಲ್ಲಿ ಬಾಧೆಯೊಡ್ಡುತ್ತಾನೆ. ಅರ್ಥೋಪಾರ್ಜನೆಯಲ್ಲಿ ಅವನ ಶಕ್ತಿಯನ್ನು ಕುಂಠಿತಗೊಳಿಸುತ್ತಾನೆ. ಆದುದರಿಂದ ಪ್ರಯತ್ನಶೀಲ ರಾಜನು ಶತ್ರುವಿನ ವಿಷಯದಲ್ಲಿ ಎಂದೂ ನಿಶ್ಚಿಂತನಾಗಿರಬಾರದು.

12120039a ಕ್ಷಯಂ ಶತ್ರೋಃ ಸಂಚಯಂ ಪಾಲನಂ ಚಾಪ್ಯ್ ಉಭೌ ಚಾರ್ಥೌ ಸಹಿತೌ ಧರ್ಮಕಾಮೌ22
12120039c ಅತಶ್ಚಾನ್ಯನ್ಮತಿಮಾನ್ಸಂದಧೀತ ತಸ್ಮಾದ್ರಾಜಾ ಬುದ್ಧಿಮಂತಂ ಶ್ರಯೇತ।।

ಶತ್ರುವಿನ ಹಾನಿ, ಧನಸಂಗ್ರಹ, ರಕ್ಷಣೆ, ಧರ್ಮಕಾಮಗಳ ಜೊತೆ ಅರ್ಥವನ್ನೂ ಪರಿಶೀಲಿಸಿ, ಮತಿಮಂತರಾಜನು ಸಂಧಿಯನ್ನು ಮಾಡಿಕೊಳ್ಳಬೇಕು. ಆದುದರಿಂದ ರಾಜನು ಬುದ್ಧಿವಂತಿಕೆಯನ್ನು ಆಶ್ರಯಿಸಬೇಕು.

12120040a ಬುದ್ಧಿರ್ದೀಪ್ತಾ ಬಲವಂತಂ ಹಿನಸ್ತಿ ಬಲಂ ಬುದ್ಧ್ಯಾ ವರ್ಧತೇ ಪಾಲ್ಯಮಾನಮ್।
12120040c ಶತ್ರುರ್ಬುದ್ಧ್ಯಾ ಸೀದತೇ ವರ್ಧಮಾನೋ ಬುದ್ಧೇಃ ಪಶ್ಚಾತ್ಕರ್ಮ ಯತ್ತತ್ ಪ್ರಶಸ್ತಮ್।।

ಪ್ರತಿಭಾಯುಕ್ತ ಬುದ್ಧಿಯು ಬಲಿಷ್ಠನನ್ನೂ ವಿನಾಶಗೊಳಿಸುತ್ತದೆ. ನಷ್ಟವಾಗುತ್ತಿರುವ ಬಲದ ರಕ್ಷಣೆಯೂ ಬುದ್ಧಿಯ ಮೂಲಕವಾಗಿಯೇ ಆಗುತ್ತದೆ. ಪ್ರವೃದ್ಧನಾಗುತ್ತಿರುವ ಶತ್ರುವನ್ನೂ ಬುದ್ಧಿಯ ಮೂಲಕವೇ ವಿನಾಶಗೊಳಿಸಬಹುದು. ಆದುದರಿಂದ ಬುದ್ಧಿಯಿಂದ ಆಲೋಚಿಸಿ ನಂತರ ಕಾರ್ಯವನ್ನೆಸಗುವುದು ಪ್ರಶಸ್ತವಾದುದು.

12120041a ಸರ್ವಾನ್ಕಾಮಾನ್ಕಾಮಯಾನೋ ಹಿ ಧೀರಃ ಸತ್ತ್ವೇನಾಲ್ಪೇನಾಪ್ಲುತೇ ಹೀನದೇಹಃ23
12120041c ಯಥಾತ್ಮಾನಂ ಪ್ರಾರ್ಥಯತೇಽರ್ಥಮಾನೈಃ ಶ್ರೇಯಃಪಾತ್ರಂ ಪೂರಯತೇ ಹ್ಯನಲ್ಪಮ್।।

ಧೀರನಾದವನು ಶರೀರದಲ್ಲಿ ದುರ್ಬಲನಾಗಿದ್ದರೂ ಸರ್ವ ಕಾಮನೆಗಳನ್ನೂ ಸ್ವಲ್ಪವೇ ಬಲವನ್ನುಪಯೋಗಿಸಿ ಪೂರೈಸಿಕೊಳ್ಳಬಹುದು. ಅವಶ್ಯಕ ವಸ್ತುಗಳಿಂದ ಸಂಪನ್ನನಾಗಿದ್ದರೂ ಇನ್ನೂ ಆಸೆಪಡುವ ಮತ್ತು ಇತರರು ತನ್ನ ಆಸೆಯನ್ನು ಪೂರೈಸಿಕೊಡಬೇಕೆಂದು ಅಪೇಕ್ಷಿಸುವ ರಾಜನು ಶ್ರೇಯಸ್ಸಿನ ತನ್ನ ಸಣ್ಣ ಪಾತ್ರೆಯನ್ನೂ ತುಂಬಿಸಿಕೊಳ್ಳುವುದಿಲ್ಲ. ಅಂಥವನಿಗೆ ಶ್ರೇಯಸ್ಸು ಸರ್ವಥಾ ಲಭಿಸುವುದಿಲ್ಲ.

12120042a ತಸ್ಮಾದ್ರಾಜಾ ಪ್ರಗೃಹೀತಃ ಪರೇಷು ಮೂಲಂ ಲಕ್ಷ್ಮ್ಯಾಃ ಸರ್ವತೋಽಭ್ಯಾದದೀತ।
12120042c ದೀರ್ಘಂ ಕಾಲಮಪಿ ಸಂಪೀಡ್ಯಮಾನೋ ವಿದ್ಯುತ್ಸಂಪಾತಮಿವ ಮಾನೋರ್ಜಿತಃ ಸ್ಯಾತ್।।

ಆದುದರಿಂದ ರಾಜನು ಎಲ್ಲ ಪ್ರಜೆಗಳನ್ನೂ ಅನುಗ್ರಹಬುದ್ಧಿಯಿಂದ ಕಾಣುತ್ತಾ ಸಂಪತ್ತಿಗೆ ಮೂಲಭೂತವಾದ ಕರವನ್ನು ಪ್ರಜೆಗಳಿಂದ ತೆಗೆದುಕೊಳ್ಳಬೇಕು. ದೀರ್ಘಕಾಲದವರೆಗೆ ಪ್ರಜೆಗಳನ್ನು ಪೀಡಿಸುತ್ತಾ ಮಿಂಚಿನಂತೆ ತನ್ನ ಪ್ರಭಾವವನ್ನು ಬೀರಲು ಹೋಗಬಾರದು.

12120043a ವಿದ್ಯಾ ತಪೋ ವಾ ವಿಪುಲಂ ಧನಂ ವಾ ಸರ್ವಮೇತದ್ವ್ಯವಸಾಯೇನ24 ಶಕ್ಯಮ್।
12120043c ಬ್ರಹ್ಮ25 ಯತ್ತಂ ನಿವಸತಿ ದೇಹವತ್ಸು26 ತಸ್ಮಾದ್ವಿದ್ಯಾದ್ವ್ಯವಸಾಯಂ ಪ್ರಭೂತಮ್।।

ವಿದ್ಯೆಯಾಗಲೀ, ತಪಸ್ಸಾಗಲೀ, ವಿಪುಲ ಧನವಾಗಲೀ ಎಲ್ಲವೂ ವ್ಯವಸಾಯದಿಂದ ಶಕ್ಯವಾಗುತ್ತವೆ. ದೇಹಗಳಲ್ಲಿ ವಾಸಿಸುವ ಬ್ರಹ್ಮನಿಂದಲೇ ವ್ಯವಸಾಯವು ಹುಟ್ಟಿಕೊಂಡಿದೆ.

12120044a ಯತ್ರಾಸತೇ ಮತಿಮಂತೋ ಮನಸ್ವಿನಃ ಶಕ್ರೋ ವಿಷ್ಣುರ್ಯತ್ರ ಸರಸ್ವತೀ ಚ।
12120044c ವಸಂತಿ ಭೂತಾನಿ ಚ ಯತ್ರ ನಿತ್ಯಂ ತಸ್ಮಾದ್ವಿದ್ವಾನ್ನಾವಮನ್ಯೇತ ದೇಹಮ್।।

ಮನಸ್ವಿಗಳು ವಾಸಿಸಿರುವ, ಶಕ್ರ-ವಿಷ್ಣು-ಸರಸ್ವತಿಯರು ವಾಸಿಸುತಿರುವ, ಮತ್ತು ನಿತ್ಯವೂ ಸರ್ವ ಭೂತಗಳೂ ವಾಸಿಸಿರುವ ದೇಹವನ್ನು ಮತಿಮಂತರು ಅಪಮಾನಿಸುವುದಿಲ್ಲ.

12120045a ಲುಬ್ಧಂ ಹನ್ಯಾತ್ಸಂಪ್ರದಾನೇನ ನಿತ್ಯಂ ಲುಬ್ಧಸ್ತೃಪ್ತಿಂ ಪರವಿತ್ತಸ್ಯ ನೈತಿ।
12120045c ಸರ್ವೋ ಲುಬ್ಧಃ ಕರ್ಮಗುಣೋಪಭೋಗೇ ಯೋಽರ್ಥೈರ್ಹೀನೋ ಧರ್ಮಕಾಮೌ ಜಹಾತಿ।।

ಲೋಭಿಯಾದವನನ್ನು ನಿತ್ಯಕೊಡುಗೆಯಿಂದಲೇ ಗೆಲ್ಲಬೇಕು. ಲೋಭಿಯಾದವನಿಗೆ ಇತರರ ಐಶ್ವರ್ಯವು ಎಷ್ಟೇ ಲಭಿಸಿದರೂ ತೃಪ್ತಿಯೆಂಬುದೇ ಇರುವುದಿಲ್ಲ. ಸತ್ಕರ್ಮಗಳ ಫಲರೂಪದ ಸುಖವನ್ನು ಪಡೆದುಕೊಳ್ಳಲು ಎಲ್ಲರೂ ಲುಬ್ಧರೇ ಆಗುತ್ತಾರೆ. ಧನನಹೀನನಾದವನು ಧರ್ಮ-ಕಾಮಗಳೆರಡನ್ನೂ ಪರಿತ್ಯಜಿಸುತ್ತಾನೆ.

12120046a ಧನಂ ಭೋಜ್ಯಂ27 ಪುತ್ರದಾರಂ ಸಮೃದ್ಧಿಂ ಸರ್ವೋ ಲುಬ್ಧಃ ಪ್ರಾರ್ಥಯತೇ ಪರೇಷಾಮ್।
12120046c ಲುಬ್ಧೇ ದೋಷಾಃ ಸಂಭವಂತೀಹ ಸರ್ವೇ ತಸ್ಮಾದ್ರಾಜಾ ನ ಪ್ರಗೃಹ್ಣೀತ ಲುಬ್ಧಾನ್।।

ಲೋಭಿಯು ಇತರರಲ್ಲಿರುವ ಧನ, ಭೋಗಸಾಮಾಗ್ರಿಗಳು, ಸ್ತ್ರೀ-ಪುತ್ರರು ಮತ್ತು ಸಮೃದ್ಧಿ ಎಲ್ಲವನ್ನೂ ಪಡೆದುಕೊಳ್ಳಲು ಇಚ್ಛಿಸುತ್ತಾನೆ. ಲೋಭಿಗೆ ಬೇಡವಾದುದು ಯಾವುದೂ ಇರುವುದಿಲ್ಲ. ಲುಬ್ಧನಲ್ಲಿ ಸರ್ವ ದೋಷಗಳೂ ಇರುತ್ತವೆ. ಆದುದರಿಂದ ರಾಜನು ಲೋಭಿಯನ್ನು ಸ್ವೀಕರಿಸಬಾರದು.

12120047a ಸಂದರ್ಶನೇ ಸತ್ಪುರುಷಂ ಜಘನ್ಯಮಪಿ ಚೋದಯೇತ್।
12120047c ಆರಂಭಾನ್ದ್ವಿಷತಾಂ ಪ್ರಾಜ್ಞಃ ಸರ್ವಾನರ್ಥಾಂಸ್ತು ಸೂದಯೇತ್28।।

ಶತ್ರುಪಕ್ಷದ ಪರಿಸ್ಥಿತಿಯನ್ನು ನೋಡಿಬರಲು ಸತ್ಪುರುಷನನ್ನೂ ನೀಚಪುರುಷನನ್ನೂ ಕಳುಹಿಸಬೇಕು. ಪ್ರಾಜ್ಞ ರಾಜನು ಶತ್ರುಗಳು ಆರಂಭಿಸಿದ ಸರ್ವಾರ್ಥಯುಕ್ತ ಕಾರ್ಯಗಳನ್ನೂ ನಾಶಪಡಿಸಬೇಕು.

12120048a ಧರ್ಮಾನ್ವಿತೇಷು ವಿಜ್ಞಾತೋ ಮಂತ್ರೀ ಗುಪ್ತಶ್ಚ ಪಾಂಡವ।
12120048c ಆಪ್ತೋ ರಾಜನ್ಕುಲೀನಶ್ಚ ಪರ್ಯಾಪ್ತೋ ರಾಜ್ಯಸಂಗ್ರಹೇ।।

ಪಾಂಡವ! ರಾಜ್ಯಕ್ಕೆ ಸಂಬಂಧಿಸಿದ ಸಂಪೂರ್ಣವಿಷಯಗಳನ್ನೂ ವಿಶೇಷರೀತಿಯಲ್ಲಿ ತಿಳಿದುಕೊಂಡಿರುವ ಧರ್ಮಾತ್ಮನನ್ನು ಮಂತ್ರಿಯನ್ನಾಗಿ ಮಾಡಿಕೊಳ್ಳಬೇಕು. ಪ್ರಜೆಗಳ ವಿಶ್ವಾಸಕ್ಕೆ ಪಾತ್ರನಾದ ಮತ್ತು ಸತ್ಕುಲಪ್ರಸೂತ ರಾಜನು ಇತರ ಎಲ್ಲ ರಾಜರನ್ನೂ ತನ್ನ ಅಧೀನದಲ್ಲಿಟ್ಟುಕೊಳ್ಳಲು ಸಮರ್ಥನಾಗುತ್ತಾನೆ.

12120049a ವಿಧಿಪ್ರವೃತ್ತಾನ್ನರದೇವಧರ್ಮಾನ್ ಉಕ್ತಾನ್ಸಮಾಸೇನ ನಿಬೋಧ ಬುದ್ಧ್ಯಾ।
12120049c ಇಮಾನ್ವಿದಧ್ಯಾದ್ವ್ಯನುಸೃತ್ಯ ಯೋ ವೈ ರಾಜಾ ಮಹೀಂ ಪಾಲಯಿತುಂ ಸ ಶಕ್ತಃ।।

ವಿಧಿಪ್ರಯುಕ್ತವಾದ ರಾಜಧರ್ಮಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಬುದ್ಧಿಪೂರ್ವಕವಾಗಿ ಅರ್ಥಮಾಡಿಕೋ. ಗುರುವಿನಿಂದ ಈ ರಾಜಧರ್ಮಗಳ ಉಪದೇಶಗಳನ್ನು ಪಡೆದು ಅದರಂತೆ ನಡೆದುಕೊಳ್ಳುವ ರಾಜನು ಭೂಮಂಡಲವನ್ನೇ ಆಳಲು ಶಕ್ತನಾಗುತ್ತಾನೆ.

12120050a ಅನೀತಿಜಂ ಯದ್ಯವಿಧಾನಜಂ29 ಸುಖಂ ಹಠಪ್ರಣೀತಂ ವಿವಿಧಂ ಪ್ರದೃಶ್ಯತೇ।
12120050c ನ ವಿದ್ಯತೇ ತಸ್ಯ ಗತಿರ್ಮಹೀಪತೇರ್ ನ ವಿದ್ಯತೇ ರಾಷ್ಟ್ರಜಮುತ್ತಮಂ ಸುಖಮ್30।।

ಅನ್ಯಾಯಂದಿದ ಆರ್ಜಿಸಿರುವ, ಅಕಸ್ಮಾತ್ತಾಗಿ ಪ್ರಾಪ್ತವಾಗಿರುವ ಮತ್ತು ದೈವವಿಧಾನದಿಂದ ಪ್ರಾಪ್ತವಾಗಿರುವ ಎಲ್ಲವೂ ವಿಧಿಯ ಅನುಸಾರವಾಗಿಯೇ ಪ್ರಾಪ್ತವಾದವುಗಳಂತೆ ತೋರುತ್ತವೆ. ಆದರೆ ರಾಜಧರ್ಮಗಳನ್ನು ಚೆನ್ನಾಗಿ ತಿಳಿಯದಿರುವವನಿಗೆ ರಾಜ್ಯವು ಹೇಗೆಯೇ ದೊರಕಿದರೂ ಅದರ ಉತ್ತಮ ಸುಖವನ್ನು ಪಡೆದುಕೊಳ್ಳಲು ತಿಳಿದಿರುವುದಿಲ್ಲ.

12120051a ಧನೈರ್ವಿಶಿಷ್ಟಾನ್ಮತಿಶೀಲಪೂಜಿತಾನ್ ಗುಣೋಪಪನ್ನಾನ್ಯುಧಿ ದೃಷ್ಟವಿಕ್ರಮಾನ್।
12120051c ಗುಣೇಷು ದೃಷ್ಟಾನಚಿರಾದಿಹಾತ್ಮವಾನ್ ಸತೋಽಭಿಸಂಧಾಯ ನಿಹಂತಿ ಶಾತ್ರವಾನ್।।

ಇಲ್ಲಿ ಹೇಳಿರುವ ರಾಜದರ್ಮಗಳನ್ನು ಅನುಸರಿಸಿ ಸಂಧಿ-ವಿಗ್ರಹಾದಿ ಗುಣಗಳ ಪ್ರಯೋಗದಲ್ಲಿ ಜಾಗರೂಕನಾಗಿದ್ದು ಜಿತೇಂದ್ರಿಯನಾಗಿರುವ ರಾಜನು ಧನಸಂಪನ್ನನಾಗಿರುವ, ಬುದ್ಧಿ-ಸದ್ವೃತ್ತಿಗಳಿಂದ ಸಮ್ಮಾನಿತರಾಗಿರುವ, ಗುಣವಂತರಾದ ಮತ್ತು ಯುದ್ಧದಲ್ಲಿ ಮಹಾಪರಾಕ್ರಮವನ್ನೇ ತೋರಿಸುವ ಮಹಾಶತ್ರುಗಳನ್ನೂ ಧ್ವಂಸಮಾಡುತ್ತಾನೆ.

12120052a ಪಶ್ಯೇದುಪಾಯಾನ್ವಿವಿಧೈಃ ಕ್ರಿಯಾಪಥೈರ್ ನ ಚಾನುಪಾಯೇನ ಮತಿಂ ನಿವೇಶಯೇತ್।
12120052c ಶ್ರಿಯಂ ವಿಶಿಷ್ಟಾಂ ವಿಪುಲಂ ಯಶೋ ಧನಂ ನ ದೋಷದರ್ಶೀ ಪುರುಷಃ ಸಮಶ್ನುತೇ।।

ರಾಜನಾದವನು ನಾಪ್ರಕಾರದ ಕಾರ್ಯಗಳ ಮೂಲಕ ಶತ್ರುವನ್ನು ಜಯಿಸಲು ಯೋಗ್ಯ ಉಪಾಯಗಳನ್ನು ಹುಡುಕಬೇಕು. ಉಪಾಯವಿಲ್ಲದೇ ಶತ್ರುವಿನ ರಾಜ್ಯವನ್ನು ಅಪಹರಿಸಲು ಇಚ್ಛಿಸಬಾರದು. ನಿರ್ದೋಷಿಗಳಲ್ಲಿಯೂ ದೋಷಗಳನ್ನು ಕಾಣುವವನು ವಿಶಿಷ್ಟ ಸಂಪತ್ತು, ಮಹಾಯಶಸ್ಸು ಮತ್ತು ಮಹಾಧನ ಇವುಗಳನ್ನು ಹೊಂದಲಾರನು.

12120053a ಪ್ರೀತಿಪ್ರವೃತ್ತೌ ವಿನಿವರ್ತನೇ ತಥಾ ಸುಹೃತ್ಸು ವಿಜ್ಞಾಯ ನಿವೃತ್ಯ ಚೋಭಯೋಃ।
12120053c ಯದೇವ ಮಿತ್ರಂ ಗುರುಭಾರಮಾವಹೇತ್ ತದೇವ ಸುಸ್ನಿಗ್ಧಮುದಾಹರೇದ್ಬುಧಃ।।

ಪ್ರೀತಿಪ್ರವೃತ್ತರಾದ ಇಬ್ಬರು ಸ್ನೇಹಿತರು ಕಾರ್ಯವನ್ನು ಮುಗಿಸಿ ಹಿಂದಿರುಗುವಾಗ ಆ ಇಬ್ಬರಲ್ಲಿ ಯಾರು ಕಾರ್ಯವನ್ನು ಚೆನ್ನಾಗಿ ತಿಳಿದುಕೊಂಡು ಕಾರ್ಯಸಿದ್ಧಿಗಾಗಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡನೋ ಅವನೇ ಪರಮ ಸ್ನೇಹಿತನೆಂದು ತಿಳಿದವರು ಉದಾಹರಿಸುತ್ತಾರೆ.

12120054a ಏತಾನ್ಮಯೋಕ್ತಾಂಸ್ತವ ರಾಜಧರ್ಮಾನ್ ನೃಣಾಂ ಚ ಗುಪ್ತೌ ಮತಿಮಾದಧತ್ಸ್ವ।
12120054c ಅವಾಪ್ಸ್ಯಸೇ ಪುಣ್ಯಫಲಂ ಸುಖೇನ ಸರ್ವೋ ಹಿ ಲೋಕೋತ್ತಮಧರ್ಮಮೂಲಃ।।

ನಾನು ಹೇಳಿರುವ ಈ ರಾಜಧರ್ಮಗಳನ್ನು ಆಚರಿಸು. ಪ್ರಜೆಗಳ ರಕ್ಷಣೆಯಲ್ಲಿ ಬುದ್ಧಿಯನ್ನಿಡು. ಇದರಿಂದ ಪುಣ್ಯಫಲವನ್ನು ಪಡೆದುಕೊಳ್ಳುತ್ತೀಯೆ. ಏಕೆಂದರೆ ಸಂಪೂರ್ಣ ಜಗತ್ತಿಗೂ ರಾಜಧರ್ಮವೇ ಮೂಲವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ರಾಜಧರ್ಮಕಥನೇ ವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ರಾಜಧರ್ಮಕಥನ ಎನ್ನುವ ನೂರಾಇಪ್ಪತ್ತನೇ ಅಧ್ಯಾಯವು.


  1. ಬೃಹದ್ವೃಕ್ಷಮಿವಾಸ್ರವತ್ (ಭಾರತ ದರ್ಶನ). ↩︎

  2. ಭೌಮಾನಿ (ಭಾರತ ದರ್ಶನ). ↩︎

  3. ಬಹಿರರ್ಥಾನ್ (ಭಾರತ ದರ್ಶನ). ↩︎

  4. ಉಚ್ಛ್ರಿತಾನ್ನಾಶಯೇತ್ (ಭಾರತ ದರ್ಶನ). ↩︎

  5. ರಣಮುಪಾಶ್ರಯೇತ್ (ಭಾರತ ದರ್ಶನ). ↩︎

  6. ಪ್ರಣಯೇದ್ವಾಪಿ (ಭಾರತ ದರ್ಶನ). ↩︎

  7. ನಾಶಯೇದ್ಬಲಬರ್ಹಾಣಿ ಸನ್ನಿವಾಸಾನ್ನಿವಾಸಯೇತ್। (ಭಾರತ ದರ್ಶನ). ↩︎

  8. ಪ್ರಶಸ್ತಂ ಕೃತಮಾಚರೇತ್। (ಭಾರತ ದರ್ಶನ). ↩︎

  9. ಪತಂಗಂ (ಭಾರತ ದರ್ಶನ). ↩︎

  10. ಮೃದುಶೀಲಂ (ಭಾರತ ದರ್ಶನ). ↩︎

  11. ಚ ಬಲಾಧಿಕಾಃ (ಭಾರತ ದರ್ಶನ). ↩︎

  12. ಅಥ ದೃಷ್ಟ್ವಾ ನಿಯುಕ್ತಾನಿ ಸ್ವಾನುರೂಪೇಷು ಕರ್ಮಸು। (ಭಾರತ ದರ್ಶನ). ↩︎

  13. ಏತೇನ ಚ (ಭಾರತ ದರ್ಶನ). ↩︎

  14. ಕೃತ್ಯಾನ್ವವೇಕ್ಷಿತುಃ (ಭಾರತ ದರ್ಶನ). ↩︎

  15. ವಸುದೈವ (ಭಾರತ ದರ್ಶನ). ↩︎

  16. ಸ್ವಯಂ ಚರೇತ್। (ಭಾರತ ದರ್ಶನ). ↩︎

  17. ಯದಿ (ಭಾರತ ದರ್ಶನ). ↩︎

  18. ಸ್ಯಾತ್ತದ್ವಿತ್ತಂ (ಭಾರತ ದರ್ಶನ). ↩︎

  19. ನಾರ್ಥಮಲ್ಪಂ (ಭಾರತ ದರ್ಶನ). ↩︎

  20. ಬುದ್ಧಿರಾತ್ಮಾ (ಭಾರತ ದರ್ಶನ). ↩︎

  21. ಅಲ್ಪಸ್ಯ ವಾ ಬಹುನೋ ವಾ ವಿವೃದ್ಧೌ (ಭಾರತ ದರ್ಶನ). ↩︎

  22. ಕ್ಷಯಂ ವೃದ್ಧಿಂ ಪಾಲನಂ ಸಂಚಯಂ ವಾ ಬುದ್ಧ್ವಾಪ್ಯುಭೌ ಸಂಹತೌ ಸರ್ವಕಾಮೌ। (ಭಾರತ ದರ್ಶನ). ↩︎

  23. ಸತ್ತ್ವೇನಾಲ್ಪೇನಾಪ್ನುತೇ ಹೀನದೋಷಃ। (ಭಾರತ ದರ್ಶನ). ↩︎

  24. ಸರ್ವಂ ಹ್ಯೇತದ್ವ್ಯವಸಾಯೇನ (ಭಾರತ ದರ್ಶನ). ↩︎

  25. ಬುದ್ಧ್ಯಾ (ಭಾರತ ದರ್ಶನ). ↩︎

  26. ತನ್ನಿವಸೇದ್ದೇಹವತ್ಸು (ಭಾರತ ದರ್ಶನ). ↩︎

  27. ಭೋಗಂ (ಭಾರತ ದರ್ಶನ). ↩︎

  28. ಸರ್ವಾಥಾಂಶ್ಚ ಪ್ರಸೂದಯೇತ್। (ಭಾರತ ದರ್ಶನ). ↩︎

  29. ಯಸ್ಯ ವಿಧಾನಜಂ (ಭಾರತ ದರ್ಶನ). ↩︎

  30. ರಾಜ್ಯಸುಖಂ ಹ್ಯನುತ್ತಮಮ್। (ಭಾರತ ದರ್ಶನ). ↩︎