119 ಋಷಿರ್ಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 119

ಸಾರ

ರಾಜನಾದವನು ಯಾರನ್ನು ತನ್ನ ಸೇವಕರನ್ನಾಗಿ ಆರಿಸಿಕೊಳ್ಳಬೇಕು ಎನ್ನುವುದನ್ನು ಯುಧಿಷ್ಠಿರನಿಗೆ ಭೀಷ್ಮನು ಉಪದೇಶಿಸಿದುದು (1-20).

12119001 ಭೀಷ್ಮ ಉವಾಚ।
12119001a ಏವಂ ಶುನಾಸಮಾನ್ ಭೃತ್ಯಾನ್ ಸ್ವಸ್ಥಾನೇ ಯೋ ನರಾಧಿಪಃ1
12119001c ನಿಯೋಜಯತಿ ಕೃತ್ಯೇಷು ಸ ರಾಜ್ಯಫಲಮಶ್ನುತೇ।।

ಭೀಷ್ಮನು ಹೇಳಿದನು: “ಹೀಗೆ ಗುಣಸಂಪನ್ನ ಸೇವಕರನ್ನು ಯೋಗ್ಯ ಸ್ಥಾನಗಳಲ್ಲಿ ನಿಯಮಿಸಿ ಅವರವರ ಕಾರ್ಯಗಳಲ್ಲಿ ನಿಯೋಜಿಸುವ ನರಾಧಿಪನು ರಾಜ್ಯದ ಫಲವನ್ನು ಪಡೆದುಕೊಳ್ಳುತ್ತಾನೆ.

12119002a ನ ಶ್ವಾ ಸ್ವಸ್ಥಾನಮುತ್ಕ್ರಮ್ಯ ಪ್ರಮಾಣಮಭಿ ಸತ್ಕೃತಃ।
12119002c ಆರೋಪ್ಯಃ ಶ್ವಾ ಸ್ವಕಾತ್ಸ್ಥಾನಾದುತ್ಕ್ರಮ್ಯಾನ್ಯತ್ ಪ್ರಪದ್ಯತೇ।।

ನಾಯಿಯನ್ನು ಅಧಿಕವಾಗಿ ಸತ್ಕರಿಸಿ ಅದಕ್ಕೆ ಅದರ ಯೋಗ್ಯತೆಯನ್ನು ಮೀರಿಸ ಉತ್ತಮ ಸ್ಥಾನಕ್ಕೆ ಏರಿಸಬಾರದು. ಹಾಗೆ ಮೇಲಕ್ಕೇರಿಸಿದರೆ ಅದು ಪ್ರಮಾದವನ್ನೇ ಉಂಟುಮಾಡುತ್ತದೆ.

12119003a ಸ್ವಜಾತಿಕುಲಸಂಪನ್ನಾಃ ಸ್ವೇಷು ಕರ್ಮಸ್ವವಸ್ಥಿತಾಃ।
12119003c ಪ್ರಕರ್ತವ್ಯಾ ಬುಧಾ ಭೃತ್ಯಾ2 ನಾಸ್ಥಾನೇ ಪ್ರಕ್ರಿಯಾ ಕ್ಷಮಾ।।

ಸ್ವಜಾತಿಯ ಕುಲಸಂಪನ್ನ ವರ್ಣೋಚಿತ ಕರ್ಮಗಳಲ್ಲಿ ನಿಷ್ಠರಾದವರನ್ನು ಸೇವಕರನ್ನಾಗಿ ನಿಯಮಿಸಿಕೊಳ್ಳಬೇಕು. ಯಾರನ್ನೂ ಅವರ ಯೋಗ್ಯತೆಗೆ ತಕ್ಕುದಲ್ಲದ ಕಾರ್ಯಗಳಲ್ಲಿ ನಿಯೋಜಿಸಬಾರದು.

12119004a ಅನುರೂಪಾಣಿ ಕರ್ಮಾಣಿ ಭೃತ್ಯೇಭ್ಯೋ ಯಃ ಪ್ರಯಚ್ಚತಿ।
12119004c ಸ ಭೃತ್ಯಗುಣಸಂಪನ್ನಂ ರಾಜಾ ಫಲಮುಪಾಶ್ನುತೇ।।

ಸೇವಕರಿಗೆ ಅವರಿಗೆ ಅನುರೂಪದ ಕರ್ಮಗಳನ್ನು ಕೊಡುವ ಭೃತ್ಯಗುಣಸಂಪನ್ನ ರಾಜನು ಫಲವನ್ನು ಪಡೆದುಕೊಳ್ಳುತ್ತಾನೆ.

12119005a ಶರಭಃ ಶರಭಸ್ಥಾನೇ ಸಿಂಹಃ ಸಿಂಹ ಇವೋರ್ಜಿತಃ।
12119005c ವ್ಯಾಘ್ರೋ ವ್ಯಾಘ್ರ ಇವ ಸ್ಥಾಪ್ಯೋ ದ್ವೀಪೀ ದ್ವೀಪೀ ಯಥಾ ತಥಾ।।

ಶರಭವು ಶರಭದ ಸ್ಥಾನದಲ್ಲಿ, ಬಲಿಷ್ಠ ಸಿಂಹವು ಸಿಂಹದ ಸ್ಥಾನದಲ್ಲಿ, ಹುಲಿಯು ಹುಲಿಯ ಸ್ಥಾನದಲ್ಲಿ ಮತ್ತು ಚಿರತೆಯು ಚಿರತೆಯ ಸ್ಥಾನದಲ್ಲಿ ಹೀಗೆ ಅವರವರು ಅವರವರ ಸ್ಥಾನಗಳಲ್ಲಿ ಇರಬೇಕು.

12119006a ಕರ್ಮಸ್ವಿಹಾನುರೂಪೇಷು ನ್ಯಸ್ಯಾ ಭೃತ್ಯಾ ಯಥಾವಿಧಿ।
12119006c ಪ್ರತಿಲೋಮಂ ನ ಭೃತ್ಯಾಸ್ತೇ ಸ್ಥಾಪ್ಯಾಃ ಕರ್ಮಫಲೈಷಿಣಾ।।

ಸೇವಕರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾರ್ಯಗಳಲ್ಲಿ ಯಥಾವಿಧಿಯಾಗಿ ನಿಯಮಿಸಬೇಕು. ಕರ್ಮಫಲಗಳನ್ನು ಬಯಸುವವರು ಯೋಗ್ಯತೆಗೆ ವಿರುದ್ಧವಾದ ರೀತಿಯಲ್ಲಿ ಸೇವಕರನ್ನು ನಿಯಮಿಸಿಕೊಳ್ಳಬಾರದು.

12119007a ಯಃ ಪ್ರಮಾಣಮತಿಕ್ರಮ್ಯ ಪ್ರತಿಲೋಮಂ ನರಾಧಿಪಃ।
12119007c ಭೃತ್ಯಾನ್ ಸ್ಥಾಪಯತೇಽಬುದ್ಧಿರ್ನ ಸ ರಂಜಯತೇ ಪ್ರಜಾಃ।।

ಮರ್ಯಾದೆಯನ್ನು ಉಲ್ಲಂಘಿಸಿ ಭೃತ್ಯರನ್ನು ನೀತಿಗೆ ವಿರುದ್ಧ ರೀತಿಯಲ್ಲಿ ನಿಯಮಿಸಿಕೊಳ್ಳುವ ಅಬುದ್ಧಿ ರಾಜನಿಗೆ ಪ್ರಜೆಗಳನ್ನು ರಂಜಿಸಲು ಸಾಧ್ಯವಾಗುವುದಿಲ್ಲ.

12119008a ನ ಬಾಲಿಶಾ ನ ಚ ಕ್ಷುದ್ರಾ ನ ಚಾಪ್ರತಿಮಿತೇಂದ್ರಿಯಾಃ3
12119008c ನಾಕುಲೀನಾ ನರಾಃ ಪಾರ್ಶ್ವೇ ಸ್ಥಾಪ್ಯಾ ರಾಜ್ಞಾ ಹಿತೈಷಿಣಾ4।।

ರಾಜನ ಹಿತೈಷಿಗಳಾಗಿ ಬಾಲಿಶರನ್ನೂ, ಕ್ಷುದ್ರರನ್ನೂ, ಇಂದ್ರಿಯಗಳನ್ನು ನಿಗ್ರಹಿಸದಿರುವವರನ್ನೂ, ಕುಲೀನರಲ್ಲದ ನರರನ್ನೂ ಹತ್ತಿರ ಇರಿಸಿಕೊಳ್ಳಬಾರದು.

12119009a ಸಾಧವಃ ಕುಶಲಾಃ5 ಶೂರಾ ಜ್ಞಾನವಂತೋಽನಸೂಯಕಾಃ।
12119009c ಅಕ್ಷುದ್ರಾಃ ಶುಚಯೋ ದಕ್ಷಾ ನರಾಃ ಸ್ಯುಃ ಪಾರಿಪಾರ್ಶ್ವಕಾಃ।।

ಸಾಧುಗಳೂ, ಕುಶಲರೂ, ಶೂರರೂ, ಜ್ಞಾನವಂತರೂ, ಅನಸೂಯಕರೂ, ಅಕ್ಷುದ್ರರೂ, ಶುಚಿಗಳೂ ಮತ್ತು ದಕ್ಷರಾದ ನರರೇ ರಾಜನ ಪಾರ್ಶ್ವವರ್ತೀ ಸೇವಕರಾಗಿ ನೇಮಕಗೊಂಡಿರಬೇಕು.

12119010a ನ್ಯಗ್ಭೂತಾಸ್ತತ್ಪರಾಃ ಕ್ಷಾಂತಾಶ್ಚೌಕ್ಷಾಃ ಪ್ರಕೃತಿಜಾಃ6 ಶುಭಾಃ।
12119010c ಸ್ವೇ ಸ್ವೇ ಸ್ಥಾನೇಽಪರಿಕ್ರುಷ್ಟಾಸ್ತೇ ಸ್ಯೂ ರಾಜ್ಞೋ ಬಹಿಶ್ಚರಾಃ7।।

ವಿನೀತರೂ, ಕಾರ್ಯತತ್ಪರರೂ, ಶಾಂತಸ್ವಭಾವವದವರೂ, ಚತುರರೂ, ಸ್ವಾಭಾವಿಕವಾಗಿಯೇ ಶುಭವಾಗಿರುವವರು ತಮ್ಮ ತಮ್ಮ ಸ್ಥಾನಗಳಲ್ಲಿ ಅನಿಂದಿತರಾಗಿ ರಾಜನ ಬಾಹ್ಯ ಸೇವಕರಾಗಿರಲು ಯೋಗ್ಯರಾಗಿರುತ್ತಾರೆ.

12119011a ಸಿಂಹಸ್ಯ ಸತತಂ ಪಾರ್ಶ್ವೇ ಸಿಂಹ ಏವ ಜನೋ8 ಭವೇತ್।
12119011c ಅಸಿಂಹಃ ಸಿಂಹಸಹಿತಃ ಸಿಂಹವಲ್ಲಭತೇ ಫಲಮ್।।

ಸಿಂಹದ ಪಕ್ಕದಲ್ಲಿ ಸತತವೂ ಸಿಂಹವೇ ಇರಬೇಕು. ಸಿಂಹದ ಸಹಿತ ಸಿಂಹವಲ್ಲದ ಪ್ರಾಣಿಯಿದ್ದರೆ ಅದಕ್ಕೂ ಸಿಂಹಕ್ಕೆ ಸಿಗುವ ಗೌರವವೇ ದೊರಕುತ್ತದೆ.

12119012a ಯಸ್ತು ಸಿಂಹಃ ಶ್ವಭಿಃ ಕೀರ್ಣಃ ಸಿಂಹಕರ್ಮಫಲೇ ರತಃ।
12119012c ನ ಸ ಸಿಂಹಫಲಂ ಭೋಕ್ತುಂ ಶಕ್ತಃ ಶ್ವಭಿರುಪಾಸಿತಃ।।

ನಾಯಿಗಳಿಂದ ಪರಿವೃತವಾಗಿದ್ದ ಸಿಂಹವು ಸಿಂಹೋಚಿತವಾದ ಕರ್ಮಫಲಗಳಲ್ಲಿ ಅನುರಕ್ತನಾಗಿದ್ದರೂ ನಾಯಿಗಳಿಂದ ಸಂಸೇವಿಸಲ್ಪಡುವುದರಿಂದ ಸಿಂಹಕ್ಕೆ ದೊರಕಬೇಕಾದ ಕರ್ಮಫಲವನ್ನು ಭೋಗಿಸಲು ಶಕ್ತನಾಗುವುದಿಲ್ಲ9.

12119013a ಏವಮೇತೈರ್ಮನುಷ್ಯೇಂದ್ರ ಶೂರೈಃ ಪ್ರಾಜ್ಞೈರ್ಬಹುಶ್ರುತೈಃ।
12119013c ಕುಲೀನೈಃ ಸಹ ಶಕ್ಯೇತ ಕೃತ್ಸ್ನಾಂ ಜೇತುಂ ವಸುಂಧರಾಮ್।।

ಮನುಷ್ಯೇಂದ್ರ! ಶೂರರಿಂದ, ಪ್ರಾಜ್ಞರಿಂದ, ಬಹುಶ್ರುತರಿಂದ, ಸತ್ಕುಲಪ್ರಸೂತರಿಂದ ಸಂವೃತನಾದ ರಾಜನು ಅಖಂಡ ಭೂಮಂಡಲವನ್ನೂ ಜಯಿಸಲು ಸಮರ್ಥನಾಗುತ್ತಾನೆ.

12119014a ನಾವೈದ್ಯೋ10 ನಾನೃಜುಃ ಪಾರ್ಶ್ವೇ ನಾವಿದ್ಯೋ11 ನಾಮಹಾಧನಃ।
12119014c ಸಂಗ್ರಾಹ್ಯೋ ವಸುಧಾಪಾಲೈರ್ಭೃತ್ಯೋ ಭೃತ್ಯವತಾಂ ವರ।।

ಭೃತ್ಯವಂತರಲ್ಲಿ ಶ್ರೇಷ್ಠನೇ! ವಿದ್ಯಾವಂತನಲ್ಲದವನನ್ನೂ, ಸರಳತೆಯಿಲ್ಲದವನನ್ನೂ, ಮೂರ್ಖರನ್ನೂ, ದರಿದ್ರರನ್ನೂ ರಾಜನು ಸಮೀಪದಲ್ಲಿ ಇಟ್ಟುಕೊಳ್ಳಬಾರದು. ಅಂಥವರನ್ನು ಭೃತ್ಯರನ್ನಾಗಿ ಸಂಗ್ರಹಿಸಿಕೊಳ್ಳಬಾರದು.

12119015a ಬಾಣವದ್ವಿಸೃತಾ ಯಾಂತಿ ಸ್ವಾಮಿಕಾರ್ಯಪರಾ ಜನಾಃ।
12119015c ಯೇ ಭೃತ್ಯಾಃ ಪಾರ್ಥಿವಹಿತಾಸ್ತೇಷಾಂ ಸಾಂತ್ವಂ ಪ್ರಯೋಜಯೇತ್।।

ಸ್ವಾಮಿಕಾರ್ಯದಲ್ಲಿ ತತ್ಪರರಾಗಿರುವ ಜನರು ಪ್ರಯೋಗಿಸ ಬಾಣದಂತೆ ನೇರವಾಗಿ ಕಾರ್ಯಸಾಧನೆಯನ್ನು ಮಾಡುತ್ತಾರೆ. ಪಾರ್ಥಿವನ ಹಿತಸಾಧನೆಯಲ್ಲಿಯೇ ನಿರತರಾಗಿರುವ ಸೇವಕರಲ್ಲಿ ರಾಜನು ಸಮಾಧಾನಕರ ಮಾತುಗಳನ್ನಾಡುತ್ತಾ ಅವರನ್ನು ಪ್ರೋತ್ಸಾಹಿಸುತ್ತಿರಬೇಕು.

12119016a ಕೋಶಶ್ಚ ಸತತಂ ರಕ್ಷ್ಯೋ ಯತ್ನಮಾಸ್ಥಾಯ ರಾಜಭಿಃ।
12119016c ಕೋಶಮೂಲಾ ಹಿ ರಾಜಾನಃ ಕೋಶಮೂಲಕರೋ ಭವ12।।

ರಾಜರು ಸತತವೂ ಪ್ರಯತ್ನಪಟ್ಟು ಕೋಶವನ್ನು ರಕ್ಷಿಸಬೇಕು. ರಾಜರಿಗೆ ಕೋಶವೇ ಮೂಲವು. ಕೋಶದ ಮೂಲಕರನಾಗು.

12119017a ಕೋಷ್ಠಾಗಾರಂ ಚ ತೇ ನಿತ್ಯಂ ಸ್ಫೀತಂ ಧಾನ್ಯೈಃ ಸುಸಂಚಿತಮ್।
12119017c ಸದಾಸ್ತು ಸತ್ಸು ಸಂನ್ಯಸ್ತಂ ಧನಧಾನ್ಯಪರೋ ಭವ।।

ನಿನ್ನ ಉಗ್ರಾಣಗಳು ನಿತ್ಯವೂ ಒಳ್ಳೆಯ ರೀತಿಯಿಂದ ಸಂಗ್ರಹಿಸಿದ ಧಾನ್ಯಗಳಿಂದ ತುಂಬಿರಲಿ. ಸದಾ ಅದು ಸತ್ಪುರುಷರ ರಕ್ಷಣೆಯಲ್ಲಿರಲಿ. ಧನಧಾನ್ಯಪರನಾಗು.

12119018a ನಿತ್ಯಯುಕ್ತಾಶ್ಚ ತೇ ಭೃತ್ಯಾ ಭವಂತು ರಣಕೋವಿದಾಃ।
12119018c ವಾಜಿನಾಂ ಚ ಪ್ರಯೋಗೇಷು ವೈಶಾರದ್ಯಮಿಹೇಷ್ಯತೇ।।

ನಿನ್ನ ಸೇವಕರು ಯಾವಾಗಲೂ ಉದ್ಯೋಗಶೀಲರಾಗಿರಲಿ. ರಣಕೋವಿದರಾಗಿರಲಿ. ಕುದುರೆಗಳ ಸವಾರಿಯಲ್ಲಿಯೂ ಕುದುರೆಗಳನ್ನು ಪಳಗಿಸುವುದರಲ್ಲಿಯೂ ವಿಶೇಷರೂಪದಲ್ಲಿ ಚತುರರಾಗಿರಲಿ.

12119019a ಜ್ಞಾತಿಬಂಧುಜನಾವೇಕ್ಷೀ ಮಿತ್ರಸಂಬಂಧಿಸಂವೃತಃ।
12119019c ಪೌರಕಾರ್ಯಹಿತಾನ್ವೇಷೀ ಭವ ಕೌರವನಂದನ।।

ಕೌರವನಂದನ! ಜ್ಞಾತಿಬಂಧುಗಳ ಯೋಗ-ಕ್ಷೇಮಗಳ ಕಡೆಗೆ ಗಮನವನ್ನು ಕೊಡು. ಮಿತ್ರರಿಂದಲೂ ಸಂಬಂಧಿಕರಿಂದಲೂ ಕೂಡಿಕೊಂಡಿರು. ಪೌರಕಾರ್ಯಹಿತಾನ್ವೇಷಿಯಾಗಿರು.

12119020a ಏಷಾ ತೇ ನೈಷ್ಠಿಕೀ ಬುದ್ಧಿಃ ಪ್ರಜ್ಞಾ ಚಾಭಿಹಿತಾ ಮಯಾ।
12119020c ಶ್ವಾ ತೇ ನಿದರ್ಶನಂ ತಾತ ಕಿಂ ಭೂಯಃ ಶ್ರೋತುಮಿಚ್ಚಸಿ।।

ಮಗೂ! ಪ್ರಜಾಪಾಲನೆಯಲ್ಲಿ ನಿನ್ನ ಬುದ್ಧಿಯು ಇಷ್ಟು ನಿಷ್ಠೆಯಿಂದರಬೇಕು. ನಾಯಿಯ ನಿದರ್ಶನವನ್ನು ಕೊಟ್ಟು ನಾನು ಈ ವಿಷಯವನ್ನು ನಿನಗೆ ಹೇಳಿರುತ್ತೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಿರ್ಸಂವಾದೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಿರ್ಸಂವಾದ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.

  1. ಏವಂ ಗುಣಯುತಾನ್ ಭೃತ್ಯಾನ್ ಸ್ವೇ ಸ್ವೇ ಸ್ಥಾನೇ ನರಾಧಿಪಃ। (ಗೀತಾ ಪ್ರೆಸ್). ↩︎

  2. ಹ್ಯಮಾತ್ಯಾಸ್ತು (ಭಾರತ ದರ್ಶನ). ↩︎

  3. ನಾಪ್ರಾಜ್ಞಾನಾಜಿತೇಂದ್ರಿಯಾಃ। (ಭಾರತ ದರ್ಶನ). ↩︎

  4. ನಾಕುಲೀನಾ ನರಾಃ ಸರ್ವೇ ಸ್ಥಾಪ್ಯಾ ಗುಣಗಣೈಷಿಣಾ।। (ಭಾರತ ದರ್ಶನ). ↩︎

  5. ಕುಲಜಾಃ (ಭಾರತ ದರ್ಶನ). ↩︎

  6. ಪ್ರಕೃತಿಜೈಃ (ಭಾರತ ದರ್ಶನ). ↩︎

  7. ಸ್ವಸ್ಥಾನಾದಪಕ್ರುಷ್ಟಾ ಯೇ ತೇ ಸ್ಯೂ ರಾಜ್ಞಾಂ ಬಹಿಶ್ಚರಾಃ।। (ಭಾರತ ದರ್ಶನ). ↩︎

  8. ಏವಾನುಗೋ (ಭಾರತ ದರ್ಶನ). ↩︎

  9. ಹೀಗೆ ನೀಚಪುರುಷರಿಂದ ಪರಿವೃತನಾದ ರಾಜನು ತಾನು ಶ್ರೇಷ್ಠನಾಗಿದ್ದರೂ ಶ್ರೇಷ್ಠತೆಯ ಫಲವನ್ನು ಪಡೆಯುವುದಿಲ್ಲ (ಭಾರತ ದರ್ಶನ). ↩︎

  10. ನಾವಿದ್ಯೋ (ಭಾರತ ದರ್ಶನ). ↩︎

  11. ನಾಪ್ರಾಜ್ಞೋ (ಭಾರತ ದರ್ಶನ). ↩︎

  12. ಕೋಶೋ ವೃದ್ಧಿಕರೋ ಭವೇತ್। (ಭಾರತ ದರ್ಶನ). ↩︎